ಗಣೇಶ ಚತುರ್ಥಿ : ಬಾಗೇವಾಡಿ ಪರಿಸರದಲ್ಲಿ ಗಣೇಶನ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ. ಇತರೆ ಪ್ರದೇಶಗಳಲ್ಲಿರುವಂತೆ ತಮ್ಮ ಮನೆಯ ಸಂಪ್ರದಾಯದಂತೆ ಗಣಪತಿಯನ್ನು ತಂದು ಪೂಜಿಸುವರು. ಸಾರ್ವಜನಿಕ ಗಣಪತಿಯನ್ನು ತಮ್ಮ ತಮ್ಮ ಓಣಿಗಳಲ್ಲಿ ಇಡುವುದುಂಟು ೫, ೭, ೯ ಹಾಗೂ ೧೧ನೇ ದಿನಕ್ಕೆ ಗಣಪತಿಯನ್ನು ಕಳಿಸುವರು.

ನವರಾತ್ರಿ : ನವರಾತ್ರಿಯಲ್ಲಿ ೯ ದಿನಗಳವರೆಗೆ ಶಕ್ತಿ ದೇವಿಯ ಆರಾಧನೆ ಮಾಡುತ್ತಾರೆ. ಘಟಸ್ಥಾಪನೆ ಮಾಡುತ್ತಾರೆ. ದ್ಯಾಮವ್ವ, ಗೌರಿ ಇತರೆ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ. ಆಯುಧ ಪೂಜೆಯ ದಿನ ಮನೆಯಲ್ಲಿರುವ ವಸ್ತುಗಳನ್ನು ಅಂದರೆ ಚಕ್ಕಡಿ, ಸೈಕಲ್, ಬೈಕ್, ಕಾರು, ಟ್ರ್ಯಾಕ್ಟರ್, ಕೃಷಿಗೆ ಉಪಯೋಗಿಸುವ ವಸ್ತುಗಳು, ಮುಂತಾದವುಗಳನ್ನು ಪೂಜಿಸುವರು. ಮನೆಯವರೆಲ್ಲರೂ ಎಣ್ಣೆ ಸ್ನಾನ ಮಾಡಿ ಹೊಸ ಬಟ್ಟೆಗಳನ್ನು ಧರಿಸುವರು. ಬನ್ನಿ ಮರಕ್ಕೆ ಹೋಗಿ ಬನ್ನಿಮಹಾಂಕಾಳಿಯನ್ನು ಪೂಜಿಸಿ ಆ ಮರದಿಂದ ಬನ್ನಿ ಪತ್ರಿ ತೆಗೆದುಕೊಂಡು ಬಂದು ಬಂಧುಬಳಗದವರಿಗೆ, ಮಿತ್ರರಿಗೆ, ಹಿರಿಯರಿಗೆ ಬನ್ನಿ ಕೊಟ್ಟು ಹಿರಿಯರಿಗೆ ನಮಸ್ಕರಿಸುವರು.

ಬಸವನ ಬಾಗೇವಾಡಿಯಲ್ಲಿ ಬನ್ನಿ ಮುಡಿಸುವ ದಿನ ಊರಿನ ಹಿರಿಯರು, ಪಂಚರು, ಯುವಕರು ಎಲ್ಲರೂ ಬಸವಣ್ಣನ ಗುಡಿಯ ಮುಂದೆ ಸೇರುತ್ತಾರೆ. ಅಂದು ಬಸವಣ್ಣನಿಗೆ ಬಂಗಾರದ ಆಭರಣಗಳನ್ನು ಹಾಕಿ ಅಲಂಕರಿಸುತ್ತಾರೆ. ಸಾಯಂಕಾಲ ಬಸವಣ್ಣನಿಗೆ ಮೊದಲು ಬನ್ನಿ ಪತ್ರಿ ಕೊಟ್ಟು ಪೂಜೆ ಮಾಡುವರು ನಂತರ ಡೊಳ್ಳಿನ ಮೇಳದವರು, ಭಜನೆಯವರು ಹಾಗೂ ಕೊರವರ ವಾದ್ಯಗಳನ್ನು ಊದಿಸುತ್ತಾ, ಬಾರಿಸುತ್ತ ಎಲ್ಲರೂ ಬನ್ನಿ ಗಿಡಕ್ಕೆ ಹೋಗುವರು. ಕಟ್ಟೆ ಕಟ್ಟಿದ ಬನ್ನಿ ಗಿಡಕ್ಕೆ ಐದು ಸುತ್ತ ಹೆಂಗನೂಲು ಸುತ್ತಿ, ಸಮಾಜದ ಎಲ್ಲ ಜನರೂ ಪೂಜೆ ಸಲ್ಲಿಸುತ್ತಾರೆ. ಆಗ ಬಸವಣ್ಣ ಬನ್ನಿ ಮುಡಿದ ಎಂದು ಹೇಳುತ್ತಾರೆ ಜಾತಿ ಮತದ ಭೇದವಿಲ್ಲದೇ ಎಲ್ಲರೂ ಸೇರಿ ಬನ್ನಿ ಮುಡಿಯುವ ಆಚರಣೆಯನ್ನು ಮಾಡುತ್ತಾರೆ.

ದೀಪಾವಳಿ :ದೀಪಾವಳಿಯಲ್ಲಿ ಮೂರು ದಿನಗಳವರೆಗೆ ಹಬ್ಬವನ್ನು ಆಚರಿಸುವರು. ಅಮವಾಸ್ಯೆ ಹಾಗೂ ಪಾಡ್ಯದ ದಿನ ಲಕ್ಷ್ಮಿ ಪೂಜೆಯನ್ನು ಮಾಡುವರು. ತಮ್ಮ ತಮ್ಮ ಮನೆ ಹಾಗೂ ಅಂಗಡಿಗಳಲ್ಲಿ ಲಕ್ಷ್ಮಿ, ಸರಸ್ವತಿ ಹಾಗೂ ಗಣಪತಿಯ ಛಾಯಾ ಚಿತ್ರಗಳನ್ನಿಟ್ಟು ಮಹಾಲಕ್ಷ್ಮಿದೇವಿಯ ಹೆಸರಿನಲ್ಲಿ ಕಳಸ ಸ್ಥಾಪಿಸಿ ಭಕ್ತಿಯಿಂದ ಪೂಜಿಸುತ್ತಾರೆ. ಕರ್ಚಿಕಾಯಿ, ಸೇಂಗಾ ಹೋಳಿಗೆ, ಚಕ್ಕಲಿ ಮುಂತಾದ ತಿಂಡಿಗಳನ್ನು ಸಿದ್ಧಪಡಿಸಿ, ಹೊಸ ಬಟ್ಟೆಗಳನ್ನು ಧರಿಸಿ ಈ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುವುದು ಕಂಡುಬರುತ್ತದೆ. ಇತರೆ ಪ್ರದೇಶಗಳಲ್ಲಿ ದೀಪಾವಳಿಯನ್ನು ಆಚರಿಸುವಂತೆ ಬಸವನ ಬಾಗೇವಾಡಿಯಲ್ಲಿಯೂ ಆಚರಿಸುವುದುಂಟು.

ಚಟ್ಟಿ ಅಮಾವಾಸ್ಯೆ : ಅವರೆ, ಕಡ್ಲಿ ಜೋಳ, ಸೇಂಗಾ, ಹೆಸರು ಮುಂತಾದ ಧಾನ್ಯಗಳು ಬೆಳೆದು ಹಾಲುಗಳು ತುಂಬಿಕೊಳ್ಳುತ್ತಿರುತ್ತದೆ. ಪೈರು ಚಟ್ಟಿಯಾಗಿ ಬೆಳೆದಿರುತ್ತದೆ. ಈ ಚಟ್ಟಿ ಅಮಾವಾಸ್ಯೆಯ ದಿನ ಬೆಳೆಯ ತೆನೆ, ಕಾಯಿಗಳನ್ನು ತಂದು ದೇವರ ಮುಂದಿಟ್ಟು ಪೂಜಿಸುವರು. ಚಟ್ಟಿಯಲ್ಲಿ ಸಮೃದ್ಧವಾಗಿ ಕಾಳು ತುಂಬಿಕೊಳ್ಳುವಂತೆ ಮಾಡು ಎಂದು ಭೂಮಿತಾಯಿಯಲ್ಲಿ ಬೇಡಿಕೊಳ್ಳುವರು.

ಎಳ್ಳು ಅಮಾವಾಸ್ಯೆ : ಎಳ್ಳ ಅಮಾವಾಸ್ಯೆಯನ್ನು ಬಸವನ ಬಾಗೇವಾಡಿಯಲ್ಲಿಯ ರೈತ ಕುಟುಂಬಗಳು ಸಂಭ್ರಮದಿಂದ ಆಚರಿಸುತ್ತವೆ. ಈ ಅಮಾವಾಸ್ಯೆಯ ಮಾರನೆಯ ದಿನ ಭೂಮಿ ತಾಯಿಯನ್ನು ಪೂಜಿಸಿ ಚರಗ ಚೆಲ್ಲುವ ಸಂಪ್ರದಾಯವಿದೆ. ಎಳ್ಳ ಅಮಾವಾಸ್ಯೆಗೆ ಭೂಮಿಯಲ್ಲಿ ಹಿಂಗಾರಿ ಬೆಳೆ ಬೆಳೆಯುತ್ತಿರುತ್ತದೆ. ಭೂಮಿ ತಾಯಿಯನ್ನು ಗರ್ಭಿಣಿ  ಎಂದು ಕಲ್ಪಿಸಿಕೊಂಡ ರೈತರು ಅವಳಿಗೆ ಬಯಕೆ ಊಟ ಮಾಡಿಸುವ ಆಚರಣೆ ಎಳ್ಳ ಅಮಾವಾಸ್ಯೆಯಲ್ಲಿ ನಡೆಯುತ್ತದೆ. ಗೋದಿ, ಬಿಳಿ ಜೋಳ ಮುಂತಾದವುಗಳನ್ನು ಈ ಸಂದರ್ಭದಲ್ಲಿ ಬೆಳೆಯುತ್ತಿರುತ್ತಾರೆ. ರೈತ ಕುಟುಂಬಗಳು ತಮ್ಮ ಮನೆಯಲ್ಲಿ ಸೇಂಗಾ ಹೋಳಿಗೆ, ಎಳ್ಳು ಹೋಳಿಗೆ, ಸಜ್ಜಿರೊಟ್ಟಿ, ಬೀಳಿ ಜೋಳದ ರೊಟ್ಟಿ ಜೋಳದ ಬಾನ ವಿವಿಧ ಪಲ್ಯಗಳನ್ನು ಮಾಡಿಕೊಂಡು ಮನೆಯಲ್ಲಿಯ ದೈವಗಳನ್ನು ಪೂಜಿಸುವರು. ಅಕ್ಕಪಕ್ಕದ ಮನೆಯ ಮುತ್ತೈದೆಯರನ್ನು ಅವರ ಗಂಡಂದಿರನ್ನು, ಮಕ್ಕಳನ್ನು ಕರೆದುಕೊಂಡು ಚರಗದ ಬುಟ್ಟಿಯಲ್ಲಿ ಎಲ್ಲ ಆಹಾರ ಪದಾರ್ಥಗಳನ್ನಿಟ್ಟುಕೊಂಡು ಹೊಲಗಳಿಗೆ ಹೋಗುವರು. ಸ್ವಂತ ಭೂಮಿಯನ್ನು ಹೊಂದಿರದ ಮತ್ತು ಕೃಷಿಕ ವೃತ್ತಿಯಲ್ಲಿ ತೊಡಗಿಸಿಕೊಳ್ಳದೇ ಇರುವ ಕುಟುಂಬಗಳ ಸದಸ್ಯರನ್ನೆಲ್ಲ ಹೊಲಗಳಿಗೆ ಕರೆದುಕೊಂಡು ಹೋಗುವುದುಂಟು. ಎಳ್ಳ ಅಮಾವಾಸ್ಯೆಯ ಮಾರನೆಯ ದಿನ ಸಾಮಾನ್ಯವಾಗಿ ಊರಿನಲ್ಲಿ ಯಾರೂ ಇರುವುದಿಲ್ಲ. ಎಲ್ಲರೂ ಹೊಲಗಳಲ್ಲಿ ಇರುವುದು ಕಂಡುಬರುತ್ತದೆ.

ಕೆಲವರು ತಮ್ಮ ಹೊಲಗದ್ದೆಗಳಲ್ಲಿರುವ ಬನ್ನಿ ಮರದ ಕೆಳಗೆ ಐದು ಕಲ್ಲುಗಳನ್ನಿಟ್ಟು, ಅವುಗಳನ್ನು ತೊಳೆದು ವಿಭೂತಿ, ಕುಂಕುಮ ಹಚ್ಚಿ ಕಾಯಿ ಒಡೆದು ಪೂಜೆ ಮಾಡುತ್ತಾರೆ. ಕೆಲವರು ಈ ಐದು ಕಲ್ಲುಗಳನ್ನು ಪಾಂಡವರ ಸಂಕೇತವಾಗಿ ಪೂಜೆ ಮಾಡುತ್ತೇವೆಂದು ತಿಳಿಸುವರು.

ರೈತರು ತಾವು ಕಟ್ಟಿಕೊಂಡು ಬಂದಿರುವ ಆಹಾರ ಪದಾರ್ಥಗಳನ್ನೆಲ್ಲ ಒಂದು ತಟ್ಟೆಯಲ್ಲಿ ಹಾಕಿ ಭೂಮಿ ತಾಯಿಗೆ ನೈವೇದ್ಯ ಹಿಡಿದು ಅದನ್ನು ತೆಗೆದುಕೊಂಡು ಹೊಲದ ತುಂಬೆಲ್ಲ ಸಂಚರಿಸಿ ಚಾಂಗಬಲಾ ಚಾಂಗಬಲಾ ಎಂದು ಹೇಳುತ್ತಾ ಭೂಮಿಗೆ ಅರ್ಪಿಸುವರು. ನಂತರ ಎಲ್ಲರೂ ಸಂತೋಷದಿಂದ ಊಟ ಮಾಡಿ ಸಾಯಂಕಾಲದವರೆಗೆ ಹರಟೆ ಹೊಡೆದು ಮನೆಗೆ ಬರುತ್ತಾರೆ. ಕೆಲವರು ಚರಗದ ಬುಟ್ಟಿಯಲ್ಲಿ ಕೆಲ ಜೋಳದ ದಂಟುಗಳನ್ನಿಟ್ಟುಕೊಂಡು ಬಂದು ಅವುಗಳನ್ನು ಮನೆಯ ಮಾಳಿಗೆಯ ಮೇಲೆ ಹಾಕುತ್ತಾರೆ. ಹೀಗೆ ಮಾಡುವುದರಿಂದ ಆ ಮನೆ ಧವಸ ಧಾನ್ಯಗಳಿಂದ ತುಂಬಿಕೊಂಡು ಸಮೃದ್ಧವಾಗಿರುತ್ತದೆ ಎಂಬ ನಂಬಿಕೆ ಇದೆ.

ಶಿವರಾತ್ರಿ : ರೈತರು ತಮ್ಮ ಕೃಷಿ ಚಟುವಟಿಕೆಯ ಅವಧಿಯಲ್ಲಿ ಹೆಚ್ಚಾಗಿ ಮಾತೃ ದೇವತೆಗಳನ್ನು ಆಚರಿಸಿದರೆ, ಶಿವರಾತ್ರಿಯಂದು ಶಿವನ ಆರಾಧನೆ ನಡೆಯುತ್ತದೆ. ಶಿವರಾತ್ರಿಯ ದಿನ ಸಾಮಾನ್ಯವಾಗಿ ಎಲ್ಲರೂ ಉಪವಾಸ ಮಾಡುವರು. ಶಿವನ ಧ್ಯಾನ, ಜಪ ತಪ, ಭಜನೆ ಮಾಡುತ್ತ ಬಸವಣ್ಣನ ದೇವಸ್ಥಾನದಲ್ಲಿ ಜಾಗರಣೆ ಮಾಡುವರು. ಡೊಳ್ಳಿನ ಹಾಡುಗಳನ್ನು ಹೇಳಿ, ಡೊಳ್ಳ ನುಡಿಸುವರು. ಮಾರನೆಯ ದಿನ ಉತ್ತರಾಣಿ ಕಡ್ಡಿಗೆ ಹತ್ತಿಯನ್ನು ಹಚ್ಚಿ ಅದನ್ನು ಆಕಳ ತುಪ್ಪ ಅಥವಾ ಎಣ್ಣೆಯಲ್ಲಿ ಎದ್ದಿ ಅದಕ್ಕೆ ದೀಪ ಹಚ್ಚಿ ಶಿವನಿಗೆ ಬೆಳಗುತ್ತಾರೆ. ಆರುತಿ ಬೆಳಗಿ ಮನೆಗೆ ಬಂದು ಅಡುಗೆ ಮಾಡಿ ಎಲ್ಲರೂ ಊಟ ಮಾಡುತ್ತಾರೆ. ಕೆಲವರು ಈ ಸಂದರ್ಭದಲ್ಲಿ ಪುಣ್ಯ ಸ್ನಾನ ಮಾಡಲು ಕೂಡಲಸಂಗಮಕ್ಕೆ ಹೋಗಿ ಅಲ್ಲಿ ಸ್ನಾನ ಮಾಡಿ ಕೂಡಲಸಂಗಮನಿಗೆ ಪೂಜಿಜಿ ಬರುತ್ತಾರೆ. ಶಿವರಾತ್ರಿಯ ದಿನ ಲಿಂಗಕ್ಕೆ ಅಭಿಷೇಕ ಮಾಡಿ ವಿವಿಧ ಬಗೆಯ ಹೂವುಗಳಿಂದ ಅಲಂಕರಿಸುತ್ತಾರೆ.

ಯುಗಾದಿ : ಸಾಮಾನ್ಯವಾಗಿ ರೈತರು ತಾವು ಬೆಳೆದ ಫಸಲನ್ನು ಮನೆಗೆ ತಂದಿರುವ ಕಾಲ. ಈ ಯುಗಾದಿಯ ದಿನ ಎಲ್ಲರೂ ಎಣ್ಣೆ ಸ್ನಾನ ಮಾಡಿ ತಮ್ಮ ಮನೆಗಳಲ್ಲಿ ಪೂಜೆ ಸಲ್ಲಿಸುವರು. ಮನೆಯ ಬಾಗಿಲಿಗೆ ಗೋದಿ, ಕುಸುಬಿ ಹೊಡೆ, ಬೇವು ಹಾಗೂ ಮಾವಿನ ಟೊಂಗೆಗಳನ್ನು ಕಟ್ಟಿ ಅಲಂಕರಿಸಿರುತ್ತಾರೆ. ಎತ್ತುಗಳ ಮೈ ತೊಳೆದು ಅವುಗಳನ್ನು ಸಿಂಗರಿಸಿ ಪೂಜೆ ಮಾಡುತ್ತಾರೆ. ಯುಗಾದಿಯ ಪಾಡ್ಯದ ದಿನ ಬಾಗೇವಾಡಿ ಬಸವಣ್ಣನ ಗುಡಿಯಲ್ಲಿ ಪೂಜಾರಿಗಳು ಬಸವಣ್ಣನಿಗೆ ಅಭಿಷೇಕ ಮಾಡಿ ಬಂಗಾರದ ಆಭರಣಗಳಿಂದ ಅಲಂಕರಿಸುತ್ತಾರೆ.

ಯುಗಾದಿಯ ದಿನ ಬಸವನ ಬಾಗೇವಾಡಿಯಲ್ಲಿ ಮುಂದಿನ ವರ್ಷದ ಮಳೆ-ಬೆಲೆಯ ಬಗ್ಗೆ ಭವಿಷ್ಯವನ್ನು ಹೇಳುತ್ತಾರೆ. ಬಾಗೇವಾಡಿಯಲ್ಲಿ ಎರಡು ಸಲ ಮಳೆ ಬೆಳೆಗೆ ಸಂಬಂಧಿಸಿದ ಹೇಳಿಕೆಯಾಗುತ್ತದೆ. ಮೊದಲ ಸಲ ಯುಗಾದಿಯಂದು ಮುಂಗಾರು ಬೆಳೆಗೆ ಸಂಬಂಧಿಸಿದ ಹೇಳಿಕೆಯಾದರೆ ಹಿಂಗಾರಿ ಬೆಳೆಗೆ ಸಂಬಂಧಿಸಿದ ಹೇಳಿಕೆ ಶ್ರಾವಣ ಮಾಸದಲ್ಲಿ ನಡೆಯುತ್ತದೆ.

ಯುಗಾದಿಯ ದಿನ ಬಸವಣ್ಣನ ಗುಡಿಯವರು ಈರಕಾರರಿಗೆ ಎಣ್ಣೆ ಅರಿಷಿಣ ಕೊಡುತ್ತಾರೆ ಈರಕಾರ ಹಿರಿಯ ಎಣ್ಣೆ ಅರಿಷಿಣ ಹಚ್ಚಿಕೊಂಡು ಸ್ನಾನ ಮಾಡಿ ತಲೆಗೆ ಹಳದಿ ಬಣ್ಣದ ರುಮಾಲು ಕಟ್ಟಿಕೊಂಡು ಬರುತ್ತಾನೆ. ಊರಿನ ಒಕ್ಕಲಿಗರೆಲ್ಲರೂ ಒಂದು ನಿರ್ಧಿಷ್ಟ ಸ್ಥಳದಲ್ಲಿ ಸೇರಿರುತ್ತಾರೆ. ಈ ಸಂದಂರ್ಭದಲ್ಲಿ ಡೊಳ್ಳಿನ ಹಾಡಿಕೆ ನಡೆಯುತ್ತದೆ. ಹೇಳಿಕೆ ಮಾಡುವ ಈರಕಾರ ಬಂದು ಬಸವಣ್ಣನನ್ನು ಸ್ಮರಿಸಿ ಮಳೆ ಬೆಳೆಯ ಆಗು ಹೋಗುಗಳನ್ನು ರಾತ್ರಿ ಒಂಭತ್ತು ಗಂಟೆಗೆ ಹೇಳುತ್ತಾನೆ.

ಯುಗಾದಿಯ ಪಾಡ್ಯದ ದಿನ ಶ್ರೀ ಶಿವಾನಂದ ಕೆಂಚಪ್ಪ ಈರಕಾರ ಮುತ್ಯಾ ಅವನ ಮನೆಯ ಮುಂದೆ ಹೇಳಿಕೆ ಹೇಳುತ್ತಾನೆ. ಉದಾ : ದಿನಾಂಕ ೧೬.೦೩.೨೦೧೦ರಂದು ನುಡಿದ ಹೇಳಿಕೆ ಇಂತಿದೆ,

೧. ರೋಹಿಣಿ ಮೃಗಾ ಮಂಡಿ ಕಟ್ಟಿಸಿದ್ದಿನಿ

೨. ಹುಬ್ಬಿ ಉತ್ತರಿ ಮಂಡಿ ಕಟ್ಟಿಸಿದ್ದಿನಿ

೩. ಹತ್ತು ಕಾಳಿನಲ್ಲಿ ಬಿಳಿಕಾಳು ಮೇಲು

೪. ಗೋದಿ ಸರ್ವಸಾಧಾರಣ

೫. ಹತ್ತಿ ಸಾಲಾಗ ಹಮಿಣಿ ಒಗದೀನಿ

೬. ಹತ್ತು ಮಳೆ ಒಕ್ಕಲಿಗಾ ಬೇಡಿದಾಗ ಕೊಟ್ಟಿನಿ

೭. ನಡೆ ಓನಿಯೋಳಗ ನುಚ್ಚಿನ ಕಟ್ಟಿ ಕಟ್ಟಿನಿ ಎಲ್ಲರೂ ಹರಿದು ಹರಿದು ಹಂಚಿ ಊಟ ಮಾಡಿರಿ.

೮. ನಾಲ್ಕು ಮೂಲ್ಯಾಗ ಒಂದು ಮೂಲಿ ಬಿತ್ತು.

ಯುಗಾದಿಯ ದಿನ ಹೋಳಿಗೆ, ಕಡಬು, ಕರ್ಚಿಕಾಯ, ಗೋದಿ ಹುಗ್ಗಿ, ಸೇಂಗಾ ಹೋಳಿಗೆ, ಬೇವು-ಬೆಲ್ಲ ಎಲ್ಲವನ್ನು ಸಿದ್ಧಪಡಿಸಿರುತ್ತಾರೆ. ಮಧ್ಯಾಹ್ನ ಎಲ್ಲರೂ ಊಟ ಮಾಡಿ ಕೆಲವರು ಹೊಸ ಬಟ್ಟೆಗಳನ್ನು ತೊಟ್ಟುಕೊಂಡು ಹಿರಿಯರಿಗೆ ಶುಭಾಷಯಗಳನ್ನು ಹೇಳುತ್ತಾರೆ.

ಗ್ರಾಮ ದೇವತೆ ದ್ಯಾಮವ್ವನ ಆರಾಧನೆ : ಬಾಗೇವಾಡಿಯ ಕೃಷಿಕರಿಗೂ ಮತ್ತು ಗ್ರಾಮ ದೇವತೆಯಾದ ದ್ಯಾಮವ್ವನಿಗೂ ಅವಿನಾಭಾವ ಸಂಬಂಧವಿದೆ. ದ್ಯಾಮವ್ವನಿಗೆ ಉಡಿ ತುಂಬದೇ ಈ ಪ್ರದೇಶದ ರೈತರು ತಮ್ಮ ಹೊಲಗಳಲ್ಲಿ ಬೀಜ ಬಿತ್ತುವುದಿಲ್ಲ ಊರಿನ ಬಡಿಗೇರರು ಮತ್ತು ಕಂಬಾರರು ಸಹ ದ್ಯಾಮವ್ವನಿಗೆ ಉಡಿ ತುಂಬಿದ ಮೇಲೇಯೇ ಕೃಷಿಗೆ ಸಂಬಂಧಿಸಿದ ಅಡಿಕಟ್ಟಿ ಪೂಜೆಯನ್ನು ಮಾಡಿ ಅಧಿಕೃತವಾಗಿ ಕೃಷಿಗೆ ಸಂಬಂಧಿಸಿದ ವಸ್ತುಗಳನ್ನು ಸಿದ್ಧಪಡಿಸುವ ಕಾರ್ಯದಲ್ಲಿ ತೊಡಗಿಕೊಳ್ಳುತ್ತಾರೆ.

ಊರಿನಲ್ಲಿರುವ ಮುತ್ತೈದೆಯರು, ಹಿರಿಯರು ಎಲ್ಲರೂ ಸೇರಿಕೊಂಡು ಮಂಗಳವಾರ ಅಥವಾ ಶುಕ್ರವಾರ ಉಡಿ ತುಂಬುವ ಕಾರ್ಯವನ್ನು ಮಾಡುವರು. ಊರಿನವರೆಲ್ಲರೂ ಸೇರಿದ ಮೇಲೆ ಊರ ಮುಂದೆ ಕುದುರೆಯನ್ನು ತರುತ್ತಾರೆ. ಡೊಳ್ಳ ಶಹನಾಯಿಯಂತಹ ಮಂಗಳವಾದ್ಯಗಳನ್ನು ನುಡಿಸುತ್ತಾ ಎಲ್ಲರೂ ದ್ಯಾಮವ್ವನ ಗುಡಿಗೆ ಬರುವರು, ದ್ಯಾಮವ್ವನಗುಡಿ ಸುತ್ತಲೂ ನೀರು ಹಾಕುವರು. ಮುತ್ತೈದೆಯರ ಮೂಲಕ ನೆನಗಡೆಲೆ, ಹಣ್ಣು, ತೆಂಗಿನಕಾಯಿ, ಉತ್ತತ್ತಿ ಲಿಂಬೆ ಹಣ್ಣು, ಸೀರೆ, ಕುಪ್ಪಸ, ಎಲೆ, ಅಡಿಕೆ, ಅಇಷಿಣ ಬೇರು, ವಾಲ್ಧಡ ಮುಂತಾದವುಗಳಿಂದ ಉಡಿ ತುಂಬುಬರು. ಈ ಸಂದರ್ಭದಲ್ಲಿ ದ್ಯಾಮವ್ವನಿಗೆ ದಂಡೆ ಕಟ್ಟಿ ಅಲಂಕಾರ ಮಾಡಿರುತ್ತಾರೆ.

ಬಾಗೇವಾಡಿ ತಹಸೀಲ್ದಾರರ ಕಚೇರಿಯಿಂದಲೂ ದ್ಯಾಮವ್ವನಿಗೆ ಹಣ್ಣು, ತೆಂಗಿನ ಕಾಯಿ, ಸೀರೆ, ಕುಪ್ಪಸ, ಹೂವಿನ ದಂಡೆ, ಮುಂತಾದ ಪೂಜಾ ವಸ್ತುಗಳನ್ನು ಕಳಿಸಿರುತ್ತಾರೆ. ಅವುಗಳನ್ನೂ ಉಡಿ ತುಂಬುತ್ತಾರೆ. ದ್ಯಾಮವ್ವನಿಗಾಗಿ ಎಣ್ಣೆ ಹೋಳಿಗೆ, ಕರ್ಚಿಕಾಯಿ, ಸೇಂಗಾ ಹೋಳಿಗೆ ಮಾಡಿ ನೈವೇದ್ಯ ಮಾಡುತ್ತಾರೆ. ಈ ಸಂದರ್ಭದಲ್ಲಿ ಲಕ್ಕವ್ವ ಎಂಬ ದೇವತೆಗೂ ಉಡಿ ತುಂಬುವ ಕಾರ್ಯ ಮಾಡುವರು. ಉಡಿ ತುಂಬಿದ ಮೇಲೆ ಕೃಷಿ ಚಟುವಟಿಕೆಗಳನ್ನು ಪ್ರಾರಂಭಿಸುವರು.

ಪ್ರತಿ ಮೂರು ವರ್ಷಕ್ಕೊಮ್ಮೆ ದ್ಯಾಮವ್ವ, ದುರುಗವ್ವನ ಮೂರ್ತಿಗಳಿಗೆ ಬಣ್ಣ ಹಚ್ಚಿಸುವ ಸಂಪ್ರದಾಯವೂ ಇವರಲ್ಲಿದೆ. ಈ ಗ್ರಾಮದೇವತೆಗಳ ಬಣ್ಣ ಸ್ವಲ್ಪ ಪ್ರಮಾಣದಲ್ಲಿ ಮಸುಕು ಮಸುಕಾಗಿರುತ್ತದೆ. ಗ್ರಾಮದೇವತೆಗಳು ಸದಾ ವಿಜೃಂಭಿಸುತ್ತಿರಬೇಕು. ಅವರ ಬಣ್ಣ ಮಸುಕಾದರೆ ಊರಿನ ಜನ, ಹೊಲ ಗದ್ದೆಗಳಲ್ಲಿ ಬೆಳೆಯುವ ಫಸಲಿಗೂ ತೊಂದರೆಯಾಗುತ್ತದೆಂಬ ಪರಿಕಲ್ಪನೆ ಇದೆ. ಹೀಗಾಗಿ ದ್ಯಾಮವ್ವ, ದುರುಗವ್ವನಿಗೆ ಬಣ್ಣ ಮಾಡಿಸಿ ಜಾತ್ರೆ ಮಾಡುತ್ತಿರುವುದನ್ನು ಕಾಣುತ್ತೇವೆ. ಈ ಗ್ರಾಮದೇವತೆಗಳನ್ನು ತೃಪ್ತಿ ಪಡಿಸದಿದ್ದರೆ ಅನೇಕ ರೋಗಗಳನ್ನು ಹರಡುತ್ತಾರೆಂಬ ಭಯವೂ ಇವರಲ್ಲಿದೆ. ಹೊಲಗಳಿಗೆ ಬೀಜ ಬಿತ್ತನೆ ಮಾಡುವಾಗ ಮೊದಲಿಗೆ ಬಿತ್ತುವ ಬೀಜವನ್ನು ದ್ಯಾಮವ್ವ ದುರುಗವ್ವನಿಗೆ ಅರ್ಪಿಸಿ ಆ ನಂತರ ಬಿತ್ತುವ ಸಂಪ್ರದಾಯವಿದೆ.

ಬಸವ ಜಯಂತಿ : ಬಸವ ಜಯಂತಿಯನ್ನು ಬಾಗೇವಾಡಿಯಲ್ಲಿ ವಿಜೃಂಭಣೆಯಿಂದ ಆಚರಿಸುವುದು ಕಂಡುಬರುತ್ತದೆ. ಬಸವ ಜಯಂತಿಯಂದು ರೈತರು ತಮ್ಮ ಎತ್ತುಗಳನ್ನು ತೊಳೆದು ಶೃಂಗರಿಸಿ ಪೂಜಿಸುವರು. ಬಸವಣ್ಣನ ದೇವಸ್ಥಾನದಲ್ಲಿ ನಂದಿಗೆ ಅಭಿಷೇಕ ಮಾಡಿ ಬೆಳ್ಳಿ, ಬಂಗಾರದ ಆಭರಣಗಳನ್ನು ಹಾಕಿ ವಿಶೇಷವಾದ ಅಲಂಕಾರ ಮಾಡಿರುತ್ತಾರೆ. ಅಂದು ಊರಿನವರೆಲ್ಲದೇ ಪರ ಊರಿನವರು ಬಸವಣ್ಣನ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸುತ್ತಾರೆ. ಬಸವ ಜಯಂತಿಯ ಹಿಂದಿನ ದಿನ ರಾತ್ರಿ ಬೆಳತನಕ ಒಟ್ಟು ೨೪ ಗಂಟೆಗಳ ಕಾಲ ಭಜನೆ ನಡೆಯುತ್ತದೆ. ಇಲ್ಲಿ ನಡೆಯುವ ಭಜನೆ ಬಹಳ ವಿಶೇಷವಾಗಿರುತ್ತದೆ. ಸಾಮಾನ್ಯವಾಗಿ ಊರಿನ ಜನರೆಲ್ಲ ಸ್ನಾಮ ಮಾಡಿಕೊಂಡು ಭಜನೆಯಲ್ಲಿ ಪಾಲ್ಗೊಳ್ಳುತ್ತಾರೆ. ಭಜನೆ ಮಾಡುವರು ತಣ್ಣೀರಿನಿಂದ ಸ್ನಾನ ಮಾಡಿ ಒದ್ದೆ ಬಟ್ಟೆಯಲ್ಲಿ ಗುಡಿಗೆ ಬಂದು ಮಣೆಯನ್ನು ಹಾಕಿ ಅದರ ಮೇಲೆ ೩ ಅಥವಾ ೪ ಜನರು ನಿಂತುಕೊಂಡು ಭಜನೆ ಮಾಡುತ್ತಾರೆ. ಅವರ ಕಾಲುಗಳು ಸೋತರೆ ಬೇರೆಯವರು ಅದೇ ಮಣೆಗಳ ಮೇಲೆ ನಿಂತು ಭಜನೆ ಮಾಡುವರು. ಈ ಭಜನೆ ಕಾರ್ಯ ನಿರಂತರವಾಗಿ ನಡೆಯುತ್ತದೆ. ಒಬ್ಬರಾದ ಮೇಲೆ ಒಬ್ಬರಂತೆ ಮಣೆ ಮೇಲೆ ನಿಂತು ಭಜನೆ ಮಾಡುವರು.

ಬಸವ ಜಯಂತಿಯಂದು ಹೋರಿ ಮುಟ್ಟಿ ದೇವಸ್ಥಾನದಲ್ಲಿ ಈರಕಾರರಿಂದ ಹೇಳಿಕೆ ನಡೆಯುತ್ತದೆ. ಅಂದೂ ಸಹ ಬಸವಣ್ಣನ ದೇವಸ್ಥಾನದವರು ಈರಕಾರರಿಗೆ ಎಣ್ಣೆ ಅರಿಷಿಣ ಕೊಡುತ್ತಾರೆ. ಎಣ್ಣೆ ಅರಿಷಿಣ ಹಚ್ಚಿಕೊಂಡು ಈರಕಾರರ ಹಿರಿಯ ಸ್ನಾನ ಮಾಡಿ ಮನೆಯ ದೇವರುಗಳನ್ನು ಪೂಜಿಸಿ ಹೋರಿ ಮೆಟ್ಟಿ ದೇವಸ್ಥಾನಕ್ಕೆ ಹೋಗುತ್ತಾನೆ. ಊರಿನ ಎಲ್ಲ ಜನರೂ ಹೋರಿ ಮಟ್ಟಿ ದೇವಸ್ಥಾನದಲ್ಲಿ ಸೇರುವರು. ಅಲ್ಲಿ ಹೇಳಿಕೆ ಮಾಡುವುದಕ್ಕಾಗಿಯೇ ನಿರ್ಧಿಷ್ಟಪಡಿಸಿದ ಸ್ಥಳವಿದೆ. ಹೋರಿ ಮಟ್ಟಿ ದೇವಸ್ಥಾನ ಪೂಜಾರಿಗಳು ಅಂದು ನಂದಿಗೆ ಪೂಜೆ ಮಾಡಿ ಅಲಂಕಾರ ಮಾಡಿರುತ್ತಾರೆ. ಹೇಳಿಕೆಯನ್ನು ಕೇಳಲು ಅಕ್ಕಪಕ್ಕದ ರೈತರೂ ಅಲ್ಲಿಗೆ ಆಗಮಿಸುವರು. ಹೋರಿ ಮಟ್ಟಿ ದೇವಾಲಯ ಬಸವಣ್ಣನ ಮೂಲ ಸ್ಥಳ ಎಂದು ಮೊದಲು ಇಲ್ಲಿ ಪೂಜೆ ನಡೆದು ಹೇಳಿಕೆಯಾದ ನಂತರ ಬಾಗೇವಾಡಿಯಲ್ಲಿರುವ ಬಸವಣ್ಣನ ದೇವಸ್ಥಾನದಲ್ಲಿ ಹೇಳಿಕೆ ನಡೆಯಬೇಕು ಎಂಬ ಸಂಪ್ರದಾಯವಿದೆ.

ಈರಕಾರ ಇಲ್ಲಿಗೆ ಬಂದು ಆ ವರ್ಷದ ಮುಂಗಾರಿನ ಬೆಳೆ ಮತ್ತು ಮಳೆಗೆ ಸಂಬಂಧಿಸಿದ ಭವಿಷ್ಯವನ್ನು ನುಡಿಯುತ್ತಾನೆ. ಬಸವ ಜಯಂತಿಯಂದು ಬಸವ ಜನಿಸಿದ ಎಂಬ ಪರಿಕಲ್ಪನೆ ಇವರಲ್ಲಿದೆ. ಹೀಗಾಗಿ ಅಂದು ಬಸವಣ್ಣನ ದೇವಸ್ಥಾನದಲ್ಲಿ ಬಸವನ ಪ್ರತಿಮೆಯನ್ನು ತೊಟ್ಟಿಲಿಗೆ ಹಾಕುವ ಆಚರಣೆಯನ್ನು ಮಧ್ಯಾಹ್ನ ಮಾಡುವರು. ಬಸವಣ್ಣನಿಗೆ ಸಂಬಂಧಿಸಿದ ಅನೇಕ ಹಾಡುಗಳನ್ನು ಹೆಂಗಸರು ಹಾಡುತ್ತಾರೆ.

ಬಸವ ಬಂದ ನೋಡಿರೆ
ಮರುತೇಕು ಚನ್ನ ರುಚಿಯ ಬಂದನು ಕೇಳಿರೆ
ಬಸವ ಬಂದನು ಬಸವ
ಎಸಳ ಕೋಡಿನ ಬಸವ………

ಎಂದು ಹೆಂಗಸರು ಹಾಡುವ ಪದ್ಯಗಳಲ್ಲಿ (ನಂದಿ) ಬಸವಣ್ಣನ ವರ್ಣನೆಗಳು ಅಧಿಕವಾಗಿರುವುದು ಕಂಡುಬರುತ್ತದೆ. ಅಂದು ಮಧ್ಯಾಹ್ನ ದೇವಸ್ಥಾನದಲ್ಲಿ ದಾಸೋಹ ನಡೆಯುತ್ತದೆ. ತೊಟ್ಟಿಲ ಶಾಸ್ತ್ರ ಮುಗಿದ ಮೇಲೆ ಎಲ್ಲರೂ ಪ್ರಸಾದವನ್ನು ಸ್ವೀಕರಿಸುವರು. ಕೆಲ ಪ್ರದೇಶಗಳಲ್ಲಿ ಎತ್ತುಗಳನ್ನು ಶೃಂಗರಿಸಿ ಊರಿನ ತುಂಬ ಮೆರವಣಿಗೆ ಮಾಡುವರು.

ಬಸವಣ್ಣನ ಜಾತ್ರೆ : ಬಾಗೇವಾಡಿ ಬಸವಣ್ಣನ ದೇವಸ್ಥಾನದಿಂದ ಮತ್ತು ಶರಣ ಬಸವ ಹುಟ್ಟಿದ ಸ್ಥಳ ಎಂಬ ಕಾರಣದಿಂದ ಪ್ರಸಿದ್ಧಿಯನ್ನು ಪಡೆದುಕೊಂಡಿದೆ ಮತ್ತು ಪ್ರಮುಖ ಆರಾಧನಾ ಕೇಂದ್ರವೂ ಆಗಿದೆ. ಶ್ರಾವಣ ಮಾಸದಲ್ಲಿ ಒಂದು ತಿಂಗಳವರೆಗೆ ಈ ದೇವಸ್ಥಾನದಲ್ಲಿ ವಿಶೇಷವಾದ ಪೂಜೆ, ಆರಾಧನೆಗಳು ನಡೆಯುತ್ತವೆ. ಬಸವ ಪುರಾಣದ ಪ್ರವಚನ ಸಾಯಂಕಾಲ ೭ ರಿಂದ ೮ ಗಂಟೆಯವರೆಗೆ ನಡೆಯುತ್ತಿರುತ್ತದೆ. ಹರಕೆಯನ್ನು ಹೊತ್ತ ಭಕ್ತರು ಬಸವಣ್ಣನ ಗುಡಿಯಲ್ಲಿ ದೀಡ ನಮಸ್ಕಾರ ಹಾಕುವರು. ಪ್ರತಿದಿನ ಭಜನೆ ಕಾರ್ಯಕ್ರಮವಿರುತ್ತದೆ. ಶ್ರಾವಣ ಮಾಸದಲ್ಲಿ ಶಿವ ಹಾಗೂ ನಂದಿಯನ್ನು ವಿಶೇಷವಾಗಿ ಆರಾಧಿಸುವುದು ಕಂಡುಬರುತ್ತದೆ.

ಶ್ರಾವಣ ಮಾಸದಲ್ಲಿ ಐದು ಸೋಮವಾರಗಳು ಬಂದರೆ ನಾಲ್ಕನೆಯ ಸೋಮವಾರ, ನಾಲ್ಕು ಸೋಮವಾರಗಳು ಬಂದರೆ ಮೂರನೆಯ ಸೋಮವಾರ ಜಾತ್ರೆ ನಡೆಯುತ್ತದೆ. ಬಸವಣ್ಣನ ಜಾತ್ರೆಯಲ್ಲಿ ತೇರು ಎಳೆಯುವ ಸಂಪ್ರದಾಯವಿಲ್ಲ. ಜಾತ್ರೆಯ ದಿನ ಸೋಮವಾರ ಬೆಳಿಗ್ಗೆ ಬಸವಣ್ಣನಿಗೆ ಅಭಿಷೇಕ ಮಾಡಿ ಅವನಿಗೆ ಬೆಳ್ಳಿ ಬಂಗಾರದ ಆಭರಣಗಳಿಂದ ವಿವಿಧ ಬಗೆಯ ಹೂವುಗಳಿಂದ ಅಲಂಕರಿಸುವರು. ಪಲ್ಲಕ್ಕಿಯನ್ನು ತೆಗೆದುಕೊಂಡು ನೀರಿನಿಂದ ಶುದ್ಧಗೊಳಿಸಿ ಅದನ್ನು ಶೃಂಗರಿಸುವರು. ಅದರಲ್ಲಿ ಬಟ್ಟೆಯನ್ನು ಹಾಸಿ ನಂದಿಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆಮಾಡಿ ಪಲ್ಲಕ್ಕಿಯನ್ನು ಸುಮಾರು ೧೨ ಗಂಟೆಯ ಸಮಯಕ್ಕೆ ತೆಗೆದುಕೊಂಡು ಹೋರಿ ಮಟ್ಟಿ ಗುಡ್ಡಕ್ಕೆ ಹೋಗಲು ಸಿದ್ಧತೆ ಮಾಡಿಕೊಳ್ಳುವರು.

ಬಸವಣ್ಣನ ಕಳಸ ಬಾಗೇವಾಡಿಯ ಮೋದಿಯವರ ಮನೆಯಲ್ಲಿರುತ್ತದೆ. ಕೆಲ ಮುತ್ತೈದೆಯರು ಹಿರಿಯರು ಮೋದಿ ಅವರ ಮನೆಗೆ ಹೋಗಿ ಕಳಸವನ್ನು ತೆಗೆದುಕೊಂಡು ಬರುತ್ತಾರೆ. ಪಲ್ಲಕ್ಕಿಯು ಮೊದಲು ಬಸವಣ್ಣನ ಗುಡಿಯ ಸುತ್ತ ಐದ ಸಲ ಪ್ರದಕ್ಷಿಣೆ ಹಾಕಿದ ಮೇಲೆ ಹೋರಿ ಮಟ್ಟಿ ಗುಡ್ಡಕ್ಕೆ ತೆರಳುತ್ತದೆ. ಪಾಲ್ಕಿಯ ಜೊತೆಗೆ ಕಳಸವನ್ನು ತೆಗೆದುಕೊಂಡು ಹೋಗುವುದುಂಟು. ಡೊಳ್ಳಿನ ಮೇಳದವರು ಶಹನಾಯಿ ವಾದ್ಯಗಳು, ಭಜನೆ ಮೇಳದವರು ಊರಿನ ಹಾಗೂ ಪರವೂರುಗಳಿಂದ ಆಗಮಿಸಿದ ಭಕ್ತರು ಎಲ್ಲರೂ ಸೇರಿ ಮಂಗಳ ವಾದ್ಯಗಳನ್ನು ನುಡಿಸುತ್ತಾ ಹಾಡುಗಳನ್ನು ಹಾಡುತ್ತಾ ಛತ್ರಿ ಚಾಮರಗಳನ್ನು ಹಿಡಿದು, ಆನೆಯನ್ನೊಳಗೊಂಡಂತೆ ಪಲ್ಲಕ್ಕಿಯ ಮೆರವಣಿಗೆಯ ಜೊತೆಗೆ ಹೋಗುತ್ತಾರೆ. ಕೆಲ ಭಕ್ತರು ತಮ್ಮ ಮನೆಗಳಿಂದ ನೀರು ತಂದು ಪಲ್ಲಕ್ಕಿಯ ಮುಂದೆ ಹಾಕಿ ಕಾಯಿ ಹಣ್ಣು ಕೊಟ್ಟು ಪೂಜಿಸುವರು. ನಂದಿಯನ್ನು ಹೊತ್ತು ಪಲ್ಲಕ್ಕಿ ಮೆರವಣಿಗೆಯ ಮೂಲಕ ಹೋರಿ ಮಟ್ಟಿಯನ್ನು ಸೇರಿಕೊಳ್ಳುತ್ತದೆ. ಹೋರಿ ಮಟ್ಟಿಯಲ್ಲಿ ಪಲ್ಲಕ್ಕಿ ೫ ಸಲ ಪ್ರದಕ್ಷಣೆ ಹಾಕಿದ ನಂತರ ನಂದಿಗೆ ಪೂಜೆ ಸಲ್ಲಿಸಲಾಗುತ್ತದೆ. ಅಲ್ಲಿ ಪಲ್ಲಕ್ಕಿಯನ್ನು ಇಳಿಸಿ ಭಜನೆ ಮಾಡುತ್ತಾರೆ. ಡೊಳ್ಳಿನವರು ಹಾಡು ಹೇಳುತ್ತಾರೆ.

ಈರಕಾರರ ಮುತ್ಯಾ ಅರಿಷಿಣ, ಕೊಬ್ಬರಿ ಎಣ್ಣೆ ಹಚ್ಚಿಕೊಂಡು ಸ್ನಾನ ಮಾಡಿ ತಮ್ಮ ಮನೆಯಲ್ಲಿರುವ ನಂದಿ, ಬೀರಪ್ಪ, ರೇವಣಸಿದ್ದಪ್ಪ ಮುಂತಾದ ದೈವಗಳನ್ನು ಪೂಜಿಸಿ ಹೋರಿ ಮಟ್ಟಿಗೆ ಬಂದಿರುತ್ತಾನೆ. ಈರಕಾರ ನಂದಿ, ಶಿವ ಹಾಗೂ ತಾನು ಆರಾಧಿಸುವ ಎಲ್ಲ ದೈವಗಳನ್ನು ಸ್ಮರಿಸಿ ಹಿಂಗಾರಿ ಮಳೆ ಬೆಳೆಗೆ ಸಂಬಂಧಿಸಿದಂತೆ ಭವಿಷ್ಯವನ್ನು ನುಡಿಯುತ್ತಾನೆ. ಅಲ್ಲಿಯೂ ಒಂದು ರೀತಿಯ ಜಾತ್ರೆ ನಡೆಯುತ್ತದೆ. ಈರಕಾರ ಹೇಳಿಕೆಯ ನಂತರ ಮತ್ತೆ ನಂದಿಗೆ ಪೂಜಿಸಿ ಪಲ್ಲಕ್ಕಿಯನ್ನು ಹೊತ್ತುಕೊಂಡು ಹೋರಿಮಟ್ಟಿಯಿಂದ ಹೊರಟ ಪಲ್ಲಕ್ಕಿ ಬಸವಣ್ಣನ ದೇವಸ್ಥಾನಕ್ಕೆ ೭ ಗಂಟೆಗೆ ಬರುತ್ತದೆ. ಅಲ್ಲಿ ಪ್ರಸಾದ ವ್ಯವಸ್ಥೆಯನ್ನೂ ಮಾಡಿರುತ್ತಾರೆ.

ಶ್ರಾವಣ ಮಾಸದ ಎಲ್ಲ ಸೋಮವಾರ ಪಲ್ಲಕ್ಕಿಯಲ್ಲಿ ನಂದಿ ಮೂರ್ತಿಯನ್ನಿಟ್ಟು ಐದು ಸಲ ಗುಡಿಯೊಳಗೆ ಪ್ರದಕ್ಷಿಣೆ ಹಾಕುವುದನ್ನು ಕಾಣುತ್ತೇವೆ. ಬಸವಣ್ಣನ ದೇವಸ್ಥಾನದಲ್ಲಿಯೂ ಈರಕಾರರು ಮತ್ತೊಮ್ಮೆ ಹೇಳಿಕೆಯನ್ನು ಮಾಡುತ್ತಾರೆ. ಉದಾ: ಶ್ರಾವಣ ಮಾಸದಲ್ಲಿ ಶ್ರೀ ಬಸವಣ್ಣನವರ ನುಡಿಮುತ್ತುಗಳು ಇಂತಿವೆ,

೧. ಹುಬ್ಬಿ ಉತ್ತರಿ ಮಂಡಿ

೨. ಗೋದಿ ಕುಸುಬಿ, ಕಡ್ಲಿ, ಜೋಳದ ಬೆನ್ನು ಹತ್ಯಾವು

೩. ಒಕ್ಕಲಿಗ್ಯಾ ಮಗನಿಗೆ ಮುಂದಕ್ಕೆ ಇಟ್ಟ ಕಾಲು ಹಿಂದಕ್ಕೆ ಇಡಬ್ಯಾಡ ಹಿಂದೆ ಇರತೀನಿ

೪. ಮಳಿ ಬೆಳೆ ಎಲ್ಲಾ ಸಂಪೂರ್ಣ ಇಟ್ಟಿನಿ ಒಕ್ಕಲಿಗನಿಗೆ ಚಿಂತಿ ಮಾಡಬ್ಯಾಡ. ರಾಶಿ ಮಾಡಲಾಕ ಚೀಲ ಸಿಗಾಕಿಲ್ಲಲೇ ಮಗನೇ

೫. ಬಗ್ಗಿ ನಡಿದವರಿಗೆ ಬಂಗಾರದ ಹೊಗೆ ಹಾದಿತು

೬. ಜಾಡಿ ಟೊಪ್ಪಿಗೆ ಮಾಡಿಕೊಂಡು ಒಕ್ಕಲಿಗ್ಯಾನಿಂದ ಮಾಲಿ ಮಾಲಿಗೆ ಕಂಬಾಗಿ ನಿಂತಿನಿ ಚಿಂತಿ ಮಾಡಬೇಡ

೭. ಹತ್ತಿ ಸಾಲಾಗ ಹಮೀಣಿ ಹೊಗದಿನಿ.

ಊರಲ್ಲಿ ಎಲ್ಲರೂ ಅಂದು ಸಿಹಿ ಅಡುಗೆಯನ್ನು ಮಾಡಿರುತ್ತಾರೆ. ಜಾತ್ರೆಗಾಗಿ ಪರವೂರಿನಿಂದ ಬಂಧು-ಬಗಳದವರು ಬಂದಿರುತ್ತಾರೆ. ಎಲ್ಲರೂ ದೇವಸ್ಥಾನಕ್ಕೆ ಹೋಗಿ ಭಕ್ತಿಯಿಂದ ಬಸವನನ್ನು ಕಂಡು ಕೈ ಮುಗಿದು ಇಷ್ಟಾರ್ಥ ಸಿದ್ಧಿಗಾಗಿ ಬೇಡಿಕೊಳ್ಳುವುದು ಕಂಡುಬರುತ್ತದೆ. ಶ್ರಾವಣ ಮಾಸದ ಪ್ರತಿ ಸೋಮವಾರ ಬಾಗೇವಾಡಿ ಪರಿಸರದ ಸುತ್ತಮುತ್ತಲಿನ ಗ್ರಾಮಗಳಲ್ಲಿಯೂ ಬಸವನ ಜಾತ್ರೆ ನಡೆಯುತ್ತದೆಂದು ತಿಳಿಯುತ್ತದೆ. ಕಡೆ ಸೋಮವಾರ ಮನಗೂಳಿಯಲ್ಲಿ ತೇರು ಎಳೆಯುವರು. ಸೋಮವಾರದ ದಿನ ಜಾತ್ರೆ ಮುಗಿದರೂ ಐದು ದಿನಗಳ ವರೆಗೆ ಜಾತ್ರೆಯ ಸಂಭ್ರಮ ಇದ್ದೇ ಇರುತ್ತದೆ. ಗುಂಡು ಎತ್ತುವ, ಕುಸ್ತಿ ಪಂದ್ಯಾವಳಿಗಳನ್ನು ಏರ್ಪಡಿಸುವುದನ್ನು ಈ ಸಂದರ್ಭದಲ್ಲಿ ಕಾಣುತ್ತೇವೆ.

ರೈತರು ತಮ್ಮ ಎತ್ತು ಹಾಗೂ ಇತರೆ ದನಕರುಗಳನ್ನು ಅತ್ಯಂತ ಜತನದಿಂದ ಸಾಕುವುದನ್ನು ಕಾಣುತ್ತೇವೆ. ಅಲ್ಲದೇ ಅವುಗಳ ಮೇಲೆ ಅಪಾರವಾದ ಕಾಳಜಿಯನ್ನು ಹೊಂದಿರುವುದು ಕಂಡುಬರುತ್ತದೆ. ಅನೇಕ ರೈತರು ಪ್ರತಿ ಸೋಮವಾರ ತಮ್ಮ ಎತ್ತುಗಳ ಮೈ ತೊಳೆದು ಅಂದು ಅವುಗಳನ್ನು ಕೃಷಿ ಚಟುವಟಿಕೆಗಳಿಗೆ ಬಳಸಿಕೊಳ್ಳುವುದಿಲ್ಲ. ಸೋಮವಾರದ ದಿನವನ್ನು ಬಸವಣ್ಣನ ದಿನವೆಂದು ಕರೆಯುತ್ತಾರೆ. ಕೃಷಿಯಲ್ಲಿ ತೊಡಗಿಸಿಕೊಂಡಿರುವ ಎಲ್ಲ ರೈತರು ಮಳೆ, ಬೆಳೆ, ಭೂಮಿ ಹಾಗೂ ಬಸವನಿಗೆ ಸಂಬಂಧಿಸಿದ ಎಲ್ಲ ಆಚರಣೆಗಳನ್ನು ಭಕ್ತಿಯಿಂದ ಆಚರಿಸುವುದನ್ನು ಕಾಣುತ್ತೇವೆ.

ಪ್ರತಿ ವರ್ಷವೂ ಹೇಳಿಕೆಯನ್ನು (ಭವಿಷ್ಯವನ್ನು) ಹೇಳುವ ಈರಕಾರರ ಮನೆಗಳು ಬಾಗೇವಾಡಿಯಲ್ಲಿವೆ. ಇವರನ್ನು ಬಿಟ್ಟು ಬೇರೆ ಯಾರೂ ಹೇಳಿಕೆಯನ್ನು ಮಾಡುವುದಿಲ್ಲ. ಈರಕಾರರಿಂದಲೇ ಯಾಕೆ ಹೇಳಿಕೆ ಮಾಡಿಸಬೇಕು, ಎಂಬುದಕ್ಕೆ ಒಂದು ಕಥೆ ಇದೆ. ಜಗಜ್ಯೋತಿ ಬಸವಣ್ಣನವರೇ ಮಳೆ, ಬೆಳೆ ಕುರಿತು ಹೇಳಿಕೆಗಳನ್ನು ಒಂದು ಕಾಲದಲ್ಲಿ ಮಾಡುತ್ತಿದ್ದರು. ನಾನೇ ಸದಾ ಕಾಲ ಮಳೆ ಬೆಳೆಯನ್ನು ಕುರಿತಾದ ಭವಿಷ್ಯ ಹೇಳಲು ಸಾಧ್ಯವಾಗುವುದಿಲ್ಲ ಎಂದು ಯೋಚನೆ ಮಾಡಿ ಹಿಪ್ಪರಿಗೆ ಗ್ರಾಮಕ್ಕೆ ಹೋಗಿ ನಮ್ಮ ಪ್ರದೇಶದ ಮಳೆ, ಬೆಳೆ ಕುರಿತು ಭವಿಷ್ಯ ಹೇಳುವ ಒಬ್ಬ ಸಚ್ಚಾರಿತ್ರ್ಯವುಳ್ಳ ವ್ಯಕ್ತಿಯನ್ನು ನೀಡಬೇಕೆಂದು ಊರಿನ ಹಿರಿಯರಲ್ಲಿ ಕೇಳಿಕೊಳ್ಳುತ್ತಾರೆ. ಆಗ ಹಿಪ್ಪರಿಗೆಯ ಹಿರಿಯರು ನಾವು ಕಳಿಸಿಕೊಡುವ ವ್ಯಕ್ತಿ ನಿಮಗೆ ಸರಿಹೊಂದುವುದಿಲ್ಲ. ಕೊಡಗಾನೂರಿಗೆ ಹೋಗಿ ಅಲ್ಲಿಯ ಪೂಜಾರಪ್ಪನವರನ್ನು ವಿಚಾರಿಸಿ ಎಂದು ಸಲಹೆ ಮಾಡುತ್ತಾರೆ. ಬಸವಣ್ಣ ಕೊಡಗಾನೂರಿಗೆ ಹೋಗಿ ಅಲ್ಲಿ ಪೂಜಾರಿಯನ್ನು ವಿಚಾರಿಸುತ್ತಾನೆ. ಆಗ ಪೂಜಾರಿ ಭವಿಷ್ಯ ಹೇಳಲು ಪಟ್ಟಾದಾಳನ್ನು ಕಳಿಸುತ್ತಿದ್ದೆ ಅವನು ನಿಮಗೆ ಸರಿಯಾಗಿ ಹೊಂದಾಣಿಕೆಯಾಗುವುದಿಲ್ಲ ಎಂದು ಹೇಳುತ್ತಾನೆ. ಆವಾಗ ಬಸವಣ್ಣನವರು ಅಲ್ಲಿ ಒಂದು ಪವಾಡ ಮಾಡುತ್ತಾರೆ.

ಕೊಡಗಾನೂರು ಪೂಜಾರಿಗೆ ಒಂದು ಗಂಡು ಮಗು ಹುಟ್ಟಿರುತ್ತದೆ. ಅದು ಹುಟ್ಟಿ ಒಂದು ತಿಂಗಳಾಗಿರುತ್ತದೆ. ಬಸವಣ್ಣ ಆ ಊರಿಗೆ ಬಂದು ಹೋದ ಮೇಲೆ ಆ ಮಗು ಹಾಲು ಕುಡಿಯುವುದನ್ನು ಬಿಡುತ್ತದೆ. ಒತ್ತಾಯವಾಗಿ ಹಾಲು ಕುಡಿಸಿದರೂ ಅದಕ್ಕೆ ಹಾಲು ದಕ್ಕುತ್ತಿರಲಿಲ್ಲ. ಎಲ್ಲ  ಔಷಧೋಪಚಾರಗಳನ್ನೂ ಮಾಡಿದರೂ ಆ ಮಗುವಿನ ಆರೋಗ್ಯ ಸರಿಹೋಗಲಿಲ್ಲ. ಇನ್ನೇನು ಮಗು ಸಾಯುತ್ತದೆ ಅದರ ಬಗ್ಗೆ ಚಿಂತೆ ಮಾಡಬೇಡಿ ಎಂದು ಊರ ಹಿರಿಯರು ಹೇಳುತ್ತಾರೆ. ಇದನ್ನು ಕೇಳಿದ ಆ ಮಗುವಿನ ತಂದೆ ಪೂಜಾರಿ ಸಿಟ್ಟಿಗೆದ್ದು ಹೋಗಿ ಆ ಮಗು ಯಾವಾಗ್ಲಾದ್ರೂ ಸಾಯಲಿ, ಸತ್ತ ಮೇಲೆ ಅಲ್ಲಿಗೆ ಹೊದ್ರಾಯ್ತು ಅದರ ಕರ್ಮ ನೋಡ್ಲಿಕ್ಕಾಗದು ಎಂದು ಹೇಳಿ ಅಲ್ಲಿಂದ ಗುಡಿಗೆ ಬಂದು ಮಲಗಿಕೊಳ್ಳುತ್ತಾನೆ. ಬೆಳಗಿನ ಜಾವ ದೇವನೊಬ್ಬ ಕನಸಿನಲ್ಲಿ ಬಂದು ‘ನೀನು ಬಸವಣ್ಣನ ಹೆಸರಿನಲ್ಲಿ ಪ್ರಸಾದವನ್ನು ಹಂಚ್ಚುತ್ತೇನೆಂದು ಬೇಡಿಕೊ, ನಿನ್ನ ಮಗ ಆರಾಮಾಗುತ್ತಾನೆಂದು ಹೇಳುತ್ತಾನೆ’. ಆಗ ಪೂಜಾರಿ ಎದ್ದು ಬಸಣ್ಣನ ಹೆಸರಿನಲ್ಲಿ ಪ್ರಸಾದ ಹಂಚ್ಚುತ್ತೇನೆ ನನ್ನ ಮಗನನ್ನು ಬದುಕಿಸಿಕೊಡು ಎಂದು ಬೇಡಿಕೊಂಡು ಆ ಗುಡಿಯಲ್ಲಿರುವ ತೀರ್ಥ ಮತ್ತು ಅಂಗಾರವನ್ನು ತೆಗೆದುಕೊಂಡು ಮನೆಗೆ ಬರುತ್ತಾನೆ. ಅಂಗಾರವನ್ನು ಮಗುವಿಗೆ ಹಚ್ಚಿ ತೀರ್ಥದ ಒಂದು ಹನಿಯನ್ನು ಕುಡಿಸುತ್ತಾನೆ. ಕಣ್ಣು ಮುಚ್ಚಿದ ಆ ಮಗು ಕಣ್ಣು ತೆರೆಯುತ್ತದೆ. ಎಲ್ಲರನ್ನೂ ನೋಡುತ್ತದೆ. ತಾಯಿಯ ಹಾಲು ಕುಡಿದು ದಕ್ಕಿಸಿಕೊಳ್ಳುತ್ತದೆ. ಪೂಜಾರಿಗೆ ಸಂತೋಷವಾಗುತ್ತದೆ. ಆ ಗಂಡು ಮಗು ದಿನದಿಂದ ದಿನಕ್ಕೆ ಬೆಳೆದು ದೊಡ್ಡವನಾಗುತ್ತಾನೆ. ಆದರೆ ಪೂಜಾರಿ ಬಸವಣ್ಣ ಹರಕೆಯನ್ನು ಮಾತ್ರ ತೀರಿಸುವುದನ್ನು ಮರೆತುಬಿಡುತ್ತಾನೆ.

ಒಂದು ಸಲ ಬಸವಣ್ಣ ಪೂಜಾರಿಯ ಕನಸಿನಲ್ಲಿ ಬಂದು ‘ಮಗನೇ ನೀನು ಹರಕೆ ಹೊತ್ತುಕೊಂಡು ನಿನ್ನ ಮಗನನ್ನು ಉಳಿಸಿಕೊಂಡಿರುವಿ ಆ ಹರಕೆಯನ್ನು ತೀರಿಸಿಲ್ಲ ನೆನಪಿರಲಿ’ ಎಂದು ಹೇಳುತ್ತಾನೆ. ಆಗ ಪೂಜಾರಿ ಎಚ್ಚೆತ್ತುಕೊಂಡು ಆ ವಿಷಯವನ್ನು ಹೆಂಡತಿಗೆ ಹೇಳುತ್ತಾನೆ. ಶ್ರಾವಣ ಮಾಸದಲ್ಲಿ ಬಸವಣ್ಣನಿಗೆ ಕಾಯಿ ಒಡೆಸಿ ಪ್ರಸಾದ ಮಾಡುವುದಕ್ಕಾಗಿ ಬುತ್ತಿ ಕಟ್ಟಿಕೊಂಡು ಕೊಡಗಾನೂರಿನಿಂದ ಬಾಗೇವಾಡಿಗೆ ನಡೆಯುತ್ತಾ ಬರುತ್ತಾನೆ. ಅಂದು ರಾತ್ರಿ ಬಸವಣ್ಣನ ಗುಡಿಯಲ್ಲಿಯೇ ಉಳಿದುಕೊಳ್ಳುತ್ತಾನೆ.

ಮಾರನೆಯ ದಿನ ಪೂಜಾರಿ ಎದ್ದು ಬಸವಣ್ಣನಿಗೆ ಕಾಯಿ ಒಡೆಸಿ ಪ್ರಸಾದ ಮಾಡಿ ಗುಡಿಯ ಹೊರಗೆ ಯಕ್ಕಿ ಎಲೆಯಲ್ಲಿ ತಂಬಾಕು ಹಾಕಿಕೊಂಡು ಸೇದುತ್ತಿರುತ್ತಾನೆ. ಅದೇ ವೇಳೆಗೆ ಬಾಗೇವಾಡಿ ಊರಿನ ಗೌಡ ಬಸವಣ್ಣನಿಗೆ ಪೂಜೆ ಸಲ್ಲಿಸಲು ತನ್ನ ಆಳುಗಳನ್ನು ಕರೆದುಕೊಂಡು ಬರುತ್ತಿರುತ್ತಾನೆ. ಈ ಗೌಡ ಊರನ್ನು ಅತ್ಯಂತ ಸ್ವಚ್ಛವಾಗಿಟ್ಟುಕೊಂಡು ಬಾಗೇವಾಡಿಯನ್ನು ರಾಮರಾಜ್ಯದಂತೆ ಮಾಡಿರುತ್ತಾನೆ. ಗೌಡನನ್ನು ಕಂಡರೆ ಊರವರೆಲ್ಲ ಅಂಜುತ್ತಿರುತ್ತಾರೆ. ಗೌಡನ ಎದುರಿಗೆ ಬಂದ ಕುಲಕರ್ಣಿ, ಶಾನಭೋಗ, ಹಿರಿಯರು ಎಲ್ಲರೂ ಅವನಿಗೆ ನಮಸ್ಕರಿಸಿ ಗೌರವ ಕೊಡುತ್ತಿರುತ್ತಾರೆ. ಆದರೆ ಈ ಪೂಜಾರಿ ಆ ಗೌಡರಿಗೆ ನಮಸ್ಕರಿಸಿ ಗೌರವ ನೀಡುವುದಿಲ್ಲ. ಅದನ್ನು ಕಂಡ ಗೌಡ ವಾಲೀಕಾರರನ್ನು ಕರೆದು ಅವನನ್ನು ಕರೆತರಲು ಹೇಳಿ ಮನೆಗೆ ಹೋಗುತ್ತಾನೆ. ವಾಲೀಕಾರರು ಪೂಜಾರಿಯನ್ನು ಕರೆದುಕೊಂಡು ಗೌಡರ ಮನೆಗೆ ಹೋಗುತ್ತಾರೆ.

ಗೌಡರು ಆ ಪೂಜಾರಿಯನ್ನು ಕುರಿತು ನೀನು ಯಾರು? ಇಲ್ಲಿಗೇಕೆ ಬಂದಿರುವೆ? ಮುಂತಾದ ಪ್ರಶ್ನೆಗಳನ್ನು ಕೇಳಿ ಅವನಿಂದ ಮಾಹಿತಿಯನ್ನು ಪಡೆದುಕೊಳ್ಳುತ್ತಾರೆ. ಒಕ್ಕಲಿಗರಿಗೆ ಮಳೆ ಬೆಳೆ ಕುರಿತು ಹೇಳಿಕೆ ಮಾಡಿಕೊಂಡಿದ್ದೇನೆ ಎಂದು ತಿಳಿಸುತ್ತಾನೆ. ಯಾವ ದೇವರ್ನ ನೆನಿಸಿ ಹೇಳ್ಕಿ ಮಾಡ್ತಿಲೇ ನೀನು, ನಿಮ್ಮ ದೇವ್ರ ಅಷ್ಟು ಸತ್ಯವಂತನೇನ್ಲೇ? ಹಾಗಾದರೆ ನನಗೂ ನಿನ್ನ ಸತ್ಯ ತೋರಿಸ್ಬೇಕು ಎಂದು ಗೌಡ ಸಿಟ್ಟಿಗೆದ್ದು ವಾಲೀಕಾರನನ್ನು ಕರೆದು ತನ್ನ ಹಟ್ಟಿಯಲ್ಲಿ ಕಟ್ಟಿರುವ ಗರ್ಭಧರಿಸಿದ ಹೆಣ್ಣು ಕುದುರೆಯನ್ನು ತರಲು ಹೇಳುತ್ತಾನೆ. ಆ ಕುದುರೆಯನ್ನು ತಂದು ಗೌಡ ಮುಂದೆ ನಿಲ್ಲಿಸುತ್ತಾರೆ. ಆಗ ಗೌಡ ‘ಈ ಕುದುರೆ ಗಬ್ಬೈತಿ ಇದರ ಹೊಟ್ಯಾಗ ಹೆಣ್ಣ ಕುದಿರಿ ಐತ್ಯೋ? ಗಂಡ ಕುದುರಿ ಐತ್ಯೋ ಅಂತ ಖರೆ ಹೇಳ್ಬೇಕು. ಒಂದು ವೇಳೆ ಸುಳ್ಳ ಹೇಳಿದ್ರೆ ನಿನ್ನ ತಲಿ ತಗಸ್ತೀನಿ ಅಂತ ಹೇಳ್ತಾನೆ’ ಆಗ ಪೂಜಾರಿ ಬಸವಣ್ಣನನ್ನು ಸ್ಮರಿಸಿಕೊಂಡು ಆ ಕುದುರೆಯ ಹೊಟ್ಟೆಯಲ್ಲಿ ಹೆಣ್ಣು ಕುದುರೆ ಮರಿ ಇದೆ ಎಂದು ಹೇಳುತ್ತಾನೆ. ಆಗ ಗೌಡ ವಾಲೀಕಾರರಿಗೆ ಆ ಕುದುರೆಯನ್ನು ಕಡಿದು ಪರೀಕ್ಷಿಸಲು ಆದೇಶ ಮಾಡುತ್ತಾನೆ. ಕುದುರೆಯನ್ನು ಪರೀಕ್ಷಿಸಲು ಕುದುರೆಯ ಹೊಟ್ಟೆಯಲ್ಲಿ ಹೆಣ್ಣು ಮರಿ ಇರುವುದು ಖಚಿತವಾಗುತ್ತದೆ. ಅದನ್ನು ಕಂಡ ಗೌಡ ಒಂದು ಕ್ಷಣ ಬೆರಗಾಗಿ ಪೂಜಾರಿಯನ್ನು ಕರೆದು ಆ ಕುದುರೆಯನ್ನು ಬದುಕಿಸಲು ಹೇಳುತ್ತಾನೆ. ಆಗ ಪೂಜಾರಿ ತನ್ನ ಚೀಲದಲ್ಲಿರುವ ಭಂಡಾರವನ್ನು ತೆಗೆದು ಬಸವಣ್ಣನನ್ನು ಸ್ಮರಿಸಿ ಅದರ ಮೇಲೆ ಹಾಕುತ್ತಾನೆ. ಆಗ ಕುದುರೆ ಎದ್ದು ನಿಲ್ಲುತ್ತದೆ. ಗೌಡ ಆ ಎಲ್ಲ ಘಟನೆಗಳನ್ನೂ ಕಣ್ಣು ಪಿಳಕಿಸದೇ ನೋಡುತ್ತಾನೆ. ಆಗ ಪೂಜಾರಿಗೆ ನಮಸ್ಕರಿಸಿ ನಿನ್ನ ಮಾತುಗಳು ದೇವರೇ ನುಡಿದ ಹಾಗಿವೆ. ನೀನು ನಮ್ಮ ಊರಿನಲ್ಲಿಯೇ ನೆಲೆಸಬೇಕು. ನಿನಗೆ ಉಂಬಳಿಯಾಗಿ ಭೂಮಿ ಮತ್ತು ಮನೆಯನ್ನು ಕೊಡುತ್ತೇನೆ. ಬಾಗೇವಾಡಿ ಪರಿಸರದ ಎಲ್ಲ ಒಕ್ಕಲಿಗರಿಗೆ ನೀನು ಮಳೆ, ಬೆಳೆಯ ಬಗ್ಗೆ ಭವಿಷ್ಯವನ್ನು ಹೇಳಬೇಕು ಎಂದು ವಿನಂತಿಸಿಕೊಳ್ಳುತ್ತಾನೆ. ಆಗ ಪೂಜಾರಿ ಗೌಡರ ಮಾತಿಗೆ ಒಪ್ಪಿಗೆ ನೀಡಿ, ತನ್ನ ಊರಿಗೆ ಹೋಗಿ ಊರಿನವರ ಅನುಮತಿಯನ್ನು ಪಡೆದುಕೊಂಡು ಕುಟುಂಬ ಸಮೇತ ಬಾಗೇವಾಡಿಗೆ ಬಂದು ನೆಲೆಸುತ್ತಾನೆ. ಅಂದಿನಿಂದ ಈರಕಾರರ ಕುಟುಂಬ ಯುಗಾದಿ, ಬಸವ ಜಯಂತಿ ಮತ್ತು ಶ್ರಾವಣ ಮಾಸದಲ್ಲಿ ಹೇಳಿಕೆ ಮಾಡುತ್ತಿದ್ದಾರೆ ಎಂಬ ಮಾಹಿತಿಯನ್ನು ಬಾಗೇವಾಡಿಯ ಮುಕ್ಕಣ್ಣ ಪೈತಾನ ಅವರು ವಿವರಿಸಿದರು.

ಮಳೆಗೆ ಸಂಬಂಧಿಸಿದ ಆಚರಣೆ : ಬಿಜಾಪುರ ಜಿಲ್ಲೆ ಬೆಳವಲನಾಡು ಆದ್ದರಿಂದ ಇಲ್ಲಿ ಮಳೆಯ ಪ್ರಮಾಣ ಸಾಮಾನ್ಯವಾಗಿ ಕಡಿಮೆ ಇರುತ್ತದೆ. ಕೆಲವರು ಇಂದು ಆಲಮಟ್ಟಿ ಆಣೆಕಟ್ಟಿನ ನೀರಿನಿಂದ ಬೆಳೆಯನ್ನು ಬೆಳೆಯುತ್ತಿದ್ದಾರೆ. ನೀರಾವರಿ ಸೌಲಭ್ಯ ಎಲ್ಲರಿಗೂ ದೊರೆತಿಲ್ಲ. ಬಾಗೇವಾಡಿ ಪರಿಸರದ ರೈತರು ಮಳೆಯನ್ನೇ ಅವಲಂಬಿಸಿ ಬೆಳೆ ಬೆಳೆಯುತ್ತಾರೆ. ಮುಂಗಾರು ಮಳೆ ಬೇಗನೆ ಬಾರದಿದ್ದರೆ ಹೊಲ ಗದ್ದೆಗಳಲ್ಲಿ ಬೀಜ ಬಿತ್ತದೇ ಇದ್ದರೆ ರೈತರು ಕಂಗಾಲಾಗುವುದು ಸಹಜ, ಬರಗಾಲು ಬಿದ್ದರೆ ದನ ಕರುಗಳ, ಮನುಷ್ಯರ ಸ್ಥಿತಿಗತಿಗಳೇನಾಗುತ್ತವೆ ಎಂಬ ಚಿಂತೆ ಸದಾ ಕಾಡುತ್ತಿರುತ್ತದೆ. ಈ ಹಿನ್ನೆಲೆಯಲ್ಲಿ ಮಳೆರಾಯನನ್ನು ಒಲಿಸಿಕೊಳ್ಳಲು ಅನೇಕ ಆಚರಣೆ ಸಂಪ್ರದಾಯಗಳನ್ನು ಮಾಡುವುದು ಸಹಜವಾಗಿ ಕಂಡುಬರುತ್ತದೆ.

ಮುಂಗಾರು ಮಳೆ ತಡವಾಗಹತ್ತಿದರೆ ಅಥವಾ ಪೈರು ಬೆಳೆಯುತ್ತಿರುವ ಸಂದರ್ಭದಲ್ಲಿ ಮಳೆ ಬಾರದಿದ್ದರೆ ಬಾಗೇವಾಡಿಯ ಜನತೆ ಬಸವಣ್ಣನ ಆರಾಧನೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿರುವುದು ಕಂಡುಬರುತ್ತದೆ. ಮಳೆ ಬರದೆ ಇದ್ದಾಗ ಕೆಲ ಪ್ರದೇಶಗಳಲ್ಲಿ ಕುಟುಂಬದ ಚೊಚ್ಚಲ ಮಗ ಗುರ್ಜಿಯಾಡುವ, ಹಾಲುಮತದ ಪೂಜಾರರು ಕಂಬಳಿ ಬೀಸಿ ಮಳೆ ಕರೆಯುವ, ಕತ್ತೆಗಳಿಗೆ ಹಾಗೂ ಕಪ್ಪೆಗಳಿಗೆ ಮದುವೆ ಮಾಡಿಸುವ ನಂಬಿಕೆ ಅನೇಕರಲ್ಲಿದೆ. ಮಳೆಗೆ ಸಂಬಂಧಿಸಿದ ಆಚರಣೆಗಳನ್ನು ಜಾತಿ ಮತ ಭೇದ ಭಾವವಿಲ್ಲದೆ ಆಚರಿಸುವುದುಂಟು. ಬಿಜಾಪುರ ಜಿಲ್ಲೆಯಲ್ಲಿ ಅನೇಕ ಮಳೆಪ್ಪ ಸ್ವಾಮಿಯ ಮಠಗಳಿವೆ. ಈ ಮಠಗಳಲ್ಲಿಯ ಸ್ವಾಮಿಗಳನ್ನು ಮಳೆ ತರಿಸುವ ಸ್ವಾಮಿಗಳೇ ಎಂದು ಅನೇಕರು ಭಾವಿಸಿಕೊಂಡಿದ್ದಾರೆ. ಆ ಪವಿತ್ರ ಸ್ಥಳಗಳಿಗೆ ಹೋಗಿ ಪೂಜೆ ಸಲ್ಲಿಸಿ ಹರಕೆ ಹೊತ್ತುಕೊಳ್ಳುವ ಕಾರ್ಯಗಳನ್ನು ಮಾಡುವುದುಂಟು.

ಬಾಗೇವಾಡಿಯ ಜನರು ಬಹಳ ದಿನಗಳವರೆಗೆ ಮಳೆ ಬಾರದೇ ಹೋದರೆ ೫, ೭, ೯ ಹಾಗೂ ೧೧ ದಿನಗಳವೆಗೆ ಭಜನೆ ಮಾಡುವ ಮೂಲಕ ಬಸವಣ್ಣ, ಶಿವ ಹಾಗೂ ಮಳೆರಾಯನನ್ನು ಒಲಿಸಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ಊರಿನ ಹಿರಿ ಕಿರಿಯರೆಂಬ ಭೇದ ಭಾವವಿಲ್ಲದೇ ಮಳೆರಾಯನನ್ನು ಸ್ವಾಗತಿಸುವುದಕ್ಕಾಗಿ ನಿರಂತರ ಭಜನೆ ಮಾಡುವುದನ್ನು ಕಾಣುತ್ತೇವೆ. ತಣ್ಣೀರಿನಿಂದ ಸ್ನಾನ ಮಾಡಿ ಒದ್ದೆ ಬಟ್ಟೆಯಲ್ಲಿಯಲ್ಲಿಯೇ ಬಸವಣ್ಣನ ಗುಡಿಯಲ್ಲಿ ಮಣೆಗಳನ್ನು ಹಾಕಿ ಅದರ ಮೇಲೆ ೫ ಜನರ ಗುಂಪು ನಿಂತುಕೊಂಡು ಭಜನೆ ಮಾಡುವರು. ಭಜನೆಯಲ್ಲಿ ತೊಡಗಿಕೊಂಡವರು ಸುಸ್ತಾದರೆ ಇನ್ನೊಂದು ತಂಡ ಸ್ನಾನ ಮಾಡಿ ಮಣಿಯ ಮೇಲೆ ನಿಂತು ಭಜನೆ ಮಾಡುವರು. ಇದು ನಿರಂತರವಾಗಿ ಅಂದರೆ ಮಳೆ ಬರುವವರೆಗೆ ನಡೆಯುತ್ತದೆ. ಯಾವುದೇ ಕಾರಣಕ್ಕೂ ಒಂದು ನಿಮಿಷಕ್ಕೂ ಬಿಡುವಿಲ್ಲದಂತೆ ಭಜನೆ ಮಾಡುವುದನ್ನು ಕಾಣುತ್ತೇವೆ. ಹೀಗೆ ಮಾಡುವುದರಿಂದ ಮಳೆರಾಯ ಖಂಡಿತವಾಗಿ ಒಲಿಯುತ್ತಾನೆಂಬ ನಂಬಿಕೆ ಇವರಲ್ಲಿದೆ. ಕೆಲವರು ಮಳೆಗಾಗಿ ಬಸವಣ್ಣನ ಗುಡಿ ಹಾಗೂ ಊರಿನ ಇತರೆ ದೇವಾಲಯಗಳ ಸುತ್ತ ನೀರು ಹಾಕಿ ಮಳೆರಾಯನನ್ನು ಕರೆಯುವುದು ಕಂಡುಬರುತ್ತದೆ. ಕೆಲವರು ಊರಿನ ಗ್ರಾಮದೇವತೆಗಳಿಗೆ ಉಡಿ ತುಂಬಿ ಅವಳನ್ನು ಸಂತೈಸಿ ಅವಳ ಮೂಲಕ ಮಳೆರಾಯನಿಗೆ ತಿಳಿಸಿ ಮಳೆ ಬರುವಂತೆ ಮಾಡುತ್ತೇವೆಂದು ತಿಳಿಸುತ್ತಾರೆ. ಹಾಲುಮತದ ಹಿರಿಯ ಪೂಜಾರಿಗಳು ಬಸವಣ್ಣ ಬೀರಪ್ಪ, ರೇವಣಸಿದ್ದ, ಅಮೋಗಸಿದ್ದ ಮುಂತಾದವರನ್ನು ಪೂಜಿಸಿ ಸ್ಮರಿಸಿ ಮಳೆ ಕರೆಯುವುದುಂಟು. ಹಿಂಗಾರು ಮಳೆ ಬಾರದಿದ್ದರೂ ಇಂತಹ ಆಚರಣೆಗಳನ್ನು ಮಾಡುವುದುಂಟು.

ರಾಶಿ ಮಾಡುವ ಆಚರಣೆ : ರೈತರು ಬೆಳೆದ ಪೈರನ್ನು ರಾಶಿ ಮಾಡುವಾಗ ಅನೇಕ ಆಚರಣೆಗಳನ್ನು ಮಾಡುತ್ತಾರೆ. ಇಂದು ಈ ಆಚರಣೆಗಳು ಕಡಿಮೆಯಾಗುತ್ತಿವೆ. ಇದಕ್ಕೆಲ್ಲ ಆಧುನಿಕತೆಯೇ ಕಾರಣ. ಹೊಲದಲ್ಲಿ ಪೈರು ಬೆಳೆದು ಅದು ಕಟಾವಿಗೆ ಬರುವುದಕ್ಕಿಂತ ಪೂರ್ವ ರೈತರು ಒಂದು ಒಳ್ಳೆಯ ಮೂಹೂರ್ತವನ್ನು ನೋಡಿಕೊಂಡು ಮೂರ್ನಾಲ್ಕು ಜನ ಹೊಲಗಳಿಗೆ ಹೋಗಿ ಪೂರ್ಣ ಚಂದ್ರನ ಹಾಗೆ ಕಣವನ್ನು ಕೆತ್ತುತ್ತಿದ್ದರು. ಕೆತ್ತಿದ ಮಣ್ಣನ್ನು ಹೊಲದ ಸಮೀಪಕ್ಕಿರುವ ರಸ್ತೆಯಲ್ಲಿ ಐದು ಸಣ್ಣ ಸಣ್ಣ ಗುಂಪುಗಳಾಗಿ ಹಾಕುವರು. ಹೀಗೆ ಮಾಡುವುದರಿಂದ ಆಯಗಾರರಿಗೆ ಇಲ್ಲಿ ಕಣ ಮಾಡಿದ್ದಾರೆಂದು ತಿಳಿಯಲಿ ಎಂಬ ಉದ್ದೇಶವೂ ಇವರದು. ರೈತರು ತಾವು ಬೆಳೆದ ಬೆಳೆಯಲ್ಲಿಯ ಸ್ವಲ್ಪ ಪ್ರಮಾಣದ ಬೆಳೆಯನ್ನು ಕೃಷಿ ಚಟುವಟಿಕೆಗಳಲ್ಲಿ ಸಹಾಯ ಮಾಡಿದ ಆಯಗಾರರಿಗೆ, ಊರಿನ ದೇವಾಲಯ ಹಾಗೂ ಮಠಗಳಲ್ಲಿ ಪೂಜೆ ಸಲ್ಲಿಸುವರಿಗೆ ನೀಡುವುದು ಇವರ ಸಂಪ್ರದಾಯ. ದಾನ ಮಾಡಲಿಕ್ಕೆಂದೇ ರೈತರು ಕರಿಕಣದ ರಾಶಿ ಮಾಡುತ್ತಾರೆ. ರೈತರು ಉತ್ತಿ, ಬಿತ್ತಿ ಬೆಳೆದ ಬೆಳೆಯಲ್ಲಿಯ ಸ್ವಲ್ಪ ಪ್ರಮಾಣದ ಕಾಳುಕಡಿಗಳನ್ನು ಇತರರಿಗೆ ಹಂಚಿ ತಾನೂ ತಿನ್ನುವ ಸಂಪ್ರದಾಯ ಬೆಳೆಸಿಕೊಂಡವರು.

ದುಂಡಾಗಿ ಕಣವನ್ನು ಕೆತ್ತಿದ ಮೇಲೆ ಅದರ ಮಧ್ಯದಲ್ಲಿ ಮೇಟೆಯನ್ನು (ಕಟ್ಟಿಗೆ ಕಂಬ) ನಿಲ್ಲಿಸುವರು. ಮೇಟಿ ನಿಲ್ಲಿಸಲು ತೆಗ್ಗುತೆಗೆದು ಅದರಲ್ಲಿ ಹಾಲು, ಮೊಸರು, ತುಪ್ಪ, ಸ್ವಲ್ಪ ಹಣವನ್ನು ಹಾಕಿ ಮೇಟಿಯನ್ನು ನಿಲ್ಲಿಸಿ; ಕಲ್ಲು, ಮಣ್ಣು ಹಾಕಿ ಗಟ್ಟಿಯಾಗಿ ನಿಲ್ಲುವಂತೆ ಹುಗಿಯುತ್ತಾರೆ. ಈ ಮೇಟಿಗೆ ದನಗಳನ್ನು ಕಟ್ಟಿ ಸುತ್ತಿಸುವುದರಿಂದ ಮೇಟೆ ಅತ್ಯಂತ ಗಟ್ಟಿಯಾಗಿರಬೇಕಾಗುತ್ತದೆ. ದನಗಳನ್ನು ಕಟ್ಟಿ ಹಂತಿ ಹೊಡೆಯುವಾಗ ಒಂದು ವೇಳೆ ಮೇಟಿ ಕಿತ್ತು ಬಂದರೆ ಅದನ್ನು ಅಪಶಕುನ ಎಂಬ ನಂಬಿಕೆ ಇದೆ. ಕಣವನ್ನು ಸಗಣಿಯಿಂದ ಸಾರಿಸುವರು ಒಂದು ಒಳ್ಳೆಯ ದಿನ ಮನೆಯಲ್ಲಿ ಸಿಹಿ ಅಡುಗೆ ಮಾಡಿ ಮನೆ ದೇವರಿಗೆ ಎತ್ತುಗಳಿಗೆ ಪೂಜೆ ಸಲ್ಲಿಸಿ, ೫ ಅಥವಾ ೯ ಜನ ಮುತ್ತೈದೆಯರನ್ನು ಹೊಲಕ್ಕೆ ಕರೆ ತಂದು ಅವರಿಂದ ಪೈರಿಗೆ ಪೂಜೆ ಸಲ್ಲಿಸಿ, ತೆನೆಗೆ ಹಾಲು, ಮೊಸರು, ತುಪ್ಪ ಎರೆದು ಐದು ತೆನೆಗಳನ್ನು ಕತ್ತರಿಸಿ ತಂದು ಕಣದಲ್ಲಿ ಹಾಕಿಸುವರು. ಮುತ್ತೈದೆಯರೆಲ್ಲರಿಗೆ ಊಟ ಹಾಕಿದ ಮೇಲೆ ಅವರು ಬೆಳೆದ ಬೆಳೆ ಹುಲಸಾಗಲಿ ಎಂದು ಹಾರೈಸುತ್ತಾರೆ. ನಂತರ ಕೂಲಿಯವರು ಮನೆಯವರು ಸೇರಿ ಪೈರನ್ನು ಕೊಯ್ದು ಕಣಕ್ಕೆ ಹಾಕುವರು. ಒಂದು ಒಳ್ಳೆಯ ಮುಹೂರ್ತ ನೋಡಿ ಹಂತಿಯನ್ನು ಕಟ್ಟುವರು. ಐದಾರು ಎತ್ತು ಹಾಗೂ ಇತರೆ ದನಗಳನ್ನು ಕಟ್ಟಿ ಹಂತಿ ಹೊಡೆಯುವರು.

ತೆನೆಯಿಂದ ಕಳು ಬೇರ್ಪಟ್ಟಾಗ ಕಾಳು ಮತ್ತು ಹೊಟ್ಟನ್ನು ಬೇರ್ಪಡಿಸಿ ಕಾಳಿನ ರಾಶಿ ಮಾಡುವರು. ಅದಕ್ಕೆ ಮದ ಎನ್ನುವರು ಭೂದಗನ ರಾಶಿ ಎಂದೂ ಕರೆಯುವರು. ಎತ್ತಿನ ಸಗಣಿ ಹಾಗೂ ಬಾಲದ ಜವೆಯನ್ನು ಚುಚ್ಚಿ ಭೂದಗನನ್ನು ರಾಶಿಯ ಮೇಲಿಟ್ಟು ಪೂಜಿಸುವರು. ಬೆಳೆ ಉತ್ತಮವಾಗಿ ಬೆಳೆದು ಕಾಳಿನ ರಾಶಿ ದೊಡ್ಡದಾಗಿದ್ದರೆ ಅದಕ್ಕೆ ಮಾಟ-ಮಂತ್ರ ಮಾಡಿಸಿ ‘ಬುರ್-ಬಶ್’ (ಕಾಳನ್ನು ಈಡಾಗದಂತೆ ಮಾಡುವುದು) ಮಾಡುವವರಿರುತ್ತಾರೆ. ಮದದ ರಾಶಿಯ ಮೇಲೆ ಭೂದಗನನ್ನು ಸ್ಥಾಪಿಸುವುದರಿಂದ ಮಾಟ ಮಂತ್ರಗಳ ಆಟ ನಡೆಯುವುದಿಲ್ಲ ಮತ್ತು ಯಾವ ಕಂಟಕಗಳು ಬರುವುದಿಲ್ಲ ಎಂಬ ನಂಬಿಕೆ ಇದೆ. ಕಣದ ಒಳಗೆ ಎಲ್ಲರಿಗೂ ಪ್ರವೇಶ ವಿರುವುದಿಲ್ಲ. ನಿರ್ದಿಷ್ಟ ಪಡಿಸಿದ ಜನರಿಗೆ ಮಾತ್ರ ಪ್ರವೇಶವಿರುತ್ತದೆಯಾದರೂ ಅವರು ಒಕ್ಕ ತಲೆಯಲ್ಲಿ ಕಣದೊಳಗೆ ಪ್ರವೇಶಿಸುವಂತಿಲ್ಲ. ತಲೆಗೆ ವಸ್ತ್ರ ಸುತ್ತಿಕೊಂಡೇ ಬರಬೇಕು. ಹೆಂಗಸರು ಸೀರೆ ಸೆರಗನ್ನು ತಲಯ ಮೇಲೆ ಹೊತ್ತಿಕೊಂಡಿರಬೇಕಾಗುತ್ತದೆ. ಗರ್ಭಿಣಿಯರು ಕಣದ ಒಳಗೆ ಬರುವಂತಿಲ್ಲ. ಒಟ್ಟಿನಲ್ಲಿ ರಾಶಿಯನ್ನು ತೂರಿ ಕಾಳುಗಳನ್ನು ಚೀಲಕ್ಕೆ ತುಂಬಿದ ನಂತರ ದಾನ ಮಾಡಲಿಕ್ಕಾಗಿ ಮೀಸಲಿಟ್ಟ ಕರಿಗಣದಲ್ಲಿರುವ ಕಾಳುಗಳನ್ನು ಆಯಗಾರರಿಗೆ ಇತರರಿಗೆ ನೀಡುವ ಸಂಪ್ರದಾಯವಿದೆ. ಕೆಲವರು ಮೇಟಿಗೆ ಸೀರೆ ಉಡಿಸಿ ಅವಳನ್ನು ಭೂಮಿ ತಾಯಿಯಂದು ತಿಳಿದು ಪೂಜಿಸುವುದುಂಟು.

ಆಧುನಿಕ ಯಂತ್ರೋಪಕರಣಗಳನ್ನು ಬಳಸಿಕೊಂಡು ಇಂದು ರಾಶಿ ಮಾಡುತ್ತಿರುವುದರಿಂದ ಕಣ ಕಡಿಯುವ, ಮುತ್ತೈದೆಯರಿಂದ ಪೂಜಿಸುವ ಮುಂತಾದ ಆಚರಣೆಗಳು ಮಾಯವಾಗುತ್ತಿವೆ. ಕಣ ಮಾಡಿ ಹಂತಿ ಕಟ್ಟಿ ಮೂರ್ನಾಲ್ಕು ದಿನಗಳವರೆಗೆ ಕಣದಲ್ಲಿದ್ದು, ಹಾಡು ಹೇಳಿ ರಾಶಿ ಮಾಡುತ್ತಿದ್ದ ಸಂಪ್ರದಾಯ ಇಂದು ಮಾಯವಾಗುತ್ತಿದೆ. ಕೇವಲ ಮೂರ್ನಾಲ್ಕು ತಾಸುಗಳಲ್ಲಿ ಕಾಳು ಹಾಗೂ ಹೊಟ್ಟನ್ನು ಬೇರ್ಪಡಿಸಿ ನೂರಾರು ಚೀಲಗಳಷ್ಟು ಕಾಳುಗಳನ್ನು ತುಂಬಿಸುವ ಯಂತ್ರಕ್ಕೆ ಇವರು ‘ರಾಕ್ಷಸ’ ಎಂದು ಕರೆಯುತ್ತಾರೆ.

ಲಕ್ಷ್ಮಿ ಹಾಗೂ ಜಕ್ಕಣಿಯರ ಆರಾಧನೆ : ಬಾಗೇವಾಡಿಯ ಅಗಸಿಯ ಮುಂದೆ ಕೋಟೆಗೆ ಅಂಟಿಕೊಂಡು ಗುಡಿ ಇದೆ ಎಂದು ಹೇಳಲಾಗುತ್ತದೆ. ಬಾಗೇವಾಡಿಯನ್ನು ಕಾಯಲು ಮತ್ತು ತೊಂದರೆಗಳನ್ನು ನೀಡಲು ಐವರು ಜಕ್ಕಣಿಯರಿದ್ದಾರೆಂದು ಮುಕ್ಕಣ್ಣ ಪೈತಾನ ಅವರು ಹೇಳುತ್ತಾರೆ. ಜಕ್ಕಣಿಯರಿಗೆ ಸಂಬಂಧಿಸಿದಂತೆ ಯಾವ ಗುಡಿಗಳೂ ಇಲ್ಲ. ಈ ಜಕ್ಕಣಿಯರನ್ನು ಕೋಟೆಯ ಲಕ್ಷ್ಮಿ ತನ್ನ ನಿಯಂತ್ರಣದಲ್ಲಿಟ್ಟುಕೊಂಡಿರುತ್ತಾಳೆ. ಮಳೆ ಬರದಿದ್ದರೆ, ಊರಲ್ಲಿ ರೋಗಗಳು ಹರಡಿಕೊಳ್ಳುತ್ತಿದ್ದರೆ, ಮಕ್ಕಳಿಗೆ ದೋಷಗಳಾದರೆ ದನಕರುಗಳಿಗೆ ತೊಂದರೆಯಾದರೆ, ಎಮ್ಮೆ ಆಕಳುಗಳು ಹಿಂಡದಿದ್ದರೆ ಜಕ್ಕಣಿಯರ ಕಾಟ ಪ್ರಾರಂಭವಾಗಿದೆ ಎಂದು ತಿಳಿದುಕೊಳ್ಳುತ್ತಾರೆ. ಅವರನ್ನು ಸಂತೃಪ್ತಿಗೊಳಿಸಲು ಕರಿದ, ಕಡಬು, ಹೋಳಿಗೆಯ ನೈವೇದ್ಯವನ್ನು ಕೊಡುತ್ತಾರೆ. ಮತ್ತೆ ಕೆಲವರು ಕುರಿ, ಕೋಳಿ ಬಲಿಕೊಟ್ಟು ತೃಪ್ತಿ ಪಡಿಸುವರು. ಜಕ್ಕಣಿಯರ ಹೆಸರಿನ ಮೇಲೆ ಊರ ಮುಂದಿನ ಕೋಟೆ ಬಾಗಿಲಿಗೆ ನೈವೇದ್ಯ ಬಲಿ ಅರ್ಪಿಸುವ ಸಂಪ್ರದಾಯವಿದೆಯಂದು ತಿಳಿಯುತ್ತದೆ. ಜಾತಿ ಮತದ ಭೇದವಿಲ್ಲದೆ ಜಕ್ಕಣಿಯರ ಹಾಗೂ ಲಕ್ಷ್ಮಿಯ ಆರಾಧನೆ ಮಾಡುತ್ತಾರೆ. ಹಾಗೂ ಹರಕೆಗಳನ್ನು ಹೊತ್ತುಕೊಳ್ಳುವರು.

ಹೋರಿಮಟ್ಟಿ ಬಸವಣ್ಣನಿಗೆ ಸಂಬಂಧಿಸಿದ ಆಚರಣೆಗಳು : ಬಸವಣ್ಣನ ತಾಯಿ ಗರ್ಭಿಣಿ ಇದ್ದಾಗ ಅವಳು ಈಗಿನ ಹೋರಿಮಟ್ಟಿ ಪ್ರದೇಶಕ್ಕೆ ಬಂದಿರುತ್ತಾಳೆ. ಅಲ್ಲಿ ಲಕ್ಷ್ಮಿ ಗುಡಿ ಇತ್ತು. ಅಲ್ಲಿಯೇ ಅವಳಿಗೆ ಹೆರಿಗೆ ಬೇನೆ ಪ್ರಾರಂಭವಾಯಿತು. ಹೀಗಾಗಿ ಬಸವಣ್ಣನವರು ಅಲ್ಲಿಯೇ ಜನಿಸಿದರು ಅದಕ್ಕಾಗಿ ಈ ಸ್ಥಳ ಪ್ರಸಿದ್ಧವಾದದ್ದು ಎಂದು ಹೇಳುತ್ತಾರೆ. ಮತ್ತೆ ಕೆಲವರು ಜೋಳದ ಹೊಡೆಯಿಂದ ಬಸವಣ್ಣನವರು ಈ ಪ್ರದೇಶದಲ್ಲಿ ಹುಟ್ಟಿಬಂದರು ಎಂಬ ಅಭಿಪ್ರಾಯ ಪಡುವರು. ಹೋರಿ ಮಟ್ಟಿಯಲ್ಲಿರುವ ನಂದಿ ಗುಡಿಯನ್ನು ಎಲ್ಲರೂ ಮೂಲ ಗುಡಿ ಎಂದು ಹೇಳುವರು. ಇಲ್ಲಿ ಅನೇಕ ಭಕ್ತರು ಆಗಮಿಸಿ ಹರಕೆಗಳನ್ನು ಹೊತ್ತುಕೊಳ್ಳುತ್ತಾರೆ. ಮಕ್ಕಳಾಗದಿದ್ದರೆ ಮಕ್ಕಳ ಭಾಗ್ಯಕ್ಕಾಗಿ ಬೇಡಿಕೊಂಡು ಮಕ್ಕಳಾದ ಮೇಲೆ ಹರಕೆ ತೀರಿಸುತ್ತಾರೆ. ಮದುವೆಯಾಗದಿದ್ದರೆ, ರೋಗ-ರುಜಿನಗಳು ಬಂದರೆ, ಹೊಲದಲ್ಲಿ ಬೆಳೆ ಚೆನ್ನಾಗಿ ಬೆಳೆಯದಿದ್ದರೆ ಹೀಗೆ ಹತ್ತಾರು ರೀತಿಯಲ್ಲಿ ತೊಂದರೆಗೊಳಗಾದವರು ಹರಕೆ ಹೊತ್ತುಕೊಳ್ಳುವರು, ಗಲ್ಲೀಪ, ಗಂಟೆ, ಬೆಳ್ಳಿಕೋಡು, ಕಣ್ಬಟ್ಟು ಮುಂತಾದವುಗಳನ್ನು ಈ ನಂದಿಗೆ ಕಾಣಿಕೆ ಕೊಡುವುದು ಕಂಡುಬರುತ್ತದೆ. ಇಲ್ಲಿಯೂ ದಾಸೋಹ ನಡೆಯುತ್ತದೆ. ಅಮಾವಾಸ್ಯೆ ಹಾಗೂ ಶ್ರಾವಣ ಮಾಸದಲ್ಲಿ ಅನೇಕ ಭಕ್ತರು ಇಲ್ಲಿಗೆ ಬಂದು ಪೂಜೆ ಸಲ್ಲಿಸುವರು. ದಾಸೋಹ ನಡೆಸಲು ಅನೇಕ ಭಕ್ತರು ಅಕ್ಕಿ, ಸಕ್ಕರೆ, ಬೆಲ್ಲ, ಗೋದಿ, ಜೋಳ, ಬೇಳೆ ಮುಂತಾದ ಆಹಾರ ಧಾನ್ಯಗಳನ್ನು ಕೊಡುತ್ತಾರೆಂದು ತಿಳಿಯುತ್ತದೆ. ಶ್ರಾವಣ ಮಾಸದ ಜಾತ್ರೆಯಲ್ಲಿ ಹಾಗೂ ಬಸವಜಯಂತಿಯಂದು ಈರಕಾರರು ಮೊದಲು ಈ ಸ್ಥಳದಲ್ಲಿ ಭವಿಷ್ಯ ಹೇಳುವ ಸಂಪ್ರದಾಯವಿದೆ.

ಬಾಗೇವಾಡಿಯಲ್ಲಿ ಬಸವಣ್ಣ ದ್ಯಾಮವ್ವ, ಲಕ್ಕವ್ವ, ಈರಕಾರ, ಬೀರಪ್ಪ, ಲಕ್ಷ್ಮಿದೇವಿ ಗೌರಿಗುಡಿ, ಪವಾಡ ಮುತ್ಯಾ, ಅಮಲಸಿದ್ದ ಮುಂತಾದ ದೇವಾಲಯಗಳಿವೆ. ವಿರಕ್ತಿಮಠ, ಮಹಾರಾಜರ ಮಠ, ಗಾಯತ್ತಿ ಮಠ ಮುಂತಾದ ಮಠಗಳಿವೆ. ಈ ಎಲ್ಲ ದೇವಾಲಯ ಹಾಗೂ ಮಠಗಳಲ್ಲಿ ಅನೇಕ ಧಾರ್ಮಿಕ ಆಚರಣೆ, ಸಂಪ್ರದಾಯಗಳಿವೆ. ಭಾವೈಕ್ಯತೆಯ ಸಂಕೇತವಾಗಿ ಆಚರಿಸುವ ಮೊಹರಂ ಹಬ್ಬವನ್ನು ಜಾತಿ ಮತ, ಭೇದ ಭಾವವಿಲ್ಲದೆ ಎಲ್ಲರೂ ಸೇರಿ ಈ ಹಬ್ಬವನ್ನು ಆಚರಿಸುವುದಂಟು.

ಧಾರ್ಮಿಕವಾಗಿ, ಸಾಂಸ್ಕೃತಿಕವಾಗಿ ಹೆಸರುವಾಸಿಯಾಗಿರುವ ಬಾಗೇವಾಡಿ ಪರಿಸರದಲ್ಲಿ ಕಂಡುಬರುವ ಆಚರಣೆ ಸಂಪ್ರದಾಯಗಳನ್ನೆಲ್ಲ ಈ ಲೇಖನದಲ್ಲಿ ಉಲ್ಲೇಖಿಸಲು ಸಾಧ್ಯವಾಗುವುದಿಲ್ಲ. ನಾನು ಮಾಹಿತಿದಾರರಿಂದ ಸಂಗ್ರಹಿಸಿದ ಮಾಹಿತಿಯನ್ನಿಟ್ಟುಕೊಂಡು ಈ ಪ್ರದೇಶದ ಧಾರ್ಮಿಕ ಹಾಗೂ ಕೃಷಿಗೆ ಸಂಬಂಧಿಸಿದ ಕೆಲ ಆಚರಣೆ-ಸಂಪ್ರದಾಯಗಳನ್ನು ಹೇಳಲು ಪ್ರಯತ್ನಿಸಿದ್ದೇನೆ ನಮ್ಮ ಪರಂಪರೆ, ಪಾರಂಪರಿಕ ಜ್ಞಾನ ಇವು ಆಚರಣೆ ಸಂಪ್ರದಾಯಗಳು ಹೇಗಿದ್ದವು ಎಂದು ತಿಳಿದುಕೊಳ್ಳುವ ಸಣ್ಣ ಪ್ರಯತ್ನ ಮಾಡಲಾಗಿದೆ. ಆಧುನಿಕತೆಯ ಇಂದಿನ ಯುಗದಲ್ಲಿ ಅನೇಕ ಆಚರಣೆ ಸಂಪ್ರದಾಯಗಳು ಮಾಯವಾಗುತ್ತಿವೆ. ಕೆಲವು ಪರಿವರ್ತನೆಗೊಳ್ಳುತ್ತಿವೆ.

ಕೃಷಿ ಸಂಸ್ಕೃತಿಯೇ ಪ್ರಧಾನವಾಗಿರುವ ಈ ಪ್ರದೇಶದಲ್ಲಿ ಕೃಷಿಗೆ ಸಂಬಂಧಿಸಿದ ಆಚರಣೆ ಸಂಪ್ರದಾಯಗಳು ಹೆಚ್ಚಿನ ಸಂಖ್ಯೆಯಲ್ಲಿ ದೊರೆಯುತ್ತವೆ. ಕೃಷಿಗೆ ಸಂಬಂಧಿಸಿದ ಆಚರಣೆ ಸಂಪ್ರದಾಯಗಳೆಲ್ಲವೂ ನಿಸರ್ಗ ಮೂಲದಿಂದಲೇ ಬಂದಿವೆ. ಊರಿನಲ್ಲಿರುವ ಎಲ್ಲ ದೈವಗಳನ್ನು ಕೃಷಿಕರು ಕೃಷಿ ಮೂಲದ ದೈವಗಳೆಂದು ತಿಳಿದು ಆರಾಧಿಸುವುದನ್ನು ಅವರ ಆಚರಣೆಗಳ ಮೂಲಕ ಕಂಡುಕೊಳ್ಳಬಹುದು.