ಉತ್ತರ ಕರ್ನಾಟಕದ ವಿಜಾಪುರ ಜಿಲ್ಲೆಯಲ್ಲಿ ಬರುವ ಪ್ರಮುಖ ತಾಲೂಕು ಕೇಂದ್ರ ಬಸವನ ಬಾಗೇವಾಡಿ. ಇದು ೧೨ನೆಯ ಶತಮಾನದಲ್ಲಿ ಬಾಳಿ ಬದುಕಿದ ಮಹಾ ಶಿವಶರಣ ಬಸವಣ್ಣನವರ ಊರು. ಇಂಥ ಮಹಾಪುರುಷನಿಂದಾಗಿ ಇಡೀ ಜಗತ್ತಿನಲ್ಲಿ ಬಸವನ ಬಾಗೇವಾಡಿಯ ಹೆಸರು ಚಿರಸ್ಮರಣಿಯವಾಗಿದೆ. ಕರ್ನಾಟಕದ ಇತರ ಪ್ರದೇಶಗಳಂತೆ ಬಾಗೇವಾಡಿಯ ಚರಿತ್ರೆ ಪ್ರಾಗಿತಿಹಾಸ ಕಾಲದಿಂದಲೇ ಆರಂಭವಾಗಿ, ಪ್ರಾಚೀನ ಮತ್ತು ಮಧ್ಯಕಾಲೀನಲ್ಲಿ ವಿವಿಧ ಸಾಮ್ರಾಜ್ಯಗಳ ಆಡಳಿತಕ್ಕೆ ಒಳಪಟ್ಟು ಆಧುನಿಕ ಕಾಲದಲ್ಲಿ ದೇಸಗತಿ ಮನೆತನಗಳ ಜಮಿನ್ದಾರಿ ವ್ಯವಸ್ಥೆಯನ್ನು ಮೈಗೂಡಿಸಿಕೊಂಡು ಭವ್ಯ ಸಂಸ್ಕೃತಿಯ ಶ್ರೀಮಂತಿಕೆಯನ್ನು ಹೊಂದಿದೆ.

ಬಸವನ ಬಾಗೇವಾಡಿ ತಾಲೂಕಿನಲ್ಲಿ ಹರಿಯುತ್ತಿರುವ ಕೃಷ್ಣಾ ಮತ್ತು ಡೋಣಿ ನದಿಗಳ ಆಸುಪಾಸಿನ ಬಯಲು ಪ್ರದೇಶ ಕೃಷಿಗೆ ಯೋಗ್ಯವಾದ ಮೆಕ್ಕಲು ಮಣ್ಣಿನಿಂದ ಕೂಡಿದ್ದು ‘ಡೋಣಿ ಬೆಳೆದರೆ ಓಣಿಯಲ್ಲ ಕಾಳು’ ಎಂಬ ಜನಪದರ ನಾಣ್ಣುಡಿಗೆ ಕಾರಣವಾಗಿದೆ. ನದಿ ಹಳ್ಳಗಳ ನೀರಿನ ಸರಬರಾಜು, ಚಿಕ್ಕಪುಟ್ಟ ಬೆಟ್ಟಗಳು ಪ್ರಾಗಿತಿಹಾಸ ಕಾಲದ ಮಾನವನಿಗೆ ಆಶ್ರಯ ತಾಣಗಳಾದವು ಕೊಲ್ಹಾರ, ಚಿಮ್ಮಲಗಿ ಮತ್ತು ಕಾತರಕಿಗಳಲ್ಲಿ ಸುಮಾರು ಕ್ರಿ.ಪೂ. ೨ ರಿಂದ ೫ ಲಕ್ಷ ವರ್ಷಗಳ ಹಿಂದೆ ಮಾನವನು ಆಹಾರ ಸಂಗ್ರಹಣೆಗಾಗಿ ಬಳಸುತ್ತಿದ್ದ ಕಲ್ಲಿನ ಕೊಡಲಿಗಳು ಪತ್ತೆಯಾಗಿವೆ. ಇಲ್ಲಿಯ ಅಮರಗೋಳ, ಆಲಮಟ್ಟಿ, ಇಂಗಳೇಶ್ವರ, ಕಾತರಕಿ, ಕೊಲ್ಹಾರ ಮತ್ತು ಬಸವನ ಬಾಗೇವಾಡಿಗಳಲ್ಲಿ ಸುಮಾರು ಕ್ರಿ.ಪೂ. ೧೦ ರಿಂದ ೭೦ ಸಾವಿರ ವರ್ಷಗಳ ಹಿಂದಿನ ಮಧ್ಯ-ಅಂತ್ಯ ಹಳೆಶಿಲಾಯುಗದ ಕಲ್ಲಿನ ಕೊಡಲಿಗಳು ಹಾಗೂ ಇಂಗಳೇಶ್ವರ, ಗೊಳಸಂಗಿ, ಡೋಣೂರು, ಸಾತಿಹಾಳಗಳಲ್ಲಿ ಸುಮಾರು ಕ್ರಿ.ಪೂ. ೩ ರಿಂದ ೧೦ ಸಾವಿರ ವರ್ಷಗಳ ಹಿಂದಿನ ಸೂಕ್ಷ್ಮ ಶಿಲಾಯುಗದ ಉಪಕರಣಗಳ ಕಂಡುಬಂದಿವೆ. ಮುಂದಿನ ಹಂತದ ಸುಮಾರು ಕ್ರಿ. ಪೂ. ೮೦೦ ರಿಂದ ೧,೬೦೦ ವರ್ಷಗಳ ಹಿಂದಿನ ನೂತನ ಶಿಲಾ ಶಿಲಾ-ತಾಮ್ರಯಗದ ನೆಲೆಗಳು ಮನಗೂಳಿ ಮತ್ತು ಸಿಂಧುಗೇರಿಗಳಲ್ಲಿವೆ. ಸುಮಾರು ಕ್ರಿ.ಪೂ.೨೦೦ ರಿಂದ ೧೨,೦೦ ವರ್ಷಗಳ ಹಿಂದಿನ ಬೃಹತ್‌ಶಿಲಾ ಕಬ್ಬಿಣಯುಗದ ನೆಲೆಗಳು ವಿರಳವಾಗಿ ಕಂಡರೂ ಆದಿ-ಮಧ್ಯ ಇತಿಹಾಸ ಕಾಲದ ನೆಲೆಗಳೂ ತಾಲೂಕಿನಾದ್ಯಂತ ಹರಡಿವೆ. ಇದರಿಂದ ಬಸವನ ಬಾಗೇವಾಡಿಯ ಚರಿತ್ರೆಯನ್ನು ೫ ಲಕ್ಷ ವರ್ಷಗಳ ಹಿಂದಿನಿಂದ ಗುರುತಿಸಲು ಸಾಧ್ಯವಾಗುತ್ತದೆ.

ಮೌರ್ಯ, ಶಾತವಾಹನ, ಕದಂಬ ಮತ್ತು ಬಾದಾಮಿಯ ಚಾಳುಕ್ಯರ ಅವಧಿಯ ಪಾತ್ರಾವಶೇಷಗಳನ್ನು ಬಿಟ್ಟರೆ, ಚರಿತ್ರೆಗೆ ಮುಖ್ಯ ಆಕರಗಳಾದ ಶಿಲಾಶಾಸನಗಳ ಕೊರತೆಯನ್ನು ಕಾಣಬಹುದು. ರಾಷ್ಟ್ರಕೂಟ ದೊರೆ ಅಮೋಘವರ್ಷನ ಹೂವಿನ ಹಿಪ್ಪರಗಿಯ ಶಾಸನ ವಿಜಾಪುರ ಜಿಲ್ಲೆಯಲ್ಲಿ ಮೊದಲ ಶಾಸನವಾಗಿದೆ. ಅಲ್ಲಿಂದ ಶಾಸನಗಳು ಹೆಚ್ಚು ಸಂಖ್ಯೆಗಳಲ್ಲಿ ದೊರೆತು, ರಾಜಕೀಯ, ಸಾಮಾಜಿಕ, ಧಾರ್ಮಿಕ ಮತ್ತು ಆರ್ಥಿಕ ವಲಯಗಳ ಮಾಹಿತಿಯನ್ನು ಸ್ಪಷ್ಟಪಡಿಸುವಲ್ಲಿ ಮಹತ್ವದ್ದಾಗಿವೆ. ಅಲ್ಲದೇ ರಾಷ್ಟ್ರಕೂಟರಿಂದ ದೇವಾಲಯಗಳ ನಿರ್ಮಾಣ ವೃದ್ಧಿಸುತ್ತ ಕಲ್ಯಾಣದ ಚಾಳುಕ್ಯ, ಕಳಚುರಿ ಮತ್ತು ಸೇವುಣರ ಕಾಲದ ದೇವಾಲಯ ಇಲ್ಲವೇ ಮೂರ್ತಿಶಿಲ್ಪಗಳು ಪ್ರತಿ ಗ್ರಾಮದಲ್ಲಿರುವುದು ವಾಸ್ತುಶಿಲ್ಪ ಕಲೆಯ ಮೇಲೆ ಬೆಳಕನ್ನು ಚೆಲ್ಲುತ್ತವೆ.

ಮಳಖೇಡವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಆಳ್ವಿಕೆ ಮಾಡುತ್ತಿದ್ದ ರಾಷ್ಟ್ರಕೂಟರು ಆಡಳಿತದ ಅನುಕೂಲತೆಗಾಗಿ ಸಾಮ್ರಾಜ್ಯವನ್ನು ಸಣ್ಣ ಘಟಕದವರೆಗೂ ವಿಂಗಡಿಸಿದ್ದರು. ಈ ವಿಂಗಡಣೆಯಲ್ಲಿ ಇಂದಿನ ಇಂಡಿ ತಾಲೂಕಿನ ತದ್ದೇವಾಡಿ ಅಂದು ತರ್ದವಾಡಿ ನಾಡಿನ ಪ್ರಮುಖ ಆಡಳಿತ ಕೇಂದ್ರವಾಗಿತ್ತು. ಅದರಲ್ಲಿ ಅನೇಕ ಸಣ್ಣ ಪುಟ್ಟ ಘಟಕಗಳು ಸೇರಿದಂತೆ ಸಾವಿರ ಗ್ರಾಮಗಳು ಸಮಾವೇಶಗೊಂಡಿದ್ದವು. ಸಾವಿರ ಸಂಖ್ಯೆಯನ್ನು ಹೊಂದಿದ ಈ ಕೇಂದ್ರವನ್ನು ಶಾಸನಗಳು ತರ್ದವಾಡಿ ಸಾಸಿರವೆಂದು ಕರೆದಿವೆ. ಅದರಲ್ಲಿ ಬಸವನ ಬಾಗೇವಾಡಿ ಪರಿಸರದ ಮುತ್ತಗೆ- ೩೦, ಹೆಬ್ಬಾಳ- ೧೨, ಸೋಗಿಲು – ೧೨, ಕೆಂಪನಕುಳಿ ಆರುಂಬಾಡ ಹಾಗೂ ಮುಂಬಾಡ ಎಂಬ ಆಡಳಿತ ವಿಭಾಗಗಳಿದ್ದವು. ಇಂಗಳೇಶ್ವರ, ಕೊಲ್ಹಾರ, ಬಸವನ ಬಾಗೇವಾಡಿ, ಮನಗೂಳಿ, ಹೂವಿನ ಹಿಪ್ಪರಗಿ ಮತ್ತು ಯಾಳವಾರಗಳು ಅಗ್ರಹಾರಗಳಲ್ಲದೇ ವಿದ್ಯಾಕೇಂದ್ರಗಳಾಗಿದ್ದವು. ಅದು ಪ್ರಚಲಿತವಿದ್ದ ಶೈವ, ವೈಷ್ಣವ ಮತ್ತು ಜೈನ ಧರ್ಮಗಳು ರಾಜಾಶ್ರಯ ಪಡೆದು ವ್ಯವಸ್ಥಿತವಾಗಿದ್ದವು. ಇಂಗಳೇಶ್ವರ, ಮುತ್ತಗಿ, ಬಸವನ ಬಾಗೇವಾಡಿ, ಮನಗೂಳಿ ಶೈವ ಧರ್ಮದ ಕಾಳಾಮುಖ ಪಾಶುಪತ ಆಚಾರ್ಯರ ಪರಂಪರೆಯ ಸ್ಥಳಗಳಾಗಿದ್ದವು. ಇಂಗಳೇಶ್ವರ, ಹೂವಿನ ಹಿಪ್ಪರಗಿಗಳು ಜೈನ ಮುನಿಗಳ ವಾಸಸ್ಥಾನಗಳಾಗಿದ್ದವು. ಈ ಪ್ರದೇಶದಲ್ಲಿ ಸರ್ವಧರ್ಮಗಳು ಸಾಮರಸ್ಯದಿಂದ ಬೆಳವಣೆಗೆ ಹೊಂದಿದವು. ಧಾರ್ಮಿಕ ಪರಂಪರೆಯನ್ನು ಸಾರುವ ಇಂಗಳೇಶ್ವರದ ನಾರಾಯಣ, ಶೋಭಾನದೇವರ, ಇಟಗಿಯ ರಾಮಲಿಂಗೇಶ್ವರ ಬಸವನ ಬಾಗೇವಾಡಿಯ ಬೊಂತೇಶ್ವರ (ಬಸವೇಶ್ವರ) ಮುತ್ತಗಿಯ ಲಕ್ಷ್ಮೀ-ನಾರಾಯಣ, ಈಶ್ವರ ಹೆಬ್ಬಾಳದ ಮಹಾದೇವ ದೇವಾಲಯಗಳು ಅಧ್ಯಯನಕ್ಕೆ ಯೋಗ್ಯವಾದ ವಾಸ್ತುವಿನ್ಯಾಸದಿಂದ ಕೂಡಿವೆ.

ಕಳಚುರಿ ಅರಸರ ಕಾಲದಲ್ಲಿ ಸಾಮಾಜಿಕ ಹಾಗೂ ಆರ್ಥಿಕ ಸಮಾನತೆಗಾಗಿ ಸಾಮ್ರಾಜ್ಯಕ್ಕೆ ಬೆನ್ನೆಲುಬಾಗಿದ್ದ ದುಡಿಯುವ ವರ್ಗಗಳನ್ನು ಒಂದುಗೂಡಿಸಿ ಹೋರಾಟದ ಮೂಲಕ ರಾಜಕೀಯ ಅಸ್ಥಿತ್ವವನ್ನೇ ಅಲುಗಾಡಿಸಿದ ಬಸವಣ್ಣನವರು ಬಾಗೇವಾಡಿ ನೆಲದಲ್ಲಿ ಜನಿಸಿ ದೇಶದ ಚರಿತ್ರೆಯಲ್ಲಿ ವಿಶಿಷ್ಟಸ್ಥಾನ ಗಳಿಸಿಕೊಂಡಿದ್ದಾರೆ. ೧೯ನೆಯ ಶತಮಾನದಿಂದೀಚೆಗೆ ನಿರಂತರ ಸಂಶೋಧನೆಗಳ ಮೂಲಕ ಬಸವಣ್ಣನವರು ಮತ್ತು ಸಮಕಾಲೀನ ಶಿವಶರಣರ ಮೇಲೆ ಬೆಳಕು ಚೆಲ್ಲುವ ಅನೇಕ ವಿಷಯಗಳು ಹೊರಬಂದಿವೆ. ಆದರೂ ಬಸವಣ್ಣನವರ  ಬಾಲ್ಯ ಮತ್ತು ವ್ಯಕ್ತಿತ್ವವನ್ನು ಪುನಃ ರೂಪಿಸುವ ಬುದ್ಧಿಜೀವಿಗಳಲ್ಲಿ ನಿರಂತರ ಚರ್ಚೆಗೆ ಗ್ರಾಸವಾಗಿದೆ. ಸೈದ್ಧಾಂತಿಕ ನೆಲೆಯಲ್ಲಿ ರೂಪಿತವಾದ ಕೆಲವು ಸಂಶೋಧನೆಗಳು ಬಸವಣ್ಣನವರನ್ನು ಭಕ್ತಿಪೂರ್ವಕ ಸ್ವೀಕರಿಸಿದ ಸಮಾಜದಲ್ಲಿ ಆತಂಕವನ್ನುಂಟುಮಾಡಿದರೂ ಅವು ಮುಂದಿನ ಅಧ್ಯಯನಕ್ಕೆ ದಾರಿಮಾಡಿ ಕೊಡುತ್ತವೆಂಬುವುದರಲ್ಲಿ ಸಂಶಯವಿಲ್ಲ. ಇದಕ್ಕೆ ಸರಿಯಾದ ಆಕರಗಳನ್ನೊದಗಿಸದೇ ತಮ್ಮ ನಿಲುವುಗಳನ್ನು ಜನಸಾಮಾನ್ಯರು ನಂಬುವಂತೆ ಮಾಡಿರುವ ಆರಂಭದ ಸಂಶೋಧಕರು ಕಾರಣರಾಗಿದ್ದಾರೆ.

ಆರಂಭದಲ್ಲಿ ಬಸವಣ್ಣನವರ ಬಗ್ಗೆ ಬರೆದಿರುವ ಪ್ರಾಚೀನ ಸಾಹಿತ್ಯ ಕೃತಿಗಳನ್ನು ಆಕರವಾಗಿ ಬಳಸಿಕೊಂಡು ಜೀವನ ಚರಿತ್ರೆಯನ್ನು ನಿರೂಪಿಸಲು ಮುಂದಾದರು. ಅವುಗಳಲ್ಲಿ ಬಸವಣ್ಣನವರನ್ನು ಒಬ್ಬ ದೈವಿಪುರುಷನಂತೆ ಕಂಡಿರುವುದರಿಂದ ವಸ್ತುನಿಷ್ಟ ಚರಿತ್ರೆಕಾರರು ಅವರ ಇರುವಿಕೆಯನ್ನೇ ಸಂಶಯದಿಂದ ನೋಡಲು ಆರಂಭಿಸಿದರು. ಪ್ರಸ್ತುತ ಗ್ರಂಥದ ಶಾಸನಗಳಲ್ಲಿ ಬಸವಣ್ಣನವರು ಎಂಬ ಲೇಖನದಲ್ಲಿ ಸಂಗ್ರಹಿಸಿದ ಜಾನ್. ಎಫ್. ಫ್ಲೀಟರು ”No epigraphic mention of Basava and Channabasava has been obtained which is really peculiar, if they held the high office that is allotted to them by tradition.”  ಮತ್ತು ಎ. ವೆಂಕಟಸುಬ್ಬಯ್ಯನವರು ”ವೀರಶೈವ ಮತ ಸ್ಥಾಪಕರೆಂದು ಪ್ರಸಿದ್ಧರಾದ ಬಸವ, ಚೆನ್ನಬಸವಾದಿಗಳು, ಕ್ರಿ.ಶ. ೧೧೫೬-೬೭ರಲ್ಲಿ ಆಳುತ್ತಿದ್ದ ಬಿಜ್ಜಳನ ಕಾಲದಲ್ಲಿದ್ದರೆಂದು ಸರ್ವತ್ರ ಪ್ರತೀತಿ ಇದ್ದು, ಕರ್ನಾಟಕ ದೇಶದ ಶಾಸನಗಳಲ್ಲಿ ಇದಕ್ಕೆ ಯಾವ ವಿಧವಾದ ಆಧಾರವೂ ದೊರೆಯುವುದಿಲ್ಲ. ಅವರು ಕ್ರಿ.ಶ. ೧೧೫೬-೬೭ರಲ್ಲಿ ಇರಲಿಲ್ಲವೆಂದಂತೂ ಸುಮಾರಾಗಿ ದೃಢವಾಗಿಯೇ ಹೇಳಬಹುದು” ಎಂಬ ಹೇಳಿಕೆಗಳು ಆತಂಕದ ವಾತಾವರಣವನ್ನು ಸೃಷ್ಟಿಸುವಂತವುಗಳಾಗಿದ್ದವು. ಬಸವಣ್ಣನವರು ಹುಟ್ಟಿ ಬೆಳೆದ ಮನೆಗಳು ಮತ್ತು ಅವರ ವಂಶಾವಳಿಗಳು ಬಾಗೇವಾಡಿ ಮತ್ತು ಇಂಗಳೇಶ್ವರಗಳಲ್ಲಿವೆ ಎಂದು ಹೇಳಿದಾಗಲೂ ಅವುಗಳಿಗೆ ಸಮರ್ಥನೀಯವಾದ ಯಾವುದೇ ಐತಿಹಾಸಿಕ ಆಕರಗಳಿಲ್ಲದಿರುವುದರಿಂದ ಅವು ಕೂಡಾ ನಂಬಿಕೆಗಳಿಗೆ ಬಹಳ ದೂರ ಉಳಿದವು – ಉಳಿದಿವೆ.

ಕ್ರಿ.ಶ. ೧೨೬೦ರ ಸೇವುಣ ಅರಸ ಕನ್ನರದೇವನ ಕಾಲದ ಬೆಳಗಾವಿ ಜಿಲ್ಲೆಯ ಅರ್ಜುನವಾಡ ಶಿಲಾಶಾಸನ ತರ್ದವಾಡಿ ಮದ್ಯಗ್ರಾಮ ಬಾಗವಾಡಿ ಪುರವರಾಧೀಶ್ವರ ಮಾದಿರಾಜನ ತನೂಜಂ ಬಸವರಾಜನ ಮಹಿಮೆಯಂತೆಂದಡೆ ಎಂದು ಉಲ್ಲೇಖಿಸಿದೆ. ಇದರಿಂದ ಬಸವಣ್ಣನವರ ತಂದೆಯ ಹೆಸರು ಮಾದಿರಾಜ. ಆತನು ಬಾಗೇವಾಡಿ ಪಟ್ಟಣದ ಅಧಿಕಾರಿಯಾಗಿದ್ದನೆಂದು ಸ್ಪಷ್ಟವಾಗುತ್ತದೆ. ಕಳಚುರಿಯರ ನಂತರ ಅಧಿಕಾರಕ್ಕೆ ಬಂದ ಸೇವುಣರ ಕಾಲಕ್ಕಾಗಲೇ ಬಸವಣ್ಣನವರ ಕುಟುಂಬ ವಂಶಸ್ಥರು ಬಾಗೇವಾಡಿಯಿಂದ ಕವಿಳಾಸಪುರಕ್ಕೆ ಸ್ಥಳಾಂತರಗೊಂಡಿದ್ದರು. ಬಸವಣ್ಣನವರ ಅಣ್ಣ ಮಾದಿರಾಜನ ಪರಿವಾರ ಮುಂದುವರೆದು ಹಾಲಬಸವಿದೇವ ಕವಿಳಾಸಪುರದ ಪ್ರಭುವಾಗಿದ್ದನು. ಈ ಶಾಸನದಿಂದ ಬಸವಣ್ಣನವರ ವಂಶಾವಳಿ ದೊರೆತು ಚರಿತ್ರೆಯಲ್ಲಿ ಅವರ ಸ್ಥಾನ ಗಟ್ಟಿಗೊಳ್ಳುವಂತಾಯಿತು.

ಬಸವನ ಬಾಗೇವಾಡಿ ಪರಿಸರದ ಭೌಗೋಳಿಕತೆ ಮತ್ತು ಐತಿಹಾಸಿಕ ಹಿನ್ನೆಲೆ, ಸ್ಥಳನಾಮ. ಆಡಳಿತ ವಿಭಾಗಗಳು, ರಾಜಕೀಯ ಚರಿತ್ರೆ, ದೇಸಗತಿ ಮನೆತನಗಳು, ಶಾಸನಗಳನ್ನು ಅನುಲಕ್ಷಿಸಿ ಧಾರ್ಮಿಕ, ಸಾಮಾಜಿಕ ಮತ್ತು ಆರ್ಥಿಕ ವಲಯಗಳನ್ನು ಪರಿಚೆಯಿಸುವ ಲೇಖನಗಳು ಪ್ರಸ್ತುತ ಕೃತಿಯಲ್ಲಿವೆ. ಪ್ರಸ್ತುತ ಕೃತಿಯಲ್ಲಿವೆ. ಇಲ್ಲಿಯ ಜಾತ್ರೆ ಉತ್ಸವ, ಅನೇಕ ಆಚರಣೆ, ಸಂಪ್ರದಾಯಗಳು ರೂಢಿಗತವಾಗಿ ಮುಂದುವರೆದುಕೊಂಡು ಬಂದಿವೆ. ಈ ಊರಿನ ಮುಖ್ಯ ದೇವರು ಬಸವಣ್ಣ. ಕೃಷಿ ಪ್ರಧಾನವಾದ ಈ ದೇವತೆಯ ಕುರಿತು ಆಚರಣೆ, ಸಂಪ್ರದಾಯ ಮತ್ತು ಐತಿಹ್ಯಗಳು ಬೆಳೆದುಬಂದಿವೆ. ಇವೆಲ್ಲವುಗಳನ್ನು ಆಚರಣೆ ಮತ್ತು ಸಂಪ್ರದಾಯ ಎಂಬ ಲೇಖನದಲ್ಲಿ ದಾಖಲಿಸಲಾಗಿದೆ.

ಬಸವಣ್ಣನವರ ಪರಂಪರೆ, ಇದುವರೆಗೆ ಬಸವಣ್ಣನವರಿಗೆ ಸಂಬಂಧಿಸಿದ ಶಾಸನಗಳು, ಮಹಾರಾಷ್ಟ್ರ ಮತ್ತು ತಮಿಳುನಾಡುಗಳಲ್ಲಿ ಬಸವಣ್ಣನವರಿಗೆ ಸಂಬಂಧಿಸಿದ ಸಾಹಿತ್ಯವನ್ನು ಸಂಗ್ರಹಿಸಲಾಗಿದೆ. ಅಲ್ಲದೇ ವಚನಗಳಲ್ಲಿಯ ಸಾಮಾಜಿಕ, ಆರ್ಥಿಕ ಅಂಶಗಳನ್ನು ಪ್ರತಿಬಿಂಬಿಸುವ ಲೇಖನವು ಈ ಕೃತಿಯಲ್ಲಿದೆ. ಬಸವನ ಬಾಗೇವಾಡಿ ಪರಿಸರದ ಸಂಸ್ಕೃತಿಯನ್ನು ಮತ್ತು ಬಸವಣ್ಣನವರ ಪರಂಪರೆ, ವ್ಯಕ್ತಿತ್ವ, ವಚನ ಚಳುವಳಿಯ ಸಾಮಾಜಿಕ ನೆಲೆಗಳನ್ನು ಪರಿಚಯಿಸುವ ಒಟ್ಟು ೧೨ ಲೇಖನಗಳನ್ನು ಈ ಸ್ಥಳೀಯ ಚರಿತ್ರೆಯಲ್ಲಿ ಸಂಪಾದಿಸಲಾಗಿದೆ. ಇದರಿಂದ ಬಸವನ ಬಾಗೇವಾಡಿಯ ಚರಿತ್ರೆ ಮತ್ತು ಸಂಸ್ಕೃತಿಯನ್ನು ತಕ್ಕಮಟ್ಟಿಗೆ ದಾಖಲಿಸುವ ಪ್ರಯತ್ನ ಮಾಡಲಾಗಿದೆ.

ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಪ್ರಮುಖ ಯೋಜನೆಯಾದ ಸ್ಥಳೀಯ ಚರಿತ್ರೆ ಮತ್ತು ಪುರಾತತ್ವ ಮಾಲೆಯಲ್ಲಿ ಐತಿಹಾಸಿಕ ಸ್ಥಳಗಳನ್ನು ಸಂಶೋಧನೆ ಮತ್ತು ಅಧ್ಯನದ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಳ್ಳಲಾಗಿದೆ. ಈ ಯೋಜನೆಯ ಮುಖ್ಯ ಆಶಯದಂತೆ ಸ್ಥಳೀಯ ಮಟ್ಟದಲ್ಲಿ ವಿಚಾರ ಸಂಕಿರಣವನ್ನು ಏರ್ಪಡಿಸಿ, ಪರಿಣತ ವಿದ್ವಾಂಸರಿಂದ ಮಂಡಿತವಾದ ಲೇಖನಗಳನ್ನು ಪ್ರಕಟಿಸುವ ಗುರುತರವಾದ ಜವಾಬ್ದಾರಿಯನ್ನು ನಿರ್ವಹಿಸುತ್ತ ಬರಲಾಗಿದೆ.

ಪುರಾತತ್ವ ಮತ್ತು ಪ್ರಾಚೀನ ಆಕರಗಳನ್ನೇ ಪ್ರಧಾನವಾಗಿಟ್ಟುಕೊಂಡು ಬೆಳವಣಿಗೆ ಹೊಂದಿರುವ ಇತಿಹಾಸ ಅಧ್ಯಯನದಲ್ಲಿ ಆಯಾ ಪರಿಸರದ ಸಂಸ್ಕೃತಿಯನ್ನು ಹಿಡಿದಿಟ್ಟುಕೊಂಡಿರುವ ಮೌಖಿಕ ಆಕರಗಳನ್ನೂ ಸೇರಿಸುವ ಮೂಲಕ ತೆರೆಮರೆಯಲ್ಲಿದ್ದ ಅನೇಕ ವಿಷಯಗಳನ್ನು ಬೆಳಕಿಗೆ ತರಲು ಸಾಧ್ಯವಾಗುತ್ತಿತೆ. ಈ ದೃಷ್ಟಿಯಿಂದ ಸ್ಥಳೀಯ ಮಟ್ಟದಲ್ಲಿ ವಿಚಾರ ಸಂಕಿರಣಗಳನ್ನು ನಡೆಸುವುದರಿಂದ ಪ್ರಾಚೀನ ಅವಶೇಷಗಳ ಮಹತ್ವ, ಇತಿಹಾಸದ ಪ್ರಜ್ಞೆ ಮತ್ತು ಜಾಗೃತಿಯನ್ನು ಜನಸಾಮಾನ್ಯರಲ್ಲಿ ಮೂಡಿಸುವ ಪ್ರಯತ್ನ ಇದಾಗಿದೆ. ಇದುವರೆಗೂ ನಡೆದಿರುವ ಅಧ್ಯಯನಗಳನ್ನು ಗಮನದಲ್ಲಿಟ್ಟುಕೊಂಡು ಲಭ್ಯವಿರುವ ಆಕರಗಳನ್ನು ಸಂಯೋಜಿಸಿ ವಿಚಾರ ಸಂಕಿರಣದಲ್ಲಿ ಮಂಡಿಸಲಾಗುವುದು. ಅಲ್ಲಿ ಚರ್ಚಿಸಲ್ಪಟ್ಟ ವಿಚಾರಗಳನ್ನು ಮತ್ತು ಪ್ರತಿಕ್ರಿಯೆಗಳನ್ನು ಗಮನದಲ್ಲಿಟ್ಟುಕೊಂಡು ಸಿದ್ಧಪಡಿಸಿದ ಲೇಖನಗಳನ್ನು ಓದುಗರಿಗೆ ತಲುಪಿಸುವ ಮುಖ್ಯ ಯೋಜನೆ ಇದಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಲೇಖನಗಳನ್ನು ಕ್ರೋಢಿಕರಿಸಿ ಈಗ ರೂಪ ತಳೆದಿರುವುದೇ ಸ್ಥಳೀಯ ಚರಿತ್ರೆ ಮತ್ತು ಪುರಾತತ್ವ ಮಾಲೆಬಸವನ ಬಾಗೇವಾಡಿ ಗ್ರಂಥ.

ಇಂಥ ಯೋಜನೆಯನ್ನು ಮುಂದುವರೆಸಿಕೊಂಡು ಬರುವಲ್ಲಿ ಸ್ಪೂರ್ತಿಯ ನೆಲೆಯಾಗಿ ನಿಂತವರು ಅಂದಿನ ಕುಲಪತಿಗಳಾಗಿದ್ದ ಡಾ. ಹಿ.ಚಿ. ಬೋರಲಿಂಗಯ್ಯ ಮತ್ತು ಇಂದಿನ ಕುಲಪತಿಗಳಾದ ಡಾ. ಎ. ಮುರಿಗೆಪ್ಪ, ಕುಲಸಚಿವರೂ ಪ್ರಸಾರಾಂಗದ ನಿರ್ದೇಶಕರಾದ ಡಾ. ಮಂಜುನಾಥ ಬೇವಿನಕಟ್ಟಿ ಅವರಿಗೆ ಕೃತಜ್ಞತೆಗಳು ಸಲ್ಲುತ್ತವೆ.

ಸ್ಥಳೀಯ ಚರಿತ್ರೆ ಮತ್ತು ಪುರಾತತ್ವ ಮಾಲೆ – ಬಸವನ ಬಾಗೇವಾಡಿ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರ, ಬಸವನ ಬಾಗೇವಾಡಿ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತುಗಳ ಸಹಯೋಗದಲ್ಲಿ ದಿನಾಂಕ ೨೯ ಮತ್ತು ೩೦, ಜನವರಿ ೨೦೦೮ರಂದು ಬಸವನ ಬಾಗೇವಾಡಿಯಲ್ಲಿ ನಡೆಸಲಾಯಿತು. ಈ ವಿಚಾರ ಸಂಕಿರಣ ಯಶಸ್ವಿಯಾಗಿ ನಡೆಯಲು ಸಹಾಯ ಸಹಕಾರವನ್ನು ನೀಡಿದ ಡಾ.ಎಸ್.ಎಂ. ಜಾಮದಾರ, ಮಾಜಿ ಶಾಸಕರಾದ ಶಿವಾನಂದ ಎಸ್. ಪಾಟೀಲ ಅವರನ್ನು ಮರೆಯುವಂತಿಲ್ಲ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ನಡೆಸಲು ಸ್ಪೂರ್ತಿಯನ್ನು ನೀಡಿದ ಗುರುಗಳಾದ ಎಸ್.ಎಸ್. ಝಳಕಿ, ಅಂದಿನ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಸಂಗನಗೌಡ ಬಿರಾದಾರ (ಸೋಮನಾಳ), ಲ.ರು. ಗೋಲಸಂಗಿ, ಬಾಳನಗೌಡ ಪಾಟೀಲ, ಮಲ್ಲಿಕಾರ್ಜುನ ಬಿ. ನಾಯಕ್, ಭೀಮು ಗೊಳಸಂಗಿ, ಸುರೇಶ ಮಣೂರ, ಸಂಗಮೇಶ ಓಲೇಕಾರ, ಕಮಾಲಸಾಬ ಕೋರಬು, ಸಂಗಪ್ಪ ವಾಡೇದ, ಅಂಬೋಜಿ ಪವಾರ, ಜಿ.ಸಿ. ವಂದಾಲ, ರಾಜು ಪಿರಂಗಿ, ಎಂ.ಎಸ್. ಮನಹಳ್ಳಿ, ಗಂಗಾಧರ ಬಡಿಗೇರ, ಅಬ್ದುಲ್ ಮುದ್ದೇಬಿಹಾಳ, ಸಹೋದರ ಸುಭಾಸ ಸಿ. ಬಡಿಗೇರ, ನಮ್ಮ ವಿಭಾಗದ ವಿದ್ಯಾರ್ಥಿಗಳು ಮತ್ತು ಮಾಧ್ಯಮದ ಮಿತ್ತರು, ಛಾಯಾಚಿತ್ರಗಳನ್ನು ಒದಗಿಸಿದ ಎಸ್.ಆರ್. ಹಿರೇಮಠ ಇವರೆಲ್ಲರನ್ನೂ ನೆನೆಯುತ್ತೇನೆ.

ವಿಚಾರ ಸಂಕಿರಣದ ದಿವಯ್ಯ ಸಾನಿಧ್ಯ ವಹಿಸಿದ ಪೂಜ್ಯ ಶ್ರೀ ಮ.ನಿ.ಪ್ರ.ಶ್ರೀ ಮುರಘೇಂದ್ರ ಮಹಾಸ್ವಾಮಿಗಳು, ವಿರಕ್ತಮಠ ಅವರಿಗೆ ನಮನಗಳು. ಆಶಯ ಭಾಷಣ ಮಾಡಿದ ಪ್ರೊ. ಲಕ್ಷ್ಮಣ್ ತೆಲಗಾವಿ, ಸ್ಥಳೀಯ ಚರಿತ್ರೆ ಮತ್ತು ಪುರಾತತ್ವ ಮಾಲೆ – ಹಾನಗಲ್ಲು ಪುಸ್ತಕ ಬಿಡುಗಡೆ ಮಾಡಿದ ಡಾ. ಅ. ಸುಂದರ, ಗೋಷ್ಠಿಯ ಅಧ್ಯಕ್ಷತೆ ವಹಿಸಿದ ಮತ್ತು ಲೇಖನಗಳನ್ನು ಕೊಟ್ಟು ಸಹಕರಿಸಿದ ಎಲ್ಲ ವಿದ್ವಾಂಸರಿಗೂ,

ಪುಸ್ತಕ ಪ್ರಕಟಣೆಯಲ್ಲಿ ಸಹಕರಿಸಿದ ಪ್ರಸಾರಾಂಗ ಸಹಾಯಕ ನಿರ್ದೇಶಕರಾದ ಸುಜ್ಞಾನಮೂರ್ತಿ, ಕೆ.ಎಲ್. ರಾಜಶೇಕರ, ಮೋಹನ್ ಎಸ್ ಹಾಗೂ ಮುಖಪುಟ ತಯಾರಿಸಿದ ಕೆ.ಕೆ. ಮಕಾಳಿ, ಅಕ್ಷರ ಸಂಯೋಜನೆ ಮಾಡಿದ ನಾಗರಾಜ ಬಡಿಗೇರ ಅವರಿಗೂ,

ವಿಚಾರ ಸಂಕಿರಣದ ವ್ಯವಸ್ಥೆ ಮತ್ತು ಪುಸ್ತಕ ಪ್ರಕಟಣೆಯಲ್ಲಿ ಸಹಕರಿಸಿದ ಡಾ. ವಿಠಲರಾವ್ ಟಿ. ಗಾಯಕ್ವಾಡ್, ಡಾ. ಗಂಗಾಧರ ದೈವಜ್ಞ, ನನ್ನ ಶ್ರೀಮತಿ ಸುನಂದಾ ಮತ್ತು ವಿಭಾಗದ ಸದಸ್ಯರಾದ ಡಾ. ಸಿ. ಮಹದೇವ, ಡಾ.ಸಿ.ಎಸ್. ವಾಸುದೇವನ್, ಡಾ. ರಮೇಶ ನಾಯಕ, ಡಾ.ಎಸ್.ವೈ. ಸೋಮಶೇಖರ ಹಾಗೂ ಶ್ರೀ ಗುರುಮೂರ್ತಿ, ಶ್ರೀಮತಿ ದಿಲ್‌ಶಾದ್ ಬಾನುಬೇಗಂ, ಶ್ರೀ ರಮೇಶ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳು ಸಲ್ಲುತ್ತವೆ.

ಡಾ. ವಾಸುದೇವ ಬಡಿಗೇರ್