ಪಂ. ಬಸವರಾಜ ಮನಸೂರ ರಂಗಭೂಮಿಯ ತುಂಬ ಎತ್ತರದ ಹೆಸರು. ಅವರು ಜನಿಸಿದ್ದು ಧಾರವಾಡ ಸಮೀಪದ ಮನಸೂರ ಎಂಬ ಗ್ರಾಮದಲ್ಲಿ ೧೯೦೫ರಲ್ಲಿ. ತಂದೆ ಭೀಮರಾಯಪ್ಪ ಹಾಗೂ ತಾಯಿ ಶ್ರೀಮತಿ ನೀಲಮ್ಮ ಸಂಗೀತ-ನಾಟಕಗಳ ಭಕ್ತರು. ಇವರ ಕಿರಿಯ ತಮ್ಮ ರಾಷ್ಟ್ರ ಖ್ಯಾತಿಯ ಹಿಂದುಸ್ಥಾನಿ  ಗಾಯಕ ಪದ್ಮಭೂಷಣ ಪಂ. ಮಲ್ಲಿಕಾರ್ಜುನ ಮನಸೂರ.

ಬಾಲ್ಯದಲ್ಲಿಯೇ ನಾಟಕಗಳತ್ತ ಒಲವು. ಶಾಲೆಗೆ ಶರಣು. ವಾಮನರಾವ ನಾಟಕ ಕಂಪನಿಗೆ ಹಾಜರ. ಅವರ ಮೊದಲ ಸಂಗೀತ ಗುರು ವಾಮನರಾವ ಮಾಸ್ತರ. ನಂತರ ಪಂ. ನೀಲಕಂಠ ಬುವಾ ಆಲೂರಮಠ ಹಾಗೂ ಉಸ್ತಾದ್‌ ಅಲ್ಲಾದಿಯಾ ಖಾನರಲ್ಲಿ ಕೆಲಕಾಲ ಸಂಗೀತ ಶಿಕ್ಷಣ.

ನಟರಾಗಿ, ನಟ ಗಾಯಕರಾಗಿ ರಂಗಭೂಮಿ ಪ್ರವೇಶಿಸಿದ ಬಸವರಾಜ ಮನಸೂರರು ಸುಮಾರು ನಾಲ್ಕು ದಶಕಗಳ ಕಾಲ ನಾಡಿನ ಬೇರೆ ಬೇರೆ ನಾಟಕ ಕಂಪನಿಗಳಲ್ಲಿ ಕೆಲಸ ಮಾಡಿದ್ದಾರೆ. ಸುಮಾರು ಹತ್ತು ವರ್ಷಗಳ ಕಾಲ ತಾವೇ ಸ್ವತಃ ನಾಟಕ ಕಂಪೆನಿ ಕಟ್ಟಿ ರಂಗಭೂಮಿಯ ಸೇವೆ ಮಾಡಿದ್ದುಂಟು ಸುಶ್ರಾವ್ಯ ರಂಗ ಗೀತೆಗಳ ಗಾಯಕರಾಗಿದ್ದ ಅವರು ಉತ್ತಮ ಹಾರ್ಮೋನಿಯಂ ವಾದಕರೂ ಆಗಿದ್ದರು. ಸಹೋದರ ಪಂ. ಮಲ್ಲಿಕಾರ್ಜುನ ಮನಸೂರ ಅವರನ್ನು ಮೊದಲ್ಗೊಂಡು ದೇಶದ ಹೆಸರಾಂತ ಗಾಯಕರಿಗೆ ಸಮರ್ಥವಾಗಿ ತಬಲಾ ಸಾಥ್ ನೀಡಿದ್ದಾರೆ.

ಚಲನಚಿತ್ರ ಪ್ರಪಂಚದಲ್ಲೂ ಕೆಲ ಕಾಲ ಸೇವೆ ಮಾಡಿದ್ದಾರೆ. ಶ್ರೇಷ್ಠ ಚಿತ್ರಗಳನ್ನು ನಿರ್ಮಿಸಿದ ಮುಂಬೈನ ಶಾರದಾ ಫಿಲ್ಮ ಕಂಪನಿಯಲ್ಲಿ ಎರಡು ವರ್ಷಗಳ ಕಾಲ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಕರ್ನಾಟಕ ಟಾಕೀಸ್‌ ತಯಾರಿಸಿದ ಕನ್ನಡ ಚಿತ್ರ ‘ಚಿರಂಜೀವಿ’ಯಲ್ಲಿ ನಾರದನ ಪಾತ್ರ ಅಭಿನಯಿಸಿದ್ದಾರೆ. ೧೯೩೫ರಲ್ಲಿ ಇವರು ಹಾಡಿದ ‘ಬಾಜೀರಾವ್‌ ಪೇಶ್ವೆ’, ‘ಭಕ್ತ ಸಖೂ’, ‘ಪಾರ್ವತಿ ಪರೀಕ್ಷೆ’ ಮುಂತಾದ ನಾಟಕಗಳ ರಂಗ ಗೀತೆಗಳನ್ನು ಎಚ್‌.ಎಂ.ವಿ. ಕಂಪನಿ ಧ್ವನಿ ಮುದ್ರಿಸಿಕೊಂಡಿದೆ. ೧೯೭೦ ರಿಂದ ಕೆಲವು ವರ್ಷ ಅವರು ರಾಣೆಬೆನ್ನೂರಿನ ಮುನ್ಸಿಪಲ್‌ ಹೈಸ್ಕೂಲಿನಲ್ಲಿ ಸಂಗೀತ ಶಿಕ್ಷಕರಾಗಿ ಕೆಲಸ ಮಾಡಿದ್ದುಂಟು.

ಸೆಪ್ಟೆಂಬರ್ ೨೧, ೧೯೮೧ ರಲ್ಲಿ ತೀರಿಕೊಂಡ ನಟಶೇಖರ ಪಂ. ಬಸವರಾಜ ಮನಸೂರ ಅವರ ಹೆಸರಿನಲ್ಲಿ ಅವರ ಅಭಿಮಾನಿಗಳು, ರಂಗ ಪ್ರೇಮಿಗಳು ಧಾರವಾಡದಲ್ಲಿ ಅವರ ಹೆಸರಿನಲ್ಲಿ ‘ನಾಟಶೇಖರ ಪಂ. ಬಸವರಾಜ ಮನಸೂರ’ ಎಂಬ ಪ್ರಶಸ್ತಿ ಸ್ಥಾಪಿಸಿ ಪ್ರತಿವರ್ಷ ನಾಡಿನ ಒಬ್ಬ ಶ್ರೇಷ್ಠ ರಂಗಭೂಮಿ ಕಲಾವಿದರಿಗೆ ಅವರ ಹೆಸರಿನ ಪ್ರಶಸ್ತಿ ನೀಡುತ್ತಿದೆ. ಗದುಗಿನ ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠದ ವೀರಶೈವ ಅಧ್ಯಯನ ಸಂಸ್ಥೆ ‘ನಟಶೇಖರ ಬಸವರಾಜ ಮನ್ಸೂರ’ ಎಂಬ ಗ್ರಂಥ (ಲೇ. ಶಾ. ಮಂ. ಕೃಷ್ಣರಾಯ) ಪ್ರಕಟಿಸಿ ಅವರಿಗೆ ಗೌರವ ಸಮರ್ಪಿಸಿದೆ. ೧೯೭೭ರಲ್ಲಿ ‘ಸುಧಾ’ ವಾರಪತ್ರಿಕೆ ಇವರ ಆತ್ಮ ಕಥೆ ಕುರಿತು ಧಾರಾವಾಹಿ ೧೨ ವಾರ ಪ್ರಕಟಿಸಿದೆ.

ರಂಗಭೂಮಿಯಲ್ಲಿ ಅವಿಸ್ಮರಣೀಯ ಸೇವೆ ಸಲ್ಲಿಸಿದ ಪಂ. ಬಸವರಾಜ ಮಸ್ಸೂರ ಅವರಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ೧೯೬೩-೬೪ನೇ ಸಾಲಿನ ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಿದೆ.