ಬಸವಪ್ಪ ಶಾಸ್ತ್ರಿ —ಅಸಾಧಾರಣ ವಿದ್ವತ್ತು, ಆಶು ಕವಿತಾ ಸಾಮರ್ಥ್ಯ, ಮಧುರ ಕಂಠ ಇವು ಬಸವಪ್ಪ ಶಾಸ್ತ್ರಿಗಳು ಹಲವು ರೀತಿಗಳಲ್ಲಿ ಕನ್ನಡದ ಸೇವೆಯನ್ನು ಮಾಡಲು ಸಾಧ್ಯಮಾಡಿದವು. ಅವರು ರಚಿಸಿದ ಕಾಯೌ ಶ್ರೀ ಗೌರಿ ಹಿಂದಿನ ಮೈಸೂರಿನ ಜನಕ್ಕೆ ಬಹು ಪರಿಚಿತ. ಅಭಿನವ ಕಾಳಿದಾಸ ಎಂದು ಪ್ರಶಸ್ತಿ ಗಳಿಸಿದರು.

ಬಸವಪ್ಪ ಶಾಸ್ತ್ರಿ

ಕಾಳಿದಾಸ ಭಾರತದ ಶ್ರೇಷ್ಟ ಕವಿಗಳಲ್ಲಿ ಒಬ್ಬ. ಅವನ ’ಶಾಕುಂತಲ’ ನಾಟಕ ಪ್ರಪಂಚದ ಹಲವು ಭಾಷೆಗಳಿಗೆ ಅನುವಾದವಾಗಿದೆ. ಇಂಗ್ಲೆಂಡ್, ರಷ್ಯಾದಂತಹ ಹಲವು ದೇಶಗಳಲ್ಲಿ ಅದನ್ನು ಅಭಿನಯಿಸಿದ್ದಾರೆ. ಅವನು ಇದ್ದದ್ದು ನೂರಾರು ವರ್ಷಗಳ ಹಿಂದೆ, ಬರೆದದ್ದು ಸಂಸ್ಕೃತ ಭಾಷೆಯಲ್ಲಿ. ಆದರೆ ಇಂದೂ ಸಂಸ್ಕೃತ ಬಾರದವರೂ ಭಾರತದಾಚೆಗಿನ ದೇಶದವರೂ ಅವನ ಸಾಹಿತ್ಯವನ್ನು ಓದಿ ಆನಂದ ಪಡುತ್ತಾರೆ.

 

ಮಹಾಕಾರ್ಯದ ನಿರ್ವಹಣೆ

ಇಂತಹ ವಿಶ್ವವಿಖ್ಯಾತ ಮಹಾಕವಿಯ ಲೋಕಪ್ರಸಿದ್ಧ ಕಾವ್ಯಗಳನ್ನು ಕನ್ನಡ ಜನ ಓದುವಂತಾಗಬೇಕಾದರೆ ಅವುಗಳನ್ನು ಸಂಸ್ಕೃತದಿಂದ ಕನ್ನಡಕ್ಕೆ ಅನುವಾದಿಸಬೇಕು. ಆದರೆ ಇದು ಸುಲಭದ ಕೆಲಸವಲ್ಲ. ಕಾಳಿದಾಸನ ವರ್ಣನೆಗಳು ಬಹು ಸೂಕ್ಷ್ಮ; ಭಾಷೆ ಬಹು ಮನೋಹರ. ಹೇಳುವ ಶೈಲಿ ಸುಲಲಿತವಾಗಿ ಹರಿಯುವ ನದಿಯ ಹಾಗೆ. ಆದ್ದರಿಂದ ಎಲ್ಲಿಯಾದರೂ ಸ್ವಲ್ಪ ಅಲಕ್ಷ್ಯ ತೋರಿದರೂ ಸಾಕು, ಸುಂದರವಾದ ವಿಗ್ರಹಕ್ಕೆ ಏಟು ಕೊಟ್ಟ ಹಾಗೆ ಆಗುತ್ತದೆ. ಇಂತಹ ಮಹಾಕಾರ್ಯವನ್ನು ಕೈಗೊಂಡು ಅದನ್ನು ಯಶಸ್ವಿಯಾಗಿ ನಿರ್ವಹಿಸಿದವರು ಮೈಸೂರು ಮಹಾರಾಜರ ಆಸ್ಥಾನದಲ್ಲಿದ್ದ ಬಸವಪ್ಪ ಶಾಸ್ತ್ರಿಗಳು. ಅವರು ಕಾಳಿದಾಸನ ’ವಿಕ್ರಮೋರ್ವಶೀಯ’ ಹಾಗೂ ’ಅಭಿಜ್ಞಾನ ಶಾಕುಂತಲ’ ಎಂಬೆರಡು ಶ್ರೇಷ್ಠ ನಾಟಕಗಳನ್ನು ಮೊಟ್ಟಮೊದಲಬಾರಿಗೆ ಕನ್ನಡಕ್ಕೆ ಅನುವಾದಿಸಿದರು. ಅಷ್ಟೇ ಅಲ್ಲ, ಕಾಳಿದಾಸನ ಕೃತಿಗಳ ಮೂಲ ಭಾವ, ಮೂಲ ಸೌಂದರ್ಯ ಸ್ವಲ್ಪವೂ ಮುಕ್ಕಾಗದಂತೆ ಅವುಗಳಲ್ಲಿನ ರಸವನ್ನು ಕನ್ನಡ ಜನ ಸವಿದು ಆನಂದಿಸುವಂತೆ ಮಾಡಿದರು. ಕನ್ನಡ ಜನತೆಗೆ, ಸಾಹಿತ್ಯಕ್ಕೆ, ಮಹೋಪಕಾರ ಮಾಡಿದರು. ’ಅಭಿನವ ಕಾಳಿದಾಸ ’ ಎಂದು ಹೆಸರು ಪಡೆದರು.

ಬಸವಪ್ಪ ಶಾಸ್ತ್ರಿಗಳು ಕಾಳಿದಾಸನ ನಾಟಕಗಳನ್ನೇ ಅಲ್ಲದೆ, ಬೇರೆ ಕವಿಗಳ ಉತ್ತಮ ಕಾವ್ಯಗಳನ್ನೂ ಕನ್ನಡಕ್ಕೆ ಅನುವಾದ ಮಾಡಿದರು. ಅವರು ಸ್ವತಃ ಕವಿಗಳು. ಸಂಸ್ಕೃತದಲ್ಲೂ ಕನ್ನಡದಲ್ಲೂ ಕೆಲವು ಉತ್ತಮ ಕಾವ್ಯಗಳನ್ನು ರಚಿಸಿದರು. ತಮ್ಮ ವಿದ್ವತ್ತಿನಿಂದ, ಒಳ್ಳೆಯ ಗಮಕ ಶಕ್ತಿಯಿಂದ, ಆದರ್ಶ ಗುಣಗಳಿಂದ ಅವರು ಅನೇಕರ ಮನಸ್ಸನ್ನು ಗೆದ್ದರು.

ಧರ್ಮನಿಷ್ಠ ತಂದೆತಾಯಿಯರು

ಇಂದಿಗೆ ಸುಮಾರು ನೂರಮೂವತ್ತು ವರ್ಷಗಳ ಹಿಂದೆ ೧೮೪೩ನೇಇಸವಿಯಲ್ಲಿ ಬಸವಪ್ಪ ಶಾಸ್ತ್ರಿಗಳು ಮೈಸೂರಿನಲ್ಲಿ ಜನ್ಮತಾಳಿದರು.

ಆಗ ಈಗಿನ ಕರ್ನಾಟಕ ರಾಜ್ಯ ಇರಲಿಲ್ಲ. ಕನ್ನಡಿಗರು ಬೇರೆಬೇರೆ ಸಂಸ್ಥಾನಗಳಲ್ಲಿ, ಪ್ರಾಂತಗಳಲ್ಲಿ ಇದ್ದರು. ಈಗಿನ ಕರ್ನಾಟಕ ರಾಜ್ಯದ ಸುಮಾರು ಅರ್ಧದಷ್ಟು-ಹಿಂದಿನ ಮೈಸೂರು ಸಂಸ್ಥಾನ. ಅದಕ್ಕೆ ಆಗ ಮಹಾರಾಜರು ಮುಮ್ಮಡಿ ಕೃಷ್ಣರಾಜ ಒಡೆಯರು. ಅವರು ತುಂಬಾ ಧರ್ಮನಿಷ್ಠ, ಸೌಜನ್ಯಯುತ ದೊರೆಯೆಂದು ಪ್ರಸಿದ್ಧಿ ಹೊಂದಿದ್ದರು. ವಿದ್ವಾಂಸರು, ಕವಿಗಳು, ಕಲಾವಿದರು, ಎಂದರೆ ಅವರಿಗೆ ಬಹು ಗೌರವ, ವಿಶ್ವಾಸ. ಅವರೇ ಸ್ವತಃ ಪಂಡಿತರು.

ಇಂತಹ ದೊರೆಯ ಅರಮನೆಯಲ್ಲಿ ಸಮ್ಮುಖ ಪುರೋಹಿತನಾಗಿ ಇರಬೇಕಾದರೆ ಆ ವ್ಯಕ್ತಿ ಎಷ್ಟು ವಿದ್ವಾಂಸನಾಗಿರಬೇಡ? ಬಸವಪ್ಪ ಶಾಸ್ತ್ರಿಗಳ ತಂದೆ ವೇದಮೂರ್ತಿ ಮಹಾದೇವ ಶಾಸ್ತ್ರಿಗಳು ಈ ಪ್ರಭುವಿನ ಸಮ್ಮುಖ ಪುರೋಹಿತರು. ತಾಯಿ ಬಸವಮ್ಮ ಆದರ್ಶ ಗೃಹಿಣಿ. ಮಹದೇವ ಶಾಸ್ತ್ರಿಯವರನ್ನು ಎಲ್ಲರೂ ’ಪುರೋಹಿತ ಸ್ವಾಮಿ’ಗಳೆಂದು ಕರೆಯುತ್ತಿದ್ದರು.

ಬಾಳಿಗೆ ಬೆಳಕಾಗಿ ಬಂದ ಮಗ

ಈ ದಂಪತಿಗಳಿಗೆ ಬಹು ಕಾಲ ಮಕ್ಕಳಿರಲಿಲ್ಲ. ಆದುದರಿಂದ ಅವರಿಗೆ ಖೇದವಾಗಿತ್ತು. ಬಸವಮ್ಮನಿಗಂತೂ ಇದು ತುಂಬ ದುಃಖದ ಸಂಗತಿಯಾಗಿತ್ತು. ಒಂದು ರಾತ್ರಿ ಅವರಿಗೆ ಒಂದು ಕನಸಾಯಿತು ಎಂದು ಹೇಳುತ್ತಾರೆ. ಜಂಗಮರೊಬ್ಬರು ಅವರ ಮನೆಗೆ ಬಂದು ಭಿಕ್ಷವನ್ನು ಸ್ವೀಕರಿಸಿ, ಫಲವನ್ನು ಕೊಟ್ಟು ’ನಿಮಗೆ ಒಬ್ಬ ಮಹಾಪುರುಷನು ಮಗನಾಗಿ ಹುಟ್ಟುತ್ತಾನೆ’ ಎಂದು ಹೇಳಿದಂತೆ ಭಾಸವಾಯಿತು. ಮರುದಿನ ಬೆಳಿಗ್ಗೆ ಅವರು ಗಂಡನಿಗೆ ಸ್ವಪ್ನದ ವಿಷಯವನ್ನು ತಿಳಿಸಿದರು. ಅವರೂ ಬಹಳ ಸಂತೋಷಪಟ್ಟರು.

ಜ್ಞಾನ ಸಂಪನ್ನರಾದ ಸದ್ಗುಣಶೀಲ ತಂದೆ, ಪತಿವ್ರತೆ ಹಾಗೂ ಭಗವದ್ಭಕ್ತಳಾದ ತಾಯಿ-ಸಹಜವಾಗಿ ಬಸವಪ್ಪ ಶಾಸ್ತ್ರಿಗಳು ಸದ್ಗುಣಶೀಲರಾದರು, ಭಗವದ್ಭಕ್ತರಾದರು. ತಾಯಿ ಅಂತಹ ವಿದ್ಯಾವಂತೆ ಅಲ್ಲದಿದ್ದರೂ ಮಧುರವಾದ ಕಂಠದಿಂದ ಕಾವ್ಯಗಳನ್ನು ಓದಬಲ್ಲವರಾಗಿದ್ದರು. ಮಹದೇವ ಶಾಸ್ತ್ರಿಗಳೂ ಕಾವ್ಯ ಓದುವ ಕಲೆಯನ್ನು ಚೆನ್ನಾಗಿ ಗಳಿಸಿಕೊಂಡಿದ್ದವರು. ಅರಮನೆಯಲ್ಲಿ ದಿನವೂ ಮಧ್ಯಾಹ್ನದ ಹೊತ್ತಿನಲ್ಲಿ ’ಅನುಭಾವ ಗೋಷ್ಠಿ’ ಎಂಬ ಪುಟ್ಟ ಸಭೆ ನಡೆಯುತ್ತಿತ್ತು. ಮಹಾಪ್ರಭುಗಳು, ಅವರ ಆಪ್ತ ಅಧಿಕಾರಿಗಳು, ಊರಿನ ದೊಡ್ಡ ಮನುಷ್ಯರು, ಆಸ್ಥಾನ ಪಂಡಿತರು ಅಲ್ಲಿ ಸೇರಿರುತ್ತಿದ್ದರು. ಆಗ ಶಾಸ್ತ್ರಿಗಳು ಹಲವು ಕಾವ್ಯಗಳನ್ನು ಮನಮುಟ್ಟುವಂತೆ ಓದುತ್ತಿದ್ದರು. ಅಗತ್ಯವಾದಾಗ ಅಲ್ಲಿದ್ದ ಪಂಡಿತರಲ್ಲಿ ಯಾರಾದರೊಬ್ಬರು ಅರ್ಥವನ್ನು ವಿವರಿಸಿ ಹೇಳುತ್ತಿದ್ದರು. ಬಸವಮ್ಮ ತಮ್ಮ ಮನೆಯ ಒಳ ಅಂಗಳದಲ್ಲಿ ಅಕ್ಕಪಕ್ಕದವರ ಮನೆಯ ಹೆಂಗಸರಿಗೆ ನಳಚರಿತ್ರೆ, ಸಾವಿತ್ರಿ ಚರಿತ್ರೆ ಮುಂತಾದ ಕಾವ್ಯಗಳನ್ನು ರಾಗವಾಗಿ ಓದಿ ಹೇಳುತ್ತಿದ್ದರು.

ಇಂತಹ ಪವಿತ್ರವಾದ ವಾತಾವರಣದಲ್ಲಿ ಬೆಳೆಯುವ ಭಾಗ್ಯ ಬಸವಪ್ಪ ಶಾಸ್ತ್ರಿಗಳಿಗೆ ದೊರೆಯಿತು.

ಅರಳುತ್ತಿದ್ದ ಮೊಗ್ಗು

ಇಂಥ ಉತ್ತಮ ಪಾಲನೆ ಪಡೆದ ಮಗು ದಿನದಿನಕ್ಕೆ ಅರಳುವ ಮೊಗ್ಗಿನಂತೆ ಮೈದುಂಬಿಕೊಂಡು ಬೆಳೆಯತೊಡಗಿತು. ದುಂಡುದುಂಡಾದ ಮಖ, ವಯಸ್ಸಿಗೆ ಸರಿಯಾಗಿ ಮೈತುಂಬಿಕೊಂಡ ಮಾಟ, ಮುಖದಲ್ಲಿ ಸಾತ್ವಿಕವಾದ ಕೋಮಲ ಕಳೆ, ಕಪಟವನ್ನೇ ಅರಿಯದ, ನೋಡುವವರ ಮನ ಗೆಲ್ಲುವ ಮಂದಹಾಸ, ಇವುಗಳಿಂದಾಗಿ ಮಗು ಬಹಳ ಲಕ್ಷಣವಾಗಿತ್ತು. ತಂದೆ ತಾಯಿಗಳ ಸಂತೋಷಕ್ಕೆ ಮಿತಿಯೇ ಇಲ್ಲ.

ಮಗು ಬಸವಪ್ಪ ಬೆಳೆಯುತ್ತಿದ್ದಂತೆ, ಐದನೆಯ ವಯಸ್ಸಿನಲ್ಲಿ ವಿದ್ಯಾಭ್ಯಾಸವನ್ನು ಆರಂಭ ಮಾಡಿಸಿದರು. ತಂದೆತಾಯಿಯರು ದಿನವೂ ಅವನಿಗೆ ಪೂಜೆ, ಮಂತ್ರಗಳು, ಸುಭಾಷಿತಗಳು, ಇವುಗಳನ್ನೆಲ್ಲ ಹೇಳಿಕೊಡುತ್ತಿದ್ದರು. ಅವರು ಮೈಮರೆತು ಸಂಭ್ರಮದಿಂದ ಪೂಜೆ ಮಾಡುವುದನ್ನು ನೋಡಿ ಬಾಲಕ ಬಸವಪ್ಪ ಬೆಕ್ಕಸಬೆರಗಾಗುತ್ತಿದ್ದ. ಅದನ್ನೇ ನೋಡುತ್ತಾ ಅದರಲ್ಲೆ ತಲ್ಲೀನನಾಗುತ್ತಿದ್ದ.

ಬಸವಪ್ಪ ತಂದೆಯ ಜೊತೆಯಲ್ಲೆ ಅರಮನೆಗೂ ಪೂಜೆಗೆ ಹೋಗುತ್ತಿದ್ದ. ಪ್ರಭುಗಳು ಭಕ್ತಿಯಿಂದ ದೇವರ ಪೂಜೆ ಮಾಡುವುದನ್ನು ನೋಡಿ, ಆ ಸಂದರ್ಭದಲ್ಲಿ ಅವರು ’ನಂಜುಂಡ ಶತಕ’ ಹಾಡುತ್ತಿದ್ದುದನ್ನು ಕೇಳಿ ಹುಡುಗ ಮಾರುಹೋಗಿದ್ದ. ಕೆಲವೇ ದಿನಗಳಲ್ಲಿ ಆ ಪದ್ಯಗಳನ್ನು ಹಾಡುವುದನ್ನು ತಾನಾಗಿಯೇ ಕಲಿತುಬಿಟ್ಟ. ಅವುಗಳನ್ನು ಹಾಡುವಾಗ ಅವನ ಸ್ಪಷ್ಟ ಉಚ್ಚಾರಣೆ, ಕಂಠಶ್ರೀ, ಹೊರಹೊಮ್ಮುವ ಭಕ್ತಿಭಾವ, ಇವೆಲ್ಲ ಎದುರಿಗಿದ್ದವರನ್ನು ಆಶ್ಚರ್ಯಗೊಳಿಸುತ್ತಿದ್ದವು.

ತಂದೆತಾಯಿಯರು ಕಾವ್ಯಗಳನ್ನು ಓದುತ್ತಿದ್ದಾಗಲೂ ಅಷ್ಟೆ; ಬೆಳೆಯುತ್ತಿದ್ದ ಬಸವಪ್ಪ ಊಟ, ತಿಂಡಿ, ಆಟಗಳನ್ನೆಲ್ಲ ಮರೆತು ಅದನ್ನು ಕೇಳುತ್ತಿದ್ದ. ಕಾವ್ಯ, ಸಂಗೀತ, ಪೂಜೆಮಂತ್ರಗಳು ಓದುವಿಕೆ-ಇವುಗಳಲ್ಲಿ ಸಹಜವಾದ ಆಸಕ್ತಿ ಅವನಲ್ಲಿ ಬೆಳೆದುಬಂದಿತು. ಮೊಗ್ಗು ನಿಧಾನವಾಗಿ ಸುಗಂಧ ಬೀರುತ್ತಾ ಹೂವಾಗಿ ಅರಳುವಂತೆ ಬಾಲಕ ಸುಸಂಸ್ಕೃತನಾಗುತ್ತ ಬೆಳೆದ.

ಸಿಡಿಲೆರಗಿತು

ಆದರೆ ಅಷ್ಟರಲ್ಲಿಯೇ ಬಲವಾದ ಬಿರುಗಾಳಿಯೊಂದು ಬೀಸಿ ಆ ಮೊಗ್ಗನ್ನು ಅಲುಗಾಡಿಸಿತು. ತಂದೆ ಮಹದೇವ ಶಾಸ್ತ್ರಿಗಳು ಅನಿರೀಕ್ಷಿತವಾಗಿ ಸಾವಿಗೀಡಾದರು. ಬಸವಮ್ಮನಿಗೆ ಸಿಡಿಲು ಹೊಡೆದಂತಾಯಿತು.

ಆದರೆ ಆಕೆ ಧೀರೆ. ಅವಳ ಭಗವದ್ಭಕ್ತಿಯೇ ಆ ಸಾಧ್ವಿಗೆ ಸಹಾಯಕವಾಗಿ ನಿಂತಿತು. ’ಹೇಗಾದರೂ ಮಾಡಿ ಮಗುವನ್ನು ಮುಂದಕ್ಕೆ ತರಲೇಬೇಕು’ ಎಂಬ ದೃಢ ಸಂಕಲ್ಪ ಮಾಡಿದಳು. ಪತಿವಿಯೋಗ ದುಃಖದ ಬೆಂಕಿಯನ್ನು ತನ್ನ ಒಡಲೊಳಗೇ ಬಚಿಟ್ಟ್ಚುಕೊಂಡು ಮಗನನ್ನು ಎಂದಿನಂತೆ ಪಾಲಿಸುತ್ತಿದ್ದಳು. ಬಾಲಕ ಬಸವಪ್ಪನಿಗೆ ಆಗಿನ್ನೂ ಈ ತೊಂದರೆಯನ್ನೆಲ್ಲ ಅರ್ಥಮಾಡಿಕೊಳ್ಳುವ ವಯಸ್ಸಾಗಿರಲಿಲ್ಲ. ಒಮ್ಮೊಮ್ಮೆ ತಾಯಿಯ ಹತ್ತಿರ ಬಂದು “ಅಪ್ಪ ಎಲ್ಲಿ ಹೋದರಮ್ಮ?” ಎಂದು ಕೇಳುವನು. ತಾಯಿಗೆ ತಡೆಯಲಾರದ ದುಃಖ.

ಮಹದೇವ ಶಾಸ್ತ್ರಿಗಳ ನಿಧನದಿಂದ ಪ್ರಭುಗಳಿಗೂ ತುಂಬ ದುಃಖವಾಯಿತು. ಅವರ ಪ್ರಾಣಸ್ನೇಹಿತರಾಗಿದ್ದರು ಶಾಸ್ತ್ರಿಗಳು. ಅದೇ ಮಮತೆಯಿಂದ ಅವರು ಬಸವಮ್ಮನವರಿಗೆ ಬೇಕಾದ ನೆರವು ನೀಡುತ್ತಿದ್ದರು. ಇದರಿಂದಾಗಿ ಆಕೆಗೆ ವೆಚ್ಚಕ್ಕೆ ಬೇಕಾಗುವಷ್ಟು ಹಣ, ವಸ್ತುಗಳು ದೊರೆಯುತ್ತಿದ್ದವು. ಮನಸ್ಸಿಗೆ ಮಾತ್ರ ಸಂತೋಷವಿರಲಿಲ್ಲ. ಆ ದುಃಖವನ್ನು ನುಂಗಿಕೊಂಡು ಮಗನ ಅಭ್ಯುದಯವನ್ನೆ ಯೋಚಿಸುತ್ತಿದ್ದಳು. ಮಗನಿಗೆ ವಿದ್ಯಾಭ್ಯಾಸ ಮಾಡಿಸುತ್ತಿದ್ದಳು.

ಆದರೆ ತಾಯಿ-ಮಗನಿಗೆ ಇನ್ನೂ ಕಷ್ಟ ಕಾದಿತ್ತು. ಮಗನಿಗಾಗಿ ಅಷ್ಟೊಂದು ಕಷ್ಟಪಡುತ್ತಿದ್ದ ತಾಯಿಗೇ ಕೆಟ್ಟರೋಗವೊಂದು ತಗುಲಿಕೊಂಡಿತು. ಈ ಕಾಯಿಲೆ ಜೊತೆಗೆ ಮಗುವಿನ ಗತಿ ಏನು ಎಂಬ ಚಿಂತೆ, ಇವುಗಳಿಂದಾಗಿ ಕೃಶರಾಗಿ ಬಹುಬೇಗನೇ ಅವರು ಮರಣ ಹೊಂದಿದರು. ಬಸವಪ್ಪನಿಗೆ ಈ ಲೋಕದಲ್ಲಿ ತನ್ನದಾಗಿ ಉಳಿದಿದ್ದ ಒಂದೇ ಒಂದು ಜೀವಿಯೂ ದೂರ ಹೊರಟುಹೋಯಿತು. ಎಳೆಯ ವಯಸ್ಸಿನಲ್ಲೇ ಬಾಲಕ ಅನಾಥನಾದ !ಕಷ್ಟದ ದಿನಗಳು

ಬಾಲಕ ಬಸವಪ್ಪ ತಂದೆತಾಯಿಗಳ ಸಾವಿನಿಂದಾಗಿ ಪೂರ್ತಿ ಅನಾಥನಾದ. ರಸ್ತೆಯೇ ಮನೆ, ಉಪಚರಿಸಿದವರೇ ತಾಯಿತಂದೆಯರು ಅವನ ಪಾಲಿಗೆ. ನೆರೆಹೊರೆಯ ಮುತ್ತೈದೆಯರು ಅವನಿಗೆ ಸ್ನಾನ ಮಾಡಿಸಿ, ತಿಂಡಿ ತೀರ್ಥ ಕೊಡುತ್ತಿದ್ದರು. ಅರಮನೆಯ ಅಡಿಗೆಯವರೂ ಸಹ ಪ್ರೀತಿಯಿಂದ ಅವನಿಗೆ ತಿನ್ನಲು ಕೊಡುತ್ತಿದ್ದರು.

ಆ ದಿನಗಳಲ್ಲಿ ಬಸವಪ್ಪ ಬಹು ಕಷ್ಟವನ್ನು ಅನುಭವಿಸಿದಂತೆ ಕಾಣುತ್ತದೆ. ಅವರಿವರ ಮನೆಯಲ್ಲಿ ಊಟ, ಶಾಲೆಯಲ್ಲಿ ಹೇಳಿಕೊಟ್ಟದ್ದನ್ನು ಬೀದಿಯ ದೀಪದ ಕೆಳಗೆ ಕುಳಿತು ಕಂಠಪಾಠ ಮಾಡಿಕೊಳ್ಳುವುದು. ಎಳೆಯ ಹುಡುಗನಾದ ಅವನು ರಾತ್ರಿ ಅವರಿವರ ಮನೆಯಲ್ಲಿ ಮಲಗುತ್ತಿದ್ದ. ಅಂತೂ ದಿನಗಳನ್ನು ತಳ್ಳುತ್ತಿದ್ದ.

ಅರಮನೆಯ ಮಗು

ಈ ವಿಷಯವು ಮಹಾರಾಜರಿಗೆ ತಿಳಿಯಿತು. ಅವರ ಅಳಿಯ ಲಿಂಗರಾಜರನ್ನು ಕರೆಸಿ, “ಈ ಹುಡುಗ ಅರಮನೆಯ ಪುರೋಹಿತ ಸ್ವಾಮಿಗಳ ಮಗ. ಇವನ ಯೋಗಕ್ಷೇಮ ಇನ್ನು ಮೇಲೆ ಅರಮನೆಗೆ ಸೇರಿದ್ದು. ಇವನನ್ನು ಮುಂದಕ್ಕೆ ತರುವ ಹೊಣೆಯನ್ನು ನೀವು ವಹಿಸಿಕೊಳ್ಳಬೇಕು. ಅದಕ್ಕಾಗಿ ಏನು ವ್ಯವಸ್ಥೆಮಾಡುವುದು ಅಗತ್ಯವೋ ಅವೆಲ್ಲವನ್ನು ಮಾಡಿ” ಎಂದು ಹೇಳಿದರು. ಲಿಂಗರಾಜರು ಸಂತೋಷದಿಂದ ಒಪ್ಪಿದರು.

ಹೀಗೆ ಬಸವಪ್ಪ ಅರಮನೆಯ ಮಗುವಾದ.

ಇಷ್ಟರ ನಡುವೆಯೂ ಅವನ ಒಳ್ಳೆಯತನ, ಜ್ಞಾಪಕ ಶಕ್ತಿ, ದೈವಭಕ್ತಿ ಅವನನ್ನು ಬಿಟ್ಟಿರಲಿಲ್ಲ. ಚಿಕ್ಕಂದಿನಲ್ಲಿ ಅವನು ದಿನವೂ ನೋಡುತ್ತಿದ್ದ ಪೂಜೆ, ಕೇಳುತ್ತಿದ್ದ ಕಾವ್ಯವಾಚನ, ಪಾಠಪ್ರವಚನ, ಇವುಗಳಿಂದ ಅವನಲ್ಲಿ ಒಳ್ಳೆಯ ಅಭಿರುಚಿ, ಒಳ್ಳೆಯ ಗುಣಗಳು ಬೆಳೆದಿದ್ದವು. ಅವೇ ಅವನನ್ನು ಈಗ ಕಾಪಾಡಿದವು.

ಯಾರು ಹಾಡುತ್ತಿರುವವರು ?

ಒಂದು ದಿನ ಮಧ್ಯಾಹ್ನ. ಅಂದು ನಂಜನಗೂಡಿನಲ್ಲಿ ಶ್ರೀಕಂಠೇಶ್ವರ ರಥೋತ್ಸವ. ಮಹಾರಾಜರು ರಥೋತ್ಸವಕ್ಕೆ ಹೋಗಿ ದೆವರ ಪೂಜೆ, ದರ್ಶನಗಳನ್ನು ಮುಗಿಸಿ ಮೈಸೂರಿಗೆ ಹಿಂದಿರುಗಿದ್ದರು. ಭೋಜನ ಸ್ವೀಕರಿಸಿ ಅರಮನೆಯಲ್ಲಿನ ತಮ್ಮ ಮಲಗುವ ಕೋಣೆಯಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು.

ಆಗ ಎಲ್ಲಿಂದಲೋ ಮಧುರವಾದ ಭಕ್ತಿಪೂರ್ಣ ರಾಗದಲ್ಲಿ ಶ್ರೀ ನಂಜುಂಡೇಶ್ವರನ ಸ್ತೋತ್ರ ಗಾಳಿಯಲ್ಲಿ ತೇಲಿಬಂತು. ಅದು ಕಲಿತು ಹಾಡುವ ವಿದ್ವಾಂಸರ ಗಾಯನದಂತಿರಲಿಲ್ಲ. ಆದರೆ ಸಹಜವಾಗಿ ಹಾಡುವ ಕೋಗಿಲೆಯ ಸುಸ್ವರದಂತಿತ್ತು. ಹೃದಯವನ್ನು ಸೂರೆಗೊಳ್ಳುತ್ತಿತ್ತು. ಮಧುರವಾದ ಧ್ವನಿ, ಆ ಪದ್ಯಗಳ ಅರ್ಥ ಸ್ವಲ್ಪವೂ ಕೆಡದಂತೆ ಅವುಗಳನ್ನು ಹಾಡುತ್ತಿದ್ದ ರೀತಿ, ಪ್ರಭುಗಳ ಮನಸ್ಸನ್ನು ಸೆಳೆದವು. ಅರೆನಿದ್ರೆಯಲ್ಲಿದ್ದವರಿಗೆ ಎಚ್ಚರವಾಯಿತು. ಕೊಠಡಿಯಿಂದ ಹೊರಕ್ಕೆ ಬಂದರು. ಮೆಟ್ಟಿಲುಗಳನ್ನಿಳಿದು ನೋಡಿದರು. ಆ ಗಾಯಕ ಯಾವ ವಿದ್ವಾಂಸನೂ ಅಲ್ಲ, ಕೇವಲ ಏಳೆಂಟು ವರ್ಷದ ಬಾಲಕನಾಗಿದ್ದ. ಹುಡುಗ ತನ್ನ ಸಂತೋಷಕ್ಕಾಗಿ ಹಾಡುತ್ತಿದ್ದ. ಅವನ ಗೀತೆಯಲ್ಲಿ ಮಾಧುರ್ಯವಿತ್ತು. ಭಕ್ತಿ ತನ್ಮಯತೆಯಿತ್ತು. ಆ ಗಾನಲಹರಿಗೆ ಮಾರುಹೋದರು ಪ್ರಭುಗಳು.

ಅರಸರಿಗೆ ಆ ಮಗು ಯಾರೆಂದು ತಿಳಿಯುವುದೇನೂ ತಡವಾಗಲಿಲ್ಲ. ಅಲ್ಲಿಯೇ ನಿಂತು ಹಾಡನ್ನು ಕೇಳುತ್ತಿದ್ದರು. ಎಷ್ಟೋ ಹೊತ್ತಿನ ಬಳಿಕ ಹಾಡು ನಿಂತಿತು. ತಕ್ಷಣ ಪ್ರಭುಗಳು ಹುಡುಗನ ಬಳಿಗೆ ಹೋದರು. ಮಹಾರಾಜರನ್ನು ಇದ್ದಕ್ಕಿದ್ದಂತೆ ಕಂಡಾಗ ಹುಡುಗನಿಗೆ ಆಶ್ಚರ್ಯ, ಭಯ. ಮಹಾರಾಜರು ಅವನಿಗೆ “ಬಹು ಚೆನ್ನಾಗಿ ಹಾಡಿದೆ ಮಗು ಭೇಷ್” ಎಂದು ಬೆನ್ನುತಟ್ಟಿದರು. ಹುಡುಗನ ಸಂಗೀತದ ಪಾಠಕ್ಕೆ ಏರ್ಪಾಟಾಯಿತು.

ಆದರ್ಶ ವಿದ್ಯಾರ್ಥಿ

ಬಸವಪ್ಪನ ಜ್ಞಾಪಕಶಕ್ತಿ, ವಿಷಯವನ್ನು ಬೇಗನೆ ಗ್ರಹಿಸುವ ಸಾಮರ್ಥ್ಯ, ಚಾತುರ್ಯ- ಈ ಗುಣಗಳಿಂದ ಲಿಂಗರಾಜರಿಗೆ ಅವನ ಮೇಲಿದ್ದ ಪ್ರೀತಿವಾತ್ಸಲ್ಯಗಳು ಹೆಚ್ಚಾಯಿತು. ಅವನ ಹರಿತವಾದ ಬುದ್ಧಿಶಕ್ತಿಯನ್ನು ಗುರುತಿಸಿದ ಲಿಂಗರಾಜರು ದೊರೆಗಳ ಅಪ್ಪಣೆ ಪಡೆದು ಅವನಿಗೆ ಬೇರೆಬೇರೆ ವಿಷಯಗಳಿಗೆ ಬೇರೆಬೇರೆ ಗುರುಗಳನ್ನು ಗೊತ್ತುಮಾಡಿದರು. ಹೀಗಾಗಿ ಬಸವಪ್ಪನಿಗೆ ಭವಿಷ್ಯ ರೂಪಿಸಿಕೊಳ್ಳಲು ಒಳ್ಳೆಯ ಅವಕಾಶ ದೊರೆತ ಹಾಗಾಯಿತು. ಕಷ್ಟಪಟ್ಟು ಕಲಿಯುವ ಮನಸ್ಸೂ ಅವನಿಗಿತ್ತು. ಇದರಿಂದಾಗಿ ಅವನು ಬಹುಬೇಗನೆ ತರ್ಕಶಾಸ್ತ್ರ, ವ್ಯಾಕರಣ, ಅಲಂಕಾರಗಳು, ಸಂಗೀತ, ವಾದ್ಯಗಳನ್ನು ನುಡಿಸುವುದು- ಹೀಗೆ ಹಲವು ವಿಷಯಗಳನ್ನು ಆಳವಾಗಿ ಅಭ್ಯಾಸ ಮಾಡಿದ. ರಘುವಂಶ, ಕುಮಾರಸಂಭವ, ಮೇಘದೂತ, ಶಿಶುಪಾಲ ವಧೆ ಮೊದಲಾದ ಸಂಸ್ಕೃತ ಮಹಾಕಾವ್ಯಗಳನ್ನು ಚೆನ್ನಾಗಿ ಅರಗಿಸಿಕೊಂಡ. ವೇದಾಂತವನ್ನು ಅಭ್ಯಾಸ ಮಾಡಿದ.

ಆಶುಕವಿ

ಕಾವ್ಯಗಳನ್ನು ಓದುವಾಗ ಹಾಗೇ ಅದರಲ್ಲಿನ ರಸವತ್ತಾದ ವರ್ಣನೆಗಳನ್ನೂ ಸನ್ನಿವೇಶಗಳನ್ನೂ ಬಸವಪ್ಪ ಸವಿಯುತ್ತಿದ್ದ. ಆ ಕವಿಯ ಭಾವನೆಯೇನು ಎನ್ನುವುದನ್ನು ಚೆನ್ನಾಗಿ ಗ್ರಹಿಸಿಕೊಂಡು, ಕನ್ನಡದಲ್ಲಿ ಅದೇ ಅರ್ಥದ ಪದ್ಯಗಳನ್ನು ರಚಿಸುತ್ತಿದ್ದ. ಹೀಗೆ, ಯಾವ ಪೂರ್ವಸಿದ್ದತೆಯೂ ಇಲ್ಲದೆ ನಿಂತ ನಿಲುವಿನಲ್ಲಿ ಕವಿತೆ ಬರೆಯುವ ಶಕ್ತಿಗೆ ಆಶುಕವಿತ್ವ ಎನ್ನುತ್ತಾರೆ. ಬಸವಪ್ಪ ಶಾಸ್ತ್ರಿಗಳು ಕಳೆದ ಶತಮಾನದ ಕನ್ನಡದ ಒಳ್ಳೆಯ ಆಶುಕವಿ.

ಪರೀಕ್ಷೆ

ಒಂದು ಸಾರಿ ಶಾಸ್ತ್ರಿಗಳ ಈ ಆಶುಕವಿತ್ವದ ಶಕ್ತಿ ಅವರಿಗೆ ಮಹದುಪಕಾರವನ್ನು ಮಾಡಿತು. ಒಮ್ಮೆ ಅವರು ಅರಮನೆಯಲ್ಲಿ ಮಹಾರಾಜರ ಮುಂದೆ ಕಾವ್ಯವಾಚನ ಮಾಡುತ್ತಿದ್ದರು. ಅವರ ಕೀರ್ತಿಯನ್ನು ಕಂಡು ಅಸೂಯೆ ಪಡುತ್ತಿದ್ದ ಕೆಲವರು, ಅವರಿಗೆ ಒಂದು ಓಲೆಗರಿಯ ಪ್ರತಿಯೊಂದನ್ನು ಕೊಟ್ಟು ಓದಬೇಕೆಂದು ಕೇಳಿದರು. ಅದು ಯಾರೂ ಓದಲು ಸಾಧ್ಯವಿಲ್ಲದ ಬರಹ. ಮಹಾರಾಜರ ಮುಂದೆ ಶಾಸ್ತ್ರಿಗಳಿಗೆ ಅಪಮಾನ ಮಾಡಿಸಬೇಕು ಎಂದೆ ಅವರ ಶತ್ರುಗಳು ಪ್ರತಿಯನ್ನು ಅವರ ಕೈಯಲ್ಲಿ ಇಟ್ಟಿದ್ದರು. ಶಾಸ್ತ್ರಿಗಳು ಮೂರು ನಾಲ್ಕು ಬಾರಿ ಅದನ್ನು ತಿರುಗಿಸಿ ನೋಡಿದರು. ಓದಲು ಸಾಧ್ಯವಾಗಲಿಲ್ಲ.

ಶಾಸ್ತ್ರಿಗಳು ಆಗಲೆ ಒಂದು ಕಾವ್ಯವನ್ನು ರಚಿಸುತ್ತ ವಾಚನ ಮಾಡಲು ಪ್ರಾರಂಭಿಸಿದರು. ನೋಡಿದವರಿಗೆ, ಕೇಳಿದವರಿಗೆ ಅವರು ಮುಂದೆ ಕಾವ್ಯವನ್ನು ಇಟ್ಟುಕೊಂಡು ವಾಚನ ಮಾಡುತ್ತಿದ್ದಾರೆ ಎಂದೇ ತೋರುತ್ತಿತ್ತು. ವಾಚನ ಸಾಗಿದಂತೆ ಮಹಾರಾಜರಿಗೂ ಹಲವರು ವಿದ್ವಾಂಸರಿಗೂ ’ಈ ಕಾವ್ಯವನ್ನು ಹಿಂದೆ ಕೇಳಿಲ್ಲವಲ್ಲ ! ಯಾವ ಕಾವ್ಯ ಇದು, ಬರೆದವರು ಯಾರು?’ ಎಂದು ಆಶ್ಚರ್ಯವಾಯಿತು. ಮಹಾರಾಜರು ಬಸವಪ್ಪ ಶಾಸ್ತ್ರಿಗಳನ್ನೇ, “ಇದು ಹೊಚ್ಚಹೊಸ ಕಾವ್ಯ ಇದ್ದಂತಿದೆಯಲ್ಲ, ಕಾವ್ಯದ ಹೆಸರೇನು? ಯಾರು ಕವಿ? ಯಾವ ಕಾಲದವನು?” ಎಂದು ಪ್ರಶ್ನಿಸಿದರು.

ಆ ಹೊತ್ತಿಗೆ ಕುಚೇಷ್ಟೆ ಮಾಡಲು ಹೊರಟವರೇ ತಬ್ಬಿಬ್ಬಾಗಿದ್ದರು. ಶಾಸ್ತ್ರಿಗಳಿಂದ ಮಹಾರಾಜರಿಗೆ ಸಂಗತಿ ತಿಳಿದರೆ ತಮಗೆ ಶಿಕ್ಷೆಯಾಗುತ್ತದೆ ಎಂದು ಹೆದರಿದರು. ತಾವೇ ಎದ್ದು ನಿಜಾಂಶವನ್ನು ಒಪ್ಪಿಕೊಂಡುಬಿಟ್ಟರು. ಮಹಾರಾಜರು ಅವರಿಗೆ ಬುದ್ಧಿ ಹೇಳಿದರು. ಬಸವಪ್ಪ ಶಾಸ್ತ್ರಿಗಳ ಸಾಮರ್ಥ್ಯವನ್ನು ಹೊಗಳಿ ಬಹುಮಾನ ಕೊಟ್ಟರು.

ಹೀಗೆ ಬಸವಪ್ಪನವರಲ್ಲಿ ಚಿಕ್ಕವಯಸ್ಸಿನಲ್ಲೆ ಕಾವ್ಯದ ರಸಾಸ್ವಾದನೆ ಮಾಡುವ ಸಾಮರ್ಥ್ಯ ಬೆಳೆದು ಬಂತು. ಮುಂದೆ ಪಾಂಡಿತ್ಯವೂ ಅನುಭವವೂ ಹೆಚ್ಚುತ್ತಾ ಬಂದಂತೆ ಸ್ವತಂತ್ರ ಕಾವ್ಯವನ್ನು ರಚಿಸುವುದಕ್ಕೆ ಆರಂಭಿಸಿದರು.

ಪುರೋಹಿತ ಸ್ವಾಮಿ

ಬಸವಪ್ಪ ಶಾಸ್ತ್ರಿಗಳು ಮೊಟ್ಟಮೊದಲು ಒಂದು ಚಿಕ್ಕ ಸಂಸ್ಕೃತ ಗ್ರಂಥವನ್ನು ಬರೆದರು. ಹೆಸರು- ’ಬಿಲ್ವವೃಕ್ಷ ಪೂಜಾವಿಧಿ’. ಮಹಾರಾಜರ ಪೂಜೆಯಲ್ಲಿ ಸಹಾಯಕವಾಗಲೆಂದು ಅದನ್ನು ಬರೆದದ್ದು. ಅದನ್ನು ಓದಿ ಪ್ರಭುಗಳು ಸಂತುಷ್ಟರಾದರು. ಮಹದೇವ ಶಾಸ್ತ್ರಿಗಳಿಗೆ ಕೊಟ್ಟಿದ್ದ ಸಮ್ಮುಖ ಪುರೋಹಿತ ಪದವಿಯನ್ನೇ ಇವರಿಗೂ ಕೊಟ್ಟರು. ಅಂದಿನಿಂದ ಬಸವಪ್ಪ ’ಬಸವಪ್ಪ ಶಾಸ್ತ್ರಿ’ಯಾದರು; ಜೊತೆಗೇ ’ಪುರೋಹಿತ ಸ್ವಾಮಿ’ ಎಂಬ ಉಪನಾಮವೂ ಬಂತು. ಆಗ ಅವರಿಗೆ ಹದಿನೆಂಟು ವರ್ಷ ಸಹ ತುಂಬಿರಲಿಲ್ಲ.

ಬಸವಪ್ಪ ಶಾಸ್ತ್ರಿಗಳು ಒಟ್ಟು ಇಪ್ಪತ್ತೆಂಟು ಗ್ರಂಥಗಳನ್ನು ಬರೆದಿದ್ದಾರೆ. ಅದರಲ್ಲಿ ಹನ್ನೊಂದು ಭಾಷಾಂತರ ಕೃತಿಗಳು. ಉಳಿದ ಹದಿನೇಳು ಸ್ವತಂತ್ರ ಕೃತಿಗಳು. ಸ್ವತಂತ್ರ ಕೃತಿಗಳಲ್ಲಿ ಹನ್ನೆರಡನ್ನು ಸಂಸ್ಕೃತದಲ್ಲೂ ಉಳಿದ ಐದನ್ನು ಕನ್ನಡದಲ್ಲೂ ಬರೆದಿದ್ದಾರೆ.

ಕೃಷ್ಣರಾಜಾಭ್ಯುದಯ

’ಬಿಲ್ವವೃಕ್ಷ ಪೂಜಾವಿಧಿ’ ಅವರ ಮೊದಲನೆಯ ಗ್ರಂಥ ಎಂದು ಹಿಂದೆಯೇ ಹೇಳಿದೆಯಷ್ಟೆ. ಅದು ಪುಟ್ಟ ಗ್ರಂಥ. ಅದನ್ನು ಬರೆದ ಮೇಲೆ ಅವರು ಕನ್ನಡದಲ್ಲಿ ಗದ್ಯ-ಪದ್ಯಮಿಶ್ರಿತ ಚಂಪೂ ಶೈಲಿಯಲ್ಲಿ ಇನ್ನೊಂದು ಮಹಾ ಕಾವ್ಯವನ್ನು ಬರೆದರು. ’ಕೃಷ್ಣರಾಜಾಭ್ಯುದಯ’ ಅದರ ಹೆಸರು. ದೊರೆ ಮುಮ್ಮಡಿ ಕೃಷ್ಣರಾಜ ಒಡೆಯರನ್ನು ಕುರಿತು ಬರೆದ ಗ್ರಂಥ. ಅದನ್ನು ೧೮೬೧ರಲ್ಲಿ ನವರಾತ್ರಿ ಉತ್ಸವದ ಸಮಯದಲ್ಲಿ ನಡೆದ ವಿದ್ವತ್ಸಭೆಯಲ್ಲಿ ’ಪ್ರಭುಗಳಿಗೆ ಕಾಣಿಕೆ’ ಎಂದು ಅರ್ಪಿಸಿದರು. ಪ್ರಭುಗಳು ಕುತೂಹಲದಿಂದ “ಅದನ್ನು ಸಭಿಕರಿಗೆ ಓದಿ ಹೇಳಿ” ಎಂದರು. ಬಸವಪ್ಪ ಶಾಸ್ತ್ರಿಗಳು ಆ ಕಾವ್ಯದ ಕೆಲವು ಭಾಗಗಳನ್ನು ಓದಿ ಹೇಳಿದರು. ಆ ಶೈಲಿ ಸೊಗಸಾಗಿತ್ತು. ಪಂಡಿತರಿಗೂ ಸಾಮಾನ್ಯ ಜನರಿಗೂ ಸಂತೋಷವನ್ನುಂಟುಮಾಡುವ ಹಾಗಿತ್ತು, ವಿದ್ವಾಂಸರೆಲ್ಲ ’ಭಲೆ ಭಲೆ’ ಎಂದರು. ಮಹಾರಾಜರು ಸಂತುಷ್ಟರಾಗಿ ತುಂಬಿದ ಸಭೆಯಲ್ಲಿ ಅವರಿಗೆ ಶಾಲುಜೋಡಿ ಹೊದಿಸಿ ಗೌರವಿಸಿದರು. ಖಿಲ್ಲತ್ತುಗಳನ್ನು ನೀಡಿದರು. ತಮ್ಮ ಆಸ್ಥಾನದಲ್ಲಿ ಮಹಾಕವಿಯ ಸ್ಥಾನಮಾನಗಳನ್ನು ಅವರಿಗೆ ಕೊಟ್ಟರು.

ಇಷ್ಟೆಲ್ಲಾ ನಡೆದಾಗ ಶಾಸ್ತ್ರಿಗಳ ವಯಸ್ಸು ಕೇವಲ ಹದಿನೆಂಟು.

ಮಹಾರಾಜರ ಗುರು

ಮುಂದೆ ಮುಮ್ಮಡಿ ಕೃಷ್ಣರಾಜ ಒಡೆಯರು ಸ್ವರ್ಗಸ್ಥರಾಗಿ ಚಾಮರಾಜ ಒಡೆಯರು ಮಹಾರಾಜರಾದರು. ಆಗ ಅವರಿಗಿನ್ನೂ ಏಳು ವರ್ಷ. ರಾಜ್ಯದ ಆಡಳಿತದ ಹೊಣೆಯನ್ನು ವಹಿಸಿಕೊಳ್ಳಲು ಅವರಿಗೆ ಶಿಕ್ಷಣ ಕೊಡಬೇಕಾಗಿತ್ತು. ಅವರ ಅಧ್ಯಾಪಕರಲ್ಲಿ ಬಸವಪ್ಪ ಶಾಸ್ತ್ರಿಗಳೂ ಒಬ್ಬರು. ಆಗ ಅವರಿಗೆ ಇಪ್ಪತ್ತೇಳು ವರ್ಷ ವಯಸ್ಸು. ಹತ್ತು-ಹನ್ನೊಂದು ವರ್ಷಗಳ ಕಾಲ ಮಹಾರಾಜರಿಗೆ ಉಪಾಧ್ಯಾಯರಾಗಿದ್ದರು. ೧೮೮೧ರಲ್ಲಿ ಚಾಮರಾಜ ಒಡೆಯರು ಸಿಂಹಾಸನವನ್ನು ಏರಿದರು. ಆಗ ಅವರು ಶಾಸ್ತ್ರಿಗಳನ್ನು ತಮ್ಮ ’ಸಲಹೆಗಾರರ ಮಂಡಲಿ’ಯಲ್ಲಿ ಒಬ್ಬರನ್ನಾಗಿ ತೆಗೆದುಕೊಂಡರು.

ಬಸವಪ್ಪ ಶಾಸ್ತ್ರಿಗಳು ನಿಸರ್ಗ ಸೌಂದರ್ಯದ ಪ್ರೇಮಿಗಳು, ಕಲಾಪ್ರೇಮಿಗಳು. ಅವರ ಗೆಳೆಯರಾದ ಪಾಪಣ್ಣನವರ ಸಹಾಯದಿಂದ ಕನ್ನಡ ನಾಡನ್ನೆಲ್ಲ ಸುತ್ತಿದರು. ಸುಂದರ ತಾಣಗಳನ್ನೂ ಪ್ರಸಿದ್ಧ ಕಲೆಯ ಬೀಡುಗಳಾದ ದೇವಾಲಯಗಳನ್ನೂ ಕಂಡು ಸಂತೋಷಪಟ್ಟರು.

ಶ್ರೀ ಚಾಮರಾಜೇಂದ್ರ ಕರ್ಣಾಟಕ ನಾಟಕ ಸಭಾ

ನಾಟಕಗಳನ್ನು ನೋಡಬೇಕೆಂದರೆ ನಮಗೆಲ್ಲ ಆಸೆ, ಅಲ್ಲವೆ? ನಮ್ಮ ಶಾಲೆಗಳಲ್ಲಿ, ಸಂಘಗಳಲ್ಲಿ ನಾಟಕಗಳನ್ನು ಆಡಬೇಕೆಂದು ಆಸೆ. ನಾಟಕ ಆಡಬೇಕೆಂದು ಆರಿಸಲು ಪುಸ್ತಕ ಭಂಡಾರಕ್ಕೆ ಹೋದರೆ ಎಷ್ಟು ನಾಟಕಗಳ ಪುಸ್ತಕಗಳು ಕಾಣುತ್ತವೆ. ಅವುಗಳಲ್ಲಿ ಕೆಲವಾದರೂ ಒಳ್ಳೆಯ ನಾಟಕಗಳು. ನಮ್ಮಲ್ಲಿ ಅರವತ್ತು-ಅರವತ್ತೈದು ವರ್ಷಗಳಿಂದ ನಾಟಕಗಳು ಬೆಳೆದುಕೊಂಡು ಬಂದಿರುವುದಕ್ಕೆ ಮಹಾರಾಜ ಚಾಮರಾಜೇಂದ್ರ ಒಡೆಯರು ಕಾರಣರು, ಬಸವಪ್ಪ ಶಾಸ್ತ್ರಿಗಳಂತಹ ನಾಟಕಕಾರರು ಕಾರಣರು.

೧೬೮೦ರಲ್ಲಿ ಸಿಂಗರಾರ್ಯ ಎಂಬಾತ ’ಮಿತ್ರವಿಂದಾ ಗೋವಿಂದ’ ಎಂಬ ನಾಟಕವನ್ನು ರಚಿಸಿದ. ಇದನ್ನು ಬಿಟ್ಟರೆ ಹತ್ತೊಂಬತ್ತನೆಯ ಶತಮಾನದ ಕೊನೆಯವರೆಗೆ ಕನ್ನಡದಲ್ಲಿ ನಾಟಕಗಳೇ ಬರಲಿಲ್ಲ ಎನ್ನಬಹುದು. ಇದು ನಿಜವಾಗಿ ಆಶ್ಚರ್ಯಕರವಾದ ಸಂಗತಿ. ಸಂಸ್ಕೃತ ಸಾಹಿತ್ಯ ಕನ್ನಡ ಸಾಹಿತ್ಯದ ಮೇಲೆ ಅಪಾರವಾದ ಪ್ರಭಾವ ಬೀರಿದೆ. ಆದರೆ ಸಂಸ್ಕೃತದಲ್ಲಿ ಹಲವು ನಾಟಕಗಳಿದ್ದರೂ ಕನ್ನಡದಲ್ಲಿ ಏಕೆ ನಾಟಕಗಳು ಬರಲಿಲ್ಲ ಎಂಬುದು ಸಮಸ್ಯೆ.

ಚಾಮರಾಜ ಒಡೆಯರು ಮಹಾರಾಜರಾಗಿದ್ದಾಗ ’ಬಾಲಿವಾಲಾ ಕಂಪೆನಿ’ ಎಂಬ ಹೆಸರಿನ ನಾಟಕದ ಕಂಪೆನಿಯೊಂದು ಬೆಂಗಳೂರಿಗೆ ಬಂದಿತು. ಇದರಲ್ಲಿ ಸ್ತ್ರೀ ಪಾತ್ರಗಳನ್ನು ಹೆಂಗಸರೇ ಮಾಡುತ್ತಿದ್ದರು ಎಂಬುದು ಆ ಕಾಲದಲ್ಲಿ ಹೊಸದಾದ ವಿಷಯ. ನೂರಾರು ಮಂದಿ ಬೇರೆ ಊರುಗಳಿಂದಲೂ ಬಂದು ನಾಟಕಗಳನ್ನು ನೋಡಿದರು. ಎಲ್ಲೆಲ್ಲಿಯೂ ನಾಟಕದ ಮಾತೇ, ನಾಟಕಗಳಲ್ಲಿ ಬರುತ್ತಿದ್ದ ಹಾಡುಗಳೇ.

ಜನರಿಗೆ ನಾಟಕಗಳಲ್ಲಿ ಎಷ್ಟು ಆಸಕ್ತಿ ಇದೆ ಎಂದು ಮಹಾರಾಜರಿಗೆ ಸ್ಪಷ್ಟವಾಯಿತು. ನಾಟಕಕಲೆಯ ಉದ್ಧಾರಕ್ಕೆ ಮನಸ್ಸು ಮಾಡಿದರು. ನಾಟಕ ಮಂದಿರದ ನಿರ್ವಹಣೆ, ಪರದೆಗಳನ್ನು ಕಟ್ಟುವ ರೀತಿ, ರಂಗಮಂಟಪದ ಸಜ್ಜಿಕೆ, ಮಳೆ ಬರಿಸುವುದು, ಬೆಂಕಿ ತೋರಿಸುವುದು ಮೊದಲಾದ ಚಮತ್ಕಾರಗಳ ಗುಟ್ಟು-ಇವನ್ನೆಲ್ಲ ಅಭ್ಯಾಸ ಮಾಡಲು ಕೆಲವರನ್ನು ಕಳುಹಿಸಿದರು. ಸುಮಾರು ೧೮೮೨ರಲ್ಲಿ ’ಶ್ರೀ ಚಾಮರಾಜೇಂದ್ರ ಕರ್ಣಾಟಕ ನಾಟಕ ಸಭಾ’ ಎಂಬ ಸಂಸ್ಥೆಯ ಸ್ಥಾಪನೆಯಾಯಿತು.

ನಾಟಕಕಾರ ಬಸವಪ್ಪ ಶಾಸ್ತ್ರಿಗಳು

ಸಂಸ್ಕೃತದಿಂದ ಒಳ್ಳೆಯ ನಾಟಕಗಳನ್ನು ಕನ್ನಡಕ್ಕೆ ಭಾಷಾಂತರಿಸುವಂತೆ ಚಾಮರಾಜ ಒಡೆಯರು ತಮ್ಮ ಆಸ್ಥಾನದ ವಿದ್ವಾಂಸರನ್ನೆಲ್ಲಾ ಕೇಳಿಕೊಂಡರು. ಬಸವಪ್ಪ ಶಾಸ್ತ್ರಿಗಳು ಆ ಕೆಲಸವನ್ನು ಪ್ರಾರಂಭಿಸಿದರು. ಅನೇಕ ಸಂಸ್ಕೃತ ಕಾವ್ಯ, ನಾಟಕಗಳನ್ನು ಅತ್ಯುತ್ತಮ ರೀತಿಯಲ್ಲಿ ಕನ್ನಡಕ್ಕೆ ಅನುವಾದಿಸಿದರು. ಇವುಗಳಲ್ಲಿ ಕಾಳಿದಾಸನ ’ಶಾಕುಂತಲ’ ಮತ್ತು ’ವಿಕ್ರಮೋರ್ವಶೀಯ’, ಭವಭೂತಿ ಕವಿಯ ’ಉತ್ತರರಾಮಚರಿತೆ’ ಮತ್ತು ’ಮಾಲತೀ ಮಾಧವ’, ಶ್ರೀಹರ್ಷನ ’ರತ್ನಾವಳಿ’, ಕ್ಷೇಮೇಂದ್ರ ಕವಿಯ ’ಚಂಡ ಕೌಶಿಕ’, ಭರ್ತೃಹರಿಯ ’ಶತಕತ್ರಯ’- ಇವು ತುಂಬಾ ಮುಖ್ಯವಾದವು. ಬಸವಪ್ಪ ಶಾಸ್ತ್ರಿಗಳ ಕೃತಿಶ್ರೇಣಿಯಲ್ಲಿ ’ಶೂರಸೇನ ಚರಿತ್ರೆ’ಗೆ ಒಂದು ವಿಶಿಷ್ಟ ಸ್ಥಾನವಿದೆ. ಅವರಿಗೆ ಕನ್ನಡ, ಸಂಸ್ಕೃತ ಭಾಷೆಗಳಲ್ಲಿ ಒಳ್ಳೆಯ ಪಾಂಡಿತ್ಯವಿತ್ತು. ಇಂಗ್ಲಿಷ್ ಭಾಷೆ ಬರುತ್ತಿರಲಿಲ್ಲ. ಆದರೆ ಅವರ ಜ್ಞಾನದಾಹ ಅಪಾರ. ಇಂಗ್ಲಿಷ್ ಬಲ್ಲ ವಿದ್ವಾಂಸರಿಂದ ಇಂಗ್ಲೆಂಡಿನ ಖ್ಯಾತ ನಾಟಕಕಾರ ಷೇಕ್ಸ್‌ಪಿಯರನ ಪ್ರಖ್ಯಾತ ನಾಟಕ ’ಒಥೆಲೋ’ ನಾಟಕವನ್ನು ಓದಿಸಿ, ಕೇಳಿ ತಿಳಿದುಕೊಂಡರು. ಅದನ್ನು ’ಶೂರಸೇನ ಚರಿತ್ರೆ’ ಎಂಬ ಹೆಸರಿನಲ್ಲಿ ಕನ್ನಡದಲ್ಲಿ ನಾಟಕ ರೂಪ ಕೊಟ್ಟರು. ಸಂಸ್ಕೃತ ಸಾಹಿತ್ಯದ ಶ್ರೇಷ್ಠ ನಾಟಕಕಾರ ಕಾಳಿದಾಸನ, ಇಂಗ್ಲಿಷ್ ಸಾಹಿತ್ಯದ ಶ್ರೇಷ್ಠ ನಾಟಕಕಾರ ಷೇಕ್ಸ್‌ಪಿಯರನ ನಾಟಕಗಳು ಕನ್ನಡದಲ್ಲಿ ಅವತರಿಸುವಂತೆ ಮಾಡಿದ ಶ್ರೇಷ್ಠ ಸಾಹಿತಿ ಬಸವಪ್ಪ ಶಾಸ್ತ್ರಿಗಳು. ಈ ಕಾರ್ಯದಲ್ಲಿ ಅವರು ಮೊದಲಿಗರೂ ಹೌದು, ಬಹು ಸಮರ್ಥರೂ ಹೌದು.

ಅಭಿನವ ಕಾಳಿದಾಸ

ಆಗಲೇ ಹೇಳಿದಂತೆ ’ಶಾಕುಂತಲ’ ನಾಟಕವನ್ನು ಅನುವಾದಿಸುವ ಕೆಲಸ ಬಹಳ ಕಷ್ಟಕರವಾದದ್ದು. ಶಾಸ್ತ್ರಿಗಳು ತುಂಬ ತಲ್ಲೀನತೆಯಿಂದ ಆ ನಾಟಕದ ತಿರುಳನ್ನು ಒಳಹೊಕ್ಕು ಅಭ್ಯಾಸಮಾಡಿದರು. ಕೊನೆಗೆ ತಮ್ಮ ಆ ತಪಸ್ಸಿನ ಸಾರಸರ್ವಸ್ವವನ್ನೇ ಭಟ್ಟಿ ಇಳಿಸಿದಂತೆ ’ಶಾಕುಂತಲ’ವನ್ನು ಕನ್ನಡಕ್ಕೆ ಅನುವಾದಿಸಿದರು. ಯಾವ ಕೃತಿಯ ಅನುವಾದವನ್ನೆ ಓದಲಿ, ಓದುವವರಿಗೆ ಅದು ಅನುವಾದ ಎಂದೇ ತೋರಬಾರದು; ಯಾವ ಭಾಷೆಗೆ ಅನುವಾದವಾಗಿದೆಯೊ ಆ ಭಾಷೆಯಲ್ಲೆ ಬರೆದಿದೆ ಎನ್ನಿಸಬೇಕು. ಆದರೆ ಮೂಲದ ಸೊಗಸು ಅನುವಾದದಿಂದ ಅನುಭವವಾಗಬೇಕು. ಬಸವಪ್ಪ ಶಾಸ್ತ್ರಿಗಳ ಅನುವಾದ ಇಂತಹದು. ’ಶಾಕುಂತಲ’ ಅನೇಕ ಭಾಷೆಗಳಿಗೆ ಅನುವಾದವಾಗಿದೆ. ಅತ್ಯುತ್ತಮ ಅನುವಾದಗಳಲ್ಲಿ ಬಸವಪ್ಪ ಶಾಸ್ತ್ರಿಗಳ ಅನುವಾದ ಒಂದು.

ಬಸವಪ್ಪ ಶಾಸ್ತ್ರಿಗಳು ಈ ನಾಟಕವನ್ನು ಅನುವಾದಿಸಿ ಮುಗಿಸಿದ ಬಳಿಕ, ಅದನ್ನು ಆಗ ಮೈಸೂರಿನ ದಿವಾನರಾಗಿದ್ದ ರಂಗಚಾರ್ಲು ಅವರಿಗೆ ಓದಲು ಕೊಟ್ಟರು. ಅವರು ಈ ಮಹಾ ಕೃತಿಯನ್ನು ಓದಿ ಆಶ್ಚರ್ಯಪಟ್ಟರು. ಅವರು ಅರಮನೆಯಲ್ಲಿ ವಿದ್ವತ್ಸಭೆಯನ್ನು ಏರ್ಪಡಿಸಿದರು. ಅಲ್ಲಿ ಅವರ ಅಪೇಕ್ಷೆಯಂತೆ ಶಾಸ್ತ್ರಿಗಳು ಸಂಗೀತ ರೂಪದಲ್ಲಿ ’ಶಾಕುಂತಲ’ವನ್ನು ಭಾವಪೂರ್ವಕರಾಗಿ ಓದಿದರು. ಮಹಾವಿದ್ವಾಂಸರು ಅನುವಾದವನ್ನು ಕೇಳಿ ಸಂತೋಷಪಟ್ಟರು, ತಲೆದೂಗಿದರು. ಅದೇ ಸಭೆಯಲ್ಲಿ ದಿವಾನ್ ರಂಗಾಚಾರ್ಲು ಅವರು ಬಸವಪ್ಪ ಶಾಸ್ತ್ರಿಗಳಿಗೆ ’ಅಭಿನವ ಕಾಳಿದಾಸ’ ಎಂಬ ಬಿರುದನ್ನು ಕೆತ್ತಿದ್ದ ಚಿನ್ನದ ಪದಕವನ್ನೂ ಅಮೂಲ್ಯ ಆಭರಣ ಖಿಲ್ಲತ್ತುಗಳನ್ನೂ ಕೊಟ್ಟು ಗೌರವಿಸಿದರು. ಈ ರೀತಿ ಗೌರವ ನೀಡುವುದನ್ನು ರಂಗಾಚಾರ್ಲು ಅವರು ಬಸವಪ್ಪ ಶಾಸ್ತ್ರಿಗಳಿಗೆ ತಿಳಿಸಿಯೇ ಇರಲಿಲ್ಲ. ಶಾಸ್ತ್ರಿಗಳದು ವಿನಯ ಸ್ವಭಾವ. ಮೊದಲೇ ತಿಳಿದರೆ ’ಬೇಡ’ ಎಂದುಬಿಡಬಹುದು ಎಂದು ರಂಗಾಚಾರ್ಲು ಅವರ ಯೋಚನೆ.

ಹೀಗೆ ಬಾಲಕ ಬಸವಪ್ಪ ’ಅಭಿನವ ಕಾಳಿದಾಸ ಬಸವಪ್ಪ ಶಾಸ್ತ್ರಿ’ಗಳಾದರು.

ಇತರ ಕೃತಿಗಳು

ಹೆಣ್ಣುಮಕ್ಕಳಲ್ಲಿ ಆದರ್ಶವನ್ನು ಬೆಳೆಸುವ ದೃಷ್ಟಿಯಿಂದ ಶಾಸ್ತ್ರಿಗಳು ’ಸಾವಿತ್ರೀ ಚರಿತ್ರೆ’ ಎಂಬ ಗ್ರಂಥವನ್ನು ಸರಳ ಕನ್ನಡದಲ್ಲಿ ಬರೆದರು. ’ನೀತಿಸಾರ ಸಂಗ್ರಹ’ ಎಂಬ ಇನ್ನೊಂದು ಕೃತಿಯನ್ನು ರಚಿಸಿ, ಮನುಷ್ಯ ಯಾವಯಾವ ಸಂದರ್ಭಗಳಲ್ಲಿ ಹೇಗೆ ನಡೆದುಕೊಳ್ಳಬೇಕು, ಯಾವಯಾವ ತತ್ವಗಳನ್ನು ಪಾಲಿಸಬೇಕು, ಎಂಬುದನ್ನು ಅವರು ವಿವರಿಸಿದ್ದಾರೆ.

ಸಂಸ್ಕೃತ-ಕನ್ನಡಗಳನ್ನು ಹದವಾಗಿ ಬೆರೆಸಿದರೆ ಕಾವ್ಯವು ಸಕ್ಕರೆ ಬೆರೆಸಿದ ಹಾಲಿನಂತಿರುತ್ತದೆ ಎಂಬುದು ಶಾಸ್ತ್ರಿಗಳ ಅಭಿಪ್ರಾಯವಾಗಿತ್ತು. ಅವರ ಕಾವ್ಯದ ಭಾಷೆಯು ಹಾಗೆಯೇ-ಸಕ್ಕರೆ ಬೆರೆಸಿದ ಹಾಲಿನಷ್ಟೇ ಸವಿಯಾಗಿದೆ.

ಬಸವಪ್ಪ ಶಾಸ್ತ್ರಿಗಳ ಸ್ವತಂತ್ರ ಕೃತಿಗಳಲ್ಲಿ ’ದಮಯಂತಿ ಸ್ವಯಂವರಂ’ ಎಂಬುದು ಉತ್ಕೃಷ್ಟವಾದ ಚಂಪೂಕಾವ್ಯ.

ಜನಸಾಮಾನ್ಯರ ಕವಿಯೂ ಹೌದು

ರಾಜರ ಆಶ್ರಯದಲ್ಲಿದ್ದರೂ ಬಸವಪ್ಪ ಶಾಸ್ತ್ರಿಗಳು ರಾಜರನ್ನು ಮಾತ್ರ ಮೆಚ್ಚಿಸಲು ಬರೆದವರಲ್ಲ.

ರಾಜರು ಕೊಡುವ ಬಂಗಾರದ ಕಂಕಣ ಒತ್ತಟ್ಟಿಗಿರಲಿ; ಕಾವ್ಯವನ್ನು ಸರಸ ಸ್ವಭಾವದ ರಸಿಕ ಜನರು ಓದಿ ಆ ಆನಂದದ ಸವಿನೋಡಿ ಸುರಿಸುವ ಆನಂದಬಾಷ್ಪವೇ ಕವಿಗೆ ನಿಜವಾದ ಕಂಕಣ ಎಂದು ಒಂದು ಕಡೆ ಅವರು ಹೇಳಿದ್ದಾರೆ. ಇದರಿಂದ ಅವರು ಸಾಮಾನ್ಯ ಜನರ ಕಡೆಗೂ ತಮ್ಮ ದೃಷ್ಟಿಯನ್ನಿಟ್ಟಿದ್ದರು ಎಂಬುದು ಅರ್ಥವಾಗುತ್ತದೆ. ಶಾಸ್ತ್ರಿಗಳು ಕಾವ್ಯದಲ್ಲಿ ಜಾತೀಯತೆಯ ಸೋಂಕನ್ನು ತರಲಿಲ್ಲ. ’ಒಳ್ಳೆಯ ವಿಷಯವಾಗಿದ್ದರೆ ಸಾಕು. ಯಾವ ಜಾತಿಯಾದರೇನು ? ಅದು ಕಾವ್ಯವಾಗಲು ಯೋಗ್ಯವಾದುದು.’ ಎಂಬ ವಿಶಾಲ ಭಾವನೆ ಅವರದ್ದು. ಇಂಗ್ಲಿಷ್ ಭಾಷೆಯ ಕೃತಿಯನ್ನೂ ಅವರು ಅನುವಾದಿಸಿರುವುದು ಅವರ ಈ ಗುಣಕ್ಕೆ ಕನ್ನಡಿ ಹಿಡಿದಂತಿದೆ.

ಹಿಂದಿನ ಮೈಸೂರು ಸಂಸ್ಥಾನದಲ್ಲಿ ಬಹು ಜನಪ್ರಿಯವಾಗಿದ್ದ ’ಕಾಯೌ ಶ್ರೀ ಗೌರಿ’ ಗೀತೆಯನ್ನು ಬರೆದವರು ಬಸವಪ್ಪ ಶಾಸ್ತ್ರಿಗಳೇ.

ಅಸಾಧಾರಣ ಗಮಕಿ

ಶಾಸ್ತ್ರಿಗಳ ಸಂಗೀತಶಕ್ತಿಯೂ ಅಪಾರವಾದದ್ದು. ಸಾಹಿತ್ಯ, ಸಂಗೀತ ಎರಡರಲ್ಲಿಯೂ ಪ್ರಾವೀಣ್ಯವನ್ನು ಪಡೆದಿರುವವರನ್ನು ಕಾಣುವುದೇ ಅಪರೂಪ. ಆದರೆ ಸಾಹಿತ್ಯ, ಸಂಗೀತಗಳಲ್ಲಿ ಶಾಸ್ತ್ರಿಗಳ ಪಾಂಡಿತ್ಯ ವಿಶೇಷವಾದದ್ದು. ಅವರಿನ್ನೂ ಹುಡುಗರಾಗಿದ್ದಾಗಲೇ ಅವರ ಕಂಠ ಪ್ರಭುಗಳನ್ನು ಆಕರ್ಷಿಸಿದ್ದುದನ್ನು ಹೇಳಿದೆಯಲ್ಲವೇ ? ಮಹಾಭಾರತ ಮೊದಲಾದ ಕಾವ್ಯಗಳನ್ನು ಅವರು ಮೈಸೂರು, ಬೆಂಗಳೂರುಗಳಲ್ಲಿ ವಾಚನ ಮಾಡುವಾಗ ಸಹಸ್ರಾರು ಸಂಖ್ಯೆಯಲ್ಲಿ ಜನ ಸೇರಿರುತ್ತಿದ್ದರು. ಕಾವ್ಯವು ಅರ್ಥವಾಗುವಂತೆ, ಪ್ರತಿ ಸನ್ನಿವೇಶದ ಸ್ವಾರಸ್ಯ, ಅದರ ಭಾವನೆಗಳು ಕೇಳುವವರಿಗೆ ಸ್ಪಷ್ಟವಾಗುವಂತೆ, ಸ್ಫುಟವಾಗಿ ವಾಚನ ಮಾಡುತ್ತಿದ್ದರು ಅವರು.

ನೀಲಗಿರಿ ಪಾಪಣ್ಣ ಎಂಬುವರು ಬಹು ಶ್ರೀಮಂತರು, ಧಾರಾಳವಾದ ಮನಸ್ಸಿನವರು, ಸಾಹಿತ್ಯ ಸಂಗೀತಗಳ ಪಕ್ಷಪಾತಿಗಳು, ಅವರು ತಮ್ಮ ಮನೆಯಲ್ಲಿ ವಾರಕ್ಕೊಂದು ಬಾರಿ ಶಾಸ್ತ್ರಿಗಳ ಕಾವ್ಯವಾಚನವನ್ನು ಏರ್ಪಡಿಸುತ್ತಿದ್ದರು. ಕೆಲವೇ ದಿನಗಳಲ್ಲಿ ಬರುವವರ ಸಂಖ್ಯೆ ಹೆಚ್ಚಾಗಿ ಸ್ಥಳ ಸಾಲದಾಯಿತು. ಎರಡು-ಮೂರು ಸಾವಿರ ಜನ ಸೇರುತ್ತಿದ್ದರು. (ಆಗಿನ ಕಾಲದಲ್ಲಿ ಧ್ವನಿವರ್ಧಕಗಳಿರಲಿಲ್ಲ ಎಂಬುದನ್ನು ನಾವು ನೆನಪಿಡಬೇಕು.)

ಒಮ್ಮೆ ಮಹಾರಾಜರು ಏರ್ಪಡಿಸಿದ್ದ ಒಂದು ವಿದ್ವಾಂಸರ ಗೋಷ್ಠಿಯಲ್ಲಿ ಬಸವಪ್ಪ ಶಾಸ್ತ್ರಿಗಳು ಕಾವ್ಯ ವಾಚನ ಮಾಡಿದರು. ಸ್ವಲ್ಪ ದೂರದಲ್ಲಿ ಹುಲ್ಲನ್ನು ಮೇಯುತ್ತಿದ್ದ ಆಕಳೊಂದು ಶಾಸ್ತ್ರಿಗಳ ಕಂಠ ಕೇಳುತ್ತಲೇ ಹುಲ್ಲನ್ನು ತಿನ್ನುವುದನ್ನು ಬಿಟ್ಟಿತು, ಕಾವ್ಯವಾಚನ ಮುಗಿಯುವವರೆಗೆ ಮತ್ತೆ ಮುಟ್ಟಲಿಲ್ಲ ಎಂದು ಹೇಳುವುದುಂಟು.

ಸಮಸ್ಯಾಪೂರ್ತಿ

ಆಶುಕವಿತ್ವ, ಹಾಗೂ ಸಮಸ್ಯಾಪೂರ್ತಿ ಸ್ಪರ್ಧೆಗಳಲ್ಲಿಯೂ ಶಾಸ್ತ್ರಿಗಳು ಬಹು ಸಮರ್ಥರಾಗಿದ್ದರು. (ಒಂದು ಸಭೆಯಲ್ಲಿ ಒಬ್ಬ ವಿದ್ವಾಂಸರು ಒಂದು ಸಮಸ್ಯೆಯನ್ನು ಪದ್ಯ ರೂಪದಲ್ಲಿ ಹೇಳಿ ಅರ್ಧಕ್ಕೆ ನಿಲ್ಲಿಸುತ್ತಾರೆ. ಆಗ ಇನ್ನೊಬ್ಬರು ಅದಕ್ಕೆ ಉತ್ತರವನ್ನು ನಿಂತ ನಿಲುವಿನಲ್ಲಿಯೇ ಅದೇ ಶೈಲಿಯಲ್ಲಿ ಹೇಳಿ ಆ ಪದ್ಯವನ್ನು ಪೂರ್ತಿ ಮಾಡಬೇಕು. ಇದೇ ’ಸಮಸ್ಯಾಪೂರ್ತಿ’ ಸ್ಪರ್ಧೆ. ಹಿಂದೆ ರಾಜರ ಆಸ್ಥಾನಗಳಲ್ಲಿ, ಪಂಡಿತರ ಮಂಡಳಿಗಳಲ್ಲಿ ಇಂತಹ ಸ್ಪರ್ಧೆಗಳು ಪದೇಪದೇ ನಡೆಯುತ್ತಿದ್ದವು.) ಅವರು ಹಲವು ಪಂಡಿತ ಮಂಡಳಿಗಳಲ್ಲಿ ಇದರಿಂದಾಗಿ ಮನ್ನಣೆ ಪಡೆದರು.

ಒಮ್ಮೆ ಮಹಾರಾಜ ಚಾಮರಾಜ ಒಡೆಯರ ಜೊತೆಗೆ ಅವರು ಮಾತನಾಡುತ್ತಿದ್ದಾಗ ಮಹಾರಾಜರಿಗೆ ಏಕೋ ಸ್ವಲ್ಪ ಅಸಮಾಧಾನವಾಯಿತು. ಅನಂತರ ಕೆಲವು ದಿನಗಳು ಅವರನ್ನು ಅರಮನೆಗೆ ಕರೆಯಲಿಲ್ಲ.

ಮಹಾರಾಜರ ಆಸ್ಥಾನಕ್ಕೆ ಕಾಶಿಯಿಂದ ಒಬ್ಬ ಪಂಡಿತರು ಬಂದರು. ಆಸ್ಥಾನದ ವಿದ್ವಾಂಸರ ಸಭೆಯಲ್ಲಿ ಸಮಸ್ಯೆಗಳನ್ನು ಒಡ್ಡಿ ತಮ್ಮ ವಿವರಣೆಯನ್ನು ಕೊಟ್ಟರು. ಅವರ ಮುಂದೆ ನಿಲ್ಲಬಲ್ಲ ವಿದ್ವಾಂಸರೇ ಮೈಸೂರು ಮಹಾರಾಜರ ಆಸ್ಥಾನದಲ್ಲಿ ಇಲ್ಲವೋ ಎಂದು ತೋರಿತು. ಮಹಾರಾಜರು ಬಸವಪ್ಪ ಶಾಸ್ತ್ರಿಗಳನ್ನು ಕರೆಸಿಕೊಂಡರು. ಅವರ ವಿದ್ವತ್ತಿನ ಮುಂದೆ ಕಾಶಿಯ ಪಂಡಿತರು ಸೋಲನ್ನು ಒಪ್ಪಿಕೊಳ್ಳಬೇಕಾಯಿತು. ಮಹಾರಾಜರು ತುಂಬಾ ಸಂತೋಷಪಟ್ಟು, ಶಾಸ್ತ್ರಿಗಳಿಗೆ ಮನ್ನಣೆ ಮಾಡಿದರು.

ಕಡೆಯ ದಿನಗಳು

ಇಷ್ಟೊಂದು ಕೀರ್ತಿ ಪಡೆದ ದೊಡ್ಡ ವಿದ್ವಾಂಸರೂ ಗಮಕಿಗಳೂ ’ಅಭಿನವ ಕಾಳಿದಾಸ’ನೆಂಬ ಬಿರುದಿಗೆ ಪಾತ್ರರೂ ಆದ ಬಸವಪ್ಪ ಶಾಸ್ತ್ರಿಗಳ ಕೊನೆಯ ದಿನಗಳು ತುಂಬಾ ಕಷ್ಟಕರವಾಗಿತ್ತು. ಅನೇಕ ರೀತಿಯ ಮಾನಸಿಕ ಯಾತನೆಗಳನ್ನು ಅವರು ಅನುಭವಿಸಬೇಕಾಯಿತು.

ದುಃಖಕರ ಮರಣ

ಆದರೆ ಎಲ್ಲ ಕಷ್ಟ, ನೋವುಗಳ ನಡುವೆ ಅವರ ಸಾಹಿತ್ಯರಚನೆ ಸಾಗುತ್ತಲೇ ಇತ್ತು. ಬಸವಪ್ಪ ಶಾಸ್ತ್ರಿಗಳು ’ಹರ್ಷಚರಿತೆ’, ’ಮಾಲತೀ ಮಾಧವ’ ಮತ್ತು ’ರೇಣುಕ ವಿಜಯ’ಗಳನ್ನು ಅರ್ಧ ಬರೆದಿದ್ದರು. ಅವು ಪೂರ್ಣಗೊಳ್ಳುವ ಸುದಿನ ಬರಲೇ ಇಲ್ಲ. ಒಂದು ದಿನ ಒಬ್ಬ ಸ್ನೇಹಿತರ ಮನೆಯಲ್ಲಿ ಧಾರ್ಮಿಕ ಪ್ರವಚನಗಳನ್ನು ಮುಗಿಸಿಕೊಂಡು, ನಿತ್ಯಪದ್ಧತಿಯಂತೆ ಅವರೊಡನೆ ಕುದುರೆಗಾಡಿಯಲ್ಲಿ ವಾಯುಸೇವನೆಗೆ ಹೊರಟರು; ಹಿಂದಿರುಗಿ ಬರುವಾಗಿ ಗಾಡಿಯ ಕುದುರೆ ಬೆಚ್ಚಿ ನಾಗಾಲೋಟದಿಂದ ಓಡತೊಡಗಿತು. ಗಾಡಿ ಹೊಡೆಯುವವನ ಹಿಡಿತ ತಪ್ಪಿ ಗಾಡಿ ಪಕ್ಕದ ಕೊರಕಲಿಗೆ ಉರುಳಿತು. ಶಾಸ್ತ್ರಿಗಳು ಚೂಪಾದ ಬಂಡೆ ಮೇಲೆ ಬಿದ್ದರು. ಹೊಟ್ಟೆಗೆ ಗಾಯವಾಗಿ ರಕ್ತ ಹರಿಯಿತು. ಸ್ನೇಹಿತರು ಕಷ್ಟದಿಂದ ಶಾಸ್ತ್ರಿಗಳನ್ನು ಮನೆಗೆ ಕರೆತಂದರು. ೧೮೯೧ರ ಫೆಬ್ರುವರಿ ೨೬ ರಂದು ಬಸವಪ್ಪ ಶಾಸ್ತ್ರಿಗಳು ತೀರಿಕೊಂಡರು.

ಕುತೂಹಲಕರವಾದ ಜೀವನ

ಬಸವಪ್ಪ ಶಾಸ್ತ್ರಿಗಳದು ಕುತೂಹಲಕರವಾದ ಜೀವನ. ತಂದೆ ತಾಯಿಯರನ್ನು ಚಿಕ್ಕ ವಯಸ್ಸಿನಲ್ಲೆ ಕಳೆದುಕೊಂಡರು. ಆದರೆ ಅವರಿಗೆ ರಾಜಾಶ್ರಯ ದೊರೆಯಿತು. ಸಹಜವಾಗಿ ಪಡೆದ ಮಧುರ ಕಂಠ, ಬುದ್ಧಿಶಕ್ತಿ ಇವುಗಳಿಂದ ಅವರು ಮಹಾರಾಜರ ಲಕ್ಷ್ಯವನ್ನು ಸೆಳೆದರು. ಅವರ ವಿದ್ಯಾಭ್ಯಾಸಕ್ಕೆ ಅರಮನೆಯೇ ವ್ಯವಸ್ಥೆ ಮಾಡಿತು. ಅದೃಷ್ಟದಿಂದ ಬಂದ ಶಕ್ತಿ, ಅವಕಾಶ ಇವುಗಳನ್ನು ಶ್ರಮದಿಂದ, ಶಿಸ್ತಿನ ಕೆಲಸದಿಂದ ಸಾರ್ಥಕ ಮಾಡಿಕೊಂಡು ತಾವು ಅಂತಹ ಅದೃಷ್ಟಕ್ಕೆ ಅರ್ಹರು ಎಂದು ತೋರಿಸಿಕೊಂಡರು ಶಾಸ್ತ್ರಿಗಳು. ಉದ್ದಾಮ ಪಂಡಿತರಾದರು. ಅರಮನೆಯಲ್ಲಿ ಸ್ಥಾನ, ಗೌರವ, ಮಹಾರಾಜರಿಗೆ ಗುರುಗಳಾಗುವ ಅವಕಾಶ, ಆ ಮಹಾರಾಜರೊಂದಿಗೆ ಮೈತ್ರಿ, ಸಲುಗೆ ಇವೆಲ್ಲ ಲಭಿಸಿದವು ಅವರಿಗೆ. ಅವರದು ಉದಾರ ಸ್ವಭಾವ. ಎಷ್ಟೋ ಹಣವನ್ನು ಸಂಪಾದಿಸಿದರೂ ಅವರು ತೀರಿಕೊಂಡನಂತರ ಸಂಸಾರಕ್ಕೆ ತಕ್ಕಷ್ಟು ಆಸ್ತಿ ಇರಲಿಲ್ಲ. ಹೆಂಡತಿ, ಮಕ್ಕಳು ಮೈಸೂರನ್ನು ಬಿಟ್ಟು ಕಾವೇರೀ ತೀರದಲ್ಲಿದ್ದ ಕೇರಳಾಪುರಕ್ಕೆ ಹೋಗಿ ನೆಲೆಸಬೇಕಾಯಿತು. ಇದಕ್ಕೆ ಮುಖ್ಯ ಕಾರಣ ಶಾಸ್ತ್ರಿಗಳ ದಾನದ ಕೈ. ಕಷ್ಟದಲ್ಲಿದ್ದ ವಿದ್ಯಾರ್ಥಿಗಳಿಗಂತೂ ಅವರು ಮಮತೆಯಿಂದ ಸಹಾಯ ಮಾಡುತ್ತಿದ್ದರು.

ಕನ್ನಡದ ಸೇವೆ

ಮುಖ್ಯವಾಗಿ ಇಂದು ಬಸವಪ್ಪ ಶಾಸ್ತ್ರಿಗಳನ್ನು ನಾವು ಸ್ಮರಿಸುವುದು ಕನ್ನಡಕ್ಕೆ ಅವರು ಮಾಡಿದ ಸೇವೆಗಾಗಿ. ಇದನ್ನು ಅರ್ಥಮಾಡಿಕೊಳ್ಳಬೇಕಾದರೆ ಅಂದಿನ ಸ್ಥಿತಿಗತಿಗಳನ್ನು ನಾವು ತಿಳಿಯಬೇಕು. ಆಗಲೇ ಹೇಳಿದಂತೆ ಭಾರತದ ಶ್ರೇಷ್ಠ ಕವಿ ಕಾಳಿದಾಸನ ನಾಟಕವನ್ನೆ ಕನ್ನಡದಲ್ಲಿ ಜನ ಓದುವುದಕ್ಕೆ, ನಾಟಕ ಮಂದಿರದಲ್ಲಿ ನೋಡುವುದಕ್ಕೆ ಅವಕಾಶವಿರಲಿಲ್ಲ. ಕಾಳಿದಾಸ, ಭವಭೂತಿ, ಶ್ರೀಹರ್ಷ ಮೊದಲಾದ ಹಿರಿಯ ಕವಿಗಳ ಕೃತಿಗಳು ಇದ್ದದ್ದೂ ಸಂಸ್ಕೃತ ಭಾಷೆಯಲ್ಲಿ. ಕನ್ನಡದಲ್ಲಿ ನಾಟಕ ಇನ್ನೂ ಬೆಳೆದಿರಲಿಲ್ಲ. ಕೆಲವು ಕಂಪೆನಿಗಳವರು ಸಾಹಸದಿಂದ ಅಲ್ಲಲ್ಲಿ ನಾಟಕಗಳನ್ನು ಆಡುತ್ತಿದ್ದರು, ಅಷ್ಟೆ. ಕಾಳಿದಾಸ, ಭವಭೂತಿ, ಶ್ರೀಹರ್ಷ, ಭರ್ತೃಹರಿ, ಬಾಣ ಮೊದಲಾದ ಖ್ಯಾತಿವಂತ ಕವಿಗಳ ಕೃತಿಗಳನ್ನು ಸುಂದರವಾಗಿ ಕನ್ನಡಕ್ಕೆ ಅನುವಾದಿಸಿ ಕನ್ನಡಿಗರಿಗೆ ಲಭ್ಯಮಾಡಿಕೊಟ್ಟವರು ಬಸವಪ್ಪ ಶಾಸ್ತ್ರಿಗಳು..

ಮಾದರಿಯೇ ಇರಲಿಲ್ಲ

ಇಷ್ಟೇ ಅಲ್ಲ, ನಾಟಕವನ್ನು ಅಭಿನಯಿಸಿದಾಗಲೇ ಅದರ ಸೊಬಗು ಸಂಪೂರ್ಣವಾಗಿ ತಿಳಿಯುವುದು. ಕವನ, ಕಥೆ , ಕಾದಂಬರಿಗಳನ್ನು ಜನ ಓದಲೆಂದು ಬರೆಯುತ್ತಾರೆ. ನಾಟಕವನ್ನು ರಂಗಭೂಮಿಯಲ್ಲಿ ಪ್ರದರ್ಶಿಸಲು ನಾಟಕಕಾರ ಬರೆಯುತ್ತಾನೆ. ’ವಿಕ್ರಮೋರ್ವಶೀಯ’, ’ಶಾಕುಂತಲ’ ಇಂತಹ ನಾಟಕಗಳು ಕನ್ನಡದಲ್ಲಿ ಅನುವಾದವಾದರೆ, ನಟರಿಗೆ ತಮ್ಮ ಅಭಿನಯದ ಕೌಶಲವನ್ನು ತೋರಿಸುವುದಕ್ಕೆ ಒಳ್ಳೆಯ ಅವಕಾಶ. ಸಾಮಾನ್ಯ ಜನರಿಗೆ ಶ್ರೇಷ್ಠವಾದ ನಾಟಕವನ್ನು ಸವಿಯಲು ಅವಕಾಶ.

ಸಿಂಗರಾರ್ಯನ ’ಮಿತ್ರಾವಿಂದಾ ಗೋವಿಂದ’ ನಾಟಕದ ಹೆಸರು ಆಗಲೆ ಹೇಳಿದೆ. ಆತ ಇದ್ದದ್ದೂ ಬಸವಪ್ಪ ಶಾಸ್ತ್ರಿಗಳಿಗಿಂತ ಸುಮಾರು ಇನ್ನೂರು ವರ್ಷಗಳ ಹಿಂದೆ. ಅವನೂ ಸಂಸ್ಕೃತ ನಾಟಕವನ್ನೇ ಆಧಾರವಾಗಿಟ್ಟುಕೊಂಡು ಬರೆದ. ಆದರೆ ಅವನದು ಅಷ್ಟೇನೂ ಒಳ್ಳೆಯ ನಾಟಕವಲ್ಲ. ಅನಂತರ ಸುಮಾರು ಇನ್ನೂರು ವರ್ಷ ಕನ್ನಡದಲ್ಲಿ ನಾಟಕವೇ ಇರಲಿಲ್ಲ ಎನ್ನಬಹುದು. ಎಂದರೆ ಬಸವಪ್ಪ ಶಾಸ್ತ್ರಿಗಳಿಗೆ ಮೇಲ್ಪಂಕ್ತಿ ಎಂದು ಒಳ್ಳೆಯ ನಾಟಕವೇ ಇರಲಿಲ್ಲ. ಅನುವಾದವನ್ನು ಹೇಗೆ ಮಾಡಬೇಕು ಎಂದು ತೋರಿಸಿಕೊಡುವುದಕ್ಕೆ ಮಾದರಿಯೇ ಇರಲಿಲ. ಅವರ ಕನ್ನಡ ’ಶಾಕುಂತಲ’ ಎಷ್ಟು ಚೆನ್ನಾಗಿದೆ ಎಂದು ಮೆಚ್ಚುವಾಗ ನಾವು ಈ ಅಂಶವನ್ನೂ ನೆನಪಿನಲ್ಲಿಡಬೇಕು.

ಆಗಿನ ಕಾಲ

೧೮೯೧ರಲ್ಲಿ ಬಸವಪ್ಪ ಶಾಸ್ತ್ರಿಗಳು ತೀರಿಕೊಂಡರಲ್ಲವೇ ? ೧೮೮೨ರಲ್ಲಿ ಶ್ರೀ ಚಾಮರಾಜೇಂದ್ರ ನಾಟಕ ಸಭೆಯ ಸ್ಥಾಪನೆಯಾಯಿತು. ಕನ್ನಡದ ಮೊದಲನೆಯ ಮುದ್ರಣಾಲಯ ಸ್ಥಾಪಿತವಾದದ್ದು ೧೮೫೩ರಲ್ಲಿ. ಮುದ್ರಣಾಲಯಗಳು ಬೆಳೆದದ್ದು ಬಹು ನಿಧಾನವಾಗಿ. ಈಗ ನಮ್ಮ ಕಾಲದಲ್ಲಿ ನೂರಾರು ಮುದ್ರಣಾಲಯಗಳಿವೆ. ಸಣ್ಣ ಊರುಗಳಲ್ಲಿಯೂ ಮುದ್ರಣಾಲಯಗಳಿವೆ. ಆದುದರಿಂದ ಯಾವ ಪುಸ್ತಕದ ಪ್ರತಿಯಾದರೂ ಸುಲಭವಾಗಿ ಸಿಕ್ಕುತ್ತದೆ. ಅಚ್ಚಾಗಿರುವುದರಿಂದ ಓದುವುದು ಸುಲಭ. ಈಗ ಅಕ್ಷರಸ್ಥರ ಸಂಖ್ಯೆಯೂ ಹೆಚ್ಚಾಗಿದೆ. ಹೆಂಗಸರಲ್ಲಿ ವಿದ್ಯಾಭ್ಯಾಸ ಬೆಳೆದಿದೆ. ಇಷ್ಟಾಗಿಯೂ ನೂರಕ್ಕೆ ಮೂವತ್ತು ಮಂದಿ ಮಾತ್ರ ಅಕ್ಷರಸ್ಥರು. ಆಗ ಈ ಸಂಖ್ಯೆ ಬಹು ಕಡಮೆ. ಹೆಂಗಸರಲ್ಲಿ ಓದು ಬರಹ ಬಲ್ಲವರು ತೀರ ಕಡಮೆ. ಮುದ್ರಣಾಲಯಗಳಿಲ್ಲ, ಆದುದರಿಂದ ಪುಸ್ತಕಗಳ ಪ್ರತಿಗಳು ದೊರೆಯುವುದು ಕಷ್ಟ. ಅವನ್ನು ಬರೆದಿರುವುದು ಓಲೆಗರಿಗಳಲ್ಲಿ. ಅವನ್ನು ಓದುವುದು ಬಹು ಕಷ್ಟ. ಕೆಲವರಿಗೆ ಮಾತ್ರ ಸಾಧ್ಯ.

ಸೇತುವೆ ಕಟ್ಟುವವರು ಯಾರು ?

ಇಂತಹ ಪರಿಸ್ಥಿತಿಯಲ್ಲಿ ಸಾಹಿತ್ಯ ಉಳಿಯುವುದು ಹೇಗೆ ? ಓದುವವರು, ಮೆಚ್ಚುವವರು ಇದ್ದರೆ ಅಲ್ಲವೆ ಸಾಹಿತಿಗೆ ಬರೆಯುವ ಆಸೆ ಬರುವುದು ? ರಾಜರು, ಅವರ ಆಸ್ಥಾನದ ಪಂಡಿತರು ಮಾತ್ರ ಓದಿದರೆ ಸಾಕೆ ? ಸಾಮಾನ್ಯ ಜನರಲ್ಲಿ ಬಹು ಮಂದಿಗೆ ಓದು ಬರಹ ಬರುವುದಿಲ್ಲ, ಬಂದವರಿಗೂ ಪುಸ್ತಕ ದೊರೆಯುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಜನಸಾಮಾನ್ಯರಿಗೂ ಒಳ್ಳೆಯ ಸಾಹಿತ್ಯಕ್ಕೂ ನಡುವೆ ಸೇತುವೆ ಯಾವುದು ?

ನಟರು ಮತ್ತು ಗಮಕಿಗಳು ಸೇತುವೆ ಕಟ್ಟುವವರು.

ಓದು ಬರಹ ಬಾರದವರೂ ಓಳ್ಳೆಯ ನಾಟಕಗಳನ್ನು ನೋಡಬಹುದು. ಓದು ಬರಹ ಬಾರದವರೂ ಕಾವ್ಯವಾಚನವನ್ನು ಕೇಳಿ ಕಾವ್ಯದ ರುಚಿಯನ್ನು ಸವಿಯಬಹುದು. ಅಲ್ಲದೆ, ನಟರ ಒಂದು ಗುಂಪುನಾಟಕದ ಸವಿಯನ್ನು ಸಾವಿರಾರು ಜನರಿಗೆ ತಂದುಕೊಡಬಹುದು. ಒಬ್ಬ ಗಮಕಿ ಸಾವಿರಾರು ಜನರಿಗೆ ಒಂದು ಕಾವ್ಯದ ರಸಾನುಭವ ಮಾಡಿಸಬಹುದು.

ಮುದ್ರಣವಿಲ್ಲದ ಕಾಲದಲ್ಲಿ, ಓದು ಬರಹ ಬಲ್ಲವರು ಬಹು ಕಡಿಮೆ ಇದ್ದ ಕಾಲದಲ್ಲಿ, ಕಾದಂಬರಿಗಳು-ಸಣ್ಣಕತೆಗಳು ಇಲ್ಲದಿದ್ದ ಕಾಲದಲ್ಲಿ, ಜನರಲ್ಲಿ ಸಾಹಿತ್ಯದ ಅಭಿರುಚಿಯನ್ನು ಜೀವಂತವಾಗಿಟ್ಟ ಬಸವಪ್ಪ ಶಾಸ್ತ್ರಿಗಳ ಸೇವೆ ಹಿರಿದಾದದ್ದು, ಅಲ್ಲವೇ ?

ಶೂರಸೇನ ಚರಿತ್ರೆ

ಕನ್ನಡದ ಓದು ಬಲ್ಲವರ ಸಂಖ್ಯೆಯೇ ಕಡಿಮೆಯಾಗಿದ್ದಾಗ ಇಂಗ್ಲಿಷ್ ಬಲ್ಲವರ ಸಂಖ್ಯೆ ಸಹಜವಾಗಿ ಇನ್ನೂ ಕಡಿಮೆ. ಸ್ವತಃ ಬಸವಪ್ಪ ಶಾಸ್ತ್ರಿಗಳಿಗೇ ಇಂಗ್ಲಿಷ್ ಅಷ್ಟೇನೂ ಬಾರದು. ಆದರೆ ಇಂಗ್ಲಿಷ್ ನಾಟಕದ ರುಚಿಯನ್ನೂ ಸವಿಯಬೇಕೆಂದು ಇಂಗ್ಲಿಷ್ ಬಲ್ಲವರಿಂದ ಜಗತ್ತಿನ ಮಹಾ ನಾಟಕಕಾರರಲ್ಲಿ ಒಬ್ಬರಾದ ಷೇಕ್ಸ್‌ಪಿಯರನ ’ಒಥೆಲೊ’ ನಾಟಕವನ್ನು ಓದಿಸಿ ತಿಳಿದುಕೊಂಡರು. ತಮ್ಮಂತೆ, ಇಂಗ್ಲಿಷ್ ಬಾರದಿದ್ದರೂ ಇಂಗ್ಲಿಷ್ ನಾಟಕದಲ್ಲಿ ಆಸಕ್ತಿ ಇದ್ದವರಿಗಾಗಿ ’ಒಥೆಲೊ’ ನಾಟಕವನ್ನು ಆಧಾರವಾಗಿಟ್ಟುಕೊಂಡು ’ಶೂರಸೇನ ಚರಿತ್ರೆ’ಯನ್ನು ಬರೆದರು. ಸಂಸ್ಕೃತವನ್ನು ಆಳವಾಗಿ ಆಭ್ಯಾಸ ಮಾಡಿ ಕಾಳಿದಾಸನ ’ಶಾಕುಂತಲ’ ನಾಟಕವನ್ನು ಸ್ವತಃ ಸವಿದಿದ್ದ ಶಾಸ್ತ್ರಿಗಳು ನಾಟಕವನ್ನು ಕನ್ನಡದ ಎರಕಕ್ಕೆ ಹೊಯ್ದಾಗ ಅವರ ಕೃತಿ ತುಂಬ ಸುಂದರವಾಯಿತು. ಮತ್ತೊಬ್ಬರಿಂದ ಅರ್ಥ ತಿಳಿದುಕೊಂಡು ಇಂಗ್ಲಿಷ್ ನಾಟಕವನ್ನು ಕನ್ನಡದ ಎರಕಕ್ಕ ಹೊಯ್ದಾಗ ಅವರ ಕೃತಿ ಅಷ್ಟು ಸುಂದರವಾಗಿರಲಿಲ್ಲ. ಇದು ಸಹಜವೇ. ಆದರೆ ಇಂಗ್ಲಿಷ್ ತಿಳಿಯದ ಕನ್ನಡಿಗರಿಗೂ ಷೇಕ್ಸ್‌ಪಿಯರನ ದುರಂತ ನಾಟಕದ ಕಲ್ಪನೆಯನ್ನು ಸುಮಾರು ತೊಂಬತ್ತು ವರ್ಷಗಳ ಹಿಂದೆ ಬಸವಪ್ಪ ಶಾಸ್ತ್ರಿಗಳು ತಂದುಕೊಟ್ಟರು ಎಂಬುದು ಮೆಚ್ಚಬೇಕಾದ ಸಂಗತಿ.

ಅವರ ಸ್ವತಂತ್ರ ಕೃತಿಗಳಲ್ಲಿ ’ಸಾವಿತ್ರೀ’ ಜನಪ್ರಿಯ ವಾಯಿತು. ರಾಜಕುಮಾರಿಯಾಗಿ ಹುಟ್ಟಿ, ಬೇಗ ಸಾಯುತ್ತಾನೆ ಎಂದು ತಿಳಿದಿದ್ದರೂ ಸದ್ಗುಣವಂತನಾದ ಸತ್ಯವಂತನನ್ನು ಮದುವೆಯಾಗಿ, ಯಮನನ್ನೂ ಎದುರಿಸಿ, ತನ್ನ ಜಾಣ್ಮೆಯಿಂದ, ವಿನಯದಿಂದ, ಪ್ರೇಮದಿಂದ ಗಂಡನನ್ನು ಉಳಿಸಿಕೊಂಡ ಸಾವಿತ್ರಿಯ ಕಥೆ ಭಾರತದಲ್ಲಿ ಪ್ರಸಿದ್ಧವಾದದ್ದು. ಈ ಕಥೆಯನ್ನು ಸರಳವಾದ ಶೈಲಿಯಲ್ಲಿ ಶಾಸ್ತ್ರಿಗಳು ಈ ಕಾವ್ಯದಲ್ಲಿ ನಿರೂಪಿಸಿದ್ದಾರೆ.

ನಮ್ಮ ಕೃತಜ್ಞತೆ ಸಲ್ಲಬೇಕು

ಕನ್ನಡ ಸಾಹಿತ್ಯ ಬರಡಾಗಿದ್ದ ಕಾಲದಲ್ಲಿ ಬಸವಪ್ಪ ಶಾಸ್ತ್ರಿಗಳು ಸಾಹಿತ್ಯ ರಚನೆ ಮಾಡಿದರು. ಸಾಹಿತ್ಯ ಮನಸ್ಸಿಗೆ ಆನಂದವನ್ನು ಕೊಡಬೇಕು, ಜೊತೆಗೆ ಮನಸ್ಸನ್ನು ಅರಳಿಸಬೇಕು, ಸ್ವಭಾವವನ್ನು ನಯಗೊಳಿಸಬೇಕು ಎಂಬ ದೃಷ್ಟಿಯಿಂದ ಸಾಹಿತ್ಯವನ್ನು ರಚಿಸಿದರು. ಮಹಾರಾಜರು, ವಿದ್ವಾಂಸರು, ಜನಸಾಮಾನ್ಯರು ಎಲ್ಲರೂ ಮೆಚ್ಚುವಂತಹ ಕೃತಿಗಳನ್ನು ರಚಿಸಿ, ಎಲ್ಲರೂ ಮೆಚ್ಚುವಂತೆ ಕಾವ್ಯಗಳನ್ನು ಓದಿ ಹೇಳಿದರು. ಅವರಿಗೆ ನಮ್ಮ ಕೃತಜ್ಞತೆ ಸಲ್ಲಬೇಕು.