ಸಾರ್ವಜನಿಕ ಚಟುವಟಿಕೆಗಳು : ಪ್ರಾಚೀನ ಕಾಲದಿಂದಲೂ ಆಡಳಿತಕ್ಕೆ ಬಂದ ಪ್ರತಿಯೊಂದು ಅರಸು ಮನೆತನದ ಅರಸರು, ರಾಣಿಯರು, ಅಧಿಕಾರಿಗಳು ಸಾರ್ವಜನಿಕ ಚಟುವಟಿಕೆಗಳಲ್ಲಿ ತೊಡಗಿದ್ದರು. ಸತ್ರ, ಕೆರೆ-ಕಾಲುವೆ ಕಟ್ಟಿಸುವುದು, ಬಾವಿ ತೋಡಸುವುದು, ರಸ್ತೆನಿರ್ಮಾಣ, ದೇವಾಲಯ ನಿರ್ಮಾಣ ಮೊದಲಾದ ಸುಧಾರಣಾ ಕಾರ್ಯಗಳನ್ನು ಕೈಕೊಂಡಿದ್ದಾರೆ. ಈ ಪ್ರದೇಶದ ಮುತ್ತಗಿ ಶಾಸನದಲ್ಲಿ ಹತ್ತು ಕಂಬದ ಮನೆಯನ್ನು ಸರ್ವಮಾನ್ಯವಾಗಿ ಪಡೆದು ದೇವರ ಗ್ರಾಮದ ಸತ್ರಕ್ಕೆ ಮಠವಾಗಿ ಬಿಟ್ಟರೆಂದು ಹೇಳಿದೆ.[1] ಯಾಳವರ ಶಾಸನ ಗಂಗೇಶ್ವರ ಸತ್ರವನ್ನು ಉಲ್ಲೇಖಿಸುತ್ತದೆ.[2]

ಈ ಸತ್ರಗಳು ಅನಾಥರಿಗೆ, ವಿದ್ಯಾರ್ಥಿಗಳಿಗೆ ವಸತಿ, ಆಹಾರಗಳನ್ನೊದಗಿಸುತ್ತಿದ್ದವು, ಬ್ರಾಹ್ಮಣರಿಗೆ ಪ್ರತ್ಯಕ ಸತ್ರಗಲಿದ್ದ ಬಗ್ಗೆ ”ಮಂಚಪರ್ವ್ವಂ ಬೆರಸಿ ಬ್ರಾಹ್ಮಣರ್ಗೆ ಸತ್ರಮಂ ದೊಂಕನ ಕೇರಿಯ ನೂರ್ವ್ವರು ಮಹಾಂಜನಗಳು” ನಡೆಯಿಸುತ್ತಿದ್ದುದನ್ನು ಇಂಗಳೇಶ್ವರ ಶಾಸನ ತಿಳಿಸುತ್ತದೆ.[3] ಬ್ರಾಹ್ಮಣರ್ಗ್ಗೆ ಭೋಜನ ಸತ್ರ ನಿಮಿತ್ಯವಾಗಿ ಬೌದ್ಧವಾಡಿಗೆಯ ಪಡುವಗೇರಿಯ ಪ್ರಭು ಕಲ್ಲರಸನಳಿಯ ಮಾಚರಸನ ಮದುವಳಿಗೆ ಮಾಳಿಯಕ್ಕೆ ಬಳುವಳಿಯಿಂದ ಬಂದ ಹಣದಿಂದ ಭೂಮಿಯನ್ನು ಒತ್ತೆ ಹಿಡಿದು ಬಿಟ್ಟಿದ್ದನ್ನು ಬೈರವಾಡಿಗೆ ಶಾಸನ ತಿಳಿಸುತ್ತದೆ.[4]

ಶಿಕ್ಷಣ : ಭಾರತೀಯರು ಬಹು ಹಿಂದಿನಿಂದಲೂ ವಿದ್ಯೆಗೆ ಪ್ರಾಮುಖ್ಯತೆಯನ್ನು ಕೊಡುತ್ತ ಬಂದಿದ್ದಾರೆ. ಗುರುಕುಲ, ದೇವಸ್ಥಾನ, ಮಠ, ಅಗ್ರಹಾರ, ಘಟಿಕಾಸ್ಥಾನ, ಬ್ರಹ್ಮಪುರಿ ಮೊದಲಾದವು ವಿದ್ಯಾ ಕೇಂದ್ರಗಳಾಗಿದ್ದವು. ಅಗ್ರಹಾರದ ಬ್ರಾಹ್ಮಣರು, ಛಾತ್ರರು, ತೆಪೋಧನರು ಅಧ್ಯಯನ-ಅಧ್ಯಾಪನದಲ್ಲಿ ನಿರತರಾಗಿದ್ದರು. ಈ ಪ್ರದೇಶದ ಮುತ್ತಗಿ ಶಾಸನದಲ್ಲಿ ಅಲ್ಲಿಯ ಶ್ರೀ ಲಕ್ಷ್ಮೀನರಸಿಂಹ ದೇವರ ಪಾದಾರಾಧಕ ಶಂಕರಸ್ವಾಮಿ (ಶಂಕರಾರ್ಯ) ಬಹುಶ ಅಲ್ಲಿಯ ದೇವಾಲಯದ ಸ್ಥಾನಪತಿಯಾಗಿದ್ದು ಆತನ ಸಾಹಿತ್ಯ ರಸಪ್ರಪೂರ್ಣ ವಿಪುಳ ಶ್ರೌತಂ ಶ್ರುತಂ ವಾಗ್ವಧೂಟಿಗೆ ಕೈಗನ್ನಡಿ, ಸೂಕ್ತಿ ಸೂನೃತಸುಧಾವರಾಶಿ ಮುಕ್ತಾಳಿ ನಾಲಗೆ ಸ್ವಾರಸ್ವತ ಪಾರವಾರ್ಪುವರ ವಿಪ್ರವಿಖ್ಯಾತ ವಿದ್ವಜ್ಜನಾಳಿಗೆ ಕಲ್ಪ ದ್ರುಮವೆಂದು ವರ್ಣಿತಗೊಂಡಿದ್ದಾನೆ.[5]

ಪ್ರಾಚೀನ ಕರ್ನಾಟಕದಲ್ಲಿ ಸಾಲೋಟಗಿಯ ಶಾಲೆ ಪ್ರಮುಖವಾಗಿತ್ತು.[6] ಅಧ್ಯಯನಕ್ಕಾಗಿ ದೇಶ-ವಿದೇಶಗಳಿಂದ ವಿದ್ಯಾರ್ಥಿಗಳು ಬರುತ್ತಿದ್ದರು. ಅಲ್ಲದೇ ದೇವಾಲಯ, ಮಠ, ಅಗ್ರಹಾರ ಮೊದಲಾದವುಗಳಲ್ಲಿ ವಿದ್ಯೆ ನೀಡುವ ವ್ಯವಸ್ಥೆ ಮಾಡಲಾಗಿತ್ತು. ಮುಖ್ಯವಾಗಿ ಈ ಪ್ರದೇಶದ ಮುತ್ತಗಿಯ ಶಿವಲಿಂಗೇಶ್ವರ ದೇವರ ದೇಗುಲ ಮಠ,[7] ಮಣಿಂಗವಳ್ಳಿಯ ದಕ್ಷಿಣ ಶ್ರೀ ಸಿದ್ಧಕಲಿದೇವೇಶ್ವರ ದೇಗುಲ ಮಠ[8] ವಿದ್ಯಾಕೇಂದ್ರಗಳಾಗಿದ್ದವು. ಮುತ್ತಗಿ, ಬಾಗೇವಾಡಿ, ಹೂವಿನಹಿಪ್ಪರಗಿ, ಇಂಗಳೇಶ್ವರ, ಭೈರವಾಡಿಗೆ, ಹೆಬ್ಬಾಳ ಇವು ಮಹದಗ್ರಹಾರಗಳು ಆಗಿದ್ದವು. ಮೇಲಿನ (ಶಾಸನಗಳ) ಆಧಾರಗಳಿಂದ ಈ ಪ್ರದೇಶದಲ್ಲಿ ಶಿಕ್ಷಣ ವ್ಯವಸ್ಥಿತ ರೀತಿಯಿಂದ ಕೂಡಿತ್ತೆಂದು ಹೇಳಬಹುದು.

ಸಾಹಿತ್ಯ : ಸಾಹಿತ್ಯದ ದೃಷ್ಟಿಯಿಂದಲೂ ಈ ಪರಿಸರದ ಶಾಸನಗಳು ಗಮನಾರ್ಹವಾಗಿವೆ. ಅವುಗಳಲ್ಲಿ ಕಲ್ಯಾಣ ಚಾಳುಕ್ಯ ಅಹವಮಲ್ಲ ತೈಲನ ಪರಾಕ್ರಮವನ್ನು ಮನಗೂಳಿ ಶಾಸನದ ಪದ್ಯವೊಂದು[9]

ಬೆದರದ ಮನ್ನೆಯರ್ಬಿರುತ ಪೋಗದ ಮಂಡಳನಾಥರ್ತ
ರ್ಗದ ನೆಲಗೊಟೆ ಧೂಳಿಪಟವಾಗದ ದುರ್ಗಕುಳಂ ಕುನಂಗಿ ಪಿಂ
ಗದ ಪರಮಂಡಳಂ ನಡುಗಿ ಕಪ್ಪಮನೀಯದ ವೈರಿರಾಯರಾ
ರದತಿನೀ ಬಾಹುಸಾಹಸ ಸಮಗ್ರತೈಗಾಹವಮಲ್ಲ ತೈಲನು

ಶಾಸ್ತ್ರ ಮತ್ತು ವೇದ ಸಾಹಿತ್ಯದಲ್ಲಿ ಬ್ರಹ್ಮನಿಗಿಂತ ಮಿಗಿಲೆನಿಸಿದ ಮುತ್ತಗೆಯ ಮುನ್ನೂರು ಮಹಾಜನರ ಚಿತ್ರ ಅಲ್ಲಿನ ಶಾಸನವೊಂದರಲ್ಲಿ[10] ಕಾವ್ಯಮಯವಾಗಿ ಹೀಗೆ ವರ್ಣಿತವಾಗಿದೆ.

ನೆಗಳ್ದಾ ನಾಲ್ಕು ಮುಖಂಗಳಿಂ ಕಮಲಜಂ ಮನೋದಿದೊದೆಲ್ಲವಂ
ಬಗೆದೊಂದು ಮುಖಂಗಳಿಂ ಸಕಲಲೋಕಂ ಮೆಚ್ಚನಿಚ್ಚಮ ಪ್ರತಿ
ಜ್ಞೆಗಳಿಂದೋದು ವರೆಂದುರುತ್ತಮ ಚುತುರ್ವ್ವೇದಂಗಳೊಳ್ಬ್ರಹ್ಮನಿಂ
ಮಿಗಿಲಪ್ಪ ಪ್ರಭು ಮುಖ್ಯ ಮುತ್ತಗೆಯ ಮುನೂರ್ಬ್ಬರ್ಸ್ಸಮಸ್ತೋರ್ಬ್ಬಿಯೋಳ್

ಅಲ್ಲಿಯ ಸಂಗಮೇಶ್ವರ ದೇವಾಲಯದ ಶಾಸನವೊಂದರಲ್ಲಿ ಪೆರ್ಮಾಡಿದೇವನು ತನ್ನ ತಂದೆಯಂತೆ ಮುಂದಾಲೋಚನೆಯುಳ್ಳ ವ್ಯಕ್ತಿ ತನ್ನ ಬುದ್ಧಿ ಬಲದಿಂದ ಚಾಳುಕ್ಯ ದೊರೆಗಳಲ್ಲಿ ಹೆಚ್ಚಿನ ವಿಶ್ವಾಸವನ್ನು ಪಡೆದು ಅರ್ಹತೆಯಿಂದ ಚಾಳುಕ್ಯ ಮಂಡಲತ್ವವನ್ನು ಪಾಲಿಸಿಕೊಂಡು ಹೋಗಿದ್ದನು.

ನೆಗಳ್ದಂ ರಾಜಸಮಾಜಪೂಜಿತಪದಂ ಪೆರ್ಮಾಡಿದೇವಂ ಧರಿ
ತ್ರಿಗೆ ರಕ್ಷಾರ್ಥದೆ ಸಾಕ್ಷರಧ್ವಜನೆ ಬಂದಿರ್ಪಂತಿರಿರ್ದಂ ಸುವ
ರ್ಣಗವೇಂದ್ರ ಧ್ವಜನೀ ಧರಾವಳಮಯಂ ಶ್ರೀಮಾನಹೇಮಾಚಳಂ[11]

ಪುರುಷರ ವರ್ಣನೆಯಂತೆ ಸ್ತ್ರೀಯರ ವರ್ಣನೆಗಳೂ ಶಾಸನದಲ್ಲಿ ಉಲ್ಲೇಖಿತವಾಗಿದೆ. ಮನಗೂಳಿಯ ಶಾಸನದಲ್ಲಿ[12] ಅಹವಮಲ್ಲ ತೈಲಪನ ತಾಯಿಯಾದ ಭೋಂಥಾದೇವಿಯ ವಿಷಯ ಉಲ್ಲೇಖಿತವಾಗಿದೆ. ಇದು ಒಂದು ಶ್ರೇಷ್ಠ ಕಾವ್ಯವನ್ನು ಓದಿದಂತೆ ಭಾಸವಾಗುತ್ತದೆ.

ಶಾಸನ ಕವಿಗಳು : ಈ ಪರಿಸರದ ಒಟ್ಟು ೮೮ ಶಾಸನಗಳಿದ್ದರೂ, ಶಾಸನಕವಿಗಳನ್ನು ಮತ್ತು ಲಿಪಿಕಾರರನ್ನು ಹೇಳಿರುವುದು ಒಂದೆರಡು ಶಾಸನಗಳಲ್ಲಿ ಮಾತ್ರ. ಮೊದಲನೆಯ ಶಾಸನವು[13] ಇಂಗಳೇಶ್ವರ ಸೋಮನಾಥ ದೇವಾಲಯದಲ್ಲಿಯ ಶಾಸನದ ಕರ್ತೃಹೋರಿಯ ನೀಲಯ್ಯ ಎಂದು ಅದರಲ್ಲಿರುವ ಈ ಸಾಲಿನಿಂದ ತಿಳಿದುಬರುತ್ತದೆ. ಶ್ರೀಮೂಲಸ್ಥಾನ ದೇವರ ದಿವ್ಯ ಶ್ರೀ ಪಾದಪದ್ಮಾರಾಧಕಂ ಶ್ರೀ ಸಾರದಾದೇವಿ ಲಬ್ದವರ ಪ್ರಸಾದಂ ಶ್ರೀಮತ್ ಕಾಸ್ಯಪಗೋತ್ರ ಪವಿತ್ರಂ ಹೋರಿಯ ನೀಲಯ್ಯಂ ಬರೆದ ಶಾಸನಎಂದು ಹೇಳಿದೆ.

೬೨ ಸಾಲುಗಳನ್ನು ಹೊಂದಿರುವ ಈ ಶಾಸನದಲ್ಲಿ ಕವಿಯು ಸ್ರಗ್ಧರೆ, ಮತ್ತೇಭ ವಿಕ್ರೀಡಿತ, ಶಾರ್ದೂಲ ವಿಕ್ರೀಡಿತ, ಉತ್ಪಲಮಾಲೆ ಮುಂತಾದ ವೃತ್ತಗಳನ್ನು ರಚಿಸಿದ್ದಾನೆ. ಇವನು ಕನ್ನಡದೊಂದಿಗೆ ಸಂಸ್ಕೃತವನ್ನು ಚೆನ್ನಾಗಿ ಬಲ್ಲವನಾಗಿದ್ದನು. ಈ ಶಾಸನವನ್ನು ಮಲ್ಲಿಕಾರ್ಜುನ ದೇವರ ಪುತ್ರ ಶ್ರೀ ಸರಸ್ವತೀ ದೇವಿಯರ ಪ್ರಸಾದ ಹೊಡಲ ದಾಮೋಜನ ಮಗಂ ರೇವೋಜಂ ಹೊಯ್ದ ಶಾಸನ ಎಂದು ಹೇಳಲಾಗಿದೆ.

ಎರಡನೆಯದು ಅದೇ ಊರಿನ ನಾರಾಯಣ ಗುಡಿಯ ಪೂರ್ವಗೋಡೆಯ ಮೇಲಿರುವ ಶಾಸನವನ್ನು[14] ಗೋಪಿರಾಜ ಎಂಬುವವನು ರಚಿಸಿದ್ದಾನೆ. ಶಾಸನದ ಕೊನೆಯಲ್ಲಿ ತಾನು ಹರಿತಗೋತ್ರದ ಶೈವಬ್ರಾಹ್ಮಣ ಕವಿ ಎಂದು ಹೇಳಿಕೊಂಡಿದ್ದಾನೆ.

ಗುರುಚರಿತ ಸದಾಶಿವ
ಚರಣಾಂಬುಜಭ್ರಿಂಗ ಹರಿತ ಗೋತ್ರೋದ್ಭವನೋ
ಪ್ಪಿರಲೀ ಶಾಸನಗಬ್ಬಮ
ವಿರಚಿಸಿದಂ ಗೋಪಿರಾಜ ನಿಳೆಗಿಂತೆಸೆದಂ

ಒಟ್ಟು ೪೯ ಸಾಲುಗಳನ್ನು ಹೊಂದಿರುವ ಈ ಶಾಸನದಲ್ಲಿ ೧೮ ಪದ್ಯಗಳಿವೆ. ಸಾಮಾನ್ಯವಾಗಿ ಸೀಮಾ ನಿರ್ದೇಶನ, ದತ್ತಿ ವಿವರಗಳನ್ನು ಗದ್ಯದಲ್ಲಿ ಹೇಳುವುದು ಶಾಸನಗಳ ಕ್ರಮ. ಆದರೆ ಈ ಶಾಸನದಲ್ಲಿ ಅವುಗಳನ್ನು ಅದ್ಯರೂಪದಲ್ಲಿ ಹೇಳಿರುವುದು ಕವಿ ಗೋಪಿರಾಜನ ವೈಶಿಷ್ಟ್ಯವಾಗಿದೆ. ಉದಾ :

ಶ್ರೀವರದ ಗೋಪಿನಾಥಂ
ಗೆ ವೂರಿನ ತೆಲ್ಲಿಗಯ್ವತ್ವಕ್ಕಲು ನಂದಾ
ದೀವಿಗೆಗೆ ಪಳಿಗೆಯಣ್ಣಯಂ
ತಾವನು ನಯದಿಂದ ಮಿತ್ತರಾಚಂದ್ರಾರ್ಕ್ಕಂ[15]

ಈ ಶಾಸನವನ್ನು ಮಣಿಂಗವಳ್ಳಿಯ ರೆಬ್ಬೋಜನ ಮಗ ಕಲ್ಲೋಜ ಹಾಗೂ ಬಮ್ಮೋಜನ ಮಗ ವಾಮೋಜ ಇವರು ಕಂಡರಿಸಿರುತ್ತಾರೆ.

ಆರ್ಥಿಕ ವ್ಯವಸ್ಥೆ :

ಆರ್ಥಿಕ ವ್ಯವಸ್ಥೆಯಲ್ಲಿ ಪ್ರಮುಖವಾಗಿ ಚರ್ಚಿತವಾಗುತ್ತಿರುವ ವಿಷಯಗಳೆಂದರೆ, ಭೂಪ್ರಕಾರಗಳು, ಬೆಳೆಗಳು, ನೀರಾವರಿ, ಭೂಸ್ವಾಮ್ಯ, ಪಶುಸಂಗೋಪನೆ, ಕೈಗಾರಿಕೆಗಳು, ವಾಣಿಜ್ಯ, ವ್ಯಾಪಾರ, ವರ್ತಕರು, ಅಯ್ಯವಳೆ ಐನೂರ್ವರು, ನಾಣ್ಯಗಳು, ತೂಕ ಮತ್ತು ಅಳತೆಗಳು, ಭೂಮಾಪನಗಳು, ತೆರಿಗೆ, ಸುಂಕ ಹೀಗೆ ವಿವಿಧ ವಿಷಯಗಳನ್ನು ಒಳಗೊಂಡಿರುತ್ತದೆ.

ಭೂಮಿ : ಈ ಪರಿಸರದ ಶಾಸನಗಳಲ್ಲಿ ಭೂಮಿಯನ್ನು ಸಾಂಪ್ರದಾಯಿಕವಾಗಿ ಹೊಲ,[16] ಪೊಲ,[17] ಎಂದು ಕರೆಯುವುದರ ಜೊತೆಯಲ್ಲಿ ಕರಿಯನೆಲ,[18] ದೋಣಿಯನೆಲ,[19] ಎಂದು ಕರೆದಿರುವುದು ಉಂಟು. ಅದರಂತೆ ತೋಟವನ್ನು ತೋಟ,[20] ಹೂದೋಟ[21] ಎಂದು ಕರೆದರೆ, ದೇವಾಲಯಗಳಿಗೆ ಸಂಬಂಧಿಸಿರುವ ತೋಟಗಳನ್ನು ಆ ದೇವರ ಹೆಸರಿನಿಂದಲೇ ಕರೆದಿರುವುದನ್ನು ಸಹ ಕಾಣಬಹುದು. ಮುತ್ತಗಿಯ ಶಾಸನದಲ್ಲಿ ವಿಮಳೇಶ್ವರ ದೇವರ ತೋಟ,[22] ಸಿದ್ಧೇಶ್ವರ ತೋಟ,[23] ಮಾಕೇಶ್ವರ ತೋಟಗಳ[24] ಉಲ್ಲೇಖಗಳನ್ನು ಕಾಣಬಹುದಾಗಿದೆ. ವ್ಯಕ್ತಿಗಳ ಹೆಸರಿನಿಂದಲೂ ತೋಟಗಳನ್ನು ಉಲ್ಲೇಖಿಸಿರುವುದು ಈ ಪರಿಸರದ ಶಾಸನಗಳಲ್ಲಿ ಕಂಡುಬರುತ್ತದೆ. ಮುತ್ತಗಿಯ ಒಂದು ಶಾಸನದಲ್ಲಿ ನಿಂಬರಸರ ತೋಟ,[25] ಕೋಟೆರಾಜನ ತೋಟ,[26] ಗೋವಿಂದರಸನ ತೋಟಗಳ,[27] ಉಲ್ಲೇಖಗಳಿವೆ.

ಬಸವನಬಾಗೇವಾಡಿಯ ಪರಿಸರದಲ್ಲಿ ಈ ಭಾಗದ ಪ್ರಸಿದ್ಧ ಬೆಳೆಯಾಗಿರುವ ಜೋಳದ ಉಲ್ಲೇಖವು ಬಾಗೇವಾಡಿ[28] ಮತ್ತು ಮುತ್ತಗಿ[29] ಯಲ್ಲಿರುವ ಶಾಸನಗಳಲ್ಲಿ ಕಂಡುಬರುತ್ತದೆ. ಇದರಿಂದಾಗಿ ದೇವಾಲಯಗಳಿಗೆ ದಾನ ಬಿಡುವ ಸಂದರ್ಭದಲ್ಲಿ ಅಡಕೆ,[30] ಮೆಣಸು,[31] ಎಲೆ,[32] ಭತ್ತ[33] ಬೆಲ್ಲ, ಸಕ್ಕರೆ[34] ಉಲ್ಲೇಖಗಳು ಇರುವುದರಿಂದ ಇವುಗಳನ್ನು ಬೆಳೆಯುತ್ತಿದ್ದರೆಂದು ಗುರುತಿಸಬಹುದಾಗಿದೆ.

ತೋಟಗಳಲ್ಲಿ ಬೆಳೆಯು ಬೆಳೆಗಳಲ್ಲಿ ಹೂವಿನ ತೋಟಗಳಿಗೆ ಪ್ರಥಮ ಪ್ರಾಶಸ್ತ್ಯ ಕೊಟ್ಟಿರುವುದರನ್ನು ಕಾಣಬಹುದಾಗಿದೆ. ಅದರೊಂದಿಗೆ ವೀಳ್ಯೆದೆಲೆಗಳನ್ನು, ಹಣ್ಣುಗಳನ್ನು ಬೆಳೆಯುತ್ತಿದ್ದರು. ತರಕಾರಿಗಳ ಉಲ್ಲೇಖಗಳನ್ನು ಈ ಪರಿಸರದ ಶಾಸನಗಳಲ್ಲಿ ಕಾಣಬಹುದಾಗಿದೆ. ಮುತ್ತಗಿಯ ಶಾಸನದಲ್ಲಿ ಹುಣಮೆಯಮರ[35] ಕುಂಬಳದ ಕಾಯಿ[36] ಮತ್ತು ಬಾಡು (ತರಕಾರಿ) ಉಲ್ಲೇಖ ಕಂಡುಬರುತ್ತದೆ.

ನೀರಾವರಿ ವ್ಯವಸ್ಥೆ : ಈ ಪರಿಸರದ ಶಾಸನಗಳಲ್ಲಿ ಈ ಭಾಗದ ದೊಡ್ಡನದಿಯಾದ ಕೃಷ್ಣಾನದಿಯ ಉಲ್ಲೇಖವು ಹೂವಿನ ಹಿಪ್ಪರಗಿಯ ಕ್ರಿ.ಸ. ೮೬೨ರ ಶಾಸನ[37]ದಲ್ಲಿ ಇದ್ದರೆ, ಬಾಗೇವಾಡಿಯ ಶಾಸನದಲ್ಲಿ ದೋಣಿ ನದಿಯ ಉಲ್ಲೇಖವಿದೆ.[38] ಮುತ್ತಗಿ,[39] ಇಂಗಳೇಶ್ವರ,[40] ಹೂವಿನಹಿಪ್ಪರಗಿ[41]ಯ ಶಾಸನಗಳಲ್ಲಿ ಕೆರೆಗಳ ಉಲ್ಲೇಖವಿದ್ದು, ಯಾಳವಾರ,[42] ಮುತ್ತಗಿಯ ಶಾಸನದಲ್ಲಿ ಹಳ್ಳ[43] ಮತ್ತು ಬಾವಿಯ[44] ಉಲ್ಲೇಖವಿದೆ. ಇನ್ನೊಂದು ಶಾಸನದಲ್ಲಿ ನೇಗಿಲಹಳ್ಳದ ಉಲ್ಲೇಖವನ್ನು ಕಾಣಬಹುದಾಗಿದೆ. ಈ ನದಿಯ ಮೂಲಕ ನಾಲಾಗಳನ್ನು ಮಾಡಿದಂತೆ ತೋರುತ್ತದೆ. ಕೊಲ್ಹಾರದ ಹಿರಿಯಹಳ್ಳ[45] ದ ಪಡುವಣಕ್ಕೆ ಒಂದು ನಾಲಾ ಇದ್ದುದರ ಉಲ್ಲೇಖವಿದೆ.

ಭೂಸ್ವಾಮ್ಯ : ಆರ್ಥಿಕ ವಿಷಯಗಳಲ್ಲಿ ಬುಹು ಚರ್ಚಿತ ವಿಷಯಗಳಲ್ಲಿ ಭೂಸ್ವಾಮ್ಯ ಅಥವಾ ಭೂಮಾಲೀಕತ್ವವು ಯಾರಿಗೆ ಸೆರಿದ್ದು ಎಂಬುದರ ಕುರಿತಾಗಿರುವ ಚರ್ಚೆಗಳು, ಭೂ ಮಾಲಿಕತ್ವವು ರಾಜನಿಗೆ ಸೇರಿತ್ತು ಎಂದು ಕೆಲವರು ವಾದಿಸಿದರೆ, ಇನ್ನೂ ಕೆಲವರು ಅದು ಊಳುವವನಿಗೆ ಸೇರಿತ್ತು ಎಂಬುವುದು. ಈ ಪರಿಸರದ ಶಾಸನಗಳಲ್ಲಿ ದಾನ ಶಾಸನಗಳೇ ಹೆಚ್ಚಾಗಿರುವುದರಿಂದ ವೈಯಕ್ತಿಕವಾಗಿ ಭೂಮಿಯನ್ನು ಹೊಂದಿರುವ ಉಲ್ಲೇಖಗಳು ಇರುವುದನ್ನು ಕಾಣಬಹುದಾಗಿದೆ.

ಆದರೆ ತಮ್ಮ ಸ್ವಂತ ಭೂಮಿ ಇಲ್ಲದಿದ್ದರೂ ಇತರರಿಂದ ಭೂಮಿಯನ್ನು ಕೊಂಡು ದಾನ ನೀಡಿರುವುದನ್ನು ಸಹ ಕಾಣುತ್ತೇವೆ. ಮುತ್ತಗಿಯ ಅಧಿಕಾರಿ ವಿಕ್ರಮಾದಿತ್ಯ ಮತ್ತು ಅವನ ಮಹಾದೇವಿ ಅಲ್ಲಿನ ಮಹಾಜನರಿಂದ ಭೂಮಿಯನ್ನು ಕೊಂಡು ದಾನ ಬಿಟ್ಟಿರುವುದನ್ನು ಅಲ್ಲಿರುವ ಕ್ರಿ.ಶ. ೧೧೧೦ರ ಶಾಸನವೊಂದು ಉಲ್ಲೇಖಿಸುತ್ತದೆ.[46] ಇಂಗಳೇಶ್ವರದ ಕ್ರಿ.ಶ. ೧೧೭೬ರ ಶಾಸನದಲ್ಲಿ ಭೂಮಿಯನ್ನು ಕ್ರಯದಿಂದ ಕೊಂಡು ದೇವರಿಗೆ ಬಿಟ್ಟಿರುವುದನ್ನು ಉಲ್ಲೇಖಿಸುತ್ತದೆ.[47]

ಭೂಮಿಯನ್ನು ಗುತ್ತಿಗೆ ಕೊಡುವ ಪರಿಪಾಟವು ಈ ಪರಿಸರದ ಶಾಸನದಲ್ಲಿ ಉಲ್ಲೇಖವಾಗಿದೆ. ಮುತ್ತಗಿಯ ಒಂದು ಶಾಸನದಲ್ಲಿ ದೇವರ ತೋಂಟದ ಅರಣಿ ಗುತ್ತಿಗೆ ಉಲ್ಲೇಖವಿದ್ದು, ಇದಕ್ಕೆ ಪ್ರತಿಯಾಗಿ ಅವರು ದೇವರಿಗೆ ನಿತ್ಯ ಹೂವಿನಸರ, ಮುಂತಾದವುಗಳನ್ನು ಕೊಡಬೇಕಾಗಿತ್ತು ಎಂಬುವುದನ್ನು ಸಹ ಶಾಸನವು ಹೇಳಿದೆ.[48] ಇನ್ನೊಂದು ಶಾಸನದಲ್ಲಿ ತೋಂಟದರಣಿ ಗುತ್ತಗೆಯ ಉಲ್ಲೇಖವಿದೆ. ಹೀಗಾಗಿ ಭೂಮಿ ಇಲ್ಲದವರು ಅದನ್ನು ಗುತ್ತಿಗೆಯಾಗಿ ಪಡೆದು ಅದಕ್ಕೆ ಪ್ರತಿಫಲವನ್ನು ನೀಡಬೇಕಾಗಿತ್ತು ಎಂಬುವುದು ಸ್ಪಷ್ಟವಾಗುತ್ತದೆ.

ಇದಲ್ಲದೆ, ಭೂಮಾಲೀಕತ್ವವು ವ್ಯಕ್ತಿಗತ, ಸಂಯುಕ್ತ (ಜಂಟಿ) ಹಾಗೂ ಸಾಮೂಹಿಕವಾಗಿರುವುದನ್ನು ಶಾಸನಗಳು ಹೇಳುತ್ತವೆ. ವಿವಿಧ ವೃತ್ತಿ, ಕೆಲಸ-ಕಾರ್ಯಗಳಿಗಾಗಿ ವ್ಯಕ್ತಿಗೆ ಬಿಡುವ ಭೂದಾನ, ದತ್ತಿ ಅವರ ಸ್ವಂತ ಮಾಲಿಕತ್ವಕ್ಕೆ ಸೇರುತ್ತಿತ್ತು. ಅಗ್ರಹಾರಗಳು ಮಹಾಜನರಿಗೆ ಬಿಡುತ್ತಿದ್ದ ಭೂಮಿಯನ್ನು ಜಂಟಿಯಾಗಿರುತ್ತಿತ್ತು. ದೇವಾಲಯಗಳಿಗೆ, ಕೆರೆ ಬಾವಿ, ಸತ್ರ, ಅರವಟ್ಟಿಗೆಗಳಿಗೆ ಬಿಡುವ ದಾನ-ದತ್ತಿಗಳ ಮಾಲಿಕತ್ವ, ಮೇಲ್ವಿಚಾರಣೆ ಆ ಗ್ರಾಮದವರೆಲ್ಲರಿಗೂ ಸೇರಿರುತ್ತಿತ್ತು. ಹೀಗಾಗಿ ಇದು ಸಾಮೂಹಿಕವಾಗಿರುತ್ತಿತ್ತು. ಅಂತಹ ಉಲ್ಲೇಖಗಳ ಈ ಪರಿಸರದ ಅನೇಕ ಶಾಸನಗಳಲ್ಲಿವೆ.

ಪಶುಸಂಗೋಪನೆ : ಒಕ್ಕಲುತನಕ್ಕೆ ಹಾಗೂ ಸಾರಿಗೆಗೆ ಸಹಾಯಕವಾಗುವ ಮತ್ತು ಹಾಲು, ಮೊಸರನ್ನು ಒದಗಿಸುವಂತಹ ಗೋವುಗಳ ಉಲ್ಲೇಖವು ಕೆಲವು ಶಾಸನಗಳಲ್ಲಿ ಬರುತ್ತಿದ್ದು, ಗೋವುಗಳ ಹತ್ಯೆಯು ಮಹಾಪಾಪವೆನಿಸಿದ್ದು, ಬಿಟ್ಟದಾನ ಅಪಹರಿಸುವವರಿಗೆ ಅಂತಹ ದೋಷ ತಗಲುತ್ತದೆಯೆಂಬ ಸಂಗತಿಯು ಹಲವಾರು ಶಾಸನ ಫಲಶ್ರುತಿಗಳಲ್ಲಿವೆ. ಗೋವು ಅಲ್ಲದೆ ಭೂ ಸಾಗುವಳಿ ಮತ್ತಿತರ ಕೃಷಿ ಚಟುವಟಿಕೆಗಳಿಗೆ, ಸಾರಿಗೆಯ ವ್ಯವಸ್ಥೆಗಾಗಿ ಕುದುರೆ, ಎತ್ತು, ಕೋಣ,[49] ಕತ್ತೆಗಳನ್ನು ಉಪಯೋಗಿಸುತ್ತಿದ್ದ ಉಲ್ಲೇಖವು ಈ ಪರಿಸರದ ಶಾಸನಗಳಲ್ಲಿ ಇದೆ. ಮುತ್ತಗಿಯ ಶಾಸನವೊಂದರಲ್ಲಿ ಕುದುರೆಯ ಮೇಲೆ ಸುಂಕ ಹಾಕುತ್ತಿದ್ದುದರ ಉಲ್ಲೇಖವಿದೆ.[50]

ಕೈಗಾರಿಕೆಗಳು : ಈ ಪರಿಸರದ ಇಂಗಳೇಶ್ವರ ಶಾಸನದಲ್ಲಿ ಗಾಣದ ಉಲ್ಲೇಖವಿದೆ.[51] ಹೀಗಾಗಿ ಇಲ್ಲಿ ಎಣ್ಣೆಯ ತಯಾರಿಕೆಯು ನಡೆಯುತ್ತಿತ್ತೆಂದು ತಿಳಿದುಬರುತ್ತದೆ. ಎಣ್ಣೆಯನ್ನು ದೇವರ ದೀಪ ಹಾಗೂ ಆಹಾರ ಪದಾರ್ಥಗಳಿಗೆ ಉಪಯೋಗಿಸುತ್ತಿದ್ದಂತೆ ತೋರುತ್ತದೆ. ಈ ಗಾಣಿಗರೆಲ್ಲರೂ ಕೂಡಿಕೊಂಡು ತಮ್ಮ ದೇಯಾದ ಸಂಘವನ್ನು ಕಟ್ಟಿಕೊಂಡಿರುವುದರ ಉಲ್ಲೇಖವು (ತೆಲ್ಲಿಗರ ಗೊತ್ತಳ) ಇಂಗಳೇಶ್ವರದ ಶಾಸನದಲ್ಲಿದೆ.[52] ಇಂಗಳೇಶ್ವರ, ಯಾಳವಾರ, ಮುತ್ತಗಿ, ಮನಗೂಳಿ ಗ್ರಾಮಗಳಲ್ಲಿ ಗಾಣಗಳಿದ್ದ ಉಲ್ಲೇಖ ಅಲ್ಲಿಯ ಶಾಸನಗಳಲ್ಲಿದೆ.

ಪ್ರಾಚೀನ ಕಾಲದಿಂದಲೂ ದಿನನಿತ್ಯದ ಆಹಾರ ಪಾನೀಯಗಳಲ್ಲಿ ಬಳಕೆಗೊಳ್ಳುತ್ತಿರುವ ಬೆಲ್ಲ – ಸಕ್ಕರೆಗಳಿಗಾಗಿ ಈ ಪರಿಸರದಲ್ಲಿ ಕಬ್ಬು ಬೆಳೆಯುತ್ತಿದ್ದ ಉಲ್ಲೇಖಗಳಿವೆ. ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದ ವಸ್ತುಗಳಲ್ಲಿ ಬೆಲ್ಲ-ಸಕ್ಕರೆಗಳು ಇರುವುದು ಇಂಗಳೇಶ್ವರದ ಕ್ರಿ.ಶ. ೧೧೭೬ರ ಶಾಸನವೊಂದರಲ್ಲಿ ಉಲ್ಲೇಖಿತವಾಗಿದೆ.[53]

ಬಟ್ಟೆ ತಯಾರಿಕೆಯನ್ನು ಈ ಪರಿಸರದ ಶಾಸನಗಳು ಉಲ್ಲೇಖಿಸುತ್ತವೆ. ಕೊಲ್ಹಾರದ ಶಾಸನವು ನೂಲಸುತ್ತುವುದನ್ನು,[54] ಇಂಗಳೇಶ್ವರ ಶಾಸನವು ನೂಲದೆರೆ[55]ಯನ್ನು ಹೇಳಿವೆ. ಕೊಲ್ಹಾರದ ಶಾಸನವು ಮಗ್ಗವನ್ನು ಉಲ್ಲೇಖಿಸುತ್ತದೆ.[56] ಹೀಗಾಗಿ ನೂಲು ಮತ್ತು ಮಗ್ಗಗಳ ಮೇಲೆ ತೆರಿಗೆಯನ್ನು ಹಾಕುತ್ತಿದ್ದರು. ಇವರು ಸಾಲಿಗ ಸಮಯಂಗಳು ಎಂದು ಹೇಳಿಕೊಂಡಿದ್ದಾರೆ.

ಸಾಲಿಗರಲ್ಲಿ ಪಟ್ಟ (ಪಟ್ಟೆ-ರೇಶಿಮೆ) ಸಾಲಿಗರು ರೇಶಿಮೆ ನೆಯ್ಗೆಗೆ ಹೆಸರಾದವರು.[57] ಈ ಪರಿಸರದ ಸಾಲವಾಡಗಿ ಶಾಸನ ಪಟ್ಟ ಸಾಲಿಗರನ್ನು ಉಲ್ಲೇಖಿಸಿದೆ.[58] ಇಂಗಳೇಶ್ವರದ ಒಂದು ಶಾಸನವು ಸಲಿಗದೆರೆಯನ್ನು ಹೇಳಿದೆ.[59] ಇವರು ತಮ್ಮದೇ ಆದ ಸಂಘಗಳನ್ನು ಕಟ್ಟಿಕೊಂಡಿದ್ದರು. ಅವುಗಳಿಗೆ ಸಾಲಿಗಗೊತ್ತಳಿ, ಸಾಲಿಗ ಮುನ್ನೂರ್ವ್ವರು ಎಂದು ಪ್ರಸಿದ್ಧಗೊಂಡಿದ್ದು ಕಂಡುಬರುತ್ತದೆ.

ವ್ಯಾಪಾರಿ ಕೇಂದ್ರಗಳು : ಈ ಪರಿಸರದಲ್ಲಿ ಹಲವಾರು ವ್ಯಾಪಾರಿ ಕೇಂದ್ರಗಳಿದ್ದುದು ಶಾಸನಗಳಿಂದ ತಿಳಿದುಬರುತ್ತದೆ. ಇಂಗಳೇಶ್ವರವು ಆದಿಬಣಂಜು ಪಟ್ಟಣವೆನಿಸಿತ್ತು.[60] ಇದೊಂದು ಪ್ರಮುಖವಾದ ವ್ಯಾಪಾರಿ ಕೇಂದ್ರವಾಗಿತ್ತು. ಅದರಂತೆ ಕೊಲ್ಹಾರ, ಮನಗೂಳಿ, ಮುತ್ತಿಗೆ ಈ ಪರಿಸರದ ಪ್ರಮುಖವಾದ ವ್ಯಾಪಾರಿ ಕೇಂದ್ರಗಳಾಗಿದ್ದವು. ಪ್ರತಿ ಗ್ರಾಮಗಳಲ್ಲಿ ದಿನಿತ್ಯದ ವ್ಯಾಪಾರಕ್ಕಾಗಿ ಅಂಗಡಿಗಳಿರುತ್ತಿದ್ದವು. ಆದಿಬಣಂಜು ಪಟ್ಟಣವಾಗಿದ್ದ ಇಂಗಳೇಶ್ವರದ ರಾಜಬೀದಿಯ ಪಶ್ಚಿಮಕ್ಕೆ ಪೂರ್ವಾಭಿಮುಖವಾಗಿ ಸಾಲು  ಅಂಗಡಿಗಳಿದ್ದವು.[61] ಮುತ್ತಗೆಯ ರಾಜಬೀದಿಯ ಪಡುವಲ ಮಾನ್ಯದಂಗಡಿಗಳು, ಮಾನ್ಯಗೇರಿಯ ಪೂರ್ವಕ್ಕೆ ದಾವಣಸೆಟ್ಟಿಯರ ಅಂಗಡಿಯಿದ್ದ ಉಲ್ಲೇಖ ಶಾಸನದಲ್ಲಿದೆ.[62] ದೇವಾಲಯಗಳಿಗೆ ದಾನಬಿಟ್ಟ ಅಂಗಡಿಗಳೂ ಇದ್ದವು. ಅವುಗಳನ್ನು ದೇವರಂಗಡಿ, ಧರ್ಮದಂಗಡಿಗಳೆಂದು ಕರೆಯಲಾಗಿದೆ. ಬಹುಷಃ ಇವುಗಳಿಗೆ ಕರವಿನಾಯತಿ ಇತ್ತೆಂದು ತೋರುತ್ತದೆ. ಕರಭೂಮಿಯಂಗಡಿಯ ಉಲ್ಲೇಖ ಒಂದು ಶಾಸನದಲ್ಲಿ ಇದೆ.[63]

ಮಾರುಕಟ್ಟೆಯ ಮಾರಾಟವಾಗುತ್ತಿದ್ದ ವಸ್ತುಗಳನ್ನು ಗಮನಿಸಿದರೆ ಅವುಗಳಲ್ಲಿ ದಿನನಿತ್ಯದ ಉಪಯೋಗ ವಸ್ತುಗಳಾದ ಜೋಳ, ಭತ್ತ, ಬೆಲ್ಲ, ಸಕ್ಕರೆ, ಉಪ್ಪು, ಎಲೆ, ಅಡಕೆ, ಬಾಡು, ಕಾಯಿ, ಹಣ್ಣು ಹಂಪಲಗಳು, ಮೆಣಸು, ಅರಿಷಿಣ, ಶುಂಟಿ, ಜೀರಗೆ, ಅಜವಾನ ಮೊದಲಾದ ಸಾಂಬಾರ ಪದಾರ್ಥಗಳು ಹತ್ತಿ ಇವೆಲ್ಲವನ್ನು ಒಳಗೊಂಡಿದ್ದವು. ಈ ಪದಾರ್ಥಗಳನ್ನು ಗಾಡಿ (ಬಂಡಿ), ಕುದುರೆ, ಕತ್ತೆಗಳ ಮೇಲೆ ಹೇರಿಕೊಂಡು ವ್ಯಾಪಾರಕ್ಕೆ ತರುತ್ತಿದ್ದರು. ಈ ಪರಿಸರದ ಇಂಗಳೇಶ್ವರ ಮತ್ತು ಮುತ್ತಗೆಗಳಲ್ಲಿ ರಾಜಬೀದಿಗಳಿದ್ದ ಉಲ್ಲೇಖಗಳಿವೆ.[64] ಹೀಗಾಗಿ ವಿಶಾಲವಾದ ರಸ್ತೆಗಳಿದ್ದುದನ್ನು ಊಹಿಸಿಕೊಳ್ಳಬಹುದಾಗಿದೆ.

ಈ ಪರಿಸರದ ಶಾಸನಗಳಲ್ಲಿ ಮುಂಮುರಿದಂಡಗಳು, ಬಣಂಜಿಗಸೆಟ್ಟಿಗಳು, ಸೆಟ್ಟಿಗುತ್ತರು,[65] ನಕರರು,[66] ವಡ್ಡವ್ಯವಹಾರಿಗಳು,[67] ಗವರೆ-ಗಾತ್ರಿಗರ[68] ಉಲ್ಲೇಖವಿದೆ. ಪ್ರಸಿದ್ಧ ವ್ಯಾಪಾರಿ ಸಂಘವಾಗಿದ್ದ ಅಯ್ಯಾವೊಳೆ ಐನೂರ್ವರ ಉಲ್ಲೇಖವು ಕೊಲ್ಹಾರದ ಶಾಸನದಲ್ಲಿದೆ.

ನಾಣ್ಯಗಳು : ಪ್ರಾರಂಭದಲ್ಲಿ ಕೊಡು-ಕೊಳ್ಳುವ ವ್ಯವಹಾರಕ್ಕಾಗಿ ವಸ್ತುಗಳ ವಿನಿಮಯವನ್ನು ಅನುಸರಿಸುತ್ತಿದ್ದರು. ಕಾಲ ಕಳೆದಂತೆ ನಾಣ್ಯಗಳ ಚಲಾವಣೆಯ ವಿಕಸಿತಗೊಂಡಿತು. ಪೊನ್ನಗದ್ಯಾಣ,[69] ಪಣ,[70] ಗುಳಿಕೆ,[71] ಕಂಟಕಗದ್ಯಾಣ,[72] ಹಾಗ[73]ಗಳ ಉಲ್ಲೇಖವನ್ನು ಶಾಸನಗಳಲ್ಲಿ ಕಾಣಬಹುದಾಗಿದೆ.

ಅಂದು ಬಳಕೆಯಲ್ಲಿದ್ದ ನಾಣ್ಯಗಳ ಸಂಬಂಧವನ್ನು ವ್ಯವಹಾರಗಣಿತದಲ್ಲಿ ರಾಜಾದಿತ್ಯ ಹೀಗೆ ಹೇಳಿದ್ದಾನೆ. ಅವನ ಪ್ರಕಾರ ಗದ್ಯಾಣಕ್ಕೂ ಉಳಿದ ನಾಣ್ಯಗಳಿಗೂ ಇರುವ ಸಂಬಂಧವನ್ನು ಹೀಗೆ ಗುರುತಿಸಬಹುದು.[74]

೪ ಕಾಣಿ – ೧ ವೀಸ
೫ ವೀಸ – ೧ ಹಾಗ
೪ ಹಾಗ – ೧ ಪಟ
೧೦ ಪಟ – ೧ ಗದ್ಯಾಣ

ಲಿಲಾವತಿ ಗಣಿತದಲ್ಲಿ ಅದು ಹೀಗೆ ಹೇಳಿದೆ.

೧ ವರಹ – ೨ ಹೊನ್ನು
೧ ಹೊನ್ನು – ೫ ಹಣ
೧ ಹಣ – ೨ ಅಡ್ಡ
೧ ಅಡ್ಡ – ೨ ಹಾಗ
೧ ಹಾಗ – ೨ ಬೇಳೆ

೧ ಬೇಳೆ – ೨ ವೀಸ

೧ ವೀಸ – ೧ ಅರೆವೀಸ

೧ ಅರೆವೀಸ – ೨ ಕಾಣೆ

೧ ಕಾಣೆ – ೪ ಗಿದ್ದಾಣಿ

ಮತ್ತು ಅಳತೆಗಳು : ಈ ಪರಿಸರದ ಶಾಸನಗಳಲ್ಲಿ ಬೇರೆ ಬೇರೆ ಪ್ರಮಾಣದ ಅಳತೆಗೋಲುಗಳ ಹೆಸರುಗಳಿರುವುದನ್ನು ಕಾಣಬಹುದಾಗಿದೆ. ಭೂಮಾಪನವನ್ನು ಶಾಸನಗಳಲ್ಲಿ ಕೋಲು, ಗೇಣಿ, ಮತ್ತರು ಎಂಬ ಪದಗಳಿಂದ ಗುರುತಿಸಿರುವುದನ್ನು ಕಾಣುತ್ತೇವೆ. ಈ ಪರಿಸರದಲ್ಲಿರುವ ದೇವಾಲಯ, ಗ್ರಾಮ ಅವುಗಳು ಹೊರಡಿಸಿದ ವ್ಯಕ್ತಿಯ ಬಿರುದು ಇಲ್ಲವೆ ಹೆಸರು ಇತ್ಯಾದಿಗಳಿಂದ ಹೆಸರುಗೊಂಡಿರುವುದು ತಿಳಿದುಬರುತ್ತದೆ. ವ್ಯಕ್ತಿಯ ಹೆಸರು, ಬಿರುದಿಗನುಗುಣವಾಗಿ ಬೆಂಕೊಳ್ವನಕೋಲು[75], ಗಡಿಂಬದ ಫಳೆ,[76] ಭರಣದ ಕೋಲು,[77] ಹೆಬ್ಬಾಳ ಗಡಿಂಬ,[78] ಗೇಣು,[79] ಮುಂತಾದವುಗಳನ್ನು ಕಾಣಬಹುದು. ಮಾಣಿಕೇಶ್ವರದ ಕೋಲ ಈ ಭಾಗದ ಬಹಳಷ್ಟು ಶಾಸನಗಳಲ್ಲಿ ಉಲ್ಲೇಖವಾಗಿರುವ ಮಾಪನವಾಗಿದೆ. ಇದು ಇಂಗಳೇಶ್ವರ, ಭೈರವಾಡಗಿ, ಮನಗೂಳಿ, ಯಾಳವಾರ, ಸಾಲವಾಡಗಿಯ ಶಾಸನಗಳಲ್ಲಿ ಕಾಣಬಹುದಾಗಿದೆ. ಈ ಕೋಲುಗಳ ಸಹಾಯದಂದ ಭೂಮಿಯನ್ನು ಕಮ್ಮ, ಮತ್ತರು, ನಿವರ್ತನಗಳಲ್ಲಿ ಅಳೆಯುತ್ತಿದ್ದಂತೆ ತೋರುತ್ತದೆ.

ಇತರ ಪದಾರ್ಥಗಳನ್ನು ತುಂಬಿ ಅಳೆಯುವದಕ್ಕಾಗಿ ಮಾನ,[80] ಗಿಡ್ಡನ ಕೊಳಗ[81]ಗಳನ್ನು ಉಪಯೋಗಿಸುತ್ತಿದ್ದರು. ದ್ರವಪದಾರ್ಥಗಳನ್ನು ಆಳೆಯಲು ಸೊಂಟಿಗೆಯೆಣ್ನೆ[82] ಎಂಬುವುದನ್ನು ಉಪಯೋಗಿಸಿರುವುದನ್ನು ಕಾಣುತ್ತೇವೆ. ಕಾಯಿಪಲ್ಲೆಗಳನ್ನು ಬಾಡು (ಹಿಡಿ) ಸೂಡುಗಳಾಗಿ ಮಾರುತ್ತಿದ್ದರು. ನಾಲನ್ನು ಕಳಿ, ದಾರಗಳಲ್ಲಿ ಅಳೆಯುತ್ತಿದ್ದರು.[83]

ಮನೆ ಮತ್ತು ಇತರ ನಿವೇಶನಗಳ ಉದ್ದಳತೆಗಳನ್ನು ಗೇಣು, ಕಯ್ಯಹಸ್ತ, ಕೈಯಗ[84] ಗಳಿಂದ ಅಳೆಯುತ್ತಿದ್ದರು.

ತೆರಿಗೆಗಳು : ಈ ಪರಿಸರದ ಶಾಸನಗಳಲ್ಲಿ ಸಾಲಿಗದೆರೆ,[85] ಸೆಟ್ಟಿದೆರೆ,[86] ನೂಲದರೆ,[87] ಮಗ್ಗ ಆಯ,[88] ಕಿರುದೆರೆ,[89] ದಣ್ಡಾಯ,[90] ಅರುವಣ್ಣ,[91] ವಡ್ಡರಾವುಳಂ, ಕುದುರೆಯ ಸುಂಕಂ,[92] ಕಿರುಕುಳ ಸುಂಕದಾಯ,[93] ಬಣ್ನಿಗದೆರೆ[94] ಸಾಮಾಜಿಕ ತೆರಿಕೆಗಳಾದ ಕೊಡಗೂಸಿನ ಮದುವೆಗೆ ಹಣ ಹಾಗ ಎಂಬ ಉಲ್ಲೇಖ ಕೋಲ್ಹಾರದ ಶಾಸನದಲ್ಲಿದ್ದು, ಇದು ಬಾಲ್ಯವಿಹಾವನ್ನು ಪ್ರಸ್ತಾಪಿಸುತ್ತದೆ.[95] ಬಾಗೇವಾಡಿಯ ಶಾಸನದಲ್ಲಿ ಮದುವೆ ಮದವಣಿಗನಲ್ಲಿ ಹಾಗ ಮದುವಳೆಗೆಯಲ್ಲಿ ಹಾಗ[96] ಎಂದು ಹೇಳಿರುವುದರಿಂದ ಮದುವೆಯ ಗಂಡು-ಹೆಣ್ಣುಗಳಿಬ್ಬರಿಗೂ ತೆರೆಗೆ ಹಾಕಲಾಗುತ್ತಿತ್ತು ಎಂಬುದು ತಿಳಿದುಬರುತ್ತದೆ. ಅಲ್ಲದೆ ಈ ಪರಿಸರದ ಶಾಸನಗಳಲ್ಲಿ ಕೋಣ ಕುದುರೆಗಳ ಮೇಲೆಯೂ ತೆರಿಗೆಯನ್ನು ಹಾಕಿರುವುದು ಮನಗೂಳಿಯ[97] ಶಾಸನವು ಉಲ್ಲೇಖಿಸಿದೆ.

ಹೀಗೆ ಈ ಪರಿಸರದ ಶಾಸನಗಳು ಧಾರ್ಮಿಕ, ಸಾಮಾಜಿಕ, ಆರ್ಥಿಕವಾಗಿ ಸಮೃದ್ಧವಾದ ವಿಷಯವನ್ನು ಅಭಿವ್ಯಕ್ತ ಮಾಡುತ್ತವೆ. ಈ ಶಾಸನಗಳು ಸ್ಥಳೀಯ ವಿಷಯಗಳನ್ನು ವಿಸ್ತೃತವಾಗಿ ಅಧ್ಯಯನಿಸಲು ಮುಖ್ಯ ಆಕರಗಳಾಗಿವೆ. ಮೇಲಿನವು ಕೆಲವು ಉದಾಹರಣೆಗಳು ಮಾತ್ರ.

[1] ನಾಗೇಗೌಡ ಎಚ್.ಎಲ್., ೧೯೬೪, ಅದೇ, ಪು. ೩೫೭-೯೧

[2] S.I.I., XV, 152, Muttagi (B. Bagewadi Tq.), 1192A.D.

[3] Ibid, 116, Yalavar (B. Bagewadi Tq.), 1222 A.D. ಮತ್ತು ಕೊಪ್ಪ ಎಸ್. ಕೆ., ಅದೇ, ಪು. ೧೭೫

[4] Ibid, 15, Ingaleshvar (B. Bagewadi Tq.), 1137 A.D.

[5] Ibid, 151, Bairavadagi (B. Bagewadi Tq.), 1191 A.D.

[6] E.I., XV, P. 26, Muttagi (B. Bagewadi Tq.), 1189 A.D.

[7] Ibid, P. 26, Salotagi (Indi Tq.), 948 A.D.

[8] S.I.I., XV, 97, Muttagi (B. Bagewadi Tq.), 1158 A.D.

[9] EI, V, P.9 Managuli (B. Bagewadi Tq.), 1161 A.D.

[10] S.I.I., XV, 111, Muttagi (B. Bagewadi Tq.), 1165 A.D.

[11] Ibid,

[12] EI, V, P.9 Managuli (B. Bagewadi Tq.), 1161 A.D.

[13] S.I.I., XV, 129, Ingaleshvar (B. Bagewadi Tq.), 1176 A.D.

[14] Ibid, 196, Ingaleshvar (B. Bagewadi Tq.), 1265 A.D.

[15] Ibid,

[16] S.I.I., XV, 97, Muttagi (B. Bagewadi Tq.), 1158 A.D.

[17] Ibid, XI-i, 98, Bakod (B. Bagewadi Tq.), 1062 A.D.

[18] Ibid,

[19] Ibid, XV, 83 B. Bagewadi (B. Bagewadi Tq.), 1049 A.D.

[20] Ibid, 532, Managuli (B. Bagewadi Tq.), 1071 A.D.

[21] Ibid, 12, Ingaleshvar (B. Bagewadi Tq.), 1128 A.D.

[22] Ibid, 24, Muttagi (B. Bagewadi Tq.), 1142 A.D.

[23] Ibid,

[24] Ibid,

[25] Ibid,

[26] Ibid,

[27] Ibid,

[28] Ibid, 112, B. Bagewadi (B. Bagewadi Tq.), 1169 A.D.

[29] Ibid, 111, Muttagi (B. Bagewadi Tq.), 1165 A.D.

[30] Ibid, 129, Ingaleshvar (B. Bagewadi Tq.), 1176 A.D.

[31] Ibid,

[32] Ibid,

[33] Ibid, 170, Managuli (B. Bagewadi Tq.), 1223 A.D.

[34] Ibid,

[35] Ibid, 99, Muttagi (B. Bagewadi Tq.), 1159 A.D.

[36] Ibid, 545, Muttagi (B. Bagewadi Tq.), 1165 A.D.

[37] S.I.I, XI-i, 8, H. Hipparagi (B. Bagewadi Tq.), 862 A.D.

[38] Ibid, 83, B. Bagewadi (B. Bagewadi Tq.), 1049 A.D.

[39] Ibid, XV, 111, Muttagi (B. Bagewadi Tq.), 1165 A.D.

[40] Ibid, 129, Ingaleshvar (B. Bagewadi Tq.), 1176 A.D.

[41] S.I.I., XI-i, 9, H. Hipparagi (B. Bagewadi Tq.), 862 A.D.

[42] Ibid, XV, 166, Yalavar (B. Bagewadi Tq.), 1222 A.D.

[43] Ibid, 111, Muttagi (B.Bagewadi Tq.), 1165 A.D.

[44] Ibid, XI-i, 9, H. Hipparagi (B. Bagewadi Tq.), 862 A.D.

[45] Ibid, XV, 169, Kolhar (B. Bagewadi Tq.), 1223 A.D.

[46] E.I., XV, p. 25-26, Muttagi (B. Bagewadi Tq.), 1110 A.D.

[47] S.I.I., XV, 99, Ingaleshvar (B. Bagewadi Tq.), 1176 A.D.

[48] Ibid, XV, 99, Muttagi  (B. Bagewadi Tq.), 1159 A.D.

[49] Ibid, 646, Managuli  (B. Bagewadi Tq.), 12th C.A.D.

[50] Ibid, 104, Muttagi (B. Bagewadi Tq.), 1161A.D.

[51] Ibid, 12, Ingaleshvar (B. Bagewadi Tq.), 1128 A.D.

[52] Ibid, 129, Ingaleshvar (B. Bagewadi Tq.), 1176 A.D.

[53] Ibid

[54] Ibid, XV, 169 Kolhar  (B. Bagewadi Tq.), 1223 A.D.

[55] Ibid, 129, Ingaleshvar (B. Bagewadi Tq.), 1176 A.D.

[56] Ibid, 169, Kolhar (B. Bagewadi Tq.), 1223 A.D.

[57] ಕೊಪ್ಪ, ಎಸ್. : ಕೆ. ಅದೇ ಪು. ೨೧೧

[58] S.I.I., XV, 46, IInd Jagadekamalla A.D.

[59] Ibid, 129, Ingaleshvar (B. Bagewadi Tq.), 1176A.D.

[60] Ibid, 195, Ingaleshvar (B. Bagewadi Tq.), 1265 A.D.

[61] Ibid

[62] Ibid, 24, Muttagi  (B. Bagewadi Tq.), 1142 A.D.

[63] Ibid

[64] Ibid

[65] Ibid

[66] Ibid

[67] Ibid

[68] Ibid

[69] Ibid

[70] Ibid

[71] Ibid, 15, B. Bagewadi (B. Bagewadi Tq.), 1137 A.D.

[72] Ibid

[73] Ibid, 169, Kolhar (B. Bagewadi Tq.), 1223 A.D.

[74] ಕೊಪ್ಪ ಎಸ್, ಅದೇ, ಪು. ೨೨೧

[75] S.I.I., XV, 151, Bhairavadagi (B. Bagewadi Tq.), 1191 A.D.

[76] E.I., V, No. 3 A, p.18, Hebbal (B.Bagewadi Tq.), 1161 A.D.

[77] S.I.I., XV, 129, Ingaleshvar (B. Bagewadi Tq.), 1176 A.D.

[78] E.I., V, No. 3 A p. 18, Hebbal  (B. Bagewadi Tq.), 1161  A.D.

[79] S.I.I., XV, 129 Ingaleshvar (B. Bagewadi Tq.), 1176 A.D.

[80] Ibid, 112, B. Bagewadi (B. Bagewadi Tq.), 1169 A.D.

[81] Ibid

[82] Ibid, 169, Kolhar (B. Bagewadi Tq.), 1223 A.D.

[83] ಕೊಪ್ಪ ಎಸ್. ಕೆ, ಅದೇ

[84] S.I.I., XV, 169, Kolhar  (B. Bagewadi Tq.), 1223 A.D.

[85] S.I.I., XV, 129, 1176 A.D.

[86] Ibid

[87] Ibid

[88] Ibid, 169, Ingaleshvar (B. Bagewadi Tq.), 1223 A.D.

[89] Ibid, XI-i 40,  Narasalagi (B. Bagewadi Tq.), 965 A.D.

[90] Ibid

[91] Ibid, XV, 24 Muttagi (B. Bagewadi Tq.), 1142 A.D.

[92] Ibid, 604, 12th C.A.D.

[93] Ibid, 646, Managuli (B. Bagewadi Tq.), 12th C.A.D.

[94] Ibid, 152, Muttagi (B. Bagewadi Tq.), 1192 A.D.

[95] Ibid, 169, Kolhar (B. Bagewadi Tq.), 1223 A.D.

[96] Ibid, 112, B. Bagewadi (B. Bagewadi Tq.), 1169 A.D.

[97] Ibid, 646, Managuli (B. Bagewadi Tq.), 12th C.A.D.