೧೨ನೆಯ ಶತಮಾನವು ಕನ್ನಡ ನಾಡಿನ ಚರಿತ್ರೆಯಲ್ಲಿ ತನ್ನದೇ ಆದ ವೈಶಿಷ್ಟ್ಯವನ್ನು ಮೆರೆದಿದೆ. ಪ್ರಯೋಗಶೀಲ ಕವಿ, ಕಾಂತ್ರಿಕಾರಿ ಸಮಾಜ ಸುಧಾರಕ, ಆಧ್ಯಾತ್ಮ ಜೀವಿ, ಧಾರ್ಮಿಕ ನೇತರರಾದ ಬಸವಣ್ಣನವರಿಂದಾಗಿ ಜನತೆ ಹೊಸ ದಿಗಂತವನ್ನು ಕಾಣುವಂತಾಯಿತು. ಈ ಮಹಾವ್ಯಕ್ತಿಯ ಜೀವನ ಚರಿತ್ರೆಯನ್ನು ತಿಳಿದುಕೊಳ್ಳುವಲ್ಲಿ ಸಮಕಾಲೀನ ಶರಣರ ವಚನಗಳು, ಪ್ರಾಚೀನ ಕಾವ್ಯಗಳು ಸಹಾಯಕಾರಿಯಾಗಿವೆ. ಆದರೆ ಕವಿಗಳ ಅಭಿಮಾನ, ವೈಭವೀಕೃತ ಬಣ್ಣನೆಯಿಂದಾಗಿ ಕಾವ್ಯಗಳಲ್ಲಿ ಸತ್ಯಾಂಶಗಳು ಮರೆಯಲ್ಲಿ ಉಳಿದುಕೊಂಡಿವೆ. ವಸ್ತುನಿಷ್ಠವಾಗಿ ವಾಸ್ತವ ಸಂಗತಿಗಳನ್ನು ತಿಳಿಸುವಲ್ಲಿ ಶಾಸನಗಳು ನೆರವಾಗಿವೆ. ಹೀಗಾಗಿ ಬಸವಣ್ಣನವರ ಚರಿತ್ರೆಯ ರಚನೆಯಲ್ಲಿ ಅವು ಮಹತ್ವದ ಪಾತ್ರ ವಹಿಸುತ್ತವೆ.

ಹಲವಾರು ಕಾವ್ಯಗಳು ಬಸವಣ್ಣನವರ ಪವಾಡಮಯ ಜೀವನದ ಚಿತ್ರಣ ನೀಡುತ್ತಿದ್ದರೂ ಅವರನ್ನು ಕುರಿತಾದ ಒಂದು ಶಾಸನವೂ ದೊರೆತಿರಲಿಲ್ಲವಾದ್ದರಿಂದ ಜಾನ್‌ಎಫ್. ಫ್ಲೀಟರು ಬಾಂಬೆ ಗ್ಯಾಸೆಟೀಯರ್ದಲ್ಲಿ ಹೀಗೆ ಬರೆದರು – “No epigraphic mention of Basava and Channabasava has been obtained which is really peculiar, if they held the high office that is allotted to them by tradition.”

ಫ್ಲೀಟರ ಈ ಮಾತಿಗೆ ಧ್ವನಿಗೂಡಿಸುವ ರೀತಿಯಲ್ಲಿ ಡಾ.ಎ. ವೆಂಕಟಸುಬ್ಬಯ್ಯನವರು, “ವೀರಶೈವ ಮತ ಸ್ಥಾಪಕರೆಂದು ಪ್ರಸಿದ್ಧರಾದ ಬಸವ, ಚೆನ್ನಬಸವಾದಿಗಳು, ಕ್ರಿ.ಶ. ೧೧೫೬-೬೭ರಲ್ಲಿ ಆಳುತ್ತಿದ್ದ ಬಿಜ್ಜಳನ ಕಾಲದಲ್ಲಿದ್ದರೆಂದು ಸರ್ವತ್ರ ಪ್ರತೀತ ಇದ್ದು, ಕರ್ನಾಟಕ ದೇಶದ ಶಾಸನಗಳಲ್ಲಿ ಇದಕ್ಕೆ ಯಾವ ವಿಧವಾದ ಆಧಾರವೂ ದೊರೆಯುವುದಿಲ್ಲ. ಅವರು ಕ್ರಿ.ಶ. ೧೧೫೬-೬೭ರಲ್ಲಿ ಇರಲಿಲ್ಲವೆಂದಂತೂ ಸುಮಾರಾಗಿ ದೃಢವಾಗಿಯೇ ಹೇಳಬಹುದು” ಎಂಬುದಾಗಿ ‘ಕೆಲವು ಕನ್ನಡ ಕವಿಗಳ ಕವಿಗಳ ಕಾಲ ವಿಚಾರ’ದಲ್ಲಿ ಬರೆದರು. ಇದರಿಂದಾಗಿ ಬಸವಣ್ಣನವರು ಐತಿಹಾಸಿಕ ವ್ಯಕ್ತಿಯಾಗಿರದೇ ಪುರಾಣ ಪುರುಷರಾಗಿದ್ದರೆಂಬ ತಪ್ಪುಗ್ರಹಿಕೆ ಜನರ ಮನದಲ್ಲಿ ಮನೆಮಾಡಿತ್ತು. ನಂತರ ದೊರೆತ ಶಾಸನಗಳು ಹೊಸ ಬೆಳಕನ್ನು ಚೆಲ್ಲಿದವು. ಬಸವಣ್ಣನವರ ಹೆಸರನ್ನು ಪ್ರಸ್ತಾಪಿಸುವ ಶಾಸನಗಳನ್ನು ಡಾ. ಜಾನ್ ಫ್ಲೀಟ್, ರಾವ್‌ಬಹಾದ್ದೂರ, ಫ.ಗು. ಹಳಕಟ್ಟಿ, ಡಾ. ಎಸ್‌.ಸಿ. ನಂದಿಮಠ, ಡಾ. ಸಿ. ನಾರಾಯಣರಾವ್, ಶ್ರೀ. ಎನ್‌.ಎಸ್‌. ರಾಜಪುರೋಹಿತ, ಶ್ರೀ ಗೋವಿಂದ ಪೈ, ಶ್ರೀ ಎಸ್‌. ಶ್ರೀಕಂಠಯ್ಯ, ಶ್ರೀ ಚನ್ನಮಲ್ಲಿಕಾರ್ಜುನ, ಡಾ. ಎಂ.ಎಂ. ಕಲಬುರ್ಗಿ, ಡಾ. ಜಿ.ಎಸ್‌. ಗಾಯಿ ಮೊದಲಾದವರು ಶೋಧಿಸಿದ ಒಟ್ಟು ೨೧ ಶಾಸನಗಳು ಬಸವಣ್ಣವರ ಹೆಸರನ್ನು ಉಲ್ಲೇಖಿಸುತ್ತವೆ. ಆದರೆ ಅವೆಲ್ಲವೂ ಸ್ವೀಕೃತವಾದವುಗಳಲ್ಲ.

ಜಾನ್. ಫ್ಲೀಟರ್ ಮನಗೂಳಿ ಶಾಸನ, ಸಿ.ನಾರಾಯಣರಾಯರ ಕಸಪಯ್ಯನ ಶಾಸನ, ಓರುವಾಯ ಶಾಸನ, ಅಬ್ಬಲೂರು ಶಾಸನ, ಗೋವಿಂದ ಪೈ ಅವರ ಸೊರಟೂರ ಶಾಸನ, ಚನ್ನಮಲ್ಲಿಕಾರ್ಜುನರ ಬಳ್ಳಿಗಾವಿ ಶಾಸನ ಇವು ಬಸವಣ್ಣನವರ ಬಗೆಗಿನ ಶಾಸನಗಳಲ್ಲ ಎಂದು ದೃಢಪಟ್ಟಿರುವುದರಿಂದ ಅವನ್ನು ಈ ಪ್ರಬಂಧದ ವ್ಯಾಪ್ತಿಗೆ ಒಳಪಡಿಸದೆ, ಸರ್ವರಿಂದ ಸ್ವೀಕೃತ ಶಾಸನಗಳನ್ನು ಕುರಿತು ಇಲ್ಲಿ ಚರ್ಚಿಸಲಾಗಿದೆ.

ಹಿರಿಯೂರ ಶಾಸನ (E.C., V-ii, ಅರಸಿಕೇರಿ ೧೦೯):  ಈ ಶಾಸನವು ಹಿರಿಯೂರಿನ (ಹಾಸನ ಜಿಲ್ಲೆ) ಕುಂಜೇಶ್ವರ ದೇವಾಲಯದಲ್ಲಿದೆ. ಇದರ ಕಾಲ ಕ್ರಿ.ಶ. ೧೨೫೯. ಬಸವಣ್ಣನವರನ್ನು ಶಾಸನದಲ್ಲಿ ಬಸವಯ್ಯ ಎಂದು ಕರೆಯಲಾಗಿದೆ. ತ್ರಿಷಷ್ಟಿ ಪುರಾತನವರು ಮತ್ತು ಪ್ರಾಚೀನ ಶರಣರ ಸಾಲಿಗೆ ಬಸವಣ್ಣನವರನ್ನು ಸೇರಿಸಲಾಗಿದೆ. ಅವರು ಭಕ್ತ ಶ್ರೇಷ್ಠರಾಗಿದ್ದರೆಂದು ಇದರಿಂದ ವ್ಯಕ್ತವಾಗುತ್ತದೆ. ಶಾಸನದ ಮುಖ್ಯಭಾಗವಿದು

ಸಿರಿಯಾಳ್ವಂ ಬಸವಯ್ಯನೊಳ್ಪೆಸೆವ x x x ಮಂ ಬಾಣನುಂ
ಧರ ಭೋಗಂ ಸಲೆ ಚೋಳನುದ್ಭಟ ತರ್ಕ್ಯಂ ಸಿಂಧು ಬಲ್ಲಾಳ ನೀ
ಧರೆ ಕೊಂಡಾಡುವ ದಾಸಿಮಯ್ಯನೆನಿಸಿರ್ದೀ ಭಕ್ತ ಸಂದೋಹವಾ
ದರದಿಂ ಕಾಕರ ಕಡನಂಬಿ ನಿನಗೀಗುದ್ಬೋಧ ಸಂಪತ್ತಿಯಂ

ಹೀಗೆ ಪ್ರಾಚೀನ ಭಕ್ತರ ಸಾಲಿನಲ್ಲಿ ಬಸವಣ್ಣನವರ ಹೆಸರು ಪರಿಗಣಿತವಾಗಿರುವುದು ಮತ್ತು ‘ಭಕ್ತರ ಸಂದೋಹ’ನೆಂದು ಬಣ್ಣಿತರಾಗಿರುವುದು ಅವರ ಆಧ್ಯಾತ್ಮ ಜೀವನದ ಔನ್ನತ್ಯವನ್ನು ಸೂಚಿಸುತ್ತದೆ.

ಅರ್ಜುನವಾಡ ಶಾಸನ (E.I., Vol.XXI, P.9): ಇದು ಕ್ರಿ.ಶ.೧೨೬೦ರ ಸೇವುಣ ಅರಸು ಮನೆತನದ ಕನ್ನರನ ಆಳ್ವಿಕೆಯ ಕಾಲದ್ದು, ಈ ಶಾಸನ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕು ಕೇಂದ್ರದಿಂದ ೪-೫ ಕಿ.ಮೀ. ದೂರದ ಅರ್ಜುನವಾಡದಲ್ಲಿ ದೊರೆತಿದೆ. ಇದನ್ನು ಶೋಧಿಸಿದವರು ಶ್ರೀ ನಾ.ಶ್ರೀ. ರಾಜಪುರೋಹಿತರು. ೧೯೨೮ರಲ್ಲಿ ಶ್ರೀ ಫ.ಗು. ಹಳಕಟ್ಟಿಯವರ ಹೆಸರಿನಲ್ಲಿ ‘ಶಿವಾನುಭವ’ದಲ್ಲಿ ಮೊದಲು ಪ್ರಕಟವಾಯಿತು. ನಂತರ ೧೯೩೧-೩೨ರಲ್ಲಿ Epigraphia indicaದಲ್ಲಿ ಸೇರ್ಪಡೆಯಾಯಿತು. ಸಂಪಾದಿಸಿದವರು ಶ್ರೀ ಎಸ್‌. ಶ್ರೀಕಂಠಶಾಸ್ತ್ರಿ ಮತ್ತು ಎನ್.ಲಕ್ಷ್ಮೀನಾರಾಯಣರಾವ್ ಅವರು.

ಶಿಲಾಸ್ತಂಭದ ಸುಮಾರು ೭೬ ಸೆಂ.ಮೀ. ಮತ್ತು ೩೫ ಸೆಂ.ಮೀ ಉದ್ದಗಲದ ಜಾಗೆಯಲ್ಲಿ ೮೦ ಸಾಲುಗಳಲ್ಲಿ ಇದನ್ನು ಬರೆಯಲಾಗಿದೆ. ೧೩ನೆಯ ಶತಮಾನದ ಅಕ್ಷರಗಳಲ್ಲಿದೆ.

ವಾಡಿಕೆಯಂತೆ-ನಮಸ್ತುಂಗ ಶಿರಶ್ಚುಂಬಿ ಚಂದ್ರ ಚಾಮರ ಚಾರವೇ| ತ್ರ್ಯೆಳೋಕ್ಯ ನಗರಾರಂಭ ಮೂಲಸ್ತಂಭಾಯ ಶಂಭವೇ| ಎಂದು ಮೂರು ಲೋಕಗಳಿಗೆ ಮೂಲಸ್ತಂಭವಾಗಿರುವ ಶಂಭು ದೇವನನ್ನು ಸ್ತುತಿಸಲಾಗಿದೆ. ಅನಂತರ ಕಲ್ಲಿನಾಥದೇವ ಗೌರಿಯರ ಸ್ತುತಿಯಿದೆ. ಶಾಸನದ ಎಂಟನೆಯ ಸಾಲಿನಲ್ಲಿ ಬಸವರಾಜನ ಪ್ರಸ್ತಾಪವಿದೆ.

೮. ಮತ್ತಂ ತರ್ದ್ದವಾಡಿ ಮಧ್ಯಗ್ರಾಮ ಬಾಗವಾಡಿಪುರವರಾಧೀಸ್ವರ ಮಾದಿರಾಜನ ತನೂ

೯. ಜಂ ಬಸವರಾಜನ ಮಹಿಮೆಯಿಂತೆಂದಡೆ ||

ಇಲ್ಲಿ ಬಸವಣ್ಣನವರ ತಂದೆಯ ಹೆಸರು ಮಾದಿರಾಜನೆಂದೂ, ಆತನು ಬಾಗವಾಡಿ (ಬಾಗೇವಾಡಿ) ಪಟ್ಟಣದ ಒಡೆಯನೆಂದೂ ಸ್ಪಷ್ಟವಾಗಿ ಹೇಳಲಾಗಿದೆ. ಈ ಶಾಸನದಲ್ಲಿ ಬಸವಣ್ಣನವರನ್ನು ‘ಬಸವರಾಜ’ನೆಂದೂ ಸ್ಪಷ್ಟವಾಗಿ ಹೇಳಲಾಗಿದೆ. ಈ ಶಾಸನದಲ್ಲಿ ಬಸವಣ್ನನವರನ್ನು ‘ಬಸವರಾಜ’ನೆಂದೂ ‘ಸಂಗನಬಸವ’ ಎಂದೂ ಕರೆಯಲಾಗಿದೆ.

ಬಸವಣ್ಣನವರ ಆರಾಧ್ಯ ದೈವ, ಕೂಡಲ ಸಂಗಮದ ಸಂಗಮನಾಥ. ಕೂಡಲಸಂಗನ ಭಕ್ತನಾದ ಬಸವಣ್ಣನವರು ಸಂಗನಬಸವ ಎಂದೆನಿಸಿದ್ದಾರೆ. ಅವರು ಪುರಾತನರಲ್ಲಿ, ಜಂಗಮರಲ್ಲಿ ಮತ್ತು ಲಿಂಗದಲ್ಲಿ ಭಕ್ತಿಭಾವ ತಳೆದವರಾಗಿದ್ದರೆಂಬುದನ್ನು ಶಾಸನವು ಹೀಗೆ ತಿಳಿಸುತ್ತದೆ.

೯. . . . . . . . .|| ಮಂಗಳ ಕೀರ್ತ್ತಿ ಪುರಾತನ ಜಂಗಮ ಲಿಂ-

೧೦. ಗೈಕ ಭಕ್ತಿ ನಿರ್ಬ್ಭರ ಲೀಲಾ ಸಂಗಂ ಬಸವಂ ಸಂಗತಿಯಂ ಮಾಳ್ಕೆ ಭಕ್ತಿಯೊಳು (ಳ) ಗನವರತಂ||

ಮುಂದಿನ ಸಾಲುಗಳಲ್ಲಿ ಸೇವುಣ ವಂಶದ ಅರಸರ ಬಗೆಗಿನ ವಿವರಗಳಿವೆ. ಸೇವುಣ ದೊರೆ ಕನ್ನರ ದೇವನ ಪಾದ ಪದ್ಮೋಪಜೀವಿಗಳಾದ ಚೌಡಿಶೆಟ್ಟಿ, ನಾಗರಸರು ಮತ್ತು ಮುಮ್ಮುರಿದಂಡಗಳು ಎರಡು ದತ್ತಿಗಳನ್ನು ಕೊಟ್ಟುದುದನ್ನು ಇದು ದಾಖಲಿಸಿದೆ. ದತ್ತಿ ಪಡೆದವನು ಯತಿರಾಯ ಹಾಲ ಬಸವಿದೇವ. ಇವನು ಕವಿಳಾಸಪುರದವನು. ಈ ಊರನ್ನು ಅರ್ಜುನವಾಡದ ಬಳಿ ಗುರುತಿಸಲಾಗಿದೆ.

ಶಾಸನದ ೩೫ ರಿಂದ ೩೯ನೆಯ ಸಾಲುಗಳಲ್ಲಿ ಹಾಲಬಸವಿ ದೇವನ ವಂಶವೃಕ್ಷ ಹೀಗೆ ಕಾಣಿಸಿಕೊಳ್ಳುತ್ತದೆ.

೩೫. . . . || ಸಂಗನ ಬಸವನ ಅಗ್ರ

[ಜ ಲಿಂಗೈ]ಕಂ

೩೬. ದೇವರಾಜ ಮುನಿಪನ ತನಯಂ ಜಂಗಮ ಪರುಸಂ [ಕಾವ]ರ-

೩೭. ಸಂಗಂ ಪ್ರಿಯಸುತನೆನಿಪ್ಪ ಕಲಿದೇವರ ಸಂ|| ಕಲಿದೇವ ಮುನಿ

೩೮. ಪನಾತ್ಮಜ ಸಲೆ ಮೂಜಗದೊಳಗೆ ಮೆ ವ ಮಾನವ ದೇವಂ ಗೆಲಿದಂ ಅಸ(ಶ)ನ-

೩೯. ಬೆಸನವ ಛಲರಧಿಕಂ ಹಾಲಬಸವಿದೇವ ಮುನೀಸಂ||

ಇದನ್ನು ಹೀಗೆ ಸಂಕ್ಷೇಪಿಸಬಹುದು,

10_366_BB-KUH

ಮಾದಿರಾಜನಿಗೆ ಇಬ್ಬರು ಪುತ್ರು. ದೇವಾರ ಅಗ್ರಜ, ಬಸವರಾಜು ಅನುಜ. ದೇವರಾಜನು ಮುನಿಪನೆಂದು ಬಣ್ಣಿತನಾಗಿದ್ದಾನೆ. ಇವನ ಮಗನಾದ (ಮಾದಿರಾಜನ ಮೊಮ್ಮಗ) ಕಾವರಸನು ಜಂಗಮ ಪುರುಷನೆಂದು ಗೌರವಿಸಲ್ಪಟ್ಟಿದ್ದಾನೆ. ಕಾವರಸನ ಪುತ್ರ ಕಲಿದೇವನನ್ನು ಮುನಿಪನೆಂದೂ ಮೊಮ್ಮಗ ಹಾಲಬಸವಿದೇವನನ್ನು ಮುನೀಶ ಎಂದೂ ಹೊಗಳಲಾಗಿದೆ. ಇದರಿಂದ ಬಸವಣ್ಣನವರದು ಆಧ್ಯಾತ್ಮಿಕ ಹಿನ್ನೆಲೆಯ ಗೌರವಾನ್ವಿತ ಮನೆತನವೆಂಬುದು ಸ್ಪಷ್ಟವಾಗುತ್ತದೆ.

ಈ ಶಾಸನವು ಹಾಲಬಸವಿದೇವನನ್ನು “ಮೂಜಗದೊಳಗೆ ಮೆರೆದ ಮಾನವ ದೇವಂ, ಗೆಲಿದಂ ಅಶನ ಬೆಸನವ ಛಲರಧಿಕಂ” ಎಂದೂ “ಸ್ವಸ್ತಿ ಸಮಸ್ತ ಭುವನಾಶ್ರಯಂ ಮಹಾಮಹೇಶ್ವರಂ, ಕವಿಳಾಸಪುರವರಾಧೀಶ್ವರರುಂ, ಸುವರ್ಣ ವೃಷಭ ಧ್ವಜಂ, (ತೇ) ಸರಿ ಪುರಾಥ ಪಾದಾರ್ಚಕರುಂ ಮಹಾಲಿಂಗ ಜಂಗಮ ಪ್ರಸಾದನಿಯತರುಂ” ಎಂದೂ ಮತ್ತು “ಹಾಲಬಸವಿದೇ ಮುನೀಶಂ, ಯತಿರಾಯ ಹಾಲಬಸವಿದೇವಂ” ಎಂದೂ ಬಣ್ಣಿಸಿರುವುದರಿಂದ ವೀರಶೈವ ಪರಂಪರೆಯ ತಲ ತಲಾಂತರದಿಂದ ಮುಂದುವರೆದುದು ಸ್ಪಷ್ಟವಾಗುತ್ತದೆ.

ಈ ಶಾಸನದಲ್ಲಿ ಬಸವಣ್ಣನವರ ಅಣ್ಣ ದೇವರಾಜನ ಪರಿವಾರ ಮುಂದುವರೆದುದು ತಿಳಿದು ಬರುತ್ತದೆ. ಆದರೆ ಬಸವಣ್ಣನವರ ಕುಡಿ ಬೆಳೆದಂತೆ ಕಂಡು ಬರುವುದಿಲ್ಲ. ವೀರಶೈವ ಪುರಾಣಗಳಲ್ಲಿ ಬಸವಣ್ಣನವರಿಗೆ ಮಗನಿದ್ದನೆಂದು ಹೇಳಲಾಗಿದೆ. ಆದರೆ ಶಾಸನವು ಮಾತ್ರ ಈ ಬಗ್ಗೆ ಮೌನ ತಾಳಿದೆ.

ಪ್ರಸಕ್ತ ಶಾಸನವು ಬಸವಣ್ಣನವರ ಕಾಲವನ್ನು ಪರೋಕ್ಷವಾಗಿ ತಿಳಿದುಕೊಳ್ಳಲು ನೆರವಾಗುತ್ತದೆ. ಹಾಲಬಸವಿದೇವನ ಕಾಲವು ಕ್ರಿ.ಶ. ೧೨೬೦ ಎಂಬುದನ್ನು ಈ ಶಾಸನವು ದಾಖಲಿಸಿದೆ. ಇದರಿಂದ ನಾಲ್ಕನೆಯ ತಲೆಮಾರಿನಷ್ಟು ಹಿಂದಿನವರಾದ ಬಸವಣ್ಣನವರ ಕಾಲವನ್ನು ತಕ್ಕಮಟ್ಟಿಗೆ ಸಮೀಪವಾಗುವಂತೆ ಊಹಿಸಲು ಅವಕಾಶವಿದೆ.

ಮಾದಿರಾಜರು ಬಾಗೇವಾಡಿಯವರು. ಆದರೆ ಕಾಲಾಂತರದಲ್ಲಿ ಇವರ ಪರಿವಾರದವರು ಹುಕ್ಕೇರಿ ಪ್ರದೇಶಕ್ಕೆ ವಲಸೆ ಹೋದಂತೆ ತೋರುತ್ತದೆ. ಅರ್ಜುನವಾಡ ಶಾಸನವು ಹುಕ್ಕೇರಿಯ ಸಮೀಪದಲ್ಲಿ ದೊರೆತಿದೆ. ಶಾಸನದಲ್ಲಿ ಪ್ರಸ್ತಾಪಿಸಲಾದ ಕವಿಳಾಸಪುರವು ಈಗಿನ ಹಳ್ಳಿಗಳಾದ ಅರ್ಜುನವಾಡ, ಕೋಚ್ಚರಿಗೆ ಮತ್ತು ಮೊಸರಗುಪ್ಪಿಗಳಿರುವ ಪ್ರದೇಶವೆಂದು ಗುರುತಿಸಲಾಗಿದೆ. ಹಾಲಬಸವಿದೇವರು ಈ ಪ್ರದೇಶದ ಪ್ರಭುವಾಗಿದ್ದವರು.

ಅರ್ಜುನವಾಡ ಶಾಸನ (ಕರ್ನಾಟಕ ಭಾರತಿ ೯-೪) : ಅರ್ಜುನವಾಡದಲ್ಲಿ ಅದೇ ಕಾಲದ ಇನ್ನೊಂದು ಶಾಸನವು ದೊರೆತಿದೆ. ಇದು ಲಿಂಗಮುದ್ರೆಯ ಸೀಮೆಯ ಕಲ್ಲು. ಇದರಲ್ಲಿ ಬಸವಣ್ಣನವರನ್ನು ದಣ್ಣಾಯಕ ಎಂದು ಕರೆಯಲಾಗಿದೆ. ಶ್ರೀ ಬಸವಣ್ಣ ದಂಣಾಯಕರ ಕೆಯ್ ಎಂಬುದು ಶಾಸನದ ಸಾಲು.

ಚೌಡದಾನಪುರ ಶಾಸನ (J.K.U. (Humanities), Vol-11 N.2, p. 75) : ಸೇವುಣ ಅರಸ ಮಹಾದೇವನ ಕಾಲದ ಕ್ರಿ.ಶ. ೧೨೬೨ರ ಶಾಸನವಿದು. ಬಸವಯ್ಯನು ಸಂಗಮೇಶನ ಮಗನೆಂದೂ, ನಂದಿನಾಥನ ಅವತಾರವೆಂದೂ ಇದರಲ್ಲಿ ಬಣ್ಣಿಸಲಾಗಿದೆ. ಈ ಸಂಗತಿಯು ಬಸವ ಪುರಾಣ ಮೊದಲಾದ ಪುರಾಣಗಳಲ್ಲಿ ದೊರೆಯುತ್ತದೆ. ಇಲ್ಲಿ ಬಸವಣ್ಣನವರನ್ನು ಅವತಾರ ಪುರುಷರೆಂದು ಬಿಂಬಿಸಲಾಗಿದೆ.

ವೇದ-ಶಾಸ್ತ್ರಗಳನ್ನು ಮೀರಿದ ತತ್ವವನ್ನು ಭೂಮಿಯಲ್ಲಿ ಹರಡಲು ಸಂಗಮೇಶನ ಪುತ್ರನಾಗಿ ಬಂದನೆಂದು ಶಾಸನದಲ್ಲಿ ಹೇಳಿದೆ. ಹರಿಹರ ಕವಿಯೂ ಕೂಡ ಬಸವರಾಜ ದೇವರ ರಗಳೆಯಲ್ಲಿ ಬಸವಣ್ಣನವರು ಅವತಾರ ತಾಳಿದರೆಂದು ಹೇಳಿದ್ದಾರೆ. ಬಸವಣ್ಣನವರು ಐಕ್ಯರಾದ ಒಂದು ನೂರು ವರ್ಷಗಳ ಅವಧಿಯಲ್ಲಿ ಜನಮನದಲ್ಲಿ ಅವರಿಗೆ ದೈವತ್ವದ ಸ್ಥಾನ ಲಭ್ಯವಾಗಿತ್ತೆಂದು ಇದರಿಂದ ವಿದಿತವಾಗುತ್ತದೆ.

ಚೌಡದಾನಪುರ ಶಾಸನ (J.K.U. (Humanities), Vol-11 No.2 P. 73) : ಈ ಮೇಲಿನ ಶಾಸನ ದೊರೆತ ಜಾಗೆಯಲ್ಲಿಯೇ ಇದು ಸಿಕ್ಕಿದೆ. ಇದರ ಕಾಲ ಕೂಡ ಕ್ರಿ.ಶ. ೧೨೬೨. ಎರಡು ನುಡಿಗಳ ಪದ್ಯ ಶಾಸನವಿದು. ಈ ಮೇಲೆ ಪ್ರಸ್ತಾಪಿಸಲಾದ ಶಾಸನವು ಬಸವಣ್ಣನವರಿಗೆ ಅವತಾರ ಪುರುಷನ ಸ್ಥಾನವನ್ನು ನೀಡಿದರೆ, ಈ ಶಾಸನವು ಅವರ ಜಂಗಮ ಸೇವೆ, ಲಿಂಗ ಪೂಜೆ ಮತ್ತು ಪ್ರಸಾದ ಸಿದ್ದಿಗಳನ್ನು ಬಣ್ಣಿಸಿದೆ ಮತ್ತು ಬಸವಣ್ಣನವರನ್ನು ‘ಸಂಗನಬಸವ’ ಎಂದು ಕರೆದಿದೆ.

ಶಾಸನದಲ್ಲಿ ಶಿವದೇವನೆಂಬಾತನು, ಬಸವಣ್ಣನವರಂತೆ ಲಿಂಗಪೂಜೆ, ಜಂಗಮದಾಸೋಹಗಳನ್ನು ಪಾಲಿಸುತ್ತಿದ್ದ ಪ್ರಾತಿನಿಧಿಕ ಆದರ್ಶ ವ್ಯಕ್ತಿಯಾಗಿ ತೋರುತ್ತಾನೆ. ಬಸವಣ್ಣನವರ ಧಾರ್ಮಿಕ ಜೀವನ ಶೈಲಿಯನ್ನು ಜನರು ರೂಢಿಸಿಗೊಂಡಿದ್ದರೆಂದು ತಿಳಿದುಬರುತ್ತದೆ.

ಕಲ್ಲೇದೇವರಪುರ ಶಾಸನ (E.C., Vol-XI, ಜಗಳೂರು, ಚಿತ್ರದುರ್ಗ, ೩೦) : ಇದು ಸೇವುಣ ದೊರೆ ರಾಮಚಂದ್ರನ ಆಳ್ವಿಕೆಗೆ ಸೇರಿದ ಶಾಸನ. ಇದರ ಕಾಲ ಕ್ರಿ.ಶ. ೧೨೮೦. ಬಸವಣ್ಣನವರನ್ನು ಇದರಲ್ಲಿ ಬಸವರಾಜ ಎಂದು ಕರೆಯಲಾಗಿದೆ. ಚೇರ, ಚೋಳ, ನಂಬಿ ಮೊದಲಾದ ಮಹಾ ಗಣಾಚಾರರ ಸಮೂಹದಲ್ಲಿ ಬಸವಣ್ಣನವರ ಹೆಸರು ಸೇರ್ಪಡೆಯಾಗಿರುವುದು ವಿಶೇಷ ಅಂಶ.

ಈ ಶಾಸನವು ಶಿವಯೋಗಿ, ಯೋಗಿ ಚಕ್ರವರ್ತಿ ಎಂದು ಬಣ್ಣಿಸಲಾದ ಪ್ರಸಾದಿ ದೇವನಿಗೆ ದತ್ತಿ ನೀಡಿದ ಸಂಗತಿಯನ್ನು ತಿಳಿಸುತ್ತದೆ. ಪ್ರಸಾದಿ ದೇವನಿಗೆ ಬಸವಣ್ಣ ಮೊದಲಾದ ಮಹಾಶರಣರು ಆದರ್ಶ ಅಥವಾ ಮಾದರಿಯಾಗಿದ್ದರೆಂದು, ತಿಳಿಸುವುದು ಕವಿ ಉದ್ದೇಶ.

ಮರಡಿಪುರ ಶಾಸನ (E.C., Vol-III, ಮಂಡ್ಯ, ೮೩) : ಇದೊಂದು ದಾನ ಶಾಸನ, ಶರಣದಾಸ ಶೋವನಸಿಂಗ್, ಮಾರೆಯ ನಾಯಕ ಮತ್ತು ಗಾವುಂಡರು ಕೂಡಿ ಕಲಿದೇವರಿಗೆ ದಾನ ನೀಡಿದುದನ್ನು ತಿಳಿಸುತ್ತದೆ. ಇದು ಕ್ರಿ.ಶ. ೧೨೮೦ರ ಹೊಯ್ಸಳ ವೀರಬಲ್ಲಾಳನ ಕಾಲಾವಧಿಯದು.

ಶಾಸನವು ಬಸವಣ್ಣನವರನ್ನು ‘ಸಂಗನ ಬಸವಯ್ಯ’ ಎಂದು ಕರೆದಿದೆ. ‘ಕೂಡಲ ಸಂಗನ ಭಕ್ತನಾದ ಬಸವಯ್ಯ’ ಎಂದು ಹೇಳುವುದು ಕವಿಯ ಆಶಯ. ಅರ್ಜುನವಾಡ, ಚೌಡದಾನಪುರದ ಶಾಸನಗಳಲ್ಲಿ ಕೂಡ ಸಂಗನಬಸವ ಎಂದೇ ಕರೆಯಲಾಗಿದೆ.

ಗುಡಿಹಾಳ ಕುಂಟೋಜಿ ಶಾಸನ (S.I.I., Vol-XV, No. 658) : ಬಾಗೇವಾಡಿಯ ಸಮೀಪದಲ್ಲಿರುವ ಗುಡಿಹಾಳ ಮತ್ತು ಕುಂಟೋಜಿ ಗ್ರಾಮಗಳ ಸೀಮೆಯಲ್ಲಿ ದೊರೆತ ಶಾಸನವಿದು. ಇದು ಸುಮಾರು ೧೪ನೆಯ ಶತಮಾನದ್ದೆಂದು ಲಿಪಿ ಸ್ವರೂಪವನ್ನಾಧರಿಸಿ ಹೇಳಬಹುದು.

[ಶ್ರೀಸಂ] ಗಮನಾಥ ಬಸವರಾಜ
ದೇವಾರ ಮಾಂನ [ನ್ಯ] ಯಿದಕ್ಕೆ ದಾರೋಬ್ಬರು ತಪ್ಪಿದರೆ………….

ಇದಿಷ್ಟು ಶಾಸನದ ಪಠ್ಯ, ಈ ಶಾಸನಶಿಲೆ ಇರುವ ಹೊಲವು ಬಸವಣ್ಣನವರ ಹೆಸರಿನಲ್ಲಿ ಬಿಟ್ಟ ಮಾನ್ಯ ಹೊಲವಾಗಿರಬಹುದು ಎಂಬುದು ಡಾ.ಕಲಬುರ್ಗಿ ಅವರ ಊಹೆ. ಅವರೇ ಸೂಚಿಸುವಂತೆ ಇದು ಬಾಗೇವಾಡಿಯಲ್ಲಿ ಬಸವ (ನಂದಿ) ವಿಗ್ರಹಕ್ಕೆ ನೀಡಲಾದ ದಾನವಾಗಿರುವ ಸಂಭಾವ್ಯವೂ ಇದೆ. ಹಾಗಿದ್ದ ಪಕ್ಷದಲ್ಲಿ ಈ ಶಾಸನವನ್ನು ಈ ಪಟ್ಟಿಯಿಂದ ಕೈ ಬಿಡಬೇಕಾಗುವುದು.

ನಾಗಾಲೋಟ ಶಾಸನ (S.I.I., Vol-XVI, No. 318) : ಆಂಧ್ರಪ್ರದೇಶ ಕರ್ನೂಲ ಜಿಲ್ಲೆಯ ನಂದಿಕೋಟೂರು ತಾಲೂಕಿನ ನಾಗಲೋಟಿ ಗ್ರಾಮದ ಶಾಸನವಿದು. ಇದರ ಕಾಲ ಕ್ರಿ.ಶ. ೧೬೨೪.

ಶ್ರೀಶೈಲ ಸಿಧಾಪುರಂ ಲಾಂಗ್ಗಲೂಟಿ ವೀರಭದ್ರಾನಿ ದೇವುಳ
ಪ್ರಾಕಾರಮಂದು ತೂ(ರ್ಪು)ನ ಗೋಪುರಮುನ್ನು ಆ
ಸಮೀಪಮಂದು ಶಿಲಾ ಮಂಟ್ಟಪ ಮುನ್ನು ಗಟ್ಟಿಂಚಿ
ಕಾಶಿ ವಿಶ್ವೇಶ್ವರುನಿ ಕಲ್ಯಾಣ ಬಸ(ವೇ)ಶ್ವರುನಿ
ಪ್ರ[ತಿ]ಷ್ಟ ಚೇಸಿ . . . –  ಇದು ಶಾಸನದ ಪ್ರಧಾನ ಭಾಗ.

ನಾಗಶೆಟ್ಟಿ ಎಂಬುವನು ನಾಗಲೋಟಿಯ ವೀರಭದ್ರ ದೇವರ ಪ್ರಾಕಾರದ ಮುಂದೆ ಪೂರ್ವದ ಗೋಪುರವನ್ನು ಕಟ್ಟಿಸಿದ ಸಂಗತಿ ಮತ್ತು ಕಾಶಿ ವಿಶ್ವೇಶ್ವರ ಹಾಗೂ ಕಲ್ಯಾಣ ಬಸವೇಶ್ವರರ ಮೂರ್ತಿಗಳನ್ನು ಸ್ಥಾಪಿಸಿದ ವಿಷಯ ಈ ಶಾಸನದಿಂದ ತಿಳಿದುಬರುತ್ತದೆ. ಸ್ಥಾಪಿತಗೊಂಡ ನಂದಿ ವಿಗ್ರಹವನ್ನು ಕಲ್ಯಾಣ ಬಸವೇಶ್ವರನೆಂದು ಭಾವಿಸಿದಂತಿದೆ.

ಜೋಡಿ ದಾಸೇನಹಳ್ಳಿ ಶಾಸನ (E.C., XII, ಮದ್ದಗಿರಿ, ೮): ಕಲ್ಯಾಣದ ಶಿವಶರಣರ ಕುಲದ ಕೆಂಡ ಶಂಕರೇಶ್ವರ ದೇವರ ಗುಣಗಾನವು ಈ ಶಾಸನದ ವಸ್ತುವಾಗಿದೆ. ಇದರ ಕಾಲ ಕ್ರಿ.ಶ. ೧೬೮೬. ಇದರಲ್ಲಿ ಬಸವಣ್ಣನವರನ್ನು ಬಣ್ಣಿಸಿದ ಬಗೆ ವಿಶಿಷ್ಟವಾಗಿದೆ. ವೀರಶೈವ ಪುರಾಣಗಳಲ್ಲಿ ಉಕ್ತವಾಗಿರುವಂತೆ ೧೯೬೦೦೦ ಜಂಗಮರಿಗೆ ದಾಸೋಹ ಸೇವೆ ಮಾಡಿದುದು ಇಲ್ಲಿ ಉಲ್ಲೇಖಿತವಾಗಿದೆ. ಬಸವಣ್ಣನವರನ್ನು “ಕಪ್ಪಟಿಯ ಸಂಗಮೇಶನ ಬಸವ ರಾಜೇಂದ್ರ” ಎಂದು ಬಣ್ಣಿಸಿದುರುವುದೊಂದು ವಿಶೇಷ.

“. . . . ಕಲ್ಯಾಣ ಪಟ್ಟಣಕ್ಕೆ ವಡೆಕರ್ತಿರಾಗಿ ೧೯೬೦೦೦ ಜಂಗಮಕೆ ದಾಸೋಹ ಮಾಡಿ ನಿಚ್ಚ ಪವಾಡದ ಮೆಸರೆದ ಕಪ್ಪಟಿಯ ಸಂಗನ ಬಸವ ರಾಜೇಂದ್ರನು. . .” ಎಂಬುದು ಶಾಸನದ ಪ್ರಧಾನ ಭಾಗವಾಗಿದೆ.

ತ್ರಾಮ ಶಾಸನಗಳು:

ಆನಂದಪುರ ಸಂಸ್ಥಾನ ಪಠದ ತ್ರಾಮ ಶಾಸನ (S.I.I., Vol-XX, No. 650): ಕ್ರಿ.ಶ. ೧೬೬೦ರ ಈ ಶಾಸನದ ಮುಖ್ಯ ಪಠ್ಯ ಭಾಗವು ಹೀಗಿದೆ.

“. . . ಪೂರ್ವ ಕಲ್ಯಾಣ ಪಟ್ಟಣದಲ್ಲಿ ನಿರಂಜನ ಪ್ರಭು ಸ್ವಾಮಿಗಳು ತಮ್ಮ ಶೂನ್ಯ ಸಿಂಹಾಸನಕ್ಕೆ ಮುಂದೆ ವಬ್ಬರ ಯೋಗ್ಯರ ಮಾಡಬೇಕೆಂದು ಚನ್ನಬಸವ ಬಸವೇಶ್ವರ ಮುಂತಾದ ಪ್ರಥಮ ಬಿನ್ನೈಸಿಕೊಂಡದಕ್ಕೆ . . . . .”

ಇಲ್ಲಿ ಬಸವಣ್ಣನವರನ್ನು ಬಸವೇಶ್ವರ ಎಂದು ಕರೆಯಲಾಗಿದೆ. ಪ್ರಮಥರ ಸಾಲಿನಲ್ಲಿ ಬಸವಣ್ಣನವರನ್ನು ಪರಿಗಣನೆ ಮಾಡಿರುವುದು ಗಮನಾರ್ಹ ಅಂಶ.

ಕಾನಕಾನಹಳ್ಳಿ ತಾಮ್ರ ಶಾಸನ: ತೆಲಗು ಭಾಷೆಯಲ್ಲಿರುವ ಈ ಶಾಸನದ ಕಾಲ ಸುಮಾರು ಕ್ರಿ.ಶ.೧೭೦೦. ಬಸವಣ್ಣನವರನ್ನು ಬಸವೇಶ್ವರ ಎಂದು ಕರೆಯಲಾಗಿದೆ.

“ಕಲ್ಯಾಣ ಪಟ್ನಮಂದು ಬಸವೇಶ್ವರ ಸ್ವ(ಸ್ವಾ) ಮಲುವಾರು ನಿರ್ಣಯಂ ಚೇಶಿಂದಿ.” ಎಂಬುದು ಪಠ್ಯದ ಭಾಗ. ಇದರಲ್ಲಿ ಮಡಿವಾಳ ಮಾಚಿದೇವನು ಅಗಸರಿಗೆ ಹಕ್ಕುಗಳನ್ನು ನೀಡಿದುದನ್ನು ದಾಖಲಿಸಲಾಗಿದೆ.

ಕಾಕಕಾನಹಳ್ಳಿ ತ್ರಾಮ ಶಾಸನ: ನಾವಿದರು ಮಲ್ಲಿಗೆ ಹೂವುಗಳನ್ನು ಬಳಸಬಾರದೆಂದು ಹೇಳುತ್ತ “ಕಲ್ಯಾಣದಬ್ಸ(ಬಸ)ವಪ್ಪಾನವರು ಮಾಡಿದ ಶ್ಯಾಸನವೆಂದು ಹೇಳುವರು” ಎಂದು ಸಾರಿದೆ. ಬಸವಣ್ಣನವರು ಮಾಡಿದ ಆಜ್ಞೆ (ಶಾಸನ) ಎಂದು ಹೇಳಿದರೇ ಜನರು ನಿಯಮವನ್ನು ಉಲ್ಲಂಘಿಸಲಾರರು ಎಂಬ ಭಾವನೆ ಇದ್ದುದು ಗೊತ್ತಾಗುತ್ತದೆ. ಬಸವಣ್ಣನವರ ಬಗ್ಗೆ ಜನತೆಯಲ್ಲಿದ್ದ ಪೂಜ್ಯ ಭಾವನೆ ಇಲ್ಲಿ ವ್ಯಕ್ತವಾಗಿದೆ.

ಹೀಗೆ ಈ ಮೇಲಿನ ಶಾಸನಗಳನ್ನು ಅವಲೋಕಿಸಿದಾಗ ಬಸವಣ್ಣನವರ ಮಹಾನ್ ವ್ಯಕ್ತಿತ್ತವದ ರೂಪರೇಷೆಗಳು ಗೋಚರಿಸುತ್ತದೆ. ಶಾಸನಗಳು ಅವರನ್ನು ಬಸವಯ್ಯ, ಸಂಗನ ಬಸವಯ್ಯ, ಬಸವೇಶ್ವರ, ಬಸವರಾಜ, ಬಸವರಾಜದೇವರು, ಸಂಗನಬಸವ, ರಾಜೇಂದ್ರ- ಎಂದೆಲ್ಲ ಪರಿಪರಿಯಾಗಿ ಬಣ್ಣಿಸಿವೆ. ಹಿರಿಯೂರು ಶಾಸನದಲ್ಲಿ ಬಸವಣ್ಣನವರು ತ್ರಿಷಷ್ಠಿ ಪುರಾತನರ ಸಾಲಿಗೆ ಸೇರಿದ್ದಾರೆ. ಚೌಡದಾನಪುರದ ಒಂದು ಶಾಸನವು ಬಸವಣ್ಣನವರನ್ನು ಅವತಾರ ಪುರುಷನೆಂದು ಕರೆದರೆ ಇನ್ನೊಂದು ಅವರ ಜೀವನಾದರ್ಶಗಳನ್ನು ಶಿವದೇವನಂಥವರು ರೂಢಿಸಿಕೊಂಡಿದ್ದರೆಂದು ತಿಳಿಸುತ್ತದೆ. ಕೆಲವು ಶಾಸನಗಳು ಅವರನ್ನು ಸಂಗಮನಾಥ ಪುತ್ರೆನೆಂದೂ ಅವತಾರ ಪುರುಷನೆಂದೂ ಗುಣನಾಗ ಮಾಡಿವೆ. ಜೋಡಿದಾಸೇನ ಹಳ್ಳಿ ಶಾಸನವು ಬಸವಣ್ಣನವರು, ೧೯೬೦೦೦ ಜಂಗಮರ ದಾಸೋಹವನ್ನು ಉಲ್ಲೇಖಿಸಿದರೆ, ನಾಗಲೋಟ ಶಾಸನವು ಅವರಿಗೆ ದೇವರ ಸ್ಥಾನವನ್ನೇ ನೀಡಿದೆ.

ಇವುಗಳಲ್ಲದೇ ಹಲವಾರು ಶಾಸನಗಳಲ್ಲಿ ಬಸವಣ್ಣನವರ ಉಲ್ಲೇಖಗಳು ಕಾಣಿಸಿಕೊಳ್ಳುತ್ತವೆ. ಇವು ಅವರ ಪ್ರಸಿದ್ಧಿಯನ್ನು ಸೂಚಿಸಿತ್ತವೆ. ನಾಡಿನ ತುಂಬೆಲ್ಲ ಅವು ಚದುರಿಕೊಂಡವೆ. ಇದರಿಂದ ಬಸವಣ್ಣನವರ ಘನತೆ ವ್ಯಾಪಕವಾಗಿ ಹರಡಿತ್ತೆಂಬುದು ಸ್ಪಷ್ಟ.

ಗ್ರಂಥಋಣ

೧. ಕಪಟರಾಳ್ ಕೃಷ್ಣರಾವ್, ೧೯೭೭, ಕರ್ನಾಟಕ ಸಂಸ್ಕೃತಿಯ ಸಂಶೋಧನೆ

೨.  ಕಲಬುರ್ಗಿ ಎಂ.ಎಂ., ೧೯೭೮, ಶಾಸನಗಳಲ್ಲಿ ಶಿವಶರಣರು

೩.  ಕಲಬುರ್ಗಿ ಎಂ.ಎಂ., ೧೯೭೮, ಬಸವಣ್ಣನವರನ್ನು ಕುರಿತ ಶಾಸನಗಳು

೪.  Desai P.B., 1968, Basaveshvara and his times