ಕ್ರಿ.ಶ. ೧೨ನೇ ಶತಮಾನ ಕರ್ನಾಟಕದ ಜನಜೀವನದಲ್ಲಿ ಒಂದು ವಿಪ್ಲವದ ಕಾಲ, ಅದರಲ್ಲಿ ಇಡೀ ನಾಡಿನ ಜನಸಮುದಾಯ ತಿಳಿದೋ ಮತ್ತು ತಿಳಿಯದೆಯೋ ಪಾಲ್ಗೊಂಡರು. ನಾಡಿನಲ್ಲಿ ಕ್ರಾಂತಿ ಎಂದರೆ ನಾಡಿನಾಡಿಗೂ ವಿಶೇಷ ಬಡಿತ-ತುಡಿತ, ಮನಮನಕ್ಕೂ ಮನೆಮನೆಗೂ ಮಾನಸಿಕ ಒತ್ತಡ. ಪ್ರತಿಯೊಬ್ಬರಿಗೂ ಇಲ್ಲದ ಹಲವಾರು ಚಿಂತೆ-ಬೊಂತೆ. ಅವರವರಿಗೆ ಹಾಸಲುಂಟು ಹೊದೆಯಲುಂಟು. ತನು, ಮನ, ಧನ, ಎಲ್ಲಕ್ಕೂ ಕೆಲಸ. ಕೆಲವರು ಮಹಾತ್ಮಗಾಂಧಿಯಂತಹರು ಎಲ್ಲವನ್ನೂ ತ್ಯಾಗ ಮಾಡುತ್ತಾರೆ ಮತ್ತೆ ಕೆಲವರು ಏನೆಲ್ಲವನ್ನು ಬಾಚಿಕೊಳ್ಳುತ್ತಾರೆ. ತನುವಂಚನೆ, ಮನವಂಚನೆ, ಧನವಂಚನೆ ಏನೆಲ್ಲವನ್ನು ವಂಚಿಸುತ್ತಾರೆ. ಬಸವಣ್ಣನವರು ಒಂದು ವಚನದಲ್ಲಿ ಹೀಗೆ ಹೇಳಿದ್ದಾರೆ.

ಭಕ್ತಿ ಎಳ್ಳನಿತಿಲ್ಲ; ಯುಕ್ತಿ ಶೂನ್ಯನಯ್ಯಾ ನಾನು
ತನುವಂಚಕ, ಮನವಂಚಕ, ಧನವಂಚಕ ನಾನಯ್ಯ
ಕೂಡಲಸಂಗಮದೇವಾ ಒಳಲೊಟ್ಟೆ ಎನ್ನಮಾತು! (ಬವದೀ ೩೦೬)
ಅಣ್ಣ ಹೀಗೇಕೆ ಹೇಳಿದರು? ಅವರೇ ಹೆಳಿದ್ದಾರೆ;
ಎನ್ನ ಭಕ್ತನೆಂಬರು;
ಎನ್ನ ಹೊಱಹಂಚೆ ಕುಳಖೊಳ್ಳೆತನವಱೆಯರಾಗಿ
ಎನ್ನ ಮಾನಾಪಮಾನವು ಶರಣರಲ್ಲಿ; ಜಾತಿ ವಿಜಾತಿಯು
ಶರಣರಲ್ಲಿ; ತನುಮನಧನ ಶರಣರಲ್ಲಿ;
ವಂಚನೆಯುಳ್ಳ ಡಂಭಕ ನಾಣು,
ತಲೆಯೊಡೆಯಂತೆ ಕಣ್ಣ ಬೈಚಿಡುವೆ
ಕೂಡಲಸಂಗಮದೇವಾ (ಬವದೀ ೩೦೫)

ಲೋಕದ ಜನ ಬಸವಣ್ಣನವರನ್ನು ಕುರಿತಂತೆ ಸ್ತತಿನಿಂದೆಗಳ ಮಾತನ್ನು ಆಡಿದಾಗ ಯಾವನೋ ಒಬ್ಬ ವ್ಯಕ್ತಿಯು ಸ್ಪಂದಿಸುವಂತೆ ಅವರೂ ಸ್ಪಂದಿಸಿದ್ದಾರೆ. ಸಮಯಕ್ಕೆ ತಕ್ಕಂತೆ ಸೂಕ್ತ ಉತ್ತರ ನೀಡಿದ್ದಾರೆ. ಹಾಗೆ ಮಾಡುವಾಗ ಸದುವಿನಯವನ್ನು ಎಂದೂ ಮರೆತಿಲ್ಲ. ಆಕಸ್ಮಾತ್ ಧಾರ್ಷ್ಟ್ಯದ ಮಾತುಗಳು ಬಂದಿದ್ದರೆ, ಅಸಂಗತ ಸಂಗತಿಗಳು ನಿರೂಪಿತವಾಗಿದ್ದರೆ, ವಿಮರ್ಶಕ ಹತ್ತು ಸಲ ಸಂಯೋಚಿಸಬೇಕು. ಏನಾದರೊಂದು ಹೇಳಿಕೆಯನ್ನು ನೀಡುವ ಸಂದರ್ಭದಲ್ಲಿ, ಬಸವಣ್ಣನವರ ವಚನಗಳ ವಿಮರ್ಶೆ ಮಾಡಲೇಬೇಕಾದ ವ್ಯಕ್ತಿ ಇಡೀ ಸಮಕಾಲೀನ ಸಾಹಿತ್ಯವನ್ನು ಪರಾಮರ್ಶಿಸಬೇಕು.

ರಾಜ್ಯದಲ್ಲಿ ಆಡಳಿತ ಬದಲಾದಾಗ ಅನೇಕ ಬದಲಾವಣೆಗಳು ಆಗುತ್ತವೆ; ಇದು ಲೋಕದ ಸ್ವಭಾವ. ಇನ್ನು ಪ್ರಾಚೀನ ಕಾಲದಲ್ಲಿ ನಿರಂಕುಶ ಆಡಳಿತಗಳ ಕಾಲದಲ್ಲಿ ಯುದ್ಧಗಳು, ಗೆಲವುಗಳು, ಹಂಪೆಗಳು ಕೊಂಪೆಗಳಾಗುವುದು, ಕೊಂಪೆಗಳು ಹಂಪೆ, ಹಸ್ತಿನಾವತಿಗಳಾಗುವುದು ಮತ್ತೆ ರಾಜ ಹಾಗೂ ಅವನ ಸಪ್ತಾಂಗ

[i. ಸ್ವಾಮಿ ಅಮಾತ್ಯ, ಜನಪದ, ದುರ್ಗ, ಕೋಶ, ದಂಡ ಹಾಗೂ ಮಿತ್ರ (ಅರ್ಥಶಾಸ್ತ್ರ : ೫೭-೬-೧) ii. ಸ್ವಾಮಿ, ಅಮ್ಮಾತ್ಯ, ಸುಹೃತ್, ಕೋಶ, ರಾಷ್ಟ್ರ, ದುರ್ಗ ಹಾಗೂ ಬಲ (ಅಮರಕೋಶ: ದ್ವಿತೀಯಕಾಂಡ, viii, ಕ್ಷತ್ರಿಯವರ್ಗ, ಶ್ಲೋಕ-೪೮೨ & ೪೮೩: ಸ್ವಾಮ್ಯಮಾತ್ಯ ಸುಹೃತ್ಯೋಶ ರಾಷ್ಟ್ರ ದುರ್ಗ ಬಲಾನಿಚ|| ರಾಜ್ಯಾಂಗಾನಿ)].

ಏನೆಲ್ಲವೂ ಹೊಸದೊಂದು ವಾತಾವರಣವನ್ನೇ ಸೃಷ್ಟಿಸುತ್ತಿದ್ದವು- ಸೃಷ್ಟಿಸುತ್ತವೆ. ರಾಜನ ಜೊತೆಗೆ ಸಹಸ್ರಾರು ಜನರ ವಲಸೆ, ವಸತಿ ಸ್ಥಳಾಂತರವಾಗುತ್ತಿದ್ದವು. ಕಲ್ಯಾಣದ ಚಾಳುಕ್ಯರು ಮೂಲತಃ ಈಗಿನ ಆಂಧ್ರಪ್ರದೇಶ ವಾರಂಗಲ್ ಜಿಲ್ಲೆಯ ಹನುಮಕೊಂಡ ರಾಜಧಾನಿಯಿಂದ ಮಳಖೇಡಕ್ಕೆ ಅರ್ಥಾತ್ ಸಾಮ್ರಾಜ್ಯದ ರಾಜಧಾನಿಗೆ ಬಂದರು. ಆ ಸಂದರ್ಭದಲ್ಲಿ ಅವರ ಜೊತೆಗೆ ಅವರಿಗೆ ಬೇಕಾದ ಸಿಬ್ಬಂದಿಯೂ ವಲಸೆ ಬಂದಿತು. ಹೀಗೆ ವಲಸೆ ಬಂದ ಮನೆತನಗಳಲ್ಲಿ ವಾಜಿಕುಲದ ಮನೆತನಗಳು ಕರ್ನಾಟಕದ ಹಲವು ಸ್ಥಳಗಳಿಗೆ ವಲಸೆ ಬಂದ ಮನೆತನಗಳಲ್ಲಿ ವಾಜಿಕುಲದ ಮನೆತನಗಳು ಕರ್ನಾಟಕದ ಹಲವು ಸ್ಥಳಗಳಿಗೆ ವಲಸೆ ಬಂದವು. ಈ ಮನೆತನಗಳು ವಿಶೇಷವಾಗಿ ನಮ್ಮ ನಾಡಿನಿಂದ ಈಗಿನ ಆಂಧ್ರಪ್ರದೇಶದ ಚಿತ್ತೂರು ದಾನಚಿಂತಾಮಣಿ ಅತ್ತಿಮಬ್ಬೆಯ ತವರಿನವರು, ಅತ್ತೆಯ ಮನೆಯವರು ಪೆಂಗನೂರು ಇತ್ಯಾದಿ ಸ್ಥಳಗಳಿಂದ ಕಡಪ, ಪ್ರಕಾಶಂ ಜಿಲ್ಲೆ, ಕೃಷ್ಣಾ ಹಾಗೂ ಗುಂಟೂರು ಇತ್ಯಾದಿ ಪ್ರದೇಶದಿಂದ ತಾವು ಆಡಳಿತ ನಡೆಸುತ್ತಿದ್ದ ಸ್ಥಳಗಳಿಗೆ ವಲಸೆ ಹೋಗಿ ನಿಂತರು. ಬಸವಣ್ಣನವರ ಮನೆತನದ ಹಿರಿಯರೂ ಹೀಗೆ ವಲಸೆ ಬಂದವರು ಕರ್ನಾಟಕಕ್ಕೆ. ಇದು ಬಸವಣ್ಣವರ ಅಕ್ಕ ಅಕ್ಕ ನಾಗಮ್ಮನವರ ಒಂದು ವಚನದಿಂದ ಸ್ಪಷ್ಟವಿದೆ.

ಗುರು ಸಂಬಂಧಿ ಗುರುಭಕ್ತಯ್ಯನು;
ಲಿಂಗಸಂಬಂಧಿ ಪ್ರಭುದೇವರು;
ಜಂಗಸಂಬಂಧಿ ಮರುಳ ಶಂಕರದೇರು;
ಪ್ರಾಣಲಿಂಗಸಂಬಂಧಿ ಅನಿಮಿಷ ದೇವರು;
ಶರಣಸಂಬಂಧಿ ಘಟ್ಟಿವಾಳಯ್ಯನು;
ಐಕ್ಯಸಂಬಂಧಿ ಅಜಗಣ್ಣಯ್ಯನು;
ಸರ್ವಾಚಾರ್ಯ ಸಂಬಂಧಿ ಚೆನ್ನಬಸವಣ್ಣನು;
ಇಂತಿವರ ಸಂಬಂಧ ಎನ್ನಸರ್ವಾಂಗದಲ್ಲಿ ನಿಂದು
ಬಸವಣ್ಣ ಪ್ರಿಯ ಚೆನ್ನಸಂಗಯ್ಯನ
ಹೃದಯ ಕಮಲದಲ್ಲಿ ನಿಜನಿವಾಸಿಯಾಗಿದ್ದನು (ಶಿ..ಸಂ.ವಚನ ೨೧೦)

ಇಲ್ಲಿ ಬಂದಿರುವ ಶಿವಶರಣರ ಸಂಕುಲದಲ್ಲಿನ ಮೊದಲನೆಯವನು “ಗುರುರಭಕ್ತಯ್ಯ” ಬಹಳ ಮಹತ್ವದ ವ್ಯಕ್ತಿ. ಈತ ಆಂಧ್ರಪ್ರದೇಶದಲ್ಲಿ ಪೂರ್ವ ಕರಾವಳಿಯಲ್ಲಿನ ಅನೇಕ ಆರಾಧ್ಯ ಶೈವ ದೀಕ್ಷಿತರ ಮನೆಗಳಲ್ಲಿ ಇಂದಿಗೂ ಪೂಜೆಗೊಳ್ಳುತ್ತಿರುವ ಶಿವಶರಣ. ಇಂತಹ ಒಂದು ಪೂಜೆ ಸಂದರ್ಭದಲ್ಲಿ ಪಾಲ್ಕೋಲಿನಲ್ಲಿನ ಭಕ್ತರ ಮನೆಯಲ್ಲಿ ನಾನು ಪ್ರಸಾದವನ್ನು ಸವಿದಿದ್ದೇನೆ. ಆದುದರಿಂದ ಗುರುಭಕ್ತಯ್ಯ ತೆಲುಗು ದೇಶದ ಪ್ರಾಚೀನ ಶಿವಶರಣ. ಪೊನ್ನನ ಶಾಂತಿಪುರಾಣದಿಂದ ನಮಗೆ ನಮ್ಮ ನಾಡಿ ಒಂದು ಸುಂದರ ವರ್ಣನೆ ಉಪಲಬ್ಧವಿದೆ. ಅದು ಇಂದಿನ ಚಿತ್ತೂರ ಜಿಲ್ಲೆಯ ಪ್ರದೇಶವಾಗಿದೆ. ಆಂದ್ರಪ್ರದೇಶದಲ್ಲಿ ಹರಿಯುತ್ತಿರುವ ಕೃಷ್ಣಾ ನದೀ ತಟದಲ್ಲಿನ ಪ್ರಸಿದ್ಧ ಶಿವಕ್ಷೇತ್ರ ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದೂ ಆದ ಶ್ರೀಶೈ ಮೂಲತಃ ವೀರಶೈವ ಸಂಪ್ರದಾಯದ ಅತ್ಯಂತ ಮಹತ್ವದ ಕೇಂದ್ರ. ಡೋಹರ ಕಕ್ಕಯ್ಯ ತನ್ನ ಅಂಕಿತವನ್ನು ಅಭಿನವ ಮಲ್ಲಿಕಾರ್ಜುನ ಎಂದು ಹೊಂದಿರುವುದ, ತತ್ಪೂರ್ವದಲ್ಲಿ ಇದ್ದ ಮಲ್ಲಿಕಾರ್ಜುನ ಅಂತಿಕ ಉಳ್ಳ ಒಬ್ಬ ಶಿವಶರಣನನ್ನು ಸೂಚಿಸುತ್ತದೆ. ಆತ ಯಾರು ಎಂಬುದು ಈಗ ಸ್ಪಷ್ಟವಿಲ್ಲದಿದ್ದರೂ ವಚನ ಸಾಹಿತ್ಯದ ಉಗಮದ ದೃಷ್ಟಿಯಿಂದ ಬಹಳ ಮಹತ್ವದ ಗಮನಾರ್ಹವಾದ ಸಂಗತಿಯಾಗಿದೆ. “ಅಭಿನವ” ಎಂಬ ಶಬ್ದದ ಜೋಡಣೆ ಈ ವಿಷಯದ ಮೇಲೆ ಬೆಳಕನ್ನು ಚೆಲ್ಲುತ್ತದೆ. ಶ್ರೀಶೈಲ ಹಾಗೂ ಆ ಕಡೆಯಿಂದ ಶೈವ ವೀರಶೈವ ಸಂಪ್ರದಾಯ ಉತ್ತರಕ್ಕೆ ಹರಿದು ಬಂದಿತು. ಸಿದ್ಧರಾಮೇಶ್ವರರ “ಕಪಿಲಸಿದ್ಧ ಮಲ್ಲಿಕಾರ್ಜುನ” ಅಂಕಿತವೂ ಇದನ್ನೇ ಸೂಚಿಸುತ್ತದೆ. ಅತೀ ಪುರಾತನರು ಅವರ ನೆನಹು ಬಸವಣ್ಣನವರ ವಚನಗಳಲ್ಲಿ ಬಂದಿದೆ.

ಶಿವಶರಣೆನಿಂಬವ್ವೆ
ಎಮ್ಮ ತಾಯಿ ನಿಂಬವ್ವೆ ನೀರನೆಱೆದುಂಬಳು,
ಎಮ್ಮಯ್ಯ ಚೆನ್ನಯ್ಯ, ರಾಮಕಂಪಣವ ಹೇರುವ,
ಎಮಗಾರೂ ಇಲ್ಲವೆಂಬಿರಿ
ಎಮ್ಮಕ್ಕ, ಕಂಚಿಯಲ್ಲಿ ಬಾಣಸವ ಮಾಡವಳು,
ಎಮಗಾರೂ ಇಲ್ಲವೆಂಬಿರಿ
ಎಮ್ಮ ಅಜ್ಜರಜ್ಜರು ಹಡೆದ ಭಕ್ತಿಯ
ನಿಮ್ಮ ಕೈಯಲು ಕೊಂಬೆ ಕೂಡಲಸಂಗಮದೇವಾ (ಬವಚೀ ೩೫೧)
ಎಲ್ಲಾ ಪುರಾತರು ನೆರೆದು ಭಕ್ತಿಭಿಕ್ಷೆಯನಿಕ್ಕಿದಡೆ
ಎನ್ನ ಪಾತ್ರೆ ತುಂಬಿತ್ತು (ಬವದೀ ೩೪೯)

ಇಲ್ಲಿ ಬಂದಿರುವ ‘ಎಲ್ಲಾ ಪುರಾತರು’ ‘ಅಜ್ಜರಜ್ಜರು’ ಎಂಬ ಪೂರ್ವದ ಪ್ರಸ್ತಾಪಗಳು ವಚನ ಸಾಹಿತ್ಯದ ಅಭ್ಯಾಸಿಗಳು ಅತ್ಯಂತ ಎಚ್ಚರದಿಂದ ನೋಡಬೇಕು. ಉಡಾಫೆ ಬರಹಗಾರರ, ಏನನ್ನೋ ಹೊಸದಾಗಿ ಸೃಷ್ಟಿಸಬೇಕೆಂಬ ಸೃಜನಶೀಲರ ಮಾತು ಬೇರೆ. ಪರಂಪರೆಯ ಅರಿವಿಲ್ಲದೆ ಬರೆದರೆ ಅದು ಮುಂದೆ ನಿಲ್ಲದು. ಚರಿತ್ರೆಯನ್ನು ಒಬ್ಬರು ತಿರುಚಿದರೆ ತಿರುಚಿ ಬೀಳದು. ಶೃಂಖಲಾಬದ್ಧ ಇತಿಹಾಸ ನಿಲ್ಲುತ್ತದೆ. ಸದ್‌ವಿಚಾರಗಳು ಜೀವಂತವಾಗಿ ನಿಲ್ಲುತ್ತವೆ-ಮಾನಿತವಾಗುತ್ತವೆ.

ಇಱಿಸಿಕೊಂಡು ಭಕ್ತರಾದರೆಮ್ಮವರು;
ತಱಿಸಿಕೊಂಡು ಭಕ್ತರಾದರೆಮ್ಮವರು;
ಕೊಱೆಸಿಕೊಂಡು ಭಕ್ತರಾದರೆಮ್ಮವರು;
ಜಱೆಸಿಕೊಂಡು ಭಕ್ತರಾದರೆಮ್ಮವರು;
ಕೂಡಲ ಸಂಗನ ಶರಣರಿಗೆ ಮುಳಿಸತಾಳಿ
ಎನ್ನ ಭಕ್ತಿ ಅರೆಯಾಯಿತ್ತು. (ಬವದೀ ೨೫೫)

ಭಕ್ತರಾಗುವುದು ಸುಲಭವಲ್ಲ, ಶಿವ ನಾನಾ ಪರಿಯಿಂದ ಅವರನ್ನು ಪರೀಕ್ಷಿಸುತ್ತಾನೆ. ಎಂತಹ ಕಠಿಣ ಪರೀಕ್ಷೆಗಳಿಗೂ ಅಂಜದೆ ಅಳುಕದೆ ಎದುರಿಸಿ ಪ್ರಾಣ ತೆರಬೇಕಾಗುತ್ತದೆ. ಹೀಗೆ ಅಂಜದೆ ತಮ್ಮನ್ನೇ ಒಪ್ಪಿಸಿದವರಿಗೆ ಮಾತ್ರ ಶಿವನು ಒಲಿಯುತ್ತಾನೆ. ಇಲ್ಲೆಲ್ಲ ಪ್ರಸ್ತಾಪಿಸಲಾರದವರು ತಮಿಳುನಾಡಿನ ಅರವತ್ತುಮೂರು (೬೩) ಪುರಾತನರು. ಸೇದಿರಾಜ (ಇಱಿಸಿಕೊಂಡ ಭಕ್ತರು), ಮೊನೆಯಿಡು ನಾಯನಾರ್ (ತಱಿಸಿ=ಕತ್ತರಿಸಿಕೊಂಡ ಭಕ್ತರು), ಸಿಂಧುಮರಾಳ (ಕೊಱೆಸಿಕೊಂಡ ಭಕ್ತರು), ನೀರುನೀಲಕಂಠ (ಜಱೆಸಿಕೊಂಡು ಭಕ್ತರು) ಹೀಗೆಯೇ ಇನ್ನೂ ಹಲವು ಜನ ಪುರಾತನರನ್ನು ಬಸವಣ್ಣನವರು ಅಲ್ಲಲ್ಲಿ ನಿದರ್ಶನಕ್ಕೆಂದು ಉಲ್ಲೇಖಿಸಿದ್ದಾರೆ-ಸ್ಮರಿಸಿಕೊಂಡಿದ್ದಾರೆ; ಚೆನ್ನ, ಚೇರಮ (೩೩೭), ರಿರುನೀಲಕಂಠ (ಅರುವತ್ತು ಮೂವರು ಪುರಾತನರಲ್ಲಿ ಈತ ಮೊದಲಿಗ) ಚೋಳ ದೇಶದ ಪೊನ್ನಾಂಬಲನಾಥನ ಪರಮಭಕ್ತ (ಬವದೀ ೨೫೫).

ಸೌಂದರನಂಬಿ ಪರಮ ಶಿವಭಕ್ತ, ಚೋಳದೇಶದ ತಿರುವಾವಲೂರಿನವನು. ತಂದೆ ಜಡ್ವೆ ನಾಯನಾರು ಮತ್ತು ತಾಯಿ ಯಸ್ಯದೇವಿ. ಶಿವನು ಇವನಿಗೆ ಕುಂಟಣಿ ಆಗಿ ವರ್ತಿಸುತ್ತಾನೆ. ಮೊನೆಯಾಂಡರು ಪರಮ ಶಿವಭಕ್ತ, ಪೊಳಲ್ಚೋಳನ ಸೈನ್ಯದಲ್ಲಿ ಇದ್ದ. ಈ ಯೋಧ ಸಾವಿರ ಹೊನ್ನನ್ನು ಪಡೆದು ಅದನ್ನು ಜಂಗಮ ದಾಸಹೋಹಕ್ಕೆ ವಿನಿಯೋಗಿಸುತ್ತಿದ್ದ (ಬವದೀ ೨೫೫). ತೆಲುಗು ಬೊಬ್ಬಯ್ಯ ತೆಲುಗು ದೇಶದವನು. ಬೇಟೆಕಾಯಕದಲ್ಲಿ ನಿರತನಾಗಿದ್ದ. ಕೊಂಡಗುಳಿ ಕೇಶಿರಾಜ ಇವನ ಮನೆಯಲ್ಲಿ ಮಾಂಸವನ್ನು ಕಂಡು ಲಿಂಗಪೂಜೆ ಮಾಡದೇ ಹಿಂದಿರುಗುತ್ತಾನೆ. ಲಿಂಗಪೂಜೆಯ ಸಮಯದಲ್ಲಿ ಲಿಂಗನುಡಿ ಒಂದು ಕೇಳಿಬರುತ್ತದೆ-ಬೊಮ್ಮಯ್ಯನ ಮನೆಯಲ್ಲಿ ಪೂಜಿಸಲು ತಿಳಿಸುತ್ತದೆ (ಬವದೀ ೬೫).

ಮಾದರ ಚನ್ನಯ್ಯ ಕಂಚಿಯ ಕರಿಕಾಲಚೋಳರಾಜನ ಕುದುರೆಯ ಲಾಯದಲ್ಲಿ ಸೇವೆಗಿದ್ದ; ಲಾಯಕ್ಕೆ ಹುಲ್ಲನ್ನು ಒದಗಿಸುತ್ತಿದ್ದ ಗುಪ್ತ ಭಕ್ತ. ಇವನು ಶಿವನಿಗೆ ನಿತ್ಯ ಅಂಬಲಿಯನ್ನು ಅರ್ಪಿಸಿ ಉಣ್ಣುತ್ತಿದ್ದ.

ಮಾದಾರ ಚನ್ನಯರು ಎಷ್ಟು ಮಂದಿ ಎಂಬ ಪ್ರಶ್ನೆ ನಮ್ಮ ಮುಂದೆ ನಿಲ್ಲುತ್ತದೆ. ಇದಕ್ಕೆ ಕಾರಣ ಕರಿಕಾಲಚೋಳ ದೊರೆಯ ಕಾಲ. ಮತ್ತೆ “ಕಯ್ಯಳಿಗತ್ತಿ ಅಡಿಗೂಂಟಿ ಕಡೆಯಾಗಬೇಡ ಅರಿ ನಿಜಾತ್ಮರಾಮ ರಾಮನಾ” ಎಂಬ ಅಂಕಿತದಿಂದ ಕನ್ನಡದಲ್ಲಿ ವಚನಗಳನ್ನು ಬರೆದ ವ್ಯಕ್ತಿ. ಕರಿಕಾಲ ಚೋಳ ಏನಿಲ್ಲವೆಂದರೂ ಕ್ರಿ.ಶ. ೧೦ನೆಯ ಶತಮಾನಕ್ಕಿಂತ ಮುಂಚೆ ಇದ್ದ. ಬಸವಣ್ಣನವರ ಸಮಕಾಲೀನ ಆಗಿರಬೇಕು ಈ ಕನ್ನಡದ ವಚನಕಾರ, ಉಪಲಬ್ಧ ವಚನಗಳ ಭಾಷೆಯಂತೂ ಅಷ್ಟು ಪ್ರಾಚೀನವಲ್ಲ; ಇರಲಿ ಬಸವಣ್ಣನವರು ಇದ್ದ ನೆಲದ ಕುರುಹು ಅವರ ವಚನಗಳಲ್ಲಿ ಒಂದೆಡೆ ಹೀಗೆ ದೊರೆಯುತ್ತದೆ.

ಕೂಪವರಿಗೆ ಹೇಳುವೆನು ಕುಳಸ್ಥಳಂಗಳನೆಲ್ಲವ
ಕಱಲ ಭೂಮಿಯಲ್ಲಿ ಕರೆದ ವೃಷ್ಟಿಯ ತೆಱನಂತೆ
ಅವರೆತ್ತ ಬಲ್ಲರು ಎನ್ನ ಸುಖದುಖಃವ?
ಅಂಗತವಿಲ್ಲದ ಸಂಗವು ಆಳವಿಲ್ಲದ ಹುಯ್ಯಲಂತೆ
ಇದು ಕಾರಣ ಕೂಡಲಸಂಗಮದೇವಾ
ನಿಮ್ಮ ಶರಣರಿಗಲ್ಲದೆ ಬಾಯಿದೆಱೆಯನು (ಬವದೀ ೪೫೫)

‘‘ಕಱಲಭೂಮಿ’’ ಎಂದರೆ ಎರೆಭೂಮಿ. ಎಲ್ಲಿ ಹಿಂಗಾರಿ ಬೆಳೆಯನ್ನು ಬೆಳೆಯಲಾಗುತ್ತದೆಯೋ ಆ ನೆಲದಲ್ಲಿ ಸ್ವಲ್ಪಕಾಲ ಇದ್ದರೆನ್ನಲು ಸಂದೇಹವಿಲ್ಲ ಈ ನೆಲ ನೀರಿಗೆ ಕೂಡಲೆ ಹೆಪ್ಪುಗಟ್ಟಿ ಬಿದ್ದ ಮಳೆಯ ನೀರೆಲ್ಲ ಹರಿದು ಹೋಗುತ್ತದೆ. ನೆಲ ಒಳಕ್ಕೆ ಹೆಚ್ಚು ಹಸಿ ಆಗುವುದಿಲ್ಲ. ಬೆಳೆ ಬೆಳೆಯಲು ಆಗುವುದಿಲ್ಲ. ಮಳೆ ನೀರು ಹರಿದು ಹೋದ ಕಾರಣ ಅದು ವ್ಯರ್ಥವಾಗುತ್ತದೆ. ಗೋರಕಲ್ಲ ಮೇಲೆ ಮಳೆ ಸುರಿದಂತೆ! ಇದನ್ನು ಗಮನಿಸಿದರೆ ಅವರು ಈ ಬಿಳಿ ಜೋಳ, ಗೋದಿ ಇತ್ಯಾದಿ ಹಿಂಗಾರಿ ಬೆಳೆ ಬೆಳೆಯುವ ನೆಲದಲ್ಲಿ ಇದ್ದರು.

ಮುನ್ನಿನ ಕಲಿ ವೀರಧೀರರು ಕಾದಿದ ರಣಗಳನು
ಪರಿಪರಿಯಲಿ ಬಣ್ಣಿಸಿ ಹೇಳಬಹುದಲ್ಲದೆ
ದಳವಿದಿರಾದಲ್ಲಿ ಬಿರಿದುಪಚಾರಿಸಿ, ಕಾದಿ ತೋಱಲು ಬಾರದು,
ಮುನ್ನಿನ ಪುರುಷ ವ್ರತಿಯರು ಒಲಿಸಿದ ಆಯತವ
ಪರಿಪರಿಯಲು ಬಣ್ಣಿಸಲು ಬಹುದಲ್ಲದೆ
ಪುರುಷ ನಿರ್ವಾಣಕ್ಕುರಿವಗ್ನಿಯ ಬಂದು ಹೊಕ್ಕು ತೋಱಲು ಬಾರದು.
ಮುನ್ನಿನ ಪುರಾತನರೆಲ್ಲರು ತನುಮನಧನವನಿತ್ತು
ಮಾಡಿ ನೀಡಿ ಲಿಂಗವ ಕೂಡಿದ ಪರಿಗಳನು
ಅನುಭಾವದಲರ್ಥ್ಯೆಸಿ ಹೇಳಬಹುದಲ್ಲದೆ
ಮಾಡಿ ನೀಡಿ ತೋಱಲುಬಾರದು.
ಇಂತೀ ಅರೆಬಿರುದಿನ ಬಂಟರು, ಪುರುಷ ವ್ರತಿಯರು, ಪುರಾತನರು
ಬರಿಯ ಮಾತನಾಡಿ ಹೊಱಗೆ ಮೆಱೆವರಲ್ಲ!
ಪರೀಕ್ಷೆಯುಂಟಾಗಿದ್ದಡೆ ಒಳಗಣವರ ಹೆಸರ ಹಿಡಿದು
ಪರಿಪರಿಯಲು ಹೊಗಳುವರು
ಶರೀರ ಅರ್ಥ ಪ್ರಾಣ ಗುರುಲಿಂಗಜಂಗಮಕೆ ಪರೀಕ್ಷೆ
ಉಂಟಾಗಿಯೆ ಆತ ಮಹೇಶ್ವರ ಪುರಾತವಳಿ ಎಂಬ
ಪರಮ ಬಂಧುಗಳು ಆತನ ನೆನೆದು ಬದುಕುವರು.
ಇಂತೀ ಅನುಭಾವದ ಓದಿನ ಅಕ್ಷರಾಭ್ಯಾಸವ
ಸಾಧಿಸಿ ತರ್ಕಿಸಿ ನಿಂದಿಸಲಾಗುವುದು
ಕೂಡಲಸಂಗನ ಶರಣರಿಗಲ್ಲದನುಭಾವವಿಲ್ಲ

ಕಾಯಾ ವಾಚಾ ಮನಸಾ ತನು ಮನಧನಗಳನ್ನು ಅರ್ಪಿಸಿ ಶಿವನಲ್ಲಿ ಐಕ್ಯವಾದವರು ಪುರಾತನರು ಒಳಗಣವರು.

ಲಿಂಗಾರ್ಚನೆಯ ಮಾಡುವ ಮಹಿಮರೆಲ್ಲರೂ
ಸಲಿಂಗವಂತರಾಗಿ ಒಳಗೆ ಐದಾರೆ
ಆನುದೇವಾ ಹೊಱಗಣವನು
ಸಂಬೋಳಿ ಎನುತ್ತ ಇಂಬಿನಲ್ಲಿ ಇದೇನೆ
ಕೂಡಲಸಂಗಮದೇವಾ
ನಿಮ್ಮ ನಾಮವಿಡಿದ ಅನಾಮಿಕ ನಾನು. (ಬವದೀ ೯೩೩)

ಇಲ್ಲೆಲ್ಲ ಬಂದಿರುವ ‘ಒಳಗಣ’ ‘ಹೊರಗಣ’ ಹಾಗೂ ‘ಅನಾಮಿಕ’ ಶಬ್ದಗಳನ್ನು ದಯವಿಟ್ಟು ಗಮನಿಸಿ ಬಸವಣ್ಣನವರು ತಮ್ಮನ್ನು ಅನಾಮಿಕ ಎಂದು ಏಕೆ ಹೇಳಿಕೊಂಡರು? ಅವರೇ ಇನ್ನೊಂದು ವಚನದಲ್ಲಿ ಹೀಗೆ ಹೇಳಿದ್ದಾರೆ:

ಹಾರು ಹಾರುವನಪ್ಪೆ ನಾನು ಸದ್ಭಕ್ತರೆನ್ನವರೆನ್ನವರೆಂದು;
ಹಾರುವ ಹಾರುವನವ್ವಾ ನಾನು, ಶರಣರು ಎನ್ನವರೆನ್ನವರೆಂದು,
ಕೂಡಲಸಂಗನ ಶರಣರು ಒಕ್ಕದನಿಕ್ಕಿ ಸಲಹುವರೆಂದು (ಬವದೀ ೪೫೯)

ಹಾರುವ ಶಬ್ದದ ಮೇಲೆ ‘ಶ್ಲೇಷೆ’ ಮಾಡಿದ್ದಾರೆ; ಶಬ್ದದ ಆಟ ಆಡಿದ್ದಾರೆ. ತಾವೇ ತಮ್ಮನ್ನು “ಹಾರುವ” ಎಂದೇ ಹೇಳಿದ್ದಾರೆ. ‘ಅನಾಮಿಕ’ ಈ ಶಬ್ದ ಪ್ರಯೋಗದಲ್ಲಿ ತಮ್ಮ ಜಾತ್ಯಾತೀತ ನಿಲುವನ್ನು ಕನಿಷ್ಠ ಬುಡಕಟ್ಟಿನ ಜನಾಂಗಕ್ಕೆ ಸಂಬಂಧಪಟ್ಟ, ಮಾತನ್ನು ಬಳಸಿ ತಿಳಿಸಿದ್ದಾರೆ. ಮೂಲತಃ ತಾವು ಮೇಲ್ಜಾತಿಯ ಮನುಷ್ಯರು ಎಂದು ಜನ ನಿಂದಿಸಿದ್ದಾರೆ ಎಂಬುದನ್ನು ತಿಳಿಸಿದ್ದಾರೆ.

ಸುಡಲೀ ಮನವೆನ್ನನುಡುಹನ ಮಾಡಿತ್ತು,
ನಡೆವಲ್ಲಿ ನುಡಿವಲ್ಲಿ ಅಧಿಕನೆಂದೆನಿಸಿತ್ತು,
ಬೆಡಗಿನ ಕೀಲು ಕಳೆದು ಕೆಡೆದ ಬಳಿಕ
ಕಡುಗೂರ್ಪ ಮಡದಿ ತಾ ಮುಟ್ಟಲಮ್ಮಳು,
ಒಡಲನುರಿಕೊಂಬುದು, ಒಡವೆಯನರಸಿ ಕೊಂಬ,
ಕಡುಗೂರ್ಪ ಮಡದಿಯ ಮತ್ತೊಬ್ಬ ಚೆನ್ನಗ ಕೊಂಬ!
ಮುನ್ನ ಮಾಡಿದುದು ಪಾಪ ತನ್ನ ಬೆನ್ನ ಬಿಡದನ್ನಕ್ಕ,
ಇನ್ನು ಮಾಡಿದರಳವೆ, ಕೂಡಲಸಂಗಮದೇವಾ? (ಬವದೀ ೪೦)

ಇಲ್ಲಿ ಬಂದಿರುವ “ನಡೆಯಲ್ಲಿ”, “ನುಡಿಯಲ್ಲಿ ಅಧಿಕನೆಂದೆನಿಸಿತ್ತು” ಎಂಬ ಮಾತನ್ನು ಪರಿಶೀಲಿಸಿ.

ಅರ್ಜುನವಾಡ ಶಿಲಾಶಾಸನದಲ್ಲಿ ಬಸವಣ್ಣನವರನ್ನು “ತೇಸಠ್ಠಿ ಪುರಾತನ ಪಾದಾರ್ಚಕರುಂ” ಎಂಬಲ್ಲಿ ಆ ವಂಶದವರು ಅರುವತ್ತು ಮೂವರು ಪುರಾತನರನ್ನು ಪೂಜಿಸುವ (ತಮಿಳು ನಾಡಿನ ನಾಯನ್ಮಾರರನ್ನು ಪೂಜಿಸುವ) ಶೈವ ಸಂಪ್ರದಾಯದವರೆಂಬುದನ್ನು ಸ್ಪಷ್ಟಪಡಿಸಿದೆ. (ಶಾಸನಪಂಕ್ತಿ : ೪೧-೪೨) ಅವರನ್ನು ತದ್ದವಾಡಿ ಮಧ್ಯ ಗ್ರಾಮ ಬಾಗವಾಡಿ ಪುರವರಾಧೀಶ್ವರ ಮಾದಿರಾಜನ ತನೂಜಂ ಎಂದು ಖಚಿತವಾಗಿಯೇ ಹೇಳಿದೆ. ಇಲ್ಲಿ ಕೂದಲೆಳೆಯನ್ನು ಸೀಳಬೇಕಿಲ್ಲ. ಆದುದರಿಂದ,

ಅಪ್ಪನು ಡೋಹರಕಕ್ಕಯ್ಯ (ಬವದೀ ೩೪೨)
ಅಪ್ಪನು ನಮ್ಮ ಚೆನ್ನಯ್ಯ (ಬವದೀ ೩೪೮)
ಚೆನ್ನಯ್ಯ ನೆಮ್ಮಯ್ಯನು; ಚೆನ್ನಯ್ಯನ ಮಗ ನಾನು (ಬವದೀ ೩೪೬)

ಮುಂತಾದೆಡೆಗಳಲ್ಲಿನ ಅಲಂಕಾರಿಕ ನುಡಿಯನ್ನು ‘ವಾಸ್ತವ’ ಸಂಗತಿ ಎಂದು ವಿವರಿಸುವುದು ಆ ವಚನಗಳಿಗೆ ವಿಪರೀತ ಅರ್ಥವನ್ನು ನೀಡಿದಂತೆ ಆಗುತ್ತದೆ. ವಿಪರೀತ ಮತಿಗಳಾಗಬಾರದಲ್ಲವೆ?

ಹರನು ಮೂಲಿಗನಾಗಿ ಪುರಾತನರೊಳಗಾಗಿ
ಬಳಿ ಬಳಿಯಲು ಬಂದ ಮಾದಾರನ ಮಗ ನಾನಯ್ಯಾ;
ಕಳೆದ ಹೊಲೆಯನೆಮ್ಮಯ್ಯ: ಜಾತಿಸೂತಕ
ಮಾದಾರನ ಮಗ ನಾನಯ್ಯ
ಪನ್ನಗಭೂಷಣ ಕೂಡಲಸಂಗಯ್ಯ
ಚನ್ನಯ್ಯನೆನ್ನ ಮುತ್ತಯ್ಯನಜ್ಜನಪ್ಪನಯ್ಯಾ (ಬವದೀ ೩೪೭)

ಉಚ್ಚಜಾತಿಯ –ನೀಚಜಾತಿಯನ್ನು, ವಂಶವನ್ನು, ವಿವರಿಸುವುದು ಸರಿಯಲ್ಲ.

ಬಸವಣ್ಣನವರ ಚರಿತ್ರೆಯನ್ನು ವಂಶವೃಕ್ಷವನ್ನು ಅರ್ಜುನವಾಡದ ಶಿಲಾಶಾಲನದ ಬೆಳಕಿನಲ್ಲಿಯೆ ನಿರೂಪಿಸುವುದು ನ್ಯಾಯವಾದ ಮಾರ್ಗ

ಮಂಗಳಕೀರ್ತಿ ಪುರಾತನ
ಜಂಗಮಲಿಂಗೈಕ ಭಕ್ತಿ ನಿಬ್ಭರ ಲೀಲಾ|
ಸಂಗಂ ಸಂಗನಬಸವಂ
ಸಂಗತಿಯಂ ಮಾಳ್ಕೆ ಭಕ್ತಿಯೊ []ಗನವರತಂ||

09_366_BB-KUH

ಬಸವಣ್ಣನವರದು ಕಮ್ಮೆ ಕುಲ. ಕನ್ನಡ ಆದಿಕವಿಯೆನಿಸಿದ ಪಂಪನ ಪೂರ್ವಜರೂ ‘ಕಮ್ಮೆ ಕುಲ ಬ್ರಾಹ್ಮಣರು’ ‘ಕಮ್ಮೆಕುಲ’ ಇದು ಕಮ್ಮನಾಡಿನವರೆಂದು ಸೂಚಿಸುತ್ತದೆ. ಪರಂಪರಾಗತವಾಗಿ ಬಂದ ಪ್ರಗತಿಶೀಲ ಶೈವ ಸಂಪ್ರದಾಯದಲ್ಲಿ ಬಂದ ಬಸವಣ್ಣನವರು ಕಾಯಾ ವಾಚಾ ಮನಸಾ ಆ ಪ್ರಗತಿಶೀಲ ತತ್ವಕ್ಕೆ ತಮ್ಮನ್ನೇ ಅರ್ಪಿಸಿಕೊಂಡಿದ್ದರು.