ಮಕ್ತೇಶ್ವರ ದೇವಾಲಯ, ಮುತ್ತಗಿ : ಗ್ರಾಮದ ಮಧ್ಯ ಲಕ್ಷ್ಮೀ-ನಾರಾಯಣ ದೇವಾಲಯದ ಆವರಣದಲ್ಲಿ ಪೂರ್ವಾಭಿಮುಖವಾಗಿ ನಿರ್ಮಾಣವಾದ ಚಿಕ್ಕ ಗುಡಿ. ಈ ದೇವಾಲಯದಿಂದಲೇ ಗ್ರಾಮಕ್ಕೆ ಮುತ್ತಗಿಯೆಂಬ ನಾಮ ಪ್ರಾಪ್ತವಾಯಿತೆಂದು ಸ್ಥಳೀಯರ ಹೇಳಿಕೆ. ಇದು ಗರ್ಭಗೃಹ, ಮತ್ತು ತೆರದ ಮುಖಮಂಟಪಗಳಿಂದ ಕೂಡಿದೆ. ಗರ್ಭಗೃಹದ ಪ್ರವೇಶದ್ವಾರಕ್ಕೆ ಲತಾಸುರುಳಿ, ಅರ್ಧಗಂಬ, ಮೇಲ್ಭಾಗ ರೇಖಾನಾಗರ ಶಿಖರಪಟ್ಟಿಕೆಗಳಿವೆ. ಇಕ್ಕೆಲಗಳಲ್ಲಿ ದ್ವಾರಪಾಲಕರ ಬದಲಾಗಿ ಪೂರ್ಣಕುಂಭಗಳಿವೆ. ಒಳಗೆ ಚಿಕ್ಕ ಶಿವಲಿಂಗವನ್ನು ಪ್ರತಿಷ್ಠಾಪಿಸಲಾಗಿದೆ. ಮುಖಮಂಟಪದ ಸುತ್ತಲೂ ಜಗತಿ, ಮುಂಭಾಗ ಎರಡು ವೃತ್ತಾಕಾರದ ಅಲಂಕೃತ ಕಂಬಗಳನ್ನು ನಿಲ್ಲಿಸಲಾಗಿದೆ. ದೇವಾಲಯದ ಹೊರಗೊಡೆಯ ಅಧಿಷ್ಠಾನ ಭಾಗದಲ್ಲಿ ಉಪಾನ ಜಗತಿ, ಕಂಠ, ಕುಮುದ, ಪದ್ಮಭಾಗಗಳಿವೆ. ಭಿತ್ತಿಯಲ್ಲಿ ಅರ್ಧಗಂಬ, ದ್ರಾವಿಡ ಶೈಲಿಯ ಶಿಕರಪಟ್ಟಿಕೆಗಳನ್ನೊಳಗೊಂಡ ಗೂಡುಗಳು, ಕಪೋತ ಭಾಗದಲ್ಲಿ ಸುತ್ತಲೂ ಮಂಜೂರು ಇದ್ದು, ಗರ್ಭಗೃಹದ ಮೇಲಿನ ಶಿಖರ ಹಾಳಾಗಿದೆ.

ಈಶ್ವರ ದೇವಾಲಯ, ಮುತ್ತಗಿ : ಲಕ್ಷ್ಮೀ-ನಾರಾಯಣ ದೇವಾಲಯದ ಉತ್ತರ ಭಾಗದಲ್ಲಿ ಅಗ್ನಿ ಶಿಲೆಯನ್ನು ಬಳಸಿ ಗರ್ಭಗೃಹ, ಅಂತರಾಳ ಮತ್ತು ಸಭಾಮಂಟಪಗಳನ್ನೊಳಗೊಂಡು ಪೂರ್ವಾಭಿಮುಖವಾಗಿ ನಿರ್ಮಿಸಲಗಿದೆ. ಗರ್ಭಗೃಹದ ಪ್ರವೇಶದ್ವಾರಕ್ಕೆ ಪದ್ಮ, ಲತಾಸುರುಳಿ, ಹೂವಿನ ಎಸಳು, ಅರ್ಧಗಂಬಗಳಿಂದ ಕೂಡಿದೆ. ಲಲಾಟಬಿಂಬದಲ್ಲಿ ಗಣೇಶ ಇಕ್ಕೆಲಗಳಲ್ಲಿ ಶಂಖ, ದರ್ಪಣ, ಗದಾ ಹಿಡಿದುನಿಂತ ದ್ವಾರಪಾಲಕ ಮತ್ತು ಚಾಮರಧಾರೆಯರ ಶಿಲ್ಪಗಳಿವೆ. ಒಳಗೆ ಶಿವಲಿಂಗವನ್ನು ಪ್ರತಿಷ್ಠಾಪಿಸಲಾಗಿದೆ. ಅಂತರಾಳದ ಪ್ರವೇಶದ್ವಾರಕ್ಕೆ ಅರ್ಧಗಂಬ ಮೇಲ್ಭಾಗ ರೇಖಾನಾಗರ ಶಿಖರಪಟ್ಟಿಕೆಗಳಿವೆ. ಸಭಾಮಂಟಪಕ್ಕೆ ಪೂರ್ವ ಮತ್ತು ದಕ್ಷಿಣ ಭಾಗಗಳಲ್ಲಿ ಪ್ರವೇಶದ್ವಾರಗಳಿವೆ.

ಸಭಾಮಂಟಪದ ಮಧ್ಯ ನಾಲ್ಕು ಕಂಬಗಳು ಕೆಳಗೆ-ಮೇಲೆ ಚೌಕ, ಮಧ್ಯ ೧೬-೮-೧೬ ಭಾಗದ ಪಟ್ಟಿಕೆ, ವೃತ್ತಾಕಾರದ ಮುಚ್ಚಳ, ಚೌಕಾಕಾರದ ಫಲಕ, ಬೋದಿಗೆಗಳಿಂದ ಕೂಡಿವೆ. ವೃತ್ತಾಕಾರದಲ್ಲಿ ಹೂಬಳ್ಳಿ, ಪದ್ಮ ಪಟ್ಟಿಕೆಗಳಿವೆ. ಭುವನೇಶ್ವರಿಯಲ್ಲಿ ಅಷ್ಟಭುಜದ ನಟರಾಜ, ಕೆಳಭಾಗ ಚಾಮರಧಾರೆಯರ ಶಿಲ್ಪಗಳಿವೆ. ಅಂತರಾಳದ ಗೋಡೆಗೆ ಅರ್ಧಗಂಬ, ಪಟ್ಟಿಕೆಗಳಿಂದ ಕೂಡಿದ ದೇವಕೋಷ್ಠಕಗಳಿವೆ. ಮುಖಮಂಟಪದಲ್ಲಿ ಕಕ್ಷಾಸನ ಅದರ ಮೇಲೆ ಚೌಕಾಕಾರದ ಕಂಬಗಳು ಹಾಗೂ ಮೇಲ್ಭಾಗ ಮುಂಚಾಚಿದ ಮಂಜೂರು ಇದೆ.

ದೇವಾಲಯದ ಹೊರಗೋಡೆಯ ಅಧಿಷ್ಠಾನ ಉಪಾನ, ಜಗತಿ, ಕಂಠ, ಕುಮುದ, ಪಟ್ಟಿಕೆಗಳಿಂದ ಕೂಡಿದೆ. ಭಿತ್ತಿಯಲ್ಲಿ ದ್ರಾವಿಡ ಶಿಖರಪಟ್ಟಿಕೆಗಳನ್ನೊಳಗೊಂಡ ಅರ್ಧಗಂಬಗಳಿವೆ. ಇದರ ಲಕ್ಷಣಗಳಿಂದಾಗಿ ವೈಷ್ಣವ ದೇವಾಲಯವಾಗಿದ್ದು, ಶಾಸನೋಲ್ಲೇಖಿತ ಪ್ರಸನ್ನ ಚನ್ನಕೇಶವ ದೇವಾಲಯವಾಗಿರಬಹುದು.

ಈ ಗ್ರಾಮದಲ್ಲಿ ಶಾಸನೊಲ್ಲೇಖಿತ ಶಿವಲಿಂಗ (ಸಂಗಮೇಶ್ವರ) ದೇವಾಲಯ, ರಾಮೇಶ್ವರ ದೇವಾಲಯ ಮತ್ತು ಗ್ರಾಮದಿಂದ ಒಂದು ಕಿ.ಮೀ. ದೂರದಲ್ಲಿರುವ ಈಶ್ವರ ದೇವಾಲಯಗಳು ಕಲ್ಯಾಣ ಚಾಳುಕ್ಯರ ಕಾಲದ ನಿರ್ಮಿತಿಗಳಾಗಿವೆ.

ರಾಮಲಿಂಗೇಶ್ವರ ದೇವಾಲಯ, ಇಟಗಿ : ಎತ್ತರ ಜಗತಿಯ ಮೇಲೆ ಕೆಂಪು ಮರುಳು ಶಿಲೆಯಲ್ಲಿ ಪೂರ್ವಾಭಿಮುಖವಾಗಿ ನಿರ್ಮಾಣವಾದ ಈ ದೇವಾಲಯ ಮೂರು ಗರ್ಭಗ್ರಹಗಳು, ಅಂತರಾಳಗಳು ಮತ್ತು ಸಭಾಮಂಟಪಗಳಿಂದ ಕೂಡಿದೆ. ಉತ್ತರ ಗರ್ಭಗೃಹದ ಪ್ರವೇಶದ್ವಾರಕ್ಕೆ ಅರ್ಧಗಂಬ, ಲಲಾಬಿಂಬದಲ್ಲಿ ಗಜಲಕ್ಷ್ಮಿ, ಇಕ್ಕೆಲಗಳಲ್ಲಿ ಚಾಮರಧಾರೆಯರ ಶಿಲ್ಪಗಳಿವೆ. ಪೂರ್ವ, ಉತ್ತರ ಗರ್ಭಗೃಹದ ದ್ವಾರಗಳು ಇದೆ. ಮಾದರಿಯಲ್ಲಿದ್ದರೂ ಅವುಗಳ ಲಲಾಟಬಿಂಬದಲ್ಲಿ ಯಾವುದೇ ಶಿಲ್ಪಗಳಿಲ್ಲ. ಈ ಎಲ್ಲ ಗರ್ಭಗೃಹಗಳಲ್ಲಿ ರಾಮಲಿಂಗೇಶ್ವರ, ಸಂಗಮೇಶ್ವರ ಮತ್ತು ಈಶ್ವರ ಎಂಬ ಹೆಸರಿನ ಶಿವಲಿಂಗಗಳನ್ನು ಪ್ರತಿಷ್ಠಾಪಿಸಲಾಗಿದೆ. ಸಭಾಮಂಟಪದ ಮಧ್ಯ ನಾಲ್ಕು ಕಂಬಗಳು ಕೆಳಗೆ ಮೇಲೆ ಚೌಕ, ಮಧ್ಯ ೮-೧೬ ಭಾಗದ ಪಟ್ಟಿಕೆ, ವೃತ್ತಾಕಾರದ ಕುಂಭ, ಚೌಕಾಕಾರದ ಫಲಕ, ಬೋದಿಗೆಗಳಿಂದ ಕೂಡಿವೆ. ಮುಖಮಂಟಪದ ಎರಡೂ ಭಾಗಗಳಲ್ಲಿ ಮತ್ತು ಮುಂಭಾಗ ಕಕ್ಷಾಸನಗಳು, ನಾಲ್ಕು ವೃತ್ತಾಕಾರದ ಸಾಲುಗಂಬಗಳು ಹಾಗೂ ಪ್ರವೇಶದಲ್ಲಿ ಮೇಲೆರಲು ಸೋಪಾನಗಳನ್ನು ರಚಿಸಲಾಗಿದೆ. ಮೇಲ್ಭಾಗ ಸುತ್ತಲೂ ಮುಂಚಾಚಿದ ಮಂಜೂರು ಇದೆ.

ಹೊರಗೋಡೆಯ ಅಧಿಷ್ಠಾನದಲ್ಲಿ ಉಪಾನ, ಜಗತಿ, ತ್ರಿಪಟ್ಟ, ಕುಮುದ, ಕಂಪ, ಭಾಗಗಳಿವೆ. ಸರಳ ಶೈಲಿಯ ಭಿತ್ತಿಯಲ್ಲಿ ಅರ್ಧಗಂಬಗಳು ಮತ್ತು ಕಕ್ಷಾಸನದ ಹಿಂಭಾಗದಲ್ಲಿ ಪದ್ಮ ಸಾಲು, ಪೂರ್ಣಕುಂಭಗಳಿವೆ. ದೇವಾಲಯದ ವಾಸ್ತು ಲಕ್ಷಣಗಳಿಂದ ಇದು ರಾಷ್ಟ್ರಕೂಟರ ಉತ್ತರಾರ್ಧ ಇಲ್ಲವೆ. ಚಾಲುಕ್ಯರ ಪೂರ್ವಾರ್ಧದಲ್ಲಿ ರಚನೆಯಾಗಿರಬಹುದು.

ಮಹದೇವ ದೇವಾಲಯ, ಹೆಬ್ಬಾಳ : ಗ್ರಾಮದ ನೈಋತ್ಯಕ್ಕೆ ಹಾಳೂರಲ್ಲಿ ಚಾಳುಕ್ಯರ ಕಾಲದ ಕೆಲುವು  ದೇವಾಲಯಗಳಿವೆ, ಇಲ್ಲಿಯ ಶಾಸನಗಳು ದಕ್ಷಿಣ ಸೋಮನಾಥ, ಮೂಲಸ್ಥಾನ ದೇವಾಲಯಗಳನ್ನು ಉಲ್ಲೇಖಿಸುತ್ತವೆ.[1] ಅಲ್ಲದೇ ೧೦೯೫ರ ಶಾಸನದಲ್ಲಿ ಆರನೆಯ ವಿಕ್ರಮಾದಿತ್ಯನ ಮಗ ಯುವರಾಜ ಮಲ್ಲಿಕಾರ್ಜುನನ ಅನುಮತಿ ಪಡೆದು ದಂಡನಾಯಕ ಭೀವಯ್ಯನು ಸರಸ್ವತಿ ದೇವಾಲಯಕ್ಕೆ ದಾನಮಾಡಿದ ಉಲ್ಲೇಖವಿದೆ.[2] ಮುಖ್ಯ ಮಾಹಾದೇವ ದೇವಾಲಯದ ದಕ್ಷಣ ಭಾಗದಲ್ಲಿ ಎರಡು ಹಾಳು ದೇಗುಲಗಳಿವೆ. ಅದರಲ್ಲೊಂದನ್ನು ಸ್ಥಳೀಯರು ರಾಮಲಿಂಗೇಶ್ವರ ದೇವಾಲಯವೆಂದು ಕರೆಯುತ್ತಾರೆ. ಇನ್ನೊಂದು ಸರಸ್ವತಿ ದೇವಾಲಯವಾಗಿರಲು ಸಾಧ್ಯತೆ ಇದೆ. ಕರ್ನಾಟಕದಲ್ಲಿ ಸರಸ್ವತಿ ದೇವಾಲಯಗಳ ನಿರ್ಮಾಣ ಬಹಳ ವಿರಳ. ಶಿಲ್ಪಿಗಳ ಕೇಂದ್ರವಾಗಿದ್ದ ಗದಗದಲ್ಲಿಯ ಸರಸ್ವತಿ ದೇವಾಲಯವನ್ನು ಬಿಟ್ಟರೆ, ಹೆಬ್ಬಾಳದಲ್ಲಿ ಮಾತ್ರ ರಚನೆಯಾಗಿರುವುದು ಕಂಡುಬರುತ್ತದೆ. ಪ್ರಾಚೀನ ಕಾಲದಲ್ಲಿ ಸರಸ್ವತಿ ಶಿಲ್ಪಿಗಳ ಆರಾಧ್ಯ ದೈವವಾಗಿತ್ತು. ಹನ್ನೆರಡು ಹಳ್ಳಿಗಳ ಆಡಳಿತ ಭಾಗವಾಗಿದ್ದ ಹೆಬ್ಬಾಳ, ಈ ಭಾಗದ ದೇವಾಲಯಗಳ ಕೆಸಲ ಮಡಿದ ಶಿಲ್ಪಗಳ ಕೇಂದ್ರವಾಗಿತ್ತೇ ಎಂಬುವುದನ್ನು ಹೆಚ್ಚಿನ ಅಧ್ಯಯನದ ಮೂಲಕ ಕಂಡುಕೊಳ್ಳುಬೇಕಿದೆ.

ಮಹಾದೇವ ದೇವಾಲಯ ಗರ್ಭಗೃಹ, ಅಂತರಾಳ, ಸಭಾಮಂಟಪ ಮತ್ತು ಮುಖಮಂಟಪಗಳನ್ನೊಳಗೊಂಡು ಅಗ್ನಿ ಶಿಲೆಯಲ್ಲಿ ನಿರ್ಮಾಣವಾಗಿದೆ. ಗರ್ಭಗೃಹದ ಪ್ರವೇಶದ್ವಾರ ಸರಳಶೈಲಿಯಲ್ಲಿದ್ದು, ಒಳಗೆ ಶಿವಲಿಂಗವನ್ನು ಪ್ರತಿಷ್ಠಾಪಿಸಲಾಗಿದೆ. ಅಂತರಾಳ ಪ್ರವೇಶದ್ವಾರಕ್ಕೆ ಅರ್ಧಗಂಭ, ಲಲಾಟಬಿಂಬದಲ್ಲಿ ಗಜಲಕ್ಷ್ಮಿ ಇಕ್ಕೆಲಗಳಲ್ಲಿ ಚಾಮರಧಾರೆಯರು, ಸುತ್ತಲೂ ಪದ್ಮ ಜಾಲಂಧ್ರರಗಳಿವೆ.

ಸಭಾಮಂಟಪದ ಪ್ರವೇಶದ್ವಾರಕ್ಕೆ ಅರ್ಧಗಂಬಗಳಿವೆ. ಮಧ್ಯದ ನಾಲ್ಕು ಕಂಬಗಳ ಕೆಳಗೆ-ಮೇಲೆ ಚೌಕ, ಮಧ್ಯ ೧೬-೮-೧೬ ಭಾಗದ ಪಟ್ಟಿಕೆ, ವೃತ್ತಾಕಾರದ ಮುಚ್ಚಳ, ಚೌಕಾಕಾರದ ಫಲಕ ಮತ್ತು ಬೋದಿಗೆಗಳಂದ ಕೂಡಿವೆ. ಮಹಾಮಂಟಪದ ಮಧ್ಯ ನಾಲ್ಕು ಕಂಬಗಳು ಇದೆ ರೀತಿಯಲ್ಲಿವೆ. ಸುತ್ತಲೂ ಅರ್ಧಮುಚ್ಚಿದ ಗೋಡೆಗೆ ಕಕ್ಷಾಸನ, ಅದರ ಮೇಲೆ ಕಂಬಗಳಿವೆ. ಪೂರ್ವ, ದಕ್ಷಿಣ ಹಾಗೂ ಉತ್ತರ ಭಾಗಗಳಲ್ಲಿ ಮುಖಮಂಟಪಗಳಿವೆ. ದೇವಾಲಯದ ಹೊರಗೋಡೆಯ ಅಧಿಷ್ಠಾನ ಉಪಾನ, ಜಗತಿ, ಕಂಠ, ಕುಮುದ, ಕಂಪ ಭಾಗಗಳಿಂದ ಕೂಡಿದೆ. ಭಿತ್ತಿಯಲ್ಲಿ ಅರ್ಧಗಂಬಗಳು ಮತ್ತು ಮುಖಮಂಟಪದ ಕಕ್ಷಾಸನದ ಹೊರಗೋಡೆಗೆ ಪದ್ಮ ಸಾಲುಗಳಿವೆ. ಗರ್ಭಗೃಹದ ಮೇಲಿನ ಶಿಖರ ಹಾಳಾಗಿದೆ.

ಬಸವನ ಬಾಗೇವಾಡಿ ಪರಿಸರದ ಜಾಯವಾಡಿಗಿಯಲ್ಲಿ ದೇಗುಲಗುಡಿ, ಸಾಲವಾಡಿಗಿಯಲ್ಲಿ ಹೊರೆಯಮೇಶ್ವರ, ಹೂವಿನ ಹಿಪ್ಪಗಿಯಲ್ಲಿ ಸೋಮನಾಥ, ಪರಮಾನಂದ, ಯಾಳವಾರದಲ್ಲಿ ಸಂಗಮೇಶ್ವರ ದೇವಾಲಯಗಳು ಶೈವ ಸಂಪ್ರದಾಯಕ್ಕೆ ಸೇರಿದವುಗಳಾಗಿವೆ.

ವೈಷ್ಣವ ದೇವಾಲಯಗಳು :

ಗೋಪಿನಾಥ ದೇವಾಲಯ, ಇಂಗಳೇಶ್ವರ : ಗ್ರಾಮದ ಮಧ್ಯದಲ್ಲಿ ಅಗ್ನಿ ಶಿಲೆಯಲ್ಲಿ ನಿರ್ಮಾಣವಾದ ಇದು ತ್ರಿಕೂಟಾಚಲ ದೇವಾಲಯ. ಮೂರು ಗರ್ಭಗೃಹ, ಅಂತರಾಳ, ಸಭಾಮಂಟಪ ಮತ್ತು ಮುಖಮಂಟಪಗಳಿಂದ ಕೂಡಿದೆ. ಸು. ೧೨ ನೆಯ ಶತಮಾನದ ಶಾಸನದಲ್ಲಿ ಸಾಲವಾಡಿಗೆಯ ಇಂಚು ಬಸವರಸನಿಂದ ಗೋಪಾಲ ದೇವರಿಗೆ ಭೂದಾನ ಕೊಡಲಾಗಿದೆ.[3] ದೇವಾಲಯದ ಪೂರ್ವದ ಗೋಡೆಯಲ್ಲಿರುವ ಯಾದವ ಅರಸ ಮಹಾದೇವನ ಕಾಲದ ಕ್ರಿ.ಶ. ೧೨೨೪ರ ಶಾಸನದಲ್ಲಿ ಊರಡಗೇರಿಯ ಗೋಪಿನಾಥ ದೇವಾಲಯಕ್ಕೆ ಇಂಗಳೇಶ್ವರದ ಮಹಾಜನರಿಂದ ಭೂಮಿ, ಗಾಣ ಮತ್ತು ಅಂಗಡಿ ದಾನಕೊಟ್ಟ ಉಲ್ಲೇಖವಿದೆ.[4] ಸ್ಥಳೀಯರು ಇದನ್ನು ನಾರಾಯಣ ದೇವಾಲಯವೆಂದು ಕರೆಯುತ್ತಾರೆ.

ದಕ್ಷಿಣ ಗರ್ಭಗೃಹದ ಪ್ರವೇಶ ದ್ವಾರಕ್ಕೆ ಪದ್ಮ, ಹೂವಿನ ಎಸಳು, ಅರ್ಧಗಂಭ, ಲಲಾಟಬಿಂಬದಲ್ಲಿ ಗಜಲಕ್ಷ್ಮಿ, ಇಕ್ಕೆಲಗಳಲ್ಲಿ ಶಂಖ, ಚಕ್ರ, ಗದಾ ಹಿಡಿದು ನಿಂತ ದ್ವಾರಪಾಲಕರು ಮತ್ತು ಚಾಮರಧಾರೆಯರ ಶಿಲ್ಪಗಳಿವೆ. ಒಳಗೆ ಸಮಭಂಗಿಯಲ್ಲಿ ನಿಂತ ನಾರಾಯಣ (ಕೇಶವ)ನ ಮೂರ್ತಿ. ಹಿಂದಿನ ಕೈಗಳಲ್ಲಿ ಶಂಖ, ಚಕ್ರ ಮತ್ತು ಮುಂದಿನ ಕೈಗಳಲ್ಲಿ ಒಂದು ಅಭಯ ಹಸ್ತದಲ್ಲಿದ್ದು, ಇನ್ನೊಂದರಲ್ಲಿ ಗದಾ ಇದೆ. ಸುತ್ತಲೂ ಪ್ರಭಾವಳಿ, ಮಧ್ಯ ಎರಡೂ ಭಾಗಗಳಲ್ಲಿ ಚಿಕ್ಕ ಚಿಕ್ಕ ಶಿಲ್ಪಗಳಿವೆ. ಇಕ್ಕೆಲಗಳಲ್ಲಿ ಚಾಮರ ಹಿಡಿದ ಶ್ರೀದೇವಿ, ಭೂದೇವಿ ಮತ್ತು ಪಾದದ ಕೆಳಗೆ ಚಿಕ್ಕ ಗರುಡ ಶಿಲ್ಪ ಅಂಜಲಿ ಮುದ್ರೆಯಲ್ಲಿದೆ. ಪೂರ್ವದ ಗರ್ಭಗೃಹದ ಪ್ರವೇಶ ದ್ವಾರಕ್ಕೆ ಲತಾಸುರುಳಿ. ಹೂವಿನ ಎಸಳು, ಲಲಾಟಬಿಂಬದಲ್ಲಿ ಗಜಲಕ್ಷ್ಮಿ, ಮೇಲ್ಭಾಗ ರೇಖಾನಾಗರ ಶಿಖರಪಟ್ಟಿಕೆಗಳಿವೆ. ಇಕ್ಕೆಲಗಳಲ್ಲಿ ತ್ರಿಶೂಲ, ಶಂಖ, ಗದಾ ಹಿಡಿದು ನಿಂತಿರುವ ದ್ವಾರಪಾಲಕರು ಮತ್ತು ಚಾಮರಧಾರರೆಯರ ಶಿಲ್ಪಗಳಿವೆ. ಒಳಗೆ ಶಿವಲಿಂಗವನ್ನು ಪ್ರತಿಷ್ಠಾಪಿಸಲಾಗಿದೆ. ಇದೇ ಮಾದರಿಯಲ್ಲಿರುವ ಪಶ್ಚಿಮ ಪ್ರವೇಶದ್ವಾರದ ದ್ವಾರಪಾಲಕೀಯರ ಕೈಗಳಲ್ಲಿ ಬಿಲ್ಲು-ಬಾಣಗಳಿದ್ದು, ಒಳಗೆ ಶಿವಲಿಂಗವನ್ನು ಪ್ರತಿಷ್ಠಾಪಿಸಲಾಗಿದೆ. ಬಿಲ್ಲು – ಬಾಣಗಳನ್ನು ಹಿಡಿದಿರುವ ದ್ವರಪಾಲಕೀಯರು ಈ ಗ್ರಾಮದ ಸೋಮನಾಥ ದೇವಾಲಯದ ಒಂದು ಗರ್ಭಗೃಹದ ದ್ವಾರದಲ್ಲಿಯೂ ಕಾಣಿಸುತ್ತಾರೆ. ಈ ರೀತಿಯ ಶಿಲ್ಪ೦ಗಳು ವಿಶೇಷವಾಗಿದ್ದು, ಹೆಚ್ಚಿನ ಅಧ್ಯಯನಕ್ಕೆ ಅವಕಾಶವನ್ನುಂಟು ಮಾಡುತ್ತವೆ. ಎಲ್ಲಾ ಗರ್ಭಗೃಹಗಳ ಮುಂಬಾಗದಲ್ಲಿ ತೆರದ ಅಂತರಾಳಗಳಿವೆ. ಅವುಗಳ ಪ್ರವೇಶದಲ್ಲಿರುವ ಎರಡೆರಡು ಕಂಬಗಳು ಸಭಾಮಂಟಪದಿಂದ ಬೇರ್ಪಡಿಸಿವೆ.

ಸಭಾಮಂಟಪದ ಮಧ್ಯ ನಾಲ್ಕು ಕಂಬಗಳು ಕೆಳಗೆ-ಮೇಲೆ ಚೌಕ, ಮಧ್ಯ ೧೬-೮-೧೬ ಭಾಗದ ಪಟ್ಟಿಕೆ, ವೃತ್ತಾಕಾರದ ಮುಚ್ಚಳ, ಚೌಕಾಕಾರದ ಫಲಕ ಮತ್ತು ಬೋದಿಗೆಗಳಿಂದ ಕೂಡಿವೆ. ಹೊರಗೋಡೆಯ ಅಧಿಷ್ಠಾನ ಉಪಾನ, ಜಗತಿ, ಕಂಪ, ಕಂಠ, ಮತ್ತು ಪಟ್ಟಕೆ ಭಾಗಗಳಿಂದ ಕೂಡಿದೆ. ಭಿತ್ತಿಯಲ್ಲಿ ಅಲ್ಲಲ್ಲಿ ಅರ್ಧಗಂಬಗಳಿವೆ. ಕೆಲವು ಕಡೆ ಗಾರೆಯಿಂದ ಜೀಣೋದ್ಧಾರಗೊಳಿಸಲಾಗಿದೆ.

ಲಕ್ಷ್ಮೀನಾರಾಯಣ ದೇವಾಲಯ, ಮುತ್ತಗಿ : ಗ್ರಾಮದ ಮಧ್ಯ ಅಗ್ನಿ ಶಿಲೆಯಲ್ಲಿ ನಿರ್ಮಾಣವಾದ ದ್ವಿಕೂಟಾಚಲ (ನಂತರ ಇನ್ನೊಂದು ಗರ್ಭಗೃಹವನ್ನು ಸೇರಿಸಲಾಗಿದೆ) ದೇವಾಲಯ. ಮೂರು ಗರ್ಭಗೃಹ, ಅಂತರಾಳ, ಸಭಾಮಂಟಪ ಮತ್ತು ಮುಖಮಂಟಪಗಳಿಂದ ಕೂಡಿದೆ. ಇಲ್ಲಿರುವ ಕ್ರಿ.ಶ. ೧೧೮೯ ರ ಶಾಸನದಲ್ಲಿ ಶಂಕರಸ್ವಾಮಿಯ ಅಜ್ಜ ಚೌಡಿಸೆಟ್ಟಿ ಲಕ್ಷ್ಮೀ-ನರಸಿಂಹ ದೇವಾಲಯವನ್ನು ನಿರ್ಮಿಸಿದನೆಂದು ಹೇಳಲಾಗಿದೆ. ಅದಕ್ಕೆ ಪಟ್ಟಸಾಹಾಣಾಧಿಪತಿ ಪೇಯ್ಯ ಹಾಗೂ ಭಿಲ್ಲಮ ಅರಸರು ಕೂಡಿ ಬಿವವೂರು ಗ್ರಾಮ ದಾನನೀಡಿದ್ದಾರೆ.[5] ಪಶ್ಚಿಮ ಭಾಗದಲ್ಲಿ ಎರಡು ಗರ್ಭಗೃಹಗಳಿವೆ. ಬಲಭಾಗದ ಗರ್ಭಗೃಹದ ಪ್ರವೇಶದ್ವಾರಕ್ಕೆ ಪದ್ಮ, ಹೂವಿನ ಎಸಳು, ಅರ್ಧಗಂಬ, ಯಾಳಿಯಸಾಲು, ಲಲಾಟಬಿಂಬದಲ್ಲಿ ಗಜಲಕ್ಷ್ಮಿ, ಮೇಲ್ಭಾಗ ಇಳಿಬಿದ್ದ ಪದ್ಮ, ರೇಖಾನಾಗರ ಶಿಖರಪಟ್ಟಿಕೆಗಳಿವೆ. ಇಕ್ಕೆಲಗಳಲ್ಲಿ ಶಂಖ, ಚಕ್ರ, ಗದಾ ಹಿಡಿದು ನಿಂತ ದ್ವಾರಪಾಲಕರು ಮತ್ತು ಚಾಮರಧಾರೆಯರ ಶಿಲ್ಪಗಳಿವೆ. ಒಳಗೆ ಎತ್ತರದ ಪೀಠದ ಮೇಲೆ ಲಕ್ಷ್ಮೀ-ನಾರಾಯಣ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ. ಅಂತರಾಳದ ಪ್ರವೇಶದ್ವಾರಕ್ಕೆ ಪದ್ಮ, ಪಟ್ಟಿಕೆ, ವೃತ್ತಾಕಾರದ ಅಲಂಕೃತ ಅರ್ಧಗಂಬಗಳ ಮೇಲೆ ಚಾಮರಧಾರೆಯರ ಶಿಲ್ಪಗಳಿವೆ. ಎಡಭಾಗದ ಗರ್ಭಗೃಹದ ಪ್ರವೇಶದ್ವಾರ ಬಲಭಾಗದಂತಿದ್ದು, ಮೇಲ್ಭಾಗ ದ್ರಾವಿಡ ಶಿಖರಪಟ್ಟಿಕೆಗಳು ಮತ್ತು ಒಳಗೆ ಇತ್ತೀಚೆಗೆ ಪ್ರತಿಷ್ಠಾಪಿಸಿದ ದತ್ತಾತ್ರೇಯನ ವಿಗ್ರಹವಿದೆ. ಈ ಗರ್ಭಗೃಹದ ಮುಂಭಾಗದಲ್ಲಿ ತೆರದ ಅಂತರಾಳವಿದೆ. ಉತ್ತರ ಭಾಗದಲ್ಲಿ ನಂತರ ನಿರ್ಮಿಸಲಾದ ಚಿಕ್ಕಗರ್ಭಗೃಹದ ಪ್ರವೇಶದ್ವಾರಕ್ಕೆ ಹೂವಿನ ಎಸಳು, ಅರ್ಧಗಂಬ, ಮೇಲ್ಭಾಗ ರೇಖಾನಾಗರ ಶಿಖರ ಪಟ್ಟಿಕೆಗಳಿವೆ. ಇಲ್ಲಿ ಗಜಲಕ್ಷ್ಮೀ ಲಲಾಟಬಿಂಬದ ಬದಲಾಗಿ ಕೆಳಗಿನ ಹೊಸ್ತಿಲಲ್ಲಿದೆ. ಒಳಗೆ ವಿಠಲ-ರುಕ್ಮಿಣಿಯ ಶಿಲ್ಪಗಳನ್ನು ಪ್ರತಿಷ್ಠಾಪಿಸಲಾಗಿದೆ.

ವಿಶಾಲವಾದ ಸಭಾಮಂಟಪದಲ್ಲಿರುವ ಎಂಟು ಕಂಬಗಳು ಎರಡು ಅಂಕಣಗಳನ್ನಾಗಿ ವಿಂಗಡಿಸಿವೆ. ಅವುಗಳಲ್ಲಿ ನಾಲ್ಕು ಕಂಬಗಳು, ಕೆಳಗೆ ಮೇಲೆ ಚೌಕ, ಮಧ್ಯ ೧೬-೮-೧೬ ಭಾಗದ ಪಟ್ಟಿಕೆ, ವೃತ್ತಾಕಾರದ ಮುಚ್ಚಳೆ, ಚೌಕಾಕಾರದ ಫಲಕ ಮತ್ತು ಬೋದಿಗೆಗಳಿಂದ ಕೂಡಿವೆ. ಇನ್ನೂ ನಾಲ್ಕು ಕಂಬಗಳು ಕೆಳಗೆ ಅಸಮ ಚೌಕಾಕಾರ, ಮೇಲೆ ವೃತ್ತಾಕಾರದಲ್ಲಿವೆ. ವೃತ್ತಾಕಾರ ಭಾಗದಲ್ಲಿ ಪಟ್ಟಿಕೆ, ಹೂಬಳ್ಳಿ, ಸರಪಳಿಯ ಸಾಲುಗಳು ಹಗೂ ಘಂಟಾಕಾರದ ಮೇಲಿನ ನಾಲ್ಕೂ ಭಾಗಗಳಲ್ಲಿ ಚಿಕ್ಕ ಚಿಕ್ಕ ಶಿಲ್ಪಗಳಿವೆ. ಪೂರ್ವಭಾಗದಲ್ಲಿ ಎರಡು ಕಕ್ಷಾಸನಗಳನ್ನೊಳಗೊಮಡ ಮುಖಮಂಟಪಗಳಿವೆ. ಸಭಾಮಂಟಪದ ದಕ್ಷಿಣ ಭಾಗದಲ್ಲಿ ಚಿಕ್ಕ ಪ್ರವೇಶದ್ವಾರವಿದೆ.

ದೇವಾಲಯದ ಹೊರಗೋಡೆ ಹಿಂಸರಿತ, ಮುಂಸರಿತಗಳಿಂದ ಕೂಡಿದೆ. ಅಧಿಷ್ಠಾನಭಗದಲ್ಲಿ ಉಪಾನ, ಜಗತಿ, ಕಂಠ, ಕುಮುದಗಳಿವೆ. ಪಶ್ಚಿಮದಲ್ಲಿರುವ ಗರ್ಭಗೃಹಗಳ ಗೋಡೆಯ ಮುರೂ ಭಾಗಗಳಲ್ಲಿ ಅರ್ಧಗಂಬ, ದ್ರಾವಿಡ ಶಿಖರಪಟ್ಟಿಕೆಗಳಿಂದ ಕೂಡಿದ ಗೂಡುಗಳಿವೆ. ಈ ಗೂಡುಗಳಿರುವ ಗೋಡೆ ಕರ್ಣ, ಭದ್ರಗಳಿಂದ ಮುಂಚಾಚಿದೆ. ಪೂರ್ವದ ಎರಡೂ ಪ್ರವೇಶದ್ವಾರದ ಇಕ್ಕೆಲಗಳಲ್ಲಿ ನೃತ್ಯ, ಸಂಗೀತಕಾರರ ಶಿಲ್ಪಗಳಿವೆ. ಅವುಗಳ ಕೆಳಭಾಗದಲ್ಲಿ ಪದ್ಮದ ಸಾಲುಗಳಿವೆ.

ಸಂಗಮೇಶ್ವರ ದೇವಾಲಯ, ವಡ್ಡವಡಿಗೆ : ಕೊಂಡಗೂಳಿಯ ಕ್ರಿ.ಶ. ೧೧೦೭ ರ ಶಾಸನದಲ್ಲಿ ಈ ಗ್ರಾಮವನ್ನು ವಡ್ಡವಾಡಿಗಿ ಎಂದು ಕರೆಯಲಾಗಿದೆ.[6] ಪ್ರಸ್ತುತ ದೇವಾಲಯದ ಮುಖಮಂಟಪದ ಕಂಬದಲ್ಲಿರುವ ಕ್ರಿ.ಶ. ೧೦೮೭ರ ಶಾಸನ ಹಮಯ್ಯಲೋಜನಿಗೆ ಬಿಟ್ಟ ಗದ್ಯಾಣ ೯೦ ಎಂದು ಉಲ್ಲೇಖಿಸುತ್ತದೆ.[7] ಕ್ರಿಶ. ೧೧೦೯-೧೦ರ ಇನ್ನೊಂದು ಶಾಸನದಲ್ಲಿ ಸಿಂಗಿಸೆಟ್ಟಿಯು ಪಾಗತಿಗಳಿಗೆ ತನ್ನ ವೃತ್ತಿಯಲ್ಲಿ ಐದು ಗದ್ಯಾಣ ಕೊಟ್ಟನೆಂದು ಹೇಳಲಾಗಿದೆ.[8]

ಇದು ಕಲ್ಯಾಣದ ಚಾಲುಕ್ಯರ ಕಾಲದಲ್ಲಿ ನಿರ್ಮಾಣವಾದ ಈ ಪರಿಸರದ ಏಕೈಕ ತ್ರೈಪುರುಷ ದೇವಾಲಯವಾಗಿದೆ. ಪ್ರಾಚೀನ ಕಾಲದಲ್ಲಿ ತ್ರೈಪುರುಷ ದೇವಾಲಯಗಳು ಶಿಕ್ಷಣ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತಿದ್ದವು. ರಾಷ್ಟ್ರಕೂಟ ಅರಸ ಮೂರನೆಯ ಕೃಷ್ಣನ ಕಾಲದಲ್ಲಿ ಚಕ್ರಾಯುಧನೆಂಬುವನು ಸಾಲೋಟಗಿ(ಪಾವಿಟ್ಟಿಗೆ) ಯಲ್ಲಿ ವಿದ್ಯಾಲಯವನ್ನು ಸ್ಥಾಪನೆ ಮಾಡುತ್ತಾನೆ. ದೇಶದ ನಾನಾ ಭಾಗಗಳಿಂದ ವಿದ್ಯಾರ್ಥಿಗಳು ಈ ಕೆಂದ್ರಕ್ಕೆ ಬರುತ್ತಿದುದರಿಂದ ಅವರ ವಸತಿಗಾಗಿ ೨೭ ಕೊಠಡಿಗಳಿದ್ದವು. ಆ ಗ್ರಾಮದ ಜನರು ಬ್ರಾಹ್ಮಣರಿಗೆ ಭೋಜನ ಕೊಡುವಾಗ ಶಾಲೆಯ ಉಪಾಧ್ಯಾಯ, ವಿದ್ಯಾರ್ಥಿಗಳನ್ನೂ ಆಹ್ವಾನಿಸಬೇಕಿತ್ತು.[9] ಇದರ ಸಾಂಕೇತಿಕವಾಗಿ ಅಲ್ಲಿ ಬ್ರಹ್ಮ, ವಿಷ್ಣು ಹಾಗೂ ಮಹೇಶ್ವರರ ಪೂಜೆಗೆ ತ್ರೈಪುರುಷ ದೇವಾಲಯವನ್ನು ನಿರ್ಮಿಸಲಾಯಿತು. ಇಂಥ ತ್ರೈಪುರುಷ ದೇವಾಲಯಗಳು ಮಲಘಾಣ ಹಾಗೂ ಯರಗಲ್ಲುಗಳಲ್ಲಿದ್ದುದನ್ನು ಶಾಸನಗಳು ಉಲ್ಲೇಖಿಸುತ್ತವೆ. ಸಾಮಾನ್ಯವಾಗಿ ತ್ರೈಪುರುಷ ದೇವಾಲಯಗಳು ಮೂರು ಗರ್ಭಗೃಹಗಳನ್ನು ಹೊಂದಿದ್ದು, ಅವುಗಳಲ್ಲಿ ಶಿವ, ವಿಷ್ಣು, ಬ್ರಹ್ಮ ಅಥವಾ ಸೂರ್ಯನ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿರುತ್ತದೆ. ಆದರೆ ವಡ್ಡವಡಗಿಯ ದೇವಾಲಯ ಈ ಮಾದರಿಯಲ್ಲಿಲ್ಲ. ಇದು ಏಕೈಕ ಗರ್ಭಗೃಹವನ್ನು ಹೊಂದಿ, ಅದರಲ್ಲಿಯ ಆಯಾಕಾರದ ಪೀಠದ ಮೇಲೆ ಉಮಾ – ಮಹೇಶ್ವರ ಶಿವಲಿಂಗ ಮತ್ತು ಲಕ್ಷ್ಮೀ-ನಾರಾಯಣನ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಮಧ್ಯದ ಶಿವಲಿಂಗವನ್ನು ಕಾಶಿಯಿಂದ ತಂದು ಪ್ರತಿಷ್ಠಾಪಿಸಲಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ. ಇದರಿಂದ ಈ ಮೊದಲು ಮಧ್ಯದಲ್ಲಿ ಬ್ರಹ್ಮ ಅಥವಾ ಸೂರ್ಯನ ಶಿಲ್ಪವಿದ್ದರಬೇಕು. ಒಂದೇ ಪೀಠದ ಮೇಲೆ ಮೂರು ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿರುವ ದೇವಾಲಯಗಳು ವಿರಳ. ಇಂಥ ದೇವಾಲಯಗಳು ಬಾದಾಮಿ ಹತ್ತಿರ ಬೇಲೂರು ಮತ್ತು ಸವಡಿಗಳಲ್ಲಿ ಮಾತ್ರ ಕಾಣಸಿಗುತ್ತವೆ.

ಸಂಗಮೇಶ್ವರ ಎಂದು ಕರೆಯುತ್ತಿರುವ ಈ ದೇವಾಲಯ ಎತ್ತರದ ಜಗತಿಯ ಮೇಲೆ ಪೂರ್ವಾಭಿಮುಖವಾಗಿ ಅಗ್ನಿ ಶಿಲೆಯಲ್ಲಿ ನಿರ್ಮಾಣವಾಗಿದ್ದು, ಗರ್ಭಗೃಹ, ಅಂತರಾಳ, ಸಭಾಮಂಟಪ ಮತ್ತು ಮುಖಪಂಟಪಗಳಿಂದ ಕೂಡಿದೆ. ಗರ್ಭಗೃಹದ ಪ್ರವೇಶದ್ವಾರ ಹೂವಿನ ಎಸಳು, ಪದ್ಮ, ಅರ್ಧಗಂಬ ಹಾಗೂ ಲಲಾಟಬಿಂಬದಲ್ಲಿ ಗಜಲಕ್ಷ್ಮೀ ಶಿಲ್ಪಗಳಿಂದ ಕೂಡಿದೆ. ಆಯಾತಾಕಾರದಲ್ಲಿರುವ ವಿಶಾಲವಾದ ಗರ್ಭಗೃಹದಲ್ಲಿ ಸು. ಮೂರು ಅಡಿ ಎತ್ತರದ ಪೀಠದ ಮೇಲೆ ಉಮಾ-ಮಹೇಶ್ವರ, ಲಕ್ಷ್ಮೀ-ನಾರಾಯಣ ಮೂರ್ತಿಗಳು ಹಾಗೂ ಮಧ್ಯದಲ್ಲಿ ಇತ್ತೀಚೆಗೆ ಪ್ರತಿಷ್ಠಾಪಿಸಿದ ಶಿವಲಿಂಗವಿದೆ. ಮುಂಭಾಗ ವಿಶಾಲವಾದ ತೆರದ ಅಂತರಾಳದ ಪ್ರವೇಶದಲ್ಲಿ ಎರಡು ಕಂಬಗಳಿವೆ.

ಸಭಾಮಂಟಪದ ಪ್ರವೇಶದ್ವಾರಕ್ಕೆ ಪದ್ಮ, ಹೂವಿನ ಎಸಳು, ಅರ್ಧಗಂಬಗಳಿವೆ. ಸಭಾಮಂಟಪದ ಮಧ್ಯ ಎರಡು ಸಾಲಿನಲ್ಲಿ ಜೋಡಿ ಕಂಬಗಳನ್ನು ನಿಲ್ಲಿಸಲಾಗಿದೆ. ಅವು ಕೆಳಗೆ-ಮೇಲೆ ಚೌಕ, ಮಧ್ಯ ೧೬-೮ ಭಾಗದ ಪಟ್ಟಿಕೆ, ವೃತ್ತಾಕಾರದ ಮುಚ್ಚಳ, ಚೌಕಾಕಾರದ ಫಲಕ, ಬೋದಿಗೆಗಳಿಂದ ಕೂಡಿವೆ. ಮುಂಭಾಗದ ಮುಖಮಂಟಪದರಲ್ಲಿರುವ ೧೬ ಕಂಬಗಳು ಸಭಾಮಂಟಪದ ಕಂಬಗಳಂತಿದ್ದು ಆಕಾರದಲ್ಲಿ ಚಿಕ್ಕದಾಗಿವೆ. ಅವುಗಳಲ್ಲಿ ೮ ಕಂಬಗಳನ್ನು ಸತ್ತಲೂ ನಿರ್ಮಿಸಿದ ಜಗತಿಯ ಮೇಲೆ ನಿಲ್ಲಿಸಲಾಗಿದೆ. ಇದಕ್ಕೆ ಪೂರ್ವ, ದಕ್ಷಿಣ, ಉತ್ತರ ಭಾಗಗಳಲ್ಲಿ ಪ್ರವೇಶಗಳಿವೆ. ದೇವಾಲಯದ ಹೊರಗೋಡೆಯ ಅಧಿಷ್ಠಾನ ಉಪಾನ, ಜಗತಿ, ಕಂಠ, ಕುಮುದ ಮತ್ತು ಪಟ್ಟಿಕೆಗಳಿಂದ ಕೂಡಿದೆ. ಸರಳಶೈಲಿಯ ಭಿತ್ತಿ, ಗರ್ಭಗೃಹದ ಮೇಲೆ ಇತ್ತೀಚೆಗೆ ರಚಿಸಿದ ಶಿಖರವಿದೆ.

ಜೈನ ಬಸದಿ, ಬಸವನ ಬಾಗೇವಾಡಿ : ಅಗಸೆಯ ಹತ್ತಿರ ಎತ್ತರ ಜಗತಿಯ ಮೇಲೆ ಅಗ್ನಿ ಶಿಲೆಯಲ್ಲಿ ನಿರ್ಮಾಣವಾದ ಆಂಜನೇಯ ದೇವಾಲಯವು ಮೂಲಥ ಜೈನ ಬಸದಿಯಾಗಿತ್ತು. ಇದು ಗರ್ಭಗೃಹ, ಸಭಾಮಂಟಪಗಳಿಂದ ಕೂಡಿದೆ. ಗರ್ಭಗೃಹದ ಪ್ರವೇಶದ್ವಾರಕ್ಕೆ ಪದ್ಮ, ಅರ್ಧಗಂಬ, ಲಲಾಟಬಿಂಬದಲ್ಲಿ ಪದ್ಮಾಸನದಲ್ಲಿ ಕುಳಿತಿರುವ ತೀರ್ಥಂಕರ ಶಿಲ್ಪ, ಮೇಲ್ಭಾಗ ರೇಖಾನಾಗರ  ಶಿಖರ ಪಟ್ಟಿಕೆಗಳಿವೆ. ಒಳಗೆ ಸು. ಐದು ಅಡಿ ಎತ್ತರದ ಆಂಜನೇಯ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ.

ತೆರದ ಸಭಾಮಂಟಪದ ಮಧ್ಯದಲ್ಲಿ ಚೌಕಾಕಾರದ ನಾಲ್ಕು ಕಂಬಗಳು ಚಾಳುಕ್ಯ ಮಾದರಿಯಲ್ಲಿವೆ. ಸಭಾಮಂಟಪಕ್ಕೆ ಹೊಂದಿಕೊಂಡು ವಿಶಾಲವಾದ ಮಹಾಮಂಟಪವನ್ನು ಇತ್ತೀಚೆಗೆ ನಿರ್ಮಿಸಲಾಗಿದೆ. ಈ ದೇವಾಲಯ ಮುಂಭಾಗದಲ್ಲಿರುವ ದೀಪಸ್ತಂಭದಲ್ಲಿ ಯಕ್ಷ, ಯಕ್ಷಿಯರ ಶಿಲ್ಪಗಳು ಮತ್ತು ಪ್ರವೇಶದ್ವಾರದ ಅವಶೇಷಗಳನ್ನು ಅಳವಡಿಸಲಾಗಿದೆ. ಆಗಸೆಯ ಪ್ರವೇಶದ್ವಾರದಲ್ಲಿ ಒಂದು ಸಿಂಹಪೀಠ, ಪಟ್ಟಣದ ಹೊರಭಾಗ ಜಿನ ಬಿಂಬದ ತಲೆ, ಯಕ್ಷ, ಯಕ್ಷಿಯರ ಶಿಲ್ಪಗಳು ಹರಡಿವೆ. ಅವೆಲ್ಲವೂ ಈ ಬಸದಿಗೆ ಸೇರಿದ್ದಿರಬೇಕು.

ಜೈನ ಗುಹಾಲಯ, ಇಂಗಳೇಶ್ವರ : ಈ ಗುಹಾಲಯವನ್ನು ಇಂಗಳೇಶ್ವರ ಗ್ರಾಮದ ದಕ್ಷಿಣಕ್ಕೆ ೨ ಕಿ.ಮೀ. ದೂರದ ಗುಡ್ಡದಲ್ಲಿ ಉತ್ತರಾಭಿಮುಖವಾಗಿ ಕೊರೆಯಲಾಗಿದೆ. ಅನಂತರದಲ್ಲಿ ರೇವಣ್ಣಸಿದ್ದೇಶ್ವರರ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದರಿಂದ ಸ್ಥಳೀಯ ಜನರು ಇದನ್ನು ರೇವಣಸಿದ್ದೇಶ್ವರ ಗುಹಾಲಯವೆಂದು ಕರೆಯುತ್ತಾರೆ. ಇದರಲ್ಲಿ ಹಾಳಾದ ಜೈನ ಮೂರ್ತಿಗಳು ಕಂಡುಬರುವುದರಿಂದ ಇದು ಮೂಲಥ ಜೈನ ಗುಹಾಲಯವೆಂಬುದು ಸ್ಪಷ್ಟವಾಗುತ್ತದೆ.

ಇದರಲ್ಲಿ ಒಂದು ಗವಿ (ಗರ್ಭಗೃಹ) ಮಾತ್ರ ಇದೆ. ಅದರ ಪ್ರವೇಶಕ್ಕೆ ಎರಡು ಚಿಕ್ಕ ದ್ವಾರಗಳಿವೆ. ಹೊರಭಾಗ ಈಗ ಶಿಲೆಯಿಂದ ವಿಶಾಲವಾದ ಮಂಟಪವನ್ನು ನಿರ್ಮಿಸಲಾಗಿದೆ. ಮಂಟಪದ ಪ್ರವೇಶಕ್ಕಿರುವ ಮುಖ್ಯದ್ವಾರವನ್ನು ಕೂಡಾ ಇತ್ತೀಚೆಗೆ ನಿರ್ಮಿಸಲಾಗಿದೆ.

ಮೂರ್ತಿಶಿಲ್ಪಗಳು :

ಈ ಪರಿಸರದಲ್ಲಿ ದೇವಾಲಯಗಳಂತೆ ಮೂರ್ತಿಶಿಲ್ಪಗಳೂ ಸಮೃದ್ಧವಾಗಿ ನಿರ್ಮಾಣವಾಗಿವೆ. ಶೈವ, ವೈಷ್ಣವ ಜೈನ ಮೂರ್ತಿಗಳು ಧಾರ್ಮಿಕ ಶಿಲ್ಪಗಳಾದರೆ, ನಿಶಿಧಿಗಲ್ಲು, ವೀರಗಲ್ಲು, ಮಹಾಸತಿಗಲ್ಲುಗಳು ಸ್ಮರಣಾರ್ಥವಾಗಿ ಹಾಕಿಸಿದಂಥ ಸ್ಮಾರಕ ಶಿಲ್ಪಗಳಾಗಿವೆ. ಗರ್ಭಗೃಗಳಲ್ಲಿಯ ಮೂರ್ತಿಗಳು, ಪರಿವಾರ ದೇವತೆಗಳು, ಸ್ಮಾರಕಶಿಲೆಗಳು ಹೀಗೆ ವಿವಿಧ ಬಗೆಯ ಲೌಕಿಕ-ಅಲೌಕಿಕ ಶಿಲ್ಪಗಳನ್ನು ಗಮನಿಸಬಹುದು.

ಶಿವಲಿಂಗ : ಶೈವ ದೇವಾಲಯಗಳ ಗರ್ಭಗೃಗಳಲ್ಲಿ ಸಾಮಾನ್ಯವಾಗಿ ಶಿವಲಿಂಗಗಳನ್ನು ಪ್ರತಿಷ್ಠಾಪಿಸಲಾಗಿದೆ. ಇಂಥ ಶಿವಲಿಂಗಗಳು ಇಂಗಳೇಶ್ವರದಲ್ಲಿ ೬, ಬಸವನ ಬಾಗೇವಾಡಿಯಲ್ಲಿ ೩, ಮುತ್ತಗಿಯಲ್ಲಿ ೪, ಹೆಬ್ಬಾಳದಲ್ಲಿ ೩, ಇಟಗಿಯಲ್ಲಿ ೩, ಉಳಿದಂತೆ ಹೂವಿನ ಹಿಪ್ಪರಗಿ, ಮನಗೂಳಿ, ಸಾಲವಾಡಗಿ, ಕೊಲ್ಹಾರ ಮುಂತಾದ ಗ್ರಾಮಗಳಲ್ಲಿ ಕಂಡುಬರುತ್ತವೆ.

ನಂದಿ : ಶೈವ ದೇವಾಲಯಗಳಲ್ಲಿ ನಂದಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಬಸವನ ಬಾಗೇವಾಡಿಯ ಬೊಂತೇಶ್ವರ ದೇವಾಲಯದಲ್ಲಿರುವ ನಂದಿ, ೧.೫ಮೀ ಎತ್ತರವಾಗಿದ್ದು, ತುಂಬ ಆಕರ್ಷಣೆಯಾಗಿದೆ. ಚಿಕ್ಕ ಪ್ರಮಾಣದ ನಂದಿ ಶಿಲ್ಪಗಳು ಮುತ್ತಗಿ, ಹೆಬ್ಬಾಳು ಇಂಗಳೇಶ್ವರ ಮೊದಲಾಗ ಗ್ರಾಮಗಳಲ್ಲಿವೆ.

ಉಮಾಮಹೇಶ್ವರ : ಇಂಗಳೇಶ್ವರದ ಗುಡ್ಡದ ಗುಹೆಯಲ್ಲಿರುವ ಇದು ಕೆಂಪು ಮರಳು ಶಿಲೆಯಲ್ಲಿ ನಿರ್ಮಿತವಾಗಿದ್ದು, ಕಲ್ಯಾಣ ಚಾಳುಕ್ಯರ ಕಾಲದ ಶಿಲ್ಪ. ಮಹೇಶ್ವರನ ಮೂರ್ತಿ, ಜಟಾಮುಕುಟ, ಕರ್ಣ, ಕಂಠಾಭರಣ ಕಂಕಣ, ಉತ್ತರಿಯ ಬಂಧ ಪಾದಸರಗಳನ್ನು ಹೊಂದಿ ಲಲಿತಾಸನದಲ್ಲಿದೆ. ಹಿಂದಿನ ಬಲ-ಎಡ ಕೈಗಳಲ್ಲಿ ತ್ರಿಶೂಲ, ಡಮರು ಮುಂದಿನ ಬಲ-ಎಡ ಕೈಗಳಲ್ಲಿ ಒಂದು ಅಭಯ ಮುದ್ರೆ ಇನ್ನೊಂದು ಪಾರ್ವತಿಯ ಭುಜದ ಮೇಲಿದೆ. ಎಡಭಾಗದಲ್ಲಿ ಲಲಿತಾಸನದಲ್ಲಿ ಕುಳಿತಿರುವ ಪಾರ್ವತಿಯು ಕರ್ಣ ಕಂಠಾಭರಣ, ಕಂಕಣ ಹಾಗೂ ಬಲ-ಎಡ ಕೈಗಳಲ್ಲಿ ಒಂದು ಮಹೇಶ್ವರನ ಹಿಂಬದಿಯಲ್ಲಿ, ಇನ್ನೊಂದು ಆಭಯ ಮುದ್ರೆಯಲ್ಲಿದೆ. ಕೆಳಭಾಗ ವೈಷಭ ವಾಹನವಿದೆ.

ಮುತ್ತಗಿಯ ಶಿವಲಿಂಗ ದೇವಾಲಯದಲ್ಲಿ ಕಪ್ಪು ಶಿಲೆಯಲ್ಲಿ ನಿರ್ಮಿಸಿರುವ ಕಲ್ಯಾಣ ಚಾಳುಕ್ಯರ ಕಾಲದ ೦.೬ ಮೀ. ಎತ್ತರದ ಉಮಾ – ಮಹೇಶ್ವರ ಶಿಲ್ಪವಿದೆ. ಜಟಾಮುಕುಟ, ಕರ್ಣ, ಕಂಠಾಭರಣ, ಕಂಕಣ, ಉತ್ತರಿಯಬಂಧ, ಪಾದಸರ, ಹಿಂದಿನ ಬಲ-ಎಡ ಕೈಗಳಲ್ಲಿ ತ್ರಿಶೂಲ, ಪಾರ್ವತಿಯ ಭುಜದ ಮೇಲೆ, ಮುಂದಿನ ಬಲ-ಎಡ ಕೈಗಳು ಅಭಯ ಮುದ್ರೆ, ಇನ್ನೊಂದು ಹಾಳಾಗಿದೆ. ದ್ವಿಭಂಗಿಯಲ್ಲಿ ನಿಂತ ಶಿವನಿಗೆ ಹೊಂದಿಕೊಂಡು ಪಾರ್ವತಿ ತ್ರಿಭಂಗಿಯಲ್ಲಿ ನಿಂತಿರುವಳು. ಜಟಾಮುಕುಟ, ಕರ್ಣ ಕಂಠಿಹಾರ, ವಾಜಿಬಂಧ, ಪಾದಸರ ಬಲ-ಎಡ ಕೈಗಳಲ್ಲಿ ಅಭಯ ಮುದ್ರೆ ಮತ್ತು ಪದ್ಮ ಇದೆ.

ವಡ್ಡ ವಡಿಗೆಯ ಸಂಗಮೇಶ್ವರ ದೇವಾಲಯದ ಗರ್ಭಗೃಹದಲ್ಲಿರುವ ಪೀಠದ ಮೇಲೆ ಬಲಭಾಗ ಉಮಾ-ಮಹೇಶ್ವರ ಮೂರ್ತಿ ಲಲಿತಾಸನದಲ್ಲಿದೆ. ಜಟಾ ಮುಕುಟ ಪತ್ರ ಕುಂಡಲ ಕಂಠಿಹಾರ, ನಾಗವಲಯ, ಯಜ್ಞೋಪವಿತ, ಉತ್ತರಿಯಬಂಧ, ಪಾದಸರ, ಹಿಂದಿನ ಬಲ-ಎಡ ಕೈಗಳಲ್ಲಿ ತ್ರಿಶೂಲ-ಡಮರು, ಮುಂದಿನ ಬಲ-ಎಡ ಕೈಗಳಲ್ಲಿ ಒಂದು ವರದ ಇನ್ನೊಂದು ಪಾರ್ವತಿಯ ಭುಜದ ಮೇಲಿದೆ. ಮಹೇಶ್ವರನ ಎಡಭಾಗದಲ್ಲಿರುವ ಪಾರ್ವತಿಯು ಜಟಾ ಮುಕುಟ, ಕರ್ಣ, ಕಂಠಹಾರ, ವಾಜೀಬಂಧ, ಪಾದಸರ, ಬಲ-ಎಡ ಕೈಗಳಲ್ಲಿ ಒಂದು ಶಿವನ ಹಿಭಾಗದಲ್ಲಿ, ಇನ್ನೊಂದರಲ್ಲಿ ಹಣ್ಣು ಇದೆ. ಶಿವನ ಬಲಪಾದ, ವೈಷಬದ ಮೇಲೆ ಪಾರ್ವತಿಯ ಎಡಪಾದ ಹಂಸದ ಮೇಲಿವೆ.

ಲಕ್ಷ್ಮೀನಾರಾಯಣ : ವಡ್ಡವಡಿಗೆ ಸಂಗಮೇಶ್ವರ ದೇವಾಲಯದ ಗರ್ಭಗೃಹದ ಪೀಠದ ಮೇಲೆ ಕಲ್ಯಾಣ ಚಾಲುಕ್ಯರ ಕಾಲದ ಲಕ್ಷ್ಮೀ-ನಾರಾಯಣ ಶಿಲ್ಪವಿದೆ. ನಾರಾಯಣ (ವಿಷ್ಣು) ಕಿರೀಟ ಮುಕುಟ, ಕರ್ಣ, ಕಂಠಾಭರಣ, ಕಂಕಣ, ಯಜ್ಞೋಪವಿತ, ಉತ್ತರಿಯ ಬಂಧ, ಪಾದಸರ, ಹಿಂದಿನ ಬಲ-ಎಡ ಕೈಗಳಲ್ಲಿ ವಜ್ರ- ಗದಾ, ಮುಂದಿನ ಬಲ-ಎಡ ಕೈಗಳಲ್ಲಿ ಒಂದು ನಾರಾಯಣನ ಹಿಂಭಾಗ, ಇನ್ನೊಂದರಲ್ಲಿ ಹಣ್ಣು ಇದೆ. ಕೆಳಭಾಗ ಗರುಡನ ಶಿಲ್ಪವಿದೆ.

ಮುತ್ತಗಿಯ ಲಕ್ಷ್ಮೀ-ನಾರಾಯಣ ದೇವಾಲಯದಲ್ಲಿರುವ ಈ ಮೂರ್ತಿ ೦.೬ ಮೀಟರ ಎತ್ತರವಿದ್ದು, ಕೆಂಪು ಮರಳು ಶಿಲೆಯಲ್ಲಿ ನಿರ್ಮಾಣವಾಗಿದೆ. ನಾರಾಯಣ, ಕಿರೀಟ ಮುಕುಟ ಕರ್ಣ, ಕಂಠಾಭರಣ ಮತ್ತು ಬಲಗೈ ಹಾಳಾಗಿದ್ದು, ಎಡಗೈ ಲಕ್ಷ್ಮೀಯ ಭುಜದ ಮೇಲಿದೆ. ಲಕ್ಷ್ಮೀ, ಜಟಾಮುಕುಟ, ಕರ್ಣ, ಕಂಠಾಭರಣ ಬಲಗೈ ನಾರಾಯಣ ಹಿಂಭಾಗ ಎಡಗೈ ಹಾಳಾಗಿದೆ. ಕೆಳಭಾಗ ಗುರುಡನ ಶಿಲ್ಪವಿದೆ. ಈ ಮೂರ್ತಿಯ ಲಕ್ಷಣಗಳನ್ನು ಅವಲೋಕಿಸಿದಾಗ ಇದು ನಂತರದ್ದಾಗಿದೆ. ಮೂಲ ಮೂರ್ತಿ ಹಾಳಾದ ನಂತರ ಇದನ್ನು ಪ್ರತಿಷ್ಠಾಪಿಸಿರಬಹುದು.

ಕೇಶವ : ಇಂಗಳೇಶ್ವರ ಗ್ರಾಮದಲ್ಲಿ ಗೋಪಿನಾಥ ದೇವಾಲಯದ ದಕ್ಷಿಣ ಗರ್ಭಗೃಹದಲ್ಲಿ ಈ ಮೂರ್ತಿ ಇದೆ. ಸ್ಥಳೀಯ ಜನರು ಇದನ್ನು ನಾರಾಯಣ ದೇವಾಲಯ ಮತ್ತು ನಾರಾಯಣ ಮೂರ್ತಿ ಎಂದು ಕರೆಯುತ್ತಾರೆ. ೧.೫ ಮೀ. ಎತ್ತರ ಕಪ್ಪು ಶಿಲೆಯಲ್ಲಿ ನಿರ್ಮಾಣವಾಗಿದೆ. ಸಮಭಂಗಿಯಲ್ಲಿದ್ದು, ಕಿರೀಟ ಮುಕುಟ ಮೇಲೆ ಛತ್ರಿ, ಮಕರ ಕುಂಡಲ, ಕಂಠಹಾರ, ಯಜ್ಞೋಪವಿತ, ಉತ್ತರಿಯಬಂಧ, ಕಂಕಣ, ಪಾದಸರ, ಹಿಂದಿನ ಬಲ-ಎಡ ಕೈಗಳಲ್ಲಿ ಶಂಕ- ಚಕ್ರ, ಮುಂದಿನ ಬಲ-ಎಡ ಕೈಗಳಲ್ಲಿ ಅಭಯ ಮುದ್ರೆ ಅಕ್ಷಮಾಲೆ ಮತ್ತು ಗದಾ ಇರುತ್ತವೆ. ಹಿಂದೆ ಮೇಲ್ಭಾಗ ಪ್ರಭಾವಳಿ, ಮಧ್ಯ ಎರಡೂ ಭಾಗಗಳಲ್ಲಿ ಚಿಕ್ಕ ಮೂರ್ತಿಗಳಿವೆ. ಬಲ ಮತ್ತು ಎಡಬಾಗಗಳಲ್ಲಿ ಶ್ರೀದೇವಿ, ಭೂದೇವಿ, ಕೈಯಲ್ಲಿ ಚಾಮರ ಹಿಡಿದು ನಿಂತಿರುವದು ಪಾದದ ಹತ್ತಿರ ಅಂಜಲಿ ಮುದ್ರೆಯಲ್ಲಿ ಕುಳಿತ ಚಿಕ್ಕ ಗರುಡನ ಶಿಲ್ಪವಿದೆ. ಈ ಮೂರ್ತಿಯ ಲಕ್ಷಣಗಳನ್ನು ಅವಲೋಕಿಸಿದಾಗ ಇದು ಚಾಳುಕ್ಯರ ಕಾಲದ ನಂತರದ್ದಾಗಿದೆ.

ಬಸವನ ಬಾಗೇವಾಡಿಯ ಸಂಗಮೇಶ್ವರ ದೇವಾಲಯದ ಉತ್ತರ ಭಾಗದ ಮುಖಮಂಟಪದಲ್ಲಿ ಪೂರ್ವದ ಗೋಡೆಗೆ ಈ ಮೂರ್ತಿಯನ್ನಿಡಲಾಗಿದೆ. ಕಿರೀಟ ಮುಕುಟ, ಕರ್ಣ, ಕಂಠಾಭರಣ, ಕಂಕಣ, ಹಿಂದಿನ ಬಲ-ಎಡ ಕೈಗಳಲ್ಲಿ ಶಂಖ, ಚಕ್ರ ಮುಂದಿನ ಬಲ-ಎಡ ಕೈಗಳಲ್ಲಿ ಅಭಯ ಮುದ್ರೆ, ಗದಾ ಇರುತ್ತವೆ. ಸಮಭಂಗಿಯಲ್ಲಿರುವ ಇದು ಕಪ್ಪು ಶಿಲೆಯಲ್ಲಿ ನಿರ್ಮಿತವಾಗಿದೆ.

ಮಾಧವ : ಬಾಗೇವಾಡಿಯ ಅನಂತಶಯನ ದೇವಾಲಯದಲ್ಲಿ ಪಶ್ವಿಮ ಭಾಗದ ಗೂಡಿನಲ್ಲಿರುವ ಇದು ೦.೬ ಮೀ. ಎತ್ತರ ಸಮಭಂಗಿಯಲ್ಲಿದೆ. ಕಿರೀಟ ಮುಕುಟು, ಕರ್ಣ ಕಂಠಾಭರಣ ಯಜ್ಞೋಪವಿತ, ಉತ್ತರಿಯಬಂಧ ಕಂಕಣ, ಪಾದಸರ, ಹಿಂದಿನ ಬಲ-ಎಡ  ಕೈಗಳಲ್ಲಿ ಚಕ್ರ-ಶಂಖ ಮುಂದಿನ ಬಲ-ಎಡ ಕೈಗಳಲ್ಲಿ ಚಕ್ರ, ಶಂಕ ಮುಂದಿನ ಬಲ-ಎಡ ಕೈಗಳಲ್ಲಿ ಅಭಯ ಮುದ್ರೆ, ಗದಾ ಇರುತ್ತವೆ.

ಇಂಗಳೇಶ್ವರ ಗ್ರಾಮದಲ್ಲಿ ಸೋಭಾನದೇವರ ಗುಡಿಯ ಗರ್ಭಗೃಹದ ಗೋಡೆಗಿರುವ ಈ ಮೂರ್ತಿ ೦.೪೫ಮೀ. ಎತ್ತರ ಸಮಭಂಗಿಯಲ್ಲಿದೆ. ಕಿರೀಟ ಮುಕುಟ ಕರ್ಣ ಕಂಠಾಭರಣ ಯಜ್ಞೋಪವಿತ, ಉತ್ತರಿಯಬಂಧ, ಕಂಕಣ, ಪಾದಸರ, ಹಿಂದಿನ ಬಲ-ಎಡ ಕೈಗಳಲ್ಲಿ ಚಕ್ರ, ಶಂಕ ಮುಂದಿನ ಬಲ-ಎಡ ಕೈಗಳಲ್ಲಿ ವರದ ಮುದ್ರೆ ಮತ್ತು ಗದಾ ಇರುತ್ತವೆ.

ಅನಂತಶಯನ : ಬಸವನ ಬಾಗೇವಾಡಿಯ ಅನಂತಶಯನ ದೇವಾಲಯದ ಗರ್ಭಗೃಹದಲ್ಲಿರುವ ಇದನ್ನು ೦.೬ ಮೀ ಎತ್ತರ ೧.೫ ಮೀ ಉದ್ದದ ಫಲಕದಲ್ಲಿ ಕೆತ್ತಲಾಗಿದೆ. ಕಿರೀಠ ಮುಕುಟ ಮೇಲೆ ಶೇಷ, ಪತ್ರ ಕುಂಡಲ, ಕಂಠಾಭರಣ ಉತ್ತರಿಯಬಂಧ, ಕಂಕಣ ಪಾದಸರ ಹಿಂದಿನ ಬಲ-ಎಡ ಕೈಗಳಲ್ಲಿ ಶಂಖ, ಚಕ್ರ ಮುಂದಿನ ಬಲ-ಎಡ ಕೈಗಳಲ್ಲಿ ಚಿನ್ಮುದ್ರಾ, ಅಂಕುಶಗಳಿವೆ. ಪಾದದ ಹತ್ತಿರ ಲಕ್ಷ್ಮೀ ಮೂರ್ತಿ ಇದೆ.

ಕೊಲ್ಹಾರ ಗ್ರಾಮದಿಂದ ೧ ಕಿ.ಮೀ. ದಕ್ಷಿಣದಲ್ಲಿರುವ ಅನಂತಶಯನ ದೇವಾಲಯದ ಗರ್ಭಗೃಹದಲ್ಲಿ ೦.೬. ಮೀ. ಎತ್ತರ, ೧.೮ ಮೀ. ಉದ್ದ ಫಕದಲ್ಲಿ ಈ ಮೂರ್ತಿ ನಿರ್ಮಾಣವಾಗಿದೆ. ಕಿರೀಟ ಮುಕುಟ ಮೇಲ್ಭಾಗ ಶೇಷ, ಮಕರ ಕುಂಡಲ, ಕಂಠಾಭರಣ, ಉತ್ತರಿಯಬಂಧ, ಕಂಕಣ, ಹಿಂದಿನ ಬಲ-ಎಡ ಕೈಗಳಲ್ಲಿ ಅಕ್ಷಮಾಲೆ, ಚಕ್ರ ಮತ್ತು ಮುಂದಿನ ಬಲ-ಎಡ ಕೈಗಳಲ್ಲಿ ಗದಾ, ಶಂಖಗಳಿವೆ. ಬಲ ಪಾದ ಹಿಡಿದು ಕುಳಿತಿರುವ ಲಕ್ಷ್ಮೀ ಮತ್ತು ಮುಂಭಾಗದಲ್ಲಿ ವೀಣೆ ನುಡಿಸುತ್ತಿರುವ ಸರಸ್ವತಿಯ ಶಿಲ್ಪಗಳಿವೆ.

ಸೂರ್ಯ : ಸಾಲವಾಡಗಿ ಗ್ರಾಮದಲ್ಲಿರುವ ಈ ಶಿಲ್ಪ ೦.೬ ಮೀ. ಎತ್ತರವಾಗಿದ್ದು, ಕಿರೀಟ ಮುಕುಟ, ಕರ್ಣ, ಕಂಠಾಭರಣ, ಕಂಕಣ ಯಜ್ಞೋಪವಿತ, ಉತ್ತರಿಯಬಂಧ, ಪಾದಸರ ಹಾಗೂ ಬಲ-ಎಡ ಕೈಗಳಲ್ಲಿ ಪದ್ಮಗಳಿವೆ.

ವೀರಭದ್ರ : ಬಸವಣ ಬಾಗೇವಾಡಿಯ ವೀರಭದ್ರ ದೇವಾಲಯದಲ್ಲಿರುವ ಇದು ೧.೫ ಮೀ ಎತ್ತರ ತ್ರಿಭಂಗಿಯಲ್ಲಿದೆ. ಕಿರೀಟ ಮುಕುಟ ಮೇಲೆ ಶೇಷ, ಕರ್ಣ ಕಂಠಾಭರಣ, ಉತ್ತರಿಯಬಂಧ, ರುಂಡಮಾಲಾ, ಕಂಕಣ, ಪಾದಸರ, ಪಾದರಕ್ಷೆ, ಹಿಂದಿನ ಬಲ-ಎಡ ಕೈಗಳಲ್ಲಿ ಬಾಣ, ಬಿಲ್ಲು, ಮುಂದಿನ ಬಲ-ಎಡ  ಕೈಗಳಲ್ಲಿ ಖಡ್ಗ, ಗದಾ ಇರುತ್ತವೆ.

ಹೆಬ್ಬಾಳ ಗ್ರಾಮದ ವೀರಭದ್ರ ದೇವಾಲಯದ ಗರ್ಭಗೃಹದಲ್ಲಿರುವ ಇದು ೦.೯೦ ಮೀ ಎತ್ತರ, ಜಟ್ಟಮುಕುಟ ಕರ್ಣ ಕಂಠಾಭರಣ, ಕಂಕಣ, ಹಿಂದಿನ ಬಲ-ಎಡ ಕೈಗಳಲ್ಲಿ ಖಡ್ಗ-ಡಾಗ ಇರುತ್ತವೆ.

ಗಣೇಶ : ಕೀರೀಟ ಮುಕುಟ, ಕೊರಳ ಕಂಠಾಭರಣ, ರತ್ನ ಪಟ್ಟಿ ಮೊದಲಾದ ಆಭರಣಗಳಿಂದ ಅಲಂಕೃತಗೊಂಡಿರುವ ಗಣೇಶ ಶಿಲ್ಪಗಳು ಈ ಪರಿಸರದ ಹಬ್ಬಾಳ, ಮುತ್ತಗಿ, ವಡ್ಡವಡಿಗಿ, ಇಂಗಳೇಶ್ವರ ಮೊದಲಾದ ಗ್ರಾಮಗಳಲ್ಲಿ ಕಂಡುಬರುತ್ತವೆ.

ಸಪ್ತಮಾತೃಕೆ : ಇಂಗಳೇಶ್ವರದ ನಾರಾಯಣ ದೇವಾಲಯದ ಆವರಣದ ಪಶ್ಚಿಮಗೋಡೆಗೆ ಮತ್ತು ಕಲ್ಮೇಶ್ವರ ದೇವಾಲಯದ ಆವರಣದ ಉತ್ತರ ಗೋಡೆಗೆ ಕಲ್ಯಾಣ ಚಾಳುಕ್ಯರ ಕಾಲದ ಸಪ್ತಮಾತೃಕೆಯ ಶಿಲ್ಪಗಳಿವೆ. ಟಕ್ಕಳಕಿಯ ಆಂಜನೇಯ ದೇವಾಲಯದಲ್ಲಿ ಹಾಳಾಗಿರುವ ಒಂದು ಸಪ್ತಮಾತೃಕೆಯ ಶಿಲ್ಪವಿದೆ.

ವೀರಗಲ್ಲು : ಈಗ ಹಾಳಾಗಿರುವ ತೆಂಗಳೇಶ್ವರದಲ್ಲಿ ಕಲ್ಮೇಶ್ವರ ದೇವಾಲಯದ ಮುಂದಿನ ಭಾಗದಲ್ಲಿ ಈ ವೀರಗಲ್ಲು ಶಿಲ್ಪವಿದೆ. ವೀರನು ಧನುಷ್ಯ ಹಿಡಿದು ಯುದ್ಧ ಮಾಡುತ್ತಿರುವ ದೃಶ್ಯ, ಎರಡನೆಯ ಭಾಗದಲ್ಲಿ ಸಖಿಯರೊಡನೆ ಸ್ವರ್ಗಕ್ಕೆ ಹಾರುತ್ತಿರುವ ದೃಶ್ಯ, ಮೇಲ್ಭಾಗ ಶಿವಲಿಂಗ, ಅದರ ಮುಂದೆ ವೀರನು ಅಂಜಲಿ ಮುದ್ರೆಯಲ್ಲಿ ಕುಳಿತಿರುವನು.

ಶೋಭಾನದೇವರ ಗುಡಿಯಲ್ಲಿರುವ ವೀರಗಲ್ಲಿನಲ್ಲಿ ಕೆಳಭಾಗ ವೀರನು ಯುದ್ಧ ಮಾಡುತ್ತಿರುವನು. ತುರುಗಳು ಓಡುತ್ತಿರುವ ಭಂಗಿಯಲ್ಲಿವೆ. ಎರಡನೆಯ ಭಾಗದಲ್ಲಿ ವೀರನು ಸಖಿಯರೊಡನೆ ಸ್ವರ್ಗಕ್ಕೆ ಹಾರುತ್ತಿರುವನು. ಮೇಲಿನ ಭಾಗ ಹಾಳಾಗಿದೆ. ಇದು ವೀರನು ತುರುಗಳನ್ನು ರಕ್ಷಿಸುವ ಸಲುವಾಗಿ ಹೋರಾಡಿ ಮಡಿದ ಸ್ಮರಣಾರ್ಥವಾಗಿದೆ.

ಬಾಗೇವಾಡಿಯ ಅಗಸೆಯ ದ್ವಾರದ ಎಡಭಾಗದಲ್ಲಿರುವ ವೀರಗಲ್ಲನ್ನು ಕೆಂಪು ಮರಳು ಶಿಲೆಯಲ್ಲಿ ನಿರ್ಮಿಸಲಾಗಿದೆ. ಕೆಳಭಾಗ ವೀರನು ಯುದ್ಧ ಮಾಡುತ್ತಿರುವ ದೃಶ್ಯ. ಇಲ್ಲಿ ಒಬ್ಬ ವ್ಯಕ್ತಿ ಖಡ್ಗ ಹಿಡಿದು ಹೋರಾಟದಲ್ಲಿ ತೊಡಗಿರುವನು. ಮತ್ತೊಬ್ಬ ವ್ಯಕ್ತಿ ಕುದುರೆಯ ಮೇಲೆ ಕುಳಿತಿದ್ದು, ಎದುರಿಗಿರುವ ವ್ಯಕ್ತಿಗೆ ಭರ್ಜಿಯಿಂದ ಇರಿಯುತ್ತಿರುವನು. ಎರಡನೆಯ ಭಾಗದಲ್ಲಿ ವೀರನು ಸಖಿಯರೊಡನೆ ಸ್ವರ್ಗಕ್ಕೆ ಹಾರುತ್ತಿರುವ ದೃಶ್ಯ. ಅವರು ಕೈಯಲ್ಲಿ ಚೌರ ಹಿಡಿದಿರುವರು, ವೀರನ ಕೈಗಳು ಅವರ ಭುಜದ ಮೇಲಿದ್ದು, ಹಾರುವ ಭಂಗಿಯಲ್ಲಿವೆ. ಮೇಲ್ಭಾಗದಲ್ಲಿ ಶಿವಲಿಂಗ ಅದರ ಎರಡೂ ಭಾಗದಲ್ಲಿ ಅಂಜಲಿ ಮುದ್ರೆಯಲ್ಲಿ ಇಬ್ಬರು ವ್ಯಕ್ತಿಗಳು ಕುಳಿತಿರುವರು.

ಬೊಂತೇಶ್ವರ ದೇವಾಲಯದ ಉತ್ತರ ಭಾಗದ ಮುಖಮಂಟಪದ ಪೂರ್ವದ ಗೋಡೆಯಲ್ಲಿರುವ ಈ ಶಿಲ್ಪ, ಕೆಳಭಾಗ ವೀರನು ಕುದುರೆಯ ಮೇಲೆ ಕುಳಿತು ಯುದ್ಧ ಮಾಡುತ್ತಿರುವ ದೃಶ್ಯ. ಎರಡನೆಯ ಭಾಗದಲ್ಲಿ ವೀರನು ಸಖಿಯರೊಡನೆ ಸ್ವರ್ಗಕ್ಕೆ ಹಾರುತ್ತಿರುವ ದೃಶ್ಯ. ಮೇಲ್ಭಾಗ ಶಿವಲಿಂಗ, ಅದರ ಮುಂದೆ ಅಂಜಲಿ ಮುದ್ರೆಯಲ್ಲಿ ಒಬ್ಬ ವ್ಯಕ್ತಿ ಕುಳಿತಿದ್ದು, ಇನ್ನೊಬ್ಬ ನಿಂತಿರುವನು.

ಟಕ್ಕಳಕಿ ಗ್ರಾಮದ ಅಂಜನೇಯ ದೇವಾಲಯದ ಗೋಡೆಗೆ ಮೂರು ವೀರಗಲ್ಲುಗಳನ್ನು ಸೇರಿಸಿ ಕಟ್ಟಲಾಗಿದೆ. ವೀರನು ಕೈಗಳಲ್ಲಿ ಖಡ್ಗ, ಡಾಲು ಹಿಡಿದು ಹೋರಾಡುತ್ತಿರುವ ದೃಷ್ಯ, ಮೇಲಿನ ಭಾಗದಲ್ಲಿ ಸಖಿಯರು ಅವನನ್ನು ಸ್ವರ್ಗಕ್ಕೆ ಕರೆದೊಯ್ಯವ ದೃಶ್ಯ, ಮತ್ತೊಂದು ಭಾಗದಲ್ಲಿ ಈಶ್ವರ ಲಿಂಗದ ಮುಂದೆ ಅಂಜಲಿ ಮುದ್ರೆಯಲ್ಲಿ ಕುಳಿತುಕೊಂಡಿದ್ದಾನೆ. ಇದೇ ಮಾದರಿಯಲ್ಲಿರುವ ಇನ್ನೊಂದು ವೀರಗಲ್ಲಿನಲ್ಲಿ ವೀರನು ಬಿಲ್ಲು ಬಾಣಗಳನ್ನು ಹಿಡಿದಿದ್ದಾನೆ. ಒಂದೇ ಭಾಗವನ್ನು ಒಳಗೊಂಡಿರುವ ಮತ್ತೊಂದು ವೀರಗಲ್ಲಿನಲ್ಲಿ ವೀರನು ಬಿಲ್ಲು-ಬಾಣಗಳನ್ನು ಹಿಡಿದು ನಿಂತಿದ್ದಾನೆ.

ಮಹಾಸತಿಗಲ್ಲು : ಇದನ್ನು ಬಾಗೇವಾಡಿಯ ಈಶ್ವರ ದೇವಾಲಯದ ಗರ್ಭಗೃಹದಲ್ಲಿ ಉತ್ತರದ ಗೋಡೆಗೆ ನಿಲ್ಲಿಸಲಾಗಿದೆ. ಮಹಿಳೆ ನಿಂತಿದ್ದು, ಎಡಗೈಯನ್ನು ಮೇಲಕ್ಕೆತ್ತಿರುವಳು. ಕೆತ್ತನೆಯೂ ಕೂಡಾ ಅಷ್ಟೇನೂ ಸೂಕ್ಷ್ಮವಾಗಿಲ್ಲ.

ನಿಶಿಧಿಗಲ್ಲು : ಇಂಗಳೇಶ್ವರದ ಮಠದಲ್ಲಿರುವ ಈ ಮೂರ್ತಿ ಶಾಸನಸಮೇತವಾಗಿದೆ. ಕೆಳಭಾಗ ಶಾಸನವಿದ್ದು, ಮೇಲ್ಭಾಗದಲ್ಲಿ ಪದ್ಮಾ ಸನದಲ್ಲಿರುವ ಮೂರ್ತಿ ಇದೆ. ಈ ಶಾಸನವು ಅಗ್ಗಳಸೆಟ್ಟಿಯ ಮಗ ಶಾಂತಿಸೆಟ್ಟಿಯ ಸಮಾಧಿ ಮರಣದ ವಿಷಯವನ್ನೊಳಗೊಂಡಿದೆ.

ಮನಗೂಳಿಯ ಆಂಜನೇಯ ದೇವಾಲಯದ ಆವರಣದಲ್ಲಿರುವ ನಿಶಿಧಿಗಳಲ್ಲಿನ ನಾಲ್ಕೂ ಭಾಗಗಳಲ್ಲಿ ಮತ್ತು ಮೇಲ್ಭಾಗ ಪದ್ಮಾಸನದಲ್ಲಿರುವ ಚಿಕ್ಕ ಮೂರ್ತಿಗಳಿವೆ. ಇದು ಸಲ್ಲೇಖನ ವೃತದಿಂದ ಮರಣಹೊಂದಿದ ವ್ಯಕ್ತಿಗಳ ಸ್ಮರಣಾರ್ಥವಾಗಿ ಕೆತ್ತಿದ ನಿಶಿಧಿಗಲ್ಲು. ಇವುಗಳೊಂದಿಗೆ ಟಕ್ಕಳಕಿಯ ಆಂಜನೇಯ ದೇವಾಲಯದ ಗೋಡೆಗಿರುವ ಕಾಳಿ, ಭೈರವಿ, ಜಲಕ್ಷ್ಮೀ ಮತ್ತು ಇಂಗಳೇಶ್ವರದ ರೇವಣಸಿದ್ಧ ಗವಿಯಲ್ಲಿ ರೇವಣಸಿದ್ಧ ಮತ್ತು ತೃಟಿತವಾಗಿರುವ ಜೈನ ಶಿಲ್ಪಗಳಿವೆ. ಹೀಗೆ ಈ ಪರಿಸರದಲ್ಲಿ ವಿವಿಧ ಬಗೆಯ ಶಿಲ್ಪಗಳು ಕಂಡರಣೆಯಾಗಿವೆ.

ಬಾವಿಗಳು : ಮುತ್ತಗಿ ಗ್ರಾಮದ ಉತ್ತರ ಭಾಗದಲ್ಲಿ ಹಾಳು ಈಶ್ವರ (ಹನುಮಂತನಗುಡಿ ಎಂದು ಕರೆಯುತ್ತಾರೆ) ಗುಡಿಯ ಮುಂದೆ ಪ್ರಾಚೀನ ಕಾಲದ ಬಾವಿ ಇದೆ. ಚಚ್ಚೌಕವಾಗಿದ್ದು, ಸುತ್ತಲೂ ಸೋಪಾನಗಳಲ್ಲಿ ಗೋಡೆ ನಿರ್ಮಿಸಲಾಗಿದೆ. ನಾಲ್ಕು ಭಾಗಗಳಲ್ಲಿ ಬಾವಿಯಲ್ಲಿ ಇಳಿಯಲು ಪ್ರವೇಶಗಳಿವೆ. ಸ್ಥಳೀಯ ಜನರು ಇದನ್ನು ಗೌರಿಬಾವಿ ಎಂದು ಕರೆಯುತ್ತಾರೆ.

ಇದೇ ಆಕಾರದಲ್ಲಿ ನಿರ್ಮಾಣವಾದ ಬಾವಿ ಬಾಗೇವಾಡಿ ಬೊಂತೇಶ್ವರ (ಬಸವೇಶ್ವರ) ದೇವಾಲಯದ ಪೂರ್ವ ಭಾಗದಲ್ಲಿದೆ. ಸ್ಥಳೀಯ ಜನರು ಬಸವಣ್ಣನ ಬಾವಿ ಎಂದು ಕರೆಯುತ್ತಾರೆ. ಇಂಗಳೇಶ್ವರದ ಹಾಲಬಾವಿ, ಕನಕಾಲ ಗ್ರಾಮದಲ್ಲಿರುವ ಬಾವಿಗಳು ಪ್ರಾಚೀನ ಕಾಲದ ನಿರ್ಮಿತಿಗಳಾಗಿವೆ.

ಬಾಗೇವಾಡಿ ಪ್ರದೇಶದಲ್ಲಿ ಕಲ್ಯಾಣ ಚಾಲುಕ್ಯರ ಶೈಲಿಯ ದೇವಾಲಯ ಮತ್ತು ಮೂರ್ತಿಗಳೇ ಹೆಚ್ಚಾಗಿ ಕಂಡುಬರುತ್ತವೆ. ಸುದೀರ್ಘ ಕಾಲದವರೆಗೆ ಆಳ್ವಿಕೆಮಾಡಿದ ಕಲ್ಯಾಣ ಚಾಳುಕ್ಯರು ಕಲಾ ಚಟುವಟಿಕೆಗಳಿಗೆ ಹೆಚ್ಚಿನ ಮಹತ್ವ ನೀಡಿರುವುದು ವಾಸ್ತುಶಿಲ್ಪ ಕಲೆಯ ಅಧ್ಯಯನದಿಂದ ಸ್ಪಷ್ಟಪಡಿಸುತ್ತವೆ.

೧೧-೧೨ನೇ ಶತಮಾನದಲ್ಲಿ ಬೌದ್ಧಧರ್ಮ ತನ್ನ ಸ್ಥಾನವನ್ನು ಕಳೆದುಕೊಂಡಿದ್ದರಿಂದ ಯಾವುದೇ ಶಿಲ್ಪಕಲೆಯ ನಿರ್ಮಿತಿಗಳು ಈ ಪ್ರದೇಶದಲ್ಲಿಲ್ಲ. ಜೈನದರ್ಮವೂ ಕೂಡಾ ಅವನತಿ ಹೊಂದುತ್ತಾ ಮುಂದುವರಿಯಿತು. ಆದ್ದರಿಂದ ಅದಕ್ಕೆ ಸಂಬಂಧಿಸಿದ ಶಿಲ್ಪಕಲೆ ವಿರಳವಾಗಿ ಕಂಡುಬರುತ್ತವೆ. ಶೈವ, ವೈಷ್ಣವ ಧರ್ಮಗಳು ಸಾಮರಸ್ಯದಿಂದ ಉನ್ನತ ಸ್ಥಾನಕ್ಕೇರಿದವಲ್ಲದೇ ಶಿಲ್ಪಕಲೆಯ ಬೆಳವಣಿಗೆಗೆ ಕಾರಣವಾದವು. ಅನೇಕ ವೀರಗಲ್ಲು, ನಿಶಿಧಿಗಲ್ಲುಗಳಿದ್ದು, ಮಾಹಾಸತಿಗಲ್ಲುಗಳು ವಿರಳವಾಗಿವೆ. ವಾಸ್ತುಮೂರ್ತಿಶಿಲ್ಪಕಲೆಯ ಬೆಳವಣಿಗೆಗಳು ಈ ಪ್ರದೇಶದ ಸಂಸ್ಕೃತಿಗೆ ಉತ್ನತ ಕೊಡುಗೆಗಳಾಗಿವೆ.

[1] S.I.I., XV, 129, Hebbal (B. Bagewadi Tq.) 1229 A.D.

[2] Ibid, XI-i, 139, Hebbal, (B. Bagewadi Tq.), 1095. A.D.

[3] Ibid, XV, 601, Ingaleshvar, (B. Bagewadi Tq.), 12th C. A.D.

[4] Ibid, XV, 169, Ingaleshvar, (B. Bagewadi Tq.), 1265 A.D.

[5] E.I., V, P.25, Muttagi (B.Bagewadi Tq.), 1189 A.D.

[6] S.I.I., XV, 96, Kondaguli (Sindagi Tq.) 1107 A.D.

[7] ಸುಭಾಸ ರಾ. ಚಿಂಚೋಳಿ, ೧೯೯೯, ಪ್ರಾಕ್ತನ ಶಾಸ್ತ್ರದ ಹಿನ್ನೆಲೆಯಲ್ಲಿ ವಿಜಾಪುರ ಜಿಲ್ಲೆಯಲ್ಲಿರುವ ಕಲ್ಯಾಣ ಚಾಲುಕ್ಯರ ಕಾಲದ ವಾಸ್ತು ಮತ್ತು ಶಿಲ್ಪಕಲೆ ಅಧ್ಯಯನ (ಅಪ್ರಕಟಿತ ಪಿಎಚ್‌.ಡಿ. ಮಹಾಪ್ರಬಂಧ) ಪು. ೩೩೬-೩೯ ಅದೇ

[8] ಅದೇ

[9] E.I., V, P.25, Salotagi (Indi Tq.), 945 A.D.