ಕನ್ನಡ ಗಮಕ ಕಲಾಲೋಕದ ಪ್ರಥಮ ಸ್ಮರಣೀಯರೂ, ಪ್ರಾತಃ ಸ್ಮರಣೀಯರೂ ಆದವರು ಅಭಿನವ ಕಾಳಿದಾಸ ಮೈಸೂರು ಬಸವಪ್ಪ ಶಾಸ್ತ್ರಿಗಳು. ಕವಿಗಳೂ, ವಿದ್ವಾಂಸರೂ, ಪಂಡಿತರೂ ಆದ ಇವರು ಗಮಕ ವಾಚನ ಮಾಡಿದರೆ, ಅದು ಚಿನ್ನದ ಹೂವಿಗೆ ಸುವಾಸನೆ ಬಂದಂತೆ.ಕನ್ನಡ-ಸಂಸ್ಕೃತ-ಇಂಗ್ಲಿಷ್‌ ಭಾಷೆಗಳಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದಕ ಶಾಸ್ತ್ರಿಗಳು ಕುಮಾರವ್ಯಾಸ ಭಾರತ, ಜೈಮಿನಿ ಭಾರತ ಮುಂತಾದ ಕೃತಿಗಳನ್ನು ರಾಗವಾಗಿ ವಾಚನ ಮಾಡುತ್ತಿದ್ದುದನ್ನು ಕೇಳುವ ಅವಕಾಶ ನಮಗೆ ದೊರೆಯದಿದ್ದರೂ ಸಂಗೀತ-ಸಾಹಿತ್ಯ-ಭಾಷೆಗಳಲ್ಲಿನ ಪಾಂಡಿತ್ಯಪೂರ್ಣ ಅನುಭವವು ಅವರ ಗಮಕವಾಚನವನ್ನು ಎಷ್ಟು ಶ್ರೀಮಂತ ಗೊಳಿಸಿದ್ದಿರಬಹುದೆಂದು ಊಹಿಸಬಹುದಾಗಿದೆ.

ಇವರ ಗಮಕ ವಾಚನ ಶೈಲಿಯನ್ನು ಕುರಿತು, ವಿದ್ವಾಂಸರಾದ ಪಿ.ಆರ್. ಕರಿಬಸವಶಾಸ್ತ್ರಿಗಳು ೨೫.೨.೧೮೯೨೧ರಂದು ಬರೆದಿರುವ ಒಂದು ಕಂದಪದ್ಯ ಮತ್ತು ಒಂದು ಸ್ರಗ್ಧರಾ ವೃತ್ತವು ಬಸವಪ್ಪ ಶಾಸ್ತ್ರಿಗಳ  ಉತ್ಕೃಷ್ಟ ವಾಚನಕ್ಕೆ ನೀಡಿದ ವ್ಯಾಖ್ಯಾನದಂತಿದೆ.

ಕಂದ:    ಕನ್ನಡ ಭಾರತ ಮೊದಲಾ

ದುನ್ನತಮೆನಿಪಖಿಲ ಕಾವ್ಯನಿಕರಮನೆಲ್ಲರ್ |

ಮನ್ನಿಪ ತೆರದಿಂ ರಾಗದೆ

ಚೆನ್ನೆಸವಿನಮೋದಿ ಮೋದದೊಳಗಾಳಿಸಿದಂ ||

ಸ್ರಗ್ಧರಾ: ಶೃಂಗಾರಕ್ಕಾಗರಂ ತಾನೆನಿಸಿ ಮೆರೆವ ಶಾಕುಂತಳಾಭಿಖ್ಯಮಾದು |

ತ್ತುಂಗಾಲಂಕಾರಮಂ ನಾಟಕಮನೆ ಲಸದುದ್ದಾಮಸಾಹಿತ್ಯಮುಂ

ಮೇಣ್‌ ||

ಸಂಗೀತ ಪ್ರೌಢಿಯುಂ ಸಂಗಳಿಸೆ ರಚಿಸಿ ಕರ್ಣಾಟ ವಾಗ್ಧಾಟಿಯಿಂದಂ |

ರಂಘಾಚಾರ್ಯಾಖ್ಯ ಮಂತ್ರಿಪ್ರವರ ಸಭೆಯೊಳೊದ್ದೋದಿದಂ

ಜಾಣ್ಮೆಯಿಂ ||

 

ಕನ್ನಡ ಭಾರತವೇ (ಕುಮಾರವ್ಯಾಸ ಭಾರತ) ಮೊದಲಾದ ಅನೇಕ ಕಾವ್ಯಗಳನ್ನು ಕೇಳುಗರೆಲ್ಲರೂ ಮೆಚ್ಚುವ ತೆರದಿಂದ ರಾಗಬದ್ಧವಾಗಿ ವಾಚಿಸಿ ಕೇಳುಗರನ್ನು ಮೋದದೊಳಗೆ ಆಳುವಂತೆ ಮಾಡಿದರೆಂಬ ಮಾತುಗಳು ಬಸವಪ್ಪ ಶಾಸ್ತ್ರಿಗಳ ವಾಚನವು ಶ್ರೋತೃಗಳನ್ನು  ಮಂತ್ರಮುಗ್ಧರಾಗಿಸುತ್ತಿದ್ದುದನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸುತ್ತದೆ. ಅದೇ ರೀತಿ ಮೇಲಿನ ವೃತ್ತದಲ್ಲಿ-

 

ಉದ್ಧಾಮ ಸಾಹಿತ್ಯ ಮತ್ತು ಸಂಗೀತ ಪ್ರೌಢಿಮೆ ಸೇರಿ ಶಾಕುಂತಲ ನಾಟಕವನ್ನು ಕನ್ನಡದಲ್ಲಿ ರಚಿಸಿದುದೇ ಅಲ್ಲದೆ, “ಕರ್ಣಾಟಡ ವಾಗ್ಧಾಟಿಯಿಂ ಸಭೆಯೊಳೊಲ್ದು ಓದಿದಂ ಜಾಣ್ಮೆಯಿಂ”.

 

ಎಂಬಲ್ಲಿನ, ಓದುವ ಧಾಟಿಯಲ್ಲಿ ‘‘ಕರ್ಣಾಟ ವಾಗ್ಧಾಟಿ” ಇತ್ತು ಎಂಬ ಮಾತನ್ನು ವಿಶೇಷವಾಗಿ ಗಮನಿಸಬೇಕು. ಅದು ಕೇವಲ ನಾಟಕದ ಓದುವಿಕೆಯಲ್ಲ. ಕರ್ಣಾಟಕಕ್ಕೇ ವಿಶಿಷ್ಟವಾದ ರೀತಿಯ ಧಾಟಿಯಲ್ಲಿನ ಓದು;

 

ತೀ.ನಂಶ್ರೀಯವರು “ಭಾರತೀಯ  ಕಾವ್ಯಮೀಮಾಂಸೆ”ಯಲ್ಲಿ ಉದ್ಧರಿಸುವಂತೆ:

“ಕರ್ಣಾಟದೇಶದವರ ವಾಚನಕ್ರಮವನ್ನು ಕುರಿತು ರಾಜಶೇಖರನು ಹಿಂದಿನ ಯಾವುದೋ ಒಂದು ಗ್ರಂಥದಿಂದ ಉದ್ಧರಿಸಿರುವ ಪದ್ಯವು ಹೀಗಿದೆ”:

 

ರಸಃಕೋಪ್ಯಸ್ತು ಕಾಪ್ಯಸ್ತು ರೀತಿಃ ಕೋSಪ್ಯಸ್ತು ವಾ ಗುಣಃ |

ಸಗರ್ವಂ ಸರ್ವಕರ್ಣಾಟಾಃ ಟಂಕಾರೋತ್ತರ ಪಾಠಿನಃ ||

“ರಸ ಯಾವುದಾದರೂ ಆಗಲಿ, ರೀತಿ ಯಾವುದಾದರೂ ಆಗಲಿ, ಗುಣ ಯಾವುದಾದರೂ ಆಗಲಿ ಕರ್ಣಾಟಕರೆಲ್ಲರೂ ಠೀವಿಯಿಂದ ಟಂಕಾರ ಪ್ರಧಾನವಾಗಿ ಓದುತ್ತಾರೆ”. “ಟಂಕಾರ” ಎಂದರೆ “ನಿರ್ಲಕ್ಷ್ಯವಾಗಿ, ಗತ್ತಿನಿಂಧ, ಠೇಂಕಾರದೊಡನೆ” ಎಂದು ಅರ್ಥವಿರುವಂತೆ ತೋರುತ್ತದೆ.

 

(ರಾ. ಅನಂತಕೃಷ್ಣಶರ್ಮ: ಕರ್ಣಾಟಕ ಟಂಕಾರ ಟೀಕೆ’)

ಇದನ್ನೇ ಅನುಮೋದಿಸುವಂತೆ ಪಂಪನ ವಿಕ್ರಮಾರ್ಜುನ ವಿಜಯದ ಭೀಮನ ಮಾತುಗಳನ್ನೂ ನೋಡಿ: “ಟಾಠಡಾಢಣಮಲ್ತೆನ್ನನುಡಿ”

 

ಈ ವಿವರಣೆಗಳಿಂದ ಗಮಕ ಕಲೆಯು ಆಗಿನ ರಾಜಾಸ್ಥಾನದಲ್ಲಿ ಪ್ರಸಿದ್ಧಿಗೆ ಬರಲು ಬಸವಪ್ಪ ಶಾಸ್ತ್ರಿಗಳ ಕೊಡುಗೆ ಎಷ್ಟು ಅಮೂಲ್ಯವಾದುದು ಎಂದು ತಿಳಿಯಬಹುದು.

 

ಶ್ರೀ ಕರಿಬಸವಶಾಸ್ತ್ರಿಗಳ ಮತ್ತೊಂದು ಕಂದ ಪದ್ಯದಲ್ಲಿಯೂ ಬಸವಪ್ಪ ಶಾಸ್ತ್ರಿಗಳ ಕಾವ್ಯವಾಚನದ ವಿಚಾರ ಪ್ರಸ್ತಾಪಿತವಾಗಿದೆ. ಶ್ರದ್ಧಾಂಜಲಿ ರೂಪದಲ್ಲಿರುವ ಈ ಕಂದವನ್ನು ನೋಡಿ:

 

ಕನ್ನಡಗಬ್ಬದ ಹಬ್ಬಮ

ದಿನ್ನೆಲ್ಲಿ ಮನೋಜ್ಞಮೆನಿಪ ಪುಸ್ತಕ ಪಠನಂ |

ಇನ್ನೆಲ್ಲಿ ಸುಕವಿತಾಂಗನೆ

ಯುನ್ನತಮಾದುತ್ತಮಾಂಗಕಾದುದು ನಮನಂ ||

 

“ಮನೋಜ್ಞಮೆನಿಪ ಪುಸ್ತಕ ಪಠನಂ….” ಎಂದು ಬಸವಪ್ಪ ಶಾಸ್ತ್ರಿಗಳ “ಗಮಕ”ವನ್ನು ಈ ಪದ್ಯದಲ್ಲಿ ಪ್ರಸ್ತಾಪಿಸಲಾಗಿದೆ. ಇವರ ಪುಸ್ತಕ ಪಠನವು ಕನ್ನಡಗಬ್ಬದ ಹಬ್ಬವಾಗುತ್ತಿತ್ತು ಎಂಬ ಮಾತು, ಶಾಸ್ತ್ರಿಗಳ ಗಮಕವಾಚನದ ರೀತಿಗೆ ಹಿಡಿದ ಕನ್ನಡಿಯಾಗಿದೆ.

 

ಈ ಮೇಲಿನ ವಿವರಣೆಗಳಿಂದ ತಿಳಿದು ಬರುವ ಪ್ರಮುಖ ಅಂಶವೆಂದರೆ, ಬಸವಪ್ಪ ಶಾಸ್ತ್ರಿಗಳು ಕೇವಲ ನಾಟಕ ರಚನಕಾರರು ಮತ್ತು ಕವಿಗಳೇ ಅಲ್ಲದೇ, ಒಬ್ಬ ಶ್ರೇಷ್ಟ ಗಮಕಿಯೂ ಆಗಿದ್ದರೆಂಬುದು. ಅದೇ ರೀತಿ, ಗಮಕ ಕಲೆಯು ನಮ್ಮ ನಾಡಿನ ಬಹು ಪ್ರಾಚೀನ ಕಲೆಯಾದರೂ ಸಹ , ನಿರ್ದಿಷ್ಟವಾಗಿ ತಿಳಿದು ಬರುವ ಪ್ರಥಮ ಗಮಕಿಗಳೆಂದರೆ ಬಸವಪ್ಪ ಶಾಸ್ತ್ರಿಗಳು ಎಂಬ ವಿಚಾರವೂ ಸ್ಪಷ್ಟ ಪಡುತ್ತದೆ.

 

ಇಂತಹ ಶ್ರೇಷ್ಟ ಗಮಕಿಗಳಾದ ಬಸವಪ್ಪ ಶಾಸ್ತ್ರಿಗಳು, ಪ್ರಸಿದ್ಧ ವಿದ್ವಾಂಸರಾದ ಮಹದೇವ ಶಾಸ್ತ್ರಿಗಳು ಹಾಗೂ ಬಸವಮ್ಮನವರ ಸುಪುತ್ರರಾಗಿ ೧೮೪೩ನೆಯ ಇಸವಿಯಲ್ಲಿ ಮೈಸೂರಿನಲ್ಲಿ ಜನಿಸಿದರು. ಇವರು ಹುಟ್ಟುವ ಕಾಲಕ್ಕಾಗಲೆ ಮಹದೇವ ಶಾಸ್ತ್ರಿಗಳು ಮೈಸೂರಿನ ಆಸ್ಥಾನ ವಿದ್ವಾಂಸರಾಗಿ ಪ್ರಖ್ಯಾತರಾಗಿದ್ದರು. ಬಸವಪ್ಪ ಶಾಸ್ತ್ರಿಗಳ ಅಜ್ಜ ಶ್ರೀಮುರುಡು ಬಸವಸ್ವಾಮಿಗಳು. ಬಸವಸ್ವಾಮಿಗಳು. ಬಸವಸ್ವಾಮಿಗಳು ಬೆಂಗಳೂರು ಜಿಲ್ಲೆಯ ನಾರಸಂದ್ರ ಗ್ರಾಮದ ವೀರಮಾಹೇಶ್ವರ ವರ್ಗಕ್ಕೆ ಸೇರಿದ ರುದ್ರಾಕ್ಷಿ ಮಠದ ಅಧಿಕಾರಿಗಳಾಗಿ ಖ್ಯಾತರಗಿದ್ದರು. ಬಸವಪ್ಪ ಶಾಸ್ತ್ರಿಗಳ  ತಾಯಿ ಬಸವಮ್ಮನವರು ಕುಮಾರವ್ಯಾಸ ಭಾರತ, ಜೈಮಿನಿ ಭಾರತ, ಹರಿಶ್ಚಂದ್ರ ಕಾವ್ಯ ಮುಂತಾದ ಕಾವ್ಯಗಳನ್ನು ರಾಗವಾಗಿ ಹಾಡುತ್ತಿದ್ದ ಕಾವ್ಯಾಸಕ್ತರು. ಹೀಗಾಗಿ ಬಸವಪ್ಪ ಶಾಸ್ತ್ರಿಗಳಿಗೆ ತಾತ-ತಂದೆ-ತಾಯಿ ಈ ಎಲ್ಲ ಮೂಲಗಳಿಂದಲೂ ವಿದ್ವತ್ತು, ಪ್ರತಿಭೆ, ಸಮಗೀತ ಸಾಹಿತ್ಯಗಳಲ್ಲಿ ಆಸಕ್ತಿ ಮುಂತಾದ ಗುಣಗಳು ರಕ್ತಗತವಾಗಿ ಬಂದಿದ್ದುವು. ಅದಕ್ಕೆ ರಾಜಪೋಷಣೆಯೂ ಸೇರಿಕೊಂಡು ಉತ್ತಮ ಸಾಹಿತಿಯಾಗುವ ಹಾಗೂ ಉತ್ತಮ ಗಮಕಿಯಾಗುವ ಅದೃಷ್ಟ    ಇವರಿಗೆ ಒಲಿದು ಬಂದಿತ್ತು. ಮೈಸೂರಿನ ಮಹಾರಾಜರಾಗಿದ್ದ ಮುಮ್ಮಡಿ ಕೃಷ್ಣರಾಜ ಒಡೆಯರ ಆಸ್ಥಾನದಲ್ಲಿದ್ದುಕೊಂಡು, ತಮ್ಮ ಹದಿನೆಂಟನೆಯ ವಯಸ್ಸಿನಲ್ಲಿಯೇ ಬಸವಪ್ಪ ಶಾಸ್ತ್ರಿಗಳು ತಮ್ಮ ಚೊಚ್ಚಲ ಕೃತಿಯಾದ “ಕೃಷ್ಣರಾಜಾಭ್ಯುದಯ” ಎಂಬ ಕನ್ನಡ ಚಂಪೂ ಕಾವ್ಯವನ್ನೂ ಮತ್ತು ಸಂಸ್ಕೃತದಲ್ಲಿ “ಬಿಲ್ವವೃಕ್ಷ ಪೂಜಾವಿಧಿ”ಯನ್ನೂ ರಚಿಸಿ ಅರಸರ ವಿಶೇಷ ಕೃಪಾಕಟಾಕ್ಷಕ್ಕೆ ಮತ್ತು ವಿದ್ವಜ್ಜನರ ಆದರಕ್ಕೆ ಪಾತ್ರರಾದರು. ಈ ಮಟ್ಟಕ್ಕೆ ಶಾಸ್ತ್ರಿಗಳು ಬೆಳೆಯಲು ಕಾರಣರಾದವರು ದೊರೆಗಳ ಆಸ್ಥಾನದಲ್ಲಿದ್ದ ಅಳಿಯ ಲಿಂಗರಾಜ ಅರಸರು.

ಮುಮ್ಮಡಿ ಕೃಷ್ಣರಾಜ ಒಡೆಯರ ಪುತ್ರ ಚಾಮರಾಜ ಒಡೆಯರ್ ಅವರಿಗೆ ಗುರುಗಳಾಗಿ ಬಸವಪ್ಪ ಶಾಸ್ತ್ರಿಗಳು ಅರಮನೆಯಲ್ಲಿ ವಿಶೇಷ ಗೌರವಕ್ಕೆ ಪಾತ್ರರಾದರು. ೧೮೬೦ರಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ಸ್ವರ್ಗಸ್ಥರಾದ ನಂತರ ೧೮೮೧ರಲ್ಲಿ ಚಾಮರಾಜ ಒಡೆಯರು ಪಟ್ಟಾಭಿಷಿಕ್ತರಾದರು. ಸಹಜವಾಗಿ ಬಸವಪ್ಪ ಶಾಸ್ತ್ರಿಗಳು ಪ್ರಖ್ಯಾತರಾಗಿ, ಅನೇಕ ನಾಟಕಗಳನ್ನು ರಚಿಸಿ, ಅನುವಾದಿಸಿ, ರಂಗದ ಮೇಲೆ ಪ್ರ ಯೋಗಿಸಲು ಕಾರಣರಾದರುಯ. ಅವರು ಅನುವಾದಿಸಿದ ಪ್ರಮುಖ ನಾಟಕಗಳೆಂದರೆ, ಕಾಳಿದಾಸನ ಅಭಿಜ್ಞಾನ ಶಾಕುಂತಲಂ, ವಿಕ್ರಮೋರ್ವಶೀಯಂ; ಭವಭೂತಿಯ ಉತ್ತರ ರಾಮಚರಿತ; ಶ್ರೀಹರ್ಷನ ರತ್ನಾವಳೀ. ಇವಲ್ಲದೇ ಮಾಲತಿಮಾಧವ, ಚಂಡಕೌಶಿಕ (ಅಪೂರ್ಣ) ನಾಟಕಗಳು ಇವರಿಂದ ಅನುವಾದಗೊಂಡವು. ಶೇಕ್ಸ್‌ಪಿಯರ್ ಮಹಾಕವಿಯ ‘ಒಥೆಲೋ’ ನಾಟಕವು “ಶೂರಸೇನ ಚರಿತ”ವಾಗಿ ಇವರಿಂದ ರೂಪುಗೊಂಡಿತು.

ಇವುಗಳ ಜೊತೆಗೆ ಚಂಪೂ ಶೈಲಿಯಲ್ಲಿ ‘ದಮಯಂತೀ ಸ್ವಯಂವರ’, ‘ರೇಣುಕಾ ವಿಜಯು’ ಮುಂತಾದ ಕನ್ನಡ ಕಾವ್ಯಗಳನ್ನು ರಚಿಸಿದರು. ಸಂಸ್ಕೃತದಲ್ಲಿ ಶಿವಭಕ್ತಿಸುಧಾತರಂಗಿಣಿ, ಆರ್ಯಾಶತಕ, ನಕ್ಷತ್ರಮಾಲಿಕಾ, ಅಂಬಾ ಶೋಡಷಿ ಮಂಕರಿ, ಅಷ್ಟಮೂರ್ತಿತನಯಾಷ್ಟಕ, ದಕ್ಷಿಣಾಮೂರ್ತ್ಯಾಷ್ಟಕ, ಶಿವಾಷ್ಟಕ, ಸದಾಶಿವಾಷ್ಟಕ ಮುಂತಾದ ಕೃತಿಗಳನ್ನು ರಚಿಸಿದರು.

ಜನಸಾಮಾನ್ಯರಿಗೆ ಸುಲಭವಾಗಿ ಅರ್ಥವಾಗುವಂತೆ, ಭರ್ತೃಹರಿಯ ನೀತಿಶತಕ, ಶೃಂಗಾರಶತಕ ಮತ್ತು ವೈರಾಗ್ಯ ಶತಕಗಳು, ಶಂಕರ ಶತಕ, ನೀತಿಸಾರಸಂಗ್ರಹ, ಸಾವಿತ್ರೀ ಚರಿತ್ರೆ ಮುಂತಾದ ಕೃತಿಗಳನ್ನೂ ರಚಿಸಿದ್ದಾರೆ.

ಕಾಳಿದಾಸನ ಸಂಸ್ಕೃತ ನಾಟಕಗಳನ್ನು ಅಷ್ಟೇ ಸೊಗಸಾಗಿ ಕನ್ನಡದಲ್ಲಿ ರಚಿಸಿ, “ಅಭಿನವ ಕಾಳಿದಾಸ”ನೆಂಬ ಬಿರುದಿಗೆ ಶಾಸ್ತ್ರಿಗಳು ಪಾತ್ರರಾದರು. ಮೈಸೂರು ಸಂಸ್ಥಾನದ ಆಸ್ಥಾನ ಕವಿಗಳಾಗಿ ಸರ್ವಜನಾದರಣೀಯರಾದರು. ಸ್ವಾಭಾವಿಕವಾಗಿಯೇ ಪರಸ್ಪರ ವೈರಿಗಳಾದ ಲಕ್ಷಿ-ಸರಸ್ವತಿಯರು ಶಾಸ್ತ್ರಿಗಳಲ್ಲಿ ಅನ್ಯೋನ್ಯವಾಗಿದ್ದುದು ಅವರ ವಿಶೇಷವೆಂದೇ ಹೇಳಬೇಕು.

ಇಷ್ಟೊಂದು ಸಾಧನೆಗಳಲನ್ನು ಮಾಡಿದ ಬಸವಪ್ಪ ಶಾಸ್ತ್ರಿಗಳು  ೧೮೯೧ನೇ ವರ್ಷ ವಿಕೃತಿ ಸಮವತ್ಸರದ ಮಾಘ ಶುದ್ಧ ತ್ರಯೋದಶಿ ಶನಿವಾರದಂದು ವಾಯುವಿಹಾರಕ್ಕಾಗಿ ಕುದುರೆಗಾಡಿಯಲ್ಲಿ ಹೊರಟಿದ್ದಾಗ ಅಪಘಾತಕ್ಕೀಡಾಗಿ ಅಕಾಲಮರಣ ಹೊಂದಿದರು. ಆಗ ಅವರ ವಯಸ್ಸು ಕೇವಲ ೪೮ ವರ್ಷಗಳು. ಇವರ ನಿಧನದಿಂದ ಮೈಸೂರಿನ ವಿದ್ವಜ್ಜನ ದಿಙ್ಮೂಢರಾದರು. ಆರ್.ತಾತ ಎಂಬ ವಿದ್ವಾಂಸರು “ಮೈಸೂರೊಳಗೆಲ್ಲಾ ಇವರಂತೆ ಭಾರತವನ್ನೋದುವವರು ಮತ್ತೊಬ್ಬರಿರಲಿಲ್ಲ. ಅಂತಹ ಮಹಾನುಭಾವರನ್ನು ನಾವು ಕೇಳುವ ಪುಣ್ಯವೆಲ್ಲಿದೆ?” ಎಂದು ಉದ್ಗಾರ ತೆಗೆದರು. ಮೈಸೂರಿನ ಆಸ್ಥಾನ ಕವಿಗಳಾಗಿದ್ದ ನಂಜನಗೂಡು ಸುಬ್ಬಾಶಾಸ್ತ್ರಿಗಳು

ಬಸವಪ್ಪ ಶಾಸ್ತ್ರಿಯಳಿಯಲ್‌

ವ್ಸನಮದೆಳ್ಳತುಮೆನ್ನಮನದೊಳಗಿಲ್ಲಂ

ರಸಕವಿತಾಂಗನೆ ಹಿಮದೊಳ್‌

ಬಸವಳಿದಬ್ಜಿನಿವೊಲಾದಳೆಂಬುದೆ ದುಗುಡಂ ||

ಎಂದು ಹೇಳಿ ಬಸವಪ್ಪ ಶಾಸ್ತ್ರಿಗಳ ನಿಧನದಿಂದ ಸರಸ್ವತಿಯು ಹಿಮದಿಂದ ಬಸವಳಿದ ಕಮಲದಂತಾದಳೆಂದು ಶೋಕಿಸಿದ್ದಾರೆ.

ಸಾಹಿತ್ಯದಲ್ಲಿ ಅಪಾರವಾದ ಜ್ಞಾನ, ವಿದ್ವತ್ತು ಮತ್ತು ಸಂಗೀತದಲ್ಲಿ ಉತ್ತಮ ಸಾಧನೆ ಇವುಗಳು ಉತ್ತಮ ಗಮಕಿಗೆ ಎಷ್ಟು ಅವಶ್ಯಕವೆಂಬುದನ್ನು ಬಸವಪ್ಪ ಶಾಸ್ತ್ರಿಗಳಂತಹ ಶ್ರೇಷ್ಠ ಗಮಕಿಗಳ ಬಗ್ಗೆ ಕೇಳಿಯಾದರೂ ತಿಳಿಯಬಹುದು. ಕರ್ನಾಟಕಕ್ಕೇ ವಿಶೇಷವಾದ ಗಮಕ ಕಲೆಗೆ ಭದ್ರ ಬುನಾದಿ ಹಾಕಿದ ಬಸವಪ್ಪ ಶಾಸ್ತ್ರಿಗಳ ಅಂದಿನ ಕಾರ್ಯವೇ ಇಂದು ಗಮಕ ಕಲೆಯು ವಿಶಾಲವಾಗಿ ಬೆಳೆಯಲು ಕಾರಣವಾಗಿದೆಯೆಂದರೆ ಅತಿಶಯೋಕ್ತಿಯಗಲಾರದು.

________________________________________________________________________________________________________________

ಗ್ರಂಥ ಋಣ

ಕನ್ನಡ ವಿಷಯ ವಿಶ್ವಕೋಶ, ಸವಪ್ಪ ಶಾಸ್ತ್ರಿಗಳ ಕರ್ಣಾಟಕ ಶಾಕುಂತಲ ನಾಟಕಂ: ೧೯೪೨ (೬ನೆಯ ಮುದ್ರಣ)

ಗಮಕ ಚೇತನರು, ಸಂ:ಶ್ರೀ ಆರ್. ಶಂಕರನಾರಾಯಣ್‌: ೧೯೯೭, ಗಮಕ ಕಲೋಪಾಸಕರು. ಕರ್ನಾಟಕ ಗಮಕ ಕಲಾ ಪರಿಷತ್ತು-೨೦೦೧

ಭಾರತೀಯ ಮೀಮಾಂಸೆ: ತೀ.ನಂ. ಶ್ರೀಕಂಠಯ್ಯ.