Categories
ಅಂಕಣಗಳು ಕುರುವ ಬಸವರಾಜ್ ಅಂಕಣ

ಬಹುನಾದ ವಿನ್ಯಾಸದ ತಮಟೆ ಎಂಬ ವಾದ್ಯದ ಸುತ್ತ

ಅಚ್ಚರಿ ಎನಿದಿರದು! ಒಂದು ವಾದ್ಯ ಸಮಾಜವೊಂದರಲ್ಲಿ, ಸಂಸ್ಕೃತಿಯೊಂದರಲ್ಲಿ ಪಾಲ್ಗೊಳ್ಳುತ್ತಿರುವ, ಒಳಗೊಳ್ಳುತ್ತಿರುವ ರೀತಿ ಕಂಡರೆ; ಒಂದು ಅಥವಾ ಹಲವು ವರ್ಷಗಳ ವೃತ್ತದಲ್ಲಿ ಅದು ಭಾಗವಹಿಸುವ ಕಾರ್ಯಗಳನ್ನು ಕಂಡರೂ ತಣ್ಣಗಿನ ಬೆರಗು ಸುಳಿದಾಡುತ್ತದೆ. ತನ್ನ ಅಸಂಖ್ಯ ಗತ್ತುಗಳ ಮೂಲಕ ನಾಡಿನ ಉದ್ದಗಲಕ್ಕೂ ವ್ಯಾಪಿಸಿರುವ, ಆವರಿಸಿರುವ ವಾದ್ಯ ವಿಶೇಷ ‘ತಮಟೆ’.

ಅದೊಂದು ಗಿಜಿಗುಡುವ ಜನಜಂಗುಳಿಯ ಜಾತ್ರೆ. ದೇವರ ಉತ್ಸವ, ರಥೋತ್ಸವ, ಮೆರವಣಿಗೆಗಳು ಏನೆಲ್ಲಾ ನಡೆದಿವೆ. ಏತನ್ಮಧ್ಯೆ ದೇವರ ಗುಡಿಯ ಒಂದೆಡೆ ಜನ ತುಂಬಿ ನೆರೆದಿದ್ದಾರೆ. ಅಲ್ಲಿ ‘ಜಡ್ಡಿನಕ’ ಜಡ್ಡಿನಕನ’ ತಮಟೆಯ ನಾದ ಕೇಳುತ್ತಿದೆ. ಮುತ್ತಿದ ಜನಸರಿಸಿ ಒಳಗೆ ಕಣ್ಣು ತೂರಿದರೆ, ಅಲ್ಲೊಬ್ಬ ನುರಿತ ತಮಟೆಗಾರ ತಮಟೆ ನುಡಿಸುತ್ತಿದ್ದಾನೆ. ಚಡ್ಡಿಯ ಹುಡುಗನೊಬ್ಬ ಏನೋ ತಡಕಿ ಹುಡುಕುತ್ತಾ ನಡೆದಿದ್ದಾನೆ. ತಮಟೆಯ ನಾದ ಒಮ್ಮೊಮ್ಮೆ ಬಿರುಸಾಗುತ್ತದೆ, ಒಮ್ಮೊಮ್ಮೆ ನಿಧಾನವಾಗುತ್ತದೆ. ಜನ ಹುಡುಗನೊಟ್ಟಿಗೆ ನಡೆದಾಡುತ್ತಿದ್ದಾರೆ.

ಇದು ತಮಟೆಗಾರ ಮತ್ತು ಆತನ ಮಗನಿಗೆ ಜಾತ್ರೆಯ ಜನ ಒಡ್ಡಿದ ಸವಾಲು. ಇದು ನಡೆಯುವುದು ಹೀಗೆ; ತಮಟೆಗಾರನಿಗೆ ಮಾತ್ರ ಗೊತ್ತಾಗುವಂತೆ ದೇವರ ಪೌಳಿಯ ಆಸುಪಾಸಲ್ಲಿ ನೋಟೊಂದನ್ನು ಅವಿಸಿ ಅಂದರೆ, ಒಂದೆಡೆ ನೋಟಿಟ್ಟು ಮೇಲೊಂದು ಗುರುತಿಗೆ ಕಲ್ಲು ಇಡಲಾಗುತ್ತದೆ. ತಟ್ಟನೆ ಯಾರೂ ಅಲ್ಲಿರುವ ನೋಟನ್ನು ಕಂಡುಹಿಡಿಯಲಾರರು. ಎಲ್ಲಿ ಇಡಲಾಗಿದೆ ಎಂಬುದು ಆ ಹುಡುಗನಿಗೆ ಒಂಚೂರೂ ಗೊತ್ತಾಗದಂತೆ, ತಮಟೆಗಾರನಿಗೆ ಮಾತ್ರ ಗೊತ್ತಾಗುವಂತೆ ಇಡಲಾಗುತ್ತದೆ. ನಂತರ ತಮಟೆಗಾರ ‘ಜಡ್‌ನಕ’ ‘ಜಡ್‌ನಕ’ ನುಡಿಸುತ್ತಾನೆ ಮಗ ಹುಡುಕ ತೊಡಗುತ್ತಾನೆ. ಹಣ ಇರುವ ದಿಕ್ಕಿನಲ್ಲಿ ಸಾಗಿದಾಗ ತಮಟೆಯ ಗತ್ತು ತುಸು ಬಿರುಸಾಗಿ ‘ಜಡ್‌ನಕ’ ‘ಜಡ್‌ನಕ’ವೇ ಆದರೂ ‘ಅಲ್ಲೇ ಅಲ್ಲೇ ಹತ್ತಿರದಲ್ಲೆ ಇದೆ’ ಎಂದು ಹೇಳಿದಂತೆ ಭಾಸವಾಗುವಹಾಗೆ ನುಡಿಸುತ್ತಾನೆ. ಹಣ ಅವಿಸಿಟ್ಟ ಜಾಗದಿಂದ ದೂರ ಸರಿದರೆ ‘ಜಡ್…ನಕ’ ‘ಜಡ್…ನಕ’ ಎಂದು ತೇಲಿಸಿ/ಜಾರಿಸಿ ‘ಅಲ್ಲಿಲ್ಲ, ಅಲ್ಲ ಅಲ್ಲ ಅಲ್ಲಲ್ಲ’ ಎಂಬಂತೆ ಒಂದೇ ಗತ್ತಿನ ನಾದದಲ್ಲಿಯೇ ಉಂಟುಮಾಡುತ್ತಾನೆ. ಅವಿತಿಟ್ಟ ಹಣದ ಬಳಿ ಸಾಗಿದಂತೆ ಗತ್ತಿನ ಬಿರುಸು ಏರುತ್ತದೆ, ತ್ವರಿತವಾಗುತ್ತದೆ. ‘ಅಲ್ಲಿದೆ’ ‘ಅಲ್ಲೇ ಇದೆ’ ಎಂಬಂತೆ. ಹುಡುಗ ಗುರುತಿಸಿ ತೆಗೆದಾಗ ಖುಷಿಯೋ ಖುಷಿ, ೨೦-೨೦ ಕ್ರಿಕೇಟ್ ಗೆದ್ದುದಕ್ಕಿಂತ ಹೆಚ್ಚೆಂಬಂತೆ.

ಇದು ತಮಟೆಯಂತಹ ವಾದ್ಯವೊಂದು ಚಮತ್ಕಾರವಾಗಿ ಬಳಕೆಕೊಂಡ ಸಂದರ್ಭವೊಂದರ ಚಿತ್ರಣವಷ್ಟೆ. ಅದರ ನಾದ ವೈಶಿಷ್ಟ, ಅದು ಬದುಕಿನ ಭಾಗವಾಗಿ ಒಡನಾಡುವ ರೀತಿ ನೀತಿಗಳ ಕುರಿತು ಒಂದಿಷ್ಟು ನೋಡೋಣ;

ಕರಾವಳಿಯ ಹೊರೆತಾದ ಕರ್ನಾಟಕದ ಜನಪದರ ಬದುಕಿನಲ್ಲಿ ಅಷ್ಟು ವಿಶೇಷದ್ದಾಗಿ ಪಾಲ್ಗೊಳ್ಳತ್ತಿರುವ ವಾದ್ಯ ‘ತಮಟೆ’. ಉತ್ತರ ಕರ್ನಾಟಕದಲ್ಲಿ ಈ ವಾದ್ಯವನ್ನು ‘ಹಲಗೆ’ ಎಂದೇ ಕರೆಯುತ್ತಾರೆ. ಇದರ ಒಂದುಬದಿ ಪೂರ್ತಿಯಾಗಿ ಹಲಗೆಯಂತೆ ಕಾಣುವುದರಿಂದ ಹೀಗೆ ಕರೆದಿರುವ ಸಾದ್ಯತೆ ಹೆಚ್ಚು. ಅದರೆ ತಮಟೆ ಎಂಬುದು ಅದರ ನಾದದಿಂದ ಬಂದ ಹೆಸರು. ತಮಟೆಯ ನಾದದ ಮುಖ್ಯ ಹೊಮ್ಮುವಿಕೆಯೆ ‘ತಮ’ ‘ತಮ’ ‘ತಮ’ ಇಲ್ಲವೆ ‘ಟಮ’ ‘ಟಮ’ ‘ಟಮ’ ಎಂಬುದು. ಹಾಗಾಗಿಯೆ ಇದರ ಹೆಸರು ‘ತಮಟೆ’ ಎಂದಾಗಿದೆ. ‘ಟಮಟೆ’ ಎನ್ನುವುದೂ ಇದೆ. ಅಲ್ಲದೆ ತಬಟೆ, ತವಟೆ, ತಪ್ಪಾ, ತಪಟೆ, ತಪ್ಪಟೆ, ತಮ್ಮಟೆ, ತಮ್ಮಟ್ಟೆ, ತಂಬಟ, ತಂಬಟೆ ಎಂದೆಲ್ಲಾ ಹೆಸರುಗಳುಂಟು. ತಮಿಳುನಾಡಿನಲ್ಲಿಯು ಹೆಚ್ಚು ಜನಪ್ರಿಯವಾದ ವಾದ್ಯವಿದು. ತಮಿಳಿನಲ್ಲಿ ಇದನ್ನು ತಪ್ಪಟ್ಟ, ತಪ್ಪಟ್ಟೈ, ತಮ್ಪಟ್ಟ, ತಪ್ಪಾಟ ಎನ್ನುತ್ತಾರೆ. ಅಲ್ಲಿ ತಮಟೆ ನುಡಿಸಿ ಕುಣಿಯವ ಕಲೆಯನ್ನು ‘ತಪ್ಪಾಟಂ’ ಎನ್ನಲಾಗುತ್ತದೆ. ಆಂದ್ರ ಪ್ರದೇಶ, ಕೇರಳಗಳಲ್ಲೂ, ಮಹಾರಾಷ್ಡ್ರದ ಹಲಭಾಗಗಳಲ್ಲೂ ಈ ವಾದ್ಯದ ಬಳಕೆಯಿದೆ. ತೆಲುಗಿನಲ್ಲಿ ತಮಟೆಯನ್ನು ತಪ್ಪೆಟ, ತಮ್ಮಟ ಎಂದು, ಮಲೆಯಾಳದಲ್ಲಿ ತಪ್ಪಿಟ್ಟ, ತಮ್ಮಿಟ್ಟ ಎಂದು, ತುಳುವಿನಲ್ಲಿ ತಬಿಟೆ, ತಮ್ಮಟೆ, ತಂಬಟ, ತಂಬಟೆ, ತಮಟೆ*೧ ಎಂಬ ಹೆಸರುಗಳಲ್ಲಿ ಕರೆಯುವುದರ ಬಳಕೆ ರೂಪಗಳು ದೊರೆಯುತ್ತವೆ.

ಕನ್ನಡದಲ್ಲಿ ತಮಟೆ, ತಂಬಟೆ, ತೆಲುಗಿನಲ್ಲಿ ತಮಟೆ, ತಪ್ಪಟೆ, ತಮಿಳುವಿನಲ್ಲಿ ತಮ್ಮಟ್ಟೈ, ತಪ್ಪಾಟ, ತುಳುವಿನಲ್ಲಿ ತಮ್ಮಟೆ, ತಂಬಟೆ, ಮಲೆಯಾಳದಲ್ಲಿ ತಮ್ಮಿಟ್ಟ ಮೊದಲಾದ ಎಲ್ಲಾ ಪದಗಳನ್ನು ಅವಲೋಕಿಸಿದರೆ ಕಾಣಬರುವ ಬಹು ಮುಖ್ಯವಾದ ಅಂಶ ‘ತಮಟೆ’ ಎಂಬ ಪದ / ಶಬ್ದ ಮೂಲ ದ್ರಾವಿಡ ಭಾಷೆಯ ಇಂದಿನ ಮುಂದುವರಿಕೆಯ ರೂಪ ಎಂಬುದು ಹೆಚ್ಚು ಸ್ಪಷ್ಟವಾಗುತ್ತದೆ.

ತಯಾರಿಕೆ

ತಮಟೆ ಒಂದುಬದಿಯ ಚರ್ಮಹೊದಿಕೆಯ, ಒಂದೇಬದಿ ನುಡಿಸುವಿಕೆಯ ವಾದ್ಯ, ಇದು ಜರಡಿ ಆಕಾರದ್ದು. ಎರಡರಿಂದ ಎರಡೂವರೆ ಇಂಚು ಅಗಲದ ಕಬ್ಬಿಣದ ತಗಡನ್ನ ಗುಂಡಾಕಾರಕ್ಕೆ ತಂದು ಸೇರಿಸಿದ ಬಳೆಯ ಒಂದು ಬದಿಗೆ ಹದಮಾಡಿದ ಕೋಣ, ದನ ಇಲ್ಲವೇ ಮೇಕೆಯ ಚರ್ಮ ಹೊದಿಸಿ, ಅದರ ಇನ್ನೊಂದು ಬದಿಗೆ ಚರ್ಮದ ಬಾರು/ಹುರಿಗಳಿಂದಲೇ ದುಂಡನೆಯ ರಿಂಗ್‌ನಂತಹ ಕಬ್ಬಿಣದಪಟ್ಟಿಗೆ ಒಂದೆರಡು ಇಂಚು ಅಂತರದಲ್ಲಿ ಹೊದಿಸಿದ ಚರ್ಮವನ್ನು ಎಳೆದು ಬಿಗಿಗೊಳಿಸಿದಾಗ ತಮಟೆ ಏರ್ಪಡುತ್ತದೆ. ಇದನ್ನು ತಮಟೆಗೆ ಹಾಕಿದ ಹುರಿ/ಬಾರಿನ ಕುಣಿಕೆಯನ್ನು ಎಡಹೆಗಲಿಗೆ ಬರವಂತೆ ಹೊಂದಿಸಿಕೊಂಡು, ಎದೆ ಹೊಟ್ಟೆಯ ಭಾಗಕ್ಕೆ ಆತುಕೊಂಡು ಹಿಡಿದು, ಎಡಗೈಯನ್ನು ತಮಟೆಯ ಮೇಲಂಚಿಗೆ ಬಿದಿರ ಕಿರುಕಡ್ಡಿಯೊಂದಿಗೆ ಹಿಡಿದು, ಹೆಬ್ಬೆರಳ ಗಾತ್ರದ ಗೇಣುದ್ದಕ್ಕೂ ತುಸು ಉದ್ದದ ಗುಣುಕೊಂದರಿಂದ ನುಡಿಸುವ ಮೂಲಕ ನಾದ ಹೊಮ್ಮಿಸಲಾಗುತ್ತದೆ. ಬಲಗೈಯ ನುಡಿಸುವ ಕೋಲನ್ನು ಗುಣಿ, ಗುಣಿಗೋಲು, ಕೋಲು ಎಂದರೆ, ಎಡಗೈಯ ಕಡ್ಡಿಯನ್ನು ಚಿಟಿಕೆ ಕಡ್ಡಿ ಎನ್ನಲಾಗುತ್ತದೆ. ಬಲಗೈಯ ಗುಣಿಯದೇ ಹೆಚ್ಚಿನ ಕೆಲಸ. ವೈವಿದ್ಯತೆ ಉಂಟುಮಾಡುವುದು ಈ ಗುಣಿಯಿಂದಲೇ. ಚಿಟಿಕೆ ಗಡ್ಡಿ ಬಲಗೈಯ ನುಡಿಸುವಿಕೆಗೆ ಪೂರಕ ಗತ್ತುಗಳನ್ನು ಒದಗಿಸಿ ತಾಳದ ಹದವನ್ನು, ನಾದದ ಚಲುವನ್ನು ಮೂಡಿಸಲು ದುಡಿಮೆಗೊಳ್ಳುತ್ತದೆ. ತಮಟೆಯ ನುಡಿಸುವಿಕೆಗೆ ಈ ಎರಡೂ ಅನಿವಾರ್ಯ. ಗುಣಿ ಚಿಟಿಕೆಕಡ್ಡಿಗಳಲ್ಲಿ ಯಾವ ಒಂದರಿಂದಲೇ ನುಡಿಸಲು ಸಾದ್ಯವಿಲ್ಲ. ತಾಳದ ಆವರ್ತದ ಹದಕ್ಕೆ, ಭಿನ್ನ ಭಿನ್ನ ಗತ್ತುಗಳ ಕಟ್ಟುವಿಕೆಗೆ, ಹೊಮ್ಮಿಸುವಿಕೆಗೆ ಒಂದನ್ನೊಂದು ಅವಲಂಬಿಸಿವೆ.

ಪೂರ್ವ ಸಿದ್ಧತೆ

ನುಡಿಸಲು ಆರಂಭಿಸುವ ಮುನ್ನ ತಮಟೆಗಳನ್ನು ತೆಂಗಿನ ಗರಿಯಂತಂಹ ಗರಿಗಳ ಬೆಂಕಿಯ ಉರಿಗೆ ಒಡ್ಡಿ ಕಾಯಿಸಲಾಗುತ್ತದೆ. ಖಣ ಖಣ ಖಣ ಖಣ ಖಣಣ ಸದ್ದು ಉಂಟಾಗುವವರೆಗಿನ ತುಸುಹೊತ್ತು ಕಾಯಿಸಿ ನುಡಿಸಲು ಆರಂಭಿಸಲಾಗುತ್ತದೆ.

ಸ್ವತಂತ್ರ ವಾದ್ಯ

ತಮಟೆ ಒಂದು ಸ್ವತಂತ್ರ ವಾದ್ಯ. ಸಹವರ್ತಿ ವಾದ್ಯಗಳ ಪೂರಕ ಒತ್ತಾಸರೆಯ ಅವಲಂಬನೆಯಿಲ್ಲದೆ ನುಡಿಸಬಲ್ಲ ರಾಜವಾದ್ಯ. ನಾಡಿನ ಚರ್ಮವಾದ್ಯಗಳಲ್ಲಿಯೆ ಹರೆ, ಸಮ್ಮಾಳದಂತಹ ಒಂದೆರಡು ವಾದ್ಯಗಳ ಹೊರೆತು ಮತ್ತು ಅದಕ್ಕಿಂತಲೂ ಅಸಾಮಾನ್ಯ ಸಾಮರ್ಥ್ಯ ಹೊಮ್ಮಿಸುವ ಸ್ವಸಾಮರ್ಥ್ಯದ ವಾದ್ಯ ವಿಶೇಷ. ಈ ವಾದ್ಯಕ್ಕೆ ಸಾಮರ್ಥ್ಯ ಎಂಬುದು ಬಂದುದಲ್ಲ. ತಂದುದು. ಅಥವಾ ತಂದುಕೊಂಡುದು. ವಾದ್ಯ ನುಡಿಸುವವನ ಕೈಚಳಕದ್ದು. ಈ ವಾದ್ಯದ ವಿಶೇಷವನ್ನು ಕಂಡುಕೊಂಡ ಯಾರೋ ನುಡಿಸುತ್ತಾಬಂದ, ಸಾವಿರ ಸಾವಿರ ವರ್ಷಗಳ ಹಿಂದಿನಿಂದ ಇಂದಿನವರೆಗೂ ಸದಾ ಸೃಜನಶೀಲವಾಗಿ ಪ್ರಯೋಗಗಳಿಗೆ ಒಡ್ಡಿಕೊಳ್ಳುತ್ತಲೇ ಕಂಡುಕೊಂಡ / ಸಂಯೋಜನೆಗೊಂಡ ಪರಿಷ್ಕಾರಗೊಂಡ ನಾದದ ರೂಪಗಳು.

ಮೇಳ ವಾದ್ಯ

ಎಂತಹ ವಿಶಿಷ್ಟ ವಾದ್ಯವಿದೆಂದರೆ ಒಂದೇ ಒಂದು ವಾದ್ಯವಾಗಿ ಎಷ್ಟು ಸಾಮರ್ಥ್ಯ ಉಳ್ಳದ್ದೋ ಅಷ್ಟೆಯಾಗಿ ಮೇಳವಾದ್ಯದಲ್ಲು ವೈವಿದ್ಯತೆಯಿಂದ ಹಿಡಿದಿಟ್ಟುಕೊಳ್ಳುವ ಶಕ್ತತೆಯದು. ಮೇಳವಾದ್ಯವಾಗಿಯು ಇದರ ಪಾಲ್ಗೊಳ್ಳುವಬಗೆ ನಾಯಕನ ರೀತಿಯದು. ತಮಟೆಯೊಂದಿಗೆ ತಾರ್‍ಸೆ, ದೋಣು, ರಮ್‌ದೋಣು, ನಗಾರೆ, ಹರೆ/ಈರ್‌ನಾರ್/ಉರುಮೆ ಈ ಯಾವದೇಗಳೊಂದಿಗೆ ಮೇಳಕ್ಕೆ ಸೊಬಗು ಕಟ್ಟುತ್ತದೆ. ಅಂದರೆ ಸಹವಾದ್ಯಗಳ ನಾದ ಕಡಿಮೆಯದು ಎಂದರ್ಥವಲ್ಲ. ಅವು, ಅವುಗಳ ಸಾದ್ಯತೆಯ ಕೌಶಲ್ಯದ ಪಾಲ್ಗೊಳ್ಳುವಿಕೆ ಇದ್ದೇ ಇರುತ್ತದೆ. ಅಂತಹ ಸಂದರ್ಭದಲ್ಲು ಒಟ್ಟು ಮೇಳವ ನೋಡಿದರೆ / ಆಲಿಸಿದರೆ ತಮಟೆ ಮೇಳದ ಕ್ಯಾಪ್ಟನ್‌ಆಗಿಯೇ ಮುನ್ನಡೆಸುವುದು ಆವರಿಸುವುದನ್ನು ಅರಿಯಬಹುದು.

ಸಹವಾದ್ಯಗಳೊಂದಿಗಿನ ನಾದದ ವಿನ್ಯಾಸ

ತಮಟೆ ತಾರ್‍ಸೆ ಒಂದಿಗೆ ಬೆರವ ರೀತಿ, ತಮಟೆಯ ಗತ್ತುಗಳ ನಡೆಗನುಸರಿಸಿ

ತಮಟೆ: ಜಡ್ಡಿನ್ನಕ ಜಡ್ಡಿನ್ನಕ ಜಡ್ಡಿನ್ನಕ ಜಡ್ಡಿನ್ನಕ

ಗತ್ತು ನುಡಿಯುವಾಗ

ತಾರ್‍ಸೆ: ಗರ ಗರ ಗರ ಗರ ಗರ ಗರ ಗರ ಗರ

ನುಡಿಸುತ್ತಾರೆ. ಹೀಗೆಯೇ ಇತರ ಗತ್ತುಗಳೊಂದಿಗೆ.

ಗಣ್ಣ ಗರಣ ಗಣ್ಣ ಗರಣ ಗಣ್ಣ ಗರಣ ಗಣ್ಣ ಗರಣ

ಗತ್ತುಗಳ ಕಟ್ಟುತ್ತದೆ ಅಥವಾ ಕಟ್ಟುತ್ತಾರೆ. ತಾರ್‍ಸೆ ತಮಟೆಯ ಗತ್ತುಗಳು ಹುಸಿಯ ಬಿಡುವಲ್ಲಿ ಕೆಲವೊಮ್ಮೆ ಒಂದಿಗೆ ನುಡಿಸುತ್ತಾರೆ.

ತಮಟೆ ಉರುಮೆ ವಾದ್ಯದೊಂದಿಗೆ

ತಮಟೆ : ಜಡ್ಯುನ್ ಜಡ್ಡಿನಕ ಜಡ್ಯುನ್ ಜಡ್ಡಿನಕ ಜಡ್ಯುನ್ ಜಡ್ಡಿನಕ

ಗತ್ತು ನುಡಿದಾಗ

ಉರುಮೆ: ಬುರ್‌ರ್ ಜುರ್ರಮು ಬುರ್‌ರ್ ಜುರ್ರಮು ಬುರ್‌ರ್ ಜುರ್ರಮು

ಎಂದು ಬೆರೆತ ನಾದ ಹೊಮ್ಮಿಸುತ್ತಾರೆ. ಹಾಗೆ ನೋಡಿದರೆ ಉರುಮೆ ಸ್ವತಂತ್ರ ವಾದ್ಯದ ಗುಣದ್ದು.

ನಾದದ ವಿನ್ಯಾಸ

ತಮಟೆ ಗತ್ತುಗಳನ್ನು ತೆಕ್ಕೆಹಾಕಿ ಹಿಡಿಯುವುದು ಕಷ್ಟದ ಕೆಲಸ. ಅಸಂಖ್ಯ ವಿಧಗಳು. ನುಡಿಸುವ ಒಬ್ಬೊಬ್ಬರದು ಒಂದೊಂದು ಸ್ವರೂಪದ ನಾದವಿನ್ಯಾದ ಫಲಕುಗಳನ್ನು ಕಾಣಬಹುದು. ಹಾಗೆ ಹೊಂದಿಯೇ ಸಾಗುವುದು, ಹಾಗೆ ಕಂಡುಕೊಳ್ಳುವುದು ಈ ವಾದ್ಯ ನುಡಿಸುವ ಕಲಾವಿದರ ಗುಣ. ಆದರೆ ಒಂದು ಮನೆತನದವರ ಗತ್ತುಗಳು, ಒಂದು ತೆಂಡೆಯವರ ಗತ್ತುಗಳು, ಒಂದು ಊರವರ ಗತ್ತುಗಳು, ಒಂದೊಂದು ಸೀಮೆಯವರ ಗತ್ತುಗಳಲ್ಲಿ ಸಾಮ್ಯತೆ ಇರಲು ಸಾದ್ಯ.

ತಮಟೆಯನ್ನು ಇಂತದೇ ಗತ್ತಿನೊಂದಿಗೆ ಆರಂಭಿಸಬೇಕೆಂಬ ನಿರ್ಧಿಷ್ಟತೆಯೇನಿಲ್ಲ. ಸಾಮಾನ್ಯವಾಗಿ;

  1. ಜಡ್ಡಿನ್ನಕ ಜಡ್ಡಿನ್ನಕ ಜಡ್ಡಿನ್ನಕ ಜಡ್ಡಿನ್ನಕ
  2. ಜಡ್ ಜಡ್ ಜಡ್ಡಿನ್ನಕ ಜಡ್ ಜಡ್ ಜಡ್ಡಿನ್ನಕ
  3. ಜಣ ಖಣ ಜಡ್ಡಿನ್ನಕ ಜಣ ಖಣ ಜಡ್ಡಿನ್ನಕ
  4. ಜಡ್ಡಿನ್ನಕ ಪಂಪನ್ನಕ ಜಡ್ಡಿನ್ನಕ ಪಂಪನ್ನಕ

ಎಂದೆಲ್ಲಾ ಗತ್ತುಗಳ ಮೂಲಕ ಆರಂಭಿಸುತ್ತಾರೆ.

ಹೀಗೆಯೆ;

  1. ಜಣಗುಡು ಜಣಗುಡು ಜಣಗುಡು ಜಣಗುಡು ಜಡ್ಡಿನ್ನಕ
  2. ಜಡ್ ಜಡ್ಡಿ ಜಡ್ಡಿನ್ನಕ ಜಡ್ ಜಡ್ಡಿ ಜಡ್ಡಿನ್ನಕ
  3. ಜಡ ಜಡ ಜಗ್ಗುನ್ನಕ ಜಡ ಜಡ ಜಗ್ಗುನ್ನಕ

ಸಾಮಾಜಿಕ ಸಂದರ್ಭದಲ್ಲಿ ಪರಂಪರೆಯ ಸಮಾಜ ಈ ವಾದ್ಯ ಮತ್ತು ಇದನ್ನು ನುಡಿಸುವವರನ್ನು ಹೇಳಿಕೊಳ್ಳುವಂತಹ ಗೌರವದಿಂದ ವಂಚಿತವಾಗಿಯೇ ಇರುವಂತೆ ನಡೆಸಿಕೊಂಡಿದೆ. ಯಾವುದೇ ಬಗೆಯ ವಾದ್ಯವನ್ನೇ ಆಗಲಿ, ಯಾರೇ ಆಗಲಿ ಹದವರಿತು, ಹಿತವಾಗಿ ನುಡಿಸಬಲ್ಲವ ವಾದ್ಯಗಾರನೆ ಆಗಿರುತ್ತಾನೆ. ಅವನ ಹುಟ್ಟಿನ ಹಿನ್ನೆಲೆ ಅಂದರೆ ಯಾವ ಜಾತಿಯವನು ಎಂಬುದು ಇಲ್ಲಿ ಮುಖ್ಯವೇ ಅಲ್ಲ. ನುಡಿಸುವವ ಹೇಗೆ ನುಡುಸುತ್ತಾನೆ, ಎಂಥ ಕೌಶಲ್ಯ ತುಂಬಿ ನುಡಿಸುತ್ತಾನೆ ಎಂಬುದಷ್ಟೆ ಮುಖ್ಯ. ಅಲ್ಲಿ ಅವನ ಜಾತಿ ನುಡಿಸುತ್ತಿಲ್ಲ ಅವನು ನುಡಿಸುತ್ತಿದ್ದಾನೆ. ಅವನೊಂದಿಗೆ ಹಲವು ಕೌಶಲ್ಯಗಳನ್ನು ಅದೂ ನೀಡಿರಲೂಬಹುದು. ಆದರೆ ನಾದ ಜಾತಿಯದಲ್ಲ. ನಾದ ವ್ಯಕ್ತಿಯದು. ನಾದ ಅವನ ಸಾಧನೆಯದು. ಅವನ ಪರಿಶ್ರಮದ್ದು. ಜಾತಿ ವೃತ್ತಿ ಒಂದೇ ಆಗಿರುವಾಗ ಅದರ ಪಾಲನ್ನೂ ಅಲ್ಲಗಳೆಯಲಾಗದು. ಆದರೆ ಪರಂಪರೆ ಈ ವಿಚಾರದಲ್ಲಿ ಈ ಜನರಿಗೆ ಮೋಸಮಾಡಿದೆ. ಎಂದೂ ಇವರನ್ನೂ ಸಂಗೀತಗಾರರು ಎಂದು ಪರಿಗಣಿಸಿಯೇ ಇಲ್ಲ. ಇದು ಯಾವ ನ್ಯಾಯ?

ಫೈಬರ್ ಚರ್ಮದ ತಮಟೆ

ಪದೇ ಪದೇ ಕಾಯಿಸುವ ಶ್ರಮ ತಪ್ಪಿಸಿಕೊಳ್ಳಲು ಇತ್ತೀಚಿನ ವಾದ್ಯಗಾರ ಸುಲಭವಾಗಿ ದೊರಕುವ ಫೈಬರ್ ಅನ್ನು ಚರ್ಮವಾಗಿ ಬಳಸತೊಡಗಿದ್ದಾನೆ. ಪ್ರಖ್ಯಾತ ತಮಟೆ ವಾದ್ಯಗಾರ ನಾಡೋಜ ಮುನಿವೆಂಕಟಪ್ಪ ಬಳಸುವುದೇ ಈಬಗೆಯ ಫೈಬರ್ ಚರ್ಮದ್ದು. ತನ್ನ ಅಸಾಮಾನ್ಯ ಪ್ರತಿಭೆಯಿಂದ ಈ ಕಲಾವಿದ ಇಲ್ಲಿ ಯಶಸ್ಸು ಪಡೆಯುತ್ತಿದ್ದಾನೆ. ಆದರೆ ಲೆಕ್ಕಕೆ ನಿಲುಕದಷ್ಟು ಜನರು ಸಾವಿರಾರು ವರ್ಷಗಳಿಂದ ಹದಗೊಳಿಸಿ, ಪರಿಸ್ಕರಿಸಿ ತಂದ ವಾದ್ಯವನ್ನು ಅದರ ನಿಜ ಸೊಗಸಿನ ಉನ್ನತತೆಯನ್ನು ಅರಿಯದೇ, ಇಲ್ಲವೇ ಅಸಡ್ಡೆಯಿಂದ, ಕ್ವಚಿತ್ ಶ್ರಮ ತಪ್ಪಿಸಿಕೊಳ್ಳಲು ಚರ್ಮ ಬಿಟ್ಟಿದ್ದಾರೆ. ಚರ್ಮದ ನಾದದ ಸೊಬಗು ಸೂಕ್ಷ್ಮತೆಗಳೇ ಬೇರೆ. ಅದು ಕೊಡುವ ನಾದದ ಶೇಕಡಾ ಮೂವತ್ತು ಭಾಗದಷ್ಟು ಸೊಗಸನ್ನು ಫೈಬರ್ ನೀಡಲಾರದು. ಇನ್ನೂ ಕಾಲ ಮಿಂಚಿಲ್ಲ. ನಾಡಿನ ಎಲ್ಲಾ ಕಲಾವಿದರೂ ಚರ್ಮದ ತಮಟೆಗೆ ಹೊರಳುವ ಅಥವಾ ಹೊರಳಿಸುವ ಅಲೆಯನ್ನು ನಾವು ಉಂಟುಮಾಡಬೇಕಿದೆ. ಈ ವಾದ್ಯವಷ್ಟೇ ಅಲ್ಲ ಡೊಳ್ಳು, ತಾರ್‍ಸೆ, ಸಮ್ಮಾಳ, ಹರೆ ಈ ಎಲ್ಲಾ ವಾದ್ಯಗಳೂ ಚರ್ಮಮಾತ್ರದಿಂದಲೇ ರೂಪುಗೊಳ್ಳಲು ಉತ್ತೇಜಿಸಬೇಕಿದೆ. ಸಂಸ್ಕೃತಿ ಇಲಾಖೆ ಕಡ್ಡಾಯವಾಗಿ ಈ ವಾದ್ಯ ಬಳಸುವವರಿಗೆ ಆದ್ಯತೆ ನೀಡಿ ಸಂಸ್ಕೃತಿಯ ಸೊಗಸನ್ನು ಕಾಯ್ದುಕೊಳ್ಳಬಹುದಾಗಿದೆ.

(ಮುಂದುವರಿಯುವುದು)

*೧ ಕನ್ನಡ ನಿಘಂಟು; ೧೯೭೭; ಕನ್ನಡ ಸಾಹಿತ್ಯ ಪರಿಷತ್ತು, ಪಂಪಮಹಾಕವಿ ರಸ್ತೆ, ಬೆಂಗಳೂರು; ಪುಟ ೩೨೧೩.