೧೯೭೯ ಧಾರವಾಡದಲ್ಲಿ ಸಿತಾರರತ್ನ ರಹಿಮತ್‌ಖಾನರ ೨೫ನೆಯ ಪುಣ್ಯತಿಥಿ ಸಂಗೀತೋತ್ಸವ. ಮೂರು ರಾತ್ರಿ ಸಂಗೀತ ಸಮಾರಾಧನೆ. ಅಖಿಲ ಭಾರತ ಮಟ್ಟದ ಸಂಗೀತಗಾರರು ಪಾಲ್ಗೊಂಡಿದ್ದರು. ಉಸ್ತಾದ ಅಮೀರಖಾನರ ಶಿಷ್ಯೆ ಕಂಕಣಾ ಬ್ಯಾನರ್ಜಿ ಮತ್ತು ಪಂಡಿತ ಜಸರಾಜರ ಅಣ್ಣ ಪಂಡಿತ ಪ್ರತಾಪನಾರಾಯಣ (ಚಲನಚಿತ್ರ ನಟಿ ಸುಲಕ್ಷಣಾ ಪಂಡಿತಳ ತಂದೆ) ಬಂದಿದ್ದರು. ಅವರಿಬ್ಬರೂ ಜುಗಲಬಂದಿ ಹಾಡುವವರಿದ್ದರು. ತಾವು ಹಾಡುವುದಕ್ಕಿಂತ ಮುಮಚೆ ತಬಲಜಿಯೊಂದಿಗೆ ಸ್ವಲ್ಪ ರಿಹರ್ಸಲ್‌ ಮಾಡಿಕೊಳ್ಳುವುದು ಎಲ್ಲಾ ಸಂಗೀತಗಾರರ ಪರಿಪಾಠ. ಒಬ್ಬೊಬ್ಬರದು ಒಂದೊಂದು ರೀತಿ ಸಮ್‌ಗೆ ಬರುವ ಶೈಲಿ ಇರುತ್ತದೆ. ತಬಲಜೀ ಅದೇ ಕಾಲಕ್ಕೆ ಸಮ್‌ಗೆ ಬರಬೇಕು. ಅಂದರೆ ಮಾತ್ರ ಗಾಯನಕ್ಕೆ ಕಳೆ ಕಟ್ಟುತ್ತದೆ. ವಿಶೇಷತಃಣ ಅಪರಿಚಿತ ತಬಲಜಿ ಇದ್ದಾಗ ಪೂರ್ವಭಾವಿಯಾಗಿ ಇದನ್ನು ನೋಡಿಟ್ಟುಕೊಂಡಿರಬೇಕಾಗುವುದು.

ಕಂಕಣಾ ಬ್ಯಾನರ್ಜಿ ಮತ್ತು ಪಂಡಿತ ಪ್ರತಾಪನಾರಾಯಣ ತಾವು ವಸ್ತಿಯಿದ್ದಲ್ಲಿಗೆ ತಬಲಜಿಯನ್ನು ಕರೆಸಲು ಹೇಳಿದರು. ಸರಿ, ತಬಲ್‌ಜಿ ಬಂದರು. ಅವರ ಕಣ್ಣು ಸರಿಯಗಿ ಕಾಣಿಸುತ್ತಿಲ್ಲವಾದ್ದರಿಂದ ಒಬ್ಬರು ಕೈ ಹಿಡಿದುಕೊಂಡು ಬಮದರು. ಉಳಿದ ಕಲಾವಿದರಂತೆ ಫ್ಯಾಶನೆಬಲ್‌ ಪೋಷಾಕು ಇರಲಿಲ್ಲ. ದೊಗಲೆ ಪೈಜಾಮ, ಗಿಡ್ಡ ನೆಹರು ಶರ್ಟ್. ಹೇಳಿ ಮಾಡಿಸಿದ ಕಡ್ಡಿ ಪೈಲವನ್‌. ಇವರೇನು ತಬಲಾ ಬಾರಿಸಿಯಾರು ಎನ್ನುವಂತಿತ್ತು ಅವರ ವ್ಯಕ್ತಿತ್ವ.ಕಂಕಣಾ ಬ್ಯಾನರ್ಜಿ ಅಮೀರಾಖಾನರ ಖಾಸ ಶೈಲಿಯ ಗಾಯಕಿಯಾದ್ದರಿಂದ ನಿಧಾನಗತಿಯ ಝಾಮ್ರಾ, ತಾಲದಲ್ಲಿ ಹಾಡುವುದೇ ಸಹಜ. ತಬಲ್‌ಜಿಗೆ ಠೇಕಾ ತೋರಿಸಿಕೊಡಲು ಪಂಡಿತ ಪ್ರತಾಪನಾರಾಯಣ ತಬಲಾದತ್ತ ಕೈ ಚಾಚಿದರು. ತಬಲ್‌ಜಿಗೆ ತೀರಾ ಸಮೀಪದ್ದು ಕಾಣಿಸುತ್ತಿತ್ತು. “ಹಾಂ ತಬಲಾಕ್ಕೆ ಹಚ್ಚಬೇಡಿರಿ. ಯಾವ ತಾಲ ಬೇಕೊ ಹೇಳಿರಿ. ನಾನು ಎಂಥೆಂಥವರೊಂದಿಗೆ ತಬಲಾಸಾಥ್‌ ನೀಡಿದವ” ಎಂದರು ತಬಲಜಿ ಸ್ವಾಭಿಮಾನದಿಂದ. ಇಬ್ಬರೂ ಗಾಯಕರು ಅವಾಕ್‌! ಆದರೆ, ತಬಲಜಿ ರಿಹರ್ಸಲ್‌ ಮಾಡುವಾಗ ಇನ್ನೂ ಅವಾಖ್‌. ರಾತ್ರಿ ಗಾಯನ ಕಾರ್ಯಕ್ರಮ ಮುಗಿದ ಮೇಲೆ ಇಬ್ಬರೂ ತಬಲಜಿಯನ್ನು ಅಭಿನಂದಿಸಿದರು. ಏಕೆಂದರೆ, ಅವರು ಅಪೇಕ್ಷೆಸಿದ್ದ ಧೀಮಾ ಝಾಮ್ರಾ, ತಾಲಭರಣಾ ಇಲ್ಲದೆ ಬಾರಿಸುವುದು ಸುಲಭದ ಮಾತಲ್ಲ. “ಮೊದಲು ಇವರು ಜೋತಾಡುತ್ತ ನಡೆಯುವುದನ್ನು ಕಂಡಾಗ ನಮ್ಮ ಜೊತೆಗೆ ಇವರೆಂತು ತಬಲಾ ಬಾರಿಸಿಯಾರು ಎನಿಸಿತ್ತು. ಆದರೆ, ಇವರ ತಾಲ ಒಂದಿನಿತೂ ಜೋಲಿ ತಪ್ಪುವುದಿಲ್ಲವಲ್ಲ!” ಎಂದು ಕಂಕಣಾ ಬ್ಯಾನರ್ಜಿ ಮೆಚ್ಚುಗೆ ಸೂಸಿದರು. ಆ ತಬಲಜಿಯೇ ಬಸವರಾಜ ಭೆಂಡಿಗೇರಿ.

ಬೆಳಗಾವಿಯ ಖಾಸಬಾಗದಲ್ಲಿ ಸಪ್ಟೆಂಬರ್ ೨೨, ೧೯೨೮ರಂದು ಜನನ. ತಂದೆ ಶಂಕರಪ್ಪ, ತಾಯಿ ಗಂಗವ್ವ. ಬಹಳ ಕಾಲ ಮಕ್ಕಳಾಗಿರಲಿಲ್ಲ. ಅಥಣಿ ಶಿವಯೋಗಿಗಳ ಮೊರೆಹೊಕ್ಕರು. ಶಿವಯೋಗಿಗಳು “ಮಕ್ಕಳಾಗತಾವ, ತಗೋ ಈ ಉತ್ತತ್ತಿಗಳನ್ನು” ಎಂದು ಗಂಗವ್ವನಿಗೆ ಆಶೀರ್ವದಿಸಿದರು. ಜೋಡಿ ಉತ್ತತ್ತಿಗಳಲ್ಲಿ ಒಂದು ಕೆಟ್ಟಿತ್ತು. ಶಿವಯೋಗಿಗಳು “ಏನವಾ ಹೀಂಗಾತಲ್ಲ!” ಎಂದು ವ್ಯಥೆ ಪಟ್ಟರು. ಗಂಗವ್ವ “ನಮ್ಮ ನಸೀಬದಾಗ ಇದ್ದದ್ದು ಆಗತೈತಿ ಬಿಡ್ರಿ,” ಎಂದು ಸಮಾಧಾನ ತಂದುಕೊಂಡಳು. “ಆದರೆ, ಎರಡನೇದು ದೇಶಾ ಮೆರಿತೈತಿ” ಎಂದು ಶಿವಯೋಗಿಗಳು ಸಂತೈಸಿದರು. ಮೊದಲ ಮಗು ಹುಟ್ಟಿತು. ಕಣ್ಣಿಲ್ಲ, ಕಾಲಿಲ್ಲ, ಮೂರು ತಿಂಗಳು ಬದುಕಿ ಸತ್ತಿತ್ತು. ಎರಡನೆಯ ಮಗುವೆ ಬಸವರಾಜ. ಕಾಲುಗಳು ಅಶಕ್ತ, ದೃಷ್ಟಿಶಕ್ತಿಯೂ ಅಷ್ಟಕ್ಕಷ್ಟೆ. ಮೂರು ತಿಂಗಳ ಕೂಸಿದ್ದಾಗ ಬಾಗಿಲಲ್ಲಿ ಕೂತಿತ್ತು. ಹಾದಿ ಹೋಗುವ ಒಬ್ಬ ಹುಚ್ಚ ಸಾಧು “ಅಲೆಲೆ ಕೂಸು ಇದು ಒಳ್ಳೆಯದಾಗತೈತಿ ಹೋಗು” ಅಂದು ಹೋದ, ೫-೬ ವರ್ಷಕ್ಕೆ ಬಸವರಾಜನನ್ನು ಶಾಲೆಗೆ ಹಾಕಿದರು. ಕಾಲು ಸ್ವಲ್ಪ ಸುಧಾರಿಸಿದವು. ದೃಷ್ಟಿದೋಷ ಸುಧಾರಿಸಲಿಲ್ಲ. ಹಾಗೂ ಹೀಗೂ ೭ನೆಯ ಇಯತ್ತೆಯವರೆಗೆ ಸಾಗಿ ಶಿಕ್ಷಣ ನಿಂತಿತು.

ತಂದೆ ಶಂಕರಪ್ಪ ಅವರಿಗೆ ಸಂಗೀತದ ಹುಚ್ಚು. ತಬಲಾ ನುಡಿಸುತ್ತಿದ್ದರು. ಅವರೇ ಬಸವರಾಜನ ಮೊದಲ ಗುರು. ಸರ್ವೋತ್ತಮಾಚಾರ್ಯ ಮುಂಡರಿಗಿ ಎಂಬ ಪ್ರಸಿದ್ಧ ಕೀರ್ತನಕಾರರು ಬಸವರಾಜನ ತಬಲಾವಾದನವನ್ನು ಮೆಚ್ಚಿಕೊಂಡಿದ್ದರು. “ಶಂಕರಪ್ಪ, ಮಗನಿಗೆ ಎಲ್ಲಿಯಾದರೂ ತಬಲಾಶಿಕ್ಷಣ ಕೊಡಿಸು” ಎಂದು ಆಗ್ರಹಪಡಿಸುತ್ತಿದ್ದರು. ಒಮ್ಮೆ ಬೆಳಗಾವಿಯ ನಾಗನೂರ ರುದ್ರಾಕ್ಷಿ ಮಠಕ್ಕೆ ಗಾನಯೋಗಿ ಪಂಚಾಕ್ಷರಿ ಗವಾಯಿಗಳು ಬಂದಿದ್ದರು. ಶಂಕರಪ್ಪ ಮಗನನ್ನು ಕರೆದುಕೊಂಡು ಹೋಗಿ “ಮಗು ತಬಲಾ ಬಾರಿಸ್ತಾನ, ಆಶೀರ್ವದಿಸಬೇಕು” ಎಂದು ಬೇಡಿಕೊಂಡರು. ಪಂಚಾಕ್ಷರಿ ಗವಾಯಿಗಳು ತಬಲಾ ವಾದನದಲ್ಲೂ ಅಗ್ರಗಣ್ಯರಾಗಿದ್ದರು. “ಮಗು, ಬಾರಿಸು, ಕೇಳೋಣ,” ಅಂದರು. ಲಂಡ ಚಣ್ಣ, ಜರಿ ಟೊಪ್ಪಿಗೆ ಹಾಕಿಕೊಂಡು ಬಸವರಾಜ ಬಾರಿಸಿದ. ‘ಕೈ ಛೊಲೊ ಅವ, ಒಳ್ಳೆಯ ಗುರುಗಳಲ್ಲಿ ಶಿಕ್ಷಣ ಕೊಡಿಸು. ಒಳ್ಳೇ ಕಲಾವಿದ ಆಗತಾನ” ಎಂದು ಹರಸಿದರು.ಲ

ಸುದೈವಕ್ಕೆ ಶ್ರೇಷ್ಠ ತಬಲಾ ಕಲಾವಿದ ಉಸ್ತಾದ ಮೆಹಬೂಬಖಾನ ಮಿರಜಕರ ಬೆಳಗಾಠವಿಯಲ್ಲಿಯೆ ಇದ್ದರು. ೧೯೩೮ರಲ್ಲಿ ಹತ್ತು ವರ್ಷದ ಬಸವರಾಜ ಉಸ್ತಾದ ಮೆಹಬೂಬಖಾನರ ಶಿಷ್ಯನಾದ. ತಬಲಾ ಪರಂಪರೆಯಲ್ಲಿ ಮುಖ್ಯ ಘರಾಣೆಗಳೆಂದರೆ ಪೂರಬ, ದಿಲ್ಲಿ, ಬನಾರಸ, ಅಜರಾಣಾ, ಪಂಜಾಬಿ, ಫರೂಕಾಬಾದ. ಮೆಹಬೂಬಖಾನರು ಹಲವು ಘರಾಣೆಗಳ ಸಂಗಮವಾಗಿದ್ದರು. ವಿದ್ಯಾವಂತರು. ಬಸವರಾಜನನ್ನು ನಸುಕಿನಲ್ಲಿ ೪ ಘಂಟೆಗೆ ಎಬ್ಬಿಸಿ ಪಾಠ ಆರಂಭಿಸುತ್ತಿದ್ದರು. ಐದು ಘಂಟೆಗೆ ನಮಾಜ ಮಾಡಲು ಹೋಗುತ್ತಿದ್ದರು. ಹೋಗುವಾಗ “ಇದನ್ನು ಪ್ರಾಕ್ಟಿಸು ಮಾಡು” ಎಂದು ಹೇಳುತ್ತಿದ್ದರು. “ನಮಾಜ ಮಾಡಿ ತಿರುಗಿ ಬಮದ ಮೇಲೆ ಬ್ಯಾರೆ ಏನಾರಬಾರಸಾನ್ಯೇನ” ಎಂದು ಹೆಂಡತಿಯನ್ನು ವಿಚಾರಿಸುತ್ತಿದ್ದರು. ಎಂಟು ಘಂಟೆಗೆ ಚಹಾ ಕೊಟ್ಟು ಮತ್ತೆ ಪಾಠ ಆರಂಭ. ಬಸವರಾಜ ಏಕಪಾಠಿ. ಒಮ್ಮೆ ಹೇಳಿದ್ದು ಗಟ್ಟಿ. ಮತ್ತೊಮ್ಮೆ ಹೇಳಬೇಕಿರಲಿಲ್ಲ. ಗುರುಗಳದು ಶಿಷ್ಯನ ಮೇಲೆ ಬಲು ಪ್ರೀತಿ. ಎಷ್ಟೆಂದರೂ ಶಿಷ್ಯ ಗಾಳಿಪಟದಷ್ಟು ಹಗುರ. ಗುರುಗಳು ಶಿಷ್ಯನನ್ನು ಹೆಗಲ ಮೇಲೆ ಕುಳ್ಳಿರಿಸಿಕೊಂಡು ಬೆಳಗಾವಿಯಲ್ಲಿ ತಿರುಗಾಡುತ್ತಿದ್ದರು.

೧೯೩೯ರಲ್ಲಿ ಮೆಹಬೂಬಖಾನರು ಕೊಲ್ಹಾಪುರಕ್ಕೆ ಹೋಗಿ ನೆಲೆಸಿದರು. ಬಡತನದಿಂದಾಗಿ ಶಿಷ್ಯನಿಗೆ ಗುರುಗಳಲ್ಲಿಗೆ ಹೋಗಲು ಆಗುತ್ತಿರಲಿಲ್ಲ. ಪಾಠಕ್ಕೆ ವ್ಯತ್ಯಯವುಂಟಾಯಿತು. ಬಸವರಾಜ ವೇಳೆ ಹಾಳು ಮಾಡದೆ ಕಾಗಲಕರಬುವಾರಿಂದ ಗಾಯನ ಕಲಿತ. ಹಾಗೆಯೇ, ಪ್ರಸಿದ್ಧ ಹಾರ್ಮೋನಿಯಮ್‌ ವಾದಕರಾದ ವಿಠ್ಠಲರಾವ ಕೋರೆಗಾಂವಕರರಿಗೆ ತಬಲಾ ಸಾಥ್‌ ಮಾಡುತ್ತ ಸಾಥಸಂಗತ್‌ ಕಲಿತ. ಶಿಷ್ಯನನ್ನು ನೋಡದೆ ಸ್ವಲ್ಪ ದಿನಗಳಾದರೂ ಸಾಕು. ಗುರುಗಳು “ಬಸವಣ್ಣಿ, ಬಸವಣ್ಣಿ” ಎಂದು ಬೆಳಗಾವಿಗೆ ಬಂದು ಬಿಡುತ್ತಿದ್ದರು. ಮುಂದೆ ಕೊಲ್ಹಾಪುರಕ್ಕೆ ಕರೆದೊಯ್ದು ತಮ್ಮ ಮನೆಯಲ್ಲಿಲಯೇ ಇಟ್ಟಕೊಂಡು ವಿದ್ಯಾದಾನ ಮುಂದುವರಿಸಿದರು.

ಅಂದು ಭಾರತದಲ್ಲಿ ಆಕಾಶವಾಣಿ ಕೇಂದ್ರಗಳು ಹೆಚ್ಚಿರಲಿಲ್ಲ. ಮುಂಬಯಿ ಆಕಾಶವಾಣಿ ಕೇಂದ್ರ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಬಿತ್ತರಿಕೆಗೆ ಹೆಸರಾಗಿತ್ತು. ಸಂಗೀತ ಎಲ್ಲ ಬುಖಾರಿ ನಿರ್ದೇಶಕರಾಗಿದ್ದರು. ಮೆಹಬೂಬಖಾನರು ತಮ್ಮ ಶಿಷ್ಯನಿಗೆ ತಬಲಾ ಸೋಲೊ ಕಾರ್ಯಕ್ರಮಕ್ಕೆ ಅವಕಾಶ ನೀಡಲು ಬುಖಾರಿ ಅವರಿಗೆ ಶಿಫಾರಸು ಮಾಡಿದರು. ಶಿಷ್ಯನನ್ನು ಮುಂಬಯಿ ಆಕಾಶವಾಣಿ ಕೇಂದ್ರಕ್ಕೆ ಸ್ವತಃ ಕರೆದೊಯ್ದರು. ಶಿಷ್ಯನಿಗೆ ಕೇವಲ ೧೧ ವರ್ಷ. ಇವರು ಹೋದಾಗ ಅಲ್ಲಿ ನಿಲಯ ಕಲಾವಿದರಾದ, ಪ್ರಸಿದ್ಧ ತಬಲಾವಾದಕರಾದ ಶಮಸುದ್ದೀನಖಾನ ಮತ್ತು ಅಲ್ಲಾರಖಾ ಕುಳಿತಿದ್ದರು. ಬಸವರಾಜನನ್ನು ನೋಡಿ “ಇಂವಾ ತಬಲಾ ಸೋಲೊ ಬಾರಿಸ್ತಾನ” ಎಂದು ಗೇಲಿ ಮಾಡಿದರು. ಮೆಹಬೂಬ ಖಾನರಿಗೆ ಶಿಷ್ಯನ ಬಗೆಗೆ ಅಚಲ ವಿಶ್ವಾಸ. “ನನ್ನ ಶಿಷ್ಯ ಸೋಲೊ ಚೆನ್ನಾಗಿ ಬಾರಿಸದಿದ್ದರೆ ನಾನು ತಬಲಾ ಬಾರಿಸುವುದನ್ನೆ ಬಿಟ್ಟುಬಿಡುವೆ” ಎಂದು ಸವಾಲೆಸೆದರು. ಇಬ್ಬರೂ ತಬ್ಬಿಬ್ಬು. ಪುಟ್ಟ ಬಸವರಾಜನಿಗೆ ಹೆಮ್ಮೆ, ಉತ್ಸಾಹ, ಭಯ ಎಲ್ಲವೂ ಒಟ್ಟಿಗೇ. ಹತ್ತು ನಿಮಿಷ ತಬಲಾ ಸೋಲೊ ಬಾರಿಸಿ ಸ್ಟೂಡಿಯೋದಿಂದ ಹೊರಬಂದಾಗ ಶಮಸುದ್ದೀನಖಾನ ಮತ್ತು ಅಲ್ಲಾರಖಾ ‘ವಾಹವಾ’ ಎಂದು ಪ್ರಶಂಸಿದರು. ಬಸವರಾಜ ಭೆಂಡಿಗೇರಿ ಅತಿ ಚಿಕ್ಕ ವಯಸ್ಸಿನ ರೇಡಿಯೋ ಕಲಾವಿದ ಎಂಬ ಖ್ಯಾತಿ ಗಳಿಸಿದರು. ಮುಂದೆ ಪ್ರೌಢ ಕಲಾವಿದರಾದ ಬಳಿಕ ಮುಂಬಯಿ ಆಕಾಶವಾಣಿಯ ರೆಗ್ಯುಲರ್ ಕಾಂಟ್ರಾಕ್ಟ್‌ ಬಂತು. ೧೯೫೦ರಲ್ಲಿ ಧಾರವಾಡದಲ್ಲಿ ಆಕಾಶವಾಣಿ ಕೇಂದ್ರ ಸ್ಥಾಪಿತವಾದಾಗ ಕಾಂಟ್ರಾಕ್ಟ್‌ ಅನ್ನು ಧಾರವಡಕ್ಕೆ ವರ್ಗಾಯಿಸಿಕೊಂಡರು. ೧೯೫೩ರಲ್ಲಿ ಆಕಾಶವಾಣಿಯ ‘ಎ’ ಗ್ರೇಡ್‌ ಕಲಾವಿದರಾದರು.

ಮೆಹಬೂಬಖಾನ ಕೊಲ್ಹಾಪುರದಿಂದ ಪುಣೆಗೆ ಸ್ಥಳಾಂತರಗೊಂಡಾಗ ಶಿಷ್ಯನನ್ನು ಕರೆದೊಯ್ದರು. ಗುರುಸೇವೆ ಮಾಡುತ್ತ ಬಸವರಾಜ ಭೆಂಡಿಗೇರಿ ತಬಲಾ ವಿದ್ಯೆ ಸಂಪಾದಿಸಿದರು. ತಬಲಾ ಸೋಲೊ, ಸಾಥಸಂಗತ್‌ ಅಲ್ಲದೆ          ಠುಮಾರಿ ಮತ್ತು ಲಘು ಸಂಗೀತಕ್ಕೆ ಸಾಥ್‌ ನೀಡುವುದನ್ನು ಕರಗತ ಮಾಡಿಕೊಂಡರು. ೧೯೪೪ರ ವರೆಗೆ ವಿದ್ಯಾ ಸಂಪಾದನೆ ಮುಂದುವರಿಯಿತು. ಪುಣೆಯಲ್ಲಿ ಗುರುಗಳಲ್ಲಿ ಕಲಿಯುವಾಗ ಎಷ್ಟು ಚಿರಪರಿಚಿತರಾಗಿದ್ದರೆಂದರೆ ಯಾರಾದರೂ ಅವರ ವಿಳಾಸ ಕೇಳಿದರೆ ಪಾನ್‌ ಅಂಗಡಿಯವರೂ ಹೇಳುತ್ತಿದ್ದರು.

೧೯೪೫ರಲ್ಲಿ ಬಸವರಾಜ ಭೆಂಡಿಗೇರಿ ಅವರ ಸಂಗೀತ ಯಾತ್ರೆಗೆ ಮಹತ್ವದ ತಿರುವು ಒದಗಿತು. ಅವರು ಬಿ.ಆರ್. ದೇವಧರ ನಡೆಸುತ್ತಿದ್ದ ಇಂಡಿಯನ್‌ ಸ್ಕೂಲ್‌ ಆಫ್‌ ಮ್ಯೂಸಿಕ್‌ಗೆ ತಬಲಾಶಿಕ್ಷಕರಾಗಿ ಸೇರಿದರು. ತಬಲಾ ಕಲಿಸುವುದರ ಜೊತೆಗೆ ಅನೇಕ ಸಂಗೀತ ದಿಗ್ಗಜರಿಗೆ ಸಾಥ ನೀಡುವ ವಿಪುಲ ಅವಕಾಶಗಳು ಲಭಿಸಿದವು. ಅಂದು ಮುಂಬಯಿ ಹಿಂದುಸ್ತಾನಿ ಶಾಸ್ತ್ರೀಯ ಗಾಯನವಾದನಗಳ ದೊಡ್ಡ ಕೇಂದ್ರವಾಗಿತ್ತು. ಮೇಲಿಂದ ಮೇಲೆ ದೊಡ್ಡ ದೊಡ್ಡ ಸಂಗೀತಕಾರರ ಕಾರ್ಯಕ್ರಮಗಳು ಜರುಗುತ್ತಿದ್ದವು. ಬಸವರಾಜ ಭೆಂಡಿಗೇರಿ ಸಾಥ ನೀಡಿದ ಸಂಗೀತ ದಿಗ್ಗಜರ ಪಟ್ಟಿ ನೋಡಿದರೆ ಆಶ್ಚರ್ಯಾಭಿಮಾನಗಳು ಉಕ್ಕುತ್ತವೆ: ಓಂಕಾರನಾಥ ಠಾಕೂರ, ಕೇಸರಬಾಯಿ ಕೇರಳಕರ, ಮೊಘುಬಾಯಿ ಕುರ್ಡಿಕರ, ಬಾಲಗಂಧರ್ವ, ಹೀರಾಬಾಯ;ಇ ಬಡೋದೆಕರ, ಮೇನಕಾ ಶಿರೋಡಕರ, ಫೈಯಾಜಖಾನ, ವಿಲಾಯತ್‌ ಹುಸೇನಖಾನ್, ಮಲ್ಲಿಕಾರ್ಜುನ ಮನಸೂರ, ನಿವೃತ್ತಿಬುವಾ ಸರನಾಯಕ, ಕಿಶೋರಿ ಅಮೋಣ್‌ಕರ, ಬಸವರಾಜ ರಾಜಗುರು, ಭೀಮಸೇನ ಜೋಶಿ, ಡಿ.ವಿ. ಪಲುಸ್ಕರ, ಕುಮಾರಗಂಧರ್ವ, ವಿನಾಯಕರಾವ ಪಟವರ್ಧನ, ಬಡೆ ಗುಲಾಮ ಅಲಿಖಾನ, ಮಾಣಿಕ ವರ್ಮಾ, ಸಂಗಮೇಶ್ವರ ಗುರವ, ರವಿಶಂಕರ (ಸಿತಾರ), ಅಬ್ದುಲ್‌ ಹಾಲಿಮ ಜಾಫರಖಾನ್‌ (ಸಿತಾರ), ವಿ.ಜಿ. ಜೋಗ (ವಾಯಲಿನ್‌), ಗಜಾನನ ರಾವ್ ಜೋಶಿ (ವಾಯಲಿನ್‌), ವಿನಾಯಕರಾವ ಪೆಂಡಾರಕರ(ಜಲತರಂಗ), ಉಸ್ಮಾನಖಾನ(ಸಿತಾರ), ಬಾಲೆಖಾನ(ಸಿತಾರ).

ಬಸವರಾಜ ಭೆಂಡಿಗೇರಿ ನೋಡಲು ಕಾರ್ಟೂನಿನ ತರಹ ಇದ್ದರು. ಹಾಗಾಗಿ, ಅವರ ಕಲಾಜೀವನದಲ್ಲಿ ಅನೇಕ ಮೋಜಿನ ಪ್ರಸಂಗಗಳು ಜರುಗಿದವು. ೧೯೫೯ ಮೇ ತಿಂಗಳು, ಪುಣೆಯಲ್ಲಿ ಅಬ್ದುಲ್‌ ಹಾಲಿಮ ಜಾಫರಖಾನರ ಸಿತಾರವಾದನ ಕಚೇರಿ. ಅಬ್ದುಲ್‌ ಹಾಲಿಮ ಜಾಫರಖಾನರು ತಬಲಾಸಾಥ್‌ಗೆ ಯಾರಿದ್ದಾರೆ ಎಂದು ವಿಚಾರಿಸಿದರು. “ಇಲ್ಲಿದ್ದಾರಲ್ಲ” ಎಂದು ಸಂಘಟಕರು ಭೆಂಡಿಗೇರಿ ಅವರನ್ನು ತೋರಿಸಿದರು. ಅವರ ಧೋತರ, ಕೋಟು, ಟೊಪ್ಪಿಗೆ ನೋಡಿ ಅಬ್ದುಲ್‌ ಹಾಲಿಮ ಜಾಫರಖಾನರು “ಆಪ್‌ ತಬಲಾ ಬಜಾತೆ ಹೈ?” ಎಂದು ಆಶ್ಚರ್ಯಚಕಿತರಾಗಿ ಭೆಂಡಿಗೇರಿ ಅವರನ್ನೆ ಕೇಳಿದರು. ಭೆಂಡಿಗೇರಿ ‘ಥೋಡಾ” ಎಂದು ಚುಟುಕಾಗಿ ಉತ್ತರಿಸಿದರು. ಮೇ ತಿಂಗಳಲ್ಲವೇ? ಶಕೆ ಬಹಳವಿತ್ತು. ಭೆಂಡಿಗೇರಿ ಕೋಟು, ಶರ್ಟು ತೆಗೆದು ಧೋತರ, ಬನಿಯನ್‌ ಮೇಲೆ ಕುಳಿತರು. ಕಣ್ಣು ಮುಚ್ಚಿ ಆಲಾಪ ಕೇಳಿದರು. ಅಬ್ದುಲ್‌ ಹಾಲಿಮ ಜಾಫರಖಾನ ಗತ್‌ಗೆ ಬರುವುದೊಂದೆ ತಡ. ಬಸವರಾಜ ಭೆಂಡಿಗೇರಿ ಸರಿಯಾದ ಲಯ ಹಿಡಿದುಕೊಂಡು ಬಿಟ್ಟರು. ಅಬ್ದುಲ್‌ ಹಾಲಿಮ ಜಾಫರಖಾನರಿಗೆ ಆನಂದವೊ ಆನಂದ.

ಒಮ್ಮೆ ಬಡೆ ಗುಲಾಮಖಾನರ ಗಾಯನ. ದೊಡ್ಡ ಆಳು. ಗಿರಿಜಾ ಮೀಸೆ. ಭೆಂಡಿಗೇರಿ ಅವರನ್ನು ನೋಡಿದವರಾರೂ ಅವರೊಬ್ಬ ತಬಲಜಿ ಎಂದು ಗುರುತಿಸುವುದು ಅಸಾಧ್ಯವಾಗಿತ್ತು. ಬಡೆ ಗುಲಾಮ ಅಲಿಖಾನ ಸಹಜವಾಗಿಯೆ ವಿಚಾರಿಸಿದರು “ತಬಲಾ ಸಾಥ ಕೊ ಕೌನ ಹೈ?” “ಯಂಹಾ ಹೈ ನ” ಎಂಬುದು ಸಂಘಟಕರ ಅಷ್ಟೇ ಸಹಜ ಉತ್ತರ. ಬಡೆಗುಲಾಮ ಅಲಿಖಾನ “ಯೆ ಕ್ಯಾ ಬಜಾಯೆಂಗೆ ಹಮಾರೆ ಸಾಥ?” ಎಂದು ಗೇಲಿ ಮಾಡಿದರು. ಆದರೆ ಅವರಿಗೆ ಬಸವರಾಜ ಭೆಂಡಿಗೇರಿ ಅವರ ತಬಲಾಸಾಥ ಎಷ್ಟೊಂದು ಹಿಡಿಸಿತೆಂದರೆ ಅನೇಕ ವರ್ಷಗಳ ನಂತರ ಹುಬ್ಬಳ್ಳಿಗೆ ಬಂದಾಗ ತಬಲಾಸಾಥಗೆ ಭೆಂಡಿಗೇರಿ ಅವರೇ ಬೇಕೆಂದು ಗೊತ್ತುಪಡಿಸಿಕೊಂಡಿದ್ದರು.

೧೯೫೯ರಲ್ಲಿ ಪುಣೆಯ ಸಾವರಕರ ಸಭಾಗೃಹದಲ್ಲಿ ಸಂಗಮೇಶ್ವರ ಗುರವ ಅವರ ಗಾಯನ ಕಚೇರಿ. ತಬಲಾಸಾಥ್‌ಗೆ ಬಸವರಾಜ ಭೆಂಡಿಗೇರಿ. ರಾತ್ರಿ ಒಂಬತ್ತಕ್ಕೆ ಆರಂಭವಾದ ಕಚೇರಿ ಬೆಳಗಿನ ವಿಳರವರೆಗೆ ನಡೆಯಿತು. ಗಾಯಕರೂ ದಣಿವರಿಯರು. ತಬಲಾ ಸಾಥಿದಾರರೂ ದಣಿವರಿಯರು. ಶ್ರೋತೃಗಳೂ ದಣಿವರಿಯರು. ಅಂದಿನ ಗಾಯನ ಕಚೇರಿಗಳೂ ಹಾಗೆಯೇ ಇದ್ದವು, ರಸಿಕರೂ ಹಾಗೆಯ ಇದ್ದರು.

ತಬಲಾವಾದಕರು ಖ್ಯಾಲ ಗಾಯನದೊಂದಿಗೆ ಮಾತ್ರ ಸಾಥ್‌ ಮಾಡುವರು. ಧ್ರುಪದ, ಧಮಾರ ಗಾಯನಕ್ಕೆ ಪಖಾವಜ ಸಾಥ್‌ ಇರುತ್ತದೆ. ೧೯೬೨-೬೩ರ ಮಾತು. ಸಿದ್ಧೇಶ್ವರಿದೇವಿ ತನ್ನ ಗುರುಗಳೊಂದಿಗೆ ಬೆಳಗಾವಿಗೆ ಬಂದಿದ್ದರು. ಗುರುಗಳದು ಧ್ರುಪದ, ಧಮಾರ ಗಾಯನ. ಪಖಾವಜ ಸಾಥಿದಾರರನ್ನು ಕರೆತಂದಿರಲಿಲ್ಲ. ಬಸವರಾಜ ಭೆಂಡಿಗೇರಿ ಧ್ರುಪದ, ಧಮಾರ ಗಾಯನಕ್ಕೆ ಎಷ್ಟು ಚೆನ್ನಾಗಿ ತಬಲಾಸಾಥ್‌ ನೀಡಿದರೆಂದರೆ ಕೇಳಿದವರೆಲ್ಲ ದಂಗಾದರು.

ಒಮ್ಮೆ ಬಸವರಾಜ ಭೆಂಡಿಗೇರಿ ರವಿಶಂಕರರಿಗೆ ಸಾಥ್‌ ನೀಡುತ್ತಿದ್ದರು. ಈ ತಾಲಬ್ರಹ್ಮನ ವಿದ್ಯೆಗೆ ತಲೆದೂಗಿ ಒಂದು ರಾಗ ಮುಗಿದ ಮೇಲೆ ರವಿಶಂಕರ ಸಿತಾರ ಕೆಳಗಿಟ್ಟು ಕೈ ಜೋಡಿಸಿ ನಮಸ್ಕರಿಸಿ ಕಚೇರಿ ಮುಂದುವರಿಸಿದರು. ಹುಬ್ಬಳ್ಳಿ ಆರ್ಟ್ ಸರ್ಕಲ್‌ ಫೈಯಾಜಖಾನರೆ ಗಾಯನ ಏರ್ಪಡಿಸಿತ್ತು. ಫೈಯಾಜಖಾನ ಆಗ್ರಾ ಘರಾಣೆಯ ಹುಲಿ. ಹೇಳಿ ಕೇಳಿ ಲಯಪ್ರಧಾನ ಗಾಯನ. ತಬಲಾಸಾಥ್‌ಗೆ ಭೆಂಡಿಗೇರಿ ಇದ್ದರು. ಆಯೆ ನ ಬಾಲಮ ಠುಮರಿಗೆ ಬಸವರಾಜ ಭೆಂಡಿಗೇರಿ ಯಾವ ರೀತಿ ಸಾಥ್‌ ನೀಡಿದರೆಂದರೆ ಫೈಯಾಜಖಾನ ಆ ಲಯಕ್ಕೆ ಮಾರುಹೋಗಿ ಆ ಲಯಕ್ಕನುಗುಣವಾಗಿ ಮೈ ಕುಣಿಸುತ್ತ ಹಾಡತೊಡಗಿದರು.

ಒಮ್ಮೆ ಮುಂಬಯಿಯಲ್ಲಿ ಗಜಾನನರಾವ ಜೋಶಿ ಅವರ ವಾಯಲಿನ್‌ ಕಚೇರಿ ಇತ್ತು. ತಬಲಾಸಾಥ್‌ಗೆ ಯಾರನ್ನು ಕೊಡುವಿರಿ ಎಂದು ಪ್ರೊ. ದೇವಧರರನ್ನು ಕೇಳಿದರು. ದೇವಧರರು ತಮ್ಮ ಸಿಬ್ಬಂದಿ ವರ್ಗದಲ್ಲಿದ್ದ ಭೆಂಡಿಗೇರಿ ಅವರನ್ನು ಕರೆದುಕೊಂಡು ಹೋಗಿರಿ ಎಂದರು. ಭೆಂಡಿಗೇರಿ ಅವರ ಆಕೃತಿಯನ್ನು ನೋಡಿ ಗಜಾನನರಾವ ಜೋಶಿ ಮುಖ ಸಿಂಡರಿಸಿದರು. ಪ್ರೊ. ದೇವಧರ “ಅವರ ಆಕೃತಿ ತೆಗೆದುಕೊಂಡು ಏನು ಮಾಡುವುದಿದೆ? ಅವರ ತಬಲಾ ಕೈಚಳಕ ನೋಡುವಿರಂತೆ. ಸುಮ್ಮನೆ ನಾನು ಹೇಳಿದಂತೆ ಅವರನ್ನು ಕರೆದುಕೊಂಢು ಹೋಗಿರಿ” ಎಂದು ಭರವಸೆಯಿತ್ತರು. ಕಚೇರಿ ನಂತರ ಆದದ್ದೇ ಬೇರೆ. ಶ್ರೋತೃಗಳು ಮುಖ್ಯ ಕಲಾವಿದರನ್ನು ಬಿಟ್ಟು ಬಸವರಾಜ ಭೆಂಡಿಗೇರಿ ಅವರಿಗೆ ಮುಗಿಬಿದ್ದರು.

೧೯೫೯-೬೦ರಲ್ಲಿ ಕೊಲ್ಹಾಪುರದಲ್ಲಿ ಗಜಾನನರಾವ ಜೋಶಿ ವಾಯಲಿನ್‌ ಕಚೇರಿ ನಿಶ್ಚಿತವಾಗಿತ್ತು. ಬಸವರಾಜ ಭೆಂಡಿಗೇರಿ ಅವರ ತಬಲಾ ರುಚಿ ಗೊತ್ತಿತ್ತಲ್ಲ! ಅವರನ್ನೇ ಕರೆದೊಯ್ದರು. ತಬಲಾಸಾಥ್‌ ರಂಗೇರಿತ್ತು. ಶ್ರೋತೃಗಳು ಹುಚ್ಚೆದ್ದು ತಮ್ಮ ಜೇಬಿನಲ್ಲಿದ್ದ ದುಡ್ಡು, ಕೈಯಲ್ಲಿದ್ದ ಬಂಗಾರದ ಉಂಗುರ ಮತ್ತು ಬಳೆಗಳನ್ನು ಭಂಡಿಗೆರಿಯವರತ್ತ ಎಸೆಯತೊಡಗಿದರು. ಭೆಂಡಿಗೇರಿ ಅವರಿಗೆ ದೃಷ್ಟಿದೋಷ. ಸಪ್ಪಳ ಕೇಳುತ್ತಿದೆ, ಏನೆಂದು ಕಾಣುತ್ತಿಲ್ಲ. ಅದೇನು ಸಪ್ಪಳವೆಂದು ಗಜಾನನರಾವ ಜೋಶಿ ಅವರನ್ನು ಕೇಳಿ ತಿಳಿದುಕೊಳ್ಳಬೇಕಾಯಿತು.

ಬೆಳಗಾವಿ ಆರ್ಟ್ ಸರ್ಕಲ್‌ನಲ್ಲಿ ಶಾಂತಾ ಆಪ್ಟೆ ಗಾಯನ ಕಾರ್ಯಕ್ರಮಕ್ಕೆ ಮುಂಚೆ ರಿಹರ್ಸಲ್‌ ಮಾಡುವಾಗ ಶಾಂತಾ ಆಪ್ಟೆ ತಾಳ ತೋರಿಸಲೆತ್ನಿಸಿದರು. ಬಸವರಾಜ ಭೆಂಡಿಗೇರಿ “ನೀವು ಹಾಡ್ಯಾರ ಹಾಡಿರಿ, ತಾಳದ ಕಾಳಜಿ ಬಿಡಿರಿ” ಎಂದರು.

ಹೀಗೆ, ಬಸವರಾಜ ಭಂಡಿಗೇರಿ ಸಾಥ್‌ ಮಾಡದ ಸಂಗೀತಗಾರರಿಲ್ಲ. ಭಿನ್ನ ಭಿನ್ನ ಶೈಲಿಯ ಸಂಗೀತಗಾರರ ಜೊತೆಗೆ ಅವರಿಗೆಲ್ಲ ಆಪ್ಯಾಯಮಾನವಾದ ರೀತಿಯಲ್ಲಿ ತಬಲಾ ಸಾಥ್‌ ಮಾಡುವ ವಿರಳಾತಿವಿರಳ ಕಲಾವಿದರು ಭೆಂಡಿಗೇರಿ. ಸಾಮಾನ್ಯವಾಗಿ, ಒಬ್ಬೊಬ್ಬ ತಬಲಜಿ ಒಬ್ಬಿಬ್ಬರು ಸಂಗೀತಗಾರರನ್ನು ಹಿಡಿದುಕೊಂಡು ಅವರೊಂದಿಗಷ್ಟೆ ಸಾಥ್‌ ನೀಡುವುದನ್ನು ರೂಢಿಸಿಕೊಂಡಿರುತ್ತಾರೆ. ಆದರೆ, ಬಸವರಾಜ ಭೆಂಡಿಗೇರಿ ಯಾರೊಂದಿಗಾದರೂ ಪೂರ್ವ ಸಿದ್ಧತೆಯಿಲ್ಲದ ತಬಲಾ ಸಾಥ್‌ ನೀಡಬಲ್ಲವರಾಗಿದ್ದರು. ಅವರೊಬ್ಬ ಹುಟ್ಟಾ ತಬಲಜಿ. ದೊಡ್ಡ ಸಂಗೀತಗಾರನೆ ಆಗಿರಲಿ, ಉದಯೋನ್ಮುಖ ಸಂಗೀತಗಾರನೆ ಆಗಿರಲಿ, ಆಂ ಎಂದು ಶುರು ಮಾಡಿದೊಡನೆ ಯಾ ತಂತಿ ಮೀಡಿದೊಡನೆ ಅವನ ಲಯ ಇಷ್ಟೆಂದು ಭೆಮಡಿಗೇರಿ ಲೆಕ್ಕಹಾಕಿಬಿಡುತ್ತಿದ್ದರು. ಗಾಯಕ-ವಾದಕ ಸಮ್‌ಗೆ ಬರಲು ತಡವರಿಸಿದರೆ ಸಂಭಾಳಿಸಿಕೊಂಡು ಗಾಯಕ-ವಾದಕನ ಸಮ್‌ಗೆ ಬರಲು ತಡವರಿಸಿದರೆ ಸಂಭಾಳಿಸಿಕೊಂಡು ಗಾಯಕ-ವಾದಕನ ತಪ್ಪು ಸರಿಪಡಿಸಿಕೊಂಡು ಸಾಥ್‌ ಮಾಡುವ ಜಾಣ್ಮೆ ಬಸವರಾಜ ಭೆಂಡಿಗೇರಿ ಅವರಿಗೆ ಸಾಧಿಸಿತ್ತು. ಒಮ್ಮೊಮ್ಮೆ ಗಾಯಕ ಯಾ ವಾದಕ ಗಂಟಲು ಸರಿಪಡಿಸಿಕೊಳ್ಳಲೊ ತಂತಿ ಸರಿಪಡಿಸಿಲಿಕ್ಕೊ ಮಧ್ಯದಲ್ಲಿ ನಿಲ್ಲುವುದಿದೆ. ಅವರು ಎಷ್ಟನೆ ಮಾತ್ರಾಕ್ಕೆ ನಿಲ್ಲಿಸಿದ್ದರೊ ಅದೇ ಮಾತ್ರಾದಿಂದ ಭೆಂಡಿಗೇರಿ ಮತ್ತೆ ಮುಂದುವರಿಸುತ್ತಿದ್ದರು.

ಗಾಯನ ಯಾ ವಾದನ ಮಧ್ಯಮಧ್ಯದಲ್ಲಿ ಸಂಗೀತಗಾರರು ಹಾರ್ಮೋನಿಯಂ ಮತ್ತು ತಬಲಾವಾದಕರಿಗೆ ಅವಕಾಶ ಮಾಡಿಕೊಡುವುದುಂಟು. ಆಗ, ಸಾಮಾನ್ಯವಾಗಿ ತಬಲಾವಾದಕರು ಕಾಯದಾ, ಗತ್‌, ರೇಲಾ ಬಾರಿಸುತ್ತಾರೆ. ಆದರೆ, ಬಸವರಾಜ ಭೆಂಡಿಗೇರಿ ಆಗಲೂ ಗಾಯಕ ಯಾ ವಾದಕ ಬಾರಿಸಿದುದನ್ನೆ ತಬಲಾದಲ್ಲಿ ಹೂಬೇಹೂ ಬಾರಿಸುತ್ತಿದ್ದರು.

ಬಸವರಾಜ ಭೆಂಡಿಗೇರಿ ಅವರಂತೆ ಸಾಥಸಂಗತ ಮೂಡುವ ತಬಲಜಿ ಬೇರೆ ಯಾರೂ ಇಲ್ಲವೆಂದೇ ಹೇಳಬೇಕು. ವಾದಕರು ಝಾಲಾ ಬಾರಿಸುವಾಗ ತಬಲಜಿಯವರು ಸಾಮಾನ್ಯವಾಗಿ ಲಗ್ಗಿ ಹಚ್ಚುತ್ತಾರೆ. ಆದರೆ. ಭೆಂಡಿಗೇರಿ ಭರಣಾ ಇಲ್ಲದೆ ವಾದಕರಂತೆಯೆ ತಬಲಾ ನುಡಿಸುತ್ತ ಅವರ ಜೊತೆಜೊತೆಗೇ ಸಾಗುತ್ತಿದ್ದರು. ಭೆಂಡಿಗೇರಿ ಅವರ ಬೆರಳತುದಿಗಳು ಸ್ವಲ್ಪ ಉಬ್ಬು ಇದ್ದುದರಿಂದ ಅವರಿಗೆ ಅದೊಂದು ಪ್ರಾಕೃತಿಕ ಅನುಕೂಲವಾಗಿತ್ತು. ಅವರ ಬೋಲ್‌ಗಳು ಸ್ಪಷ್ಟವಾಗಿರುತ್ತಿದ್ದವು. ಮಧ್ಯದಲ್ಲಿ ತಬಲಾ ಶ್ರುತಿ ತಪ್ಪಿದಾಗ ಮಿಕ್ಕ ತಬಲಾವಾದಕರು ಬಾರಿಸುವುದನ್ನು ನಿಲ್ಲಿಸಿ ಶೃತಿ ಸರಿಪಡಿಸಿಕೊಳ್ಳುತ್ತಾರೆ. ಆಗ, ಅನಿವಾರ್ಯವಾಗಿ ಗಾಯಕ ಯಾ ವಾದಕನೂ, ಗಾಯನ ಯಾ ವಾದನ ನಿಲ್ಲಿಸಬೇಕಾಗುವುದು. ಅದು ರಸಭಂಗ ಉಂಟುಮಾಡುತ್ತದೆ. ಆದರೆ, ಬಸವರಾಜ ಭೆಮಡಿಗೇರಿ ತಬಲಾ ನುಡಿಸುವುದನ್ನು ನಿಲ್ಲಿಸದೆ ಅದೇ ಲಯದಲ್ಲಿ ನುಡಿಸುತ್ತ ಸುತ್ತಿಗೆಯಿಂದ ಪೆಟ್ಟು ಹಾಕುತ್ತ ಶ್ರುತಿ ಸರಿಪಡಿಸಿಕೊಳ್ಳುತ್ತಿದ್ದರು. ಇನ್ನೊಂದು ವಿಶೇಷವೆಂದರೆ ಅವರು ತಂಬೂರಿ ಶ್ರುತಿಗೊಳಿಸುವುದರಲ್ಲಿಯೂ ಎತ್ತಿದ ಕೈ. ಮಲ್ಲಿಕಾರ್ಜುನ ಮನಸೂರ, ಬಸವರಾಜ ರಾಜಗುರು, ಸಂಗಮೇಶ್ವರ ಗುರವ ಮೊದಲಾದವರ ಜೊತೆ ತಬಲಾ ಸಾಥ್‌ ನೀಡುವುದಿದ್ದಾಗ ಭೆಂಡಿಗೇರಿ ತಾವೇ ಸ್ವತಃ ಮುಂದಾಗಿ ತಂಬೂರಿ ಶ್ರುತಿಗೊಳಿಸಿಕೊಡುತ್ತಿದ್ದರು.

ಬಸವರಾಜ ಭೆಂಡಿಗೇರಿ ಪುಣೆ, ಮುಂಬಯಿಯಲ್ಲಿಯೆ ವಾಸ್ತವ್ಯ ಮುಂದುವರಿಸಿದ್ದರೆ, ಒಂದಿಷ್ಟು ಠೀಕುಠಾಕು ಮತ್ತು ಗತ್ತುಗಾರಿಕೆ ಮೆರೆದಿದ್ದರೆ ಅದೆಷ್ಟು ಮಾನ, ಧನ ಸೂರೆಗೊಳ್ಳುತ್ತಿದ್ದರೊ! ಆದರೆ, ಪುಣೆ, ಮುಂಬಯಿಗಾದ ನಷ್ಟ ಧಾರವಾಡಕ್ಕೆ ಲಾಭವಾಯಿತು. ೧೯೬೧ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಬಸವರಾಜ ಭೆಂಡಿಗೇರಿ ಅವರನ್ನು ಕರ್ನಾಟಕ ಕಾಲೇಜಿನಲ್ಲಿ   ತಬಲಾ ಅಧ್ಯಾಪಕರಾಗಿ ನೇಮಿಸಿತು. ಅಲ್ಲಿ ರೀಡರ್ ಆಗಿ ಬಡ್ತಿ ಹೊಂದಿ ೧೯೮೮ರಲ್ಲಿ ನಿವೃತ್ತರಾಗುವವರೆಗೆ ಅನೇಕ ವಿದ್ಯಾರ್ಥಿಗಳಿಗೆ ಕಲಿಸಿದರು. ಅವರ ಸ್ಮರಣಶಕ್ತಿ ಅಗಾಧವಾದುದು. ಅವರು ಪುಸ್ತಕ ನೋಡಿ ಇಲ್ಲವೆ ಟಿಪ್ಪಣಿ ಬರೆದಿಟ್ಟುಕೊಂಡು ಎಂದೂ ಹೇಳಲಿಲ್ಲ. “ತಗೋ, ಬರಕೊ” ಎಂದವರೆ ಕಾಯದಾ, ಗತ್‌, ಬೋಲ್‌ಗಳನ್ನು ಬಾಯಿಪಾಠ ಹೇಳುತ್ತಿದ್ದರು.

ರಘುನಾಥ ನಾಕೋಡ, ರಾಚಯ್ಯ, ಹಿರೇಮಠ, ನಂದಿಕೇಶ್ವರ ಗುರವ, ಶ್ರೀಶೈಲ ಬಿಳ್ಳೂರ, ನಿಸಾರ ಅಹಮ್ಮದ ಮೊದಲಾದವರು ಬಸವರಾಜ ಭಂಡಿಗೇರಿ ಆವರ ಶಿಷ್ಯರು. ಹಳೆಯ ಶಿಷ್ಯರಲ್ಲಿ ವೀರಣ್ಣ ಕಾಮಕರ ಮತ್ತು ಶಿರ್ಸಿಯ ಎಂ.ಎಂ. ಆರ್ಟ್ಸ್ ಕಾಲೇಜಿನ ತಬಲಾ ಅಧ್ಯಾಪಕ ವೆರ್ಣೆಕರ ಇದ್ದಾರೆ. ರಾಚಯ್ಯ ಹಿರೇಮಠ ಕರ್ನಾಟಕ ಸಂಗೀತ ಸ್ನಾತಕೋತ್ತರ ಸಂಗೀತ ವಿಭಾಗದಲ್ಲಿ ಅಧ್ಯಾಪಕರಾಗಿದ್ದಾರೆ. ಧಾರವಾಡ ಆಕಾಶವಾಣಿ ಕೇಂದ್ರದ ನಿಲಯ ಕಲಾವಿದರಾಗಿರುವ ರಘುನಾಥ ನಾಕೋಡ ಆಕಾಶವಾಣಿ ದೂರದರ್ಶನಗಳ ಟಾಪ್‌ ಗ್ರೇಡ್‌ ತಬಲಾ ಕಲಾವಿದರು.

ಬಸವರಾಜ ಭೆಂಡಿಗೇರಿ ಅವರಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ೧೯೮೩ರಲ್ಲಿ ಕರ್ನಾಟಕ ಕಲಾತಿಲಕ ಪ್ರಶ್ತಸ್ತಿ ನೀಡಿ ಗೌರವಿಸಿದೆ.

ಇಂಥ ತಬಲಾ ಮಾಂತ್ರಿಕರಾಗಿದ್ದ ಬಸವರಾಜ ಭೆಂಡಿಗೇರಿ ನಾದಬ್ರಹ್ಮನಲ್ಲಿ ಲೀನವಾದುದು ಆಗಸ್ಟ್‌ ೧೨, ೧೯೯೯ ರಂದು.