ಧರ್ಮದ ಆಧಾರದ ಮೇಲೆ ಯಾರೆಲ್ಲಾ ಸಮಾಜಕ್ಕೆ ಪ್ರಬೋಧನೆಯನ್ನು ಮಾಡಿರುವರೋ ಅಂಥ ಸಮಾಜ ಸುಧಾರಕರ ಸಾಲಿನಲ್ಲಿ ಮಹಾತ್ಮ ಬಸವೇಶ್ವರರ ಹೆಸರು ಅಗ್ರಸ್ಥಾನದಲ್ಲಿ ನಿಲ್ಲುತ್ತದೆ. ಸ್ತ್ರೀಮುಕ್ತಿ, ಪದದಲಿತರ (ಶೋಷಿತ) ಸ್ವೀಕಾರ, ಕಾಯಕತ್ವದ ಪುರಸ್ಕಾರ, ವಚನ ಸಾಹಿತ್ಯದ ನಿರ್ಮಿತಿಯೇ ಮೊದಲಾದ ಪುರೋಗಾಮಿ ವಿಷಯಗಳೆಲ್ಲ ಅವರ ವ್ಯಕ್ತಿ ಮತ್ತೆಗೆ ಶೋಭೆ ತಂದುವಾಗಿವೆ. ಕರ್ಮಕಾಂಡ, ಅಂಧಶ್ರದ್ದೆ, ವಿಷಮತೆಯಂಥ ಸಮಾಜ ವಿರೋಧಿ ಅಂಶಗಳ ವಿರುದ್ದ ಅವರು ಬಂಡಾಯದ ಕಹಳೆಯನ್ನು ಮೊಳಗಿಸಿದರು. ತಮಿಳುನಾಡಿನ ಅರವತ್ಮೂರು ನಾಯನ್ಮಾರ ಸಂತರು ನಿರ್ಮಿಸಿದ ಭಕ್ತಿ ವಾಙ್ಮಯದ ಆದರ್ಶವು ಅವರ ಕಣ್ಣೆದುರಿಗಿತ್ತು. ಭಕ್ತಿ ಕ್ಷೇತ್ರದಲ್ಲಿ ಎಲ್ಲರನ್ನೂ ಸಮಾನರೆಂದು ಪರಿಗಣಿಸಲಾಗುತ್ತದೆ. ಆದರೆ ಸಾಮಾಜಿಕ ಕ್ಷೇತ್ರದಲ್ಲಿ ಮಾತ್ರ ಈ ವಿಷಮತೆಯು ಏಕೆ? ಈ ಪ್ರಶ್ನೆಗೆ ಅವರು ಹರಳಯ್ಯ-ಮಧುವರಸರ ಮಗ-ಮಗಳ ವಿವಾಹಕ್ಕೆ ಮಾನ್ಯತೆ ನೀಡುವುದರ ಮೂಲಕ ಉತ್ತರಿಸಿದರು. ಅದರ ಮೂಲಕವೇ ಕಲ್ಯಾಣ ಕ್ರಾಂತಿಯು ಹುಟ್ಟಿಕೊಂಡಿತು. ಸಂಪ್ರದಾಯಸ್ಥರು ಹೊತ್ತಿಸಿದ ಬೆಂಕಿಯಿಂದಾಗಿ ಶಿವಶರಣರೆಲ್ಲ ವಚನ ಸಾಹಿತ್ಯವನ್ನು ಎತ್ತಿಕೊಂಡು ಓಡಿ ಹೋಗಬೇಕಾಯಿತು. ಹೀಗೆ ಉಂಟಾದ ಘಟನೆಗಳನ್ನು ವಿಷಣ್ಣ ಮನೋಭಾವದಿಂದ ನೋಡಿದ ಬಸವೇಶ್ವರರು ಕೊನೆಗೆ ಜಲಸಮಾಧಿ ಹೊಂದಿದರು. ಇಂದಿನ ಮಹಾರಾಷ್ಟ್ರದ ಸೀಮೆಗೆ ಅಂಟಿಕೊಂಡಿರುವ ಪ್ರದೇಶದಲ್ಲಿ ಎಂಟು ಶತಮಾನಗಳ ಹಿಂದೆ ಘಟಿಸಿದ ಈ ಘಟನೆಯನ್ನು ಮುಂದಿಟ್ಟುಕೊಂಡೇ ಮಹಾರಾಷ್ಟ್ರದಲ್ಲಿನ ಸಂತರು ಅತ್ಯಂತ ಎಚ್ಚರಿಕೆಯಿಂದ ಧಾರ್ಮಿಕ ಪಥದಲ್ಲಿ ಹೆಜ್ಜೆ ಹಾಕಿದರು. ಅವರು ಜಾತಿ ಕುಲದ ವಿಚಾರಗಳು ಅಪ್ರಮಾಣವೆಂದು ಒಪ್ಪಿದರು. ಅದರಲ್ಲಿ ಸಮಾನತೆಯನ್ನು ಸಾಧಿಸಲು ಕೇವಲ ಭಕ್ತಿ ಕ್ಷೇತ್ರಕ್ಕೆ ಮಾತ್ರವೇ ಸೀಮಿತಗೊಳಿಸಿಕೊಂಡರು.

ಇತ್ತೀಚೆಗೆ ಅಂದರೆ ೧೯೬೦ರ ಹೊತ್ತಿಗೆ ಕರ್ನಾಟಕ ಮಹಾರಾಷ್ಟ್ರ ಸೀಮಾ ಗಡಿರೇಖೆಯು ನಿರ್ಧರಿತವಾಯಿತು. ಆದರೆ ಅದಕ್ಕಿಂತ ಮೊದಲು ಈ ಭೂ ಪ್ರದೇಶವು ಒಂದೇ ಆಗಿತ್ತು. ಒಬ್ಬನೇ ರಾಜನ ಆಳ್ವಿಕೆಯಡಿಯಲ್ಲಿ ಇತ್ತು. ಇಂದಿನ ಮಹಾರಾಷ್ಟ್ರದ ಮಂಗಳವೇಡೆ ಎಂಬ ಊರಿನಲ್ಲಿ ಬಸವೇಶ್ವರರು ೨೧ ವರ್ಷ ವಾಸ್ತವ್ಯ ಮಾಡಿದ್ದರು. ಜಾತಿಭೇದಾತೀತವಾದ ಸಮಾಜ ನಿರ್ಮಾಣದ ವಿಚಾರವು ಅವರ ಮನಸ್ಸಿನಲ್ಲಿ ಬೇರೂರಿದ್ದು ಇಲ್ಲಿಯೇ ಇರಬೇಕು. ಬಸವೇಶ್ವರರ ಹೊಸ ವಿಚಾರಗಳು ಮತ್ತು ವಚನ ಸಾಹಿತ್ಯ ಕರ್ನಾಟಕದಲ್ಲಿ ಹೆಚ್ಚು ಪ್ರಚಲಿತವಾಗಿವೆ ಎಂಬುದು ನಿಜ, ಆದರೆ ಬಸವೇಶ್ವರರ  ಮೊದಲ ಜಯಂತಿ ಮಾತ್ರ ಮಹಾರಾಷ್ಟ್ರದ ಅಮರಾವತಿಯಲ್ಲಿ ಆಚರಿಸಲ್ಪಟ್ಟಿತು. ಕರ್ನಾಟಕದಿಂದ ಬಂದ ಶಂಕರ ಮೃಗೇಂದ್ರ ಸ್ವಾಮಿಯವರ ಪ್ರೇರಣೆಯಿಂದ ದೇ. ಭ.ನಾ.ರಾ. ಭಾಮಣ ಗಾಂವಕರ ಅವರ ನೇತೃತ್ವದಲ್ಲಿ ಲೋಕಮಾನ್ಯ ತಿಲಕರ ಅನುಯಾಯಿಗಳಾದ ದಾದಾ ಸಾಹೇಬ ಖಾಪಡೆ ಅವರ ಅಮೃತ ಹಸ್ತದಿಂದ ದಿನಾಂಕ ೧ನೆಯ ಮೇ ೧೯೧೦ರಂದು ಉದ್ಘಾಟಿಸಲ್ಪಟ್ಟಿತು. ಹೀಗೆ ದೇಶದಲ್ಲಿ ಬಸವೇಶ್ವರ ಮೊದಲ ಜಯಂತಿಯನ್ನು ಆಚರಿಸಿದ ಕೀರ್ತಿಯನ್ನು ಮಹಾರಾಷ್ಟ್ರವು ಪಡೆದುಕೊಂಡಿದೆ ಎಂಬುದು ಮುಖ್ಯ ಸಂಗತಿ.

ಬಸವೇಶ್ವರರಿಗೆ ಸಂಬಂಧಿಸಿದಂತೆ ಮರಾಠಿಯಲ್ಲಿ ವಿಪುಲ ಪ್ರಮಾಣದಲ್ಲಿ ಸಾಹಿತ್ಯ ರಚನೆಯಾಗಿದೆ. ಕಾವ್ಯ, ಗದ್ದ, ವ್ಯಕ್ತಿಚಿತ್ರ ಮತ್ತು ಅವರ ವಚನಗಳ ಭಾವನುವಾದ ಮೊದಲಾದ ರೂಪಗಳಲ್ಲಿ ಈ ಸಾಹಿತ್ಯವನ್ನು ವಿಂಗಡಿಸಬಹುದಾಗಿದೆ. ಈ ವಾಙ್ಮಯದ ಬಗ್ಗೆ ಸಮಗ್ರವಾಗಿ ವಿಚಾರ ಮಾಡುವುದು ಸದ್ಯೆ ಸಾಧ್ಯವಿಲ್ಲದಿದ್ದರೂ ಕೆಲವಾರು ಮುಖ್ಯ ಕೃತಿಗಳ ಪರಿಚಯವನ್ನು ಇಲ್ಲಿ ಮಾಡಿಕೊಡವಾಗುವುದು.

ಪದ್ಯಗ್ರಂಥಗಳು:

ಬಸವಪುರಾಣ (ಶಿವದಾಸ), ಬಸವ ಪುರಾಣ (ಶಂಭು ತುಕಾರಾಮ), ಬಸವಗೀತೆ ಪುರಾಣ (ಮೋಗಲೇವಾರ), ಬಸವೇಶ್ವರಾಖ್ಯಾನ (ಪಂಚಾಕ್ಷರಿ ಸ್ವಾಮಿ), ಬಸವೇಶ್ವರ ಸ್ತೋತ್ರ (ಶಂಕರ ಮೃಗೇಂದ್ರ)- ಹೀಗೆ ಬೇರೆ ಬೇರೆ ಕವಿಗಳು ಬಸವೇಶ್ವರರ ಚರಿತ್ರೆಯ ಮೇಲೆ ಕಾವ್ಯಗಳನ್ನು ರಚಿಸಿದ್ದಾರೆ. ಈ ಕಾವ್ಯಗಳಿಗೆ ಮೂಲ ಆಧಾರ ಸಂಸ್ಕೃತ ಮತ್ತು ಕನ್ನಡ ಭಾಷೆಯ ಕೃತಿಗಳೇ ಆಗಿವೆ.

. ಬಸವ ಪುರಾಣ: ಶಿವದಾಸ ಎಂಬ ಅಂಕಿತ ನಾಮವುಳ್ಳ ಈ ಸಂತ ಕವಿಯ ಸುಮಾರು ಎರಡು ನೂರು ವರ್ಷಗಳ ಹಿಂದೆ ಅಂದರೆ ಕ್ರಿ.ಶ. ೧೮೧೯ರಲ್ಲಿ ಈ ಕಾವ್ಯವನ್ನು ರಚಿಸಿರುವನು. ಸೊಲ್ಲಾಪುರದ ಸಿದ್ಧೇಶ್ವರ ಮಂದಿರದಲ್ಲಿ ಈ ಓವಿಬದ್ಧ ಕಾವ್ಯವು ರಚಿತವಾಯಿತು. ಪಾಲ್ಕುರಿಕೆ ಸೋಮನಾಥ, ಭೀಮಕವಿ, ಶಂಕರಾರಾಧ್ಯ ಮತ್ತು ಯೇಲಂದರ ಷಡಕ್ಷಯಸ್ವಾಮಿ ಎಂಬ ಈ ನಾಲ್ವರು ಪೂರ್ವದ ಬಸವ ಚರಿತ್ರಕಾರರನ್ನು ಕವಿಯು ಆರಂಭದಲ್ಲಿಯೇ ಸ್ಮರಿಸಿದ್ದಾನೆ. ಆದರೆ ತನ್ನ ಕಾವ್ಯ ರಚನೆಗಾಗಿ ಸಂಸ್ಕೃತ ಬಸವ ಪುರಾಣವನ್ನು ಆಧರಿಸಿದ್ದಾನೆ. ತನ್ನ ಕಾವ್ಯ ರಚನೆಯ ನಿರ್ಮಾಣದ ಪ್ರೇರಣೆಯನ್ನು ಸ್ಪಷ್ಟಪಡಿಸುವಾಗ ಆತ ಹೀಗೆ ಹೇಳಿದ್ದಾನೆ.

ತೇ ಅಸತೇ ಸಂಸ್ಕೃತ ಪುರಾಣ | ಕಾ ಹೇ ಪ್ರಾಕೃತ ಕೇಲೇ ಕಥನ |
ತರೀ ತೀ ಭಾಷಾ ಗೀರ್ವಾಣ | ಭೋಧ ಹೋಣೆ ಕಠಿಣ ಕೀ || .೧೦೩
ಆತಾ ಹಾ ಮಹಾರಾಷ್ಟ್ರದೇಶ ಪಾವನ | ವ್ಹಾವಾ ಮಣೋನಿ ಹೇ ಪುರಾಣ |
ಮೀ ಆರಂಭಿತೋ ಆಣಿ ಮಾಝೇಹೀ ಕಲ್ಯಾಣ | ಹೋಯೀಲ
ಜಾಣ ಅನಾಯಾಸೇ || .೧೦೮
(ಅದು ಆಗಿನ ಸಂಸ್ಕೃತ ಪುರಾಣ | ಏಕೆ ಈ ಪ್ರಾಕೃತ ಮಾಡಿಹನು ಕಥನ |
ಆಗಿರಲು ಆ ಭಾಷೆಯು ಗೀರ್ವಾಣ | ತಿಳಿಯುವುದು ಆಗಿರಲು ಕಠಿಣ || ೧.೧೦೩
ಇನ್ನೀಗ ಮಹಾರಾಷ್ಟ್ರ ದೇಶವಿದು ಪಾವನ | ಆಗಬೇಕೆಂದು ಈ ಪುರಾಣ |
ಆರಂಭಿಸಿಹೆ ನಾನು ಮತ್ತು ನನ್ನದೂ ಕಲ್ಯಾಣ | ಆಗುವುದು ಅನಾಯಾಸದೊಳೆ ತಿಳಿಯರೀ || ೧.೧೦೮)

ಮರಾಠಿ ಭಾಷಿಕರಿಗೆ ಬಸವ ಚರಿತ್ರೆಯನ್ನು ಪರಿಚಯಿಸಿ ಕೊಡುವುದೇ ಆತನ ಮುಖ್ಯ ಉದ್ದೇಶವಾಗಿದೆ. ಸೊಲ್ಲಾಪುರದಲ್ಲಿನ ಶ್ರೀ ಸಿದ್ಧೇಶ್ವರ ಮಂದಿರದಲ್ಲಿ ಈ ಕಾವ್ಯವನ್ನು ರಚಿಸುವುದಾಗಿ ಕೊನೆಯ ಅಧ್ಯಾಯದಲ್ಲಿ ಆತ ಸ್ಪಷ್ಟವಾಗಿ ಉಲ್ಲೇಖಿಸಿದ್ದಾನೆ. ಈ ಕಾವ್ಯದಲ್ಲಿ ಒಟ್ಟು ೪೩ ಅಧ್ಯಾಯಗಳಿದ್ದು, ಒಟ್ಟು ೨೩೪೫ ಓವಿಗಳಿವೆ (ಓವಿ ಛಂದಸ್ಸು ಮರಾಠಿಯಲ್ಲಿನ ಒಂದು ಪ್ರಮುಖ ಛಂದೋ ಪ್ರಕಾರ. ದ್ವಿಪಾದಿಯಾಗಿರುವ ಇದು ಜನಪದ ಸ್ವರೂಪದ್ದು). ಶಿವದಾಸನ ಶೈಲಿಯು ಅಲಂಕಾರ ಪ್ರಚುರವಾದುದಾಗಿದ್ದು, ಗಂಭೀರ ಪ್ರವಾಹ ಸ್ವರೂಪಿಯಾಗಿದೆ. (ಇದೇ ಶಿವದಾಸನು ರಾಘವಾಂಕನ ‘ಸಿದ್ಧಾರಾಮಚಾರಿತ್ರ್ಯ’ ಎಂಬ ಕಾವ್ಯವನ್ನು ಮರಾಠಿ ಭಾಷೆಯಲ್ಲಿ ‘ಸಿದ್ಧೇಶ್ವರ ಪುರಾಣ’ ಎಂಬ ಹೆಸರಿನಲ್ಲಿ ಅನುವಾದ ಮಾಡಿದ್ದಾನೆ.)

೨. ಬಸವ ಪುರಾಣ : ಹಿಂದೆ ನಿಜಾಮ ಆಳ್ವಿಕೆಗೆ ಒಳಪಟ್ಟಿದ ಕಾಟಗಾಂವ್ (ಈಗ ಜಿ.ಸೊಲ್ಲಾಪುರ) ಎಂಬ ಊರಿನ ರಹವಾಸಿಯಾಗಿದ್ದ ಶಂಭು ತುಕಾರಾಮ ಆವಟೆ ಎಂಬ ಕವಿಯು ಶಕ ೧೮೩೯ (ಕ್ರಿ.ಶ. ೧೯೧೭)ರಲ್ಲಿ ಮರಾಠಿಯ ಓವಿ ಛಂದಸ್ಸಿನಲ್ಲಿ ಬಸವ ಪುರಾಣವನ್ನು ರಚಿಸಿದ್ದಾನೆ. ೪೩ ಅಧ್ಯಾಯಗಳು ಮತ್ತು ೯೦೫೫ ಓವಿಗಳುಳ್ಳ ಈ ಗ್ರಂಥಕ್ಕೆ ಆಗಸ್ತೀ- ಷಡಾನನ ಅವರ ಮುನ್ನುಡಿಯು ಸೇರಿಕೊಂಡಿದೆ. ಈ ಕವಿಯೂ ಸಹ ತನ್ನ ರಚನೆಗಾಗಿ ಸಂಸ್ಕೃತ ಬಸವ ಪುರಾಣವನ್ನೇ ಆಧರಿಸಿದ್ದಾನೆ. ವೀರಶೈವ ಮತವನ್ನು ಸಮಾಚಾಭಿಮುಖಿಗೊಳಿಸಿ ಅದಕ್ಕೆ ಪುನಃ ಪ್ರತಿಷ್ಠೆಯನ್ನು ಪ್ರಾಪ್ತಗೊಳಿಸಿ ಕೊಡುವ ದಿಶೆಯಲ್ಲಿ ಬಸವೇಶ್ವರರ ವ್ಯಕ್ತಿತ್ವ ಮತ್ತು ಅನ್ಯ ಶಿವಶರಣರ ಭಕ್ತಿಕಥೆಗಳೂ ಇಲ್ಲಿ ಚಿತ್ರಿತವಾಗಿವೆ. ‘ಶಿವಮಾರ್ಗಕ್ಕೆ ದುಷ್ಯಾಲ ಪ್ರಾಪ್ತವಾಗಿದೆ’ ಎಂಬುದಾಗಿ ನಾರದನು ತಕರಾರು ತೆಗೆದುಕೊಂಡು ಶಿವನಲ್ಲಿಗೆ ಬರುತ್ತಾನೆ. ಆಗ ಶಿವನು ನಂದಿಗೆ.

ಹೇ ಸುಮುಖಾ ನಂದಿಕೇಶಾ | ಜಈ ಜಈ ಪಾವೇ ಧರ್ಮ ಹ್ರಾಸಾ |
ತಈ ತಈ ಘೇಶೀ ಅವತಾರ ಐಸಾ | ಓಘ ಆಹೇ ಸುಜಾಣಾ || .೪೩
ಯಾಹೀವೇಳೀ ಅವತಾರ ಘೇಈ | ವೇದವಚನ ಮಾನ ದೇ
ಪವಿತ್ರ ಧರ್ಮ ಲವಲಾಹೀ | ಸ್ಥಾಪೀ ಭಾಷಾ ಸುಜಾಣಾ || .೪೪
(ಹೇ ಸುಮುಖಾ ನಂದಿಕೇಶ | ಯಾವಾಗ ಯಾವಗೆಲ್ಲಾ ಬರುವುದೋ ಧರ್ಮಕ್ಕೆ ಹ್ರಾಸ |
ಆವಾಗಲೆಲ್ಲ ಎತ್ತುವೆ ಅವತಾರವನಿಂತು | ಅಗತ್ಯವು ಈಗ ಸುಜಾಣಾ |
ಈ ಹೊತ್ತಿನಲ್ಲಿ ಎತ್ತುವುದು ಅವತಾರ | ವೇದವಚನಗಳೆಲ್ಲ ಮಾಡಿವೆ ಮಾನ್ಯ |
ಪವಿತ್ರ ಧರ್ಮವನು | ಸಂಸ್ಥಾಪಿಸುವುದು ನೀನು ಸುಜಾಣಾ ||)

ಎಂಬುದಾಗಿ ಆಜ್ಞೆ ಮಾಡುತ್ತಾನೆ. ಅದರಂತೆ ನಂದಿಯು ಮಾದಾಂಬೆಯ ಉದರದಲ್ಲಿ ಬಸವಣ್ಣನ ರೂಪದಲ್ಲಿ ಜನುಮವೆತ್ತುತ್ತಾನೆ. ಈ ಗ್ರಂಥದಲ್ಲಿನ ಆಶಯವೂ ಶಿವದಾಸ ಕೃತ ಬಸವ ಪುರಾಣದ ಹಾಗೆಯೇ ಇದೆ.

. ಬಸವೇಶ್ವರಾಖ್ಯಾನ : ನಾಗಪುರದ ಪೆಂಟಯ್ಯಸ್ವಾಮಿ ಪಲ್ಲೇಕಾರ ಉರುಫ್ ಪಂಚಾಕ್ಷರಿ ಸ್ವಾಮಿ (ಕ್ರಿ.ಶ. ೧೮೬೯-೧೯೩೩) ಎಂಬುವವರು ಕ್ರಿ.ಶ. ೧೯೧೫ರ ಅಸುಪಾಸಿನಲ್ಲಿ ಬಸವೇಶ್ವರಾಖ್ಯಾನ ಎಂಬ ವೃತ್ತಬದ್ಧ ಕಾವ್ಯವನ್ನು ರಚನೆ ಮಾಡಿದ್ದಾರೆ. ೧೧ ಅಧ್ಯಾಯ ಮತ್ತು ಕೇವಲ ೪೧೦ ಓವಿಗಳಿರುವಂಥ ಚಿಕ್ಕ ಕೃತಿಯಿದು. ಬಸವ ಜನ್ಮ, ಮುಂಜಿ, ವಿವಾಹ, ರಾಜ್ಯಾಡಳಿತ, ಬಸವಲೀಲೆ, ಪ್ರಭುದೇವ-ವರಪ್ರಧಾನ, ಬಸವ ಮಹಾತ್ಮೆ, ಅನುಭವ-ಮಂಟಪ ಮತ್ತು ಮಹಾದೇವಿಯ ಕಥೆ, ಹರಳಯ್ಯ ಚರಿತ್ರೆ, ಪ್ರಧಾನಮಂತ್ರಿ ಪದತ್ಯಾಗ, ಬಿಜ್ಜಳ ವಧೆ ಮತ್ತು ಶಿವೈಕ್ಯತೆ ಇಷ್ಟು ಕಥಾ ಭಾಗವು ಇದರಲ್ಲಿ ಬಂದಿದೆ.

ವೀರಶೈವಾಂಚೀ ಇಚ್ಛಾ ಮ್ಹಣೂನ | ಬಸವಗೀತೆ ಪುರಾಣ ಲೇಖನ |
ಭಾಷ್ಯಕಾರಾಂನಾ ಸಾಕ್ಷೀ ಠೇವೂನ | ಬೋಲಲೀ ವಾಣಿ || .೧೫
(ವೀರಶೈವರ ಇಚ್ಛೆಯಾಗಿ | ಬಸವಗೀತ ಪುರಾಣವನು |
ಭಾಷ್ಯಕಾರನ ಸಾಕ್ಷಿಯಾಗಿ | ನುಡಿದಿಹೆನು ಮಾತನು ||)
ಎಂಬುದಾಗಿ ತನ್ನ ಕಾವ್ಯ ರಚನೆಯ ಉದ್ದೇಶವನ್ನು ಕವಿಯು ಸ್ಪಷ್ಟಪಡಿಸಿದ್ದಾನೆ.

ಅಲ್ಲ-ಮಧುಪಾನ (ಹರಳಯ್ಯ –ಮಧುವರಸ)\ ಹತ್ಯೆಯ ನಂತರದ ವರ್ಣನೆಯನ್ನು ಕವಿಯು ವಿಶಿಷ್ಟವಾಗಿ ಮಾಡಿರುವುದನ್ನು ಗಮನಿಸಬಹುದು.

ವಸುಂಧರೇಲಾ ಆಶ್ರೂ ಆಲೇ | ಆಕಾಶ ಫಾಟೂ ಲಾಗಲೇ |
ಮೇಘ ಗರ್ಜಿತ ಚಾಲಲೇ | ದಶದಿಶಾನೀ || ೧೦.
ಶೂರಾಂಚೇ ಶೌರ್ಯ ಖಚಲೇ | ವೀರಾಂಚೇ ಧೈರ್ಯ ಭಂಗಲೇ
ಯೋಗೀಚ ಹೃದಯ ಛೇದಲೇ | ದುಃಖ ಕತಾ || ೧೦.೧೮
ಆಚಾರಾಂಚೇ ಸಾಗರ | ವಿಚಾರಾಂಚೇ ಆಗರ ||
ಸಮಾಚಾರಾಂಚೇ ನಗರ | ಉಧ್ವಸ ಝೂಲೇ || ೧೦.೨೧
(ವಸುಂಧರೆಯು ಅಶ್ರುಗೊಂಡಳು | ಆಗಸ ಹರಿಯಲಾರಂಭಿಸಿತು |
ಮೇಘವು ಗರ್ಜಸುತ ಸಾಗಿತು | ದಶದಿಕ್ಕುಗಳಲ್ಲಿ ||
ಶೂರರೊಳಗಿನ ಶೌರ್ಯವು ಇಂಗಿತು | ವೀರರೊಳಗಿನ ಧೈರ್ಯ ಭಂಗಗೊಂಡಿತು|
ಯೋಗಿಗಳ ಹೃದಯವು ಛೇದಗೊಂಡಿತು | ದುಃಖಿಸುತಲಿ ||
ಆಚಾರಗಳ ಸಾಗರ | ವಿಚಾರಗಳ ಆಗರ|
ಸಮಾಚಾರಗಳ ನಗರ | ನಾಶವಾಯಿತು ||)

ಬಿಡಿ ಬಿಡಿ ರಚನೆಗಳು :

ಬಸವೇಶ್ವರರ ಮೇಲೆ ಮರಾಠಿಯಲ್ಲಿ ಸ್ತೋತ್ರ ಅಭಂಗಗಳು, ಕಥನಾತ್ಮಕ ಅಭಂಗಗಳು, ಭಕ್ತಿ ಹಾಡುಗಳು, ಶೋಕ್ಲಗಳು, ಗೀತೆಗಳು ಈ ಮುಂತಾದ ವಿವಿಧ ಬಗೆಗಳಲ್ಲಿ ಬಿಡಿ ಬಿಡಿ ರಚನೆಗಳು ಆಗಿರುವುದು ಕಂಡುಬರುತ್ತದೆ. ‘ಬಸವೇಶ್ವರ ವಿಷಯವಾಗಿನ ಮರಾಠಿ ವಾಙ್ಮಯ’ ಎಂಬುದು ಈ ಸ್ವಾತಂತ್ರ ಪ್ರಬಂಧದ ವಿಷಯವಾಗಿದೆ. ಹಾಗಾಗಿ ಇಲ್ಲಿ ಅಂಥ ಮಾದರಿಯೊಂದನ್ನು ಉಲ್ಲೇಖಿಸುವುದೆಂದು ಭಾವಿಸಿ ನಿದರ್ಶನಕ್ಕೆ ಕೆಲವನ್ನು ನೀಡಲಾಗಿದೆ.

. ಸ್ತೋತ್ರ : ಬಸವೇಶ್ವರರ ಮೇಲೆ ಹಲವಾರು ಕವಿಗಳು ಸ್ತೋತ್ರಗಳನ್ನು ರಚಿಸಿದ್ದಾರೆ. ಅವರಲ್ಲಿ ಒಬ್ಬ ಪ್ರಮುಖ ಸ್ತೋತ್ರಕಾರರೆಂದರೆ ಅಮರಾವತಿಯ ಶಂಕರ ಮೃಗೇಂದ್ರಸ್ವಾಮಿ (ಮರಣ ೧೯೨೨). ಇವರು ಸುಮಾರು ೪೩ ಓವಿಗಳಲ್ಲಿ ಬಸವೇಶ್ವರ ಸ್ತೋತ್ರಗಳನ್ನು ಹಾಡಿದ್ದಾರೆ. ೭ನೆಯ ೧೯೧೦ರಂದು ಈ ಸ್ತೋತ್ರಗಳು ಪ್ರಕಟವಾದವು. ‘ಬಸವ ಪಾಹಿಮಾಂ’ ಎಂಬ ಪಾಲುಪದವೆಂಬ ಒಂದು ಓವಿಯಲ್ಲಿ ಹೀಗೆ ಪ್ರಾರ್ಥಿಸಿದ್ದಾರೆ.

ಮ್ಹಣೇ ದುಷ್ಟಾ, ಪಾಪಿ ನಷ್ಟಾ | ಶೈವದ್ರೋಹೀ ಕ್ರಿಯಾ ಭ್ರಷ್ಟಾ |
ಮೃತ್ಯುಲೋಕೀ ಜನ್ಮಕಷ್ಟಾ | ಬಸವ ಪಾಹಿಮಾಂ  || ||
ಸಹಸ್ರಶಾಸ್ತ್ರೀ ಏಕ ಝೂಲೇ | ವ್ಯಾಸೀ ವಾದಯುದ್ಧ ಕೇಲೇ ||
ಬ್ರಹ್ಮಸೂತ್ರ ನಿಷೇಧಿಲೇ | ಬಸವ ಪಾಹಿಮಾಂ  || ೨೨ ||
ಕರೂನ ಬೌದ್ಧಮಾರ್ಗ ಖಂಡ | ಲಿಂಗಧಾರೀ ಮತ ಪ್ರಚಂಡ |
ಸ್ಥಾಪಿಲೇ ಉಡವೋನಿ ಬಂಡ | ಬಸವ ಪಾಹಿಮಾಮಾಂ  | |೩೨ |
(ನುಡಿದರೆ ದುಷ್ಟನೆಂದಾ ಪಾಪಿಯು ನಷ್ಟಾ | ಶೈವ ದ್ರೋಹಿಯವನು ಕ್ರಿಯಾ ಭ್ರಷ್ಟಾ |
ಮೃತ್ಯುಲೋಕದೊಳು ಜನುಮವಿದು ಕಷ್ಟ | ಬಸವ ಶರಣು (ಪಾಹಿಮಾಂ) ||
ಸಹಸ್ರ ಶಾಸ್ತ್ರಗಳು ಏಕತ್ರಗೊಂಡವು | ಚತುರದಿಂ ವಾದಯುದ್ಧ ಮಾಡುತಲಿ |
ಬ್ರಹ್ಮಸೂತ್ರವ ನಿಷೇಧಿಸಿದರು | ಬಸವ ಶರಣು ||
ಬುದ್ದಿಮಾರ್ಗವ ಖಂಡಿಸುತಲಿ | ಬೆಳೆದುದು ಲಿಂಗಾರಿ ಮತವು ಪ್ರಚಂಡ |
ಸ್ಥಾಪಿಸಿದರು ಹಾರಿಸಿ ಬಂಡಾಯ | ಬಸವ ಶರಣು ||)

ಬಸವೇಶ್ವರರ ಮೇಲೆ ಕೇವಲ ಸ್ತುತಿಪರ ಅಭಂಗಗಳನ್ನಷ್ಟೇ ಬರೆದು ಲಕ್ಷ್ಮಣ ಮಹಾರಾಜರು ಸುಮ್ಮನಾಗಲಿಲ್ಲ. ಬಸವ ಪುರಾಣದಲ್ಲಿನ ಶರಣರ ಕಥೆಗಳ ಮೇಲೆಯೂ ಮರಾಠಿಯಲ್ಲಿ ಅಭಂಗಗಳನ್ನು ರಚಿಸಿದ್ದಾರೆ. ಬಿಜ್ಜ ಮಹಾದೇವಿ, ರುದ್ರ ಪಶುಪತಿ, ಶಿವಭಕ್ತೆ ಬಾಲಿಕಾ, ಧನಗರ (ಕುರುಬ) ಪುತ್ರ ಇತ್ಯಾದಿಯಾಗಿ ಬಸವಪುರಾಣದೊಳಗಿನ ಶಿವಭಕ್ತರ ಕಥೆಗಳ ಮೇಲೆ ಅವರು ಅನೇಕ ಅಭಂಗಗಳನ್ನು ರಚಿಸಿ ರಂಜಿಸುವಂತೆ ಮಾಡಿದ್ದಾರೆ. ಕಥನದ ಕೊನೆಯಲ್ಲಿ ‘ಬಸವಪುರಾಣದಲ್ಲಿ ಈ ಚರಿತ್ರೆ ಇದೆ |’, ಬಸವ ಪುರಾಣದಲ್ಲಿ ಈ ಕಥೆ ಇದೆ |’, ‘ಬಸವ ಪುರಾಣದೊಳು ಈ ಚರಿತ್ರವು ಸುರಸ |’ ಎಂದು ಬಸವಪುರಾಣವನ್ನು ಉಲ್ಲೇಖಿಸಿದ್ದಾರೆ.

ಇದಲ್ಲದೆ ಬಸವಲಿಂಗ ಸ್ವಾಮಿಯವರು ಮಹಾತ್ಮಾ ಬಸವೇಶ್ವರ ಜನ್ಮದ ಅಭಂಗ; ಗುರುದಾಸರ ಬಸವಪಾಠ ಇತ್ಯಾದಿ ವಾಙ್ಮಯವೂ ಸಹ ಪ್ರಕಟಿತಗೊಂಡಿವೆ.

. ತೊಟ್ಟಿಲು: ಬಸವೇಶ್ವರರ ಮೇಲೆ ಮರಾಠಿಯಲ್ಲಿ ಹಲವಾರು ತೊಟ್ಟಿಲು ಗೀತೆಗಳನ್ನೂ ಬರೆದಿದ್ದಾರೆ. ಕೊಲ್ಹಾಪುರ ಜಿಲ್ಲೆಯಲ್ಲಿನ ಕಾಗಲ ಎಂಬ ಊರಿನ ಅಪ್ಪಾರಾವ್ ಧುಂಡೀರಾಜ ಮುರತುಲೆ ಉರುಫ್ ಕವಿ ಸುಮಂತ (ಕ್ರಿ.ಶ. ೧೮೮೧-೧೯೩೯) ಅವರು ಒಂದು ತೊಟ್ಟಿಲು ಗೀತೆಯನ್ನು ರಚಿಸಿರುವರು. ಉದಾಹರಣೆಗಾಗಿ ಅದನ್ನು ನೋಡಬಹುದು:

ಶ್ರೀನಂದೀಶ್ವರ ಅವತಾರಾ | ಜೋ ಜೋ ಜೋ ಬಸವ ಕುಮಾರ  || ||
ವೇದಾಂತೆ ವಾಖಣಿಯಲೀ | ಜೀ ವೀರಶೈವ ಮಹತಿ |
ತಿಜ ಕಾಳಗತೀನೆ ಆಲೀ | ಮೃತ ಕಳಾ ಛಳಾನೆ ಜಗತೀ |
ನಿದ್ರೇಚಾ ಅಮಲ ಚಡಲಾ | ಜನ ಅವನತ ಘೋರತ ಪಡಲಾ |
ತುಜಚಿ ಮಾತ್ರ ಜಾಗರ ಘಡಲಾ | ಲಿಂಗಾಯತ ಧರ್ಮದ್ವಾರಾ ||
ಬಾಳಾ ಜೋ ಜೋ ರೇ ಬಸವಕುಮಾರ ||
(ಶ್ರೀನಂದೀಶ್ವರ ಅವತಾರಿ | ಜೋ ಜೋ ಜೋ ಬಸವ ಕುಮಾರಾ ||ಪ ||
ವೇದಂಗಳು ಸ್ತುತಿಸಿಹವು | ಈ ವೀರಶೈವ ಮಹತಿಯನು |
ಆತನ ಕಾಲಗತಿಯಿಂದ ಬಂದಿತು | ಮೃತಕಳೆಯೂ ಛಲದಿಂದ ಬದುಕಿತು |
ಕರ್ಮವ ನುಂಗಿತು ಜ್ಞಾನ | ತಮವು ಸೇರಿತು ತೇಜಭವದೊಳು |
ನಿದ್ದೆಯ ಅಮಲು ಏರಿತು | ಜನರು ಅವನತಿಯ ಘೋರದೊಳು ಬಿದ್ದರು |
ನಿನ್ನಿಂದ ಮಾತ್ರ ಜಾಗೃತಿ ಬಂದಿತು | ಲಿಂಗಾಯತ ಧರ್ಮ ದ್ವಾರದಿಂದ |
ಮಗು ಜೋ ಜೋ ಬಸವಕುಮಾರ ||)

ಅನಂತರ ಹಿಂಗುಲೀಪುರದ ಮಾದಿರಾಜ-ಮಾದಾಂಬೆಯ ಉದರದೊಳು ಜನ್ಮವೆತ್ತಿದ್ದು, ಶಿವದೀಕ್ಷೆ, ಶೈವಮತ ಪ್ರಚಾರ, ಗಂಗಾಂಬೆಯೊಂದಿಗೆ ವಿವಾಹ, ಬಿಜ್ಜಳನಿಗೆ ಜ್ಞಾನದಾನ ಮುಂತಾದ ಪ್ರಸಂಗಗಳನ್ನು ವಿಶಿಷ್ಟವಾಗಿ ವರ್ಣನೆ ಮಾಡಲಾಗಿದೆ.

ತ್ಯಾ ವೀರಶೈವ ಧರ್ಮಾಚೇ | ಹೇ ಸುಧಾಸಾರ ಸೇವಾವೇ |
ಲಾಭೇಲ ಅಮರತಾ ತೆಣೇ | ದೇವೂನಿ ದಿವ್ಯದ್ದುಕ್ ದೇಣೆ |
ಝೂಲಾಸ ಶಿವಾಚಾ ಲೇಣೇ | ಪಾತ್ರ ತೂಚ್ ತವ ಅಧಿಕಾರಾ |
ಬಾಳಾ ಜೋ ಜೋ ರೇ ಬಸವಕುಮಾರ ||
(ವೀರಶೈವ ಧರ್ಮದ | ಈ ಸುಧಾಸಾರವನು ಸೇವಿಸಬೇಕು |
ಲಭ್ಯವು ಅಮರತ್ವವು ಅದರಿಂದಲಿ | ನೀಡುತಲೇ ದಿವ್ಯದೃಶ್ಯವನು ಅದು |
ಆಗುವೆ ಶಿವನ ಭೃತ್ಯ | ಅಧಿಕಾರಕೆ ಪಾತ್ರಮ ನೀನೇ
ಮಗು ಜೋ ಜೋ ಜೋ ಬಸವಕುಮಾರ |)

ಕಾವ್ಯ ಇಂಥ ಶಬ್ದಗಳಿಂದ ಮುಕ್ತಾಯವಾಗುವುದು. ಅದಲ್ಲದೆ ಇನ್ನೂ ಅನೇಕ ಕವಿಗಳು ಬಸವೇಶ್ವರರನ್ನು ಕುರಿತು ರಚಿಸಿದ ಇಂತಹ ಅನೇಕ ರಚನೆಗಳು ಉಪಲಬ್ಧವಾಗಿವೆ.

. ಆರತಿ : ತೊಟ್ಟಿಲ ಹಾಡಿನಂತೆಯೇ ಕೆಲವಾರು ಕವಿಗಳು ಬಸವೇಶ್ವರರನ್ನು ಕುರಿತು ಹಲವಾರು ಆರತಿ ಹಾಡುಗಳನ್ನೂ ರಚಿಸಿದ್ದಾರೆ. ಲಕ್ಷ್ಮಣ ಮಹಾರಾಜರು ರಚಿಸಿರುವ ಇಂಥ ಮೂರು ಸಂಗ್ರಹಗಳು ಪ್ರಕಟವಾಗಿವೆ. ‘ಆರತಿ ಬಸವೇಶಾ | ಪರಾತ್ಪರ ಪರೇಶಾ’ (೪೦೭೨), ‘ಜಯಜಯ ಜೀ ಬಸವೇಶಾ’ | ‘ಶುದ್ಧಬುದ್ಧ ಅವಿನಾಶ’ || (೪೦೭೧) ಮತ್ತು ‘ಆರತಿಯನು ಎತ್ತುವೆ ಬಸವೇಶಾ’ | ‘ಶಂಕರ ಮಹೇಶಾ’ | ಆರತಿಯನು ಬೆಳಗುವೆ’ || (೪೦೭೩) ಎಂಬ ಮೂರು ಸಂಕಲನಗಳು ಇವೆ. ಅವುಗಳಲ್ಲಿ ಬಸವೇಶ್ವರ ಶಿವಭಕ್ತ, ಯೋಗಿ, ಪೂರ್ಣಕಾಮ, ಶಿವಸ್ವರೂಪಿಗಳಾಗಿದ್ದು ಪ್ರತ್ಯಕ್ಷ ಪರಬ್ರಹ್ಮರೇ ಹೌದು ಎಂಬುದಾಗಿ ವರ್ಣನೆ ಮಾಡಲಾಗಿದೆ. ಈ ಎಲ್ಲಾ ರಚನೆಗಳು ಪಾರಂಪರಿಕ ಸ್ವರೂಪದವೇ ಆಗಿವೆ. ಇದಲ್ಲದೆ ಇನ್ನೂ ಅನೇಕ ಕವಿಗಳ ಆರತಿ ಹಾಡುಗಳು ಉಪಲಬ್ಧವಾಗಿವೆ.

. ಗೀತೆಗಳು : ಮಹಾತ್ಮ ಬಸವೇಶ್ವರರ ಮೇಲೆ ಮರಾಠಿಯಲ್ಲಿ ಚರಿತ್ತಾತ್ಮಕ ಗೀತೆಗಳೂ ಮತ್ತು ಸ್ಪುಟ ಗೀತೆಗಳೂ ಬಹಳ ದೊಡ್ಡ ಪ್ರಮಾಣದಲ್ಲಿ ರಚನೆಗೊಂಡಿವೆ. ಕುಮಾರ ಕೋಠಾವಳೆ, ಸುಧಾಕರ ಮೊಗಲೇವಾರ, ಶೇ. ದೇ. ಪಸಾರಕರರದು ಇವರಲ್ಲಿನ ಮುಖ್ಯ ಹೆಸರುಗಳು. ‘ಗೀತ ಬಸವೇಶ್ವರ’ ಎಂಬ ೪೪ ಪುಟಗಳ ಪುಸ್ತಕದಲ್ಲಿ ಸೊಲ್ಲಾಪುರದ ಕುಮಾರ ಕೋಠಾವಳೆ (ಕ್ರಿ.ಶ. ೧೯೨೦-೧೯೯೮) ಅವರು ಬಸವೇಶ್ವರರ ವಾಙ್ಮಯಗಳ ಪೂಜ್ಯತೆಯನ್ನು ಕಟ್ಟಿಕೊಟ್ಟಿದ್ದಾರೆ. ಪ್ರಾರಂಭದಲ್ಲಿ ಗದ್ಯ ಭಾಷ್ಯವಿದ್ದು ಅನಂತರ ಕಾವ್ಯವಿದೆ. ಈ ಪ್ರಕಾರದಲ್ಲಿ ಇರುವ ೨೫ ಗೀತೆಗಳಲ್ಲಿ ಬಸವೇಶ್ವರರ ಚರಿತ್ರೆಯು ಇದೆ.

ಅದರಲ್ಲಿನ ಕೆಲವು ನಿದರ್ಶನಗಳನ್ನು ನೋಡಬಹುದು.

ನಿಪುತ್ರಿಕಳಾದ ಮಾದಾಂಬಿಕೆಯು ಜಾತವೇದ ಮುನಿಗಳ ಎದುರು ತನ್ನ ಮನೋವ್ಯಥೆಯನ್ನು ಈ ಕೆಳಗಿನಂತೆ ನಿವೇದಿಸಿಕೊಳ್ಳುತ್ತಾಳೆ.

ಮುಕ್ತ ಹಾಸ್ಯತೇ ಕಧೀ ಪಾಹೀನ
ಹೃದಯಾಶೀ ತ್ಯಾ ಕಧಿ ಕವಟಾಳೀನ
ಜೋ ಜೋ ಬಾಳಾ ಕಧಿ ಗಾಈನ
ನೇತ್ರ ಹೀ ಅಸುಸಲೇ…..

(ಮುಕ್ತ ಹಾಸ್ಯವದನು ನೋಡುವೆನೆಂದು, ಹೃದಯದಿ ಅದನು ಆಲಂಗಿಸುವೆನೆಂದು ‘ಜೋ ಜೋ ಮಗುವೆ’ ಎನುತ ಹಾಡುವೆನೆಂದು, ಕಣ್ಣುಗಳು ಒಸರುತಿಹವು):

ಮುಂದೆ ಬಸವಣ್ಣನವರ ಬಾಲಲೀಲೆಯನ್ನು ವರ್ಣಿಸುವಲ್ಲಿ ಮಾದಾಂಬಿಕೆಯರ ವಾತ್ಸಲ್ಯ ಭಾವವು ಹೀಗೆ ವ್ಯಕ್ತವಾಗಿದೆ:

ಕಾಯ ಸಾಂಗೂ ಬಾಈ ಯಾಚಾ ಲೀಲಾ ಮೀ ತುಮ್ಹಾಲಾ
ಪಹಾಟೇ ಉಠುನಿಯಾ ಝಟೇ ಪದರಾಲಾ
ದೂಧ್ ಹವೇ ಜರೂ ಸಾಂಗೇ ಮುಕ್ಯಾನೇ ಮಾತೇ ಲಾ….

[ಏನ ಹೇಳಲಿ ತಾಯಿ ಇವನ ಲೀಲೆಯನು ನಿಮಗೆ, ಬೆಳಗಾಗಲು ಎದ್ದು ಏಳೆಯುವನು ಸೆರಗು, ಮೊಗದೊಳು ಹಾಲು ಬೇಕು ನನಗೆ ಎನುತ ಮಾತೆಯೊಳು…]

ಬಸವಣ್ಣನವರು ಮನೆಯನ್ನು ಬಿಟ್ಟು ಹೊರಟಾಗ ಈ ತಾಯಿಯ ಬಾಯಿಂದ ಎಂಥ ಮಾತುಗಳು ವ್ಯಕ್ತವಾಗಿವೆ :

ಯಾಸಾಠೀಚ ಕಾ ಕೇಲಾ ನವಸ | ಭರಲೀ ಮೂಝೀ ದೇವಾನೇ ಕುಸ |
ಗಾಈಪಾಸುನಿ ತುಟೇ ಪಾಡಸ | ಅಶ್ರೂ ಯೇ ನಿಖಳೂನ
ಬಸವಾ, ಜಾವೂನಕೋ ಸೋಡೂನ….
(ಇದಕ್ಕಾಗಿಯೇ ಅಲ್ಲವೆ ಮಾಡಿದ್ದು ವ್ರತ | ದೇವರು ಎನ್ನ ಮಡಿಲನು ತುಂಬಲಿ ಎನುತ | ಹಸುವಿನ ಬಳಿಯಿಂದ ಓಡಿತು ಕರುವು | ಅಶ್ರುವೇ ಬಾ ತುಂಬುಂಬಿ |
ಬಸವಾ, ಹೋಗಬೇಡವೋ ನಮ್ಮನುಳಿದು…)

ಮಧುವರಸ ಮತ್ತು ಹರಳಯ್ಯರನ್ನು ಹತ್ಯೆಗೈದ ಸಮಯದಲ್ಲಿ ಕವಿಯ ಬರಹವು ಇಂತಿದೆ:

ಧರ್ಮಕ್ರಾಂತೀಚ್ಯಾ ವಾದಳೀ ಡೋಲೇ ಡಗಮಗ ಜೀವನನೈಯಾ |
ಅಮರ ಜಾಹಲೇ ದೋನ ಹುತಾತ್ಮೇ ಮಧುವಯ್ಯಾಹರಳಯ್ಯ |
ಧರ್ಮಕ್ರಾಂತಿಯ ಬಿರುಗಾಳಿಯ ಹುಯ್ಯಲಿನಲಿ ಅಸ್ಥಿರಗೊಂಡಿತೊ ಜೀವನ ನ್ಯಾಯ | ಅಮರರಾದರೀ ಹುತಾತ್ಮರಿಬ್ಬರು ಮಧುವಯ್ಯ ಹರಳಯ್ಯ)

ಹೀಗೆ ದ್ವಿಪಾದಗಳಲ್ಲಿ ಮಧ್ಯೆ ಮಧ್ಯೆ ಕಲ್ಪನೆ ಮತ್ತು ಕಟುನಿಷ್ಠತೆಯ ಮೂಲಕ ಬೇರೆ ಬೇರೆ ಉದಾಹರಣೆಗಳನ್ನು ನೀಡುತ್ತಾ ಈ ಕಾವ್ಯವು ಮುಂದೆ ಮುಂದೆ ಸಾಗುತ್ತದೆ. ರಸಗಳ ಪರಿಪೋಷಣೆ, ಅಲಂಕಾರಗಳ ವಿದ್ಯುಕ್ತ, ಬಳಕೆ, ಮಧುರವಾದ ಶಬ್ದಕಲೆ –ಇವು ಕುಮಾರ ಕೋಠಾವಳೇ ಅವರ ಕಾವ್ಯ ರಚನೆಯ ಮುಖ್ಯ ವೈಶಿಷ್ಟ್ಯಗಳಾಗಿವೆ.

ನಾಗಪುರದ ಸುಧಾಕರ ಮೋಗಲೇವಾರ ಎಂಬುವವರು ‘ಬಸವಗೌರವ ಗೀತೆ’ ಎಂಬ ಕಾವ್ಯ ಸಂಕಲನವನ್ನು (೨೦೦೫) ಪ್ರಕಟಿಸಿದ್ದಾರೆ. ಇದರಲ್ಲಿ ಸುಧಾಕರ ಮೋಗಲೇವಾರ, ಪ್ರಭಾಕರ ಮಾಂಜರಖೇಡೇ ಮತ್ತು ವಸಂತ ಠಮಕೆ ಅವರ ರಚನೆಗಳು ಸೇರಿವೆ. ಒಂದು ಗೀತೆಯು ಹೀಗಿದೆ:

ಜಾತಿಪಾತೀಚೇ ಜೋಖಡ ಉತರಲೇ ಮಾನೇವರೂನೀ |
ಗಳೂಲಾಗಲೇ ಶೇಂದೂರ ದಗಡಾಚ್ಯಾ ದೇವಾವರೂನೀ |
ದೇಹ ಆಸೇ ದೇವಾಲಯ ಮಾನವ ಚಾಣೂ ಲಾಗಲಾ |
ಮಾಣಸಾ ಮಾಣಸಾತ್ ತೋ ಶಿವ ಪಾಹೂಲಾಗಲಾ |….
(ಜಾತಿ ಗೀತಿಯ ಭಾರವನು ಇಳಿಸಿದ ಹೆಗಲ ಮೇಲಿಂದ
ಕರಗ ತೊಡಗಿತೋ ಸಿಂಧೂರ ಕಲ್ಲು ದೇವರ ಮೇಲಿಂದ
ದೇಹವಿದು ದೇವಾಲಯ ಮಾನವ ಅರಿತನು
ಮನುಷ್ಯ ಮನುಷ್ಯರಲೆ ಆತ ಶಿವನ ಕಾಣತೊಡಗಿದನು)

ಸೊಲ್ಲಾಪುರದ ಶೇ.ದೇ. ಪಾಸರಕರ ಅವರ ಕೆಲವಾರು ಬಿಡಿ ಗೀತೆಗಳು ಪ್ರಕಟವಾಗಿರುವವು. ಅವುಗಳಲ್ಲಿ ಒಂದು ಹೀಗಿದೆ:

ಸಮತೇಚಾ ಡಿಂಡಿಮ ಗರ್ಜಲಾ, ಅರುಣೋದಯ ಝೂಲಾ |
ತುಝಾ ರೂಪೇ ಶ್ರೀಬಸವಾ, ಭೂವರಿ ನವಾ ಮನೂ ಅಲಾ |…
(ಗರ್ಜಿಸಿತು ಸಮತೆಯ ಡಿಂಡಿಮ, ಬಿಂಬಿಸಿ ಅರುಣೋದಯವು
ಶ್ರೀಬಸವ ನಿನ್ನಯ ರೂಪದಲಿ, ಭೂಮಿಯೊಳು ಅವತರಿಸಿದ ಹೊಸ ಮನವು |….)

ಗದ್ಯ ಗ್ರಂಥಗಳು

. ಚರಿತ್ರಪರ ಗ್ರಂಥಗಳು :

ಮಹಾತ್ಮ ಬಸವೇಶ್ವರರ ಚಿರತ್ರ ಕಥನವನ್ನು ಬರೆದಿರುವ ಮತ್ತು ಅವರ ಕ್ರಾಂತಿಕಾರ್ಯದ ಗಂಭೀರತೆಯನ್ನು ಮನಗಾಣಿಸುವ ಹಲವಾರು ಕೃತಿಗಳು ಮರಾಠಿಯಲ್ಲಿ ಪ್ರಕಟವಾಗಿವೆ. ಎಸ್‌.ಎಂ. ಕಲ್ಯಾಣಶೆಟ್ಟಿ ಅವರ ‘ಜಗಜ್ಯೋತಿ ಬಸವೇಶ್ವರ’ (೧೯೩೮), ಮಾ.ಗೋ. ಮಾಈಣಕರ ಮತ್ತು ರಾ.ದ. ಗುರವ ಅವರ ‘ಶ್ರೀ ಬಸವೇಶ್ವರ’ (೧೯೪೭), ರಗುನಾಥ ಲೋಹಾರ ಅವರ ‘ಶ್ರೀ ಬಸವೇಶ್ವರ (೧೯೪೭), ಜೋಶಿ ಅವರ ‘ಶ್ರೀಬಸವೇಶ್ವರ’ (೧೯೬೨) ಎಂಬ ಚರಿತ್ರ ಗ್ರಂಥಗಳು ಪ್ರಕಟವಾಗಿದ್ದವು. ಆದರೆ ಅವು ಈಗ ಅನುಪಲಬ್ಧವಾಗಿವೆ.

ಇತ್ತೀಚೆಗೆ ಅಶೋಕ ಕಾಮತ್, ಅಶೋಕ ಮೇನಕುದಳೆ, ಪ್ರಭಾಕರ ಪಾಠಕ ಅವರುಗಳು ಬಸವೇಶ್ವರರ ಚರಿತ್ರೆಯ ಮೇಲೆ ಬರೆದಿರುವ ಲೇಖನಗಳು ಪ್ರಕಟವಾಗಿವೆ. ಎಂ.ಚಿದಾನಂದಮೂರ್ತಿ ಮತ್ತು ಎಚ್‌. ತಿಪ್ಪೇರುದ್ರಸ್ವಾಮಿ ಅವರ ಬಸವೇಶ್ವರರ ಮೇಲೆ ಲೇಖನ ರೂಪದಲ್ಲಿ ಬಹಳಷ್ಟು ಸಂಖ್ಯೆಯಲ್ಲಿ ಪ್ರಕಟವಾಗಿವೆ ಮತ್ತು ಪ್ರಕಟವಾಗುತ್ತಿವೆ.

. ಮಹಾತ್ಮ ಬಸವೇಶ್ವರ ಕಾಲ, ವ್ಯಕ್ತಿ, ವಚನ ಸಾಹಿತ್ಯ ಮತ್ತು ಶರಣಕಾರ್ಯ : ಪುಣೆಯ ಡಾ. ಅಶೋಕ ಪ್ರಭಾಕರ ಕಾಮತ್ ಅವರು ಬರೆದಿರುವ ಈ ಗ್ರಂಥವು ಸತ್ಸಂಗ ಪ್ರತಿಷ್ಠಾನ, ಪುಣೆ ವತಿಯಿಂದ ೧೯೯೯ರಲ್ಲಿ ಪ್ರಕಟವಾಯಿತು. ಬಸವೇಶ್ವರರ ಕಾಲ, ರಾಜಕೀಯ, ಸಾಮಾಜಿಕ ಧಾರ್ಮಿಕ, ಸಾಹಿತ್ಯಕ, ಸಾಂಸ್ಕೃತಿಕ ವಾತಾವರಣ, ಮಹಾತ್ಮ ಬಸವೇಶ್ವರ ಮತ್ತು ಮಹಾರಾಷ್ಟ್ರ, ಮಹಾತ್ಮ ಬಸವೇಶ್ವರರ ವಚನಗಳು ಮತ್ತು ವಿವರಣೆ. ಮಹಾತ್ಮ ಬಸವೇಶ್ವರ: ಜೀವನ ಚರಿತ್ರೆ, ಮಹಾತ್ಮ ಬಸವೇಶ್ವರರ ವಚನ ದರ್ಶನ, ಮಹಾತ್ಮ ಬಸವೇಶ್ವರ ಮತ್ತು ಶರಣ ಪರಿವಾರ, ಆಯ್ದ ವಚನಗಳು ಮತ್ತು ವಿವರಣೆ ಎಂಬ ಪ್ರಕರಣಗಳಲ್ಲಿ ಕಾಮತರು ಬಸವೇಶ್ವರರ ಚರಿತ್ರೆಯ, ಕ್ರಾಂತಿ ಕಾರ್ಯದ ಮತ್ತು ವಚನಗಳ ಮುಖ್ಯ ಆಶಯಗಳನ್ನು ಪ್ರಚುರಪಡಿಸಿದ್ದಾರೆ. ಪರಿಶಿಷ್ಟ ಭಾಗದಲ್ಲಿ ಸಾಂದರ್ಭಿಕ ಗ್ರಂಥಗಳು, ಚಿತ್ರಾವಳಿ ಮತ್ತು ಕಾಲಪಟವನ್ನು ನೀಡಿದ್ದಾರೆ. ಅನಿಮೇಷದೇವ, ಅಲ್ಲಮಪ್ರಭು, ಅಕ್ಕಮಹಾದೇವಿ, ಚನ್ನಯ್ಯಾ, ಮುದ್ದಯ್ಯಾ, ಸೊಡ್ಡಳ ಬಾಚರಸ, ಶಂಕರ ದಾಸಿಮಯ್ಯಾ, ಕಿನ್ನರಿ ಬೊಮ್ಮಯ್ಯಾ ಶಿವಪ್ರಿಯಾ, ರಾಮಣ್ಣ, ಅಮುಗಿದೇವ, ರಾಯಮ್ಮಾ, ಸಂಕಣ್ಣಾ, ಮೋಳಿಗೆಯ ಮಾರಯ್ಯಾ, ಪದ್ಮಾವತಿ, ರುದ್ರಮುನಿ, ಕಕ್ಕಯ್ಯ, ಸಿದ್ಧರಾಮೇಶ್ವರ, ಹಾವಿನಾಳ ಕಲ್ಲಯ್ಯಾ ಮುಂತಾದ ಶರಣ-ಶರಣೆಯರ ಬಗೆಗೆ ಉಪಲಬ್ಧವಾಗಿರುವ ಮಾಹಿತಿಯನ್ನು ಅವರು ಖಚಿತವಾದ ಶಬ್ದಗಳಲ್ಲಿ ದಾಖಲಿಸಿದ್ದಾರೆ. ಬಸವೇಶ್ವರರ ಆಯ್ದ ವಚನಗಳ ವಿವರಣೆಯನ್ನು ಅವರು ಸುಮಧುರವಾದ ಭಾಷೆಯಲ್ಲಿ ನೀಡಿರುವುದು ವಿಶೇಷ.

. ಹನ್ನೆರಡನೆಯ ಶತಮಾನದ ಆದ್ಯ ಸಮಾಜ ಸುಧಾರಕಮಹಾತ್ಮ ಬಸವೇಶ್ವರ : ಯವಶತಮಾಳಾದ ಡಾ.ಅಶೋಕ ಗಂಗಾಧರ ಮೇನಕುದಳೆ ಅವರ ಈ ಕೃತಿಯು ಸುವಿದ್ಯಾ ಪ್ರಕಾಶನ, ಸೋಲಾಪುರದ ವತಿಯಿಂದ ೨೦೦೩ರಲ್ಲಿ ಪ್ರಕಟವಾಯಿತು. ಹನ್ನೆರಡನೆಯ ಶತಮಾನದಲ್ಲಿನ ದಕ್ಷಿಣ ಭಾರತ, ಮಹಾತ್ಮ ಬಸವೇಶ್ವರರ ಜೀವನಚಿತ್ರ, ಮಹಾತ್ಮ ಬಸವೇಶ್ವರರ ಧಾರ್ಮಿಕ ಕಾರ್ಯ, ಸಾಮಾಜಿಕ ಸುಧಾರಣೆ ಮತ್ತು ಸಾಮಾಜಿಕ ಪ್ರಬೋಧನೆ, ಆರ್ಥಿಕ ಸುಧಾರಣೆ, ಕಾಯಕ ಮತ್ತು ದಾಸೋಹಗಳ ವಿಚಾರ, ಬಸವ ಬೋಧನೆ, ಅಂತರಂಗಶುದ್ಧಿ, ಬಹಿರಂಗಶುದ್ಧಿ, ಬಸವೇಶ್ವರರ ಅನುಯಾಯಿಗಳ ಸಾಮಾಜಿಕ ಕಾರ್ಯ, ಸಿಂಹಾವಲೋಕನ, ಮಹಾತ್ಮ ಬಸವೇಶ್ವರ ಮತ್ತು ಅವರ ನಂತರದ ಚಳವಳಿ- ಈ ಪ್ರಕರಣಗಳ ಮೂಲಕ ಅವರು ಈ ಗ್ರಂಥದಲ್ಲಿ ವಿಚಾರಗಳನ್ನು ಮಂಡಿಸಿದ್ದಾರೆ. ಪರಿಶಿಷ್ಟ ಭಾಗದಲ್ಲಿ ಬಸವಣ್ಣನವರ ಚರಿತ್ರೆಯ ಮೂಲಕ ಆಕರಗಳು, ಬಸವೇಶ್ವರರ ಕಾಲ ಮತ್ತು ಮಹತ್ವದ ಘಟನೆಗಳ ವರ್ಷಗಳು, ಕಲಚುರಿ ವಂಶದವರ ಆಡಳಿತಾವಧಿಯ ವ್ಯಾಪ್ತ ಪ್ರದೇಶ, ಕಲ್ಯಾಣ ಕ್ರಾಂತಿಯಲ್ಲಿನ ಹುತ್ಮಾತರು, ಅನುಭ ಮಂಟಪದಲ್ಲಿನ ವಚನಕಾರರು ಮತ್ತು ಸ್ತ್ರೀ ವಚನಕಾರ್ತಿಯರು, ಶ್ರದ್ಧೆಯ ವ್ಯಕ್ತಿಗಳಿಗಾಗಿ ಕನ್ನಡ-ತೆಲಗು ಸಂಬೋಧನೆಗಳು ಮತ್ತು ಶರಣರ ನಾಮಮುದ್ರೆ (ಅಂಕಿತನಾಮ) ಎಂಬಿತ್ಯಾದಿ ವಿಷಯಗಳ ಬಗೆಗೆ ಮಾಹಿತಿಗಳನ್ನು ನೀಡಲಾಗಿದೆ. ಮಹಾತ್ಮ ಬಸವೇಶ್ವರರ ಲೋಕೋತ್ತರ ವ್ಯಕ್ತಿ ಮಹತ್ವ ಮತ್ತು ಅವರ ಕಾರ್ಯದ ಮಾರ್ಮಿಕ ನೆಲೆಗಳನ್ನು ಲೇಖಕರು ತಮ್ಮ ಕೃತಿಯಲ್ಲಿ ಗ್ರಥಿತಗೊಳಿಸಿದ್ದಾರೆ.

. ಚೇತನಾ ಚಿಂತಾಮಣಿ ಶ್ರೀ ಬಸವೇಶ್ವರ : ಸೊಲ್ಲಾಪುರದ ಡಾ. ಪ್ರಭಾಕರ ಪಾಠಕ್ ಅವರ ಈ ಗ್ರಂಥವೂ ಸುವಿದ್ಯಾ ಪ್ರಕಾಶನ, ಸೊಲ್ಲಾಪುರದ ವತಿಯಿಂದ ೨೦೦೫ರಲ್ಲಿ ಪ್ರಕಟವಾಗಿದೆ. ಮರಾಠಿಯಲ್ಲಿ ಪ್ರಕಟವಾದ ಈ ಮೇಲೆ ಹೇಳಿದ ಎರಡು ಗ್ರಂಥಗಳು ಮತ್ತು ಇತರೆ ಕೆಲವು ಮರಾಠಿ ಗ್ರಂಥಗಳನ್ನು ಆಧರಿಸಿ ಲೇಖಕರು ಈ ಗ್ರಂಥವನ್ನು ರಚಿಸಿದ್ದಾರೆ. ಶ್ರೀ ಬಸವೇಶ್ವರರ ಪೂರ್ವದ ಮತ್ತು ಸಮಕಾಲೀನ ಪರಿಸ್ಥಿತಿ, ದೈದೀಪ್ಯಮಾನ ಚರಿತ್ರೆ, ಪ್ರವೃತ್ತಿ ಮತ್ತು ನಿವೃತ್ತಿಯ ಅತಿರೇಕತೆಯನ್ನು ಲುಪ್ತವಾಗಿಸಿದ ಶ್ರೀ ಬಸವೇಶ್ವರ, ಸಂಘಟನೆಯ ತತ್ತ್ವ ಮತ್ತು ಅವಲಂಬನೆ, ಸಾಮಾಜಿಕ ಸುಧಾರಣೆಯ ಕ್ರಾಂತಿಕಾರ್ಯ, ಚೇತನ ಚಿಂತನಾಮಣಿಯ ದಿವ್ಯಶಲಾಕೆ, ಶ್ರೀಬಸವೇಶ್ವರ ತತ್ತ್ವ ಚಿಂತನೆ, ಜನಭಾಷೆ (ಆಡುಭಾಷೆ) ಯಾದ ಕನ್ನಡಕ್ಕೆ ಪುರಸ್ಕಾರ ಮತ್ತು ಉಪಸಂಹಾರ ಎಂಬ ಒಂಬತ್ತು ಪ್ರಕರಣದಲ್ಲಿ ಈ ಗ್ರಂಥವು ರಚನೆಗೊಂಡಿದೆ. ಅಲ್ಲದೆ ಬಸವೇಶ್ವರರ ವಚನಗಳ ಆಧಾರದಿಂದ ಅವರ ತತ್ತ್ವಜ್ಞಾನವನ್ನು ಗುರುತಿಸುವ ಪ್ರಯತ್ನವನ್ನೂ ಲೇಖಕರು ಇಲ್ಲಿ ಮಾಡಿದ್ದಾರೆ.

. ಗಾಊ ತ್ಯಾಂನಾಂ ಆರತಿ (ಅವರನು ಹಾಡಿ ಸ್ತುತಿಸಿವೆ) : ಅಶೋಕ ಮೇನಕುದಳೆ ಅವರ ಈ ಗ್ರಂಥವನ್ನು ಆಧರಿಸಿ ಸೊಲ್ಲಾಪುರದ ವಾಸುದೇವ ದೇಶಪಾಂಡೆ ಅವರು ಲಲಿತರಮ್ಮವಾದ ಭಾಷೆಯಲ್ಲಿ ಬಸವೇಶ್ವರರ ಚರಿತ್ರೆಯನ್ನು ಹಾಡಿದ್ದಾರೆ. ಆದರೆ ಈ ಕೃತಿಯು ಅಪ್ರಕಟಿವಾಗಿದ್ದು, ಆ ಹಸ್ತಪ್ರತಿಯು ನನ್ನ ಹತ್ತಿರವಿದೆ. ಬಸವೇಶ್ವರರ ಚರಿತ್ರೆಯಲ್ಲಿನ ಪಾತ್ರಗಳು ನಡೆಸುವ ಸಂವಾದದ ಮೂಲಕ ಲೇಖಕರು ಚರಿತ್ರೆಯನ್ನು ರಮಣೀಯವಾಗಿ ಬೆಳೆಸಿಕೊಂಡು ಹೋಗಿದ್ದಾರೆ.

. . ಬಸವೇಶ್ವರ : ಎಂ.ಚಿದಾನಂದಮೂರ್ತಿಯವರ ಕನ್ನಡ ಕೃತಿಯನ್ನು ರವೀಂದ್ರ ಕಿಂಬಹುವೆ ಅವರು ಮರಾಠಿ ಭಾಷೆಗೆ ಅನುವಾದ ಮಾಡಿದ್ದಾರೆ. ನ್ಯಾಶನಲ್ ಬುಕ್‌ಟ್ರಸ್ಟ್, ಇಂಡಿಯಾ ವತಿಯಿಂದ ೧೯೯೧ರಲ್ಲಿ ಪ್ರಕಟವಾಗಿದೆ. ಬಸವೇಶ್ವರರ ಕಾಲ, ಬಾಲ್ಯ, ಮುಕ್ತ ಜಗತ್ತು, ಮರಳಿ ಸಮಾಜದೆಡೆಗೆ, ಕಲ್ಯಾಣ, ಬಂಡಾಯ ಮತ್ತು ಸುಧಾರಣೆ, ಮುಮುಕ್ಷೂ, ಬಸವಣ್ಣ ಮತ್ತು ಅವರ ಸಮಕಾಲೀನರು, ಕೊನೆಯ ದಿನಗಳು, ವಾಙ್ಮಯ ನಿರ್ಮಾರ್ತೃ ಬಸವಣ್ಣ, ಉಪಸಂಹಾರ ಹೀಗೆ ಹನ್ನೊಂದು ಅಧ್ಯಾಯಗಳಲ್ಲಿ ಬಸವಣ್ಣನವರ ಜೀವನ ಚಿತ್ರವನ್ನು ವಾಚಕರೆದುರು ಮಂಡಿಸಿದ್ದಾರೆ. ಇಲ್ಲಿ ಅನುವಾದಿಸಲಾಗಿರುವ ವಚನಗಳಲ್ಲಿ ಬಸವೇಶ್ವರರ ‘ಕೂಡಲ ಸಂಗಮದೇವ’ ಎಂಬ ಅಂಕಿತನಾಮವನ್ನು ‘ಕುಡಾಳ ಸಂಗಮೇಶ್ವರ’ ಎಂದು ಮುದ್ರಿಸಿರುವುದು ವಿಶೇಷ.

. . ಬಸವೇಶ್ವರ : ಇದು ಎಚ್‌.ತಿಪ್ಪೇರುದ್ರಸ್ವಾಮಿಯವರ ಕನ್ನಡ ಕೃತಿಯನ್ನು ರೋಹಿಣಿ ತುಕದೇವ ಅವರು ಮರಾಠಿ ಭಾಷೆಗೆ ಅನುವಾದಿಸಿದ್ದಾರೆ. ನ್ಯಾಶನಲ್ ಬುಕ್‌ಟ್ರಸ್ಟ್, ಇಂಡಿಯಾ ವತಿಯಿಂದ ೨೦೦೩ರಲ್ಲಿ ಈ ಅನುವಾದಿತ ಕೃತಿಯು ಪ್ರಕಟಣೆಗೊಂಡಿರುತ್ತದೆ. ಜೀವನಕಥೆ, ಭಕ್ತಿಭಂಡಾರಿ, ಬಂಡಾಯ ಸಂತ, ಕಾಯಕದ ಸಂದೇಶ, ಶ್ರೇಷ್ಠಕವಿ – ಹೀಗೆ ಐದು ಅಧ್ಯಾಯಗಳಲ್ಲಿ ಬಸವೇಶ್ವರರ ಜೀವನ ಚಿತ್ರಣವು ವಾಚಕರೆದುರು ಅನಾವರಣಗೊಂಡಿದೆ. ಈ ಕೃತಿಯ ವೈಶಿಷ್ಟ್ಯವೆಂದರೆ ಕನ್ನಡ ವಚನಗಳ ಸುಂದರ ಭಾವಾನುವಾದ. ಒಂದನ್ನು ಉದಾಹರಣೆಯಾಗಿ ನೋಡಬಹುದಾದರೆ,

ಬೋಲಾಯಚೇ ಅಸೇಲತರ ಶಬ್ದ ಹವೇತ
ಜಣೂ ಧಾಗ್ಯಾತ ಗುಂಫಲೇಲೇ ಮೋತಿ |
ಬೊಲಾಯಚೇ ಅಸೇಲತರ ಶಬ್ದಹವೇತ
ಜಣೂ ಲಖಲಖತೇ ಮಾಣಿಕ |
ಬೋಲಾಯಚೇ ಅಸೇಲತರ ಶಬ್ದ ಹವೇತ
ಜಶೀ ನಿಳಾ ಈಲಾ ಛೇದಣಾರಿ ಸ್ಫಟಿಕರೇಷಾ

(ನುಡಿದರೆ, ಮುತ್ತಿನ ಹಾರಂತಿರಬೇಕು, ನುಡಿದರೆ ಮಾಣಿಕದ ದೀಪ್ತಿ ಯಂತಿರಬೇಕು, ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು…)

ಹಾಗೆಯೇ ಶಿ.ಬಾ. ಸಂಕನವಾಡೇ ಅವರ ‘ಮಹಾತ್ಮ ಬಸವೇಶ್ವರ’ (೧೯೮೮) ಮತ್ತು ಮಾತೆ ಮಹಾದೇವಿ ಅವರ ‘ವಿಶ್ವವಿಭೂತಿ ಬಸವಣ್ಣ’ (ಅನು. ಶಶಿಕಲಾ ಮಡಕಿ, ೧೯೯೩) ಈ ಚರಿತ್ರಾತ್ಮಕ ಗ್ರಂಥಗಳೂ ಪ್ರಕಟವಾಗಿವೆ. ಇವುಗಳೇ ಅಲ್ಲದೆ ಮಹಾತ್ಮ ಬಸವೇಶ್ವರರ ಚರಿತ್ರೆಯನ್ನು ಕುರಿತಂತೆ ಮರಾಠಿ ಭಾಷೆಯಲ್ಲಿ ಇನ್ನೂ ಹಲವಾರು ಚಿಕ್ಕ ಚಿಕ್ಕ ಕೃತಿಗಳು ಪ್ರಕಟವಾಗಿವೆ.

. ನಾಟಕಗಳು :

ಮಹಾತ್ಮ ಬಸವೇಶ್ವರ ಸಮಗ್ರ ಜೀವನವೆಂದರೆ ಒಂದು ನಾಟಕದ ವಸ್ತುವೇ ಹೌದು. ಅವರು ಕೇವಲ ಸಮಾಜ ಸುಧಾರಕರು ಮಾತ್ರವಲ್ಲ, ಅವರು ಒಂದು ರೀತಿಯಲ್ಲಿ ದೇವದೂತರೂ ಮತ್ತು ಶ್ರೇಷ್ಠರೂ ಆದ ಆಧ್ಯಾತ್ಮಿಕ ಪುರುಷರು ಎನಿಸಿದ್ದಾರೆ. ಅವರ ಜೀವನದಲ್ಲಿನ ಇಂಥ ನಾಟಕೀಯತೆಯಿಂದಾಗಿಯೇ ಲೇಖಕರಿಗೆ ಪ್ರೇರಣೆಯಾಗಿ ಅವರ ಚರಿತ್ರೆಯನ್ನು ಆಧರಿಸಿ ಎರಡು ಪ್ರಸಿದ್ಧ ನಾಟಕಗಳು ಮರಾಠಿಯಲ್ಲಿ ರಚನೆಗೊಂಡಿವೆ. ಸುಧಾಕರ ಮೋಗಲೇವಾರ ಮತ್ತು ಕುಮಾರೆ ಕೋಠಾವಳೆಯವರೇ ಆ ಇಬ್ಬರು ನಾಟಕ ಕರ್ತೃಗಳು.

. ಬಸವರಾಜ : ಸುಧಾಕರ ಮೋಗಲೇವರ ಅವರ ಮೂರು ಅಂಕಗಳ ಈ ನಾಟಕವು ೧೯೬೨ರಲ್ಲಿ ಪ್ರಕಟವಾಗಿದೆ. ವೀರಶೈವ ಸಂಸ್ಕೃತಿಯ ಪ್ರಭಾವ ಕ್ಷೇತ್ರದಿಂದ ದೂರದಲ್ಲಿ ಇರುವಂತಹ ವೀರಶೈವರು ಮಹಾತ್ಮ ಬಸವೇಶ್ವರರು, ಅನುಭವ ಮಂಟಪದ ಕಾರ್ಯ ಮತ್ತು ಕಲ್ಯಾಣಕ್ರಾಂತಿಯ ಹಿಂದಿನ ಪಾರ್ಶ್ವಭೂಮಿಯನ್ನು ತಿಳಿದುಕೊಳ್ಳಬೇಕು ಎಂಬುದೇ ಈ ನಾಟಕ ಕೃತಿಯ ಮುಖ್ಯ ಉದ್ದೇಶವಾಗಿದೆ. ಕಥಾನಕದ ಅನುಕೂಲತೆಗಾಗಿ ಮುಗ್ಧ ಮತ್ತು ಶಿವನಾಗ ಎಂಬ ಎರಡು ಕಾಲ್ಪನಿಕ ಪಾತ್ರಗಳನ್ನು ನಾಟಕಕಾರರು ನಿರ್ಮಿಸಿಕೊಂಡಿದ್ದಾರೆ. ಬಸವೇಶ್ವರರ ತೇಜೋಮಯ ವ್ಯಕ್ತಿತ್ವ ಮತ್ತು ಬಿಜ್ಜಳದ ಕರ್ಮರತೆ, ಪರಂಪರೆಯ ವಾದಿತ್ವಕ್ಕೆ ಪ್ರತಿಯಾಗಿ ನಾಟಕಕಾರರು ಈ ಎರಡೂ ಪಾತ್ರಗಳನ್ನು ವಿಶೇಷವಾಗಿ, ಸಶಕ್ತತೆಯಿಂದ ಎದುರಾಗಿಸಿದ್ದಾರೆ. ಸಂವಾದವು ಬಹಳ ಚೆನ್ನಾಗಿದೆ. ನಿದರ್ಶನಕ್ಕೆ,

ಉಚ್ಚ ನೀಚ ಎಲ್ಲರ ದೇಹವೂ ಒಂದೇ ಮೂಳೆಮಾಂಸದ್ದು, ಕೆಂಪುರಕ್ತದ್ದು
ಆಗಿದೆ. ವಿಷವು ಯಾರ ದೇಹದಲ್ಲಿಯೂ ಇರುವುದಿಲ್ಲ
ಉದರದ ಚಿಂತೆಯು ಇಲ್ಲವಾಗದೆ ಇರುವ ಮನುಷ್ಯನಿಗೆ ಶಿವಸೇವೆಯು
ಪುಕ್ಕಟೆ ಎನಿಸುತ್ತದೆ

. ಮಹಾತ್ಮಾ ಬಸವೇಶ್ವರ : ಕುಮಾರ ಕೋಠಾವಳೆ ರಚಿತ ಈ ನಾಟಕವು ೧೯೬೬ರಲ್ಲಿ ಅಖಿಲ ಭಾರತ ವೀರಶೈವ ಸಂಘ, ಬೆಳಗಾವಿ ವತಿಯಿಂದ ಪ್ರಕಟವಾಯಿತು. ಮಹಾತ್ಮ ಬಸವೇಶ್ವರರ ಜೀವನ ಕಾರ್ಯವನ್ನು ಮರಾಠಿ ಜನತೆಯ ಎದುರು ಪ್ರಚುರಪಡಿಸುವುದೇ ಈ ನಾಟಕದ ಪ್ರಮುಖ ಉದ್ದೇಶ. ಸಂಸ್ಕೃತ ನಾಟಕಗಳ ಸಂಪ್ರದಾಯದಂತೆ ಮೊದಲ ಪ್ರವೇಶದಲ್ಲಿ ಸೂತ್ರಧಾರ ಮತ್ತು ನಟಿಯರ ಸಂವಾದವಿದೆ. ಬಸವಣ್ಣನವರ ಜನನ, ಮುಂಜಿ ಕಾರ್ಯಕ್ರಮಕ್ಕೆ ವಿರೊಧ ಮತ್ತು ಜಾತವೇದ ಮುನಿಯ ಆಶ್ರಮದಲ್ಲಿ ವಿದ್ಯಾಭ್ಯಾಸ ಈ ಪ್ರಸಂಗಗಳ ಅನಂತರ ಮೊದಲ ಅಂಕವು ಮುಗಿಯುವುದು. ಎರಡನೆಯ ಅಂಕದಲ್ಲಿ ಬಸವೇಶ್ವರರಿಂದ ತಾಮ್ರಪಟದ ವಾಚನ, ಕೋಶಾಗಾರ ಮಂತ್ರಿಯಾಗಿ ನಿಯುಕ್ತಿ, ಕರ್ಣದೇವ ಮಂಚಣ್ಣರ ಕಾರಸ್ಥಾನ ಹಾಗೂ ಬಸವೇಶ್ವರರ ವಾಡೆಯಲ್ಲಿ ಹೊಕ್ಕ ಚೋರ –ಈ ಪ್ರಸಂಗಗಳನ್ನು ಲೇಖಕರು ಸಜೀವವೆಂಬಂತೆ ನಿರೂಪಿಸಿದ್ದಾರೆ. ಮೂರನೆಯ ಅಂಕದಲ್ಲಿ ಹರಳಯ್ಯನ ಪಾದರಕ್ಷೆಗಳ ಅಸ್ವೀಕಾರ, ಮಧುವಯ್ಯನ ಅಂಕದ (ಜೂಜು) ಮೋಹ, ಅನುಭವ ಮಂಟಪದ ಕಾರ್ಯ, ಮಹಾದೇವಿಯ ಪ್ರವೇಶ, ಕಸಪಯ್ಯಾ, ಮಂಚಣ್ಣಾ, ಕರ್ಣದೇವ ಇವರುಗಳ ವಿರೋಧಿ ಕಾರಸ್ಥಾನಗಳು, ಮಧುವರಸ ಹರಳಯ್ಯರ ಮಗ-ಮಗಳ ವಿವಾಹ, ಅವರಿಗೆ ಮರಣ ದಂಡನೆಯ ಶಿಕ್ಷೆ, ಬಿಜ್ಜಳನ ವಧೆ ಮತ್ತು ಬಸವೇಶ್ವರರ ಲಿಂಗೈಕ್ಯ ಪ್ರಸಂಗಗಳನ್ನು ಚಿತ್ರಿಸುವುದರೊಂದಿಗೆ ನಾಟಕ ಮುಕ್ತಾಯಗೊಳ್ಳುವುದು. ಕೋಠಾವಳೆ ಅವರು ಮೂಲತಃ ಕವಿಯೇ ಆಗಿರುವುದರಿಂದ ಅವರ ಭಾಷೆಯು ಅತ್ಯಂತ ಲಲಿತರಮ್ಮವೂ ಆಗಿದೆ.

‘….ಜಗಕೆ ನಗಿಸಲು ಜನುಮವೆತ್ತಿರುವವರು, ಸ್ವತಃ ತಾವೇ ಹೇಗೆ ಅಳುವರು’?

‘….ಶ್ರೀಮಂತಿಕೆಯ ಡೌಲಿಗಿಂತ ಮಾಯೆ ಎಂಬ ಶಬ್ದವೇ ಅಧಿಕ ಬೆಲೆಯುಳ್ಳದ್ದು’ ಈ ನಾಟಕ ಕೃತಿಯಲ್ಲಿನ ಎಲ್ಲಾ ಪಾತ್ರಗಳ ವ್ಯಕ್ತಿಚಿತ್ರಣವು ಗಂಭೀರವಾಗಿ ಮನಸೆಳೆಯುವಂತಹದ್ದಾಗಿದೆ.

ಬಸವೇಶ್ವರರ ವಚನಗಳ ಅನುವಾದ :

ಬಸವೇಶ್ವರರ ವಚನಗಳು ಅನುವಾದಿತಗೊಂಡ ಒಟ್ಟು ಏಳು ಮುಖ್ಯ ಕೃತಿಗಳಿವೆ. ಅವುಗಳ ಹೆಸರು ಮತ್ತು ಅನುವಾದಕರ ವಿವರಗಳಿಂತಿವೆ.

೧.  ಸಟೀಕ ಮತ್ತು ಸಾರ್ಥಶ್ರೀಬಸವ ಬೋಧ (೧೯೩೬, ಸಿದ್ಧಮಲ್ಲಪ್ಪಾ ಕಲ್ಯಾಣಶೆಟ್ಟಿ, ಸೊಲ್ಲಾಪುರ) ಎಂಬ ಕೃತಿಯಲ್ಲಿ ಅವರ ೧೦೮ ವಚನಗಳನ್ನು ಅನುವಾದಿಸಲಾಗಿದೆ.

೨.  ಬಸವವಾಣಿ (೧೯೯೧, ದ.ವಾ. ಚಾಫೇಕರ, ಗದಗ) ಎಂಬ ಕೃತಿಯಲ್ಲಿ ಬಸವಣ್ಣನವರ ವಚನಗಳನ್ನು ಅಂಜನೀಗೀತ ಎಂಬ ವೃತ್ತದ ಸ್ವರೂಪದಲ್ಲಿ ಅನುವಾದಿಸಲಾಗಿದೆ.

೩.  ಬಸವ ವಚನಾಮೃತ (೧೯೬೮) ಜಯದೇವಿತಾಯಿ ಲಿಗಾಡೆ, ಸೊಲ್ಲಾಪುರ, ಕೃತಿಯಲ್ಲಿ ಬಸವಣ್ಣನವರ ೧೦೮ ವಚನಗಳನ್ನು ಅನುವಾದಿಸಲಾಗಿದೆ. ಕೊನೆಯಲ್ಲಿ ಟಿಪ್ಪಣಿ ಮತ್ತು ಅಕಾರಾದಿ ಪಟ್ಟಿಯನ್ನು ನೀಡಲಾಗಿದೆ.

೪.  ವಚನಾಮೃತ ಬಸವೇಶ್ವರ (೧೯೮೩, ರಾಜೇಂದ್ರ, ಜಿರೋಬೆ, ಉದಗೀರ್) ಕೃತಿಯಲ್ಲಿ ಬಸವಣ್ಣನವರ ವಚನಗಳನ್ನು ಅಭಂಗಾತ್ಮಕವಾಗಿ ಅನುವಾದಿಸಲಾಗಿದೆ. ಪ್ರತಿಯೊಂದು ವಚನಕ್ಕೂ ಅನುವಾದಕರು ಒಂದೊಂದು ಶೀರ್ಷಿಕೆಯನ್ನು ನೀಡಿರುವುದು ವಿಶೇಷ.

೫.  ವಚನ ಬಸವೇಶ್ವರ (ಸಂಜೀವ, ಸೊಲ್ಲಾಪುರ) ಇದರಲ್ಲಿ ಬಸವಣ್ಣನವರ ೧೦೮ ವಚನಗಳನ್ನು ಆಯ್ದು ಅನುವಾದಿಸಲಾಗಿದೆ. ಅನುವಾದಕರು ತಮ್ಮ ಕಾರ್ಯಕ್ಕೆ ಕನ್ನಡ ಭಾಷೆ ತಿಳಿದಿದ್ದಂತಹ ಕೆ.ಬಿ. ಪೂರ್ವಾಚಾರ್ಯ ಎಂಬುವವರ ಸಹಾಯ ಪಡೆದಿದ್ದಾರೆ. ವಚನಗಳನ್ನು ದೇವನಾಗರಿ ಲಿಪಿಯ ಜೊತೆಗೆ ಕನ್ನಡದಲ್ಲಿಯೂ ನೀಡಿರುವುದು ವಿಶೇಷ.

೬.  ಶ್ರೀಗುರು ಬಸವಣ್ಣಾಂಚೇ ವಚನೇ (೧೯೯೭, ಶಾಲಿನಿ ದೊಡ್ಡಮನಿ, ಉಗಾರಖುರ್ದ್‌) ಎಂಬ ಕೃತಿಯಲ್ಲಿ ಬಸವಣ್ಣನವರ ೧೦೧ ವಚನಗಳನ್ನು ಅನುವಾದ ಮಾಡಲಾಗಿದೆ. ಅನುವಾದದ ಅನಂತರ ಗದ್ಯದಲ್ಲಿ ಆಯಾಯಾ ವಚನದ ಭಾವಾರ್ಥವನ್ನು ನೀಡಿರುವುದು ವಿಶೇಷ.

೭.  ಬಸವ ಚಿಂತನಿಕಾ (ಶಿವಚಂದ್ರ ಮೂಣೂರಕರ, ಅಮರಾವತಿ) ಎಂಬ ಕೃತಿಯಲ್ಲಿ ಬಸವಣ್ಣನವರ ೧೦೧ ವಚನಗಳನ್ನು ಶ್ಲೋಕಬದ್ದ ಶೈಲಿಯಲ್ಲಿ ಅನುವಾದಿಸಲಾಗಿದೆ. ಈ ಶೈಲಿಯಲ್ಲಿ ಅನುವಾದಿತವಾಗಿರುವ ಮರಾಠಿಯ ಏಕೈಕ ಗ್ರಂಥವಿದು ಎನ್ನಲಾಗಿದೆ.

ಹೀಗೆ ಕೃತಿರೂಪದಲ್ಲಿ ಪ್ರಕಟವಾಗಿರುವುವುಗಳನ್ನು ಮಾತ್ರ ಇಲ್ಲಿ ನಮೂದಿಸಲಾಗಿದೆ. ಇನ್ನು ಬಿಡಿ ಬಿಡಿಯಾಗಿ ಅನೇಕರು ಅನುವಾದಿಸಿ ಬೇರೆ ಬೇರೆ ಕಡೆಗಳಲ್ಲಿ ಪ್ರಕಟಿಸಿರುವುದೂ ಉಂಟು. ಅಲ್ಲದೆ ವೀರಶೈವ ಮರಾಠಿ ಸಂತಕವಿಗಳ ಮೇಲೆ ಬಸವಣ್ಣನವರ ವಚನಗಳ ಪ್ರಭಾವ ಗಾಢವಾಗಿಯೇ ಇದೆ. ಶಿವಲಿಂಗ (ಕ್ರಿ.ಶ.೧೭ನೇ ಶತಮಾನ) ಮುಂತಾದ ಸಂತಕವಿಗಳನ್ನು ಇಲ್ಲಿ ಹೆಸರಿಸಬಹುದು.

ಒಟ್ಟಾರೆ ಮಹಾತ್ಮ ಬಸವೇಶ್ವರರು ವಿಶ್ವಾಕಾಶದಲ್ಲಿ ಬೆಳಗುತ್ತಿರುವ ಒಂದು ದಿವ್ಯ ನಕ್ಷತ್ರವೇ ಹೌದು. ೧೨ನೇ ಶತಮಾನದ ಈ ಮಹಾನ್ ದ್ರಷ್ಟಾರರ ದೃಷ್ಟಿಯು ಮುಂದಿನ ಎಂಟು ಶತಮಾನಗಳಲ್ಲಿ ಗಂಭೀರವಾಗಿ ಪ್ರವಹಿಸಿದೆ. ಮಾತ್ರವಲ್ಲ, ಮುಂದೆಯೂ ಪ್ರವಹಿಸಿ ಪ್ರಭಾವಿಸುವಂಥದ್ದಾಗಿದೆ. ‘ತತ್ಕಾಲೀನ ಕರ್ಮಠರಿಗೆ ಅವರ ಹೊಸ ಹೊಸ ವಿಚಾರಗಳು ಸಹ್ಯವಾಗಲಿಲ್ಲ; ಈ ಪರಿಣಾಮವಾಗಿಯೇ ಕರ್ನಾಟಕದ ಇತಿಹಾಸದ ಪುಟಗಳು ರಕ್ತರಂಜಿತವಾದವು’ ಎಂಬುದು ದುರ್ದೈವದ ಸಂಗತಿ. ಆದರೆ ಅವರ ವಚನ ಸಾಹಿತ್ಯದಿಂದ ಅವರ ವಿಚಾರ ದೃಷ್ಟಿಗಳು ಮುಂದಿನ ತಲೆಮಾರಿನವರನ್ನು ಪ್ರೇರೇಪಿಸುತ್ತಲೇ ಬಂದಿವೆ. ಮರಾಠಿ ಸಾಹಿತ್ಯದಲ್ಲಿಯೂ ಅವರ ಹೆಜ್ಜೆಗುರುತುಗಳು ನಿಖರವಾಗಿ ಮೂಡಿವೆ. ಈ ಹೆಜ್ಜೆ ಗುರುತಿನ ನೆಲೆಗಳನ್ನು ಯಾರಾದರೂ ಅಧ್ಯಯನಕಾರರು ಕೈಗೆತ್ತಿಕೊಂಡರೆ ಒಂದು ಸಂಶೋಧನ ಮಹಾಪ್ರಬಂಧವೇ ಸಿದ್ಧವಾಗಬಹುದು. ನನ್ನೊಬ್ಬ ವಿದ್ಯಾರ್ಥಿ ಶ್ರೀ ಅನಿಲ ಕಾಶೀನಾಥ ಸರ್ಜ ಎಂಬಾತ ‘ಸಿದ್ಧರಾಮೇಶ್ವರ ವಿಷಯಕ ಮರಾಠಿ ವಾಙ್ಮಯ’ ಎಂಬ ವಿಷಯ ಕುರಿತು ಪಿಎಚ್‌.ಡಿ ಅಧ್ಯಯನ ಕೈಗೊಂಡಿರುವನು. ಇಂಥದೇ ನೆಲೆಯಿಂದ ಮಹಾತ್ಮ ಬಸವೇಶ್ವರರ ಮರಾಠಿ ವಾಙ್ಮಯದ ವಿಷಯವಾಗಿ ಒಂದು ಸಂಶೋಧನ ಮಹಾಪ್ರಬಂಧವೊಂದಕ್ಕೆ ಅಧ್ಯಯನ ಚೌಕಟ್ಟನ್ನು ಹಮ್ಮಿಕೊಳ್ಳಬಹುದಾಗಿದೆ. ತಮ್ಮ ವ್ಯಕ್ತಿತ್ವ ಮತ್ತು ವಿಚಾರಗಳ ಮೂಲಕ ಕಳೆದ ಎಂಟು ಶತಮಾನಗಳ ಮೇಲೆ ಗಂಭೀರ ಪ್ರಭಾವವನ್ನು ಬೀರಿರುವ ಈ ದ್ರಷ್ಟಾದ ಮಹಾಪುರುಷರ ಪಾದಾರವಿಂದಗಳಲ್ಲಿ ಭಾವಪುಷ್ಪಾಂಜಲಿಯನ್ನು ಚೆಲ್ಲಿ ವಿರಮಿಸುತ್ತೇನೆ.

ಸಹಾಯಕ ಗ್ರಂಥಗಳು

೧.  ಕರಾಳೆ, ಶೋಭ, ೨೦೦೩, ವೀರಶೈವ ಮರಾಠಿ ಅಭಂಗ ಕವಿತಾ :   ಏಕ ವಿವೇಚಕ ಅಭ್ಯಾಸ, ಶೈವಭಾರತಿ ಶೋಧ ಪ್ರತಿಷ್ಠಾನ, ಜಂಗಮವಾಡಿ ಮಠ, ವಾರಾಣಾಸೀ

೨.  ಘೋಣಸೆ ಶ್ಯಾಮ, ೨೦೦೨, ವೀರಶೈವಾಂಚೆ ಮರಾಠಿ-ಹಿಂದಿ ವಾಙ್ಮಯ : ಏಕ ಅಭ್ಯಾಸ, ಶೈವಭಾರತಿ ಶೋಧ ಪ್ರತಿಷ್ಠಾನ, ಜಂಗಮವಾಡಿ ಮಠ, ವಾರಾಣಸೀ

೩.  ಪಸಾರಕರ ಶೇ.ದೆ., ೧೯೮೩, ಧಾಂಡೋಲಾ, ಮಹಾಸಾರಂಗ ಪ್ರಕಾಶನ, ಸೊಲ್ಲಾಪುರ

೪.  ಪಸಾರಕರ ಶೇ.ದೆ.(ಸಂ), ೨೦೦೧, ಶ್ರೀಲಕ್ಷ್ಮಣಗಾಥಾ, ಶ್ರೀಸಿದ್ಧೇಶ್ವರ ಪ್ರಕಾಶನ, ಆಷ್ಟೀ, ತಾ. ಪರತೂರ, ಜಿ.ಚಾಲನಾ

೫.  ಪಸಾರಕರ ಶೇ.ದೆ., ೨೦೦೪, ಅಧ್ಯಕ್ಷೀಯ ಭಾಷಣ, ಮೊದಲ ಅಖಿಲ ಭಾರತ ವೀರಶೈವ ಮರಾಠಿ ಸಾಹಿತ್ಯ ಸಮ್ಮೇಶನ, ಲಾತೂರ

೬.  ಫಾಸ್ಕೆ ವೈಜನಾಥ, ೨೦೦೬, ವೀರಶೈವ ಸಂತಕವಿ ಶಿವದಾಸ : ಏಕ ಅಭ್ಯಾಸ, ಶೈವಭಾರತಿ ಶೋಧ ಪ್ರತಿಷ್ಠಾನ, ಜಂಗಮವಾಡಿ ಮಠ, ವಾರಾಣಸೀ

೭.  ಮೇನಕುದಳೆ ಅಶೋಕ, ೨೦೦೫, ವಿದರ್ಭಾತೀಲ ವೀರಶೈವ ಸಂಪ್ರದಾಯ: ಗ್ರಂಥಕಾರ ವಾಙ್ಮಯ, ಶೈವಭಾರತಿ ಶೋಧ ಪ್ರತಿಷ್ಠಾನ, ಜಂಗಮವಾಡಿ ಮಠ, ವಾರಾಣಾಸೀ

೮.  ಸ್ವಾಮಿ, ಶಾಂತಿ ತೀರ್ಥ, ೨೦೦೫, ವೀರಶೈವಾಂಚಿ ಸ್ಫುಟ ಕವಿತಾ, ಶ್ರೀ ಕಾಶಿಜಗದ್ಗುರು ವಿಶ್ವಾರಾಧ್ಯ ವೀರಶೈವ ವಿದ್ಯಾಪೀಠ, ಜಂಗಮವಾಡಿ ಮಠ, ವಾರಾಣಾಸೀ