ಐತಿಹಾಸಿಕ ಹಿನ್ನೆಲೆಯಲ್ಲಿ ರಾಜಕೀಯ ಮತ್ತು ಆಡಳಿತದ ಮಹತ್ವವನ್ನು ಪಡೆದುಕೊಳ್ಳಬೇಕಾದರೆ, ಅದಕ್ಕೆ ಧಾರ್ಮಿಕ, ಸಾಮಾಜಿಕ, ಆರ್ಥಿಕ ವಲಯಗಳ ಪ್ರಾಮುಖ್ಯತೆಯನ್ನು ಪರಿಗಣಿಸಬೇಕಾಗುತ್ತದೆ. ಒಂದು ವ್ಯವಸ್ಥಿತ ಸಾಮ್ರಾಜ್ಯದ ನಿಲುವುಗಳಲ್ಲಿ ಸಾಂಸ್ಕೃತಿಕವಾಗಿ ವಿಸ್ತಾರ ಪಡೆದುಕೊಂಡಿರುವ ಇವುಗಳ ಅಭಿವೃದ್ಧಿ ಬಹಳ ಮಹತ್ವದ್ದು. ಬಸವನ ಬಾಗೇವಾಡಿ ಪರಿಸರದ ಹೆಚ್ಚಿನ ಶಾಸನಗಳು ಈ ವಲಯಗಳನ್ನೇ ಪರಿಚಯಿಸುತ್ತವೆ. ಆದ್ದರಿಂದ ಇತಿಹಾಸ ಅಧ್ಯಯನದಲ್ಲಿ ಧಾರ್ಮಿಕ, ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆ ಆಡಳಿತವನ್ನು ನಿರುಪಿಸುತ್ತವೆ.

ಧಾರ್ಮಿಕ ವ್ಯವಸ್ಥೆ :

ಭಾರತವು ಅನೇಕ ಧರ್ಮಗಳ ತವರೂರು, ಧಾರ್ಮಿಕ, ಆಚಾರ, ವಿಚಾರಗಳು ಭಾರತೀಯರಲ್ಲಿ ಹುಟ್ಟಿ ಬೆಳದಷ್ಟು ಬೇರೆ ಜನಾಂಗಗಳಲ್ಲಿಲ್ಲ. ಇವರು ಆರಾಧಿಸುತ್ತಿರುವ ನಾನಾ ದೇವತೆಗಳು ಮಾನವ ಜೀವನದ ಭಿನ್ನ ಪ್ರಕೃತಿ ಮತ್ತು ಅಭಿರುಚಿಯ ನಿದರ್ಶನಗಳಾಗಿವೆ. ಭಾರತದ ಒಂದು ಭಾಗವಾಗಿರುವ ಕರ್ನಾಟಕವೂ ಇದಕ್ಕೆ ಹೊರತಾಗಿರಲಿಲ್ಲ. ಇಲ್ಲಿಯು ನಾನಾ ದೇವತೆಗಳಿಗೆ ಪ್ರಾಶಸ್ತ್ಯ ಬಂದಿದೆ. ಅದರಂತೆ ಕರ್ನಾಟಕದ ಒಂದು ಸಣ್ಣ ಭಾಗವಾಗಿರುವ ಬಾಗೇವಾಡಿ ಪರಿಸರದಲ್ಲೂ ಶೈವ, ವೈಷ್ಣವ, ಜೈನ ಮತಗಳು ನೆಲೆಯೂರಿ ಬೆಳೆಯುತ್ತ ಬಂದವು. ಇಂತಹ ಅನೇಕ ಧರ್ಮಗಳು ಈ ಪರಿಸರದಲ್ಲಿ ಬೆಳಗಿದವು. ಈ ನಾಡಿನ ಶಾಸನಗಳಲ್ಲಿ ಉಲ್ಲೇಖವಾಗಿರುವ ದೇವಾಲಯಗಳಲ್ಲಿ ನೀಲಕಂಠ ಮಲ್ಲಿನಾಥ, ಸೋಮನಾಥ, ಗೋಪಾಲದೇವರ, ಮಲ್ಲಿಕಾರ್ಜುನದೇವ, ಮೂಲಸ್ಥಾನ, ಸೋಮೇಶ್ವರ, ಭೋಗೇಶ್ವರ, ಚೆನ್ನಕೇಶವ, ರೇವಣೇಶ್ವರ, ಹೊರಯಮೇಶ್ವರ ಮುಂತಾದವು. ಮುಖ್ಯವಾಗಿ ಬಾಗೇವಾಡಿಯಲ್ಲಿ ಸಂಗಮೇಶ್ವರ, ಮಲ್ಲಿಕಾರ್ಜುನ, ಗಣಪತಿ, ಬೊಂತೇಶ್ವರ ದೇವಾಲಯಗಳಿವೆ. ಹೆಬ್ಬಾಳ ಗ್ರಾಮದಲ್ಲಿರುವ ಸರಸ್ವತಿ ದೇವಾಲಯವು ಪ್ರಮುಖವಾದುದು. ಕರ್ನಾಟಕದ ದೊರೆಗಳ ಉದಾರ ದೋರಣೆ ಎಂದರೆ ಪರಮತ ಸಹಿಷ್ಣುತೆಯು ಒಂದು. ಇದರಿಂದ ಇಲ್ಲಿ ಎಲ್ಲ ಧರ್ಮದವರಿಗೂ ಅವಕಾಶವಿತ್ತು.

ಬಸವಣ್ಣನವರ ಜನ್ಮ ಸ್ಥಳವಾದ ಬಾಗೇವಾಡಿಯು ಎಲ್ಲ ಧರ್ಮಗಳ ಆಗರವು ಆಗಿತ್ತು. ಇಲ್ಲಿ ಶೈವ, ವೈಷ್ಣವ, ಜೈನ ದೇವಾಲಯಗಳನ್ನು ಇಂದಿಗೂ ಕಾಣಬಹುದಾಗಿದೆ. ಮುತ್ತಿಗಿ ಲಕುಲೀಶ್ವರ ಕೇಂದ್ರವಾಗಿತ್ತು. ಇಂಗಳೇಶ್ವರ ಶೈವ, ವೈಷ್ಣವ ಹಾಗೂ ಜೈನ ಧರ್ಮದ ಆಗರವಾಗಿತ್ತು.

ಬೌದ್ಧಧರ್ಮ : ಬಾಗೇವಾಡಿಯ ಪರಿಸರದಲ್ಲಿ ಬೌದ್ಧ ಧರ್ಮದ ಕುರುಹುಗಳು ಕಂಡುಬರದಿದ್ದರೂ ಕ್ರಿ.ಶ. ೧೧೯೧ರ ಶಾಸವೊಂದರಲ್ಲಿ

[1] ಭೈರವಾಡಿಗೆಯನ್ನು ಬೌದ್ಧವಾಡಿಗೆ ಎಂದು ಕರೆದಿರುವುದರಿಂದ ಅದು ಬೌದ್ಧರು ನೆಲಸಿದ ಗ್ರಾಮವಾಗಿರಬೇಕೆಂದು ವಿದ್ವಾಂಸರ ಅಭಿಪ್ರಾಯವಾಗಿದೆ.[2] ಇದನ್ನು ಒಪ್ಪಿದರೆ ಬಾಗೇವಾಡಿ ತಾಲೂಕನಲ್ಲಿ ಬೌದ್ಧ ಧರ್ಮದ ಕರುಹುಗಳು ಇದ್ದಂತಾಗುತ್ತವೆ.

ಜೈನಧರ್ಮ : ಈ ಪರಿಸರದ ಹೂವಿನ ಹಿಪ್ಪರಗಿ[3] ಮತ್ತು ಇಂಗಳೇಶ್ವರ[4] ಪ್ರಮುಖ ಜೈನ ಕೇಂದ್ರಗಳಾಗಿದ್ದವು. ಹೂವಿನ ಹಿಪ್ಪರಗೆ ಶಾಸನವೊಂದರಲ್ಲಿ ರೆಮ್ಮರಸ, ಹಬುವಿಠ್ಠರಸ, ರೇಚರಸರು ಶ್ರವಣರ ಆಹಾರಕ್ಕಾಗಿ ದೇವಚಂದ್ರ ದೇವನಿಗೆ ಭೂಮಿಯನ್ನು ದಾನವಾಗಿ ನೀಡಿದ್ದನ್ನು ತಿಳಿಸಿದೆ.[5] ಇಂಗಳೇಶ್ವರದಲ್ಲಿ ಚಂದ್ರಪ್ರಭ ಬಸದಿಯ ಮುಂಭಾಗದಲ್ಲಿ ವಿಭುಶಾಂತಿ ಪಂಡಿತನು ಮಲ್ಲಿನಾಥ ಬಸದಿಮಾಡಿಸಿದುದಾಗಿ ಅಲ್ಲಿಯ ಶಾಸನದಿಂದ ತಿಳಿದುಬರುತ್ತದೆ.[6] ಇಲ್ಲಿ ಹಲವಾರು ಸಮಾಧಿ ಮರಣ ಮತ್ತು ನಿಶಿಧಿಗಳ ಉಲ್ಲೇಖವು ದೊರೆಯುತ್ತದೆ. ಇಂಗಳೇಶ್ವರದ ಶಾಂತಿದೇವ ಮಾಘಮಾಸದ ಬಹುಳ ಷಷ್ಠಿ ಸಿತವಾರದ ಅರ್ದೋದಯದಲ್ಲಿ ವಿಭು ವಿಳಾಸದಿಂದ ಸುರಪದವನ್ನು ಪಡೆದ ಸಂಗತಿ ಅಲ್ಲಿನ ಶಾಸನದಲ್ಲಿದೆ[7] ಅಲ್ಲಿಯ ಇನ್ನೊಂದು ಶಾಸನದಲ್ಲಿ ಮಾಘಣಂದಿ ಮುನಿಪಭಟ್ಟಾರಕರು ಸಮಾಧಿ ವಿಧಿಯಿಂದ ಸುರಲೋಕ ಪಡದ ಉಲ್ಲೇಖವಿದೆ.[8]  ಕ್ರಿ.ಶ. ೧೨೨೪ರ ಶಾಸನದಲ್ಲಿ ಸಿದ್ಧಯೋಗ ಸುಮೂಹರ್ತದಲ್ಲಿ ಸತ್ಯಣ್ಣ ಸಂಸ್ಪಸನ ವಿಧಿಯಿಂದ ಸಮಾಧಿ ಹೊಂದಿರುವುದನ್ನು ತಿಳಿಸಿದೆ.[9] ಚಂದ್ರಪ್ರಭದೇವರ ಶಿಷ್ಯ ಪೆಂಡರ ಬಾಚಿ ಮತ್ತಬ್ಬೆ ಶಕ ೧೧೧೭ಆನಂದ ಸಂವತ್ಸರದ ಚೈತ್ರ ಬಹುಳ ಬಿದಿಗೆ ವಡ್ಡವಾರದಾ ದಿನದಲ್ಲಿ ಸ್ವರ್ಗಕ್ಕೆ ಹೋದಳೆಂದು ಹೇಳಿದೆ.[10] ಹೀಗೆ ಈ ಪರಿಸರದ ಹಲವಾರು ಶಾಸನಗಳಲ್ಲಿ ಜೈನ ಧರ್ಮಕ್ಕೆ ಸಂಬಂಧಿಸಿದ ಉಲ್ಲೇಖಗಳು ಬಂದಿವೆ. ಬಾಗೇವಾಡಿಯ ಹನುಮಾನ ದೇವಾಲಯದ ಮುಂದಿನ ಅಗಸಿದ್ವಾರದ ಒಳಾವರಣದಲ್ಲಿರುವ ಕೋಣೆಯಲ್ಲಿ ಜೈನಮೂರ್ತಿಗಳು ಕಂಡುಬರುತ್ತವೆ. ಈಗಿನ ಹನುಮಾನ ದೇವಾಲಯದ ಪ್ರವೇಶದ್ವಾರದ ಲಲಾಟಬಿಂಬದಲ್ಲಿ ಜಿನ ಶಿಲ್ಪವಿದೆ. ಈ ದೇವಾಲಯ ಪ್ರಾಚೀನ ಕಾಲದಲ್ಲಿ ಜೈನ ಬಸದಿಯಾಗಿತ್ತೆಂದು ಗುರುತಿಸಬಹುದಾಗಿದೆ.

ವೈಷ್ಣವ ಧರ್ಮ : ಈ ಪರಿಸರದಲ್ಲಿ ಶಾಸನೋಕ್ತವಾಗಿ ಒಟ್ಟು ಏಳು ವೈಷ್ಣವ ದೇವಾಲಯಗಳಿದ್ದು, ಅವುಗಳಲ್ಲಿ ಪ್ರಮುಖ ವೇಷ್ಣವ ಕೇಂದ್ರಗಳೆಂದರೆ ಮುತ್ತಗಿ, ಇಂಗಳೇಶ್ವರ, ಮನಗೂಳಿ ಮತ್ತು ಬಾಗೇವಾಡಿ. ಈ ನಾಲ್ಕು ಗ್ರಾಮಗಳು ಅಂದು ಪ್ರಮುಖ ಅಗ್ರಹಾರಗಳಾಗಿದ್ದವು.

ರಾಷ್ಟ್ರಕೂಟ ಅಮೋಘವರ್ಷ ಜ್ಯೋತಿಷ್ಯ ಶಕುನ, ನಿಮಿತ್ತಗಳನ್ನು ಬಲ್ಲ ಗೊಲೆಯ ಭಟ್ಟನಿಗೆ ಹೂವಿನ ಹಿಪ್ಪರಿಗಿ ಗ್ರಾಮವನ್ನು ದತ್ತಿ ಬಿಟ್ಟಿರುವ ಸಂಗತಿಯನ್ನು ಹೇಳಿದೆ. ಇದು ಈ ಪರಿಸರದ ಪ್ರಾಚೀನ ಉಲ್ಲೇಖವಾಗಿದೆ.[11] ಅನಂತರ ಅಗ್ರಹಾರ ಮುತ್ತಗಿಯಲ್ಲಿ ಸೋವಿಸೆಟ್ಟಿಯ ತಂದೆ ಚಟ್ಟಿಸೆಟ್ಟಿ ನಿರ್ಮಿಸಿದ ಉತ್ತರ ಮುಖದ ಪ್ರಸನ್ನ ಚೆನ್ನಕೇಶವ ದೇವಾಲಯಕ್ಕೆ ಅನೇಕ ದಾನಗಳನ್ನು ಬಿಡಲಾಗಿದೆ.[12] ಸೋವಿಸೆಟ್ಟಿಯ ಅಜ್ಜ ಕಹಿಸೆಟ್ಟಿಯಿಂದ ನಿರ್ಮಿತವಾದ ದಕ್ಷಿಣ ಮುಖದ ಚೆನ್ನಕೇಶವ ದೇವಾಲಯಕ್ಕೆ ಪಟ್ಟಸಾಹಾಣಿ ಹಿರಿಯ ದಂಡನಾಯಕ ಬ್ರಹ್ಮದೇವಯ್ಯನು ಮಣಿಯೂರ ಗ್ರಾಮವನ್ನು ದಾನ ಬಿಟ್ಟಿದ್ದಾನೆ.[13] ಕ್ರಿ.ಶ. ೧೧೮೯ರಲ್ಲಿ ಚೌಡಿಸೆಟ್ಟಿ ಪ್ರತಿಷ್ಠೆ ಮಾಡಿದ ಮುತ್ತಗೆಯ ಲಕ್ಷ್ಮೀನರಸಿಹದೇವರಿಗೆ ಪ್ರತಾಪ ಚಕ್ರವರ್ತಿ ಭಿಲ್ಲಮದೇವರಸ ಮುತ್ತಗೆ – ೩೦ರಲ್ಲಿ ಬಿವವೂರ ಗ್ರಾಮವನ್ನು ದಾನಬಿಟ್ಟ ವಿಷಯ ಅಲ್ಲಿಯ ಕ್ರಿ.ಶ. ೧೧೪೭ರ ಶಾಸನದಿಂದ ತಿಳಿದುಬರುತ್ತದೆ.[14] ಬಾಗೇವಾಡಿಯ ಚೆನ್ನಕೇಶವ,[15] ಮನಗೂಳಿಯ ಚೆನ್ನಕೇಶ್ವರ,[16] ಇಂಗಳೇಶ್ವರದ ಗೋಪಿನಾಥ[17] ಈ ಪರಿಸರದ ಪ್ರಮುಖ ವೈಷ್ಣವ ದೇವಾಲಯಗಳು. ಅರಸರು ಮತ್ತು ಅಧಿಕಾರಿಗಳು ಈ ದೇವಾಲಯಗಳಿಗೆ ದಾನ ಬಿಟ್ಟಿರುವದನ್ನು ಶಾಸನಗಳು ಉಲ್ಲೇಖಿಸಿವೆ.

ಶೈವಧರ್ಮ : ಈ ಪರಿಸರದಲ್ಲಿ ಒಟ್ಟು ೨೦ಕ್ಕೂ ಹೆಚ್ಚು ಶಾಸನೋಕ್ತ ಶೈವ ದೇವಾಲಯಗಳಿವೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ ಸಾಲವಾಡಗಿಯ ಬಸವೇಶ್ವರ, ಹೊರಯಮೇಶ್ವರ[18] ಇಂಗಳೇಶ್ವರದ ಕಲ್ಮೇಶ್ವರ, ಸೋಮನಾಥ[19] ಬಾಗೇವಾಡಿಯ ಸೋಮೇಶ್ವರ,[20] ಮುತ್ತಗಿಯ ರಾಮೇಶ್ವರ,[21] ಹೆಬ್ಬಾಳದ ಮಲ್ಲಿಕಾರ್ಜುನ[22] ಮುಂತಾದವು ಪ್ರಮುಖ ಶೈವ ದೇವಾಲಯಗಳು. ಈ ದೇವಾಲಯಗಳಿಗೂ ದತ್ತಿ ಬಿಟ್ಟಿರುವುದು ಶಾಸನಗಳಿಂದ ವ್ಯಕ್ತವಾಗುತ್ತದೆ. ಇದರಿಂದ ಈ ತಾಲೂಕಿನಲ್ಲಿ ಶೈವಧರ್ಮವು ಪ್ರಭಲವಾಗಿದ್ದುದಕ್ಕೆ ಇನ್ನೂ ಹಲವಾರು ಉದಾಹರಣೆಗಳಿವೆ.

ಲಕುಲೀಶ / ಪಾಸುಪತ : ಮುತ್ತಗಿಯ ಎರಡು ಶಾಸನಗಳಲ್ಲಿ ಲಕುಲೀಶ್ವರ ಗುರುಪರಂಪರೆಯ ಉಲ್ಲೇಖವಿದೆ.[23] ಇದರಿಂದ ಮುತ್ತಗೆ ಗ್ರಾಮವು ಲಕುಲಿಶ್ವರ ಕೇಂದ್ರವಾಗಿತ್ತೆನ್ನಲು ಅವಕಾಶವಿದೆ. ಬಾಗೇವಾಡಿಯ ಶಾಸನದಲ್ಲಿ ಪಾಸುಪತ ಯೋಗಾಚಾರ್ಯ ಜ್ಞಾನರಾಶಿ ವ್ಯಾಖ್ಯಾನದೇವರ ಉಲ್ಲೇಖವಿದೆ.[24] ಇವರು ಸ್ಥಳೀಯ ಸೊಮೇಶ್ವರ ದೇವಾಲಯದ ಆಚಾರ್ಯರಾಗಿದ್ದರು. ಮನಗೂಳಿಯ ಶಾಸನ ಅಲ್ಲಿದ್ದ ಕಲಿದೇವಾಚಾರ್ಯ ಸದ್ಯೋಜಾತ ಪಂಡಿತದೇವರನ್ನು ಭುಜಂಗಾವಳಿ ಕುಳತಿಳಕ ಕಾಳಾಮುಖ ನೈಷ್ಠಿಕರೆಂದು ಕರೆದಿದೆ.[25]

ಪಾಶುಪತ ಕಾಳಮುಖರಲ್ಲಿ ಶಕ್ತಿಪರ್ಷ್ಟೆ ಮತ್ತು ಸಿಂಹಪರ್ಷೆಗಳೆಂಬ ಎರಡು ಶಾಖೆಗಳಿದ್ದವು. ಶಕ್ತಿಪರ್ಷೆ ಭುಜಂಗಾವಳಿಯ ಮೂಲಪುರುಷ ಭುಜಂಗದೇವನು ಕಾಶ್ಮೀರದಿಂದ ಬಂದು ವಿಜಾಪುರದಲ್ಲಿ ನೆಲೆನಿಂತ ವಿಷಯ, ನಂತರ ಬೆಳದುಬಂದ ಪರಂಪರೆಯನ್ನು ವಿಜಾಪುರ ಹಾಗೂ ಮುತ್ತಗಿ ಶಾಸನಗಳಲ್ಲಿ ಹೇಳಲಾಗಿದೆ.[26] ಅವನ ಪರಂಪರೆಯನ್ನು ಈ ರೀತಿಯಾಗಿ ಗುರುತಿಸಬಹುದು,

06_366_BB-KUH

ಪಾಶುಪತ ಕಾಳಾಮುಖರ ಇನ್ನೊಂದು ಶಾಖೆ ಸಿಂಹಪರ್ಷೆ ಅತ್ಯಂತ ಪ್ರಾಚೀನವಾದುದು. ಆಂಧ್ರಪ್ರದೇಶದ ತಾಡಿಕೊಂಡದ ಕ್ರಿ.ಶ. ೯೫೮ರ ಶಾಸನದಲ್ಲಿ ಇದರ ಪ್ರಾಚೀನ ಉಲ್ಲೇಖವಿದೆ.[27] ಕರ್ನಾಟಕದಲ್ಲಿ ಈ ಪರಂಪರೆಯನ್ನು ಉಲ್ಲೇಖಿಸುವ ಕ್ರಿ.ಶ. ೧೦೪೫ರ ಮೊರಗೇರಿಯ ಶಾಸನ ಮೊದಲನೆಯದು.[28] ಎಳಮೇಲೆ (ಇಂದಿನ ಆಲಮೇಲ), ಎಡರಾಮಿ ಮತ್ತು ಮುದಿನೂರ ಇದರ ಪ್ರಮುಖ ಕೇಂದ್ರಗಳು. ಈ ಪ್ರದೇಶ ಇಂಗಳೇಶ್ವರ ಮತ್ತು ಮನಗೂಳಿ ಶಾಸನಗಳು ಮಲೆಯಾಳ ಪಂಡಿತದೇವನನ್ನು ಉಲ್ಲೇಖಿಸುತ್ತವೆ. ಇಂಗಳೇಶ್ವರ ಶಾಸನದಲ್ಲಿ ಸಿಂಹಪರಶು  ಮಂಡಳಿಯ ಮಲೆಯಾಳರ ಶಿಷ್ಯ ಪ್ರತಿಶಿಷ್ಯರ್ನ್ನಿರವದ್ಯಂ ಧರ್ಮರಾಶಿ ಮುನಿಪ, ಜ್ಞಾನರಾಶಿ ಮುನಿಪ, ಕುಮಾರದೇವ ಬ್ರತಿಪ ಮತ್ತು ಜ್ಞಾನರಾಶಿ ಪಂಡಿತರ ಹೆಸರುನ್ನು ಹೇಳಿದೆ.[29] ಕುಮಾರದೇವ ಬ್ರತಿಪ ಮತ್ತು ಜ್ಞಾನರಾಶಿ ಪಂಡಿತದೆವರು ವಿಜಾಪುರದ ಸ್ವಯಂಭು ಕೇದಾರೇಶ್ವರ ಮಹಾಸಂಸ್ಥಾನಾಚಾರ್ಯರಾಗಿದ್ದರು. ಕ್ರಿ.ಶ. ೧೨೦೦ರ ಅಲ್ಲಿಯ ಇನ್ನೊಂದು ಶಾಸನ ಕುಮಾರದೇವನನ್ನು ಹೆಸರಿಸಿದೆ. ಕ್ರಿ.ಶ. ೧೨೦೦ರ ಮನಗೂಳಿ ಶಾಸನ ಅದೇ ಪರಂಪರೆಯ ಗೌಳದೇವ ಮುನಿ, ಮಲೆಯಾಳ ಜ್ಞಾನರಾಶಿ ಬ್ರತೀಶ್ವರ ಮತ್ತು ಧರ್ಮರಾಶಿ ಮುನಿಪರನ್ನು ಹೆಸರಿಸಿದೆ.[30] ಇದರಿಂದ ಕುಮಾರದೇವ ಬ್ರತಿಪನಿಂದ ಈ ಪರಂಪರೆ ಎರಡು ಶಾಖೆಗಳಾಗಿ ಇಂಗಳೇಶ್ವರ ಮತ್ತು ಮನಗೂಳಿಗಳಲ್ಲಿ ಮುಂದುವರೆದುಕೊಂಡು ಬಂದಂರೆ ಕಾಣುತ್ತದೆ.[31]

07_366_BB-KUH

ರಾಷ್ಟ್ರಕೂಟರಿಂದ ಕಳಚುರಿ ಮತ್ತು ಸೇವುಣರ ಕಾಲದಲ್ಲಿದ್ದ ಧಾಮಿಕ ವಿಷಯಕ್ಕೆ ಸಂಬಂಧಿಸಿದ ಶಾಸನಗಳ ಸಂಖ್ಯೆ ಕ್ರಮೇಣ ವಿರಳವಾಗುತ್ತ ಬಂತು. ಈ ಪ್ರದೇಶದ ಆಡಳಿತ ವ್ಯವಸ್ಥೆಯಲ್ಲಿನ ಬದಲಾವಣೆ ಮತ್ತು ಶಿವಶರಣರ ಪ್ರಭಾವವೂ ಇರಬಹುದು. ೧೬-೧೭ನೆಯ ಶತಮಾನಕ್ಕಾಗಲೇ ಅನೇಕ ಪಂಗಡಗಳು ವೀರಶೈವ ನಂಬಿಕೆಯಲ್ಲಿ ಒಳಗಾಗಿರುವುದನ್ನು ಗಮನಿಸಬಹುದು. ಈ ಮೂಲ ತತ್ವಕ್ಕೆ ಇಲ್ಲಿ ಜನಿಸಿದ ಬಸವಣ್ಣನವರ ವಿಚಾರಗಳೇ ಕಾರಣವೆಂಬುವುದು ೨೦ನೆಯ ಶತಮಾನ ಸಂಶೋಧನೆಗಳಿಂದ ತಿಳಿದಾಗ, ಬಸವನ ಬಾಗೇವಾಡಿಯ ಹೆಸರು ಎಲ್ಲೆಡೆ ವ್ಯಾಪಿಸಿತು.

ಸಾಮಾಜಿಕ :

ಸಾಮಾಜಿಕ ಸಂಘಟನೆಯಲ್ಲಿ ವರ್ಣ-ವರ್ಗ, ಕುಟುಂಬ, ವಿವಾಹ, ಶಿಕ್ಷಣ ಸಂಘ-ಸಂಸ್ಥೆ ಮೊದಲಾದ ಅಂಗಗಳನ್ನೊಳಗೊಂಡ ಸಮೂಹ ಸಮಾಜ ಎಂದು ಕರೆಯಿಸಿಕೊಳ್ಳುತ್ತದೆ.

ಪ್ರಾಚೀನ ಕಾಲದಲ್ಲಿ ವ್ಯಕ್ತಿಗತವಾಗಿ ಬೆಳೆದು ಬಂದ ವರ್ಣವ್ಯವಸ್ಥೆ ಕಾಲಕ್ರಮೇಣ ವಂಶಪರಂಪರಾಗತವಾಗಿ ಮುಂದುವರೆದು, ವೃತ್ತಿಗನುಗುಣವಾಗಿ ವರ್ಗೀಕರಣವಾಯಿತು. ಇವೇ ಮುಂದೆ ಜಾತಿಗಳಾಗಿ ರೂಪಗೊಂಡವು. ಈ ಪ್ರಕ್ರಿಯೆ ನಡೆದುದು ಸುಮಾರು ೨ ಸಾವಿರ ವರ್ಷಗಳ ಹಿಂದೆ. ಈ ಬದಲಾವಣೆಗಳಿಗನುಗುಣವಾಗಿ ಸಂಪ್ರದಾಯ ಮತ್ತು ಕಟ್ಟಳೆಗಳಲ್ಲಿಯೂ ಕೂಡಾ ಕಾಲ ಕಾಲಕ್ಕೆ ಬದಾವಣೆ ಹೊಂದುತ್ತ ಬಂದಿತು. ಈ ಪ್ರದೇಶದ ಶಾಸನಾಧಾರಗಳಿಂದ ಸಾಮಾಜಿಕ ವ್ಯವಸ್ಥೆ ವ್ಯಕ್ತವಾಗುತ್ತದೆ.

ಸ್ಥಾನಾಚಾರ್ಯರು : ಶೈವಧರ್ಮದ ಪಾಶುಪತ – ಕಾಳಾಮುಖ ದೇವಸ್ಥಾನ ಹಾಗೂ ಮಠಗಳ ಆಚಾರ್ಯರೇ ಸ್ಥಾನಾಚಾರ್ಯರು. ಇವರು ನೈಷ್ಠಿಕ ಬ್ರಹ್ಮಚಾರಿಗಳಾಗಿದ್ದು, ಯಮನಿಯಮ, ಸ್ವಾಧ್ಯಾಯ, ಧಾರಣ, ಜಪಸಮಾಧಿ ಸಂಪನ್ನರಾಗಿದ್ದರು. ದೇವಸ್ಥಾನದ ಪೂಜೆ ವಿಧಿ-ವಿಧಾನ ಆಡಳಿತವನ್ನು ನೋಡಿಕೊಳ್ಳುತ್ತಿದ್ದರು.[32] ಇವರಲ್ಲಿ ಕೆಲವರು ಪಾಶುಪತ ಯೋಗಾಚಾರ್ಯರೆಂದೂ, ಇನ್ನು ಕೆಲವರು ಸರಳಜ್ಞಂ ಶಿವತತ್ವವೇದಿ ನೈಷ್ಠಿಕ ಚೂಡಾಮಣಿ ಲಾಕುಳಾಗಮ ಸುಧಾಂಬೋರಾಶಿ ತಾರಾದೀಪ ಮತ್ತು ಶಿವಾಗಮತಜ್ಞರೆಂದೂ ಹೆಸರು ಪಡೆದಿದ್ದರು. ಇವರಿಗೆ ಪಾದಪೂಜೆಯನ್ನು ಮಾಡುವ ಮೂಲಕ ಅರಸರು, ರಾಣಿಯರು, ಅಧಿಕಾರಿಗಳು ಮೊದಲಾದವರು ದಾನ-ದತ್ತಿಗಳನ್ನು ಬಿಟ್ಟಿರುವರು.

ಜಿನಮುನಿಗಳು : ಈ ಪ್ರದೇಶದಲ್ಲಿಯ ಇಂಗಳೇಶ್ವರ, ಮನಗೂಳಿ, ಬಾಗೇವಾಡಿ, ಹೂವಿನ ಹಿಪ್ಪರಗಿ ಮತ್ತು ಸಾಲವಾಡಿಗಿಗಳು ಜೈನ ಕೇಂದ್ರಗಳಾಗಿದ್ದವು. ಇಲ್ಲಿಯ ಕೆಲವು ಶಾಸನಗಳು ಜೈನ ಮುನಿಗಳ ಹೆಸರನ್ನು ಉಲ್ಲೇಖಿಸುತ್ತವೆ. ಅವರು ಜೈನ ಧರ್ಮದ ವಿಧಿ-ವಿಧಾನಗಳನ್ನು ಮುಂದುವರೆಸಿಕೊಂಡು ಬಂದಿದ್ದರು.

ಮಹಾಜನರು : ಈ ಪ್ರದೇಶದ ಬಾಗೇವಾಡಿ, ಇಂಗಳೇಶ್ವರ, ಮುತ್ತಗಿ, ಕೊಲ್ಹಾರ, ಮನಗೂಳಿ ಮುಂತಾದವು ಪ್ರಮುಖ ಅಗ್ರಹಾರಗಳಾಗಿದ್ದವು. ಅಗ್ರಹಾರದ ಮಹಾಜನರಲ್ಲಿ ಪ್ರಭುವರ್ಗ ಮತ್ತು ಬ್ರಾಹ್ಮಣರು ಇದರ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿದ್ದರು. ಸಾಮಾನ್ಯವಾಗಿ ಇವು ಶಿಕ್ಷಣ ಕೇಂದ್ರಗಳಾಗಿದ್ದುದರಿಂದ ಅಲ್ಲಿ ವಾಸಿಸುತ್ತಿದ್ದ ಬ್ರಾಹ್ಮಣರು ಅಧ್ಯಯನ-ಅಧ್ಯಾಪನ, ಯಜನ-ಯಾಜನ, ದಾನ-ಪ್ರತಿಗ್ರಹಣ ಎಂಬ ಷಟ್ಕರ್ಮಗಳಲ್ಲಿ ನಿರತರಾಗಿದ್ದರು. ಮುತ್ತಗಿಯ ವಿಷ್ಣುಭಟ್ಟನನ್ನು ಅಲ್ಲಿಯ ಶಾಸನದಲ್ಲಿ ”ಪ್ರವಿದಿತ ಷಟ್ಕರ್ಮಂರಥಂ ತ್ರಿವೇದಿ ಗೌತಮ ಕುಳಾಬ್ಧಿವರ್ಧನ ಶೀತಾಂಸುವಿ ಶುದ್ಧ ಚರಿತನೆರಡನೆಯ ವಸಿಷ್ಟಂ ವಿಷ್ಣುಭಟ್ಟನೆಳೆಗೆ ವರಿಷ್ಟಂ”[33] ಎಂದಿದೆ. ಇಂಗಳೇಶ್ವರ ಮಹಾರಾಜರು ಚತುರ್ವೇದಾರ್ತ್ಥ ಸಂಪನ್ನರೆನಿಸಿದ್ದರು.[34] ಕೆಲವರು ಆಡಳಿತದಲ್ಲಿ ರಾಜಕೀಯ ಅಧಿಕಾರವನ್ನೂ ಪಡೆದಿದ್ದರು. ಮುತ್ತಗಿಯ ರಾಜಗುರು ವಿದ್ಯಾನಿದಿ ವಿಷ್ಣು ಭಟ್ಟನ ಮಗ ಗೋವಿಂದ ಚಮೂಪತಿ ಶಸ್ತ್ರಶಾಸ್ತ್ರ ಪರಣತಿಯನ್ನು ಹೊಂದಿದ ಮಹಾಪ್ರಚಂಡ ದಂಡನಾಯಕ ಎನಿಸಿದ್ದನು.[35] ಅವನ ಮಗ ವಿಷ್ಣು ಚಮೂಪ ಅಖಿಳ ಕಳಾವಿಧ ಅಪ್ರತಿಮ ಶೌರ್ಯ ಸಂಗ್ರಾಮಜಿಷ್ಟುವಾಗಿದ್ದರೆ, ಅವನ ಮಗ ಗೋವಿಂದರಾಜ ರಿಪು ಸರ್ಪ್ಪಗರುಡ ಅಹಿತದ್ವಿಪಕೇಸರಿಯೆನಿಸಿದ್ದನು.[36] ಅಗ್ರಹಾರ ಬಾಗವಾಡಿಯ ಧರಾಮರರು ಭೀಮ ಪರಾಕ್ರಮರಾಗಿದ್ದುದನ್ನು ಅಲ್ಲಿಯ ಶಾಸನ ಹೇಳುತ್ತದೆ.[37]

ಶ್ರಮಿಕ ವರ್ಗ : ಸಮಾಜದ ಮುನ್ನೆಡೆಗೆ ಬೆನ್ನೆಲುಬಾದ ವಿವಿಧ ವೃತ್ತಿಗಳನ್ನು ಆಶ್ರಯಿಸಿದ ಕುಶಲಕರ್ಮಿಗಳು ಸಂಘ-ಶ್ರೇಣಿಗಳ ಮೂಲಕ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಅವರಲ್ಲಿ ಅಕ್ಕಸಾಲಿಗ, ಕಂಚುಗಾರ, ಕಮ್ಮಾರ, ಶಿಲ್ಪಿ ಮತ್ತು ಬಡಗಿ-ಇವರು ವಿಶ್ವಕರ್ಮ ಅಥವಾ ಪಾಂಚಾಳರೆಂದು ಕರೆಯಲ್ಪಟ್ಟಿದ್ದಾರೆ. ಈ ಪ್ರದೇಶದ ಹೆಚ್ಚಿನ ಶಾಸನಗಳಲ್ಲಿ ಇವರ ಉಲ್ಲೇಖವಿಲ್ಲದಿದ್ದರೂ, ಬೇರೆ ಬೇರೆ ತಾಲೂಕುಗಳ ಶಾಸನಗಳಲ್ಲಿ ಕೆಲವರ ಹೆಸರು ಬರುತ್ತವೆ. ಅಕ್ಕಸಾಲಿ ಬಾಗೋಜ[38] ಕಂಚುಗಾರ ರೇವಿಸೆಟ್ಟಿ, ಬಡಗಿ ಮಲ್ಲೋಜ,[39] ಕಾಮೋಜ, ಮಲ್ಲಿ, ಕೈಹಣ,[40] ಶಿಲ್ಪಿಗಳಾದ ಮಣಿಂಗವಳ್ಳಿಯ ರೆಬ್ಬೋಜನ ಮಗ ಕಲ್ಲೋಜ ಹಾಗೂ ಬೊಮ್ಮೊಜನ ಮಗ ವಾಮೋಜ,[41] ಸ್ಥಾನಾಚಾರ್ಯ ಸೋಮರಾಶಿ ಪಂಡಿತದೇವರ ಪುತ್ರ ಸೂತ್ರದಾರಿ ಸಂಗೋಜ[42] ಮೊದಲಾದವನರನ್ನು ಶಾಸನಗಳು ಉಲ್ಲೇಖಿಸುತ್ತವೆ.

ನಾವಿದ ಮುದನ (ಮುದ್ದನ) ಮಗ ಅಣಪನಿ (ಅಯ್ಯಪ್ಪ)ಗೆ ಐನೂರ್ಬರು ನಾಲ್ಕು ಮತ್ತರು ಕೆಯ್ ಭೂಮಿಯನ್ನು ದತ್ತಿಯಾಗಿ ಕೊಟ್ಟಿರುವರು.[43] ಜೇಡರಿಗೆ ಸಂಬಂಧಿಸಿದಂತೆ ಶಾಸನಗಳಲ್ಲಿ ಮಗ್ಗದ ಕರಣಂಗಳು[44] ಸಾಲಿಗಸಯಂಗಳು[45] ಎಂದು, ಇವರ ಮೇಲೆ ಒಂದೊಂದು ಗಾವಲಿ (ಕಾವಲಿ) ಬಣ್ಣಿಗೆ ಸುಂಕ ಅಕರಿಸಿತ್ತಿದ್ದುದನ್ನು ಹಿಪ್ಪರಗಿ ಶಾಸನ ಉಲ್ಲೇಖಿಸಿದೆ.[46]

ಶ್ರಮಜೀವಿಗಳಾದ ಒಕ್ಕಲಿಗರು, ಕುರುಬರು, ತಾಂಬುಲಿಗರು, ತೆಲ್ಲಿಗರು, ಮಾಲಗಾರರು, ಮೇದರು ಮೊದಲಾದವರು ತಮ್ಮದೇ ಅದ ವೃತ್ತಿಸಂಘಗಳನ್ನು ಕಟ್ಟಿಕೊಂಡಿದ್ದರು. ಮನಗೂಳಿಯಲ್ಲಿ ಕುರುಬಸೇಣಿಗರೊಕ್ಕಲು ಇದ್ದುದಕ್ಕೆ ಶಾಸನ ಉಲ್ಲೇಖಿಸುತ್ತದೆ.[47] ಎಲೆ ಉತ್ಪಾದನೆ ಮರಾಟದಲ್ಲಿ ತೊಡಗಿದ ತಾಂಬುಲಿಗ ಸಾಸಿರ್ವರನ್ನು ಇಂಗಳೇಶ್ವರ ಶಾಸನ ಉಲ್ಲೇಖಿಸಿದೆ.[48] ಗಾಣದಿಂದ ಎಣ್ಣೆ ತೆಗೆಯುವವರನ್ನು ತೆಲ್ಲಿಗರೆಂದು ಕರೆಯಲಾಗಿದೆ.[49] ಇವರು ಕಟ್ಟಿಕೊಂಡ ಸಂಘವೇ ತೆಲ್ಲಿಗರಯ್ವೊತ್ತೊಕ್ಕಲು,[50] ತೆಲ್ಲಿಗ ಗೊತ್ಥಳಿ,[51] ಈ ಪ್ರದೇಶದ ಇಂಗಳೇಶ್ವರ, ಮನಗೂಳಿಯಲ್ಲಿ ತೆಲ್ಲಿಗರಯ್ವೊತ್ತೊಕ್ಕಲು[52] ಸಂಘಗಳಿದ್ದವು.

ಮಾಲಗಾರ ವೃತ್ತಿ ಮಾಡುತ್ತಿದ್ದ ಮುತ್ತಗಿಯ ಕನಕಬ್ಬೆಯ ಮಗ ಮಾಲಗಾರ ದಂಡಿಯಣ್ಣ[53] ವಿಜಾಪುರದ ಮಾಲಗಾರ ಲಂಖನ,[54] ರೇವಂಣ ಮೊದಲಾದವರಿದ್ದರು. ಮಾಲಗಾರರು ಮಾಲಗಾರ ಗೊತ್ತಳಿವೊಕ್ಕಲೆಂಬ ಐನೂರು ಜನರ ಸಂಘ ಹೊಂದಿರುವುದನ್ನು ಬಾಗೇವಾಡಿ ಶಾಸನ ಉಲ್ಲೇಖಿಸಿದೆ.[55] ಬುಟ್ಟಿ ಹೆಣೆಯುವವರ ಮೇದಾರ ಸಂಘ, ಮೇದರೊಕ್ಕಲದ ಉಲ್ಲೇಖ ಮನಗೂಳಿ ಶಾಸನದಲ್ಲಿದೆ.[56] ಈ ಪ್ರದೇಶದ ಅರ್ಜುನಗೆಯ ಶಾಸನ ಮೂಲಿಗ ಬೊಪ್ಪಗಾವುಂಡನನ್ನು ಹೆಸರಿಸಿದೆ.[57] ಹೀಗೆ ಸಮಾಜದಲ್ಲಿ ವಾಸವಾಗಿದ್ದ ವಿವಿಧ ವೃತ್ತಿಯವರು ತಮ್ಮ ತಮ್ಮ ಕಾಯಕದಲ್ಲಿ ತೊಡಗಿದ್ದರೆಂಬುದು ಮೇಲಿನ ಎಲ್ಲ ಆಧಾರಗಳಿಂದ ತಿಳಿದುಬರುತ್ತದೆ.

ಕುಟುಂಬ ವ್ಯವಸ್ಥೆ : ಕುಟುಂಬವು ಸಮಾಜದ ಪ್ರಮುಖ ಅಂಗವಾಗಿದೆ. ಪ್ರಾಚೀನ ಕರ್ನಾಟಕದಲ್ಲಿ ಪಿತೃ ಪ್ರಧಾನವಾದ ಅವಿಭಕ್ತ ಕುಟುಂಬ ವ್ಯವಸ್ಥೆ ಜಾರಿಯಲ್ಲಿತ್ತು. ಮುಖ್ಯವಾಗಿ ಗಂಡು-ಹೆಣ್ಣುಗಳ ಸಂಬಂಧ ವಿವಾಹದ ಮೂಲಕ ಲೈಂಗಿಕ ಜೀವನವನ್ನು ವೈವಸ್ಥಿತಗೊಳಿಸಿ ಮುಂದಿನ ಪೀಳಿಗೆಗೆ ಅವಕಾಶ ಕಲ್ಪಿಸುವುದಾಗಿತ್ತು.

ಪ್ರಾಚೀನ ಕಾಲದ ವೇದಗಳು, ಸೂತ್ರಗಳಲ್ಲಿ ಉಲ್ಲೇಖಗೊಂಡಂತೆ ವಿವಾಹವು ಸಾಮಾನ್ಯವಾಗಿ ಸವರ್ಣಿಯರಲ್ಲಿ ಸಂಬಂಧಗಳು ಜರುಗುತ್ತಿದ್ದವು. ಬಾಲ್ಯವಿವಾಹ ಪದ್ಧತಿ ಜಾರಿಯಲ್ಲಿರುವ ಬಗ್ಗೆ ಅಲ್ಬೇರುನಿ ಹಿಂದೂಗಳು ಚಿಕ್ಕವಯಸ್ಸಿನಲ್ಲಿಯೇ ಮದುವೆ ಮಾಡಿಕೊಳ್ಳುತ್ತಿದ್ದುದನ್ನು ತಿಳಿಸಿದ್ದಾನೆ. ಇದರ ಬಗ್ಗೆ ಕೊಲ್ಹಾರ ಶಾಸನದಲ್ಲಿ ಅಲ್ಲಿಯ ಮಲ್ಲಿಕಾರ್ಜುನ ದೇವರಿಗೆ ದಾಸಗೌಡ ಕೊತ್ತಳಿಗಳು ಬಲ್ಲಮಾನೂರ್ಬರು ಮಾಣಿಗಡೆಗನೂರು ಕೊತ್ತಳಿಗಳು ಕೊಡಗೂಸಿನ (ಕನ್ಯೆ) ಮದುವೆಗೆ ಹಣ, ಹಾಗ, ಮದುವತ್ತಿಗೆ ಅಂಡ ಬೊಳೆ, ಬಾಡು ವೀಳೆಯ ಎಂದು ಆಯಕೊಟ್ಟ ಉಲ್ಲೇಖದೆ.[58] ಇಲ್ಲಿ ‘ಕೊಡಗುಸಿನ’ ಎಂದಲ್ಲಿ ಬಾಲ್ಯಕನ್ಯೆ ಎಂಬುವುದು ಸ್ಪಷ್ಟವಾಗುತ್ತದೆ. ವಧುವರರನ್ನು ಮದುವಣಿಗೆ ಮದುವಣಿಗ ಎಂದು ಕರೆದಿದ್ದು, ಬಾಗೇವಾಡಿಯ ಮಾಲಗಾರ ಗೊತ್ತಳಿಗಳು ಅಲ್ಲಿನ ಮಲ್ಲಿಕಾರ್ಜುನ ದೇವರಿಗೆ ಮದುವೆ ಮದುವಣಿಗನಲ್ಲಿ ಹಾಗ ೧ ಮದುವಣಿಗೆಯಲ್ಲಿ ಹಾಗ ೧ ಜೊಳಕೊಳಗ ೩ ಬಿಟ್ಟುಕೊಟ್ಟ ವಿಷಯ ಶಾಸನ ಉಲ್ಲೇಖಿಸಿದೆ.[59] ಮದುವೆಯಾದ ಮದುಮಗಳು ತನ್ನ ತವರುಮನೆಯಿಂದ ಬಳುವಳಿ ಪಡೆಯುತ್ತಿದ್ದಳು. ಈ ಪ್ರದೇಶ ಭೈರವಾಡಿಗಿಯ ಶಾಸನದಲ್ಲಿ ಬೌದ್ಧವಾಡಿಗೆಯ ಪಡುವಗೇರಿಯ ಪ್ರಭು ಕಲ್ಲರಸನಳಿಯ ಮಾಚರಸನ ಮದುವಳಿಗೆ. ಮಾಳಿಯಕ್ಕೆ ತನ್ನ ಬಳುವಳಿಗೆಯಿಂದ ಭೂಮಿಯನ್ನು ವತ್ತೆವಿಡಿದು ತನ್ನ ಪುರುಷನಿಗೆ ತನಗೆ ವಕ್ಷವಾಗಿ ದಾನಬಿಟ್ಟ ವಿಷಯ ಉಲ್ಲೇಖಿಸಿದೆ.[60]

ಪ್ರಾಚೀನ ಕಾಲದಲ್ಲಿ ಪ್ರಭುವರ್ಗದಲ್ಲಿ ಬಹುಪತ್ನಿತ್ವವು ಸಾಮಾನ್ಯವಾಗಿತ್ತು. ಬ್ರಾಹ್ಮಣ ನಾಲ್ಕು ಜನರನ್ನು, ಕ್ಷತ್ರಿಯ ಮೂರ ಜನರನ್ನು, ವೈಶ್ಯ ಇಬ್ಬರನ್ನು, ಶೂದ್ರ ಒಬ್ಬಳನ್ನು ಮದುವೆಯಾಗಬಹುದೆಂದು ಅಲ್ಬೇರೂನಿ ಗುರುತಿಸಿದ್ದಾನೆ.[61] ಚಾಳುಕ್ಯ ಅರಸ ವಿಕ್ರಮಾದಿತ್ಯನಿಗೆ ೧೬ ಜನ ರಾಣಿಯರಿದ್ದರು.[62] ಹಿರಿಯ ಪತ್ನಿಯನ್ನು ಅಗ್ರಮಹಿಷಿ, ಪಿರಿಯರಸಿ ಪಟ್ಟಮಹಿಷಿ ಎಂದು ಕರೆಯಲಾಗುತ್ತಿತ್ತು. ಚಾಳುಕ್ಯ ಸೋಮೇಶ್ವರನ ಮಡದಿ ಮೈಲಳದೇವಿಯನ್ನು ”ಸವತಿಮದಭಂಜನೆ ಸಮಸ್ತಾನ್ತಳ್ವಿರೆ ಮುಖಮಣ್ಡನಿ”[63] ಎಂದು ಶಾಸನ ಉಲ್ಲೇಖಿಸಿರುವುದರಿಂದ ಸವತಿ ಮಾತ್ಸರ್ಯದ ಮೇಲೆ ಬೆಳಕು ಚೆಲ್ಲುತ್ತದೆ. ರಾಣಿಯರು ಅರಸನಿಗೆ ಆಡಳಿತದಲ್ಲಿ ನೆರವಾಗುತ್ತಿದ್ದರು.

ವಿವಾಹವಾದ ದಂಪತಿಗಳು ಒಟ್ಟಾಗಿ ಧಾರ್ಮಿಕ ಕಾರ್ಯವನ್ನು ನೆರವೇರಿಸುತ್ತಿದ್ದ ವಿಷಯ ವೇದಗಳು, ಸ್ಮೃತಿಗಳಿಂದ ತಿಳಿದುಬರುತ್ತದೆ. ಈ ಪ್ರದೇಶದ ಮುತ್ತಗಿ ಶಾಸನದಲ್ಲಿ ವಿಟ್ಟರಸನು ಸತಿ ಕೋಮಲದೇವಿಯಳೊಂದಿಗೆ ಧರ್ಮತತ್ಪರಚಿತ್ತನಾಗಿದ್ದುದನ್ನು ಹೇಳಿದೆ.[64] ಸ್ತ್ರೀಯರೂ ಕೂಡಾ ಸ್ವತಂತ್ರವಾಗಿ ಮತ್ತು ಇತರರಿಂದ ದಾನ-ದತ್ತಿ ಬಿಡಿಸುತ್ತಿದ್ದ ವಿಷಯ ಬಾಚಿಕಬ್ಬೆ ಮನೆವೆರ್ಗಡೆ ದಂಡನಾಯಕ ಬಮ್ಮಯಂಗೆ ರಾಜರಕ್ಷಿತ ಧರ್ಮವಿದೆಂದು ಭಿಂನ್ನವಿಸಿ ಬೆಳಸಿಂಗೆ ಯೋಗ್ಯವಾದ ಹತ್ತು ಮತ್ತರು ಭೂದಾನ ಬಿಡಿಸಿದ್ದನ್ನು ಸಾಲವಾಡಿಗೆ ಶಾಸನ ಉಲ್ಲೇಖಿಸಿದೆ.[65]

ಮಕ್ಕಳನ್ನು ಪಡೆಯುವುದು ದಾಂಪತ್ಯ ಜೀವನದ ಮುಖ್ಯ ಕಾರ್ಯವಾಗಿತ್ತು. ಪ್ರಾಚೀನ ಕಾಲದಿಂದಲೂ ದಂಪತಿಗಳು ಹರಕೆ ಹೊತ್ತು ಧಾರ್ಮಿಕ ಕಾರ್ಯವನ್ನು ನೆರವೇರಿಸುತ್ತಿದ್ದುದುಂಟು. ಮುತ್ತಗಿಯ ಗಂಗಾಧರ ದಂಡನಾಥನ ಕುಲಾಂಗನೆ ಜಕ್ಕಿಯಬ್ಬೆ ಬಹುಪುತ್ರ ಸುನಿರ್ಮಳೆ ಎನ್ನಿಸಿದ್ದಳು.[66] ಮುತ್ತಗಿಯ ನಾಚಿಸೆಟ್ಟಿ-ನಾಚವ್ವೆ ದಂಪತಿಗಳು ಅಚ್ಯುತಾಂಘ್ರಿದ್ವಯವನ್ನು ನಾನಾಬ್ರತದಿಂದರ್ಚ್ಚಿಸಿ ದಾನಿಯಾದ ಕೈಹಿಸೆಟ್ಟಿಯನ್ನು ಪಡೆದರು. ಮುಂದೆ ಆ ಕೈಹಿಸೆಟ್ಟಿ, ಅವನ ಪತ್ನಿ ಕಾಮವ್ವೆಯರು ನಿಯತಾಚಾರದಿನಚ್ಯುತಾಂಘ್ರಿಯುಗಮಂಮಾರಾಧಿಸಿ ಪುಣ್ಯದಿಂದ ಚೌಡಿಸೆಟ್ಟಿ, ನಾಚಣ್ಣ, ಮಾದಿಸೆಟ್ಟಿಯರನ್ನು ಪಡೆದರು. ನಂತರ ಚೌಡಿಸೆಟ್ಟಿ ಅರಸವ್ವೆಯರು ಸದ್ಭಾವದಿಂ ಪೂಜಿಸಿ ಶ್ರೀಮಂತನಾದ ಸೋವಿಸೆಟ್ಟಿಯನ್ನು ಪಡೆದರೆಂದು ಅಲ್ಲಿಯ ಶಾಸನ ತಿಳಿಸುತ್ತದೆ.[67] ಅವರ ವಂಶಾವಳಿಯನ್ನು ಈ ರೀತಿಯಾಗಿ ಗುರುತಿಸಬಹುದು,

08_366_BB-KUH

ಸ್ತ್ರೀಯರು ಪತಿ ಮರಣಹೊಂದಿದ ನಂತರ ಸತಿ ಹೋಗುವ ಪದ್ಧತಿ ಪ್ರಾಚೀನ ಕಾಲದಿಂದಲೂ ಜಾರಿಯಲ್ಲಿತ್ತು. ಸತಿ ಹೋದ ಮೇಲೆ ಸ್ಮರಣಾರ್ಥವಾಗಿ ಮಹಾಸತಿ ಸ್ಮಾರಕಗಳನ್ನು ನಿಲ್ಲಿಸುತ್ತಿದ್ದರು. ಮುತ್ತಗಿಯ ಶಾಸನದಲ್ಲಿ ಪತಿ ವಿಟ್ಟರಸನೊಂದಿಗೆ ವೈಭವಪೂರ್ಣವಾಗಿ ವರ್ಣಿಸಲ್ಪಟ್ಟ ಕೋಮಲದೇವಿಯ ಉಲ್ಲೇಖವಾಗಿದೆ.[68]

ಕರ್ನಾಟಕದಲ್ಲಿ ದೊರೆತಿರುವ ಶಾಸನಗಳಿಂದ ಕ್ರಿ.ಶ. ೬-೭ನೆಯ ಶತಮಾನದಿಂದ ವೇಶ್ಯೆಯರ ಪದ್ಧತಿ ಬಳಕೆಯಲ್ಲಿದ್ದ ಬಗ್ಗೆ ತಿಳಿದುಬರುತ್ತದೆ. ಸೂಳೆ ಪದದ ಪರ್ಯಾಯ ಪೋಡಿ, ಪೋಟಿ, ಬೊಡ್ಡಿಗಳು ಬಳಕೆಯಾಗಿವೆ. ಕಲ್ಯಾಣ ಚಾಳುಕ್ಯ ಅರಸ ವಿಕ್ರಮಾದಿತ್ಯನ ಕಾಲದಲ್ಲಿ ತರ್ದವಾಡಿನಾಡಿನ ಆಡಳಿತಾಧಿಕಾರಿಯಾದ ಯುವರಾಜಮಲ್ಲಿ ಕಾರ್ಜುನದೇವನು ವೇಶ್ಯಾಭುಜಂಗನೆನಿಸಿದ್ದ.[69] ಮಹಾಮಂಡಳೇಶ್ವರ ವೀರಗೋಮದೇವರಸ ವಾರವನಿತಾ ಕಾಮನೆನಿಸಿದ್ದ[70] ಇದರೊಂದಿಗೆ ತೊತ್ತುಗಳ ಪದ್ಧತಿಯು ಕೂಡಾ ಜಾರಿಯಲ್ಲಿತ್ತು. ತೊತ್ತನ್ನು ಕೊಳ್ಳುವ ಮತ್ತು ಮಾರುವುದು ಪ್ರಚಲಿತವಿತ್ತು. ಒಮ್ಮೆ ತೊತ್ತುನ್ನು ಕೊಂಡ ಒಡೆಯರು ಅವರ ಮೇಲೆ ಸಂಪೂರ್ಣ ಅಧಿಕಾರ ಹೊಂದಿದ್ದರು. ಈ ಪ್ರದೇಶದ ಚಿಮ್ಮಲಗಿ ಶಾಸನದಲ್ಲಿ ರೆಬ್ಬಕಬ್ಬೆ ತನ್ನ ತೊತ್ತು ಮಾಚಿಕಬ್ಬೆಯನ್ನು ಸಕಳೇಶ್ವರ ದೇವರ್ಗೆ ಬಿಟ್ಟಿದ್ದನ್ನು ತಿಳಿಸುತ್ತದೆ.[71]

ಇನ್ನು ದಾನ-ಧರ್ಮಗಳ ಬಗ್ಗೆ ನೋಡಿದಾಗ, ಅಂದಿನ ಅರಸರು, ರಾಣಿಯರು, ಆಡಳಿತಾಧಿಕಾರಿಗಳು ಮತ್ತು ಸಮಾಜದ ಮೇಲ್ವರ್ಗದವರು ಧಾರ್ಮಿಕ ಕಾರ್ಯಳನ್ನು ಸಾಮಾನ್ಯವಾಗಿ ಯುದ್ಧದಲ್ಲಿ ಜಯ ಪಡೆದಾಗ, ಪುತ್ರೋತ್ಸವ, ಜಾತಕರ್ಮ, ಪಟ್ಟಾಭಿಷೇಕ, ವರ್ಧಂತಿ ಮೊದಲಾದ ಸಂದರ್ಭಗಳಲ್ಲಿ ಮಾಡುತ್ತಿದ್ದರು. ಅಂಥ ವೇಳೆಯಲ್ಲಿ ದಾನ-ದತ್ತಿಗಳನ್ನು ಬಿಡುತ್ತಿದ್ದರು. ಹಬ್ಬ-ಹರಿದಿನ, ಸೂರ್ಯಗ್ರಹಣ, ಚಂದ್ರಗ್ರಹಣ ಮುಂತಾದ ಮಹತ್ವದ ದಿನಗಳಲ್ಲಿ ದಾನಕೊಟ್ಟ ವಿಷಯ ಈ ಪ್ರದೇಶದ ಶಾಸನಗಳಲ್ಲಿ ಉಲ್ಲೇಖಿತವಾಗಿವೆ. ಹೂವಿನಹಿಪ್ಪರಗಿ ಶಾಸನದಲ್ಲಿ ನೃಪತುಂಗನು ಸೂರ್ಯ ಗ್ರಹಣದಂದು ತುಲಾಪುರುಷ ದಾನ ಕೈಯ್ಕೊಂಡನು.[72] ತ್ರೈಳೋಕ್ಯಮಲ್ಲದೇವರ ಪಿರಿಯರಸಿ ಮೈಲಳದೇಳ ಸೋಮಗ್ರಹಣ ಪರ್ವನಿಮಿತ್ತ ಬಿಲ್ಲವರಸರ ಸಮ್ಮುಖದಲ್ಲಿ ಲಕ್ಷಹೋಮದೊಳಿದ್ದುದನ್ನು ಬಾಗೇವಾಡಿ ಶಾಸನದಲ್ಲಿ ತಿಳಿಸಿದೆ.[73]

ಜ್ಯೋತಿಷ್ಯ-ಶಕುನ ನಮ್ಮಲ್ಲಿ ಒಂದು ಶಾಸ್ತ್ರವಾಗಿ ಬೆಳೆದು ಬಂದಿದೆ. ಇದು ೬೪ ಕಲೆಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ.[74] ಪ್ರಾಚೀನ ಕಾಲದಲ್ಲಿ ಧಾರ್ಮಿಕ ಕಾರ್ಯಗಳ ಯಜ್ಞಯಾಗಾದಿಗಳನ್ನು, ಸಾಮಾಜಿಕ ಕೌಟುಂಬಿಕ ಮತ್ತು ಮೊದಲಾದ ಮಹತ್ವದ ಕಾರ್ಯಗಳನ್ನು ಮಾಡುವಾಗ ಜ್ಯೋತಿಷ್ಯ ಶಾಸ್ತ್ರವನ್ನು ಪರಿಗಣಿಸಲಾಗುತ್ತಿತ್ತು. ಭಾರತೀಯರು ಜೋತಿಷ್ಯದಲ್ಲಿ ಬಹಳಷ್ಟು ಮರ್ಯಾದೆ ತೋರಿಸಿದ್ದನ್ನು ಅಲ್ಬೆರುನಿ ಉಲ್ಲೇಖಿಸಿದ್ದಾನೆ.[75] ಈ ಪ್ರದೇಶದ ಹೂವಿನಹಿಪ್ಪರಗಿ ಶಾಸನದಲ್ಲಿ ಅಮೋಘವರ್ಷನು ಜೋತಿಷ್ಯ, ಶಕುನ ನಿಮಿತ್ಯ ಬಲ್ಲ ಗೋಲೆಯ  ಭಟ್ಟನಿಗೆ  ಹಿಪ್ಪರಿಗೆ ಗ್ರಾಮ ದಾನ ಬಿಟ್ಟ ವಿಷಯ ತಿಳಿಸುತ್ತದೆ. [76]

ಆಹಾರ ಪಾನೀಯಗಳು : ಪ್ರಾಚೀನ ಕರ್ನಾಟಕದಲ್ಲಿ ಬಳಕೆಯಲ್ಲಿದ್ದ ಆಹಾರ ಪದಾರ್ಥಗಳನ್ನು ಈ ಪ್ರದೇಶದ ಶಾಸನಗಳು ಉಲ್ಲೇಖಿಸುತ್ತವೆ. ಬೇಳೆ,[77] ಸಕ್ಕರೆ, ಬೆಲ್ಲ, ಉಪ್ಪು[78] ಅಲ್ಲ[79] ತುಪ್ಪ ಮೊಸರು,[80] ಬೆಣ್ಣೆ[81] ಬಾಡುಕಾಯಿ,[82] ವೀಳೆ ಅಡಿಕೆ[83] ಮೊದಲಾದವುಗಳು ಬಳಕೆಯಲ್ಲಿದ್ದವು. ಕಲ್ಯಾಣ ಚಾಳುಕ್ಯ ಅರಸ ಎರಡನೆಯ ಸೋಮೇಶ್ವರನ ಮಾನಸೊಲ್ಲಾಸ ಗ್ರಂಥದಲ್ಲಿ ಮಂಡಕ ಮಂಡಿಗೆ, ದೋಸಕ (ದೋಸೆ), ಇಡ್ಡಲಕ (ಇಡ್ಡಲಗೆ), ಸೇವಿಕ (ಸೇವಿಗೆ), ಮಜ್ಜುಕ (ಮಜ್ಜಿಗೆ), ಹುಣಸೆ, ಕವಳಿ, ಅಂಬಲೆಕಾಯಿ, ಲಿಂಬೆ, ಮಂಗರವಳ್ಳಿ, ಸುಂಟಿ, ಮೆಣಸು, ಕಾರೇಗೆಣಸು ಮೊದಲಾದ ಆಹಾರ ಪದಾರ್ಥಗಳನ್ನು ಉಲ್ಲೇಖಿಸಿದೆ.[84]

ಮುತ್ತಗಿಯ ಶಾಸನದಲ್ಲಿ ”ಶ್ರೀ ತಿಕೇಶ್ವರ ದೇವರ ಪವಿತ್ರಾರೋಹಣಕ್ಕೆ ಮೂನೊರ್ಬ್ಬರು ಬಂದು ಕುಳ್ಳಿರ್ದು ದೇವರ್ಗೆ ನಮಸ್ಕಾರ ಮಾಡಿ ಪ್ರಸಾದ ಪವಿತ್ರ ವೀಳಯಮಂ ಕೊಂಡು. ದೇವಕಾರ್ಯಮಂ ಕ(೦)ಡು ಕರಂ ಮೆಚ್ಚಿ ಈ ದೇವರ ತೋಂಟದ ಬಂಣ್ಣಿಗೆದೆರೆಯ ಸುಂಕಮ ಸರ್ಬ್ಬನಮಸ್ಯವಾಗಿ ಧಾರಾಪೂರ್ಬ್ಬಕಂ ಮಾಡಿ ಕೊಟ್ಟರು ಎಂದಿದೆ.[85]

[1] S.I.I., XV, 151,  Bhairavadagi, (B. Bagewadi Tq.), 1191 A.D.

[2] ಚಿದಾನಂದಮೂರ್ತಿ ಎಂ., ‘ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ’, ಪು.೧೩೦

[3] Ibid, 642, H. Hipparagi (B. Bagewadi Tq.), 13th C.A.D.

[4] Ibid, 544, Inagaleshvar (B. Bagewadi Tq.), 1160 A.D.

[5] Ibid, 642 H. Hipparagi (B. Bagewadi Tq.),13th C.A.D.

[6] Ibid, 544, Inagaleshvar (B. Bagewadi Tq.), 1160 A.D.

[7] Ibid

[8] Ibid, 606, Inagaleshvar (B. Bagewadi Tq.), 1216 A.D.

[9] Ibid, 608, Inagaleshvar (B. Bagewadi Tq.), 1224 A.D.

[10] Ibid, 550, Inagaleshvar (B. Bagewadi Tq.), 1194 A.D.

[11] S.I.I., XI,-i, 8, H. Hipparagi (B. Bagewadi Tq.), 862 A.D.

[12] Ibid, 24, 35, 111, 115, 648, Muttagi (B.Bagewadi Tq.), 1189  A.D.

[13] Ibid, 35, Muttagi (B. Bagewadi Tq.), 1147 A.D.

[14] Ibid

[15] Ibid, 113, B. Bagewadi (B. Bagewadi Tq.), 1170 A.D.

[16] E.I., V.P. 24, Managuli (B. Bagewadi Tq.),  1165 A.D.

[17] S.I.I., XV, 196, Ingaleshvar (B. Bagewadi Tq.), 1265 A.D.

[18] Ibid, 46, Salvadagi (B. Bagewadi Tq.), 12th C.A.D.

[19] Ibid, 129, Ingaleshvar (B. Bagewadi Tq.), 1176 A.D.

[20] S.I.I., XI-i, 83, B. Bagewadi (B.Bagewadi Tq.), 1049 A.D.

[21] Ibid, ii, 125, Muttagi (B. Bagewadi Tq.), 1110 A.D.

[22] S.I.I., XI-ii, 139, Hebbal (B. Bagewadi Tq.), 1095 A.D.

[23] S.I.I., XV, 32, Muttagi (B. Bagewadi Tq.), 1147 A.D.

[24] S.I.I., XI-i, 183, Bagewadi (B. Bagewadi Tq.), 1049 A.D.

[25] E.I., V.P.29, Managuli (B. Bagewadi Tq.), 13th C.A.D.

[26] I.A., X, P. 226, Bijapur, 1074-75, SII, XI-ii, 141 and EI, XV, P 25-26, 1110,

S.I.I., XV, 32,37,97,104, Muttagi (B. Bagewadi.Tq.) 1147-1116 A.D.

[27] ಕೊಪ್ಪ ಎಸ್. ಕೆ., ೧೯೯೦, ತರ್ದವಾಡಿ ನಾಡು, ಪು. ೨೭೯

[28] S.I.I., XX-i, 101, Morageri (Hadagali Tq. Bellary Dist.), 1049 A.D.

[29] Ibid, XV, 29, Ingaleshvar (B. Bagewadi Tq.), 1176  A.D.

[30] E.I., V.P. 29, Managuli (B. Bagewadi Tq.) 13th C. A.D.

[31] ಕೊಪ್ಪ ಎಸ್. ಕೆ., ಅದೇ, ಪು. ೨೮೦-೮೧

[32] S.I.I., XX, 21, Rugi (Indi Tq.), 1147 A.D. ಮತ್ತು ಕೊಪ್ಪ ಎಸ್. ಕೆ., ಅದೇ ಪು. ೧೫೪

[33] E.I., XV.P.25-26, Muttagi,  (B. Bagewadi Tq.) 1110 A.D. ಮತ್ತು ಕೊಪ್ಪ ಎಸ್. ಕೆ.,   ಅದೇ, ಪು. ೧೫೩

[34] S.I.I., XV, 196, Inagaleshvar (B. Bagewadi Tq.) 1065 A.D. ಮತ್ತು ಕೊಪ್ಪ ಎಸ್. ಕೆ., ಅದೇ, ಪು. ೧೫೩

[35] E.I., XV.P.25-26, Muttagi,  (B. Bagewadi Tq.) 1110 A.D. ಮತ್ತು ಕೊಪ್ಪ ಎಸ್. ಕೆ., ಅದೇ, ಪು. ೧೫೩

[36] Ibid ಮತ್ತು ಕೊಪ್ಪ ಎಸ್. ಕೆ., ಅದೇ, ಪು.೧೫೩

[37] S.I.I.,XV, 113, B.Bagewadi (Bagewadi Tq.), 1170 A.D. ಮತ್ತು ಕೊಪ್ಪ ಎಸ್.ಕೆ., ಅದೇ, ಪು. ೧೫೩

[38] Ibid, XV,642, B.Bagewadi (B. Bagewadi Tq.), 14th C.A.D.

[39] Ibid,  XX, 178, Hipparagi (sindagi Tq.),1192. A.D.

[40] Ibid, XV, 545, Muttagi (B. Bagewadi Tq.), 1168 A.D.

[41] Ibid, I, Ingaleshvar (B. Bagewadi Tq.), 1265 A.D.

[42] Ibid, 154. Kadlewad (Sindagi Tq.), 1172 A.D.

[43] Ibid, 350, Bijapur (Bijapur Tq.), 1192 A.D.

[44] Ibid, 44, Rugi (Indi Tq.), 1069 A.D.

[45] E.I., V.P. 9, Managuli (B. Bagewadi Tq.), 1161 A.D.

[46] Ibid, XX, 178, Hipparagi (Sindagi Tq.), 1192 A.D.

[47] E.I.,V.P. 9, Managuli (B. Bagewadi Tq.), 1161 A.D.

[48] Ibid, XV, 129, Ingaleshvar (B.Bagewadi Tq.), 1176 A.D. ಮತ್ತು ಕೊಪ್ಪ ಎಸ್.ಕೆ., ಅದೇ, ಪು. ೧೬೨

[49] Ibid, 38, Nalvatawad (Muddebihal Tq.), 1148 A.D.

[50] Ibid, 195, Ingaleshvar (B.Bagewadi Tq.), 1265 A.D.

[51] E.I., V.P.9, Managuli (B. Bagewadi Tq.), 1161 A.D.

[52] S.I.I., XV, 195, Ingaleshvar(B.Bagewadi Tq.), 1265 A.D. and EI, V.P.9, Managuli (B. Bagewadi Tq.),1161  A.D.

[53] S.I.I., XV, 111, Muttagi (B. Bagewadi Tq.), 1165 A.D.

[54] Ibid, 350, Bijapur (Bijapur Tq.), 1192 A.D.

[55] Ibid, 112, B.Bagewadi (B. Bagewadi Tq.), 1169 A.D.

[56] E.I., V.P.9, Managuli (B. Bagewadi Tq.), 1161 A.D.

[57] S.I.I., XIII, 202, Arjunagi (B. Bagewadi Tq.), 1207 A.D.

[58] Ibid, XV, 169, Kolhar (B. Bagewadi Tq.), 1223 A.D. ಮತ್ತು ಕೊಪ್ಪ ಎಸ್. ಕೆ., ಅದೇ, ಪು. ೧೬೨

[59] Ibid, 112, B.Bagewadi  (B. Bagewadi Tq.), 1169 A.D.

[60] Ibid, 151, Bhairavadagi (B. Bagewadi Tq.), 1191  A.D.

[61] ನಾಗೇಗೌಡ ಎಚ್.ಎಲ್., ೧೯೬೪, ಪ್ರವಾಸಿ ಕಂಡ ಇಂಡಿಯಾ, ಮೈಸೂರು, ಸಂ.೧, ಪು. ೩೮೫

[62] ಎಲಿಗಾರ ಚನ್ನಕ್ಕ, ೧೯೮೭, ಪ್ರಾಚೀನ ಕರ್ನಾಟಕದ ರಾಣಿಯರು, ಧಾರವಾಡ, ಪು. ೬೦

[63] S.I.I., XV, 83, B. Bagewadi (B. Bagewadi Tq.), 1049 A.D. ಮತ್ತು ಕೊಪ್ಪ ಎಸ್.ಕೆ., ಅದೇ, ಪು. ೧೬೩

[64] E.I., XV, P. 25-26, Muttagi (B. Bagewadi Tq.), 1189 A.D. ಮತ್ತು ಕೊಪ್ಪ ಎಸ್.ಕೆ., ಅದೇ, ಪು. ೧೬೪.

[65] S.I.I., XV, 46, Salavadigi (B. Bagewadi Tq.), —– ಮತ್ತು ಕೊಪ್ಪ ಎಸ್.ಕೆ., ಅದೇ, ಪು. ೧೬೪.

[66] Ibid, 97, B. Muttagi (B. Bagewadi Tq.), 1158 A.D.

[67] Ibid, 35, B. Muttagi (B. Bagewadi Tq.), 1147 A.D.

[68] Ibid, 111, B. Muttagi (B. Bagewadi Tq.), 1165 A.D.

[69] Ibid, XVIII, 110, Nidoni, 1115 A.D.

[70] Ibid, 161, Bijapur (Bijapur Tq.), 1184 A.D.

[71] Ibid, 91, Chimmalagi (B. Bagewadi Tq.), 1083 A.D.

[72] Ibid, XXI-I, 8, H. Hipparagi (B.Bagewadi Tq.), 862 A.D.

[73] Ibid, 91, B. Bagewadi (B. Bagewadi Tq.), 1083 A:D.

[74] ಶ್ರೀಧರ ಮೂರ್ತಿ ಕ. ೬೪ ಕಲೆಗಳು, ಪು. ೪೮

[75] ನಾಗೇಗೌಡ ಎಚ್.ಎಲ್., ೧೯೬೪, ಅದೇ, ಪು. ೩೫೧-೯೧

[76] S.I.I., XXI-i, 8, H. Hipparagi (B. Bagewadi Tq.), 862A.D.

[77] Ibid, XV, 112, B.Bagewadi (B. Bagewadi Tq.), 1169 A.D.

[78] Ibid, 129, Ingaleshvar (B. Bagewadi Tq.), 1176 A.D.

[79] Ibid

[80] Ibid, XXI-i, 40,  Narasalagi (B. Bagewadi Tq.), 965 A.D.

[81] Ibid, XV, 111, Muttagi (B. Bagewadi Tq.), 1165 A.D.

[82] Ibid, 545, Muttagi (B. Bagewadi Tq.), 1165 A.D.

[83] Ibid, 169, Kolhar (B. Bagewadi Tq.), 1223 A.D.

[84] ಬೆಟಗೇರಿ ಕೃಷ್ಣಶರ್ಮ, ೧೯೮೧, ಸಾಹಿತ್ಯ ವಿಹಾರ, ಪು. ೩-೪

[85] S.I.I., XV, 152, Muttagi (B. Bagewadi Tq.), 1192A.D.