ಕರ್ನಾಟಕದಲ್ಲಿ ರಾಜಕೀಯ ಚರಿತ್ರೆ ಮೌರ್ಯರಿಂದಲೇ ಆರಂಭವಾಗಿದ್ದರೂ ಕೆಲವು ಪ್ರದೇಶಗಳಲ್ಲಿ ನಿಖರವಾದ ಆಕರಗಳು ಲಭ್ಯವಿಲ್ಲದಿದ್ದುದರಿಂದ ಮಸುಕಾಗಿ ಕಾಣುತ್ತದೆ. ಬಸವನ ಬಾಗೇವಾಡಿ ಪ್ರದೇಶದಲ್ಲಿ ಶಾತವಾಹನರ ಕಾಲದ ಅನೇಕ ನೆಲೆಗಳು ಶೋಧವಾಗಿವೆ. ಅವರ ರಾಜಕೀಯ ಚರಿತ್ರೆಯನ್ನು ವಿವರನಾತ್ಮಕವಾಗಿ, ಸೂಕ್ಷ್ಮವಾಗಿ ಗ್ರಹಿಸಲು ಯಾವುದೇ ಶಾಸನಗಳು ಮತ್ತು ನಾಣ್ಯಗಳು ಲಭ್ಯವಾಗಿಲ್ಲ. ಅದರಂತೆ ಕಂದಬ ಮತ್ತು ಹತ್ತಿರಲ್ಲಿಯೇ ಇದ್ದ ಬಾದಾಮಿಯ ಚಾಳುಕ್ಯರಿಗೆ ಸಂಬಂಧಿಸಿದಂತೆ ಯಾವುದೇ ಆಕರಗಳು ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ  ರಾಷ್ಟ್ರಕೂಟರ ಕಾಲದಿಂದ ರಾಜಕೀಯ ಚರಿತ್ರೆಯನ್ನು ಕಟ್ಟಿಕೊಡಲು ಪ್ರಯತ್ನಿಸಲಾಗಿದೆ.

ರಾಷ್ಟ್ರಕೂಟರ ಕಾಲದಿಂದ ಸೇವುಣರ ಅಂತ್ಯದವರೆಗೆ ಬಸವನ ಬಾಗೇವಾಡಿ ಪರಿಸರ ಸೋಗಿಲು ಪನ್ನೆರಡು, ಹೆಬ್ಬಾಳ ಪನ್ನೆರಡು, ಮುತ್ತಗೆ ಮೂವತ್ತು, ಮುಂಬಾಡ ಮತ್ತು ಕೆಂಪೆನಕುಳಿ ಆರುಂಬಾಡ ವಿಭಾಗಗಳನ್ನೊಳಗೊಂಡ ಇದು ತರ್ದವಾಡಿ ಸಾಸಿರ ಆಡಳಿತ ಕೇಂದ್ರದಲ್ಲಿ ಒಂದು ಪ್ರಮುಖ ಭಾಗವಾಗಿತ್ತು. ರಾಷ್ಟ್ರಕೂಟ, ಕಲ್ಯಾಣ ಚಾಳುಕ್ಯ, ಕಳಚುರಿ ಮತ್ತು ಸೇವುಣರು ಆಳುತ್ತಿರುವಾಗ, ಮಹಾಮಂಡಳೇಶ್ವರರು, ಮಹಾಸಾಂತರು, ಮನ್ನೆಯರು ಮತ್ತು ಗಾವುಂಡರು ಮುಂತಾದವರು ಸುಮಾರು ನಾನೂರು ಐವತ್ತು ವರ್ಷಗಳ ಕಾಲ ಈ ಪ್ರದೇಶದ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ. ಅರಸರಿಂದ ಹಿಡಿದು ಪ್ರಮುಖ ವ್ಯಕ್ತಿಗಳು ಸಾಮಾಜಿಕ, ಧಾರ್ಮಿಕ, ಆರ್ಥಿಕ, ಸಾಂಸ್ಕೃತಿಕ ಅಭಿವೃದ್ಧಿಯ ಕಾರ್ಯಗಳಲ್ಲಿ ತೊಡಗಿಕೊಂಡು ಶಾಸನಗಳನ್ನು ನಿಲ್ಲಿಸಿದರು. ಈವರೆಗೆ ಸುಮಾರು ೮೩ ಶಾಸನಗಳು ದೊರೆತಿದ್ದು, ಅವುಗಳಿಂದ ಈ ಪ್ರದೇಶದ ರಾಜಕೀಯ ಚರಿತ್ರೆಯನ್ನು ಸ್ಥೂಲವಾಗಿ ಪುನರ್ ಚಿಸಬಹುದಾಗಿದೆ.

ಬಾದಾಮಿ ಚಾಳುಕ್ಯರು :

ಬಾದಾಮಿಯ ಚಾಳುಕ್ಯರು ಕ್ರಿ.ಶ. ೫೦೦ ರಿಂದ ಕ್ರಿ.ಶ. ೨೫೭ರ ವರೆಗೆ ಕರ್ನಾಟಕದಕ್ಕೆ ಆಳರಸರಾಗಿದ್ದರು. ಚಾಳುಕ್ಯರ ಪರಮಾಧಿಕಾರ ಉತ್ತರದಲ್ಲಿ ನರ್ಮದಾ ತೀರದಿಂದ ದಕ್ಷಿಣದಲ್ಲಿ ಕಾವೇರಿ ಬಯಲಿನವರೆಗೂ ವ್ಯಾಪಿಸಿತ್ತು. ಜೈನ ಕವಿ ರವಿಕೀರ್ತಿ ರಚಿಸಿದ, ಐಹೊಳೆ ಪ್ರಶಸ್ತಿ ಈ ಮನೆತನದ ಅಗ್ರಗಣ್ಯ ಸಾಮ್ರಾಟ ಇಮ್ಮಡಿ ಪುಲಕೇಶಿಯು ಕನೋಜ ಚಕ್ರವರ್ತಿ ಹರ್ಷವರ್ಧನನನ್ನು ಸೋಲಿಸಿ ೯೯,೦೦೦ ಗ್ರಾಮಗಳನ್ನೊಳಗೊಂಡ ಮೂರು ಮಹಾರಾಷ್ಟ್ರಕಗಳ ಅಧಿಪತಿಯಾದನೆಂದು ಹೇಳಿದೆ.[1] ಪ್ರಸ್ತುತ ಮಹಾರಾಷ್ಟ್ರ, ಕರ್ನಾಟಕ ಮತ್ತು ಪಶ್ಚಿಮ ಕರವಳಿಯ ಕೊಂಕಣ ಪ್ರದೇಶಗಳೇ ಈ ತ್ರೈರಾಷ್ಟ್ರಗಳೆಂದು ಗುರುತಿಸಲಾಗಿದೆ. ಆದರೆ ತರ್ದವಾಡಿ ನಾಡಿನಲ್ಲಿ ಈವರೆಗೆ ಅವರ ಒಂದೂ ಶಾಸನ ದೊರೆತಿಲ್ಲ.

ರಾಷ್ಟ್ರಕೂಟರು :

ಕ್ರಿ.ಶ. ೭೫೭ರಲ್ಲಿ ಬಾದಾಮಿಯ ಚಾಳುಕ್ಯ ಮನೆತನದ ಸಾರ್ವಭೌಮತ್ವವನ್ನು ಕೊನೆಗಾಣಿಸಿ ದಂತಿದುರ್ಗನು ರಾಷ್ಟ್ರಕೂಟ ಮನೆತನವನ್ನು ಸ್ಥಾಪಿಸಿದರನು. ಅವರು ಕ್ರಿ.ಶ. ೯೭೩ರ ವರೆಗೆ ಎರಡು ಶತಮಾನಗಳ ಕಾಲ ಹಿರಿದಾದ ಸಾಮ್ರಾಜ್ಯವನ್ನು ಕಟ್ಟಿ ಆಳ್ವಿಕೆ ಮಾಡಿದರು. ಇವರ ಆಡಳಿತಕ್ಕೆ ಸಂಬಂಧಿಸಿದಂತೆ ಬಸವನ ಬಾಗೇವಾಡಿಯ ಪ್ರದೇಶದಲ್ಲಿ ಇದುವರೆಗೆ ಹೂವಿನ ಹಿಪ್ಪರಗಿಯಲ್ಲಿ ಎರಡು ನರಸಲಗಿಯಲ್ಲಿ ಒಂದು ಹೀಗೆ ಮೂರು ಶಾಸನಗಳು ದೊರೆತಿವೆ.

ಅಮೋಘವರ್ಷ : ಮುಮ್ಮಡಿ ಗೋವಿಂದನ ನಂತರ ೧೪ ವರ್ಷದ ಬಾಲಕನಾದ ಅವನ ಮಗ ಸರ್ವನು ಕ್ರಿ.ಶ. ೮೧೪ರಲ್ಲಿ ಅಮೋಘವರ್ಷ ನೃಪತುಂಗ ಎಂಬ ಬಿರುದಿನಿಂದ ಪಟ್ಟಾಭಿಷಕ್ತನಾದನು. ಬಸವನ ಬಾಗೇವಾಡಿ ಪ್ರದೇಶದಲ್ಲಿ ಈತನ ಎರಡು ಶಾಸನಗಳು ದೊರೆತಿವೆ. ಈ ಪ್ರದೇಶದಲ್ಲಿ ಅತೀ ಪ್ರಾಚೀನವಾದ ಕ್ರಿ.ಶ. ೮೬೨ರ ಶಾಸನ ಹೂವಿನ ಹಿಪ್ಪರಿಗಿಯಲ್ಲಿದೆ. ಅದರಲ್ಲಿ ರಟ್ಟಮಾರ್ತಾಂಡನಾದ ಅಮೋಘವರ್ಷನು ಜೋತಿಷ್ಯ ಶಕುನ ನಿಮಿತ್ತಂಗಳಂ ಪತ್ಯಗೆಯ್ದು ಗೋಲೆಯ ಭಟ್ಟನಿಗೆ ಪೂವಿನ ಪಿಪ್ಪರಗೆ ಗ್ರಾಮವನ್ನು ದಾನಕೊಟ್ಟನೆಂದು ಹೇಳಲಾಗಿದೆ.[2] ಅದೇ ಗ್ರಾಮದ ಮತ್ತೊಂದು ಶಾಸನ ಯಾದವ ವಂಶೋದ್ಭವ  ಕನ್ನರಸ (ಮೊದಲನೆಯ ಕೃಷ್ಣ) ನಿರುಪಮದೇವ (ದೃವ) ಜಗತ್ತುಂಗದೇವ (ಮೂರನೆಯ ಗೋವಿಂದ) ಮತ್ತು ಅಮೋಘವರ್ಷರನ್ನು[3] ಹೆಸರಿಸುತ್ತದೆ.

ಎರಡನೆಯ ಕೃಷ್ಣ : ಅಮೋಘವರ್ಷನ ನಂತರ ಅಧಿಕಾರಕ್ಕೆ ಬಂದ ಎರಡನೆಯ ಕೃಷ್ಣನ ಉಲ್ಲೇಖ ಕಲ್ಯಾಣ ಚಾಳುಕ್ಯ ಅರಸ ಜಗದೇಕಮಲ್ಲನ ಸಾಲವಾಡಿಗಿ ಶಾಸನದಲ್ಲಿದೆ. ಅಕಾಲ ವರ್ಷೋರ್ಬ್ಬಿನಾಥ ಚಕ್ರವರ್ತ್ತಿ ಮಣಿನಾಯಕ ಎಂದು ನಳ, ನಹುಷ ಮೊದಲಾದ ಪೌರಾಣಿಕ ವ್ಯಕ್ತಿಗಳೊಡನೆ ಹೋಲಿಸಿ ”ರಾಜಗುಣವಂ ಮೆರೆದಂ”[4]  ಎಂದಿದೆ.

ಅಕಾಲವರ್ಷಮುಮ್ಮಡಿ ಕೃಷ್ಣ : ರಾಷ್ಟ್ರ ಕೂಟರ ಪ್ರಬಲ ಅರಸರಲ್ಲೊಬ್ಬನಾದ ಮುಮ್ಮಡಿ ಕೃಷ್ಣನ ಒಂದು ಶಾಸನ ನರಸಲಗಿಯಲ್ಲಿದೆ. ಮೂರನೆಯ ಕೃಷ್ಣನು ರಾಜ್ಯವಾಳುತ್ತಿರುವಾಗ ಆತನ ಪಾದಪದ್ಮೋಪಜೀವಿಯಾದ ಮಹಾಸಾಮಂತಾಧಿಪತಿ ಅಹಮಲ್ಲದೇವನ ತರ್ದವಾಡಿ ಸಾಸಿರವನ್ನಾಳುತ್ತಿದ್ದ ಉಲ್ಲೇಖವಿದೆ.[5]

ಮೂರನೆಯ ಕೃಷ್ಣನ ಮರಣಾನಂತರ ಉತ್ತರಾಧಿಕಾರಿಗಳ ಒಳಜಗಳ, ಅಸಮರ್ಥತೆಯಿಂದಾಗಿ ರಾಷ್ಟ್ರಕೂಟರ ಸಾಮ್ರಾಜ್ಯ ಹಾಗೂ ರಾಜಧಾನಿಗಳು ಅಶಾಂತಿ ಮತ್ತು ಗೊಂದಲದ ಬೀಡಾದವು ಈ ಸಮಯವನ್ನು ಉಪಯೋಗಿಸಿಕೊಂಡ ಇವರ ಸಾಮಂತನಾದ ಎರಡನೆಯ ತೈಲಪನು ಕ್ರಿ.ಶ. ೯೭೩ರಲ್ಲಿ ರಾಷ್ಟ್ರಕೂಟರ ಆಡಳಿತವನ್ನು ಕೊನೆಗಾಣಿಸಿ, ಚಾಳುಕ್ಯರ ಅಧಿಕಾರವನ್ನು ಸ್ಥಾಪಿಸಿದನು.

ಕಲ್ಯಾಣ ಚಾಳುಕ್ಯರು :

ರಾಷ್ಟ್ರಕೂಟರ ಉತ್ತರಾಧಿಕಾರಿಗಳಾಗಿ ಬಂದ ಕಲ್ಯಾಣ ಚಾಳುಕ್ಯರು ಕ್ರಿ.ಶ. ೯೭೩ರಲ್ಲಿ ಆಡಳಿತ ಪ್ರಾರಂಭಿಸಿದರು. ಅದುವರೆಗೆ ಅವರ ೧೫ ಶಾಸನಗಳು ಈ ಪ್ರದೇಶದಲ್ಲಿ ಲಭ್ಯವಾಗಿವೆ. ತೈಲಪನ ವಂಶಸ್ಥರು ರಾಷ್ಟ್ರಕೂಟರ ಅಧೀನದಲ್ಲಿದ್ದುಕೊಂಡು ವಿಜಾಪುರ ಪ್ರದೇಶಕ್ಕೆ ಸಂಬಂಧಿಸಿದಂತೆ ಒಂದು ಸಣ್ಣ ಸಂಸ್ಥಾನದಲ್ಲಿ ಆಳ್ವಿಕೆ ನಡೆಸುತ್ತಿದ್ದರು. ರಾಷ್ಟ್ರಕೂಟರಲ್ಲಿ ಪ್ರಮುಖನಾದ ಮುಮ್ಮಡಿ ಕೃಷ್ಣನ ಅನೇಕ ದಂಡಯಾತ್ರೆಗಳಲ್ಲಿ ತೈಲಪನು ಭಾಗವಹಿಸುವುದರ ಮೂಲಕ ಪ್ರಖ್ಯಾತಿಗೆ ಬಂದನು.

ತೈಲಪ : ರಾಷ್ಟ್ರಕೂಟರನ್ನು ಸದೆ ಬಡಿಯುವ ಪೂರ್ವದಲ್ಲಿ ತೈಲಪನು ಅವರ ಸಾಮಂತನಾಗಿ ತರ್ದವಾಡಿ ನಾಡನ್ನಾಳುತ್ತಿರುವುದು ಕಾರ್ಜೋಳ[6] ಮತ್ತು ನರಸಲಗಿ[7] ಶಾಸನಗಳಿಂದ ತಿಳಿದುಬರುತ್ತದೆ. ಆತನು ಧರಿಸಿದ ಸತ್ಯಾಶ್ರಯ ಕುಲತಿಲಕ, ಚಾಳುಕ್ಯರಾಯ ಅಹಮಲ್ಲದೇವ ಮೊದಲಾದ ಬಿರುದುಗಳು ಅವನ ಮಹತ್ವಾಕಾಂಕ್ಷೆ ಮತ್ತು ಪ್ರಭುತ್ವವನ್ನು ಎತ್ತಿ ತೋರಿಸುತ್ತವೆ. ಮೂರನೆಯ ಕೃಷ್ಣನ ನಂತರ ದಾಯಾದಿ ಕಲಹಗಳ ಸದುಪಯೋಗವನ್ನು ಬಳಸಿಕೊಂಡ ಎರಡನೆಯ ತೈಲಪನು ಪ್ರಭಲನಾಗಿ, ರಾಷ್ಟ್ರಕೂಟರ ಸಂತತಿಯನ್ನು ಕೊನೆಗಾಣಿಸಿ ಕಲ್ಯಾಣ ಚಾಳುಕ್ಯರ ಸಾಮ್ರಾಜ್ಯವನ್ನು ಸ್ಥಾಪಿಸಿದನು.

ತೈಲಪನು ಚಕ್ರವರ್ತಿಯಾದ ತರುವಾಯ ಅವನ ಎರಡು ಶಾಸನಗಳು ತರ್ದವಾಡಿ ನಾಡಿದ ಕಾಖಂಡಕಿ[8] ಮತ್ತು ಕಾರ್ಜೋಳ[9]ಗಳಲ್ಲಿ ದೊರೆತಿವೆ. ಕಾಖಂಡಕಿಯ ಶಾಸನ ತೈಲಪದೇವ ಮಾನ್ಯಖೇಟದಿಂದ ರಾಜ್ಯವಾಳುತ್ತಿದ್ದುದನ್ನು ಹೇಳಿದೆ. ಆರನೆಯ ವಿಕ್ರಮಾದಿತ್ಯನ ಮುತ್ತಗಿಯ ಶಾಸನವು ತೈಲಪನನ್ನು ”ಚಾಳುಕ್ಯ ಶಿಕ್ಷಾಮಣಿ ತ್ರೈಳೋಕ್ಯಮಲ್ಲನಾಹವಮಲ್ಲ ಭೀಮಬಳ ರಾಜನ್ವತಿ”[10] ಎಂದಿದೆ. ಮನಗೂಳಿಯ ಶಾಸನವು ಮಸಗಿದ ಜವನಂಪೋಲ್ದು ರಾಷ್ಟ್ರಕೂಟಾಂಬರ ಭಾಸ್ವಚಂದ್ರದರಂ ಕಕ್ಕರ ನೃಪರಂ ಕಂಬ ಅವನೀಪಾಲರಂ ಸಂಹರಿಸುತ್ತಂ ಜೀಯ ಒಪ್ಪೆಂಬಿನ ವನೀತಳ ಅತ್ಯಾಯತಿಯೊಳೇ ತಳೆದನೆಂದು ಹೇಳಿ ”ಚಾಳುಕ್ಯ ರಾಜ್ಯಮನುದ್ಧರಿಸಿದ ಮರ್ತ ಮುಕುಂದ”[11] ನೆಂದಿದೆ. ಎರಡನೆಯ ಜಗದೇಕಮಲ್ಲನ ಮುತ್ತಗಿಯ ಶಾಸನ ”ಸುವರ್ಣ್ನದಾನಿ ಅವಧೀರಿತ ವೈರಿಬಲಾವಶೇಷ ಅಜಿಲೋಲುಪ ಕಲಿತೈಲ ಕುಂತಳ ದೇಶವನ್ನು ನಿಜಭುಜಾಬಳದಿಂದ ಸಮರದಾರಿಣಿಯಲ್ಲಿ ರಾಷ್ಟ್ರಕೂಟ ಭೂಕಾಂತರನ್ನು ಕಾದಿಕೊಂದು ಗೆಲ್ದುದಾಗಿ”[12] ಹೇಳಿದೆ. ಆದರೆ ತೈಲಪನ ಆಳ್ವಿಕೆಯನ್ನು ನೇರವಾಗಿ ಉಲ್ಲೇಖಿಸುವ ಶಾಸನಗಳು ಈ ಪ್ರದೇಶದಲ್ಲಿ ದೊರೆತಿಲ್ಲ.

ಅಯ್ಯುಣದೆವ : ತೈಲಪನ ನಂತರ ಆಳ್ವಿಕೆ ಮಾಡಿದ ಅವನ ಮೊಮ್ಮಗ ಅಯ್ಯಣದೇವನನ್ನು ಕುರಿತು ಎರಡನೆಯ ಜಗದೇಕಮಲ್ಲನ ಮನಗೂಳಿ ಶಾಸನ ”ವಾಸವಿಳಾಸದಿಂ ಸಿಂಹಾಸನವಷ್ಟಾದಶಂ ಪ್ರವರ್ತಿಸೆ ರಾಜ್ಯಶ್ರೀ ಸತಿಯೋಳ್ ನೆರೆದ ಯಶೋಭಾಸುರ ಚಾಳುಕ್ಯರೊಳಗೆ ಹದನೆಂಟನೆಯಂ ಚಾಳುಕ್ಯ ಕುಲಭೂಷಣನ್ ಅಯ್ಯನದೇವನ ಭೂಭುಜಂ”[13] ಎಂದಿದೆ. ಇವನ ಶಾಸನಗಳು ಈ ಪ್ರದೇಶದಲ್ಲಿ ಈವರೆಗೆ ಲಭ್ಯವಾಗಿಲ್ಲ.

ಜಗದೇಕಮಲ್ಲ ಜಯಸಿಂಹ : ಇವನ ನಂತರ ಆಳ್ವಿಕೆಯ ಸೂತ್ರ ವಹಿಸಿಕೊಂಡ ಅಯ್ಯಣದೇವನ ಇನ್ನೊಬ್ಬ ಸಹೋದರನಾದ ಜಗದೇಕಮಲ್ಲ ಜಯಸಿಂಹನನ್ನು ಮೂರನೆ ಸೋಮೇಶ್ವರನ ಇಂಗಳೇಶ್ವರ ಶಾಸನವು ”ವೀರಸಿಂಹಾಸನಾಧಿಪತಿ ನರಸಿಂಹಾವತಾರ”[14] ಎಂದರೆ, ಎರಡನೆಯ ಜಗದೇಕಮಲ್ಲನ ಮುತ್ತಗಿ ಶಾಸನ ”ಜಯಸಿಂಹ ಭೂಪನವೃಥಾರೋಪಂ”[15] ಎಂದು ಹೇಳಿದೆ.

ಮೊದಲನೆಯ ಸೋಮೇಶ್ವರ : ಜಗದೇಕಮಲ್ಲ ಜಯಸಿಂಹನ ನಂತರ ಆತನ ಹಿರಿಯ ಮಗ ಸೊಮೇಶ್ವರನು ಆಳ್ವಿಕೆಗೆ ಬಂದನು. ಇವನು ತ್ರಳೋಕ್ಯಮಲ್ಲ, ಅಹವಮಲ್ಲ ಮತ್ತು ರಾಜನಾರಾಯಣ ಬಿರುದುಗಳಿಂದ ಪ್ರಖ್ಯಾತನಾದ್ದನು. ಈತನ ಎರಡು ಶಾಸನಗಳು ಬಾಗೇವಾಡಿ ಪ್ರದೇಶದಲ್ಲಿ ದೊರೆತಿವೆ.

ಮೊದಲನೆಯ ಶಾಸನ ಬಾಗೇವಾಡಿಯಲ್ಲಿದ್ದು, ಇದು ”ತ್ರೆಳೋಕ್ಯಮಲ್ಲ ದೇವನು ಪಲ್ಲವದಿಗ್ವಿಜಯಂಗೆಯ್ದು ಕರಹಡ ನಾಡೊಳಗಣ ವಗ್ಘಾಪೂರದ ನೆಲೆವಿಡಿನಿಂದ ರಾದ್ಯವಾಳುತ್ತಿದ್ದನೆಂದು” ಹೇಳಿದೆ ಮತ್ತು ಆತನ ಹಿರಿಯರಾಣಿ ಮೈಲಳದೇವಿ ಬಾಗೇವಾಡಿಯ ಸೋಮೇಶ್ವರ ದೇವಾಲಯಕ್ಕೆ ಭೂದಾನ ನೀಡಿದ ಉಲ್ಲೇಖವಿದೆ.[16]

ಎರಡನೆಯ ಶಾಸನ ಬ್ಯಾಕೋಡ ಗ್ರಾಮದಲ್ಲಿದೆ. ತ್ರೈಳೋಕ್ಯಮಲ್ಲದೇವನು ರಾಜ್ಯವಾಳುತ್ತಿರುವಾಗ, ಆತನ ಪಾದಪದ್ಮೋಪಜೀವಿ ಮಹಾಸಾಮಂತನಾದ ತ್ರೈಳೋಪದೇವರಸನು ಬೆಳ್ಕೊಡದ ಸೋಮೇಶ್ವರ ದೇವರಿಗೆ ಭೂದಾನ ಕೊಟ್ಟ ಉಲ್ಲೆಖವಿದೆ.[17]

ಮೊದಲನೆಯ ಸೋಮೇಶ್ವರನ ನಂತರ ಎರಡನೆಯ ಸೋಮೇಶ್ವರನು ಆಳ್ವಿಕೆಗೆ ಬಂದನಾದರೂ ಅವನ ಶಾಸನಗಳಾವವು. ಈ ಪ್ರದೇಶದಲ್ಲಿ ದೊರೆತಿಲ್ಲ.

ಆರನೆಯ ವಿಕ್ರಮಾದಿತ್ಯ : ಇವನು ಕಲ್ಯಾಣ ಚಾಳುಕ್ಯರ ಪ್ರಸಿದ್ಧ ಸಾಮ್ರಾಟನಾಗಿದ್ದನು. ದುರ್ಬಲನಾದ ಅಣ್ಣ ಎರಡನೆಯ ಸೋಮೇಶ್ವರನನ್ನು ಬದಿಗೊತ್ತಿ ಕ್ರಿ.ಶ. ೧೦೭೬ರಲ್ಲಿ ಅಧಿಕಾರಕ್ಕೆ ಬಂದನು.[18] ಇವನ ಒಟ್ಟು ಏಳು ಶಾಸನಗಳು ಬಾಗೇವಾಡಿ ಪ್ರದೇಶದಲ್ಲಿವೆ.

ಹೆಬ್ಬಾಳ ಗ್ರಾಮದ ಶಾಸನ ವಿಕ್ರಮಾದಿತ್ಯ ಕಲ್ಯಾಣಪುರದಿಂದ ರಾಜ್ಯವಾಳುತ್ತಿರುವಾಗ, ಆತನ ಹಿರಿಯ ಮಗನಾದ ಮಲ್ಲಿಕಾರ್ಜುನದೇವನು ಯುವರಾಜ ಪದವಿಯನ್ನು ಹೊಂದಿ ತರ್ದವಾಡಿ ಸಾಸಿರವನ್ನು ಆಳುತ್ತಿದ್ದನು. ಅವನು ಹೆಬ್ಬಾಳ ಗ್ರಾಮದ ಸರಸ್ವತಿ ದೇವಾಲಯಕ್ಕೆ ಭೂದಾನ ನೀಡಿದ ವಿಷಯವನ್ನು[19] ಹೇಳಿದೆ.

ಎರಡನೆಯ ಶಾಸನ ಮುತ್ತಗಿ ಗ್ರಾಮದಲ್ಲಿದ್ದು, ಅಲ್ಲಿಯ ತೀಕೇಶ್ವರ ದೇವಾಲಯಕ್ಕೆ ತೀಕೆಯ ಷಣಂಗಿಯಿಂದ ಭೂಮಿ ಮತ್ತು ತೋಟಗಳ ದಾನ ನೀಡಿದ ವಿಷಯ ಹಾಗೂ ಮುತ್ತಗಿಯು ಅಗ್ರಹಾರವಾಗಿತ್ತೆಂದು ಇದರಿಂದ ಗೊತ್ತಾಗುತ್ತದೆ.[20] ಅದೇ ಗ್ರಾಮದಲ್ಲಿರುವ ಇನ್ನೊಂದು ಶಾಸನದಲ್ಲಿ ವಿಕ್ರಮಾದಿತ್ಯನ ಮಹಾಮಂಡಳೇಶ್ವರ ಗೋವಿಂದ ರಾಜನಿಂದ ಅಲ್ಲಿಯ ರಾಮೇಶ್ವರ ದೇವಾಲಯ ನಿರ್ಮಾಣ ಮಾಡಿ, ಅದಕ್ಕೆ ಭೂದಾನ ಮಾಡಿದ ವಿಷಯವನ್ನಲ್ಲದೇ ತಂಗಿ ಹೊನ್ನಕಚ್ಚಿ ಮಗ ವಿಟ್ಟ (ವಿಷ್ಣುದೇವ)ರಿಂದ ದೇವಾಲಯಕ್ಕೆ ಭೂದನ ನೀಡಿದ ಉಲ್ಲೇಖವಿದೆ.[21]

ದಿಂಡವಾರ ಗ್ರಾಮದಲ್ಲಿರುವ ನಾಲ್ಕನೆಯ ಶಾಸನದಲ್ಲಿ ಯುವರಾಜ ಮಲ್ಲಿಕಾರ್ಜುನದೇವ ತರ್ದವಾಡಿ ಸಾಸಿರವನ್ನಾಳುತ್ತಿರುವಾಗ ಸಾಮಂತ ಮಹಾಮಂಡಳೇಶ್ವರ ಬೀಷಣ ದೇವರಸನ್ನು ದಿಂಡವಾರ ಗ್ರಾಮವನ್ನೊಳಗೊಂಡು ಆರು ಹಳ್ಳಗಳ ಆಡಳಿತವನ್ನು ನೋಡಿಕೊಳ್ಳುತ್ತಿದ್ದ. ಆ ಗ್ರಾಮದಲ್ಲಿಯ ಮೌಳೇಶ್ವರ ದೇವಾಲಯಕ್ಕೆ ದಾನ ನೀಡಿದ ವಿಷಯವನ್ನು ಹೇಳಲಾಗಿದೆ.[22] ಮುಳವಾಡ ಗ್ರಾಮದ ಶಾಸನ ತೃಟಿತವಾಗಿರುವುದರಿಂದ ಯಾವುದೇ ವಿಷಯ ಲಭ್ಯವಿಲ್ಲ.

ಮೂರನೆಯ ಸೋಮೇಶ್ವರ : ಆರನೆಯ ವಿಕ್ರಮಾದಿತ್ಯನ ನಂತರ ಅಧಿಕಾರಕ್ಕೆ ಬಂದ ಭೂಲೋಕಮಲ್ಲ ಮೂರನೆಯ ಸೋಮೇಶ್ವರನ ಎರಡು ಶಾಸನಗಳು ಈ ಪ್ರದೇಶದಲ್ಲಿ ಲಭ್ಯವಾಗಿವೆ. ಇಂಗಳೇಶ್ವರ ಶಾಸನದಲ್ಲಿ ಪೇರ್ಮಾಡಿ ಅರಸನು (ಕಳಚುರಿ) ಮಹಾಮಂಡಳೇಶ್ವರನಾಗಿ ತರ್ದವಾಡಿ ಸಾಸಿರವನ್ನಾಳುತ್ತಿರುವಾಗ, ದಂಡನಾಯಕ ಸಾಯಿಪಯ್ಯನ ಶ್ರೀಕರಣ ನೀಲಕಂಠ ನಾಯಕನು ನಿರ್ಮಿಸಿದ ನೀಲಕಂಠ ದೇವಾಲಯಕ್ಕೆ ಭೂಮಿ ಹಾಗೂ ಎರಡು ಎಣ್ಣೆ ಗಾಣಗಳನ್ನು ದಾನ ನೀಡಿದ ಬಗ್ಗೆ ಹೇಳಿದೆ.[23]

ಮುಮ್ಮಡಿ ಸೋಮೇಶ್ವರ ಸ್ವತಃ ಕವಿಯಾಗಿದ್ದು, ‘ಮಾನಸೋಲ್ಲಾಸ’ ‘ಅಭಿಲಾಷಿತಾರ್ಥ ಚಿಂತಾಮನಿ’ ಎಂಬ ಗ್ರಂಥಗಳನ್ನು, ‘ವಿಕ್ರಮಾಂಕಾಭ್ಯುದಯ’ ಎಂಬ ಚಂಪು ಕಾವ್ಯವನ್ನು ರಚಿಸಿದನು. ಮಾನಸೊಲ್ಲಾಸವು ನ್ಯಾಯಶಾಸ್ತ್ರ, ವೈದ್ಯಶಾಸ್ತ್ರ, ಸಂಗೀತ, ಚಿತ್ರಕಲೆ, ಗಜಶಾಸ್ತ್ರ, ಅಶ್ವಶಾಸ್ತ್ರ ಅಲಂಕಾರ ಮೊದಲಾದ ಅನೇಕ ವಿಷಯಗಳನ್ನು ಕುರಿತ ಉದ್ಗ್ರಂಥವಾಗಿದೆ. ಇದರಿಂದ ಅವನಿಗಿದ್ದ ”ಸರ್ವಜ್ಞ ಚಕ್ರವರ್ತಿ” ಎಂಬ ಬಿರುದನ್ನು ಇಂಗಳೇಶ್ವರದ ಇನ್ನೊಂದು ಶಾಸನ ಉಲ್ಲೇಖಿಸಿದೆ. ಅಲ್ಲದೇ ಅಲ್ಲಿಯ ದೊಂಕಣಕೇರಿಯ ಒಂದುನೂರು ಮಹಾಜನರನ್ನು ಹೆಳುತ್ತ, ಬ್ರಾಹ್ಮಣರ ಸತ್ರಕ್ಕಾಗಿ ಭೂಮಿಯನ್ನು ದಾನ ಬಿಟ್ಟ ವಿಷಯವನ್ನು ಪ್ರಸ್ತಾಪಿಸುತ್ತದೆ.[24]

ಎರಡನೆಯ ಜಗದೇಕಮಲ್ಲ : ಮೂರನೆಯ ಸೋಮೇಶ್ವರನ ತರುವಾಯ ಆತನ ಹಿರಿಯ ಮಗ ಎರಡನೆಯ ಜಗದೇಕಮಲ್ಲ ಆಡಳಿತಕ್ಕೆ ಬಂದನು. ಈವರೆಗೆ ಇವನ ಐದು ಶಾಸನಗಳು ದೊರೆತಿವೆ. ಆತನಿಗೆ ‘ಪ್ರತಾಪ ಚಕ್ರವರ್ತಿ’ ಎಂಬ ವಿಶೇಷವಾದ ಬಿರುದಿತ್ತು. ಅಲ್ಲದೇ ‘ವೇರ್ಮ ಜಗದೇಕಮಲ್ಲ’ ಎಂದೂ ಸಹ ಕರೆಯಲಾಗುತ್ತಿತ್ತು. ಮೊದಲನೆಯ ಶಾಸನ ಮುತ್ತಗಿ ಗ್ರಾಮದಲ್ಲಿದ್ದು, ಸೋವಿಸೆಟ್ಟಿಯ ತಂದೆ ಚಟ್ಟಿಸೆಟ್ಟಿ ನಿರ್ಮಿಸಿದ ಪ್ರಸನ್ನ ಕೇಶವ ದೇವಾಲಯಕ್ಕೆ ಭೂದಾನ ನೀಡಿದ್ದನ್ನು ತಿಳಿಸಿದೆ.[25] ಎರಡನೆಯ ಶಾಸನದಲ್ಲಿ ಆತನ ಮಹಾಸಾಮಂತಾಧಿಪತಿ  ಮಹಾಪ್ರದಾನ ಹಡಪದ ದಿಷ್ಟಾಯಕ ಮನೆವೆರ್ಗಡೆ ಸೇನಾಧಿಪತಿ ದಂಡನಾಯಕ ಬಂಮಣಯ್ಯನ ಬಿನ್ನಹದ ಮೆರೆಗೆ ಉತ್ತಮದಗ್ರಹಾರ ಮುತ್ತಗಿಯ ಶ್ರೀ ಶಿವಲಿಂಗದೇವರಿಗೆ ಹೆಬ್ಬಾಳ ಪನ್ನೆರಡರೊಳಗಣ ನಾಗವಾಡ ಗ್ರಾಮವನ್ನು ದಾನಕೊಟ್ಟ ವಿಷಯ ಹೇಳಲಾಗಿದೆ[26] ಈ ಅವಧಿಯಲ್ಲಿ ಮಹಾಮಂಡಳೇಶ್ವರ ಬಿಜ್ಜಳದೇವನು ತರ್ದವಾಡಿನಾಡನ್ನು ಆಳುತ್ತಿದ್ದನು. ಅದೇ ಗ್ರಾಮದಲ್ಲಿರುವ ಮೂರನೆ ಶಾಸನಲ್ಲಿ ರಾಜನ ಪರಾಕ್ರಮವನ್ನು ಇಂತು ಹೋಗಳಿದೆ,

ಚೋಳಂ ಚಾಳಾದನಂಧ್ರಂ ಶರನಿಕರ ಶ್ರೀತೋರಃ
ಶಿರೋರಂದ್ರನಾದಂ ಗೌಳಂ ಗೋಳಿಟ್ಟನಂಗಂ ಹ್ರಿತಬಲಸರ್ವ್ವಾಂಗ
ನಾದಂ ಕರಂ ನೇಪಾಳಂ ಪಾಳಾಗಿಪೋದಂ ನಿಜಜನ ಪದ್ರದಿಂ
ಗುರ್ಜ್ಜರಂ ಲಜ್ಜೆಗಟ್ಟಂ ಕಾಲಾಳೊಳ್ಕಾದಿ ಸೋಲ್ತೆಂದಡೆ ನರರಳವೆ
ಶ್ರೀ ಪ್ರತಾಪಕ್ಷಮಾಪಕಂ.

ಮುಂದುವರೆದು ಅಲ್ಲಿರುವ ಸೋವಿಸೆಟ್ಟಿಯ ವಿನಂತಿಯ ಮೇರೆಗೆ ಪಟ್ಟ ಸಾಹಾನಿ ಹಿರಿಯ ದಂಡನಾಯಕ ಬ್ರಹ್ಮದೇವಯ್ಯನು ಮುತ್ತಗೆ ನಡುವೆ ಕೈಹಿಸೆಟ್ಟಿ ಪ್ರತಿಷ್ಠೆ ಮಾಡಿದ ದಕ್ಷಿಣಮುಖ ಚನ್ನಕೇಶವ ದೇವರಿಗೆ ಹೆಬ್ಬಾಳ ಪನ್ನೆರಡರೊಳಗಣ ಮಣಿಯೂರ ಗ್ರಾಮವನ್ನು ಧಾರಾಪೂರ್ವಗಿ ದಾನ ಕೊಟ್ಟನೆಂದಿದೆ.[27]

ಸಾಲವಾಡಿಗಿ ಗ್ರಾಮದ ಶಾಸನಲ್ಲಿ ಕಾಶ್ಮೀರಬ್ರತಿ ಮೂರುಜಾವಿ ಮುನಿಯಿಂದ ಹೊರೆಯಮೇಶ್ವರ ದೇವಾಲಯದ ಪುನಃ ರ್ನಿರ್ಮಾಣ ಮತ್ತು ಆ ದೇವಾಲಯಕ್ಕೆ ಮೂಲಿಗ ಮಾಕ್ಯಯನ ಮಗಳಾದ ಅಚ್ಚಿಕಬ್ಬೆ, ಜಗದೇಕಮಲ್ಲನ ಮನವರ್ಗಡೆ ದಂಡನಾಯಕ ಬರ್ಮಯ್ಯನಿಗೆ ಪಾರಮೇಶ್ವರ ದತ್ತಿಯಾಗಿ ಭೂಮಿ ನೀಡಿದುದನ್ನು ಹೇಳಿದೆ.[28]

ಮೂರನೆಯ ತೈಲಪ : ಎರಡನೆಯ ಜಗದೇಕಮಲ್ಲನ ತರುವಾಯ ಆತನ ಮಗ ತೈಲಪ ಅಧಿಕಾರಕ್ಕೆ ಬಂದನು. ಈತನಿಗೆ ‘ತ್ರೀಭೂವನಮಲ್ಲ’ ಮತ್ತು ‘ತ್ರೈಲೋಕ್ಯಮಲ್ಲ’ ಎಂಬ ಬಿರುದುಗಳಿದ್ದವು. ಇವನ ಒಂದು ಶಾಸನ ಮಸೂತಿ ಗ್ರಾಮದಲ್ಲಿದೆ.[29]

ಪ್ರಮುಖ ದಂಡನಾಯಕನಾಗಿದ್ದ ಕಳಚುರಿ ಬಿಜ್ಜಳ ಮತ್ತು ಕಾಕತಿಯ ಪೋಲ ಮೊದಲಾದವರು ಕ್ರಿ.ಶ. ೧೧೫೩ರ ವರೆಗೆ ತೈಲಪನನ್ನು ಸಾರ್ವಭೌಮನೆಂದು ಪರಿಗಣಿಸಿದ್ದರು. ಆದರೆ ಅನಂತರದಲ್ಲಿ ಬಿಜ್ಜಳ, ಶಿಲಾಹಾರರು ಮತ್ತು ಕಾಕತಿಯರು ಅವನ ದುರ್ಬಲತಯನ್ನು ಕಂಡು ಸ್ವತಂತ್ರರಾದರು. ಆದರೂ ತೈಲಪನು ಕ್ರಿ.ಶ.೧೧೬೨ರ ವರೆಗೆ ರಾಜ್ಯಭಾರ ಮಾಡಿದಂತೆ ತಿಳಿದುಬರುವುದು. ಇವನ ನಂತರ ರಾಜ್ಯಾಧಿಕಾರ ಸಂಪೂರ್ಣವಾಗಿ ಕಳಚುರಿ ಬಿಜ್ಜಳನ ಕೈ ಸೇರಿತು.[30]

ನಾಲ್ಕನೆಯ ಸೊಮೇಶ್ವರ : ಕಲ್ಯಾಣ ಚಾಲುಕ್ಯರ ಕೊನೆಯ ಅರಸನಾದ ವೀರ ಸೋಮೇಶ್ವರ ತನ್ನ ತಂದೆ ತೈಲಪನ ಕಾಲದಲ್ಲಿ ಚಿನ್ನತುಂಬಲ ರಾಜಧಾನಿಯಲ್ಲಿ ಮಹಾಮಂಡಳೇಶ್ವವರನಾಗಿದ್ದ. ಕ್ರಿ.ಶ. ೧೧೮೨ರ ಹೊತ್ತಿಗೆ ಕಳಚುರಿಗಳ ಬಲ ಕುಂದುತ್ತಿದ್ದಂತೆ, ದಂಡನಾಯಕ ಬಮ್ಮ, ತೇಜಿಮಯ್ಯ, ಶ್ರೀಧರ ಮುಂತಾದವರು ಚಾಳುಕ್ಯರ ಆಳ್ವಿಕೆಯನ್ನು ಪುನಃ ಸ್ಥಾಪಿಸಲು ಯತ್ನಿಸಿ ಸಫಲರಾದರು. ಇತನ ಒಂದು ಶಾಸನ ಹುಲ್ಬೆಂಚಿ ಗ್ರಾಮದಲ್ಲಿ ದೊರೆತಿದ್ದು, ”ವೈರಿಭೂಭೃದ್ಬಳಮಂ ಮಾರ್ಕ್ಕೊಂಡು ಸಂಗ್ರಾಮ ದೊಳಿಭ ಘ……ಥಂಗಳನು ದ್ಯತ್ಖೞ್ಗದಿಂದಂ ತಱಿದು ಕಳಚುರಿ ದ್ರೋಹರಂ ಕೊಂದು ಧಾತ್ರೀತಳಮಂ ಕೈಕೊಂಡು” ಎಂದು ಹೇಳಿದೆ.[31] ಅಲ್ಲದೇ ರಾಜನ ಅಧಿಕಾರಿ ಕುಮಾರದಂಡನಾಥನ ಬಿರುದುಗಳ ಉಲ್ಲೇಖವಿದೆ.

ನಾಲ್ಕನೆಯ ಸೋಮೇಶ್ವರನು ಹಲವು ಸಾಮಂತರ ಸಹಕಾರದಿಂದ ಅಧಿಕಾರವನ್ನು ಪುನಃ ಸ್ಥಾಪಿಸಿದರೂ ಕೂಡಾ ಬಹಳ ದಿವಸಗಳ ಕಾಲ ಮುಂದುವರೆಯಲಿಲ್ಲ. ರಾಜ್ಯ ವಿಸ್ತರಣೆಯ ಪೈಪೋಟಿಯಲ್ಲಿ ಯಾದವ, ಕಾಕತಿಯ, ಹೊಯ್ಸಳರ ದಾಳಿಗಳು ಪ್ರಾರಂಭವಾದವು. ಕ್ರಿ.ಶ. ೧೧೯೮ರಲ್ಲಿ ಚಾಳುಕ್ಯರ ಪರಮಾಧಿಕಾರವನ್ನು ಕೊನೆಗಾಣಿಸಿ ಯಾದವರು ಈ ಪ್ರದೇಶವನ್ನು ಹಿಡಿದಕೊಂಡರು.

ಕಳಚುರಿಯರು :

ಚಾಳುಕ್ಯರ ಮಾಂಡಲಿಕರಾಗಿದ್ದ ಕಳಚುರಿಯ ಆರು ಜನ ಅರಸರು ಸುಮಾರು ೨೦ ವರ್ಷಗಳ ಕಾಲ ಕರ್ನಾಟಕವನ್ನು ಆಳಿದರು. ಆರನೆಯ ವಿಕ್ರಮಾದಿತ್ಯನ ಕೊನೆಯ ದಿನಗಳಲ್ಲಿ ಇವರು ಬಲಿಷ್ಟರಾಗಿ ಎರಡನೆಯ ಜಗದೇಕಮಲ್ಲನ ಕಾಲದಲ್ಲಿ ಮೈಲುಗೈಯನ್ನು ಹೊಂದಿ, ಅವರ ಸಾಮ್ರಾಜ್ಯವನ್ನು ತಮ್ಮ ಕೈವಶ ಮಾಡಿಕೊಂಡರು. ಈ ಪ್ರದೇಶದಲ್ಲಿ ಇವರಿಗೆ ಸಂಬಂಧಿಸಿದ ೧೦ ಶಾಸನಗಳು ಈವರೆಗೆ ಲಭ್ಯವಾಗಿವೆ.

ಕಳಚುರಿ ಸಂತತಿಯ ಶಾಖೆಗಳು ಮಧ್ಯ ಹಾಗೂ ಉತ್ತರ ಭಾರತದ ಅನೇಕ ಪ್ರದೇಶಗಳಲ್ಲಿ ಆಳ್ವಿಕೆ ನಡೆಸಿದವು. ಮದ್ಯ ಭಾರತದ ಕಳಚುರಿ ವಂಶದ ಹೈಹೆಯ ಕುಲಕ್ಕೆ ಸೇರಿತ್ತು. ಅವರ ರಾಜಧಾನಿ ನರ್ಮದಾ ತೀರದ ಮಾಹಿಷ್ಮತಿ. ಇದೇ ವಂಶಕ್ಕೆ ಸೇರಿದ ಕರ್ನಾಟಕದ ಕಳಚುರಿಗಳು ‘ಮಾಹಿಷ್ಮತಿ ಪುರವರಾಧೀಶ್ವರ’ರೆಂದು ಕರೆದುಕೊಂಡಿದ್ದಾರೆ. ಅಲ್ಲದೇ ‘ಕಲಂಜರ ಪುರವರಾಧೀಶ್ವರ’ ರೆಂದು ಕರೆದುಕೊಂಡಿರುವುದರಿಂದ ಕಾಲಂಜರದಿಂದ (ಇಂದಿನ ಬುಂದೇಲಕಂಡ ಪ್ರದೇಶ) ಬಂದು ಈ ಪ್ರದೇಶದಲ್ಲಿ ನೆಲೆಸಿರಬಹುದೆಂದು ಊಹಿಸಲಾಗಿದೆ.

ಶಾಸನಗಳಿಂದ ತಿಳಿದು ಬರುವಂತೆ ಕರ್ನಾಟಕಕ್ಕೆ ಬಂದ ಕಳಚುರಿಯರು ತರಿಕಾಡು ನಾಡನ್ನು ತಮ್ಮ ನೆಲೆವಿಡನ್ನಾಗಿಸಿಕೊಂಡು ಅದರ ಮುಖ್ಯ ಪಟ್ಟಣ ಮಂಗಳವಾಡ ಅವರ ರಾಜಧಾನಿಯಾಯಿತು.

ಕಳಚುರಿ ವಂಶದ ಜಿಜ್ಜರಸ, ಕನ್ನಮರಸ, ಕಲ್ಯಾಣ ಚಾಳುಕ್ಯ ಮೊದಲನೆಯ ಸೋಮೇಶ್ವರನ ಕಾಲದಲ್ಲಿ ಆತನ ಮಾಂಡಳಿಕರಾಗಿದ್ದು, ಅನೇಕ ಯುದ್ಧಗಳಲ್ಲಿ ಪಾಲ್ಗೊಂಡ ಉಲ್ಲೇಖ ಶಾಸನಗಳಿಂದ ತಿಳಿದುಬರುತ್ತದೆ. ಚಾಳುಕ್ಯರ ಸಾಮಂತ ಮತ್ತು ಮಹಾಮಂಡಳೇಶ್ವರನಾಗಿ ನಿಷ್ಠೆಯಿಂದ ಆಳಿದ ಜೋಗಮನು ಮಂಗಳವಾಡವನ್ನು ಕೆಂದ್ರವನ್ನಾಗಿ ಮಾಡಕೊಂಡಿದ್ದ. ಆವನ ಆಳ್ವಿಕೆಯ ಬಗ್ಗೆ ತರ್ದವಾಡಿ ನಾಡಿನ ಮಾಸವಾಡ, ಸಿದ್ಧನಾಥ ಹಾಗೂ ಸಂಕ ಶಾಸನಗಳು ಉಲ್ಲೇಖಿಸುತ್ತವೆ.[32]

ಪೆರ್ಮಾಡಿ : ಜೋಗಮನ ತರುವಾಯ ಕ್ರಿ.ಶ. ೧೧೧೮ರಲ್ಲಿ ಅವನ ಮಗ ಪೆರ್ಮಾಡಿಯು ಅಧಿಕಾರ ವಹಿಸಿಕೊಂಡನು. ಇವನು ಮೂರನೆಯ ಸೋಮೇಶ್ವರನ ಕಾಲದಲ್ಲಿ ತರ್ದವಾಡಿ ನಾಡಿನ ಮಹಾಮಂಡಳೇಶ್ವರನಾಗಿದ್ದ ಸಂಗತಿ ಇಂಗಳೇಶ್ವರ ಮತ್ತು ವಿಜಾಪುರ (ಪ್ರಾಚ್ಯವಸ್ತು ಸಂಗ್ರಹಾಲಯ) ಶಾಸನಗಳು ಸ್ಪಷ್ಟಪಡಿಸುತ್ತವೆ.[33] ಮುತ್ತಗಿಯ ಸಂಗಮೇಶ್ವರ ದೇವಾಲಯದ ಶಾಸನವೊಂದು ಪೇರ್ಮಾಡಿಯನ್ನು,

ನೆಗಳ್ದ ರಾಜ ಸಮಜಪೂಜಿತಪದಂ ಪೆರ್ಮಾಡಿದೇವಂ ಧರಿತ್ರಿಗೆ
ರಕ್ಷಾರ್ತ್ಥದೆ ಸೌಕ್ಷರದ್ವಜನೆ ಬಂದಿರ್ಪಂತಿರಿರ್ದಂ ಸುವರ್ಣ್ನ
ಗವೇಂದ್ರದ್ವಜನೀ ಧರಾವಳಯಮಂ ಕಾರುಣ್ಯದಿಂ ಪಾಳಿಸುತ್ತೆ
ಗಜೇಂದ್ರಾದಿಪರಾಕ್ರಮಂ ಜನನುತಂ ಶ್ರೀ ಮಾನಹೇಮಾಚಳಂ

ಎಂದು ಹೊಗಳಿದೆ.[34]

ಆರನೆಯ ವಿಕ್ರಮಾದಿತ್ಯನ ಬಿಳ್ಗೆರೆ ಶಾಸನದ ಪ್ರಕರ ಆತನು ತನ್ನ ಮಗಳು ನಾಗಲದೇವಿಯನ್ನು ಪೆರ್ಮಾಡಿಗೆ ವಿವಾಹ ಮಾಡಿಕೊಟ್ಟನೆಂದು ತಿಳಿಯುತ್ತದೆ.[35]

ಬಿಜ್ಜಳದೇವ : ಕಳಚುರಿ ಮನೆತನಕ್ಕೆ ಸಾರ್ವಭೌಮತ್ವ ಕನಸನ್ನು ನನಸಾಗಿ ಮಾಡಿಕೊಟ್ಟ ಮಹಾಪರಾಕ್ರಮಿ ಹಾಗೂ ಮಹತ್ವಾಕಾಂಕ್ಷಿಯಾದ ಬಿಜ್ಜಳದೇವನ ನಾಲ್ಕು ಶಾಸನಗಳು ಈ ಪ್ರದೇಶದಲ್ಲಿ ದೊರೆಯುತ್ತವೆ.

ಆರನೆಯ ವಿಕ್ರಮಾದಿತ್ಯನ ನಂತರ ಭೂಲೋಕಮಲ್ಲ ಇಮ್ಮಡಿ ಜನದೇಕಮಲ್ಲನ ಕಾಲದಲ್ಲಿ ಮಹಾಮಂಡಳೇಶ್ವರ ಕುಮಾರ ಬಿಜ್ಜಳನೆನಸಿಕೊಂಡು, ಮೂರನೆಯ ತೈಲಪನ ಅಸಮರ್ತತೆಯ ಆಳ್ವಿಕೆಯ ಕಾಲದಲ್ಲಿ ಮಹಾಮಂಡಳೇಶ್ವರ ಎನ್ನುವದನ್ನು ತನ್ನ ಪ್ರಶಸ್ತಿಯಿಂದ ಕೈಬಿಟ್ಟು ಸಾಮ್ರಾಜ್ಯತ್ವವನ್ನು ಮೆರೆಯುವ ‘ಭುಜಬಲವಲ್ಲಭ’ ತ್ರಿಭುವನಮಲ್ಲ, ‘ಭುವನೈಕವೀರ’ ‘ಭುಜಬಲ ಚಕ್ರವರ್ತಿ’ ಎಂಬ ಬಿರುದುಗಳಿಂದ ಕರೆದುಕೊಂಡ. ಇವನ ಮಹತ್ವಾಕಾಂಕ್ಷೆಯನ್ನು ಸೋವಿದೇವನ ಮುತ್ತಗಿ ಶಾಸನವೊಂದು ಹೀಗೆ ಚಿತ್ರಿಸಿದೆ,

ಕಳಚುರಿವಂಶದಾದಿ ನೃಪರೆಲ್ಲರುಮುತ್ತಮ ಚಕ್ರವರ್ತ್ತಿಗ
ಳ್ಬಳಿಕಂ ಕೆಲರ್ಸ್ವಬಾಹುಬಲವಿಲ್ಲದೆ ಮಂಡಳಿಕರ್ಕ್ಕಗಳಾದರಾಂ
ಬಳಿಯುತನಾದೆನಿನೆಂನಗೆಮಂಡಳಿಕತ್ವಮಯುಕ್ತವೆಂದು ದೋ
ರ್ಬ್ಬಳದೊಳೀ ಚಕ್ರವರ್ತಿ ಸಕಳೋರ್ಬ್ಬಿಗವಾರ್ದಜೇಯುಂ ಬಿಜ್ಜಲಂ[36]

ಕ್ರಿ.ಶ. ೧೧೫೮ರ ಮೊದಲನೆಯ ಮುತ್ತಗಿಯ ಶಾಸನದಲ್ಲಿ ಸ್ವತಂತ್ರನಾದ ಬಗ್ಗೆ ”ಶ್ರಿಮತ್ಕಳಚುರ್ಯ ಭುಜಬಲ ಚಕ್ರವರ್ತಿ ತ್ರಿಭುವನಮಲ್ಲ ಬಿಜ್ಜಳಕ್ಷಿತಿಪಾಳ ತರ್ದವಾಡಿಯನ್ನು ಶ್ರೀಧರ ದಂಢನಾಥನಿಗೆ ಪಾಳಿಸಲು ಕೊಟ್ಟಿರುವುದಾಗಿ” ಹೇಳಿದೆ.[37] ಎರಡನೆಯ ಶಾಸನ ಯಾಳವಾರದಲ್ಲಿ, ಮೂರನೆಯ ಶಾಸನ ಮನಗೂಳಿಯಲ್ಲಿವೆ. ನಾಲ್ಕನೆಯ ಶಾಸನ ಮುತ್ತಗಿ ಗ್ರಾಮದಲ್ಲಿದ್ದು, ”ಶ್ರೀ ಪೃಥ್ವೀವಲ್ಲಭನ ಖಿಳಪ್ರಭು ರಾಜಾಧಿರಾಜನುದ್ಧರಿತ ಭೂಪ ಪ್ರಳಯ ಕಾಲಭೈರವನಪ್ರತಿಮ ಭುಜಪ್ರತಾಪಿ ಬಿಜ್ಜಲದೇವಂ” ಎಂದು ವರ್ಣಿಸುತ್ತದೆ.[38]

ಚಕ್ರವರ್ತಿ ಎನಿಸಿಕೊಂಡ ಬಿಜ್ಜಳನಿಗೆ ಅನೇಕ ವಿರೋಧಗಳು ಉಂಟಾದುದರಿಂದ ತಾನು ಹಿಮದೆ ಸರಿದು ತನ್ನ ಎರಡನೆಯ ಮಗನಾದ ರಾಮಮುರಾರಿ ಸೋವಿದೇವನಿಗೆ ಪಟ್ಟಗಟ್ಟಿದನು, ಆದರೆ ಅವನ ತಮ್ಮ ಮೈಳುಗಿದೇವ ರಜ್ಯವಾಳಿರಬಹುದೆಂದು ಮುತ್ತಗಿ ಶಾಸನವು ಆಸ್ಪದ ನೀಡಿದೆ.

ಮೈಳುಗಿ ದೇವನಿಗಳ ಪರಾಧದೆ ಗೊಂಡನಶೇಷರಾಜ್ಯಮಂ
ಲೋಲತೆಯಿಂದ ವೀತನ ಸಮೀಪದೊಳಿಂ ನಿರಲಾಗದೆಂದು
ತಾಂ ಹೇಳದೆ ಸೋಮ ಭೂಪತಿಯಲ್ಲಿಗೆ ಬಂದೆಡೆ ರಾಜ್ಯವಾಯ್ತು
ಸಲ್ಲೀಲೆಯೊಳೆಂದಡಚ್ಚರಿ ಸಮುನ್ನತಿ ಕೇಶವದಂಡನಾಥ[39]

ರಾಯಮುರಾರಿ ಸೋವಿದೇವ : ಕ್ರಿ.ಶ. ೧೧೬೮ರಲ್ಲಿ ಬಿಜ್ಜಳ ಮೃತನಾಗಲು ಅವನ ಮಗ ರಯಮುರಾರಿ ಸೋವಿದೇವ ಪಟ್ಟಕ್ಕೆ ಬಂದು ತನ್ನ ತೊಳ್ಬಲದಿಂದ ೧೦ ವರ್ಷಗಳ ಕಾಲ ಕಳಚುರಿ ರಾಜವಾಳಿದ. ಇತರ ಆರು ಶಾಸನಗಳು ಈ ಪ್ರದೇಶದಲ್ಲಿ ಲಭ್ಯವಾಗಿವೆ. ಅವನ ರಕ್ತಬಾಂಧವರಲ್ಲಿ ಅಸಹಕಾರ ಉಂಟಾಗಿ ಪಟ್ಟವು ಸಹಜವಾಗಿ ಬರಲಿಲ್ಲವೆಂಬುದು ಮುತ್ತಗಿಯಲ್ಲಿರುವ ಮೊದಲನೆಯ ಶಾಸನದಿಂದ ತಿಳಿದು ಬರುತ್ತದೆ. ಅದು ”ಕುಂತಳ ದೇಶಕ್ಕರಸಾದಂ ತೋಳ್ಬಲದಿಂದ ಬಿಜ್ಜಲಕ್ಷಿತಿಪಸುತಂ ಕಾಂತಾರಂ ಕಳಚುರಿಸಂತಾನಂ ಸೋವಿದೇವನ ಸವಗ್ರೀವಂ” ಎಂದು ಹೇಳಿದೆ.[40] ಎರಡನೆಯ ಬಾಗೇವಾಡಿ ಶಾಸನ ಆತನ ಪಿರಿಯರಸಿ ಪಟ್ಟಮಹಾದೇವಿ ಸೋವಲದೇವಿಯನ್ನು ಹೆಸರಿಸಿದೆ.[41] ಮೂರನೆಯ ಶಾಸನ ಮುತ್ತಗಿ ಗ್ರಾಮದಲ್ಲಿದೆ. ಅದು ಸೋವಿದೇವಿಯನ್ನು ತನ್ನ ರಾಜಧಾನಿಯನ್ನು ಮಂಗಳವಾಡದಿಂದ ಮೋದೆಗನೂರಕ್ಕೆ ಬದಲಿಸಿದಂತೆ ತಿಳಿಸುತ್ತದೆ.[42] ನಾಲ್ಕನೆಯ ಶಾಸನ ಬಾಗೇವಾಡಿಯಲ್ಲಿ, ಐದನೆಯ ಶಾಸನ ಮುತ್ತಗಿ (ತೃಟಿತವಾಗಿವೆ)ಯಲ್ಲಿವೆ. ಆರನೆಯ ಶಾಸನ ಇಂಗಳೇಶ್ವರ ಗ್ರಾಮದಲ್ಲಿದ್ದು, ಸೋವಿದೇವನನ್ನು ಈ ರೀತಿಯಾಗಿ ವರ್ಣಿಸಲಾಗಿದೆ.

ಕಳಚುರಿ ರಾಜ್ಯದಭ್ಯುದಯಲಕ್ಷ್ಮಿಯ ಬಿಜ್ಜಲ ಚಕ್ರವರ್ತ್ತಿಗ
ಗ್ಗೆಳವೆನೆ ತಂದೆಗಿಂದಗಿ ಮಿಗಿಲು ದಿಟವೆಂಬ ಜನೋಕ್ತಿ ಎಸ್ತರಂ
ಬಳದಿರೆ ವೈರಿರಾಯ ಗಜಕೇಸರಿ ರಾಯಮುರಾರಿ ವೀರಕುಂ
ತಳಪತಿ ಸೋವಿದೇವನಸದಂ ರಿಪುರಾಯಕುಳಾಬ್ಜಕುಂಜರಂ.[43]

ಸಂಕಮದೇವ : ಬಿಜ್ಜಳನ ನಾಲ್ಕನೆಯ ಮಗನಾದ ಸಂಕಮದೇವನ ಒಂದು ಶಾಸನ ಮನಗೂಳಿ ಗ್ರಾಮದಲ್ಲಿದೆ. ಶಾಸನವು ಅವನನ್ನು ‘ಶನಿವಾರಸಿದ್ಧಿ’ ”ಗಿರಿದುರ್ಗಮಲ್ಲ” ‘ನಿಶ್ಯಂಕಮಲ್ಲ’ ಎಂಬ ಬಿರುದುಗಳಿಂದ ಕರೆದಿದೆ. ಅಲ್ಲದೇ ಅವನು ನವಿಲೆಯ ನೆಲೆವೀಡಿನಿಂದ ರಾಜ್ಯವಾಳುತ್ತಿದ್ದನೆಂದು ಹೇಳಾಗಿದೆ.[44] ಇವನ ಇನ್ನೊಂದು ಶಾಸನ ಬಾಗೇವಾಡಿಯ ಬಸವೇಶ್ವರ ದೇವಾಲಯದ ಕಂಬದ ಮೇಲಿದೆ. ಇದು ಸಾಸಿರ್ವರು ಬೊಂತೇಶ್ವರ ದೆವರಿಗೆ ಹೇರು ತೆರಿಗೆ ಬಿಟ್ಟಂತೆ ಉಲ್ಲೇಖಿಸಿದೆ.[45]

ಬಿಜ್ಜಳನ ನಂತರ ಕಳಚುರಿ ಸಾಮ್ರಾಜ್ಯ ಆಂತರಿಕ ಕಲಹಕ್ಕೊಳಗಾಯಿತು. ರಾಯಮುರಾರಿ ಸೋವಿದೇವ ಆಳುತ್ತಿದ್ದಂತೆಯೇ ಆತನ ಸಹೋದರ ಮಲ್ಲುಗಿ ಸ್ವತಂತ್ರನಾದ. ಅದೇ ವೇಳೆಯಲ್ಲಿ ಸೋವಿದೆವ, ಮಲ್ಲುಗಿಯರು ತಮ್ಮ ಸ್ವತಂತ್ರನಾಗಿ ಆಳಲು ಪ್ರಾರಂಭಿಸಿದ. ಈ ಮೂವರಲ್ಲೂ ಅಧಿಕಾರದ ದಾಹ ಹೆಚ್ಚುತ್ತಾ ಹೋಯಿತು. ಕಳಚುರಿ ಸಾಮ್ರಾಜ್ಯ ದುರ್ಬಲವಾಗುತ್ತಿರುವ ಈ ಸಮಯದಲ್ಲಿ ಕಲ್ಯಾಣ ಚಾಳುಕ್ಯ ವೀರಸೋಮೇಶ್ವರ ತನ್ನ ದಂಡನಾಯಕರುಗಳೊಂದಿಗೆ ಚಾಳುಕ್ಯ ಸಾಮ್ರಾಜ್ಯವನ್ನು ಕ್ರಿ.ಶ. ೧೧೮೨-೮೩ರಲ್ಲಿ ಪುನಃ ಪಡೆದನು.

[1] E.I., V,P.-237, Ihole (Hungund Tq.), 642 A.D.

[2] S.I.I., XI-i, 8, H. Hipparagi (B. Bagewadi Tq.), 862 A.D.

[3] Ibid, 9th C.A.D.

[4] Ibid, XI-i, 46, Salvadigi (B. Bagewadi Tq.), 12th A.D.

[5] Ibid, XI-i, 40, Narasalagi (B. Bagewadi Tq.), 965 A.D.

[6] Ibid, XVIII, 28, Karjol (Bijapur Tq.), 957 A.D.

[7] Ibid, XI-i, 40, Narasalagi (B.Bagewadi Tq.), 965 A.D.

[8] Ibid, XVIII, 40, Kakhandaki (Bijapur Tq.), 994 A.D.

[9] Ibid, XVIII, 41, Karjol (Bijapur Tq.), 996 A.D.

[10] E.I., XV, P. 25, Muttagi (B. Bagewadi Tq.), 1110 A.D.

[11] Ibid, XV, P.9, Managuli (B. Bagewadi Tq.), 1161 A.D.

[12] S.I.I., XV, 35,  Muttagi (B. Bagewadi Tq.), 1147 A.D.

[13] E.I., XV, P. 29, Muttagi (B. Bagewadi Tq.), 1116 A.D.

[14] S.I.I., XV, 12,  Ingaleshwara (B. Bagewadi Tq.), 1128 A.D.

[15] Ibid, XV, 24,  Muttagi (B. Bagewadi Tq.), 1142 A.D.

[16] Ibid, XI-i, 83, B. Bagewadi (B. Bagewadi Tq.), 1049 A.D.

[17] Ibid, XI-i, 98, Bakod (B. Bagewadi Tq.), 1062 A.D.

[18] Basavaraja K.R., 1983, Administration Under the Chalukya of Kalyan

[19] Ibid, XI-ii, 83, Hebbal (B. Bagewadi Tq.), 1095 A.D.

[20] Ibid, XI-ii, 141,  Muttagi (B. Bagewadi Tq.),  1097 A.D.

[21] Ibid, XI-ii, 125,  Muttagi (B. Bagewadi Tq.), 1079 A.D.

[22] Ibid, XI-ii, 162,  Dindavar (B. Bagewadi Tq.), 1112 A.D.

[23] Ibid, XV, 12,  Ingaleshwar (B. Bagewadi Tq.), 1128  A.D.

[24] Ibid, XV, 15,  Ingaleshwar (B. Bagewadi Tq.), 1137 A.D.

[25] Ibid, XV, 24, Muttagi (B. Bagewadi Tq.), 1142 A.D.

[26] Ibid, XV, 32,  Muttagi (B. Bagewadi Tq.), 1147 A.D.

[27] Ibid, XV, 35,  Muttagi (B. Bagewadi Tq.), 1147 A.D.

[28] Ibid, XV, 46,  Salvadigi (B. Bagewadi Tq.), 12th C.A.D. ಮತ್ತು ಎಸ್.ಕೆ.ಕೊಪ್ಪ, ೧೯೯೦, ತರ್ದವಾಡಿ ನಾಡು, ಪು.೬೨

[29] Ibid, XV, 55,  Masuti (B.Bagewadi Tq.), 1157 A.D.

[30] ನಯಕ ಹ.ಮಾ., ಸಂ. ೧೯೭೯, ಕನ್ನಡ ವಿಷಯ ವಿಶ್ವಕೋಶ, ಪು. ೭೫೪

[31] S.I.I., XV, 78, Hulbenchi (B.Bagewadi Tq.)—

[32] Ibid

[33] Ibid, XV, 12,  Ingaleshwar (B. Bagewadi Tq.), 1128 A.D. and Ibid, XX, 55, Bijapur (Bijapur Tq.), 1129 A.D.

[34] Ibid, XV, 104,  Muttagi (B. Bagewadi Tq.), 1165 A.D.

[35] A.R.I.F., No. 174, Balgere (Athani Tq.)

[36] S.I.I., XV, 15, Muttagi (B. Bagewadi Tq.), 1170 A.D. ಮತ್ತು ಎಸ್.ಕೆ. ಕೊಪ್ಪ, ಅದೇ, ಪು.೬೬

[37] Ibid, 97,  Muttagi (B. Bagewadi Tq.), 1158 A.D.

[38] Ibid, 140,  Muttagi (B. Bagewadi Tq.), 1165 A.D.

[39] Ibid, 115,  Muttagi (B. Bagewadi Tq.), 1170 A.D. ಮತ್ತು ಎಸ್.ಕೆ. ಕೊಪ್ಪ, ಅದೇ, ಪು.೬೭

[40] Ibid, 111,  Muttagi (B. Bagewadi Tq.), 1165 A.D.

[41] Ibid, 112  Bagewadi (B. Bagewadi Tq.), 1169 A.D.

[42] Ibid, 115,  Muttagi (B. Bagewadi Tq.), 1170 A.D.

[43] Ibid, 129, Ingaleshwar (B. Bagewadi Tq.), 1176 A.D.

[44] Ibid, 133  Managuli (B. Bagewadi Tq.), 1178 A.D.

[45] ಕರ್ನಾಟಕ ಭಾರತಿ, ಸಂ. ೨೭, ಸಂ. ೨, ನವಂಬರ‍್, ೧೯೯೪