ಬಸವನ ಬಾಗೇವಾಡಿ ಪ್ರದೇಶದ ವಾಸ್ತ್ರಶಿಲ್ಪ ಮತ್ತು ಮೂರ್ತಿಶಿಲ್ಪಕಲೆಯ ಅಭಿವೃದ್ಧಿಯನ್ನು ಅಲ್ಲಿ ಕಂಡುಬರುವ ದೇವಾಲಯ, ಮೂರ್ತಿಶಿಲ್ಪ, ವೀರಗಲ್ಲು, ಮಾಹಾಸತಿಗಲ್ಲು, ನಿಶಿಧಿಗಲ್ಲು ಮುಂತಾದವುಗಳಿಂದ ಗುರುತಿಸಬಹುದಾಗಿದೆ. ಈ ಪ್ರದೇಶ ವಿವಿಧೆ ಅರಸು ಮನೆತನಗಳ ಆಳ್ವಿಕೆಗೆ ಒಳಪಟ್ಟಿದ್ದರೂ ಕಲ್ಯಾಣ ಚಾಳುಕ್ಯರ ಕಾಲದ ಶೈವ, ವೈಷ್ಣವ ದೇವಾಲಯಗಳು ಹೆಚ್ಚಿನ ಪ್ರಮಾಣದಲ್ಲಿವೆ. ಶಾಸನಗಳಲ್ಲಿ ಜೈನ ಬಸದಿಗಳ ಉಲ್ಲೇಖವಿದ್ದರೂ ಈಗ ಒಂದು ಜೈನ ಗುಹಾಲಯವನ್ನು ಬಿಟ್ಟರೆ ಇನ್ನುಳಿದ ಬಸದಿಗಳು ಕಾಣಸಿಗುವುದಿಲ್ಲ. ಈ ಪ್ರದೇಶದಲ್ಲಿ ದೊರೆತಿರುವ ಶಾಸನಗಳು ೩೫ ದೇವಾಲಯಗಳನ್ನು ಉಲ್ಲೇಖಿಸುತ್ತವೆ. ಅವುಗಳಲ್ಲಿ ೨೫ ಶೈವ, ೭ ವೈಷ್ಣವ, ೨ ಜೈನ ಮತ್ತು ೧ ಇತರೆ ದೇವಾಲಯಗಳಾಗಿವೆ.

ಶಾಸನಗಳಲ್ಲಿ ಸೋಮೇಶ್ವರ[1] (ಬ್ಯಾಕೋಡ), ಭೋಗೇಶ್ವರ[2] (ಮನಗೂಳಿ), ಸಕಳೇಶ್ವರ[3] (ಚಿಮ್ಮಲಗಿ), ದಕ್ಷಿಣ ಸೋಮನಾಥ, ಸರಸ್ವತಿ[4] (ಹೆಬ್ಬಾಳ), ತೀಕೇಶ್ವರ[5], ರಾಮೇಶ್ವರ[6] (ಮುತ್ತಗಿ), ಮೌಳೇಶ್ವರ[7] (ದಿಂಡವಾರ), ತ್ರಿಕೂಟಕ ನೀಲಕಂಠೇಶ್ವರ[8] (ಇಂಗಳೇಶ್ವ), ಸಿದ್ಧೇಶ್ವರ, ಚಂದ್ರೇಶ್ವರ[9] (ಮುತ್ತಗಿ), ಕೋಣಿಯ ಸಂಕೇಶ್ವರ[10] (ಇಂಗಳೇಶ್ವರ), ವಿಮಲೇಶ್ವರ, ಮುಕುಟೇಶ್ವರ[11] (ಮುತ್ತಗಿ), ಶಿವಲಿಂಗದೇವ[12] (ಮುತ್ತಗಿ), ಹೊರಯಮೇಶ್ವರ, ಸಿದ್ಧನಾಥ, ಪಾಪವಿನಾಶದೇವ[13] (ಸಾಲವಾಡಿಗಿ), ಗವರೇಶ್ವರ[14] (ಯಾಳವಾರ), ಸಿದ್ಧಲಿಂಗಕಲಿ[15] (ಮನಗೂಳಿ), ಮಲ್ಲಿಕಾರ್ಜುನ,[16] ಸೋಮನಾಥ, ಬೊಂತೇಶ್ವರ[17] (ಬಾಗೇವಾಡಿ), ಸೋಮನಾಥ[18] (ಇಂಗಳೇಶ್ವರ), ಶಂಬಿಕೇಶ್ವರ[19] (ಮನಗೂಳಿ), ಚನ್ನಕೇಶ್ವರ, ಆಚಳೇಶ್ವರ ಅರೆಯ ಶಂಕರದೇವ[20] (ಸಾತಿಹಾಳ), ಗಂಗೇಶ್ವರ[21] (ಯಾಳವಾರ) ಮಲ್ಲಿಕಾರ್ಜುನದೇವ[22] (ಕೊಲ್ಹಾರ), ಮೂಲಸ್ಥಾನ[23] (ಹೆಬ್ಬಾಳ) ಇವೆಲ್ಲವುಗಳು ಶೈವ ದೇವಾಲಯಗಳು. ಉತ್ತರ ಮುಖದ ಪ್ರಸನ್ನಕೇಶವ,[24] ದಕ್ಷಿಣ ಮುಖದ ಚನ್ನಕೇಶವ[25] (ಮುತ್ತಗಿ), ಚನ್ನಕೇಶವದೇವ[26] (ಮನಗೂಳಿ), ಚನ್ನಕೇಶವದೇವ[27] (ಬಾಗೇವಾಡಿ, ಲಕ್ಷ್ಮೀ-ನರಸಿಂಹ[28] (ಮುತ್ತಗಿ), ಗೋಪಾಲದೇವ[29] (ಇಂಗಳೇಶ್ವರ) ಜಲಶಯನದೇವ[30] (ಮುತ್ತಗಿ) ಉಲ್ಲೇಖವಾಗಿರುವ ಇವು ವೈಷ್ಣವ ದೇವಾಲಯಗಳು. ಶಶಿನಾಥ (ಚಂದ್ರಪ್ರಭ),[31] ಮಲ್ಲಿನಾಥ[32] ಬಸದಿಗಳು (ಇಂಗಳೇಶ್ವರ) ಜೈನಧರ್ಮಕ್ಕೆ ಸಂಬಂಧಿಸಿದವು.

ಶಾಸನುಲ್ಲೇಖಿತ ದೇವಾಲಯಗಳಲ್ಲಿ ಈಗ ಎಲ್ಲವೂ ಕಂಡುಬರುವುದಿಲ್ಲ. ಕೆಲವು ದೇವಾಲಯಗಳಿಗೆ ಬೇರೆ ಹೆಸರಿನಿಂದ ಕರೆಯುವುದರಿಂದ ಮತ್ತು ಅಲ್ಲಿಯಾವುದೇ ಶಾಸನ ಇರದೇ ಇರುವುದರಿಂದ ಅವುಗಳ ಮೂಲ ಹೆಸರನ್ನು ಗುರುತಿಸುವುದಕ್ಕೆ ಸಾಧ್ಯವಾಗಿಲ್ಲ,

ಲಕ್ಷಣಗಳು :

ದೇವಾಲಯ ಮತ್ತು ಮೂರ್ತಿಶಿಲ್ಪಗಳ ನಿರ್ಮಾಣಕ್ಕೆ ಈ ಪರಿಸರದಲ್ಲಿ ನೈಜವಾಗಿ ದೊರೆಯುವ ಡೆಕ್ಕನ್ ಟ್ರಾಪ್ ಕಪ್ಪು ಶಿಲೆಯನ್ನು ದೇವಾಲಯದ ಅಧಿಷ್ಠಾನ ಗೋಡೆಯ ಹೊರ, ಒಳ ಭಾಗ, ಬಾಗಿಲು, ಕಂಬ, ಚತ್ತು ಮುಂತಾದವುಗಳಿಗಾಗಿ ಬಳಸಲಾಗಿದೆ. ಈ ಶಿಲೆ ಸೂಕ್ಷ್ಮ ಕೆತ್ತನೆಗೆ ಕಠಿಣವಾಗಿದ್ದರೂ, ಮುತ್ತಗಿಯ ಲಕ್ಷ್ಮೀ-ನಾರಾಯಣ ಮತ್ತು ಮನಗೂಳಿಯ ರಾಮೇಶ್ವರ ದೇವಾಲಯದ ಕಂಬಗಳ ಕೆತ್ತನೆಯನ್ನು ನೋಡಿದಾಗ ಇದನ್ನು ಬಳಸಿಕೊಂಡಿರುವ ರೀತಿ ವ್ಯಕ್ತವಾಗುತ್ತದೆ.

ಇನ್ನು ಕೆಲವು ದೇವಾಲಯ, ಮೂರ್ತಿಶಿಲ್ಪಗಳ ನಿರ್ಮಾಣಕ್ಕಾಗಿ ನಸುಗೆಂಪಿನ ಅಗ್ನಿಶಿಲೆ ಮತ್ತು ಕೆಂಪು ಮರಳು ಶಿಲೆಯನ್ನು ಬಳಸಲಾಗಿದೆ. ಬಾಗೇವಾಡಿಯ ಬೊಂತೇಶ್ವರ (ಬಸವೇಶ್ವರ), ಮುತ್ತಗಿಯ ಲಕ್ಷ್ಮೀ-ನಾರಾಯಣ ದೇವಾಲಯಗಳಿಗೆ ನಸುಗೆಂಪಿನ ಅಗ್ನಿಶಿಲೆಯನ್ನು ಮತ್ತು ಇಂಗಳೇಶ್ವರದ ಶೋಭಾನದೇವರ ಗುಡಿ, ಇಟಗಿಯ ರಾಮಲಿಂಗೇಶ್ವರ ದೇವಾಲಯಗಳ ಗೋಡೆ, ಬಾಗಿಲು ಚೌಕಟ್ಟು, ಕಂಬಗಳ ಸೂಕ್ಷ್ಮ ಕೆತ್ತನೆಗೆ ಕೆಂಪು ಮರಳು ಶಿಲೆಯನ್ನು ಬಳಸಲಾಗಿದೆ. ಇಂಗಳೇಶ್ವರದ ಗೋಪಿನಾಥ ದೇವಾಲಯದ ಗೋಡೆಗೆ ಗಾರೆಗಚ್ಚಿನ ಲೇಪನವಿದೆ. ಇದೇ ಗ್ರಾಮದ ಹಾಳಾದ ಸ್ಥಿತಿಯಲ್ಲಿರುವ ಕಲ್ಮೇಶ್ವರ ದೇವಾಲಯದ ಶಿಖರಕ್ಕೆ ಇಟ್ಟಿಗೆಯನ್ನು ಬಳಸಲಾಗಿದೆ.

ತಳವಿನ್ಯಾಸ : ಈ ಪ್ರದೇಶದ ದೇವಾಲಯಗಳ ತಳವಿನ್ಯಾಸ ಹೆಚ್ಚು ವಿಸ್ತಾರವಾಗಿಲ್ಲ, ಇವು ಚಿಕ್ಕ ಮಧ್ಯಮ ರೀತಿಯಲ್ಲಿವೆ. ಕೆಲವು ದೇವಾಲಯಗಳಿಗೆ ವಿಶಾಲವಾದ ಸಂಕೀರ್ಣ ಮತ್ತು ಪರಿವಾರ ಗುಡಿಗಳನ್ನು ನಿರ್ಮಿಸಲಾಗಿದೆ. ಇವುಗಳಲ್ಲಿ, ಮುಕ್ತೇಶ್ವರ, ರಾಮೇಶ್ವರ (ಮುತ್ತಗಿ) ಚಿಕ್ಕಗುಡಿ, ರಾಮಲಿಂಗ (ಹೆಬ್ಬಾಳ) ದೇವಾಲಯಗಳು ಮುಖಮಂಟಪ ಅಥವಾ ತೆರೆದ ಸಭಾಮಂಟಪ, ಗರ್ಭಗೃಹಗಳಿಂದ ಕೂಡಿವೆ. ಹೆಬ್ಬಾಳದ ಒಂದು ದೇಗುಲ ಮುಖಮಂಟಪ, ಸಂಭಾಮಂಟಪ, ಗರ್ಭಗೃಹಗಳನ್ನು ಹೊಂದಿದೆ. ಬೊಂತೇಶ್ವರ (ಬಾಗೇವಾಡಿ), ಈಶ್ವರ, ಸೋಮನಾಥ (ಮುತ್ತಗಿ), ಸೋಬಾನದೇವರ ಗುಡಿ, ಕಲ್ಮೇಶ್ವರ (ಇಂಗಳೇಶ್ವರ) ದೇವಾಲಯಗಳು ಮುಖಮಂಟಪ, ಸಭಾಮಂಟಪ, ಅಂತರಾಳ, ಮತ್ತು ಗರ್ಭಗೃಹಗಳನ್ನು ಹಾಗೂ ಮಲ್ಲಿಕಾರ್ಜುನ (ಹೆಬ್ಬಾಳ), ಸಂಗಮೇಶ್ವರ (ವಡ್ಡವಡಿಗೆ) ದೇವಾಲಯಗಳು ರಂಗಮಂಟಪ, ಸಭಾಮಂಟಪ, ಅಂತರಾಳ, ಗರ್ಭಗೃಹಗಳನ್ನು ಹೊಂದಿವೆ.

ಲಕ್ಷ್ಮೀ-ನಾರಾಯಣ (ಮುತ್ತಗಿ) ನಾರಾಯಣ, ಕಲ್ಮೇಶ್ವರ (ಇಂಗಳೇಶ್ವರ) ರಾಮಲಿಂಗೇಶ್ವರ (ಇಟಗಿ) ದೇವಾಲಯಗಳು ಮುಖಮಂಟಪ, ಸಭಾಮಂಟಪ, ಅಂತರಾಳ, ಗರ್ಭಗೃಹಗಳನ್ನು ಹೊಂದಿ ತ್ರಿಕೂಟಾಚಲದಲ್ಲಿವೆ. ಸೋಮನಾಥ (ಇಂಗಳೇಶ್ವರ) ದೇವಾಲಯಕ್ಕೆ ಮುಂಭಾಗ ರಂಗಮಂಟಪವನ್ನು ಸೇರಿಸಲಾಗಿದೆ.

ಅಧಿಷ್ಠಾನ : ಇಲ್ಲಿಯ ದೇವಾಲಯಗಳ ಅದಿಷ್ಠಾನವು ೧ ರಿಂದ ೧ ೧/೨ ಮೀ. ಎತ್ತರವಾಗಿವೆ. ಕೆಲವು ದೇವಾಲಯಗಳು ಎತ್ತರವಾದ ಜಗತಿಯ ಮೇಲೆ ನಿರ್ಮಾಣವಾಗಿವೆ. ಅಧಿಷ್ಠಾನವು ಉಪಾನ, ಜಗತಿ, ತ್ರಿಪಟ್ಟ ಕುಮುದ ಕಂಪ, ಗಳ, ಕಂಪ ಇಲ್ಲವೆ ಮಕರ ಪಟ್ಟಿಕೆ ಮತ್ತು ಸರಳ ಪಟ್ಟಕೆಗಳನ್ನು ಹೊಂದಿವೆ. ಬಾಗೇವಾಡಿಯ ಬೊಂತೇಶ್ವರ (ಬಸವೇಶ್ವರ) ದೇವಾಲಯ ನಕ್ಷತ್ರಾಕಾರದ ತಲವಿನ್ಯಾಸದಲ್ಲಿದ್ದು, ಗರ್ಭಗೃಹ ಮತ್ತು ಸಭಾಮಂಟಪಗಳು ತ್ರಿರಥದಲ್ಲಿ ಮುಂಚಾಚಿವೆ. ಮುತ್ತಗಿಯ ಲಕ್ಷ್ಮೀ-ನಾರಾಯಣ ದೇವಾಲಯದ ಅಧಿಷ್ಠಾನ ಹಿಂಸರಿತ, ಮುಂಸರಿತಗಳಿಂದ ಕೂಡಿದೆ.

ಗೋಡೆ : ಎಲ್ಲಾ ದೇವಾಲಯಗಳಿಗೆ ಅಧಿಷ್ಠಾನದ ರಚನೆಯನ್ನನುಸರಿಸಿ ಗೋಡೆಯನ್ನು ನೀರ್ಮಿಸಲಾಗಿದೆ. ಅಧಿಷ್ಠಾನದ ನೇರದಲ್ಲಿ ಒಳಸರಿತ ಹಾಗೂ ಮುಂಸರಿತಗಳುಂಟಾಗಿವೆ. ಬಹುಪಾಲು ದೇವಾಲಯಗಳ ಗೋಡೆಗಳು ಯಾವದೇ ಕೆತ್ತನೆಯಿಲ್ಲದೆ ಸರಳಶೈಲಿಯಲ್ಲಿವೆ. ಮುತ್ತಗಿಯ ಲಕ್ಷ್ಮೀ-ನಾರಾಯಣ ದೇವಾಲಯದ ಗೋಡೆ ಹಿಂಬಣಿ, ಮುಂಬಣಿಯಿಂದ ಕೂಡಿದ ಗರ್ಭಗೃಹದ ನಾಲ್ಕೂ ಭಾಗಗಳಲ್ಲಿ ಕರ್ಣ, ಭದ್ರಗಳ ಮೂಲಕ ಮುಂದೆ ಬಂದಿದೆ. ಬಾಗೇವಾಡಿಯ ಬೊಂತೇಶ್ವರ ದೇವಾಲಯದ ಗರ್ಭಗೃಹದ ಗೋಡೆ ನಕ್ಷತ್ರಾಕಾರ ಮತ್ತು ಮೂರೂ ಮುಖಗಳು ತ್ರಿರಥದಲ್ಲಿ ಮುಂಚಾಚಿವೆ. ಬಹಳಷ್ಟು ದೇವಾಲಯಗಳ ಗೋಡೆಗಳು, ಅರ್ಧಗಂಬ ಮತ್ತು ಗೂಡುಗಳಿಂದ ಕೂಡಿದ್ದು, ಇವುಗಳ ಮೇಲೆ ರೇಖಾನಾಗರ ಮಾದರಿಯ ಶಿಖರಪಟ್ಟಿಕೆಗಳಿವೆ. ಮುತ್ತಗಿಯ ಲಕ್ಷ್ಮೀ-ನಾರಾಯಣ ದೇವಾಲಯದ ಮುಖಮಂಟಪದ ಅಧಿಷ್ಠಾನದ ಮೇಲಿರು ಅರ್ಧಮುಚ್ಚಿದ ಗೋಡೆಯಲ್ಲಿ ಸಂಗೀತ, ನೃತ್ಯಕಾರರ ಶಿಲ್ಪಗಳು ಹಾಗೂ ಇಂಗಳೇಶ್ವರದ ಸೋಮನಾಥ, ಹೆಬ್ಬಾಳದ ಮಲ್ಲಿಕಾರ್ಜುನ, ಬಾಗೇವಾಡಿಯ ಬೊಂತೇಶ್ವರ ದೇವಾಲಯಗಳ ಮುಖಮಂಟಪದ  ಗೋಡೆಗಳಲ್ಲಿ ಪದ್ಮಗಳು ಇಲ್ಲವೇ ಪೂರ್ಣಕುಂಭಗಳ ಸಾಲುಗಳಿವೆ.

ಕಂಬ : ವಿವಿಧ ಮಾದರಿಯ ಕಂಬಗಳು ಈ ಪ್ರದೇಶದ ದೇವಾಲಯಗಳಲ್ಲಿ ಕಂಡುಬರುತ್ತವೆ. ಮೊದಲನೆಯ ರೀತಿಯವು, ಚಚ್ಚೌಕವಾದ ಪೀಠ, ಕಾಂಡದ ಕೆಳಭಾಗ ಅಸಮ ಚೌಕಾಕಾರ, ಅದರ ಮೇಲಿನ ಭಾಗ ಗಂಟಾಕಾರ, ಕುಂಬಭಾಗದ ಮೇಲೆ ವೃತ್ತಾಕಾರದ ಮುಚ್ಚಳದ (ಕೆಲವು ಕಂಬಗಳಿಗೆ ವೃತ್ತಾಕಾರದ ಮುಚ್ಚಳದ ಮುಂದಿನ ಭಾಗ ಹಗ್ಗದಾಕಾರವಾಗಿದೆ). ಚಚ್ಚೌಕ ಫಲಕ ಬೋದಿಗೆಯನ್ನು ಹೊಂದಿದ ಕಂಬಗಳು. ಕೆಲವು ಕಂಬಗಳು ಇದೇ ರೀತಿಯಾಗಿದ್ದು, ಕಾಂಡದ ಕೆಳಭಾಗ ಅಸಮ ಚೌಕಾಕಾರ ಮೇಲ್ಭಾಗ ನಾಲ್ಕೂ ಮೂಲೆಗಳಲ್ಲಿ ಚಿಕ್ಕ ಶಿಲ್ಪಗಳಿವೆ. ಈ ರೀತಿಯ ಕಂಬಗಳು ಮುತ್ತಗಿ ಲಕ್ಷ್ಮೀ-ನಾರಾಯಣ  ದೇವಾಲಯದಲ್ಲಿವೆ ಎರಡನೆಯ ರೀತಿಯವು ಚಚ್ಚೌಕ ಪೀಠ, ಕಾಂಡದ ಕೆಳಭಾಗ ಅಸಮ ಚೌಕಾಕಾರ, ಮೇಲ್ಭಾಗ ವೃತಾಕಾರ ಅದರಲ್ಲಿ ಅಷ್ಟಭಾಗ ಮತ್ತು ಹದಿನಾರು ಭಾಗದ ಪಟ್ಟಿಕೆಗಳು, ಅದರ ಮೇಲೆ ಚೌಕಾಕಾರ, ಚಚ್ಚೌಕವಾದ ಹಲಗೆ, ಬೋದಿಗೆಯಿಂದ ಕೂಡಿದ ಕಂಬಗಳು. ಇವುಗಳ ಮೇಲೆ ಆಭರಣದಂತೆ ಇಲ್ಲವೆ ಹೂವಿನ ಎಸಳುಗಳ ಅಲಂಕರಣೆಗಳ ಕೆತ್ತನೆ ಇದೆ. ಮೂರನೆಯ ರೀತಿಯವು ಆಕಾರದಲ್ಲಿ ಚಿಕ್ಕವಾಗಿದ್ದು, ಕೆಳಭಾಗ ಅಸಮ ಚೌಕಾಕಾರ ಮತ್ತು ಮೇಲಿನ ವೃತ್ತಾಕಾರ ಭಾಗದಲ್ಲಿ ಅಲಂಕರಣಗೊಳಿಸಲಾಗಿದೆ.

ಬಾಗಿಲು ಚೌಕಟ್ಟು : ಇವುಗಳಲಿ ಎರಡು ಮಾದರಿಯನ್ನು ಗಮನಿಸಬಹುದು. ಸಾದಾ ಕೆತ್ತನೆಯ ದ್ವಾರಗಳು ಹಾಗೂ ಸೂಕ್ಷ್ಮ ಕೆತ್ತನೆಯ ದ್ವಾರಗಳು. ಸಾದಾ ಕೆತ್ತನೆಯಿಂದ ಕೂಡಿದ ದ್ವಾರಗಳು ಅರ್ಧಗಕಂಬ, ಮೇಲ್ಭಾಗ ರೇಖಾನಾಗರ ಮಾದರಿಯ ಶಿಖರಪಟ್ಟಿಕೆಗಳನ್ನೊಳಗೊಂಡಿವೆ. ಸೂಕ್ಷ್ಮ ಕೆತ್ತನೆಯಿಂದ ಕೂಡಿದ ದ್ವಾರಗಳು ಪದ್ಮಗಳು, ಅರ್ಧಗಂಬಗಳು, ಹೂವಿನ ಎಸಳುಗಳು ಯಾಳಿ ಇಲ್ಲವೆ, ವಿದ್ಯಾಧರರ ಶಿಲ್ಪಗಳು ಮೊದಲಾದವುಗಳಿಂದ ಅಲಂಕೃತಗೊಂಡಿವೆ. ಹೀಗೆ ಅಲಂಕೃತಗೊಂಡ ಕೆಲವು ದ್ವಾರಗಳ ಮೇಲ್ಭಾಗ ರೇಖಾನಾಗರ ಮಾದರಿಯ ಶಿಖರ ಪಟ್ಟಿಕೆಗಳಿವೆ. ಬಾಗೇವಾಡಿಯ ಬೊಂತೇಶ್ವರ ದೇವಾಲಯದ ಬಾಗಿಲುಗಳ ಲಂಬ ಪಟ್ಟಿಕೆಗಳಲ್ಲಿ ಪುಷ್ಪದಳ ಲತಾಸುರುಳಿ, ಚಿಕ್ಕ  ಅರ್ಧಗಂಬಗಳು, ಸರಪಳಿಯ ಸಾಲುಗಳು ಮತ್ತು ರಸಿಕ ದಂಪತಿಗಳು, ಸಂಗೀತ ನುಡಿಸುವವರ, ನೃತ್ಯ ಮಾಡುವವರ ಚಿಕ್ಕ ಚಿಕ್ಕ ಶಿಲ್ಪಬಂಧ ಸಾಲುಗಳಿಂದ ಕೂಡಿವೆ. ಬಾಗಿಲುವಾಡಗಳ ಲಲಾಟ ಬಿಂಬದಲ್ಲಿ ಗಜಲಕ್ಷ್ಮಿ ಶಿಲ್ಪ ಸಾಮಾನ್ಯವಾಗಿದೆ. ಇಂಗಳೇಶ್ವರದ ಗೋಪಿನಾಥ ದೇವಾಲಯದ ಲಲಾಟ ಬಿಂಬದಲ್ಲಿ ಗರುಡ. ಸೋಭಾನದೇವರ ಗುಡಿಯ ಲಲಾಟಬಿಂಬದಲ್ಲಿ ಶಿವಲಿಂಗ ಮತ್ತು ಮನಗೂಳಿಯ ರಾಮೇಶ್ವರ ದೇವಾಲಯದ ಲಲಾಟಬಿಂಬದಲ್ಲಿ ಗಣೇಶ ಶಿಲ್ಪಗಳಿವೆ. ದ್ವಾರಕ್ಕೆ ಎರಡೂ ಭಾಗಗಳಲ್ಲಿ ದ್ವಾರಪಾಲಕ ಮತ್ತು ಚಾಮರಧಾರೆಯರ ಶಿಲ್ಪಗಳು ಸಾಮಾನ್ಯವಾಗಿವೆ.

ಜಾಲಂಧ್ರ : ಗಾಳಿ ಬೆಳಕಿನ ಸಲುವಾಗಿ ಜಾಲಂಧ್ರಗಳನ್ನು ನಿರ್ಮಿಸಲಾಗುತ್ತಿತ್ತು. ಈ ಪ್ರದೇಶದ ದೇವಾಲಯಗಳಲ್ಲಿ ಜಾಲಂಧ್ರಗಳು ವಿರಳವಾಗಿ ಕಂಡುಬರುತ್ತವೆ. ಹೆಬ್ಬಾಳದ ಮಲ್ಲಿಕಾರ್ಜುನ ದೇವಾಲಯದ ಅಂತರಾಳ, ಗರ್ಭಗೃಹದ ದ್ವಾರಗಳಲ್ಲಿ, ಈ ದೇವಾಲಯದ ದಕ್ಷಿಣ ಭಾರತದಲ್ಲಿರುವ ರಾಮಲಿಂಗ ದೇವಾಲಯ ಹಾಗೂ ಇಂಗಳೇಶ್ವರದ ಕಲ್ಮೇಶ್ವರ ದೇವಾಲಯದ ದ್ವಾರದ ಇಕ್ಕೆಲಗಳಲ್ಲಿ ಜಾಲಂಧ್ರರಗಳಿವೆ. ಪದ್ಮಗಳ ಸಾಲುಗಳಲ್ಲಿ ದೀರ್ಘ ಚೌಕಾಕಾರದಲ್ಲಿ ಇವುಗಳನ್ನು ಕೊರೆಯಲಾಗಿದೆ.

ಭುವನೇಶ್ವರಿ : ಈ ಪ್ರದೇಶದಲ್ಲಿ ಎಲ್ಲಾ ದೇವಾಲಯಗಳ ಸಭಾಮಂಟಪ, ಅಂತರಾಳ ಗರ್ಭಗೃಹಗಳ ಭುವನೇಶ್ವರಿಗಳಲ್ಲಿ ಪದ್ಮಗಳಿವೆ. ಭಾಗೇವಾಡಿಯ ಬೊಂತೇಶ್ವರ ಮತ್ತು ಇಂಗಳೇಶ್ವರದ ಸೋಭಾನದೇವರ ಗುಡಿಯ ಸಭಾಮಂಟಪಗಳಲ್ಲಿ ಅಷ್ಟದಿಕ್ಪಾಲಕರ ಶಿಲ್ಪಗಳಿವೆ. ಭುವನೇಶ್ವರಿಯನ್ನು ಒಂಬತ್ತು ಚೌಕಗಳಲ್ಲಿ ವಿಂಗಡಿಸಿ, ಮಧ್ಯದ ಚೌಕದಲ್ಲಿ ನಟರಾಜ ಹಾಗೂ ಉಳಿದವುಗಳಲ್ಲಿ ಅಷ್ಟದಿಕ್ಪಾಲಕರಿದ್ದು, ಸುತ್ತಲೂ ವಾದ್ಯಗಾರರಿದ್ದಾರೆ. ಮುತ್ತಗಿಯ ಈಶ್ವರ ದೇವಾಲಯದ ಭುವನೇಶ್ವರಿಯಲ್ಲಿ ಅಷ್ಟಭುಜದ ನಟರಾಜ ಮತ್ತು ಕೆಳಭಾಗ ಚಾಮರಧಾರೆಯರಿದ್ದಾರೆ.

ಶಿಖರ : ಬಹುತೇಕ ದೇವಾಯಗಳ ಗರ್ಭಗೃಹದ ಮೇಲೆ ಶಿಖರಗಳನ್ನು ಹೊಸದಾಗಿ ನಿರ್ಮಿಸಲಾಗಿದೆ. ಹೆಬ್ಬಾಳದ ಮಲ್ಲಿಕಾರ್ಜುನ ದೇವಾಲಯದ ಗರ್ಭಗೃಹದ ಮೇಲಿರುವ ಶಿಖರ ಹಾಳಾದ ಸ್ಥಿತಿಯಲ್ಲಿದ್ದು, ಸೊಪಾನಗಳಿಂದ ಕೂಡಿದೆ. ಹಾಳಾದ ಸ್ಥಿತಿಯಲ್ಲಿರುವ ಇಂಗಳೇಶ್ವರ ಕಲ್ಮೇಶ್ವರ ದೇವಾಲಯದ ಶಿಖರ ತಲಗಳಿಂದ ಕೂಡಿದೆ. ಶಿಖರಗಳು ಹಾಳಾಗಿರುವುದರಿಂದ ಅವುಗಳ ಮೂಲ ಮಾದರಿ ಸ್ಪಷ್ಟವಾಗುವುದಿಲ್ಲ.

ಶೈವ ದೇವಾಲಯಗಳು :

ಬೊಂತೇಶ್ವರ ದೇವಾಲಯ, ಬಸವನ ಬಾಗೇವಾಡಿ : ಪೂರ್ವಾಭಿಮುಖವಾಗಿ ನಿರ್ಮಾಣವಾಗಿರುವ ಇದನ್ನು ಬಸವೇಶ್ವರ ದೇವಾಲಯವೆಂದು ಕರೆಯಲಾಗುತ್ತಿದೆ. ನಂದಿ ಮಂಟಪದ ಕಂಬಗಳ ಮೇಲಿರುವ ಶಾಸನಗಳಲ್ಲಿ ಬೊಂತೇಶ್ವರ ದೇವಾಲಯವೆಂದು ಉಲ್ಲೇಖಿಸಲಾಗಿದೆ. ಬಲಭಾಗದ ಕಂಬದ ಮೇಲಿನ ಕ್ರಿ.ಶ. ೧೧೭೮ರ ಶಾಸನ ಕಳಚುರಿ ಸಂಕಮದೇವನ ಆಡಳಿತಾವಧಿಗೆ ಸೇರಿದ್ದು.[33] ಇದರಲ್ಲಿ ಸಾಸಿರ್ವರು ಬೊಂತೇಶ್ವರ ದೇವರಿಗೆ ಹೇರು ತೆರಿಗೆ ದಾನ ಬಿಟ್ಟಿದುದನ್ನು ಉಲ್ಲೇಖಿಸಿದೆ.

ಎಡಭಾಗದ ಕಂಬದ ಮೇಲಿರುವ ಕ್ರಿ.ಶ. ೧೧೯೯ರ ಯಾದವ ಜೈತುಗಿ ಕಾಲದ ಶಾಸನದಲ್ಲಿ ಜೊಂತೇಶ್ವರ ದೇವರ ಕೇರಿಯಿಂದ ದಕ್ಷಿಣಕ್ಕಿರುವ ಕೇರಿಯನ್ನು ಕೊಂಡು ಈ ದೇವರಿಗೆ ಬಿಟ್ಟ ವಿವರವಿದೆ.[34] ಮೊದಲು ಈ ಕೇರಿಯನ್ನು ಅಲ್ಲಿಯ ಮಹಾಜನರು ಹಣ ಪಡೆದು ಮೂಗುಳು ಬುದ್ಧಿಯ ನಾರಾಯಣದೇವನಿಗೆ ಬಿಟ್ಟುಕೊಟ್ಟಿದ್ದರು. ಆನಂತರ ದೇಶಿಯ ದಂಡನಾಯಕ ಮಧುವರಸಯ್ಯ, ಮುದ್ರಹಸ್ತ ನಾಗರಸರ ಸನ್ನಿದಾನದಲ್ಲಿ ಅಗ್ರಹಾರದ ಮಾಹಾಜನರು ಸಭಾಮಂಟಪದಲ್ಲಿ ಸೇರುತ್ತಾರೆ. ಆಗ ಬೊಂತೇಶ್ವರ ದೇವರ ಮರದ ಆಚಾರ್ಯ ದೇವರಾಶಿ ಪಂಡಿತದೇವರಿಂದ ನಾರಾಯಣದೇವನ ಹಣವನ್ನು ಕೊಡಿಸಿ, ಆ ಕೇರಿಯನ್ನು ಬೊಂತೇಶ್ವರ ದೇವರಿಗೆ ಧಾರಾಪೂರ್ವಕವಾಗಿ ಬಿಟ್ಟುಕೊಟ್ಟಿದ್ದಾರೆ. ಇನ್ನೊಂದು ಶಾಸನದಲ್ಲಿ ಮರುಳಯ್ಯನೆಂಬುವನು ಬೊಂತೇಶ್ವರ ದೇವರಿಗೆ ದಾನ ನೀಡಿದ ಉಲ್ಲೇಖವಿದೆ.[35]

ಬಸವನ ಬಾಗೇವಾಡಿಯ ಶಾಸನಗಳು ಮಲ್ಲಿಕಾರ್ಜುನ, ಸೋಮೇಶ್ವರ ಮತ್ತು ಚನ್ನಕೇಶವ ದೇವಾಲಯಗಳನ್ನೂ ಉಲ್ಲೇಖಿಸುತ್ತವೆ. ಈಶ್ವವರ ದೇವಾಲಯವೆಂದು ಕರೆಯುತ್ತಿರುವ ಒಂದು ಹಾಳು ದೇಗುಲ ಪಟ್ಟಣದ ಮಧ್ಯದಲ್ಲಿದೆ. ಅದನ್ನು ಶಾಸನ ಉಲ್ಲೇಖಿತ ಯಾವ ದೇವಸ್ಥಾನವೆಂದು ಗುರುತಿಸುವುದು ಕಷ್ಟ. ಬಸವೇಶ್ವರ ದೇವಾಲಯದ ಹೊರ ಮತ್ತು ಒಳ ಆವರಣಗಳಲ್ಲಿ ದೇವಾಲಯ ನಿರ್ಮಾಣಕ್ಕೆ ಬಳಸಿದ ಕಂಬ, ಪ್ರವೇಶದ್ವಾರ ಮೊದಲಾದ ಶಿಲಾ ಅವಶೇಷಗಳು ಕಂಡು ಬಂದಿವೆ. ಇವುಗಳನ್ನು ಗಮನಿಸಿದರೆ, ಈ ಭಾಗದಲ್ಲಿ ಶಾಸನ ಉಲ್ಲೇಖಿತ ಎರಡು ದೇವಾಲಯಗಳು ಇದ್ದಿರಬಹುದೆಂದು ಊಹಿಸಲು ಅವಕಾಶವಿದೆ.

ಬೊಂತೇಶ್ವರ ದೇವಾಲಯದ ಹೆಸರು ಬಸವೇಶ್ವರವೆಂದು ಇತ್ತೀಚೆಗೆ ಬದಲಾದಂತೆ ಕಾಣುತ್ತದೆ. ಈ ದೇವಾಲಯದಲ್ಲಿರುವ ಬೃಹತ್ ನಂದಿ ಶಿಲ್ಪದಿಂದ ಇಲ್ಲವೆ ಬಸವಣ್ಣನವರ ಸ್ಮರಣೇಗಾಗಿ ಇದನ್ನು ಈ ರೀತಿಯನ್ನು ಕರೆದಿರಬಹುದು. ಇದರ ಬಗ್ಗೆ ಹೆಚ್ಚಿನ ಅಧ್ಯಯನದ ಅವಶ್ಯವಿದೆ.

‌ಈ ಬೊಂತೇಶ್ವರ ಎನ್ನುವುದು ವ್ಯಕ್ತಿಯ ನಾಮವನ್ನು ಸೂಚಿಸುವ ಪದವಾಗಿದೆ. ಐತಿಹಾಸಿಕ ವ್ಯಕ್ತಿಗಳು ದೇವರಾಗಿ ಪೂಜೆಗೊಳ್ಳುವ ಸಂಪ್ರದಾಯ ಪ್ರಾಗಿತಿಹಾಸ ಕಾಲದಿಂದಲೇ ಕಂಡುಬರುತ್ತದೆ. ಆದ್ದರಿಂದ ದೇವಾಲಯವನ್ನು ನಿರ್ಮಿಸಿದ ವ್ಯಕ್ತಿ ತನ್ನ ಹೆಸರಿನಿಂದ ಇಲ್ಲವೆ ತನ್ನ ಪೂರ್ವಿಕರ ಹೆಸರಿನಿಂದ ಕರೆದು, ನಿರ್ವಹಣೆಗಾಗಿ ದಾನ-ದತ್ತಿಗಳನ್ನು ಬಿಡುತ್ತಿದ್ದ. ದಂಡನಾಯಕ ವಾಮದೇವಯ್ಯ ಪ್ರತಿಷ್ಠೆ ಮಾಡಿದ ವಾಮೇಶ್ವರ, ನೀಲಕಂಠ ನಾಯಕ ನಿರ್ಮಿಸಿದ ನೀಲಕಂಠೇಶ್ವರ, ಹೀಳಸೋವರಸನಿಂದ ಸೋಮನಾಥ, ಶಿವರಾಜ ಚಮುಪನಿಂದ ಶಿವಲಿಂಗ, ಕೈಳಾಸರಸರಿಂದ ಕೈಳಾಸೇಶ್ವರ, ಮಹಾಮಂಡಳೇಶ್ವರ ಕೊಪ್ಪರಸನಿಂದ ಕೊಪ್ಪೇಶ್ವರ ಮೊದಲಾದವರು ದೇವಾಲಯಗಳನ್ನು ನಿರ್ಮಿಸಿ, ತಮ್ಮ ಹೆಸರಿನಿಂದ ಕರೆದಿದ್ದಾರೆ. ಅಧಿಕಾರಿಗಳು ಅರಸನ ಹೆಸರಿನಲ್ಲಿ ದೇವಾಲಯವನ್ನು ಕಟ್ಟಿಸಿ ದಾನ-ದತ್ತಿಗಳನ್ನು ಬಿಟ್ಟಿರುವ ವಿವರಗಳನ್ನು ಈ ಭಾಗದ ಅನೇಕ ಶಾಸನಗಳು ವ್ಯಕ್ತಪಡಿಸುತ್ತವೆ. ಚಾಲುಕ್ಯ ಅರಸ ನಾಲ್ಕನೆಯ ವಿಕ್ರಮಾದಿತ್ಯನ ಹೆಂಡತಿಯ ಹೆಸರು ಬೊಂತಾದೇವಿ. ಇವಳ ಹೆಸರು ಮನಗೂಳಿಯ ಶಾಸನದಲ್ಲಿದೆ. ಇದು ಕ್ರಿ.ಶ. ೧೧೬೧ರ ಕಳಚುರಿಗಳ ಕಾಲದಲ್ಲಿ ಬರೆಯಲ್ಪಟ್ಟಿದೆ. ಚಾಳುಕ್ಯರ ವಂಶಾವಳಿಯನ್ನು ಹೇಳುವಾಗ ಸಹಜವಾಗಿ ಬೊಂತಾದೇವಿಯ ವರ್ಣನೆ ಬಂದಿದೆ.[36]

ಇನ್ನೊಂದು ಬಾಗೇವಾಡಿಯ ಕ್ರಿ.ಶ. ೧೦೪೯ರ ಚಾಳುಕ್ಯ ಅರಸ ಮೊದಲನೆಯ ಸೋಮೇಶ್ವರನ ಶಾಸನದಲ್ಲಿ ಅವನ ಪಿರಿಯರಸಿ ಮೈಲಳದೇವಿಯು ಶ್ರೀ ಬಲ್ಲವರಸರ ಸಮ್ಮುಖದಲ್ಲಿ ಅಲ್ಲಿಯ ಬೊಂಥಾದೇವ ಮತ್ತು ಸಮಸ್ತ ಪ್ರಧಾನರು ಸೇರಿದಾಗ, ಭತ್ತ ಗ್ರಾಮ ಹೊನ್ನವಾಡವನ್ನು ಸೋಮನಾಥ ದೇವರ ದೇವಾಲಯದ ಖಂಡಸ್ಪುಟಿತ ಜೀರ್ಣೋದ್ಧಾರಕ್ಕಾಗಿ ಪಾಶುಪತ ಯೋಗಾಚಾರ್ಯ ಜ್ಞಾನರಾಶಿ ವ್ಯಾಖ್ಯಾನ ದೇವರಿಗೆ ದಾನ ಕೊಟ್ಟಿರುವ ವಿಷಯವನ್ನು ತಿಳಿಸುತ್ತದೆ.[37] ಪ್ರಸ್ತುತ ದೇವಾಲಯದ ವಾಸ್ತು ಲಕ್ಷಣಗಳನ್ನು ಗಮನಿಸಿದರೆ ಚಾಳುಕ್ಯರ ಆರಂಭ ಕಾಲದಲ್ಲಿ ನಿರ್ಮಾಣವಾಗಿ ಕ್ರಮೇಣ ಜೀರ್ಣೋದ್ಧಾರಗೊಂಡಿದೆ ಎಂದು ಹೇಳಬಹುದು. ಈ ಹಿನ್ನೆಲೆಯಲ್ಲಿ ಬಾಗೇವಾಡಿಯಲ್ಲಿ ಪ್ರಧಾನನಾಗಿರುವ ಬೊಂಥಾದೇವ ತನ್ನ ಹೆಸರಿನಲ್ಲಿ ದೇವಾಲಯವನ್ನು ಕಟ್ಟಿರುವ ಸಾಧ್ಯತೆ ಇದೆ. ಇಲ್ಲವೇ ಅನಂತರ ಅವನ ಕುಟುಂಬದವರು ಈ ದೇವಾಲಯವನ್ನು ಕಟ್ಟಿಸಿರಬಹುದು.

ಬಸವನ ಬಾಗೇವಾಡಿ ಪರಿಸರದ್ಲಲಿ ಬೊಂತೇಶ್ವರ ದೇವಾಲಯ ವಿಭಿನ್ನ ತಳವಿನ್ಯಾಸದಿಂದ ಕೂಡಿದೆ. ತ್ರಿರಥದಲ್ಲಿ ಮುಂಚಾಚಿ ನಕ್ಷತ್ರಕಾರಾದ ಮಾದರಿಯಂತೆ ಕಾಣುವ ತಳವಿನ್ಯಾಸ ಮಾತ್ರವಲ್ಲದೇ ಮುಖಮಂಟಪ, ಸಭಾಮಂಟಪಗಳ ನಿರ್ಮಿತಿಯಲ್ಲೂ ಇತರ ದೇವಾಲಯಗಳಿಗಿಂತ ಭಿನ್ನವಾಗಿದೆ. ನಕ್ಷತ್ರಾಕಾರದ ತಳವಿನ್ಯಾಸದ ಮಾದರಿ ಹೊಯ್ಸಳರ ಕಾಲದ ಒಂದು ವಿಶಿಷ್ಟ ಲಕ್ಷಣವೆಂದು ಭಾವಿಸಲಾಗಿತ್ತು. ಆದರೆ ಈ ರೀತಿಯ ಬೆಳವಣಿಗೆ ರಾಷ್ಟ್ರಕೂಟರ ಕಾಲದಿಂದಲೇ ಪ್ರಾರಂಭವಾಗಿರುವುದು ಕೊಣ್ಣೂರಿನ (ನರಗುಂದ ತಾ. ಗದಗ ಜಿ.) ಪರಮೇಶ್ವರ ದೇವಾಲಯದಿಂದ ತಿಳಿಯುತ್ತದೆ. ಇದನ್ನು ರಾಷ್ಟ್ರಕೂಟ ಅರಸ ಅಮೋಘವರ್ಷನ ದಂಡನಾಯಕ ಬಂಕೆಯ ಅರಸ ಸುಮಾರು ೮೫೦ರಲ್ಲಿ ಕಟ್ಟಿಸಿದ ಮೂಲಥ ಜೈನ ಬಸದಿ. ಇದರ ತಳವಿನ್ಯಾಸದಲ್ಲಿ ಗರ್ಭಗೃಹವು ನಕ್ಷತ್ರಾಕಾರದಲ್ಲಿದೆ. ನಂತರದ ಬೆಳವಣಿಗೆ ಸುಮಾರು ೧೦ನೆಯ ಶತಮಾನದಲ್ಲಿ ನಿರ್ಮಾಣವಾದ ಸವಡಿಯ (ರೋಣ ತಾ. ಗದಗ ಜಿ.) ತ್ರೈಪುರಷ ದೇವಾಲಯದಲ್ಲಿ ಕಾಣುತ್ತದೆ. ಇದರ ಗರ್ಭಗೃಹವು ಕೂಡಾ ನಕ್ಷತ್ರಾಕಾರದಲ್ಲಿದೆ. ಮುಂದಿನ ಬೆಳವಣಿಗೆಯನ್ನು ಭಾರತದಲ್ಲಿಯೇ ವಿಶಿಷ್ಟ ಮಾದರಿಯ ದೇವಾಲಯವೆಂದು ಹೆಸರು ಮಾಡಿರುವ ಡಂಬಳದ ದೋಡ್ಡಬಸಪ್ಪ ದೇವಾಲಯದ ಗರ್ಭಗೃಹವೂ ಇದೇ ವಿನ್ಯಾಸದಲ್ಲಿದೆ. ಆದರೆ ಇಲ್ಲಿ ಗರ್ಭಗೃಹದೊಂದಿಗೆ ಸಭಾಮಂಟಪವನ್ನೂ ನಕ್ಷತ್ರಾಕಾರದ ತಳವಿನ್ಯಾಸದಲ್ಲಿ ನಿರ್ಮಿಸಲಾದಸಗಿದೆ. ಈ ರೀತಿಯ ಬೆಳವಣಿಗೆಯಲ್ಲಿ ಏಕೈಕ ದೇವಾಲಯ ಇದಾಗಿದೆ. ಆದರೆ ಕೊಣ್ಣೂರು ಮತ್ತು ಸೂವಡಿಯ ದೇವಾಲಯದ ಮುಂದಿನ ಬೆಳವಣಿಗೆ ಬಾಗೇವಾಡಿಯ ಬೊಂತೇಶ್ವರ ದೇವಾಲಯದಲ್ಲಿ ಕಾಣುತ್ತದೆ. ಇತ್ತೀಚೆಗೆ ಈ ದೇವಾಲಯದ ಜೀರ್ಣೋದ್ಧಾರಕ್ಕಾಗಿ ಸುತ್ತಲೂ ಅಗೆದಾಗ, ಇದರ ಸಭಾಮಂಟಪವೂ ನಕ್ಷತ್ರಾಕಾರದಲ್ಲಿರುವುದು ಗೋಚರಿಸಿತು. ಡಂಬಳದ ದೊಡ್ಡ ಬಸಪ್ಪ ದೇವಾಲಯ ಪೂರ್ಣ ನಕ್ಷತ್ರಾಕಾರದಲ್ಲಿದ್ದರೆ, ಬಾಗೇವಾಡಿಯ ಬೋಂತೇಶ್ವರ ದೇವಾಲಯದ ಗರ್ಭಗೃಹ ಮತ್ತು ಸಭಾಮಂಟಪ ತ್ರಿರಥದಲ್ಲಿ ಮುಂಚಾಚಿವೆ. ಇದರಿಂದ ವಾಸ್ತುಶಿಲ್ಪ ಅಧ್ಯಯನದಲ್ಲಿ ಕೆಲವೇ ದೇವಾಲಯಗಳಂತೆ ಇದನ್ನು ವಿಶಿಷ್ಟ ತಳವಿನ್ಯಾಸ ಹೊಂದಿರುವ ದೇವಾಲಯವೆಂದು ಪರಿಗಣಿಸಬೇಕಾಗುತ್ತದೆ.

ನಸುಗೆಂಪು ಅಗ್ನಿ ಶಿಲೆಗಳಲ್ಲಿ ನಿರ್ಮಾಣವಾದ ಈ ದೇವಾಲಯ ಗರ್ಭಗೃಹ, ಅಂತರಾಳ, ಸಭಾಮಂಟಪ, ಮತ್ತು ಮುಖಮಂಟಪಗಳಿಂದ ಕೂಡಿದೆ. ಸೂಕ್ಷ್ಮ ಕೆತ್ತನೆಗಳಲ್ಲಿರುವ ಪಶ್ಚಿಮ ಗರ್ಭಗೃಹದ ಪ್ರವೇಶದ್ವಾರ ಎಂಟು ಶಾಖೆಗಳನ್ನೊಳಗೊಂಡಿದೆ. ಅದರಲ್ಲಿ ಪದ್ಮ, ಕಲ್ಪಲತಾ ಸುರುಳಿ, ಜೊಡಿ ವೃತ್ತಾಕಾರದ ಅರ್ಧಗಂಬಗಳ ಮಧ್ಯ ಅಲಂಕೃತ ಪಟ್ಟಿಕೆ, ಹೂವಿನ ಎಸಳುಗಳಲ್ಲಿ ರಸಿಕ ದಂಪತಿಗಳ ಶಿಲ್ಪ, ವಜ್ರಾಕಾರದ ಕೆತ್ತನೆ ಮೊದಲಾದವುಗಳಿಂದ ಕೂಡಿದೆ. ಲಲಾಟಬಿಂಬದಲ್ಲಿ ಗಜಲಕ್ಷ್ಮೀ ಮೇಲ್ಭಾಗ ರೇಖಾನಾಗರ ಶಿಖರ ಪಟ್ಟಿಕೆಗಳು, ಇಕ್ಕೆಲಗಳಲ್ಲಿ ತ್ರಿಶೂಲ, ಡಮರು, ಗದಾ ಹಿಡಿದು ನಿಂತ ದ್ವಾರಪಾಲಕರು ಮತ್ತು ಚಾಮರಧಾರೆಯರ ಶಿಲ್ಪಗಳಿವೆ. ಒಳಗೆ ಶಿವಲಿಂಗವನ್ನು ಪ್ರತಿಷ್ಠಾಪಿಸಲಾಗಿದೆ. ತೆರೆದ ಅಂತರಾಳದಲ್ಲಿ ಎರಡರಂತೆ ನಿಲ್ಲಿಸಿದ ಒಟ್ಟು ಎಂಟು ಕಂಬಗಳಿವೆ. ಅವು ಕೆಳಗೆ ಅಸಮ ಚೌಕಾಕಾರ, ಮೇಲ್ಭಾಗ ವೃತ್ತಾಕಾರದಲ್ಲಿವೆ. ಮುಂಭಾಗದ ಕಂಬಗಳು ಮಕರತೋರಣ ಪಟ್ಟಿಕೆಯನ್ನು ಹೊತ್ತು ನಿಂತಿವೆ. ಮಕರದ ಬಾಯಿಯಿಂದ ಹೊರಹೊಮ್ಮಿದ ತೋರಣದಲ್ಲಿ ಬ್ರಹ್ಮ, ವಿಷ್ಣು, ಮಹೇಶ್ವರರು ಹಾಗೂ ಇಕ್ಕೆಲಗಳಲ್ಲಿ ಚಾಮರಧಾರೆಯರ ಶಿಲ್ಪಗಳಿವೆ.

ಅಂತರಾಳಕ್ಕೆ ಹೊಂದಿಕೊಂಡಂತೆ ದಕ್ಷಿಣ, ಉತ್ತರ ಭಾಗಗಳಲ್ಲಿ ಮುಖಮಂಟಪಗಳಿವೆ. ದಕ್ಷಿಣ ಮತ್ತು ಉತ್ತರ ಭಾಗಗಳಲ್ಲಿಯ ತೆರದ ಮುಖಮಂಟಪಗಳ ಇಕ್ಕೆಲಗಳಲ್ಲಿ ಕಕ್ಷಾಸನ ಮತ್ತು ಕಂಬಗಳಿವೆ. ಇವುಗಳ ಪ್ರವೇಶದ್ವಾರಗಳು ಗರ್ಭಗೃಹದ ಪ್ರವೇಶದ್ವಾರದಂತೆ ಸೂಕ್ಷ್ಮ ಕೆತ್ತನೆಗಳಿಂದ ಕೂಡಿದ್ದು, ಲಲಾಟಬಿಂಬದಲ್ಲಿ ಗಜಲಕ್ಷ್ಮೀ, ಇಕ್ಕೆಲಗಳಲ್ಲಿ ಚಾಮರಧಾರೆಯರ ಶಿಲ್ಪಗಳಿವೆ. ಅಂತರಾಳ ಮತ್ತು ಸಭಾಮಂಟಪಗಳ ಮಧ್ಯ ಮೂರು ಅಂಕಣಗಳ ದಾರಿ ಇದೆ. ಸಭಾಮಂಟಪದ ಮಧ್ಯ ನಾಲ್ಕು ಬೃಹತ್ ಕಂಬಗಳು, ಅವುಗಳ ಎಡ ಬಲ ಚಿಕ್ಕ ಉಪಕಂಬಗಳಿವೆ. ಮಧ್ಯದ ಕಂಬಗಳು ಕೆಳಗೆ ಅಸಮ ಚೌಕಾಕಾರ, ಅದರ ಮೇಲ್ಭಾಗ ನಾಲ್ಕೂ ಮೂಲೆಗಳಲ್ಲಿ ಚಿಕ್ಕ ಚಿಕ್ಕ ಉಬ್ಬು ಶಿಲ್ಪಗಳನ್ನು ಬಿಡಿಸಲಾಗಿದೆ. ಮಧ್ಯ ೧೬-೮-೧೬ ಭಾಗದ ಪಟ್ಟಿಕೆಗಳಲ್ಲಿ ಪದ್ಮಸಾಲು ಮತ್ತು ಕುಂಭ ಭಾಗವನ್ನು ಪಂಜರ, ಕೀರ್ತಿಮುಖಗಳಿಂದ ಅಲಂಕರಿಸಲಾಗಿದೆ. ಮೇಲ್ಭಾಗ ವೃತ್ತಾಕಾರದ ಮುಚ್ಚಳ, ಚೌಕಾಕಾರದ ಫಲಕ, ಬೋದಿಗೆಗಳಿಂದ ಕೂಡಿವೆ. ಇಕ್ಕೆಲಗಳಲ್ಲಿರುವ ಚಿಕ್ಕ ಕಂಬಗಳು ಕೆಳಗೆ ಅಸಮ ಚೌಕ, ಮೇಲೆ ವೃತ್ತಾಕಾರದಲ್ಲಿವೆ. ಸಭಾಮಂಟಪದ ಮೇಲ್ಭಾಗದ ಅಂಕಣದಲ್ಲಿ ಮಧ್ಯ ಅಷ್ಟಭುಜ ನಟರಾಜ, ಸುತ್ತಲೂ ಅಷ್ಟದಿಕ್ಪಾಲಕರು ಪತ್ನಿ ಸಮೇತರಾಗಿ ತಮ್ಮ ವಾಹನಗಳ ಮೇಲೆ ಕುಳಿತುಕೊಂಡಿದ್ದಾರೆ. ಅವರ ಜೊತೆಗೆ ನೃತ್ಯ, ಸಂಗೀತಕಾರರು ಮತ್ತು ಯೋಧರ ಶಿಲ್ಪಗಳಿವೆ.

ಈ ಅಂಕಣದ ಸುತ್ತಲೂ ಕಿರಿದಾಗುತ್ತ ಹೋಗಿರುವ ಪಟ್ಟಿಕೆಗಳಲ್ಲಿ ರಾಮಾಯಣ ಕಥಾ ಭಾಗಗಳನ್ನೊಳಗೊಂಡ ಶಿಲ್ಪಗಳನ್ನು ಬಿಡಿಸಲಾಗಿದೆ. ಪೂರ್ವದ ಪಟ್ಟಿಕೆಗಳಲ್ಲಿ ರಾಮ, ಲಕ್ಷ್ಮಣ, ಸೀತಾ ನಿಂತುಕೊಂಡಿದ್ದಾರೆ. ಮಧ್ಯದಲ್ಲಿ ರಾಮ ಧನುಷ್ಯ ಹಡಿದು ಜಿಂಕೆಯನ್ನು ಬೆನ್ನಟ್ಟಿ ಓಡುತ್ತಿದ್ದಾನೆ. ಅದರ ಮುಂದಿನ ಭಾಗದಲ್ಲಿ ರಾಮನ ಬಾಣ ಜಿಂಕೆಗೆ ತಗುಲಿದ್ದು, ಬಾಗಿ ಅದನ್ನು ಹಿಡಿಯಲು ಪ್ರಯತ್ನಿಸುತ್ತಿದ್ದಾನೆ. ಮೇಲ್ಭಾಗದ ಪಟ್ಟಿಕೆಯಲ್ಲಿ ರಾವಣ, ಸೀತೆಗೆ ಭಿಕ್ಷೆ ಕೇಳುತ್ತಿದ್ದಾನೆ. ಕೊನೆಯ ಭಾಗದಲ್ಲಿ ರಾವಣ ಸೀತೆಯನ್ನು ಪುಷ್ಪಕ ವಿಮಾನದಲ್ಲಿ ಹೊತ್ತೊಯುತ್ತಿದ್ದಾನೆ. ಜಟಾಯುಧ, ಕೈಯಲ್ಲಿ ಖಡ್ಗ ಹಿಡಿದು ಅವರನ್ನು ತಡೆಯುತ್ತಿರುವ ಚಿತ್ರಣವಿದೆ.

ಪಶ್ಚಿಮ ಭಾಗದ ಪಟ್ಟಿಕೆಯಲ್ಲಿ ವಾಲಿ, ಸುಗ್ರೀವರ ಮಧ್ಯ ಯುದ್ಧ ನಡೆದಿದೆ. ರಾಮ ಬಲಭಾಗದಲ್ಲಿ ನಿಂತು ಬಾಣ ಬಿಡುತ್ತಿದ್ದಾನೆ. ಆತನ ಹಿಂದೆ ನಿಂತ ಇಬ್ಬರು ವಾನರ ವ್ಯಕ್ತಿಗಳು ವಾಲಿಯ ಕಡೆಗೆ ಬೆರಳುಮಾಡಿ ತೋರಿಸುತ್ತಿದ್ದಾರೆ. ಎಡಭಾಗದಲ್ಲಿ ವಾನರರು ಸರ್ಪದ ಮೇಲೆ ಕುಳಿತುಕೊಂಡಿದ್ದಾರೆ. ಉತ್ತರ ಭಾಗದ ಪಟ್ಟಿಕೆಯಲ್ಲಿ ನಾಲ್ಕು ಗೂಡುಗಳಿವೆ. ಒಂದರಲ್ಲಿ ಹನುಮನ ಚಿಕ್ಕ ಶಿಲ್ಪ, ಆತನ ಎದುರಿಗೆ ದೊಡ್ಡ ರಾಕ್ಷಸ ಬಾಯಿ ತೆರೆದು ನುಂಗಲು ಪ್ರಯತ್ನಿಸುತ್ತಿದೆ. ಮುಂದಿನ ಭಾಗದಲ್ಲಿ ಹನುಮಂತ ವನದಲ್ಲಿ ಗಿಡದಿಂದ ಗಿಡಕ್ಕೆ ನೆಗೆಯುತ್ತಿದ್ದಾನೆ. ಕೊನೆಯ ಭಾಗದಲ್ಲಿ ಸೀತೆ ಗಿಡದ ಕೆಳಗೆ ಕುಳಿತುಕೊಂಡಿದ್ದಾಳೆ. ಹನುಮಂತ ಅವಳಿಗೆ ಉಂಗುರ ಕೊಡುತ್ತಿದ್ದಾನೆ. ಬಲಭಾಗದಲ್ಲಿ ಇಬ್ಬರು ರಾಕ್ಷಸರು ನಿದ್ದೆ ಮಾಡುತ್ತಿದ್ದಾರೆ. ದಕ್ಷಿಣ ಭಾಗದ ಪಟ್ಟಿಕೆಯಲ್ಲಿ ವಾನರ ಸೈನ್ಯ ಗುಡ್ಡತಂದುಹಾಕಿ ರಸ್ತೆ ನಿರ್ಮಿಸುತ್ತಿವೆ.

ಸಭಾಮಂಟಪ ಮತ್ತು ಮಹಾಮಂಟಪಗಳ ಮಧ್ಯ ದಾರಿ ಇದೆ. ಮುಂಭಾಗ ಸಭಾಮಂಟಪದ ಪ್ರವೇಶದ್ವಾರವನ್ನು ಕೂಡಿಸಲಾಗಿದೆ. ಅದು ಲತಾಸುರುಳಿ, ವೃತ್ತಾಕಾರದ ಅರ್ಧಗಂಬ, ವಜ್ರಾಕಾರದ ಕೆತ್ತನೆ, ಬಳ್ಳಿಯ ಸಾಲು, ಲಲಾಟಬಿಂಬದಲ್ಲಿ ಗಜಲಕ್ಷ್ಮಿ, ಇಕ್ಕೆಲಗಳಲ್ಲಿ ದ್ವಾರಪಾಲಕರು ಮತ್ತು ಚಾಮರಧಾರೆಯರ ಶಿಲ್ಪಗಳಿಂದ ಕೂಡಿದೆ.

ಮುಂದಿನ ಪಂಟಪದಲ್ಲಿ ಚೌಕಾಕಾರದ ನಾಲ್ಕು ಕಂಬಗಳಿವೆ. ಮುಂಭಾಗದ ಎರಡು ಕಂಬಗಳ ಮೇಲೆ ಕಲಚುರಿ ಮತ್ತು ಯಾದವರ ಕಾಲದ ಶಾಸನಗಳಿವೆ. ಇಲ್ಲಿಯ ಕಂಬಗಳ ಮಾದರಿಯು ಬದಲಾಗಿದ್ದರಿಂದ ಅನಂತರ ದೇವಾಲಯವನ್ನು ವಿಸ್ತರಿಸಿರುವ ಸಾಧ್ಯತೆ ಇದೆ. ಮುಖಮಂಟಪದಲ್ಲಿ ಸು. ಐದು ಅಡಿ ಎತ್ತರದ ನಂದಿ ಶಿಲ್ಪವಿದೆ. ಸುತ್ತಲೂ ಗೋಡೆ ನಿರ್ಮಿಸಿ, ಇದನ್ನೆ ಮುಖ್ಯ ಮೂರ್ತಿಯನ್ನಾಗಿ ಮಾಡಿಕೊಳ್ಳಲಾಗಿದೆ. ದೇವಾಲಯದ ಸುತ್ತಲಿನ ಗೋಡೆಯನ್ನು ಜೀರ್ಣೋದ್ಧಾರಗೊಳಿಸಲಾಗುತ್ತಿದೆ. ಗರ್ಭಗೃಹದ ಗೋಡೆ ನಕ್ಷತ್ರಾಕಾರದಲ್ಲಿದ್ದು, ಮೂರೂ ಭಾಗಗಳು ತ್ರಿರಥದಲ್ಲಿ ಮುಂದೆ ಬಂದಿವೆ. ಅಧಿಷ್ಠಾನದಲ್ಲಿ ಉಪಾನ, ಜಗತಿ, ತ್ರಿಪಟ್ಟ ಕುಮುದ, ಗಳ, ಮಕರ ಪಟ್ಟಿಕೆ ಮತ್ತು ಗಳಗಳಿವೆ. ಭಿತ್ತಿಯಲ್ಲಿ ಅರ್ಧಗಂಬ, ಕೂಟ ಕೋಷ್ಠಕಗಳು, ಮೇಲ್ಭಾಗದ ಮಂಜೂರು ಹಂಸ ಬಂದಿತವಾಗಿದೆ. ಸಭಾಮಂಟಪದ ತಳ ವಿನ್ಯಾಸ ವೃತ್ತಾಕಾರದಲ್ಲಿ ಮುಂದುವರೆದಿದೆ. ಇದರ ಅಧಿಷ್ಠಾನದ ಮೇಲೆ ಅರ್ಧಮುಚ್ಚಿದ ಗೋಡೆಯನ್ನು ನಿರ್ಮಿಸಿ ಸಭಾಮಂಟಪದಲ್ಲಿ ಗಾಳಿ ಬೆಳಕಿನ ವ್ಯವಸ್ಥೆ ಮಾಡಿದಂತೆ ಕಾಣುತ್ತದೆ. ಇದರಿಂದ ಸಭಾಮಂಟಪದಲ್ಲಿ ಇನ್ನೂ ಹೆಚ್ಚಿನ ಕಂಬಗಳಿದ್ದು, ಅದು ಬಾಗಳಿಯ ಕಲ್ಲೇಶ್ವರ ಮತ್ತು ಇಟಗಿಯ ಮಹಾದೇವ ದೇವಾಲಯಗಳ ರಂಗಮಂಟಪಗಳಂತೆ ವಿಶಾಲವಾಗಿದ್ದಿತು.

ಈಶ್ವರ ದೇವಾಲಯ, ಬಸವನ ಬಾಗೇವಾಡಿ : ಈ ದೇವಾಲಯ ಪಟ್ಟಣದ ಮಧ್ಯ ಪಶ್ಚಿಮಾಭಿಮುಖವಾಗಿ ನಿರ್ಮಾಣವಾಗಿದೆ. ಮುಂದಿನ ಭಾಗ (ಪ್ರವೇಶದ್ವಾರ, ಮುಖಮಂಟಪ ಹಾಳಾಗಿದ್ದು, ಸಭಾಮಂಟಪದ ಪೂರ್ವ, ದಕ್ಷಿಣ ಉತ್ತರಭಾಗಗಳಲಲ್ಲಿ ಅಂತರಾಳ ಸಹಿತ ಗರ್ಭಗೃಹಗಳಿವೆ. ಈಗ ಪೂರ್ವದ ಗರ್ಭಗೃಹ ಮತ್ತು ದಕ್ಷಿಣದ ಅಂತರಾಳ ಗರ್ಭಗೃಹಗಳು ಹಾಳಾಗಿವೆ. ಸಭಾಮಂಟಪದ ಮಧ್ಯದ ಕಂಬಗಳು ಚಚ್ಚೌಕ ಪೀಠ, ಅಸಮ ಚೌಕಾಕಾರ ಪದ್ಮಬಂಧ, ಮೇಲೆ ೧೬ ಭಾಗಗಳ ಪಟ್ಟಿಕೆಗಳು, ವೃತ್ತಾಕಾರದ ಮುಚ್ಚಳ ಚೌಕಾಕಾರದ ಫಲಕ, ಬೊದಿಗೆಯನ್ನು ಹೊಂದಿವೆ. ಸಭಾಮಂಟಪದ ಪೂರ್ವ, ಉತ್ತರ ಗೋಡೆಗೆ ದೇವಕೊಷ್ಟಕಗಳಿವೆ. ಸಭಾಮಂಟಪಕ್ಕೆ ಹೊಂದಿಕೊಂಡು ಪೂರ್ವಭಾಗದಲ್ಲಿ ಅಂತರಾಳ ಮಾತ್ರವಿದೆ. ಉತ್ತರಭಾಗದ ಅಂತರಾಳ ಸಹಿತ ಗರ್ಭಗೃಹವಿದ್ದು, ಪ್ರವೇಶ ದ್ವಾರ ಪಟ್ಟಿಕೆಗಳಿಂದ ಕೂಡಿದೆ. ಗರ್ಭಗೃಹದಲ್ಲಿ ಶಿವಲಿಂಗ, ಅಂತರಾಳದಲ್ಲಿ ನಂದಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ.

ದೇವಾಲಯದ ಹೊರಗೋಡೆಯ ಅಧಿಷ್ಠಾನ ಮತ್ತು ಗೋಡೆಯ ಮೇಲೆ ಅಡ್ಡಕಪಟ್ಟಿಕೆಗಳಿವೆ. ಗರ್ಭಗೃಹದ ಮೇಲೆ ಸೋಪಾನಗಳಿಂದ ಕೂಡಿದ ಶಿಖರವಿದೆ.

ಕಲ್ಮೇಶ್ವರ ದೇವಾಲಯ, ಇಂಗಳೇಶ್ವರ : ಗ್ರಾಮದ ೧ ಕಿ.ಮೀ. ದಕ್ಷಿಣಕ್ಕೆ ಹಾಳು ತೆಂಗಳೇಶ್ವರದಲ್ಲಿ ಪೂರ್ವಾಭಿಮುಖವಾಗಿ ಈ ದೇವಾಲಯವು ನಿರ್ಮಾಣವಾಗಿದೆ. ಇದು ಮುಖಮಂಟಪ ಪಶ್ಚಿಮ, ದಕ್ಷಿಣ, ಉತ್ತರ ಭಾಗಗಳಲ್ಲಿ ಗರ್ಭಗೃಹಗಳು, ಅವುಗಳ ಮುಂಭಾಗದ ಅಂತರಾಳಗಳು, ಸಭಾಮಂಟಪ ಮತ್ತು ಮುಖಮಂಟಪಗಳಿಂದ ಕೂಡಿದೆ. ಈಗ ಮುಖಮಂಟಪ ಹಾಗೂ ಸಭಾಮಂಟಪ ಹಾಳಾಗಿದ್ದು, ತಳಪಾಯ ಮಾತ್ರ ಉಳಿದಿದೆ. ಪಶ್ಚಿಮದ ಅಂತರಾಳದ ದ್ವಾರಕ್ಕೆ ಅರ್ಧಗಂಭಗಳು ಚಾಮರ ಹಿಡಿದು ಸಮಭಂಗಿಯಲ್ಲಿ ನಿಂತ ದ್ವಾರಪಾಲಕ ಶಿಲ್ಪಗಳು ಮತ್ತು ಇಕ್ಕೆಲಗಳಲ್ಲಿ ಜಾಲಂಧ್ರಗಳಿವೆ. ಗರ್ಭಗೃಹದ ದ್ವಾರವು ಹೂವಿನ ಎಸಳುಗಳು, ಅರ್ಧಗಂಬ, ಲಲಾಟಬಿಂಬದಲ್ಲಿ ಗಜಲಕ್ಷ್ಮಿ, ಡಮರು-ತ್ರಿಶೂಲಗಳನ್ನು ಹಿಡಿದಿರುವ ದ್ವಾರಪಾಲಕರು ಮತ್ತು ಚಾಮರ ಹಿಡಿದು ಸಮಭಂಗಿಯಲ್ಲಿ ನಿಮತ ದ್ವಾರಪಾಲಕ ಶಿಲ್ಪಗಳು ಮತ್ತು ಇಕ್ಕೆಲಗಳಲ್ಲಿ ಜಾಲಂಧ್ರಗಳಿವೆ. ಗರ್ಭಗೃಹದ ದ್ವಾರವು ಹೂವಿನ ಎಸಳುಗಳು, ಅರ್ಧಗಂಬ, ಲಲಾಟಬಿಂಬದಲ್ಲಿ ಗಜಲಕ್ಷ್ಮಿ, ಡಮರು-ತ್ರಿಶೂಲಗಳನ್ನು ಹಿಡಿದಿರುವ ದ್ವಾರಪಾಲಕರು ಮತ್ತು ಚಾಮರಧಾರೆಯರ ಶಿಲ್ಪಗಳಿವೆ. ಗರ್ಭಗೃಹದಲ್ಲಿ ಶಿಲಿಂಗವನ್ನು ಪ್ರತಿಷ್ಠಾಪಿಸಲಾಗಿದೆ. ದಕ್ಷಿಣ, ಉತ್ತರ ಭಾಗಗಳಲ್ಲಿ ಚಿಕ್ಕ ಗರ್ಭಗೃಹಗಳು, ಮುಂಭಾಗ ತೆರೆದ ಅಂತರಾಳಗಳಿವೆ. ಈಗ ಉಳಿದಿರುವ ಗೋಡೆಯ ಮೇಲೆ ಶಿಖರ ಪಟ್ಟಿಕೆಗಳಿಂದ ಕೂಡಿದ ಅರ್ಧಗಂಬಗಳಿವೆ. ಗರ್ಭಗೃಹದ ಮೇಲ್ಭಾಗ ಅಂತಸ್ತಿನಿಂದ (ತಲಗಳು) ಕೂಡಿದ ಹಾಳಾದ ಅವಸ್ಥೆಯಲ್ಲಿರುವ ಶಿಖರವಿದೆ.

ಕಲ್ಮೇಶ್ವರ ದೇವಾಲಯದ ದಕ್ಷಿಣ ಭಾಗದಲ್ಲಿ ಉತ್ತರಾಭಿಮುಖವಾಗಿ ನಿರ್ಮಾಣವಾಗಿರುವ ಈಶ್ವರ ದೇವಾಲಯವಿದೆ. ವಿಶಾಲವಾದ ಸಭವಂಟಪದಲ್ಲಿ ಮಧ್ಯದ ನಾಲ್ಕು ಕಂಬಗಳು ಕೆಳಗೆ ಅಸಮ ಚೌಕಾಕಾರ, ಮೇಲೆ ಅಷ್ಟಭಾಗ, ಅದರ ಮೇಲ್ಭಾಗ ಚೌಕ ಮುಖಗಳು, ವೃತ್ತಾಕಾರದ ಮುಚ್ಚಳ, ಫಲಕ, ಬೋದಿಗೆಗಳಿಂದ ಕೂಡಿವೆ. ಗರ್ಭಗೃಹ ಹಾಳಾಗಿದೆ.

ಶೋಭಾನದೇವರ ಗುಡಿ, ಇಂಗಳೇಶ್ವರ : ಗ್ರಾಮದ ದಕ್ಷಿಣ ಭಾಗದಲ್ಲಿ ಪೂರ್ವಾಭಿಮುಖವಾಗಿ ಕೆಂಪು ಮರುಳು ಶಿಲೆಯಲ್ಲಿ ನಿರ್ಮಾಣವಾಗಿದೆ. ಗರ್ಭಗೃಹ, ಅಂತರಾಳ, ಸಭಾಮಂಟಪ ಮತ್ತು ಮುಖಮಂಟಪ ಭಾಗಗಳನ್ನೊಳಗೊಂಡಿದೆ. ಈಗ ಮುಖಮಂಟಪ ಹಾಳಾಗಿದ್ದು, ಸಭಾಮಂಟಪದ ಮಧ್ಯದ ನಾಲ್ಕು ಕಂಬಗಳು ಕೆಳಗೆ ಮೇಲೆ ಚೌಕಾಕಾರ ಮೇಲೆ ೧೬-೮ ಭಾಗದ ಪಟ್ಟಿಕೆ ವೃತ್ತಾಕಾರದ ಫಲಕ ಬೋದಿಗೆಯನ್ನು ಹೊಂದಿವೆ. ಮಧ್ಯದ ಭುವನೇಶ್ವರಿಯಲ್ಲಿ ಅಷ್ಟದಿಕ್ಪಾಲಕರು, ಮಧ್ಯ ಅಷ್ಟ ಭುಜಗಳನ್ನು ಹೊಂದಿದ ನಟರಾಜ, ಕೆಳಭಾಗ ಚಾಮರಧಾರೆಯರಿದ್ದಾರೆ. ತೆರೆದ ಅಂತರಾಳದ ಪ್ರವೇಶದ ಮೇಲ್ಭಾಗ ಮಕರ ತೋರಣವಿದೆ. ಗರ್ಭಗೃಹದ ದ್ವಾರದ ಲಲಾಟಬಿಂಬದಲ್ಲಿ ಗಜಲಕ್ಷ್ಮಿ ಶಿಲ್ಪ, ಗರ್ಭಗೃಹದಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸಲಾಗಿದೆ. ಹೊರಗೋಡೆಗೆ ಅರ್ಧಗಂಬಗಳು, ಅವುಗಳ ಮೇಲೆ ಬೋದಿಗೆಗಳಿವೆ. ಈ ದೇವಾಲಯದ ಲಕ್ಷಣಗಳಿಂದ ರಾಷ್ಟ್ರಕೂಟರ ಉತ್ತರಾರ್ಧದ್ಲಲಿ ನಿರ್ಮಾಣವಾಗಿದೆ ಎಂದು ಹೇಳಬಹುದು.

ಸೋಮನಾಥ ದೇವಾಲಯ, ಇಂಗಳೇಶ್ವರ : ಈ ಗುಡಿ ಇಂಗಳೇಶ್ವರ ಗ್ರಾಮದ ಮಧ್ಯ ಪಶ್ಚಿಮಾಭಿಮುಖವಾಗಿ ನಿರ್ಮಾಣವಾಗಿದೆ. ಪೂರ್ವ, ದಕ್ಷಿಣ, ಉತ್ತರ ಭಾಗಗಳಲ್ಲಿ ಅಂತರಾಳ ಸಹಿತ ಗರ್ಭಗೃಹಗಳು, ಸಭಾಮಂಟಪ ಮತ್ತು ರಂಗಮಂಟಪಗಳಿಂದ ಕೂಡಿದೆ. ತೆರೆದ ರಂಗಮಂಟಪಕ್ಕೆ ಸುತ್ತಲೂ ಕಕ್ಷಾಸನ ಹಾಗೂ ಪಶ್ಚಿಮ, ದಕ್ಷಿಣಭಾಗಗಳಲ್ಲಿ ಪ್ರವೇಶಗಳಿವೆ. ರಂಗಮಂಟಪದ ಮಧ್ಯದ ನಾಲ್ಕು ಕಂಬಗಳು ಚಚ್ಚೌಕ ಪೀಠ ಕಾಂಡದ ಕೆಳಭಾಗ ಅಸಮ ಚೌಕಾಕಾರ ಅದರ ಮೇಲೆ ವೃತ್ತಾಕಾರ, ಅದರಲ್ಲಿ ಮಣಿಹಾರ, ಪತ್ರಲತೆ, ಲತಾಸುಳಿವುಗಳಿವೆ, ಮೇಲ್ಭಾಗ ಚಚ್ಚೌಕ, ವೃತ್ತಾಕಾರದ ಮುಚ್ಚಳ, ಚೌಕಾಕಾರದ ಫಲಕ ಹಾಗೂ ಬೋದಿಗೆಗಳಿಂದ ಕೂಡಿವೆ.

ಸಭಾಮಂಟಪದ ದ್ವಾರವು ಅರ್ಧಗಂಬ, ಹೂವಿನ ಎಸಳುಗಳಿಂದ ಕೂಡಿದೆ. ಅದರಲ್ಲಿಯ ಕಂಬಗಳು ರಂಗಮಂಟಪದಂತಿದ್ದು, ಕೆಳಗಿನ ಚೌಕಾಕಾರದ ಮೇಲೆ  ೧೬ ಭಾಗಗಳನ್ನೊಳಗೊಂಡು ವೃತ್ತಾಕರದಲ್ಲಿವೆ. ಮೂರೂ ಗರ್ಭಗೃಹಗಳ ಮುಂಭಾಗ ತೆರೆದ ಅಂತರಾಳಗಳಿಗೆ ಪ್ರವೇಶದ ಇಕ್ಕೆಲುಗಳಲ್ಲಿ ಎರಡು ಕಂಬಗಳಿವೆ. ಪೂರ್ವದ ಅಂತರಾಳದ ಕಂಬಗಳ ಮೆಲೆ ಚಾಮರ ಹಿಡಿದು ನಿಂತ ದ್ವಾರಪಾಲಕ ಮೂರ್ತಿಗಳಿವೆ. ಗರ್ಭಗೃಹದ ದ್ವಾರ ಅರ್ಧಗಂಬ, ಲತಾಸುರುಳಿ, ಹೂವಿನ ಎಸಳು, ಮೇಲ್ಭಾಗ ರೇಖಾನಾಗರ ಶಿಖರಗಳಿಂದ ಕೂಡಿದೆ. ಲಲಾಟಬಿಂಬದಲ್ಲಿ ಗಜಲಕ್ಷ್ಮಿ, ಇಕ್ಕೆಲಗಳಲ್ಲಿ ದ್ವಾರಪಾಲಕರು ಮತ್ತು ಚಾಮರಧಾರೆಯರ ಶಿಲ್ಪಗಳಿವೆ. ದಕ್ಶಿಣ ಗರ್ಭಗೃಹದ ಪ್ರವೇಶ ದ್ವಾರಕ್ಕೆ ಬಿಲ್ಲು – ಬಾಣ ಹಿಡಿದು ನಿಂತ ಸ್ತ್ರೀ ದ್ವಾರಪಾಲಕರಿರುವುದು ವಿಶೇಷ. ಮೂರೂ ಗರ್ಭಗೃಹಗಳಲ್ಲಿ ಶಿವಲಿಂಗಗಳನ್ನು ಪ್ರತಿಷ್ಠಾಪಿಸಲಗಿದೆ.

ದೇವಾಲಯದ ಹೊರಗೋಡೆಯನ್ನು ಜೀರ್ಣಗೊಳಿಸಲಾಗಿದ್ದು, ಸಭಾಮಂಟಪದ ಅಧಿಷ್ಠಾನ ಭಾಗದಲ್ಲಿ ಉಪಾನ, ಜಗತಿ, ಗಳ ಮತ್ತು ಪದ್ಮ ಪಟ್ಟಿಕೆಗಳು ಮಾತ್ರ ಗೋಚರಿಸುತ್ತವೆ.

ಈ ಗ್ರಾಮದ ಮಧ್ಯದಲ್ಲಿ ಪೂರ್ವಾಭಿಮುಖವಾಗಿ ಗರ್ಭಗೃಹ, ಅಂತರಾಳ ಮತ್ತು ಸಭಾಮಂಟಪಗಳಿಂದ ಕೂಡಿದ ಕಲ್ಮೇಶ್ವರ ದೇವಾಲಯವಿದೆ. ಸಭಾಮಂಟದಲ್ಲಿಯ ಕಂಬಗಳು ಗ್ರಾಮದ ಇತರ ದೇವಾಲಯಗಳ ಕಂಬಗಳ ಮಾದರಿಯಲ್ಲಿವೆ.

ಅಂತರಾಳದ ಇಕ್ಕೆಲಗಳಲ್ಲಿ ಗೂಡುಗಳು, ಪ್ರವೇಶದಲ್ಲಿರುವ ಕಂಬಗಳ ಮೇಲೆ ಚಾಮರ ಹಿಡಿದು  ನಿಂತ ದ್ವಾರಪಾಲರ ಶಿಲ್ಪಗಳಿವೆ. ಗರ್ಭಗೃಹದ ದ್ವಾರವು ಅರ್ಧಗಂಬ, ಹೂವಿನ ಎಸಳು, ಲಲಾಟಬಿಂಬದಲ್ಲಿ ಶಿವಲಿಂಗ ಅದರ ಎದುರಿಗೆ ಕುಳಿತ ವ್ಯಕ್ತಿ ಪೂಜೆಸಲ್ಲಿಸುವಂತಿದೆ. ಗರ್ಭಗೃಹದಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸಲಾಗಿದೆ.

ದೇವಾಲಯದ ಹೊರಗೋಡೆಗೆ ಪದ್ಮಾಲಂಕೃತ ಅರ್ಧಗಂಬಗಳು ಫಲಕ ಬೋದಿಗೆಗಳನ್ನು ಹೊಂದಿವೆ. ಹೊರಗೋಡೆಯ ಮೂರು ಮುಖಗಳಲ್ಲಿ ಅರ್ಧಗಂಭ, ದ್ರಾವಿಡ ಶಿಖರಪಟ್ಟಿಕೆಗಳಿಂದ ಅಲಂಕರಣಗೊಳಿಸಿದ ದೇವಕೋಷ್ಠಕಗಳಿವೆ. ಗರ್ಭಗೃಹದ ಮೇಲೆ ತಲಗಳಿಂದ ಕೂಡಿದ ದ್ರಾವಿಡ ಮಾದರಿಯ ಶಿಖರವಿದೆ.

ರಾಮೇಶ್ವರ ದೇವಾಲಯ, ಮನಗೂಳಿ : ಶಾಸನಗಳಲ್ಲಿ ಗ್ರಾಮನ್ನು ಮನುಕವಳ್ಳಿ, ಮಣಿಂಗವಳ್ಳಿ ಎಂದು ಕರೆಯಲಾಗಿದೆ. ಕ್ರಿ.ಶ. ೧೧೬೧ರ ಶಾಸನದಲ್ಲಿ ಚಂದಿರಾಜ ಮತ್ತು ಚಂದ್ರಾಂಬಿಕೆಯರ ಮಗ ಬಸವ (ಬಸವಯ್ಯರಸ) ನೆಂಬುವನು ಕಲಿದೇವೇಶ್ವರ ದೇವಾಲಯವನ್ನು ಕಟ್ಟಿಸಿದನು. ಇದಕ್ಕೆ ಅಯ್ಯಾವಳೆ ಅಯನೂರ್ವಸ್ವಾಮಿಗಳು ಹಾಗೂ ಗ್ರಾಮದ ಮಹಾಜನರು ಭೂದಾನಮಾಡಿದ ಉಲ್ಲೇಖವಿದೆ.[38]

ಮನಗೂಳಿ ಗ್ರಾಮದ ಮಧ್ಯದಲ್ಲಿರುವ ರಾಮೇಶ್ವರ ದೇವಾಲಯವು ದಕ್ಷಿಣಾಭಿಮುಖವಾಗಿ ನಿರ್ಮಾಣವಾಗಿದೆ. ಪ್ರಸ್ತುತ ದೇವಾಲಯ ಗರ್ಭಗೃಹ, ಸಭಾಮಂಟಪ ಮತ್ತು ಮುಖಮಂಟಪಗಳಿಂದ ಕೂಡಿದೆ. ಗರ್ಭಗೃಹದ ಪ್ರವೇಶದ್ವಾರ ಅರ್ಧಗಂಭ, ಲಲಾಟಬಿಂಬದಲ್ಲಿ ಪದ್ಮ, ಇಕ್ಕೆಲಗಳಲ್ಲಿ ದ್ವಾರಪಾಲಕರ ಬದಲಾಗಿ ಪದ್ಮಗಳಿವೆ. ಒಳಗೆ ಶಿವಲಿಂಗವನ್ನು ಪ್ರತಿಷ್ಠಾಪಿಸಲಗಿದೆ. ಗರ್ಭಗೃಹದ ಸುತ್ತಲೂ ಪ್ರದಕ್ಷಿಣಾಪಥವಿದೆ. ಇದು ಈ ಪ್ರದೇಶದ ಏಕೈಕ ಸಾಂದಾರ ಮಾದರಿಯ ದೇವಾಲಯವಾಗಿದೆ. ಸಭಾಮಂಟಪದ ಮಧ್ಯ ಎರಡು ಸಾಲಿನಲ್ಲಿ ನಾಲ್ಕರಂತೆ ಎಂಟು ಕಂಬಗಳಿವೆ. ಅವು ಕೆಳಗೆ ಅಸಮ ಚೌಕಾಕಾರ, ಮೇಲ್ಭಾಗ ವೃತ್ತಾಕಾರ (ಘಂಟಾ ಮಾದರಿ), ವೃತ್ತಾಕಾರದ ಮುಚ್ಚಳ, ಚೌಕಾಕಾರದ ಫಲಕ, ಬೋದಿಗೆಗಳಿಂದ ಕೂಡಿವೆ. ಸಭಾಮಂಟಪದ ಮುಂಭಾಗದಲ್ಲಿ ಕಮಾನುಗಳನ್ನು ನಿರ್ಮಿಸಲಾಗಿದೆ. ಈ ಕಮಾನುಗಳಿರುವ ಅಂಕಣ ಉಳಿದ ಭಾಗಕ್ಕಿಂತ ಒಂದು ಮೀ. ಎತ್ತರದಲ್ಲಿದೆ. ಸೋಪಾನಗಳಿಂದ ಇಳಿದು ದೇವಾಲಯವನ್ನು ಪ್ರವೇಶಿಸಬೇಕು. ಹೊರಗೋಡೆಯ ಅಧಿಷ್ಠಾನಭಾಗ ನೆಲದಲ್ಲಿ ಹೂತಿದ್ದು, ಸರಳ ಶೈಲಿಯ ಭಿತ್ತಿಯನ್ನು ಜೀರ್ಣೋದ್ಧಾರಗೊಳಿಸಿ, ಗರ್ಭಗೃಹದ ಮೇಲೆ ಶಿಖರ ನಿರ್ಮಿಸಲಾಗಿದೆ.

[1] S.I.I., XI-i, 98, Bakod (B. Bagewadi Tq.), 1062 A.D.

[2] Ibid, XV, 532, Managuli (B. Bagewadi Tq.), 1072 A.D.

[3] Ibid, XVIII,91,96, Chimmalagi (B. Bagewadi Tq.), 1082, 1089 A.D.

[4] Ibid, XI-ii, 139, Hebbal (B. Bagewadi Tq.), 1095 A.D.

[5] Ibid, XI-ii, 141, Muttagi  (B. Bagewadi Tq.), 1097 A.D.

[6] Ibid, XV, 104, Muttagi (B. Bagewadi Tq.), 1165 A.D.

[7] Ibid, XV, 46, Salavadigi (B. Bagewadi Tq.), 12th C.A.D.

[8] Ibid, XV,12, Ingaleshvar (B. Bagewadi Tq.), 1128 A.D.

[9] Ibid, XV, 24, Muttagi (B. Bagewadi Tq.), 1116 A.D.

[10] Ibid.

[11] Ibid.

[12] Ibid.

[13] Ibid.

[14] Ibid, XV, 98, Yalavar (B. Bagewadi Tq.), 1158 A.D.

[15] E.I., V, 9, Managuli (B. Bagewadi Tq.), 1161 A.D.

[16] S.I.I., XV, 112, B.Bagewadi (B. Bagewadi Tq.), 1169 A.D.

[17] Ibid, XV, 113 and 641, B. Bagewadi (B.Bagewadi Tq.), 1170, 13th C. A.D.

[18] Ibid, XV, 129, Ingaleshvar (B. Bagewadi Tq.), 1176 A.D.

[19] E.I., V, P. 26, Managuli (B. Bagewadi Tq.), 1178 A.D.

[20] S.I.I., XV, 549, Satihal (B. Bagewadi Tq.), 1192 A.D.

[21] Ibid, XV, 166, Yalavar (B. Bagewadi Tq.), 1222 A.D.

[22] Ibid, XV, 169, Kolhar (B. Bagewadi Tq.), 1223 A.D.

[23] Ibid, XV, 172, Kolhar (B. Bagewadi Tq.), 1229 A.D.

[24] Ibid, XV, 24 and 169, Muttagi,( B. Bagewadi Tq.), 1142, 1165 A.D.

[25] Ibid, XV, 24 and 35, Muttagi,( B. Bagewadi Tq.), 1142, 1171 A.D.

[26] E.I., V, p29and 169, Managiuli,( B. Bagewadi Tq.), 1165 A.D.

[27] S.I.I., XV, 113, B.Bagewadi (B. Bagewadi Tq.) 1165 A.D. ಮತ್ತು ಕ.ಭಾ., ಸಂ.೨೭, ಸಂ.೨, ನವಬರ್ ೧೯೯೪, ಪು. ೭೬-೮೦

[28] E.I., XV, P.25, Muttagi (B. Bagewadi Tq.), 1188 A.D.

[29] S.I.I., XV, 600, Ingleshvar (B. Bagewadi Tq.) 12,-13C.A.D.

[30] Ibid, XV, 668, Muttagi, (B. Bagewadi Tq.), 13thC. A.D.

[31] Ibid, XV, 544, Ingaleshvar,( B. Bagewadi Tq.), 1160 A.D.

[32] Ibid, XV, 642, Ingaleshvar, (B. Bagewadi Tq.), 13thC. A.D

[33] ಕ.ಭಾ., ಸಂ.೨೭, ಸಂ.೨ ನವಬರ್ ೧೯೯೪, ಪು. ೭೬-೮೦

[34] ಅದೇ,

[35] ಅದೇ,

[36] E.I., V, P.9, Managuli (B.Bagewadi Tq.), 1161 A.D.

[37] S.I.I., XV, 113, B.Bagewadi (B.Bagewadi Tq.) 1170 A.D.

[38] E.I., V, P.9, Managuli (B.Bagewadi Tq.), 1161 A.D.