ಸೇವುಣರು (ಯಾದವರು):

ಸೇವುಣರು ೧೨ನೆಯ ಶತಮಾನದ ಕೊನೆಯ ಭಾಗದಲ್ಲಿ ಸ್ವತಂತ್ರ ರಾಜ್ಯವನ್ನು ಸ್ಥಾಪಿಸಿದರು. ಇವರು ದ್ವಾರಾವತೀಪುರದ ಅಧಿಪತಿಗಳೆಂದೂ ಹಾಗೂ ಯಾದವ ನಾರಾಯಣ ಎಂಬ ಬಿರುದಿತ್ತೆಂದೂ ಶಾಸನಗಳಿಂದ ವ್ಯಕ್ತವಾಗುತ್ತದೆ. ಈವರೆಗೆ ಅವರ ೧೦ ಶಾಸನಗಳು ಈ ಪ್ರದೇಶದಲ್ಲಿ ದೊರೆತಿವೆ.

ಕಲ್ಯಾಣ ಚಾಳುಕ್ಯರು ಕಳಚುರಿಯರಿಂದ ಸಾಮ್ರಾಜ್ಯವನ್ನು ಪುನಃ ಪಡೆದರೂ ಅದು ಭದ್ರಗೊಳ್ಳುವ ಸ್ಥಿತಿಯಲ್ಲಿರಲಿಲ್ಲ. ರಾಜ್ಯವಿಸ್ತರಣೆಯ ಪೈಪೋಟಿಯಲ್ಲಿ ಯಾದವರ, ಹೊಯ್ಸಳರ ಮತ್ತು ಕಾಕತಿಯರ ದಾಳಿಗಳು ಪ್ರಾರಂಭವಾದವು. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ನಾಲ್ಕನೆಯ ಸೋಮೇರ್ಶವರನು ಬನವಾಸಿಗೆ ಹೋದನು. ಚಾಳುಕ್ಯರ ಸಾಮ್ರಾಜ್ಯ ಯಾದವ ಭಿಲ್ಲಮ ಮತ್ತು ಹೊಯ್ಸಳ ಬಲ್ಲಾಳರ ಮಧ್ಯ ವಿಭಾಗವಾಯಿತು. ಯಾದವರು ಕಲ್ಯಾಣಪುರದಿಂದ ರಾಜ್ಯವಾಳಲು ಪ್ರಾರಂಭಿಸಿದರು.

ಭಿಲ್ಲಮದೇವ : ಇವನ ಮೂರು ಶಾಸನಗಳು ಈ ಪ್ರದೇಶದಲ್ಲಿವೆ. ಮೊದಲನೆಯ ಶಾಸನ ಮುತ್ತಗಿ ಗ್ರಾಮದಲ್ಲಿದ್ದು, ತನ್ನ ಭುಜಬಲ ಪರಾಕ್ರಮದಿಂದ ರಾಜ್ಯವಾಳುತ್ತಿರುವುದಾಗಿ ಹೇಳಿಕೊಂಡಿದ್ದಾನೆ.

ಕುಂತಳದೇಶವನುರ್ವ್ವಿಕಾಂತಂ ವಿಪುಳ ಬಾಹುವಿಕ್ರಮದಿಂದಂ
ಸ್ವೀಕರಿಸಿ ರಕ್ಷಿಸುತ್ತೆ ಗುಣಾಕರನೆಸೆವಂ ಪ್ರತಾಪಿ ಭಿಲ್ಲಮದೇವಂ

ಆತನು ತೆನವಲಗೆಯ ನೆಲೆವೀಡಿನಿಂದ ರಾಜ್ಯವಾಳುತ್ತಿದ್ದನೆಂದು ಹೇಳಲಾಗಿದೆ.[1] ಎರಡನೆಯ ಶಾಸನ ಭೈರವಾಡಿಗೆಯಲ್ಲಿದೆ. ”ಬೌದ್ಧವಾಡಿಗೆಯ ಪಶ್ಚಿಮ ಪ್ರದೇಶದ ಪ್ರಭು ಕಲ್ಲರಸನ ಅಳಿಯ ಅಚರಸನ (ಮೊಚರಸ) ಹೆಂಡತಿ ಮಾಳಿಯಕ್ಕ ಏಳಾಪುರದ ಮಹಾಜನರ ಸಮ್ಮುಖದಲ್ಲಿ ಬ್ರಾಹ್ಮಣರಿಗೆ ದಾನ ನೀಡಿದ ವಿಷಯವನ್ನು ತಿಳಿಸುತ್ತದೆ.[2]

ಜೈತುಗಿ : ಭಿಲ್ಲಮನ ನಂತರ ಅವನ ಮಗ ಜೈತುಗಿ ಪಟ್ವಕ್ಕೆ ಬಂದನು. ಅವನ ಒಂದು ಶಾಸನ ಮನಗೂಳಿ ಗ್ರಾಮದಲ್ಲಿದೆ. ಅದು ಈತನ ಸಾಹಸವನ್ನು, ”ಗುಜ್ಜರ ಪಾಂಡ್ಯ ಜೇತಚೋಳಂ ಲಲಾಳಂ ಜಿತಗೌಳಂ ಜೈತಪಾಲ ದಾತ್ರಿಪಾಲಂ” ಎಂದು ವಿವರಿಸಿದೆ.[3] ಇನ್ನೊಂದು ಶಾಸನ ಬಾಗೇವಾಡಿ ಬೊಂತೇಶ್ವರ ದೇವಾಲಯದಲ್ಲಿ ನಂದಿಮಂಟಪದ ಎಡಭಾಗದ ಕಂಬದಲ್ಲಿದೆ. ಇದರಲ್ಲಿ ಬೋಂತೇಶ್ವರ ದೇವರ ಕೇರಿಯಿಂದ ದಕ್ಷಿಣಕ್ಕಿರುವ ಕೇರಿಯನ್ನು ಕೊಂಡು ದೇವರಿಗೆ ಬಿಟ್ಟ ಬಗ್ಗೆ ವಿವರಿಸಲಾಗಿದೆ.[4]

ಸಿಂಘಣದೇವ : ಇವನು ಜೈತುಗಿ ಹಾಗೂ ಚಿಲಾದೇವಿಯವರ ಮಗ. ತಂದೆಯ ನಂತರ ಪಟ್ಟಕ್ಕೆ ಬಂದ ಈತ ದೀಘ ಕಾಲದವರೆಗೆ ರಾಜ್ಯವಾಳಿದ್ದಾನೆ. ಇವನ ನಾಲ್ಕು ಶಾಸನಗಳು ಈ ಪ್ರದೇಶದಲ್ಲಿ ದೊರೆತಿವೆ. ಮೊದಲನೆಯ ಶಾಸನ ಯಾಳವಾರ ಗ್ರಾಮದಲ್ಲಿದ್ದು, ಮಹಾಪ್ರಧಾನ ಮಲ್ಲಿದೇವದಂಡನಾಯಕನಿಂದ ಗಂಗೇಶ್ವರ ದೇವಾಲಯಕ್ಕೆ ಭೂದಾನ ನೀಡಿದ ಬಗ್ಗೆ ವಿವರವಿದೆ.[5] ಕೋಲ್ಹಾರ ಗ್ರಾಮದ ಶಾಸನ ಸಿಂಘಣದೇವನು ”ದೇವೆಂದ್ರಗಿರಿಯ ನೆಲೆವಿಡಿನೋಳು ಸುಖಸಂಕಥಾವಿನೋದದಿಂ ರಾಜ್ಯಂ ಗೆಯುತ್ತಮಿರೆ” ಎಂದು ಹೇಳಿದೆ. ಈ ಗ್ರಾಮ ಸರ್ವನಮಸ್ಯದ ಅಗ್ರಹಾರವಾಗಿತ್ತೆಂದು ತಿಳಿದುಬರುತ್ತದೆ.[6] ಹೆಬ್ಬಾಳ ಗ್ರಾಮದ ಶಾಸನದಲ್ಲಿ ಮಹಾಪ್ರಭು ದೇವರಸರ ಉಲ್ಲೇಖವಿದೆ.[7]

ಕನ್ನರ ದೇವ : ಸಿಂಘಣನ ಮಗ ಎರಡನೆಯ ಜೈತುಗಿ ಮೃತನಾಗಿದ್ದರಿಂದ ಜೈತುಗಿಯ ಮಗ ಕನ್ನರದೇವ ಪಟ್ಟಕ್ಕೆ ಬಂದನು. ಇತನ ಒಂದು ಶಾಸನ ಸಾಲವಾಡಿಗೆ ಗ್ರಾಮದಲ್ಲಿದೆ. ಕನ್ನರದೇವನನ್ನು ”ಗುರ್ಜ ರಾಯಭಯಂಕರಂ ತೆಲುಂಗರಾಯಸ್ಥಾಪನಾಚಾರ್ಯ” ಎಂದು ಹೊಗಳಿದೆ. ಕನ್ನರನ ಪ್ರಧಾನ ದಂಡನಾಯಕನಾಗಿದ್ದ ಚವುಡಿಸೆಟ್ಟಿ ಬೆಳುವಲ, ಬನವಾಸಿ, ಪಾಂಡ್ಯನಾಡು, ಹಾನುಂಗಲ್, ಕೊಂಡನಾಡು, ತರ್ದವಾಡಿ ಹೀಗೆ ಮುಖ್ಯ ಹಲವು ದೇಶಗಳನ್ನಾಳುತ್ತಿದ್ದ. ಅವರ ಮಾವ ಅಂಗರಸನು ಸಾಲವಾಡಿಗೆ, ಬಾಗೇವಾಡಿ ಮುಖ್ಯವಾಗಿ ಹಲವು ಗ್ರಾಮಗಳನ್ನು ಆಲುತ್ತಿದ್ದ ವಿಷಯ ಹೇಳಿದೆ.[8]

ಮಹದೇವ : ಕನ್ನರದೇವನ ಆಳ್ವಿಕೆಯ ಕಾಲದಲ್ಲಿ ಯುವರಾಜನಾಗಿ ಸೇವೆಸಲ್ಲಿಸುತ್ತಿದ್ದ ಮಹದೇವ ಮುಂದೆ ಅಣ್ಣನೊಂದಿಗೆ ಸಂಯುಕ್ತ ಆಳ್ವಿಕೆ ಪ್ರಾರಂಭಿಸಿದನು. ಈತನ ಒಂದು ಶಾಸನ ಇಂಗಳೆಶ್ವರ ಗ್ರಾಮದಲ್ಲಿದೆ. ಅದು ಆತ ದೇವಗಿರಿಯ ನೆಲೆವೀಡಿನಲ್ಲಿದ್ದುದನ್ನು ಮತ್ತು ಮಿಂಚುವ ಬಸವರಸ ತರ್ದವಾಡಿ ನಾಡಿನ ಸುಂಕಾಧಿಕಾರಿಯಾಗಿದ್ದುದನ್ನು ಹೇಳಿದೆ.[9]

ಮಹದೇವನ ನಂತರ ಅವನ ಮಗ ಅಮಣ ಅಧಿಕಾರಕ್ಕೆ ಬಂದನು. ಆದರೆ ಕನ್ನಮ್ಮರಸನ ಮಗ ರಾಮಚಂದ್ರದೇವನು ತನ್ನ ಹಕ್ಕಿಗಾಗಿ ಹೋರಾಟ ನಡೆಸಿ ಅಮಣನನ್ನು ಕೊಂದು ತಾನೇ ಅರಸನಾದನು. ಈತನು ಹೊಯ್ಸಳ ಮತ್ತು ಕಾಕತಿಯರ ಮೇಲೆ ಏರಿ ಹೋಗಿ ಸೋಲನ್ನು ಅನುಭವಿಸಿದನು. ಈ ವೇಳೆಯಲ್ಲಿ ಉತ್ತರ ಭಾರತದಿಂದ ಮುಸ್ಲಿಂರ ದಾಳಿಗಳು ಪ್ರಾರಂಭವಾದವು. ಅಲ್ಲಾ ಉದ್ದಿನ್ ಖಿಲ್ಜಿಯ ಸೆರೆಯಾಳಾಗಿ ದೆಹಲಿಗೆ ಒಯ್ಯಲ್ಪಟ್ಟ ರಾಮಚಂದ್ರನು ಸ್ವತಂತ್ರವನ್ನು ಕಳೆದುಕೊಂಡು ಹಿಂದಿರುಗಿದನು. ನಂತರ ಈತನ ಮಗ ಮೂರನೆಯ ಸಿಂಘಣನು ಆಡಳಿತಕ್ಕೆ ಬಂದರೂ ದಕ್ಷಿಣ ಭಾರತದ ಸಾಮ್ರಾಜ್ಯಗಳ ಒಳಜಗಳ ಹಾಗೂ ಮಲ್ಲಿಕಾಫರನ ದಾಳಿಗಳಿಂದ ದಕ್ಷಿಣ ಭಾರತವು ಮುಸ್ಲಿಂರ ವಶವಾಯಿತು.

ರಾಣಿಯರು :

ಪ್ರಾಚೀನ ಕರ್ನಾಟಕದಲ್ಲಿ ರಾಣಿಯರು ಆಡಳಿತದಲ್ಲಿ ಭಾಗವಹಿಸಿ ಅರಸನಿಗೆ ಸಹಾಯಮಾಡುತ್ತಿದ್ದರು. ಕೆಲವು ಅರಸಿಯರು ಊರು, ಆಗ್ರಹಾರ, ಭತ್ತ ಗ್ರಾಮಗಳಂಥ ಪ್ರಮುಖ ಸ್ಥಳಗಳ ಅಧಿಕಾರ ವಹಿಸಿದ್ದುಂಟು. ಇನ್ನೂ ಕೆಲವರು ಯುದ್ಧ, ದಂಡಯಾತ್ರೆಗಳನ್ನು ಕೈಗೊಂಡಿರುವರು. ದೇವಾಲಯಗಳ ನಿರ್ಮಾಣ ಹಾಗೂ ಅವುಗಳಿಗೆ ದಾನ-ದತ್ತಿಗಳನ್ನು ಬಿಡುವುದು, ಧಾರ್ಮಿಕ ಕಾರ್ಯಗಳನ್ನು ಕೈಕೊಳ್ಳುವುದು ಆಯಾ ಧರ್ಮಗಳಿಗೆ ದಾನ-ದತ್ತಿಯನ್ನಿತ್ತು ಧರ್ಮರಕ್ಷಣೆ ಮಡಿರುವರು. ತರ್ದವಾಡಿ ಸಾಸಿರದಲ್ಲಿ ಬರುವ ಕೆಲವು ಆಡಳಿತ ವಿಭಾಗಗಳನ್ನೊಳಗೊಂಡಿದ್ದ ಬಸವನ ಬಾಗೇವಾಡಿ ಪ್ರದೇಶದ ಶಾಸನಗಳಲ್ಲಿ ಐದು ಜನ ರಾಣಿಯರ ಉಲ್ಲೆಖ ಬರುತ್ತದೆ.

ಬೊಂಥಾದೇವಿ : ಚಾಲುಕ್ಯ ನಾಲ್ಕನೆಯ ವಿಕ್ರಮಾದಿತ್ಯನ ಹೆಂಡತಿಯಾದ ಬೊಂಥಾದೇವಿ ದಹಳ ದೇಶದ ಚೇಡಿ ಅರಸನಾದ ಲಕ್ಷ್ಮಣರಾಜನ ಮಗಳು. ಕಲ್ಯಾಣ ಚಾಳುಕ್ಯ ಸಾಮ್ರಾಜ್ಯ ಸ್ಥಾಪಕನಾದ ಅಹವಮಲ್ಲ ತೈಲಪನ ತಾಯಿ. ಈ ಪ್ರದೇಶದ ಮನಗೂಳಿ ಗ್ರಾಮದ ಶಾಸನದಲ್ಲಿ ಇವಳ ಕುರಿತು ಹೀಗೆ ಹೇಳಿದೆ.

ಯಾದವ ಕುಲದೊಳ್ ಕ್ಷಿತಿಮಹಿತ ಕೀರ್ತಿದಾಹಲ
ಪತಿ ಲಕ್ಷ್ಮಣರಾಜಪುತ್ರಿ ಸೌಭಾಗ್ಯ ಸಮನ್ವೆತೆ
ಬೊಂಥಾದೇವಿ ಜಗನುತೆ ದೇವಕಿಯೆನಿಸಿ
ವಿಕ್ರಮಾಂಗನೆಯಾದಳ್
ಆದಿಯ ಚಾಳುಕ್ಯವಂಶಮಹೋಧಿ
ಸಶಿಯೆನಿಪ ವಿಕ್ರಮಾಂಕಗಂ ಬೊಂಥಾದೇವಿಗಂ
ಮಗನು ತಾನಾಧೀ ಕೃಷ್ಣಾ ವತಾರಲೀಲಂ ತೈಲಂ[10]

ಮೈಲಳದೇವಿ : ಕಲ್ಯಾಣ ಚಾಳುಕ್ಯ ಅರಸ ಮೊದಲನೆಯ ಸೋಮೇಶ್ವರನ ಹಿರಿಯ ರಾಣಿ ಮೈಲಳದೇವಿಯ ಉಲ್ಲೇಖ ಬಾಗೇವಾಡಿ ಶಾಸನದಲ್ಲಿ ಬರುತ್ತದೆ. ಈತನ ಉಳಿದ ರಾಣಿಯರು ಸ್ವತಂತ್ರ ಆಡಳಿತ ಮಾಡುತ್ತಿದ್ದರೆ, ಮೈಲಳದೇವಿ ಮತ್ತು ಹೊಯ್ಸಳದೇವಿಯರು ಸೋಮೇಶ್ವರನೊಂದಿಗೆ ಆಡಳಿತದಲ್ಲಿ ಸಹಭಾಗಿಗಳಾಗಿ ಸುಖ ಸಂಕಥಾ ವಿನೋದದ ಪತ್ನಿಯರಾಗಿದ್ದಂತೆ ಕಂಡುಬರುವುದು. ಮೈಲಳದೇವಿಯನ್ನು ಕುರಿತು ಬಾಗೇವಾಡಿ ಶಾಸನ ಈ ರೀತಿ ಹೇಳಿದೆ.

ನವರತ ಪರಮಕಲ್ಯಾಣಾಭ್ಯುದಯ ಸಹಸ್ರ ಫಳಭೋಗಬಾಗಿನಿ
ದ್ವಿತೀಯಲಕ್ಷ್ಮಿ ವಿಳಾಸವಿದ್ಯಾಧರಿ ದಾನಚಿಂನ್ತಾಮಣಿ
ಸವತಿಮದಭಂಜನೆ ಸಮಸ್ತಾನ್ತಱ್ಪು ರಮುಖಮುಣ್ಡನಿ
ಶ್ರೀ ತ್ರೈಳೋಕ್ಯಮಲ್ಲದೇವಿ ಶಾಳವಕ್ಷಸ್ಥಳ ನಿವಾಸಿನಿಯರಪ್ಪ
ಶ್ರೀ ಮತ್ಪಿರಿಯರಸಿಯ ರ್ಮೈಲಳದೇವಿ
ಸೋಮಗ್ರಹಣಪರ್ವ್ವ ನಿಮಿತ್ತವಾಗಿ ಲಕ್ಷಹೋಮದೋಳ್ ಕಾಲದಲ್ಲಿ
ಹೊನ್ನವಾಡಿಯಲ್ಲಿ ಬಿಟ್ಟ ದೋಣಿಯ ನೆಲಮತ್ತರ ನೂರು

ಎಂದಿದೆ. ಮೈಲಳದೇವಿಯು ಸರ್ವರ ಸಮಕ್ಷಮದಲ್ಲಿ ಸೋಮೇಶ್ವರ ದೇಗುಲದ ಜೀಣೋದ್ಧಾರ ದೇವಭೋಗಕ್ಕೆ ಚಂದಯ್ಯ ಭಟ್ಟರಿಗೆ ದತ್ತಿ ಬಿಡಿಸಿಕೊಟ್ಟಿರುವಳು. ಈ ದೇವಸ್ಥಾನದ ಜವಾಬ್ದಾರಿ ಅಂದು ಪಾಶುಪತಯೋಗಾಚಾರ್ಯ ಜ್ಞಾನರಾಶಿ ವ್ಯಾಖ್ಯಾನ ದೇವರಿಗೆ ಸಂಬಂಧಿಸಿತ್ತು.[11]

”ಹಾವನೂರ ಶಾಸನದಲ್ಲಿ ಇವಳು ಬನವಾಸಿಯನ್ನಾಳುತ್ತಿರುವ ಬಗ್ಗೆ ತ್ರೈಳೋಕಮಲ್ಲ ದೇವರರ್ದಾಂಗನೆ ಶ್ರೀಮತ್ ಪಿರಿಯರಸಿ ಮೈಲಳದೇವಿಯರ್ ಬನವಾಸಿ ಪನ್ನಿರ್ಚ್ಚಾಸಿರಮಂ ಆಳುತ್ತಿರೆ” ಎಂದು ಹೇಳಿದೆ.[12] ಆದ್ದರಿಂದ ಮೈಲಳದೇವಿ ರಾಜ್ಯ ಆಡಳಿತದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಳೆಂದು ತಿಳಿಯುತ್ತದೆ.

ಮಲ್ಲಣಿದೇವಿ : ಆರನೆಯ ವಿಕ್ರಮಾದಿತ್ಯನ ರಾಣಿ ಮಲ್ಲಣಿದೇವಿಯ ಉಲ್ಲೇಖ ಇಂಗಳೇಶ್ವರ ಗ್ರಾಮದ ಶಾಸನದಲ್ಲಿದೆ. ಸೋಮನಾಥ ದೇವಾಲಯವನ್ನು ಕಟ್ಟಿಸಿದ ಹೀಳಸೋವರಸನ ಅನ್ವಯವನ್ನು ಹೇಳುವಾಗ ಆತನ ತಂದೆಯಾದ ಹೀಳಚಂದ್ರನು ಪೆರ್ಮಾಡಿ ರಾಯನ (ಆರನೆಯ ವಿಕ್ರಮಾದಿತ್ಯ) ಪ್ರಿಯಾಂಗನೆ ಮಲ್ಲಣಿದೇವಿಯ ಮಂತ್ರಿಯಾಗಿದ್ದನೆಂದು ಹೇಳಲಾಗಿದೆ.[13] ದೆಗಳೂರು ತಾಲೂಕಿನ ಭೀಮರಾ ಶಾಸನದಲ್ಲೂ ಇವಳ ಉಲ್ಲೇಖ ಬಂದಿದೆ.[14]

ಲಕ್ಷ್ಮೀದೆವಿ : ಆರನೆಯ ವಿಕ್ರಮಾದಿತ್ಯನ ಇನ್ನೊಬ್ಬ ರಾಣಿ ಲಕ್ಷ್ಮೀದೇವಿಯ ಉಲ್ಲೇಖ ದಿಂಡವಾರ ಗ್ರಾಮದ ಶಾಸನದಲ್ಲಿದೆ.[15] ಇವಳು ಸುಮಾರು ಮೂವತ್ತು ವರ್ಷಗಳ ಕಾಲ ಆಡಳಿತದಲ್ಲಿ ಪಾಲ್ಗೊಂಡ ಬಗ್ಗೆ  ವಿವಿಧ ಪ್ರದೇಶದ ಶಾಸನಗಳಿಂದ ತಿಳಿದುಬರುತ್ತದೆ.

ಸೋವಲದೇವಿ : ಕಳಚುರಿ ರಾಯಮುರಾರಿ ಸೋವಿದೇವನ ಪಟ್ಟಮಹಿಷಿ ಸೋವಲದೇವಿಯ ಉಲ್ಲೇಖ ಬಾಗೇವಾಡಿ ಶಾಸನದಲ್ಲಿ ಬರುತ್ತದೆ.[16] ಸಾವಲದೇವಿ ಎಂದು ಕೆಲವು ಕಡೆ ಉಲ್ಲೇಖಗೊಂಡಿದ್ದುಂಟು. ಇವಳಿಗೆ ಚಾವಲದೇವಿ ಎಂಬ ಸಹೋದರಿ ಇದ್ದಂತೆ ಕಾಣುತ್ತದೆ.

ಬಾಗೇವಾಡಿಯ ಶಾಸನದಲ್ಲಿ ಸೋವಿದೇವನ ಆಳ್ವಿಕೆಯನ್ನು ಪ್ರಸ್ತಾಪಿಸಿ ಶ್ರೀಮತು ಪಿರಿಯರಸಿ ಪಟ್ಟಮಹಾದೇವಿ ಸೋವಲದೇವಿಯರ ಸೇನಭೋವ ರಾಜಾಧ್ಯಕ್ಷ ರೇವಣಯ್ಯ ನಾಯಕನು ಅಗ್ರಹಾರ ಬಾಗೇವಾಡಿಯಲ್ಲಿ ಸೋಮನಾಥ ಹಾಗೂ ಚನ್ನಕೇಶವದೇವರಿಗೆ ಅಲ್ಲಿಯ ಮಹಾಜನ ಐಯ್ನುರ್ವರು ಭೂಮಿಯನ್ನು ಶ್ರೀ ಲಕುಳೇಶ್ವರ ದೇವರಿಗೆ ದಾನಮಾಡಿ ಕೊಟ್ಟರೆಂದು ಹೇಳಲಾಗಿದೆ.[17]

ಯುವರಾಜರು :

ಅರಸರು ತಮ್ಮ ಜೀವಿತಾವಧಿಯಲ್ಲಿ ತಮ್ಮ ಮಕ್ಕಳನ್ನು ಆಡಳಿತಗಾರರನ್ನಾಗಿ ನೇಮಿಸಿ ಅವರಿಗೆ ಆಡಳಿತದ ಅನುಬವವನ್ನು ನೀಡುತ್ತಿದ್ದರು. ಸಾಮಾನ್ಯವಾಗಿ ಹಿರಿಯ ಮಗನನ್ನು ಯುವರಾಜನನ್ನಾಗಿ ನೇಮಕ ಮಾಡುತ್ತಿದ್ದುದುಂಟು. ಇವರು ತಂದೆಯ ಆಡಳಿತದಲ್ಲಿ ಭಾಗಿಗಳಾಗುತ್ತಿದ್ದರು. ಕೆಲವು ಸಲ ಸ್ವತಃ ಸೈನ್ಯದ ಮುಖಂಡತ್ವವನ್ನು ವಹಿಸಿ ದಂಡಯಾತ್ರೆಗಳನ್ನು ಕೈಕೊಳ್ಳುತ್ತಿದ್ದರು. ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಂಡು ಅನೇಕ ದನ-ದತ್ತಿಗಳನ್ನು ಬಿಡುತ್ತಿದ್ದರು. ಅಲ್ಲದೇ ರಾಜ್ಯದ ವಿವಿಧ ವಿಭಾಗಗಳ ಅಧಿಕಾರಿಗಳಾಗಿ ನೇಮಕಗೊಳ್ಳುತ್ತಿದ್ದರು.

ಮಲ್ಲಿಕಾರ್ಜುನ : ಈ ಪ್ರದೇಶದ ಹೆಬ್ಬಾಳ ಗ್ರಾಮದ ಶಾಸನದಲ್ಲಿ ಕಲ್ಯಾಣ ಚಾಳುಕ್ಯ ಅರಸ ಆರನೆಯ ವಿಕ್ರಮಾದಿತ್ಯನ ಹಿರಿಯ ಮಗ ಮಲ್ಲಿಕಾರ್ಜುನದೇವನು ಯುವರಾಜನಾಗಿ ತರ್ದವಾಡಿ ನಾಡನ್ನಾಳುತ್ತಿದ್ದ ವಿವರವಿದೆ. ಯುವರಾಜ ಮಲ್ಲಿಕಾಜುನದೇವನು ದಂಡನಾಯಕ ಬೀವಣಯ್ಯನ ವಿನಂತಿಯ ಮೇರೆಗೆ ಹೆಬ್ಬಾಳದ ಸರಸ್ವತಿ ದೇವಿಗೆ ಭೂದಾನವನ್ನಿತ್ತನೆಂದು ಹೇಳಲಾಗಿದೆ. ಅವನಿಗಿದ್ದ ಅನೇಕ ಪ್ರಶಸ್ತಿಗಳನ್ನು ವರ್ಣನೆ ಮಾಡಿರುವ ದಿಂಡವಾರ ಶಾಸನ ಶ್ರಿಮದ್ಯುವರಾಜಂ ಮಲ್ಲಿಕಾರ್ಜುನ ದೇವರು ತರ್ದವಾಡಿ ಸಾಸಿರಮಂ ತ್ತಿಭೋಗಾಭ್ಯಂತರ ಸಿದ್ಧಿಯಿಂದಾಳುತ್ತಮಿರೆ ಎಂದಿದೆ.[18]

ಪ್ರಾಚೀನ ಕರ್ನಾಟಕದ ರಾಜಕೀಯ ಚರಿತ್ರೆಯಲ್ಲಿ ಅರಸರು ರಾಜಧಾನಿ ಅಥವಾ ರಾಜ್ಯದ ಕೇಂದ್ರದಲ್ಲಿ ಆಳ್ವಿಕೆ ಮಾಡುತ್ತಿದ್ದರೆ, ಆಡಳಿತದ ಅನುಕೂಲಕ್ಕಾಗಿ ವಿಶಾಲವಾದ ಸಮ್ರಾಜ್ಯವನ್ನು ಅನೇಕ ವಿಭಾಗಗಳನ್ನಾಗಿ ಮಾಡಿ, ಅಲ್ಲಿಯ ಆಡಳಿತವನ್ನು ಯಶಸ್ವಿಯಾಗಿ ನೋಡಿಕೊಂಡು ಹೋಗಲು ಮಹಾಮಂಡಳೇಶ್ವರರು. ದಂಡನಾಯಕರು, ಮಹಾಸೇನಾಪತಿಗಳನ್ನು ನೇಮಕ ಮಾಡುತ್ತಿದ್ದರು. ಅವರು ಆಯಾ ಪ್ರದೇಶದ ತೆರಿಗೆ ವಸೂಲಿ, ನ್ಯಾಯ ನಿರ್ಣಯ, ದೇವಾಲಯಗಳ, ಕೆರೆ-ಕಾಲುವೆಗಳ, ರಸ್ತೆಗಳ ನಿರ್ಮಾಣವಲ್ಲದೇ ಮೊದಲಾದ ಲೋಕೋಪಯೋಗಿ ಕಾರ್ಯಗಳನ್ನು ಮಾಡುವುದು ಹಾಗೂ ಧಾರ್ಮಿಕ ಕಾರ್ಯಗಳನ್ನು ಕೊಗೊಳ್ಳುವುದು ದಾನ-ದತ್ತಿಗಳನ್ನು ಬಿಡುವುದು. ಸೈನ್ಯದ ವ್ಯವಸ್ಥೆ, ದಂಡಯಾತ್ರೆಯ ಕಾಲಕ್ಕೆ ಅರಸನಿಗೆ ಸಹಾಯ ಮಾಡುವುದು ಹೀಗೆ ಮುಂತಾದವಗಳನ್ನು ನೋಡಿಕೊಳ್ಳುತ್ತಿದ್ದರು.

ಮಹಾಸಾಮಂತಾಧಿಕಾರಿಗಳು ಸ್ವತಂತ್ರರಾಗಿದ್ದರೂ ಅರಸನ ಆಜ್ಞೆಯನ್ನು ಪಾಲಿಸುತ್ತಿದ್ದರು. ಅವರು ಅರಸನಿಗೆ ವರ್ಷಕ್ಕೆ ನಿರ್ದಿಷ್ಟಪಡಿಸಿದ ಕಪ್ಪನ್ನು ಕೊಡುತ್ತಿದ್ದುದಲ್ಲದೇ ಆತನು ಕೇಳಿದಾಗ ಸೈನ್ಯದ ಸಹಾಯವನ್ನು ಒದಗಿಸುತ್ತಿದ್ದರು. ಅಸಮರ್ಥ ಅರಸರು ಆಡಳಿತಕ್ಕೆ ಬಂದಾಗ ಆಗಾಗ ಸ್ವತಂತ್ರರಾಗಿದ್ದುಂಟು.

ಈ ಮೇಲೆ ಹೇಳಿದ ಅಧಿಕಾರಿಗಳು ತರ್ದವಾಡಿ ನಡಿಗೆ ಹೊರತಾಗಿರಲಿಲ್ಲ. ತರ್ದವಾಡಿ ಸಾಸಿರವನ್ನು ಅನೇಕ ಅಡಳಿತ ಕೆಂದ್ರಗಳನ್ನಾಗಿ ವಿಭಾಗವಾಡಿ, ವಿವಧ ಅಧಿಕಾರಿಗಳನ್ನು ನೇಮಕಮಾಡಲಾಗಿತ್ತು, ಬಸವನ ಬಾಗೇವಾಡಿ ಪ್ರದೇಶದ ಆಡಳಿತವನ್ನು ನೋಡಿಕೊಂಡ ಆಧಿಕಾರಿಗಳನ್ನು ಪ್ರಮುಖರಾದವರು ಈ ರೀತಿಯಾಗಿದ್ದಾರೆ.

ಮಹಾಮಂಡಳೇಶ್ವರರು :

ವಿಕ್ರಮಾದಿತ್ಯದೇವ : ಈ ಪ್ರದೇಶದ ಮುತ್ತಗಿ ಮತ್ತು ದಿಂಡವಾರ ಗ್ರಾಮಗಳ ಶಾಸನಗಳಲ್ಲಿ ಮಹಾಮಂಡಳೇಶ್ವರರ ಉಲ್ಲೇಖ ಬರುತ್ತದೆ. ಕ್ರಿ.ಶ. ೧೧೧೦ರ ಮುತ್ತಗಿಯ ಶಾಸನದಲ್ಲಿ ಮಹಾಮಂಡಳೇಶ್ವರ ವಿಕ್ರಮಾದಿತ್ಯದೇವರ ಬಗ್ಗೆ ”ಮುತ್ತಗೆ ಮುವತ್ತು ಮನಾಳ್ದರಸುಗೆಯ್ಯುತ್ತಿದ್ದ ಮಂಡಳಿಕ ಯವದಂಡಂ ಮಹಾಮಂಡಳೇಶ್ವರಂ ಶ್ರೀ ವರ್ಧಮಾನ ಪುರವರಾಧೀಶ್ವರ ನೆನಸಿದ ವಿಕ್ರಮಾದಿತ್ಯದೇವಂ ಗಮಾನನರಸಿ ಚಾಳುಕ್ಯ ಚಕ್ರವರ್ತ್ತಿ ಮಗಂ ಯುವರಾಜಂ ಮಲ್ಲಿಕಾರ್ಜುನದೇವಂ ಮಗಳು ಶ್ರೀಮಹಾದೇವಿಗಂ ಭಿನ್ನಪಂ ಗೈಯಲಿ ರಿಬ್ಬರಂ ಶ್ರೀಮತ್ತ ತ್ರಿಭುವನಮಲ್ಲದೇವರಿಗೆ ಭಿನ್ನಪಂ ಗೈದು ಸರ್ವನಮಶ್ಯಂ ಮಾಡಿಕೊಡೆ ಪಡೆದು” ಎಂದು ಹೇಳಿದೆ.[19] ಈತನು ಯುವರಾಜ ಮಲ್ಲಿಕಾರ್ಜುನನ ಮಗಳು ಮಹಾದೇವಿಯ ಗಂಡನೆಂಬುವುದು ಶಾಸನದಿಂದ ಗೊತ್ತಾಗುತ್ತದೆ.

ಭೀಷಣದೇವರಸ : ಕ್ರಿ.ಶ. ೧೧೧೨ರ ದಿಂಡವಾರ ಗ್ರಾಮದ ಶಾಸನದಲ್ಲಿ ಆರನೆಯ ವಿಕ್ರಮಾದಿತ್ಯನು ಜಯಂತಿಪುರ ನೆಲೆವೀಡಿನಿಂದ ಆಳುತ್ತಿರುವಾಗ ಮತ್ತು ಯುವರಾಜ ಮಲ್ಲಿಕಾರ್ಜುನದೇವನು ತರ್ದವಾಡಿ ನಾಡನ್ನಾಳುತ್ತಿರುವಾಗ, ಆತನ ಶ್ರೀಮನ್ಮಾಹಾಮಂಡಳೇಶ್ವರ ಭೀಷಣದೇವರಸರು ಕೆಂಪಣ ಕುಳಿಯಾರುಂಬಾಡದ ಬಳಿಯ ದಿಂಡವುರಮಂ ತ್ರೀಭೋಗಾಭ್ಯಂತರಸಿದ್ಧಿಯಿಂದಾಳುತ್ತಿರುವಾಗ ಅಲ್ಲಿಯ ಮುಳೇಶ್ವರ ದೇವಾಲಯಕ್ಕೆ ದಾನಕೊಟ್ಟ ವಿಷಯ ಹೇಳಲಾಗಿದೆ.[20]

ದಂಡನಾಯಕರು ಮತ್ತು ಸೇನಾಪತಿಗಳು :

ಇವರು ಅರಸನು ನೆರೆರಾಜ್ಯಗಳ ಮೆಲೆ ಯುದ್ಧ ಕೈಗೊಂಡಾಗ ಅವನಿಗೆ ಸಹಾಯಕರಾಗಿ ಯುದ್ಧದಲ್ಲಿ ಭಾಗವಹಿಸುತ್ತಿದ್ದರು. ಕೆಲವು ಸಲ ಸೈನ್ಯದ ಮುಖಂಡತ್ವವನ್ನು ವಹಿಸಿಕೊಂಡು, ಯುದ್ಧದಲ್ಲಿ ವಿಜಯಿಗಳಾಗಿದ್ದುಂಟು. ಈ ದಂಡನಾಯಕರು ಮತ್ತು ಸೇನಾಪತಿಗಳು ಯುದ್ಧದಲ್ಲಿ ಭಾಗವಹಿಸುವುದರೊಂದಿಗೆ ಅಯಾ ಪ್ರದೇಶದ ಆಡಳಿತದಲ್ಲಿ ಭಾಗಿಗಳಾಗುತ್ತಿದ್ದರು. ಅವರು ಅನೇಕ ದಾನ-ದತ್ತಿಗಳನ್ನು ಬಿಟ್ಟಿದ್ದಾರೆ. ಈ ಪ್ರದೇಶದ ೧೩ ಶಾಸನಗಳಲ್ಲಿ ಇವರ ಉಲ್ಲೇಖವಿದೆ.

ಗೋವಿಂದರಾಜ (೧೦೭೯) : ಆರನೆಯ ವಿಕ್ರಮಾದಿತ್ಯನ ದಂಡನಾಯಕನಾದ ಗೋವಿಂದರಾಜನ ಉಲ್ಲೇಖ ಮುತ್ತಗಿ ಶಾಸನದಲ್ಲಿ ಬರುತ್ತದೆ. ಮುತ್ತಗೆಯ ರಾಮೇಶ್ವರ ದೇವಾಲಯದ ನಿರ್ಮಾಣ, ಭೂದಾನ ಮತ್ತು ತಂಗಿ ಹೊನ್ನಕಚ್ಚಿಯ ಮಗ ವಿಟ್ಟ (ವಿಷ್ಣುದೇವ) ರಿಂದ ಅದೇ ದೇವಾಲಯಕ್ಕೆ ಭೂದನ ನೀಡಿದ ಕುರಿತು ಹೇಳಲಾಗಿದೆ.[21]

ಭೀವಣಯ್ಯ (೧೦೯೫) : ಹೆಬ್ಬಾಳ ಗ್ರಾಮದ ಶಾಸನದಲ್ಲಿ ದಂಡನಾಯಕ ಭೀವಣಯ್ಯನ ಉಲ್ಲೇಖವಿದೆ. ಅವನ ಸಹಾಸವನ್ನು ಕುರಿತು, ಮಹಾಸಾಮನ್ತಾಧಿಪತಿ ಮಹಾಪ್ರಚಂಡ ದಂಡನಾಯಕ ನೀತಿನಿತುಬಿನೀಕು ಸುಮಸಾಯಕಂ ವಿಪ್ರಕು೪ ಕುಮುದ ಕೌಮುದೀವಿಳಾಸಂ ಕೀರ್ತಿಲಕ್ಷ್ಮೀ ನಿವಾಸಂ ಸೌಜನ್ಯವಜ ಜವನಮಾರ್ತಣ್ಡ ನುಡಿದನ್ತೆಗಣ್ಡಂ ನಿಯೋಗ ಯೋಗಂಧರಂ ಸಮರಧರಂ ಕಾಶ್ಮೀರ ವಿಷಯ ಮುಖಮಂಣ್ಡನಂ ಸ್ವಾಮಿದ್ರೋಹ ಶಿರಸ್ಖಂಣ್ಡನಂ ಶ್ರೀಮುತ್ತೃಭುವನಮಲ್ಲ ದೇವಪಾದಾಬ್ಜಭೃಗಂ ಗುಣಗಣೋತ್ತುಂಗ ನಾಮಾದಿ ಸಮಸ್ತ ಪ್ರಶಸ್ತಿ ಸಹಿತಂ ಶ್ರೀಮನ್ಮಾಹಾಪ್ರಧಾನಂ ಸಹಾವಾಸಿಗಳಧಿಷ್ಠಾಯಕಂ ಪತ್ತಳೆಕರಣಂ ದಂಡನಾಯಕಂ ಭೀವಣಯ್ಯಂಗಳ ಭಿನ್ನಪದಿ ಎಂದು ಹೇಳಿದೆ.[22]

ಸಾಯಿಮಯ್ಯ (೧೧೨೮) : ಈ ಪ್ರದೇಶದ ಇಂಗಳೇಶ್ವರ ಗ್ರಾಮದ ಶಾಸನದಲ್ಲಿ ಚಾಳುಕ್ಯ ಮೂರನೆಯ ಸೋಮೇಶ್ವರನ ಕಾಲದಲ್ಲಿ ಮಹಾಮಂಡಳೇಶ್ವರ ಪೆರ್ಮಾಡಿ ಅರಸರು ತರ್ದವಾಡಿ ಸಾಸಿರವನ್ನಾಳುತ್ತಿರುವಾಗ, ದಂಡನಾಯಕ ಸಾಯಿಪಯ್ಯನು ಶ್ರೀಕರಣ ನೀಲಕಂಠ ನಾಯಕರು ನಿರ್ಮಿಸಿದ ನೀಲಕಂಠ ದೇವಾಲಯಕ್ಕೆ ನೀಡಿದ ಭೂದಾನದ ಉಲ್ಲೇಖವಿದೆ.[23]

ಬಮ್ಮಯ್ಯ (೧೧೪೨೪೭) : ಈ ದಂಡನಾಯಕನ ಉಲ್ಲೇಖ ಈ ಪ್ರದೆಶದ ಮೂರು ಶಾಸನಗಳಲ್ಲಿ ಬರುತ್ತದೆ. ಈತನು ಚಾಳುಕ್ಯ ಅರಸ ಎರಡನೆಯ ಜಗದೇಕಮಲ್ಲನ ಕಾಲದಲ್ಲಿ ಬಮ್ಮಯ್ಯ ಅಥವಾ ಬಂರ್ಮ್ಮಣ ಎಂಬ ಹೆಸರಿನಿಂದ ಪ್ರಸಿದ್ಧ ದಂಡನಾಯಕನಾಗಿದ್ದ. ಮುತ್ತಗಿ ಗ್ರಾಮದ ಶಾಸನದಲ್ಲಿ ಆತನ ಪರಾಕ್ರಮವನ್ನು,

ಅಳುತಬಳಂ ಪ್ರತಾಪನಿಧಿ ತಾಂ ಪಡೆದೆಪಿಂ ಜಗದೇಕಮಲ್ಲ ಭೂಪತಿ
ಬೆಸಸಲ್ಕೆ ಹೊಯ್ಸಳನ ನಾರ್ದ್ದೆಱೆಯಟ್ಟಿ ತಗುಳ್ದು ತೂಳ್ದು ಮಾರುತಿಯ
ವೊಲೊಂದು ದೀಂಕಿನೊಳವಂ ಬಿರುತಂಬುಧಿ ವಾಯ್ದನೆಂದೊಡುದ್ಧ
ತೆಕೆಯಿನಾಂ ಪರಾರ್ದ್ಧುರ ದೊಳ್ಳಿ ಕಲಿ ಬಂರ್ಮ್ಮಣದಂಡನಾಥನಂ

ಎಂದು ಹೇಳಿದೆ.[24]

ಬಂರ್ಮ್ಮಣ ದಂಡನಾಯಕನ ವಿನಂತಿಯ ಮೇರೆಗೆ ಶಿವಲಿಂಗ ದೇವಾಲಯಕ್ಕೆ ಅರಸನು ನಾಗವಾಡ ಗ್ರಾಮವನ್ನು ದಾನ ಕೊಟ್ಟಿದ್ದಾನೆ.

ಅದೇ ಗ್ರಾಮದ ಮತ್ತೊಂದು ಶಾಸನದಲ್ಲಿ ಸೋವಿಸೆಟ್ಟಿಯ ಅಜ್ಜ ಕಹಿಸೆಟ್ಟಿಯಿಂದ ನಿರ್ಮಾಣವಾದ ದಕ್ಷಿಣಾಮುಖ ಚನ್ನಕೇಶವ ದೇವಾಲಯಕ್ಕೆ ಅರಸನು ಸೋವಿಸೆಟ್ಟಿ ಮತ್ತು ಪಟ್ಟ ಸಾಹಾನಿ ಹಿರಿಯ ದಂಡನಾಯಕ ಬ್ರಹ್ಮ ದೇವಯ್ಯನ ವಿನಂತಿಯ ಮೇರೆಗೆ ಮಣಿಯೂರ ಗ್ರಾಮ ದಾನ ನೀಡಿದ ಬಗ್ಗೆ ಹೆಳಲಾಗಿದೆ.[25] ಸಾಲವಾಡಿಗೆ ಗ್ರಾಮದ ಶಾಸನದಲ್ಲೂ ಈತನ ಹೆಸರು ಬರುತ್ತದೆ.[26]

ಹಮ್ಮರಸ (೧೧೬೫) : ಮುತ್ತಗಿಯ ಶಾಸನದಲ್ಲಿ ತರ್ದವಾಡಿ ಸಾಸಿರದ ಹಮ್ಮರಸ ದಂಡನಾಯಕನ ಉಲ್ಲೇಖವಿದೆ. ಆತನು ಮುತ್ತಗಿ ಪ್ರಸನ್ನಕೇಶವ ದೇವಾಲಯಕ್ಕೆ ತೋಟದ ಬಣ್ನಿಗೆ ದರೆಯನ್ನು ಪಾರಮೇಶ್ವರ ದತ್ತಿಯಾಗಿ ಬಿಟ್ಟಿದ್ದಾನೆ.[27]

ಕೇಶವ (೧೧೭೦) : ಈತನ ಬಗ್ಗೆ ಮುತ್ತಗಿ ಶಾಸನದಲ್ಲಿ ರಾಯಮುರಾರಿ ಸೋವಿದೇವನ ಸರ್ಬ್ಬಾಮಾತ್ಯ ಮಹಾಮಂತ್ರಿ ಶಿಖಾಮಣಿ ಹಿರಿಯದಂಡನಾಯಕ ಕೇಶಿಮಯ್ಯಂಗಳ ಎಂದು ಹೇಳಿದೆ. ಮುಂದುವರೆದು ದ್ವಾಪಾರದಂದು ಗೋವಳತಿ ಗೋಪಿಯನಂದನ ಕಂದನಾದನೆಂ ಬಾಪಳಿಯಲ್ಲಿಮಂ ಕಳೆಯಲೆಂದು ವಿಷಿಷ್ಟ ವಶಿಷ್ಠಿಗೋತ್ರದಾ ಗೋಪತಿ ನಾಯಕಂಗೆ ಸುಪತಿಬ್ರತೆ ಬಲ್ಲವಬಾಯಿಗಂ ಮಗಂ ಶ್ರೀಪತಿಯಾದನೆಂದು ಜಗವೆಂಬುದು ಕೇಶವ ದಂಡನಾಥನಂ” ಎಂದಿದೆ.[28]

ಸೋವಿದೇವ (೧೧೭೬) : ಇಂಗಳೇಶ್ವರ ಗ್ರಾಮದ ಶಾಸನದಲ್ಲಿ ದಂಡನಾಯಕ ಸೋವಿದೇವನ ಬಗ್ಗೆ ”ತೇಜದೊಳರ್ಕ್ಕನಂನ್ನನೆ ಲಸತ್ಯಂ ಮದರ್ಯ್ಯದೊಳ್ಕಾಮನಂನ್ನನೆ ದಂಡಾಧಿಪತಿ ಸೊವಿದೇವನೆನೆಲಿನ್ನೇಂ ವೆಣ್ನಿಪೆಂ ಬಣ್ಣಿಪೆಂ” ಎಂದು ಹೇಳಿದೆ.[29]

ಮಲ್ಲಿದೇವ : ಇವನ ಬಗ್ಗೆ ಯಾಳವಾರ ಗ್ರಾಮದ ಶಾಸನದಲ್ಲಿ ಶ್ರೀಮನುಮಾಹಾಪ್ರಧಾನಂ ಲಾಳಖಂಡೆಯಕಾರರ ಅಧಿಷ್ಠಾಯಕಂ ಮಾಳವಿ ಕಾಟಕ ಸೊರೆಕಾರಂ ಭೋಜರಾಯದಿಸೆ ಪಟ್ಟರಾಯದಂಡನಾಥ ಭುಜಬಳಭೀಮ ಗಂಡ ಗೋಪಾಳದಾನಮುರಾರಿ ಮಹಾಪ್ರಚಂಡ ಮಲ್ಲದೇವ ದಂಡನಾಯಕನು ನಿತಾಂತೋದಾರ್ಯ್ಯದೊಳು ಕರ್ಣ್ನನಂನ್ನನೆ ಯಾಗಿದ್ದು ಅಗ್ರಹಾರ ಏಳಾಪುರದ ಗಂಗೇಶ್ವರ ದೇವರಿಗೆ ಭೂದಾನ ನೀಡಿದನೆಂದು ಹೇಳಿದೆ.[30]

ಮಹಾಸೇನಾಪತಿ ಮತ್ತು ಅಧಿಕಾರಿಗಳು :

ದಂಡನಾಥ ಕುಮಾರ ಬೊಮ್ಮರಸ ಕಲ್ಯಾಣ ಚಾಳುಕ್ಯ ಸೋಮೇಶ್ವರನ ಪ್ರಧಾನ ಸೇನಾಪತಿಯಾದ ಕುಮಾರ ಬೊಮ್ಮರಸ ದಂಡನಾಥನ ಬಗ್ಗೆ ಹುಲ್ಬೆಂಚಿ ಶಾಸನದಲ್ಲಿ ಈತನು ಕಲಚುರಿ, ಹೊಯ್ಸಳ, ಚೋಳರನ್ನು ಪರಾಜಯಗೊಳಿಸಿ ಬಿರುದು ಪಡೆದುಕೊಂಡು ಉಲ್ಲೆಖವಿದೆ.[31] (ಶಾಸನ ತೃಟಿತವಾಗಿದೆ)

ಪೇಯಿಯ ಸಾಹಣಿ ಮತ್ತು ಮಲ್ಲೆಯ ಸಾಹಾಣಿ (೧೧೮೯೯೨) : ಯಾದವ ಬಿಲ್ಲಮದೇವನು ತೆನಲಗೆಯ ನೆಲಿವೀಡಿನಿಂದ ಆಳುತ್ತಿರುವಾಗ ಆತನ ಪಾದಪದ್ಮೋಪಜೀವಿ ಶ್ರೀಮನ್ಮಹಾಪ್ರಧಾನಂ ಬಾಹತ್ತರ ನಿಯೋಗಾಧಿಪತಿ ಪಟ್ಟಸಾಹಾಣಾಧಿಪತಿ ವೊಡೆಯರಾಯಂ ಪೇಯಿಯ ಸಾಹಾಣಿ ಶ್ರೀಮನ್ಮಹಾಪ್ರಧಾನಂ ಸೇನಾಪತಿ ಮಾಂಡಳಿಕ ಮಲ್ಲೆಯ ಸಾಹಾಣಿಯರ ವಿನಂತಿಯ ಮೇರೆಗೆ ಅರಸನು ಮುತ್ತಗೆಯ ಶಂಕರ ಸ್ವಮಿಯ ಅಜ್ಜ ಚೌಡಿಸೆಟ್ಟಿ ನಿರ್ಮಿಸಿದ ಲಕ್ಷ್ಮೀ-ನರಸಿಂಹ ದೇವಾಲಯಕ್ಕೆ ಬಿವವೂರ ಗ್ರಾಮ ದಾನ ನೀಡಿದ ಉಲ್ಲೇಖ ಮುತ್ತಗಿ ಗ್ರಾಮದ ಶಾಸನದಲ್ಲಿದೆ.[32]

ದಾಸಿಮಯ್ಯ (೧೧೬೫) : ಕಳಚುರಿ ಬಿಜ್ಜಳನ ಆಳ್ವಿಕೆಯಲ್ಲಿ ರಾಜಾಧ್ಯಕ್ಷ ಸುಂಕವೆರ್ಗಡೆ ದಾಸಿಮಯ್ಯನಿಂದ ಮುತ್ತಗೆಯ ರಾಮೇಶ್ವರ ದೇವಾಲಯಕ್ಕೆ ಹೆಂರ್ಜುಂಕ ವಡ್ಡರಾವುಳ ತೆರಿಗೆಗಳ ದಾನ ನೀಡಿದ ಬಗ್ಗೆ ಅಲ್ಲಿಯ ಶಾಸನದಲ್ಲಿ ಹೇಳಲಾಗಿದೆ.[33]

ರೇವಣಯ್ಯನಾಯಕ (೧೧೭೦) : ರಾಯಮುರಾರಿ ಸೋವಿದೇವನ ಆಳ್ವಿಕೆಯ ಕಾಲದಲ್ಲಿ ರಾಜಧ್ಯಕ್ಷ ರೇವಣಯ್ಯ ನಾಯಕನು ಬಾಗೇವಾಡಿಯಲ್ಲಿ ಸೋಮನಾಥ ಮತ್ತು ಚನ್ನಕೇಶವ ದೇವಾಲಯಗಳನ್ನು ನಿರ್ಮಿಸುತ್ತಾನೆ. ಆವುಗಳಿಗೆ ಮಹಾರಾಣಿ ಸೋವಲದೇವರಸಿಯ ಸೇನಬೋವ ಮತ್ತು ೫೦೦ ಮಹಾಜನರಿಂದ ಭೂದಾನ ನೀಡಿದ ಉಲ್ಲೇಖ ಬರುತ್ತದೆ.[34]

ಮನ್ನೆಯರು :

ಮನ್ನೆಯರು ಚಕ್ರವರ್ತಿ ಇಲ್ಲವೆ ಮಹಾಮಂಡಳೇಶ್ವರರಿಂದ ಮನ್ನಣೆಯನ್ನು ಪಡೆದು ನಾಡಿನ ಉಪವಿಭಾಗಗಳಲ್ಲಿ ಆಳ್ವಿಕೆ ಮಾಡುತ್ತಿದ್ದರು. ಪ್ರಾಚೀನ ಕರ್ನಾಟಕದಲ್ಲಿ ವಿವಿದೆಡೆಗಳಲ್ಲಿ ಆಳ್ವಿಕೆ ಮಾಡಿದ ಶಿಲಾಹಾರರ ಶಾಖೆಯೊಂದು ಕಲ್ಯಾಣ ಚಾಳುಕ್ಯರ ಕಾಲದಲ್ಲಿ ಮುತ್ತಗಿಯಲ್ಲಿ ಬೆಳೆದು ಬಂದಿತ್ತು. ಅವರನ್ನು ಶಿಲಾಹಾರರೆಂದು ಕರೆಯಲಾಗಿದೆ.

ಮುತ್ತಗೆ ಶಿಲಾಹಾರರು : ಕೂಪಣ ಪುರವರಾಧೀಶ್ವರರಾದ ಮುತ್ತಗೆ ಶಿಲಾಹರರು ಸುವರ್ಣ ಗರುಡ ಧ್ವಜ ಪತಾಕೆಯನ್ನು ಹೊಂದಿದ್ದು, ವಿಜಯಲಕ್ಷ್ಮೀ ಸಂಶ್ರೀತದಕ್ಷಿಣಭುಜಂ ಜೀಮೂತವಾಹನನ್ನು ತಮ್ಮ ವಂಶದ ಮೂಲ ಪುರುಷನೆಂದು ಹೇಳಿಕೊಂಡಿದ್ದಾರೆ.[35] ಕಲ್ಯಾಣ ಚಾಳುಕ್ಯ ಅರಸ ಎರಡನೆಯ ಜಗದೇಕಮಲ್ಲನ ಶಾಸನದಲ್ಲಿ ಸೆಳಿರುನೈಪಾನ್ವಯದರಸರ್ಪ್ಪ ಕಾಲಂ ಸಕಲಚಕ್ರವರ್ತ್ತಿಗಳಾದರ್ಬ್ಬಳಿಕವೆ ಮನ್ನೆಯರಾದರ್ಸ್ಸಲೆ ಕೆಲರೀ ತರ್ದವಾಡಿಸಾಯಿರಕೆಲ್ಲಂ ಎಂದು ಉಲ್ಲೆಖವಾಗಿದೆ. ಇದರಿಂದ ಮೊದಲು ಚಕ್ರವರ್ತಿಗಳಾದ ಇವರು ಕಾಲಾಂತರದಲ್ಲಿ ತರ್ದವಾಡಿಯ ಮನ್ನೆಯರಾದುದು ತಿಳಿದುಬರುತ್ತದೆ.[36] ಈ ಶಾಸನದ ಕೆಳಭಾಗ ಕಳಚುರಿ ರಾಯಮುರಾರಿ ಸೋವಿದೇವನ ಶಾಸನವಿದ್ದು, ಅದರಲ್ಲಿ ಶಿಲಾಹಾರನ್ವಯದ ಶ್ರೀಮನ್ಮ ಹಾಮಂಡಳೇಶ್ವರ ಇನ್ದರಸ, ಅಹುಮಲ್ಲರಸ, ವೀರಗೋಕರಸ, ಕಾಚರಸ, ಬೊಂತೆಯ ಗೋಣರಸ, ನಾಗಲದೇವಿಯ ಡಾಕರಸ, ಆಲದವೆಡಂಗನ ಗೋಣರಸ, ಅಮ್ಮರಸ, ಹೂಲಿಕೊಂಡ ಕೊಂತರಸ, ಹೌಟಗೆ ಚೌಡರಸ, ಅತಿನೂರಾಹುಮಲ್ಲಾರಸ, ಬುಟ್ಟಗೋಣರಸ, ಬಂದರಸ, ಬುಟ್ಟಮರಸ, ಧನಸಂಗ್ರಹರಸ, ನಾಗಾರ್ಜ್ಜುನರಸ, ಗಂಡಮ ಹೆಂಮ್ಮಾಡಿಯರಸ ಇಂನ್ತಿ ಹದಿನೆಂಟು ಸಂತತಿಗಳೆಂದೂ ಹೆಸರಿಸಲಾಗಿದೆ.[37]

ಸಾಮಂತ ಅರಸರು :

ಇವರು ಅರಸನಿಗೆ ಸಾಮಂತರಾಗಿರಲು ಒಪ್ಪಿಗೆ ನೀಡಿ ತಮ್ಮ ಪ್ರದೆಶದಲ್ಲಿ ಆಳ್ವಿಕೆ ಮಾಡುತ್ತಿದ್ದರು, ಅಲ್ಲದೇ ವರ್ಷಕ್ಕೆ ನಿರ್ದಿಷ್ಟಪಡಿಸಿದ ಕಪ್ಪ-ಕಾಣಿಕೆಗಳನ್ನು ಅರಸನಿಗೆ ಸಲ್ಲಿಸುತ್ತಿದ್ದರು. ಈ ಪ್ರದೇಶದ ಒಂದು ಶಾಸನದಲ್ಲಿ ಇವರ ಉಲ್ಲೇಖ ಬರುತ್ತದೆ.

ಸಾಮಂತ ಬ್ರಹ್ಮದೇವ ದಂಡಾದೀಶ ಮತ್ತು ಸಂಕಮರಸ : ಮನಗೂಳಿ ಗ್ರಾಮದ ಶಾಸನದಲ್ಲಿ ಸಾಮಂತ ಬ್ರಹ್ಮದೇವ ದಂಡಾದೀಶ ಮತ್ತು ಸಂಕಮರಸರು ನವಿಲೆ ನೆಲೆವೀಡಿನಿಂದ ಆಳುತ್ತಿದ್ದ ಉಲ್ಲೆಖವಿದೆ.[38] (ಶಾಸನ ತೈಟಿತವಾಗಿದೆ)

ಹೀಗೆ ಈ ಪ್ರದೇಶದ ಶಾಸನಗಳ ಉಲ್ಲೆಖದಂತೆ ಅರಸರು, ರಾಣಿಯರು, ಯುವರಾಜರು, ಮಹಾಮಂಡಳೇಶ್ವರರು, ಮನ್ನೆಯರು, ಮಹಾಸಾಮಂತರು, ಅಧಿಕಾರಿಗಳು ಮತ್ತು ಸೇನಾಪತಿಗಳು ಮೊದಲಾದವರಿಂದ ಹಿಡಿದು ಸ್ಥಳೀಯ ಮುಖಂಡರಿಂದಾಗಿ ಆಡಳಿತ ಸುಸಂಬದ್ಧವಾಗಿದ್ದುದು ಸ್ವಾರಸ್ಯಕರವಾಗಿದೆ.

ರಾಷ್ಟ್ರಕೂಟ, ಕಲ್ಯಾಣ ಚಾಲುಕ್ಯ, ಕಳಚುರಿ, ಯಾದವ ಅರಸುಮನೆತನದ ಪ್ರತಿಯೊಬ್ಬ ರಜಮಹಾರಾಜರ ಚರಿತ್ರೆ ಇಲ್ಲಿ ದೊರೆತಿರುವ ಶಾಸನಗಳಿಂದ ಸಂಪೂರ್ಣವಾಗಿ ತಿಳಿದು ಬರದಿದ್ದರೂ ಕೂಡಾ ಆಯಾ ಮನೆತನದ ಅರಸರ ಆಳ್ವಿಕೆಯ ಕಾಲದಲ್ಲಿ ಮಹಾಮಂಡಳೇಶ್ವರರಿಂದ ಹಿಡಿದು ಸ್ಥಳೀಯ ಮುಖಂಡರವರೆಗಿನ ಪ್ರತಿಯೊಬ್ಬ ವ್ಯಕ್ತಿ ಅರಸರ ವಿಶ್ವಾಸಕ್ಕೆ ಪಾತ್ರರಾಗಿ ಆಡಳಿತವನ್ನು ಸುಮಾರು ನಾನೂರೈವತ್ತು ವರ್ಷಗಳ ಕಾಲ ಮುಂದುವರೆಸಿಕೊಂಡು ಬರುವಲ್ಲಿ ಯಶಸ್ವಿಯಾಗಿದ್ದಾರೆ.

[1] E.I., XV, P.-25, Muttagi (B. Bagewadi Tq.), 1189 A.D.ಮತ್ತು ಎಸ್. ಕೆ. ಕೊಪ್ಪ, ಅದೇ, ಪು. ೭೦

[2] S.I.I., XV, 151, Bhairawadagi (B. Bagewadi Tq.), 1191 A.D.

[3] Ibid, 153,  Managuli (B. Bagewadi Tq.), 1200 A.D.

[4] ಕರ್ನಾಟಕ ಭಾರತಿ, ಸಂ. ೨೭, ಸಂ. ೨, ನವಂಬರ‍್, ೧೯೯೪

[5] S.I.I., XV, 166, Yalavar (B. Bagewadi Tq.), 1222 A.D.

[6] Ibid, 169, Kolhar (B. Bagewadi Tq.), 1223 A.D.

[7] Ibid, 173  Hebbal (B. Bagewadi Tq.), 1229 A.D.

[8] Ibid, 188,  Salavadigi (B. Bagewadi Tq.), 1225 A.D.

[9] Ibid, 198, Ingaleshwar (B. Bagewadi Tq.), 1265 A.D.

[10] Ibid, 101,  Managuli (B. Bagewadi Tq.), 1161 A.D.

[11] Ibid, XI-i, 83, B. Bagewadi (B. Bagewadi Tq.), 1049 A.D.

[12] Ibid, XVIII, 63, Havanuru,? 1053 A.D.

[13] Ibid, 113, Ingaleshwar (B. Bagewadi Tq.), 1070 A.D.

[14] I.N.K., No. 5, Bhimara (Degaluru), 1076 A.D.

[15] S.I.I., XV., 643, Dindavar (B. Bagewadi Tq.), 13th C.A.D.

[16] Ibid, 113, B. Bagewadi (B. Bagewadi Tq.), 1170 A.D.

[17] Ibid

[18] Ibid, XI-II, 139, Hebbal (B. Bagewadi Tq.), 1095 A.D.

[19] Ibid, 125, Muttagi (B. Bagewadi Tq.), 1079 A.D.

[20] Ibid, 162, Dindavar (B. Bagewadi Tq.), 1112 A.D.

[21] S.I.I., XI-ii, 125, Muttagi (B. Bagewadi Tq.),  1079 A.D.

[22] Ibid, XI-ii, 139, Hebbal  (B. Bagewadi Tq.), 1095  A.D.

[23] S.I.I., XV, 12, Ingaleshwar (B. Bagewadi Tq.), 1128 A.D.

[24] Ibid, 32, Muttagi (B. Bagewadi Tq.), 1147 A.D.

[25] Ibid, 35, Muttagi (B. Bagewadi Tq.), 1147 A.D.

[26] S.I.I., XV, 46, Salavadagi (B. Bagewadi Tq.), 12th C.A.D.

[27] Ibid, 545, Muttagi (B. Bagewadi Tq.),  1165 A.D.

[28] Ibid, 115, Muttagi (B. Bagewadi Tq.), 1170  A.D.?——

[29] Ibid, 74, Ingaleshwar (B. Bagewadi Tq.), 1176 A.D.

[30] S.I.I., XV, 116 Yalavar (B. Bagewadi Tq.), 1222 A.D.

[31] Ibid, 78, Hulbenchi (B. Bagewadi Tq.)—

[32] E.I., XV, P.-25,  Muttagi (B. Bagewadi Tq.), 1189 A.D.

[33] S.I.I., XV, 104, Muttagi (B. Bagewadi Tq.), 1065 A.D.

[34] Ibid, 113, B. Bagewadi (B. Bagewadi Tq.), 1170 A.D.

[35] Ibid, 35, Muttagi (B. Bagewadi Tq.), 1147 A.D.

[36] Ibid, 116, Muttagi (B. Bagewadi Tq.), 1171  A.D.

[37] Ibid

[38] Ibid, 133, Muttagi (B. Bagewadi Tq.), 1178 A.D.4