ಒಂದು ಪ್ರದೇಶದ ಸಮಗ್ರವಾದ ಚರಿತ್ರೆಯನ್ನು ಅರ್ಥೈಸಿಕೊಳ್ಳಬೇಕಾದರೆ ಕೇವಲ ಆ ಪ್ರದೇಶದ ಶಾಸನ, ಹಸ್ತಪ್ರತಿ, ಸ್ಮಾರಕಗಳನ್ನು ಕುರಿತು ತಿಳಿದುಕೊಂಡರೆ ಸಾಲದು. ಆ ಪ್ರದೇಶದಲ್ಲಿಯ ಮನುಕುಲದ ಸಂಸ್ಕೃತಿಯನ್ನು ಸಮಗ್ರವಾಗಿ ಗ್ರಹಿಸಬೇಕಾದರೆ, ಅಕ್ಷರ ಸಂಸ್ಕೃತಿಯ ಸೊಂಕಿಲ್ಲದೇ ಸಮೃದ್ಧವಾಗಿ ಬೆಳೆದುಬಂದಿರುವ ಮೌಖಿಕ ಪರಂಪರೆಯಲ್ಲಿರುವ ಅವರ ಆಚಾರ, ವಿಚಾರ, ಕಾವ್ಯ, ಕಥೆ, ಪುರಾಣ, ಧರ್ಮ, ನಂಬಿಕೆ, ಆಚರಣೆ, ಸಂಪ್ರದಾಯ ಮೊದಲಾದವುಗಳ ಅಧ್ಯಯನದಿಂದ ಆ ಪ್ರದೇಶದ ಸಂಸ್ಕೃತಿಯ ಹತ್ತಾರು ಮುಖಗಳು ದರ್ಶನವಾಗುತ್ತದೆ.

ಜನಪದರ ಸಂಸ್ಕೃತಿಯಲ್ಲಿ ಕಂಡುಬರುವ ನಂಬಿಕೆ, ಆಚರಣೆ ಹಾಗೂ ಸಂಪ್ರದಾಯಗಳು ಪ್ರತಿಯೊಂದು ಸಮುದಾಯದಲ್ಲಿಯೂ ಕಂಡುಬರುತ್ತವೆ. ಈ ನಂಬಿಕೆ, ಆಚರಣೆ ಸಂಪ್ರದಾಯಗಳು ಸಾಮೂಹಿಕವಾಗಿ ಆಚರಿಸಲ್ಪಡುತ್ತಿರುತ್ತವೆ. ಉದಾಹರಣೆಗೆ ಜಾತ್ರೆಗಳಲ್ಲಿ ಉತ್ತುವ ಬಿತ್ತುವ ಸಂದರ್ಭಗಳಲ್ಲಿ ಹೀಗೆ ಹತ್ತು ಹಲವಾರು ಸಂದರ್ಭಗಳಲ್ಲಿಯ ಆಚರಣೆ ಸಂಪ್ರದಾಯಗಳು ಸಾಮಾನ್ಯವಾಗಿ ಒಂದೇ ರೀತಿಯಲ್ಲಿರುತ್ತವೆ. ಮಾನವನ ಹುಟ್ಟಿನಿಂದ ಸಾವಿನವರೆಗೆ ಸಾವಿನ ನಂತರ ಆಚರಣೆ, ಸಂಪ್ರದಾಯಗಳು ಸಮುದಾಯದಿಂದ ಸಮುದಾಯಕ್ಕೆ  ಭಿನ್ನವಾಗಿರುತ್ತವೆ. ಒಟ್ಟಿನಲ್ಲಿ ಆಚರಣೆ, ನಂಬಿಕೆ ಸಂಪ್ರದಾಯಗಳು ಆಯಾ ಸಮುದಾಯದ, ಪ್ರದೇಶದ ಅಲಿಖಿತ ಕಾನೂನುಗಳಾಗಿರುತ್ತವೆ. ಈ ಆಚರಣೆ, ನಂಬಿಕೆ, ಸಂಪ್ರದಾಯಗಳ ಹಿಂದೆ ನಮ್ಮ ಪೂರ್ವಜರು ಕಂಡುಕೊಂಡ ಸತ್ಯಗಳು ಅಡಗಿಕೊಂಡಿರುತ್ತವೆ. ಕೆಲವು ಆಚರಣೆ, ಸಂಪ್ರದಾಯ ಮತ್ತು ನಂಬಿಕೆಗಳಲ್ಲಿ ಅನಿಷ್ಟ ಪದ್ಧತಿಗಳೂ ಸೇರಿಕೊಂಡಿವೆ.

ಜನಪದರು ‘ನೈಸರ್ಗಿಕ ಶಕ್ತಿಯನ್ನು ವೃದ್ಧಿಗೊಳಿಸುವ, ನಿಸರ್ಗದೊಡನೆ ಗೆಳೆತನ ಬೆಳೆಸುವ ಉದ್ದೇಶದಿಂದ ವಿಧಿ ಕ್ರಿಯೆಗಳು ಉಗಮವಾದವು. ಉತ್ತನೆ, ಬಿತ್ತನೆ ಮತ್ತು ಕಟಾವು ಋತುಮಾನಕ್ಕನುಗುಣವಾಗಿ ನಡೆಯುವುದರಿಂದ ಇವು ವಿಧಿ ಕ್ರಿಯೆಗಳಾಗಿವೆ. ಆ ಕೃಷಿ ಕರ್ಮಗಳಿಗೆ ಸಂಬಂಧಿಸಿದ ಕುಣಿತ, ಹಾಡು, ಹಬ್ಬ-ಹರಿದಿನಗಳು ವಿಧಿ ಕ್ರಿಯೆಗಳಾಗುತ್ತವೆ. ಮುಂದೇ ಅವೇ ಸಂಪ್ರದಾಯಗಳಾಗುತ್ತವೆ’ (ದೇ ಜವರೇಗೌಡ, ಜಾನಪದ ಅಧ್ಯಯನ ಪು.೩೪೩).

ಸಾಮಾನ್ಯವಾಗಿ ನಂಬಿಕೆ, ಆಚರಣೆ, ಸಂಪ್ರದಾಯಗಳು ವೈಯಕ್ತಿಕ ನೆಲೆಯಲ್ಲಿ ಹುಟ್ಟಿಕೊಂಡು ನಂತರ ಒಬ್ಬರಿಂದ ಮತ್ತೊಬ್ಬರು ಅನುಕರಣೆ ಮಾಡುತ್ತ ಸಾಮೂಹಿಕ ಸ್ವರೂಪವನ್ನು ಪಡೆದುಕೊಂಡಿರುತ್ತವೆ. ಈ ಆಚರಣೆ, ನಂಬಿಕೆ, ಸಂಪ್ರದಾಯಗಳಿಗೆ ಇಡೀ ಸಮಾಜ ಅಥವಾ ಒಂದು ನಿರ್ಧಿಷ್ಟ ಪಡಿಸಿದ ಪ್ರದೇಶದಲ್ಲಿ ವಾಸಿಸುತ್ತಿದ್ದ ಜನತೆ ಅವುಗಳಿಗೆ ಅಂಗೀಕಾರ ನೀಡಬೇಕಾಗುತ್ತದೆ. ಕೇವಲ ಒಬ್ಬ ವ್ಯಕ್ತಿ ಅಥವಾ ಒಂದು ಕುಟುಂಬ ಒಂದು ಆಚರಣೆಯನ್ನು ಹುಟ್ಟು ಹಾಕಿದರೆ ಅದು ಸಾಮೂಹಿಕವಾದ ಆಚರಣೆ ಎನ್ನಿಸುವುದಿಲ್ಲ. ಕೇವಲ ಆ ವ್ಯಕ್ತಿ ಅಥವಾ ಕುಟುಂಬಕ್ಕೆ ಸಂಬಂಧಿಸಿದ ಆಚರಣೆಯಾಗುತ್ತದೆ.

ಈ ಆಚರಣೆ ಸಂಪ್ರದಾಯಗಳು ಅಲಿಖಿತ ಶಾಸನಗಳಾಗಿವೆ. ಇವು ಕುಟುಂಬ ಸಮಾಜವನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿವೆ. ನಮ್ಮ ಸಂಸ್ಕೃತಿಯಲ್ಲಿದ್ದ ಈ ಎಲ್ಲ ಆಚರಣೆ ಸಂಪ್ರದಾಯಗಳಿಗೆ ಪ್ರಾಚೀನ ಕಾಲದಿಂದಲೂ ರಾಜ ಮಹಾರಾಜರು! ಊರಿನ ಆಡಳಿತಗಾರರು ಮಾನ್ಯತೆ ನೀಡುತ್ತಲೇ ಬಂದಿದ್ದರು. ಬ್ರಿಟಿಷರು ಭಾರತಕ್ಕೆ ಆಗಮಿಸಿದಾಗ ಇಲ್ಲಿಯ ಜನರ ಆಚಾರ ವಿಚಾರ, ನಂಬಿಕೆ, ಸಂಪ್ರದಾಯ, ಆಚರಣೆ, ಸಂಸ್ಕೃತಿ ಹೀಗೆ ಹತ್ತು ಹಲವಾರು ವಿಷಯಗಳನ್ನು ತಿಳಿದುಕೊಂಡು ಭಾರತೀಯರನ್ನು ಅರ್ಥೈಸಿಕೊಳ್ಳಲು ಪ್ರಯತ್ನಿಸಿದರು. ಇಡೀ ಭಾರತ ದೇಶವನ್ನು ತಮ್ಮ ಕೈಗೆ ತೆಗೆದುಕೊಂಡು ಆಡಳಿತ ನಡೆಸುತ್ತಿದ್ದ ಸಂದರ್ಭದಲ್ಲಿ ಬ್ರಿಟೀಷರು ಪರಂಪರಾ ಗನುಗತವಾಗಿ ಬಂದ ಆಚರಣೆ, ಸಂಪ್ರದಾಯಗಳಿಗೆ ಮನ್ನಣೆ ನೀಡುತ್ತಿದ್ದರು. ಸಹಗಮನದಂತಹ ಕ್ರೂರ ಆಚರಣೆಗಳನ್ನು ಬ್ರಿಟೀಷರು ನಿಷೇಧಗೊಳಿಸಿದರು.

ನಗರ, ಪಟ್ಟಣ ಪ್ರದೇಶಗಳಿಗಿಂತ ಗ್ರಾಮೀಣ ಪ್ರದೇಶಗಳಲ್ಲಿ ಆಚರಣೆ, ಸಂಪ್ರದಾಯ ಹಾಗೂ ನಂಬಿಕೆಗಳು ಸಮೃದ್ಧವಾಗಿರುವುದು ಕಂಡುಬರುತ್ತದೆ. ಗ್ರಾಮೀಣ ಪ್ರದೇಶಗಳು ಇಂದು ಆಧುನಿಕತೆಗೆ ಮುಖಾಮುಖಿಯಾಗುತ್ತಿ ರುವುದರಿಂದ ಅನೇಕ ಆಚರಣೆ ಸಂಪ್ರದಾಯಗಳಲ್ಲಿ ಪರಂಪರೆಯೊಂದಿಗೆ ಆಧುನಿಕತೆಯ ಸ್ಪರ್ಷವನ್ನು ಪಡೆದುಕೊಳ್ಳುತ್ತಿವೆ. ಮದುವೆ, ಉಪನಯನ, ಶ್ರಾದ್ಧ, ಕೃಷಿಗೆ ಸಂಬಂಧಿಸಿದ ಅನೇಕ ಆಚರಣೆಗಳಲ್ಲಿ ಇಂದು ಹೊಸತನ ಕೂಡಿಕೊಂಡಿರುವುದು ಕಂಡುಬರುತ್ತದೆ.

ನಮ್ಮ ನಾಡಿನ ಉದ್ದಗಲಕ್ಕೂ ಪ್ರಚಲಿತದಲ್ಲಿರುವ ಆಚರಣೆ, ಸಂಪ್ರದಾಯಗಳನ್ನು ಗಮನಿಸಿದಾಗ ಅವು ಭೌಗೋಳಿಕ ಪರಿಸರ, ಧರ್ಮ, ಆಯಾ ಜನರ ಮನೋಧರ್ಮ ಮುಂತಾದವುಗಳನ್ನು ಅವಲಂಬಿಸಿ ಹುಟ್ಟಿಕೊಂಡಿರುತ್ತವೆ. ಕೆಲ ಆಚರಣೆ ಸಂಪ್ರದಾಯಗಳು ಪ್ರದೇಶದಿಂದ ಪ್ರದೇಶಕ್ಕೆ ವಲಸೆ ಹೋಗುವುದನ್ನು ಕಾಣುತ್ತೇವೆ. ಉದಾಹರಣೆಗೆ ಒಂದು ಪ್ರದೇಶದಲ್ಲಿ ವಾಸಿಸುತ್ತಿದ್ದ ಕುಟುಂಬ ಬೇರೊಂದು ಸ್ಥಳಕ್ಕೆ ವಲಸೆ ಹೋದರೆ ಆ ಪ್ರದೇಶದಲ್ಲಿಯೂ ಅದು ಪರಂಪರಾನುಗತವಾಗಿ ಆಚರಿಸಿಕೊಂಡು ಬರುತ್ತಿದ್ದ ಆಚರಣೆ ಸಂಪ್ರದಾಯವನ್ನು ಅನುಸರಿಸುವುದು ಕಂಡುಬರುತ್ತದೆ. ನಮ್ಮ ಪೂರ್ವಜರು ಅತಿಯಾದ ನಂಬಿಕೆಯನ್ನಿಟ್ಟು ಅವರು ಅನುಸರಿಸುತ್ತಿದ್ದ ಎಲ್ಲ ಮಾರ್ಗಗಳನ್ನು ಕ್ರಮಬದ್ಧವಾಗಿ ಅವುಗಳನ್ನು ನಿಯಮಬದ್ಧವಾಗಿ ಪಾಲಿಸುತ್ತಿರುವುದು ಕಂಡುಬರುತ್ತದೆ.

ಮಾನವನ ಅಭಿವೃದ್ಧಿಗಾಗಿ ನಂಬಿಕೆಗಳು ಹುಟ್ಟಿಕೊಂಡವು. ಈ ನಂಬಿಕೆಗಳೆ ಮುಂದೆ ಸಂಪ್ರದಾಯಗಳಾಗಿ ಬೆಳೆದು ಬಂದವು. ನಮ್ಮ ಸಂಸ್ಕೃತಿಯಲ್ಲಿ ಇಂದು ಪ್ರಚಲಿತದಲ್ಲಿರುವ ಆಚರಣೆ ಸಂಪ್ರದಾಯಗಳಲ್ಲಿ ಅನೇಕ ವಿಧಿನಿಷೇಧಗಳಿವೆ. ಅವುಗಳನ್ನು ಸರಿಯಾಗಿ ಪಾಲಿಸದಿದ್ದರೆ ಮನುಕುಲಕ್ಕೆ ತೊಂದರೆ ಕಟ್ಟಿಟ್ಟ ಬುತ್ತಿ ಎಂದು ಹೇಳಲಾಗುತ್ತದೆ. ಹೀಗಾಗಿ ಕಾಲದಿಂದ ಕಾಲಕ್ಕೆ ಸರಿಯಾಗಿ ಆಚರಣೆ ಸಂಪ್ರದಾಯಗಳನ್ನು ನಡೆಸಲೇಬೇಕು ಎಂಬುದಾಗಿ ಹಿರಿಯರು ಹೇಳುತ್ತಾರೆ.

ಬಸವನ ಬಾಗೇವಾಡಿ ಪರಿಸರದಲ್ಲಿ ಪ್ರಚಲಿತವಿರುವ ಆಚರಣೆ, ನಂಬಿಕೆ, ಸಂಪ್ರದಾಯಗಳು ಉತ್ತರ ಕರ್ನಾಟಕದ ಅನೇಕ ಪ್ರದೇಶಗಳಲ್ಲಿರುವುದು ಕಂಡುಬರುತ್ತದೆ. ಈ ಲೇಖನದಲ್ಲಿ ಬಾಗೇವಾಡಿ ಪರಿಸರದಲ್ಲಿರುವ ಪ್ರತಿಯೊಂದು ಸಮುದಾಯದಲ್ಲಿ ಪ್ರಚಲಿತವಿರುವ ನಂಬಿಕೆ, ಆಚರಣೆ ಸಂಪ್ರದಾಯಗಳನ್ನು ಕುರಿತು ವಿವರಿಸುವ ಪ್ರಯತ್ನಕ್ಕೆ ಕೈ ಹಾಕಿಲ್ಲ. ಬಾಗೇವಾಡಿ ಪರಿಸರದಲ್ಲಿ ಎಲ್ಲ ಸಮುದಾಯಗಳು ಸಾಮೂಹಿಕವಾಗಿ ಸೇರಿಕೊಂಡು ಆಚರಿಸುವ ಆಚರಣೆ ಸಂಪ್ರದಾಯಗಳನ್ನು ಕುರಿತು ವಿಶ್ಲೇಷಿಸುವ ಪ್ರಯತ್ನವನ್ನು ಮಾತ್ರ ಮಾಡಿದ್ದೇನೆ.

‘‘ಇಂದು ಪ್ರಚಲಿತವಿರುವ ನಂಬಿಕೆ, ಆಚರಣೆ, ಸಂಪ್ರದಾಯಗಳು ಬಹುತೇಕ ಪ್ರಕೃತಿ. ಮೂಲದವು. ಆದ್ದರಿಂದ ಅವುಗಳನ್ನು ದೈವೀಸಂಬಂಧದ ಸೃಷ್ಟಿ ಎನ್ನಬಹುದು. ಪ್ರಕೃತಿಯ ಮಡಿಲಲ್ಲಿ ಬದುಕಬೇಕಾಗಿದ್ದ ಮಾನವ ಭಯ, ಭಕ್ತಿಗಳಿಂದ ಮತ್ತು ಮನಸ್ಸಿನ ಅಸ್ಥಿರ ಭಾವನೆಗಳಿಂದ ದೈವಿಕ ನಂಬಿಕೆಗಳನ್ನು ಆಚರಣೆಯ ಕ್ರಮದಲ್ಲಿ ಉಳಿಸಿಕೊಂಡಿದ್ದಾನೆ. ಅಗೋಚರವಾದ ಶಕ್ತಿಗಳನ್ನು ವಶಪಡಿಸಿಕೊಳ್ಳಲು ಅವುಗಳ ಕ್ರೂರ ದೃಷ್ಟಿಯಿಂದ ಪಾರಾಗಲು ಅವುಗಳ ಬಗ್ಗೆ ಇರುವ ನಂಬಿಕೆ, ಭಯ, ಭಕ್ತಿಗಳನ್ನೊಳಗೊಂಡ ಆಚರಣೆಗಳು ಅನೇಕ ವಿಧಗಳಲ್ಲಿ ಅವುಗಳಿಗೆ ಸಂತೃಪ್ತಿಪಡಿಸುವ ಸಲುವಾಗಿ ಬೆಳೆದುಕೊಂಡು ಬಂದಿವೆ.’ (ಅದೇ ಪುಟ ೩೪೫)

ನಮ್ಮ ಸಂಸ್ಕೃತಿಯಲ್ಲಿ ಪ್ರಚಲಿತವಿರುವ ಆಚರಣೆ ಹಾಗೂ ಸಂಪ್ರದಾಯಗಳನ್ನು ಕ್ರಮಬದ್ಧವಾಗಿ ವಿಂಗಡಿಸಿಕೊಂಡು ಅಧ್ಯಯನ ಕೈಕೊಳ್ಳುವುದು ತುಂಬ ಜಟಿಲವಾದುದು. ಈಗ ಪ್ರಚಲಿತದಲ್ಲಿರುವ ಆಚರಣೆಗಳೆಲ್ಲವೂ ಆಯಾ ಪ್ರದೇಶದ ಜನತೆಯ ಮನೋ ಭಾವನೆಗೆ ಹೊಂದಿಕೊಳ್ಳುವಂತೆ ಪ್ರದೇಶದಿಂದ ಪ್ರದೇಶಕ್ಕೆ ಒಂದು ಸಮುದಾಯದಿಂದ ಇನ್ನೊಂದು ಸಮುದಾಯಕ್ಕೆ ವ್ಯಕ್ತಿಯಿಂದ ವ್ಯಕ್ತಿಗೆ, ಧರ್ಮದಿಂದ ಧರ್ಮಕ್ಕೆ ಭಿನ್ನವಾಗಿರುವುದರಿಂದ ಆಯಾ ಸಮುದಾಯಗಳ ಸಾಮಾಜಿಕ, ಆರ್ಥಿಕ, ರಾಜಕೀಯ, ಸಾಂಸ್ಕೃತಿಕ, ಧಾರ್ಮಿಕ, ಮಾನಸಿಕ ಮತ್ತು ಬೌದ್ಧಿಕ ಹಿನ್ನೆಲೆಯಲ್ಲಿಯೇ ಅಧ್ಯಯನ ಮಾಡಬೇಕಾಗುತ್ತದೆ.

ಬಸವನ ಬಾಗೇವಾಡಿ ಪರಿಸರದ ನಂಬಿಕೆ, ಆಚರಣೆ ಹಾಗೂ ಸಂಪ್ರದಾಯಗಳನ್ನು ಕುರಿತು ನಾನು ಈ ಲೇಖನದಲ್ಲಿ ಮಳೆ, ಬೆಳೆ, ಭೂಮಿಗೆ ಸಂಬಂಧಿಸಿದ ಹಾಗೂ ಹಬ್ಬ ಜಾತ್ರೆ ಉತ್ಸವಗಳ ಆಚರಣೆ ಮತ್ತು ಸಂಪ್ರದಾಯಗಳನ್ನು ಕುರಿತು ಮಾತ್ರ ವಿಶ್ಲೇಷಿಸುವ ಪ್ರಯತ್ನವನ್ನು ಇಲ್ಲಿ ಮಾಡಿದ್ದೇನೆ.

ಕೃಷಿಯನ್ನೇ ಪ್ರಧಾನ ವೃತ್ತಿಯಾಗಿಸಿಕೊಂಡಿರುವ ಬಸವನ ಬಾಗೇವಾಡಿ ಪರಿಸರದಲ್ಲಿಯ ಆಚರಣೆ ಹಾಗೂ ಸಂಪ್ರದಾಯಗಳನ್ನು ಕೃಷಿಗೆ ಸಂಬಂಧಿಸಿದ ಆಚರಣೆಗಳು ಹಾಗೂ ಧಾರ್ಮಿಕ ಆಚರಣೆಗಳನ್ನು ಇಲ್ಲಿ ವಿಶ್ಲೇಷಣೆ ಮಾಡುವ ಪ್ರಯತ್ನ ಮಾಡಲಾಗಿದೆ.

ಕೃಷಿಗೆ ಸಂಬಂಧಿಸಿದ ಆಚರಣೆ ಸಂಪ್ರದಾಯಗಳು: ಬಿಜಾಪುರ ಜಿಲ್ಲೆ ಒಂದು ಕಾಲದಲ್ಲಿ ಬಿಳಿ ಜೋಳದ ಕಣಜವಾಗಿತ್ತು. ಇಂದು ಜೋಳ ಬೆಳೆಯುವ ಪ್ರಮಾನ ಕಡಿಮೆಯಾಗಿದೆ. ಆಲಮಟ್ಟಿ ನೀರಾವರಿ ಯೋಜನೆಯಿಂದ ಇಲ್ಲಿ ಕಬ್ಬನ್ನು ಸಹ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ. ಬಸವನ ಬಾಗೇವಾಡಿ ಪ್ರದೇಶದಲ್ಲಿ ಕೃಷಿ ಪ್ರಮುಖವಾದ ಉದ್ಯೋಗವಾಗಿದೆ. ಕೃಷಿಗೆ ಸಂಬಂಧಿಸಿದ ಆಚರಣೆ ಸಂಪ್ರದಾಯಗಳು ವರ್ಷದುದ್ದಕ್ಕೂ ಇಲ್ಲಿ ಕಂಡುಬರುತ್ತವೆ. ಆಧುನಿಕತೆಯ ಪ್ರಭಾವದಿಂದಾಗಿ ಇಂದು ಕೃಷಿಗೆ ಸಂಬಂಧಿಸಿದ ಆಚರಣೆಗಳು ಹಂತ ಹಂತವಾಗಿ ಕಡಿಮೆಯಾಗುತ್ತಿವೆ. ಕೃಷಿ ಚಟುವಟಿಕೆಗಳ ಆರಂಭದಿಂದ ಅಂತ್ಯದವರೆಗೆ ಮಾತೃದೇವತೆಗಳ ಆರಾಧನೆಗಳು ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತವೆ.

ಹೋಳಿ ಹುಣ್ಣಿಮೆ: ಹೋಳಿ ಹುಣ್ಣಿಮೆಯನ್ನು ಬಿಜಾಪುರ ಜಿಲ್ಲೆಯಲ್ಲಿ ವಿಶಿಷ್ಟವಾಗಿ ಆಚರಿಸುವುದು ಕಂಡುಬರುತ್ತದೆ. ಬಾಗೇವಾಡಿಯಲ್ಲಿ ಕಾಮನ ದಹನವನ್ನು ಸುಮಾರು ರಾತ್ರಿ ೧೦ ರಿಂದ ೧೧ ಗಂಟೆಯವರೆಗೆ ದಹನ ಮಾಡುತ್ತಾರೆ. ಇಲ್ಲಿ ಕಾಮನನ್ನು ಕಟ್ಟುವ ಸಂಪ್ರದಾಯವಿಲ್ಲ. ಬಾಗೇವಾಡಿಯಲ್ಲಿ ಮೊದಲು ಕಾಮಣ್ಣನನ್ನು ಸುಡಲು ಕಟ್ಟಿಗೆ ಕುಳ್ಳು, ಕಳವು ಮಾಡಿ ತಂದು ಅವುಗಳನ್ನು ಊರಿನ ಬಡಿಗೇರರಿಂದ ದುಂಡಾಗಿ ಒಟ್ಟಿಸಿ ಅದರಲ್ಲಿ ಔಡಲಗಿಡವನ್ನಿಟ್ಟು ಸುಡುವ ಸಂಪ್ರದಾಯವಿದೆ. ಬಾಗೇವಾಡಿಯಲ್ಲಿ ಸುಮಾರು ೮ ರಿಂದ ೧೦ ಪ್ರದೇಶಗಳಲ್ಲಿ ಕಾಮನನ್ನು ಸುಡುತ್ತಾರೆಂದು ತಿಳಿಯುತ್ತದೆ. ಪ್ರತಿಯೊಂದು ಓಣಿಯಲ್ಲಿಯ ಹುಡುಗರು ಹಿರಿಯರು ಸೇರಿಕೊಂಡು ರಾತ್ರಿ ಹೊತ್ತಿನಲ್ಲಿ ಕಾಮನಿಗೆ ಬೆಂಕಿ ಹಚ್ಚಿ, ಹೋಳಿ ಹಾಡುಗಳನ್ನು ಹಾಡುತ್ತಾರೆ.

ಕಾಮನಿಗೆ ಬೆಂಕಿ ಹಚ್ಚಲು ಹರಿಜನರ ಕೇರಿಯಿಂದ ಬೆಂಕಿ ತರುವ ಸಂಪ್ರದಾಯವಿದೆ. ೮ ರಿಂದ ೧೦ ಜನ ಯುವಕರು ಹರಿಜನರ ಕೇರಿಗೆ ಅವರಿಂದ ಬೆಂಕಿ ಪಡೆಯಲು ಪ್ರಯತ್ನಿಸುವಾಗ ಹರಿಜನರು ಸರಳವಾಗಿ ಬೆಂಕಿಯನ್ನು ಕೊಡುತ್ತಿರಲಿಲ್ಲ. ಓಣಿಯ ಯುವಕರು ಅವರೊಂದಿಗೆ ತಂಟೆ ತಕರಾರುಗಳನ್ನು ಮಾಡಿ ಬೆಂಕಿಯನ್ನು ತೆಗೆದುಕೊಂಡು ಬಂದು ಕಾಮನಿಗೆ ಬೆಂಕಿ ಇಡುತ್ತಿದ್ದರು. ಇಂದು ಸಹ ಈ ಸಂಪ್ರದಾಯವಿದೆ. ಆದರೆ ಹರಿಜನರ ಕೇರಿಯವರು ಯಾವ ತಂಟೆ ತಕರಾರುಗಳನ್ನು ಮಾಡದೇ ಬೆಂಕಿಯನ್ನು ಕೊಡುತ್ತಾರೆ.

ಕಾಮದಹನಕ್ಕೆ ಕುಳ್ಳು ಕಟ್ಟಿಗೆಯನ್ನು ಕದಿಯುವ ಸಂಪ್ರದಾಯ ಇಂದು ಕಡಿಮೆಯಾಗಿದೆ. ಊರಿನಲ್ಲಿರುವ ಅಥವಾ ಹೊಲ ಗದ್ದೆಗಳಲ್ಲಿರುವ ಒಣಗಿದ ಮರಗಳನ್ನು ಕಡಿದು ತಂದು ಓಣಿಯ ಮಧ್ಯದಲ್ಲಿ ಕಟ್ಟಿಗೆಯನ್ನು ಒಟ್ಟಿ ಅದರಲ್ಲಿ ಔಡಲ ಗಿಡವನ್ನಿಟ್ಟು ಕಾಮನ ದಹನ ಮಾಡುತ್ತಿದ್ದಾರೆ. ಅಶ್ಲೀಲ, ಲೈಂಗಿಕತೆಯನ್ನೊಳಗೊಂಡ ಪದ್ಯಗಳನ್ನು ಈ ಸಂದರ್ಭದಲ್ಲಿ ಯುವಕರು ಹಾಡುವುದುಂಟು.

ಕಾಮನ ದಹನಕ್ಕಿಂತ ಮೊದಲು ಕುಳ್ಳು ಕಟ್ಟಿಗೆ ಒಟ್ಟಿದ ಕಾಮನಿಗೆ ಪೂಜೆ ಸಲ್ಲಿಸಲಾಗುತ್ತದೆ. ಕಾಮನ ನೈವೇದ್ಯಕ್ಕೆ ಹೋಳಿಗೆಯನ್ನು ಸಿದ್ಧಪಡಿಸಿರುತ್ತಾರೆ. ಕೋಲ್ಕಾರ ಎಲ್ಲ ಜವಾಬ್ದಾರಿಗಳನ್ನು ಹೊತ್ತುಕೊಂಡು ಓಣಿಯವರು ನೀಡಿದ ನೈವೇದ್ಯವನ್ನು ತಂದು ಕಾಮನಿಗೆ ತೋರಿಸಿ ಕಾಯಿ ಒಡೆದು ಪೂಜೆ ಮಾಡುತ್ತಾನೆ. ನಂತರ ಬೆಂಕಿ ಹಚ್ಚುತ್ತಾರೆ.

ಬಾಗೇವಾಡಿ ಸುತ್ತಲಿನ ಪ್ರದೇಶಗಳಲ್ಲಿ ಕಾಮಣ್ಣನನ್ನು ಕಟ್ಟಿ ಊರಲ್ಲಿ ಮೆರವಣಿಗೆ ಮಾಡಿ ನಂತರ ಕಾಮನನ್ನು ಇಟ್ಟು ಅವನ ಸುತ್ತಲೂ ಕಟ್ಟಿಗೆ ಹಾಗೂ ಕುಳ್ಳನ್ನು ಒಟ್ಟಿ ಬೆಂಕಿ ಹಚ್ಚುವ ಆಚರಣೆ ಇದೆ. ಬಸವನ ಬಾಗೇವಾಡಿಯಲ್ಲಿ ಕುಳ್ಳು ಅಥವಾ ಕಟ್ಟಿಗೆಯನ್ನು ಮಾತ್ರ ಸುಡುತ್ತಾರೆ.

ಬಸವನ ಬಾಗೇವಾಡಿಯಲ್ಲಿಯ ಕಾಮಣ್ಣ ಈ ಊರನ್ನು ಬಿಟ್ಟು ಬೇರೆ ಊರಿಗೆ ಹೋಗಿದ್ದಾನೆಂದು ಕೆಲವರು ತಿಳಿಸಿದರೆ, ಮತ್ತೆ ಕೆಲವರು ಹೋಳಿ ಹುಣ್ಣಿಮೆಯ ದಿನ ಕಾಮಣ್ಣನನ್ನು ಯಾರೋ ಅಪಹರಿಸಿ ತೆಗೆದುಕೊಂಡು ಹೋಗಿರಬೇಕು ಅಥವಾ ಊರಲ್ಲಿ ಕಾಮಣ್ಣನ ಪ್ರತಿಕೃತಿಯನ್ನು ಮೆರವಣಿಗೆ ಮಾಡಿ ತರುವುದರೊಳಗಾಗಿ ಕಾಮನನ್ನು ಸುಡಲು ಒಟ್ಟಿದ ಕುಳ್ಳು ಹಾಗೂ ಕಟ್ಟಿಗೆಗಳಿಗೆ ಯಾರೋ ಮೊದಲೇ ಬೆಂಕಿ ಹಚ್ಚಿರಬೇಕು ಆದ್ದರಿಂದ ಕಾಮಣ್ಣನನ್ನು ಹೊರತು ಪಡಿಸಿ ಕೇವಲ ಕುಳ್ಳು ಕಟ್ಟಿಗೆಗೆ ಬೆಂಕಿ ಹಚ್ಚುವ ಸಂಪ್ರದಾಯ ಈ ಪ್ರದೇಶದಲ್ಲಿ ಪ್ರಚಲಿತದಲ್ಲಿರಬಹುದು. ಎಂಬ ಮಾಹಿತಿ ದೊರೆಯುತ್ತದೆ.

ಬಸವನ ಬಾಗೇವಾಡಿಯಲ್ಲಿ ಪ್ರತಿಯೊಂದು ಓಣಿಯಲ್ಲಿ ಕಾಮನನ್ನು ಸುಡುವರು. ಕೆಲ ಓಣಿಯವರು ಹರಿಜನರ ಕೇರಿಯಿಂದ ಬೆಂಕಿಯನ್ನು ತಂದು ಕಾಮನಿಗೆ ಬೆಂಕಿ ಹಚ್ಚಿದರೆ, ಕೆಲ ಪ್ರದೇಶಗಳಲ್ಲಿ ಕಂಬಿಯನ್ನು ಶ್ರೀಶೈಲಕ್ಕೆ ತೆಗೆದುಕೊಂಡು ಹೋಗುವವರು ಕೈಯಲ್ಲಿ ಹಿಲಾಲ್ ಹಿಡಿದುಕೊಂಡು ಹೋಗುತ್ತಿರುತ್ತಾರೆ. ದಾರಿಯಲ್ಲಿ ಹೋಗುವಾಗ ಬೆಂಕಿ ಹಚ್ಚಿ ಹೋಗುತ್ತಾರೆ ಎಂದು ತಿಳಿಯುತ್ತದೆ.

ಕಂಬಿ ಆಚರಣೆ: ಬಾಗೇವಾಡಿಯಲ್ಲಿ ಮಲ್ಲಯ್ಯನ ಕಂಬಿಯನ್ನು ಆರಾಧಿಸುವ ಕೆಲ ಕುಟುಂಬಗಳಿರುವುದು ಕಂಡುಬರುತ್ತವೆ. ಮಲ್ಲಯ್ಯನ ಆರಾಧನೆ ಮಾಡುವವರು ಹೋಳಿ ಹುಣ್ಣಿಮೆಯ ರಾತ್ರಿ ತಮ್ಮ ಮನೆಯಲ್ಲಿರುವ ಕಂಬಿಯನ್ನು ಪೂಜಿಸಿ ಎಲ್ಲರೂ ಬಸವಣ್ಣನ ಗುಡಿಗೆ ಬರುತ್ತಾರೆ. ನಾಲ್ಕೈದು ದಿನ ಬಸವಣ್ಣನ ಗುಡಿಯಲ್ಲಿದ್ದು, ಅಲ್ಲಿಂದ ಶ್ರೀಶೈಲಕ್ಕೆ ನಡೆಯುತ್ತಾ ಕಂಬಿಯನ್ನು ಹೊತ್ತುಕೊಂಡು ಹೋಗುವವರು. ಶ್ರೀಶೈಲದಿಂದ ಹಿಂತಿರುಗಿ ದವನದ ಹುಣ್ಣಿಮೆಗೆ ಮರಳಿ ಬರುತ್ತಾರೆ. ಬಸವಣ್ಣನ ಗುಡಿಗೆ ಬಂದ ಕಂಬಿಯವರನ್ನು ಡೊಳ್ಳಿನ ವಾದ್ಯದ ಮೂಲಕ ಸ್ವಾಗತಿಸಿ ಮಲ್ಲಯ್ಯನಿಗೆ ಬೆಲ್ಲ ಹಂಚಿ ಪೂಜಿಸಿ ಅವರವರ ಮನೆಗೆ ಕಳಿಸಿಕೊಡುತ್ತಾರೆ.

ಕಾಮನನ್ನು ಸುಟ್ಟ ಬೂದಿ ಪವಿತ್ರವಾದದ್ದು ಎಂಬ ಪರಿಕಲ್ಪನೆ ಇವರಲ್ಲಿದೆ. ಆ ಬೂದಿಯನ್ನು ರೈತರು ತೆಗೆದುಕೊಂಡು ಹೋಗಿ ತಮ್ಮ ತಮ್ಮ ಹೊಲ ಗದ್ದೆಗಳಿಗೆ ಹಾಕುತ್ತಾರೆ. ಇದರಿಂದ ಬೆಳೆ ಉತ್ತಮವಾಗಿ ಬೆಳೆಯುತ್ತದೆಂಬ ಭಾವನೆ ಇವರಲ್ಲಿದೆ. ಕಾಮನೂ ಸಹ ಕೃಷಿಗೆ ಸಂಬಂಧಿಸಿದ ದೈವನಾಗಿದ್ದಾನೆ. ಉತ್ತರ ಕರ್ನಾಟಕದ ಅನೇಕ ಪ್ರದೇಶಗಳಲ್ಲಿ ಬಿತ್ತುವ ಬೀಜಗಳನ್ನು ಕಾಮನಿಗೆ ತೋರಿಸುವ ಸಂಪ್ರದಾಯವಿದೆ. ಹೀಗೆ ಮಾಡುವುದರಿಂದ ಬೆಳೆ ಸಮೃದ್ಧಿಯಾಗಿ ಬೆಳೆಯುತ್ತದೆಂಬ ಪ್ರತೀತಿ ಇದೆ.

ಕಾಮನನ್ನು ದಹಿಸಿದ ದಿನ ಮಳೆಯಾದರೆ ಅದನ್ನು ಕಾಮಣ್ಣನ ಕಣ್ಣೀರು ಎಂದು ತಿಳಿದುಕೊಳ್ಳುತ್ತಾರೆ. ಕಾಮದಹನದ ಮೂರನೆಯ ದಿನ ಬಣ್ಣ ಆಡುವ ಸಂಪ್ರದಾಯ ಬಾಗೇವಾಡಿ ಪರಿಸರದಲ್ಲಿದೆ.

ಕಾರ ಹುಣ್ಣಿಮೆ: ಈ ಹುಣ್ಣಿಮೆಯ ಕಾಲಕ್ಕೆ ಆಕಾಶದ ತುಂಬ ಕಾರ್ಮೋಡ ಕವಿದಿರುತ್ತದೆ. ರೈತರು ತಮ್ಮ ಹೊಲಗದ್ದೆಗಳಲ್ಲಿ ಬೀಜ ಬಿತ್ತಿರುತ್ತಾರೆ. ಸ್ವಲ್ಪ ಬಿಡುವಾಗಿರುತ್ತಾರೆ. ಎತ್ತುಗಳಿಗೂ ಈ ಕಾಲ ಬಿಡುವಿನ ಸಮಯ. ಬಸವ ಜಯಂತಿಯಲ್ಲಿ ಎತ್ತುಗಳನ್ನು ಶೃಂಗರಿಸಿ ಊರಿನಲ್ಲೆಲ್ಲ ಮೆರವಣಿಗೆ ಮಾಡಿ ಅವುಗಳನ್ನು ಸಂತೋಷ ಪಡಿಸಿ ಮುಂಗಾರು ಮಳೆ ಬಿದ್ದ ತಕ್ಷಣ, ಭೂಮಿಯನ್ನು ಉತ್ತುವ, ಬಿತ್ತುವ ಕೆಲಸದಲ್ಲಿ ಬಿಡುವಿಲ್ಲದಂತೆ ಬಳಸಿಕೊಂಡಿರುತ್ತಾರೆ. ಕಾರ ಹುಣ್ಣಿಮೆಗೆ ಎತ್ತುಗಳನ್ನು ಬಳಸಿಕೊಂಡು ಕೃಷಿ ನಿರ್ವಹಿಸುವ ಕೆಲಸ ಕಡಿಮೆ ಇರುತ್ತದೆ. ಸಾಮಾನ್ಯವಾಗಿ ಭೂಮಿ ಹಸಿರಾಗಿರುತ್ತದೆ. ಎತ್ತುಗಳು ಹಸಿರು ಹುಲ್ಲು ತಿಂದು, ಸಂತೋಷದಿಂದಿರುತ್ತವೆ. ಈ ಸಂದರ್ಭದಲ್ಲಿ ರೈತರು ಭೂಮಿಯನ್ನು ಉತ್ತಿ ಬಿತ್ತಿದ ಎತ್ತುಗಳನ್ನು ಸಂತೋಷ ಪಡಿಸಲು ಈ ಆಚರಣೆ ಮಾಡುತ್ತಾರೆ. ಬೆಳಿಗ್ಗೆ ಎತ್ತುಗಳ ಮೈತೊಳೆದು ಅವುಗಳ ಕೊಡುಗಳನ್ನು ಚೆನ್ನಾಗಿ ಹೊಳಪು ಬರುವಂತೆ ಮಾಡಿ ಕೊಡಿನ ತುದಿಗೆ ಕೋಡ್ಯಾಸ್ಸ್ ಹಾಕಿ ಬಣ್ಣ ಹಚ್ಚಿ ರಿಬ್ಬನ ಕಟ್ಟುತ್ತಾರೆ. ಎತ್ತುಗಳಿಗಾಗಿಯೇ ಬಣ್ಣ ಬಣ್ಣದ ಬಟ್ಟೆಗಳಿಂದ ಸಿದ್ಧಪಡಿಸಿದ ಜೂಲುಗಳನ್ನು ಬೆನ್ನು ಮೇಲೆ ಹಾಕಿ, ಕೊರಳಿಗೆ ಗೆಜ್ಜೆ ಗಂಟೆ ಸರಗಳನ್ನು ಕಟ್ಟಿ, ಹಣೆಗೆ ಹಣೆಪಟ್ಟಿ ಕಟ್ಟಿ ಸುಂದರವಾಗಿ ಅಲಂಕರಿಸುತ್ತಾರೆ. ಎತ್ತುಗಳಿಗೆ ದೃಷ್ಟಿತಾಗದಿರಲೆಂದು ಕಾಲಿಗೆ ಕರಿ ಕಂಬಳಿಯ ದಾರವನ್ನು ಕಟ್ಟುವರು. ಕಾರಹುಣ್ಣಿಮೆಯ ದಿನ ಸಾಮಾನ್ಯವಾಗಿ ಸೇಂಗಾ ಹೋಳಿಗೆ, ಒಡೆ, ಪಾಯಸ, ಕರಿಗೆಡಬು ಮಾಡಿರುತ್ತಾರೆ. ಬಸವಣ್ಣನಿಗೆ ಮತ್ತು ಎತ್ತುಗಳಿಗೆ ನೈವೇದ್ಯ ಕೊಟ್ಟು ಆ ನೈವೇದ್ಯವನ್ನು ಎತ್ತುಗಳಿಗೆ ತಿನ್ನಲು ಕೊಡುತ್ತಾರೆ. ರೈತರು ಹೊಸ ಬಟ್ಟೆಗಳನ್ನು ತೊಟ್ಟುಕೊಂಡು ತಲೆಗೆ ರುಮಾಲು ಸುತ್ತಿಕೊಂಡು ಸಿಂಗರಿಸಿದ ಎತ್ತುಗಳಿಗೆ ಕೊರಳ ಮೇಲೆ ನೊಗ ಕಟ್ಟಿಕೊಂಡು ಸಾಯಂಕಾಲ ೪ ರಿಂದ ೫ ಗಂಟೆಯ ಒಳಗೆ ಬಸವಣ್ಣನ ದೇವಸ್ಥಾನದ ಮುಂದೆ ಬಂದು ಸಾಲಾಗಿ ನಿಂತು ಎತ್ತುಗಳ ಮೆರವಣಿಗೆ ಮಾಡುತ್ತಾರೆ.

ಒಂದು ಕಾಲದಲ್ಲಿ ಹಳೆಬಂಡಿ ಕಟ್ಟುವ ಸಂಪ್ರದಾಯವಿತ್ತು. ಇಂದು ಅದು ಕಾಣುವುದಿಲ್ಲ. ಕಾರಹುಣ್ಣಿಮೆಯ ದಿನ ಎಲ್ಲ ರೈತರೂ ಎತ್ತುಗಳ ಮೆರವಣಿಗೆಯನ್ನು ಮಾಡುತ್ತಿದ್ದರು. ಇಂದು ಕೃಷಿಯಲ್ಲಿ ಟ್ರ್ಯಾಕ್ಟರ್ ಬಳಸುತ್ತಿದ್ದುದರಿಂದ ಎತ್ತುಗಳ ಮೆರವಣಿಗೆಯಲ್ಲಿ ಪಾಲ್ಗೊಳ್ಳುವವರ ಸಂಖ್ಯ ಕಡಿಮೆಯಾಗುತ್ತಿದೆ.

ಬಾಗೇವಾಡಿಯಲ್ಲಿ ಕಾರಹುಣ್ಣಿಮೆಯನ್ನು ನೀರಸವಾಗಿ ಆಚರಿಸುತ್ತಿದ್ದರೆ ಈ ಪ್ರದೇಶದ ಸುತ್ತಲಿರುವ ಗ್ರಾಮಗಳಾದ ಯರನಾಳ, ಮುತ್ತಗಿ, ಟಕ್ಕಳಕಿ, ಜೈನಾಪೂರ, ನಾಗೂರು, ಕಾಕಬಾಳ, ಹುಣಸ್ಯಾಳ, ನೇಗಿನಾಳ ಮುಂತಾದ ಗ್ರಾಮಗಳಲ್ಲಿ ಎತ್ತುಗಳ ಅಲಂಕಾರ ಹಾಗೂ ಮೆರವಣಿಗೆಯನ್ನು ಉತ್ಸಾಹದಿಂದ ಮಾಡುತ್ತಾರೆಂದು ತಿಳಿಯುತ್ತದೆ.

ಕಾರ ಹುಣ್ಣಿಮೆಗೆ (ನಂದಿ) ಬಸವಣ್ಣ ಮದು ಮಗನಾಗಿರುತ್ತಾನೆ. ಅಂದು ಅವನ ಮೈ ತೊಳೆದು ಸಿಂಗರಿಸಿ ಮದುವೆ ಮಾಡುವರು. ಭಾರತ ಹುಣ್ಣಿಮೆಯಲ್ಲಿ ಕಟ್ಟಿರುವ ತೆನೆಯನ್ನು ತಿನನ್ನಲಿಕ್ಕೆ ಕೊಡುವರು. ಹಣೆಗೆ ಎರಡು ಬಾಸಿಂಗ ಕಟ್ಟಿಸುವರು. ಒಂದು ಎಲೆ ಬಾಸಿಂಗವಾದರೆ, ಇನ್ನೊಂದು ಹೂವಿನ ಬಾಸಿಂಗವಿರುತ್ತದೆ. ಊರಿನ ರೈತ ಕುಟುಂಬಗಳೆಲ್ಲ ತಮ್ಮ ತಮ್ಮ ಮನೆಯಲ್ಲಿರುವ ಎತ್ತು, ಹೋರಿಗಳನ್ನು ಸಿಂಗರಿಸುವರು. ಪ್ರತಿಯೊಬ್ಬರು ತಮ್ಮ ತಮ್ಮ ಓಣಿಗಳಲ್ಲಿ ಹಗ್ಗಕ್ಕೆ ಕೊಬ್ಬರಿ ಬಾಳೆಕಾಯಿ ಕಟ್ಟುವರು. ಸಾಯಂಕಾಲ ೫ ಗಂಟೆಯ ಹೊತ್ತಿಗೆ ಹೋರಿಗಳನ್ನು ತಂದು ಕರಿ ಹರಿಯುವ ಆಚರಣೆ ಮಾಡುವರು. ಒಂದು ಕೆಂದು ಬಣ್ಣದ ಇನ್ನೊಂದು ಬಿಳಿ ಬಣ್ಣದ ಹೋರಿಯನ್ನು ಓಡಿಸುವರು. ಯಾವ ಬಣ್ಣದ ಹೋರಿ ಮುಂದೆ ಓಡುತ್ತದೆಯೋ ಅದನ್ನು ಗಮನದಲ್ಲಿಟ್ಟು ಆ ವರ್ಷದ ಬೆಳೆಯ ಬಗ್ಗೆ ತಿಳಿದುಕೊಳ್ಳುವರು. ಬಿಳಿ ಬಣ್ಣದ ಹೋರಿ ಮುಂದೆ ಹೋದರೆ ಜೋಳದ ಬೆಳೆ, ಕಂದು ಬಣ್ಣದ ಹೋರಿ ಮುಂದೆ ಬಂದರೆ ಗೋದಿ ಬೆಳೆ ಸಮೃದ್ಧವಾಗಿ ಬೆಳೆಯುತ್ತದೆಂದು ತಿಳಿದುಕೊಳ್ಳುವರು.

ಕಾರ ಹುಣ್ಣಿಮೆಗೆ ರೈತರು ತಮ್ಮ ಎತ್ತು ಹೋರಿಗಳಿಗೆ ಕಿಚಡಿ, ಕೋಳಿ, ಮೊಟ್ಟೆ ತಿನ್ನಿಸುವರು ಕಾರ ಹುಣ್ಣಿಮೆ ಒಳ್ಳೆಯ ದಿನವೆಂದು ತಿಳಿದು ಚಿಕ್ಕ ಚಿಕ್ಕ ಹೋರಿಗಳಿಗೆ ಮೊದಲ ಬಾರಿಗೆ ನೋಗ ಕಟ್ಟಿ ಅವುಗಳನ್ನು ಓಣಿಯಲ್ಲಿ ಸುತ್ತಾಡಿಸುವ ಸಂಪ್ರದಾಯವಿದೆ.

ಸೀಗೆಹುಣ್ಣಿಮೆ : ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಚಟುವಟಿಕೆಯ ಪ್ರಾರಂಭದಿಂದ ಮುಕ್ತಾಯದವರೆಗೆ ಮಾತೃ ದೇವತೆಗಳ ಆರಾಧನೆ ಹೆಚ್ಚಾಗಿರುವುದು ಕಂಡು ಬರುತ್ತದೆ. ಭೂಮಿಯನ್ನು ವಿವಿಧ ರೀತಿಯ ಮಾತೃದೇವತೆಗಳ ಹೆಸರಿನಿಂದ ಆರಾಧಿಸುತ್ತಿರುವುದು ಕಂಡುಬರುತ್ತದೆ. ಭೂಲೋಕದಲ್ಲಿ ಕೃಷಿ ಚಟುವಟಿಕೆಗಳು ಹೇಗೆ ನಡೆಯುತ್ತವೆ ಎಂಬುದನ್ನು ತಿಳಿದುಕೊಳ್ಳಲು ಶಿವ, ತನ್ನ ಪತ್ನಿಯರಾದ ಗಂಗೆ-ಗೌರಿ, ನಂದಿ, ನಾಗಪ್ಪ ಹಾಗೂ ಮಗನಾದ ಗಣಪತಿ, ಜೋಕುಮಾರನನ್ನು ಕಳಿಸುತ್ತಾನೆಂಬ ಪರಿಕಲ್ಪನೆ ಗ್ರಾಮೀಣ ಜನರಲ್ಲಿದೆ. ನಂದಿ, ನಾಗಪ್ಪ, ಶೀಗವ್ವ, ಗೌರವ್ವ, ಜೋಕುಮಾರ, ಗಣಪತಿ, ಇವರೆಲ್ಲರೂ ಭೂಲೋಕಕ್ಕೆ ಒಬ್ಬರಾದ ಮೇಲೆ ಒಬ್ಬರು ಬಂದು ಇಲ್ಲಿಯ ಮಳೆ, ಬೆಳೆ, ಜನರ ಕಷ್ಟ, ಸುಖ, ನೋವು, ನಲಿವು ಇವುಗಳನ್ನೆಲ್ಲ ತಿಳಿದುಕೊಂಡು ಕೈಲಾಸಕ್ಕೆ ಹೋಗಿ ಶಿವನ ಮುಂದೆ ತಿಳಿಸುತ್ತಾರೆಂಬ ಭಾವನೆ ಇವರಲ್ಲಿದೆ.

ಭೂಮಿ ತಾಯಿಗೆ ಶೀಗವ್ವನ ಹೆಸರಿನಲ್ಲಿ ಬಯಕೆ-ಊಟ-ಮಾಡಿಸುವ ಸಂಪ್ರದಾಯವನ್ನು ಶೀಗಿ ಹುಣ್ಣಿಮೆಯಲ್ಲಿ ಮಾಡಲಾಗುತ್ತದೆ. ಭೂಮಿತಾಯಿ ಮುಂಗಾರಿ ಬೆಳೆಯನ್ನು ತನ್ನ ಗರ್ಭದಲ್ಲಿಟ್ಟು ಬೆಳೆಸುತ್ತಿರುತ್ತಾಳೆ. ಆ ಬೆಳೆ ಸಮೃದ್ಧವಾಗಿ ಬೆಳೆದು ಒಳ್ಳೆಯ ಫಲ ನೀಡಲಿ ಎಂಬ ಆಶಯ ರೈತರದ್ದು, ಈ ಕಾರಣಕ್ಕಾಗಿ ಅವಳನ್ನು ತೃಪ್ತಿಪಡಿಸಲಾಗುತ್ತದೆ. ಶೀಗವ್ವನ ಆಚರಣೆ ನವರಾತ್ರಿಯ ಕೊನೆಯ ದಿನ ಅಂದರೆ ವಿಜಯದಶಮಿಯಿಂದ ಹುಣ್ಣಿಮೆಯವರೆಗೆ ನಡೆಯುತ್ತದೆ. ಶೀಗವ್ವ ಬಡವರ ಮಗಳು ಗೌರವ್ವ ಶ್ರೀಮಂತರ ಮಗಳ ಎಂಬ ಕಲ್ಪನೆ ಈ ಭಾಗದ ಜನರಲ್ಲಿದೆ. ಶೀಗವ್ವನ ಆಚರಣೆ ಅದ್ಧೂರಿಯಾಗಿ ನಡೆಯುವುದಿಲ್ಲ.

ಬಾಗೇವಾಡಿ ಪರಿಸರದಲ್ಲಿ ಶೀಗವ್ವನನ್ನು ಐದು ದಿನಗಳವರೆಗೆ ಪೂಜೆ ಮಾಡುವ ಆಚರಣೆ ನಡೆಯುತ್ತದೆ. ಸಾಮಾನ್ಯವಾಗಿ ರೈತ ಕುಟುಂಬದವರೆಲ್ಲರೂ ಈ ಶೀಗವ್ವನ ಆಚರಣೆ ಮಾಡುವುದುಂಟು, ಈ ಶೀಗಿ ಹುಣ್ಣಿಮೆ ಆಚರಣೆಗೆ ಜಾತಿ ಮತ ಭೇದ ಭಾವವಿಲ್ಲದೇ ಆಚರಿಸುವುದುಂಟು. ಶೀಗವ್ವನ ಆಚರಣೆ ಪ್ರತಿಯೊಂದು ಕುಟುಂಬದಲ್ಲಿ ಪರಂಪರಾನುಗತವಾಗಿ ಆಚರಣೆ ಮಾಡುತ್ತಿದ್ದರೆ, ಮಾತ್ರ ಶೀಗವ್ವನ ಪೂಜೆ, ಆರಾಧನೆ, ಚರಗ ಚೆಲ್ಲುವ ಕಾರ್ಯಗಳನ್ನು ನಿರ್ವಹಿಸುತ್ತಾರೆ.

ಕೆಲವರು ಮಣ್ಣಿನಿಂದ ತಯಾರಿಸಿದ ಶೀಗವ್ವನ ಮೂರ್ತಿಯನ್ನು ತೆಗೆದುಕೊಂಡು ಬಂದು ಮನೆಯ ದೇವರ ಜಗುಲಿಯ ಮೇಲೆ ಅಥವಾ ದೇವರ ಮನೆಯ ಒಂದು ಸ್ಥಳದಲ್ಲಿ ಸ್ಥಾಪಿಸಿ ಪೂಜೆ ಮಾಡುತ್ತಾರೆ. ಸಾಮಾನ್ಯವಾಗಿ ಯುವತಿಯರು ಶೀಗವ್ವನ ಆಚರಣೆ ಮಾಡುತ್ತಾರೆ. ಮನೆ ಮನೆಗೆ ಹೋಗಿ ಶೀಗವ್ವನ ಹಾಡು ಹೇಳಿ ಆರತಿ ಮಾಡಿ ಬರುತ್ತಾರೆ. ಅವಿವಾಹಿತ ಹೆಣ್ಣು ಮಕ್ಕಳು ನನಗೆ ಒಳ್ಳೆಯ ಗಂಡನನ್ನು ದಯಪಾಲಿಸು ಎಂದು ಬೇಡಿಕೊಳ್ಳುವರು.

ಶೀಗವ್ವನ ಆರಾಧನೆಗಾಗಿ ಶೇಂಗಾ ಹೋಳಿಗೆ ಮತ್ತು ಎಳ್ಳು ಹೋಳಿಗೆಯನ್ನು ಸಿದ್ಧಪಡಿಸುವರು. ಹಿಂಡಿ ಪಲ್ಲೆ, ಪುಂಡಿ ಪಲ್ಲೆ, ಸಜ್ಜಿ ರೊಟ್ಟಿ, ಜೋಳದ ರೊಟ್ಟಿ, ಎಳ್ಳು ಹಚ್ಚಿದ ರೊಟ್ಟಿ, ಕಾಳು ಹಾಗೂ ತರಕಾರಿಗಳಿಂದ ತಯಾರಿಸಿದ ಪಲ್ಯಗಳನ್ನು, ಚಟ್ನಿ ಪುಡಿಗಳನ್ನು ಸಿದ್ಧಪಡಿಸುತ್ತಾರೆ. ಮೊದಲು ಮನೆಯಲ್ಲಿಯ ದೇವರು ದಿಂಡಿರುಗಳನ್ನು ಪೂಜಿಸಿ ಅವರಿಗೆ ನೈವೇದ್ಯ ಸಲ್ಲಿಸಿ, ಅಂದು ಸಿದ್ಧಪಡಿಸಿದ ಅಡುಗೆಯನ್ನೆಲ್ಲ ಬುಟ್ಟಿಯಲ್ಲಿ ಕಟ್ಟಿಕೊಂಡು ಅಕ್ಕಪಕ್ಕದವರನ್ನು ಕರೆದುಕೊಂಡು ಹೊಲಕ್ಕೆ ಹೋಗುತ್ತಾರೆ. ಕೆಲವರು ಚಕ್ಕಡಿ ಬಂಡಿಗಳಲ್ಲಿ ಹೋದರೆ ಕೆಲವರು ತಮ್ಮ ಟ್ರ್ಯಾಕ್ಟರ್ ಗಳಲ್ಲಿ ಹೋಗುವರು. ತಾವು ಮಾಡಿಕೊಂಡು ಬಂದ ಎಲ್ಲ ಆಹಾರ ಪದಾರ್ಥಗಳನ್ನು ಒಂದು ತಟ್ಟೆಯಲ್ಲಿ ಹಾಕಿಕೊಂಡು ಹೊಲದ ತುಂಬೆಲ್ಲ ಸಂಚರಿಸಿ ‘ಚಾಂಗಬಲಾ ಚಾಂಗಬಲಾ’ ಎಂದು ಹೇಳುತ್ತಾ ಭೂಮಿ ತಾಯಿಗೆ ಹಾಕುತ್ತಾರೆ. ಕೆಲವರು ಜೋಳದಿಂದ ತಯಾರಿಸಿದ ಕಿಚಡಿಯನ್ನು ಮಾಡಿರುತ್ತಾರೆ. ಭೂಮಿ ತಾಯಿಗೆ ಚರಗ ಚೆಲ್ಲುವ ಕಾರ್ಯವನ್ನು ಇಬ್ಬರು ನೆರವೇರಿಸುವರು. ಚರಗದ ಆಹಾರವನ್ನು ಹಿಡಿದುಕೊಂಡು ಮುಂದೆ ಹೋಗುವವನು ‘ಹುಲಿಲಿಗ್ಯೋ’ ಎಂದು ಹೇಳಿದರೆ ಹಿಂದೆ ನೀರಿನ ಚರಗಿ ಹಿಡಿದುಕೊಂಡು ಬರುವವನು ‘ಚಲಮುಲಿಗ್ಯೋ’ ಎಂದು ಹೇಳುತ್ತಿರುತ್ತಾನೆ. ಇದರರ್ಥ ‘ಭೂಮಿ ತಾಯಿ ನೀನು ನೀಡುತ್ತಿರುವ ಬೆಳೆ ಹುಲುಸಾಗಿ ಬೆಳೆಯಲಿ’ ಎಂದು ಆಶೀರ್ವಾದ ಮಾಡು ಎಂದು ಹೇಳುತ್ತಿರುತ್ತಾರೆ. ನಂತರ ಎಲ್ಲರೂ ಸೇರಿ ಊಟ ಮಾಡಿ ಸಾಯಂಕಾಲದವರೆಗೆ ಹೊಲದಲ್ಲಿದ್ದು ಕಣ್ಣು ತುಂಬ ಬೆಳೆ ನೋಡಿ ಸಾಯಂಕಾಲ ಮನೆಗೆ ಬಂದು ಸಕ್ಕರೆ ಆರತಿ ಬೆಳಗುತ್ತಾರೆ.

ಮಾರನೆಯ ದಿನ ಸೀಗವ್ವನಿಗೆ ಎಲ್ಲ ಮುತ್ತೈದೆಯರು, ಅವಿವಾಹಿತ ಹೆಣ್ಣು ಮಕ್ಕಳು ಆರತಿ ಮಾಡಿ ಹಾಡು ಹೇಳುತ್ತಾ ಅವಳನ್ನು ಬಾವಿ, ಹರಿಯುವ ಹಳ್ಳ ಅಥವಾ ಹೊಳೆಗೆ ಕರೆದುಕೊಂಡು ಹೋಗಿ ಕಳುಹಿಸಿ ಬರುತ್ತಾರೆ.

ಜೋಕುಮಾರನ ಆಚರಣೆ : ಜೋಕುಮಾರನು ಸಹ ಕೃಷಿಗೆ ಸಂಬಂಧಿಸಿದ ದೈವ. ಗಣೇಶ ಚತುರ್ಥಿಯ ನಂತರ ಅಷ್ಟಮಿ ತಿಥಿಯಲ್ಲಿ ಗೌರವ್ವನ ಹೊಟ್ಟೆಯಲ್ಲಿ ಜೋಕುಮಾರ ಹುಟ್ಟುತ್ತಾನೆಂದು ಹೇಳುತ್ತಾರೆ. ಜೋಕುಮಾರ ಸುಣಗಾರ ಮನೆಯಲ್ಲಿ ಜನ್ಮವೆತ್ತುತ್ತಾನೆ ಎಂಬ ಪರಿಕಲ್ಪನೆ ಇವರಲ್ಲಿದೆ. ಬಾಗೇವಾಡಿಯ ಹಿರಿಯರಾದ ಮುಕ್ಕಣ್ಣ ತಂದೆ ರುದ್ರಪ್ಪಾ ಪೈತಾಣ ಅವರ ಮಾಹಿತಿ ಪ್ರಕಾರ ಜೋಕುಮಾರ ಪತ್ತಾರರ ಮನೆಯಲ್ಲಿ ಹುಟ್ಟುತ್ತಾನೆ. ಸುಣಗಾರರು ಅವನನ್ನು ತಮ್ಮ ಮನೆಗೆ ಕರೆದೊಯ್ಯುತ್ತಾರೆ. ಕೋಲ್ಕಾರರು ಅವನನ್ನು ಬುಟ್ಟಿಯಲ್ಲಿಟ್ಟುಕೊಂಡು ಮನೆಮನೆಗೆ ಕರೆದೊಯ್ದು ಊರಲ್ಲಿ ಮೆರವಣಿಗೆ ಮಾಡುವವರು.

ಜೋಕುಮಾರ ಮಳೆಯನ್ನು ತರಿಸುವ ದೈವ ಎಂದೇ ಹೆಸರು ಪಡೆದಿದ್ದಾನೆ. ಮಳೆ ಬಾರದೆ ಇದ್ದರೆ ಜೋಕುಮಾರನ ಆರಾಧನೆ ಮಾಡುವರು. ಇವನು ಮಳೆ ಬೆಳೆ ಚೆನ್ನಾಗಿ ಬರುವಂತೆ ಮತ್ತು ರೋಗ ರುಜಿನಗಳು ಹರಡದಂತೆ ಆಶೀರ್ವಾದ ಮಾಡುವನು ಎಂಬ ನಂಬಿಕೆ ಇದೆ. ಉತ್ತರ ಕರ್ನಾಟಕದ ಕೆಲ ಪ್ರದೇಶಗಳಲ್ಲಿ ಜೋಕುಮಾರನ ಚರಗವನ್ನು ಕುಂಬಳ ಎಲೆಯಲ್ಲಿ ಕೊಡುತ್ತಾರೆ. ಅದನ್ನು ಹೊಲ ಗದ್ದೆಗಳ ತುಂಬ ಹಾಕುವರು. ಜೋಕುಮಾರನ ಪ್ರಸಾದವನ್ನು ಭೂಮಿಗೆ ಹಾಕುವುದರಿಂದ ಬೆಳೆ ಸಮೃದ್ಧವಾಗಿ ಬೆಳೆಯುವದೆಂಬ ನಂಬಿಕೆ ಇದೆ.

ಬಾಗೇವಾಡಿ ಪರಿಸರದಲ್ಲಿ ಕೋಲ್ಕಾರರು ಜೋಕುಮಾರನನ್ನು ಬುಟ್ಟಿಯಲ್ಲಿ ಹೊತ್ತು ಮನೆ ಮನೆಗೆ ತಂದಾಗ ಅವನ ಮುಂದೆ ನೀರು ಹಾಕಿ, ಎಣ್ಣೆ ಬತ್ತಿ ಹಾಗೂ ಮೊರದ ತುಂಬ ಜೋಳ ಕೊಡುವರು. ಜೋಕುಮಾರನ ತುಟಿಗೆ ಹಚ್ಚಿದ ಬೆಣ್ಣೆಯನ್ನು ಕಣ್ಣಿಗೆ ಹಚ್ಚಿಕೊಂಡರೆ ಕಣ್ಣು ಬೇನೆ ಬರುವುದಿಲ್ಲ ಎಂಬ ಕಲ್ಪನೆ ಇದೆ.

ಜೋಕುಮಾರ ಏಳು ದಿನಗಳವರೆಗೆ ಊರ ತುಂಬೆಲ್ಲ ಸುತ್ತುತ್ತಾನೆ. ಹುಣ್ಣಿಮೆಯ ದಿನ ಕೋಲ್ಕಾರರು ಅವನನ್ನು ಹರಿಜನರ ಕೇರಿಯಲ್ಲಿಡುತ್ತಾರೆ. ಹರಿಜನರು ಜೋಕುಮಾರನನ್ನು ಹಳ್ಳದಲ್ಲಿಟ್ಟು ಪೂಜೆ ಮಾಡಿ ಒನಕೆಯಿಂದ ಅವನ ತಲೆಯನ್ನು ಒಡೆದು ಹಿಂದುರಿಗೆ ನೋಡದೇ ಮನೆಗೆ ಬರುವರು. ಹರಿಜನರೇ ಏಕೆ ಜೋಕುಮಾರನ ತಲೆ ಒಡೆಯುವರು ಎಂದು ಮುಕ್ಕಣ್ಮ ಪೈತಾನ ಅವರನ್ನು ಪ್ರಶ್ನಿಸಿದಾಗ, ಜೋಕುಮಾರ ಹರಿಜನರಿಗೆ ದನದ ಮಾಂಸ ತಿನ್ನಬೇಡಿ ಎಂದು ಹೇಳಿದ ಆದರೆ ಅವರು ದನದ ಮಾಂಸ ತಿನ್ನುವುದನ್ನು ಬಿಡಲಿಲ್ಲ. ಅದಕ್ಕಾಗಿ ಜೋಕುಮಾರ ಹರಿಜನ ಶಾಪ ಕೊಡುತ್ತಾನೆ. ಇದರಿಂದ ಸಿಟ್ಟಿಗೆದ್ದ ಹರಿಜನರು ಒನಕೆಯಿಂದ ಜೋಕುಮಾರನ ತಲೆ ಒಡೆಯುತ್ತಾರೆ ಎಂಬ ಮಾಹಿತಿಯನ್ನು ನೀಡಿದರು. ಈ ಆಚರಣೆ ಬಸವನ ಬಾಗೇವಾಡಿಯಲ್ಲಿ ಇಂದಿಗೂ ಪ್ರಚಲಿತದಲ್ಲಿದೆ. ಜೋಕುಮಾರನ ತಲೆ ಒಡೆದ ದಿನದಿಂದ ಅಗಸರು ಏಳು ದಿನಗಳವರೆಗೆ ಬಟ್ಟೆ ಒಗೆಯಲು ಹೋಗುವುದಿಲ್ಲ. ಇದಕ್ಕೆ ಕಾರಣಗಳೇನು ಎಂದು ಪ್ರಶ್ನಿಸಿದರೆ, ಜೋಕುಮಾರ ಬಟ್ಟೆ ಒಗೆಯಲು ಬಂದ ಅಗಸರ ಹೆಣ್ಣು ಮಕ್ಕಳ ಲಂಗದೊಳಗೆ ಹೋಗಿ ಕುಚೇಷ್ಟೆ ಮಾಡತೊಡಗಿದ. ಇದರಿಂದ ಹೆದರಿದ ಅಗಸರ ಹೆಂಗಸರು ಜೋಕುಮಾರನ ಆತ್ಮ ಕೈಲಾಸಕ್ಕೆ ಹೋಗುವವರೆಗೆ ಅಂದರೆ ಏಳು ದಿನಗಳವರೆಗೆ ಬಟ್ಟೆ ಒಗೆಯಲು ಹಳ್ಳಕ್ಕೆ ಹೋಗುವುದಿಲ್ಲ ಎಂಬ ಮಾಹಿತಿ ದೊರೆಯುತ್ತದೆ.

ಭಾರತ ಹುಣ್ಣಿಮೆ : ಈ ಹುಣ್ಣಿಮೆಯ ಹೊತ್ತಿಗೆ ಹೊಲದಲ್ಲಿ ಪೈರು ಬೆಳೆದು ನಿಂತಿರುತ್ತದೆ. ಎಲ್ಲ ರೈತರು ತಾವು ಬೆಳೆದಿರುವ ಪೈರನ್ನು ತಂದು ತೆನೆ ಕಟ್ಟುವ ಆಚರಣೆಯನ್ನು ಮಾಡುತ್ತಾರೆ. ಪೈರನ್ನು ಬಸವನಿಗಾಗಿ ಮೀಸಲಿಡುವ ಸಂಪ್ರದಾಯವಿದೆ. ಭೂಮಿಯಲ್ಲಿ ಬೆಳೆದ ಬೆಳೆಯನ್ನು ಮೊದಲು ಬಸವನಿಗೆ ನೀಡುವ ಆಚರಣೆಯನ್ನು ಈ ಮೂಲಕ ಮಾಡಲಾಗುತ್ತದೆ. ಜೋಳದ ತೆನೆ, ಗೋದಿಹುಲ್ಲು, ಕುಸಬಿಕಡ್ಡಿ, ಅಗಸಿಹುಲ್ಲು ಹಾಗೂ ಕಡ್ಲಿಗಿಡವನ್ನು ಕೂಡಿಸಿ ಬಿಳಿ ಬಟ್ಟೆಯಲ್ಲಿ ಕಟ್ಟಿ ದೇವರ ಜಗಲಿಯ ಮೇಲಿಟ್ಟು ಪೂಜಿಸುವರು.

ಗೌರಿ ಹುಣ್ಣಿಮೆ : ಬಿಜಾಪುರ ಜಿಲ್ಲೆಯಲ್ಲಿ ಗೌರಿ ಹುಣ್ಣಿಮೆಯ ದಿನ ಗೌರಿಪೂಜೆ ವಿಶೇಷವಾಗಿ ಆಚರಿಸಲ್ಪಡುತ್ತದೆ. ದೀಪಾವಳಿ ಪಾಡ್ಯದ ದಿನದಿಂದ ಪ್ರಾರಂಭಿಸಿ ಮುಂಬರುವ ಹುಣ್ಣಿಮೆಯ ಮಾರನೆಯ ದಿನದವರೆಗೆ ಅಂದರೆ ಶುಕ್ಲ ಪಕ್ಷದವರೆಗೆ ಈ ಗೌರಿ ಹಬ್ಬವನ್ನು ಆಚರಿಸುವುದುಂಟು. ಬಾಗೇವಾಡಿ ಪರಿಸರದಲ್ಲಿ ಗೌರಿ ಹುಣ್ಣಿಮೆಯನ್ನು ಗೌರಿ ಜಾತ್ರೆ ಎಂದು ಆಚರಿಸುವುದು.

ಗೌರಿ ಹುಣ್ಣಿಮೆಯನ್ನು ಮುಳವಾಡ, ಮುತ್ತಗಿ, ಬಸವನ ಬಾಗೇವಾಡಿ ಮತ್ತು ಮುಸಬಿನಾಳ ಮುಂತಾದ ಊರುಗಳಲ್ಲಿ ಅತ್ಯಂತ ವಿಜ್ರುಂಭಣೆಯಿಂದ ಆಚರಿಸುವುದು ತಿಳಿಯುತ್ತದೆ.

ಬಾಗೇವಾಡಿಯಲ್ಲಿ ಗೌರಿ ಗುಡಿ ಇದೆ. ಈ ದೇವಸ್ಥಾನದಲ್ಲಿ ಕಟ್ಟಿಗೆಯಿಂದ ಸಿದ್ಧಪಡಿಸಿದ ಶಿವನ ಮೂರ್ತಿ ಇದೆ. ಶಿವನ ಮುಂದೆ ನಂದಿ ಹಾಗೂ ಶಿವನ ಎಡಕ್ಕೆ ಬಲಕ್ಕೆ ಗಂಗೆ-ಗೌರಿ ಹಾಗೂ ಗಣಪತಿಯ ಪ್ರತಿಮೆಗಳಿವೆ. ಗೌರಿ ಹುಣ್ಣಿಮೆಯ ಮೂರನೆಯ ದಿನ ಗಂಗೆ ಗೌರಿಯರು ಮೂರ್ತಿಗಳನ್ನು ಹೊಳೆ, ಹಳ್ಳ ಅಥವಾ ಬಾವಿಗೆ ಕಳಿಸಬೇಕಾಗುತ್ತದೆ. ಈ ಕಾರಣಕ್ಕಾಗಿ ಗಂಗೆ-ಗೌರಿಯರ ಮಣ್ಣಿನ ಮೂರ್ತಿಗಳನ್ನು ಬಡಿಗೇರ ಅಥವಾ ಕುಂಬಾರರು ಸಿದ್ಧಪಡಿಸುವರು. ಅವರ ಮನೆಗಳಿಗೆ ಬಾಲಕೀಯರು, ಮುತ್ತೈದೆ ಹೋಗಿ ಅಲ್ಲಿಂದ ಮಂಗಳ ವಾದ್ಯಗಳನ್ನು ನುಡಿಸುತ್ತಾ ಗೌರಿ ದೇವಸ್ಥಾನಕ್ಕೆ ತಂದು ಪ್ರತಿಷ್ಠಾಪಿಸುವರು. ಗಂಗವ್ವ ಹಾಗೂ ಗೌರವ್ವನ ಮಣ್ಣಿನ ಪ್ರತಿಮೆಗಳನ್ನು ಬಾಗೇವಾಡಿಯಲ್ಲಿರುವ ಗೌರಿ ಬಾವಿಯ ಮಣ್ಣು ಹಾಗೂ ನೀರನ್ನು ಬಳಸಿಕೊಂಡು ಸಿದ್ಧಪಡಿಸಬೇಕೆಂಬ ನಿಯಮವಿದೆ. ಈ ಬಾವಿಯಲ್ಲಿರುವ ನೀರಿನಿಂದ ಸ್ನಾನ ಮಾಡಿದರೆ ಚರ್ಮ ಕಡಿಮೆಯಾಗುತ್ತವೆ ಎಂಬ ನಂಬಿಕೆ ಇದೆ. ಮುಳವಾಡ ಹಾಗೂ ಮುತ್ತಿಗೆಯಲ್ಲಿ ಶಿವನ ಪರಿವಾರದ ಎಲ್ಲ ದೈವಗಳ ಪ್ರತಿಮೆಗಳಿರುವ ಬಗ್ಗೆ ತಿಳಿಯುತ್ತದೆ. ಗೌರಿ ಹುಣ್ಣಿಮೆಯಲ್ಲಿ ಗೌರಿಯನ್ನು ಐದು ದಿನ ಗುಡಿಯ ಒಳಗೆ, ಐದು ದಿನ ಗುಡಿಯ ಹೊರಗೆ ಆರಾಧನೆ ಮಾಡುವರು. ಒಂಭತ್ತನೆಯ ದಿನ ಜಾತ್ರೆ ನಡೆಯುತ್ತದೆ. ಗೌರಿ ದೇವಸ್ಥಾನದ ಮುಂದೆ ಪೆಂಡಾಲ್ ಹಾಕಿ ವಿದ್ಯುತ್ ದೀಪಗಳಿಂದ ಅಲಂಕರಿಸಿ ಆರಾಧನೆ ಮಾಡುತ್ತಾರೆ. ಗಂಗವ್ವ, ಗೌರವ್ವ ಆರಾಧನೆಯಲ್ಲಿ ಹೆಣ್ಣು ಮಕ್ಕಳ ಅದರಲ್ಲೂ ಅವಿವಾಹಿತ ಹೆಣ್ಣು ಮಕ್ಕಳ ಪಾತ್ರ ಪ್ರಮುಖವಾಗಿರುತ್ತದೆ.

ಗೌರಿಯನ್ನು ದೀಪಾವಳಿಯ ಪಾಡ್ಯದ ದಿನ ತರುವ ಸಂಪ್ರದಾಯವಿದೆ. ಬಾಗೇವಾಡಿ ಮತ್ತು ಅದರ ಸುತ್ತಮುತ್ತಲಿನ ಊರುಗಳಲ್ಲಿ ಕೆಲವರು ತಮ್ಮ ಮನೆಗಳಲ್ಲಿ ಗೌರವ್ವನನ್ನು ಪ್ರತಿಷ್ಠಾಪಿಸಿ ಆರಾಧಿಸುತ್ತಾರೆ. ಓಣಿಗಳಲ್ಲೂ ಗೌರವ್ವನನ್ನು ಕುಳ್ಳರಿಸುವ ಸಂಪ್ರದಾಯವಿರುವುದು ಕಂಡುಬರುತ್ತದೆ. ಗೌರವ್ವನನ್ನು ಎಲ್ಲರೂ ತಮ್ಮ ಮನೆಗಳಲ್ಲಿಟ್ಟು, ಪೂಜಿಸುವುದು ಕಂಡುಬರುವುದಿಲ್ಲ. ಗೌರವ್ವನನ್ನು ಇಡಲು ಮೀಸಲಾದ ಮನೆಗಳಿರುತ್ತವೆ. ಗೌರವ್ವನನ್ನು ಮನೆಯಲ್ಲಿ ಕುಡಿಸುವ ಸಂಪ್ರದಾಯ ಕುಟುಂಬದ ಹೆಣ್ಣು ಮಕ್ಕಳು ಹೊಸ ಬಟ್ಟೆಗಳನ್ನು ಉಟ್ಟುಕೊಂಡು ಕೈಯಲ್ಲಿ ಆರುತಿ ಹಾಗೂ ಸಕ್ಕರೆ ಆರತಿಯನ್ನು ತೆಗೆದುಕೊಂಡು ಹಾಡು ಹೇಳುತ್ತ ಹೋಗಿ ಆರುತಿ ಮಾಡಿ ಬರುತ್ತಾರೆ. ಹತ್ತು ದಿನಗಳವರೆಗೆ ಸಾಯಂಕಾಲ ಹೆಣ್ಣು ಮಕ್ಕಳೆಲ್ಲರೂ ಗೌರವ್ವನನ್ನು ಪ್ರತಿಷ್ಠಾಪಿಸಿದವರ ಮನೆಗೆ ಹೋಗಿ ಆರುತಿ ಮಾಡಿ ಹಾಡು ಹೇಳಿ ಭಯ ಭಕ್ತಿಯಿಂದ ಪೂಜಿಸುವುದು ಕಂಡುಬರುತ್ತದೆ.

ಗೌರವ್ವನಿಗೆ ಇಷ್ಟವಾದ ಹೂರಣದ ಹೋಳಿಗೆ, ಸೇಂಗಾ ಹೋಳಿಗೆ, ಕರ್ಚಿಕಾಯಿ ಮಾಡಿ ನೈವೇದ್ಯ ಮಾಡುವ ಸಂಪ್ರದಾಯವಿದೆ. ಕೆಲವರು ಶಿವನಿಗೆ ಇಷ್ಟವಾದ ಗೋದಿಯಿಂದ ತಯಾರಿಸಿದ ಮಾದಲಿಯನ್ನು ಮಾಡಿ ನೈವೇದ್ಯ ಮಾಡುತ್ತಾರೆ. ಕೆಲವರು ಸಜ್ಜಿಯಿಂದ ಮಾದಲಿಯನ್ನು ಸಿದ್ಧಪಡಿಸುವರು. ಇನ್ನೂ ಕೆಲವರು ಜೋಳದ ಕಿಚಡಿ ಮಾಡುವರು.

ಬಾಗೇವಾಡಿಯಲ್ಲಿ ಗೌರಿ ಕುಳ್ಳರಿಸಿದ ೯ನೆಯ ದಿನದಂದು ಉಡಿ ತುಂಬುವ ಕಾರ್ಯ ವಿಜೃಂಭಣೆಯಿಂದ ನಡೆಯುತ್ತದೆ. ಅಂದು ಯುವಕನೊಬ್ಬ ದ್ಯಾಮವ್ವನ ಸೋಗು ಹಾಕಿಕೊಂಡು ಎತ್ತಿನ ಬಂಡಿಯಲ್ಲಿ ಮೆರವಣಿಗೆಯ ಮೂಲಕ ಗೌರಿ ಗುಡಿಗೆ ಹೋಗಿ ಉಡಿ ತುಂಬುವ ಕಾರ್ಯ ಮಾಡುತ್ತಾರೆ. ದ್ಯಾಮವ್ವನ ಸೋಗು ಹಾಕಿದವರ ಅಕ್ಕಪಕ್ಕದಲ್ಲಿ ಅಥವಾ ಹಿಂದೆ ಚಾಮರ ಹಿಡಿದುಕೊಂಡು ನಿಂತಿರುತ್ತಾರೆ. ಡೊಳ್ಳು, ಬ್ಯಾಂಡ, ಭಜನೆ ಮೇಳಗಳು ಈ ಮೆರವಣಿಗೆಯಲ್ಲಿ ಪಾಲ್ಗೊಂಡಿರುತ್ತವೆ. ಈ ದ್ಯಾಮವ್ವನ ವೇಷಧಾರಿಗಳ ಮೆರವಣಿಗೆ ಬಸವಣ್ಣನ ಗುಡಿ, ಹನುಮಂತನಗುಡಿ ಹಾಗೂ ದ್ಯಾಮವ್ವನ ವೇಷಧಾರಿಗಳ ಮೆರವಣಿಗೆ ಬಸವಣ್ಣ ಗುಡಿ, ಹನುಮಂತನಗುಡಿ ಹಾಗೂ ದ್ಯಾಮವ್ವ ಗುಡಿಯ ಮುಂದೆ ಹಾಯ್ದು ಗೌರಿಗುಡಿಗೆ ಬರುತ್ತದೆ. ದ್ಯಾಮವ್ವನ ಗುಡಿಯ ಹತ್ತಿರ ಮೆರವಣಿಗೆ ಬಂದಾಗ, ದ್ಯಾಮವ್ವನ ವೇಷಧಾರಿಯ ಮುಖ ದೇಹ ಕಾಣದಂತೆ ಮುಚ್ಚುತ್ತಾರೆ. ದ್ಯಾಮವ್ವನ ಗುಡಿಯನ್ನು ದಾಟಿದ ಮೇಲೆ ಆ ಮುಸುಕನ್ನು ತೆಗೆಯುತ್ತಾರೆ. ಒಂದು ವೇಳೆ ದ್ಯಾಮವ್ವನ ವೇಷಧಾರಿ ಆ ದೇವತೆಯ ಗುಡಿಯ ಮುಂದೆ ಮುಸುಕು ಹಾಕಿಕೊಳ್ಳದೇ ಇದ್ದರೆ ಆ ದೇವತೆಗೆ ಅಪಹಾಸ್ಯ ಮಾಡಿದಂತಾಗುತ್ತದೆ ಮತ್ತು ಅವಳು ಸಿಟ್ಟಿಗೆದ್ದು ವೇಷಧಾರಿಯ ಮೈದುಂಬಿಕೊಂಡು ಶಾಪ ನೀಡುತ್ತಾಳೆಂಬ ಭಯ ಇವರಲ್ಲಿದೆ. ಇಂತಹ ಘಟನೆಗಳು ನಡೆದಿವೆ ಎಂದು ತಿಳಿಯುತ್ತದೆ. ಮೆರವಣಿಗೆಯಲ್ಲಿ ಹನುಮಂತನ ಗುಡಿಗೆ ಬಂದ ಮೇಲೆ ಅಲ್ಲಿ ಅವಳಿಗೆ ಉಡಿ ತುಂಬುವ ಕಾರ್ಯ ನಡೆಯುತ್ತದೆ. ಮುಸಾರಿ ಮಣ್ಣಿನ ಹೊಲವನ್ನು ಶೀಗವ್ವನ ಹಿರೇಮಗಳೆಂದೂ ಎರೆ ಮಣ್ಣಿನ ಭೂಮಿಯನ್ನು ಗೌರವ್ವನ ಮಗಳೆಂದೂ ಕರೆಯುವುದುಂಟು.

ಗೌರವ್ವನನ್ನು ಒಲಿಸಿಕೊಳ್ಳಲು ಹೆಣ್ಣು ಮಕ್ಕಳು ಒಂದ್ಹೊಪ್ಪತ್ತಿನ ಉಪವಾಸವನ್ನು ಮಾಡುವುದುಂಟು. ಗೌರವನನ್ನು ಭಕ್ತಿಯಿಂದ ಆರಾಧಿಸಿದರೆ ಒಳ್ಳೆಯ ಗಂಡ ಸಿಗುತ್ತಾನೆ ಸೌಭಾಗ್ಯ ಹಾಗೂ ಸತ್‌ಸಂತಾನ ನೀಡುತ್ತಾಳೆಂಬ ಕಲ್ಪನೆ ಇವರಲ್ಲಿದೆ. ಗೌರಿಯನ್ನು ಶ್ರದ್ಧೆ ಭಕ್ತಿಯಿಂದ ಆರಾಧಿಸಿದರೆ ಶಿವ ಹಾಗೂ ಶಿವನ ಪರಿವಾರದ ದೇವತೆಗಳು ತೃಪ್ತರಾಗಿ ಮಳೆ, ಬೆಳೆ, ಸಮೃದ್ಧಿಯಾಗುವಂತೆ ಹಾಗೂ ಅಷ್ಟ್ಯೆಶ್ವರ್ಯ ದೊರೆಯುವಂತೆ ಆಶೀರ್ವಾದ ಮಾಡುತ್ತಾರೆಂಬ ನಂಬಿಕೆ ಇದೆ.

ಹುಣ್ಣಿಮೆಯದಿನ ವಿವಿಧ ಭಕ್ಷಗಳನ್ನು ಸಿದ್ಧಪಡಿಸಿ ಗೌರಿಗೆ ಉಡಿ ತುಂಬಿ ನೈವೇದ್ಯ ಮಾಡುವರು. ಮಾರನೆಯ ದಿನ ಗಂಗವ್ವ ಗೌರವ್ವನನ್ನು ಕಳಿಸಲು ಎಲ್ಲ ಹೆಣ್ಣುಮಕ್ಕಳು ಆರುತಿ ತೆಗೆದುಕೊಂಡು ಹೋಗುತ್ತಾರೆ. ಎಲ್ಲರೂ ಗೌರವ್ವನ ಹಾಡುಗಳನ್ನು ಹೇಳುತ್ತಿರುತ್ತಾರೆ. ಡೊಳ್ಳು, ಬ್ಯಾಂಡ್, ಭಜನೆ, ಮೆರವಣಿಗೆಯಲ್ಲಿ ಗೌರವ್ವನನ್ನು ತೆಗೆದುಕೊಂಡು ಹೋಗುತ್ತಾರೆ. ಪ್ರಸಾದವೆಂದು ಸ್ವೀಕರಿಸುತ್ತಾರೆ. ಮತ್ತೆ ಕೆಲವರು ಅದನ್ನು ಶುಭದ ಸಂಕೇತವೆಂದೂ ತಿಳಿದುಕೊಳ್ಳುವರು. ಗೌರವ್ವನನ್ನು ಕಳಿಸುವಾಗ ಮತ್ತೆ ಎಲ್ಲರು ಆರುತಿ ಬೆಳಗಿ ಅವಳನ್ನು ನೀರಿನಲ್ಲಿ ಬಿಟ್ಟು ಮನೆಗೆ ಬರುತ್ತಾರೆ.

ಗೌರಿ ಹುಣ್ಣಿಮೆಯ ಸಂದರ್ಭದಲ್ಲಿ ಓಕಳಿ ಆಡುವ ಸಂಪ್ರದಾಯವೂ ಈ ಪರಿಸರದಲ್ಲಿತ್ತೆಂದು ತಿಳಿಯುತ್ತದೆ. ೧೫-೨೦ ಯುವಕರ ಎರಡು ಗುಂಪುಗಳು ಎದುರು ಬದುರು ನಿಂತುಕೊಂಡು ಮಣ್ಣಿನ ರಾಡಿ ಎರಚಾಡುವ ಆಚರಣೆ ಮಾಡುತ್ತಿದ್ದರೆಂದು ತಿಳಿಯುತ್ತದೆ.

ಗೌರಿ ಹುಣ್ಣಿಮೆಯ ಸಂದರ್ಭದಲ್ಲಿ ಲಿಂಗಾಯತ ಸಮುದಾಯದವರು ತೀರಿಕೊಂಡ ಹಿರಿಯರಿಗಾಗಿ ಹಬ್ಬ ಮಾಡುತ್ತಾರೆ.

ಮಣ್ಣೆತ್ತಿನ ಅಮಾವಾಸ್ಯೆ : ಮಣ್ಣೆತ್ತಿನ ಅಮಾವಾಸ್ಯೆಯ ದಿನ ರೈತರು ಭೂಮಿತಾಯಿ ಮತ್ತು ನಂದಿಯನ್ನೂ ಪೂಜಿಸುವುದುಂಟು. ಮಣ್ಣಿನಿಂದ ತಯಾರಿಸಿದ ಎತ್ತುಗಳನ್ನು ಸಿದ್ಧಪಡಿಸಿ ಪ್ರತಿಯೊಬ್ಬರೂ ತಮ್ಮ ಮನೆಯ ದೇವರ ಮನೆಯಲ್ಲಿಟ್ಟು ಪೂಜಿಸುವುದುಂಟು. ಕೆಲವರು ಈ ಅಮಾವಾಸ್ಯೆಯಲ್ಲಿ ಜನರಿಂದ ಹಣ ಸಂಗ್ರಹಿಸಿ ಮಣ್ಣಿನಿಂದ ದೊಡ್ಡದಾದ ನಂದಿಯ ಮೂರ್ತಿ ಅಥವಾ ಎತ್ತುಗಳ ಪ್ರತಿಮೆಗಳನ್ನು ಸುಂದರವಾಗಿ ಸಿದ್ಧಪಡಿಸಿ ಓಣಿಗಳಲ್ಲಿ ಪೆಂಡಾಲ್ ಹಾಕಿ ಅಲ್ಲಿ ಪ್ರತಿಷ್ಠಾಪಿಸಿ ೫ ದಿನಗಳವರೆಗೆ ಪೂಜಿಸುವುದುಂಟು. ಎತ್ತು ಮತ್ತು ಭೂಮಿತಾಯಿಯ ಮಣ್ಣನ್ನು ಪೂಜಿಸಿದರೆ ಮಳೆ, ಬೆಳೆ ಸಮೃದ್ಧವಾಗಿರುತ್ತದೆಂಬ ಪರಿಕಲ್ಪನೆ ಇವರಲ್ಲಿದೆ. ೫ನೆಯ ದಿನ ಎತ್ತುಗಳಗಳನ್ನು ಹೊಳೆ, ಹಳ್ಳ ಅಥವಾ ಬಾವಿಯ ನೀರಿಗೆ ಕಳಿಸುತ್ತಾರೆ.

ನಾಗರ ಪಂಚಮಿ ಅಮಾವಾಸ್ಯೆ : ನಾಗರ ಅಮಾವಾಸ್ಯೆಯಲ್ಲಿ ನಾಗಪ್ಪನನ್ನು ಆರಾಧನೆ ಮಾಡುವುದು ಕಂಡುಬರುತ್ತದೆ. ಗಂಡನ ಮನೆಯಲ್ಲಿರುವ ಹೆಣ್ಣು ಮಕ್ಕಳನ್ನು ನಾಗರ ಪಂಚಮಿ ಆರಾಧನೆಗಾಗಿ ತವರು ಮನೆಗೆ ಕರೆದುಕೊಂಡು ಬರುತ್ತಾರೆ. ಬಗೆ ಬಗೆಯ ಉಂಡಿಗಳನ್ನು ಮನೆಯಲ್ಲಿ ಸಿದ್ಧಪಡಿಸುವರು. ಹೆಣ್ಣು ಮಕ್ಕಳು ಹೊಸ ಬಟ್ಟೆ ತೊಟ್ಟುಕೊಂಡು ಸಿಂಗರಿಸಿಕೊಂಡು ಎರಡು ದಿನ ನಾಗಪ್ಪನನ್ನು ಆರಾಧಿಸುತ್ತಾರೆ. ನಾಗರ ಪಂಚಮಿಯಲ್ಲಿ ಒಂದು ದಿನ ಮನೆಯ ಹೊರಗೆ ಇರುವ ನಾಗರ ಹಾವಿನ ಪ್ರತಿಮೆಗಳಿಗೆ ಹಾಲು ಎರೆಯುತ್ತಾರೆ. ಮಾರನೆಯ ದಿನ ಬೆಳ್ಳಿ ಹಿತ್ತಾಳೆಯಂತಹ ಲೋಹದ ನಾಗರ ಪ್ರತಿಮೆಗಳಿಗೆ ಹಸಿ ಹಾಲು ಎರೆಯುವರು. ಲೋಹದ ನಾಗಪ್ಪನ ಪ್ರತಿಮೆ ಇಲ್ಲದಿದ್ದರೆ ಬೆಲ್ಲದಿಂದ ನಾಗಪ್ಪನನ್ನು ಸಿದ್ಧಪಡಿಸಿ ಹಾಲು ಹಾಕುತ್ತಾರೆ. ನಾಗಪ್ಪನೂ ಕೃಷಿ ಚಟುವಟಿಕೆಯ ಸಂದರ್ಭದಲ್ಲಿ ಪೂಜೆಗೊಳ್ಳುವ ದೈವವಾಗಿದೆ. ಕೃಷಿ ಕಾರ್ಯಗಳು ಪ್ರಾರಂಭವಾಗಿ ಮುಗಿಯುವವರೆಗೆ ಬರುವ ಹಬ್ಬಗಳಲ್ಲಿ ಹೆಣ್ಣು ಮಕ್ಕಳ ಹಬ್ಬಗಳೇ ಹೆಚ್ಚಾಗಿರುವುದು ಕಂಡುಬರುತ್ತವೆ. ಹೆಣ್ಣು ಮತ್ತು ಭೂಮಿಗೆ ಅವಿನಾಭಾವ ಸಂಬಂಧವಿರುವುದರಿಂದ ಕೃಷಿ ಹಾಗೂ ಭೂಮಿಗೆ ಸಂಬಂಧಿಸಿದ ಆರಾಧನೆಗಳೆಲ್ಲವರೂ ಹೆಣ್ಣಿನ ಮೂಲಕವೇ ನೆರವೇರಲಿ ಎಂಬ ಭಾವನೆ ನಮ್ಮ ಸಂಸ್ಕೃತಿಯಲ್ಲಿರುವುದು ಕಂಡುಬರುತ್ತದೆ. ಈ ಸಂದರ್ಭದಲ್ಲಿ ಹೆಣ್ಣು ಮಕ್ಕಳನ್ನು ಅತ್ಯಂತ ಪ್ರೀತಿ ವಿಶ್ವಾಸಗಳಿಂದ ಕಾಣಲಾಗುತ್ತದೆ. ಹೆಣ್ಣು ಮಕ್ಕಳ ಬೇಕು ಬೇಡಗಳನ್ನು ಪೂರೈಸಲು ಗಂಡಸರು ಪ್ರಾಮಾಣಿಕ ಪ್ರಯತ್ನ ಮಾಡುವುದು ಕಂಡುಬರುತ್ತದೆ. ನಾಗಪ್ಪನಿಗೆ ಹಾಲು ಹಾಕುವ ಹೆಣ್ಣು ಮಕ್ಕಳು ನಾಗರಾಜನ ಮುಂದೆ ತಮಗಾಗಿ ಏನನ್ನೂ ಬೇಡಿಕೊಳ್ಳದೇ ತಮ್ಮ ಅಣ್ಣ ತಮ್ಮಂದಿರನ್ನು ಸುಖದಿಂದಿಡು ಎಂದು ಬೇಡಿಕೊಳ್ಳುತ್ತಾರೆ. ಹೀಗಾಗಿ ಈ ಹಬ್ಬಕ್ಕೆ ಹೆಣ್ಣುಮಕ್ಕಳನ್ನು ಗಂಡನ ಮನೆಯಿಂದ ಕರೆದುಕೊಂಡು ಬರುವ ಸಂಪ್ರದಾಯವಿದೆ.