ಇಡೀ ಬಸ್ಸಿನಲಿ ಕಣ್ಣನು ಸೆಳೆಯಿತು
ಒಂದೇ ಒಂದು ಮಲ್ಲಿಗೆ-
ಅದೂ ದುಂಡು ಮಲ್ಲಿಗೆ !

ಮತ್ತೆ ಅದರ ಬೆನ್ನಿಗೆ
ಎರಡೆ ಎರಡು ಹಸುರೆಲೆ,
ಅದರ ಸುತ್ತ ಮಿರು ಮಿರುಗುವ
ತುಂಬು ಹೆರಳ ಹಿನ್ನೆಲೆ.

ಜಡೆಯೊಡೆಯುವ ತಾಣದಲ್ಲಿ
ಅರಳಿದೊಂದೆ ಮಲ್ಲಿಗೆ :
ಕರ್ಗೂದಲ ಮಡುವಿನಲ್ಲಿ
ಬೆಳ್ದಿಂಗಳಿನೆಸಳ ದೋಣಿ
ತೇಲುತಿರುವುದೆನ್ನಲೆ !

ಕೆಳಗೆ, ತುಂಬು ಕೊರಳ ಬದಿಗೆ
ಹಾದು ಹೋದ ಸೆರಗಿನ,
ಅತ್ತ ಇತ್ತ ಜಡೆ ಎರಡರ
ಹೊಯ್ದಾಟದ ಬೆಡಗಿನ,
ಕಲಶವಾಗಿ ಕಣ್ ಸೆಳೆದುದು
ಅದೊಂದೆ ಹೂವು ಮಲ್ಲಿಗೆ,
ಆಚೆ ಇತ್ತೊ ಏನೊ ಕಾಣೆ
ಮುಡಿದ ಮುಖದ ನಸುನಗೆ.

ಬಸ್ಸಿಳಿದೆನು ಎಲ್ಲೊ ನಾನು
ಹೂವು ಹೋಯ್ತು ಮುಂದಕೆ
ಆದರಿನ್ನೂ ಕಣ್ಣೊಳಗಿದೆ
ಅದೊಂದೆ ದುಂಡು ಮಲ್ಲಿಗೆ,
ನನ್ನ ಜೊತೆಗೆ ಸದಾ ಬರುವು-
ದದರ ಕಂಪು ಮೆಲ್ಲಗೆ !