ಕರ್ನಾಟಕದ ಉತ್ತರ ಭಾಗದಲ್ಲಿರುವ ವಿಜಾಪುರ ಜಿಲ್ಲೆ ಉತ್ತರ ಅಕ್ಷಾಂಶ ೧೫.೫೦-೧೭.೬೩, ಪೂರ್ವ ರೇಖಾಂಶ ೭೪.೫೪-೭೬.೨೮ರಲ್ಲಿದೆ. ಇಂಡಿ, ಸಿಂದಗಿ, ವಿಜಾಪುರ, ಮುದ್ದೇಬಿಹಾಳ ಮತ್ತು ಬಸನ ಬಾಗೇವಾಡಿ ಹೀಗೆ ೫ ತಾಲೂಕುಗಳು ಈ ಜಿಲ್ಲೆಯಲ್ಲಿವೆ. ಭೌಗೋಳಿಕವಾಗಿ ಒಣ ಹವೆಯನ್ನು ಹೊಂದಿರುವ ಇದು ಬಯಲು ಸೀಮೆಯ ನಾಡಾಗಿದೆ. ವಿಜಾಪುರ ಜಿಲ್ಲೆಯನ್ನು ೧೯೯೭ರ ಮೊದಲು ೧೧ ತಾಲೂಕುಗಳನ್ನೊಳಗೊಂಡು ಪಂಚನದಿಗಳ ನಾಡೆಂದು ಅಥವಾ ಕರ್ನಾಟಕದ ಪಂಜಾಬ್ ಎಂದು ಕರೆಯಲಾಗುತ್ತಿತ್ತು. ಜಿಲ್ಲೆಗಳ ಪುನರ್ ವಿಂಗಡಣೆಯ ಸಮಯದಲ್ಲಿ ಬಾಗಲಕೋಟೆಯನ್ನು ಜಿಲ್ಲೆಯನ್ನಾಗಿ ಮಾಡಿ, ಕೃಷ್ಣಾನದಿಯ ದಕ್ಷಿಣ ಭಾಗದ ಪ್ರದಶದಲ್ಲಿ ಬರುವ ೬ ತಾಲೂಕುಗಳನ್ನು ಇದಕ್ಕೆ ಸೇರಿಸಲಾಯಿತು.

ವಿಜಾಪುರ ಜಿಲ್ಲೆ ಭೌಗೋಳಿಕವಾಗಿ ದಖನ್ ಪ್ರಸ್ತಭೂಮಿಯ ಒಣ ಮತ್ತು ಶುಷ್ಕ ಪ್ರದೇಶದಲ್ಲಿದೆ. ಕೃಷ್ಣಾನದಿಯ ಉತ್ತರ ಭಾಗ ದಖನ್ ಪದರುಗಲ್ಲಿನ ಪ್ರದೆಶ, ಅದರ ದಕ್ಷಿಣ ಭಾಗದಲ್ಲಿ ಕಲಾದಗಿ ಶಿಲಾವರ್ಗ, ಆಗ್ನೆಯಭಾಗ ನೈಸ್ ಶಿಲಾಪ್ರದೇಶವಿದೆ. ಇಲ್ಲಿಯ ಒಟ್ಟು ಭೌಗೋಳಿಕ ವಿಸ್ತೀರ್ಣದಲ್ಲಿ ಭೀಮಾ ಕಣಿವೆ, ಮಧ್ಯದ ಪ್ರಸ್ತಭೂಮಿ, ಡೋಣಿ ಕಣಿವೆ ಮತ್ತು ಕೃಷ್ಣಾ ಕಣಿವೆ ಪ್ರದೇಶಗಳು ಎಂದು ವಿಂಗಡಿಸಬಹುದು. ತಿಕೋಟ ಬಳಿಯಿಂದ ವಿಜಾಪುರದ ಹತ್ತಿರದವರೆಗೆ ಹಬ್ಬಿರುವ ಮಹದೇವ ಶ್ರೇಣಿಯ ಒಂದು ಚಿಕ್ಕ ಕವಲನ್ನು ಬಿಟ್ಟರೆ, ಉಳಿದಂತೆ ಅಲ್ಲಲ್ಲಿ ಕೆಲವು ಪದರು ಕಲ್ಲಿನ ಚಿಕ್ಕ ಪುಟ್ಟ ಗುಡ್ಡಗಳು ಕಂಡುಬರುತ್ತವೆ. ಜಿಲ್ಲೆಯಲ್ಲಿ ಸರಾಸರಿ ೫೦೦ ಮಿಲಿಮೀಟರ್ ಮಳೆಯಾಗುತ್ತಿದ್ದರೂ ಸತತ ಬರಗಾಲದ ಬವಣೆಯಿಂದ ತಪ್ಪಿಸಿಕೊಂಡಿಲ್ಲ.

ವಿಜಾಪುರ ಜಿಲ್ಲೆಯಲ್ಲಿ ಪ್ರಮುಖವಾಗಿ ಮೂರು ನದಿಗಳು ಹರಿದಿವೆ. ಅವುಗಳಲ್ಲಿ ಕೃಷ್ಣಾ ನದಿಯನ್ನು ಶಾಸನಗಳು ಪೆರ್ದೊರೆ, ಕೃಷ್ಣವೇಣಿ ಎಂದು ಕರೆಯಲಾಗಿದೆ. ಇದು ಸಹ್ಯಾದ್ರಿ ಶ್ರೇಣಿಯಲ್ಲಿರುವ ಮಹಾರಾಷ್ಟ್ರದ ಸಾತಾರ ಜಿಲ್ಲೆಯ ಮಹಾಬಲೆಶ್ವರದಲ್ಲಿ ಉಗಮವಾಗಿ ಅಲ್ಲಿಂದ ಸಾತಾರ ಸಾಂಗ್ಲಿ, ಕೊಲ್ಹಾಪುರ ಜಿಲ್ಲೆಗಳು ಮೂಲಕ ಹರಿದು, ಬೆಳಗಾವಿ ಜಿಲ್ಲೆಯಲ್ಲಿ ಕರ್ನಾಟಕವನ್ನು ಸೇರುತ್ತದೆ. ಜಮಖಂಡಿಯ ಮತ್ತುರಿನಬಳಿ ವಿಜಾಪುರ ಜಿಲ್ಲೆಯನ್ನು ಪ್ರವೇಶಿಸಿ, ಬಾಗಲಕೋಟೆ ಮತ್ತು ವಿಜಾಪುರ ಜಿಲ್ಲೆಗಳ ಗಡಿರೇಖೆಯಾಗಿದೆ. ವಿಜಾಪುರ, ಬಸವನ ಬಾಗೇವಾಡಿ, ಮುದ್ದೇಬಿಹಾಳ ತಾಲೂಕುಗಳಿಲ್ಲಿ ಹರಿದು, ಮುಂದೆ ಗುಲ್ಬರ್ಗಾ ಮತ್ತು ರಾಯಚೂರು ಜಿಲ್ಲೆಗಳನ್ನು ಪ್ರವೇಶಿಸುತ್ತದೆ. ಈ ಜಿಲ್ಲೆಯಲ್ಲಿ ನದಿಯ ಹರವಿನ ಒಟ್ಟು ಉದ್ದ ೨೦೧ ಕಿ.ಮೀ.ಗಳು. ನದಿ ಪ್ರದೇಶದಲ್ಲಿ ವಿಶಾಲವಾದ ಎರೆ ಮಣ್ಣಿನ ಹರಿವು ಉಂಟಾಗಿದೆ. ನದಿಯ ಉತ್ತರ ಭಾಗ ಟ್ರ್ಯಾಪ್‌ಶಿಲೆಯ ಪ್ರದೇಶವಾದರೆ, ದಕ್ಷಿಣ ಭಾಗ ಕಲಾದಗಿ ವ್ಯವಸ್ಥೆಯ ಮರಳು ಶಿಲೆಯ ಪ್ರದೇಶವಾಗಿದೆ. ಕೃಷ್ಣಾ ನದಿಗೆ ನಾರಾಯಣಪುರ ಮತ್ತು ಆಲಮಟ್ಟಿಗಳಲ್ಲಿ ತಡೆಗೋಡೆಗಳನ್ನು ನಿರ್ಮಿಸಿ ದಕ್ಷಿಣ ಮತ್ತು ಉತ್ತರ ಭಾಗದ ಪ್ರದೇಶಗಳಲ್ಲಿ ಕೃಷಿ ಬಳಕೆಗೆ ಮತ್ತು ಕುಡಿಯು ನೀರಿನ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ.

ಡೋಣಿ ನದಿಯು ವಿಜಾಪುರ ಜಿಲ್ಲೆಯ ಪಶ್ಚಿಮಕ್ಕಿರುವ ಮಹಾರಾಷ್ಟ್ರ ಜಿಲ್ಲೆಯ ಜತ್‌ ಪಟ್ಟಣದ ದಕ್ಷಿಣಕ್ಕೆ ೭ ಕಿ.ಮೀ. ದೂರದಲ್ಲಿ ಉಗಮವಾಗಿ ನಂತರ ಪೂರ್ವಕ್ಕೆ ಹರಿದು ಜಿಲ್ಲೆಯನ್ನು ಪ್ರವೇಶಿಸುತ್ತದೆ. ಈ ಜಿಲ್ಲೆಯಲ್ಲಿ ಆಗ್ನೆಯ ಮುಖವಾಗಿ ಹರಿದು, ಗುಲ್ಬರ್ಗಾ ಜಿಲ್ಲೆಯ ಜಮಲಾಪುರದ ಬಳಿ ಕೃಷ್ಣಾನದಿಯನ್ನು ಸೇರುತ್ತದೆ. ವಿಜಾಪುರ, ಬಸವನ ಬಾಗೇವಾಡಿ, ಸಿಂದಗಿ ಮತ್ತು ಮುದ್ದೇಬಿಹಾಳ ತಾಲೂಕುಗಳಲ್ಲಿ ಹರಿಯುತ್ತಿರುವ ಈ ನದಿಯ ಉದ್ದ ೧೪೦ ಕಿ.ಮೀ. ಗಳಾಗಿದೆ.

ದೋಣಿ ನದಿ ಪಾತ್ರದ ಆಸುಪಾಸಿನಲ್ಲಿ ರೇವೆ ಮಣ್ಣು ಮತ್ತು ಹೊರಭಾಗ ಆಳವಾದ ಕಪ್ಪುಮಣ್ಣು ಹರಡಿದೆ. ಜಲಯಾನ ಪ್ರದೇಶ ಬಹಳ ಫಲವತ್ತತೆಯಿಂದ ಕೂಡಿದೆ. ಈ ಕಣಿವೆ ಪ್ರದೇಶ ಆಹಾರ ಧಾನ್ಯಗಳ ಉತ್ಪಾದನೆಗೆ ಪ್ರಸಿದ್ಧವಾಗಿದ್ದು, ‘ದೋಣಿ ಬೆಳೆದರೆ ಓಣಿಯೆಲ್ಲ ಕಾಳು’ ಎಂಬ ನಾಣ್ಣುಡಿಗೆ ಪಾತ್ರವಾಗಿದೆ. ಬೇಸಿಗೆಯ ಕಾಲದಲ್ಲಿ ಲವಣಾಂಶದ ಪರಿಣಾಮವಾಗಿ ದಂಡೆಗಳ ಮೇಲೆ ಉಪ್ಪಿನ ಪದರುಗಳು ಉಂಟಾಗಿವೆ.

ಭೀಮಾನದಿಯು ಮಹಾರಾಷ್ಟ್ರದಲ್ಲಿ ಭೀಮಾಶಂಕರ ಎಂಬ ಪಶ್ಚಿಮ ಘಟ್ಟಗಳಲ್ಲಿ ಉಗಮಿಸುತ್ತದೆ. ಅಲ್ಲಿಂದ ಪೂರ್ವಾಭಿಮುಖವಾಗಿ ಹರಿದು ಇಂಡಿ ತಾಲೂಕಿನ ಅಗರಖೇಡ ಗ್ರಾಮದ ಮೂಲಕ ಜಿಲ್ಲೆಯನ್ನು ಪ್ರವೇಶಿಸಿ, ವಿಜಾಪುರ-ಸೊಲ್ಲಾಪುರ ಮತ್ತು ವಿಜಾಪುರ – ಗುಲ್ಬರ್ಗ ಜಿಲ್ಲೆಗಳ ಗಡಿ ರೇಖೆಯಾಗಿ ಪರಿಣಮಿಸಿದೆ. ಜಿಲ್ಲೆಯಲ್ಲಿ ೬೯ ಕಿ.ಮೀ. ಉದ್ದವಾಗಿ ಹರಿದಿರುವ ನದಿ ಪ್ರದೇಶದಲ್ಲಿ ಕರಿಕಲ್ಲು, ಅದರ ಮೇಲೆ ದಪ್ಪವಾದ ಕಪ್ಪು ಮಣ್ಣು ಹರಡಿರುವುದರಿಂದ ಸಮೃದ್ಧವಾದ ಬೆಳೆಗೆ ಅನುಕೂಲವಾಗಿದೆ.

ಈ ಜಿಲ್ಲೆಯಲ್ಲಿ ಮೂರು ಪ್ರಮುಖ ನದಿಗಳಲ್ಲದೇ ಅನೇಕ ಹಳ್ಳಗಳು ಹರಿಯುತ್ತಿರುವುದರಿಂದ ಅಂತರ್ ಜಲ ಸಂಪನ್ಮೂಲ ಹೆಚ್ಚಳಕ್ಕೆ ಕಾರಣವಾಗಿದೆ. ಇಲ್ಲಿಯ ವಾರ್ಷಿಕ ಮಳೆಯ ಪ್ರಮಾಣ ಹೆಚ್ಚಿಲ್ಲದಿದ್ದರೂ ಮುಂಗಾರು ಮತ್ತು ಹಿಂಗಾರು ಮಾರುತಗಳಿಂದ ಮಳೆಯಾಗುತ್ತದೆ. ಕಳೆದ ೫೦ ವರ್ಷಗಳಲ್ಲಿ ಮಳೆಯ ಪ್ರಮಾಣ ಸ್ವಲ್ಪ ವ್ಯತ್ಯಾಸದಲ್ಲಿ ೪೦೦ ರಿಂದ ೭೦೦ ಮಿ.ಮೀ. ಮಳೆಯಾಗುತ್ತಿದೆ. ಉಷ್ಣತೆಯ ವಾರ್ಷಿಕ ಸರಾಸರಿಯಲ್ಲಿ ವ್ಯತ್ಯಾಸಗಳನ್ನು ಗಮನಿಸಬಹುದು. ಡಿಸ್ಸೆಂಬರ್ ಚಳಿಗಾಲದಲ್ಲಿ ಕಡಿಮೆ ಉಷ್ಣಾಂಶ ೧೫.೨ ಡಿಗ್ರಿ ಸೆಲ್ಸಿಯಸ್ ಇದ್ದರೆ, ಬೆಸಿಗೆಯ ಮೇ ತಿಂಗಳಲ್ಲಿ ೩೮.೫ ಡಿಗ್ರಿ ಸೆಲ್ಸಿಯಸ್ ವರೆಗೆ ದಾಖಲಾಗಿದೆ.

ಜಿಲ್ಲೆಯ ಸಿಂದಗಿ, ಮುದ್ದೇಬಿಹಾಳ ಮತ್ತು ಇಂಡಿ ತಾಲೂಕುಗಳಲ್ಲಿ ಅರಣ್ಯ ಪ್ರದೇಶವಿಲ್ಲ. ವಿಜಾಪುರ ತಾಲೂಕಿನಲ್ಲಿ ೮೩೪ ಮತ್ತು ಬಸವನ ಬಾಗೇವಾಡಿ ತಾಲೂಕಿನಲ್ಲಿ ೧,೧೪೩ ಹೆಕ್ಟೆರ್ ನಷ್ಟು ಅರಣ್ಯ ಪ್ರದೇಶವಿದ್ದರೂ ಮಳೆಯ ಪ್ರಮಾಣ ಕಡಿಮೆ ಇರುವ ಕಾರಣ ದಟ್ಟವಾಗಿಲ್ಲ. ಬೆಟ್ಟ ಗುಡ್ಡ ಮತ್ತು ನದಿ ತೀರದ ಕಾಡುಗಳಲ್ಲಿ ಕಕ್ಕೆ, ದಿಂಡಿಲು, ಗಂಧ ಮುಂತಾದ ಮರಗಳು ಕಂಡುಬರುತ್ತವೆ. ಮೈದಾನ ಪ್ರದೇಶದ ಕಾಡುಗಳಲ್ಲಿ ಜಾಲಿ, ಬೇವು, ಹುಣಸೆ, ನೇರಳೆ, ಆಲದ ಮರಗಳು ಅಲ್ಲಲ್ಲಿ ಕಾಣಸಿಗುತ್ತವೆ.

ಇಲ್ಲಿಯ ಅರಣ್ಯ ಪ್ರದೇಶ ಕ್ಷೀಣವಾಗಿರುವುದರಿಂದ ಪ್ರಾಣಿ – ಪಕ್ಷಿಗಳ ಸಂಖ್ಯೆಯಲ್ಲಿಯೂ ಕಡಿಮೆ ಇದೆ. ಕಾಡುಬೆಕ್ಕು, ಕತ್ತೆಕಿರುಬು, ತೋಳ, ನರಿ, ಮುಳ್ಳು ಮತ್ತು ಕಾಡು ಹಂದಿ, ಚಿಗರೆ, ಮೊಲ, ಮಂಗ, ಹಾವು ಹಾಗೂ ನವಿಲು, ಕೌಜುಗ, ಪುರಲೆ ಹಕ್ಕಿ, ಪಾರಿವಾಳ, ಕಲ್ಲುಕೋಳಿ, ಪಾಸ್ಟರ್, ಕಬ್ಬಾರೆ, ಕ್ರೌಂಚ ಮೋದಲಾದ ಪ್ರಾಣಿ-ಪಕ್ಷಿಗಳಿವೆ.

ನದಿಪಾತ್ರದ ಪ್ರದೇಶದಲ್ಲಿ ಫಲವತ್ತತೆಯಿಂದ ಕೂಡಿದ ಕಪ್ಪು ಮಣ್ಣು ಕೃಷಿಗೆ ಹೆಚ್ಚು ಉಪಯುಕ್ತವಾಗಿದೆ. ಜೋಳ ಮತ್ತು ಸಜ್ಜೆ ಈ ಭಾಗದ ಪ್ರಮುಖ ಬೆಳೆಗಳು. ಅಲ್ಲದೇ ಗೋದಿ, ಮೆಕ್ಕೆಜೋಳ, ಸಜ್ಜೆ, ಕುಸಬಿ, ತೊಗರಿ, ಹುರುಳಿ, ಹೆಸರು, ಎಳ್ಳು, ಕಡಲೆ, ಸೂರ್ಯಕಾಂತಿ, ನವಣೆ ಮುಂತಾದವುಗಳನ್ನು ಒಣ ಬೆಸಾಯದಲ್ಲಿ ಹಾಗೂ ಕೆಬ್ಬು, ತರಕಾರಿ ಬೆಳೆಗಳನ್ನು ನೀರಾವರಿಯಲ್ಲಿ ಬೆಳೆಯಲಾಗುತ್ತಿದೆ. ಬೆಳ್ಳುಳ್ಳಿ ಬೆಳೆಯಲ್ಲಿ ವಿಜಾಪುರ ಜಿಲ್ಲೆಯ ನಾಲ್ಕನೆಯ ಮೂರು ಭಾಗದಷ್ಟು ಬಸವನ ಬಾಗೇವಾಡಿ ತಾಲೂಕಿನ ಕೊಡುಗೆಯಾಗಿದೆ.

ಪ್ರಾಗಿತಿಹಾಸ :

ವಿಜಾಪುರ ಜಿಲ್ಲೆ ಬಯಲು ಪ್ರದೇಶವಾಗಿದ್ದರೂ ನದಿ ಪಾತ್ರ ಮತ್ತು ಚಿಕ್ಕಪುಟ್ಟ ಬೆಟ್ಟಗಳ ಆಶ್ರಯದಲ್ಲಿ ಪ್ರಾಚೀನ ಕಾಲದ ಅವಶೇಷೆಗಳು ಕಂಡುಬರುತ್ತವೆ. ಈ ಭಾಗದ ಚಾರಿತ್ರಿಕ ಅಂಶಗಳನ್ನು ಗಮನಿಸಿದಾಗ ೨ನೆಯ ಶತಮಾನದ ಮಧ್ಯಭಾಗದಲ್ಲಿ ಟಾಲೆಮಿಯು ರಚಿಸಿದ ಜಿಯಾಗ್ರಫಿ ಎಂಬ ಗ್ರಂಥದಲ್ಲಿ ಇಂಡಿ, ಕಲಕೇರಿ, ಬಾದಾಮಿ, ಪಟ್ಟದಕಲ್ಲು ಮೊದಲಾದ ಸ್ಥಳಗಳನ್ನು ಉಲ್ಲೇಖಿಸಲಾಗಿದೆ. ಆ ಕಾಲದಲ್ಲಿ ಇವು ಪ್ರಮುಖ ವ್ಯಾಪಾರ ಕೇಂದ್ರಗಳಾಗಿದ್ದವು. ಅದರ ನಂತರ ಕಳೆದ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ ಅಧಿಕಾರಿ ರಾಬರ್ಟ ಬ್ರೂಸ್ ಫುಟ್ ಎಂಬುವರು ಕ್ಷೇತ್ರಾನ್ವೇಷಣೆಯ ಮೂಲಕ ಪ್ರಾಚೀನ ಮಾನವನು ಬಳಸಿ ಬಿಟ್ಟುಹೋದ ಅವಶೇಷಗಳನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಗಿದರು. ಈ ಸಂಶೋಧನೆಯ ಫಲವಾಗಿ ೩೦.೫.೧೮೬೩ರಲ್ಲಿ ಮದ್ರಾಸ್ ಹತ್ತಿರ ಪಲ್ಲಾವರಾಮ್‌ ಪ್ರಥಮವಾಗಿ ಪ್ರಾಗಿತಿಹಾಸ ಮಾನವನ ಅತ್ಯಂತ ಹಳೆಯದಾದ ಕಲ್ಲಿನ ಉಪಕರಣಗಳನ್ನು  ಬೆಳಕಿಗೆ ತಂದರು. ತದನಂತರದಲ್ಲಿ ಅದಕ್ಕೆ ಸರಿಹೋಗಬಹುದಾದ ಉಪಕರಣವನ್ನು ಮಲಪ್ರಭಾ ನದಿ ಪ್ರದೇಶದಲ್ಲಿಯ ಖ್ಯಾಡ ಮತ್ತು ಡಾಣಕಶಿರೂರ ಎಂಬಲ್ಲಿ ಶೋಧಿಸಿದರು. ಇವು ಸುಮಾರು ೨ ಲಕ್ಷ ವರ್ಷಗಳ ಮಾನವ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಅವಶೇಷಗಳಾಗಿದ್ದವು. ೧೯೫೦ರ ದಶಕದಲ್ಲಿ ಆರ್.ವಿ. ಜೋಶಿಯವರು ಇಡೀ ನದಿಯ ಬಯಲು ಪ್ರದೇಶವನ್ನು ಗಮನದಲ್ಲಿಟ್ಟುಕೊಂಡು ಅನ್ವೇಷನೆ ಮಾಡಿ, ತೊರಗಲ್ಲಿನಿಂದ ಕೂಡಲಸಂಗಮದವರೆಗೆ ಸುಮಾರು ೨೦ಕ್ಕೂ ಹೆಚ್ಚು ನೆಲೆಗಳನ್ನು ಶೋಧಿಸಿದರು.

ಸುಮಾರು ೧೯೫೭ರಲ್ಲಿ ಕೇಂದ್ರ ಸರಕಾರದ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಔರಂಗಬಾದ್ ವೃತ್ತವು ವಿಜಾಪುರ ಜಿಲ್ಲೆಯಲ್ಲಿ ಪ್ರತಿ ಹಳ್ಳಿಯಲ್ಲೂ ಕ್ಷೇತ್ರಕಾರ್ಯ ಕೈಗೊಂಡು ಪ್ರಾಚೀನ ನೆಲೆಗಳನ್ನು ಶೋಧಿಸುವ ಕಾರ್ಯವನ್ನು ಹಮ್ಮಿಕೊಳ್ಳಲಾಯಿತು. ಈ ಯೋಜನೆಯಲ್ಲಿ ಡಾ. ಅ. ಸುಂದರ ಅವರು ಇಂಡಿ, ಸಿಂದಗಿ ಮತ್ತು ಮುದ್ದೇಬಿಹಾಳ ತಾಲೂಕಿನ ಪ್ರತಿಗ್ರಾಮ ಹಾಗೂ ಪರಿಸರದಲ್ಲಿ ೧೯೬೩ರ ವರೆಗೆ ವ್ಯಾಪಕವಾದ ಕ್ಷೇತ್ರಕಾರ್ಯವನ್ನು ಕೈಗೊಂಡು ವಿವಿಧ ಪ್ರಕರದ ಪುರಾತತ್ವ ಅವಶೇಷಗಳನ್ನು ಹೊಂದಿದ ನೆಲೆಗಳ ವರದಿಯನ್ನು ತಯಾರಿಸಿ ಸಲ್ಲಿಸಿದರು. ಈ ಪ್ರಯತ್ನದಲ್ಲಿ ಜಿಲ್ಲೆಯ ಮಟಕದೇವನ ಹಳ್ಳಿ ಮತ್ತು ಸಾಲವಾಡಗಿಯಲ್ಲಿ ಮಧ್ಯ ಅಂತ್ಯ ಹಳೆಶಿಲಾಯುಗದ ನೆಲೆಗಳನ್ನು ಶೋಧಿಸಿದರು.

ಇಂಡಿ ತಾಲೂಕಿನ ಧೂಳಖೇಡ, ಚಣೆಗಾಂವ, ನಾಗರಾಳ, ರೋಡಗಿ, ಹಿಂಗಣಿ, ಖ್ಯಾಡಗಿ, ಮಸಳಿ ಬ, ಜೀರಂಕಲಗಿ ಸಿಂದಗಿ ತಾಲೂಕಿನ ಕುಮಸಿ, ಚಾಂದಕವಟೆಗಳಲ್ಲಿ ಸೂಕ್ಷ್ಮಶಿಲಾಯುಗ, ನೂತನಶಿಲಾ ಶಿಲಾ-ತಾಮ್ರಯುಗ ಹಾಗೂ ಬೃಹತ್ ಶಿಲಾಯಗದ, ನೆಲೆಗಳನ್ನು ಬೆಳಕಿಗೆ ತಂದರು. ಅಲ್ಲದೆ ಇದರೊಂದಿಗೆ ಆದಿ ಇತಿಹಾಸ ಕಾಲದ ನೆಲೆಗಳು, ದೇವಾಲಯ ಮತ್ತು ಮೂರ್ತಿಶಿಲ್ಪಗಳೂ ಶೋಧವಾಗಿವೆ. ೧೯೭೦ರಲ್ಲಿ ಆರ್.ಎಸ್. ಪಪ್ಪು ಅವರು ಕೃಷ್ಣಾ ನದಿ ಪ್ರದೇಶದಲ್ಲಿ ಕ್ಷೇತ್ರಕಾರ್ಯ ಮಾಡಿ ಆದಿಹಳೆ ಶಿಲಾಯುಗದ ನೆಲೆಗಳನ್ನು ಶೋಧಿಸಿದರು. ಬಾಗಲಕೋಟೆ ಸಮಿಪದಲ್ಲಿರುವ ಆದಿಹಳೆ ಶಿಲಾಯುಗದ ನೆಲೆ ಅನಗವಾಡಿಯಲ್ಲಿ ಉತ್ಖನನ ಕೈಗೊಂಡರು. ೧೯೯೨ರಲ್ಲಿ ನಾನು ಬಸವನ ಬಾಗೇವಾಡಿ ತಾಲೂಕಿನ ಗ್ರಾಮಗಳನ್ನು ಸಂಶೋಧನೆ ಮಾಡಿದಾಗ, ಇಂಗಳೇಶ್ವರ ದಲ್ಲಿ ಮಧ್ಯ-ಅಂತ್ಯ ಹಳೆಶಿಲಾಯುಗ, ಡೋಣೂರು, ಮತ್ತು ಸಾತಿಹಾಳದಲ್ಲಿ ಸೂಕ್ಷ್ಮಶಿಲಾಯುಗದ ನೆಲೆಗಳು ಬೆಳಕಿಗೆ ಬಂದವು. ಅಲ್ಲದೇ ಆದಿ ಮತ್ತು ಮಧ್ಯ ಇತಿಹಾಸ ಕಾಲದ ನೆಲೆಗಳಾದ ಇಂಗಳೇಶ್ವರ, ಕೊಲ್ಹಾರ, ಡೋಣೂರು, ನರಸಲಗಿ, ಬಸವನ ಬಾಗೇವಾಡಿ, ಮನಗೂಳಿ, ಮುತ್ತಗಿ, ವಡ್ಡವಡಿಗಿ, ಹೂವಿನ ಹಿಪ್ಪರಗಿ, ಹೆಬ್ಬಾಳ ಗ್ರಾಮಗಳಲ್ಲಿ ಅನೇಕ ಪ್ರಕಾರದ ಪಾತ್ರಾವಶೇಷಗಳು ಕಂಡುಬಂದಿವೆ.ದ ೧೯೯೬-೯೮ರಲ್ಲಿ ಅ. ಸುಂದರ ಅವರ ಮಾರ್ಗದರ್ಶನದಲ್ಲಿ ಆರ್. ಎಸ್. ಬಿರಾದಾರ ಅವರು ಇಂಡಿ, ಸಿಂದಗಿ ಮತ್ತು ಮುದ್ದೇಬಿಹಾಳ ತಾಲೂಕುಗಳಲ್ಲಿ ಕೈಗೊಂಡ ಕ್ಷೇತ್ರಾನ್ವೇಷಣೆಯಿಂದ ಆದಿ – ಮಧ್ಯ ಹಳೆಶಿಲಾಯುಗ, ಸೂಕ್ಷ್ಮಶಿಲಾಯುಗ. ಬೃಹತ್‌ಶಿಲಾಯುಗ ಮತ್ತು ಆದಿ ಇತಿಹಾಸ ಕಾಲಕ್ಕೆ ಸೇರಿದ ನೆಲೆಗಳನ್ನು ಶೋಧಿಸಿದರು. ೨೦೦೮ರಲ್ಲಿ ಡಾ. ಆ. ಸುಂದರ ಅವರು ಬಾಗೇವಾಡಿಯಿಂದ ವಾಯುವ್ಯ ಭಾಗಕ್ಕೆ ಸುಮಾರು ೫ ಕಿ.ಮೀ. ದೂರದಲ್ಲಿರುವ ಮಸಬಿನಾಳ ರಸ್ತೆಯ ಹೊಲದಲ್ಲಿ ಮಧ್ಯ ಮತ್ತು ಅಂತ್ಯಹಳೆ ಶಿಲಾಯುಗಕ್ಕೆ ಸೇರಿದ ಅವಶೇಷಗಳನ್ನು ಗುರುತಿಸಿದ್ದಾರೆ.

ಆದಿಹಳೆ ಶಿಲಾಯುಗ (ಸು.,೦೦,೦೦೦,೦೦,೦೦೦) : ಆದಿಹಳೆ ಶಿಲಾಯುಗದ ನೆಲೆಗಳು ಅತಿ ವಿರಳವಾಗಿ ಕಂಡುಬಂದರೂ ಮಾನವನು ರಚಿಸಿದ ಉಪಕರಣಗಳಿಂದ ಆತನ ದೈನಂದಿನ ಚಟುವಟಿಕೆಗಳನ್ನು ಗ್ರಹಿಸಬಹುದಾಗಿದೆ. ಈ ಜನರು ಸಾಮಾನ್ಯವಾಗಿ ಗವಿಗಳಲ್ಲಿ ಮತ್ತು ನೀರಿನ ಅನುಕೂಲತೆಗಳಿರುವ ಬೆಟ್ಟ-ಗುಡ್ಡಗಳಲ್ಲಿ ಮತ್ತು ನದಿ ಹಳ್ಳಗಳ ಹತ್ತಿರದ ಆಶ್ರಯಗಳಲ್ಲಿ ವಾಸಮಾಡಿಕೊಂಡಿದ್ದರು. ಆಹಾರಕ್ಕೊಸ್ಕರ ಕಲ್ಲಿನ ಉಪಕರಣಗಳಿಂದ ಗೆಡ್ಡೆಗೆಣಸು ಮತ್ತು ಫಲ ಪುಷ್ಪಗಳನ್ನು ಸಂಗ್ರಹಿಸುತ್ತಿದ್ದರು. ಈ ಉಪಕರಣಗಳಲ್ಲಿ ಮುಖ್ಯವಾಗಿ ಅಂಜೂರು ಹಣ್ಣಿನ ಆಕೃತಿಯ ಚಪ್ಪಟೆ ಕೈಗೊಡಲಿ (Hand Axes)ಗಳು, ಪ್ರಾಣಿಗಳಿಗೆ ದೂರದಿಂದ ಗುರಿಯಿಟ್ಟು ಹೊಡೆಯಲು ವರ್ತುಲ ಚಕ್ರಗಳಂಥ(Ovates) ಉಪಕರಣಗಳು ಮತ್ತು ಬೇಟೆಯಾಡಿದ ಪ್ರಾಣಿಗಳ ಎಲುಬುಗಳನ್ನು ಸೀಳಲು ಸೀಳುಗತ್ತಿ (Cleavers)ಗಳನ್ನು ಬಳಸುತ್ತಿದ್ದರು. ಕೆಂಪು ಮರಳು ಕಲ್ಲಿನಲ್ಲಿ ತಯಾರಿಸಿದ ಇಂಥ ಕ್ರಮಬದ್ಧವಾದ ಆಯುಧಗಳು ಬಾದಾಮಿ ಪರಿಸರದಲ್ಲಿ ಕಂಡುಬಂದಿವೆ. ಆದಿಹಳೆ ಶಿಲಾಯುಗಕ್ಕೆ ಸೇರಿದ ಅಬ್‌ವಿಲ್‌ ಮತ್ತು ಅಶೂಲ್‌ ಮಾದರಿಯ ಉಪಕರಣಗಳು ಪ್ರಾನ್ಸ ದೇಶದಲ್ಲಿಯ ಸಾಮ್ ನದಿ ಬಯಲಿನ ಸೆಂಟ್ ಅಬೆವಿಲ್ ಮತ್ತು ಅಶೂಲ್ ಎಂಬ ಸ್ಥಳಗಳ್ಲಲಿ ಮೊದಲು ಶೋಧಿಸಲಾಗಿದೆ. ಇಂಥ ಉಪಕರಣಗಳನ್ನು ಮಲಪ್ರಭಾ ನದಿ ಬಯಲಿನ ಖ್ಯಾಡ, ಢಾಣಕ್‌ಶಿರೂ, ಕೃಷ್ಣಾ ನದಿ ಬಯಲಿನ ಆಲಮಟ್ಟಿ, ಕೊಲ್ಹಾರ, ಕಾತರಕಿ ಮತ್ತು ಯಲಗೂರುಗಳಲ್ಲಿ ಗುರುತಿಸಲಾಗಿದೆ.

ಮಧ್ಯಅಂತ್ಯ ಹಳೆಶಿಲಾಯುಗ (ಸು.೭೦,೦೦೦೧೦,೦೦೦) : ಕ್ರಮೇಣ ಆದಿಶಿಲಾಯುಗದ ಹಂತದಿಂದ ಮಾನವನ ನಿತ್ಯ ಜೀವನದಲ್ಲಿ ಪರಿವರ್ತನೆಯಾಗುತ್ತ ಆತನು ನಿರ್ಮಿಸುತ್ತಿದ್ದ ಕಲ್ಲಿನ ಉಪಕರಣಗಳಲ್ಲಿ ಬದಲಾವಣೆಯಾಗುತ್ತ ಬಂತು. ಈ ಬದಲಾವಣೆಯ ಅಂಶಗಳನ್ನು ಅನಗವಾಡಿ ಉತ್ಖನನದಲ್ಲಿ ದೊರೆತ ಉಪಕರಣಗಳಲ್ಲಿ ಗುರುತಿಸಲಾಗಿದೆ. ಇಲ್ಲಿ ಮರಳು ಕಲ್ಲಿನ ಬದಲಾಗಿ ಜಾಸ್ಪರ್ ಮತ್ತು ಚರ್ಟ ಕಲ್ಲುಗಳನ್ನು ಉಪಕರಣಗಳ ತಯಾರಿಕೆಗೆ ಬಳಸಲಾಗಿದೆ. ಇವು ಮೊದಲಿನ ದೊಡ್ಡ ವರಟು ಕಲ್ಲುಗಳಿಗೆ ಬದಲಾಗಿ ಚಕ್ಕೆಗಳನ್ನು ಎಬ್ಬಿಸಿ ತೆಳ್ಳಗಿನ ಹೆರೆಯುವ ಚಕ್ಕೆಗಳು (Scrapers), ನೀಳವಾದ ಉದ್ದನೆಯ ಚಕ್ಕೆಗಳು (Blades), ಚೂಪಾದ ಕೊರೆಯುವ ಮೊನೆಗಳು (Burins), ತೂತು ಮಾಡಲು ಅನುಕೂಲವಾಗುವಂಥ ಮೊನೆಗಳು (Points) ಮುಂತಾದ ಉಪಕರಣಗಳು ಬಳಕೆಗೆ ಬಂದವು, ಇಂಥ ಉಪಕರಣಗಳನ್ನು ಹೊಂದಿದ ೫ ನೆಲೆಗಳನ್ನು ಮುದ್ದೇಬಿಹಾಳ ತಾಲೂಕಿನ ಸಾಲವಾಡಿಗಿಯಲ್ಲಿ ೧೯೫೮-೫೯ರಲ್ಲಿ ಅ. ಸುಂದರ ಅವರು ಶೋಧಿಸಿದರು. ಎಂ. ಶೇಷಾದ್ರಿ ಮತ್ತು ಕೆ. ಪದ್ದಯ್ಯ ಅವರು ಈ ನೆಲೆಗಳನ್ನು ಕುರಿತು ವಿಶೇಷ ಅಧ್ಯಯನವನ್ನು ಕೈಗೊಂಡಿದ್ದಾರೆ. ಅತ್ಯುತ್ತಮ ಜಾತಿಯ ಕಪ್ಪು ನಸುಗೆಂಪಿನ ಚರ್ಟ ಮತ್ತು ಜಾಸ್ಟರ್ ಕಲ್ಲುಗಳಲ್ಲಿ ಉಪಕರಣಗಳನ್ನು ತಯಾರಿಸಲಾಗಿದೆ. ಉಪಕರಣಗಳನ್ನು ತಯಾರಿಸುವಾಗ ಎಬ್ಬಿಸಿದ ಚಕ್ಕೆಗಳು ಹೆರಳವಾಗಿ ಹರಡಿರುವುದರಿಂದ ಈ ನೆಲೆಗಳು ಉಪಕರಣಗಳನ್ನು ತಯಾರಿಸುವ ಕಾರ್ಯಗಾರವಾಗಿದ್ದವೆಂಬ ಅಭಿಪ್ರಾಯಕ್ಕೆ ಬರಲಾಗಿದೆ.

ಬಸವನ ಬಾಗೇವಾಡಿಯ ಆಗ್ನೆಯಕ್ಕೆ ಮತ್ತು ಈ ತಾಲೂಕಿನ ಇಂಗಳೇಶ್ವರ ಗ್ರಾಮದ ದಕ್ಷಿಣಕ್ಕೆ ಗುಡ್ಡದ ಈಶಾನ್ಯ ಭಾಗದಲ್ಲಿ ಹೆರೆಯುವ, ಕೊರೆಯುವ, ಕತ್ತರಿಸುವ ಕಲ್ಲಿನ ಉಪಕರಣಗಳು ಹಾಗೂ ಅವುಗಳ ತಯಾರಿಕೆಯಲ್ಲಿ ಉಂಟಾದ ಚಕ್ಕೆಗಳು ಹೇರಳವಾಗಿ ಹರಡಿವೆ. ಇವುಗಳನ್ನು ಸ್ವಲ್ಪ ಕಪ್ಪು ಹಸುರಿನ ಗಿಡದಂತೆ ವಕ್ರ ರೇಖೆಯುಳ್ಳ ಬಿಳಿ ಚರ್ಟ್(Whitish Chert)  ಕಲ್ಲಿನಲ್ಲಿ ತಯಾರಿಸಲಾಗಿದೆ. ಇವುಗಳನ್ನು ತಯಾರಿಸಲು ಅಲ್ಲಿಯೇ ಹರಡಿರುವ ಗಟ್ಟಿ ಕಲ್ಲುಗಳನ್ನು ಬಳಸಿದ್ದರಿಂದ ಪ್ರಮುಖ ಕಾರ್ಯಗಾರದ ನೆಲೆಗಳಾಗಿದ್ದವೆಂದು ಸ್ಪಷ್ಟವಾಗುತ್ತದೆ. ಈ ಉಪಕರಣಗಳ ಜೊತೆಗೆ ಒಂದು ಪಡಿಯಚ್ಚು ತರಹದ ಎಲುಬಿನ ಸಣ್ಣ ಚೂರು ಕೂಡಾ ದೊರೆತಿರುವುದರಿಂದ ಆದಿ ಮಾನವರು ಅಲ್ಲಿಯ ಬೆಟ್ಟದ ಆಶ್ರಯವನ್ನು ತಮ್ಮ ವಾಸಸ್ಥಾನವನ್ನಾಗಿ ಮಾಡಿಕೊಂಡಿದ್ದರೆಂದು ಹೇಳಬಹುದು.

ಇಂಗಳೇಶ್ವರ ನೆಲೆಯಲ್ಲಿ ಕಂಡುಬಂದಿರುವ  ಉಪಕರಣಗಳಲ್ಲಿ ತೆಳ್ಳನೆಯ ಉದ್ದ ಹಾಗೂ ಅಗಲವಾದ ಸಮಾನಾಂತರ ಅಂಚುಗಳುಳ್ಳ ಚಕ್ಕೆಗಳನ್ನು ಎಬ್ಬಿಸಿದ ಪಟ್ಟಿಗಳುಳ್ಳ ತಿರುಳುಗಲ್ಲು (Fluted Core) ಗಳು ಗಣನಿಯ ಸಂಖ್ಯೆಯಲ್ಲಿವೆ. ಇವುಗಳಿಗೆ ಅಂಕು ಡೊಂಕಾದ ಬೆನ್ನ ಪಟ್ಟಿಕೆಗಳಿಲ್ಲ. ಆದ್ದರಿಂದ ಈ ನೀಲ ಚಕ್ಕೆಗಳನ್ನು ಕ್ರಿಸ್ಟಲ್  ಗೈಡಲ್ ರಿಡ್ಜ್ (Crestel guidle  ridge) ಎಂಬ ತಂತ್ರವನ್ನು ಬಳಸಲಾಗಿದೆ ಎಂದು ಹೇಳಲು ಪುರಾವೆಗಳಲ್ಲ. ಇದರಿಂದ ಇಷ್ಟು ದೊಡ್ಡ ದೊಡ್ಡ ನೀಳ ಚಕ್ಕೆಗಳನ್ನು ಎಬ್ಬಿಸಲು ಬಳಸಿದ ತಂತ್ರದ ಕುರುಹುಗಳನ್ನು ಶೋಧಿಸಿಬೇಕಾಗಿದೆ.

ಸಾಲವಾಡಿಗಿ ಮತ್ತು ಇಂಗಳೇಶ್ವರದ ಉಪಕರಣಗಳನ್ನು ತುಲನಾತ್ಮಕವಾಗಿ ಅಧ್ಯಯನಕ್ಕೆ ಒಳಪಡಿಸಿದಾಗ, ಇಂಗಳೇಶ್ವರದ ನೆಲೆ ಅಂತ್ಯ ಹಳೆಶಿಲಾಯುಗದ ಉಪಕರಣಗಳನ್ನು ತಯಾರಿಸುವ ಪ್ರಾಥಮಿಕ ಹಂತದ್ದೆಂದು ವಿದ್ವಾಂಸರ ಅಭಿಪ್ರಾಯವಾಗಿದೆ. ಇದರ ಮುಂದಿನ ಸುಧಾರಿತ ಹಂತವನ್ನು ಸಾಲವಾಡಿಗಿಯ ನೆಲೆಯಲ್ಲಿ ಗುರುತಿಸಬಹುದಾಗಿದೆ.

ಮಧ್ಯ-ಅಂತ್ಯ ಹಳೆಶಿಲಾಯುಗದ ಮಾನವ ಆಹಾರ ಸಂಗ್ರಹಣೆಯ ಜೊತೆಗೆ ರೇಖಾ ಚಿತ್ರಗಳನ್ನು ಬಿಡಿಸುವ ಹವ್ಯಾಸವನ್ನು ಬೆಳೆಸಿಕೊಂಡಿದ್ದನು. ಬಂಡೆಗಳ ಮೇಲೆ ಕೊರೆಯುವ ಕಲ್ಲಿನ ಉಪಕರಣದಿಂದ ಪ್ರಾಣಿಗಳ ಗೀರು ಚಿತ್ರವನ್ನು ಹಾಗೂ ಗವಿಗಳಲ್ಲಿ ಖನಿಜ ಮತ್ತು ಸಸ್ಯ ಬಣ್ಣಗಳಿಂದ ರೇಖಾ ಚಿತ್ರವನ್ನು ಬಿಡಿಸಲಾಗುತ್ತಿತ್ತು. ಸ್ಪೇನ್ ದೇಶದ ಅಲ್ತಮಿರಾದಲ್ಲಿ ಕಾಡುಕೋಣ ಮತ್ತು ಗೂಳಿಗಳ ಗವಿವರ್ಣ ಚಿತ್ರಗಳು ಪ್ರಸಿದ್ಧವಾದವು. ಬಾದಾಮಿ ಗುಳೇದಗುಡ್ಡ  ಹಾದಿಯಲ್ಲಿರುವ ಕುಟಕನಕೇರಿಯ ಬೆಟ್ಟಗಳಲ್ಲಿ ಇಂಥ ಚಿತ್ರಗಳಲ್ಲದೇ ಮನುಷ್ಯರ ಆಕೃತಿಯನ್ನು ಬಿಡಿಸಲಾಗಿದೆ. ಇವುಗಳಲ್ಲಿ ಕೆಲವು ಅಂತ್ಯ ಹಳೆಶಿಲಾಯುಗ ಹಂತಕ್ಕೆ ತೆಗೆದಿರಬಹುದು.

ಈ ಪ್ರದೇಶದಲ್ಲಿ ಮಧ್ಯ-ಅಂತ್ಯ ಹಳೆಶಿಲಾಯುಗಕ್ಕೆ ಸೇರಿದ ಉಪಕರಣಗಳು ಇಂಡಿ ತಾಲೂಕಿನ ಚನ್ನೆಗಾಂವ ಬಾಗೇವಾಡಿ ತಾಲೂಕಿನ ಅಮರಗೋಳ, ಆಲಮಟ್ಟಿ, ಇಂಗಳೇಶ್ವರ, ಕೊಲ್ಹಾರ, ಗೊಳಸಂಗಿ, ಬಸವನ ಬಾಗೇವಾಡಿ, ಸಾತಿಹಾಳ ವಿಜಾಪುರ ತಾಲೂಕಿನ ಹೊನ್ನಳ್ಳಿ ಮುದ್ದೇಬಿಹಾಳ ತಾಲೂಕಿನ ಕುಚಬಾಳ, ಯಲಗೂರು, ಶೆಲ್ಲಗಿ, ಸಾಲವಾಡಿಗಿ ಹಾಗೂ ಸಿಂದಗಿ ತಾಲೂಕಿನ ಭಂಟನೂರ ನೆಲೆಗಳಲ್ಲಿ ಕಂಡುಬಂದಿವೆ.

ಸೂಕ್ಷ್ಮ ಶಿಲಾಯುಗ (ಸು. ೧೦,೦೦೦,೦೦೦) : ಅಂತ್ಯ ಹಳೆಶಿಲಾಯುಗದ ಮುಂದಿನ ಹಂತವನ್ನು ಸೂಕ್ಷ್ಮ ಶಿಲಾಯುಗವೆಂದು ಕರೆಯಲಾಗಿದೆ. ಈ ಕಾಲದಲ್ಲಿ ಮಾನವನ್ನು ಅತಿ ಸಣ್ಣ ಅಂದರೆ ೧ ಸೆಂ.ಮೀ. ಉದ್ದ ಮತ್ತು ೩ರಿಂದ ೫ ಸೆಂ.ಮೀ. ಅಗಲದ ಉಪಕರಣಗಳನ್ನು ಚಾಲ್ಸಿಡೋಣಿ (Chalcedony), ಅಗೆಟ್ (Agate) ಉತ್ತಮ ಜಾತಿಯ ಕಲ್ಲುಗಳಲ್ಲಿ ತಯಾರಿಸುತ್ತಿದ್ದನು. ತಯಾರಿಸಿದ ಉಪಕರಣಗಳನ್ನು ಒಂದರ ಪಕ್ಕದಲ್ಲೊಂದನ್ನಿಟ್ಟು ಕಟ್ಟಿಗೆಯ ತುಂಡಿನ ಅರ್ಧಭಾಗದುದ್ದಕ್ಕೂ ಇಲ್ಲವೆ ರೋಮನ್ ವಿ(V) ಅಕ್ಷರದ ರೀತಿಯಲ್ಲಿರುವ ಜಿಂಕೆಯ ಕೋಡಿನಲ್ಲಿ ಜೋಡಿಸಿ, ಅದನ್ನು ಸಸ್ಯಗಳನ್ನು ಕೊಯ್ಯವುದಕ್ಕೆ ಬಳಸಲಾಗುತ್ತಿತ್ತು. ವೃತ್ತಾಕಾರ ಗುಡಿಸಲುಗಳನ್ನು ಕಟ್ಟಕೊಂಡು ಒಂದೆಡೆ ವಾಸಿಸುತ್ತ ಭತ್ತ, ಗೋದಿ ಮೊದಲಾದ ಕಾಳುಕಡಿಗಳನ್ನು ಸಂಗ್ರಹಿಸುವುದರ ಜೊತೆಗೆ ಅವುಗಳನ್ನು ಬೆಳೆಸಲು ಪ್ರಯತ್ನಗಳು ನಡೆಯುತ್ತಿದ್ದವು. ಪ್ರಾಣಿಗಳ ಎಲುಬುಗಳಿಂದ ಕಿವಿಯೋಲೆ, ಕೊರಳ ಆಭರಣಗಳನ್ನು ತಯಾರಿಸುವುದು, ಸೂರ್ಯನ ಬೆಳಕಿನಲ್ಲಿ ಒಣಗಿಸಿದ ಪಾತ್ರೆಗಳನ್ನು ಮಾಡುವುದು ಹಾಗೂ ಚಾಪೆ ಹೆಣಿಕೆ ಮುಂತಾದ ದಿನನಿತ್ಯಕ್ಕೆ ಬೇಕಾದ ಉಪಕರಣಗಳನ್ನು ತಯಾರಿಸಲು ಸಭಲನಾಗಿದ್ದನು. ಉತ್ತರ ಭಾರತದಲ್ಲಿ ಅಲಹಾಬಾದಿನ ಉತ್ತರಕ್ಕೆ ಬೇಲಾನ ನದಿ ಪ್ರದೇಶದಲ್ಲಿ ಈ ಹಂತದ ನೆಲೆಗಳನ್ನು ಶೋಧಿಸಿ ಉತ್ಖನನ ಮಾಡುವ ಮೂಲಕ ಅಭಿವೃದ್ಧಿಯ ಹಂತಗಳನ್ನು ಕಂಡುಕೊಳ್ಳಲಾಗಿದೆ.

ವಿಜಾಪುರ ಜಿಲ್ಲೆಯ ಹಿಂಗಣಿ, ಇಂಗಳೇಶ್ವರ, ಡೋಣೂರು, ಸಾತಿಹಾಳ ಮೊದಲಾದ ಸ್ಥಳಗಳಲ್ಲಿ ಈ ಹಂತದ ನೆಲೆಗಳನ್ನು ಗುರುತಿಸಲಾಗಿದೆ. ಡೋಣಿ ನದಿ ಮತ್ತು ಅದರ ಆಸುಪಾಸಿನಲ್ಲಿ ಸೂಕ್ಷ್ಮ ಶಿಲಾಯುಗದ ಶಿಲೆಯ ಉಪಕರಣಗಳು, ಮಡಿಕೆ ಚೂರು ಮತ್ತು ಮೂಳೆಯ ಚೂರುಗಳು ಕಂಡುಬಂದಿವೆ. ಈ ಮೂಳೆಗಳ ಒಳಭಾಗವೆಲ್ಲವೂ ಸುಣ್ಣಾಂಶ ತುಂಬಿದ್ದು, ನೋಡುವುದಕ್ಕೆ ಸುಣ್ಣದ ಗಟ್ಟಿಯಂತೆ ಕಾಣುತ್ತವೆ. ಇವುಗಳನ್ನು ಪರಿಶೀಲಿಸಿದಾಗ, ಅವು ಸೂಕ್ಷ್ಮಶಿಲಾ ಉಪಕರಣಗಳ ಜೊತೆಗೆ ದೊರೆತಿರುವುದರಿಂದ ಆದಿ ಮಾನವನು ಬೇಟೆಯಾಡಿದ ಅಸ್ಥಿ ಅವಶೇಷಗಳಿರಬಹುದೆಂದು ಊಹೆಗೆ ಎಡೆಮಾಡಿಕೊಡುತ್ತವೆ. ತೀರ ಚಿಕ್ಕ ಮೂಳೆಯಾಗಿರುವುದರಿಂದ ತಜ್ಞರ ಪರೀಕ್ಷೆಯಿಂದಲ್ಲದೆ ಯಾವ ಪ್ರಾಣಿಗಳದ್ದೆಂದು ಗುರುತಿಸಿಲು ಸಾಧ್ಯವಾಗುವುದಿಲ್ಲ. ನದಿ ಪಾತ್ರದಲ್ಲಿ ಕಾಣಸಿಗುವ ಕಲ್ಲಿನ ಉಪಕರಣಗಳು ಸಪೂರವಾದ ನೀಳವಾದ ಚಕ್ಕೆಗಳು, ಕೊರೆಯುವ ಉಪಕರಣಗಳು, ಮೊನೆಗಳು, ಅರ್ಧ ಚಂದ್ರಾಕೃತಿಯ, ತ್ರಿಕೋನಾಕೃತಿಯ ಮತ್ತು ಟ್ರೆಪಿಜಿಯಮ್ ಆಕೃತಿಯ ಉಪಕರಣಗಳು, ಬಾಣದ ಮೊನೆಗಳು ಮುಂತಾದವುಗಳನ್ನು ಚರ್ಟ, ಬ್ಯಾಂಡೆಡ್, ಅಗೆಟ್ ಇತರೆ ಉತ್ತಮ ಜಾತಿಯ ಕಲ್ಲುಗಳಿಂದ ತಯಾರಿಸಲಾಗಿದೆ. ನೀಳ ಚಕ್ಕೆಗಳು ಗಣನಿಯ ಪ್ರಮಾಣದಲ್ಲಿರುವುದರಿಂದ ಪ್ರಾಯಶಃ  ಹತ್ತಿರದಲ್ಲಿಯೇ ಸೂಕ್ಷ್ಮ ಶಿಲಾಯುಗ, ನೂತನ ಶಿಲಾಯುಗ, ಇಲ್ಲವೆ ಶಿಲಾ-ತಾಮ್ರಯುಗದ ಜನವಾಸ್ತವ್ಯದ ನೆಲೆ ಇದ್ದು, ಆಯುಧೋಪಕರಣಗಳಿಗೆ ಬೇಕಾದ ಸೂಕ್ಷ್ಮವಾದ ಚಕ್ಕೆ ಗಳನ್ನು ತಯಾರಿಸುವ ಪ್ರಮುಖ ಕಾರ್ಯಗಾರವಾಗಿರಬೆಕು. ಇದೇ ಪ್ರಕಾರದ ಉಪಕರಣಗಳು ಸಾತಿಹಾಳ ಗ್ರಾಮದ ಬೆಟ್ಟದ ಆಶ್ರಯ ಮತ್ತು ಅಲ್ಲಿ ಹರಿಯುವ ಹಳ್ಳದ ಅಕ್ಕಪಕ್ಕದಲ್ಲಿ ಕಾಣಸಿಗುತ್ತವೆ.

ಇಂಗಳೇಶ್ವರ ಗ್ರಾಮದ ದಕ್ಷಿಣಕ್ಕಿರುವ ಬೆಟ್ಟದ ಉತ್ತರ ಭಾಗದಲ್ಲಿ ಮಧ್ಯ-ಅಂತ್ಯ ಹಳೆ ಶಿಲಾಯುಗದ ಅವಶೇಷಗಳಿದ್ದರೆ, ಅದರ ದಕ್ಷಿಣ ಭಾಗದಲ್ಲಿ ಬಸವನ ಬಾಗೇವಾಡಿ- ಇಂಗಳೇಶ್ವರ ರಸ್ತೆಯ ಎಡ ಬಲ ವಿಶಾಲವಾದ ಜಾಗದಲ್ಲಿ ಸೂಕ್ಷ್ಮಶಿಲಾಯುಗ, ನೂತನ ಶಿಲಾಯುಗ ಮತ್ತು ಶಿಲಾ ತಾಮ್ರಯುಗಕ್ಕೆ ಸೇರಿದ ವಿವಿಧ ಪ್ರಕಾರದ ಉಪಕರಣಗಳು ಹರಡಿವೆ. ಕೆಮ್ಮಣ್ಣು ಲೇಪನವುಳ್ಳ ಚರ್ಟ್ ಕಲ್ಲುಗಳೊಂದಿಗೆ ಉಪಕರಣಗಳ ತಯಾರಿಕೆಗೆ ಬಳಸಿದ ಚಕ್ಕೆಗಳನ್ನು ಎಬ್ಬಿಸಿದ ಕಲ್ಲುತುಂಡುಗಳೇ ವಿಶೇಷವಾಗಿವೆ. ಕುಚಬಾಳ, ಮಟಕದೇವನಹಳ್ಳಿ ದೇವೂರುಗಳಲ್ಲಿ ವಿವಿಧ ಪ್ರಕಾರದ ಉಪಕರಣಗಳೊಂದಿಗೆ ಚಕ್ಕೆ ಎಬ್ಬಿಸಿದ ಶಿಲಾಗಟ್ಟಿಗಳು ಹೇರಳವಾಗಿ ಸಿಗುತ್ತವೆ.

ವಿಜಾಪುರ ಜಿಲ್ಲೆಯಲ್ಲಿ ಸೂಕ್ಷ್ಮ ಶಿಲಾಯಗದ ನೆಲೆಗಳು ಇಂಡಿ ತಾಲೂಕಿನ ನಿಂಬಾಳ ಬಸವನ ಬಾಗೇವಾಡಿ ತಾಲೂಕಿನ ಗೊಳಸಂಗಿ, ಸಾತಿಹಾಳ, ಡೋಣೂರ ವಿಜಾಪುರ ತಾಲೂಕಿನ ಇಟ್ಟಂಗಿಹಾಳ, ಕಗ್ಗೋಡು, ತಿಗಣಿಬಿದರಿ, ಬೂತನಾಳ, ಯಕ್ಕುಂಡಿ, ಯತ್ನಾಳ, ಲೋಹಗಾಂವ ಸಾರವಾಡ, ಹಳಗಣಿ, ಹೊನಗನಹಳ್ಳಿ ಮುದ್ದೇಬಿಹಾಳ ತಾಲೂಕಿನ ಅಡವಿಹುಲಗಬಾಳ, ಅರಸನಾಳ, ಇಂಚಗಾಳ, ಕಣಿಕೇರಿ, ಕವಡಿಮಟ್ಟಿ, ಕುಚನೂರ, ಕುಚಪಾಳ, ಕುಂಟೋಜಿ, ಗೋನಾಳ, ಚವ್ವನಬಾವಿ, ಜಕ್ಕೇರಲ, ಜಲಪುರ, ಜಂಗಮುರಾಳ, ದೊಂಕಮೇಡು, ನಾಗೂರು, ಪತೇಪುರ, ಬನೋಶಿ, ಬೈಚಬಾಳ, ಬಂಗಾರಗುಂಡ, ಮಟಕದೇವನಹಲ್ಲೀ, ಮಸಕನಾಳ, ಮಾವಿನಬಾವಿ, ಮಾಸನಗೇರಿ, ಶಿವಪುರ, ಸಾಲವಾಡಿಗಿ, ಸಿದ್ಧಾಪುರ, ಹೊಕ್ರಾಣಿ ಸಿಂದಗಿ ತಾಲೂಕಿನ ಇಬ್ರಾಹಿಂಪುರ, ದೇವೂರು ಗ್ರಾಮಗಳಲ್ಲಿವೆ.

ನೂತನ ಶಿಲಾ ಮತ್ತು ಶಿಲಾ ತಾಮ್ರಯುಗ (ಸು. ೧೬,೦೦೦೬೦೦): ಈ ಘಟ್ಟದಲ್ಲಿ ಮಾನವನ ಚಟುವಟಿಕೆಗಳಲ್ಲಿ ಸಂಪೂರ್ಣ ಬದಲಾವಣೆ ಕಂಡು ಬರುತ್ತದೆ. ಇದನ್ನು ಗುರುತಿಸುವಾಗ ವಿಶಿಷ್ಟವಾಗಿರುವ ಉಜ್ಜಿ ನಯಗೊಳಿಸಿದ ಕಲ್ಲಿನ ಕೊಡಲಿಗಳು, ಕೈ ಬಾಚಿಗಳು, ಉಳಿಗಳು, ಬೂದುವರ್ಣದ ಮಡಿಕೆ ಮುಂತಾದವುಗಳನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ವಾಸದ ಮನೆಗಳೂ ಕೂಡಾ ನದಿ ದಂಡೆ, ಬೆಟ್ಟಗಳು ಆಶ್ರಯ ಮತ್ತು ಫಲವತ್ತಾದ ಬಯಲು ಪ್ರದೇಶದಲ್ಲಿವೆ. ಕಾರಣ ಫಲವತ್ತಾದ ಭೂಮಿಯನ್ನು ಕೃಷಿಗೆ ಬಳಸಿಕೊಂಡರೆ, ಕುರಿ, ಮೇಕೆ, ದನಗಳ ಸಾಕಾಣಿಕೆಗೆ ಹುಲ್ಲುಗಾವಲು ಪ್ರದೇಶ ಅವಶ್ಯವಾಗಿತ್ತು. ಈ ಹಂತದಲ್ಲಿ  ಮಾನವನು ಒಂದೆಡೆ ವಾಸಿಸುತ್ತಿದ್ದುದರಿಂದ ಒಂದು ರೀತಿಯ ಪರಸ್ಪರ ಅವಲಂಬನೆಯ ಆಧಾರದ ಮೇಲೆ ತಮ್ಮ ದೈನಂದಿನ ಕಾರ್ಯವಿಭಜನೆ ನಡೆಯುತ್ತಿತ್ತು. ಇದನ್ನು ಆರಂಭಿಕ ಸಂಘಟಿತ ಸಮಾಜವೆಂದು ಪರಿಗಣಿಸಲಾಗಿದೆ.

ಕರ್ನಾಟಕದ ಘಟಪ್ರಭಾ, ಮಲಪ್ರಭಾ ಮತ್ತು ಕೃಷ್ಣಾ ಬಯಲು ಪ್ರದೇಶಗಳಲ್ಲಿ ಕಂಡುಬಂದಿರುವ ಮೃತ್‌ಪಾತ್ರಾವಶೇಷಗಳಿಂದ ಈ ಹಂತದಲ್ಲಿ ಪ್ರಮುಖವಾದ ಎರಡು ಸಂಸ್ಕೃತಿಗಳ ಸಮ್ಮಿಲನವಾಗಿರುವ ಸೂಚನೆಗಳು ದೊರೆಯುತ್ತವೆ. ಇದರಲ್ಲಿ ಒಂದು ಮಸ್ಕಿ ಮಾದರಿ ಇನ್ನೊಂದು ಸಾವಳದಾ ಮಾದರಿ. ಮೊದಲನೆಯದು ಮಸ್ಕಿ ಮತ್ತು ಬ್ರಹ್ಮಗಿರಿ ಹಾಗೂ ಎರಡನೆಯದು ದೈಮಾಬಾದಿನ ಉತ್ಖನನಗಳಿಂದ ಸ್ಪಷ್ಟವಾಗುತ್ತದೆ. ಮಸ್ಕಿ ಮಾದರಿಯ ಸಂಸ್ಕೃತಿ ಮಲಪ್ರಭಾ, ಘಟಪ್ರಭಾ ಹಾಗೂ ತುಂಗಭದ್ರಾ ಕೆಳದಂಡೆ ಪ್ರದೇಶದಲ್ಲಿ ವಿಶೇಷವಾಗಿದೆ. ಕೃಷ್ಣಾ ಮೇಲ್ದಂಡೆ ಗೋದಾವರಿ ಮಧ್ಯಭಾಗ, ತಾಪಿ ಬಯಲಿನಲ್ಲಿ ವಿರಳವಾಗಿದೆ. ದೈಮಾಬಾದ್ ಮಾದರಿಯಲ್ಲಿ ೫ ಸಾಂಸ್ಕೃತಿಕ ಹಂತಗಳನ್ನು ಗುರುತಿಸಲಾಗಿದೆ. ಅದರಲ್ಲಿ ಸಾವಳ್ದ, ಹರಪ್ಪ ಉತ್ತರಾರ್ಧ, ದೈಮಾಬಾದ್, ಮಾಳವ ಮತ್ತು ಜೋರ್ವೆ. ದೈಮಾಬಾದ್ ಮತ್ತು ನೇವಾಸಗಳಲ್ಲಿ ದೊರೆತ ವಿಶಿಷ್ಟ ಪ್ರಕಾರದ ಮಣ್ಣಿನ ಪಾತ್ರೆಗಳು ಭೀಮಾನದಿ ಬಯಲಿನ ಧೂಳಖೇಡ ದಿಂದ ಘತ್ತರಗಿ ವರೆಗಿನ ನೆಲೆಗಳಲ್ಲಿ ಕಾಣಸಿಗುತ್ತವೆ.

ಮೇಲಿನ ಎರಡು ಸಂಸ್ಕೃತಿಗಳ ಸಮ್ಮಿಲನ ಕೃಷ್ಣಾಬಯಲಿನಲ್ಲಿ ಕಂಡುಬರುತ್ತದೆ. ಅವುಗಳಲ್ಲಿ ಸಾವಳ್ದಾ ಸಂಸ್ಕೃತಿಯೇ ಇನ್ನೊಂದಕ್ಕಿಂತಲು ಮೊದಲು ಕಾಣಿಸಿಕೊಂಡು ಎರಡನೆಯದರಲ್ಲಿ ಇದ್ದಿತೆಂಬ ಸೂಚನೆ ಮಂಗಸೂಳಿಯಲ್ಲಿ ನಡೆದ ಸಣ್ಣಪ್ರಮಾಣದ ಉತ್ಖನನದಿಂದ ಸ್ಪಷ್ಟವಾಗುತ್ತದೆ. ಈ ಎರಡು ವಿಭಿನ್ನ ಸಂಸ್ಕೃತಿಗಳ ಸಮ್ಮಿಲನವಲ್ಲದೇ ಇನ್ನೊಂದು ಮಾದರಿ ವರ್ಣಚಿತ್ರಿತ ಪಾತ್ರೆಗಳ ಕೃಷ್ಣಾ ಬಯಲಿನಲ್ಲಿ ಗುರುತಿಸಲಾಗಿದೆ. ಇಂಥ ಪಾತ್ರೆಗಳು ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಸಿಂಗನಪಲ್ಲಿಯವರೆಗೆ ಹರಡಿವೆ. ಇದರಿಂದ ಕೃಷ್ಣಾ ಮತ್ತು ಭೀಮಾ ನದಿಗಳ ಬಯಲು ಪ್ರದೇಶದಲ್ಲಿ ವಾಸಿಸುತ್ತಿದ್ದ ಜನವರ್ಗ ಮೂರು ವಿಭಿನ್ನ ಮತ್ತು ವಿಶಿಷ್ಟ ಬಗೆಯ ಸಾಂಸ್ಕೃತಿಕ ಸಂಬಂಧಗಳನ್ನು ಪಡೆದಿದ್ದರು.

ವಿಜಾಪುರ ಜಿಲ್ಲೆಯಲ್ಲಿ ನೂತನ ಶಿಲಾಯುಗಕ್ಕೆ ಸಂಬಂಧಿಸಿದ ಅವಶೇಷಗಳು ವಿರಳವಾಗಿ ಕಂಡುಬಂದರೂ ಸೂಕ್ಷಶಿಲಾಯುಗದ ಮುಂದುವರೆದ ಸಾಂಸ್ಕೃತಿಕ ಹಂತವನ್ನು ಇಂಗಳೇಶ್ವರ ಮತ್ತು ಕೆಲವು ನೆಲೆಗಳಲ್ಲಿ ಗುರುತಿಸಬಹುದು. ಈ ಕಾಲಘಟ್ಟಕ್ಕೆ ಸೇರಿದ ಉಜ್ಜಿನಯಗೊಳಿದ ಕೊಡಲಿಗಳು ಇಲ್ಲವೆ ಬೂದು ವರ್ಣದ ಪಾತ್ರಾವಶೇಷಗಳು ಇಂಡಿ, ಕೆಂಗಿನಹಾಳ, ಗೋಗಿಹಾಳ, ಜೀರಂಕಲಗಿ, ತೆರದಾಳ ಧೂಳಖೇಡ ಹಾಗೂ ಬಿಸ್ನಾಳ (ಇಂಡಿ ತಾ.) ನೆಲೆಗಳಲ್ಲಿವೆ.

ನೂತನ ಶಿಲಾಯುಗದ ಎರಡನೆಯ ಹಂತದಲ್ಲಿ ಉಜ್ಜಿ ನಯಗೊಳಿಸಿದ ಕೈಗೊಡಲಿಗಳೊಂದಿಗೆ ತಾಮ್ರದ ಉಪಕರಣಗಳು ಬೆಳಕಿಗೆ ಬಂದವು. ಇಲ್ಲಿ ದಖನ್ ಮತ್ತು ಉತ್ತರ ಭಾರತದ ವಿಭಿನ್ನ ಸಂಸ್ಕೃತಿಗಳ ಸಮ್ಮಿಲನವಾಯಿತು. ಇದರಿಂದ ತಾಮ್ರದ ನಿಕ್ಷೇಪಗಳನ್ನು ಪತ್ತೆಹಚ್ಚಿ ಅದಿರನ್ನು ಸಂಗ್ರಹಿಸಿ ಕುಲುಮೆಗಳಲ್ಲಿ ಕರಗಿಸಿ ವಿಶಿಷ್ಟ ಬಗೆಯ ಉಪಕರಣಗಳನ್ನು ತಯಾರಿಸುವ ತಂತ್ರಜ್ಞಾನ ರೂಢಿಗೆ ಬಂತು. ಇದನ್ನು ಶಿಲಾ ತಾಮ್ರಯುಗವೆಂದು ಗುರುತಿಸಲಾಗಿದೆ. ಈ ಹಂತದಲ್ಲಿ ಕಂದು ವರ್ಷದ ಮಸ್ಕಿ ಮತ್ತು ಬ್ರಹ್ಮಗಿರಿ ಮಾದರಿ ಮತ್ತು ಜೋರ್ವೆ ಮಾದರಿಯ ಪಾತ್ರಾವಶೇಷಗಳು ಒಂದೇ ನೆಲೆಯಲ್ಲಿ ಕಂಡುಬಂದಿರುವುದು ವಿಶೇಷ. ಕೆಲವು ನೆಲೆಗಳಲ್ಲಿ ಕಾಣಸಿಗುವ ಕಪ್ಪು, ಕೆಂಪು ಮಡಿಕೆಗಳು ಹಾಗೂ ಕೆಂಪು ವರ್ಣದ ಮೇಲೆ ಕಪ್ಪು ಬಣ್ಣದಿಂದ ಚಿತ್ರಸಲಾದ ಮಡಿಕೆಗಳಿವೆ. ಇಂಥ ನೆಲೆಗಳು ಇಂಡಿ ತಾಲೂಕಿನ ಅಥರ್ಗಾ, ಅಣಚಿ, ಇಂಡಿ, ಇಂಚಗೇರಿ, ಕೆಂಗಿನಹಾಳ, ಉಮರ್ಜಿ, ಗೋಗಿಹಾಳ, ಚೆನ್ನೆಗಾಂವ, ಜೀರಂಕಲಗಿ, ತದ್ದೇವಾಡಿ, ತೆರದಾಳ, ಧೂಳಖೇಡ, ನಾಗರಹಳ್ಳಿ, ಬಳ್ಳೊಳ್ಳಿ, ಬೆನಕನಹಳ್ಳಿ, ಭುಂಯ್ಯಾರ, ಭೈರಣಗಿ, ಮಸಳಿ, ಮಣೂರ, ರೋಢಗಿ, ಲಿಂಗನಹಳ್ಳಿ, ಸಾತಲಗಾಂವ, ಹತ್ತಳ್ಳಿ, ಹಿರೇಬೇವನೂರು, ಹಂಚಿನಾಳ, ಹಿಂಗಣಿ ಬಾಗೇವಾಡಿ ತಾಲೂಕಿನ ಮನಗೂಳಿ, ಸಿಂಧುಗೇರಿ, ಇಂಗಳೇಶ್ವರ, ವಿಜಾಪುರ ತಾಲೂಕಿನ ಕುಂಬಾರ, ತಿಕೋಟ, ಧನ್ಯಾಳ, ಮದಬಾವಿ, ಸಿದ್ಧಾಪುರ, ಹೊನಗನಹಳ್ಳಿ ಮುದ್ದೇಬಿಹಾಳ ತಾಲೂಕಿನ ಇಂಗಳಗೇರಿ, ಕಾಲದೇವನಹಳ್ಳಿ, ಬಾನಾಪುರ, ಗಡಿಸೋಮನಾಳ, ಗುಂಡಕನಾಳ, ಚೊಕವಿ, ಜಲಪುರ, ತಾಳಿಕೋಟೆ, ತಂಗಡಗಿ, ದೇವೂರ, ನಾವದಗಿ, ಪಡೇಕನೂರ, ಬಾವೂರ, ಬೂದಿಹಾಳ, ಬಿಳೇಬಾವಿ, ಮಿಣಜಗಿ, ಸಾಲವಾಡಗಿ, ಹಿರೂರ, ಹಲಗಬಾಳ, ಹೂವಿನಹಳ್ಳಿ, ಸಿಂದಗಿ ತಾಲೂಕಿನ ಅಂತರಗಂಗಿ, ಓತಿಹಾಳ, ಕುಮಶಿ, ಗುಂದಗಿ, ನಿವಳಕೋಡಿ, ನಂದಗೇರಿ, ಬಗಲೂರು, ಬಳಗಾನೂರು, ಬೂದಿಹಾಳ, ಬೋರಗಿ, ಬ್ಯಾಕೋಡ, ಭಂಕಲಗಿ, ಮಾರಿಹಾಳ ಮೋರಟಗಿ, ಸುಂಗಠಾನ ಗ್ರಾಮಗಳಲ್ಲಿವೆ. ಉಮರ್ಜಿ, ಚೆನ್ನೆಗಾಂವ, ನಾಗರಹಳ್ಳಿ, ಭುಂಯ್ಯಾರ, ಹಿಂಗಣಿ, ಕಾಲದೇವನಹಳ್ಳಿ ಗುಂಡಕನಾಳ, ಬಾವೂರು, ಬಿಳೆಬಾವಿ ಮೊದಲಾದ ನೆಲೆಗಳ್ಲಲಿ ಉತ್ತರದ ಜೋರ್ವೆ ಮತ್ತು ದಕ್ಷಿಣದ ಮಸ್ಕಿ-ಬ್ರಹ್ಮಗಿರಿ ಮಾದರಿಯ ಪಾತ್ರಾವಶೇಷಗಳು ಒಟ್ಟಿಗೆ ಸೇರಿರುವುದರಿಂದ ಈ ಎರಡು ಸಂಸ್ಕೃತಿಗಳ ಸೇರ್ಪಡೆ ಭೀಮಾ ಮತ್ತು ಕೃಷ್ಣಾ ನದಿಗಳ ಬಯಲು ಪ್ರದೇಶದಲ್ಲಿ ನಡೆದಿರುವುದು ವಿಶೇಷವಾಗಿ ಕಂಡುಬರುತ್ತದೆ.

ನೂತನ ಶಿಲಾ ಶಿಲಾ-ತಾಮ್ರಯುಗದಲ್ಲಿ ಕಲ್ಲಿನ ಉಪಕರಣಗಳೊಂದಿಗೆ ತಾಮ್ರ ಇಲ್ಲವೆ ಕಂಚಿನ ಚಪ್ಪಟೆ ಕೊಡಲಿ, ತಂತಿ, ನೀರಿನ ಗಾಳ ಮತ್ತು ತೆಳ್ಳನೆ ಬಾಯಿಯುಳ್ಳ ಅಲಗಿನ ಉಪಕರಣಗಳು ಕೃಷ್ಣಾನದಿ ಪ್ರದೇಶದ ಕೆಲವು ನೆಲೆಗಳಲ್ಲಿ ಉಪಯೋಗದಲ್ಲಿದ್ದವು. ದಕ್ಷಿಣ ಭಾರತದ ಅತ್ಯಂತ ಗಮನಾರ್ಹವಾದ ತಾಮ್ರದ ಉಪಕರಣಗಳೆಂದರೆ ರಾಯಚೂರು ಹತ್ತಿರ ಕಲ್ಲೂರು ಗ್ರಾಮದ್ಲಲಿ ದೊರೆತ ಶಿಲಾ ತಾಮ್ರಯುಗದ ಉದ್ದನೆಯ ಖಡ್ಗಗಳು ವಿಶಿಷ್ಟವಾದವು. ಇದೇ ಮಾದರಿಯ ಕಠಾರಿಯಂಥ ಉಪಕರಣ ಭೀಮಾನದಿ ಉಗಮ ಪ್ರದೇಶದ ಚಂದೋಳಿ ಗ್ರಾಮದಲ್ಲಿರುವ ಈ ಹಂತದ ನೆಲೆಯ ಉತ್ಖನನದಲ್ಲಿ ದೊರೆತಿದೆ.

ನೂತನ ಶಿಲಾ ಶಿಲಾ ತಾಮ್ರ-ಯುಗಕ್ಕೆ ಸೇರಿದ ಗಂಗಾ-ಯಮುನಾ ಬಯಲು ಪ್ರದೇಶದ ಅಲ್ಲಲ್ಲಿ ತಾಮ್ರದ ಉಪಕರಣಗಳ ಸಂಗ್ರಹಗಳು ದೊರೆತಿವೆ. ಅವುಗಳಲ್ಲಿ ಕೊಕ್ಕೆಕತ್ತಿ, ದ್ವಿಭುಜ ಕವಲಿನ ಹಿಡಿಕೆ, ಇಬ್ಭಾಗ ಕೊಡಲಿ, ಬಾಗು ಮುಳ್ಳಿನ ಈಟಿ-ಗಾಳ, ಅಷ್ಟಾಕಾರದ ಮನುಷ್ಯಕೃತಿ ಮೊದಲಾದವು. ಇಂಥ ಉಪಕರಣಗಳು ಓರಿಸ್ಸಾ, ಷರೋಜದವರೆಗೂ, ವಾಯುವ್ಯದಲ್ಲಿ ಪಾಕಿಸ್ತಾನ, ದಕ್ಷಿಣದಲ್ಲಿ ಕಲ್ಲೂರಿನವರೆಗೂ ಸಿಕ್ಕಿದ್ದರಿಂದ ಇದು ಅಂದಿನ ಜನವರ್ಗಗಳ ಸಂಪರ್ಕ ಮಾರ್ಗವನ್ನು ಸೂಚಿಸುತ್ತದೆ. ಅಲ್ಲದೇ ಕೆಲವು ವಿದ್ವಾಂಸರ ಪ್ರಕಾರ ಪರಪ್ಪಾ ಸಂಸ್ಕೃತಿ ನಶಿಸಿದ ಮೇಲೆ ಅಲ್ಲಿ ವಾಸವಾಗಿದ್ದ ಜನರು ಅಲ್ಲಲ್ಲಿ ನೆಲೆಸಿದ ಗುರುತುಗಳೆಂದು ತರ್ಕಿಸಿದ್ದಾರೆ.

ನೂತನ ಶಿಲಾ ಮತ್ತು ಶಿಲಾ-ತಾಮ್ರಯುಗದಲ್ಲಿ ಅಲ್ಲಲ್ಲಿ ಬೂದಿಬ್ಬಗಳು ಕಾಣಸಿಗುವುದು ವಿಶೇಷ. ಇವುಗಳ ವೈಜ್ಞಾನಿಕ ವಿಶ್ಲೇಷಣೆಯಿಂದ ದನಗಳ ಸಗಣಿಯನ್ನು ಸುಟ್ಟದ್ದರಿಂದ ತಯಾರಾದವು ಈ ಹಂತದಲ್ಲಿ ಕೃಷಿ ಅಭಿವೃದ್ಧಿಯಾದಂತೆ ದನಗಳನ್ನು ಸಾಕುವ ಪ್ರಮಾಣದಲ್ಲಿ ಹೆಚ್ಚಾಯಿತು. ದನಗಾಹಿಗಳು ಅವುಗಳ ಸಗಣಿಯಲ್ಲಿ ಒಂದೆಡೆ (ಹಟ್ಟಿಯ ಪಕ್ಕದಲ್ಲಿ) ಕೂಡಾಕಿದ್ದರಿಂದ ಅವು ಗಟ್ಟಿಗೊಂಡು ಕ್ರಮೇಣ ಬೆಂಕಿ ತಗುಲಿ ಈ ರೀತಿಯ ಕಿಟ್ಟದಂಥ ಬೂದಿ ಗುಡ್ಡೆಗಳು ಉಂಟಾದವೆಂದು ತರ್ಕಿಸಲಾಗಿದೆ. ಇಂಥ ಬೂದಿದಿಬ್ಬಗಳು ಕೃಷ್ಣಾ ಮೇಲ್ದಂಡೆಯ ಚಿಕ್ಕೋಡಿ ತಾಲೂಕಿನ ಎಕ್ಸಾಂಬ – ಕಡೋಳಿಯಿಂದ ( ಬೆಳಗಾವಿ ಜಿಲ್ಲೆ) ಜಮಖಂಡಿ ತಾಲೂಕಿನ ತೆರದಾಳ, ಶಿರಗುಪ್ಪಿ, ಕುಲಾಳಿ (ಬಾಗಲಕೋಟೆ ಜಿಲ್ಲೆ) ಮತ್ತು ರಾಯಚೂರು ದೊ-ಆಬ್ ಪ್ರದೇಶದಲ್ಲಿ ಹೆಚ್ಚಾಗಿವೆ. ಈ ನದಿಯ ಕೆಳಭಾಗ ಶೋರಾಪುರ ತಾಲೂಕಿನ ಕಕ್ಕೆರಾ, ತನ್ಮಂಡಿ, ತೀರ್ಥ, ಬೂದಿಹಾಳ, ಬೆನಕನಹಳ್ಳಿ, ಹುಣಸಗಿ ಮೊದಲಾದ ನೆಲೆಗಳಲ್ಲಿ ಬೂದಿದಿಬ್ಬಗಳಿವೆ. ಆದರೆ ವಿಜಾಪುರ ಪರಿಸರದಲ್ಲಿ ಶಿಲಾ-ತಾಮ್ರಯುಗದ ನೆಲೆಗಳು ಹೇರಳವಾಗಿದ್ದರೂ, ಇಂಥ ಬೂದಿದಿಬ್ಬಗಳು ಇದುವರೆಗೆ ಶೋಧವಾಗಿಲ್ಲ. ಕೆಲವುಸಲ ಇವು ಕೃಷಿ ಬಳಕೆಯಿಂದ ಹಾಳಾಗಿರುವ ಸಾಧ್ಯತೆಗಳಿವೆ. ತುಂಗಭದ್ರ ಪರಿಸರದ ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಕಂಡು ಬಂದಿರುವ ಬೂದಿದಿಬ್ಬಗಳು ರಾಮಾಯಣದ ವಾಲಿ, ಮಹಾಭಾರತದ ಹಿಡಿಂಭಾಸುರ ಮೊದಲಾದ ವ್ಯಕ್ತಿಗಳನ್ನು ದಹನಕ್ರಿಯೆ ಮಾಡಿದ್ದರಿಂದ ಉಂಟಾದವೆಂಬ ನಂಬಿಕೆಯಿದೆ. ಇವುಗಳ ಬಗ್ಗೆ ಹೆಚ್ಚಿನ ಅಧ್ಯಯನವಾಗಬೇಕಾಗಿದೆ.

ಕಬ್ಬಿಣಯುಗದ ಬೃಹತ್ಶಿಲಾ ಸಂಸ್ಕೃತಿ (ಸು. ,೨೦೦೨೦೦): ದಕ್ಷಿಣ ಭಾರತದಲ್ಲಿ ಹೆಚ್ಚು ಸ್ಪಷ್ಟವಾಗಿ ಕಂಡುಬಂದಿರುವ ಇದು ಶಿಲಾ-ತಾಮ್ರಯುಗದ ಮುಂದಿನ ಬೆಳವಣಿಗೆಯೆಂದು ಗುರುತಿಸಲಾಗಿದೆ. ತೆರದಾಳದಲ್ಲಿ ನಡೆಸಿದ ಉತ್ಖನನದಲ್ಲಿ ಇವುಗಳ ಮಧ್ಯದ ಸಾಂಸ್ಕೃತಿಯ ಸಂಬಂಧಗಳು ಸ್ಪಷ್ಟವಾಗಿವೆ. ಬೃಹತ್ ಶಿಲಾ ಸಂಸ್ಕೃತಿಗೆ ಸೇರಿದ ನೆಲೆಗಳು ತೆರದಾಳ-ಹಳಿಂಗಳಿಯಿಂದ ಹಿಡಿದು ತಾಳಿಕೋಟೆಯವರೆಗೆ ಬಹುಸಂಖ್ಯೆಯಲ್ಲಿವೆ. ಈ ಸಂಸ್ಕೃತಿಯ ವಿಶಿಷ್ಟ ಲಕ್ಷಣಗಳಲ್ಲಿ ಶವಸಂಸ್ಕಾರಕ್ಕೊಸ್ಕರ ಬೃಹತ್ ಬಂಡೆಗಳಿಂದ ಗೋರಿಗಳನ್ನು ನಿರ್ಮಿಸಿರುವುದು. ಇವುಗಳನ್ನು ಅನೇಕ ಪ್ರಕಾರಗಳಿದ್ದು, ಕೊನೆಯಪಕ್ಷ ಶವಕುಣಿಯ ಪಕ್ಕದಲ್ಲಿ ಒಂದು ಕಲ್ಲು ಚಪ್ಪಡಿಯನ್ನಾದರೂ ನಿಲ್ಲಿಸಿರುವುದು ಕಂಡುಬರುತ್ತದೆ.

ಬೃಹತ್‌ಶಿಲಾ ಸಂಸ್ಕೃತಿಯ ಜನವರ್ಗದವರು ಬಳಸಿಕೊಂಡಂಥ ಪ್ರಮುಖ ವೃತ್ತಿ ಅದಿರನ್ನು ಕರಗಿಸಿ ಕಬ್ಬಿಣ ಉತ್ಪಾದನೆ ಮಾಡುವುದು. ಅದಿರಿನಿಂದ ಕಬ್ಬಿಣ ಉತ್ಪಾದನೆ ಮಾಡುವ ಇವರ ತಾಂತ್ರಿಕ ಜ್ಞಾನ ಸುಧಾರಿಸಿದ ಮಟ್ಟದಲ್ಲಿತ್ತೆಂದು ತಡಕನಹಳ್ಳಿ ಮತ್ತು ಕೋಮಾರನಹಳ್ಳಿ ಉತ್ಖನನಗಳಲ್ಲಿ ದೊರೆತ ಅವಶೇಷಗಳ ವೈಜ್ಞಾನಿಕ ವಿಶ್ಲೇಷಣೆಯಿಂದ ತಿಳಿಯುತ್ತದೆ. ಅಲ್ಲದೇ ಅತ್ಯಂತ ಸುಧಾರಿತ ಉಕ್ಕನ್ನು ತಯಾರಿಸುತ್ತಿದ್ದರು. ಕ್ಲಿಷ್ಟಕರವಾದ ಕಲ್ಲಿನ ಉಪಕರಣಗಳನ್ನು ನಿಲ್ಲಿಸಿ, ತಾಮ್ರ ಇಲ್ಲವೆ ಕಬ್ಬಿಣದ ಉಪಕರಣಗಳನ್ನು ತಮಗೆ ಬೇಕಾದ ರೀತಿಯಲ್ಲಿ ತಯಾರಿಸಿ ಪ್ರಾಣಿ ಬೇಟೆ ಹಾಗೂ ಕೃಷಿ ಸಲಕರಣೆಗೆ ಬಳಸಿದರು. ಇದರಿಂದ ದೊಡ್ಡ ಪ್ರಮಾಣದಲ್ಲಿ ಗಿಡ ಮರಗಳನ್ನು ಕಡಿದು ಭೂಮಿಯನ್ನು ವ್ಯವಸಾಯಕ್ಕೆ ಉಪಯೋಗಿಸಲು ಸಾಧ್ಯವಾಯಿತು. ಸಾಮಾಜಿಕ ಸಂಘಟನೆ ಹಾಗೂ ವ್ಯಾಪಾರೀಕರಣದಿಂದ ಆರ್ಥಿಕಾಭಿವೃದ್ಧಿಯಾಗಿ ಸಾಂಸ್ಕೃತಿಕ ಸುಧಾರಣೆ ಮತ್ತು ನಗರ ಪಟ್ಟಣಗಳ ಬೆಳವಣಿಗೆಯಾಯಿತು.

ಸಾಮಾನ್ಯವಾಗಿ ಬೃಹತ್‌ಶಿಲಾ ಸಂಸ್ಕೃತಿಯು ಎಲ್ಲೆಲ್ಲಿ ಅತ್ಯುತಮ ಅದಿರಿನ ನಿಕ್ಷೇಪವಿದೆಯೋ ಆ ಸ್ಥಳಗಳಲ್ಲಿ ವ್ಯಾಪಿಕವಾಗಿ ಬೆಳೆಯಿತು. ವಿಜಾಪುರ ಜಿಲ್ಲೆಗೆ ಹೊಂದಿಕೊಂಡಂತಿರುವ ಕಮತಗಿ, ಗುಳೇದಗುಡ್ಡ ಸುತ್ತಮುತ್ತಲಿನ ಪ್ರದೇಶದಲ್ಲಿ ಗಣನೀಯ ಪ್ರಮಾಣದಲ್ಲಿ ಕಬ್ಬಿಣ ಹಾಗೂ ಮ್ಯಾಂಗನೀಸ್ ಅದಿರು ನಿಕ್ಷೇಪಗಳಿವೆ. ಈ ಭಾಗದಲ್ಲಿ ಅಂದರೆ ತೆರದಾಳ ಹಳಿಂಗಳಿಯಿಂದ ಐಹೊಳೆ, ಪಟ್ಟದಕಲ್ಲು, ಅಕ್ಕರಗಲ್, ಗುಳೆದಗುಡ್ಡ ಪ್ರದೇಶವೂ ಉತ್ತರದಲ್ಲಿ ಸಿಂದಗಿ ತಾಲೂಕಿನ ಕುಮಶಿ, ಮಾದನಹಳ್ಳಿ, ಜಲಪುರ ಸೇರಿದಂತೆ ಮುದ್ದೇಬಿಹಾಳ ತಾಲೂಕಿನ ಬೂದಿಹಾಳ, ದೊಂಕಮೇಡು, ಮಸಕನಾಳ ಮತ್ತು ತಾಳಿಕೊಟೆ, ಮಟಕದೇವನಹಳ್ಳಿಯಿಂದ ಸುರಪುರ ತಾಲೂಕಿನ ಹಗರಟಗಿ ರಾಜನಕೋಳುರಿನವರೆಗೂ ವಿಸ್ತರಿಸಿರುವುದನ್ನು ಗಮನಿಸಬಹುದು.

ಬೃಹತ್‌ಶಿಲಾ ಸಂಸ್ಕೃತಿಯಲ್ಲಿ ನಿರ್ಮಿಸಿದ ೧೨ ಮಾದರಿಯ ಗೋರಿಗಳಿವೆ. ಇವುಗಳಲ್ಲಿ ಶಿಲಾವೃತ್ತಗಳನ್ನು ಹೊಂದಿದ ಗೋರಿಗಳ ವಿಜಾಪುರ ಜಿಲ್ಲೆಗಳಲ್ಲಿವೆ. ಕುಮಶಿಯಲ್ಲಿ ಶಿಲಾವೃತ್ತಗಳೊಂದಿಗೆ ಕಪ್ಪು, ಕೆಂಪು ವರ್ಣದ ಮೃತ್‌ಪಾತ್ರಾವಶೇಷಗಳು ದೊರೆತಿವೆ. ಗೋರಿಯ ಸುತ್ತಲೂ ಒಂದು ಅಥವಾ ಎರಡು ಸುತ್ತು ವೃತ್ತಗಳಿರುತ್ತವೆ. ಇನ್ನೂ ಕೆಲವು ಗೋರಿಗಳಿಗೆ ನಾಲ್ಕೂ  ಭಾಗಗಳಲ್ಲಿ ಬಂಡೆಗಳನ್ನು ನಿಲ್ಲಿಸಿ, ಮೇಲ್ಭಾಗ ಕಲ್ಲು ಚಪ್ಪಡಿಯನ್ನು ಹಾಕಲಾಗಿರುತ್ತದೆ. ಆಕಾರಕ್ಕನುಗುಣವಾಗಿ ಇವುಗಳನ್ನು ಹಾದಿಕೋಣೆ, ಕಿಂಡಿಕೋಣೆ ಗೋರಿಗಳೆಂದು ಕರೆಯುತ್ತಾರೆ. ಈ ಮಾದರಿಯ ಗೋರಿಗಳ ಕೊಣ್ಣೂರು, ತೆರದಾಳ, ಐಹೊಳೆ, ಪಟ್ಟದಕಲ್ಲು, ಬಾಚನಗುಡ್ಡ ಕೊಪ್ಪಳಜಿಲ್ಲೆಯ ಹಿರೆಬೇನಕಲ್ಲು ಮುಂತಾದ ಪ್ರದೇಶಗಳಲ್ಲಿ ಕಾಣಬಹುದು. ತೆರದಾಳ-ಹಳಿಂಗಳ ಪ್ರದೇಶದಲ್ಲಿ ಒಂದು ವಿಶೇಷವಾಗಿ ತಳವಿನ್ಯಾಸದಲ್ಲಿ ಲ್ಯಾಟಿನ್ ಅಥವಾ ಗ್ರೀಕ್ ಮಾದರಿಯ ಶಿಲುಬೆಯಾಕಾರದಲ್ಲಿದೆ. ಇಂಥ ಮಾದರಿಗಳು ಇತರ ನೆಲೆಗಳಲ್ಲಿ ಕಾಣಸಿಗುವುದಿಲ್ಲ. ಐಹೊಳೆಯ ಕಿಂಡಿಕೋಣೆ ಗೋರಿಯ ಪಕ್ಕದಲ್ಲಿ ನಿಲ್ಲಿಸಿರುವ ಒಂದು ಕಲ್ಲು ಚಪ್ಪಡಿ ಮನುಷ್ಯಾಕೃತಿಯಲ್ಲಿದೆ. ಇಂಥ ಮಾದರಿಗಳು ಅಪರೂಪವಾಗಿದ್ದರೂ, ಕೊಪ್ಪಳ ಜಿಲ್ಲೆಯ ಹಿರೇಬೆಣಕಲ್ಲು, ಬಳ್ಳಾರಿ ಜಿಲ್ಲೆಯ ಕುಮತಿ, ಹುಲಿಕುಂಟೆ, ತಮಿಳುನಾಡಿನ ಪರಿಯಾರ್ ಜಿಲ್ಲೆಯ ಮೋಟೂರು, ಆಂಧ್ರಪ್ರದೇಶದ ಮಿಡಿಮಲ್, ತೊಟಗುಟ್ಟ ಮೊದಲಾದ ಕಡೆಗಳಲ್ಲಿ ಕಂಡುಬರುತ್ತವೆ.

ಆದಿ ಮತ್ತು ಮಧ್ಯ ಇತಿಹಾಸ ಕಾಲ : ಬೃಹತ್‌ಶಿಲಾ ಸಂಸ್ಕೃತಿಯ ಕಾಲಘಟ್ಟದ ಮಧ್ಯ ಹಂತದಿಂದಲೇ ವ್ಯವಸ್ಥಿತ ಸಮಾಜ ಅಸ್ಥಿತ್ವಕ್ಕೆ ಬಂದು, ಕ್ರಮೆಣ ಧಾರ್ಮಿಕ ಸಿದ್ಧಾಂತಗಳು ರೂಪಗೊಂಡವು. ರಾಜಕೀಯ ಮತ್ತು ಆರ್ಥಿಕ ಕ್ಷೇತ್ರಗಳು ಘಟ್ಟಿಗೊಳ್ಳುವ ಮೂಲಕ ನಾಗರಿಕತೆಯ ಲಕ್ಷಣಗಳು ಕಾಣಿಸಿಕೊಂಡವು. ಮೌರ್ಯ ಸಾಮ್ರಾಟ ಅಶೋಕ ಉತ್ತರ ಮತ್ತು ದಕ್ಷಿಣ ಭಾರತವನ್ನೊಳಗೊಂಡಂತೆ ಏಕರೂಪದ ಆಡಳಿತವನ್ನು ಜಾರಿಗೆ ತಂದನು. ಮೌರ್ಯರ ಕಾಲದಲ್ಲಿ ದಕ್ಷಿಣ ಭಾಗದ ಸುವರ್ಣಗಿರಿ ಪ್ರಮುಖ ಆಡಳಿತ ಕೇಂದ್ರವಾಗಿತ್ತು. ಅಲ್ಲಿ ಮಹಾಮಾತ್ರರೆಂಬ ಅಧಿಕಾರಿಗಳು ನೇಮಕಗೊಂಡಿದ್ದರು. ಇವರ ಕಾರ್ಯಸ್ಥಳ ಇಸಿಲಾ ಇಂದಿನ ಬ್ರಹ್ಮಗಿರಿ ಪ್ರದೇಶವಾಗಿತ್ತು. ತಾನು ಗೆದ್ದುಕೊಂಡ ಪ್ರದೇಶಗಳಲ್ಲಿಯ ಜನರಿಗೆ ಸಮಾಧಾನ ಹೇಳುವ ಮತ್ತು ಧರ್ಮ ಮಾರ್ಗವನ್ನು ತಿಳಿಸುವ ಶಾಸನಗಳನ್ನು ಹಾಕಿಸಿದನು. ಪ್ರಾಕೃತ ಭಾಷೆ, ಬ್ರಾಹ್ಮಿ ಲಿಪಿಯಲ್ಲಿ ಬರೆದಿರುವ ಶಾಸನಗಳು ಚಿತ್ರದುರ್ಗ, ಕೊಪ್ಪಳ, ರಾಯಚೂರು ಮತ್ತು ಗುಲ್ಬರ್ಗ ಜಿಲ್ಲೆಗಳಲ್ಲಿವೆ. ಬ್ರಹ್ಮಗಿರಿ ಶಾಸನದ ಕೊನೆಯಲ್ಲಿ ಖರೋಷ್ಠಿ ಲಿಪಿಯನ್ನೂ ಬಳಸಲಾಗಿದೆ. ಮೌರ್ಯರ ನಂತರ ದಕ್ಷಿಣ ಭಾಗದ ಪ್ರದೇಶಗಳಲ್ಲಿ ಅಧಿಕಾರಿಕ್ಕೆ ಬಂದ ಶಾತವಾಹನರು ಇದೇ ಭಾಷೆ ಮತ್ತು ಲಿಪಿಯನ್ನು ಶಾಸನ, ನಾಣ್ಯಗಳಲ್ಲಿ ಬಳಸಿದರು.

ಮೌರ್ಯ ಮತ್ತು ಶಾತವಾಹನರ ಕಾಲದಲ್ಲಿ ಬ್ರಹ್ಮಗಿರಿ, ಮಸ್ಕಿ, ಸನ್ನತಿ ಮೊದಲಾದವು ನಗರಗಳಾಗಿದ್ದವು. ವ್ಯಾಪಾರ-ವಾಣಿಜ್ಯ ವಿಸ್ತೃತಗೊಂಡು ಬೇರೆ ಬೇರೆ ಪ್ರದೇಶಗಳಿಗೆ ತಲುಪುವ ಮಾರ್ಗಗಳನ್ನು ಕಲ್ಪಿಸಲಾಗಿತ್ತು. ಇಂಥ ನಗರಗಳನ್ನು ಸಂದರ್ಶಿಸಿದ ಟಾಲೇಮಿ ವಿಜಾಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿರುವ ಇಂಡಿ, ಕಲಕೇರಿ, ಪಟ್ಟದಕಲ್, ಬಾದಾಮಿಗಳನ್ನು ತನ್ನ ಬಯಾಗ್ರಫಿಯಲ್ಲಿ ಉಲ್ಲೇಖಿಸಿದ್ದಾನೆ. ಅಲ್ಲದೇ ಇಂಡಿ ತಾಲೂಕಿನ ಹತ್ತಳ್ಳಿ, ತದ್ದೇವಾಡಿ, ಸಾತಪುರ, ಇಂಚಗೇರಿ ಬಸವನ ಬಾಗೇವಾಡಿ ತಾಲೂಕಿನ ಅಮರಗೋಳ, ಇಂಗಳೇಶ್ವರ, ಕೊಲ್ಹಾರ, ಡೋಣೂರ, ನರಸಲಗಿ, ಬಸವನ ಬಾಗೇವಾಡಿ, ಮನಗೂಳಿ, ಮುತ್ತಗಿ, ವಡ್ಡವಡಿಗಿ, ಹೂವಿನ ಹಿಪ್ಪರಗಿ, ಹೆಬ್ಬಾಳ ಮುದ್ದೇಬಿಹಾಳ ತಾಲೂಕಿನ ಆಲೂರು, ಇಂಚಗಾಳ, ಕವಡಿಮಟ್ಟಿ, ಕುಂಟೋಜಿ, ತಂಗಡಗಿ, ನಾಲತವಾಡ, ಬಾವೂರು, ಬಿದರಕುಂದಿ, ರಕ್ಕಸಗಿ, ಶೆಳ್ಳಗಿ, ಸಾಲವಾಡಗಿ ಮತ್ತು ಸಿಂದಗಿ ತಾಲೂಕಿನ ಗೊರವನಗುಂಡಗಿ, ಯಲಗೋಡು, ಸುಂಗಠಾಣ ಗ್ರಾಮಗಳಲ್ಲಿ ಆದಿ ಮತ್ತು ಮಧ್ಯ ಇತಿಹಾಸ ಕಾಲಕ್ಕೆ ಸೇರಿದ ಅವಶೇಷಗಳಿವೆ. ಗ್ರಾಮದ ಸುತ್ತಮುತ್ತ ಇಲ್ಲವೆ ಸ್ಥಳಾಂತರ ಮಾಡಿದ ಹಾಳೂರಲ್ಲಿ ಕಪ್ಪು, ಕೆಂಪು, ಕಂದು ಹಾಗೂ ಕೆಂಪು ಲೆಪನದಡಿ ಬಿಳಿ ವರ್ಣದ ಮಡಿಕೆ ಚೂರುಗಳು, ಆಭರಣದ ಮಣಿಗಳು ಮುಂತಾದ ಅವಶೇಷಗಳು ಕಂಡುಬರುತ್ತವೆ. ಕೆಲವು ನೆಲೆಗಳು ಪ್ರಾಗಿತಿಹಾಸ ಕಾಲದಿಂದ ಮುಂದುವರೆದಿದ್ದು, ಆದಿ ಮತ್ತು ಮಧ್ಯ ಇತಿಹಾಸ ಕಾಲದಲ್ಲಿ ಆಡಳಿತದ ಕೇಂದ್ರಗಳಾಗಿ, ಅಗ್ರಹಾರಗಳಾಗಿ, ಘಟಿಕಾಸ್ಥಾನಗಳಾಗಿ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿವೆ. ಈಗಿನ ತದ್ದೇವಾಡಿ ರಾಷ್ಟ್ರಕೂಟರ ಉತ್ತರಾರ್ಧ ಮತ್ತು ಚಾಳುಕ್ಯರ ಆರಂಭ ಕಾಲದಲ್ಲಿ ತರ್ದವಾಡಿ ಸಾಸಿರವೆಂಬ ಹೆಸರಿನಿಂದ ಸಾವಿರ ಹಳ್ಳಿಗಳ ಮೇಲೆ ಆಡಳಿತ ಕೇಂದ್ರವಾಗಿತ್ತು. ಸೇವುಣರ ಆಳ್ವಿಕೆಯ ನಂತರ ಈ ಪ್ರದೇಶ ದೇಹಲಿ ಸುಲ್ತಾನರ ಆಳ್ವಿಕೆಗೆ ಒಳಪಟ್ಟಿತು. ೧೩೪೭ರಲ್ಲಿ ಬಹಮನಿ ರಾಜ್ಯ ಸ್ಥಾಪನೆಯಾದಾಗ ವಿಜಾಪುರ ಪ್ರದೇಶ ಗುಲ್ಬರ್ಗ ಪ್ರಾಂತ್ಯಕ್ಕೆ ಸೇರಿತು. ೧೪೭೮ರಲ್ಲಿ ವಿಜಾಪುರ ಪ್ರಾಂತ್ಯ ಪ್ರತ್ಯೇಕವಾಗಿ ಬಹಮನಿ ಅರಸನ ಮಂತ್ರಿ ಖ್ವಾಜಾ ಮಹಮ್ಮದ್ ಗವಾನ ಆಡಳಿತವನ್ನು ನಿರ್ವಹಿಸಿದನು. ಅವನ ಮರನದ ನಂತರ ೧೪೮೯ರಲ್ಲಿ ಯುಸಫ್ ಅದಿಲ್‌ಖಾನನು ವಿಜಾಪುರ ಪ್ರಾಂತ್ಯವನ್ನು ಸ್ವತಂತ್ರ ರಾಜ್ಯವೆಂದು ಘೋಷಿಸಿದನು. ಆಗ ವಿಜಾಪುರದಲ್ಲಿ ಮುಸ್ಲಿಂ ಶೈಲಿಯ ವಾಸ್ತುಶಿಲ್ಪ ಬೆಳವಣಿಗೆಯಾಗಿ ಸಾಂಸ್ಕೃತಿಕ ಪರಂಪರೆಯುಳ್ಳ ರಾಜಧಾನಿಯಾಯಿತು. ೧೬೮೬ರಲ್ಲಿ ಔರಂಗಜೇಬನು ವಿಜಾಪುರವನ್ನು ಗೆದ್ದುಕೊಂಡನು.೧೭೨೩ರ ನಂತರ ಹೈದ್ರಾಬಾದ್‌ ನಿಜಾಮನ ವಶಕ್ಕೆ ಬಂತು. ೧೭೬೦ರಲ್ಲಿ ಮರಾಠರು ಮತ್ತು ೧೭೭೮ರ ನಂತರ ಕೆಲವು ಭಾಗಗಳು ಹೈದರ್ ಅಲಿ, ಟಿಪ್ಪುಸುಲ್ತಾನರ ವಶದಲ್ಲಿದ್ದವು. ೧೮೧೭ರಲ್ಲಿ ಪೇಶ್ವೆ ಮತ್ತು ಇಂಗ್ಲೀಷರ ಮಧ್ಯ ಯುದ್ಧ ನಡೆದ ಪರಿಣಾಮವಾಗಿ ವಿಜಾಪುರ ಬ್ರಿಟಿಷರ ವಶವಾಯಿತು. ಆಗ ವಿಜಾಪುರ ತಾಲೂಕನ್ನು ಸಾತಾರ ರಾಜ್ಯಕ್ಕೆ, ಇಂಡಿ ಹಾಗೂ ಮುದ್ದೇಬಿಹಾಳ ತಾಲೂಕುಗಳನ್ನು ಧಾರವಾಡ ಕಲೆಕ್ಟರಿಗೆ ಸೇರಿದ ಬಾಗಲಕೋಟೆ ಉಪಕಂದಾಯದ ಅಡಿಯಲ್ಲಿ ತರಲಾಯಿತು. ೧೮೩೮ರಲ್ಲಿ ಸೊಲ್ಲಾಪುರ ಕಲೆಕ್ಟರೇಟ್ ಸ್ಥಾಪಿತವಾಗಿ ಈ ಎರಡು ತಾಲೂಕುಗಳನ್ನು ಅದರ ಅಡಿಯಲ್ಲಿ ತಂದಿದ್ದಲ್ಲದೇ ಇವುಗಳನ್ನು ಪುನರ್ ವಿಂಗಡಿಸಿ ಹಿಪ್ಪರಗಿ (ದೇವರ ಹಿಪ್ಪರಗಿ) ತಾಲೂಕನ್ನು ರಚಿಸಲಾಯಿತು. ಮನಗೂಳಿ ತಾಲೂಕನ್ನು ರಚಿಸಿ, ಕಾಗವಾಡ ಮತ್ತು ಚಿಮ್ಮಲಗಿಯ ೧೪ ಪರಗಣಗಳನ್ನು ಅದಕ್ಕೆ ಸೇರಿಸಲಾಯಿತು. ಆಗ ಇಂಡಿ, ಹಿಪ್ಪರಗಿ, ವಿಜಾಪುರ, ಮನಗೂಳಿ ಹಾಗೂ ಮುದ್ದೇ ಬಿಹಾಳ ತಾಲೂಕುಗಳು ೧೮೬೪ರ ವರೆಗೆ ಸೊಲ್ಲಾಪುರ ಕಲೆಕ್ಟರೇಟ್‌ಗೆ ಸೇರಿದ್ದವು.

ಕೃಷ್ಣಾನದಿಯ ದಕ್ಷಿಣ ಭಾಗದ ಬಾಗಲಕೋಟೆ, ಬಾದಾಮಿ, ಹುನಗುಂದ ಮತ್ತು ಹೊಸದಾಗಿ ರಚಿಸಿದ್ದ ಬೀಳಗಿ, ಕೆರೂರ ತಾಲೂಕಿಗಳ ಧಾರವಾಡ ಕಲೆಕ್ಟರೇಟ್‌ಗೆ ಸೇರಿಸಲಾಯಿತು. ೧೮೩೭ರಲ್ಲಿ ಕಲಾದಗಿ ಕಲೆಕ್ಟರೇಟ್ ಆರಂಭವಾದಾಗ ಇಂಡಿ, ವಿಜಾಪುರ, ಹಿಪ್ಪರಗಿ, ಮನಗೂಳಿ, ಮುದ್ದೇಬಿಹಾಳ, ಬಾಗಲಕೋಟೆ, ಬದಾಮಿ ಹಾಗೂ ಹುನಗುಂದ ತಾಲೂಕುಗಳು ಅದಕ್ಕೆ ಸೆರಿದವು. ೧೮೬೮ರಲ್ಲಿ ಮನಗೂಳಿ ತಾಲೂಕನ್ನು ಬಾಗೇವಾಡಿಗೆ ಮತ್ತು ಹಿಪ್ಪರಗಿ ತಾಲೂಕನ್ನು ಸಿಂದಗಿಗೆ ವರ್ಗಾಯಿಸಲಾಯಿತು. ೧೮೮೫ರಲ್ಲಿ ಕಲಾದಗಿ ಜಿಲ್ಲಾ ಕೇಂದ್ರವನ್ನು ವಿಜಾಪುರಕ್ಕೆ ವರ್ಗಾಯಿಸಲಾಯಿತು. ಆಗ ಕೆಲವು ಗ್ರಾಮಗಳನ್ನು ಬೇರೆ ಬೇರೆ ತಾಲೂಕುಗಳಿಗೆ ಸೇರ್ಪಡಿಸುವ ಚಿಕ್ಕ ಪುಟ್ಟ ಬದಲಾವಣೆಗಳೂ ಕೂಡಾ ನಡೆದವು.

ಜಮಖಂಡಿ ಮತ್ತು ಮುಧೋಳ ಸಂಸ್ಥಾನಗಳನ್ನು ಸ್ವತಂತ್ಯ್ರ ತಾಲೂಕುಗಳನ್ನಾಗಿ ಮಾರ್ಪಡಿಸಲಾಯಿತು. ೧೯೫೯ರಲ್ಲಿ ಬೀಳಗಿ ಉಪ ತಾಲೂಕನ್ನು ತಾಲೂಕು ಕೇಂದ್ರವನ್ನಾಗಿ ಪರಿವರ್ತಿಸಲಾಯಿತು. ಒಟ್ಟು ೧೧ ತಾಲೂಕುಗಳನ್ನು ಹೋಂದಿದ್ದ ವಿಜಾಪುರ ಜಿಲ್ಲೆಯನ್ನು ಅಗಸ್ಟ ೧೯೯೭ರಲ್ಲಿ ಬಾಗಲಕೋಟ ಜಿಲ್ಲೆಯನ್ನಾಗಿ ಮಾಡಿ, ಕೃಷ್ಣಾ ನದಿಯ ದಕ್ಷಿಣ ಭಾಗದ ಆರು ತಾಲೂಕುಗಳನ್ನು ಅದಕ್ಕೆ ಸೇರಿಸಲಾಯಿತು.

ವಿಜಾಪುರ ಜಿಲ್ಲೆಯ ವಿಸ್ತೀರ್ಣ ಭಾರತೀಯ ಸರ್ವೇ ಇಲಾಖೆ ನೀಡಿರುವ ವರದಿಯಂತೆ ೧೦.೫೩೬.೨೩ ಚ.ಕಿ.ಮೀ. ಇದೆ. ಅದರಲ್ಲಿ ಬಸವನ ಬಾಗೇವಾಡಿ ತಾಲೂಕು ೧,೯೭೩,೯೬ ಚ.ಕಿ.ಮೀ. ವಿಸ್ತರಣೆಯಲ್ಲಿದ್ದು, ೧೧೯ ಗ್ರಾಮಗಳು, ೩ ಹೋಬಳಿಗಳು, ೧ ಪುರಸಭೆ ಮತ್ತು ಅಲಮಟ್ಟಿ-ಸೀತಿಮನಿ ಅದಿಸೂಚಿತ ಪ್ರದೇಶದಲ್ಲಿ ಸೇರುತ್ತವೆ. ವಿಜಾಪುರ ಜಿಲ್ಲೆಯ ೧೮,೦೬,೯೧೮ ಜನಸಂಖ್ಯೆಯಲ್ಲಿ ಬಸವನ ಬಾಗೆವಾಡಿ ತಾಲೂಕು ೩,೦೩,೨೯೦ ಜನಸಂಖ್ಯೆಯನ್ನು ಹೊಂದಿದೆ. (ಕವಿವಿ, ಸಂ.೨, ೨೦೦೭, ಪು.೩೮೨) ಇದು ೧೨ನೆಯ ಶತಮಾನದ ಬಸವಣ್ಣನವರ ಜನ್ಮ ಸ್ಥಳವೆಂದು ಹೆಸರು ಪಡೆದ ಹಿನ್ನೆಲೆಯಲ್ಲಿ ೧೯೬೮ರಿಂದ ಬಸವಣ್ಣನವರ ಹೆಸರನ್ನು ಸೇರಿಸಿ ಬಸವನ ಬಾಗೇವಾಡಿ ಎಂದು ಕರೆಯಲಾಗುತ್ತಿದೆ. ಡಾ. ಎಸ್. ಎಂ. ಜಾಮದಾರ ಅವರು ಕರ್ನಾಟಕ ಸರ್ಕಾರ ಸ್ಥಾಪಿಸಿದ ಅಭಿವೃದ್ಧಿ ಪ್ರಾಧಿಕಾರದ ನೇತೃತ್ವವನ್ನು ವಹಿಸಿಕೊಂಡು ಅನೇಕ ಯೋಜನೆಗಳನ್ನು ರೂಪಿಸಿದ್ದಾರೆ. ಈಗ ಬಸವನ ಬಾಗೇವಾಡಿ ಸರ್ವತೋಮುಖ ಬೆಳವಣಿಗೆಯಾಗುತ್ತಿದೆ.

ವಿಜಾಪುರ ಜಿಲ್ಲೆ ವಿಭಾಗವಾಗುವ ಪೂರ್ವದಲ್ಲಿ ಬಹು ವಿಸ್ತಾರವಾದ ಪ್ರದೇಶವನ್ನು ಹೊಂದಿತ್ತು. ಈ ಜಿಲ್ಲೆಯನ್ನು ವಿಭಾಗಮಾಡಿಕೊಂಡು ಐತಿಹಾಸಿಕ ಪರಂಪರೆಯನ್ನು ಪುನರ್ ಚಿಸುವುದು ಕಷ್ಟದ ಕೆಲಸ. ಪ್ರಾಕೃತಿಕ ಸಂಪತ್ತಿನಿಂದ ಕೂಡಿದ ಒಟ್ಟು ಪ್ರದೇಶದಲ್ಲಿ ಮಲಪ್ರಭಾ, ಘಟಪ್ರಭಾ, ಕೃಷ್ಣ, ಡೋಣಿ ಮತ್ತು ಭೀಮಾ ನದಿಗಳುದ್ದಕ್ಕೂ ಪ್ರಾಚೀನ ಮಾನವನ ಸಾಂಸ್ಕೃತಿಕ ಕುರುಹುಗಳಿವೆ. ಅನಗವಾಡಿ, ಕೊಣ್ಣೂರು. ತೆರದಾಳ, ಹಳಿಂಗಳಿ ಗುಳೆದಗುಡ್ಡ, ಐಹೊಳೆ, ಪಟ್ಟದಕಲ್ಲು ಮತ್ತು ಬಾದಾಮಿ ಆದಿ ಹಳೆಶಿಲಾಯುಗದಿಂದ ಬೃಹತ್‌ಶಿಲಾ ಸಂಸ್ಕೃತಿಯವರೆಗಿನ ಪಾರಂಪರಿಕ ನೆಲೆಗಳಾಗಿವೆ. ಇಲ್ಲಿಯ ಇಂಗಳೇಶ್ವರ, ಬಸವನ ಬಾಗೇವಾಡಿ, ಸಾಲವಾಡಿಗಿ ಮಧ್ಯ-ಅಂತ್ಯ ಹಳೆಶಿಲಾಯುಗದ ವಿಶಿಷ್ಟ ಬಗೆಯ ಉಪಕರಣಗಳನ್ನು ಹೊಂದಿದ ನೆಲೆಗಳಾಗಿವೆ. ಆದಿ ಮತ್ತು ಮಧ್ಯ ಇತಿಹಾಸ ಕಾಲದ ನೆಲೆಗಳ ಜಿಲ್ಲೆಯಾದ್ಯಂತ ಹರಡಿವೆ. ಚಾಳುಕ್ಯರ ರಾಜಧಾನಿಯಾದ ಬಾದಾಮಿ ಮತ್ತು ಆದಿಲ್‌ಶಾಹಿಗಳ ರಾಜಧಾನಿಯಾದ ವಿಜಾಪುರ ಇಂದಿಗೂ ಸಾಸಂಸ್ಕೃತಿಕ ನಗರಗಳೆಂದು ಹೆಸರು ಪಡೆದು ಅಂತರ್ ರಾಷ್ಟ್ರೀಯ ಪ್ರವಾಸಿ ತಾಣಗಳಾಗಿವೆ.

ಗ್ರಂಥಋಣ

೧. ಕೊಪ್ಪಾ ಎಸ್. ಕೆ. , ೧೯೯೦, ತರ್ದವಾಡಿ ನಾಡು ಒಂದು ಅಧ್ಯಯನ, ಪ್ರತಿಭಾ ಪ್ರಕಾಶನ, ಇಂಡಿ

೨. ಗುರವ ಆರ್.ಎನ್., ೧೯೭೯, ತರ್ದವಾಡಿ ನಾಡು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ

೩. ಬಡಿಗೇರ ವಿ.ಎಸ್., ೧೯೯೪, ಬಸವನ ಬಾಗೇವಾಡಿ ಪ್ರದೇಶ ಒಂದು ಸಾಂಸ್ಕೃತಿಕ ಅಧ್ಯಯನ, (ಅಪ್ರಕಟಿತ ಎಂ.ಫಿಲ್, ಪ್ರಬಂಧ), ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ

೪. ಬಡಿಗೇರ ವಿ.ಎಸ್., ೧೯೯೪, ಬಸವನ ಬಾಗೇವಾಡಿ ತಾಲೂಕಿನಲ್ಲಿಯ ಪುರಾತತ್ವ ಅವಶೇಷಗಳು – ಒಂದು ವರದಿ, ಇತಿಹಾಸ ದರ್ಶನ, ಸಂ. ೯, ಕರ್ನಾಟಕ ಇತಿಹಾಸ ಅಕಾದೆಮಿ, ಬೆಂಗಳೂರು

೫. ಮುನಿಸ್ವಾಮಿ ಆರ್. (ಸಂ), ೧೯೯೯, ಕರ್ನಾಟಕ ರಾಜ್ಯ ಗ್ಯಾಜೆಟೀಯರ್, ವಿಜಾಪುರ ಜಿಲ್ಲೆ, ಬೆಂಗಳೂರು

೬. ರಾಮಚಂದ್ರೆಗೌಡ ಹಿ.ಶಿ.(ಸಂ), ೨೦೦೭, ಕನ್ನಡ ವಿಷಯ ವಿಶ್ವಕೋಶ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು

೭. ವಾಸುದೇವ ಬಡಿಗೇರ, ೧೯೯೬, ಸಂಡೂರು ಪರಿಸರದ ಕಾರ್ತಿಕೇಯ ತಪೋವನ, ಮಯ ಪ್ರಕಾಶನ, ಕಮಲಾಪುರ

೮. ವಾಸುದೇವ ಬಡಿಗೇರ, ೨೦೦೪, ಶಿರಸಂಗಿ ಕಾಳಮ್ಮ ಚಾರಿತ್ರಿಕ ಅಧ್ಯಯನ, ಶ್ವೇತಾ – ಭಾಗಿರತಿ ಪ್ರಕಾಶನ, ಹೊಸಪೇಟೆ

೯. ಶಿವತಾರಕ್ ಕೆ.ಬಿ., ೨೦೦೧, ಕರ್ನಾಟಕದ ಪುರಾತತ್ವ ನೆಲೆಗಳು, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ

೧೦. ಸುಂದರ ಅ., ೨೦೧೦, ಪ್ರಾಗೈತಿಹಾಸಿಕ ಕಾಲ, ಬಿಜಾಪುರ ಜಿಲ್ಲಾ ಸಾಂಸ್ಕೃತಿಕ ಪರಂಪರೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ವಿಜಾಪುರ

೧೧. ಸುಂದರ ಅ., ೧೯೯೬, ಬೆಳಗಾವಿ ಜಿಲ್ಲಾ ಪ್ರದೇಶದಲ್ಲಿಯ ಪೂರ್ವಭಾವಿ ಇತಿಹಾಸ ಸಂಸ್ಕೃತಿಗಳು ಕೆಲವು ಮುಖ್ಯ ಸೂಚನೆಗಳು ಇತಿಹಾಸ ದರ್ಶನ, ಸಂ. ೧೧, ಕರ್ನಾಟಕ ಇತಿಹಾಸ ಅಕಾದೆಮಿ, ಬೆಂಗಳೂರು

೧೨. ಸುಂದರ ಅ. (ಸಂ), ೧೯೯೭, ಕರ್ನಾಟಕ ಚರಿತ್ರೆ, ಸಂ. ೧, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ

 1. Agaraval O.P., 1970, Iron Objects from South Indian Megaliths, A Technical Study and Significance, (D.A.M.)
 2. Allchin F.R., 1963, Neolithic Cattle-Keepers of South India, London
 3. Foote R.B., 1916, The Foote Collection of Indian Pre-historic and Protohistoric Antiquities, Govt. Museum, Chennai (Madras)
 4. Gururaja Rao B.K., 1972, Megalithic Culture in South India, Prasaranga, University of Mysore, Mysore
 5. Joshi R.V., 1965, The Pleistocene Studies of the Malaprabha Basin, Karnataka University, Dharwad and Deccan college Post Graduate and Research Institute, Poona
 6. Mudhol M.S., 1997, A Technical Study of megalithic Metal Objects, D.A.M., Mysore
 7. Nagaraja Rao M.S., 1970, The Proto Historic Cultures of the Tungabhadra Valley, Dharwad
 8. Nagaraja Rao M.S., 1990, Graves of the Early Iron Using People at Komaranahalli, Recent Evidence, A.K. (D.A.M)
 9. Paddayya K., 1975, Pre and proto Historic Finds from Salvadgi Hills, Bijapur District, Karnataka, Journal of University of Poona, Pune
 10. Pappu R.S., 1975, The Pleistocene of the Krishna Basin, Deccan College Post Graduate and Research Institute, Poona
 11. Sankalia H.D., 1974, The Prehistory and Protohistory of India and Pakistan, Poona
 12. Sheshadri M., 1962, The Stone Age Tools from Salvadagi, Bijapur District, Mysore State, Journal of the Mysore University, Vol. 21.
 13. Sundar A., 1968, Proto Historic Sites in Bijapur Districts, Journal of Karnataka University, Vol. 4, Sr-2
 14. Sundar A., 1975, The Early Chamber Tombs of South India, Concept Publishing Company, New Delhi

15.Vasudev Badiger, 2001, A Report on Pre and proto Historical Sites of Bijapur Region, Hemakuta, Recent Researches in Archaeology and Museology (Shri C.T.M. Kotraiah Felicitation Vol.), Bharatiya Kala Prakashan, Delhi.