ಸ್ಥಳೀಯ ಸಂಸ್ಕೃತಿಯನ್ನು ಸೂಕ್ಷ್ಮವಾಗಿ ಅವಲೋಕಿಸದೇ ವಿಸ್ತೃತವಾದ ಚರಿತ್ರೆಯನ್ನು ನಿರ್ಮಿಸಲು ಸಾಧ್ಯವಿಲ್ಲ ಎಂಬುದು ಇತ್ತೀಚಿನ ಇತಿಹಾಸಕಾರರ ನಿಲುವಾಗಿದೆ. ಇದರಿಂದ ಸ್ಥಳೀಯ ಚರಿತ್ರೆಯ ಮಹತ್ವ ತಿಳಿಸುತ್ತದೆ. ಸ್ಥಳೀಯ ಚರಿತ್ರೆ ಸ್ವಲ್ಪ ಮಟ್ಟಿಗೆ ಕಡೆಗಣಿಸಲ್ಪಟ್ಟಂತೆ ಕಂಡರೂ ಸಹ ಇಂದಿನ ಹೊಸತನದ ತುಡಿತ ಮತ್ತೆ ಸ್ಥಳೀಯ ಇತಿಹಾಸದ ಕಡೆಗೆ ಮುಖಮಾಡಿ ಸ್ಥಳೀಯ ಚರಿತ್ರೆ ಹಾಗೂ ಸಂಸ್ಕೃತಿಗಳ ಅಧ್ಯಯನಕ್ಕೆ ಪ್ರಾಮುಖ್ಯತೆ ನೀಡಿದೆ. ಈ ಪ್ರಾಮುಖ್ಯತೆಗೆ ಹಾಗೂ ಹೊಸತನವನ್ನು ಹುಡುಕುವ ಸೃಜನಶೀಲತೆಗೆ ಸ್ಥಳೀಯ ಆಡಳಿತಗಾರರೆಂದು ಕರೆಯಲ್ಪಡುವ ಮತ್ತು ರಾಜ್ಯ ಸಾಮ್ರಾಜ್ಯಗಳ ಬೆನ್ನೆಲುಬಾಗಿ ನಿಂತ ಮಾಂಡಲಿಕರು, ಪಾಳೆಗಾರರು, ನಾಯಕರು, ದೇಶಮುಖರು, ನಾಡಗೌಡರು, ದೇಸಾಯಿಗಳ ಅಧ್ಯಯನಕ್ಕೆ ನಾಂದಿಹಾಡಿತು. ಈ ಹಿನ್ನೆಲೆಯಲ್ಲಿ ಬಾಗೇವಾಡಿ ತಾಲೂಕಿನ ದೇಸಗತಿಗಳ ಕುರಿತು ವಿವರಿಸುವುದೇ ಪ್ರಸ್ತುತ ಲೇಖನದ ಮುಖ್ಯ ಆಶಯವಾಗಿದೆ.

ಉತ್ತರದಲ್ಲಿ ಭೀಮ, ದಕ್ಷಿಣದಲ್ಲಿ ಕೃಷ್ಣಾ ನದಿಗಳ ಮಧ್ಯದ ಬಯಲು ಪ್ರದೇಶದಲ್ಲಿರುವ ವಿಜಾಪುರ ಜಿಲ್ಲೆ, ವಿಜಾಪುರ, ಬಸವನ ಬಾಗೇವಾಡಿ, ಮುದ್ದೇಬಿಹಾಳ, ಸಿಂದಗಿ, ಹಾಗೂ ಇಂಡಿ ತಾಲೂಕುಗಳನ್ನೊಳಗೊಂಡಿದೆ. ಇದು ಬಸವಣ್ಣನಂತಹ ದಾರ್ಶನಿಕ ಮತ್ತು ಸಮಾಜ ಸುಧಾರಕನನ್ನು ವಿಶ್ವಕ್ಕೆ ನೀಡಿದ ಜಿಲ್ಲೆಯಾಗಿದೆ. ಇದೆ ಜಿಲ್ಲೆಯಲ್ಲಿ ಬರುವ ಬಾಗೇವಾಡಿ ಹಿಂದೆ ಬಾಗವಾಡಿ ಎಂಬ ಅಗ್ರಹಾರವಾಗಿತ್ತು. ಎಂಬ ಅಂಶವು ನಮಗೆ ಶಾಸನಗಳಿಂದ ತಿಳಿದುಬರುತ್ತದೆ.

ಬಾಗೇವಾಡಿ ತಲೂಕಿನಲ್ಲಿ ಕಂಡು ಬರುವ ಪ್ರಮುಖ ದೇಸಗತಿಗಳೆಂದರೆ ಕೊಲ್ಹಾರ, ಗಣಿ, ಯಾಳವಾರ, ಸಾಸನೂರು, ವಡವಡಗಿ ಹಾಗೂ ಟಕ್ಕಳಕಿ.

ಕೋಲ್ಹಾರ ದೇಸಗತಿ :

ರಾಷ್ಟ್ರೀಯ ಹೆದ್ದಾರಿ ೨೧೮ರ ಮೇಲೆ, ಕೃಷ್ಣೆಯ ಬಲದಂಡೆಯಲ್ಲಿ ಕಾಣಸಿಗುವ ಕೊಲ್ಹಾರ ಬಸವನ ಬಾಗೇವಾಡಿಯಿಂದ ೩೦ ಕಿ.ಮೀ. ದೂರವಿರುವ ಪ್ರಮುಖ ಹೋಬಳಿ ಕೇಂದ್ರವಾಗಿದ್ದು, ಇದನ್ನು ಕೊರ್ತಿ-ಕೊಲ್ಹಾರ, ಹೊಳಿ-ಕೊಲ್ಹಾರ, ದೇಸಾಯರ-ಕೊಲ್ಹಾರ, ಮಸರಿನ-ಕೊಲ್ಹಾರ ಎಂದೆಲ್ಲಾ ಕರೆಯುತ್ತಾರೆ. ಈಗ ಕೊಲ್ಹಾರ ಗ್ರಾಮವು ಕೃಷ್ಣಾ ಮೇಲ್ದಂಡೆ ಯೋಜನೆಯ ಹಿನ್ನಿರಿನಲ್ಲಿ ಮುಳುಗಡೆಯಾಗಿದ್ದು, ಹತ್ತಿರದಲ್ಲಿಯೇ ಪುನರ್ ವಸತಿಗಳು ನಿರ್ಮಾಣವಾಗುತ್ತಿವೆ.

ಕೊಲ್ಹಾರದ ಪ್ರಾಚೀನತೆ : ಕೊಲ್ಹಾರ ಗ್ರಾಮದ ಇತಿಹಾಸವು ಬಹು ಪ್ರಾಚೀನಕಾಲದಿಂದಲೂ ಇರುವುದನ್ನು ಕಾಣುತ್ತೇವೆ. ಕೊಲ್ಹಾರದ ದೇಸಾಯಿಯಾಗಿದ್ದ, ಭೋಜನಾಯಕನ ಮನೆಯಮುಂದೆ ದೊರೆತ ಶಿಲಾಶಾಸನವು ಕ್ರಿ.ಶ. ೧೨೨೩ರ ಕಾಲಕ್ಕೆ ಅಂದರೆ ಯಾದವ ದೊರೆ ಸಿಂಗನನ ಕಾಲದ್ದಾಗಿದೆ. ಈ ಶಾಸನವು ಕೊಲ್ಹಾರ ಗ್ರಾಮವನ್ನು ”ಸರ್ವನಮಸ್ಯದ ಅಗ್ರಹಾರ ಹಾಗೂ ದಕ್ಷಿಣವಾರಣಾಸಿ” ಎಂದು ಉಲ್ಲೇಖಿಸುತ್ತದೆ. ಮುಂದೆ ೧೫೨೫ರಲ್ಲಿ ಅದೃಶ್ಯಕವಿಯಿಂದ ರಚಿಸಲ್ಪಟ್ಟ ಪ್ರೌಢರಾಯನ ಕಾವ್ಯದಲ್ಲಿ ಈ ಗ್ರಾಮವನ್ನು ‘ತೊರೆಸಾಲ ಪರಗಣೆಯ ಕೊಲ್ಹಾಪುರ್’ ಎಂದು ಉಲ್ಲೇಖಿಸಲಾಗಿದೆ. ಕೊಲ್ಹಾರ ಪರಗಣೆಯು ಚಿಕ್ಕಗರಸಂಗಿ, ಹಿರೆಗರಸಂಗಿ, ರೋಣಿಹಾಳ, ಹಳ್ಳದ ಗೆಣ್ಣೂರ, ಮುತ್ತಲದಿನ್ನಿ, ಹಂಗರಗಿ, ಹಾಗೂ ಕೊಲ್ಹಾರ ಎಂಬ ಏಳು ಗ್ರಮವನ್ನು ಒಳಗೊಂಡಿದ್ದು ಈ ಪರಗಣೆಯ ಆಡಳಿತವು ಕೊಲ್ಹಾರ ದೇಸಾಯಿಯವರಿಗೆ ಸೇರಿದ್ದಾಗಿತ್ತು.

ದೇಸಗತಿಯ ಮೂಲ : ವಿಜಯನಗರದ ಕಾಲಕ್ಕೆ ಪ್ರಮುಖ ಪರಗಣಾ ಕೇಂದ್ರವಾಗಿದ್ದ ಕೊಲ್ಹಾರ ದೇಸಗತಿಯು ಮೊದಲು ಕ್ಷತ್ರೀಯ ವಂಶದ ಭೋಜನಾಯಕ ಎಂಬ ದೇಸಾಯಿಯ ವಶದಲ್ಲಿತ್ತು. ಮುಳಗಡೆಗೊಂಡ ಕೊಲ್ಹಾರ ಗ್ರಾಮದಲ್ಲಿ ಭೋಜನಾಯಕನ ಮನೆ ಇದ್ದದ್ದು, ಕ್ಷತ್ರೀಯ ವಂಶದ ಆಳ್ವಿಕೆಯನ್ನು ದೃಢಪಡಿಸುತ್ತದೆ. ಈ ಭೋಜನಾಯಕ ವಿಜಯನಗರದ ಅರಸ ಪ್ರೌಢದೇವರಾಯನ (ಕ್ರಿ.ಶ. ೧೪೨೪ ರಿಂದ ೧೪೪೬) ಮಾಂಡಲಿಕನಾಗಿದ್ದನು. ಈ ಗ್ರಾಮದ ಕ್ಷತ್ರೀಯ ವಂಶದ ದೇಸಗತಿಯು ಗಾಣಿಗ ವಂಶದ ದೇಸಗತಿಗೆ ವರ್ಗಾವಣೆಗೊಂಡ ಕುತೂಹಲಕರವಾದ ಘಟನೆಯೊಂದು ಸ್ಥಳೀಯ ಐತಿಹ್ಯಗಳ ರೂಪದಲ್ಲಿ ಪ್ರಸಿದ್ಧಿಪಡೆದಿದೆ.

ಕೊಲ್ಹಾರದಿಂದ ೨೫ ಮೈಲು ಅಂತರದಲ್ಲಿ ನಾಲತವಾಡ ಎಂಬ ಗ್ರಾಮವಿದ್ದು, ಆ ಊರಿನ ಗೌಡ ಅಲ್ಲಿರುವ ಗಾಣಿಗ ಅಣ್ಣೇಂದ್ರನಿಗೆ ಒಂದೇ ದಿನದಲ್ಲಿ ಏಳು ಚೀಲ ಕುಸುಬೆಯನ್ನು ಗಾಣ ಮಾಡಿಕೊಡಲು ಆದೇಶಿಸಿದನು. ಅಷ್ಟು ಬೃಹತ್‌ ಪ್ರಮಾಣದ ಕುಸುಬೆಯನ್ನು ಒಂದೇ ದಿನದಲ್ಲಿ ಗಾಣ ಹಾಕಲು ಅಸಾಧ್ಯವಾದ ಕಾರಣ ತನ್ನ ಆಜ್ಞೆಯ ಉಲ್ಲಂಘನೆಗಾಗಿ ಕೋಪಿಷ್ಟ ಗೌಡನು ಗಾಣಿಗನ ಎತ್ತು ಹಾಗೂ ಗಾಣವನ್ನು ಕಸಿದುಕೊಂಡನು. ಹೀಗೆ ಉದ್ಯೋಗ ಕಳೆದುಕೊಂಡ ಗಾಣಿಗ ತನ್ನ ಗರ್ಭಿಣಿ ಪತ್ನಿಯೊಂದಿಗೆ ನಾಲತವಾಡ ಬಿಟ್ಟು ಕೊಲ್ಹಾರ ಗ್ರಾಮಕ್ಕೆ ಬಂದು, ಊರ ಮುಂದಿರುವ ಬಯಲು ಜಾಗದಲ್ಲಿ ಬಿಡಾರಹೂಡಿದನು.

ಇದೇ ಸಂದರ್ಭಕ್ಕೆ ಪ್ರೌಢರಾಯನು ಮಂತ್ರಿ ಜಕ್ಕಣ್ಣಾರ್ಯರೊಡನೆ ಕೃಷ್ಣಾನದಿಯ ನಡುಗಡ್ಡೆಯಲ್ಲಿ ಬೀಡುಬಿಟ್ಟಿದ್ದನು. ತಮ್ಮ ದೇಸಗತಿಯ ವ್ಯಾಪ್ತಿಯಲ್ಲಿ ರಾಜನ ಆಗಮನವಾದಾಗ ಅವರ ಆಧರಾತಿಥ್ಯ ಅಲ್ಲಿರುವ ದೇಸಾಯಿ ನೋಡಿಕೊಳ್ಳಬೇಕಿತ್ತು. ಇದು ಒಂದು ರೀತಿಯಲ್ಲಿ ಶಾಸನವು ಹಾಗೂ ಸಂಪ್ರದಾಯವು ಆಗಿತ್ತು. ಆದರೆ ದೊರೆ ಪ್ರೌಢರಾಯನಿಗೆ ಕೊಲ್ಹಾರದ ದೇಸಾಯಿ ಬೋಜನಾಯಕನಿಂದ ಕನಿಷ್ಠ ಶಿಷ್ಟಾಚಾರಗಳು ಸಲ್ಲಲಿಲ್ಲ. ಏಕೆಂದರೆ ಭೋಜನಾಯಕನು ತನ್ನ ನಿಷ್ಠೆಯನ್ನು ವಿಜಯನಗರಕ್ಕೆ ಬದಲಾಗಿ ಬಹಮನಿ ಸುಲ್ತಾನರತ್ತ ವರ್ಗಾಯಿಸಿಕೊಂಡಿರುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಡಾ. ಎಸ್. ಶೆಟ್ಟರವರು ಅಭಿಪ್ರಾಯಪಟ್ಟಂತೆ ‘ಚಿಕ್ಕಪುಟ್ಟ ಸಂಸ್ಥಾನಿಕರಾದ ಈ ದೇಸಾಯಿಗಳು ತಮ್ಮ ಅನುಕೂಲತೆಗಾಗಿ ನಿಷ್ಠೆ ಬದಲಿಸಿಕೊಳ್ಳುತ್ತಿದ್ದರು. ಇಲ್ಲಿ ಹಿಂದೂ, ಮುಸ್ಲಿಂ, ಎಂಬ ಮತ ಸಂಬಂಧ ಮುಖ್ಯವಾಗಿರದೆ, ತಮ್ಮ ರಾಜಕೀಯ ಅಸ್ಥಿತ್ವ ಮಾತ್ರ ಪ್ರಮುಖವಾಗಿತ್ತು’ ಎಂದಿದ್ದಾರೆ. (ಕಿತ್ತೂರಿನ ದೇಸಾಯಿ ಮಲ್ಲಸರ್ಜ ೧೮೧೭ರಲ್ಲಿ ಮರಾಠಾ ಬ್ರಿಟೀಷರ ಸಂಘರ್ಷದಲ್ಲಿ ತನ್ನ ಲಾಭಕ್ಕಾಗಿ ಬ್ರಿಟೀಷರತ್ತವಾಲಿದ್ದು).

ಈ ಕ್ಷಿಪ್ರ ಬೆಳವಣಿಗೆಯಿಂದ ಕ್ರೋಧಗೊಂಡ ದೊರೆ ಪ್ರೌಢದೇವರಾಯನು ಭೋಜನಾಯಕನ ಶಿರಚ್ಛೇಧನಕ್ಕೆ ಆದೇಶವಿತ್ತನು. ರಾಜಾಜ್ಞೆಯನ್ನು ಹೊತ್ತ ವಿಜಯನಗರ ಸೈನಿಕರು ಕೊಲ್ಹಾರ ಗ್ರಾಮವನ್ನು ಸುತ್ತಿ ಗಲಭೆಯನ್ನುಂಟುಮಾಡಿದರು. ಭೋಜನಾಯಕನನ್ನು ಶೋಧಿಸುತ್ತ, ಆವೇಶದಲ್ಲಿ ಬಂದ ರಾಯನ ಸೈನಿಕರು, ಊರಮುಂದಿರುವ ಗಾಣಿಗ ಅಣ್ಣೇಂದ್ರನನ್ನೆ ವೇಶ ಮರಿಸಿಕೊಂಡ ದೇಸಾಯಿ ಎಂಬ ತಪ್ಪು ಗ್ರಹಿಕೆಯಿಂದ ಕೊಲೆಗೈದರು. ಈ ವಾರ್ತೆಯನ್ನರಿತ ದೊರೆ ಪ್ರೌಢದೇವರಾಯನು ಸ್ಥಳಕ್ಕೆ ಆಗಮಿಸಿದಾಗ ತುಂಬು ಗರ್ಭಿಣಿ ಅಣ್ಣೇಂದ್ರನ ಪತ್ನಿಯಿಂದ ಅವರ ಪೂರ್ವ ವೃತ್ತಾಂತವನ್ನ ಆಲಿಸಿ, ತನ್ನ ಸೈನಿಕರ ತಪ್ಪಿನಿಂದಾಗಿ ನಡೆದ ಘಟನೆಗೆ ವ್ಯಥೆಪಟ್ಟನಲ್ಲದೇ ಪರಿಹಾರವೆಂಬಂತೆ ಅವಳಿಗೆ ಹೀಗೆ ಆಶ್ವಾಸನೆ ಇತ್ತನು. ‘ನಿನಗೆ ಹೆಣ್ಣು ಹುಟ್ಟಿದರೆ ರಾಜನೊಬ್ಬನಿಗೆ ಮದುವೆ ಮಾಡಿಕೊಡುತ್ತೇನೆ. ಗಂಡು ಹುಟ್ಟಿದರೆ ಕೊಲ್ಹಾರದ ದೇಸಗತಿಯನ್ನು ಉಂಬಳಿಯಾಗಿ ನೀಡುತ್ತೇನೆ.’ ಎಂದು ಭರವಸೆ ಇತ್ತನು. ಕಾಕತಾಳೀಯವೆಂಬಂತೆ ಗಾಣಿಗ ಅಣ್ಣೆಂದ್ರನ ಮಡದಿ ಗಂಡು ಮಗುವಿಗೆ ಜನ್ಮವಿತ್ತಳು. ತಾಯಿಯ ಉದರದಲ್ಲಿ ಅದೃಶ್ಯವಾಗಿದ್ದುಕೊಂಡು ದೇಸಗತಿಯನ್ನು ಸಂಪಾದಿಸಿಕೊಂಡಿದ್ದರಿಂದ ಅದೃಶ್ಯಪ್ಪನೆಂದು ಹೆಸರಿಡಲಾಯಿತು. ಕ್ರಿ.ಶ. ೧೪೪೫ರ ಸುಮಾರಿಗೆ ಈ ದೇಸಗತಿಯು ಆರಂಭಗೊಂಡಿತೆಂಬ ಅಂಶವು ಲಭ್ಯವಿರುವ ದಾಖಲೆಗಳಿಂದ ತಿಳಿದುಬರುತ್ತದೆ.

ಗಣಿ ದೇಸಗತಿ :

ಬಸವನ ಬಾಗೇವಾಡಿ ತಾಲೂಕಿನಲ್ಲಿ ಬರುವ ದೇಸಗತಿಗಳಲ್ಲಿ ಗಣಿ ದೇಸಗತಿ ಪ್ರಮುಖವಾದುದು. ತಾಲೂಕೂ ಕೇಂದ್ರದಿಂದ ೨೦ ಕಿ.ಮೀ. ಅಂತರದಲ್ಲಿರುವ ಗಣಿ ಗ್ರಾಮವು ದೇಸಾಯರ ಕೇಂದ್ರ ನೆಲೆಯಾಗಿತ್ತು. ಐದು ಗ್ರಾಮಗಳ ವತನದಾರಿಕೆಯನ್ನು ಹೊಂದಿ ಆಡಳಿತ ನಡೆಸಿದ ಈ ದೇಸಾಯಿಯರು, ವಿಜಾಪುರ ಜಿಲ್ಲೆಯ ಚಿಮ್ಮಲಗಿ ಪರಗಣದ ವ್ಯಾಪ್ತಿಯಲ್ಲಿ ಬರುವ ಗಣಿ, ಚಿಮ್ಮಲಗಿ, ಆಕಳವಾಡಿ, ಶೀಕಳವಾಡಿ, ಹಾಗೂ ಆಲಮಟ್ಟಿ ಗ್ರಾಮಗಳ ಇನಾಮದಾರಿಕೆಯನ್ನು ಹೊಂದಿದ್ದರು.

ದೇಸಾಯರ ಕುಲ (ಜಾತಿ) : ಗಣಿ ದೇಸಾಯರ ಕುಲಗೋತ್ರಗಳ ಕುರಿತು ಚರ್ಚಿಸುತ್ತ ಈ ಮನೆತನದ ದಿವಂಗತ ಎ.ಆರ್. ದೇಸಾಯಿರವರನ್ನು ಸಂದರ್ಶಿಸಿದಾಗ ತಾವು ಕ್ಷತ್ರೀಯ ವಂಶದವರೆಂದು ವಿಜಯನಗರದ ದೊರೆ ಆಳಿಯ ರಾಮರಾಯನ ದೂರದ ಸಂಬಂಧಿ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಆದರೆ ಇವರ ಸಂಪ್ರದಾಯ ಪೂರ್ವಜರ ಉದ್ಯೋಗ ಮತ್ತು ಆಚರಣೆಗಳನ್ನು ಗಮನಿಸಿದರೆ, ನಾಯಕ ಜನಾಂಗದ ಲಕ್ಷಣಗಳನ್ನು ಗುರುತಿಸಬಹುದಾಗಿದೆ. ೧೯೮೬ರಲ್ಲಿ ವಿಜಾಪುರದ ಡಾ. ಪ.ಗು. ಹಳಕಟ್ಟಿ ಪ್ರತಿಷ್ಠಾನದ ಅಡಿಯಲ್ಲಿ ಎಂ.ಎಂ. ಕಲಬುರ್ಗಿಯವರ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾದ ದೇಸಗತಿಗಳ ಕುರಿತು ವಿಚಾರ ಸಂಕಿಣರದಲ್ಲಿ ಗಣಿ ದೇಸಗತಿಯ ಬಗ್ಗೆ ಲೇಖನ ಮಂಡಿಸಿದ ಎಸ್. ಕೆ. ಕೊಪ್ಪಾ ಅವರು, ಇವರು ಬೇಡ ಜನಾಂಗದವರೆಂದು ಅಭಿಪ್ರಾಯಪಟ್ಟಿದ್ದಾರೆ.

ವಾಡೆ : ಕೃಷ್ಣಾನದಿ ದಂಡೆಯ ಮೇಲೆ ಎತ್ತರದ ಸ್ಥಳದಲ್ಲಿ ನಿರ್ಮಿಸಲ್ಪಟ್ಟ ಗಣಿ ದೇಸಾಯರ ವಾಡೆಯು ಸುಮಾರು ೬ ಎಕರೆಗಳಷ್ಟು ವಿಸ್ತೀರ್ಣತೆಯನ್ನು ಹೊಂದಿತ್ತು. ಈ ಕೋಟೆ ಮತ್ತು ವಾಡೆಯ ಕಟ್ಟಡಗಳನ್ನು ಗಮನಿಸಿದರೆ ಅದೊಂದು ಸಂಸ್ಥಾನಿಕರ ಕೋಟೆಯಂತೆ ಕಂಗೊಳಿಸುತ್ತದೆ. ಅದರ ಜೊತೆಗೆ ತಿಳಿದುಬರುವ ಮತ್ತೊಂದು ಅಂಶವೆಂದರೆ ಜನಸಾಮಾನ್ಯರಿಗೆ ಹಾಗೂ ದೇಸಾಯರ ಮಧ್ಯ ಸಂಪರ್ಕದ ಅಭಾವವನ್ನು ಗಮನಿಸಬಹುದಾಗಿದೆ. ಅಧಿಕಾರದ ದರ್ಪದಿಂದ ದೇಸಗತಿಯನ್ನಾಳಿದ ಇವರ ಪೂರ್ವಜರು ಅಪರಾಧಿಗಳನ್ನು ಶಿಕ್ಷಿಸಿ, ನದಿಗೆ ಎಸೆದುಬಿಡುವ ಹಾಗೆ ಆಯಕಟ್ಟಿನ ಸ್ಥಳದಲ್ಲಿ ಈ ಕೋಟೆ ನಿರ್ಮಿಸಲಾಗಿತ್ತು. ಈ ಭವ್ಯವಾದ ವಾಡೆ ಹಾಗೂ ಕೋಟೆಗಳು ಕಾಲಚಕ್ರದಲ್ಲಿ ಸಿಲುಕಿ ಅಳಿದು ಹೋದವು.

ಸಿಕ್ಕೆದುಂಗುರ/ಮುದ್ರೆ : ದೇಸಗತಿ ಮನೆತನಗಳಲ್ಲಿ ಸಿಕ್ಕೆದುಂಗುರಗಳಿಗೆ ವಿಶೇಷ ಪ್ರಾಮುಖ್ಯತೆ ದೊರೆಯುತ್ತದೆ. ಈ ಸಿಕ್ಕೆದುಂಗುರಗಳು ಈ ದೇಸಗತಿಯ ನೈಜ ವಾರಸುದಾರಿಕೆಯ ಸಂಕೇತ ಹಾಗೂ ಪ್ರತಿಷ್ಠೆಯ ಪ್ರತೀಕವಾಗಿವೆ. ಇಂಥ ಮುಖ್ಯವಾದ ಎರಡು ಸಿಕ್ಕೆದುಂಗುರಗಳು ಗಣಿ ದೇಸಾಯರ ವಾಡೆಯಲ್ಲಿ ದೊರೆತಿವೆ. ಅವುಗಳ ಜೊತೆಗೆ ಒಂದು ಮೊಹರು ಕೂಡ ದೊರೆತಿದ್ದು, ಅದರ ಮೇಲೆ ಪರ್ಶಿಯನ್ ಲಿಪಿ ಇದೆ.

ದೇಸಗತಿಗಳ ನಾಶ : ಕನ್ನಡನಾಡಿನ ಬೃಹತ ನೀರಾವರಿ ಯೋಜನೆಯಾದ ಕೃಷ್ಣಾ ಮೇಲ್ದಂಡೆ ಯೋಜನೆಯು ನಮ್ಮೆಲ್ಲರಿಗೆ ವರವಾಗಿ ಪರಿಣಮಿಸಿದರೆ, ದೇಸಗತಿಗಳ ಪಾಲಿಗೆ ಶಾಪವಾಗಿ ಪರಿಣಮಿಸಿದೆ. ಬಾಗೇವಾಡಿ ತಾಲೂಕಿನ ಬೃಹತ ದೇಸಗತಿಗಳೆಂದೆ ಗುರುತಿಸಲ್ಪಟ್ಟ ಕೊಲ್ಹಾರ, ಹಾಗೂ ಗಣಿ ದೇಸಗತಿಗಳು ಇಂದು ಆಲಮಟ್ಟಿ ಆನೆಕಟ್ಟಿನಲ್ಲಿ ನೀರುಪಾಲಾಗಿವೆ. ಅವುಗಳ ಜೊತೆಗೆ ದೇಸಾಯರು ಕಟ್ಟಿ ಆಳಿದ ಬೃಹತ್ ಕೋಟೆ, ಕೊತ್ತಲು, ವಾಡೆ, ಹುಡೆಗಳೆಲ್ಲವೂ ಕೃಷ್ಣಾರ್ಪಣಗೊಂಡಿವೆ. ಅವುಗಳನ್ನು ಪುನರ್ ನಿರ್ಮಿಸುವ ಕಾರ್ಯ ನಮ್ಮಿಂದಾಸಾಧ್ಯವಾದರೂ ಕೋಶಗಳ ಮೂಲಕ ಅವುಗಳ ಭವ್ಯ ಸಂಸ್ಕೃತಿ, ಪರಂಪರೆ ಹಾಗೂ ಮಹತ್ವವನ್ನು ದಾಖಲಿಸುವ ಪ್ರಾಮಾಣಿಕ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ.

ಯಾಳವಾರ ನಾಡಗೌಡರು :

ವಿಜಾಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನಲ್ಲಿರುವ ಯಾಳವಾರ ಗ್ರಾಮವು ಚಾರಿತ್ರಿಕ ದಾಖಲೆಗಳೊಂದಿಗೆ ಪ್ರಾಚೀನ ಗ್ರಾಮವಾಗಿದೆ. ಈ ಗ್ರಾಮವು ತಾಲೂಕು. ಕೇಂದ್ರದಿಂದ ೩೦ ಕಿ.ಮೀ. ದೂರದಲ್ಲಿ ದೋಣಿ ನದಿ ದಂಡೆಯ ಮೇಲಿದೆ. ದೋಣಿಸಾಲ ಎಂಬ ಗ್ರಾಮ್ಯ ಭಾಷೆಯೊಂದಿಗೆ ಗುರುತಿಸಿಕೊಂಡ ಯಾಳವಾರ ಗ್ರಾಮವು ಈ ಪ್ರದೇಶದಲ್ಲಿ ಫಲವತ್ತಾದ ಭೂ ಪ್ರದೇಶವನ್ನು ಹೊಂದಿ ವ್ಯವಸಾಯ ಯೋಗ್ಯವಾಗಿದೆ. ಈ ಗ್ರಾಮವನ್ನು ನಾಡಗೌಡರೆಂಬ ವತನದಾರರ ಮನೆತನವೊಂದು ಆಳುತ್ತ ಬಂದಿದೆ. ಈ ನಾಡಗೌಡರು ವಿಜಾಪುರ ಜಿಲ್ಲೆಯ ದೇಸಗತಿಗಳ ಪಂಕ್ತಿಯಲ್ಲಿ ಬರುವ ಮತ್ತೊಬ್ಬ ವತನದಾರರಾಗಿರುತ್ತಾರೆ.

ಯಾಳವಾರ ಗ್ರಾಮದ ಪ್ರಾಚೀನತೆ : ಯಾಳವಾರ ಗ್ರಾಮದ ಪ್ರಾಚೀನತೆಯನ್ನು ಇತಿಹಾಸ ಪೂರ್ವಕಾಲದಿಂದಲೇ ಕಾಣಬಹುದಾಗಿದೆ. ದೋಣಿ ನದಿಯ ದಂಡೆಯ ಮೇಲೆ ಹಳೆಯ ಶಿಲಾಯುಗದ ಪಳಿಯುಳಿಕೆಗಳನ್ನು ವಿದ್ವಾಂಸರು ಶೋಧಿಸಿದ್ದಾರೆ. ಆ ಪ್ರಾಚೀನ ಮಾನವ ಸಂಸ್ಕೃತಿಯ ಅವಶೇಷಗಳನ್ನು ಯಾಳವಾರ ಗ್ರಾಮದಲ್ಲೂ ಕಾಣಬಹುದಾಗಿದೆ. ಮುಂದೆ ಇತಿಹಾಸದ ಕಾಲಕ್ಕೆ ಬಂದಾಗ ಈ ಗ್ರಾಮದಲ್ಲಿ ಒಟ್ಟು ನಾಲ್ಕು ಶಿಲಾಶಾಸನಗಳು South Indian Inscriptions, Vol-XV ರಲ್ಲಿ ಪ್ರಕಟಗೊಂಡಿರುತ್ತವೆ. ಅವುಗಳೆಂದರೆ,

.ನಂ. ಪ್ರಕಟಗೊಂಡ ವರ್ಷ ಸಂಖ್ಯೆ ದೊರೆತ ಸ್ಥಳ ಅರಸನ ಹೆಸರು ಕಾಲಾವಧಿ ಪ್ರಕಟಣೆ
೧. ೧೯೩೦-೩೧ ೩೬ ಚಾವುಡಿಯ ಎದುರು ಕಲಚುರಿ ಬಿಜ್ಜಳ ೧೧೫೮ S.I.I. Vol-XV, No. 98
೨. ೧೯೩೦-೩೧ ೩೫ ಚಾವುಡಿಯ ಎದುರು ಕಲಚುರಿ ಬಿಜ್ಜಳ ೧೧೫೮ S.I.I. Vol-XV, No. 144
೩. ೧೯೩೦-೩೧ ೩೮ ಸೋಮೇಶ್ವರ ದೇವಾಲಯ ಕಲಚುರಿ ಬಿಜ್ಜಳ ೧೨೨೨ S.I.I. Vol-XV, No. 166
೪. ೧೯೩೦-೩೧ ೩೯ ಸೋಮೇಶ್ವರ ದೇವಾಲಯ …… ೧೫೫೭ S.I.I. Vol-XV, No. 691

ಈ ಮೇಲಿನ ನಾಲ್ಕು ಶಿಲಾ ಶಾಸನಗಳಲ್ಲಿ ನಾಲ್ಕನೆಯ ಶಿಲಾ ಶಾಸನವು ಚಾರಿತ್ರಿಕ ಮಹತ್ವವನ್ನು ಪಡೆದುಕೊಂಡಿದೆ. ಯಾಳವಾರ ಗ್ರಾಮದ ಸೋಮೇಶ್ವರ ದೇವಾಲಯದ ಆವರಣದ ಗೋಡೆಯ ಮೇಲ್ಭಾಗದಲ್ಲಿರುವ ೨೬ ಸಾಲುಗಳ ಬರವಣಿಗೆಯುಳ್ಳ ಶಿಲಾ ಶಾಸನದ ಪಾಠ ಇಂತಿದೆ,

೧. ಶ್ರೀ ಸೋಮೇಸ್ವರ ಲಿಂಗಾಯ ನಮಃ ಗುರುವೇ ಗತಿ
೨. ಅವಿಘ್ನಮಸ್ತು ಸ್ವಸ್ತಿ ಶ್ರೀಮತು | ಶಾಲಿವಾಹ –
೩. ನ ಶಕ ೧೪೩೯ ನೆಯ ಪಿಂಗಳನಾಮ ಸಂವತ್ಸರದ
೪. ವಯಿಶಾಕ ವದಿ ಪಂಚಮಿ ಭಾನುವಾರ ಮೂಲನಕ್ಷ –
೫.

[ತ್ರ] ಸಿದನಾಮಯೋಗದಲು ಶ್ರೀಮತು || ಹರನ ಗಿರಿಜಾ –
೬. ವರನ ಕರುಣಾಕರನ ದುರಿತಾಂತರನ ಗಂಗಾಧರನ
೭. ಫಣಿಯ ಕುಂಡಲನ ಹರನು ಸಿಖರನನಿಲಗಣ
೮. ನಿಗಮಸ್ವರೂಪದೆ ನೀಲಕಂಠಾಭರಣ ಭಸ್ಮಾ [ದಿ] ಧೊಳಿ –
೯. ತಾಂಗನ ಚಿತ್ರಕಾಯನ ಚಿಂನ್ಮ ಯಾಂಬರನ ಸೊಲವಿ
೧೦. .. ರ [ಪಾಲಿಸಿರಭೂಹಿದಸೆ] ಭುಜದೆ ಗೌರಿಯ ಬಾಲನಂ –
೧೧. ಘ್ರಿಯ ಅರ್ಚಪುವೀಜೆಯ [ಹುರಸಿಮಿ] ಯೊಳು ಯಾಲವರದೆ
೧೨. ಅರಸು ಪಾಕನಾಟಿಯ ಕುಲಾಬ್ಧಿಚಂದ್ರಮ ನಾಗನಾಯ್ಕನ ಸು –
೧೩. ಪುತ್ರ ಕುಲದೀಪಕ ಬಸವಂತರಾಯರು ಪರಮಂಮ್ಮ ನವ –
೧೪. ರ ಸುಕುಮಾರ ಚೆನ್ನ ಬಸವಂತರಾಯರು ತಂ-

ಶಾಸನದ ಸಾರಾಂಶ : ಈ ಶಾಸನವು ಆರಂಭದಲ್ಲಿ ಶಕವರ್ಷ ೧೪೭೯ ಪಿಂಗಳಾ ವೈಶಾಖ ಬ. ೫ ಮೂಲಾನಕ್ಷತ್ರ ಎಂದು ತೇದಿಯ ಉಲ್ಲೇಖಿಸಿದೆ. ಇದು ಕ್ರಿ.ಶ.೧೫೫೭ರ ಏಪ್ರೀಲ ತಿಂಗಳ ೧೮ನೇ ತಾರಿಖಿಗೆ ಸರಿಹೊಂದುವುದು. ಈ ದಾಖಲೆಯು ಸೋಮೇಶ್ವರ ದೇವಾಲಯದ ಆಗ್ನೇಯ ದಿಕ್ಕಿನಲ್ಲಿ ಸೋಮ ತೀರ್ಥ ಎಂಬ ಹೆಸರಿನ ಪಾವಟಿಗೆಗಳುಳ್ಳ (Stepped well) ಭಾವಿಯೊಂದನ್ನು ನಿರ್ಮಿಸಿರುವ ಸಂಗತಿಯನ್ನು ತಿಳಿಸುತ್ತದೆ. ಈ ಭಾವಿಯನ್ನು ಚೆನ್ನಬಸವಂತರಾಯ ಎಂಬುವವನು ಕಟ್ಟಿಸಿದನೆಂದು, ಈತನು ಯಾಳವಾರ ಗ್ರಾಮದ ಮುಖಂಡನಾಗಿದ್ದ ಪಾಕನಾಟಿಕುಲದ ನಾಗನಾಯಕ ಎಂಬುವವನ ಮೊಮ್ಮಗನೆಂದು ಉಲ್ಲೇಖಿಸುತ್ತದೆ. ಈ ಯಾಳವಾರ ಗ್ರಾಮವು ವಿಜಾಪುರ ಪ್ರಾಂತದಲ್ಲಿತ್ತೆಂಬ ಸಂಗತಿಯನ್ನು ತಿಳಿಸುತ್ತದೆ. ಈ ಭಾವಿಯ ನಿರ್ಮಾನಕ್ಕೆ ಈ ಪ್ರಾಂತದ ಮುಖ್ಯಸ್ಥನಾಗಿದ್ದ ರಾಮಣ್ಣನಾಯಕನೆಂಬುವವನ ಅನುಮತಿಯನ್ನು ಪಡೆದುಕೊಂಡಿದ್ದನೆಂದು ಹೇಳುತ್ತದೆ. ಹಾಗೂ ಈ ರಾಮಣ್ಣನಾಯಕನು ಚೆನ್ನಬಸವಂತನಾಯಕನ ಚಿಕ್ಕಪ್ಪನಾಗಿದ್ದನೆಂದು ತಿಳಿಸುತ್ತದೆ.

ಯಾಳವಾರ ಗ್ರಾಮದಲ್ಲಿ ದೊರೆತ ಈ ಶಾಸನವು ನಮ್ಮ ಅಧ್ಯಯನದ ದೃಷ್ಟಿಯಿಂದ ಅತ್ಯಂತ ಮಹತ್ವದಾಗಿರುತ್ತದೆ. ಈ ಶಾಸನದ ಜೊತೆಗೆ ದೊರೆತ ಇನ್ನೊಂದು ಶಾಸನವು ಕ್ರಿ.ಶ. ೧೧೫೮ರ ಕಾಲದ ಕಲಚುರಿ ಅರಸನಾದ ಬಿಜ್ಜಳನ ಅವಧಿಗೆ ಸಂಬಂಧಿಸಿದುದಾಗಿದೆ. ಈ ಶಾಸನದಲ್ಲಿ ಯಾಳವಾರ ಗ್ರಾಮದ ಹೆಸರನ್ನು ‘ಏಳಾಪುರ’ ಎಂದು ಉಲ್ಲೇಖಿಸಲಾಗಿದೆ. ಹೀಗೆ ಕ್ರಿ.ಶ. ೧೧೫೮ ರ ಕಾಲಕ್ಕೆ ಏಳಾಪುರ ಎಂದು ಕರೆಯಿಸಿಕೊಂಡಿದ್ದ ಈ ಗ್ರಾಮವು ಕ್ರಿ.ಶ. ೧೫೫೭ರ ಹೊತ್ತಿಗೆ ಯಾಳವಾರ ಎಂಬ ಹೆಸರನ್ನು ಪಡೆದುಕೊಂಡಿತು ಎಂಬುದು ಶಾಸನಗಳಿಂದ ವೇದ್ಯವಾಗುತ್ತದೆ. ವಿಜಾಪುರ ಜಿಲ್ಲೆಯ ಚರಿತ್ರೆಯಲ್ಲಿ ನಡೆದುಹೋದ ಮಹತ್ವದ ಐತಿಹಾಸಿಕ ಘಟನೆಯಾದ ೧೫೬೫ರ ತಾಳಿಕೋಟೆ ಕಾಳಗಕ್ಕಿಂತ ಮುಂಚಿತವಾಗಿ ಈ ಗ್ರಾಮಕ್ಕೆ ಯಾಳವಾರ ಎಂಬ ಹೆಸರು ರೂಡಿಯಲ್ಲಿ ಬಂದಿದ್ದನ್ನು ಕಾಣಬಹುದು. ಈ ಶಿಲಾಶಾಸನವು ನೀಡುವ ಇನ್ನೊಂದು ಪ್ರಮುಖ ಅಂಶವೆಂದರೆ ನಾಗನಾಯಕ ಹಾಗೂ ರಾಮಣ್ಣ ನಾಯಕರೆಂಬುವವರು ಈ ಭಾಗದ ಆಡಳಿತದ ಮುಖ್ಯಸ್ಥರಾಗಿದ್ದರು. ಈ ಅಧಿಕಾರವರ್ಗವೆಲ್ಲವು ಪಾಕನಾಟಿಕುಲದವರಗಿದ್ದರೆಂದು ಉಲ್ಲೇಖಿಸುತ್ತದೆ. ಈ ಪಾಕನಾಟಿ ಎಂಬ ಪದವು ಪಾಕನಾಡು ಎಂಬ ಶಬ್ಧವ ರೂಪವಾಗಿದೆ. ಆಂಧ್ರಪ್ರದೇಶದ ಪಾಕನಾಡು ಎಂಬ ಪ್ರದೇಶದಿಂದ ವಲಸೆಬಂದ ರೆಡ್ಡಿ ಸಮೂಹದವರಿಗೆ, ಅವರ ಪ್ರಾದೇಶಿಕತೆಯನ್ನು ಸೂಚಿಸುವ ಅರ್ಥದಲ್ಲಿ ಪಾಕನಾಡು ರೆಡ್ಡಿಗಳೆಂದು ಕರೆಯಲಾಗುತ್ತಿತ್ತು. ಮುಂದೆ ಈ ಪಾಕನಾಡು ಎಂಬ ಪದವು ಪಾಕನಾಟಿ, ಪಾಕನಾಕ ಎಂದು ರೂಪಾಂತರಗೊಂಡಿರುತ್ತದೆ. ಶಾಸನದಲ್ಲಿ ಉಲ್ಲೇಖಗೊಂಡ ಪಾಕನಾಟಿಕುಲವೆಂಬ ಶಬ್ದದ ಅರ್ಥವನ್ನು ಶೋಧಿಸಲಾಗಿ ಸದ್ಯದ ಯಾಳವಾರದ ನಾಡಗೌಡರು ಸಹ ರೆಡ್ಡಿಗಳಾಗಿದ್ದರೆ. ಅವರ ಒಳಪಂಗಡವು ಸಹ ಪಾಕನಾಕರೆಡ್ಡಿಗಳೆಂಬುದು ಖಚಿತಗೊಳ್ಳುತ್ತದೆ. ಮೇಲ್ಕಾಣಿಸಿದ ಶಾಸನಾಧಾರದಿಂದ ನಮಗೆ ತಿಳಿದುಬರುವ ಸಂಗತಿಯೆಂದರೆ ವಿಜಯನಗರ ಮತ್ತು ಆದಿಲಶಾಹಿಗಳ ನಡುವೆ ನಡೆದ ತಾಳಿಕೋಟಿ ಕಾಳಗಕ್ಕಿಂತಲೂ ಮುಂಚಿತವಾಗಿ ಕ್ರಿ.ಶ. ೧೫೫೭ ಕ್ಕಿಂತಲೂ ಮೊದಲು ಯಾಳವಾರ ಗ್ರಾಮದ ವತನದಾರಿಕೆಯನ್ನು ನಾಡಗೌಡರ ವಂಶಜರು ಹೊಂದಿದ್ದರೆಂಬುದು ಖಚಿತವಾಗುತ್ತದೆ.

ಸಾಸನೂರ ದೇಸಗತಿ :

ವಿಜಾಪುರ ಜಿಲ್ಲೆಯ ದೇಸಗತಿಗಳ ಚರಿತ್ರೆಯಲ್ಲಿ ಸಾಸನೂರ ಗ್ರಾಮಕ್ಕೆ ವಿಶೇಷ ಪ್ರಾಮುಖ್ಯತೆ ದೊರಕಿದೆ. ಬಸವನ ಬಾಗೇವಾಡಿಯಿಂದ ೩೦ ಕಿ.ಮೀ. ದೂರದಲ್ಲಿರುವ ಸಾಸನೂರ ಗ್ರಾಮವು ವಿಜಾಪುರ ಜಿಲ್ಲೆಯ ವತನದಾರರು ದೇಸಾಯಿಗಳು ಹಾಗೂ ಪಾಟೀಲರ ಕೇಂದ್ರ ಸ್ಥಳವಾಗಿದೆ. ಸಾಸನೂರ ದೇಸಗತಿಯ ಮೂಲಕ್ಕಾಗಿ ಸ್ಥಳೀಯ ಅಧ್ಯಯನ ಕೈಗೊಂಡಾಗ ಸಿಕ್ಕಂತಹ ವಿವರಗಳೆಂದರೆ ಈ ದೇಸಗತಿಯ ಮೂಲಕ್ಕಾಗಿ ಸ್ಥಳೀಯ ಅಧ್ಯಯನ ಕೈಗೊಂಡಾಗ ಸಿಕ್ಕಂತಹ ವಿವರಗಳೆಂದರೆ ಈ ದೇಸಗತಿಯ ಮೂಲ ಪುರುಷ ರಾಜಕೋಟದಿಂದ ವಸಲೆ ಬಂದವರೆಂದು ತಿಳಿದುಬರುತ್ತದೆ. ರಾಜಕೋಟದಿಂದ ವಿಜಾಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕಲಕೇರಿ ಗ್ರಾಮದ ದೇಸಗತಿಯನ್ನು ಸಂಪಾದಿಸಿಕೊಂಡು, ಅನಂತರ ಈ ಮನೆತನದ ಸಹೋದರರೊಬ್ಬರು ಸಾಸನೂರ ಗ್ರಾಮಕ್ಕೆ ಆಗಮಿಸಿ, ಇಲ್ಲಿನ ದೇಸಗತಿಯನ್ನು ಸಂಪಾದಿಸಿಕೊಂಡರು.

ಸಾಸನೂರ ಗ್ರಾಮದಲ್ಲಿ ನಾಲ್ಕು ತಲೆಮಾರುಗಳಿಂದ ಈ ದೇಸಗತಿ ವಂಶಜರು ಅಧಿಕಾರವನ್ನು ಮುನ್ನಡೆಸಿಕೊಂಡು ಬಂದಿದ್ದಾರೆ. ಅವರ ವಂಶಾವಳಿ ಈ ಕೆಳಗಿನಂತಿರುತ್ತದೆ.

04_366_BB-KUHಮಡಿವಾಳಪ್ಪ ದೇಸಾಯಿ : ಸಾಸನೂರ ದೇಸಗತಿಯನ್ನು ಆರಂಭಿಸಿದವರೆಂದರೆ ಶ್ರೀಯುತ ಮಡಿವಾಳಪ್ಪ ದೇಸಾಯಿ. ಹೆಚ್ಚಿನ ಶಿಕ್ಷಣ ಪಡೆಯದ ಈ ದೇಸಾಯಿಯವರು ಕೃಷಿ ಚಟುವಟಿಕೆಯನ್ನು ಅಭಿವೃದ್ಧಿ ಪಡಿಸುತ್ತ ಜೀವನ ಸಾಗಿಸಿಕೊಂಡು ಬಂದಿದ್ದಾರೆ. ಇವರ ಕಾಲಕ್ಕೆ ಸಾಸನೂರ ದೇಸಗತಿ ನಾಲ್ಕನೂರು ಕೂರಿಗೆ ಅಂದರೆ ೧೬೦೦ ಎಕರೆ ಜಮೀನುಗಳ ಮಾಲೀಕತ್ವವನ್ನು ಹೊಂದಿದವರಾಗಿದ್ದರು. ಶ್ರೀಯುತರಿಗೆ ಚೆಂದಪ್ಪ, ಚನ್ನಬಸಪ್ಪ, ಗುರಪ್ಪಾ ಎಂಬ ಮೂವರು ಗಂಡು ಮಕ್ಕಳಿದ್ದರು. ಈ ಮೂವರಲ್ಲಿ ಮೊದಲಿನ ಇಬ್ಬರು ದೇಸಗತಿಯ ಕಾರ್ಯಚಟುವಟಿಕೆಗಳಲ್ಲಿ ಆಸಕ್ತಿ ತೋರದೆ ಹೋದುದರಿಂದ ಮೂರನೆಯವರಾದ ಗುರಪ್ಪಾ ದೇಸಾಯಿಯವರು ಗಾದಿ ಮಾಲಿಕರಾಗಿ ಮುಂದುವರೆದರು.

ಗುರಪ್ಪ ಮಡಿವಾಳಪ್ಪ ದೇಸಾಯಿ : ಶ್ರೀಯುತರು ತಮ್ಮ ತಂದೆಯಿಂದ ಬಳುವಳಿಯಾಗಿ ಬಂದ ಬೃಹತ್ ಒಕ್ಕಲುತನವನ್ನು ನಿಭಾಯಿಸಿಕೊಂಡು ಬಂದರಲ್ಲದೆ, ತಮ್ಮ ಜಮೀನುಗಳಿಗೆ ವಿಶೇಷ ಆಸಕ್ತಿವಹಿಸಿ ಬಾಂಧಾರುಗಳನ್ನು ನಿರ್ಮಿಸಿಕೊಂಡರು. ದೇಸಗತಿಯ ಜಮೀನುಗಳನ್ನು ಮಾಡಿಕೊಳ್ಳುತ್ತಿದ್ದ ಎಲ್ಲಾ ಗೇಣಿದಾರರುಗಳನ್ನು (ರೈತರನ್ನು) ಅತ್ಯಂತ ಪ್ರೀತಿಯಿಂದ ಕಂಡು ಅವರ ಸುಖ ದುಃಖಗಳಲ್ಲಿ ಭಾಗವಹಿಸುತ್ತಿದ್ದರೆಂದು ಹೇಳಲಾಗುತ್ತದೆ. ಶ್ರೀ ಗುರಪ್ಪ ಮಡಿವಾಳಪ್ಪ ದೇಸಾಯಿಯವರಿಗೆ ಒಬ್ಬನೇ ಮಗನು ಜನಿಸಿದ್ದರಿಂದ ತಮ್ಮ ತಂದೆಯ ಸ್ಮರಣೆಗಾಗಿ ಮಡಿವಾಳಪ್ಪ ಎಂದು ನಾಮಕರಣ ಮಾಡಿದರು.

ಎರಡನೆಯ ಮಡಿವಾಳಪ್ಪ : ಗುರಪ್ಪ ದೇಸಾಯಿಯವರ ನಂತರ ಅವರ ಏಕಮೇವ ಪುತ್ರನಾದ ಇಮ್ಮಡಿ ಮಡಿವಾಳಪ್ಪ ದೇಸಾಯಿಯವರು ಗಾದಿ ಮಾಲಿಕರಾಗಿ ನಿಯುಕ್ತ ಗೊಂಡರು. ಇವರ ಕಾಲಕ್ಕೆ ”Land Sealing act’ ಎಂಬ ಗೇಣಿದಾರರ ಕಾಯ್ದೆಯು ಜಾರಿಗೆ ಬಂದಿತು. ಭಾರತ ಸರ್ಕಾರದ ಭೂಸುಧಾರಣಾ ಕಾಯ್ದೆ ೧೯೬೧ರ ಪ್ರಕಾರ ರೂಪಿತವಾದ ‘ಉಳ್ಳುವವನೆ ಭೂಮಿಯ ಒಡೆಯ’ ಎಂಬ ಹೆಸರನ್ನಿಟ್ಟುಕೊಂಡ ಈ ಶಾಸನವು ೧.೩.೧೯೭೪ ರಂದು ಜಾರಿಯಲ್ಲಿ ಬಂದಿತು. ಅಂದಿನ ಕರ್ನಾಟಕದ ಮುಖ್ಯ ಮಂತ್ರಿಗಳಾಗಿದ್ದ ಶ್ರೀಯುತ ದೇವರಾಜು ಅರಸರು ಕೇಂದ್ರ ಸರ್ಕಾರದಿಂದ ರೂಪಿಸಲ್ಪಟ್ಟ ಈ ಕಾಯ್ದೆಯನ್ನು ಕಟ್ಟು ನಿಟ್ಟಾಗಿ ಕರ್ನಾಟಕದಲ್ಲಿ ಜಾರಿಗೆ ತಂದರು. ಅದರನ್ವಯ ಬಿಜಾಪುರ ಜಿಲ್ಲೆಯ ಬಹುತೇಕ ದೇಸಾಯರುಗಳ ಜಮೀನುಗಳು ಗೇಣಿದಾರರ ಪಾಲಾದವು. ಈ ಶಾಸನದನ್ವಯ ಸಾಸನೂರ ದೇಸಗತಿಯ ಭೂಮಿಯ ಗಾತ್ರವು  ೧೬೦೦ ಎಕರೆಗಳಿಂದ ಕೇವಲ ೧೨೦ ಎಕರೆಗಳಿಗೆ ಸೀಮಿತಗೊಂಡಿತು. ಪ್ರಜಾಪ್ರಭುತ್ವದ ಸಂಕೇತವಾದ ಈ ಕಾಯ್ದೆಯನ್ನು ಸ್ವೀಕರಿಸಿದ ಮಡಿವಾಳಪ್ಪ ದೇಸಾಯಿಯವರು, ಬದಲಾದ ಸನ್ನಿವೇಶ ಹಾಗು ಸಂದರ್ಭಗಳಿಗೆ ತಕ್ಕಂತೆ ಹೊಂದಿಕೊಳುವ ಮುತ್ಸದ್ಧಿಯಾಗಿದ್ದಾರೆ. ಇವರಿಗೆ ಶಿವಪುತ್ರಪ್ಪ ಎಂಬ ಹೆಸರಿನ ಪುತ್ರರಿದ್ದಾರೆ.

ಶಿವಪುತ್ರಪ್ಪ ದೇಸಾಯಿ : ಸಾಸನೂರ ದೇಸಗತಿಗೆ ವಿಜಾಪುರ ಜಿಲ್ಲೆಯ ಕ್ಷೇತ್ರದಲ್ಲಿ ವಿಶೇಷ ಸ್ಥಾನವೊಂದನ್ನು ಕಲ್ಪಿಸಿಕೊಟ್ಟ ಶ್ರೇಯಸ್ಸು ಶಿವಪುತ್ರಪ್ಪ ದೇಸಾಯಿಯವರಿಗೆ ಸಲ್ಲುತ್ತದೆ. ಕ್ರಿ.ಶ. ೧೯೩೯ರಲ್ಲಿ ಜನಿಸಿದ ಶ್ರೀಯುತ ಶಿವಪುತ್ರಪ್ಪ ದೇಸಾಯಿಯವರು ತಂದೆ ಮಡಿವಾಳಪ್ಪ ದೇಸಾಯಿಯವರ ನಿಧನದ ನಂತರ ಸಾಸನೂರ ಗಾದೆಗೆ ನಿಯೋಜನೆಗೊಂಡರು.

ವಡವಡಗಿ ದೇಸಗತಿ (ನಿಡಗುಂದಿ) :

ಬಸವನ ಬಾಗೇವಾಡಿ ತಾಲೂಕಿನಲ್ಲಿ ಬರುವ ನಿಡಗುಂದಿ (ವಡವಡಗಿ) ಎಂಬ ಗ್ರಾಮವು ಪುಟ್ಟ ದೇಸಗತಿಯೊಂದನ್ನು ಹೊಂದಿರುತ್ತದೆ. ಕೃಷ್ಣಾನದಿಯ ಎರದಂಡೆಯ ಮೇಲಿರುವ ನಿಡಗುಂದಿ ಗ್ರಾಮವು ಆಲಮಟ್ಟಿ ಆಣೆಕಟ್ಟಿನಿಂದಾಗಿ ಹಲವಾರು ಸೌಲಭ್ಯಗಳನ್ನು ಹೊಂದಿ ಅಭಿವೃದ್ಧಿ ಕಾಣುತ್ತಿರುವ ಗ್ರಾಮವಾಗಿದೆ. ನಿಡಗುಂದಿ ಬೆಟ್ಟದ ಮೇಲೆ ಸ್ಮಾರಕಗಳಂತೆ ಕಂಗೊಳಿಸುತ್ತಿರುವ ದೇಸಾಯರ ವಾಡೆ, ಕೋಟೆ. ದ್ವಾರಬಾಗಿಲು, ಇತ್ಯಾದಿ ಅವಶೇಷಗಳು ಈ ದೇಸಗತಿಯ ಕುರುಹುಗಳಂತೆ ಕಂಡುಬರುತ್ತವೆ. ಈ ದೇಸಗತಿಯ ಮೂಲನೆಲೆ ನಿಡಗುಂದಿಯಾದರೂ ಇದರ ಹೆಸರು ವಡವಡಗಿ ದೇಸಗತಿಯೆಂದೆ ಜಿಲ್ಲೆಯಲ್ಲಿ ಪ್ರಚಲಿತದಲ್ಲಿದೆ.

ಮೂಲ : ಈ ಮನೆತನದ ಮೂಲ ಪುರುಷರು ಸುರುಪುರದ ನಾಯಕ ಜನಾಂಗದವರಾಗಿದ್ದರು. ಗುಲಬರ್ಗಾ ಜಿಲ್ಲೆಯ ಸುರಪುರದಿಂದ ಇತ್ತ ವಲಸೆ ಬಂದವರೆಂದು ಹೇಳಲಾಗುತ್ತದೆ. ತುಂಬಾ ಪರಿಶ್ರಮ ಜೀವಿಗಳಾದ ಎಂಟು ಜನ ಸಹೋದರರು ನಿಡಗುಂದಿ, ವಡವಡಗಿ, ಹಾಗೂ ಕಾಳಗಿ ಗ್ರಾಮಗಳ ದೇಸಗತಿಯ ಜೊತೆಗೆ ಗೌಡಕಿಯನ್ನು ಪಡೆದುಕೊಂಡರೆಂದು ಈ ಮನೆತನದ ವಂಶಜರಾದ ಶ್ರೀಯುತ ಜಿ.ಎಸ್. ದೇಸಾಯಿಯವರು ಅಭಿಪ್ರಾಯ ಪಟ್ಟಿದ್ದಾರೆ.

ಐತಿಹ್ಯ : ಮೂಲತಃ ಬೇಟೆಗಾರಿಕೆಯನ್ನು ತಮ್ಮ ಕಸುಬನ್ನಾಗಿ ಮಾಡಿಕೊಂಡು ಬೆಳೆದ ಈ ನಾಯಕರು ನಿಡಗುಂದಿಯ ಬೆಟ್ಟದಲ್ಲಿ ಮಲವೊಂದನ್ನು ಬೇಟೆಯಾಡಿ ಬೆಂಕಿಯಲ್ಲಿ ಹಾಕಿದರಂತೆ. ಆದರೆ ಆ ಮೊಲ ಬೆಂಕಿಯಿಂದ ಹೊರಜಿಗಿದು ಓಡಿಹೋಯಿತು. ಈ ಅಸದೃಶ್ಯವಾದ ಘಟನೆಯನ್ನು ಅರ್ಥೈಸಿಕೊಂಡು, ಆ ಸ್ಥಳವು ವಿಶೇಷ ಶಕ್ತಿಯ ಜಾಗವೆಂದು ಭಾವಿಸಿ ಅಲ್ಲಿಯೇ ನೆಲೆಯೂರಿದರು. ಮುಂದೆ ತಮ್ಮ ಶಕ್ತಿ ಸಾಮರ್ಥ್ಯದಿಂದ ಆ ಭಾಗದ ಜನರ ಒಲವನ್ನು ಪಡೆದು ವತನದಾರರಾಗಿ ಹೊರಹೊಮ್ಮಿದರು.

ಐತಿಹ್ಯ ಈ ರೀತಿ ತಿಳಿಸಿದರೂ ದೇಸಾಯರ ಮನೆಯಲ್ಲಿ ದೊರೆತ ಪ್ರಾಚೀನ ದಾಖಲೆಯೊಂದು ಇವರು ಪೇಶ್ವೆಗಳಿಂದ ಈ ವತನದಾರಿಕೆಯನ್ನು ಪಡೆದುಕೊಂಡರೆಂದು ತಿಳಿಸುತ್ತದೆ.

ದಾಖಲೆಯ ಮುಖ್ಯಾಂಶಗಳು : ಸಮ್ಮತ ಪಾರವತಿ ಪರಗಣೆ ನಿಡಗುಂಡಿಯೀ ವತನದ ತಪಶೀಲು ಕೆಳಗೆ ಬರೆದ ಪ್ರಕಾರ ಸಂಪಾದನೆ ಮಾಡಿದವರು ಗೋಸಲಭೆರಿ ದೇಸಮುಖ ಪರಗಣೆ ನಿಡಗುಣದಿ ಶ್ರೀಮಂತ ಪರವತಿ ಕಾಳವ್ವ ಕೊಂ. ಭುಜಂಗರಾವ ದೇಸಮುಖಿಯವರಿಗೆ ೧೫ನೇ ತಲಿಯ ಮನುಷ್ಯವತನ ಸಿಕ್ಕಿದ್ದು. ಪೇಶವಾಹಿ ಅಮಲಿನೊಳಗೆ ವಿಜಾಪೂರ ಆದಿಲ್‌ಸಾಯಿಯವರು ೯೦೩ ವರ್ಷದಲ್ಲಿ ಜಾಗಿರಸನದು ಮಾಡಿಕೊಟ್ಟರು.

ವಂಶಾವಳಿ :

05_366_BB-KUH

ಟಕ್ಕಳಕಿ ದೇಸಗತಿ :

ವಿಜಾಪುರ ಜಿಲ್ಲೆಯ ಇತರ ದೇಸಗತಿಗಳಲ್ಲಿ ಟಕ್ಕಳಕಿ ದೇಸಗತಿಯು ಒಂದಾಗಿದೆ. ಬಸವನ ಬಾಗೇವಾಡಿ ತಾಲೂಕು ಕೇಂದ್ರದಿಂದ ೭ ಕಿ.ಮೀ. ಅಂತರದಲ್ಲಿರುವ ಟಕ್ಕಳಕಿಯ ಚಿಕ್ಕ ದೇಸಗತಿಯ ಶಾಖೆಯೊಂದನ್ನು ಹೊಂದಿರುತ್ತದೆ. ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಎಂಬ ಗ್ರಾಮದ ಮೂಲನೆಲೆಯನ್ನು ಹೊಂದಿರುವ ಈ ದೇಸಗತಿಯ ವಂಶಜರು ಅಲ್ಲಿಂದ ಸಿಂದಗಿ ತಾಲೂಕಿನ ಕಲಕೇರಿ ಎಂಬ ಗ್ರಾಮದಲ್ಲಿ ಬಂದು ಹಲವು ವರ್ಷಗಳ ಕಾಲ ನೆಲೆ ನಿಂತರು. ಮುಂದೆ ಬಸವನ ಬಾಗೇವಾಡಿ ತಾಲೂಕಿನ ಟಕ್ಕಳಕಿ ಗ್ರಾಮಕ್ಕೆ ಬಂದು ದೇಸಗತಿಯನ್ನು ಮುಂದುವರೆಸಿದ್ದು ಕಂಡುಬರುತ್ತದೆ. ಅಲ್ಲಿಂದ ಮುಂದೆ ಈ ಮನೆತನದ ಮಡಿವಾಳಪ್ಪ ದೇಸಾಯಿ ಎಂಬುವವರು ಬಾಗೇವಾಡಿ ತಾಲೂಕಿನ ಕುದುರಿ ಸಾಲವಾಡಿಗೆ ಎಂಬ ಗ್ರಾಮಕ್ಕೆ ಬಂದು ವಾಸಿಸಲಾರಂಭಿಸಿದರು. ಹೀಗೆ ಟಕ್ಕಳಕೆ ಗ್ರಾಮದಿಂದ ವಲಸೆ ಬಂದ ಈ ದೇಸಾಯಿಯವರ ಮನೆತನಕ್ಕೆ ಕುದುರಿ ಸಾಲವಾಡಗಿ ಗ್ರಾಮದಲ್ಲಿ ಇಂದಿಗೂ ಟಕ್ಕಳಕಿ ದೇಸಾಯಿಯರೆಂದೆ ಗುರುತಿಸಲಾಗುತ್ತಿದೆ.

ದೇಸಾಯರ ಮೂಲ : ಇವರು ರೆಡ್ಡಿ ಸಮಾಜದ ಒಳಪಂಗಡವಾದ ಪಾಕನಾಕ ರೆಡ್ಡಿ ಮೂಲಕ್ಕೆ ಸಂಬಂಧಿಸಿದವರು. ಆದ್ದರಿಂದ ಇವರು ಆಂಧ್ರಪ್ರದೇಶದ ಪಾಕನಾಡು ಪ್ರದೇಶದಿಂದ ವಲಸೆಬಂದ ರೆಡ್ಡಿಗಳೆಂದು ಹೇಳಬಹುದು. ಈ ಪಾಕನಾಡು ರೆಡ್ಡಿ ಅಥವಾ ಪಾಕನಾಟಿ ಕುಲ ಎಂಬ ಶಬ್ದವನ್ನು ಯಾಳವಾರ ಗ್ರಾಮದಲ್ಲಿ ದೊರೆತ ಕ್ರಿ.ಶ. ೧೧೫೮ರ ಶಿಲಾಶಾಸನದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.

ದೇಸಗತಿಯ ಶಾಖೆಗಳು : ಬಾಗೇವಾಡಿ ತಾಲೂಕಿನ ಹಲವಾರು ಚಿಕ್ಕಪುಟ್ಟ ದೇಸಗತಿಗಳು ಮೂಲತಃ ಒಂದೇ ನೆಲೆಯನ್ನು ಹೊಂದಿರುತ್ತವೆ. ಕಾಲಾಂತರದಲ್ಲಿ ಅವುಗಳು ಆಸ್ತಿಯ ಹಂಚಿಕೆಯಿಂದಾಗಿ, ದತ್ತು ಪ್ರಕರಣಗಳಿಂದಾಗಿ ಇನ್ನೊಂದು ಊರಿಗೆ ವಲಸೆ ಹೋಗಿ ನೆಲೆನಿಂತ ನಿದರ್ಶನಗಳನ್ನು ಕಾಣಬಹುದು. ಉದಾ : ಸಿಂದಗಿ ತಾಲೂಕಿನ ಕಲಕೇರಿ ದೇಸಗತಿಯನ್ನು ಮೂಲವಾಗಿ ಹೊಂದಿದ ಹಲವಾರು ಉಪಶಾಖೆಗಳು ಕಂಡುಬರುತ್ತವೆ. ಅವುಗಳಲ್ಲಿ ಟಕ್ಕಳಕಿ, ಹೊನ್ನಳ್ಳಿ, ಮಡಿಕೇಶ್ವರ, ಡವಳಗಿ, ಕೌಲಗಿ ಹಾಗೂ ಕುದರಿಸಾಲವಾಡಗಿ ಗ್ರಾಮಗಳಲ್ಲಿನ ದೇಸಗತಿಗಳ ಮೂಲ ಕಲಕೇರಿ ದೇಸಗತಿಯೊಂದಿಗೆ ಬೆಸೆದುಕೊಳ್ಳುತ್ತದೆ.

ಹೀಗೆ ಬಾಗೇವಾಡಿ ಪ್ರದೇಶದಲ್ಲಿ ಐತಿಹಾಸಿಕ ಮಹತ್ವವನ್ನು ಪಡೆದಿರುವ ಈ ದೇಸಗತಿ ಮನೆತನಗಳು ಗ್ರಾಮ್ಯಾಡಳಿತದ ಸಂಪೂರ್ಣ ಜವಾಬ್ದಾರಿಯನ್ನು ವಹಿಸುವ ಮೂಲಕ ಆರ್ಥಿಕ ವಲಯವನ್ನು ಶ್ರೀಮಂತಗೊಳಿಸಿದ್ದವು. ಉಳುವ ರೈತನಿಂದ ದೇಸಗತಿ ಮನೆತನಕ್ಕೆ ಅಲ್ಲಿಂದ ಮಹಾನ್ ಸಾಮ್ರಾಜ್ಯಗಳ ಖಜಾನೆ ಭರ್ತಿಯಾಗುತ್ತಿತ್ತು. ಚರಿತ್ರೆಯ ಅಧ್ಯಯನ ಅರ್ಥಪೂರ್ಣವಾಗಿಸಬೇಕಾದರೆ ಆಡಳಿತದ ಕೊನೆಯ ಹಂತದ ಇಂಥ ದೇಸಾಯರ ಅಧ್ಯಯನ ಅಗತ್ಯ. ಆ ಹಂತದ ಪ್ರಯತ್ನವಾಗಿಯೇ ಬಾಗೇವಾಡಿಯ ಪ್ರಮುಖ ದೇಸಗತಿಗಳಾದ ಕೊಲ್ಹಾರ, ಗಣಿ, ಯಾಳವಾರ, ಸಾಸನೂರ, ವಡವಡಗಿ ಹಾಗೂ ಟಕ್ಕಳಕಿ ದೇಸಗತಿಗಳ ಸಂಕ್ಷೀಪ್ತ ಪರಿಚಯ ಮಾಡಲಾಗಿದೆ.

ಗ್ರಂಥಋಣ

೧. ಅನ್ನಪೂರ್ಣದೇವಿ ವಿ. ಕಲ್ಲಮಠ (ಅನು) ರಾಜಶೇಖರ ಭೂಸನೂರಮಠ (ಸಂ),೧೯೬೪, ಪ್ರೌಢದೇವರಾಯನ ಕಾವ್ಯ ಕಥಾಸಾರ, ಶ್ರೀ ಮ.ನಿ.ಪ್ರ. ಮೃತ್ಯಂಜಯ ಮಹಾಸ್ವಮಿಗಳು, ಮುರುಘಾಮಠ, ಧಾರವಾಡ

೨. ಬಾಳಣ್ಣ ಸೀಗಿಹಳ್ಳಿ, ೧೯೮೯, ಬೆಳಗಾವಿ ಜಿಲ್ಲೆಯ ವೀರಶೈವ ದೇಶಗತಿಗಳು, ವಿರಶೈವ ಅಧ್ಯಯನ ಸಂಸ್ಥೆ, ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ, ಡಂಬಳ-ಗದಗ

೩. ಚನ್ನಪ್ಪ ಎ., ೧೯೯೪, ಅದೃಶ್ಯ ಕವಿಯ ಪ್ರೌಢದೇವರಾಯನ ಕಾವ್ಯ-ಒಂದು ಅಧ್ಯಯನ, (ಅಪ್ರಕಟಿತ ಎಂ.ಫಿಲ್. ಪ್ರಬಂಧ) ಗುಲ್ಬರ್ಗಾ ವಿಶ್ವವಿದ್ಯಾಲಯ, ಗುಲ್ಬರ್ಗ

೪. ರಾಜೇಂದ್ರ ಅಣ್ಣಾನವರ, ೨೦೦೦, ಅದೃಶ್ಯಕವಿಯ ಜೀವನ ಮತ್ತು ಕೃತಿಗಳು, ದಾಗುಂಡಿ ಪ್ರಕಾಶನ, ದಾಗುಂಡಿ ಮಹಾಂತೇಶ ನಗರ, ರಾಮದುರ್ಗ

೫. ವಿಜಯಕುಮಾರ ಸಂ. ಶೇಕದಾರ, ೨೦೦೬, ವಿಜಾಪುರ ಜಿಲ್ಲೆಯ ದೇಸಗತಿಗಳು ಒಂದು ಅಧ್ಯಯನ, (ಅಪ್ರಕಟಿತ ಪಿಎಚ್.ಡಿ. ಮಹಾ ಪ್ರಬಂಧ), ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ

೬. ವೆಂಕಟರಂಗೋಕಟ್ಟಿ (ಅನು), ೧೯೮೪, ಗ್ಯಾಝಟೀಯರ್ : ಧಾರವಾಡ, ಬೆಳಗಾವಿ, ವಿಜಾಪುರ, ಕಾನಡಾ ಜಿಲ್ಲೆಗಳ, ಏಶಿಯನ್ ಏಜುಕೇಶನಲ್ ಸರ್ವಿಸಿಸ್, ದಹಲಿ

೭. ಶಿವಾನಂದ ವೀರಕ್ತಮಠ, ೧೯೭೮, ಪ್ರೌಢದೇವರಾಯನ ಕನ್ನಡ ಸಾಹಿತ್ಯ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.