ನನ್ನ ಮಾತುಗಳು ಇಲ್ಲಿ ಪ್ರಮೇಯ ರೂಪದಲ್ಲಿ ಇರುತ್ತವೆಯೇ ಹೊರತು ನಿರ್ಣಯ ರೂಪದಲ್ಲಿ ಇರುವುದಿಲ್ಲ. ಇಲ್ಲಿ ಮಂಡಿತವಾಗಿರುವ ವಿಚಾರಗಳನ್ನು ಚರ್ಚಿಸಬಹುದು, ತರ್ಕಿಸಬಹುದು ಏಕೆಂದರೆ ಚರ್ಚೆಗೆ ಅರ್ಹವಾದವು. ಆರಂಭದಲ್ಲಿ ಭಾಷಾ ಶಾಸ್ತ್ರದಲ್ಲಿ ಸ್ಥಳನಾಮಗಳ ಅಧ್ಯಯನ ವರ್ಣನಾತ್ಮಕ ನೆಲೆಯಲ್ಲಿ ಆರಂಭವಾಯಿತು. ನಂತರ ಅದು ಸಾಮಾಜಿಕ ನೆಲೆಗೆದಾಟಿತು. ೧೯೪೦ರಲ್ಲಿ ಶಂಬಾ ಜೋಶಿಯವರು ಸ್ಥಳನಾಮಗಳನ್ನು ಸಂಸ್ಕೃತಿ ಅಧ್ಯಯನಕ್ಕೆ ಆಕರವಾಗಿ ಬಳಸಿಕೊಂಡು ಅದರ ಮಹತ್ವವನ್ನು ಹೆಚ್ಚಿಸಿದ್ದಾರೆ. ಈ ಹಿನ್ನೆಲೆಯಿಂದ ಸ್ಥಳನಾಮಗಳು ಸಂಸ್ಕೃತಿಯ ಪಳೆಯುಳಿಕೆಗಳು. ಇತ್ತೀಚಿನ ದಿನಗಳಲ್ಲಿ ಸ್ಥಳನಾಮ ಅಧ್ಯಯನ ಒಂದಕ್ಕಿಂತ ಹೆಚ್ಚು ಜ್ಞಾನ ಶಾಖೆಗಳಿಗೆ ಒಳಗಾಗುತ್ತಿದೆ. ಇದರಿಂದ ಸ್ಥಳನಾಮ ಅಧ್ಯಯನ ಜನಪ್ರಿಯವಾಗುತ್ತಿದೆ.

ಒಂದು ಪ್ರದೇಶದ ಸಾಂಸ್ಕೃತಿಕ ಚರಿತ್ರೆ ಅಧ್ಯಯನದಲ್ಲಿ ಅವಶ್ಯವಾಗಿ ಗಮನಿಸಬೇಕಾದ ಅಂಶಗಳಲ್ಲಿ ಸ್ಥಳನಾಮವು ಒಂದು. ಬದಲಾದ ಭೌಗೋಳಿಕ ಸ್ವರೂಪದ ಚರಿತ್ರೆಗೆ ಇದು ಸುಳುಹು ನೀಡುತ್ತದೆ. ಐತಿಹಾಸಿಕ ಘಟನೆಗೆ ಪುಷ್ಟಿ ನೀಡುತ್ತದೆ. ಸ್ಥಳನಾಮಗಳ ಅಧ್ಯಯನದ ಸ್ವರೂಪ ಕಾಲದಿಂದ ಕಾಲಕ್ಕೆ ಬದಲಾವಣೆ ಆಗಿದೆ. ಸ್ಥಳನಾಮಗಳನ್ನು ಕೆಲವರು ಪಂಡಿತ, ಪಾಮರ ಮತ್ತು ನಿಜ ನಿಷ್ಪತ್ತಿ ಹಿನ್ನೆಲೆಯಲ್ಲಿ ಅಧ್ಯಯನ ಮಾಡಿದ್ದಾರೆ. ನಿಜ ನಿಷ್ಪತ್ತಿ ನೆಲೆಯಲ್ಲಿ ಬರಹದ ನೆಲೆ ಮತ್ತು ಬಳಕೆಯ ನೆಲೆಯಲ್ಲೂ ಅಧ್ಯಯನ ಮಾಡಬಹುದಾಗಿದೆ. ಪ್ರಸ್ತುತ ಸ್ಥಳನಾಮವಾದ ‘ಬಾಗೇವಾಡಿ’ ಎಂಬುದು ನಿಸರ್ಗವಾಚಿಯೋ ಅಥವಾ ವ್ಯಕ್ತಿವಾಚಿಯೋ ಎಂಬುದು ಗಮನಿಸುವಂತಹ ಅಂಶವಾಗಿದೆ. ‘ಬಸವನ’ ಪದದ ಬಗ್ಗೆ ತಕರಾರು ಇಲ್ಲ.

ಚಾರಿತ್ರಿಕವಾಗಿ ಸ್ಥಳನಾಮಗಳನ್ನು ಮೂರು ರೀತಿ ಅಧ್ಯಯನ ಮಾಡಲಾಗಿದೆ. ಒಂದು: ಸಹಜ ಸೃಷ್ಟಿ ಮಾದರಿಯ ಸ್ಥಳನಾಮಗಳು. ಇಲ್ಲಿ ಎರಡು ಭಾಗವು (ನಿರ್ದಿಷ್ಟ ಮತ್ತು ವಾರ್ಗಿಕ) ನಿಸರ್ಗವಾಚಿಯಾಗಿ ಬಳಕೆಯಲ್ಲಿರುತ್ತದೆ. ಉದಾ : ಹುಣಸಿಬಾವಿ. ಎರಡು : ಸಂಸ್ಕೃತೀಕರಣದ ಮಾದರಿಯ ಸ್ಥಳನಾಮಗಳು ಎಲ್ಲಿ ಕನ್ನಡದ ಅನೇಕ ಊರುಗಳನ್ನು ಸಂಸ್ಕೃತ ಭಾಷೆಗೆ ಪರಿವರ್ತಿಸಿ ಬಳಸುವ ಪ್ರಯತ್ನ ಮಾಡಲಾಗಿದೆ. ಉದಾ : ಮೈಸೂರು ಹಾಗೆಯೇ ವಸಾಹತುಶಾಹಿ ಆಡಳಿತ ಸಂದರ್ಭದಲ್ಲಿ ಭಾರತದ ಅನೇಕ ಊರುಗಳ ಹೆಸರುಗಳು ಆಂಗ್ಲ ಉಚ್ಚಾರಣೆಯನ್ನು ಪಡೆದುಕೊಂಡು ಬಳಕೆಯಲ್ಲಿವೆ. ಮತ್ತೆ ಈಗ ಕನ್ನಡೀಕರಣಗೊಂಡಿವೆ.

ಉದಾ : ಮಂಗಳೂರು – ಮ್ಯಾಂಗ್ಲೂರ್ – ಮಂಗಳೂರು
ಬೆಂಗಳೂರು – ಬ್ಯಾಂಗ್‌ಳ್ಲೂರ್ ಬೆಂಗಳೂರು
ಹೊಸಪೇಟೆ – ಹೋಸ್‌ಪೇಟ್‌ – ಹೊಸಪೇಟೆ
ಕಲ್ಕತ್ತಾ – ಕೋಲ್ಕತ್‌ – ಕಲ್ಕತ್ತಾ

ಕನ್ನಡದಲ್ಲಿ ಆಡಳಿತ ನಡೆಯಬೇಕು ಎಂಬ ಕಾರಣಕ್ಕಗಿ ಇಂಗ್ಲೀಷ್‌ನ ಉಚ್ಚಾರಣೆಯಲ್ಲಿದ್ದ ಈ ಊರುಗಳನ್ನು ಕನ್ನಡದಲ್ಲಿ ಸ್ವರಾಂತಗೊಳಿಸಿ ಬಳಕೆ ಮಾಡಲಾಗಿದೆ. ಸಾಮಾನ್ಯವಾಗಿ ಸ್ಥಳನಾಮಗಳಲ್ಲಿ ಎರಡು ಪದಗಳಿರುತ್ತವೆ. ಭಾಷಾಶಾಸ್ತ್ರಜ್ಞರು ಈ ಎರಡು ಪದಗಳ ರಚನೆ ಮತ್ತು ಬಳಕೆಯ ಸಂದರ್ಭಗಳನ್ನಾಧರಿಸಿ ಪೂರ್ವ ಪದವನ್ನು ಆಂಗ್ಲಭಾಷೆಯಲ್ಲಿ ‘ಪ್ರಿಫಿಕ್ಸ್’ ಎಂದು ಉತ್ತರ ಪದವನ್ನು ‘ಸಫಿಕ್ಸ್‌’ ಎಂದು ಕರೆಯುತ್ತಾರೆ. ಅದರಲ್ಲಿ ಪೂರ್ವಪದ ವಿಶಿಷ್ಟವಾದ ಅರ್ಥದಿಂದ ಬಳಕೆಯಲ್ಲಿರುತ್ತದೆ. ಉತ್ತರಪದ ಸಾಮಾನ್ಯವಾದ ಅರ್ಥದಿಂದ ಕೂಡಿರುತ್ತದೆ. ಪೂರ್ವ ಪದವನ್ನು ನಿರ್ದಿಷ್ಟ ಎಂತಲೂ ಕರೆಯಲಾಗುವುದು. ಸ್ಥಳನಾಮಗಳ ಮೂಲ ಅಡಗಿರುವುದು ನಿರ್ದಿಷ್ಟ ಭಾಗದಲ್ಲಿ ಎಂದರೆ ತಪ್ಪಾಗಲಾರದು. ಉತ್ತರ ಪದ ಅಂದರೆ ವಾರ್ಗಿಕ ಭಾಗದಲ್ಲಿ ‘ಪಾಡಿ’, ‘ವಾಡ’, ‘ಪುರ’, ‘ಹಳ್ಳಿ’ ಮತ್ತು ‘ಊರು’ ಮುಂತಾದ  ರಚನೆಗಳು ಸಾಮಾನ್ಯವಾದ ಅರ್ಥದಲ್ಲಿ ಬಳಕೆಯಲ್ಲಿದೆ. ವಾಸ್ತವವಾಗಿ ಒಂದು ಸ್ಥಳಕ್ಕೂ ಅದಕ್ಕಿರುವ ಅರ್ಥಕ್ಕೊ ನಡುವಿನ ಅರ್ಥಸಂಬಂಧ ಪರಸ್ಪರ ಯಾದೃಚ್ಚಿಕವಾದುದು. ಸ್ಥಳಕ್ಕೆ ತಕ್ಕಂತೆ ಹೆಸರು ಇರುವುದಿಲ್ಲ. ಅದೇ ರೀತಿ ಹೆಸರಿಗೆ ತಕ್ಕಂತೆ ಊರು ಇರುವುದಿಲ್ಲ. ಹೆಚ್ಚಿನ ಸಂದರ್ಭದಲ್ಲಿ ಇವೆರಡರ ಸಂಬಂಧ ಕೇವಲ ಸಂಬೋಧನೆಗಾಗಿ ಇದೆಯೇ ಹೊರತು, ಅದರಿಂದಾಚೆಗೆ ಏನು ಇರುವುದಿಲ್ಲ. ಈ ಹಿನ್ನೆಲೆಯಿಂದ ಸ್ಥಳನಾಮಗಳು ಹೆಸರಿಸುತ್ತವೋ  ಅಥವಾ ವರ್ಣಿಸುತ್ತವೋ ಎಂಬುದು ಗಮನಿಸುವಂತಹ ಅಂಶ. ಹೆಚ್ಚಿನ ಪ್ರಮಣದಲ್ಲಿ ಸ್ಥಳನಾಮಗಳು ಹೆಸರಿಸುತ್ತವೆ. ಕೆಲವು ಸಂದರ್ಭದಲ್ಲಿ ವರ್ಣಿಸುತ್ತವೆ. ಕಲ್ಲೂರು ಎಂಬಲ್ಲಿ ಬರಿ ಕಲ್ಲುಗಳೆ ಇರಬೇಕಾಗಿಲ್ಲ. ಇಂತಹ ಸಂದರ್ಭದಲ್ಲಿ ಸ್ಥಳನಾಮಗಳು ವರ್ಣಿಸುತ್ತಿಲ್ಲ. ಸ್ಥಳನಾಮಗಳಲ್ಲಿ ವ್ಯಕ್ತಿಯಾಧಾರಿತ ಸ್ಥಳನಾಮಗಳು ಸಂಪ್ರದಾಯಬದ್ಧವಾಗಿಯೂ ಮತ್ತು ನಂಬಿಕೆಯ ಭಾಗವಾಗಿಯೂ ಬಳಕೆಯಲ್ಲಿವೆ.

ಬಾಗೆ ಅಥವಾ ಬಾಗ ಪದದ ಅರ್ಥ:

ಕನ್ನಡ ಮತ್ತು ಕನ್ನಡ ನಿಘಂಟು (ಪು:೬೭೫೯) ವಿನಲ್ಲಿ ‘ಬಾಗೆವಾಡಿ’ (ನಾ) ಬಾಣೆ (ನಾ) ಬಾಗೆಯ (ನಾ) ಬಾಗೆಯಾರ‍್ (ನಾ) ಮುಂತಾದ ಪದಗಳು ಉಲ್ಲೇಖಗೊಂಡಿವೆ. ಬಾಗೆವಾಡಿ ಎಂದರೆ ಒಂದು ಊರಿನ ಹೆಸರು. ಬಸವಣ್ಣನವರು ಹುಟ್ಟಿದ ಜಾಗ. ಈಗಿನ ವಿಜಾಪುರ ಜಿಲ್ಲೆಯ ಬಸವನ ಬಾಗೆವಾಡಿ ಎಂಬ ಅರ್ಥಗಳಲ್ಲಿ ಬಳಕೆಯಲ್ಲಿದೆ. ಬಾಗೆ ಎಂದರೆ ಒಂದು ಬಗೆಯ ಮರ ಎಂಬರ್ಥದಲ್ಲಿ ಬಳಕೆಯಲ್ಲಿದೆ. ಬಾಗೆಯ ಎಂದರೆ ಒಬ್ಬವ್ಯಕ್ತಿಯ ಹೆಸರು. ಬಾಗೆಯ ಪದವನ್ನು ಬಾಗೆ + ಅಯ >ಅಯ್ಯ ಎಂದು ವಿಭಜಿಸಲು ಸಾಧ್ಯ. ಬಾಗೆಯಾರ್ ಎಂಬ ಮತ್ತೊಂದು ರೂಪ ಬಳಕೆಯಲ್ಲಿದೆ. ಇದು ಬಾಗೆ + ಊರು ಬಾಗೆಯಾರ‍್ ಎಂದು ವಿಭಜಿಸಲಾಗಿದೆ. ಒಟ್ಟಾರೆ ಬಾಗೆಯ ಎಂಬ ಪ್ರಸಿದ್ಧ ವ್ಯಕ್ತಿಯೊಬ್ಬ ಇದ್ದು ಆತ ನೆಲೆಸಿರುವ ಸ್ಥಳಕ್ಕೆ ವಾಡೆ ಎಂದಿದ್ದು ‘ಎ’ ಕಾರಾಂತ ಪದ ಕನ್ನಡದಲ್ಲಿ ‘ಇ’ ಕಾರಾಂತವಾಗಿ ‘ಬಾಗೆವಾಡಿ’ ಆಗಿರಬಹುದೆಂದು ಊಹಿಸಬಹುದಾಗಿದೆ.

ಬಾಡ-ವಾಡ ಆಗಿ ‘ಬಾಡ’ ಎಂಬುದು ಪಟ್ಟಿಯ ಬಳಗಕ್ಕೆ ಸೇರಿದ ಪದವಾಗಿದೆ. ಪಂಪಭಾರತದಲ್ಲಿ ‘ಆಯ್ದು ಬಾಡಮಂ ಅವರ್ಗೀವುದು’ ಎಂಬ ಮಾತನ್ನು ಶಂಬಾ ಅವರು ಈ ನಾಡಿನ ಪಟ್ಟಿಗಳೇ ‘ಬಾಡ’ ಎನ್ನುತ್ತಾರೆ. ಮೂಲತಹ ಗೋವಳರೇ ಇಲ್ಲಿ ವಾಸಿಸುತ್ತಿದ್ದರು. ಗೋವಳ ಪದ ಗವುಡ > ಗಾವುಂಡ > ಗೌಳ > ಗೌಳಿಗೆ > ಗೋವಳಿ ಆಗಿದೆ ಎಂದು ಇವರುವಾದಿಸುತ್ತಾರೆ. ‘ಬಾಡ’ ಎಂದರೆ ಊರು, ಗ್ರಾಮ ಎಂಬ ಅರ್ಥಗಳಿವೆ. ಬಾಡವ್ಯ ಎಂದರೆ ಬ್ರಾಹ್ಮಣರ ಗುಂಪು ಎಂಬರ್ಥವಿದೆ. ಪಂಪ ಕವಿ ಹೇಳುವ ‘ಆಯ್ದು ಬಾಡಮಂ ಅವರ್ಗೀವುದು’ ಎಂದರೆ ಬ್ರಾಹ್ಮಣರಿಗೆ ದಾನ ನೀಡುವ ಎಂಬರ್ಥ ವಿರಬಹುದೇ? ಹಾಗಾದಲ್ಲಿ ಇದು ಜನಾಂಗಿಕ ವಾಸವನ್ನು ಸೂಚಿಸುವ ಪದವೇ ಆಗುತ್ತದೆ.

ಹಟ್ಟಿ : ಪಟ್ಟಿ > ಪಾಡಿ – ಪಾಡ – ವಾಡ – ಬಾಡ  ಇವೆಲ್ಲ ಪುಡುಧಾತುವಿನಿಂದ ಉತ್ಪನ್ನಗೊಂಡಂತಹ ಪದಗಳೇ. ಪಟ್ಟಿಯಲ್ಲಿದ್ದವ ಪಟ್ಟಲ > ಪಾಟೀಲ > ಗೌಡ > ಗೌಳ – ಗೋವಳ : ವಟ (ಮರ) ವಡ ವಾಡಿಗಳು ಎಂದು ಶಂಬಾ ಅವರು ಅಭಿಪ್ರಾಯ ಪಡುತ್ತಾರೆ. ಮೂಲಕ ಪಟ್ಟಿ : ಪಾಡಿ, ವಾಡಿ-ಹಟ್ಟಿ ಮೊದಲಾದ ಗ್ರಾಮನಾಮದ ರೂಪಗಳು ಜನಾಂಗಗಳು ವಾಸಸ್ಥಾನ ಸೂಚಕಗಳಾಗಿವೆ. ಪಟ್ಟಿ ಮತ್ತು ಹಟ್ಟಿ ಎಂಬುದು ಹಟ್ಟಿಕಾರ ಇಲ್ಲವೇ ದನಗಾಡಿ ಸಂಸ್ಕತಿಯನ್ನು ಪ್ರತಿನಿಧಿಸುತ್ತದೆ ಎನ್ನುತ್ತಾರೆ ಶಂಬಾ ಅವರು. ಅಂದರೆ ಇವರು ಒಂದು ನಿರ್ದಿಷ್ಟ ಜನಾಂಗ ಹಟ್ಟಿ ಅಥವಾ ಪಾಡಿಯಲ್ಲಿ ವಾಸಿಸುತ್ತಿತ್ತು ಎಂದು ಖಚಿಪಡಿಸುವುದಿಲ್ಲ. ಆದರೂ ದನಗಾಹಿಗಳು ಎನ್ನುವ ಗೋವಳಿಗರು ಅಥವಾ ಗೊಲ್ಲರು ಎಂಬುದು ಇದರಿಂದ ವ್ಯಕ್ತವಾದರೆ ಹಟ್ಟಿಕಾರನೆಂದರೆ ಕುರುಬನೂ ಇರಬಹುದೆಂಬ ಅನುಮಾನ ಬರುತ್ತದೆ. ತನ್ನ ಮೂಲ ವೃತ್ತಿಯಾದ ಕುರಿಸಾಕಾಣಿಕೆಯಿಂದ ಬೆಟ್ಟ ಗುಡ್ಡಗಳ ಅಂಚಿನಲ್ಲಿ ಹಟ್ಟಿಯನ್ನು ನಿರ್ಮಿಸಿಕೊಂಡು ನೆಲೆಸಿರಬೇಕು. ಗೊಲ್ಲರೂ ಈ ಬಗೆಯ ಹಟ್ಟಿಗಳನ್ನು ನಿರ್ಮಿಸಿಕೊಂಡಿದ್ದಾರೆ. ದನಗಳ ದೊಡ್ಡಿಯ ಪಕ್ಕದಲ್ಲಿ ಕಟ್ಟಿಕೊಂಡ ಹಟ್ಟಿಕಾರರ ನೆಲಗಳಿಗೆ ಹಟ್ಟಿ ಎಂದು ಕರೆಯುತ್ತಾರೆ ಎಂಬ ಅಭಿಪ್ರಾಯವಿದೆ. ಈ ಹಟ್ಟಿಯ ಕುಲದೇವತೆ ವೀರದೇವರು ಬೀರದೇವರು. ಅವನೇ ಹಟ್ಟಿನಾಡಿನ ಹಾಟಕೇಶ್ವರ. ಹಟ್ಟಿನಾಡಿನ ಹಟ್ಟಿಕಾರರೇ ಕಂನಾಡ ವೀರಕ್ಷತ್ರಿಯರು. ಶೈವ ವೀರರು ಎನ್ನುವ ಶಂಬಾ ಅವರು ರುದ್ರ-ಶಿವನ ಅನುಯಾಯಿಗಳಾದ ಒಂದು ಪಂಗಡದ ಹೆಸರು ವೀರಶೈವ ಎಂಬುದಕ್ಕೆ ಕಾರಣಗಳನ್ನು ತಿಳಿಸುತ್ತಾರೆ. ಕರ್ನಾಟಕದ ಮೂಲ ನಿವಾಸಿಗಳೆಂದು ಭಾವಿಸಿರುವ ಕುರುಂಬರು ಕಾವೇರಿಯಿಂದ ಹಿಡಿದು ಗಂಗೆಯವರೆಗೂ, ನಿಲಗಿರಿಯಿಂದ ರಾಜಸ್ಥಾನದವರೆಗೂ ವ್ಯಾಪಿಸಿದರು. ಈ ಮರವರು (ಜಾಡರು) ಮತ್ತು ಕುರುಂಬರೆಂಬ ಪಂಗಡಗಳಲ್ಲಿ ಒಡೆದಿದ್ದ ಹಟ್ಟಿಕಾರ-ದನಗಾರರು ಕಂದಮಿಳ ಜನಾಂಗದವರು. ಇವರು ಕಂನುಡಿ ಶಾಖೆಗೆ ಸೇರಿದವರೆಂದೂ, ಹಟ್ಟಿಕಾರರು, ಹಟಗಾರರೆಂದು ನೇಕಾರರಿಗೆ ಹೆಸರಿದೆಯೆಂದು ಶಂಬಾ ನೇಕಾರ ಜನಾಂಗದ ಬಗ್ಗೆಯೂ ಹೇಳುತ್ತಾರೆ.

ಗ್ರಾಮ, ಊರು, ಪುರು ಎಂಬುದು ಪುರಾತನವಲ್ಲವೆನ್ನುವ ಶಂಬಾ ಅವರು ಮಾನವನು ಪ್ರಾಥಮಿಕ ಸ್ಥಿತಿಯಲ್ಲಿ ಆಹಾರ ಸಂಚಯ್ಯನಕ್ಕಾಗಿ ಅಲೆಮಾರಿಯಾಗಿದ್ದು ಅವನ ವಸತಿ ಸೂಚಕವಾಗಿದ್ದ ಹೆಸರೇ -ಹಟ್ಟಿ ಎಂದು ವಾದಿಸುವರು. ಈ ಶಬ್ದವು ದನಗಾರಿಕೆ ಬಾಳಿನದ್ಯೂಪಕವಾಗಿದೆಯೆಂಬುದರದಲ್ಲಿ ಸಂದೇಹವಿಲ್ಲ. ಹಟ್ಟಿಗಳೇ ನಮ್ಮ ನಾಡಿನ ಆರಂಭಕಾಲದ ವಸತಿಗಳೆಂದು ಶಂಬಾ ಊಹಿಸುತ್ತಾರೆ.

ಅದೇನೇ ಇದ್ದರೂ ಹಟ್ಟಿಯೆಂಬ ವಾರ್ಗಿಕವನ್ನೊಂದಿದ ಸ್ಥಳನಾಮಗಳು ಬಹುತೇಕ ಪ್ರಾಚೀನವಾಗಿದ್ದು; ಅಲ್ಲಿ ಕುಹುಬರು, ಗೊಲ್ಲರು, ನೇಕಾರರು, ಆರಂಭದಲ್ಲಿ ವಾಸಿಸಿದ್ದಿರಬೇಕು. ಕಾಲಕ್ರಮೇಣ ಅನೇಕ ಹಿಂದುಳಿದ ಸಮುದಾಯಗಳು ಈ ಹಟ್ಟಿಗಳನ್ನು ನಿರ್ಮಿಸಿಕೊಂಡಿರಬೇಕೆನ್ನ ಬಹುದು. ಮೇಲಿನ ವಾರ್ಗಿಕಗಳಲ್ಲಿ ಹುಂಡಿ, ಮೋಳೆ, ಪೋಡು ಹೊರತುಪಡಿಸಿ ಉಳಿದೆಲ್ಲಾ ವಾರ್ಗಿಕಗಳು ಆಂಧ್ರ-ಕರ್ನಾಟಕ ಗಡಿ ಪ್ರದೇಶದಲ್ಲಿವೆ. ಹೀಗೆ ಸ್ಥಳನಾಮಗಳು ಅಧ್ಯಯನದ ಮೂಲಕ ಅದರಲ್ಲಿಯೂ ವಾರ್ಗಿಕಗಳಿಂದ ಒಂದು ಭೌಗೋಳಿಕ ಪರಿಸರದ ಜನಾಂಗಿಕ ಸಾಂಸ್ಕೃತಿಕ ಅಧ್ಯಯನ ಮಾಡಲು ಸಾಧ್ಯವಿದೆ. ಡಾ. ಶಂಬಾ ಅವರು ಈ ಪ್ರಯತ್ನಕ್ಕೆ ಮೊದಲ ಅಧ್ಯಯನಕಾರರಾಗಿ ನಿಂತರು. ಶಂಬಾ ಅವರು ಕೇವಲ ವಾರ್ಗೀಕಗಳಿಂದಲೇ ಕಂನಾಡ ಸಂಸ್ಕೃತಿಯನ್ನು ಪುನರಚಿಸಲು ಹೊರಟಿದ್ದು ಸಾಮಾನ್ಯವಾದ ಸಂಗತಿಯಲ್ಲ. ವಿಂಧ್ಯಾ – ಗೋದಾವರಿ ನಾಡುಗಳಲ್ಲಿಯೂ ಉತ್ತರ ಭಾರತದಲ್ಲಿಯ ಕರಿನಾಡಿನ ಸುಳಿವನ್ನು ಸ್ಥಳನಾಮಗಳ ಮೂಲಕ ಗುರುತಿಸುವ ಶಂಬಾ ಪ್ರತಿಯೊಂದಕ್ಕೂ ಭಾಷಿಕ, ಭೌಗೋಳಿಕ, ಜನಾಂಗಿಕ ಅಂತಹ ಪ್ರಮಾಣಗಳನ್ನು ಒದಗಿಸುತ್ತಾರೆ. ಕೆಲವು ವಾರ್ಗಿಕಗಳ ಮೂಲಕ ಜನಾಂಗಿಕ ಅಂಶವನ್ನು ಕಂನಾಡಿನ ಮೂಲ ನಿವಾಸಿಗಳನ್ನು ಗುರುತಿಸುವಾಗ ಶಂಬಾ ಅವರು ಅನೇಕ ಗೊಂದಲಗಳನ್ನು ಸೃಷ್ಟಿಸುತ್ತಾರೆ. ಹಟ್ಟಿಯಲ್ಲಿ ವಾಸಿಸುವವರನ್ನು ದನಗಾರರೆಂದೂ, ಗೌಳಿಗರು ಗೌಡರೆಂದೂ-ನೇಕಾರರೆಂದು, ಕುರುಂಬರು, ಕಂದಮಿಳರೆಂದೂ ಹೇಳಿ ಬಿಡುತ್ತಾರೆ. ಇದರಲ್ಲಿ ಯಾರ ನೆಲೆ ಎಂಬ ಬಗೆಗೆ ಖಚಿತವಾಗಿ ಹೇಳುವುದಿಲ್ಲ. ಒಟ್ಟಾರೆ ದನಗಾರರು, ಗೌಳಿಗರು, ನೇಕಾರರು ಎಂಬ ವ್ಯಕ್ತಿಯನ್ನು ಸೂಚಿಸುವ ಜನಾಂಗದ ಬಗೆಗೆ ಹೆಚ್ಚು ಮಹತ್ವ ಕೊಡುತ್ತಾರೆ. ಆ ಮೂಲಕ ಸಮುದಾಯಗಳ ಅಧ್ಯಯನೆಕ್ಕೆ ಎಳೆಗಳನ್ನು ಸೂಚಿಸುತ್ತಾರೆ. ಹೀಗೆ ಸ್ಥಳನಾಮಗಳ ವಾರ್ಗಿಕಗಳು ಒಂದು ನಾಡಿನ, ಒಂದು ದೇಶದ ಭೌಗೋಳಿಕ ಪರಿಸರದ ಸಾಂಸ್ಕೃತಿಕ, ಜನಾಂಗಿಕ, ನೈಸರ್ಗಿಕ ಅಂಶಗಳನ್ನು ತಿಳಿಯಲು ಆಕರಗಳಾಗಿವೆ. ಸಮುದಾಯದ ಅಧ್ಯಯನದ ಸಂದರ್ಭದಲ್ಲಿ ಇವುಗಳ ಮಹತ್ವ ಗಣನೀಯವಾದದೆನ್ನಬಹುದು.

ಕನ್ನಡ ನೆಲ ಕೆಲವು ಭಾಗಗಳು ವಿಜಯನಗರ ಪತನವಾದ ನಂತರ ಮುಸ್ಲಿಂರು ಮತ್ತು ಮರಾಠರ ಪ್ರಭಾವಕ್ಕೆ ಒಳಗಾಯಿತು. ಮರಾಠರ ಆಕ್ರಮಣಕ್ಕೆ ಒಳಪಟ್ಟ ಮೇಲೆ ಅನೇಕ ಮರಾಠಿ ಪದಗಳು ಕನ್ನಡಕ್ಕೆ ಬಂದು ಸೇರಿವೆ. ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ಕನ್ನಡದಲ್ಲಿ ಈಗಾಗಲೇ ನಡೆದಿರುವ ಅಧ್ಯಯನಗಳಲ್ಲಿ ‘ವಾಡೆ’ದಿಂದ ಕೊನೆಗೊಳ್ಳುವ ಊರುಗಳನ್ನು ಮರಾಠಿ ಮೂಲದಿಂದ ಹುಟ್ಟಿದುದು ಎಂದು ಹೇಳಲಾಗಿದೆ. ಇಲ್ಲಿ ಗಮನಿಸಬೇಕಾದ ಮುಖ್ಯ ವಿಚಾರವೆಂದರೆ ವಿಜಯನಗರ ಸಾಮ್ರಾಜ್ಯ ಕಾಲದಲ್ಲಿರಬಹುದು. ಅಥವಾ ಮರಾಠರ ಆಡಳಿತಕ್ಕಿಂತ ಮೊದಲು ಇದ್ದ-‘ವಾಡೆ’ದಿಂದ ಕೊನೆಗೊಳ್ಳುವ ಊರುಗಳನ್ನು ಮರಾಠಿ ಪ್ರಭಾವಿತ ಊರುಗಳೆಂದು ವಿಶ್ಲೇಷಿಸಲು ಸಾಧ್ಯವಿಲ್ಲ. ಹಾಗಾಗಿ ಮೂಲತಹ ‘ವಾಡೆ’ ಇದು ಅಚ್ಚಗನ್ನಡ ಪದ, ವಾಡಿ-ವಾಡ-ವಾಡಿ-ವಾಡ್-ವಾಡೆ. ಆದರೆ ಚಿಕ್ಕಕಾಡು ಹಾಡಿ ಎಂದರೆ ಊರಿನ ಭಾಗ ಎಂದು ಸಿರಿಗನ್ನಡ ಅರ್ಥಕೋಶದಲ್ಲಿ (ಪು.೪೭೫) ಉಲ್ಲೇಖವಿದೆ. ತೆಲುಗಿನಲ್ಲಿ ವಾಡ ಎಂಬುದಾಗಿಯೂ ಬಳಕೆಯಲ್ಲಿದೆ. ತೆಲುಗಿನಲ್ಲಿ ‘ವಾಡ’ ಎಂದರೆ ಬೀದಿ, ಓಣಿ ಎಂಬರ್ಥವಿದೆ. ಸಾಮಾನ್ಯವಾಗಿ ತೆಲುಗಿನಲ್ಲಿ ‘ಅ’ ಕಾರಾಂತವಾಗಿದ್ದರೆ ಕನ್ನಡದಲ್ಲಿ ‘ಎ’ ಕಾರಾಂತವಾಗಿರುತ್ತದೆ. ‘ವ’ ಸ್ವರ ಮೂಲ ದ್ರಾವಿಡ ಸ್ವರ. ಇದು ಕೆಲವು ಸಾಮಾಜಿಕ ಮತ್ತು ಪ್ರಾದೇಶಿಕ ಉಪಭಾಷೆಗಳಲ್ಲಿ ಇಂದಿಗೂ ಬಳಕೆಯಲ್ಲಿದೆ. ಈ ಹಿನ್ನೆಲೆಯಿಂದ ‘ಎ’ ಕಾರಾಂತ ‘ವಾಡೆ’ ಅಚ್ಚಗನ್ನಡ ಪದ. ‘ಬಾಗವಾಡಿ’ ಎಂಬಲ್ಲಿ – ಹಾಡಿ ಮತ್ತು – ವಾಡಿಗಳು ಪ್ರಾಚೀನ ಜನಾಂಗಗಳ ನೆಲೆಗಳೆಂದು ಶಂಬಾ ಅವರು ಅಭಿಪ್ರಾಯಪಡುತ್ತಾರೆ. ಕಾರಣ ಗಡಿಭಾಗದ ವಾಡಿಗಳು ಪ್ರಾಚೀನ ವಾಸ್ತವ್ಯವನ್ನು ನಿರ್ದೇಶಿಸುತ್ತವೆ.

‘ವಾಡಿ’ ಎಂಬ ವರ್ಗಿಕವನ್ನು ಬೇರೆ ಬೇರೆ ಭಾಷಾ ಪರಿವಾರದ ಭಾಷೆಗಳೊಂದಿಗೆ ತುಲನೆ ಮಾಡಿ ನೋಡಬಹುದು. ಉದಾಹರಣೆಗೆ :

 

 

 

ಕನ್ನಡ ತೆಲುಗು ತಮಿಳು ಸಂಸ್ಕೃತ ಸಂಸ್ಕೃತ ತದ್ಭವ ಮೂಲ ಇಂಗ್ಲೀಶ್ ರೂಪ ಮರಾಠಿ
ಊರೂ ಕುರ್ಕಿ
ವಾಡೆ
ಚೇರಿ ಗಿರಿ ಕಂಬ ಕೊಂಡ
(ಸ್ತಂಭ)
ಕಾಲೊನಿ
(ಕುಂಡ)
ವಾಡೆ

ಬಾಗೆವಾಡಿ ಸುತ್ತಮುತ್ತಲ ಪರಿಸರದ ಜನಸಾಮಾನ್ಯರ ಉಚ್ಚಾರಣೆಯಲ್ಲಿ ಬಸವನ ಬಾಗೆವಾಡಿ : ಈ ರೀತಿ ಬಳಕೆಯಲ್ಲಿದೆ.

ಬರಹದ ರೂಪ    ಅಕ್ಷರಸ್ಥರ ಬಳಕೆ  ಅನಕ್ಷರಸ್ಥರ ಬಳಕೆ
|                       |                             |
ಬಾಗೇವಾಡಿ        ಬಾಗ್ವಾಡಿ            ಬಾಗೆಡಿ

ಏಕೆ ನಾಲ್ಕು ಅಕ್ಷರಗಳ ರಚನೆಯಿರುವ ‘ಬಾಗವಾಡಿ’ ಜನ ಸಾಮಾನ್ಯರ ಮಾತಿನಲ್ಲಿ ಮೂರು ಅಕ್ಷರ ರಚನೆಯಲ್ಲಿ ಬಳಕೆಯಲ್ಲಿದೆ. ಇದಕ್ಕೆ ಕಾರಣ ಕನ್ನಡ ಅಕ್ಷರ ರಚನೆ ನಿಯಮ ಅತ್ಯಂತ ಕನಿಷ್ಠ ಒಂದು ಗರಿಷ್ಠ ಎರಡು ಅಥವಾ ಮೂರು. ನಾಲ್ಕು ಮತ್ತು ಐದು ಅಕ್ಷರ ರಚನೆಗಳು ಅಪರೂಪ. ಎಂಟು ಅಕ್ಷರ ರಚನೆಯ ಉದಾಹರಣೆಗಳನ್ನು ಕೆಲವರು ನೀಡುತ್ತಾರೆ. ಅದು ಉಚ್ಚಾರಣೆಯಲ್ಲಿ ಮೂರು ಅಕ್ಷರ ರಚನೆಗೆ ನಿಲ್ಲುವುದನ್ನು ನೋಡಬಹುದು. ಈ ಹಿನ್ನೆಲೆಯಲ್ಲಿ ‘ಬಾಗೇವಾಡಿ’ ಅನಕ್ಷರಸ್ಥರ ಮಾತಿನಲ್ಲಿ ‘ಬಾಗೇಡಿ’ ಎಂದು ಉಚ್ಚಾರಣೆಯಲ್ಲಿರುವುದು ಕನ್ನಡ ಅಕ್ಷರ ರಚನೆಯ ನಿಯಮವನ್ನು ಹೇಳುತ್ತಿದೆ ಅಷ್ಟೆ.

ಬಸವನ ಬಾಗೇವಡಿಯ ಬಗೆಗೆ ನಡೆದಿರುವ ಅಧ್ಯಯನಗಳ ಸಮೀಕ್ಷೆ

ಶಾಸನಗಳಲ್ಲಿ ಬಾಗೇವಾಡಿಯ ಉಲ್ಲೇಖ : ವಿಜಾಪುರ ಜಿಲ್ಲೆಯ ಗ್ಯಾಜಿಟಿಯರ್ ನಲ್ಲಿ ಬಾಗೇವಾಡಿಯು ಕ್ರಿ.ಶ. ೧೧ ಮತ್ತು ೧೨ನೇ ಶತಮಾನಗಲ್ಲಿ ಪಾಶುಪತ ಬ್ರಾಹ್ಮಣರ ಅಗ್ರಹಾರವಾಗಿತ್ತೆಂದು ತಿಳಿದುಬರುತ್ತದೆ. ಈ ಭಾಗದ ಕವಿಗಳು ತಮ್ಮ ಕೃತಿಗಳಲ್ಲಿ ಈ ಸ್ಥಳವನ್ನು ಸಣ್ಣೆಂಗಳೇಶ್ವರ ಬಾಗೇವಾಡಿ, ಇಂಗಳೇಶ್ವರ ಬಾಗೇವಾಡಿ ಮತ್ತು ತಿಂಗಳೇಶ್ವರ ಬಾಗೇವಾಡಿ ಎಂದು ವರ್ಣಿಸಿರುವುದು ಕಂಡುಬರುತ್ತದೆ. ಮಾದರಸ ಮಾದಲಾಂಬಿಕೆಯರ ಮಗನಾಗಿ ಜನಿಸಿದ ಬಸವಣ್ಣನವರು ಬಿಜ್ಜಳನ ಮಂತ್ರಿಯಾಗಿದ್ದು, ಕಲ್ಯಾಣದಲ್ಲಿ ಜರುಗಿದ ಸಮಾಜೋ ಧಾರ್ಮಿಕ ಚಳವಳಿಯ ನೇತಾರರಾಗಿದ್ದು ಅಂತಹ ಮಹಾ ಪುರುಷ ಹುಟ್ಟಿದ ಸ್ಥಳಕ್ಕೆ ಬಸವನ ಬಾಗೇವಾಡಿ ಎಂದು ಹೆಸರು ಬಂದಿದೆ. ಬಾಗೇವಾಡಿಯ ಸುತ್ತ ಮುತ್ತ ಪರಿಸರಗಳಲ್ಲಿ ಬಸವೇಶ್ವರ ದೇವಾಲಯಗಳಿವೆ. ಸ್ಥಳೀಯವಾಗಿ ಪ್ರಧಾನ ಲಿಂಗವನ್ನು ಸಂಗಮ ನಾಥನೆಂದು ಕರೆಯಲಾಗುತ್ತದೆ. ಈ ದೇವಾಲಯದಲ್ಲಿ ಎತ್ತರವಾದ ನಂದಿಯ ಮಂಟಪವಿದೆ ಬಸವ ಎಂದರೆ ಇನ್ನೊಂದು ಅರ್ಥ ನಂದಿತಾನೆ.

ಬಾಗೇವಾಡಿಯ ಸಾರಂಗ ಮಠದ ಬಳಿಯಿರುವ ಕ್ರಿ.ಶ. ೧೧೬೯ರ ಶಾಸನವು ಕಳಚುರಿ ದೊರೆ ರಾಯಮುರಾರಿ ಸೋವಿದೇವನು ಅಗ್ರಹಾರ ಬಾಗೇವಾಡಿ ಮಲ್ಲಿಕಾರ್ಜುನ ದೇವಾಲಯಕ್ಕೆ ನೀಡಿದ ದಾನಗಳ ಬಗ್ಗೆ ಉಲ್ಲೇಖಿಸುತ್ತದೆ. ತಾಲೂಕು ಕಚೇರಿ ಆವರಣದಲ್ಲಿರುವ ಕ್ರಿ.ಶ. ೧೧೭೦ರ ಶಿಲಾಶಾಸನದಲ್ಲಿ ಅಗ್ರಹಾರ ಬಾಗೇವಾಡಿಯನ್ನು ಅಗ್ರಹಾರ ಚೂಡಾಮಣಿಯೆಂದು ಕರೆಯಲಾಗಿದೆ. ರಾಯಮೂರಾರಿ ಅರಸನ ಆಳ್ವಿಕೆಯಲ್ಲಿ ಬಾಗೇವಾಡಿಯ ಸೆನಬೋವ ಹಾಗೂ ರಾಜ್ಯಾಧ್ಯಕ್ಷನಾಗಿದ್ದ ರೇವಣಯ್ಯ ನಾಯಕನಿಂದ ನಿರ್ಮಿತವಾದ ಸ್ಥಳೀಯ ಸೋಮನಾಥ ಮತ್ತು ಚನ್ನಕೇಶವ ದೇವಾಲಯಗಳಿಗೆ ಬಾಗೇವಾಡಿ ೫೦೦ ಮಹಾಜನರ ಸಮ್ಮುಖದಲ್ಲಿ ೧೦೦ ಮತ್ತರು ಭೂಮಿ ದಾನಬಿಟ್ಟು ವಿಷಯ ದಾಖಲಾಗಿದೆ. ಆದರೆ ಈ ದೇವಾಲಯಗಳು ಎಲ್ಲಿದೆ ಎಂಬುದನ್ನು ಗುರುತಿಸಲು ಸಾಧ್ಯವಾಗಿಲ್ಲ.

ಸಾರಾಂಗ ಮಠದಲ್ಲಿರುವ ೧೧ನೇ ಶತಮಾನದ ಕಲ್ಯಾಣ ಚಾಲುಕ್ಯರ ಶಾಸನದ ಪ್ರಕಾರ ‘ಬಾಗವಾಡಿ’ ಎಂಬ ಉಲ್ಲೇಖವಿದೆ. ಇದರ ಕಾಲ ಕ್ರಿ.ಶ. ೧೦೪೯ ಆಗಸ್ಟ್‌ ೧೫ ಮಂಗಳವಾರ ಅವತ್ತು ಚಂದ್ರಗ್ರಹಣ ಇತ್ತು ಎಂಬ ವಿಷಯ ಉಲ್ಲೇಖವಿದೆ. ಅಂದರೆ ಈ ಶಾಸನಗಳಲ್ಲಿ ತಿಳಿದುಬರುವ ಸಂಗತಿಯೆಂದರೆ ‘ಬಾಗವಾಡಿ’ ಎಂದು ೧೦೪೯ರಲ್ಲಿ ದಾಖಲಾಗಿದ್ದರೆ, ನಂತರ ೧೧೬೯ ಮತ್ತು ೧೧೭೦ರ ಶಾಸನಗಳಲ್ಲಿ ಬಾಗೆವಾಡಿ/ಬಾಗೇವಾಡಿ ಎಂಬ ಉಲ್ಲೇಖಗಳಿವೆ. ಅಂದ ಹಾಗೆ ಪದ ಮಧ್ಯ ಪರಿಸರದಲ್ಲಿ ‘ಅ’ ಕಾರಾಂತ ಮತ್ತು ‘ಎ’ ಕಾರಾಂತ ಎರಡು ರೂಪಗಳು ಲಭ್ಯವಿದೆ. ಹಿ.ಚಿ. ಶಾಂತವೀರಯ್ಯನವರು ಕರ್ನಾಟಕದ ವಿವಿಧ ಜಿಲ್ಲೆಯಲ್ಲಿ ಸುಮಾರು ಒಂದು ನೂರ ಮೂವತ್ತಾರು ಬಸವಣ್ಣನವರ ಹೆಸರಿರುವ ಸ್ಥಳನಾಮಗಳು ಕಂಡುಬರುತ್ತದೆ. ಎಂದು ಪಟ್ಟಿಮಾಡಿದ್ದಾರೆ. ಈ ವ್ಯಕ್ತಿ ಮತ್ತು ಸ್ಥಳ ನಾಮಗಳೆಲ್ಲವೂ ೧೨ನೇ ಶತಮಾನದ ವಚನ ಸಾಹಿತ್ಯದ ನೇತಾರ ಬಸವಣ್ಣನಿಂದ ನಿರ್ದೇಶನಗೊಂಡ ಸ್ಥಳನಾಮಗಳು ಎಂದು ಅಭಿಪ್ರಾಯಪಡುತ್ತಾರೆ. ಉದಾಹರಣೆಗೆ: ಬಸವಪುರ, ಬಸವಪಟ್ಟಣ, ಬಸಾಪುರ, ಬಸೆಟ್ಟಿಹಳ್ಳಿ, ಬಸವನಾಯಕನಹಳ್ಳಿ, ಬಸವನದುರ್ಗ, ಬಸವವೇಗೌಡ, ಬಸಪ್ಪನ ಪಟ್ಟಣ ಬಸವಾಪಟ್ಟಣ (೫ ಊರು) ಬಸವನಬ್ಯಾಣ, ಬಸವ ಕಲ್ಯಾಣ, ಬಸವನಕೊಪ್ಪ (೩ ಊರು) ಬಸವರ್ಸಿಕೊಪ್ಪ, ಬಸವನಪೊಪ್ಪ, ಬಸವನ ಅರಣ್ಯ, ಬಸವನಪುರ (೯ ಊರು) ಬಸವಾಪುರ ೧೨ ಊರು) ಬಸಾಪುರ (೨೬ ಊರು) ಬಸವನಾಳ (೪ ಊರು) ಬಸವನಹಟ್ಟಿ, ಬಸವನವಣೆ, ಬಸವಾನಿ, ಬೇಳೂರು, ಬಸವನಳ್ಳಿ ಬಸವನಳ್ಳಿ, ಬಸರವಳ್ಳಿ, ಬಸವಳ್ಳಿ, ಬಸವನಹಳ್ಳಿ ಹೀಗೆ ಸುಮಾರು ೧೫ ಊರುಗಳನ್ನು ಪಟ್ಟಿಮಾಡಿದ್ದಾರೆ. ಮೇಲಿನ ಎಲ್ಲಾ ಸ್ಥಳಗಳು ವ್ಯಕ್ತಿನಾಮಧಾರಿತವಾಗಿ ಬಳಕೆಯಲ್ಲಿವೆ. ಈ ಎಲ್ಲಾ ಸ್ಥಳಗಳನ್ನು ಬಸವಣ್ಣನವರಿಂದ ಹುಟ್ಟಿದ್ದು ಎಂದು ಹೇಳಲು ಸಾಧ್ಯವೆ. ನಾಲ್ಕು ಕಾಲಿನ ‘ಬಸವ’ನಿಂದ ಈ ಊರು ಮತ್ತು ವ್ಯಕ್ತಿನಾಮಗಳು ಏಕೆ ಬಳಕೆಗೆ ಬಂದಿರಬಾರದು. ಇದಕ್ಕೆ ವ್ಯಾಪಕವಾದ ಕ್ಷೇತ್ರಕಾರ್ಯ ಅಗತ್ಯವಿದೆ.

ಕರ್ನಾಟಕದಾದ್ಯಂತ – ವಾಡಿ ಎಂಬ ವಾರ್ಗಿಕರದಿಂದ ಕೊನೆಗೊಳ್ಳುವ ಊರುಗಳು ಸುಮಾರು ೧೮೦ ಇವೆ. ಇವುಗಳಲ್ಲಿ ಒಂದಕ್ಕಿಂತ ಹೆಚ್ಚು ನಿರ್ದಿಷ್ಟ ಭಾಗಗಳು ಸೇರಿಕೊಂಡು ಬಳಕೆಯಲ್ಲಿವೆ. ಉದಾಹರಣೆಗೆ : ದಾಸನ ಕಲ್ಲವಾಡಿ. ಇದು ಕಲ್ಲವಾಡಿ ಇದ್ದುದ್ದು ಕಾಲನಂತರದಲ್ಲಿ ದಾಸ ಸೇರಿಕೊಂಡು ದಾಸನಕಲ್ಲವಾಡಿ ಆಗಿರಬಹುದು. ಇಲ್ಲಿ ದಾಸ ಎಂದರೆ ಕನಕದಾಸ ಪುರಂದರದಾಸ ಇವರಲ್ಲಿ ಯಾರು ಎಂಬುದು ಅಸ್ಪಷ್ಟ. ಕನಕವಾಡಿ ಒಂದು ಊರು ಈಗಾಗಲೇ ಇದೆ. ಅದೇ ರೀತಿ ಬಸವನವಾಡಿ ಮೊದಲೆ ಇದ್ದು ಕಾಲಾನಂತರದಲ್ಲಿ ಚಿಕ್ಕ ಮತ್ತು ದೊಡ್ಡ ಬಸವನವಾಡಿ ಬಂದಿರಬಹುದು. ಇಲ್ಲಿ ಚಿಕ್ಕ ಬಸವ ಮತ್ತು ದೊಡ್ಡ ಬಸವ ಎಂಬುದು ನಂದಿ ಎಂಬರ್ಥದಲ್ಲಿಯೂ ಬಳಕೆಯಲ್ಲಿರಬಹುದು. ಕರ್ನಾಟಕದಲ್ಲಿ ಬಸವನ ಬಾಗೇವಾಡಿ ಮಾದರಿಯಲ್ಲೆ ಗಂಗವಾಡಿ, ಮಂಜವಾಡಿ, ಮಹಾರಾಜವಾಡಿ, ಗೋವಿಂದವಾಡಿ, ಮಾದವಾಡಿ, ಕನಕವಾಡಿ ಗಿರಿನಾಯಕನವಾಡಿ, ಚಾಮನವಾಡಿ, ಪೀರನವಾಡಿ, ಶಂಕರವಾಡಿ, ಕುಮರವಾಡಿ, ದಾಸನಕಲ್ಲವಾಡಿ, ಚಿಕ್ಕ ಬಸವವಾಡಿ, ದೊಡ್ಡ ಬಸವವಾಡಿ, ಗಣೇಶವಾಡಿ, ಚೆನ್ನೇವಾಡಿ, ಅಂಬೆವಾಡಿ, ಕಮಲೆವಾಡಿ ಮುಂತಾದ ಊರುಗಳು ವ್ಯಕ್ತಿ ನಾಮಾಧಾರಿತ ಸ್ಥಳನಾಮಗಳಾಗಿವೆ.

ಕೆಲವು ಊರುಗಳನ್ನು ಗುರುತಿಸಲು ಸುಲಭವಾಗುವಂತೆ ‘ಚಿಕ್ಕ’ ಮತ್ತು ‘ದೊಡ್ಡ’ ಎಂಬ ಗುಣ ವಿಶೇಷಣವನ್ನು ನಿರ್ದಿಷ್ಟ ಭಾಗದ ಮೊದಲು ಹೆಚ್ಚು ಬಳಕೆ ಮಾಡಲಾಗಿದೆ. ಉದಾಹರಣೆಗೆ : ಚಿಕ್ಕಗಂಗವಾಡಿ, ಹಿರೇ ದೊಡ್ಡವಾಡಿ, ಹಿರೆಕಂದವಾಡಿ, ಚಿಕ್ಕಂದವಾಡಿ, ಚಿಕ್ಕಮುದವಾಡಿ, ಚಿಕ್ಕಮಲವಾಡಿ, ಚಿಕ್ಕ ದೊಡ್ಡಮರಳವಾಡಿ ದೊಡ್ಡಮರಳವಾಡಿ, ಚಿಕ್ಕ ಮರಳವಾಡಿ, ದೊಡ್ಡ ಮುದುವಾಡಿ, ಕಡತನ ಬಾಗೇವಾಡಿ ಇತ್ಯಾದಿ, ಕರ್ನಾಟಕದಾದ್ಯಂತ-ವಾಡಿ ಎಂಬ ವಾರ್ಗಿಕ ಒಂದೇ ಅರ್ಥದಲ್ಲಿ ಬಳಕೆಯಲ್ಲಿದೆಯೆ ಎಂಬುದನ್ನು ಶೋಧಿಸಬೇಕಾಗಿದೆ.

ಜನಪದರ ದೃಷ್ಟಿಯಲ್ಲಿ ಬಸವನ ಬಾಗೇವಾಡಿ : ಬಾಗೇವಾಡಿ ಒಂದು ಸಮ ಸಂಸ್ಕೃತಿ ಸಂಕೇತವಾಗಿ ಬಳಕೆಯಲ್ಲಿದೆ. ಈ ಬಾಗೇವಾಡಿ ಶಬ್ದದಲ್ಲಿ ಭೂಮಿ, ಈ ಪ್ರದೇಶದ ಪ್ರಧಾನ ಬೆಳೆಯಾದ ಜೋಳ ಮತ್ತು ಕೃಷಿ ಪ್ರಧಾನವಾದ ದೇವತೆಯಾದ ಬಸವಣ್ಣ ಈ ಮೂರು ಪರಿಕಲ್ಪನೆಗಳಿಂದ ಬಸವನ ಬಾಗೇವಾಡಿ ಬಳಕೆಯಲ್ಲಿರಬಹುದು ಎಂಬ ಐತಿಹ್ಯ ಇದೆ.

ಬಾಗೇವಾಡಿ ಊರು ಬಂದಿರುವುದಕ್ಕೆ ಮತ್ತೊಂದು ಕಥೆ ಬಳಕೆಯಲ್ಲಿದೆ. ಕತ್ತಲರಾಜ ಎಂಬ ರಾಜ ಇದ್ದ. ಆತನಿಗೆ ಒಬ್ಬ ೧೬ ವರ್ಷದ ಮಗನಿದ್ದ. ಆತ ೧೬  ವರ್ಷಕ್ಕೆ ಸಾಯುತ್ತಾನೆ ಎಂಬ ಭವಿಷ್ಯ ನುಡಿದಿದ್ದರಿಂದ ಸರಿಯಾಗಿ ೧೬ ವರ್ಷಕ್ಕೆ ಸರಿಯಾಗಿ ಸಾಯುತ್ತಾನೆ. ಆತನಿಗೆ ಮುಕ್ತಿ ಸಿಗಬೇಕಾದರೆ ಮದುವೆ ಮಾಡಬೇಕು ಎಂಬ ನಂಬಿಕೆಯಿತ್ತು. ಆದರೆ ಹೆಣವನ್ನು ಯಾರು ಮದುವೆ ಆಗುತ್ತಾರೆ. ಅದಕ್ಕೆ ರಾಜ ಒಂದು ಘೋಷಣೆ ಮಾಡುತ್ತಾನೆ. ಆದೇನೆಂದರೆ ಯಾರು ನನ್ನ ಸತ್ತ ಮಗನ ಮದುವೆ ಆಗುತ್ತಾರೋ ಅವರಿಗೆ ನನ್ನ ರಾಜ್ಯದಲ್ಲಿ ಅರ್ಧಭಾಗವನ್ನು ಕೊಡುತ್ತೇನೆ ಎಂಬ ಘೋಷಣೆ ಮಾಡುತ್ತಾನೆ. ಅದೇ ಊರಿನಲ್ಲಿ ತುಂಬ ಬಡತನದಿಂದ ಚನ್ನವ್ವ ಎಂಬ ಹೆಣ್ಣು ಮಗಳ ಕುಟುಂಬವೊಂದು ಇತ್ತು. ಆ ಹೆಣ್ಣುಮಗಳು ತನ್ನ ಬಡತನ ಕುಟುಂಬ ಉದ್ಧಾರ ಮಾಡಲು ಮದುವೆಯಾಗಲು ಒಪ್ಪುತ್ತಾಳೆ. ಶವದ ಜೊತೆಯಲ್ಲಿ ಮದುವೆ ಆಗುತ್ತಾಳೆ. ಶವ ಸಂಸ್ಕಾರಕ್ಕೆ ಹೋಗುವ ಸಂದರ್ಭದಲ್ಲಿ ಮಳೆ, ಗಾಳಿ, ಮಿಂಚು ಬರುತ್ತದೆ. ಆಗ ಜನರೆಲ್ಲಾ ಓಡಿ ಹೋಗುತ್ತಾರೆ. ಆಗ ಚನ್ನವ್ವ ಶವವನ್ನು ತನ್ನ ತೊಡೆಯಲ್ಲಿಟ್ಟುಕೊಂಡು ನಂದಿಯನ್ನು ಪ್ರಾರ್ಥನೆ ಮಾಡುತ್ತಾಳೆ. ಅದೇ ಸಂದರ್ಭದಲ್ಲಿ ಶಿವ ಪಾರ್ವತಿಯರು ಪ್ರತ್ಯಕ್ಷವಾಗಿ ಮರುಜನ್ಮ ನೀಡುತ್ತಾರೆ. ಆಗ ಮಾತಿನಂತೆ ಕತ್ತಲರಾಜ ಹೇಳಿದ ಹಾಗೆ ರಾಜ್ಯದ ಅರ್ಧಭಾಗವನ್ನು ಚನ್ನವ್ವನಿಗೆ ಕೊಡುತ್ತಾನೆ. ಎಂಬ ಕಥೆಯನ್ನು ಗ್ರಹಿಸಿದಾಗ ಪೂರ್ಣ ಪ್ರಮಾಣದಲ್ಲಿರುವ ರಾಜ್ಯ ಅರ್ಧಭಾಗವಾಗಿ ಅದು ಪ್ರತೇಕವಾದ ‘ವಾಡೆ’ ಯಾಗಿ ಕೊನೆಗೆ ಅದು ಬಾಗೇವಾಡಿಯಾಗಿರಬಹುದು.

ಜನಪದ ಹಾಡುಗಳಲ್ಲಿ ಬಸವನ ಬಾಗೇವಾಡಿ ಸ್ಥಳನಾಮ ಬಳಕೆಯಲ್ಲಿರುವುದನ್ನು ನೋಡುಬಹುದು. ಬಾಗಿದ ಒಡೆಯಿಂದ ಬಸವಣ್ಣನವರು ಹುಟ್ಟಿದ್ದಾರೆ ಎಂಬ ಮಾತನ್ನು ಕೆಳಗಿನ ಪಠ್ಯಗಳಿಂದ ತಿಳಿಯಬಹುದು.

ಬಾಗೇವಾಡಿ ಎಂಬುದು ಬಾಲೆಯರ ಪಟ್ಟಣ
ಮ್ಯಾಲೆ ಚನ್ನಮ್ಮನ ಅರಮನೆಯ
ಚಂದಶಕ್ತಿಯ ಮಾತಾಳ
ಮ್ಯಾಲೆ ನೀ ಚನ್ನಮ್ಮನ ಅರಮನೆಯ
ಬಾಗಿಲಾದ್ದಾಗ ಬಾಗಿನಿಂತಾನ
ಬಸವಣ್ಣ….

‘ಬಾಗೇವಾಡಿ’ ಎಂಬುದು ವ್ಯಕ್ತಿ ವಾಚಿಯಾಗೋ ಬಳಕೆಯಲ್ಲಿದೆ ಎಂಬುದು ಕೆಲವು ಜನಪದರ ನಂಬಿಕೆಯಾಗಿದೆ ‘ಬಾಗಯ್ಯ’ ಎಂಬ ದೇವತೆಯ ಈ ಊರಿನ ಹೊರಭಾಗದಲ್ಲಿದ್ದು; ಆ ದೇವತೆಯ ಪ್ರಭಾವದಿಂದ ಈ ಊರಿಗೆ ಬಾಗೇವಾಡಿ ಎಂಬ ಹೆಸರು ಬಂದಿರಬಹುದೆಂದು ಅಭಿಪ್ರಾಯಪಡುತ್ತಾರೆ.

ಮತ್ತೊಂದು ಅಭಿಪ್ರಾಯದಂತೆ, ಒಂದು ಅವಿಭಕ್ತ ಕುಟುಂಬದಲ್ಲಿ ‘ಬಾಣೆಯ’ ಎಂಬ ವ್ಯಕ್ತಿ ಮುಖ್ಯಸ್ಥನಾಗಿದ್ದು, ಕಾಲಾನಂತರದಲ್ಲಿ ಅವಿಭಕ್ತಿ ಕುಟುಂಬವೊಂದು ಭಾಗವಾಗಿ ಮತ್ತೊಂದು ಕಡೆ ವಲಸೆಹೋಗಿ ನೆಲಸಿ ಅಲ್ಲಿ ಮತ್ತೊಂದು ವಾಡೆಯನ್ನು ಸ್ಥಾಪಿಸಿರಬಹುದು. ಅದು ಜನ ಸಾಮಾನ್ಯರ ಉಚ್ಚಾರಣೆಯಲ್ಲಿ ಅದು ಭಾಗ ಆಗಿರುವ ‘ವಾಡಿ’ ಯಾಗಿ ಕೊನಗೆ ಅದು ಭಾಗವಾಡಿಯಾಗಿ ನಂತರ ಬಾಗೇವಾಡಿ ಆಗಿರಬಹುದೆಂದು ಸ್ಥಳೀಯರು ಅಭಿಪ್ರಾಯಪಡುತ್ತಾರೆ. ಈ ಪ್ರಕ್ರಿಯೆಯನ್ನು ಮತ್ತಷ್ಟು ಉದಾಹರಣೆಗಳೊಂದಿಗೆ ಚರ್ಚಿಸಬಹುದು. ಬಿಜಾಪುರ ಜಿಲ್ಲೆಯಲ್ಲೆ ‘ಹಂದಿಕೇರ’ ಒಂದು ಊರು. ಆ ಊರಿನ ಜನರು ಪಕ್ಕಕ್ಕೆ ವಲಸೆಹೋಗಿ ನೆಲಸಿ ಅದು ಹಂದಿಕೇರವಾಡಿ ಯಾಗಿರುವುದು ಕಂಡುಬರುತ್ತದೆ. ಅದೇ ರೀತಿ ಏಳು ಮನೆಗಳ ಮಾತ್ರ ಬೇರೆ ಕಡೆ ವಲಸೆ ಹೋಗಿ ನೆಲಸಿ ಇಂದು ‘ಏಳುಮನೆ’ ವಾಡಿಯಾಗಿದೆ. ಕಬೀರ್ ಬಾದ್ ಮತ್ತು ಸುಲ್ತಾನಬಾದ್ ಊರಿನ ಜನರು ಬೇರೆ ಕಡೆ ವಲಸೆಹೋಗಿ ಅವು ಇಂದು ಕಬೀರ್ ಬಾದ್  ವಾಡಿ ಮತ್ತು ಸುಲ್ಲಾನಬಾದ್ ವಾಡಿಗಳಾಗಿವೆ. ಈ ಹಿನ್ನೆಲೆಯಿಂದ ‘ಬಾಗೇವಾಡಿ’ ಆಗಿರಬಹುದು ಎನಿಸಬಹುದು. ‘ಬಾಗಣ್ಣ’ ಅಥವಾ ‘ಬಾಗೆಯ’ ಬಾಗಯ್ಯ ಎಂಬ ವ್ಯಕ್ತಿಗಳಿಗೆ ‘ವಾಡಿ’ ಸೇರಿಕೊಂಡು ಬಾಗೇವಾಡಿ ಆಗಿರಬಹುದು ಎಂದು ಸ್ಥಳೀಯರು ಅಭಿಪ್ರಾಯಪಡುತ್ತಾರೆ.

ಸಾಮಾಜಿಕ ಸೂಚಕ ವ್ಯಕ್ತಿನಾಮಾಧಾರಿತ ಸ್ಥಳನಾಮಗಳು : ಕನ್ನಡದಲ್ಲಿ ವ್ಯಕ್ತಿನಾಮಾಧಾರಿತ ಸ್ಥಳನಾಮಗಳು ಸಾಮಾಜಿಕ ಚಹರೆಯಾಗಿ ಬಳಕೆಯಲ್ಲಿವೆ. ಇಂತಹ ಸ್ಥಳನಾಮಗಳಿಂದ ಸಂಸ್ಕೃತಿ ಸ್ವರೂಪ ತಿಳಿಯಬಹುದಾಗಿದೆ. ಭಾಷೆಯಲ್ಲಿ ಧ್ವನಿ. ಪದ, ವಾಕ್ಯ ಮತ್ತು ಅರ್ಥಗಳಿರುವಾಗೆ, ಸಾಮಾಜಿಕ ಭಿನ್ನಾಂಶಗಳಿಂದ ಕೂಡಿವೆ. ವರ್ಗ, ಲಿಂಗ ಮುಂತಾದ ಅಂಶಗಳಿಂದ ಸ್ಥಳನಾಮಗಳನ್ನು ಅಧ್ಯಯನ ಮಾಡಬಹುದಾಗಿದೆ. ಸಿದ್ಧನಗೌಡ ಪಾಟೀಲರ ನಾ ಬಸ್ಯಾ ಕವನದ ಸಾಲುಗಳು ಹೇಗೆ ಸಾಮಾಜಿಕ ಸೂಚಕ ವ್ಯಕ್ತಿನಾಮಗಳಾಗಿ ಬಳಕೆಯಲ್ಲಿವೆ ಎಂಬುದು ಗಮನಿಸುವಂತಹ ಅಂಶವಾಗಿದೆ ಉದಾಹರಣೆಗೆ:

ಆ ಐನಾರ ಹುಡುಗ ಬಸಯ್ಯ ಅಂತ
ಗೌಡರ ಹುಡುಗ ಬಸವನಗೌಡ ಅಂತ
ಬಣಜಿ ಉಳಿದ ಲಿಂಗಾಯತ್ರ
ಹುಡುಗ ಬಸವರಾಜ ಅಂತ
ನಾ ಬಸ್ಯಾ ಅಂತ ಯಾಕಂದ್ರ ನಾ ಹೊಲ್ಯಾ
ಅಂತ.

ಇಂತಹ ಸಾಹಿತ್ಯಗಳಲ್ಲಿ ಬಳಕೆಯಾಗಿರುವ ವ್ಯಕ್ತಿನಾಮಗಳು ಕೇವಲ ಒಂದು ನಿರ್ದಿಷ್ಟ ಪ್ರದೇಶಕ್ಕೆ ಮಾತ್ರ ಸೀಮಿತಗೊಂಡಿದೆ. ‘ಅಯ್ಯ’ ವಾರ್ಗಿಕ ಉತ್ತರ ಕರ್ನಾಟಕದಲ್ಲಿ ‘ಐನಾರು’ ಎಂಬ ನಿರ್ದಿಷ್ಟ ಸಾಮಾಜಿಕವನ್ನು ಸೂಚಿಸಿದರೆ, ದಕ್ಷಿಣ ಕರ್ನಾಟಕ ಅಂದರೆ ಹಳೆ ಮೈಸೂರು ಪ್ರಾಂತ್ಯದಲ್ಲಿ ದಲಿತ ಸಮುದಾಯದ ಸಾಮಾಜಿಕ ಸೂಚಕವಾಗಿ ಬಳಕೆಯಲ್ಲಿದೆ. ಈ ಅಂಶದಿಂದ ತಿಳಿದುಬರುವ ಸಂಗತಿಯೆಂದರೆ ವ್ಯಕ್ತಿ ಮತ್ತು ಸ್ಥಳಕ್ಕಿರುವ ಹೆಸರುಗಳ ನಡುವೆ ಪರಸ್ಪರ ಸಂಬಂಧವಿಲ್ಲ ಎಂದು.

ಉತ್ತರ ಕರ್ನಾಟಕದಲ್ಲಿ ಲಿಂಗಾಯಿತರ ಸಂಖ್ಯೆ ಹೆಚ್ಚಿರುವುದರಿಂದ ಲಿಂಗಾಯತ ಸೂಚಕ ವ್ಯಕ್ತಿ ಮತ್ತು ಸ್ಥಳನಾಮಗಳು ಹೆಚ್ಚಾಗಿವೆ. ಲಿಂಗಾಯತ ಸೂಚಕ ಊರುಗಳನ್ನು ಮುಖ್ಯವಾಗಿ ಎರಡು ರೀತಿಯಲ್ಲಿ ವರ್ಗೀಕರಿಸಬಹುದು. ಒಂದು: ೧೨ನೇ ಶತಮಾನದ ಚಳವಳಿ  ಪ್ರಭಾದಿಂದ ಆರಂಭವಾದ ವೀರಶೈವ ಧರ್ಮಸೂಚಕ ಸ್ಥಳನಾಮ ಮತ್ತು ವ್ಯಕ್ತಿನಾಮಗಳು. ಎರಡು: ಈ ಧರ್ಮಕ್ಕಿಂತ ಪೂರ್ವದಲ್ಲಿ ಶೈವ ಪಂಥ ಸೂಚಕ ಸ್ಥಳನಾಮಗಳು ಶೈವ ಪಂಥ ಸೂಚಕ ಪದಗಳಾದ ಭೈರವ, ಶಿವ, ಪರಮೇಶ್ವರ, ಲಿಂಗ, ನಂದಿ ಮುಂತಾದ ಹೆಸರುಗಳಿಂದ ಕರೆಯಲಾಗುತ್ತದೆ. ವೀರಶೈವ ಪಂಥದ ಪ್ರಭಾವದಿಂದ ಅಯ್ಯ, ಜಂಗಮ, ಒಡೆಯ, ಮಠ, ಬಸವ, ಸಿದ್ಧರಾಮ ಮುಂತಾದ ಹೆಸರುಗಳು ಬಳಕೆಯಲ್ಲಿವೆ. ಅಂತಹ ಊರುಗಳ ಹೆಸರುಗಳನ್ನು ಆಂಧ್ರ-ಕರ್ನಾಟಕ ಗಡಿ ಪ್ರದೇಶದಲ್ಲಿ ಸ್ಥಳನಾಮಗಳ (ಡಾ.ಜಾ.ಜಿ. ದೇವೇಂದ್ರಪ್ಪ, ಪು.೨೨೯, ೨೦೦೪) ಕೃತಿಯಲ್ಲಿ ವರ್ಗೀಕರಿಸಲಾಗಿದೆ.

ಶೈವ ಸಂಬಂಧಿ ಸ್ಥಳನಾಮಗಳು ವೀರಶೈವ ಸಂಬಂಧಿ ಸ್ಥಳನಾಮಗಳು
ಪರಮ ದೇವನ ಹಳ್ಳಿ ಅಯ್ಯನಹಳ್ಳಿ
ಮಲ್ಲಿಕಾರ್ಜುನಹಳ್ಳಿ ಕೂಡಲ ಸಂಗಮ
ಮಡಿಲಿಂಗರ ಹಳ್ಳಿ ಜಂಗಮ ಹಟ್ಟಿ
ಲಿಂಗದ ಹಳ್ಳಿ ಜಂಗಮನ ಹಳ್ಳಿ
ಶಂಕರಬಂಡೆ ಬಸವಪುರ
ಶಿವಪುರ ಬಸವನ ಬಾಗೇವಾಡಿ
ಸಿದ್ದರಗಡ್ಡೆ

ಲಿಂಗಾಯತರಿಗೆ ಸಂಬಂಧಿಸಿದ ಸ್ಥಳನಾಮಗಳನ್ನು ಕುರಿತು ಹೇಳುವಾಗ ಶ್ರೀ ಎಚ್.ಎಸ್. ಬ್ರಹ್ಮಾನಂದ ಅವರು ಈ ರೀತಿ ಅಭಿಪ್ರಾಯ ಪಡುತ್ತಾರೆ. ಅವರು ಕೇವಲ ಲಿಂಗಾರಾಧಕರು. ಲಿಂಗವನ್ನು ಪೂಜಿಸುತ್ತಾರೆ. ಈ ಕಾರಣದಿಂದ ಲಿಂಗದ ಆರಾಧನಾ ಸಂಬಂಧಿಯಾಗಿ ಬರುವ ಸ್ಥಳನಾಮಗಳು ಇವರಿಗೆ ಸಂಬಂಧಿಸಿವೆ. ಉದಾ : ಲಿಂಗದಹಳ್ಳಿ (ರಾಯದುರ್ಗ-ತಾ.)

ಮುಂತಾದ ಊರುಗನ್ನು ಹೆಸರಿಸಿದ್ದಾರೆ. ಜೊತೆಗೆ ಲಿಂಗ ಮತ್ತು ಶಿವ ಅವನ ಪರಿವಾರ ದೇವತೆಗಳಿಗೆ ಸಂಬಂಧಿಸಿ ಬರುವ ಹೆಸರುಗಳು ಬಹುತೇಕ ಶೈವ ಸ್ಥಳನಾಮಗಳಿಗೆ ಸಂಬಂಧಿಸಿರಬಹುದೆಂದು ಹೇಳಬಹುದು.

ಚಾರಿತ್ರಿಕವಾಗಿ ಸ್ವಳನಾಮಗಳನ್ನು ಗಮನಿಸಿದಾಗ “ಬ್ರಾಹ್ಮಣರಿಗೆ ನೀಡಿದ ಊರುಗಳನ್ನು ‘ಅಗ್ರಹಾರ’ವೆಂದು ಕರೆದರೆ, ಶೈವರಿಗೆ ನೀಡಿದ ಊರುಗಳನ್ನು ‘ಶಿವಪುರ’ ಎಂದು ಕರೆಯುತ್ತಿದ್ದಿರಬೇಕೆಂದು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ. ಶಿವಪುರಗಳನ್ನು ಶೈವರಿಗೆ ದಾನ ಕೊಟ್ಟಂತಹ ಉಲ್ಲೇಖಗಳನ್ನು ಶಾಸನಗಳಲ್ಲಾಗಲಿ, ಇತರೆ ದಾಖಲೆಗಳಲ್ಲಾಗಲಿ ಮಾಹಿತಿ ದೊರೆಯುವುದಿಲ್ಲ. ಬದಲಾಗಿ ಈಶ್ವರಪುರ, ಸೋಮನಸಮುದ್ರ ಎಂಬಂತಹ ಸ್ಥಳನಾಮಗಳು ಉಲ್ಲೇಖವಾಗಿದೆ. ಆದರೂ ಇವು ಶೈವರಿಗೆ ನೀಡಿದಂಥ ಕೊಡುಗೆಗಳಲ್ಲವೆಂಬುದು ಸ್ಪಷ್ಟವಾಗುತ್ತದೆ.

ಮೊದಲೆ ಹೇಳಿದಾಗೆ ಉತ್ತರ ಕರ್ನಾಟಕದಲ್ಲಿ ವ್ಯಕ್ತಿನಾಮಾಧರಿತ ಸ್ಥಳನಾಮಗಳು ಸಾಮಾಜಿಕ ಸೂಚಕವಾಗಿ ಬಳಕೆಯಲ್ಲಿವೆ. ಆರಂಭದಿಂದಲೂ ಯಾವುದೊ ಕಾರಣಕ್ಕಾಗಿ ವಿಶೇಷವಾದ ಘಟನೆಯಿಂದ ಹೆಸರಾದ ವ್ಯಕ್ತಿಯನ್ನು ಒಂದೊಂದು ಗ್ರಾಮಕ್ಕೆ ಕರೆದಿರುವುದು ವಾಡಿಕೆ. ಮಹಿಳಾ ಸೂಚಕ ವ್ಯಕ್ತಿನಾಮಾಧಾರಿತ ಸ್ಥಳನಾಮ ತುಂಬ ಕಡಿಮೆ. ಇವು ಇತ್ತೀಚಿಗೆ ಹೆಚ್ಚು ಬಳಕೆಗೆ ಬರುತ್ತಿವೆ. ಅಂದರೆ ಒಂದು ಪರಂಪರೆಯನ್ನು ನೆನಪಿಸಲು ವ್ಯಕ್ತಿನಾಮಗಳು ಅಥವಾ ಸ್ಥಳನಾಮಗಳು ಹುಟ್ಟಿಕೊಂಡಿವೆ. ಇತ್ತೀಚಿನ ದಿನಗಳಲ್ಲಿ ಊರಿಗೆ  ವ್ಯಕ್ತಿ ಹೆಸರನ್ನು ಇಡದೆ ಆ ಊರಿನ ಒಂದು ಬೀದಿಗೆ ಅಥವಾ ರಸ್ತೆಗೆ ಮಾತ್ರ ವ್ಯಕ್ತಿ ಹೆಸರನ್ನು ಇಡುತ್ತಿರುವುದು ಹೆಚ್ಚಿದೆ. ಈ ಪ್ರಕ್ರಿಯೆ ಸ್ತಳನಾಮ ಮತ್ತು ವ್ಯಕ್ತಿನಾಮಗಳಲ್ಲಿ ಅಗುತ್ತಿರುವ ಬದಲಾವಣೆ ಎಂದು ತಿಳಿಯಬಹುದಾಗಿದೆ.

೧೯೬೮ರಲ್ಲಿ ‘ಬಸವಪಥ’ ಎಂಬ ಲೇಖನದಲ್ಲಿ ಬಾಗೇವಾಡಿ ಅಥವಾ ಬಾಗವಾಡಿ ಪದದ ಆದಿ ಪರಿಸರಕ್ಕೆ ‘ಬಸವನ’ ಪದ ಬಳಕೆ ಮಾಡಲಾಯಿತು. ಅಲ್ಲಿಂದ ‘ಬಸವನ ಬಾಗೇವಾಡಿ’ ಎಂಬ ಹೆಸರು ಅಸ್ತಿತ್ವಕ್ಕೆ ಬಂದಿತ್ತು.

ಗ್ರಂಥಋಣ

೧. ದೇವೆಂದ್ರಪ್ಪ ಜೆ., ೨೦೦೫, ಆಂಧ್ರ-ಕರ್ನಾಟಕಗಡಿ ಪ್ರದೇಶದ ಸ್ಥಳನಾಮಗಳು

೨. ನಾರಾಯಣ ಕೆ.ವಿ.(ಸಂ), ೨೦೦೭, ಭಾಷೆ ವಿಶ್ವಕೋಶ, ಪ್ರಸಾರಾಂಗ ಕನ್ನಡ ವಿಶ್ವವಿದ್ಯಾಲಯ, ಹಂಪಿ

೩. ಪಾಂಡುರಂಗಬಾಬು ಡಿ., ಕರ್ನಾಟಕ ಗ್ರಾಮಗಳನ್ನು ಅಕಾರಾದಿಯಾಗಿ ಜೋಡಿಸಿದ್ದಾರೆ. ಅದರಿಂದ ವಾಡಿಯಿಂದ ಕೊನೆಗೊಳ್ಳುವ ಹೆಸರುಗಳನ್ನು ಆಯ್ದುಕೊಳ್ಳಲಾಗಿದೆ.

೪. ಮಲ್ಲೇಪುರಂ ಜಿ. ವೆಂಕಟೇಶ (ಸಂ), ೧೯೯೯, ಶಂಬಾ ಕೃತಿ ಸಂಪುಟ ಕರ್ಣಾಟಕ ಸಂಸ್ಕೃತಿ, ಸಂಪುಟ: ೩ ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು- ೦೮

೫. ಶಾಲಿನ ರಘನಾಥ್, ೨೦೦೭, ಹಾನಗಲ್ಲು : ಸ್ಥಳನಾಮ ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ

೬. ವಾಸುದೇವ ಬಡಿಗೇರ (ಸಂ), ೨೦೦೭, ಹಾನಗಲ್ಲು, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ

೭. ಕರ್ನಾಟಕ ಗ್ರಾಮಸೂಚಿ, ೧೯೮೫, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಂಗಳೂರು

೮. ಬಸವಪಥ, ೧೯೬೮, ಬಸವೇಶ್ವರ, ಅಷ್ಟ ಶತಮಾನೋತ್ಸವ ಪತ್ರಿಕೆ, ಬೆಂಗಳೂರು.