ಪ್ರಾಚೀನ ಕಾಲದಲ್ಲಿ ವಿಶಾಲವಾದ ಸಾಮ್ರಾಜ್ಯವನ್ನು ಆಡಳಿತದ ಅನುಕೂಲತೆಗಾಗಿ ಈಗಿನ ಜಿಲ್ಲೆ ಮತ್ತು ತಾಲೂಕುಗಳಂತೆ ಅನೇಕ ಗ್ರಾಮಗಳನ್ನೊಳಗೊಂಡ ವಿಭಾಗಗಳನ್ನು ಮಾಡಲಾಗಿತ್ತು. ಅಲ್ಲದೇ ಇದನ್ನು ಹಳ್ಳಿ ಮತ್ತು ಗ್ರಾಮಾಡಳಿತದವರೆಗೂ ವಿಸ್ತರಿಸಲಾಗಿತ್ತು. ಆಯಾ ಘಟಕಗಳಿಗೆ ಮಹಾಮಂಡಳೇಶ್ವರರು, ಮನ್ನೆಯರು, ಹೆಗ್ಗಡೆಗಳು, ಗಾವುಂಡರು, ಮೊದಲಾದವರು ಅಧಿಕಾರಿಗಳಾಗಿ ಆಡಳಿತವನ್ನು ನಿರ್ವಹಿಸುತ್ತಿದ್ದರು. ಇಂಥ ವ್ಯವಸ್ಥೆಯನ್ನು ಇತಿಹಾಸ ಕಾಲದ ಆರಂಭದ ಹಂತದಿಂದಲೇ ಕಾಣಬಹುದು. ಅನೇಕ ಹಳ್ಳಿಗಳನ್ನೊಳಗೊಂಡ ದೊಡ್ಡ ವಿಭಾಗಗಳಿಗೆ ಶಾಸನಗಳಲ್ಲಿ ನಾಡು, ವಾಡಿ, ವಿಷಯವೆಂದು ಕರೆಯಲಾಗಿದೆ. ಉದಾ: ರಟ್ಟಪಾಡಿ ಸಪ್ತಾರ್ಧಲಕ್ಷ, ಗಂಗವಾಡಿ – ೯೬೦೦೦, ನೊಳಂಬವಾಡಿ – ೩೨೦೦೦. ಬಿ. ಎಲ್.ರೈಸ್ ಅವರು ಇಂಥ ವಿಭಾಗಗಳು ಹೊಂದಿದ ಸಂಖ್ಯೆಗಳು ಹಳ್ಳಿಗಳ ಸಂಖ್ಯೆಗಳನ್ನು ಸೂಚಿಸಲು ಸಾಧ್ಯವಿಲ್ಲವೆಂದು ಹೇಳಿದ್ದಾರೆ. ರೈಸ್ ಅವರ ಅಭಿಪ್ರಾಯದಂತೆ ಲಕ್ಷ ಸಂಖ್ಯೆ ತೆರಿಗೆಯನ್ನು, ಸಾವಿರ ಸಂಖ್ಯೆ ನಾಡುಗಳನ್ನು, ಚಿಕ್ಕ ಚಿಕ್ಕ ಸಂಖ್ಯೆಗಳು ಗ್ರಾಮಗಳನ್ನು ಸೂಚಿಸುತ್ತವೆಂಬ ವಿವರಣೆಯನ್ನು ನೀಡಿದ್ದಾರೆ.[1] ಪ್ಲೀಟ್ ಅವರು ಈ ಸಂಖ್ಯಾ ಘಟಕಗಳು ಪಟ್ಟಣ ಹಳ್ಳಿಗಳ ಸಮೂಹವನ್ನು ಸೂಚಿಸುತ್ತವೆಂದು ಹೇಳಿದ್ದಾರೆ.[2] ಆದರೆ ಇಂಥ ವಿಭಿನ್ನ ಹೇಳಿಕೆಗಳಿಗೆ ಶಾಸನಗಳಲ್ಲಿ ಸ್ಪಷ್ಟತೆ ಕಾಣುವುದಿಲ್ಲ.

ಮೌರ್ಯ ಚಕ್ರವರ್ತಿ ಅಶೋಕ ವಿಶಾಲವಾದ ಸಾಮ್ರಾಜ್ಯವನ್ನು ಆಡಳಿತದ ಅನುಕೂಲಕ್ಕಾಗಿ ಅನೇಕ ಪ್ರಾಂತ್ಯಗಳನ್ನು ನಿರ್ಮಿಸಿದಂತೆ ಕಾಣುತ್ತದೆ. ಕರ್ನಾಟಕದಲ್ಲಿ ಸುವರ್ಣಗಿರಿ ಎಂಬ ಪ್ರಾಂತ್ಯವನ್ನು ರಚಿಸಿ, ಅಲ್ಲಿ ಮಹಾಮಾತ್ರರೆಂಬ ಅಧಿಕಾರಿಗಳನ್ನು ನೇಮಕಮಾಡಿರುವ ವಿಷಯ ಆತನು ಹಾಕಿಸಿರುವ ಶಾಸನಗಳಿಂದ ವ್ಯಕ್ತವಾಗುತ್ತದೆ. ಮೌರ್ಯರ ನಂತರ ಅಧಿಕಾರಕ್ಕೆ ಬಂದ ಶಾತವಾಹನರು ಈ ವ್ಯವಸ್ಥೆಯನ್ನು ಮುಂದುವರೆಸಿಕೊಂಡು ಬಂದರು. ಕ್ರಿ.ಶ. ೧-೨ನೆಯ ಶತಮಾನದಲ್ಲಿ ಆಳ್ವಿಕೆ ಮಾಡುತ್ತಿದ್ದ ಶಾತವಾಹನರು ವಿಭಾಗಗಳನ್ನು ಮಾಡಿ, ಅಧಿಕಾರಿಗಳನ್ನು ನೇಮಕ ಮಾಡಿದ್ದರು. ಶಾತವಾಹನರ ಆಳ್ವಿಕೆಗೆ ಸಂಬಂಧಿಸಿದಂತೆ ಬಳ್ಳಾರಿ ಜಿಲ್ಲೆಯ ಹಿರೆಹಡಗಲಿ ಮತ್ತು ಆಂಧ್ರಪ್ರದೇಶದ ಮೆಕದೋನಿಯ ಪ್ರಾಕೃತ ಶಾಸನಗಳು ಶಾತವಾನೀಹಾರ,[3] ಶಾತವಾನೀರಠ್ಠ[4] ಎಂದು ಉಲ್ಲೇಖಿಸಿರುವುದನ್ನು ಗಮನಿಸಬಹುದು. ಈ ವ್ಯವಸ್ಥೆ ರಾಷ್ಟ್ರಕೂಟರ ಕಾಲಕ್ಕೆ ಅಂಕಿ ಸಂಖ್ಯೆಗಳೊಂದಿಗೆ ಸ್ಪಷ್ಟವಾದ ಚಿತ್ರಣವನ್ನು ಕಾಣುತ್ತೇವೆ.

ಶಾಸನಗಳು ಪ್ರಾಚೀನ ಕರ್ನಾಟಕವನ್ನು ಕುಂತಳ ದೇಶವೆಂದು ಕರೆದಿವೆ. ಈ ಕುಂತಳದಲ್ಲಿ ಒಂದು ಪ್ರಮುಖ ಆಡಳಿತ ಕೇಂದ್ರವಾಗಿದ್ದ ಇಂದಿನ ವಿಜಾಪುರ ಜಿಲ್ಲೆಯ ಭೀಮಾನದಿ ದಂಡೆಯ ಮೇಲಿರುವ ತದ್ದೇವಾಡಿ ಅಂದು ತರ್ದವಾಡಿಸಾಸಿರವೆಂದು ಸಾವಿರ ಹಳ್ಳಿಗಳನ್ನೊಳಗೊಂಡಿತ್ತು. ಇದನ್ನು ಮುತ್ತಗಿ ಮತ್ತು ಸಾಲೋಟಗಿ ಶಾಸನಗಳು ತರ್ದ್ದವಾಡಿ ನಾಡೊಳಗಣ ನಿಶ್ಚಲಿತ ಸಹಸ್ರ ಗ್ರಾಮಂಗಳೊಳೆಲ್ಲ ಸಂಸ್ಥವಾಗಿ ಮುತ್ತಗೆಯೆಸಗುಂ, ತರ್ದ್ದವಾಡಿ ಗ್ರಾಮೆ ಎಂದು ಸ್ಪಷ್ಟವಾಗಿ ಉಲ್ಲೇಖಿಸುತ್ತವೆ.[5] ಶಾಸನಗಳ ಉಲ್ಲೇಖದಂತೆ ತದ್ದೇವಾಡಿಯನ್ನು ತರ್ದವಾಡಿ ಸಾಸಿರ,[6] ತದ್ದವಾಡಿ ಸಾಯಿರ,[7] ತದ್ದವಾಡಿ ಸಾವಿರ,[8] ತರ್ದ್ದವಾಡಿ ಸಾಯಿರ,[9] ತರ್ದ್ದವಾಡಿ ಸಹಸ್ರ,[10] ತರ್ದ್ದವಾಡಿ ನಾಡು,[11] ತರ್ದ್ದವಾಡಿ ವಿಷಯ[12] ಮತ್ತು ತರ್ದ್ದವಾಡಿ ದೇಶ[13] ಎಂದು ಕರೆಯಲಾಗಿದೆ. ಈ ತರ್ದವಾಡಿ ಸಾಸಿರದಲ್ಲಿ ಕೃಷ್ಣಾ ನದಿಯಿಂದ ಭೀಮಾ ನದಿಯವರೆಗಿನ ಗ್ರಾಮಗಳ ಸೇರ್ಪಡೆಗೊಂಡಿದ್ದವು. ಅಂದರೆ ವಿಜಾಪುರ ಜಿಲ್ಲೆಯ ಇಂಡಿ, ಸಿಂದಗಿ, ವಿಜಾಪುರ, ಬಸವನ ಬಾಗೇವಾಡಿ ಮತ್ತು ಮುದ್ದೇಬಿಹಾಳ ತಾಲೂಕಿನ ಹಳ್ಳಿಗಳಲ್ಲದೇ ನೆರೆಯ ಮಹಾರಾಷ್ಟ್ರದ ಜತ್, ಮಂಗಳವೇಡ ಗುಲ್ಬರ್ಗಾ ಜಿಲ್ಲೆಯ ಜೇವರಗಿ ತಾಲೂಕಿನ ಕೆಲವು ಹಳ್ಳಿಗಳ ಮತ್ತು ಬಾಗಲಕೋಟೆ ಜಿಲ್ಲೆಯ ಬಾಗಲಕೋಟೆ ಮತ್ತು ಜಮಖಂಡಿ ತಾಲೂಕಿನ ಕೆಲವು ಹಳ್ಳಿಗಳು ಸಮಾವೇಶಗೊಂಡಿದ್ದವು. ಮುದ್ದೇಬಿಹಾಳ ತಾಲೂಕಿನ ವಾಯುವ್ಯ ಭಾಗದ ಕೆಲವು ಹಳ್ಳಿಗಳು ಹಗರಟಗೆ-೩೦೦ರಲ್ಲಿ ಹಾಗೂ ವಿಜಾಪುರ ತಾಲೂಕಿನ ವಾಯುವ್ಯ ಭಾಗದ ಕೆಲವು ಹಳ್ಳಿಗಳು ಕಣಂಬಡೆ -೩೦೦ರಲ್ಲಿದ್ದವು. ರಾಷ್ಟ್ರಕೂಟರ ಆಳ್ವಿಕೆಯ ಕಾಲದಲ್ಲಿಯೇ ಈ ನಾಡು ಅಸ್ಥಿತ್ವದಲ್ಲಿತ್ತು. ಇದನ್ನು ಬಸವನ ಬಾಗೇವಾಡಿ ತಾಲೂಕಿನ ನರಸಲಗಿಯಲ್ಲಿರುವ ಕ್ರಿ.ಶ. ೯೬೫ರ ಮೂರನೆಯ ಕೃಷ್ಣನ ಶಾಸನದಲ್ಲಿ ತೈಲಪರಸ ತರ್ದವಾಡಿ ಸಾಸಿರಮಣುಗಜೀವಿತಮಾಳುತಿರ್ದ್ದು ಎಂದು ಹೇಳಿದೆ.[14] ಆದ್ದರಿಂದ ಬಾಗೇವಾಡಿ ತರ್ದವಾಡಿ ಸಾಸಿರದಲ್ಲಿ ಪ್ರಮುಖ ಅಗ್ರಹಾರವಾಗಿತ್ತೆಂದು ಹೇಳಬೇಕಾಗುತ್ತದೆ.

ಬಸವನ ಬಾಗೇವಾಡಿಯನ್ನು ಶಾಸನಗಳು ಯಾವುದೇ ಅಂಕಿ ಸಂಖ್ಯೆಗಳಿಂದ ಗುರುತಿಸಿಲ್ಲ. ಬದಲಾಗಿ ಅಗ್ರಹಾರ ಬಾಗವಾಡಿ,[15] ತರ್ದವಾಡಿ ಮಧ್ಯದ ಗ್ರಾಮ ಬಾಗವಾಡಿ[16] ಎಂದು ಕರೆದಿವೆ. ಅನೇಕ ಕವಿಗಳು ತಮ್ಮ ಕಾವ್ಯಗಳಲ್ಲಿ ಈ ಊರನ್ನು ಪ್ರಸ್ತಾಪಿಸಿದ್ದಾರೆ. ಹರಿಹರ ಕವಿಯ ಬಸವರಾಜ ದೇವರ ರಗಳೆಯಲ್ಲಿ ಅಗ್ರಹಾರಂ ಬಾಗವಾಡಿ,[17] ಸೋಮನಾಥನ ಬಸವ ಪುರಾಣದಲ್ಲಿ ಹಿಂಗಳೇಶ್ವರ ಭಾಗವಾಟಿ,[18] ಭೀಮಕವಿಯ ಬಸವ ಪುರಾಣದಲ್ಲಿ ಇಂಗಳೇಶ್ವರ ಬಾಗೇವಾಡಿ[19] ಚಾಮರಸನ ಪ್ರಭುಲಿಂಗ ಲೀಲೆಯಲ್ಲಿ ಲಿಂಗಳೇಶ್ವರ ಬಾಗೇವಾಡಿ,[20] ಲಕ್ಕಣ್ಣ ದಂಡೇಶನ ಶಿವತತ್ವ ಚಿಂತಾಮಣಿಯಲ್ಲಿ ಬಾಗೇವಾಡಿ,[21] ಸಿಂಗಿರಾಜನ ಬಸವ ಚರಿತ್ರೆಯಲ್ಲಿ ಇಂಗಳೇಶ್ವರ ಬಾಗೇವಾಡಿ,[22] ಷಡಕ್ಷರದೇವನ ಬಸವರಾಜ ವಿಜಯದಲ್ಲಿ ಕರ್ನಾಟ ಶ್ರೀಯನ ಸೌಭಾಗ್ಯ ಕೇಶಾಗಾರ ಮೆನಿಸಿದ ಬಾಗೇವಾಡಿ,[23] ಗರಣಿಯ ಬಸವಲಿಂಗನ ಬಸವೇಶ್ವರ ಕಾವ್ಯದಲ್ಲಿ ಬಾಗೇವಾಡಿ[24] ಎಂಬ ಉಲ್ಲೇಖಗಳು ಬಂದಿವೆ. ೧೯೬೮ರಲ್ಲಿ ಜರುಗಿದ  ಶ್ರೀ ಬಸವೇಶ್ವರರ ಅಷ್ಟಶತಮಾನೋತ್ಸವದ ಸ್ಮಾರಕವಾಗಿ ಬಸವನ ಬಾಗೇವಾಡಿ[25] ಎಂದು ಕರೆಯಲಾಯಿತು.

ಇಂಗಳೇಶ್ವರ ಗ್ರಾಮ ಬಾಗೇವಾಡಿಯಿಂದ ೧೦ ಕಿ.ಮೀ. ದೂರದಲ್ಲಿ ಉತ್ತರ ಭಾರಕ್ಕಿದೆ. ಆದರೆ ಇಂಗಳೇಶ್ವರ-ಬಾಗೇವಾಡಿಯ ಶಾಸನಗಳಲ್ಲಿ ಈ ಎರಡೂ ಊರುಗಳು ಪ್ರತ್ಯೇಕವಾಗಿಯೇ ಉಲ್ಲೇಖಗೊಂಡಿವೆ. ಇಂಗಳೇಶ್ವರ ಆಗ ಪ್ರಮುಖ ಬಣಂಜು ಪಟ್ಟಣವಾಗಿತ್ತು. ಕವಿಗಳು ಬಾಗೇವಾಡಿಯನ್ನು ಗುರುತಿಸಲು ಇಂಗಳೇಶ್ವರದ ಹೆಸರನ್ನು ಬಳಸಿಕೊಂಡತೆ ಕಾಣುತ್ತದೆ. ಉದಾ : ಬಾಗೇವಾಡಿ ಟಕ್ಕಳಕಿ, ಬಾಗೇವಾಡಿ ನಾಗೂರ.

ಬಸವನ ಬಾಗೇವಾಡಿ ಪರಸರದಲ್ಲಿ ಅನೇಕ ಆಡಳಿತ ವಿಭಾಗಗಳಿದ್ದವು. ಅವುಗಳಲ್ಲಿ ಬಾಗೇವಾಡಿ ಯಾವ ವಿಭಾಗಕ್ಕೆ ಸೇರಿತ್ತೆಂದು ಸ್ಪಷ್ಟವಾಗುವುದಿಲ್ಲ. ಅಲ್ಲದೇ ಇದು ಒಂದು ಸ್ವತಂತ್ರ ಅಗ್ರಹಾರವಾಗಿತ್ತೆ ಅಥವಾ ಅಗ್ರಹಾರಗಳು ಆಡಳಿತ ವಿಭಾಗಗಳಿಗೆ ಸೇರುತ್ತಿರಲಿಲ್ಲವೇ ಎಂಬ ಪ್ರಶ್ನೆಗಳು ಉಂಟಾಗುತ್ತವೆ. ಆದರೆ ಮುತ್ತಗಿ ಅಗ್ರಹಾರ ಮೂವತ್ತು ಹಳ್ಳಿಗಳ ಆಡಳಿತ ಕೇಂದ್ರವಾಗಿತ್ತು.

ಶಾಸನಗಳು ಉಲ್ಲೇಖಿಸುವಂತೆ ಬಸವನ ಬಾಗೇವಾಡಿ ಪರಿಸರದಲ್ಲಿ ಪ್ರಮುಖ ಐದು ವಿಭಾಗಗಳಿದ್ದವು ಅವು ಮುತ್ತಗೆ ಮೂವತ್ತು, ಹೆಬ್ಬಾಳ ಪನ್ನೆರಡು, ಸೋಗಿಲು ಪನ್ನೆರಡು, ಮುಂಬಾಡ, ಕೆಂಪನಕುಳಿ ಆರುಬಾಂಡ.

ಮುತ್ತಗೆ ಮೂವತ್ತು : ಬಾಗೇವಾಡಿಯಿಂದ ಪಶ್ಚಿಮಕ್ಕೆ ೧೨ ಕಿ.ಮೀ. ದೂರದಲ್ಲಿ ಮುತ್ತಗಿ ಗ್ರಾಮವಿದೆ. ಮಧ್ಯ ಇತಿಹಾಸ ಕಾಲದಲ್ಲಿ ಪ್ರಮುಖ ಅಗ್ರಹಾರವಾಗಿ, ಮೂವತ್ತು ಹಳ್ಳಿಗಳ ಮೇಲಿನ ಆಡಳಿತ ಕೇಂದ್ರವಾಗಿತ್ತು. ಮತ್ತಗಿ ಗ್ರಾಮದ ಕ್ರಿ.ಶ. ೧೧೪೭ರ ಶಾಸನ ತರ್ದವಾಡಿ ಸಾಸಿರದೊಳಗಣ ಕಂಪಣ ಮುತ್ತಗೆ ಮೂವತ್ತರೊಳಗಣ ಮೊದಲ ಬಾಡಂ[26] ಎಂದಿದೆ. ಕ್ರಿ.ಶ. ೯೬೫ರ ನರಸಲಗಿ ಶಾಸನ ಮುತ್ತಗೆ ಮೂವತ್ತರ ರೊಳಗಣ ನರಸಲಗಿ[27] ಎಂದೂ, ಕ್ರಿ.ಶ. ೧೧೫೭ರ ಮಸೂತಿ ಶಾಸನ ಮುತ್ತಗೆ ಮೂವತ್ತರ ಬಳಿಯ ಬಾಡಂ ಮಸೂತಿ[28] ಎಂದೂ ಮತ್ತು ಕ್ರಿ.ಶ. ೧೧೮೯ರ ಮುತ್ತಗೆ ಶಾಸನ ಮುತ್ತಗೆ ಮೂವತ್ತರೊಳಗಣ ಬೀವವೂರು[29] ಎಂದು ಉಲ್ಲೇಖಿಸುತ್ತವೆ. ಇವುಗಳಲ್ಲಿ ಮಸೂತಿ ಹಾಗೂ ನರಸಲಗಿ ಗ್ರಾಮಗಳು ಬಾಗೇವಾಡಿ ತಾಲೂಕಿನಲ್ಲಿವೆ. ಬಿವವೂರು ಗ್ರಾಮ ಅಸ್ಥಿತ್ವದಲ್ಲಿ ಇದ್ದಂತೆ ಕಾಣುವುದಿಲ್ಲ. ಹೀಗೆ ಬಾಗೇವಾಡಿ ಪರಿಸರದ ಮುತ್ತಗಿಯನ್ನೊಳಗೊಂಡು ನರಸಲಗಿ, ಮಸೂತಿ, ಬಿವವೂರು ಮೊದಲಾದ ೩೦ ಗ್ರಾಮಗಳು ಮುತ್ತಗಿ ಆದಿನಕ್ಕೆ ಒಳಪಟ್ಟಿದ್ದವು.

ಹೆಬ್ಬಾಳ ಪನ್ನೆರಡು : ಬಸವನ ಬಾಗೇವಾಡಿಯ ದಕ್ಷಿಣಕ್ಕೆ ಹೆಬ್ಬಾಳ ಗ್ರಾಮ ಅಂದು ಹನ್ನೆರಡು ಹಳ್ಳಿಗಳ ಆಡಳಿತ ಕೇಂದ್ರವಾಗಿತ್ತು. ಕ್ರಿ.ಶ. ೧೦೯೫ರ ಹೆಬ್ಬಾಳ ಗ್ರಾಮದ ಶಾಸನ ಪನ್ನೆರಡರ ಮೊದಲ ಬಾಡ ಪೆರ್ಬ್ಬಾಳ[30] ಎಂದಿದೆ. ಇದರಿಂದ ಅದು ಹನ್ನೆರಡು ಹಳ್ಳಿಗಳ ಆಡಳಿತ ಕೇಂದ್ರವಾಗಿರುವುದು ಸುಸ್ಪಷ್ಟ. ಕ್ರಿ.ಶ. ೧೧೭೬ರ ಇಂಗಳೇಶ್ವರ ಗ್ರಾಮದ ಶಾಸನ ಹೆಬ್ಬಾಳ ಬಳಿಯ ಬಾಡಂ ಕೊಡಗಾನೂರ[31] ಮತ್ತು ಮುತ್ತಗಿಯ ನಾಲ್ಕು ಶಾಸನಗಳು ಹೆಬ್ಬಾಲ ಹನ್ನೆರಡರೊಳಗಣ ನಾಗವಾಡಮಂ, ಹೆಬ್ಬಾಳ ಹನ್ನೆರಡರೊಳಗಣ ಮಣಿಯೂರಂ ಮತ್ತು ಹೆಬ್ಬಳ ಹನ್ನೆರಡರೊಳಗಣ ನಾಗಹುರಂ[32] ಎಂದಿವೆ. ಇದು ಬಾಗೇವಾಡಿಯ ದಕ್ಷಿಣಕ್ಕೆ ಕೊಡಗಾನೂರು, ನಾಗವಾಡ, ಮಣಿಯೂರು (ಈಗಿನ ಮಣೂರು) ನಾಗಹುರು (ನಾಗೂರು) ಮೊದಲಾದ ಗ್ರಾಮಗಳು ಈ ಆಡಳಿತ ವಿಭಾಗದಲ್ಲಿ ಸೇರ್ಪಡೆಗೊಂಡಿದ್ದವು.

ಸೋಗಿಲು ಪನ್ನೆರಡು : ಇಂಗಳೆಶ್ವರ ಗ್ರಾಮದ ಕ್ರಿ.ಶ. ೧೧೭೬ ಶಾಸನ ತರ್ದವಾಡಿ ಸಾಸಿರದೋಳಗಣ ಸೋಗಿಲು ಪನ್ನೆರಡರ ಬಳಿಯ ಬಾಡಂ ಯಗಸಬಾಳು[33]  ಎಂದೂ, ಪಡಿಯಕನೂರು ಗ್ರಾಮದ ಕ್ರಿ.ಶ. ೧೨೬೬ ಶಾಸನ (ತೃಟಿತವಾಗಿದೆ) (ಹಗಿ)ಲು ಹನ್ನೆರಡರೊಳಗಣ ಪಡೆಯಕನೂರು[34] ಎಂದಿವೆ. ಈಗ ಅಗಸಬಾಳು ಪಡೆಕನೂರು ಗ್ರಾಮಗಳು ಅಸ್ತಿತ್ವದಲ್ಲಿವೆ. ಅಗಸಬಾಳ ದಕ್ಷಿಣ ಭಾಗದಲ್ಲಿ ಸಾಲವಾಡಿಗಿ ಗ್ರಾಮವಿದೆ. ಈಗಿನ ಸಾಲವಾಡಿಗಿ ಅಂದಿನ ಸೋಗಿಲು ಆಗಿರಬಹುದು. ಇಲ್ಲವೆ ಶಾಸನುಲ್ಲೇಖಿತ ವಿಭಾಗ ಸೋಗಿಲು ಹಳ್ಳದ ದಂಡೆಯ ಮೇಲಿರುವುದರಿಂದ ಆ ಹೆಸರಿನ ಒಂದು ಆಡಳಿತ ಕೇಂದ್ರವಿದ್ದು, ಬಾಗೇವಾಡಿ-ಮುದ್ದೇಬಿಹಾಳ ತಾಲೂಕುಗಳ ಕೆಲವು ಗ್ರಾಮಗಳು ಅದರಲ್ಲಿ ಸಮಾವೇಶಗೊಂಡಿದ್ದವು.

ಮುಂಬಾಡ : ಕ್ರಿ.ಶ. ೧೦೪೯ರ ಬಾಗೇವಾಡಿ ಶಾಸನದಲ್ಲಿ ತರ್ದವಾಡಿ ಸಾಸಿರದೊಳಗಣ ಮುಂಬಾಡ ಬಳಿಯ ಭತ್ತಗ್ರಾಮ ಹೊಂನವಾಡ[35] ಎಂದಿದೆ. ಇದು ಬಾಗೇವಾಡಿಯಿಂದ ವಾಯುವ್ಯ ಭಾಗದಲ್ಲಿ ವಿಜಾಪುರ ತಾಲೂಕಿನ ಹೊನವಾಡವಾಗಿರಬೇಕು. ಬಾಗೇವಾಡಿ ಶಾಸನದ್ಲಲಿ ವಿಕ್ರಮಾದಿತ್ಯನ ರಾಣಿ ಮೈಲಳದೇವಿ ಸೋಮೇಶ್ವರ ದೇವಾಲಯಕ್ಕೆ ಹೊಂನವಾಡ ಗ್ರಾಮದ ಭೂಮಿಯನ್ನು ದಾನ  ನೀಡಿದ ಉಲ್ಲೆಖವಿದೆ. ಶಾಸನ ಅದನ್ನು ದೋಣಿಯ ನೆಲವೆಂದು ವರ್ಣಿಸುತ್ತದೆ.

ಕೆಂಪನಕುಳಿ ಆರುಂಬಾಡ : ಕ್ರಿ.ಶ. ೧೧೧೨ರ ದಿಂಡವಾರ ಗ್ರಾಮದ ಶಾಸನ ಕೆಂಪನಕುಳಿಯಾರುಂಬಾಡದ ಬಳಿಯ ದಿಂಡವೂರಮಂ[36] ಎಂದಿದೆ. ಈಗ ಕೆಂಪನಕುಳಿ ಅಸ್ತಿತ್ವದಲ್ಲಿಲ್ಲ. ಬಾಗೇವಾಡಿಯ ಈಶಾನ್ಯ ಭಾಗದ ಆರು ಹಳ್ಳಿಗಳು ಇದರಲ್ಲಿ ಸಮಾವೇಶಗೊಂಡಂತೆ ಕಾಣುತ್ತದೆ.

ಈ ರೀತಿಯ ಸಂಖ್ಯೆಗಳನ್ನು ಗಮನಿಸಿದಾಗ, ಬಾಗೇವಾಡಿ ಪರಸರ ಮುಂಬಾಡ ಒಂದನ್ನು ಬಿಟ್ಟರೆ, ಹೆಬ್ಬಾಳು ಪನ್ನೆರಡು, ಸೋಗಿಲು ಪನ್ನೆರಡು ಕೆಂಪನಕುಳಿ ಆರುಂಬಾಡ ೧೨+೧೨=೨೪+೬=೩೦. ಈ ಮೂವತ್ತೂ ಹಳ್ಳಿಗಳ ಮೇಲೆ ಮುತ್ತಗಿ ಆಡಳಿತ ಕೇಂದ್ರವಾಗಿತ್ತೆನ್ನಬಹುದು. ಇದರಿಂದ ಪ್ರಾಚೀನ ಕಾಲದಲ್ಲಿ ಹಳ್ಳಿಯ ಆಡಳಿತ, ಆರು ಅಥವಾ ಹನ್ನೆರಡು ಹಳ್ಳಿಗಳು ಸೇರಿ ಒಂದು ಚಿಕ್ಕ ಕೇಂದ್ರ, ಅನೇಕ ಚಿಕ್ಕ ಕೇಂದ್ರಗಳು ಸೇರಿ ಮತ್ತೊಂದು ದೊಡ್ಡ ಕೇಂದ್ರ, ಇಂಥ ಹಲವು ಕೇಂದ್ರಗಳು ಸೇರಿದಂತೆ ಮೂನ್ನೂರರಿಂದ ಸಾವಿರ ಸಂಖ್ಯೆಯನ್ನು ಹೊಂದಿದ ಮುಖ್ಯ ಕೇಂದ್ರವಿರುತ್ತಿತ್ತು. ಅನೇಕ ಮುಖ್ಯ ಕೇಂದ್ರಗಳು ಸೇರಿದಂತೆ ಒಂದು ಪ್ರಾಂತ್ಯ ರಚನೆಯಾಗುತ್ತಿತ್ತು. ಒಂದು ವಿಶಾಲವಾದ ರಾಜ್ಯದಲ್ಲಿ ಹಲವು ಪ್ರಾಂತ್ಯಗಳಿರುತ್ತಿದ್ದವು. ಶಾಸನಗಳು ನೊಳಂಬವಾಡಿ, ಗಂಗವಾಡಿಗಳಂಥ ದೊಡ್ಡ ಪ್ರಾಂತ್ಯಗಳನ್ನು ಉಲ್ಲೇಖಿಸುತ್ತವೆ. ಈ ರೀತಿಯ ವಿಭಜಿತ ಆಡಳಿತ ರಾಜ್ಯದ ಸುವ್ಯವಸ್ಥೆಯನ್ನು ಕಾಪಾಡಿಕೊಂಡು ಬರುತ್ತಿತ್ತು.

[1] Journal of Royal Asiatic Society of Great Britain and Ireland for 1921, P.702

[2] Rice, Gangavadi, (R.G. Bhandarkar Commemoration Vol.), P. 238-9

[3] E.I., Vol. I, P-3, Selected Inscriptions, P-461-66, inscriptions of Pallavas, P.555

[4] Rao H., Mysore Gazetteer, Vol. I, P.10

[5] S.I.I., XViii, 111, Muttagi (B. Bagewadi Tq.), 1165 A.D. and 230, Salotagi (Sindagi Tq)

[6] Ibid, XI-i, 40, Narasalagi (B. Bagewadi Tq.), 965 A.D.

[7] Ibid, XViii, 96, Kannur (Bijapur Tq.), 1089 A.D.

[8] Ibid, XX, 96, Yaragal, (Sindagi Tq), 1098 A.D.

[9] Ibid, XV, 35, Masuti (B. Bagewadi Tq), 1157 A.D.

[10] Ibid, XViii, 230, Salotagi (Sindagi Tq), 1157 A.D.

[11] Ibid, XX, 21, Rugi (Indi Tq.), 1019 A.D.

[12] Ibid, 175, Hire Bevanur (Indi Tq.) 1157 A.D.

[13] Ibid, XV, 188, Salvadigi (B. Bagewadi Tq.), 1251 A.D.

[14] Ibid, XI-i, 40, Narasalagi (B. Bagewadi Tq.), 965 A.D.

[15] Ibid, XV, 112, B. Bagewadi (B. Bagewadi Tq.), 1169 A.D.

[16] E.I., XXI-XXII, Arjunawada (Belgaum Dist), P. 9-14

[17] ಹರಿಹರ, ಬ.ದೇ.ರ.,  ಸ್ಥಲ-೧, ಚರಣ-೯೬

[18] ಪಾಲ್ಕುರಿಕೆಯ ಸೋಮನಾಥ, ಬ.ಪು., ಅ.೧, ಪು.೧೧ (ಅನು : ಭೀಮಕವಿ)

[19] ಭೀಮಕವಿ ಬ.ಪು., ಸಂಧಿ-೨, ಪದ್ಯ-೪೫-೪೬

[20] ಚಾಮರಸ, ಪ್ರ.ಲೀ., ಗತಿ-೯. ಪದ್ಯ-೧೦

[21] ಲಕ್ಕಣ್ಣ ದಂಡೇಶ, ಶಿ.ಚಿ., ಸಂಧಿ ೩೦, ಪಧ್ಯ ೧

[22] ಸಿಂಗಿರಾಜ, ಬ.ಚ., ಸಂಧಿ ೫, ಪದ್ಯ ೯-೧೦

[23] ಷಡಕ್ಷರದೇವ, ಬ.ರಾ.ವಿ., ಅ-೨, ಪದ್ಯ-೨೪-೨೮

[24] ಗರಣಿಯ ಬಸವಲಿಂಗ ಬ.ಕಾ., ಸಂಧಿ-೨, ಪದ್ಯ-೫೪-೫೬

[25] ಬಸವಪಥ, ಬಸವೇಶ್ವರ ಅಷ್ಟಶತಮಾನೋತ್ಸವ ಸಂಚಿಕೆ, ಬೆಂಗಳೂರು

[26] S.I.I., XV, 35, Muttagi (B. Bagewadi Tq), 1147 A.D.

[27] Ibid, XI-i, 40, Narasalagi (B. Bagewadi Tq), 965 A.D.

[28] Ibid, XV, 55, Masuti (B. Bagewadi Tq), 1157 A.D.

[29] E.I., XV, P. 25-26, Muttagi (B. Bagewadi Tq), 1185 A.D.

[30] S.I.I. XI – ii, 139, Hebbal (B. Bagewadi Tq), 1095 A.D.

[31] Ibid, XV, 129, Ingaleshvar (B. Bagewadi Tq), 1176 A.D.

[32] Ibid, 32, 35, 97, 115, Muttagi (B. Bagewadi Tq), 1142, 1147, 1158, 1170 A.D.

[33] Ibid, 129, Ingaleshvar (B. Bagewadi Tq), 1179 A.D.

[34] Ibid, 190, Padekanur (Muddebihal Tq), 1256-57 A.D.

[35] Ibid, XI-i, 83, B. Bagewadi (B. Bagewadi Tq), 1049 A.D.

[36] Ibid, XI-ii, 162, Dindawar (B. Bagewadi Tq), 1112 A.D.