ಪಂ. ಬಸವರಾಜ ರಾಜಗುರು ಅವರು ಜನಿಸಿದ್ದು ೧೯೨೦ರ ಆಗಸ್ಟ್‌ ೨೪ ರಂದು ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಎಲಿವಾಳದಲ್ಲಿ. ಅವರು ಕೆಳದಿ ರಾಜ ಸಂಸ್ಥಾನದ ಗುರುಗಳು. ಅವರದು ಸಂಗೀತ ಪರಂಪರೆಯ ಮನೆತನ. ತಂದೆ ಮಹಾಂತಸ್ವಾಮಿ ಸಂಗೀತಗಾರರು ಪಿಟೀಲು ಚೆನ್ನಾಗಿ ನುಡಿಸುತ್ತಿದ್ದರು. ತಂಜಾವೂರಿಗೆ ಹೋಗಿ ಕರ್ನಾಟಕೀ ಸಂಗೀತ ಕಲಿತು ಬಂದವರು. ಬಾಲಕನಿರುವಾಗಲೇ ಬಸವರಾಜ ಪಂ. ಪಂಚಾಕ್ಷರಿ ಗವಾಯಿಗಳ ಶಿಷ್ಯತ್ವ ವಹಿಸಿದರು. ಪಂ. ಪಂಚಾಕ್ಷರಿ ಗವಾಯಿಗಳು ಬಸವರಾಜರಿಗೆ ತಮ್ಮ ಗರಡಿಯಲ್ಲಿ ೧೨ ವರ್ಷ ಗ್ವಾಲಿಯರ್ ಘರಾಣೆಯ ಶಿಕ್ಷಣ ನೀಡಿದರು.

೧೯೩೬ರಲ್ಲಿ ಹಂಪಿಯಲ್ಲಿ ವಿಜಯನಗರ ಸಾಮ್ರಾಜ್ಯದ ಆರನೇ ಶತಮಾನೋತ್ಸವದಲ್ಲಿ ಹಾಡಿದ್ದು. ಅವರ ಪ್ರಥಮ ಸಾರ್ವಜನಿಕ ಸಂಗೀತ ಕಚೇರಿ. ಆ ಕಚೇರಿ ಮೂಲಕ ದೇಶದೆಲ್ಲೆಡೆ ಹೆಸರು. ೧೯೩೮ರಲ್ಲಿ ಮುಂಬೈಗೆ ಪ್ರಯಾಣ. ಮುಂಬೈ ಆಕಾಶವಾಣಿ ಮೂಲಕ ದೇಶದ ತುಂಬೆಲ್ಲ ಅವರ ಹೆಸರು ವ್ಯಾಪಕವಾಯಿತು. ಹೆಚ್‌.ಎಂ.ವಿ. ಮೂಲಕ ಅನೇಕ ರಾಗ ಹಾಗೂ ವಚನಗಳ ಧ್ವನಿ ಮುದ್ರಣ. ೧೯೪೧ ರಲ್ಲಿ ಉತ್ತರ-ಭಾರತದತ್ತ ಪ್ರಯಾಣ. ಪಾಕಿಸ್ತಾನದ ಲಾಹೋರಿಗೆ ಹೋಗಿ ಅಬ್ದುಲ್‌ ವಹೀದ್‌ಖಾನರಲ್ಲಿ ಕಿರಾಣಾ ಘರಾಣಾ, ಕರಾಚಿಗೆ ಹೋಗಿ ಲತೀಘ್‌ಖಾನರಿಂದ ಪಟಿಯಾಲಾ ಘರಾಣ ತಾಲೀಮು ಪಡೆದವರು. ಮುಂಬೈಯಲ್ಲಿ ಸವಾಯ್‌ ಗಂಧರ್ವ, ಪುಣೆಯಲ್ಲಿ ಸುರೇಶ ಬಾಬುಮಾನೆ, ಅವರಿಂದ ತಾಲೀಮು. ನೀಲಕಂಠ ಬುವಾ ಮೀಜಕರ, ಮುಬಾರಕಲಿ, ಇನಾಯತುಲ್ಲಾಖಾನ್‌, ರೋಶನ್‌ಅಲಿ, ಲಗೋವಿಂದರಾವ ಟೇಂಬೆ – ಹೀಗೆ ಹನ್ನೊಂದು ಗುರುಗಳ ಗರಡಿಯಲ್ಲಿ ಪಳಗಿದ ಗಾಯಕರೆನಿಸಿದ ಅವರ ಹಾಡುಗಾರಿಕೆ ಗ್ವಾಲಿಯರ್, ಕಿರಾಣಾ ಹಾಗೂ ಪಟಿಯಾಲಾ ಈ ಮೂರು ಘರಾಣೆಗಳ ತ್ರಿವೇಣಿ ಸಂಗಮ.

ಪಂ. ಬಸವರಾಜ ರಾಜಗುರು ಅವರ ಕಂಠ ಕೋಗಿಲೆಯಷ್ಟು ಇಂಪು. ಮೂರು ಸಪ್ತಕಗಳಲ್ಲಿ ಲೀಲಾಜಾಲವಾಗಿ ಅದರ ವಿಸ್ತಾರ. ಧ್ರುಪದ್‌, ಧಮಾರ, ಖಯಾಲ್‌, ಟಪ್ಟಾ ,ಠಮ್ರಿ, ಗಜಲ್‌, ಚತುರಂಗ, ತರಾನಾ, ನಾಟ್ಯಗೀತ, ವಚನ ದಾಸರಪದ- ಹೀಗೆ ಅವರ ಕಂಠದಲ್ಲಿ ಓತಪ್ರೋತ. ಅವರ ಹತ್ತಿರ ೧೨ ಸಾವಿರ ಬಂದೀಶಗಳ ಸಂಗ್ರಹವಿತ್ತು. ಒಂದೊಂದು ರಾಗದಲ್ಲಿ ೪೦-೫೦ ಬಂದೀಶಗಳು. ಅಂತೆಯೇ ಅವರು ‘ಚೀಜ್‌ಗಳ ಖಜಾನೆ’, ‘ಸಾವಿರ ಚೀಜ್‌ಗಳ ಸರ್ದಾರ’ ಆಗಿದ್ದರು. ಕೇಂದ್ರ ಹಿಂದಿನ ಆಕಾಶವಾಣಿ ಮಂತ್ರಿ ಬಿ.ವಿ. ಕೇಸ್ಕರ ‘ಹುಕುಮಿ ಎಕ್ಕಾ’ ಹುಸಿಯೆಂಬುದಿಲ್ಲವೆಂದು, ‘ಗಜಲ್‌ರಾಣಿ’ ರಾಜಗುರುಯಾನೆ ಸೂರ್ ಕಾ ಬಾದಶಹಾ, ಎಂದು ಉದ್ಗರಿಸಿದ್ದು ಜನಜನಿತವಾದ ಮಾತು. ರಾಜಗುರುಗಳ ಕಂಠಕ್ಕೆ ಸ್ವತಃ ಪಂ. ಪಂಚಾಕ್ಷರಿ ಗವಾಯಿಗಳು ‘ಸ್ವರಾಜ’ ಎಂದು ಹೇಳಿದ್ದುಂಟು.

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಸಂಗೀತ ವಿಭಾಗದಲ್ಲಿ ಅವರು ಕೆಲವು ವರ್ಷ ಗೌರವ ಸಂಗೀತ ಪ್ರಾಧ್ಯಾಪಕರಾಗಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯರಾಗಿ (೧೯೮೭-೧೯೯೦) ಕಾರ್ಯ ನಿರ್ವಹಿಸಿದ್ದಾರೆ. ಅವರು ಹಾಡದ ಸಂಗೀತ ಸಮ್ಮೇಳನಗಳಿಲ್ಲ; ಆಕಾಶವಾಣಿ ಕೇಂದ್ರಗಳಿಲ್ಲ. ಹಾಡದ ಊರಿಲ್ಲ. ಅವರ ಹಾಗೆ ಧ್ವನಿ ಕಾಯ್ದುಕೊಂಡು ಬಂಧವರು ವಿರಳ. ಅವರಿಗೆ ದೊರೆತ ಪ್ರಶಸ್ತಿ-ಪುರಸ್ಕಾರಗಳಿಗೆ ಲೆಕ್ಕವಿಲ್ಲ. ಅಂಥವುಗಳಲ್ಲಿ ‘ಸಂಗೀತ ರತ್ನ’ (೧೯೪೭), ಹೈದ್ರಾಬಾದ ಕರ್ನಾಟಕ ವೀರಶೈವ ಮಹಾ ಸಭೆಯ ‘ಸಂಗೀತ ಸುರ್ದಾರ’ (೧೯೫೬), ಗಾನ ಗಂಧರ್ವ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಪ್ರಶಸ್ತಿ (೧೯೭೧), ಕೇಂದ್ರ ಸರ್ಕಾರದ ‘ಪದ್ಮಶ್ರೀ’ (೧೯೭೫), ‘ಪದ್ಮಭೂಷಣ’ (೧೯೯೧), ‘ಅಭಿನವ ಗಂಧರ್ವ’ (೧೯೮೧), ‘ಕೇಂದ್ರ ಸಂಗೀತ ನಾಟಕ ಅಕಾಡೆಮಿ’ ಪ್ರಶಸ್ತಿ (೧೯೮೨), ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (೧೯೮೩), ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್‌ (೧೯೯೦), ‘ಗಾನಕೋಗಿಲೆ’, ಮುಂಬೈಸೂರ ಸಿಂಗಾರ ಸಂಸದ್‌ನ ‘ಸ್ವರವಿಲಾಸ’, ‘ಸಂಗೀತ ಶಿರೋಮಣಿ’ (೧೯೭೧), ‘ಅಭಿನವ ಗಂಧರ್ವ’ (೧೯೮೧) – ಮುಂತಾದವು ಉಲ್ಲೇಖನೀಯ.

೧೯೯೧ರ ಜುಲೈ ೨೧ ರಂದು ಬೆಂಗಳೂರಿನಲ್ಲಿ ಹೃದಯಾಘಾತದಿಂದ ಲಿಂಗೈಕ್ಯರಾದ ಪಂ.ಬಸವರಾಜ ರಾಜ ಗುರು ಅವರ ಶಿಷ್ಯ ಸಂಪತ್ತು ಅಪೃ. ಅಂಥವರಲ್ಲಿ ಶ್ರೀ ಹಾಲಯ್ಯ, ಸ್ವಾಮಿ ಸಂಗಮೇಶ ಹಿರೇಮಠ, ಸೋಮನಾಥ ಮರಡೂರ, ಗಣಪತಿ ಭಟ್‌, ಷಣ್ಮುಖ ಗೊಜನೂರ, ಸೋಮಶೇಖರ ಮರಡೀಮಠ, ಪರಮೇಶ್ವರ ಹೆಗಡೆ, ಶ್ರೀಪಾದ ಹೆಗಡೆ, ಡಾ. ಶಾಂತಾರಾಮ ಹೆಗಡೆ, ಪ್ರೊ. ಸಿದ್ಧರಾಮಯ್ಯ ಮಠಪತಿ ಗೋರಟಾ, ಪ್ರೊ. ಮಹೇಶಕುಮಾರ ಚಿಂಚಖಂಡಿಮಠ, ಡಾ. ಹನುವಣ್ಣ ನಾಯಕ ದೊರೆ, ಪೂರ್ಣಿಮಾ ಭಟ್‌, ರೋಹಿಣಿ ದೇಶಪಾಂಡೆ, ಸಂಗೀತಾ ಕಟ್ಟಿಮುದ್ದು ಮೋಹನ, ಶಿವಾನಂದ ಪಾಟೀಲ, ನಚಿಕೇತ ಶರ್ಮಾ, ದತ್ತಾಕೋಶಿ- ಮುಂತಾದವರು ಉಲ್ಲೇಖನೀಯರಾಗಿದ್ದಾರೆ. ‘ಇಂಚರ’, ‘ಸಂಗೀತ ರತ್ನ’ಅವರಿಗೆ ಅರ್ಪಿಸಿದ ಅಭಿನಂದನ ಗ್ರಂಥಗಳು.