ಪರಿಚಯ

ಮಾನವ ಸಂಘಜೀವಿ ಎಂದು ಎಲ್ಲರಿಗೂ ತಿಳಿದೇ ಇದೆ. ಸಂಘಜೀವಿ ಯಾದ ಮಾನವನಿಗೆ ಭಾಷೆ ಸಂಪರ್ಕ ಸಾಧನವಾಗಿದೆ. ಭಾಷೆಯಿಂದಾಗಿ ಮಾನವ ಇತರರೊಂದಿಗೆ ಸಂಪರ್ಕವಿಟ್ಟುಕೊಳ್ಳಲು ಸಾಧ್ಯವಾಗಿದೆ. ಸಂಘ ಜೀವಿಯಾದ ಮಾನವ ಹಿಂದೆ ಒಂದು ನಿರ್ದಿಷ್ಟ ಪ್ರದೇಶದಲ್ಲಿ ಗುಂಪಿನೊಂದಿಗೆ ವಾಸಿಸುತ್ತಿದ್ದನು. ಇವರಿಗೆ ಇತರರ ಸಂಪರ್ಕವಿರಲಿಲ್ಲ. ಇವರ ಸಂಖ್ಯೆ ಕಡಿಮೆ ಇದ್ದು, ಇವರ ಭಾಷೆಯೂ ಭೇದಗಳನ್ನು ಹೊಂದದೆ ಒಂದೇ ಆಗಿತ್ತು ಎಂದು ಭಾವಿಸಬಹುದು. ಆದರೆ ಜನಸಂಖ್ಯೆ ವೃದ್ದಿಯಾದಂತೆ ಸಮಾಜವೂ ಬೆಳೆದು ಹೆಚ್ಚು ಹೆಚ್ಚು ಪ್ರದೇಶವನ್ನು ಆಕ್ರಮಿಸಿಕೊಂಡ ಕಾರಣ ಈ ಪ್ರದೇಶಗಳ ನಡುವಿನ ಅಂತರ ಬೆಳೆಯಿತು. ಸಮಾಜವು ಬೆಳೆದಂತೆಲ್ಲಾ ಮಾನವರ ನಡುವಿನ ಸಂಪರ್ಕವು ಕಡಿಮೆಯಾಯಿತು. ಕಾಲಕ್ರಮೇಣ ಅವರ ಭಾಷೆಯಲ್ಲೂ ಅಂತರ ಕಂಡುಬಂದಿತು. ಪ್ರಾರಂಭದಲ್ಲಿ ಉಪಭಾಷೆಗಳಾಗಿಯೂ, ಅನಂತರ ತಮ್ಮದೇ ಆದ ಸ್ವತಂತ್ರ ಭಾಷೆಗಳಾಗಿಯೂ ಪರಿವರ್ತನೆಗೊಂಡವು. ಇಂತಹ ಸನ್ನಿವೇಶ ಗಳನ್ನು ಎಲ್ಲಾ ಭಾಷೆ ಗುಂಪುಗಳಲ್ಲೂ ಕಾಣಬಹುದು. ಹೀಗೆ ಇಂದಿನ ಯಾವುದೇ ಭಾಷಾ ಪರಿವಾರವನ್ನು ಅದರ ಮೂಲವಾದ ಒಂದು ಭಾಷೆಯಿಂದ ಕಾಲಾನುಕ್ರಮವಾಗಿ ಒಡೆದು ಉಂಟಾಗಿರುವುದಾಗಿ ಹೇಳಬಹುದು.

ಸಮಾಜವು ಬೆಳೆದಂತೆಲ್ಲಾ ಮಾನವ ತನ್ನ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಮತ್ತೊಂದು ಸಮಾಜದ ಸಂಪರ್ಕವಿರಿಸಿಕೊಂಡ ಕಾರಣ ಒಂದು ಸಮಾಜದ ಭಾಷೆಯ ಪ್ರಭಾವವು ಮತ್ತೊಂದು ಸಮಾಜ ಭಾಷೆಯ ಮೇಲಾಗುವುದನ್ನು ಕಾಣಬಹುದು. ಇದಲ್ಲದೆ ಒಂದು ಗುಂಪು ಮತ್ತೊಂದು ಗುಂಪಿನೊಡನೆ ಹೋರಾಡಿ, ಆ ಪ್ರದೇಶವನ್ನು ಗೆದ್ದು, ರಾಜ್ಯ ಸ್ಥಾಪನೆ ಮಾಡಿ ತನ್ನ ಭಾಷೆಯನ್ನು ಬಲಾತ್ಕಾರವಾಗಿ ಪ್ರಜೆಗಳ ಮೇಲೆ ಹೇರುವುದು. ಹೀಗೆ ಹಲವಾರು ಸನ್ನಿವೇಶಗಳಲ್ಲಿ ಒಂದೇ ಭಾಷೆಯುಳ್ಳ ಸಮಾಜವು ಅನ್ಯಭಾಷೆಯ ಪ್ರಭಾವಕ್ಕೆ ಒಳಗಾಗುವುದನ್ನು ಕಾಣಬಹುದು. ತತ್ಪರಿಣಾಮವಾಗಿ ಒಂದು ಸಮಾಜದ ವ್ಯಕ್ತಿಗಳು ತಮ್ಮದಲ್ಲದ ಅನ್ಯಭಾಷೆಯನ್ನು ನಾನಾ ಕಾರಣಗಳಿಗಾಗಿ ಅರಿಯುವ / ಕಲಿಯುವ ಅವಕಾಶಗಳು ಒದಗುತ್ತವೆ.

ಹೀಗೆ ನಮ್ಮ ದೇಶದ ಇಂದಿನ ಭಾಷೆಗಳನ್ನು ಗಮನಿಸಿದರೆ ಹಲವು ಸಾವಿರ ವರ್ಷಗಳಿಂದಲೂ ಇಲ್ಲಿನ ಭಾಷೆಗಳು ಪರಸ್ಪರ ಪ್ರಭಾವವನ್ನು ಬೀರುತ್ತಿರುವುದು – ಅಂದರೆ ಅವುಗಳನ್ನು ಆಡುವ ಜನ ಒಟ್ಟಿಗೆ ಒಂದೇ ಪರಿಸರದಲ್ಲಿ ಬಾಳುತ್ತಿರುವುದು ಕಂಡುಬರುತ್ತದೆ. ಆದ್ದರಿಂದ ಒಂದು ಸಮಾಜವು ಒಂದಾದರೂ ಭಾಷೆಯನ್ನು ಉಪಯೋಗಿಸುವ ಅವಶ್ಯಕತೆ ಇರುವುದರಿಂದ ಅವರನ್ನು ಏಕಭಾಷಿಗಳೆಂದು ಕರೆಯಬಹುದು. ಮಾನವನ ಮತ್ತೊಂದು ಗುಣ – ಅವನ ಮನಸ್ಸು – ಬುದ್ದಿಮತ್ತೆ ಹಾಗೂ ಚಿಂತನಶೀಲತೆ ಪ್ರತಿಯೊಬ್ಬರಲ್ಲೂ ಭಿನ್ನವಾಗಿರುವುದು. ಆದ್ದರಿಂದ ಮಾನವ ಸಂಘಜೀವಿಯೇ ಆದರೂ ಹಲವಾರು ಅಂತರಗಳನ್ನು ಕಾಣಬಹುದು. ಇಲ್ಲಿ ಅವುಗಳನ್ನು ವಿಶದೀಕರಿಸಲು ಹೋಗದೆ ಭಾಷೆಯ ಮೇಲೆ ಆ ಸ್ವಭಾವದಿಂದಾಗುವ ಪರಿಣಾಮಗಳಷ್ಟನ್ನೇ ಪರಿಶೀಲಿಸೋಣ.

ಸಾಮಾನ್ಯವಾಗಿ ಒಂದು ಸಮಾಜದ ಸದಸ್ಯರು ಅವರ ದೈನಂದಿನ ಎಲ್ಲಾ ಚಟುವಟಿಕೆಗಳಲ್ಲಿ ಅವರದೇ ಆದ ಭಾಷೆಯನ್ನು ಉಪಯೋಗಿಸುವುದು ಸಹಜವೂ ಸಾಮಾನ್ಯವೂ ಆಗಿದೆ. ಅಂತಹ ಸನ್ನಿವೇಶದಲ್ಲಿ ಅವರಿಗೆ ಅನ್ಯ ಭಾಷೆಯೊಂದರ (ಉಪಭಾಷೆಯೊಂದರ) ಪರಿಚಯ / ಅರಿವು ಸಾಧ್ಯತೆ ಅತಿವಿರಳವೇ ಸರಿ. ಆದ್ದರಿಂದ ಸಾಮಾನ್ಯವಾಗಿ ಒಂದು ಸಮಾಜವು ಒಂದೇ ಭಾಷೆಯನ್ನು ಉಪಯೋಗಿಸುತ್ತದೆ ಎಂದು ಹೇಳುವುದು ವಾಡಿಕೆ. (ಆ ಕಾರಣದಿಂದಾಗಿಯೇ ಅಲ್ಲವೆ ನಮ್ಮ ದೇಶದಲ್ಲಿ ಭಾಷಾವಾರು ಪ್ರಾಂತಗಳ ರಚನೆಯಾದದ್ದು). ಈ ಬಗ್ಗೆ ಜನಸಾಮಾನ್ಯರ ಅಭಿಪ್ರಾಯವು ನಮ್ಮ ದೇಶದಲ್ಲೇ ಆಗಲಿ, ಪರದೇಶದಲ್ಲೇ ಆಗಲೀ ಒಂದೇ ಆಗಿದೆ. ಆದ್ದರಿಂದ ಏಕಭಾಷಾ ಸಮಾಜಗಳು ಸಾಮಾನ್ಯವೆಂದೂ, ಯಾರಲ್ಲಾದರೂ ಅಥವಾ ಯಾವ ಸಮಾಜದಲ್ಲಾದರೂ ಬಹುಭಾಷೆಗಳು ಅಥವಾ ಬಹುಭಾಷಿಕ ಸಮಾಜಗಳು ಕಂಡುಬಂದರೆ ಅದು ವಿಶೇಷವೆಂದೂ ಅಪವಾದವೆಂದೂ ಭಾವಿಸುವುದಾಗಿತ್ತು. ಆದರೆ ಅವರ ದೃಷ್ಟಿಕೋನ ಸರಿಯಾದುದಲ್ಲ. ಕಾರಣ, ಒಂದಕ್ಕಿಂತ ಹೆಚ್ಚು ಭಾಷೆಗಳನ್ನಾಡುವ ಪ್ರಾಂತ್ಯಗಳು/ಪ್ರದೇಶಗಳು ಪ್ರಪಂಚದಲ್ಲಿ ಬಹಳವೇ ಇದೆ. ಸ್ವಾರಸ್ಯದ ವಿಷಯವೆಂದರೆ ಪ್ರಪಂಚದಲ್ಲಿರುವ ಸುಮಾರು ಇನ್ನೂರು ದೇಶಗಳು ಸುಮಾರು ಐದುಸಾವಿರಕ್ಕಿಂತ ಹೆಚ್ಚಿನ ಭಾಷೆಗಳನ್ನು ಉಪಯೋಗಿಸುವುದು ಕಾಣಬರುತ್ತದೆ. ಬಹುಭಾಷಿಕತೆಗೆ ಇದಕ್ಕಿಂತ ಪ್ರಶಸ್ತವಾದ ಸನ್ನಿವೇಶವು ಇರಲು ಸಾಧ್ಯವಿಲ್ಲ. ಅಂದಮೇಲೆ ಏಕಭಾಷೆಯನ್ನು ಹೊಂದಿರುವ ದೇಶಗಳು ಅತಿ ವಿರಳವೇ. ಇಂತಹ ಸನ್ನಿವೇಶವು ಇರಬೇಕಾದರೆ ಆ ದೇಶವು/ಸಮಾಜವು ಏಕಭಾಷೆಯನ್ನು ಹೊಂದಿದ್ದು ಅನ್ಯದೇಶ ಸಮಾಜಗಳೊಡನೆ ಯಾವುದೇ ಸಂಪರ್ಕವನ್ನು ಇಟ್ಟುಕೊಳ್ಳದಿರಬೇಕು. ಇಂತಹ ಸನ್ನಿವೇಶವು ಈ ಶತಮಾನದಲ್ಲಿ ಕಾಣಸಿಗುವುದಿಲ್ಲವೆಂದೇ ಹೇಳಬೇಕು.

ಆದ್ದರಿಂದ ಒಂದು ರಾಷ್ಟ್ರವೆಂಬ ಚೌಕಟ್ಟಿನಲ್ಲಿ ಒಂದಕ್ಕಿಂತ ಹೆಚ್ಚಿನ ಭಾಷೆಗಳು ಇದ್ದು ಅಂದರೆ ಒಂದಕ್ಕಿಂತ ಹೆಚ್ಚು ಬೇರೆ ಬೇರೆ ಭಾಷೆಗಳನ್ನಾಡುವ ಸಮಾಜಗಳಿದ್ದರೆ, ಅಲ್ಲಿ ಬಹುಭಾಷಿಕ ಸನ್ನಿವೇಶಗಳು ತಲೆದೋರುತ್ತವೆ. ಇಲ್ಲಿ ಎರಡು ವಿಧಗಳನ್ನು ಗುರುತಿಸಬಹುದು. ಒಂದು ಸಮಾಜದ ಎಲ್ಲಾ ಪ್ರಜೆಗಳು ಒಂದಕ್ಕಿಂತ ಹೆಚ್ಚಿನ ಭಾಷೆಗಳನ್ನು ಅರಿತಿರುವ ಹಾಗೂ ಅವು ಗಳನ್ನು ಸನ್ನಿವೇಶಗಳಿಗೆ ಅನುಗುಣವಾಗಿ ಉಪಯೋಗಿಸುವ ಪರಿಸ್ಥಿತಿ. ಇದನ್ನು ವ್ಯಕ್ತಿಗತ (ವೈಯುಕ್ತಿಕ) ಬಹುಭಾಷಿಕತೆ ಎಂದು ನಿರ್ದೇಶಿಸಬಹುದು; ಮತ್ತು ಒಟ್ಟಾರೆಯಾಗಿ ಆ ದೇಶವನ್ನು ಲಕ್ಷ್ಯದಲ್ಲಿಟ್ಟುಕೊಂಡು ಅದರ ಹಲವು ಪ್ರಜೆಗಳಿಗೆ ಅವರದಲ್ಲದೆ ಮತ್ತೊಂದು ಭಾಷೆಯ ಅರಿವಿದ್ದು ಅದನ್ನು ಉಪಯೋಗಿಸುವ ಸಾಮಥರ್ಯ್ವಿದ್ದರೆ ಇತರ ಪ್ರಜೆಗಳಿಗೆ ಆ ಸಾಮರ್ಥ್ಯವಿಲ್ಲ ದಿದ್ದರೂ ಆ ದೇಶವನ್ನು ಬಹುಭಾಷಾ ದೇಶವೆಂದು ಕರೆಯಬಹುದು.

ಬಹುಭಾಷಿಕತೆಯು ಸಾಮಾನ್ಯವಲ್ಲವೆಂಬ ಭಾವನೆ ಬರುವಂತೆ ಬಹುತೇಕ ದೇಶಗಳಲ್ಲಿ ಆಳುವ ಸರ್ಕಾರಗಳು ಏಕಭಾಷಾ ನೀತಿಯನ್ನು ಪ್ರಚುರಪಡಿಸುತ್ತವೆ. ಆದರೆ ಪ್ರಪಂಚದ ಕಾಲುಭಾಗಕ್ಕಿಂತ ಕಡಿಮೆ ರಾಷ್ಟ್ರಗಳು ಎರಡೂ ಭಾಷೆಗಳಿಗೆ ಮಾನ್ಯತೆ ಕೊಟ್ಟಿವೆ, ಕೇವಲ ಆರು ದೇಶಗಳು ಮೂರು ಅಥವಾ ಅದಕ್ಕಿಂತ ಹೆಚ್ಚಿನ ಭಾಷೆಗಳಿಗೆ ಮಾನ್ಯತೆ ಕೊಟ್ಟಿವೆ. ಅಂದರೆ ದೇಶಗಳ ಆಳುವವರ ಧ್ಯೇಯಗಳನ್ನು ಪರಿಗಣಿಸದೆ ಪ್ರತಿದೇಶದೊಳಗೆ ಏನಾಗುತ್ತದೆಂಬುದನ್ನು ಕೂಲಂಕಷವಾಗಿ ಗಮನಿಸಿದರೆ ಸಂಪೂರ್ಣವಾಗಿ ಬೇರೆಯಾದ ಚಿತ್ರವು ಕಾಣಸಿಗುತ್ತದೆ. ಇತ್ತೀಚೆಗಂತೂ ಪೂರ್ಣವಾಗಿ ಏಕಭಾಷೆಯನ್ನು ಮಾತ್ರ ಹೊಂದಿರುವ ದೇಶವೇ ಇಲ್ಲವೆಂದು ವಿದ್ವಾಂಸರು ವಾದಿಸುತ್ತಾರೆ. ಯಾವ ದೇಶಗಳಲ್ಲಿ ಸರ್ಕಾರದ ಪ್ರಕಾರ ಪ್ರಜೆಗಳು ಒಂದೇ ಭಾಷೆಯನ್ನು ಉಪಯೋಗಿ ಸುತ್ತಾರೆಂಬ ಹೇಳಿಕೆಗಳಿರುತ್ತವೊ (ಇಂಗ್ಲೆಂಡ್, ಉತ್ತರ ಅಮೆರಿಕಾ, ಫ್ರಾನ್ಸ್, ಜರ್ಮನಿ, ಜಪಾನ್ ಇತ್ಯಾದಿ) – ಇವುಗಳಲ್ಲೇ ಸಾಕಷ್ಟು ಪ್ರಮಾಣದಲ್ಲಿ ಅನ್ಯ ಭಾಷೆಗಳನ್ನಾಡುವ ಜನರು ಇರುವುದನ್ನು ಕಾಣಬಹುದು. ಉತ್ತರ ಅಮೆರಿಕಾದಲ್ಲೇ ಶೇ 7% ರಷ್ಟು ಜನ ಆಂಗ್ಲಭಾಷೆಯನ್ನಲ್ಲದೆ ಬೇರೆ ಭಾಷೆಯೊಂದನ್ನು ನಿಯಮಿತವಾಗಿ ಉಪಯೋಗಿಸುತ್ತಾರೆ. ಇಂಗ್ಲೆಂಡಿನಲ್ಲಿ ಕಡಿಮೆ ಸಂಖ್ಯೆಯಲ್ಲಿ ಮಾತಾಡುವ ನೂರಕ್ಕೂ ಹೆಚ್ಚು ಭಾಷೆಗಳುಂಟು. ಏಕಭಾಷೆಯನ್ನುಪಯೋಗಿಸುವ ದೇಶಗಳಲ್ಲಿ ಅಗ್ರಗಣ್ಯವಾಗಿರುವ ಜಪಾನಿನಲ್ಲೇ ಗಣನೀಯ ಪ್ರಮಾಣದಲ್ಲಿ  ಮಾತಾಡುವ ಚೀನಿ, ಕೊರಿಯನ್ ಜನರು ಇದ್ದಾರೆ. ಹೀಗೇ ಆಫ್ರಿಕಾದ ಹಲವು ದೇಶಗಳಲ್ಲಿ ಅವುಗಳ ಸರ್ಕಾರಗಳ ಪ್ರಕಾರ ಏಕ ಪ್ರಕಾರಗಳನ್ನಾಡುವ ದೇಶಗಳಾಗಿ ಘೋಷಿಸಿದರೂ (ಉದಾ. ಘಾನಾ, ನೈಜೇರಿಯಾ, ಇತ್ಯಾದಿ) ಅಲ್ಲಿನ ಶೇ. 90ರಷ್ಟು ಜನ ನಿಯಮಿತವಾಗಿ ಒಂದಕ್ಕಿಂತ ಹೆಚ್ಚಿನ ಭಾಷೆಗಳನ್ನು ಉಪಯೋಗಿಸುವ ಸಾಧ್ಯತೆಗಳಿವೆ. ವಿಚಿತ್ರದ ಸನ್ನಿವೇಶವೆಂದರೆ ದೇಶಗಳು ಏಕಭಾಷೆಯನ್ನು ಹೊಂದಿರುವುದಾಗಿ ಪರಿಗಣಿಸುವ ದೇಶಗಳಳ್ಲಿ ಅವುಗಳ ಸರ್ಕಾರಗಳ ಪ್ರಕಾರ ದ್ವಿಭಾಷಿಕ ರಾಷ್ಟ್ರಗಳೆಂದು ಪರಿಗಣಿಸುವ ದೇಶಗಳಲ್ಲಿ ಇರುವ ದ್ವಿಭಾಷಿಕರಿಗಿಂತ ಹೆಚ್ಚು ದ್ವಿಭಾಷಿಕರು ಕಾಣಸಿಗುತ್ತಾರೆ. ದ್ವಿಭಾಷಿಕ ದೇಶಗಳಲ್ಲಿ ಪ್ರಾಂತೀಯ ಗುಂಪುಗಾರಿಕೆಯಿದ್ದು, ಬೇರೆ ಬೇರೆ ಭಾಷೆಗಳನ್ನಾಡುವವರು ದೇಶದ ಬೇರೆ – ಬೇರೆ ಭಾಗಗಳಲ್ಲಿ  ವಾಸಿಸುವ ಸಾಧ್ಯತೆ ಹೆಚ್ಚಿರುವುದೇ ಇದಕ್ಕೆ ಕಾರಣ. ಉದಾ- ಬೆಲ್ಜಿಯಮ್, ಸ್ವಿಟ್ಜರ್ಲ್ಯಾಂಡ್, ಯುಗೋಸ್ಲಾವಿಯಾ, ಇತ್ಯಾದಿ ದೇಶಗಳಲ್ಲಿರುವಂತೆ.

ಮೇಲೆ ಹೇಳಿದಂತೆ ‘ಬಹುಭಾಷಿ’ಯಾಗುವ ಪೂರ್ವದಲ್ಲಿ ದ್ವಿಭಾಷಿ ಯಾಗುವುದು ಅವಶ್ಯಕ. ಆದ್ದರಿಂದ ದ್ವಿಭಾಷಿ ಸನ್ನಿವೇಶಗಳನ್ನು ವಿಶ್ಲೇಷಿಸಿದರೆ ಬಹುಭಾಷಿ ಸನ್ನಿವೇಶಗಳನ್ನೂ ಬಹುತೇಕವಾಗಿ ವಿಶ್ಲೇಷಿಸಿದಂತೆ. ಆದ್ದರಿಂದ ಎರಡು ಕಲ್ಪನೆಗಳಿಗೂ ಹೆಚ್ಚು ಅಂತರಗಳಿಲ್ಲವಾದ್ದರಿಂದ ದ್ವಿಭಾಷಿಕತೆಯನ್ನು ವಿಷದವಾಗಿ ಇಲ್ಲಿ ಚರ್ಚಿಸಲಾಗಿದೆ.

ಬಹುಭಾಷಿಕತೆ ಎಂದರೇನು? ಹಾಗೂ ಯಾರನ್ನು ಬಹುಭಾಷಿ ಎಂದು ಕರೆಯಬಹುದು? ಪ್ರಾರಂಭದಲ್ಲಿ ತಿಳಿಸಿದಂತೆ ಒಂದು ದೇಶದಲ್ಲಿ ಎರಡು ಅಥವಾ ಹೆಚ್ಚಿನ ಭಾಷೆಗಳು ಇರುವ ಹಾಗೂ ಉಪಯೋಗಿಸುವ ಸನ್ನಿವೇಶಕ್ಕೆ ಬಹುಭಾಷಿಕತೆ ಎಂದು ಕರೆಯುತ್ತಾರೆ. ವ್ಯಕ್ತಿಯೊಬ್ಬರು ಒಂದಕ್ಕಿಂತ ಹೆಚ್ಚಿನ ಭಾಷೆಗಳನ್ನು ದಿನನಿತ್ಯದ ವ್ಯವಹಾರಗಳಲ್ಲಿ ಉಪಯೋಗಿಸುವ ಹಾಗಿದ್ದರೆ ಅವರನ್ನು ಬಹುಭಾಷಿ ಎಂದು ಕರೆಯುತ್ತಾರೆ. ಒಬ್ಬ ವ್ಯಕ್ತಿಯಲ್ಲಿ ಬಹು ಭಾಷಿಕತೆಯು ಸಾಮಾನ್ಯವಾಗಿ ದ್ವಿಭಾಷಿಕತೆಯ ರೂಪದಲ್ಲಿ ಕಾಣಸಿಗುತ್ತದೆ.

ದ್ವಿಭಾಷಿಕತೆ: ಈ ಕಲ್ಪನೆಯ ಬಗ್ಗೆ ಬಹಳವಾದ ತಪ್ಪು ಅಭಿಪ್ರಾಯಗಳು ಬಂದಿವೆ. ಒಂದು: ದ್ವಿಭಾಷಿಕತೆಯು ಸಹಜವಲ್ಲದ, ಎಲ್ಲಾ ಕಡೆಯಲ್ಲೂ ಕಂಡುಬರದ, ಕೇವಲ ಕೆಲವು ದೇಶಗಳಿಗೆ ಸೀಮಿತವಾದ (ಉದಾ: ಕೆನಡಾ, ಸ್ವಿಡ್ಜರ್‌ರ್ಲ್ಯಾಂಡ್, ಬೆಲ್ಜಿಯಮ್, ಇತ್ಯಾದಿ) ಪ್ರಕ್ರಿಯೆ ಎಂದು. ಎರಡನೆ ಯದು, ದ್ವಿಭಾಷಿ ಎನಿಸಲು ಎರಡು ಭಾಷೆಗಳಲ್ಲಿ ಯಾವ ಮಟ್ಟದ ನಿಪುಣತೆ ಯನ್ನು ಸಾಧಿಸಿರಬೇಕೆಂಬುದನ್ನು ನಿರ್ಧರಿಸಲು ಸಾಧ್ಯವೆ ಎಂಬುದು. ಮೊದಲನೆಯ ತಪ್ಪು ಕಲ್ಪನೆಯನ್ನು ಪ್ರಾರಂಭದಲ್ಲೇ ಹೋಗಲಾಡಿಸಬಹುದು. ಅದೆಂದರೆ ದ್ವಿಭಾಷಿಕತೆಯು ಅತ್ಯಂತ ಸಹಜವಾದ ಬಹುತೇಕ ಎಲ್ಲಾ ದೇಶಗಳಲ್ಲೂ ಕಾಣುವ ಪ್ರಕ್ರಿಯೆ. ಎರಡನೆಯ ಪ್ರಶ್ನೆಗೆ ಹೀಗೆ ಉತ್ತರಿಸ ಬಹುದು. ಈ ವಿಷಯದಲ್ಲಿ ಸಾಕಷ್ಟು ವಿವಾದಗಳಿವೆ. ಇಲ್ಲಿ ವಿವಾದಗಳನ್ನು ಚರ್ಚಿಸಲು ಹೋಗದೆ ಇಷ್ಟು ಹೇಳಬಹುದು. ಒಂದು ದೃಷ್ಟಿಯಲ್ಲಿ ಮಾತೃಭಾಷೆಯಷ್ಟೇ ಎರಡನೆಯ ಭಾಷೆಯಲ್ಲೂ ನಿಪುಣತೆ ಇದ್ದರೆ ಮಾತ್ರ ಅವರನ್ನು ದ್ವಿಭಾಷಿಕರೆಂದು ಕರೆಯಲಾಗುವುದು. ಆದರೆ ಇದು ಅತಿ ಸಂಕುಚಿತವಾದ ದೃಷ್ಟಿಕೋನವಾಗುತ್ತದೆ. ಕಾರಣ ಈ ಮಟ್ಟದ ನಿಪುಣತೆಯನ್ನು ಹೊಂದಿರುವವರು ಶೇಕಡಾ 1 ಅಥವಾ 2 ರಷ್ಟಿರುತ್ತಾರೆ, ಅಷ್ಟೆ. ಬಹುಶಃ ವ್ಯಾಖ್ಯಾನಕಾರರು, ಅನುವಾದಕರು. ಆಗ ಮಿಕ್ಕವರನ್ನು ಏನೆಂದು ಕರೆಯಬೇಕೆಂಬ ಸಮಸ್ಯೆ ತಲೆದೋರುತ್ತದೆ. ಆದ್ದರಿಂದ ಇದರ ಪರಿಭಾಷೆಯನ್ನು ಸ್ವಲ್ಪ ವಿಶಾಲಗೊಳಿಸಿ, ವ್ಯಕ್ತಿಗಳ ಎರಡು ಭಾಷೆ ಗಳನ್ನು (ಅಥವಾ ಎರಡು  ಉಪಭಾಷೆಗಳನ್ನು) ದೈನಂದಿನ ವ್ಯವಹಾರಗಳಲ್ಲಿ ಉಪಯೋಗಿಸುವಂತಿದ್ದರೆ, ಅವರನ್ನು ದ್ವಿಭಾಷಿಕರೆಂದು ಕರೆಯಬಹುದು. ಈ ಪರಿಭಾಷೆಯಿಂದ ವಲಸೆ ಬಂದ ಕಾರ್ಮಿಕರನ್ನೂ, ಯಾರಿಗೆ ಕೇವಲ ಅಲ್ಪಸ್ವಲ್ಪ ಮಾತಾಡಲು ಬಂದರೂ ಸಾಕು, ಬರೆಯಲು / ಓದಲು ಬರದಿದ್ದರೂ ಅವರನ್ನೂ ದ್ವಿಭಾಷಿಕರೆಂದು ಪರಿಗಣಿಸಬಹುದು. ಇದು ಅತಿ ಹಿರಿದಾದ, ವಿಸ್ತಾರವಾದ ಕಲ್ಪನೆಯಾಯಿತು. ಅಂದರೆ ಮೊದಲ ದೃಷ್ಟಿಕೋನವು ಒಂದು ಅತಿಯಾದರೆ ಎರಡನೆಯದು ಇನ್ನೊಂದು ಅತಿಯಾಯಿತು. ಇವುಗಳ ನಡುವೆ ಬಹುತೇಕ ಸನ್ನಿವೇಶಗಳೂ ಕಂಡುಬರುತ್ತವೆ. ಉದಾ: ವಿಜ್ಞಾನಿಗಳು / ವಿದ್ವಾಂಸರು ಮಾತೃಭಾಷೆಯಲ್ಲಿ ಎಲ್ಲರೊಡನೆ ಮಾತಾಡಬಹುದು. ಆದರೆ ಅವರ ಓದು ಬರಹಗಳು ಎರಡನೆಯ ಭಾಷೆಯಲ್ಲಿರಬಹುದು: ಅಲ್ಪಸಂಖ್ಯಾತರ ಗುಂಪಿಗೆ ಸೇರಿದವರು ತನ್ನ ನುಡಿಯನ್ನು ತಮ್ಮ ಗುಂಪಿನ ಸದಸ್ಯರೊಡನೆ ವ್ಯವಹರಿಸುವಾಗ, ಹಾಗೂ ಅಲ್ಲಿನ ಸ್ಥಳೀಯ ಭಾಷೆಯನ್ನು ಗುಂಪಿನ ಹೊರಗೆ, ಇತರರೊಡನೆ ವ್ಯವಹರಿಸಲು ಉಪಯೋಗಿಸಬಹುದು. ಈ ಮೇಲಿನ ವಿಧಗಳಲ್ಲಿ ಎಷ್ಟೇ ಅಂತರವಿದ್ದರೂ ಒಂದು ಮುಖ್ಯವಾದ ಸಾಮ್ಯತೆ ಇದೆ. ಅದೆಂದರೆ ಇವರ ಜೀವನದಲ್ಲಿ ಎರಡು ಭಾಷೆಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಯಾವಾಗ ವ್ಯಕ್ತಿಗಳು (ದ್ವಿಭಾಷಿಕರು) ಎರಡು ಭಾಷೆಗಳನ್ನು ಉಪಯೋಗಿಸುವುದು ನಿಲ್ಲುತ್ತದೋ ಹಾಗೂ ತಮ್ಮ ವ್ಯವಹಾರಗಳನ್ನು ಒಂದೇ ಭಾಷೆಯ ಮೂಲಕ ನಡೆಸಿದರೂ ಮತ್ತೊಂದು ಭಾಷೆಯ ಜ್ಞಾನ ಸ್ವಲ್ಪವಾದರೂ ಇದ್ದರೆ ಅವರನ್ನು ಅಕ್ರಿಯಾತ್ಮಕ ದ್ವಿಭಾಷಿಕ ಎಂದು ಕರೆಯುವರು. ಈ ಸನ್ನಿವೇಶವು ಹೀಗೇ ಮುಂದುವರಿದರೆ ಅಕ್ರಿಯಾತ್ಮಕವಾದ ಎರಡನೇ ಭಾಷೆಯು ಪೂರ್ಣವಾಗಿ ಬಿಟ್ಟುಹೋಗುತ್ತದೆ. ಇಲ್ಲಿ ಒಂದು ಪ್ರಶ್ನೆಯನ್ನು ಕೇಳಬಹುದು. ವ್ಯಕ್ತಿಯೊಬ್ಬರು ಎರಡು ಭಾಷೆಗಳನ್ನು ಉಪ ಯೋಗಿಸುವ ಕಾರಣಗಳೇನು?

ಒಂದು ಮುಖ್ಯವಾದ ಕಾರಣ, ಬೇರೆ ಬೇರೆ ಭಾಷಾ ಸನ್ನಿವೇಶಗಳಿಗೆ ಸೇರಿದ ವ್ಯಕ್ತಿಗಳೊಡನೆ ಸಂಪರ್ಕ. ಆದರೆ ಈ ಹೇಳಿಕೆಯಿಂದ ವಯಸ್ಕ ದ್ವಿಭಾಷಿಕರಲ್ಲಿ ಕಾಣುವ ಎಲ್ಲಾ ಲಕ್ಷಣಗಳನ್ನೂ ಹೇಳಿದಂತಾಗುವುದಿಲ್ಲ. ಭಾಷೆಗಳು ಸಂಪರ್ಕಕ್ಕೆ ಬರುವಂತಾಗಿ ದ್ವಿಭಾಷಿಕತೆಯು ಉಂಟಾಗಲು ಕಾರಣಗಳು ಹಲವು. ಮೇಲೆ ಹೇಳಿದಂತೆ ಹಲವು ಕಾರಣಗಳಿಂದಾದ ವಲಸೆಗಳು (ಆರ್ಥಿಕ, ಸಾಮಾಜಿಕ, ರಾಜಕೀಯ, ಧಾರ್ಮಿಕ, ವಿದ್ಯಾಭ್ಯಾಸ, ಇತ್ಯಾದಿ), ರಾಷ್ಟ್ರೀಯತೆ ಮತ್ತು ದೇಶಕೂಟಗಳು, ವಿದ್ಯೆ ಮತ್ತು ಸಂಸ್ಕೃತಿ, ವ್ಯಾಪಾರ, ಅಂತರ್ವಿವಾಹ ಇತ್ಯಾದಿ. ಈ ಅಂಶಗಳು ಜನರಲ್ಲಿ ಹಲವಾರು ಅವಶ್ಯಕತೆಗಳನ್ನು ಹುಟ್ಟಿಸುತ್ತವೆ. ಯಾರು ಈ ಅವಶ್ಯಕತೆಗಳಿಗೆ ಯೋಗ್ಯವಾದ ಸಂಪರ್ಕದಲ್ಲಿರುವ ಎರಡು ಅಥವಾ ಹೆಚ್ಚು ಭಾಷೆಗಳಲ್ಲಿ ನಿಪುಣತೆಯನ್ನು ಅಭಿವೃದ್ದಿಪಡಿಸಿಕೊಳ್ಳುತ್ತಾರೆಯೋ ಅವರು ದ್ವಿಭಾಷಿಕರು. ಸಂಪರ್ಕ ಸನ್ನಿವೇಶ ಗಳಲ್ಲಿ ಜೀವನದ ಎಲ್ಲಾ ಸ್ತರಗಳಲ್ಲೂ ಒಂದೇ ಭಾಷೆಯನ್ನು ಉಪಯೋಗಿ ಸುವುದು ಬಹಳ ಅಪರೂಪವೇ ಸರಿ. ಹಾಗೇ ಸದಾಕಾಲವೂ ಎರಡು ಭಾಷೆಗಳ ಅವಶ್ಯಕತೆಯಿರುವುದೂ ಅಪರೂಪವೆ. ಹಾಗೆ ನೋಡಿದರೆ ದ್ವಿಭಾಷಿಕರು ಬೇರೆ ಬೇರೆ ಉದ್ದೇಶಗಳಿಗಾಗಿ ಭಾಷೆಗಳನ್ನು ಕಲಿಯುತ್ತಾರೆ ಹಾಗೂ ಜೀವನದ ಭಿನ್ನ ಭಿನ್ನ ಸ್ತರಗಳಲ್ಲಿ ಅವಶ್ಯಕತೆಗಳಿಗನುಗುಣವಾಗಿ ಅವುಗಳನ್ನು ಉಪಯೋಗಿ ಸುತ್ತಾರೆ. ಆದ್ದರಿಂದ ಭಾಷೆಗಳ ಅವಶ್ಯಕತೆ ಮತ್ತು ಉಪಯೋಗಗಳು ಗಮನಾರ್ಹವಾಗಿ ಬೇರೆ ಬೇರೆಯಾಗಿರುವುದರಿಂದಲೇ ದ್ವಿಭಾಷಿಕರು ಸಾಮಾನ್ಯ ವಾಗಿ ಎರಡು ಭಾಷೆಗಳಲ್ಲಿ ಒಂದೇ ಆದ ನೈಪುಣ್ಯವನ್ನು ಪಡೆದಿರುವುದಿಲ್ಲ. ಒಂದೇ ಭಾಷೆಯಲ್ಲಿ ಪಡೆದ ನಿಪುಣತೆಯ ಮಟ್ಟವು ಅದರಲ್ಲೂ ಹೆಚ್ಚು ನಿಖರವಾಗಿ ಭಾಷೆಯನ್ನು ಉಪಯೋಗಿಸುವ ಜಾಣ್ಮೆಯು ಆ ಭಾಷೆಯ ಅವಶ್ಯಕತೆಯ ಮತ್ತು ನಿರ್ದಿಷ್ಟ ಪ್ರಕಾರದ ಮೇಲೆ ಅವಲಂಬಿಸಿರುತ್ತದೆ. ಆದ್ದರಿಂದ ದ್ವಿಭಾಷಿಕರು ಒಂದು ಭಾಷೆಯಲ್ಲಿ ಕೇವಲ ಓದುವ ಬರೆಯುವ ಶಕ್ತಿಯನ್ನು ಪಡೆದಿರುವುದು ಸರ್ವೇಸಾಮಾನ್ಯ. ಇವರು ಕೆಲವು ಜನರೊಡನೆ ಭಾಷೆಯನ್ನು ಉಪಯೋಗಿಸುವ ಶಕ್ತಿಯನ್ನು ಕಡಿಮೆ ಮಾಡಿಕೊಂಡಿರುವುದು ಅಥವಾ ಒಂದು ಭಾಷೆಯಲ್ಲಿ ಒಂದು ವಿಷಯದಲ್ಲಿ ಮಾತಾಡುವ ಶಕ್ತಿಯನ್ನು ಮಾತ್ರ ಪಡೆದಿರುವ ಸಾಧ್ಯತೆ ಕಂಡುಬರುತ್ತದೆ. ಇದು ಸಾಮಾನ್ಯವಾಗಿ ಒಳ್ಳೆಯ ಅನುವಾದಕರಾಗಿರುವ ದ್ವಿಭಾಷಿಕರ ಗುಟ್ಟನ್ನು ತೋರಿಸುತ್ತದೆ. ಯಶಸ್ವೀ ಅನುವಾದ ಹಾಗೂ ಸಾರ್ಥಕ ತರ್ಜುಮೆ ಮಾಡುವ ಕಲೆಗಳು ವ್ಯಕ್ತಿಯಲ್ಲಿ ಎರಡು ಭಾಷೆಗಳ ಒಂದೇ ಸಮನಾದ ಪದಾತ್ಮಕ ಜ್ಞಾನವನ್ನು ಹೊಂದಿರುವ ಅವಶ್ಯಕತೆಯನ್ನು ತೋರಿಸುತ್ತದೆ. ಈ ಮಟ್ಟದ ಜ್ಞಾನವನ್ನು ಹೊಂದಿರುವ ಅವಶ್ಯಕತೆಯನ್ನು ತೋರಿಸುತ್ತದೆ. ಈ ಮಟ್ಟದ ಜ್ಞಾನವು ಬಹುತೇಕ ದ್ವಿಭಾಷಿಕರಲ್ಲಿ ಇರುವುದಿಲ್ಲ. ಒಬ್ಬ ವ್ಯಕ್ತಿ ಎಷ್ಟು ಭಾಷೆಗಳನ್ನು ಕಲಿಯಬೇಕು ಎಂಬ ಪ್ರಶ್ನೆಗೆ ಸರಿಯಾದ ಉತ್ತರ ದೊರೆಯುವುದಿಲ್ಲ. ಆದರೆ ಇತಿಹಾಸದಲ್ಲಿ ಹಲವು ವ್ಯಕ್ತಿಗಳು ಅನೇಕ ಭಾಷೆಗಳನ್ನು ಕಲಿತಿದ್ದ ಅಸಾಧಾರಣ ಶಕ್ತಿಯ ಬಗ್ಗೆ ಓದಿದ್ದೇವೆ. ಉದಾ. ವ್ಯಾಟಿಕನ್‌ನ ಗ್ರಂಥಪಾಲಕನಾಗಿದ್ದ ಗಿಯುಸೆಪ್ಪೆ ಮೆಜ್ಜೋಫಂತೀ (1774-1846)ಗೆ 50 ಭಾಷೆಗಳಲ್ಲಿ ಚೆನ್ನಾಗಿ ಮಾತಾಡಲು ಬರುತ್ತಿತ್ತಂತೆ. ಹಾಗೂ ಅನ್ಯ 20 ಭಾಷೆಗಳು ಅರ್ಥವಾಗುತ್ತಿತ್ತಂತೆ. 114 ಭಾಷೆಗಳಲ್ಲಿ ಭಾಷಾಂತರ ಮಾಡಲು ಸಾಧ್ಯವಿತ್ತಂತೆ. ಹಾಗೇ ವಿಕ್ಟೋರಿಯನ್ ರಾಯಭಾರಿಯಾದ ಸರ್ ಜಾನ್ ಬೌರಿಂಗ್ 100 ಭಾಷೆಗಳಲ್ಲಿ ಮಾತಾಡ ಬಲ್ಲವನಾಗಿದ್ದನಂತೆ ಮತ್ತೂ 100 ಭಾಷೆಗಳನ್ನು ಓದಬಲ್ಲವನಾಗಿದ್ದನಂತೆ. ಆದರೆ ಇಂತವರು ಬಹಳವೇ ವಿರಳ. ಎರಡಕ್ಕಿಂತ ಹೆಚ್ಚಿನ ಭಾಷೆಗಳಲ್ಲಿ ಎಲ್ಲಾ ಕಾಲದಲ್ಲಿಯೂ ಒಂದೇ ಮಟ್ಟದ ನೈಪುಣ್ಯವನ್ನು ಹೊಂದಿರುವುದು ಬಹಳವೇ ಅಪರೂಪ.

ದ್ವಿಭಾಷಿಕರನ್ನು, ಅವರಲ್ಲಿರುವ ಭಾಷೆಗಳ ನಿಪುಣತೆಯ ಮೇಲೆ ಹಲವು ರೀತಿಯಲ್ಲಿ ವರ್ಗೀಕರಿಸಬಹುದು. ವೈನ್ರಿಚ್ (1953) ಪ್ರಕಾರ:  ದ್ವಿಭಾಷಿಕ ಮತ್ತು ಸಮಾನಾಧಿಕರಣ ದ್ವಿಭಾಷಿಕ. ಇದು ಎರಡು ಭಾಷೆಗಳ ಪದಾತ್ಮಕ ವ್ಯವಸ್ಥೆಗೆ ಸಂಬಂಧಿಸಿದ್ದು. ಅವು ಪ್ರತಿನಿಧಿಸುವ ಕಲ್ಪನೆಗಳ ಸಂಬಂಧವಾಗಿ, ಭಾಷೆಗಳನ್ನು ಪಡೆಯುವ ಮತ್ತು ಉಪಯೋಗಿಸುವ ಸನ್ನಿವೇಶಗಳ ಮೇಲೆ ಅವಲಂಬಿಸಿರುವುದು. ಸಾಮಾಜಿಕ ವ್ಯವಸ್ಥೆಯಲ್ಲಿ ಭಾಷೆಗಳನ್ನು ಒಂದೇ ಕಲ್ಪನೆಯೊಳಗಡೆ ಸೇರಿಸಿಕೊಳ್ಳುತ್ತದೆ. ಸಮಾನಾಧಿಕರಣ ವ್ಯವಸ್ಥೆಯಲ್ಲಿ ಬೇರೆ ಬೇರೆಯಾಗಿ ಕಲ್ಪನೆಗಳು ಹೊಂದಿರುತ್ತದೆ. ಇನ್ನೊಂದು ವರ್ಗೀಕರಣವು ದ್ವಿಭಾಷಿಕತೆಯನ್ನು ಪಡೆದ ಕಾಲಕ್ಕೂ (ವಯಸ್ಸಿಗೆ) ಸಂಬಂಧಿಸಿದ್ದು. ಏಕಕಾಲೀನ ಮತ್ತು ಅನುಕ್ರಮಿಕ. ಅಂದರೆ ದ್ವಿಭಾಷಿಕತೆಯಲ್ಲಿನ ಎರಡು ಭಾಷೆಗಳನ್ನು ಒಂದೇ ಸಮಯದಲ್ಲಿ ಏಕಕಾಲದಲ್ಲೇ ಕಲಿಯುವ ಅಥವಾ ಎರಡನೆಯ ಭಾಷೆಯನ್ನು ಮೊದಲಿನ ಭಾಷೆಯನ್ನು ಕಲಿತನಂತರ ಕಲಿಯುವುದು.

ಭಾಷಾ ದ್ವಿಸ್ತರತೆ (ಡೈಗ್ಲಾಸಿಯಾ) : ಒಂದು ಸಮಾಜವು ಒಂದೇ ಭಾಷೆ ಯನ್ನು ಅರಿತಿದ್ದು, ಆದರೆ ಆ ಭಾಷೆಯಲ್ಲೇ ಎರಡು ಸ್ತರಗಳಿದ್ದರೆ ಅಂತಹ ಸನ್ನಿವೇಶಗಳನ್ನು ದ್ವಿಭಾಷಿಕ ಸನ್ನಿವೇಶಗಳೆಂದು ಕರೆಯಬಹುದು. ಒಂದು ಭಾಷೆಯ ಎರಡು ಬಗೆಗಳು (ಉಪಭಾಷೆಗಳು) ಕ್ರಿಯಾತ್ಮಕ (ಪೂರಕ) ವಿತರಣೆಯಲ್ಲಿದ್ದರೆ ಇಂತಹ ಸನ್ನಿವೇಶಗಳು ಒದಗುತ್ತವೆ.

ಈ ಕಲ್ಪನೆಯನ್ನು ಚಾರ್ಲ್ಸ್ ಫರ್ಗುಸನ್ ಮೊದಲ ಬಾರಿಗೆ 1959ೊರಲ್ಲಿ ಮಂಡಿಸಿದನು. ಇವನ ದೃಷ್ಟಿಯಲ್ಲಿ ಬಹುತೇಕ ವ್ಯವಸ್ಥಿತವಾದ ಬದಲಾವಣೆ ಗಳಿಲ್ಲದ ಭಾಷಾ ಸನ್ನಿವೇಶಕ್ಕೆ ಉಪಯೋಗಿಸುವಂತಹುದು. ಈ ಸನ್ನಿವೇಶದಲ್ಲಿ ಒಂದು ಭಾಷೆಯ ಉಪಭಾಷೆಗಳು ಇದ್ದು, ಅವುಗಳಲ್ಲಿ ಒಂದು ಪ್ರಮಾಣ  ಉಪಭಾಷೆಯೂ, ಮತ್ತು ಪ್ರಾದೇಶಿಕ ಉಳಿದವು ಅಥವಾ ಸಾಮಾಜಿಕ ಉಪಭಾಷೆಗಳಾಗಿರಬಹುದು. ಈ ಸನ್ನಿವೇಶದಲ್ಲಿ, ಒಂದು ಬಗೆಯು ಹೆಚ್ಚು ಮಾನ್ಯತೆ ಪಡೆದುದಾಗಿ ಹೆಚ್ಚು ವ್ಯವಸ್ಥಿತವಾದ ವ್ಯಾಕರಣ ವ್ಯವಸ್ಥೆಯನ್ನು ಹೊಂದಿದ್ದು, ಮಾನ ಸಾಹಿತ್ಯ ರಚನೆಯಲ್ಲಿ, ಔಪಚಾರಿಕ ಸನ್ನಿವೇಶಗಳಲ್ಲಿ – ಆಕಾಶವಾಣಿ, ವೃತ್ತಪತ್ರಿಕೆ, ಶಿಕ್ಷಣ ಇತ್ಯಾದಿಗಳಲ್ಲಿ ಉಪಯೋಗಿಸುವಂತದ್ದು. ಅನೌಪಚಾರಿಕ ಸಂಭಾಷಣೆಗಳಲ್ಲಿ ಅನ್ಯ ಉಪಭಾಷೆಗಳನ್ನು ಉಪಯೋಗಿಸುವ ಪ್ರವೃತ್ತಿಯಿರುತ್ತದೆ. ಇಂತಹ ಸಂದರ್ಭವನ್ನು ದ್ವಿಸ್ತರಸನ್ನಿವೇಶವೆಂದು ಕರೆದನು. ಈ ವಿಧಗಳಲ್ಲಿ ಒಂದನ್ನು ಮೇಲುದರ್ಜೆಯದೆಂದು (H) ಸಂಕೇತಿಸಿದನು; ಇನ್ನೊಂದನ್ನು ಕೆಳಮಟ್ಟದೆಂದು (L) ಸೂಚಿಸಿದನು. ಇದನ್ನು ದ್ವಿಸ್ತರ ಸನ್ನಿವೇಶ (ಡೈಗ್ಲಾಸಿಯಾ) ಎಂದು ಕರೆದನು.

ಫರ್ಗುಸನ್ನನು ಸನ್ನಿವೇಶಗಳನ್ನು ಗುರುತಿಸಲು ಮತ್ತು ಅನ್ಯ ಸಾಮಾಜಿಕ ಭಾಷಿಕ ಸನ್ನಿವೇಶಗಳಿಂದ ಬೇರ್ಪಡಿಸಲು ಈ ಅಂಶಗಳನ್ನು ಕೊಟ್ಟಿದ್ದಾನೆ: (1) ಶಿಷ್ಟ (ಮೇಲು) ವಿಧ H ಮತ್ತು ಸಂಪರ್ಕ/ಸ್ಥಳೀಯ ಭಾಷೆಯು ಕೆಳಸ್ತರದ ವಿಧ L. ಇವುಗಳು ಪರಸ್ಪರ ಪೂರಕ ಕ್ರಿಯಾತ್ಮಕ ವಿತರಣೆ ಯಲ್ಲಿರಬೇಕು. (2) ವಾಕ್ ಸಮುದಾಯದ ಸದಸ್ಯರು ‘H’ ವಿಧವು ಮೇಲು ಮಟ್ಟದ್ದೆಂದು ಪರಿಗಣಿಸಬೇಕು ಹಾಗೂ ಗೌರವಿಸಬೇಕು; (3) ಗೌರವಾನ್ವಿತ ಲಿಖಿತ ಸಾಹಿತ್ಯವು ‘H’ ನೊಂದಿಗೆ ಸಹಚರ್ಯ ಸಂಬಂಧವನ್ನು ಹೊಂದಿರ ಬೇಕು; (4) ‘H’ ವಿಧದಲ್ಲಿ ನಿಪುಣತೆಯು ಔಪಚಾರಿಕ ವಿದ್ಯಾಭ್ಯಾಸದಿಂದಲೇ ಪಡೆಯಲು ಸಾಧ್ಯವಾಗುವಂತಹುದಾಗಿರಬೇಕು. ಆದರೆೊ‘H’ ವಿಧದಲ್ಲಿ ನಿಪುಣತೆಯು ಔಪಚಾರಿಕ ವಿದ್ಯಾಭ್ಯಾಸದಿಂದಲೇ ಪಡೆಯಲು ಸಾಧ್ಯ ವಾಗುವಂತಿರಬೇಕು. ಆದರೆ ವಿಧದಲ್ಲಿ ನಿಪುಣತೆಯು ಮಾತೃಭಾಷಾ ಪರಿಗ್ರಹಣೆಯ ಸಹಜ ಪ್ರಕ್ರಿಯೆಯಿಂದ ಬರುವಂತಹುದು. (5) ‘H’ ವಿಧದ ಉಚ್ಚಾರಣೆ, ವ್ಯಾಕರಣ ಮತ್ತು ಪದಸಮೂಹಗಳು ಮಾನ್ಯತೆ ಪಡೆದು ಪ್ರಮಾಣೀಕೃತವಾಗಲು ಅತ್ಯಲ್ಪವಾದ ಬದಲಾವಣೆಗಳಿಗೆ ಮಾತ್ರ ಅವಕಾಶ ವಿರುತ್ತದೆ. ಅವು ಹೆಚ್ಚಿನ ಬದಲಾವಣೆಗಳನ್ನು ಸಹಿಸುವುದಿಲ್ಲ. ‘H’ ವಿಧದ ಬಗ್ಗೆ ಇಷ್ಟು ಬಿಗಿ ಧೋರಣೆಯಿರುವುದಿಲ್ಲ. ಆದ್ದರಿಂದ ಉಚ್ಚಾರಣೆ, ವ್ಯಾಕರಣ ಮತ್ತು ಪದ ಸಮೂಹದಲ್ಲಿ ಹೆಚ್ಚು ಬದಲಾವಣೆಗಳಿಗೆ ಅವಕಾಶ ವುಂಟು. (6)  ದ್ವಿಭಾಷಾಸ್ತರ ಸನ್ನಿವೇಶಗಳು ಬಹುತೇಕ ಸ್ಥಿರವಾದದ್ದು. ಹಲವಾರು ಶತಮಾನಗಳಿಂದ ಮುಂದುವರೆದುಕೊಂಡುಬಂದಿವೆ, ಹಾಗೂ ಮುಂದುವರಿಯುವಂತಹವು. (7) ‘H’ ಮತ್ತು ‘L’ ವಿಧಗಳ ನಡುವೆ ಸ್ಪಷ್ಟವಾದ, ಆಳವಾದ ವೈರುಧ್ಯಗಳು ಇರುತ್ತವೆ. 8. ‘H’ ಮತ್ತು ‘L’ ವಿಧಗಳ ನಡುವೆ ಸಾಮಾನ್ಯವಾಗಿ ಹೆಚ್ಚು ಉಪಯೋಗಿಸುವ ಕಲ್ಪನೆಗಳಿಗೆ ಪದಗಳು ಇರುತ್ತವೆ; (9) ‘H’ ಮತ್ತು ‘L’ ಬಗೆಗಳ ಧ್ವನಿವ್ಯವಸ್ಥೆಯು ಒಂದೇ ಧ್ವನಿಮಾತ್ಮಕ ರಚನೆಯನ್ನು ಹೊಂದಿರುತ್ತದೆ. ಇದರಲ್ಲಿ ‘L’ ನದು ಮೂಲವ್ಯವಸ್ಥೆಯಾಗಿರುತ್ತದೆ.

ಇಂತಹ ವ್ಯವಸ್ಥೆಗಳ ಪ್ರಪಂಚದ ಹಲವಾರು ಭಾಷೆಗಳಲ್ಲಿ ಕಾಣಬಹುದು. ಗ್ರೀಕ್, ಅರಾಬಿಕ್, ಬಂಗ್ಲಾ, ಕನ್ನಡ, ತಮಿಳು, ಇತ್ಯಾದಿ. ‘H’ ಮತ್ತು ‘L’ ಗಳ ವೈರುದ್ಧ್ಯ ಸ್ಪಷ್ಟವಾದದ್ದು. ‘H’ (ಶಿಷ್ಟ / ಉಚ್ಚ) ವಿಧವನ್ನು ಭಾಷಣಗಳಲ್ಲಿ, ಪ್ರವಚನಗಳಂತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ರೇಡಿಯೋ, ವೃತ್ತಪತ್ರಿಕೆಗಳಂತಹ ಪ್ರಚಾರ ಮಾಧ್ಯಮಗಳಲ್ಲಿ, ಸಾಹಿತ್ಯ ರಚನೆ ಇತ್ಯಾದಿ ಕ್ಷೇತ್ರಗಳಲ್ಲಿ ಉಪಯೋಗಿಸುವರು; ‘L’ ವಿಧವನ್ನು ದಿನನಿತ್ಯದ ಸಂಭಾಷಣೆಗಳಲ್ಲಿ, ಅನೌಪಚಾರಿಕ ಸನ್ನಿವೇಶಗಳಲ್ಲಿ, ಹಾಸ್ಯ ಧಾರಾವಾಹಿಗಳಲ್ಲಿ, ಕಾರ್ಟೂನಿನಲ್ಲಿ, ಜಾನಪದ ಸಾಹಿತ್ಯದಲ್ಲಿ ಉಪಯೋಗಿಸು ವರು. ‘H’ ವಿಧವು ‘L’ ವಿಧಕ್ಕಿಂತ ಸುಂದರವಾದದ್ದೆಂಬ ಅಭಿಪ್ರಾಯವೂ ಸದಸ್ಯರಲ್ಲಿ ಇರುತ್ತದೆ. ಒಂದು ಗುಂಪಿನ ಐಕ್ಯತೆಗೆ / ಒಗ್ಗಟ್ಟಿಗೆ ಇಂತಹ ದ್ವಿಸ್ತರಸನ್ನಿವೇಶದಲ್ಲಿ ‘H’ ಅಥವಾ ‘L’ ವಿಧವನ್ನು ಆರಿಸುವುದರ ಮೇಲೆ ಅವಲಂಬಿಸಿರುತ್ತದೆ. ದ್ವಿಸ್ತರ ಸನ್ನಿವೇಶವು ಬಹಳ ಶತಮಾನಗಳಷ್ಟು ಸ್ಥಿರವಾಗಿ ಇರುವ ಸಾಧ್ಯತೆಗಳಿದ್ದರೂ ಕೆಲವು ಸನ್ನಿವೇಶಗಳಲ್ಲಿ ಅಸ್ಥಿರಗೊಳ್ಳುವ ಸಾಧ್ಯತೆಗಳಿವೆ. ಒಂದೇ ‘ಪ್ರಮಾಣ’ಕ್ಕಾಗಿ ಬಹುಸಂಖ್ಯೆಯಲ್ಲಿ ಜನ ಚಳುವಳಿ ಯನ್ನು ನಡೆಸುವುದುಂಟು. ಇಂಥ ಇನ್ನೂ ಇತರ ರಾಜಕೀಯಾತ್ಮಕವಾಗಿ ಒಂದಾಗುವಿಕೆಯ ಕಾರ್ಯಕ್ರಮಗಳನ್ನು ಕಾಣಬಹುದು; ರಾಷ್ಟ್ರೀಯ ಗುರುತಾಗಿ ಅಥವಾ ಬರವಣಿಗೆಯ ಪುನಃ ಪರಿಶೀಲನೆಗಾಗಿ, ಇಂತಹ ಸನ್ನಿವೇಶಗಳಲ್ಲಿ ‘H’ ಅಥವಾ ‘L’ ಬಗೆಯನ್ನು ‘ಪ್ರಮಾಣ’ ವೆಂದು ಬೆಂಬಲಿಸುವ ವಾದಗಳು ಹೊರಬೀಳುತ್ತವೆ. ‘H’ ವಿಧವನ್ನು ಬೆಂಬಲಿಸುವವರು ಅದರ ಘನತೆ, ಇತಿಹಾಸ, ಸಾಹಿತ್ಯದ ಹಿರಿಮೆಗಳನ್ನು ವಿಸ್ತರಿಸಿ ಹಲವಾರು ಸ್ಥಳೀಯ ಉಪಭಾಷೆಗಳೊಡನೆ ಇರಬಹುದಾದ ನೆಂಟನ್ನು ಎತ್ತಿತೋರಿಸಲು ಪ್ರಯತ್ನಿ ಸುತ್ತಾರೆ. ‘L’ ವಿಧದ ಬೆಂಬಲಿಗರು, ಜನರ ದೈನಂದಿನ ನುಡಿಗೆ ‘ಪ್ರಮಾಣ’ವು ಹತ್ತಿರವಿರಬೇಕೆಂಬ ನೀತಿಯನ್ನು ಪ್ರತಿಪಾದಿಸುತ್ತಾರೆ. ಹಾಗೂ ಎಲ್ಲಾ ಸ್ತರಗಳಲ್ಲೂ ಪರಿಣಾಮಕಾರಕವಾದ ಸಂಪರ್ಕ ಸಾಧನವಾಗಿ ಅದನ್ನು ಪ್ರತಿ ಪಾದಿಸುತ್ತಾರೆ. ಕೆಲವು ವೇಳೆ ‘H’ ಮತ್ತು ‘L’ ಗಳ ಮಿಶ್ರರೂಪವನ್ನು ಬೆಂಬಲಿಸುವವರೂ ಇರುತ್ತಾರೆ. ‘L’ ಆಧಾರದ ಮೇಲೆ ಬೆಳೆದ ಪ್ರಮಾಣಗಳನ್ನು ಹಲವು ಭಾಷೆಗಳಲ್ಲಿ – ಗ್ರೀಸ್, ಚೀನಾ, ಹೈಟಿ ಮತ್ತಿತರ ಪ್ರದೇಶಗಳಲ್ಲಿ ಕಾಣಬಹುದು.

ಆದ್ದರಿಂದ ಒಂದು ಪ್ರಾಂತ್ಯದಲ್ಲಿ ಒಂದೇ ಭಾಷೆಯನ್ನು ಉಪಯೋಗಿಸಿ ದರೂ ಅದರ ಉಪಭಾಷೆಗಳ ನಡುವೆ ಅಂತರಗಳಿದ್ದೇ ಇರುತ್ತವೆ. ಆ ಅಂತರಗಳೂ ಸಮಾಜದ ಕ್ಲಿಷ್ಟತೆಯನ್ನು ತೋರಿಸುತ್ತವೆ. ನಮ್ಮ ದೇಶದಲ್ಲಿ ಒಂದಕ್ಕಿಂತ ಹೆಚ್ಚಿನ ಭಾಷೆಗಳನ್ನು ಎಲ್ಲ ಭಾಗಗಳಲ್ಲೂ ಎಲ್ಲಾ ಸಮಾಜ ಗಳಲ್ಲೂ ಕಾಣಬಹುದು. ಇಂತಹ ಸನ್ನಿವೇಶವು ಈಗಲೂ ಇದೆ, ಹಿಂದೆಯೂ ಅಂದರೆ 3-4 ಸಾವಿರ ವರ್ಷಗಳ ಹಿಂದೆಯೂ ಇತ್ತು ಎನ್ನುವುದಕ್ಕೆ ಆಧಾರಗಳಿವೆ. ಬಹುಭಾಷಿಕತೆಯ ಸನ್ನಿವೇಶದಲ್ಲಿ ಒಂದು ಪ್ರಶ್ನೆಯನ್ನು ಕೇಳಬಹುದು. ಅದೆಂದರೆ ಇಂತಹ ಸನ್ನಿವೇಶವು ಉಂಟಾಗುವ ಕಾರಣಗಳೇನು? ವಿದ್ವಾಂಸರ ಪ್ರಕಾರ ಬಹುಭಾಷಿಕ ಸನ್ನಿವೇಶಗಳು ಉಂಟಾಗುವುದಕ್ಕೆ ನಿರ್ದಿಷ್ಟ  ವಾದ ಕಾರಣಗಳನ್ನು ಕೊಡುವುದು ಕಠಿಣ. ಬಹುಭಾಷಿಕ ಸನ್ನಿವೇಶಗಳು ಉಂಟಾಗುವಾಗಿನ ಪ್ರಕ್ರಿಯೆಗಳು ಮುಗಿದ ನಂತರ ಆ ಕಾರಣಗಳೂ ಇತಿಹಾಸದಲ್ಲಿ ಮರೆಯಾಗುತ್ತವೆ. ಅನಂತರ ನೋಡುವಾಗ ಏನೂ ಕಾಣುವುದಿಲ್ಲವಾಗಿ ಉತ್ತರಗಳು ಅಸ್ಪಷ್ಟವಾಗುತ್ತವೆ. ಆದರೂ ಸಾಮಾನ್ಯವಾಗಿ ಜನರ ಸ್ವಇಚ್ಛೆಯಿಂದಾಗಲೀ ಅಥವ ಬಲಾತ್ಕಾರ ದಿಂದಾಗಲೀ ಉಂಟಾಗುವ ಸನ್ನಿವೇಶಗಳಲ್ಲಿ ಕೆಲವನ್ನು ಇಲ್ಲಿ ಗುರುತಿಸಬಹುದು.

ರಾಜಕೀಯ : ಒಂದು ಪ್ರದೇಶವನ್ನು ಗೆದ್ದು ಅದನ್ನು ಮೊದಲಿನ ಭಾಗಕ್ಕೆ ಸೇರಿಸುವುದು ಹಾಗೂ ತಮ್ಮ ಜನರ ಪುನರ್ವಸತಿ ಮತ್ತು ಇತರ ರಾಜಕೀಯಾತ್ಮಕ ಅಥವಾ ಸೈನಿಕ ಕಾರ್ಯಾಚರಣೆಗಳು ಒಮ್ಮೆಲೆ ಭಾಷಿಕ ಪರಿಣಾಮಗಳನ್ನು ತೋರಿಸುತ್ತವೆ. ಉದಾ. ಜನರು ನಿರಾಶ್ರಿತರಾಗಿ ಹೊಸ ಪರಿಸರದಲ್ಲಿ ವಾಸಿಸಬೇಕಾದಾಗ ಆ ಜಾಗದಲ್ಲಿ ಬಳಕೆಯಲ್ಲಿರುವ ಭಾಷೆಯು ಬೇರೆಯಾಗಿದ್ದರೆ ಅದನ್ನು ಕಲಿಯಬೇಕಾಗುತ್ತದೆ. ಹಾಗೇ ಪರಕೀಯರ ಯಶಸ್ವೀ ದಂಡೆಯಾತ್ರೆಯಿಂದ ಸ್ಥಳೀಯರು ಮುಂದುವರೆಯಲು, ಸ್ವಸ್ಥ ಜೀವನ ಮಾಡಲು ಆಕ್ರಮಣಕಾರರ ಭಾಷೆಯನ್ನು ಕಲಿಯಬೇಕಾಗಬಹುದು.

ಧಾರ್ಮಿಕ ಸನ್ನಿವೇಶಗಳು : ಧಾರ್ಮಿಕ ಪ್ರಾಮುಖ್ಯವಿರುವ ಪ್ರದೇಶದಲ್ಲಿ (ಉದಾ. ಕಾಶಿ, ಇತ್ಯಾದಿ) ಜನರು ವಾಸಿಸಲು ಇಚ್ಛೆಪಡಬಹುದು, ಅಥವಾ ಧಾರ್ಮಿಕ ಅಸಹಿಷ್ಣುತೆಯಿರುವ ಪ್ರದೇಶವನ್ನು ತ್ಯಜಿಸಲೂಬಹುದು. ಇವು ಗಳಲ್ಲೂ ಯಾವುದನ್ನೇ ಒಪ್ಪಿಕೊಂಡರೂ ಅನ್ಯಭಾಷೆಯೊಂದನ್ನು ಕಲಿಯ ಬೇಕಾಗುತ್ತದೆ.

ಸಂಸ್ಕೃತಿ : ಬೇರೊಂದು ಭಾಷೆಯನ್ನು ಕಲಿತರೆ ಮಾತ್ರ ಶಿಕ್ಷಣವನ್ನು ಪಡೆಯುವ ಸಾಧ್ಯತೆಯಾಗುವ ಸನ್ನಿವೇಶವನ್ನು ಗಮನಿಸಬಹುದು. ಈ ಅಂಶವೇ ಮಧ್ಯಕಾಲೀನ ಯುಗದಲ್ಲಿ ಲ್ಯಾಟಿನ್ ಭಾಷೆಯನ್ನು ಕಲಿಯಲು ಕಾರಣವಾದದ್ದು. ಹಾಗೇ ನಮ್ಮ ದೇಶದಲ್ಲಿ ಸಂಸ್ಕೃತವನ್ನು ಬಹಳ ಹಿಂದಿ ನಿಂದಲೇ ಕಲಿಯುವ ಅವಕಾಶವಾಗಿದೆ. ಈಗ ಆಂಗ್ಲಭಾಷೆಯನ್ನು ಅಂತಾರಾಷ್ಟ್ರೀಯವಾಗಿ ಉಪಯೋಗಿಸುವ ಸಾಧ್ಯತೆ ಬಹಳವಾಗಿರುವುದರಿಂದ ಆ ಭಾಷೆಯನ್ನು ಕಲಿಯಲು ಬಹಳವೇ ಪ್ರೋದೊರಕುತ್ತಿದೆ.

ಆರ್ಥಿಕತೆ : ಉದ್ಯೋಗಾನ್ವೇಷಣೆಯಲ್ಲಿ, ಜೀವನಮಟ್ಟವನ್ನು ಸುಧಾರಿಸಿ ಕೊಳ್ಳಲು ಬಹಳ ಜನರು ಒಂದು ಕಡೆಯಿಂದ ಮತ್ತೊಂದು ಕಡೆಗೆ ವಲಸೆ ಹೋಗುತ್ತಾರೆ. ಈ ಕಾರಣದಿಂದಲೇ ಅಮೆರಿಕಾದಲ್ಲಿ ಭಾಷಾ ಭಿನ್ನತೆಗೆ ಕಾರಣವಾಗಿದೆ. ಹಾಗೂ ಇತ್ತೀಚಿನ ಯುರೋಪಿನ ದ್ವಿಭಾಷಿಕತೆಗೆ ಕಾರಣವಾಗಿದೆ.

ಸ್ವಾಭಾವಿಕ ದುರಂತಗಳು : ಪ್ರವಾಹಗಳು, ಲಾವಾವನ್ನು ಹೊರಚೆಲ್ಲುವ ಜ್ವಾಲಾಮುಖಿಗಳು, ಕ್ಷಾಮಗಳು ಇತರ ಇಂತಹ ಘಟನೆಗಳೂ ಸಹ ಹೆಚ್ಚು ಜನಸಂಖ್ಯೆಯನ್ನು ಒಂದೆಡೆಯಿಂದ ಮತ್ತೊಂದೆಡೆಗೆ ಒಯ್ಯಲು ಕಾರಣ ವಾಗುತ್ತವೆ. ಆಗ ಹೊಸಭಾಷಾ ಸಂಪರ್ಕ ಸನ್ನಿವೇಶಗಳು ಮರುವಸತಿ ಪಡೆದಂತೆ ಪ್ರಾರಂಭವಾಗುತ್ತವೆ.

ವಿಸ್ತೃತ ಸಂಪರ್ಕ ಭಾಷೆಗಳು : ಪ್ರಪಂಚದ ಬಹುತೇಕ ರಾಷ್ಟ್ರಗಳು ಬಹುಭಾಷಿಕ ರಾಷ್ಟ್ರಗಳು. ಅಂದರೆ ಅವುಗಳ ಸರಹದ್ದಿನೊಳಗೇ ಸಂಪರ್ಕ ದಲ್ಲಿರುವ ಮಾನವಿಕ ಗುಂಪುಗಳನ್ನು ಹೊಂದಿವೆ. ‘ಒಂದು ರಾಷ್ಟ್ರ ಒಂದು ಭಾಷೆ’ ಎಂಬ ತತ್ವವನ್ನು ಹೊಂದಿದ ಯುರೋಪಿನಲ್ಲಿಯೂ ಸಹ ಕೇವಲ ಎರಡು ರಾಷ್ಟ್ರಗಳಲ್ಲಿ ಮಾತ್ರ ಏಕಭಾಷಿಕ ಸನ್ನಿವೇಶವನ್ನು ಕಾಣಬಹುದು. ಅವುಗಳೆಂದರೆ ಐಸ್‌ಲ್ಯಾಂಡ್ ಮತ್ತು ಪೋರ್ಚುಗಲ್. ಒಂದೇ ರಾಷ್ಟ್ರದಲ್ಲೇ ಬಹುಭಾಷಿಕತೆಯನ್ನು ಗುರುತಿಸುವ ಜೊತೆಗೆ ಹಲವು ರಾಷ್ಟ್ರಗಳ ಒಕ್ಕೂಟಗಳನ್ನು ಗಮನಿಸಬೇಕಾಗುತ್ತದೆ. ಹಿಂದಿನ  ಸೋವಿಯತ್ ಒಕ್ಕೂಟ ಅಥವಾ ಚೈನಾ ಗಣರಾಜ್ಯಗಳಲ್ಲಿ ಪರಸ್ಪರ ಅರ್ಥವಾಗದ ಭಾಷೆಗಳನ್ನಾಡುವ ಜನರ ನಡುವೆ ಸಂಪರ್ಕ ಬೆಳೆಸಲು ಸಂಪರ್ಕ ಭಾಷೆಯ ಬೆಳವಣಿಗೆಯ ಅವಶ್ಯಕತೆ ಉಂಟಾ ಗುತ್ತದೆ. ಹೀಗೆ ನಮ್ಮ ದೇಶದಲ್ಲಿಯೂ ಸಹ ಹಿಂದಿಯನ್ನು ಅರ್ಧಕ್ಕಿಂತ ಹೆಚ್ಚಿನ ಜನರು ಮಾತನಾಡುವರೆಂಬ ಕಾರಣದಿಂದ ಸಂಪರ್ಕ ಭಾಷೆಯಾಗಿ ಪರಿಗಣಿಸಲಾಗಿದೆ. ಸೋವಿಯತ್ ಒಕ್ಕೂಟದಲ್ಲಿ ರಶಿಯನ್ ಹಾಗೂ ಚೀನಾದಲ್ಲಿ ಮಂಡಾರಿನ್ ಭಾಷೆಯ ಪರಿಷ್ಕೃತ ಮಾದರಿಯಾದ ‘ಪುತೊಂಗ್ ಹ್ವಾ’ ಎಂಬ ನುಡಿಯನ್ನು ಬಹಳ ವಿಸ್ತೃತವಾದ ಭಾಷಾ ಯೋಜನೆಯ ಪರಿಣಾಮವಾಗಿ ಆಯಾ ದೇಶಗಳ ಸಂಪರ್ಕ ಭಾಷೆಗಳನ್ನಾಗಿ ಅಳವಡಿಸಿ ಕೊಳ್ಳಲಾಗಿದೆ. ಹಾಗೆ ಸೋವಿಯತ್ ಒಕ್ಕೂಟದಲ್ಲಿ ಅಂತರರಾಜ್ಯಮಟ್ಟದಲ್ಲಿ ರಶ್ಯನ್‌ನಿಂದ ಆಂಗ್ಲಭಾಷೆಯನ್ನು ಸರ್ಕಾರದ ಮಟ್ಟದಲ್ಲಿ ವಿಸ್ತೃತ ಸಂಪರ್ಕ ಭಾಷೆಯಾಗಿ ಮಾಡಲು ಪ್ರಯತ್ನಿಸಿದ ಅನಂತರ ಅದು ಸಾಧ್ಯವಾಯಿತು. ಅದಕ್ಕೆ ತಕ್ಕಂತೆ ಅಧ್ಯಾಪಕರನ್ನು ತರಬೇತಿ ಮಾಡುವುದು. ಹೊಸ ಅಭ್ಯಾಸಕ್ರಮವನ್ನು ಪಠ್ಯಪುಸ್ತಕಗಳನ್ನು ಸಿದ್ಧಪಡಿಸುವುದು ಇತ್ಯಾದಿ ನಡೆಯಿತು. ಈ ಪ್ರಕ್ರಿಯೆಯು ವಿಸ್ತೃತ ಸಂಪರ್ಕ ಭಾಷೆಯ ಮತ್ತೊಂದು ಉದ್ದೇಶವನ್ನು ಸ್ಪಷ್ಟಪಡಿಸುತ್ತದೆ. ಅದು ಅಂತಾರಾಷ್ಟ್ರಮಟ್ಟದ ಸಂಪರ್ಕವನ್ನು ಕಲ್ಪಿಸುವುದು. ಪ್ರಪಂಚವು ನಿರಂತರವಾಗಿ ಅಂತಾರಾಷ್ಟ್ರೀಯ ಮಟ್ಟದ ಭಾಷೆಗಳ ಅವಶ್ಯಕತೆಯನ್ನು ಹೊಂದಿತ್ತು. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಹಿಂದಿನ ಎರಡು ಸಾವಿರ ವರ್ಷಗಳಲ್ಲಿ ಒಂದರ ಅನಂತರ ಒಂದರಂತೆ ಅನುಕ್ರಮವಾಗಿ ಗ್ರೀಕ್‌ನಿಂದ ಲ್ಯಾಟಿನ್ ಅದರಿಂದ ಫ್ರೆಂಚ್, ಅನಂತರ ಇಂಗ್ಲಿಶ್ ಸಂಪರ್ಕ ಭಾಷೆಯಾಗಿ ಪರಿವರ್ತನೆ ಗೊಂಡಿದ್ದನ್ನು ಕಾಣಬಹುದು. ವಿಶ್ವಭಾಷೆಯು ಸಮಯೋಚಿತ ಮತ್ತು ವ್ಯಾವಹಾರಿಕತೆಗಳನ್ನು ಗಮನದಲ್ಲಿಟ್ಟು ಕೊಂಡು ಸರ್ವರಿಗೂ ಸಮ್ಮತವಾಗಿ ರುವಂತಿರಬೇಕು. ಇಂತಹುದು ಈ 20ನೆಯ ಶತಮಾನದಲ್ಲಿ ಮಾತ್ರ ಸಾಧ್ಯ ವಾಗಿದೆ. ಅದೂ ಸಂಪರ್ಕ ಮತ್ತು ಪ್ರಯಾಣಗಳಲ್ಲಿ ನೂತನ ತಂತ್ರಜ್ಞಾನವು ವಿಕಸಿತವಾಗಿದ್ದರಿಂದ ನಿಜವಾಗಿಯೂ ‘ವಿಶ್ವ ಭಾಷೆ’ ಎಂಬುದರ ಬಗ್ಗೆ ಮಾತನಾಡಲು ಸಾಧ್ಯವಾಯಿತು.

ವಿಸ್ತೃತ ಸಂಪರ್ಕ ಭಾಷೆಯಾಗಲು ಹಲವು ಅಂಶಗಳನ್ನು ಗಮನಿಸ ಬೇಕಿದ್ದರೂ ಒಂದು ಸಾಮಾನ್ಯ ಅಂಶವೆಂದರೆ ಆ ಭಾಷೆಯ ಜನರ ಸ್ಥಾನಮಾನ ಮತ್ತು ಪ್ರಭಾವ. ಇವುಗಳನ್ನು ಗುರುತಿಸಲು ಹಲವು ಆಧಾರಗಳಿರುತ್ತವೆ. ಅವುಗಳಲ್ಲಿ ಅತಿ ಮುಖ್ಯವಾದವು ಸೈನ್ಯ, ರಾಜಕೀಯ ಮತ್ತು ಅರ್ಥವ್ಯವಸ್ಥೆ. ಇದಕ್ಕೆ ಆಂಗ್ಲಭಾಷೆಯೂ ಅಪವಾದವಲ್ಲ. ಆಂಗ್ಲಭಾಷೆಯು ವಿಶ್ವಭಾಷೆಯಾಗಿ ಅಭಿವೃದ್ದಿಹೊಂದಿದ ಸಂದರ್ಭವನ್ನು ಎರಡನೆಯ ಮಹಾಯುದ್ಧದ ಸಂದರ್ಭ ದಲ್ಲಿ ಗುರುತಿಸಬಹುದು. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಯುದ್ಧದಲ್ಲಿ ವಿಜಯಿಗಳಾದದ್ದು ಆಂಗ್ಲ ಭಾಷೆಯನ್ನು ಉಪಯೋಗಿಸುವ ದೇಶಗಳಾದ ಇಂಗ್ಲೆಂಡ್, ಅಮೆರಿಕಾ. ಇತರ ಮುಖ್ಯ ಅಂಶಗಳೆಂದರೆ ವಸಾಹತು ಪದ್ಧತಿಯನ್ನು ಹೊಂದಿದ್ದ ಬ್ರಿಟಿಷರ ಪ್ರಭಾವ, ಮುಂದುವರಿದ ತಂತ್ರಜ್ಞಾನವನ್ನು ಹೊಂದಿದ್ದ ಅಮೆರಿಕಾದ ಮಟ್ಟ, ಮತ್ತು ವಿಶ್ವದ ಅಂದಿನ ಆರ್ಥಿಕ ಸ್ಥಿತಿ. ಮುಂದೆ ಸ್ಥಾನಮಾನ ಮತ್ತು ಪ್ರಭಾವಗಳು ಆಂಗ್ಲ ಮಾತೃ ಭಾಷಿಕರಿಂದ ಜಾರಿ ಹೋದರೂ ಆಂಗ್ಲಭಾಷೆಯೇ ಅಂತಾರಾಷ್ಟ್ರೀಯ ಭಾಷೆಯಾಗಿ ಮುಂದುವರೆಯುವುದರಲ್ಲಿ ಅನುಮಾನವಿಲ್ಲವೆಂದು ಭಾವಿಸ ಬಹುದು. ಆದಕಾರಣ ಈ ಭಾಷೆಯನ್ನು ಈ ಮಟ್ಟಕ್ಕೆ ತರಲು ಬಹಳಷ್ಟು ಶ್ರಮ ವಹಿಸಲಾಗಿದೆ. ಈ ಶತಮಾನದ ಕೊನೆಯಲ್ಲಿ ಆಂಗ್ಲಭಾಷೆಯನ್ನು ದ್ವಿತೀಯ ಭಾಷೆಯಾಗಿ ಉಪಯೋಗಿಸುವವರು ಅದೇ ಭಾಷೆಯನ್ನು ಮಾತೃ ಭಾಷೆಯಾಗಿ ಉಪಯೋಗಿಸುವವರಿಗಿಂತ ಹೆಚ್ಚಿದ್ದಾರೆ. ಸ್ವಾಭಾವಿಕವಾಗಿಯೇ ಇದು ಈ ಭಾಷೆಯ ಜನಪ್ರಿಯತೆ ಹಾಗೂ ಅನಿವಾರ್ಯತೆಗಳನ್ನು ಸ್ಪಷ್ಟ ಪಡಿಸುತ್ತದೆ.

ಸಂಪರ್ಕದಲ್ಲಿರುವ ಮಾನವಿಕ ಗುಂಪುಗಳು : ರಾಷ್ಟ್ರಗಳೊಳಗೇ ಇರುವ ಬಹುಭಾಷಿಕತೆಯನ್ನು ಅರ್ಥಮಾಡಿಕೊಳ್ಳಲು ಮಾನವಿಕ ಗುಂಪುಗಳನ್ನು ಅರ್ಥಮಾಡಿಕೊಳ್ಳುವುದು ಅತ್ಯವಶ್ಯಕ. ಕಾರಣ ಈ ಮಾನವಿಕ ಗುಂಪುಗಳ ಸಂಬಂಧದಿಂದಲೇ ಬಹುಭಾಷಿಕತೆಯು ಫಲಿಸುವುದು. ಬೇರೆ ಬೇರೆ ಇತಿಹಾಸ ವನ್ನು, ಭಾಷೆಯನ್ನು, ಸಂಸ್ಕೃತಿಯನ್ನು ಹೊಂದಿರುವ ಸಮಾಜಗಳು ನಿಯಮಿತ ವಾದ ಸಂಬಂಧವನ್ನು ಬೆಳೆಸಿಕೊಂಡರೆ ಸಾಮಾನ್ಯವಾಗಿ ಅವುಗಳಲ್ಲಿ ಒಂದು ಸಮಾಜ ಇನ್ನೊಂದು ಸಮಾಜದ ಮೇಲೆ ಪ್ರಾಬಲ್ಯವನ್ನು ಪಡೆಯು ತ್ತದೆ. ಈ ಪ್ರಾಬಲ್ಯದ ಸ್ವರೂಪವೇ ಮಾನವಿಕ ಸಂಬಂಧಗಳ ಸ್ವರೂಪವನ್ನು ನಿರ್ಧರಿಸುತ್ತದೆ. ಮಾನವಿಕ ಸಂಬಂಧಗಳನ್ನು ಅಧ್ಯಯನ ಮಾಡುವಲ್ಲಿ ಏಳುವ ಮುಖ್ಯವಾದ ಪ್ರಶ್ನೆಯೆಂದರೆ ಯಾವ ಯಾವ ಸನ್ನಿವೇಶಗಳಲ್ಲಿ ಆ ಪ್ರದೇಶದಲ್ಲಿರುವ ಸಮಾಜಗಳು ಒಟ್ಟಿಗೆ ಸೇರಿ ವಿಲೀನಗೊಳ್ಳುತ್ತವೆ ಅಥವಾ ತಮ್ಮತನವನ್ನು ಕಾಪಾಡಿಕೊಳ್ಳುತ್ತವೆಂಬ ಪ್ರಶ್ನೆ. ಮಾನವಿಕ ಸಮಾಜಗಳ ಸಂಬಂಧಗಳ ಸ್ವಭಾವಗಳನ್ನು ನಿರ್ಧರಿಸುವಲ್ಲಿ ಹಾಗೂ ಪರಿಸರದ ಸಮಾಜಗಳೊಡನೆ ಒಂದೇ ಆಗುವ ಪ್ರಕ್ರಿಯೆಯಲ್ಲಿ ಮೂರು ಪ್ರೇರಣಾರ್ಥಕ ಅಂಶಗಳಿವೆ ಎಂದು ಶೆರ್ ಮೇರ್ ಹಾರ್ನರು (1970) ತೋರಿಸಿದ್ದಾರೆ.

1. ಪ್ರಬಲ ಮತ್ತು ದುರ್ಬಲ ಗುಂಪುಗಳ ನಡುವಿನ ಸಂಪರ್ಕ ಸನ್ನಿವೇಶಕ್ಕೆ ಸಂಬಂಧಿಸಿದ್ದು ಒಂದು ಪ್ರದೇಶವನ್ನು ಸ್ವಾಧೀನಪಡಿಸಿಕೊಳ್ಳು ವುದು, ವಲಸೆ ಮತ್ತು ವಸಾಹತುಗಳನ್ನು ಸ್ಥಾಪಿಸುವುದು.

2. ದುರ್ಬಲ ಸಮಾಜಗಳು ಸಮಾಜವ್ಯಾಪಿ ಸಂಘ – ಸಂಸ್ಥೆಗಳ ಜಾಲದಲ್ಲಿ ಯಾವ ಮಟ್ಟವನ್ನು ಹೊಂದಿವೆಯೆಂಬುದು.

3. ದುರ್ಬಲ ಸಮಾಜದ ಗುಂಪುಗಳು ದುರ್ಬಲ ಸಮಾಜದ ಗುಂಪುಗಳಿಗೆ ಅಪರೂಪವಾದ ಅತ್ಯಾವಶ್ಯಕವಾದ ಮೂಲಭೂತ ಸಾಧನಗಳಿಗೆ ಯಾವ ಮಟ್ಟದ ಅವಕಾಶಗಳನ್ನು ಕೊಟ್ಟಿವೆ ಎಂಬುದರ ಮೇಲೆ ಹಾಗೂ ಯಾವ ಮಟ್ಟದ ನಿಯಂತ್ರಣವನ್ನು ಇಟ್ಟುಕೊಂಡಿದೆ ಎಂಬುದು.

ಭಾಷಾಸಂಗೋಪನೆ ಮತ್ತು ಭಾಷಾಪಲ್ಲಟ : ಒಂದು ದೇಶದೊಳಗಿರುವ ದುರ್ಬಲ ಮಾನವಿಕ ಗುಂಪುಗಳಿಗೆ ಅವಕಾಶಗಳನ್ನು ಹಾಗೂ ಪ್ರೋಕೊಟ್ಟರೆ ಅವು ಸಾಮಾನ್ಯವಾಗಿ ಪ್ರಬಲ ಗುಂಪಿನ ಭಾಷೆಗೆ ಬದಲಾಗುತ್ತವೆ, ಪಲ್ಲಟಗೊಳ್ಳುತ್ತವೆ. ವ್ಯಕ್ತಿಯೊಬ್ಬನ ಅಥವಾ ಸಂಸಾರಗಳ ಸ್ವಪ್ರೇರಣೆ ಯಿಂದಾದ ವಲಸೆಗಳು ಅನತಿ ಕಾಲದಲ್ಲೇ ಬದಲಾವಣೆಯನ್ನು ತರುತ್ತದೆ. ಇದಕ್ಕೆ ಒಳ್ಳೆಯ ಉದಾಹರಣೆ : ಅಮೆರಿಕಾ, ಕೆನಡಾ, ಆಸ್ಟ್ರೇಲಿಯಾಗಳು.

ಒಂದು ಪ್ರಾಂತ್ಯವನ್ನು ಗೆದ್ದು ಸ್ವಾಧೀನಪಡಿಸಿಕೊಡು ವಸಾಹತುವಾಗಿ ಪರಿವರ್ತಿಸಿ, ಗೆದ್ದ ಸಮಾಜವೇ ಆಳಲು ಬಂದಾಗ, ಅವರೊಡನೆಯೇ ಅವರ ಸಾಮಾಜಿಕ, ಧಾರ್ಮಿಕ ವ್ಯವಸ್ಥೆಗಳು ಹಾಗೂ ಮೌಲ್ಯಗಳು ಬಳಕೆಗೆ ಬರುತ್ತವೆ. ಅವರ ಆಚಾರ, ವಿಚಾರಗಳು ದೃಢವಾಗಿದ್ದರೆ ಅವುಗಳು ಬದಲಾಗುವ ಸಾಧ್ಯತೆಗಳು ತೀರಾ ಕಡಿಮೆ. ಬದಲಾದರೂ ಅದಕ್ಕೆ ಹಲವು ಶತಮಾನಗಳು ಬೇಕಾಗಬಹುದು. ಅಂತಹ ಸಮಾಜಗಳು ಅವರ  ಸಾಮಾಜಿಕ ಸಂಸ್ಥೆ, ಸಂಬಂಧ, ಹಾಗೂ ನಂಬಿಕೆಗಳಿಂದ ಅತಿಯಾಗಿ ಆವರಿಸಿರುವುದರ ಪರಿಣಾಮವಾಗಿ ಅವುಗಳನ್ನು ಬದಲಾಯಿಸಲು ಪ್ರಯತ್ನಿಸಿದಾಗ ಅಶಾಂತಿ, ಕ್ಷೋಭೆಗಳಿಗೆ ಅವಕಾಶ ಕೊಡುತ್ತದೆ. ಇದು ಸಾಮಾನ್ಯವಾಗಿ ಭಾಷಾ ಕ್ಷೋಭೆಯ ಮೂಲಕ ವ್ಯಕ್ತವಾಗುತ್ತದೆ. ಉದಾ. ದಕ್ಷಿಣ ಆಫ್ರಿಕಾದಲ್ಲಿ 1976ರಲ್ಲಿ ನಡೆದ ಸೊವಿತೊ ದಂಗೆಯಲ್ಲಿ ಹಲವು ಕಪ್ಪು ವಿದ್ಯಾರ್ಥಿಗಳು ಹತರಾದರು. ಅಲ್ಲಿನ ಸರ್ಕಾರವು ಆಂಗ್ಲಮಾಧ್ಯಮದಿಂದ ಆಫ್ರಿಕಾನ್‌ಗೆ ಬದಲಾಯಿಸಲು ನಿರ್ಧರಿಸಿದ್ದರಿಂದ ಪ್ರಾರಂಭವಾದ ದಂಗೆಯಿದು. ಇಲ್ಲಿ ಆಶ್ಚರ್ಯದ ವಿಷಯವೆಂದರೆ ಈ ಎರಡೂ ಭಾಷೆಗಳೂ ಅವರದಾಗಿರಲಿಲ್ಲ. ಹೊರಗಿನವುಗಳಾಗಿತ್ತು. ಆದರೆ ಆಫ್ರಿಕನ್ ಭಾಷೆಯು ವರ್ಣಭೇದ ನೀತಿಯ ಪ್ರತೀಕವಾಗಿ ಅದನ್ನು ಅವರು ದ್ವೇಷಿಸುತ್ತಿದ್ದರಿಂದ ಉಂಟಾದ ಪ್ರತಿಭಟನೆ.

ಇಲ್ಲಿ ಗಮನಿಸಬೇಕಾದ ಮುಖ್ಯವಾದ ಅಂಶವೆಂದರೆ ಪ್ರಬಲ ಮತ್ತು ದುರ್ಬಲ ಗುಂಪುಗಳ ಧ್ಯೇಯಗಳ ನಡುವೆ ಹೊಂದಾಣಿಕೆ ಇದೆಯೇ ಇಲ್ಲವೇ ಎಂಬುದು. ಇಲ್ಲಿ ದುರ್ಬಲ ಗುಂಪಿಗೆ ಎರಡು ಸಾಧ್ಯತೆಗಳಿವೆ. ಸಮೀಕರಣ ಅಂದರೆ ಸಮರೂಪಗೊಳಿಸುವುದು ಮತ್ತು ಭಾಷಾ ಸಂಗೋಪನೆ. ಮೊದಲಿನದರಲ್ಲಿ ಎರಡು ವಿಧಗಳಿವೆ. ಒಂದು ಸಾಂಸ್ಕೃತಿಕವಾದದ್ದು. ಅಂದರೆ ಭಾಷೆಯನ್ನು ಕಾಪಾಡಿಕೊಂಡು ಸಾಂಸ್ಕೃತಿಕವಾಗಿ ಒಂದೇ ಆಗುವುದು; ಮತ್ತೊಂದು ಸಮಾವೇಶಿಕವಾದದ್ದು. ಇದು ಸಾಮಾಜಿಕ, ರಚನಾತ್ಮಕ, ಭಾಷಿಕವಾದದ್ದು. ಅಂದರೆ ಎಲ್ಲಾ ಸ್ತರಗಳಲ್ಲೂ ಒಂದೇ ಆಗುವುದು.

ದುರ್ಬಲ / ಅಲ್ಪಸಂಖ್ಯಾತರ ಗುಂಪುಗಳ ಮುಖ್ಯ ಉದ್ದೇಶ, ಅವರಿರುವ ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಹಾಗೂ ಸರ್ಕಾರದ ಸೇವೆಯಲ್ಲಿ ಸೇರಿ ಆರ್ಥಿಕವಾಗಿ ಅಭಿವೃದ್ದಿ ಹೊಂದುವ ಹಾಗೂ ಗಟ್ಟಿಯಾದ ತಳಪಾಯದ ಮೇಲೆ ಆ ದೇಶದಲ್ಲಿ ಇರಲು ಸಾಧ್ಯವಾಗುವಂತೆ ಮಾಡಿಕೊಳ್ಳುವುದು. ಬಹುತೇಕ ವಲಸೆಗಳು ಈ ಕಾರಣಕ್ಕಾಗಿಯೇ ಆಗುವುದು. ಇದಲ್ಲದೇ ಧಾರ್ಮಿಕ ಸ್ವಾತಂತ್ರ್ಯವನ್ನು ಪಡೆಯಲೂ ವಲಸೆ ಹೋಗಬೇಕಾಗಬಹುದು.

ಆರ್ಥಿಕ ಸಮಾವೇಶವು ಸಾಂಸ್ಕೃತಿಕ ಸಮಾವೇಶಕ್ಕಿಂತ ಬೇರೆಯಾದುದು. ಸಾಂಸ್ಕೃತಿಕ ಸಮಾವೇಶದಲ್ಲಿ ತಮ್ಮದೇ ಆದ ಸಂಸ್ಕೃತಿ ಹಾಗೂ ಮೌಲ್ಯಗಳನ್ನು ನಂಬಿಕೆಗಳನ್ನು ಬಿಟ್ಟುಬಿಡಬೇಕಾಗುತ್ತದೆ. ಈ ಸಮಾವೇಶದ ಪ್ರಕ್ರಿಯೆಯಲ್ಲಿ ಸ್ವಯಿಚ್ಛೆಯಿಂದಲ್ಲದೆ ಬಲತ್ಕಾರದಿಂದ ಈ ಪ್ರಕ್ರಿಯೆ ನಡೆಯುತ್ತಿದೆ ಎಂಬ ಭಾವನೆಯುಂಟಾದರೆ ಅದಕ್ಕೆ ತೀವ್ರ ವಿರೋಧ ವ್ಯಕ್ತವಾಗುವ ಸಂಭವವಿರುತ್ತದೆ. ತತ್ಪರಿಣಾಮವಾಗಿ ಸಮಾವೇಶವೂ ಸಾಧ್ಯವಾಗುವುದಿಲ್ಲ. ಬಹುಭಾಷಿಕ ದೇಶಗಳಲ್ಲಿ ಸಾಧಾರಣವಾಗಿ ಇಂತಹ ಸನ್ನಿವೇಶಗಳನ್ನು ಕಾಣಲು ಸಾಧ್ಯ.

ಆದರೆ ಆರ್ಥಿಕ ಸಮಾವೇಶದ ಅವಶ್ಯಕತೆಯುಂಟಾದರೆ ದುರ್ಬಲ ಗುಂಪುಗಳು ಪ್ರಬಲರ ಭಾಷೆಯನ್ನು ಕಲಿಯುತ್ತಾರೆ. ಇದರಿಂದಾಗಿ ಸಾಮಾನ್ಯ ವಾಗಿ ಭಾಷೆಯ ಪಲ್ಲಟವಾಗುತ್ತದೆ. ಹಾಗೂ ಅನತಿಕಾಲದಲ್ಲೇ ಪ್ರಧಾನ ಸಂಸ್ಕೃತಿಯೊಂದಿಗೆ ಸಮೀಕರಣವಾಗುತ್ತದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಅವರ ಭಾಷಾ ಸಂಗೋಪನೆ. ಅವರ ಸಂಸ್ಕೃತಿ ಹಾಗೂ ಗುಂಪು ಏಕತೆಗಳ ಸಂಗೋಪನೆ ಅವಶ್ಯಕವಲ್ಲ. ಹಾಗೇ ಒಂದು ಗುಂಪಿನ ಭಾಷೆಯ ಪಲ್ಲಟವಾದ ಅನಂತರವೂ ಅವರ ಸಂಸ್ಕೃತಿಯನ್ನು ಕಾಪಾಡಿಕೊಂಡು ಬಂದಿರುವ ಉದಾಹರಣೆಗಳು ನಮಗೆ ಸಿಗುತ್ತವೆ. ಉದಾ:  ಲಂಬಾಣಿಗಳು.

ಬಹುಭಾಷಿಕ ದೇಶಗಳಲ್ಲಿ ರಾಷ್ಟ್ರಭಾಷೆಯನ್ನು ಕಲಿಯಲು ಅವಕಾಶಗಳು ಹಾಗೂ ಪ್ರೋದೊರೆತರೆ ಭಾಷಾ ಪಲ್ಲಟವು ಸುಲಭವಾಗಿ ಸಾಧ್ಯವಾಗುತ್ತದೆ. ಉದಾ: ಸಾರ್ವತ್ರಿಕ ಶಿಕ್ಷಣದಂತಹ ಸಾಮಾಜಿಕ ಕಾರ್ಯ ಕ್ರಮಗಳಲ್ಲಿ ಭಾಗವಹಿಸಲು ಸಾಧ್ಯವಾಗುವುದು, ಅನ್ಯ ಗುಂಪುಗಳೊಡನೆ ವಿವಾಹ ಸಂಬಂಧ ಬೆಳೆಯುವುದು, ಮಿಲಿಟರಿ ಸೇವೆ ಹಾಗೂ ಧಾರ್ಮಿಕ ಸಂಸ್ಥೆಗಳು, ದೂರದರ್ಶನದಂತಹ ಸಮೂಹ ಮಾಧ್ಯಮಗಳಿಗೆ ಪ್ರವೇಶ ಹಾಗೂ ನಗರೀಕರಣದಲ್ಲಿ ಅವರಿಗೆ ಪಾತ್ರ ಇತ್ಯಾದಿ.

ಭಾಷೆಯನ್ನು ಕಲಿಯಲು ನಾನಾ ತರಹದ ಪ್ರೋಸಾಧ್ಯ. ಅವುಗಳಲ್ಲಿ ಮುಖ್ಯವಾದವು ಎರಡು. ಒಂದು, ಆರ್ಥಿಕ ಪ್ರೋಮುಖ್ಯವಾಗಿ ವರಮಾನದ ರೂಪದಲ್ಲಿ. ಮತ್ತೊಂದು ಸಾಮಾಜಿಕ ಮನ್ನಣೆ. ಯಾವುದೇ ರೀತಿಯ ಪ್ರತಿಫಲವಿಲ್ಲದಿದ್ದರೆ ಭಾಷಾ ಕಲಿಕೆಯು ಅಸಾಧ್ಯ.

ಕೆಲವು ವೇಳೆ ಭಾಷಾ ಪಲ್ಲಟವು ಸಮಸ್ಯಾತ್ಮಕವೆನಿಸಬಹುದು. ಹಾಗೇ ಕೆಲವು ವೇಳೆ ರಾಷ್ಟ್ರೀಯ ಧ್ಯೇಯದ ದೃಷ್ಟಿಯಿಂದ ಇದನ್ನು ಪ್ರೋಲಾಗುತ್ತದೆ; ಕೆಲವೊಮ್ಮೆ ಭಾಷಾ ಪಲ್ಲಟಕ್ಕೆ ಹೆಚ್ಚಿನ ವಿರೋಧವನ್ನು ವ್ಯಕ್ತಪಡಿಸಲಾಗುತ್ತದೆ. ಆದರೆ ಬಹುತೇಕ ಎಲ್ಲಾ ಸನ್ನಿವೇಶಗಳನ್ನು ಅರ್ಥಮಾಡಿಕೊಳ್ಳಲು ರಾಷ್ಟ್ರದಲ್ಲಿನ ಬಹುಭಾಷಿಕತೆಯನ್ನು ಸಾಮಾಜಿಕ ಅಂಶಗಳಿಂದ ಅಧ್ಯಯನಮಾಡಬೇಕಾಗುತ್ತದೆ.

ಭಾಷಾಪಲ್ಲಟವಾಗದಿರಲು ಮೂರು ಮುಖ್ಯ ಕಾರಣಗಳಿವೆ. (ಅ) ಸ್ವಯಂಕೃತ ನಿರ್ಬಂಧಗಳ ಸಂರಕ್ಷಣೆ: ಇದು ಯಾವಾಗಲೂ ಭಾಷೇತರ ಕಾರಣಗಳಿಂದ, ಬಹುತೇಕ ಧರ್ಮದಿಂದಾಗಿ ನಿರ್ದೇಶಿತ. (ಆ) ಹೊರಗಿನಿಂದ ವಿಧಿಸಿದ ನಿರ್ಬಂಧಗಳು. ಪದಾರ್ಥಗಳನ್ನು, ಕೆಲಸಗಳನ್ನು ಮುಖ್ಯವಾಗಿ ನೌಕರಿಯನ್ನು ನಿರಾಕರಿಸುವುದರ ಮೂಲಕ. (ಇ) ದ್ವಿಭಾಷಿಕ ಸನ್ನಿವೇಶದಲ್ಲಿ. ಇಲ್ಲಿ ಕ್ರಿಯಾತ್ಮಕ ವಿತರಣೆಯಲ್ಲಿರುವ ಎರಡು ಭಾಷೆಗಳಲ್ಲಿ ಪ್ರತಿ ಭಾಷೆಗೂ ಅದರದೇ ಆದ ಉದ್ದೇಶ ಮತ್ತು ಕ್ಷೇತ್ರವಿರುತ್ತದೆ.

ಒಂದು ದೇಶದಲ್ಲಿ ಸಾಮಾನ್ಯವಾಗಿ ಬಹುತೇಕ ಅಲ್ಪಸಂಖ್ಯಾತರ ಗುಂಪು ಗಳು ಭಾಷೆಯನ್ನು ಬದಲಾಯಿಸಿದರೂ ಭಾಷಾ ಬಳಕೆಯ ಮುಂದುವರಿಕೆಯ ಮತ್ತು ಬದಲಾವಣೆಯ ಗತಿ ಒಂದೇ ಆಗಿರುವುದಿಲ್ಲ. ಇದಕ್ಕೆ ಕಾರಣವಾದ ಕೆಲವು ಅಂಶಗಳನ್ನು ಗುರುತಿಸಬಹುದು. ಉದಾ: ಅಮೆರಿಕಾದ ಪಿಟ್ಸ್‌ಬರ್ಗ್ ನಲ್ಲಿರುವ ಗ್ರೀಕರು ನಾಲ್ಕನೆಯ ತಲೆಮಾರಿನಲ್ಲಿ ಗ್ರೀಕ್‌ನಿಂದ ಇಂಗ್ಲಿಶಿಗೆ ಪರಿವರ್ತಿತರಾದರು. ಇದಕ್ಕೆ ಹೋಲಿಸಿದರೆ ಇಟ್ಯಾಲಿಯನ್ ಜನ ಅವರ ಭಾಷೆಯಿಂದ ಇಂಗ್ಲಿಶಿಗೆ ಮೂರನೇ ತಲೆಮಾರಿನಲ್ಲಿ ಪರಿವರ್ತಿತರಾದರು. ಈ ಅಂತರಕ್ಕೆ ಕಾರಣವೆಂದರೆ (ಅ) ಗ್ರೀಕ್ ಭಾಷೆಗೆ ಬರವಣಿಗೆಯಿದ್ದು, ಇದು ಸಂಪ್ರದಾಯ ಮತ್ತು ಸಾಂಸ್ಕೃತಿಕ ಗೌರವವನ್ನು ಪಡೆದಿದ್ದರಿಂದ ಹಾಗೂ ಅಲ್ಲಿನ ಚರ್ಚುಗಳಲ್ಲಿ ಇದನ್ನು ಬೋಧಿಸುತ್ತಿದ್ದುದು; (ಆ) ವಿವಾಹ ಸಂಬಂಧಗಳಿಗೆ ಸಂಗಾತಿಗಳು ಕೇವಲ ಗ್ರೀಕ್ ಮಾತಾಡುವವರೇ ಆಗಬೇಕಿದ್ದು ಅವರು ಗ್ರೀಕ್ ದೇಶದಿಂದಲೇ ಬರುತ್ತಿದ್ದುದರಿಂದ ಅವರ ಭಾಷಾ ಪಲ್ಲಟ ವನ್ನು ನಿಧಾನವಾಯಿತು.

ಆದರೆ ಇಟ್ಯಾಲಿಯನ್ ಭಾಷೆಯ ಸನ್ನಿವೇಶವು ಬೇರೆಯಾಗಿತ್ತು. ಇಲ್ಲಿ ಇಟ್ಯಾಲಿಯನ್ ಭಾಷೆಗೆ ಗ್ರೀಕ್‌ನಂತೆ ಶ್ರೇಷ್ಠವೆಂಬ ಗೌರವವಿರಲಿಲ್ಲ. ನಿಮ್ನ ವಿಧದ ಇಟ್ಯಾಲಿಯನ್ ಅನ್ನು ಮಾತಾಡುತ್ತಿದ್ದರಿಂದ ಅದನ್ನು ಬರವಣಿಗೆಯಲ್ಲಿ ಇಟ್ಟುಕೊಂಡಿರಲು ಸಾಧ್ಯವಾಗಲಿಲ್ಲ. ರೋಮನ್ ಕ್ಯಾಥೋಲಿಕ್ ಚರ್ಚುಗಳಲ್ಲಿ ಇವರು ಆಂಗ್ಲಭಾಷೆಯನ್ನು ಮಾತಾಡುವ ಐರಿಶ್ ಜನರೊಡನೆ ಇರಬೇಕಾಗಿತ್ತು. ಇದರಿಂದ ಅವರ ಭಾಷೆಯನ್ನು ಮುಂದುವರಿಸಲು ಹಾಗೂ ಉಪಯೋಗಿಸಲು ಅವಕಾಶಗಳು ಇಲ್ಲದಂತಾಯಿತು. ಜೊತೆಗೆ ರೋಮನ್ ಕ್ಯಾಥೊಲಿಕ್ ಚರ್ಚಿ ನೊಳಗೇ ವಿವಾಹಸಂಬಂಧದಗಳು ನಡೆಯುತ್ತಿದ್ದರಿಂದ ಅವರ ಭಾಷೆಯನ್ನು ಕಾಪಾಡಿಕೊಳ್ಳುವಂತಹ ಸನ್ನಿವೇಶಗಳು ಒದಗಲಿಲ್ಲ. (ಇ) ಗ್ರೀಕರಲ್ಲಿ ವಿವಾಹ ಸಂಬಂಧಗಳು ಗುಂಪಿನೊಳಗೆ ಆಗುತ್ತಿದ್ದರಿಂದ ಭಾಷೆಯ ಉಳಿವಿಗೆ ಹೆಚ್ಚಿನ ಅವಕಾಶಗಳಿದ್ದವು. ಇದಕ್ಕೆ ಹೋಲಿಸಿದರೆ ಇಟ್ಯಾಲಿಯನ್ನರಿಗೆ ಗುಂಪಿನ ಹೊರಗೆ ಅಂದರೆ ಚರ್ಚಿನಲ್ಲಿರುವವರೊಡನೆ ವಿವಾಹ ಸಂಬಂಧಗಳು ನಡೆಯು ತ್ತಿದ್ದರಿಂದ ಗುಂಪಿನೊಳಗಾಗಿದ್ದರೆ ದೊರೆಯುತ್ತಿದ್ದ ಬೆಂಬಲವೂ ಇಲ್ಲವಾಗಿ ಭಾಷೆಯ ಪಲ್ಲಟಕ್ಕೆ ನೆರವಾಯಿತು. ಭಾಷೆಯ ದೀರ್ಘ ಬಳಕೆಗೆ ಸಾಧನ ವಾಗುಂತಹ ಮುಖ್ಯ ಅಂಶಗಳೆಂದರೆ ಅವರದೆ ಗುಂಪಿನೊಳಗೆ ವಿವಾಹ ಸಂಬಂಧಗಳು;  ಲಿಖಿತ ಸಂಪ್ರದಾಯವಿರುವ ಗೌರವಾನ್ವಿತ ಭಾಷೆ. ಔಪಚಾರಿಕ ಬೋಧನೆಯುಳ್ಳ ಸಾಮಾಜಿಕ ಸಂಸ್ಥೆಯೊಳಕ್ಕೆ ಅವಕಾಶ. ಮೂಲ ಮಾತೃ ಭಾಷೆಯಲ್ಲಿ ಸಾತತ್ಯವಿರುವುದು ಮತ್ತೊಂದು ಮುಖ್ಯವಾದ ಅಂಶ.

ಭಾಷಾ ಪಲ್ಲಟದ ಪ್ರಕ್ರಿಯೆಯು ಹಲವು ತಲೆಮಾರಿನಲ್ಲಿ ನಡೆಯುವಂತ ಹುದು. ಇದರ ಪ್ರಾರಂಭಿಕ ತಲೆಮಾರುಗಳನ್ನು ಪೂರ್ಣ ಭಾಷಿಕರೆಂದು ಕರೆಯಬಹುದು. ಅಂದರೆ ಅವರಿಗೆ ತಮ್ಮ ಭಾಷೆಯನ್ನು ಜೀವನದ ಎಲ್ಲಾ ಸ್ತರಗಳಲ್ಲೂ ಉಪಯೋಗಿಸಲು ಸಾಧ್ಯವಾಗಿರುತ್ತದೆ. ಆದರೆ ಮುಂದಿನ ತಲೆಮಾರುಗಳಲ್ಲಿ ಕ್ರಮೇಣ (ಪ್ರಧಾನಭಾಷೆಯ ಪ್ರಭಾವಗಳಿಗೆ ಅನುಗುಣ ವಾಗಿ) ಅವರ ಭಾಷೆಯ ಉಪಯೋಗವೂ ಕುಂಠಿತವಾಗಿ ಕೆಲವೇ ಸನ್ನಿವೇಶಗಳಿಗೆ ಸೀಮಿತವಾಗಿ, ಮುಂದೆ ಅದೂ ತೀರಾ ಗೌಣವಾಗಿ ಅಲ್ಲಿನ ಪ್ರಧಾನ ಭಾಷೆಯೇ ಅವರ ಪ್ರಧಾನಭಾಷೆಯೂ ಆಗಿ, ಭಾಷಾಪಲ್ಲಟವೂ ಸಂಭವಿಸು ತ್ತದೆ. ಈ ಪ್ರಕ್ರಿಯೆಯಲ್ಲಿ ಹಲವು ಹಂತಗಳನ್ನು ಗಮನಿಸಬಹುದು.

1. ಪ್ರಾರಂಭಿಕ ಮಟ್ಟ : ಪೂರ್ಣ ಏಕಭಾಷೆ. ಅಂದರೆ ಏಕಭಾಷೆಯನ್ನು ಉಪಯೋಗಿಸುವವರು;

2. ಅನಂತರದ ಎರಡು ಮೂರು ತಲೆಮಾರುಗಳಲ್ಲಿ ಅವರು ದ್ವಿಭಾಷಿಕರಾಗುತ್ತಾರೆ.

3. ಮತ್ತೆ ಒಂದೆರೆಡು ತಲೆಮಾರುಗಳಲ್ಲಿ ದ್ವಿಭಾಷಿಕತೆಯು ಕುಂಠಿತವಾಗಿ ಗೌಣದ್ವಿಭಾಷಿಕರಾಗಿದ್ದು, ಅನಂತರ ಏಕಭಾಷಿಕರಾಗುವುದು. ಈ ಹಂತದಲ್ಲಿ ಅವರು ಅಲ್ಲಿಯ ಪ್ರಧಾನಭಾಷೆಯನ್ನು ತಮ್ಮದೇ ಭಾಷೆಯಂತೆ ಉಪಯೋಗಿ ಸಲು ಪ್ರಾರಂಭಿಸುವರು. ಇಂತಹ ಸನ್ನಿವೇಶಗಳು ನಡೆಯುತ್ತಿರುತ್ತವೆ.

ಕೆಲವು ವಿದ್ವಾಂಸರ ಪ್ರಕಾರ ಇಂತಹ ಪ್ರಕರಣಗಳಲ್ಲಿ ಬೇರೆ ಬೇರೆ ಬಗೆಗಳನ್ನು ಕಾಣಬಹುದು.

ಸುಲಲಿತವಾಗಿ ಮಾತಾಡುವ ವಯಸ್ಕರು : ಇವರಿಗೆ ಇವರ ಮೂಲ ಭಾಷೆಯ ಪೂರ್ಣಹಿಡಿತವಿರುತ್ತದೆ. ಆದರೆ ಅವರ ಹಿರಿಯರು ಮಾತಾಡುವ ಮಟ್ಟದಲ್ಲಿ ಮಾತಾಡಲು ಸಾಧ್ಯವಿರುವುದಿಲ್ಲ.

ಅಕ್ರಿಯಾತ್ಮಕ / ಗೌಣ ದ್ವಿಭಾಷಿಕರು : ಇವರಿಗೆ ತಮ್ಮ ಮೂಲಭಾಷೆ ಯನ್ನು ಕೇವಲ ಅರ್ಥಮಾಡಿಕೊಳ್ಳುವ ಶಕ್ತಿಯಿರುತ್ತದೆ. ಆದರೆ ಈ ಭಾಷೆಯನ್ನು ಸಕಾರಾತ್ಮಕವಾಗಿ ಉಪಯೋಗಿಸಿಕೊಳ್ಳಲು ಸಾಧ್ಯವಾಗದ ಸ್ಥಿತಿಯಲ್ಲಿರುತ್ತಾರೆ.

ಅತಿಗೌಣ ದ್ವಿಭಾಷಿಗಳು : ಇವರಿಗೆ ತಮ್ಮ ಮೂಲಭಾಷೆಯ ಸಾಕಷ್ಟು ಪರಿಚಯವಿರದು. ಆದರೂ ಆ ಭಾಷೆಯ ಮೇಲಣ ವಿಶ್ವಾಸ, ಶ್ರದ್ಧೆಯಿಂದ ಸೂಕ್ತವಾದ ರೀತಿಗಳಲ್ಲಿ ಕೆಲವು ಕಾಲ ಅದನ್ನು ಉಪಯೋಗಿಸಲು ಪ್ರಯತ್ನಿಸಿ ಕೊನೆಗೆ ಕೈಬಿಡಬಹುದು.

ಭಾಷೆಯ ಅಳಿವು : ಒಂದು ಮಾನವಿಕ ಗುಂಪಿನವರು ಒಂದು ಭಾಷೆಯನ್ನು ಬಿಟ್ಟು ಬೇರೊಂದು ಭಾಷೆಯನ್ನು ತಮ್ಮದಾಗಿಸಿಕೊಳ್ಳುವುದನ್ನು ಭಾಷಾಪಲ್ಲಟವೆಂದು ಅಥವಾ ಭಾಷಾ ಅಳಿವೆಂದು ವಿಶ್ಲೇಷಿಸಬಹುದು. ಭಾಷಾ ಪಲ್ಲಟವೆಂಬ ದೃಷ್ಟಿಯಲ್ಲಿ ನೋಡಿದರೆ ಒಂದು ಗುಂಪಿನವರು ಒಂದು ಭಾಷೆಯಿಂದ ಮತ್ತೊಂದು ಭಾಷೆಗೆ ಅಥವಾ ಭಾಷಾ ಪ್ರಭೇದಕ್ಕೆ ಪಲ್ಲಟಿಸಿದ ಅನಂತರ ಆ ಮೂಲಭಾಷೆ ಏನಾಗುತ್ತೆಂಬುದನ್ನು ಗಮನಿಸುವುದಿಲ್ಲ. ಭಾಷೆಯ ಅಳಿವಿನಲ್ಲಿ ಈ ಅಂಶಕ್ಕೇ ಹೆಚ್ಚು ಮಹತ್ವವನ್ನು ಕೊಡುವುದು.

ಪ್ರಪಂಚದ ಹಲವು ಕಡೆಗಳಲ್ಲಿ ನವನಾಗರಿಕತೆ ಕಾಲಿಡುವ ಪೂರ್ವದಲ್ಲಿ ಇದ್ದ ಜನರು ಹಾಗೂ ಅವರ ಭಾಷೆಗಳೂ ಈಗ ಬಹುತೇಕವಾಗಿ ಅಳಿದಿವೆ ಯೆಂದು ಹೇಳಬಹುದು. ಒಂದು ಅಧ್ಯಯನದ ಪ್ರಕಾರ 1490-1990ರ ಕಾಲದಲ್ಲಿ ಪ್ರಪಂಚದ ಅರ್ಧದಷ್ಟು ಭಾಷೆಗಳು ಅಳಿದಿವೆ ಎಂದು ಅಂದಾಜು ಮಾಡಿದ್ದಾರೆ. ಪ್ರಪಂಚದಲ್ಲಿ ಈಗ ಹಾಲಿ ಸುಮಾರು 5000-6000 ಭಾಷೆಗಳಿವೆಯೆಂದು ಅಂದಾಜು ಮಾಡಲಾಗಿದೆ. ಅಂದರೆ ಕೇವಲ ನಾಲ್ಕು ಐದು ಶತಮಾನಗಳ ಹಿಂದೆ ಈಗ ಇರುವ ಭಾಷೆಗಳಿಗಿಂತ ಎರಡರಷ್ಟಿತ್ತೆಂದರೆ ಆಶ್ಚರ್ಯವೇ ಸರಿ, ಹಾಗೆ ಈ ಅಲ್ಪಕಾಲದಲ್ಲಿ ಅರ್ಧದಷ್ಟು ಭಾಷೆಗಳು ಅಳಿಸಬೇಕಾದರೆ ಎಂತಹ ಸನ್ನಿವೇಶಗಳು ಉಂಟಾಗಿರಬಹುದೆಂದು ಊಹಿಸಲು ಪ್ರಯತ್ನಿಸಬಹುದು. ಇಲ್ಲಿ ಎರಡು ಸಾಧ್ಯತೆಗಳಿವೆ. ಒಂದು ಒಂದು ಭಾಷೆಯನ್ನಾಡುವ ಜನರೆಲ್ಲಾ ಕಾಲಾನುಕ್ರಮ ದಲ್ಲಿ ಅನ್ಯ ಪ್ರಧಾನ ಗುಂಪುಗಳ ಒತ್ತಡದಿಂದಲೂ ಸ್ವಯಿಚ್ಛೆಯಿಂದಲೂ ತಮ್ಮ ಭಾಷೆಯನ್ನು ತೊರೆದು ಪ್ರಧಾನಗುಂಪಿನ ಭಾಷೆಯನ್ನು ತಮ್ಮದಾಗಿಸಿಕೊಳ್ಳುವುದು. ಇನ್ನೊಂದು ಒಂದು ಭಾಷೆಯನ್ನಾಡುವ ಗುಂಪು ಅನ್ಯರ ದಬ್ಬಾಳಿಕೆಯಿಂದಾಗಿ ಪೂರ್ಣವಾಗಿ ಅಳಿಸಿ ಹೋಗುವುದು. ಇದರಿಂದಾಗಿ ಅವರ ಭಾಷೆಯೂ ಅಳಿಸಿ ಹೋಗುವುದು. ಇಂತಹ ಸನ್ನಿವೇಶಗಳನ್ನು ಉತ್ತರ ಅಮೆರಿಕಾ, ಆಸ್ಟ್ರೇಲಿಯಾ ಹಾಗೂ ಬೇರೆ ಕಡೆಗಳಲ್ಲೂ ನೋಡಬಹುದು. ಅಮೆರಿಕಾದ ಮೂಲನಿವಾಸಿಗಳಾದ ರೆಡ್ ಇಂಡಿಯನ್ನರ ಹಲವಾರು ಬುಡಕಟ್ಟುಗಳು ಅವರ ಭಾಷೆಗಳೊಂದಿಗೆ ನಶಿಸಿ ಹೋಗಿವೆ. ಹಾಗೆ ಆಸ್ಟ್ರೇಲಿಯಾದಲ್ಲಿ 200ಕ್ಕೂ ಹೆಚ್ಚು ಭಾಷೆಗಳನ್ನಾಡುವ ಮೂಲ ನಿವಾಸಿಗಳ ಪೈಕಿ ಈಗ ಕೇವಲ 50 ಭಾಷೆಗಳನ್ನಾಡುವವರು ಉಳಿದು ಕೊಂಡಿದ್ದಾರೆ. ಹಾಗೇ ಟಾಸ್ಮೇನಿಯಾದಲ್ಲಿನ ಭಾಷೆಯಾದ ಟಾಸ್ಮೇನಿಯನ್ ಸಹ ಅಳಿಸಿಹೋಗಿದೆ. ಈ ಪ್ರದೇಶಕ್ಕೆ ಬ್ರಿಟಿಶ್ ವಲಸೆಗಾರರು 1803 ರಲ್ಲಿ ಬಂದರು. ಅವರು ಬಂದ 73 ವರ್ಷಗಳಲ್ಲಿ ಟಾಸ್ಮೇನಿಯನ್ ಭಾಷೆ ಪೂರ್ಣವಾಗಿ ಅಳಿಸಿಹೋಯಿತು. ಹೀಗೆ ಹಲವು ಪ್ರದೇಶಗಳಲ್ಲಿ ಇಂತಹ ಸನ್ನಿವೇಶವನ್ನು ನೋಡಬಹುದು. ನಮ್ಮ ದೇಶದಲ್ಲೇ ಇರುವ ಅಂಡಮಾನ್ ದ್ವೀಪಸಮೂಹಗಳಲ್ಲಿದ್ದ ಅಂಡಮಾನೀಸ್ ಗುಂಪಿನ ಬಹುತೇಕ ಭಾಷೆಗಳು ಹೊರಗಿನವರ ಒತ್ತಡದಿಂದ ಇದೇ ಮಟ್ಟವನ್ನು ಮುಟ್ಟಿವೆ. ಈಗ ಆ ಗುಂಪಿನ ಕೇವಲ 3-4 ಭಾಷೆಗಳು ಮಾತ್ರ ಉಳಿದುಕೊಂಡಿವೆ. ಆದರೆ ಅವುಗಳನ್ನಾಡು ವವರು ಕೆಲವೇ ಜನ. ನಮ್ಮ ದೇಶದ ನೀತಿಯಂತೆ ದೇಶದ ಎಲ್ಲಾ ಭಾಷೆ ಗಳನ್ನು ಸಂರಕ್ಷಿಸಿ, ಮತ್ತು ಪ್ರೋಇವುಗಳ ಭವಿಷ್ಯವೂ ಆಶಾದಾಯಕವಾಗಿಲ್ಲ.

ಭಾಷಾ ಅಳಿವಿನ ಸಂದರ್ಭದಲ್ಲಿ ಸಾಮಾನ್ಯವಾಗಿ ಸಂಸ್ಕೃತ, ಲ್ಯಾಟಿನ್, ಗ್ರೀಕ್‌ಗಳೂ ಅಳಿದಿವೆ ಎಂದು ಹೇಳುವುದುಂಟು. ಇವುಗಳ ಪರಿಸ್ಥಿತಿಯು ಮೇಲೆ ಹೇಳಿದ ಭಾಷೆಗಳಂತಲ್ಲ. ಇಲ್ಲಿ ಅಳಿದಿವೆ ಎನ್ನುವ ಪದ ಸೂಕ್ತ ವೆನಿಸುವುದಿಲ್ಲ. ಕಾರಣ, ಈ ಭಾಷೆಗಳ ದೀರ್ಘ ಇತಿಹಾಸದಲ್ಲಿ ಕಾಲಕ್ರಮೇಣ ಬದಲಾವಣೆಗಳು ಹಂತಹಂತವಾಗಿ ಬೆಳೆದು ಈಗ ಅವುಗಳ ಉತ್ತರಾಧಿಕಾರಿಗಳಾಗಿ ಹಲವು ಭಾಷೆಗಳು ಉಂಟಾಗಿವೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಯಾವುದೇ ಒಂದು ಹಂತದಲ್ಲೂ ಒಂದು ನುಡಿಯಿಂದ ಇನ್ನೊಂದಕ್ಕೆ ಪೂರ್ಣವಾಗಿ ಬೇರ್ಪಡುವ ಹಾಗೂ ಸಂಬಂಧಗಳು ಸಂಪೂರ್ಣವಾಗಿ ತೊರೆದು ಹೋಗುವ ಸನ್ನಿವೇಶಗಳು ಇಲ್ಲದಿರುವುದು. ಎಂದರೆ ಈ ಭಾಷೆಗಳು ನಿರಂತರ ವಾಗಿ ತಲತಲಾಂತರದಿಂದ ಉಪಭಾಷೆಗಳಾಗಿ ಸಾಗುತ್ತಾ ಸ್ವತಂತ್ರವಾದ ಹಾಗೂ ಪ್ರಮಾಣ ರೂಪಗಳಾಗಿ ವಿಕಾಸಗೊಂಡಿವೆ.

ಹೀಬ್ರೂ ಭಾಷೆಯು ಒಂದು ಕಾಲಕ್ಕೆ ಪೂರ್ಣವಾಗಿ ಅಳಿದಿದೆ ಎಂದು ಭಾವಿಸಿದ್ದು, ಈ ಶತಮಾನದಲ್ಲಿ ಪುನಃಚೇತನವನ್ನು ಪಡೆದು ಜೀವಂತ ಭಾಷೆಯಾಗಿರುವ ಅಪರೂಪವಾದ ಘಟನೆಯಾಗಿದೆ. ಇದು ಒಂದು ಸಮಾಜದ ಜನರೆಲ್ಲಾ ಕೂಡಿ ನಿರ್ಧಾರವನ್ನು ತೆಗೆದುಕೊಂಡು ಅದಕ್ಕೆ ಅನುಗುಣವಾಗಿ ನಡೆದರೆ ಏನನ್ನಾದರೂ ಸಾಧಿಸಬಹುದೆಂಬುದನ್ನು ತೋರಿಸುತ್ತದೆ.

ಭಾಷೆಯು ಅಳಿಸಿಹೋಗುವ ಸಂದರ್ಭದಲ್ಲಿ ಯಾವ ರೂಪವನ್ನು ತಾಳುತ್ತದೆಂಬ ಪ್ರಶ್ನೆಯು ಉದ್ಭವಿಸಬಹುದು. ವಿದ್ವಾಂಸರ ಪ್ರಕಾರ ಅಳಿಸಿ ಹೋಗುವ ಮುನ್ನ ಎರಡು ವಿಧಗಳನ್ನು ನೋಡಬಹುದು. ಭಾಷಾ ಪಲ್ಲಟ ದಂತಹ ಸನ್ನಿವೇಶದಲ್ಲಿ ಅಪ್ರಧಾನ ಭಾಷೆಯು ಕ್ರಮೇಣವಾಗಿ ಹೆಚ್ಚು ಹೆಚ್ಚು ಗೌಣತ್ವವನ್ನು ಹೊಂದಿ ಆ ಭಾಷೆಯ ವ್ಯಾಕರಣ, ಪದಸಮೂಹಗಳೂ ಸಂಕುಚಿತವಾಗಿ ಕಾಲಕ್ರಮೇಣ ನಶಿಸಿ ಹೋಗುತ್ತವೆ. ಈ ವಿಷಯ ಬಹಳ ವಾದ ವಿವಾದಗಳಿಗೆ ಅವಕಾಶ ಮಾಡಿಕೊಟ್ಟಿವೆ. ಆದರೆ ಭಾಷೆಯ ಅಳಿವಿನ ಸನ್ನಿವೇಶದಲ್ಲಿ ಭಾಷೆಯೊಡನೆ ಅದನ್ನು ಮಾತಾಡುವವರೂ ಕಡಿಮೆಯಾಗಿ ಅವರೊಡನೆಯೇ ಭಾಷೆಯೂ ಅಂತ್ಯವಾಗುವುದರಿಂದ ಭಾಷೆಯ ರಚನೆಯು ಪೂರ್ಣಪ್ರಮಾಣದಲ್ಲಿರುತ್ತದೆ ಎಂದು ಭಾವಿಸುತ್ತಾರೆ. ಅವರು ಇರುವಷ್ಟು ಕಾಲವೂ ಆ ಭಾಷೆಯೂ ಉಪಯೋಗದಲ್ಲಿರುವುದರಿಂದ ಅದರ ವ್ಯಾಕರಣ, ಪದಸಮೂಹ ಇತ್ಯಾದಿಗಳು ಪೂರ್ಣವಾಗಿಯೇ ಇರುತ್ತವೆ ಎಂದು ನಂಬ ಬಹುದು.

ಭಾಷಾ ಸಮಸ್ಯೆಗಳು ಹಾಗೂ ಭಾಷಾನೀತಿ : ಬಹುಭಾಷಿಕ ರಾಷ್ಟ್ರಗಳಲ್ಲಿ ಸಾಮಾಜಿಕ ಗುಂಪುಗಳ ಸಂಪರ್ಕ ಮತ್ತು ಪ್ರತಿಸ್ಪರ್ಧೆಯಲ್ಲಿ ಹಲವು ಸಮಸ್ಯೆಗಳು ಉದ್ಭವಿಸುವುದರಿಂದ ಅದನ್ನು ಗಮನಿಸುವುದು ಅವಶ್ಯಕ. ಭಾಷಾ ಸಮಸ್ಯೆಗಳ ಸಾಮಾಜಿಕ ಸಂದರ್ಭಗಳನ್ನು ಅದರಲ್ಲೂ ಮುಖ್ಯವಾಗಿ ಭಾಷಾ ಮುಂದುವರಿಕೆಗೆ ಮತ್ತು ಪಲ್ಲಟಕ್ಕೆ ಕಾರಣೀಭೂತವಾದ ಶಕ್ತಿಗಳನ್ನು ಗಣನೆಗೆ ತೆಗೆದುಕೊಳ್ಳದ ಭಾಷಾಯೋಜನೆಯು ಯಶಸ್ವಿಯಾಗುವುದಿಲ್ಲ. ರಾಷ್ಟ್ರ ಭಾಷೆಯನ್ನು ಆರಿಸುವುದರಲ್ಲೇ ಆಗಲೀ, ರಾಷ್ಟ್ರೀಯ ಬರವಣಿಗೆಯ ವ್ಯವಸ್ಥೆಯನ್ನು ಆರಿಸುವುದರಲ್ಲೇ ಆಗಲೀ ಅಥವಾ ಬೋಧನೆಗೆ ಮಾಧ್ಯಮವನ್ನು ಆರಿಸುವುದರಲ್ಲೇ ಆಗಲೀ ಭಾಷಾ ಆಯ್ಕೆಯು ಒಂದು ಮುಖ್ಯವಾದ ಭಾಷಿಕ ಸಮಸ್ಯೆ ಇಸ್ರೇಲ್‌ನಲ್ಲಿ ಹೀಬ್ರು ಭಾಷೆಯ ವರವಾಗಿದ್ದ ಸಾಮಾಜಿಕ ಸನ್ನಿವೇಶಗಳು ಮತ್ತು ಧಾರ್ಮಿಕ ಪ್ರವೃತ್ತಿಗಳು ಹೀಬ್ರೂ ಭಾಷೆಯು ಮರುಹುಟ್ಟು ಪಡೆಯಲು ಸಾಧ್ಯವಾಯಿತು. ಮತ್ತು ಅದನ್ನು ರಾಷ್ಟ್ರಭಾಷೆಯನ್ನಾಗಿ ಚಲಾವಣೆಗೆ ತರಲು ಸಾಧ್ಯವಾಯಿತು.

ಸಾಮಾಜಿಕ ಶಕ್ತಿಗಳು ರಾಷ್ಟ್ರೀಯ ಭಾಷೆಯನ್ನು ರೂಪಿಸುವುದರಲ್ಲಿ ತೋರಿದ ಧೋರಣೆಗಳಿಂದಾಗಿ ಇಂದು ಇಸ್ರೇಲ್ ದೇಶವು ಒಂದು ಒಳ್ಳೆಯ ಉದಾಹರಣೆಯಾಗಲೂ ಸಾಧ್ಯವಾಗಿದೆ. ಇದಕ್ಕೆ ವಿರುದ್ಧವಾಗಿ ವೆಲಸ್ಕೊ ಸರ್ಕಾರವಿದ್ದ ಪೆರುದೇಶದಲ್ಲಿ ಮೇ 1975 ರಲ್ಲಿ ಅಧಿಕೃತ ಭಾಷೆಯಾಗಿ ಕ್ವೆಚುವಾ ಭಾಷೆಯನ್ನು ಹಾಗೂ ರಾಷ್ಟ್ರಭಾಷೆಯಾಗಿ ಐಮರಗಳನ್ನು ಕಾರ್ಯರೂಪಕ್ಕೆ ತರಲು ನಡೆದ ಪ್ರಯತ್ನಗಳು ಅತೀವ ಸೋಲನ್ನುಂಡವು. ಕಾರಣ, ಅತರ ಲ್ಯಾಟಿನ್ ಅಮೆರಿಕಾದಂತೆ ಜಾತಿಯು ಮುಖ್ಯವಾಗಿ ಸಾಂಸ್ಕೃತಿಕ ಅಭಿವ್ಯಕ್ತಿಗಳಿಂದ ನಿರ್ದೇಶಿಸುತ್ತದೆ. ಆದ್ದರಿಂದ ಕ್ವೆಚುವ ಭಾಷೆಯನ್ನು ಸರ್ಕಾರೀ ಭಾಷೆಯಾಗಿ ಅಂಗೀಕರಿಸುವುದರಿಂದ ತಾನೇ ಇಂಡಿಯನ್ ಎಂದು ಒಪ್ಪಿಕೊಂಡಂತೆ. ಹಾಗೂ ಕರೆಸಿಕೊಂಡಂತೆ. ಅದರ ಜೊತೆಗೇ ಸಾಮಾಜಿಕ ಆರ್ಥಿಕ ಅಸ್ಪೃಶ್ಯತೆಗಳನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಅಂತಹ ಯೋಜನೆ ಸಹಜವಾಗಿಯೇ ಯಶಸ್ವಿಯಾಗುವುದಿಲ್ಲ. ಇದಕ್ಕೆ ಪೆರುದೇಶವೇ ಸಾಕ್ಷಿ. ಆದ್ದರಿಂದ ಆ ಸಮಯದಲ್ಲಿ ಇರುವ ಸಾಮಾಜಿಕ ಸಾಂಸ್ಕೃತಿಕ ಶಕ್ತಿಗಳಿಗೆ ವಿರುದ್ಧವಾಗಿ ಹೋದರೆ ಅಂತಹ ಯೋಜನೆಗಳು ಯಶಸ್ವಿಯಾಗುವುದಿಲ್ಲ. ಒಂದು ದೇಶದ ಸಾಧನಗಳಿಗೆ ಹಾಗೂ ಸೇವೆಗಳಿಗೆ ಪ್ರವೇಶ ಪಡೆಯುವಲ್ಲಿನ ಗುಂಪುಗಳ ಸ್ಪರ್ಧೆಯಲ್ಲಿ ಭಾಷೆಯನ್ನು ಸಂಪತ್ತಾಗಿ ಉಪಯೋಗಿಸುವುದನ್ನು ಕಾಣಬಹುದು. ಬಾಂಗ್ಲಾ ದೇಶದ ಉದಾಹರಣೆ ಯನ್ನು ನೋಡಬಹುದು.

ಮೊದಲ ಹಂತದಲ್ಲಿ 1947 ರಲ್ಲಿ, ಒಂದು ಜಾತಿ ಗುಂಪಾಗಿ ಪೂರ್ವಬಂಗಾಳದ ಮುಸ್ಲಿಮರಾಗಿ ಪರಿಗಣಿಸಿಕೊಂಡು ತಮ್ಮ ಹಿತಕ್ಕೆ ಹೆಚ್ಚು ಸಹಾಯಕವೆಂದು ಭಾವಿಸಿ, ಧರ್ಮದ ಆಧಾರದ ಮೇಲೆ ಪಾಕಿಸ್ತಾನದ ಜೊತೆ ಸೇರಿ ಅನಂತರ 1971ರಲ್ಲಿ ಭಾಷಿಕ ಕಲಾತ್ಮಕ ರಾಷ್ಟ್ರೀಯತೆಯನ್ನು ಹಾಗೂ ಭೌಗೋಳಿಕವಾಗಿ ಬೇರೆಯಾಗಿರುವ ಕಾರಣವನ್ನು ಮುಂದೊಡ್ಡಿ ಬೇರೆಯೇ ಆದ ಸ್ವತಂತ್ರವಾದ ಮಟ್ಟವನ್ನು ಪಡೆದುಕೊಂಡು ಧಾರ್ಮಿಕ ಭಾಷಿಕ ಅವಶ್ಯ ಕತೆಯಿಂದ ಬಾಂಗ್ಲಾದೇಶ ಸ್ವತಂತ್ರ ದೇಶವಾಯಿತು. 20ನೇ ಶತಮಾನದ ಉದ್ದಕ್ಕೂ ಭಾಷೆ ಮತ್ತು ಧರ್ಮಗಳು ಸಂಪತ್ತಾಗಿ ಪರಿಣಮಿಸಿ ಈ ಪ್ರಪಂಚ ದಲ್ಲಿ ಸಂಘರ್ಷಗಳುಂಟಾಗಲು ಹಲವಾರು ರೀತಿಗಳಲ್ಲಿ ಉಪಯೋಗವಾಗುವು ದನ್ನು ಕಾಣಬಹುದು.

ಇತರ ಮಾನವಿಕ ಪಂಗಡಗಳೂ ಬಾಂಗ್ಲಾದಲ್ಲಿನ ಸನ್ನಿವೇಶಕ್ಕಿಂತ ಬೇರೆಯಲ್ಲ. ಅವರು ಯಾವಾಗ ತಮ್ಮ ಮಕ್ಕಳ ಹಿತಾಸಕ್ತಿಯಿಂದ ರಾಷ್ಟ್ರ ಭಾಷೆಯನ್ನು ಚೆನ್ನಾಗಿ ಹಾಗೂ ಸುಲಲಿತವಾಗಿ ಕಲಿಯುವುದು ಸಮರ್ಪಕವೆಂದು ಕಂಡುಕೊಳ್ಳುತ್ತಾರೋ, ಅಂತಹ ಸನ್ನಿವೇಶದಲ್ಲಿ ಅವರಿಗೆ (ಅಲ್ಪಸಂಖ್ಯಾತರಿಗೆ) ಶಿಕ್ಷಣದ ನೀತಿಯ ಸಂಬಂಧವಾದ ಸಮಸ್ಯೆಗಳು ಅತ್ಯಲ್ಪವಾಗಿ ಕಾಣಬರುತ್ತವೆ.

ಸಿಂಗಪುರದಂತಹ ನಗರ ರಾಷ್ಟ್ರದೊಳಗೆ, ನಾಲ್ಕು ಅಧಿಕೃತ / ಆಡಳಿತ ಭಾಷೆಗಳಿದ್ದು ಮೂರು ಪ್ರಮುಖ ಧರ್ಮಗಳಿದ್ದು ಕಲಾತ್ಮಕ ಸಂಘರ್ಷವೇ ಆಗಲೀ ಅಥವಾ ಪ್ರಮುಖ ಶಿಕ್ಷಣಾತ್ಮಕ ಸಮಸ್ಯೆಗಳಾಗಲೀ ಉಂಟಾಗುವ ಲಕ್ಷಣಗಳೇ ಇಲ್ಲ. ಕಾರಣ, ಸಿಂಗಪುರದ ಭದ್ರವಾದ ಆರ್ಥಿಕನೀತಿ ಹಾಗೂ ಬೆಳೆಯುತ್ತಿರುವ ಆರ್ಥಿಕತೆಯಿಂದಾಗಿ ಅಲ್ಲಿರುವ ಪ್ರತಿಯೊಬ್ಬರಿಗೂ ಉದ್ಯೋಗಾವಕಾಶಗಳು ಹಾಗೂ ವರಮಾನವು ಚೆನ್ನಾಗಿರುವುದರಿಂದ ಸ್ಪರ್ಧೆಯು ಕುಲಾಧಾರಿತವಾಗಿಲ್ಲದೆ ವ್ಯಕ್ತಿಯ ಗುಣಾಧಾರಿತವಾಗಿದೆ.

ಆದರೆ ಯಾವಾಗ ಈ ಕುಲ, ಗುಂಪುಗಳಿಗೆ ಸಾಮಾಜಿಕ – ಆರ್ಥಿಕ ಅವಕಾಶಗಳು ಸಿಗದೆ, ಇತರರನ್ನು ಕಳಂಕಿತವಾಗಿ ನೋಡುವುದು, ಆರ್ಥಿಕ ದುರುಪಯೋಗ ಮತ್ತು ವ್ಯವಸ್ಥಿತವಾಗಿ ಉದ್ಯೋಗಾವಕಾಶವಿಲ್ಲದಂತೆ ಮಾಡುವುದು, ಇಂತಹ ಸನ್ನಿವೇಶಗಳಲ್ಲಿ ತಮ್ಮ ಮೂಲ ಮಾತೃಭಾಷೆಯನ್ನೇ ಗುಂಪಿನವರನ್ನು ಒಗ್ಗೂಡಿಸುವ ತಂತ್ರವಾಗಿ ಉಪಯೋಗಿಸುವ ಸಾಧ್ಯತೆಗಳಿವೆ. ಭಾಷಾಗಡಿಯ ಸುಸ್ಥಿತಿಯನ್ನು ಧರ್ಮದಿಂದ ಪೋಷಿಸಿದರೆ ಇನ್ನೂ ಹೆಚ್ಚಿನ ಸಾಧನೆಯಾಗುತ್ತದೆ. ಈ ತಂತ್ರವನ್ನು ಯುರೋಪಿನ ತುರ್ಕಿಯ ಜನ ಹಲವು ಬಾರಿ ಉಪಯೋಗಿಸಿಕೊಂಡಿದ್ದಾರೆ.

ಬಹುಭಾಷಿಕತೆಯ ಜೊತೆಯಲ್ಲೇ ಬರುವ ಸಮಸ್ಯೆಯೆಂದರೆ ಬಹು ದುಬಾರಿಯಾಗಬಹುದಾದ ಮಾತೃಭಾಷೆಯ ಮಾಧ್ಯಮದಲ್ಲಿ ಎಲ್ಲರಿಗೂ ಬೋಧನೆಯ / ಶಿಕ್ಷಣದ ನೀತಿ. ನಮ್ಮ ದೇಶದಲ್ಲಿರುವಂತೆ, ಇದರ ಬಗ್ಗೆ ಒಮ್ಮತವಿಲ್ಲದಿರುವುದು, ವಿದ್ವಾಂಸರ ಸಂಶೋಧನೆಗಳಿಂದ ಕಂಡುಬಂದಿದೆ. ಬಹುತೇಕ ನಿರ್ಣಯಗಳು ರಾಜಕಾರಣದ ಸ್ವರೂಪದವು.

ಭಾಷಾಯೋಜನೆ: ಭಾಷೆ ಎನ್ನುವದು ರಾಷ್ಟ್ರಮಟ್ಟದಲ್ಲಾಗಲೀ, ಸ್ಥಳೀಯ ಮಟ್ಟದಲ್ಲಾಗಲೀ, ಸರ್ಕಾರಕ್ಕೆ ತೊಡಕಾಗಿ ಪರಿಣಮಿಸಿದೆ. ವಿವಿಧ ಸಾಮಾಜಿಕ ಗುಂಪುಗಳು ತಮ್ಮ ತಮ್ಮ ಭಾಷಾ ವ್ಯಕ್ತಿತ್ವವನ್ನು ಉಳಿಸಿಕೊಳ್ಳುವ ಸಲುವಾಗಿ ಕಾರ್ಯಶಕ್ತಿಯಿಂದಾಗಲೀ ಅಥವಾ ಹಿಂಸಾತ್ಮಕವಾಗಿಯಾಗಲೀ ಪ್ರಯತ್ನಿಸುತ್ತಾರೆ. ಸರ್ಕಾರಗಳು ಇವುಗಳಿಗೆ ಅಧಿಕೃತವಾಗಿ ಅಥವಾ ಅನಧಿಕೃತವಾಗಿ ಸೂಕ್ತವಾಗಿ ಪ್ರತಿಕ್ರಿಯಿಸಬೇಕಾಗುತ್ತದೆ. ಸರ್ಕಾರಗಳು ಈ ಸಮಸ್ಯೆಗಳನ್ನು ಪರಿಹರಿಸಬಹುದು. ಇಲ್ಲವೇ ಇವುಗಳನ್ನು ಕಡೆಗಣಿಸಬಹುದು. ಕಡೆಗಣಿಸಿದರೆ ಸಮಸ್ಯೆಗಳು ಹೆಚ್ಚು ಜಟಿಲವಾಗಬಹುದು. ಆದ್ದರಿಂದ ಯಾವುದಾದರೂ ಒಂದು ರೀತಿಯ ಭಾಷಾ ಯೋಜನೆಯನ್ನು ಕೈಗೊಳ್ಳ ಬೇಕಾಗುತ್ತದೆ.

ಜೀವನದ ಗತಿ ತೀವ್ರವಾಗಿ ಬದಲಾಗುತ್ತಿರುವುದರಿಂದ ಮತ್ತು ದೇಶಗಳು ವಿಘಟಿತವಾಗಿರುತ್ತಿರುವುದರಿಂದ ಹಾಗೂ ಹೆಚ್ಚು ಸಮ್ಮಿಶ್ರ ಹಾಗೂ ಅಂತಾರಾಷ್ಟ್ರೀಯವಾಗಿ ಹೆಚ್ಚು ಅರಿವು ಮೂಡುತ್ತಿರುವುದರಿಂದ ಉದ್ಭವಿಸುವ ಹಲವಾರು ಸಮಸ್ಯೆಗಳು ಹಾಗೂ ಒತ್ತಡಗಳು ಭಾಷೆಯ ಸಹಜ ವಿಕಾಸದ ಗತಿಯ ಮೇಲೆ ಅವಲಂಬಿತವಾಗುವುದು ಸಾಧ್ಯವಾಗುವುದಿಲ್ಲ. ಆದ್ದರಿಂದ ಹಲವು ಸರ್ಕಾರಗಳು ಸಮಸ್ಯೆಗಳನ್ನು ಶಾಸ್ತ್ರೀಯ ಭಾಷಾಯೋಜನೆಗಳ ಮೂಲಕ ಬಗೆಹರಿಸಲು ಪ್ರಯತ್ನಿಸುತ್ತವೆ.

ಭಾಷಾಯೋಜನೆಯು ಒಂದು ದೇಶದ ಭಾಷೆಗಳನ್ನು ಮತ್ತು ಭಾಷಿಕ ವಿಧಗಳನ್ನು ಹೇಗೆ ಉಪಯೋಗಿಸಬೇಕೆಂಬುದನ್ನು ಸ್ಪಷ್ಟೀಕರಿಸುವಲ್ಲಿ ಮತ್ತು ಕಾರ್ಯಗತಗೊಳಿಸುವ ಔಪಚಾರಿಕ ನೀತಿಗೆ ಸಂಬಂಧಿಸಿದೆ. ಭಾಷೆ ಸಂಬಂಧ ದಲ್ಲಿ ಮೂಲಭೂತವಾದಂತಹ ನಿರ್ಣಯಗಳನ್ನು ಎಲ್ಲ ದೇಶಗಳಲ್ಲಿ ಅದರಲ್ಲೂ ಅಭಿವೃದ್ದಿಪರ ದೇಶಗಳಲ್ಲಿ ತೆಗೆದುಕೊಳ್ಳಬೇಕಾಗಬಹುದು. ಆದರೆ ಯೋಜನಾ ಸಂಬಂಧವಾದ ಸಮಸ್ಯೆಗಳು ಎಲ್ಲಾ ದೇಶಗಳಲ್ಲೂ ಕಂಡುಬರುತ್ತವೆ. ಅಲ್ಪಸಂಖ್ಯಾತರ ಭಾಷೆಯ ಸ್ಥಾನಮಾನ, ಭಾಷೆಯ ಪ್ರಮಾಣಗಳನ್ನು ಕಾಪಾಡುವುದರಲ್ಲಿ ಅಕಾಡೆಮಿಗಳ ಪಾತ್ರ, ಭಾಷಾ ಉಪಯೋಗದಲ್ಲಿ ಮಾಧ್ಯಮಗಳ ಪ್ರಭಾವ, ಬರವಣಿಗೆಯ ಸುಧಾರಣೆಯ ಮೌಲ್ಯ ಇತ್ಯಾದಿ. ಈ ಕಾರಣಗಳಿಂದ ಯೋಜನಾ ಸಮಸ್ಯೆಗಳು ತಲೆದೋರುತ್ತವೆ. ಭಾಷಾ ಯೋಜನೆಯನ್ನು ಸರ್ಕಾರದ ಅನೇಕ ಅಂಗಗಳಾದ ಅಕಾಡೆಮಿಗಳು, ಸಂಘಸಂಸ್ಥೆಗಳು ಹಾಗೂ ಪ್ರತ್ಯೇಕ ವ್ಯಕ್ತಿಗಳಿಂದ ನಡೆಸಲಾಗುತ್ತದೆ. ಚಟುವಟಿಕೆ ಗಳು ರಾಜಕೀಯ ಹಾಗೂ ನ್ಯಾಯಾಲಯದ ಒಂದು ತುದಿಯಿಂದ, ಅಧಿಕೃತ ಹಾಗೂ ಸಕ್ರಮತೆಯ ಮತ್ತೊಂದು ತುದಿಯವರೆಗೆ ವ್ಯಾಪಿಸಿದೆ. ಭಾಷಾ ಯೋಜನೆಗೆ ಕೆಲವೊಮ್ಮೆ ಪೂರ್ಣ ಒಮ್ಮತ ದೊರಕಿದರೆ ಮತ್ತೆ ಕೆಲವೊಮ್ಮೆ ಒತ್ತಾಯದಿಂದ ಒಮ್ಮತ ದೊರಕುವುದು. ಕೆಲವೆಡೆ ತೀಕ್ಷ್ಣವಾದ ವಿರೋಧಗಳೂ ಕಂಡು ಕಾಣದಂತೆ ವ್ಯಕ್ತವಾಗುತ್ತದೆ.

ಐತಿಹಾಸಿಕ, ರಾಜಕೀಯಾತ್ಮಕ, ಆರ್ಥಿಕ, ಧಾರ್ಮಿಕ, ಶೈಕ್ಷಣಿಕ ನ್ಯಾಯಾತ್ಮಕ ಹಾಗೂ ಸಾಮಾಜಿಕ ಅಂಶಗಳು – ಈ ಎಲ್ಲದರ ತೊಡಕುಗಳನ್ನು ನಿವಾರಿಸಬೇಕು. ಇದರ ಪರಿಣಾಮವಾಗಿ ಈ ವಿಷಯವನ್ನು ಅಭ್ಯಸಿಸಿದವರಿಗೆ ಈವರೆಗೂ ಯಾಕೆ ಕೆಲವು ಭಾಷಾಯೋಜನೆಗಳು ಕಾರ್ಯಗತವಾಗಿವೆ ಹಾಗೂ ಕೆಲವು ಆಗಿಲ್ಲ ಎಂಬುದನ್ನು ವಿಶದೀಕರಿಸಲು ಸಾಧ್ಯವಾಗಿಲ್ಲ.

ಭಾಷಾಯೋಜನೆ ಕ್ಷೇತ್ರವು 60ರ ದಶಕದಲ್ಲಿ ಪ್ರಾರಂಭವಾಗಿದ್ದು ಈಗಲೂ ಕೇವಲ ವರ್ಣನಾತ್ಮಕ ಹಂತದಲ್ಲಿದೆ. ಪ್ರತ್ಯೇಕ ದೇಶಗಳ ವಿಭಿನ್ನ ಸನ್ನಿವೇಶಗಳ ವಿವರಣಾತ್ಮಕ ಅಧ್ಯಯನದ ಅವಶ್ಯಕತೆಯಿದೆ. ಕೆಲವೇ ಸಾಮಾನ್ಯ ಸೈದ್ಧಾಂತಿಕ ತತ್ವಗಳನ್ನು ಪ್ರಸ್ತಾಪಿಸಲಾಗಿದೆ. ಆದ್ದರಿಂದ ಈ ಕ್ಷೇತ್ರವು ಪ್ರಾಯೋಗಿಕ ಹಾಗೂ ಸೈದ್ದಾಂತಿಕ ಕಾರಣಗಳಿಗೆ ವಿಶೇಷ ಹಾಗೂ ಗಮನಹರಿಸಿ. ನಿಸ್ಸಂಶಯವಾಗಿ, ಇದರ ಫಲಿತಾಂಶಗಳು ಮತ್ತು ವಿಶ್ಲೇಷಣೆಗಳು ಹಲವರಿಗೆ (ರಾಜಕಾರಣಗಳಿಗೆ, ನ್ಯಾಯವಾದಿಗಳಿಗೆ, ಶಿಕ್ಷಣತಜ್ಞರಿಗೆ, ಇತ್ಯಾದಿ) ಸಹಾಯಕವಾಗಬಹುದು. ಸಮಾಜದಲ್ಲಿ ಭಾಷಾ ಪ್ರಗತಿಯ ಬಗ್ಗೆ ನಿರ್ಣಯ ಗಳನ್ನು ತೆಗೆದುಕೊಳ್ಳುವ ಜವಾಬ್ದಾರಿಯಿಂದ ಇವರಲ್ಲಿ ಕೆಲವರಿಗೆ ಭಾಷಿಕ ಸಮಸ್ಯೆಗಳ ಬಗ್ಗೆ ವಿಶೇಷವಾದ ಜ್ಞಾನವಿರುವುದಿಲ್ಲ. ಆದರೆ ಇದು ಭಾಷಿಕ ಬದಲಾವಣೆಯ ಬಗ್ಗೆ ನಮ್ಮಲ್ಲಿ ಹೊಸ ಅರಿವನ್ನು ಮೂಡಿಸುತ್ತದೆ. ಹಲವು ಭಾಷಾಶಾಸ್ತ್ರಜ್ಞರ ಪ್ರಕಾರ ಭಾಷಾ ಬದಲಾವಣೆಗಳು ಸ್ವಾಭಾವಿಕ ಹಾಗೂ ಸಹಜ ಘಟನೆ. ಸಾಮಾಜಿಕ ಅಥವಾ ಭಾಷಿಕ ಒತ್ತಡದಿಂದ ಇದು ಸಾಧ್ಯವಿಲ್ಲ ಹಾಗೂ ಇವುಗಳಲ್ಲಿ ಹಸ್ತಕ್ಷೇಪ ಮಾಡುವುದು ಅಪೇಕ್ಷಣೀಯವಲ್ಲ ಎನ್ನುವ ಅಭಿಪ್ರಾಯವಿತ್ತು. ಆದ್ದರಿಂದ ಭಾಷೆಯನ್ನು ಅದರಷ್ಟಕ್ಕೆ ಬಿಡಬೇಕೆಂಬುದು ಅವರ ಮತ. ಆದರೆ ಸಾಮಾಜಿಕ ಗುಂಪುಗಳಿಗೆ ಭಾಷೆಯ ಗತಿಯನ್ನು ಬದಲಾಯಿಸಲು ಸಾಧ್ಯವೆಂಬುದನ್ನು ಭಾಷಾಯೋಜನಾಭ್ಯಾಸಗಳು ತೋರಿಸಿವೆ. ಆದರೆ ಈ ಕ್ರಮ ಅಪೇಕ್ಷಿತವೆ ಎಂಬುದು ಚರ್ಚಾಸ್ಪದ ವಿಷಯ. ಸಾಮಾಜಿಕ ಹಸ್ತಕ್ಷೇಪದಿಂದ ಎಷ್ಟರಮಟ್ಟಿಗೆ ಭಾಷೆಗಳನ್ನು ಪ್ರಭಾವಿತ ಗೊಳಿಸಬಹುದೆಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಭಾಷಾಯೋಜನಾ ಚಟುವಟಿಕೆಗಳಲ್ಲಿ ಎರಡು ವಿಧಗಳಿವೆ ಎಂದು ಹಲವಾರು ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ಅ. ಸಾಮಗ್ರಿ ಯೋಜನೆ – ಇದರಲ್ಲಿ ಭಾಷೆಯ / ವಿಧದ ರಚನೆಯಲ್ಲಿ ಬದಲಾವಣೆಗಳನ್ನು ಉದ್ದೇಶಿಸಿದರೆ ಅದು ಸಾಮಗ್ರಿಯೋಜನೆ. ಇಲ್ಲಿ ಬದಲಾವಣೆಯು ಉಚ್ಛಾರಣೆಯಲ್ಲಿ, ವ್ಯಾಕರಣ ಅಥವಾ ಪದಕೋಶಗಳಲ್ಲಿ ಬದಲಾವಣೆಗಳನ್ನು ತರುವುದು. ಆ. ಸ್ಥಾನಮಾನ ಯೋಜನೆ – ಇದರಲ್ಲಿ ಉಪಯೋಗಿಸುವ ಭಾಷಾ / ವಿಧದಲ್ಲಿ ಬದಲಾವಣೆಗಳನ್ನು ಹೇಗೆ ಸಮಾಜದಲ್ಲಿ ತರಬೇಕೆಂಬುದು ಮುಖ್ಯ. ಮೊದಲ ಬಾರಿಗೆ ನ್ಯಾಯಾಲಯಗಳಲ್ಲಿ ಅಥವಾ ಅಧಿಕೃತ ಪ್ರಕಟಣೆಗಳಲ್ಲಿ ಭಾಷೆಯನ್ನು ಉಪಯೋಗಿಸುವ ಅವಕಾಶ ಮಾಡಿಕೊಡಲಾಗಿದೆ. ಆದರೆ ಈ ಯೋಜನೆಗಳ ಭಿನ್ನತೆ ಇನ್ನೂ ಸ್ಪಷ್ಟವಾಗಿಲ್ಲ. ಏಕೆಂದರೆ ಎಲ್ಲಾ ರೀತಿಯ ಯೋಜನಾ ಚಟುವಟಿಕೆಗಳನ್ನು ವ್ಯವಸ್ಥಿತವಾಗಿ ವರ್ಗೀಕರಿಸಲು ಆಗುವುದಿಲ್ಲ. ಆದರೆ ಇದು ಭಾಷಾಯೋಜನೆಯ ಅಧ್ಯಯನಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ.

ಭಾಷಾಯೋಜನೆಯ ಅನುಷ್ಠಾನದ ಹಂತಗಳು : ಒಂದು ದೇಶದಲ್ಲಿ ಹಲವು ಭಾಷೆಗಳು ಚಾಲ್ತಿಯಲ್ಲಿದ್ದು ಔಪಚಾರಿಕ, ಶಿಕ್ಷಣ ಕ್ಷೇತ್ರ, ಹಾಗೂ ಇತರೆ ಉದ್ದೇಶಗಳಿಗೆ ಇವುಗಳಲ್ಲಿ ಮಾದರಿಯಾಗಿ ಒಂದು ಭಾಷೆ / ವಿಧವನ್ನು ಆಯ್ಕೆ ಮಾಡಿಕೊಳ್ಳುವುದು ಅವಶ್ಯಕವಾಗುತ್ತದೆ. ಇದರಿಂದ ಸಮಾಜಗಳ ನಡುವೆ ಅಸಮಾನತೆ, ಅಸಹಿಷ್ಣುತೆ ಇತ್ಯಾದಿಗಳು ಉಂಟಾಗುವ ಸಾಧ್ಯತೆಗಳಿವೆ. ನಮ್ಮ ದೇಶದಲ್ಲೇ ಹಿಂದಿಯನ್ನು ರಾಷ್ಟ್ರಭಾಷೆಯಾಗಿ ಮಾಡಿದ್ದರಿಂದ ಉಂಟಾದ ಸಮಸ್ಯೆಗಳನ್ನು ಗಮನಿಸಬಹುದು. ಒಂದು ಭಾಷೆಯ ಆಯ್ಕೆಯ ನಂತರ ಅದರಲ್ಲೆ ಒಂದು ಸೂಕ್ತವಾದ ವಿಧವನ್ನು ಆರಿಸಿಕೊಳ್ಳಬೇಕಾಗುತ್ತದೆ. ಅಥವಾ ಹೊಸವಿಧವನ್ನು ಪರಿಷ್ಕರಿಸಬೇಕಾಗುತ್ತದೆ. ಒಂದು ಸ್ಥಳೀಯ ಭಾಷೆಯನ್ನು ಆಯ್ಕೆ ಮಾಡಿದರೆ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಸಂಪರ್ಕ ಸಾಧನವಾಗುವ ಜವಾಬ್ದಾರಿಗಳನ್ನು ನಿಭಾಯಿಸಲು ಈ ವಿಧವನ್ನು ಅಭಿವೃದ್ದಿಗೊಳಿಸಬೇಕಾಗುತ್ತದೆ. ಒಂದು ವೇಳೆ ಆ ಭಾಷೆಯು ಅಲ್ಲಿಯವರೆಗೆ ಲಿಖಿತ ರೂಪವನ್ನು ಪಡೆಯದಿದ್ದರೆ ಇಲ್ಲವೇ ವಿಶಿಷ್ಟವಾದ ಲಿಖಿತರೂಪವನ್ನು ಹೊಂದಿದ್ದರೆ ಸೂಕ್ತವಾದ ವರ್ಣಮಾಲೆಯನ್ನು ರೂಪಿಸಬೇಕಾಗುತ್ತದೆ. ಕಾಗುಣಿತದ ಆಧಾರದ ಮೇಲೆ ಸ್ಥಳೀಯ ವ್ಯತ್ಯಾಸಗಳು ಬಹಳವಿದ್ದರೆ ಪ್ರಮಾಣವಾಗಿ ಉಪಯೋಗಿಸಲು ಪ್ರಾರಂಭದಲ್ಲಿ ಉಚ್ಚಾರಣೆ, ವ್ಯಾಕರಣ ಹಾಗೂ ಪದಸಮೂಹಗಳನ್ನು ಪರಿಷ್ಕರಿಸಬೇಕಾಗುತ್ತದೆ.

ನವೀಕರಣ : ಪದ ಸಮೂಹಗಳನ್ನು ನವೀಕರಿಸಬೇಕಾಗುತ್ತದೆ. ವಿದೇಶದ ಉಪಕರಣಗಳಿಗೆ ವಿಜ್ಞಾನ, ಔಷಧ ಅಥವಾ ಗ್ರಾಹಕ ಸಮಾಜ ಅವಕಾಶ ಕಲ್ಪಿಸಲು ಸಂಬಂಧಿಸಿದ ಪದ ಸಮೂಹಗಳನ್ನು ವ್ಯವಸ್ಥಿತವಾದ ರೀತಿಯಲ್ಲಿ ಭಾಷಾಂತರಿಸಲು ಕ್ರಮವನ್ನು ತೆಗೆದುಕೊಳ್ಳಬೇಕಾಗುತ್ತದೆ. ಹೊಸ ಪದಗಳನ್ನು ಸೇರಿಸಲು ಒಂದು ಸೂಕ್ತವಾದ ಪದ್ಧತಿಯನ್ನು ಕಲ್ಪಿಸಬೇಕಾಗುತ್ತದೆ. ಇಲ್ಲಿ ಅನ್ಯ ಭಾಷೆಗಳಿಂದ ಪದಗಳನ್ನು ಸ್ವೀಕರಿಸಬೇಕೆ ಇಲ್ಲಾ ಲಭ್ಯ ಆಕೃತಿಮಾ ಗಳಿಂದಲೇ ಸೃಷ್ಟಿಸಬೇಕೆ ಯಾವ ತರಹದ ಶೈಲಿಯನ್ನು ಉಪಯೋಗಿಸಬೇಕು, ಇತ್ಯಾದಿಗಳ ಬಗ್ಗೆ ನಿರ್ಣಯಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.

ಕಾರ್ಯಗತಗೊಳಿಸುವಿಕೆ : ಆರಿಸಿದ ಮಾನವನ್ನು ಸರ್ಕಾರಿ ಪ್ರಕಟಣೆಗಳಿಗೆ, ಸಾಮೂಹಿಕ ಮಾಧ್ಯಮಗಳಿಗೆ, ಶಿಕ್ಷಣಕ್ಷೇತ್ರಗಳಿಗೆ ಉಪಯೋಗಿಸುವುದರ ಮೂಲಕ ಅಧಿಕೃತವಾಗಿ ಕಾರ್ಯಗತಗೊಳಿಸಬೇಕಾಗುತ್ತದೆ. ಹೀಗೆ ಮಾಡಿದಾಗ ಆ ಸಮಾಜದವರು ಆ ವಿಧವನ್ನು ಶಿಕ್ಷಣದ ಪ್ರಗತಿ ಮತ್ತು ಶಿಕ್ಷಣದ ಮಟ್ಟಗಳೊಡನೆ ಸಂಬಂಧೀಕರಿಸಲಾಗುವುದರಿಂದ ಆ ವಿಧವನ್ನೇ ಉತ್ತಮ ವಾದುದೆಂದು ಪರಿಗಣಿಸುವುದು ಸಾಮಾನ್ಯವೆ. ಅದು ಬರವಣಿಗೆಯ ಶೈಲಿಗೆ ಹಾಗೂ ರಾಷ್ಟ್ರೀಯ ಸಾಂಸ್ಕೃತಿಕ ಅಥವಾ ಧಾರ್ಮಿಕ ಸನ್ನಿವೇಶಗಳಿಗೆ ಒಂದು ರಚನೆಯಲ್ಲಿ ಅಧಿಕೃತ ಸಂಸ್ಥೆ ಅಂಗೀಕಾರದೊಡನೆ ಈ ಮಾದರಿಯನ್ನೇ ಉಪಯೋಗಿಸಬೇಕೆಂದು ನಿರ್ಬಂಧಿಸಬಹುದು.

ಭಾಷಾ ಪಲ್ಲಟ : ದ್ವಿ(ಬಹು)ಭಾಷಿಕರು ಮಾತಾಡುವಾಗ ಭಾಷೆಯಿಂದ ಭಾಷೆಗೆ ಬದಲಾಯಿಸುವುದು ಸರ್ವೇಸಾಮಾನ್ಯ. ಇದನ್ನು ಭಾಷಾ ತಿರಗಣಿ ಎಂದು ಕರೆಯಲಾಗಿದೆ. ವಿಶಾಲದೃಷ್ಟಿಯಿಂದ ಹೇಳುವುದಾದರೆ ಭಾಷಾ ಪಲ್ಲಟವು ಎರಡು ಅಥವಾ ಹೆಚ್ಚಿನ ಭಾಷೆಗಳ / ಉಪಭಾಷೆಗಳ ಅಂಶಗಳನ್ನು ಅಕ್ಕಪಕ್ಕದಲ್ಲಿ ಇರುವಂತೆ ಮಾಡುವುದು. ಈ ಬದಲಾವಣೆಗಳಿಗೆ ಹಲವು ಕಾರಣಗಳನ್ನು ಕೊಡಬಹುದು. ಒಂದು ಭಾಷೆಯಲ್ಲೇ ವ್ಯಕ್ತಿಯು ಹೇಳಲು ಸೂಕ್ತಪದಗಳು ಇಲ್ಲದಿದ್ದರೆ ಆ ಮಿತಿಯನ್ನು ಮುಚ್ಚಿಕೊಳ್ಳಲು ಈ ಬದಲಾಯಿಸುವ ತಂತ್ರವನ್ನು ಬಳಸಬಹುದು. ಹೀಗೆ ಮಾಡುವುದರಿಂದ ಸ್ವಲ್ಪ ಹೆಚ್ಚು ಕಾಲ ಅನ್ಯಭಾಷೆಯಲ್ಲಿ ಮಾತಾಡಲು ಸಾಧ್ಯವಾಗಬಹುದು. ಇಂತಹ ಸನ್ನಿವೇಶವು ಉದಾ. ಕನ್ನಡ-ಆಂಗ್ಲಭಾಷೆಗಳ ನಡುವೆ ಕಾಣಬರುತ್ತದೆ. ಭಾಷಾಪಲ್ಲಟ ಹೆಚ್ಚಾಗಿ ವ್ಯಕ್ತಿಯು ಅಸ್ವಸ್ಥರಾಗಿದ್ದರೆ, ಕೋಪದಲ್ಲಿದ್ದರೆ ಅಥವಾ ಇಂತಹ ಅನೌಪಚಾರಿಕ ಸನ್ನಿವೇಶಗಳಲ್ಲಿ ಕಾಣಲು ಸಾಧ್ಯ. ಅಂದರೆ ಭಾಷೆಯ ಉಚ್ಚಾರಣೆಯ ಮೇಲೆ, ವ್ಯಾಕರಣದ ಮೇಲೆ ಹೆಚ್ಚು ಗಮನವಿಟ್ಟು ಮಾತಾಡಿದರೆ ಅದರಲ್ಲಿ ಭಾಷಾಪಲ್ಲಟವು ಅಷ್ಟಾಗಿ ಇರುವುದಿಲ್ಲ. ಇದು ಬಹುತೇಕ ಅನೌಪಚಾರಿಕ ಸನ್ನಿವೇಶಗಳಲ್ಲಿ ಕಾಣುವ ದೃಶ್ಯ. ವ್ಯಕ್ತಿಯು ತನ್ನ ಗುಂಪಿಗೆ ಹೆಚ್ಚು ಹತ್ತಿರದವನೆಂದು ಒಗ್ಗಟ್ಟನ್ನು ತೋರಿಸಲೂ ಸಹ ತನ್ನ ಅಪ್ರಧಾನ ಭಾಷೆಗೆ ಹಾರಬಹುದು. ವ್ಯಕ್ತಿಯ ಭಾಷಾಪಲ್ಲಟದಿಂದ ಕೇಳುಗನಿಗೆ ಆ ವ್ಯಕ್ತಿಯ ಪೂರ್ವೇತಿಹಾಸವು ತಕ್ಕಮಟ್ಟಿಗೆ ತಿಳಿಯುತ್ತದೆ. ಹಾಗೂ ಆ ಕೇಳುಗನು ಅಂತಹದೇ ಭಾಷೆಯನ್ನು ಉಪಯೋಗಿಸಿ ಪ್ರತಿಕ್ರಿಯಿಸಿದರೆ ತಕ್ಕ ಮಟ್ಟಿನ ಹೊಂದಾಣಿಕೆಯು ತಕ್ಷಣ ಅವರ ನಡುವೆ ಉಂಟಾಗುತ್ತದೆ. ಇದೇ ಪಲ್ಲಟದಿಂದ ಆ ಭಾಷೆಯನ್ನು ಆಡದವರನ್ನು ಆ ಗುಂಪಿನಿಂದ ಹೊರಗಿಡಲೂ ಉಪಯೋಗಿಸಬಹುದು.

ಭಾಷೆಗಳ ನಡುವಿನ ಪಲ್ಲಟವು ಕೇಳುಗನ ಬಗ್ಗೆ ನುಡಿಯುವವನ ದೃಷ್ಟಿಕೋನವನ್ನು ಸೂಚಿಸುತ್ತದೆ. ಇದು ಸ್ನೇಹ, ಅಸಹಿಷ್ಣುತೆ, ಮಾರ್ಮಿಕತೆ, ಹಾಸ್ಯಾಸ್ಪದವಾಗುವಂತಹ ಹೊರಗಿನವನೆಂಬ ಭಾವನೆಗಳನ್ನು ಕೊಡುವಂತೆ ಮಾಡಬಹುದು. ಏಕಭಾಷಿಕರು ಇಂತಹ ಭಾವನೆಗಳನ್ನು ಭಾಷೆಯ ಔಪಚಾರಿ ಕತೆಯ ಮಟ್ಟಗಳನ್ನು ಬದಲಾಯಿಸುವುದರಿಂದ ವ್ಯಕ್ತಪಡಿಸಬಹುದು. ಮತ್ತು ದ್ವಿಭಾಷಿಕರು ಭಾಷೆಗಳ ಪಲ್ಲಟದಿಂದ ಈ ಭಾವನೆಗಳನ್ನು ವ್ಯಕ್ತಪಡಿಸಬಹುದು. ಇಬ್ಬರು ದ್ವಿಭಾಷಿಕರು ಸಾಮಾನ್ಯವಾಗಿ ಸಂಭಾಷಣೆಗಳಿಗೆ ಒಂದು ಭಾಷೆಯನ್ನು ಉಪಯೋಗಿಸುತ್ತಿದ್ದು ಒಂದು ಸನ್ನಿವೇಶದಲ್ಲಿ ಬೇರೆ ಭಾಷೆಯನ್ನು ಉಪಯೋಗಿ ಸಿದರೆ ಅದು ವಿಶೇಷ ಅರ್ಥವನ್ನು ಧ್ವನಿಸುತ್ತದೆ. ಮೇಲೆ ವಿಸ್ತರಿಸಿದಂತೆ ಭಾಷಾ ಪಲ್ಲಟವು ನಡೆಯಬಹುದಾದ ಕೆಲವೇ ಆದ ಸಾಮಾಜಿಕ – ಭಾಷಿಕ ಪ್ರಕ್ರಿಯೆ ಗಳು, ಅತಿ ಕ್ಲಿಷ್ಟವಾದವು ಹಾಗೂ ಅತಿ ಸೂಕ್ಷ್ಮವಾದುದು. ಕಾರಣ, ಸಾಮಾನ್ಯ ವಾದ ಭಾಷಿಕರಿಗೆ ಎಷ್ಟರಮಟ್ಟಿನ ಪಲ್ಲಟವನ್ನು ಸಂಭಾಷಣೆ ಯಲ್ಲಿ ಮಾಡುತ್ತಾರೆಂಬ ಬಗ್ಗೆ ಅರಿವಿರುವುದಿಲ್ಲ. ಒಂದು ವೇಳೆ ಅವರನ್ನು ಮಧ್ಯ ದಲ್ಲೇ ತಡೆದರೆ ಅವರು ಯಾವ ಭಾಷೆಯನ್ನು ಉಪಯೋಗಿಸುತ್ತಿದ್ದರೆಂದು ಹೇಳುವುದು ಕಷ್ಟಕರವೆ.

ಏಕಭಾಷಿಕರು ಇಂತಹವರನ್ನು ಅಪಹಾಸ್ಯ ಮಾಡುವುದು, ಅವರ ಭಾಷಿಕ ಪಲ್ಲಟವನ್ನು ಅಣಕಿಸುವುದು ಸರ್ವೇಸಾಮಾನ್ಯ. ಬಹುತೇಕ ಇಂತಹ ಟೀಕೆಗಳಿಂದಲೇ ಇಂತಹ ಅನೇಕ ದ್ವಿಭಾಷಿಕರು ಭಾಷಾಪಲ್ಲಟದ ಬಗ್ಗೆ ಅಪರಿಚಿತರೊಡನೆ ಅಥವಾ ಔಪಚಾರಿಕ ಸನ್ನಿವೇಶಗಳಲ್ಲಿ ಮಾತಾಡುವಾಗ ಹೆಚ್ಚು ಎಚ್ಚರಿಕೆಯಿಂದಿರುತ್ತಾರೆ. ಆದರೆ ಅನೌಪಚಾರಿಕ ಸನ್ನಿವೇಶಗಳಲ್ಲಿ ಭಾಷಿಕ ಪಲ್ಲಟವು ಸಹಜವೂ ಶಕ್ತಿಯುತವೂ ದ್ವಿಭಾಷಿಕರ ಪರಸ್ಪರ ವಿಚಾರ ವಿನಿಮಯದಲ್ಲಿನ ತಂತ್ರವೂ ಆಗಿರುತ್ತದೆ. ಇದು ಭಾಷಾಶಾಸ್ತ್ರಜ್ಞರಿಗೆ ವಿಶ್ಲೇಷಿಸಲು ಕ್ಲಿಷ್ಟವಾದ ಸವಾಲುಗಳನ್ನು ಒಡ್ಡುತ್ತದೆ.

ಭಾಷಾ ಪಲ್ಲಟದಲ್ಲಿ ಎರಡು ವಿಧಗಳಿವೆ

ಅ. ದ್ವಿಭಾಷಿಕ ಹಾಗೂ ಸನ್ನಿವೇಶಾತ್ಮಕ ಭಾಷಾ ಪಲ್ಲಟವನ್ನು ದ್ವಿಭಾಷಿ ಕತೆಯ ಅವಶ್ಯಕ ಭಾಗವೆಂದು ಪರಿಗಣಿಸುತ್ತಾರೆ. ಮತ್ತು ವ್ಯಕ್ತಿಯ ಸಂಪರ್ಕಾತ್ಮಕ ಶಕ್ತಿ ಎಂದು ಪರಿಗಣಿಸಿ ವ್ಯಕ್ತಿಯಲ್ಲಿ ಇದು ಅವಶ್ಯವಾಗಿ ಇರುವಂತಹದೆಂದು ಭಾವಿಸುತ್ತಾರೆ.

ಆ. ಆದರೆ ಸಂಭಾಷಣಾತ್ಮಕ ಪಲ್ಲಟವನ್ನು ಸಾಮಾನ್ಯವಾಗಿ ಕೀಳುಮಟ್ಟ ದೆಂದು ಭಾವಿಸುತ್ತಾರೆ.

ಈ ಎರಡರ ನಡುವೆ ಮುಖ್ಯ ಭಾಷಿಕ ಅಂತರವಿದೆ. ಸನ್ನಿವೇಶಾತ್ಮಕ ಪಲ್ಲಟದಲ್ಲಿ ದೀರ್ಘ ವಾಕ್ಯಗಳ ಉತ್ಪತ್ತಿ ಹಾಗೂ ಗ್ರಹಿಕೆ ಸಾಧ್ಯವಾಗ ಬೇಕಾದರೆ ಅವರಲ್ಲಿ ಅವಶ್ಯಕವಾಗಿ ಒಳ್ಳೆಯ ಭಾಷಾಜ್ಞಾನವಿರಬೇಕೆಂಬುದು ಅರ್ಥವಾಗುತ್ತದೆ. ಆದರೆ ಸಂಭಾಷಣಾತ್ಮಕ ಪಲ್ಲಟದಲ್ಲಿ ವಾಕ್ಯದೊಳಗೇ ಭಾಷಾಪಲ್ಲಟ ನಡೆಯುವುದರಿಂದ ಮಾತಾಡುವವರಲ್ಲಿ ಯಾವುದೇ ಭಾಷೆಯಲ್ಲಿ ನಿಪುಣತೆಯಿಲ್ಲವೆಂಬ ಭಾವನೆಯನ್ನು ಕೊಡುತ್ತದೆ. ಆದಕಾರಣ ಹೇಳಬೇಕೆಂಬು ದನ್ನು ಒಂದೇ ಭಾಷೆಯಲ್ಲಿ ಹೇಳಲು ಶಕ್ತರಲ್ಲವೆಂಬ ಭಾವನೆಯನ್ನು ಕೊಡುತ್ತದೆ.

ಒಟ್ಟಿನಲ್ಲಿ ಹೇಳುವುದಾದರೆ ಖ್ಯಾತ ಸಾಮಾಜಿಕ ಭಾಷಾಶಾಸ್ತ್ರಜ್ಞನಾದ ಗುಂಪರ್ಜ್ ಹೇಳುವಂತೆ, ಭಾಷಾಪಲ್ಲಟವು ಸಂಪರ್ಕಾತ್ಮಕ ಕೌಶಲವಾಗಿದೆ. ಇದನ್ನು ಬಳಸುವವರು ಈ ಶಾಬ್ದಿಕ ತಂತ್ರವನ್ನು, ನಿಪುಣ ಬರೆಹಗಾರರು ಒಂದು ಕಥೆಯ ಸಂದರ್ಭಕ್ಕೆ ಅನುಗುಣವಾಗಿ ಶೈಲಿಗಳನ್ನು ಬದಲಾಯಿಸುವ  ಹಾಗೆ ಉಪಯೋಗಿಸುವರು.