ಸಂವಿಧಾನದ ನಾಲ್ಕನೇ ಬಹುಮುಖ್ಯ ಅಂಗ ಎಂದು ಬಣ್ಣಿಸುವ ಪತ್ರಿಕಾ ಸ್ವಾತಂತ್ರ್ಯ ಸಮಾಜಮುಖಿಯಾಗಿ ಕೆಲಸ ಮಾಡಬೇಕು, ಅದು ಅಭಿವೃದ್ದಿಯ ವಾಹಿನಿಯಾಗಬೇಕು, ಶೋಷಣೆಯ ವಿರುದ್ಧ ಧ್ವನಿಯಾಗಬೇಕೆಂಬ ಕಲ್ಪನೆ ಸಾಕಾರಗೊಳ್ಳವ ನಿಟ್ಟಿನಲ್ಲಿ ಬಾಗಲಕೋಟೆ ಪತ್ರಿಕೋದ್ಯಮ ಮುಂಚೂಣಿಯಲ್ಲಿ ನಿಲ್ಲುತ್ತದೆ. ಮುಂಬೈ – ಕರ್ನಾಟಕದ ಭಾಗವಾಗಿ ಅವಿಭಕ್ತ ವಿಜಾಪೂರ ಜಿಲ್ಲೆಯ ಅಂಗವಾಗಿ ೧೯೯೭ರವರೆಗೆ ಬಾಗಲಕೋಟೆ ಇದ್ದ, ಈಗ ಸ್ವತಂತ್ರವಾಗಿ ಜಿಲ್ಲೆಯಾಗಿ ರೂಪುಗೊಂಡಿದೆ.

ಈ ಜಿಲ್ಲೆಯ ಪತ್ರಿಕೋದ್ಯಮದ ಅಧ್ಯಯನವೆಂದರೆ ಸಮಗ್ರ ಕನ್ನಡ ಪತ್ರಿಕೋದ್ಯಮವನ್ನೇ ಅಭ್ಯಸಿಸಿದಂತೆ. ವಸ್ತು ಸಂಗತಿ ಪವಿತ್ರ, ಟೀಕೆ ಸ್ವತಂತ್ರ ಇದು ಸಿ. ಪಿ. ಸ್ಕ್ವಾಟ್ ಪತ್ರಿಕೋದ್ಯಮದ ಬಗ್ಗೆ ಹೇಳಿದ ಮಾತು. ಬಾಗಲಕೋಟೆ ಜಿಲ್ಲೆ ಇದನ್ನು ಪ್ರತಿನಿಧಿಸಿದೆ. ೧೯೨೮ರ ಜುಲೈ ೩೧ರಂದು ಬಾಗಲಕೋಟೆಯಲ್ಲಿ ಅಖಿಲ ಕರ್ನಾಟಕ ವೃತ್ತ ಪತ್ರಿಕಾಕರ್ತರ ಪ್ರಥಮ ಸಮ್ಮೇಳನ ನಡೆದಿರುವುದು ಹಾಗೂ ದಿ. ಡಿ. ವ್ಹಿ. ಗುಂಡಪ್ಪನವರು ಸಮ್ಮೇಳನದ ಅಧ್ಯಕ್ಷರಾಗಿರುವುದು ಈ ಜಿಲ್ಲೆಯ ಪತ್ರಿಕೋದ್ಯಮದ ಹರವು ಎಷ್ಟು ವಿಸ್ತಾರವಾಗಿದೆ ಎಂಬುದನ್ನು ಸಾಬೀತುಪಡಿಸುತ್ತದೆ. ಸಮ್ಮೇಳನದ ಅಧ್ಯಕ್ಷರಾಗಿ ಅವರು ಮಾಡಿದ ಭಾಷಣ ಪತ್ರಿಕೋದ್ಯಮದ ಚರಿತ್ರೆ, ಕರ್ತವ್ಯ ಹಾಗೂ ಸ್ವಾತಂತ್ರ್ಯದ ವಿಶ್ಲೇಷಣೆಯಾಗಿ ಇಂದು ಪತ್ರಿಕೋದ್ಯಮದ ಮುಂದೆ ನಿಂತಿದೆ. ಅದು ಈ ಕ್ಷೇತ್ರದ ಭಗವದ್ಗೀತೆ ಎನ್ನಬಹುದು.

ಪತ್ರಿಕೆ ಎಂಬುದು ಪವಿತ್ರ ವಸ್ತುವೇ ನಿಜ, ಅದು ದೊಡ್ಡದೇ ನಿಜ. ಆದರೆ ಅದಕ್ಕಿಂತಲೂ ಪವಿತ್ರವೂ ದೊಡ್ಡದು, ಅದು ದೇಶ ಅಥವಾ ಪ್ರಜಾ ಸಮುದಾಯ, ಆ ಪ್ರಜೆಯ ಹಿತಸಾಧನೆಗೆ ಪತ್ರಿಕೆ ಒಂದು ಆಯುಧ ಮಾತ್ರವಾಗಿದೆ. ಅದಕ್ಕಾಗಿ ಮಂತ್ರಿಗೆ ಒಬ್ಬ ಆಪ್ತ ಸಹಾಯಕ ಹೇಗೆ ಇರುತ್ತಾನೋ ಹಾಗೆ ಪತ್ರಕರ್ತ ಪ್ರಜೆಯ ಆಪ್ತ ಸಹಾಯಕ, ಆತ ಪ್ರಜೆಯನ್ನೊಳಗೊಂಡ ಸಮಾಜದ ಅಭಿವೃದ್ಧಯ ಚಿಂತಕ. ಸಾಮಾನ್ಯ ಪ್ರಜೆಗಿರುವುದಕ್ಕಿಂತ ಹೆಚ್ಚಿನ ಸ್ವಾತಂತ್ರ್ಯ ಬೇಕಾಗಿಲ್ಲ. ಅದರೆ, ಅದಕ್ಕಿಂತ ಕಡಿಮೆಯಾಗಬಾರದು. ಒಂದೇ ಮಾತಿನಲ್ಲಿ ಹೇಳುವುದಾದರೆ ಪತ್ರಿಕೆಯೇ ಪ್ರಜೆಯ ಮಂತ್ರಿ.

ಬಾಗಲಕೋಟೆ ಜಿಲ್ಲೆಯ ಪತ್ರಿಕೋದ್ಯಮವನ್ನು ನಾವು ಆಳವಾಗಿ ಅಧ್ಯಯನ ಮಾಡಿದರೆ ಈ ಮಾತು ವೇದ್ಯವಾಗುತ್ತದೆ. ಸ್ವಾತಂತ್ರ್ಯ ಪೂರ್ವದಲ್ಲಿ ಸ್ವಾತಂತ್ರ್ಯ ಸಂಗ್ರಾಮ, ನಂತರದಲ್ಲಿ ಕನ್ನಡದ ಏಕೀಕರಣ. ಸದ್ಯ ಅಭಿವೃದ್ದಿ ಮಾಧ್ಯಮವಾಗಿ ಜಿಲ್ಲೆಯ ಪತ್ರಿಕೋದ್ಯಮ ಕೆಲಸ ಮಾಡುತ್ತಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ಮಾಧ್ಯಮದ ಪಟ್ಟಿಯನ್ನು ಹೊರತುಪಡಿಸಿದರೆ ಇನ್ನೂ ೫ ದಿನ ಪತ್ರಿಕೆಗಳು ಬಾಗಲಕೋಟೆ ನಗರದಿಂದ, ಜಮಖಂಡಿ ಹಾಗೂ ಇಲಕಲ್ಲದಿಂದ ತಲಾ ಒಂದು ಪತ್ರಿಕೆ ಪ್ರಕಟವಾಗುತ್ತಿದೆ. ೫೦ ವಾರ ಪತ್ರಿಕೆಗಳು, ೫ ಪಾಕ್ಷಿಕ, ಒಂದು ಮಾಸಿಕ ಪತ್ರಿಕೆ ಜನರನ್ನು ತಲುಪುತ್ತಿದೆ. ಪತ್ರಿಕಾ ಸ್ವಾತಂತ್ರ್ಯಕ್ಕೆ ಮುಕುಟಪ್ರಾಯವಾಗಿ ಇದು ಕೆಲಸ ಮಾಡಿರುವುದಕ್ಕೆ ಈ ಜಿಲ್ಲೆಯಲ್ಲಿ ಸಮೃದ್ಧವಾಗಿ ಪತ್ರಿಕೋದ್ಯಮ ಪವಿತ್ರವಾಗಿ ಬೆಳೆದು ನಿಂತಿರುವುದೇ ಸಾಕ್ಷಿಯಾಗಿದೆ.

ಪ್ರಾತಃಸ್ಮರಣೀಯರು

ಬಾಗಲಕೋಟೆ ಜಿಲ್ಲೆ ಸ್ಥಾನಮಾನ ದೊರಕಿದ್ದು ೧೯೯೭ರಲ್ಲಿ. ಇದನ್ನೇ ಮಾನದಂಡವಾಗಿ ಇಟ್ಟುಕೊಂಡು ಪತ್ರಿಕೋದ್ಯಮದ ಅಧ್ಯಯನ ಮಾಡಿದರೆ ಜಿಲ್ಲೆಯ ಶ್ರೀಮಂತಿಕೆ ಪರಿಚಯವಾಗುವುದಿಲ್ಲ. ವಿಜಾಪೂರ ಜಿಲ್ಲೆಯಲ್ಲಿ ಸೇರಿಕೊಂಡ ಬಾಗಲಕೋಟೆಯನ್ನು ಅಂದಿನಿಂದಲೇ ಅರಿತರೆ ಹೆಚ್ಚು ವಾಸ್ತವಿಕವಾಗುತ್ತದೆ. ಹೀಗಾಗಿ ೧೮೬೯ ರಿಂದ ಈ ಭಾಗದ ಪತ್ರಿಕೋದ್ಯಮವನ್ನು ಅರಿಯಬೇಕಾಗಿದೆ.

೧೮೪೮ರಲ್ಲಿ ಬಾಗಲಕೋಟೆಯಿಂದ ೨೧ ಕಿ. ಮೀ. ದೂರದ ಕಲಾದಗಿ ಬಿಜಾಪೂರ ಜಿಲ್ಲೆಗಿಂತಲೂ ಮೊದಲು ಜಿಲ್ಲಾ ಸ್ಥಾನಮಾನ ಹೊಂದಿದ್ದ ಪ್ರದೇಶವಾಗಿತ್ತು. ಬ್ರಿಟಿಷರ ಆಡಳಿತದಲ್ಲಿ ಸತಾರಾ ಕಲೆಕ್ಟರ್ ಜಿಲ್ಲೆಯನ್ನು ಪ್ರತ್ಯೇಕಿಸಿ ಈ ಗ್ರಾಮಕ್ಕೆ ಜಿಲ್ಲಾ ಸ್ಥಾನಮಾನ ದೊರಕಿಸಿಕೊಟ್ಟಿದ್ದರು. ೧೮೬೯ರಲ್ಲಿ ಈ ಕಲಾದಗಿಯಿಂದ ಹಿತೇಚ್ಚು ಎಂಬ ಮರಾಠ ಪತ್ರಿಕೆ ಪ್ರಕಟವಾಗುತ್ತಿತ್ತು. ಈ ಪತ್ರಿಕೆಯ ಸಂಪಾದಕರಾಗಿದ್ದವರು ಫಣ್ಸಲ್ ಕರ ಎಂಬುವರು. ಕೇವಲ ಜಾಹೀರಾತಿಗೆ ಮೀಸಲಾಗಿದ್ದ ಈ ವಾರ ಪತ್ರಿಕೆಯ ಬಗ್ಗೆ ಖಚಿತವಾದ ಮಾಹಿತಿಗಳು ಸಿಕ್ಕಿಲ್ಲ. ಆದರೆ ಗೆಜೆಟಿಯರ್ ಇದನ್ನು ದೃಢಪಡಿಸಿದೆ. ಆಗಿನ ಕಾಲದಲ್ಲಿ ೮೩ ಪ್ರತಿಗಳನ್ನು ಈ ಪತ್ರಿಕೆ ಮಾರಾಟ ಮಾಡುತ್ತಿತ್ತು. ಇದೇ ಕಲಾದಗಿಯಿಂದ ಬ್ರಿಟಿಷರು ಹೊರಡಿಸುತ್ತಿದ್ದ ಗೆಜೆಟಿಯರ್ ಮುಂದಿನ ದಿನಗಳಲ್ಲಿ ಕರ್ನಾಟಕ ಸರಕಾರದ ರಾಜ್ಯ ಪತ್ರವಾಗಿ ಮೂಡಿ ಬಂದಿತು ಎಂಬುದು ಗಮನಾರ್ಹ ಸಂಗತಿ.

ಮುಂಬೈ – ಕರ್ನಾಟಕ ಪ್ರದೇಶದ ಈ ಭಾಗದಲ್ಲಿ ಮರಾಠಿ ಪ್ರಭಾವ ಹೆಚ್ಚಾಗಿದ್ದರಿಂದಲೇ ಹಿತೇಚ್ಚು ಪತ್ರಿಕೆ ಮುದ್ರಣ ಸಾಧ್ಯವಾಯಿತು. ಆದರೆ ಇದೇ ಭಾವನೆ ಕನ್ನಡಕ್ಕೆ ಅಗ್ರಸ್ಥಾನ ದೊರಕಿಸಿಕೊಡಬೇಕೆಂಬ ಸಂಕಲ್ಪ ಮೂಡಲು ಸಹ ಇಲ್ಲಿನ ಕನ್ನಡಗರಿಗೆ ಪ್ರೇರಣೆಯಾಯಿತು. ಮಂಗಳವೇಡೆ ಶ್ರೀನಿವಾಸರಾಯರು, ಹ. ರಾ. ಪುರೋಹಿತರು, ಯಯರಾವ್ ದೇಶಪಾಂಡೆ ಯಲಗುರ್ದ. ವಾಮನ್ ರಾವ್ ಧಾರವಾಡಕರ, ಶ್ರೀನಿವಾಸ ರಾವ್ ಕೌಜಲಗಿ, ಬುರ್ಲಿ, ಶ್ರೀನಿವಾಚಾರ್ಯರು, ಜೋರಾಪೂರ ಗುರುರಾಯರು, ರಾವ್ ಬಹಾದ್ದೂರ ಇಂತಹ ಪವಿತ್ರ ಮನಸ್ಸುಗಳ ಹೋರಾಟದ ಫಲವಾಗಿ ಕನ್ನಡಕ್ಕೆ ನ್ಯಾಯಬದ್ಧ ಸ್ಥಾನಮಾನ ದೊರಕಿಸಿಕೊಡಲು ಸಾಧ್ಯವಾಯಿತು. ಇವರು ಮಾಧ್ಯಮವನ್ನೇ ಪ್ರಮುಖವಾಗಿಟ್ಟುಕೊಂಡವರು. ಇಂತಹ ಮನಸ್ಸುಗಳಿಗೆ ಪಲ್ಲೇದ ಬಸಪ್ಪನವರು, ಫ. ಗು. ಹಳಕಟ್ಟಿರವರು, ಹರ್ಡೇಕರ ಮಂಜಪ್ಪನವರು ಪ್ರೇರಕ ಶಕ್ತಿಯಾದರು ಎಂಬುದು ಇತಿಹಾಸ.

ಪತ್ರಿಕೋದ್ಯಮ ವಿಕಾಸದ ಹಾದಿ ತುಳಿದಾಗ ಅದರ ಪ್ರಭಾವ ಈ ಜಿಲ್ಲೆಗೂ ಆಯಿತು. ಸಂಯುಕ್ತ ಕರ್ನಾಟಕ, ಕನ್ನಡಪ್ರಭ, ಪ್ರಜಾವಾಣಿ, ಉದಯವಾಣಿಯಂತಹ ಪತ್ರಿಕೆಗಳು ಈ ಪ್ರದೇಶಕ್ಕೆ ಧ್ವನಿಯಾದರು. ಈ ಬದಲಾವಣೆಯ ದಿನಗಳಲ್ಲಿ ಗೋವಿಂದರಾವ್ ಪರ್ವತೀಕರ, ಬಿ. ಜಿ. ಕೆರೂರ, ಕೆ. ಡಿ. ಹುದ್ದಾರ, ಶರಣಬಸವರಾಜ ಜಿಗಜಿನ್ನಿ, ಹುಚ್ಚಪ್ಪ ಕತ್ತಿ, ಬಂಡರಗಲ್ಲ, ಜಮಖಂಡಿಯಲ್ಲಿ ಬಾಬುರೆಡ್ಡಿ ತುಂಗಳ ಎಂ. ಸಿ. ಗೊಂದಿ ಮತ್ತಿತರ ಶ್ರಮವನ್ನು ನೆನಪಿಸಬೇಕಾಗುತ್ತದೆ.

ಕನ್ನಡದ ಬೇರು

ಬಾಗಲಕೋಟೆ ಜಿಲ್ಲೆ ಕನ್ನಡ ಪತ್ರಿಕೋದ್ಯಮದ ಬೇರು ಎಂದರೆ ಹೇಳಿದರೆ ಅತಿಶಯೋಕ್ತಿಯಲ್ಲ. ಈ ಜಿಲ್ಲೆಯ ಪತ್ರಿಕೋದ್ಯಮದ ಅಧ್ಯಯನ ಸಮಗ್ರ ಕರ್ನಾಟಕದ ಪತ್ರಿಕೋದ್ಯಮವನ್ನು ಅಭ್ಯಸಿಸಿದಂತೆ. ಅಷ್ಟೊಂದು ಆಳವಾಗಿ ಬೇರೂರಿದೆ, ಹೆಮ್ಮರವಾಗಿ ಬೆಳೆದಿದೆ. ಪತ್ರಿಕೋದ್ಯಮದ ಅಂದಾಜು ೧೫೦ ವರ್ಷಗಳ ಸಾಧನೆ, ಗೌರವ, ಇತಿಹಾಸದ ಪುಟದಲ್ಲಿ ದಾಖಲಾಗುವ ಅದ್ಬುತ ವಿಕ್ರಮ.

ಫ. ಗು. ಹಳಕಟ್ಟಿ, ಹರ್ಡೇಕರ ಮಂಜಪ್ಪ, ಮೊಹರೆ ಹಣಮಂತರಾಯರು, ಮಂಗಳ ವೇಡೆ ಶ್ರೀನಿವಾಸರಾಯರು, ಹ. ರಾ. ಪುರೋಹಿತರು, ವ್ಹಿ. ಬಿ. ನಾಯಕರು ಹೀಗೆ ಹಲವಾರು ಪತ್ರಿಕೋದ್ಯಮಕ್ಕಾಗಿ ಜೀವತೇಯ್ದು ಕರ್ನಾಟಕ ವೈಭವ, ಕನ್ನಡಿಗ, ನವ ಕರ್ನಾಟಕ, ಹಿತೇಚ್ಚು, ಸಂದರ್ಶನ, ಉದಯ ಪತ್ರಿಕೆಗಳು ನಾಡಿನ ಬೆಳಕಾಗಿ ಕೆಲಸ ಮಾಡಿದವು, ಕೆಲವು ಆಳಿದವು, ಕೆಲವು ಬೆಳೆದವು.

ಈ ಯಾವ ಪತ್ರಿಕೆಗಳೂ ಯಾರನ್ನೂ ಓಲೈಸುವ ಸುದ್ದಿ ಬರೆದು ಸಂತೃಪ್ತಿಪಡಿಸುವ, ಜಾಹಿರಾತು ಗಿಟ್ಟಿಸುವ ಕೆಲಸ ಮಾಡಲಿಲ್ಲ. ಬದಲಾಗಿ ದೇಶ ಬ್ರಿಟಿಷರ ದಾಸ್ಯದಲ್ಲಿ ನರಳುತ್ತಿದ್ದಾಗ ಬಿಡುಗಡೆ ಹೋರಾಟದಲ್ಲಿ ಕನ್ನಡಿಗರಲ್ಲಿ ಸ್ಪೂರ್ತಿ ತುಂಬಿ ಪ್ರಚೋದಿಸಿದ್ದು ದೊಡ್ಡ ಸಾಧನೆ, ಇದಕ್ಕಾಗಿ ಈ ಮಹನೀಯರಿಗೆ ಪ್ರಶಸ್ತಿ ಬರಲಿಲ್ಲ, ಜೈಲುವಾಸ ಸಿಕ್ಕಿತು. ಬ್ರಿಟಿಷರ ಅಧಿಕಾರದ ದರ್ಪ, ಸೆನ್ಸಾರ್ ಭೀತಿಯ ಮಧ್ಯೆಯೂ ಹೊರಬಂದ ಪತ್ರಿಕೆಗಳು ಸ್ವಾತಂತ್ರ್ಯದ ಸಂಗ್ರಾಮದಲ್ಲಿ ಸೇವೆ ಸಲ್ಲಿಸಿದ್ದವು.

ಕಾರ್ಯಾಲಯದ ಮೇಲೆ ದಾಳಿ, ಬಂಧನದ ಬೆದರಿಕೆಗೆ ಸವಾಲು ಹಾಕಿ ಪತ್ರಿಕೆಗಳನ್ನು ನಡೆಸಿದರು, ಭೂಗತರಾಗಿಯೂ ಪತ್ರಿಕೆಗಳನ್ನು ಪ್ರಕಟಿಸಿದರು. ಪರಿಣಾಮ ಮಹಾತ್ಮ ಗಾಂಧೀಜಿ ಅವರ ಸ್ವಾತಂತ್ರ್ಯ ಸಂಗ್ರಾಮದ ಸಂದೇಶಗಳು ಮನೆ ಮನೆ ತಲುಪಿದವು. ಸ್ವಾತಂತ್ರ್ಯದ ಕಿಡಿ ಹಬ್ಬಿತು, ಯುವಕರು, ವೃದ್ಧರು ಚಳುವಳಿಗೆ ಧುಮುಕಿದರು, ಮಹಿಳೆಯರೂ ಹಿಂದೆ ಬೀಳಲಿಲ್ಲ. ಸೂರ್ಯ ಮುಳುಗದ ಸಾಮ್ರಾಜ್ಯಕ್ಕೆ ಸವಾಲು ಹಾಕಿದರು. ದೇಶ ಬಿಟ್ಟು ಹೋಗಲು ಕಾರಣರಾದರು. ಈ ಸಾಧನೆಯಲ್ಲಿ ಬಾಗಲಕೋಟೆ ಪತ್ರಿಕೋದ್ಯಮ ಇಡೀ ಪ್ರಾಂತಕ್ಕೆ ಮಾರ್ಗದರ್ಶಿಯಾಯಿತು. ಆ ಪ್ರಾತಃಸ್ಮರಣೀಯರ ಶ್ರಮ, ಅವರ ಲೇಖನಿಯ ಘರ್ಜನೆ, ಅವರಿಂದ ಹೊರಬಂದ ಪತ್ರಿಕೆಗಳ ಉಗಮ, ಬೆಳವಣಿಗೆ ಎಲ್ಲವೂ ರೋಚಕ, ಎಂದಿಗೂ ಪ್ರೇರಣೀಯ.

ಹ. ರಾ. ಪುರೋಹಿತರು, ಮಂಗಳವೇಡೆ ಶ್ರೀನಿವಾಸರಾಯರು, ಪತ್ರಿಕೋದ್ಯಮವನ್ನು ಜಿಲ್ಲೆಯಲ್ಲಿ ಪವಿತ್ರವಾಗಿ ಬೆಳೆಸಿದ್ದರಿಂದಲೇ ಕನ್ನಡ ಪತ್ರಿಕೋದ್ಯಮದ ಬೇರು ಆಗಿ ಭದ್ರವಾಗಿ ಉಳಿದಿದೆ ಎಂದು ಹೇಳಬಹುದು. ಬದುಕೂ – ಉಸಿರೂ ಪತ್ರಿಕೋದ್ಯಮ ಆಯಿತು. ಅವರ ತತ್ವ ಸಿದ್ಧಾಂತಗಳು, ನಡೆದು ಬಂದ ಪತ್ರಿಕೋದ್ಯಮದ ಊರುಗೋಲು, ಭಗವದ್ಗೀತೆ, ಜಯರಾವ ದೇಶಪಾಂಡೆ, ಯಲಗುರ್ದ ವಾಮನರಾವ, ಶ್ರೀನಿವಾಸರಾವ ಕೌಜಲಗಿ, ರಂಗರಾವ, ಬೆಳಗೋಳ,ಸಂಯುಕ್ತ ಕರ್ನಾಟಕದ ಈಗಿನ ಸಂಪಾದಕ ನರಸಿಂಹ ಜೋಶಿ ಅವರ ಹೆಸರು ಪ್ರಸ್ತುತ.

೧೮೪೦ರಲ್ಲಿ ಕಲಾದಗಿಯಿಂದ ಬ್ರಿಟಿಷರು ಪ್ರಕಟಿಸಿದ ಕಲಾದಗಿ ಗೆಜೆಟಿಯರ್ ಅಥವಾ ಕಲಾದಗಿ ರಾಜ್ಯಪತ್ರ, ಅಲ್ಲಿಂದಲೇ ಹೊರಬಂದ ಫಣಸಲಕರ ಅವರ ಹಿತೇಚ್ಚು, ಚಂದ್ರಿಕಾ, ಈ ಪತ್ರಿಕೆಗಳ ಸಾಧನೆಯ ಪರಿಣಾಮ ಬಾಗಲಕೋಟ ಜಿಲ್ಲೆಯಲ್ಲಿ ಸುಮಾರು ೨೦ ದಿನಪತ್ರಿಕೆಗಳು, ೫ ನೂರೂಕ್ಕೂ ಹೆಚ್ಚು ವಾರಪತ್ರಿಕೆಗಳು ಹೊರಬರುತ್ತಿವೆ. ಇವು ಕೊಡ ಸಾಧನೆಯ ಹಾದಿಯಲ್ಲಿದ್ದು ಕೆಲ ಪತ್ರಿಕೆಗಳು ಕಾಲು ಶತಮಾನದ ಗಡಿ ಮುಟ್ಟುತ್ತಿವೆ.

ಮುಂಬೈ – ಕರ್ನಾಟಕದ ಒಂದು ಮುಖ್ಯ ಭಾಗವಾಗಿದ್ದ ಬಾಗಲಕೋಟೆ ಜಿಲ್ಲೆ ಮರಾಠಿಮಯವಾಗಿ, ಸಂಪೂರ್ಣ ಅನ್ಯಭಾಷಿಕರ ಹಿಡಿತದಲ್ಲಿತ್ತು. ಈ ಉಸಿರುಗಟ್ಟುವ ವಾತಾವರಣವೇ ಕನ್ನಡತನದ ಅವಶ್ಯಕತೆಯ ಕೆಚ್ಚು ಮೂಡಿಸಲು ಕಾರಣವಾಗಿರಬಹುದು.

ಕನ್ನಡ ಪ್ರತ್ರಿಕೋದ್ಯಮದ ಮೊಟ್ಟಮೊದಲ ಪತ್ರಿಕೆ ಮಂಗಳೂರು ಸಮಾಚಾರ ೧೮೪೩ರಲ್ಲಿ ಪ್ರಾರಂಭವಾಯಿತಾದರೂ ಕನ್ನಡದ ಪತ್ರಿಕೋದ್ಯಮ ವ್ಯವಸ್ಥಿತವಾಗಿ ಬೆಳೆದದ್ದು ಜಿಲ್ಲೆಯಲ್ಲಿಯೇ ಮುದ್ರಣ, ಓದುಗರು, ಪ್ರಸಾರದ ಕೊರತೆ ಇವುಗಳಿಗೂ ಮಿಗಿಲಾಗಿ ಬ್ರಿಟೀಷರ ದರ್ಪದ ಮಧ್ಯೆಯೂ ಈ ಜಿಲ್ಲೆಯಲ್ಲಿ ಅನೇಕ ಪತ್ರಿಕೆಗಳು ಹೊರಬಂದು ಸ್ವಾತಂತ್ರ್ಯ ಸಂಗ್ರಾಮದ ಕಹಳೆ ಊದಿ ಜಾಗೃತಿ ಮೂಡಿಸಿದವು. ಹೀಗಾಗಿ ಈ ಜಿಲ್ಲೆಯ ಪತ್ರಿಕೋದ್ಯಮದ ಪ್ರಸ್ತಾಪ, ದಾಖಲೆ ಅಷ್ಟೊಂದು ಸರಳವೂ ಇಲ್ಲ.

ಕೆಲ ಪತ್ರಿಕೆಗಳ ಇತಿಹಾಸ, ದಾಖಲೆಗಳು ಸಿಗುವಂತಿದ್ದರೆ ಇನ್ನು ಕೆಲವುದರ ಹೆಸರು, ಸಂಪಾದಕರ ವಿವರ ಲಭ್ಯವಾಗಿದ್ದರೂ ಅವುಗಳ ಇತಿಹಾಸ, ಪತ್ರಿಕೆಗಳನ್ನು ಹುಡುಕುವುದು ಈವರೆಗೂ ಸಾಧ್ಯವಾಗಿಲ್ಲ. ಹೀಗಾಗಿ ಕೆಲವು ಪತ್ರಿಕೆಗಳನ್ನು ಹೆಸರಿಸಲು ಮಾತ್ರ ಸಾಧ್ಯವಾಗಿದೆ. ಹಲವು ಪತ್ರಿಕೆಗಳ ಇತಿಹಾಸ ರೋಚಕ, ಅಭಿಮಾನ, ಹೆಮ್ಮೆ ಮೂಡಿಸುವ ಪ್ರಯತ್ನ ಇಲ್ಲಿದೆ. ವಾರಪತ್ರಿಕೆಗಳ ಸಾಹಸವೇ ದೊಡ್ಡದಾಗಿದ್ದು ಅದರಿಂದಲೇ ಆರಂಭ.

ಹಿತೇಚ್ಚು – ಮೊದಲ ಪತ್ರಿಕೆ

೧೮೪೦ರಲ್ಲಿ ಸತಾರ ಕಲಕ್ಟರೇಟರನಿಂದ ಪ್ರತ್ಯೇಕವಾಗಿ ರಚನೆಯಾಗಿದ್ದ ಕಲಾದಗಿ ಜಿಲ್ಲೆ. ಮೊದಲಿನ ಜಿಲ್ಲಾ ಕೇಂದ್ರ ಬ್ರಿಟೀಷರ ಕೇಂದ್ರ ಸ್ಥಾನವಾಗಿತ್ತು. ಈ ಕಲಾದಗಿಯಿಂದ ಹಿತೇಚ್ಚು ಮರಾಠಿ ಪತ್ರಿಕೆ ಹೊರಡುತ್ತಿತ್ತು ಎಂದು ಗೆಜೆಟಿಯರ್‌ನಲ್ಲಿ ಸ್ಪಷ್ಟ ಪ್ರಸ್ತಾಪ ಇದೆ. ೧೮೬೯ ರಲ್ಲಿ ಪ್ರಕಟಿಸಿ ಆರಂಭಿಸಿದ್ದ ಈ ವಾರ ಪತ್ರಿಕೆ ಧಾರ್ಮಿಕ ವಿಷಯಗಳಿಗೆ ಆದ್ಯತೆ ನೀಡಿತ್ತು. ಹೆಚ್ಚಿನ ಸಂಖ್ಯೆಯ ಜಾಹೀರಾತು ಪ್ರಕಟವಾಗುತ್ತಿದ್ದವು. ಫಣ್ಯಕರ ಎಂಬುವವರು ಈ ಪತ್ರಿಕೆ ಸಂಪಾದಕರಾಗಿದ್ದ ಎಂದು ಕಲಾದಗಿಯ ಹಿರಿಯ ತಲೆಮಾರಿನ ಜನರಿಂದ ತಿಳಿದು ಬರುತ್ತದೆ.

ಉದ್ಯಮಿ ಕಿರ್ಲೋಸ್ಕರ ಪೂರ್ವಜರು ಕಲಾದಗಿಗೆ ಬಂದಾಗ ಅವರ ಬಗ್ಗೆ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಅವರ ಸಂತತಿಯವರು ಈವರೆಗೂ ಪ್ರತಿ ಕಾಯ್ದಿರಿಸಿಕೊಂಡಿದ್ದಾರೆಂದು ಹೇಳಲಾಗಿದೆ. ಆದರೆ ಪುಣೆಯಲ್ಲಿ ಅವರನ್ನು ಸಂಪರ್ಕಿಸಿದಾಗ ಖಚಿತ ಮಾಹಿತಿ ಸಿಗಲಿಲ್ಲ. ಪ್ರತಿ ರವಿವಾರ ಕಲಾದಗಿಯಲ್ಲಿ ಕಲ್ಲಚ್ಚಿನಲ್ಲಿ ಹೊರ ಬರುತ್ತಿದ್ದ ಹಿತೇಚ್ಚು ಆಗ ೮೩ ಪತ್ರಿಕೆಗಳ ಪ್ರಸಾರ ಹೊಂದಿರುವುದು ಒಂದು ದಾಖಲೆ. ಇದೇ ಅವಧಿಯಲ್ಲಿ ಬ್ರಿಟಿಷ ಆಡಳಿತ ಕೂಡ ಕಲಾದಗಿ ಗೆಜೆಟಿಯರ್ ಹೊರಡಿಸುತ್ತಿತ್ತು ಎಂದು ತಿಳಿದಿದೆ. ಕರ್ನಾಟಕ ಸರಕಾರ ಹೊರಡಿಸುತ್ತಿರುವ ಗೆಜೆಟಿಯರ್‌ಗೆ ಅದೇ ಪ್ರೇರಣೆಯಾಗಿರಲೂಬಹುದು.

ಬದುಕಿದ್ದರೆ ನೂರು ಕಾಣುತ್ತಿದ್ದ ಚಂದ್ರಿಕಾ

ಬಾಗಲಕೋಟೆಯಲ್ಲಿ ಕಲ್ಲಚ್ಚಿನ ಮುದ್ರಣಾಲಯದಿಂದ ಹೊರಬರುತ್ತಿದ್ದ ದಿನಪತ್ರಿಕೆ ಚಂದ್ರಿಕಾ ಇಂದಿಗೂ ಪ್ರಕಾಶವಾಗುತ್ತಿದ್ದರೆ ಶತಮಾನ ಕಾಣುತ್ತಲಿತ್ತು. ಆದರೆ ಮುದ್ರಣಾಲಯ ಮಾತ್ರ ಈಗಲೂ ಇದೆ. ಪತ್ರಿಕೆ ಹೊರಬರಲಿಲ್ಲ. ಈಗಲೂ ಇರುವ ಚಂದ್ರಿಕಾ ಮುದ್ರಣಾಲಯದಲ್ಲಿ ಅದರ ಮಾಲೀಕರಾದ ಕೆರೂರ ರಾಗುಭಟ್ಟರು ಹೊರಡಿಸುತ್ತಿದ್ದ ಚಂದ್ರಿಕಾ ಪತ್ರಿಕೆ ಸ್ಥಾನಿಕ ಸುದ್ದಿಗಳನ್ನು ಒಳಗೊಂಡಿರುತ್ತಿತ್ತು. ಜಾಹೀರಾತುಗಳನ್ನು ಹೆಚ್ಚು ಕಾಲಂಗಳನ್ನು ಆವರಿಸುತ್ತಿತ್ತು. ವಿವಾಹ ವಿಚ್ಛೇದನ, ವಕೀಲರ ನೋಟೀಸು, ವಾಣಿಜ್ಯ ಜಾಹೀರಾತು, ಅತ್ಯಂತ ಆಕರ್ಷಕವಾಗಿ ಮುದ್ರಿತವಾಗಿವೆ. ಸುಮಾರು ವರ್ಷಗಳ ಕಾಲ ಪ್ರಕಟವಾದ ಚಂದ್ರಿಕಾ ಏಕಾಏಕಿಯಾಗಿ ನಿಂತಿತ್ತು. ಪ್ರಕಟಣೆ ನಿಂತ ಕಾರಣ ಮಾತ್ರ ತಿಳಿದಿಲ್ಲ.

ಮೂರು ವರ್ಷ ಪ್ರಕಟವಾದ ನವೀನ ಭಾರತ

ಇದೇ ಚಂದ್ರಿಕಾ ಪತ್ರಿಕೆ ದಿನಗಳಲ್ಲಿಯೇ ಅದೇ ಮುದ್ರಣಾಲಯದಿಂದ ನವೀನ ಭಾರತ ದಿನಪತ್ರಿಕೆ ಹೊರಬರುತ್ತಿತ್ತು. ೧೯೨೧ರ ಜನೆವರಿ ತಿಂಗಳಲ್ಲಿ ಯು. ವಾ. ಧಾರವಾಡಕರ ವಕೀಲರ ಸಂಪಾದಕತ್ವದಲ್ಲಿ ಪ್ರಕಟವಾದ ಈ ಪತ್ರಿಕೆ ರಾಜಕೀಯ ಚಟುವಟಿಕೆಗೆ ಹೆಚ್ಚಿನ ಮಹತ್ವ ನೀಡುತ್ತಿತ್ತೆಂದು ತಿಳಿದು ಬರುತ್ತದೆ. ಸಾಹಿತ್ಯ ಶೈಲಿಯ ಈ ಪತ್ರಿಕೆ ಒಬ್ಬ ತಾಲೂಕಾಧಿಕಾರಿಯನ್ನು ಟೀಕಿಸಿದ್ದರಿಂದಾಗಿ ಸರಕಾರದ ವಕ್ರದೃಷ್ಟಿಗೆ ಒಳಗಾಯಿತು. ಮುಂದೆ ಮುದ್ರಕರು ಹಿಂಜರಿದಿದ್ದರಿಂದ ೧೯೨೩ ರಲ್ಲಿ ಪ್ರಕಟಣಾ ನಿಂತು ಹೋಯಿತು.

ಮಧರವಾಣಿ – ಶ್ರೀಕೃಷ್ಣ ಸಂದೇಶ

ಬಾಗಲಕೋಟೆಯಿಂದ ಪ್ರಕಟವಾಗುತ್ತಿದ್ದ ಮಧುರವಾಣಿ ನಿಯತಕಾಲಿಕೆಯದು ಒಂದು ಸಾಹಸವೇ. ರಾಜಕೀಯ ಚಟುವಟಿಕೆಗೆ ಮೀಸಲಾಗಿದ್ದ ಪತ್ರಿಕೋದ್ಯಮಕ್ಕೆ ಸಂಪಾದಕ ಬುರ್ಲಿ ಶ್ರೀನಿವಾಸಚಾರ್ಯರು ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಚಟುವಟಿಕೆಯ ಆಯಾಮ ನೀಡಿದರು. ೧೯೦೨ ರ ಅವಧಿಯಲ್ಲಿ ಆರ್ಯ ಸಂಸ್ಕೃತಿ ದೃಷ್ಟಿಯಲ್ಲಿ ಈ ಪತ್ರಿಕೆ ಪ್ರಕಟವಾಗುತ್ತಿತ್ತು ಎಂಬುದು ಕಂಡು ಬರುತ್ತದೆ. ಮುಂದೆ ಇವರು ೧೯೨೩ ರಲ್ಲಿ ಶ್ರೀಕೃಷ್ಣ ಸಂದೇಶ ಪ್ರಾರಂಭಿಸಿದರು.

ಕರ್ನಾಟಕ ಶಿಕ್ಷಣ

ಅನಂತ ಬಳವಂತ ಜೋಶಿಯವರು ಬಾಗಲಕೋಟೆಯಿಂದ ೧೯೧೮ರ ಸುಮಾರಿಗೆ ಕರ್ನಾಟಕ ಶಿಕ್ಷಣ ಎಂಬ ನಿಯತಕಾಲಿಕ ಹೊರಡಿಸುತ್ತಿದ್ದರು. ಶಿಕ್ಷಣ ಪ್ರಸಾರವೇ ಈ ಪತ್ರಿಕೆಯ ಮುಖ್ಯ ಉದ್ದೇಶವಾಗಿತ್ತು.

ಹಲವು ಹತ್ತು……

೧೯೩೪ರಲ್ಲಿ ಮಲ್ಲಿಕಾರ್ಜುನ ಹಾವರಗಿ ಅವರು ವೀರಪ್ರಭಾ ಬಾಗಲಕೋಟೆಯಲ್ಲಿ ೧೯೪೪ರಲ್ಲಿ ರಬಕವಿಯಲ್ಲಿ, ಎಂ. ಜಿ. ಚಿಕ್ಕೋಡಿ ಅವರಿಂದ ಪ್ರಗತಿ ಪತ್ರಿಕೆಗಳು ಪ್ರಕಟಣೆಯಾಗಿರುವ ಪ್ರಸ್ತಾಪ ಇದೆ. ಇವುಗಳ ಸಮಗ್ರ ಅಧ್ಯಯನ, ಪ್ರತಿಗಳ ಸಂಗ್ರಹ ಆಗಬೇಕಾಗಿರುವುದು ಇಂದಿನ ಅಗತ್ಯ ಈ ಹೆಸರುಗಳು ಸ್ಪೂರ್ತಿ ನೀಡಬಲ್ಲವು.

ಕನ್ನಡಿಗ

ಸ್ವಾತಂತ್ರ್ಯಚಳುವಳಿ, ಕರ್ನಾಟಕ ಏಕೀಕರಣ ವಿಷಯ ಬಂದಾಗಲೆಲ್ಲ ನೆನಪಾಗುವ ಹೆಸರು ಮಂಗಳವೇಢೆ ಶ್ರೀನಿವಾಸ ರಾಯದರು. ಹೋರಾಟದ ಸಂದೇಶ ಮನೆ ಮನೆ ತಲುಪಿಸಲು, ಜಾಗೃತಿ ಮೂಡಿಸಲು ಅವರು ಆಯ್ಕೆ ಮಾಡಿಕೊಂಡಿದ್ದು ಪತ್ರಿಕೋದ್ಯಮವನ್ನು. ೧೯೨೧ರಲ್ಲಿ ಬಾಗಲಕೋಟೆಯಿಂದ ಕನ್ನಡ ನವಜೀವನ ವಾರಪತ್ರಿಕೆ ಆರಂಭಿಸಿ ಮಹಾತ್ಮಾಗಾಂಧೀಜಿಯವರ ಹಿಂದಿ ಭಾಷಣವನ್ನು ಕನ್ನಡಕ್ಕೆ ಅನುವಾದಿಸಿ ಅವರ ಸಂದೇಶ ತಲುಪಿಸುವ ದೀಕ್ಷೆ ಕೈಗೊಂಡ ನವಜೀವನ, ಯಂಗ್ ಇಂಡಿಯಾ ಪತ್ರಿಕೆಗಳ ಲೇಖನಗಳನ್ನು ಇದರಲ್ಲಿ ಪ್ರಕಟಿಸುತ್ತಿದ್ದರಿಂದ ನವಜೀವನ ಬಂದ ಆದಾಗ ಇದು ಕೂಡ ಬಂದಾಯಿತು.

೧೯೨೫ರಲ್ಲಿ ಕನ್ನಡಿಗ ಪತ್ರಿಕೆ ಆರಂಭಿಸಿದರು. ಶಂ. ಬಾ. ಜೋಶಿ, ಮುಗಳಿ, ಸ. ಸ., ಮಾಳವಾಡ ಸಂಗಮ ನಾರಾಯಣ, ಪಿ. ಧೂಲಾ ಸಾಹೇಬ, ಕೃಷ್ಣ ಮೂರ್ತಿ , ಸಿಂಪಿ ಲಿಂಗಣ್ಣ ಇವರೆಲ್ಲರಿಗೂ ಕನ್ನಡಿಗ ಸ್ಪೂರ್ತಿ ಆಯಿತು. ಅ. ನ. ಕೃಷ್ಣರಾಯರು, ಹೊಯ್ಸಳರು , ಕೃಷ್ಣಶರ್ಮರು ಲೇಖನ ಬರೆದರು. ಸ್ವಾತಂತ್ರ್ಯದ ಚಳುವಳಿ ಬಿರುಸಾಗುತ್ತಿದ್ದಂತೆ ೧೯೩೦ ರಲ್ಲಿ ಕನ್ನಡಿಗ ದಿನಪತ್ರಿಕೆಯಾಯಿತು. ಪತ್ರಿಕೆ ಬೆಳೆದು ನಿಂತಾಗ ಆಂಗ್ಲ ಸರಕಾರದ ಕೆಂಗಣ್ಣಿಗೆ ಗುರಿಯಾಯಿತು. ಪ್ರೆಸ್ ಕಾಯ್ದೆ ಬಳಕೆಗಾಗಿ ಹಾನಿಗೊಳಗಾಯಿತು. ನಿಷ್ಠುರ ಲೇಖನಕ್ಕಾಗಿ ಮಂಗಳವೇಢೆ ಶ್ರೀನಿವಾಸರಾಯರು ಜೈಲಿಗೆ ಹೋದರು. ಅವರು ವಾಪಸ್ಸಾಗಿ ಪತ್ರಿಕೆಯನ್ನು ಸ್ಥಳಾಂತರಿಸಿ ಆಗ ಬೆಳಗಾವಿಯಿಂದ ಪ್ರಕಟವಾಗುತ್ತಿದ್ದ ಸಂಯುಕ್ತ ಕರ್ನಾಟಕದ ಜೊತೆಯಾಗಿ ಬೆಳೆದು ಅದರಲ್ಲಿಯೇ ವಿಲೀನವಾಯಿತು.

ಜೈಯಿಂದ್ – ನವಹಿಂದ್

ಸ್ವಾತಂತ್ರ್ಯ ಸಂದರ್ಭ ಹಾಗೂ ನಂತರದ ಪತ್ರಿಕೋದ್ಯಮವನ್ನು ಅಭ್ಯಸಿಸುವುದಾದರೆ ಬಿಜಾಪುರವನ್ನು ಸೇರಿಕೊಂಡಿದ್ದ ಬಾಗಲಕೋಟೆ ಜಿಲ್ಲೆಯ ಮೊಟ್ಟ ಮೊದಲ ಪತ್ರಿಕೆ ಜಮಖಂಡಿಯ ಜೈ ಹಿಂದ್ ಪತ್ರಿಕೆ ಇದು ಸ್ವಾತಂತ್ರ್ಯ ಸಂಗ್ರಾಮಕ್ಕೆ ಪ್ರೇರಣೆಯಾಗಿತ್ತು. ಅನಂತರಾವ್ ಸಾಬಡೆ ಅವರು ಈ ಪತ್ರಿಕೆಯನ್ನು ಆರಂಭಿಸಿ ಕಠೋರ ಭಾಷೆಯ ಮೂಲಕ ಬ್ರಿಟಿಷ್ ಆಡಳಿತ ವೈಖರಿಯನ್ನು ಟೀಕಿಸಿದರು. ಹೋರಾಟಕ್ಕಾಗಿ ಜನತೆಯನ್ನು ಹುರಿದುಂಬಿಸಿದರು. ಇದಕ್ಕಾಗಿ ಅವರು ಪ್ರಾಣವನ್ನೇ ತೆತ್ತಬೇಕಾಯಿತು. ಬ್ರಿಟಿಷರ ಚಿತಾವಣೆಯಿಂದ ಅವರ ಹತ್ಯೆಯಾಯಿತು. ಹುತಾತ್ಮ ಸಾಬಡೆ ಎಂದೇ ಜಮಖಂಡಿಯಲ್ಲಿ ಜನಪ್ರಿಯರಾಗಿದ್ದಾರೆ ಇವರ ಹೆಸರಿನಲ್ಲಿ ಹುತಾತ್ಮ ಸಾಬಡೆ ಮೈದಾನ ಎಂದು ನಾಮಕರಣ ಮಾಡಲಾಗಿದ್ದು ಕನ್ನಡ ಸಂಘದ ಚಟುವಟಿಕೆಗಳು ಪ್ರತಿ ವರ್ಷ ಅತ್ಯಂತ ವಿಜೃಂಭಣೆಯಿಂದ ಈ ಮೈದಾನದಲ್ಲಿ ನಡೆಯುತ್ತಿದೆ.

ನವಹಿಂದ್ ಎಂಬ ಪತ್ರಿಕೆ ಜಮಖಂಡಿಯಿಂದ ಕನ್ನಡ ಹಾಗೂ ಮರಾಠಿಯಲ್ಲಿ ಮುದ್ರಣ ಆರಂಭಿಸಿತ್ತು. ೧೯೫೨ ರಲ್ಲಿ ಆರಂಭವಾದ ಈ ಪತ್ರಿಕೆ ೧೯೬೯ ರವರೆಗೆ ಮುದ್ರಣಗೊಳ್ಳತ್ತಿತ್ತು ಎಂಬುದು ಅಧ್ಯಯನದಿಂದ ತಿಳಿದು ಬಂದ ಸಂಗತಿ. ಶ್ಯಾಮರಾವ್ ವಾಟ್ವೆ ಎಂಬುವವರು ಈ ಪತ್ರಿಕೆಯನ್ನು ಪ್ರಕಾಶಿಸುತ್ತಿದ್ದು ಜಮಖಂಡಿ ರಾಜಕಾರಣದಲ್ಲಿಯೂ ಸಹ ಮಿಂಚಿ ಪುರಸಭೆ ಅಧ್ಯಕ್ಷರಾಗಿ ಅವರು ಕೆಲಸ ಮಾಡುವಲ್ಲಿ ನವಹಿಂದ್ ಪ್ರಭಾವ ಬೀರಿತ್ತು.

ಅವರ ಅಧ್ಯಕ್ಷ ಅವಧಿಯಲ್ಲಿಯೇ ಸದಸ್ಯರಾದವರು ಬಾಬುರೆಡ್ಡಿ ತುಂಗಳ. ಅವರು ವೆಂಕಟೇಶ ಕುಲಕರ್ಣಿ ಅವರ ಜೊತೆಯಾಗಿ ದೇಶಾಭಿಮಾನಿ ಪತ್ರಿಕೆಯನ್ನು ಬಿಜಾಪುರದಲ್ಲಿ ಮುದ್ರಿಸುತ್ತಿದ್ದರು. ಕುಲಕರ್ಣಿ ಅವರು ಧಾರವಾಡಕ್ಕೆ ಸ್ಥಳಾಂತರಗೊಂಡು ಜಾಗೃತ ಭಾರತ ಆರಂಭಿಸಿದರು. ದೇಶಾಭಿಮಾನಿ ಮುದ್ರಕರಾಗಿದ್ದ ಶರಣಬಸವರಾಜ ಜಿಗಜಿನ್ನಿ ಬಾಗಲಕೋಟೆಯಲ್ಲಿ ಈ ಪತ್ರಿಕೆಯ ಮುದ್ರಣವನ್ನು ಮುಂದುವರೆಸಿದರು. ಸಂಗಾತಿ ಬಾಬುರೆಡ್ಡಿ ತುಂಗಳ ಅವರು ಜಮಖಂಡಿಗೆ ವಾಪಸ್ಸಾಗಿ ಕುರುಕ್ಷೇತ್ರ ಪತ್ರಿಕೆಯನ್ನು ಆರಂಭಿಸಿದರು.

ಗೆಳೆಯ

ಪುಲಿಕೇಶಿ ನಾಡು ಬಾದಾಮಿ ನಗರದಲ್ಲಿ ಗೆಳೆಯ ಎಂಬ ವಾರ ಪತ್ರಿಕೆ ಉಗಮ ಮುದ್ರಣಾಲಯದಿಂದ ಪ್ರಕಟವಾಗುತ್ತಿತ್ತು. ತ. ರಾ. ಸು. ಸಮಕಾಲೀನರಾದ ಬಿಂದು ಮಾಧವ ಕುಲಕರ್ಣಿ ಅವರು ಸಹ ಈ ಪತ್ರಿಕೆಯನ್ನು ನಡೆಸುತ್ತಿದ್ದರು ಎಂಬುದು ಮಾಹಿತಿಗಳಿಂದ ತಿಳಿದು ಬರುತ್ತದೆ. ಜಮಖಂಡಿಯ ರಾವ್ ಬಹಾದ್ದೂರ ಅವರು ಬೆಂಗಳೂರಿನಲ್ಲಿ ಪ್ರಕಟವಾಗುತ್ತಿದ್ದ ಪತ್ರಿಕೆಗೆ ಮಾರ್ಗದರ್ಶನ ಮಾಡಿರುವುದು ತಿಳಿದು ಬರುತ್ತದೆ.

ವಾರಪತ್ರಿಕೆಗಳ ತವರೂರು

ಬಾಗಲಕೋಟೆಯ ಕೆರೂರ ವಾಸುದೇವಾಚಾರ್ಯರು ಸಣ್ಣ ಕಥೆಗಳ ಜನಕ ಎಂಬುದು ಸಾಹಿತ್ಯ ವಲಯದಲ್ಲಿ ಇನ್ನೂ ಪರಿಚತವಾಗಬೇಕಾದ ಹೆಸರು. ಆದರೆ ಸಣ್ಣ ಪತ್ರಿಕೆಗಳು, ವಾರ ಪತ್ರಿಕೆಗಳಿಗೆ ಬಾಗಲಕೋಟೆ ಜಿಲ್ಲೆ ತವರೂರು ಎಂಬುದು ಇಡೀ ರಾಜ್ಯಕ್ಕೆ ಗೊತ್ತು

ವಿಚಿತ್ರ ಹೆಸರುಗಳು.

ಬಾಗಲಕೋಟೆ ಜಿಲ್ಲೆಯ ಅನೇಕ ವಾರಪತ್ರಿಕೆಗಳು, ದಿನಪತ್ರಿಕೆಗಳು ಆಯ್ದುಕೊಂಡಿರುವ ಹೆಸರು ಅತ್ಯಂತ ವಿಚಿತ್ರವಾಗಿವೆ. ಆಕರ್ಷಕ ತಲೆಬರಹಗಳು ಜಿಲ್ಲೆಯ ಪತ್ರಿಕೋದ್ಯಮಕ್ಕೆ ರಂಜನೀಯ, ರೋಚಕ ಇತಿಹಾಸವನ್ನು ನೀಡಿವೆ. ಜೀವಂತ ಗೋರಿ, ಕಣ್ಣೀರಿನ ಶೋಧನೆ, ಹುಚ್ಚು, ಗೋಲೀಬಾರ್, ಧಡಲ್ಬಾಜಿ, ಹಾಯ್ ಮಿಂಚು, ಧನಾದನ್… ಹೀಗೆ ವಿಚಿತ್ರ ಹೆಸರುಗಳು ಗಮನ ಸೆಳೆದಿವೆ.

ಕೆಲವು ಪತ್ರಿಕೆಗಳು ಜನಸಮುದಾಯಕ್ಕೆ ಮೀಸಲಿಟ್ಟಿದ್ದರೆ ಇನ್ನೂ ಕೆಲವು ಪತ್ರಿಕೆಗಳೂ ಟೀಕೆಗಳೇ ಪ್ರಮುಖ ಉದ್ದೇಶವಾಗಿಟ್ಟುಕೊಂಡು ಪ್ರಕಟವಾಗುತ್ತಿರುವುದು ವಾಸ್ತವಿಕ ಸಂಗತಿ. ಈ ವಿಚಿತ್ರ ಹೆಸರುಗಳ ಬಗ್ಗೆ ಪ್ರಜಾವಾಣಿ ದಿನಪತ್ರಿಕೆ ೧೯೭೮ರಲ್ಲಿ ವಿಶೇಷ ಕಾಲಂನಲ್ಲಿ ಪ್ರಕಟಿಸಿದ್ದು ಈ ಸಂದರ್ಭದಲ್ಲಿ ಉಲ್ಲೇಖ.

ಏನೇ ಇರಲಿ ಆರಂಭದಲ್ಲಿ ವಾರಪತ್ರಿಕೆಗಳೇ ಈ ಜಿಲ್ಲೆಯ ಪತ್ರಿಕೋದ್ಯಮವನ್ನು ಅಭಿವೃದ್ಧಿಪಡಿಸಿವೆ. ಅದರಲ್ಲಿ ಕೆಲವುಗಳು ಇನ್ನೂ ಯಾವ ಆತಂಕವಿಲ್ಲದೇ ಸಮಯಕ್ಕೆ ಸರಿಯಾಗಿ ಪ್ರಕಟವಾಗುತ್ತಿವೆ. ಕೆಲವುಗಳು ಮಾತ್ರ ಸಂದರ್ಭಕ್ಕನುಸಾರವಾಗಿ ಪ್ರಕಟವಾಗುತ್ತಿವೆ.

ಮನೆಮಾತಾದ ಕುರುಕ್ಷೇತ್ರ

ಪ್ರಗತಿ ವಿಚಾರಧಾರೆಯ ಬಾಬುರೆಡ್ಡಿ ತುಂಗಳ ಕಮ್ಯುನಿಸ್ಟ್ ತತ್ವದಲ್ಲಿ ನಂಬಿಕೆಯಿಟ್ಟು ಸಾರ್ವಜನಿಕ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರು. ೧೯೬೯ ರಲ್ಲಿ ಅವರು ಜಮಖಂಡಿಯಿಂದ ಆರಂಭಿಸಿದ ಕುರುಕ್ಷೇತ್ರ ವಾರಪತ್ರಿಕೆ ಈಗ ೪೧ ವರ್ಷದ ಪಾಯ. ಈ ಪತ್ರಿಕೆ ಮಾಡಿದ ಕೆಲಸ ಅಷ್ಟಿಷ್ಟಲ್ಲ. ಬಾಬುರೆಡ್ಡಿರವರ ಲೇಖನ, ಲೇಖನಿ ಎಷ್ಟು ಉಗ್ರವಾಗಿದೆ ಎಂದರೆ ಪತ್ರಿಕೆ ಓದುಗನ ಕೈಸೇರಿದಾಗ ವ್ಯಕ್ತವಾಗುತ್ತಿದ್ದ ಪ್ರತಿಕ್ರಿಯೆ ಗಮನಿಸಬೇಕು. ಆಕರ್ಷಕ ತಲೆಬರಹ, ವ್ಯವಸ್ಥೆಯನ್ನು ಟೀಕಿಸಲು ಬಳಸುವ ಶಬ್ದ ಸಂಗ್ರಹ ಈ ಪತ್ರಿಕೆ ಇಂದಿಗೂ ದೊಡ್ಡ ಹೆಸರು ತಂದುಕೊಟ್ಟಿದೆ.

ಡಾ. ಪಾಟೀಲ ಪುಟ್ಟಪ್ಪ, ಖಾದ್ರಿ ಶ್ಯಾಮಣ್ಣ ಎಷ್ಟು ಜನಪ್ರಿಯರೋ ಅಷ್ಟು ಜನಪ್ರಿಯರು ಬಾಬುರೆಡ್ಡಿ ತುಂಗಳ ಅವರು. ಕಾರ್ಮಿಕ ಹೋರಾಟ, ರೈತಪರ ಚಿಂತನೆಯ ಮೂಲಕ ತುಂಗಳ ಈ ಭಾಗದ ಮನೆ ಮಾತಾದರು. ಅದಕ್ಕಾಗಿ ೧೯೮೫ರಲ್ಲಿ ಅವರು ಬೀಳಗಿ ವಿಧಾನಸಭಾ ಕ್ಷೇತ್ರದಿಂದ ಸುಲಭವಾಗಿ ಗೆಲುವು ಸಾಧಿಸಿದರು. ಇಂದಿಗೂ ತುಂಗಳ, ಕುರುಕ್ಷೇತ್ರ ತುಂಗಳ ಎಂದೇ ಪರಿಚಿತರು. ಅವರ ಪತ್ರಿಕೆಗೆ ಸಾವಿರಾರು ಓದುಗರು ಇದ್ದಾರೆ, ಓದದವರಿಗೂ ಆ ಪತ್ರಿಕೆ ಹೆಸರು ಗೊತ್ತು. ಈ ಮೂಲಕ ತುಂಗಳ ಅವರ ಜನಪ್ರಿಯತೆಯನ್ನು ಪಡೆದರು. ಪಡೆದರು. ಪಕ್ಷಾತೀತವಾಗಿ ಅವರ ಲೇಖನವನ್ನು ಸ್ವೀಕರಿಸುವ ದೊಡ್ಡ ಬಳಗ ಈ ಜಿಲ್ಲೆಯಲ್ಲಿದೆ. ಮಾಧ್ಯಮ ಅಕಾಡೆಮಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದೆ.

ವಿಕ್ರಾಂತ ಭಾರತ

ತುಂಗಳ ಅವರು ಕುರುಕ್ಷೇತ್ರ ಆರಂಭವಾದ ಒಂದೇ ವರ್ಷದಲ್ಲಿ ವಿಕ್ರಾಂತ ಭಾರತ ವಾರಪತ್ರಿಕೆ ಜಮಖಂಡಿಯಿಂದ ಆರಂಭಗೊಂಡಿತು. ೧೯೭೦ರಲ್ಲಿ ಆರಂಭವಾದ ಈ ಪತ್ರಿಕೆಗೆ ಎಂ. ಸಿ. ಗೊಂದಿ ಸಂಪಾದಕರು. ಅವರು ಎಡಪಂಥೀಯ ವಿಚಾರಗಳಲ್ಲಿ ನಂಬಿಕೆ ಇಟ್ಟಿದ್ದರೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು. ವಿಕ್ರಾಂತ ಭಾರತ ಅತ್ಯುತ್ತಮ ಲೇಖನ, ವೈಚಾರಿಕ ಮಂಥನದ ಮೂಲಕ ಜಮಖಂಡಿಯಿಂದ ಪ್ರಕಟವಾಗುತ್ತ ಜಿಲ್ಲೆಯ ಗಮನ ಸೆಳೆದಿದೆ.

ಜನಮತರಂಗ

ಜನಮತರಂಗದ ಬಸವರಾಜ ಬಹೀರಶೆಟ್ಟಿ ಅವರು ಜಿಲ್ಲೆಗೆ ಪರಿಚಿತರು. ನೇಕಾರ ಸಮುದಾಯದ ಬಹೀರಶೆಟ್ಟಿ ಅವರು ೩೯ ವರ್ಷಗಳಿಂದ ಜನಮತರಂಗವನ್ನು ವಾರಪತ್ರಿಕೆಯನ್ನಾಗಿ ಪ್ರಕಟಿಸಿ ಕೆಲಕಾಲ ದಿನಪತ್ರಿಕೆಯನ್ನಾಗಿ ಪರಿವರ್ತಿಸಿ ಈಗ ಅದನ್ನು ಮಾಸಿಕವನ್ನಾಗಿ ಅತ್ಯಂತ ಅಚ್ಚುಕಟ್ಟಾಗಿ ಮುದ್ರಿಸುತ್ತಿದ್ದಾರೆ.

ಸಂಘಟಕ

ಸಂಘಟಕ ವಾರ ಪತ್ರಿಕೆ ಕೇವಲ ಒಂದೇ ಪುಟದಲ್ಲಿ ಬಾಗಲಕೋಟೆ ನಗರದಿಂದ ಪ್ರಕಟವಾಗುತ್ತಿದ್ದರೂ ಅದು ಬೀರಿದ ಪ್ರಭಾವ ಮಹತ್ವದ್ದು. ಹುಚ್ಚಪ್ಪ ಕತ್ತಿ ಎಂಬುವವರು ಈ ಪತ್ರಿಕೆಯನ್ನು ಹೊರಡಿಸುತ್ತಿದ್ದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಿಸ್ತಿನ ಸ್ವಯಂ ಸೇವಕರಾಗಿದ್ದ ಕತ್ತಿ ಅವರು ಪತ್ರಿಕೆಯನ್ನು ಸೈಕಲ್ ಮೇಲೆ ಸಂಚರಿಸಿ ಮಾರಾಟ ಮಾಡುವ ವಿಧಾನ ಅತ್ಯಂತ ಆಕರ್ಷಕವಾಗಿತ್ತು. ಪತ್ರಿಕೆಯ ಪ್ರಮುಖ ತಲೆಬರಹಗಳನ್ನು ಕೂಗುತ್ತ ಓದುಗರನ್ನು ಆಕರ್ಷಿಸಿ ಮಾರುತ್ತಿದ್ದರು. ಆಜ್ ಕಾ ತಾಜಾ ಖಬರ್ ಏಯೀ ಹೈ ಸಂಘಟಕ ಎಂದು ವರ್ಣಿಸುತ್ತ ಸ್ಥಳೀಯ ಹಾಗೂ ಈ ಭಾಗದ ರಾಜಕಾರಣದ ಬಗ್ಗೆ ವರದಿಯನ್ನು ವಿಶ್ಲೇಷಿಸುತ್ತ ಗಮನ ಸೆಳೆಯುತ್ತಿದ್ದರು. ತುರ್ತುಪರಿಸ್ಥಿಯ ಕಾಲದಲ್ಲಿ ಅವರನ್ನು ಮೀಸಾ ಕಾಯ್ದೆಯಡಿ ೧೮ ತಿಂಗಳು ಬಂಧಿಸಲಾಗಿತ್ತು. ೧೯೭೮ರಲ್ಲಿ ಜೈಲಿನಿಂದ ಹೊರಬಂದ ನಂತರ ಪ್ರಸಾರ ಮುಂದುವರೆಸಿದ ಅವರು ಧನಾಧನ್ ಎಂಬ ದಿನಪತ್ರಿಕೆಯನ್ನು ಆರಂಭಿಸಿದ್ದರು. ಕಾಲಕ್ರಮೇಣ ಎರಡೂ ಪತ್ರಿಕೆಗಳ ಪ್ರಕಟಣೆಗಳೂ ಸ್ಥಗಿತಗೊಂಡವು.

ಹತ್ತು – ಹಲವಾರು…

ಬಾಗಲಕೋಟೆ ನ್ಯೂಸ್ (ಸಂ. ಪಿ. ಎಸ್. ಹಗರಟಗಿ), ಹಿಪ್ಪರಗಿ ದರ್ಶನ (ಸಂ. ನಾಗಪ್ಪ ಜತ್ತಿ), ಜೈ ಜಮಖಂಡಿ (ಸಂ ಮಲ್ಲಿಕಾರ್ಜುನ ಮಠ), ರಾವ್ ಬಹಾದ್ದೂರ (ಸಂ. ಗುರುರಾಜ ವಾಳ್ವೇಕರ), ವಿಜಯದಶಮಿ (ಸಂ. ಎಂ. ಆಯ್ ಬೇವನೂರಮಠ), ಪಾಕ್ಷೀಕವಾಗಿ ಪ್ರಕಟವಾಗುತ್ತಿದ್ದು, ಗೋಲಿಬಾರ್ (ಸಂ. ಮಲ್ಲು ಬ್ಯಾಕೋಡ), ಪವಮಾನ (ಸಂ. ಅಶೋಕ ದೇಸಾಯಿ), ಪ್ರಗತಿಪರ (ಸಂ ಸುನಂದ ಮುಂಡಾಸದ), ರನ್ನ ದರ್ಪಣ (ಸಂ. ಸಿದ್ಧರಾಮ ಜಗದಾಳ), ಶಶಿನ್ (ಸಂ. ಚಂದ್ರಶೇಖರ ಮಾಳಿ) ವಾರಪತ್ರಿಕೆಗಳಿಗಾಗಿ ಪ್ರಕಟವಾಗುತ್ತಿರುವುದನ್ನು ರಜಿಸ್ಟ್ರಾರ್ ನ್ಯೂಸ್ ಪೇಪರಸ್ ಪಟ್ಟಿ ಖಚಿತಪಡಿಸುತ್ತಿದ್ದು ಇದಕ್ಕೆ ಹೊರತಾಗಿ ದಲಿತ ಪ್ಯಾಂಥರ್ (ಸಂ ಮತ್ತಣ್ಣ ಬೆಣ್ಣೂರ), ಮುತ್ಸದ್ಧಿ (ಸಂ . ವಾಯ್ ಎಸ್. ಗೌಡರ), ಹುನಗುಂದ ಎಕ್ಸ್ ಪ್ರೆಸ್ (ಸಂ. ಶರಣು ಹಳಪೇಟ), ಸಮಾಧಾನಿ (ಸಂ. ಅಶೋಕ ಲೋಗಾಂವಿ), ರಬಕವಿ – ಬನಕಟ್ಟಿ ವಾರ್ತೆ (ಸಂ. ರಾಮು ಕಾಡಾಪೂರ), ಕೃಷ್ಣತೀರ (ಸಂ. ಈಶ್ವರ ಹೂಗಾರ), ರನ್ನಪ್ರಭ (ಸಂ. ಎಲ್. ಬಿ. ಹಳ್ಳದ), ಸೂರ್ಯಕೋಟಿ (ಸಂ. ಜ್ಯೋತಿಬಾ ಧರೇಕರ), ವಿಜಯ ಸಂಘರ್ಷ (ಸಂ. ಸುರೇಶ ಭಗವತಿ), ಅನ್ಯಾಯಕ್ಕೆ ಶಿಕ್ಷೆ (ಸಂ. ಶಿವಾಜಿ ಘೋರ್ಪಡೆ), ಬ್ಲ್ಯಾಕ್ ಮುಧೋಳ (ಸಂ. ರವೀಂದ್ರ ಕಾರಜೋಳ), ಬಾಗಲಕೋಟೆ ವಾರ್ತೆ (ಸಂ. ಎಸ್. ಎಂ. ಹೊರಟ್ಟಿ), ಬಡಿದ ಸಿಡಿಲು (ಸಂ. ವಾಯ್. ಎಸ್. ಬ್ಯಾಡಗಿ), ಹೋಮಿಯೋ ಕಿಂಗ್ (ಸಂ. ಉಮೇಶ ವನವಳ್ಳಿ), ಕೃಷ್ಣ – ಮಲಪ್ರಭೆ (ಸಂ. ಮಹಾಂತಯ್ಯ ಬೇವನೂರಮಠ), ಸಾಮಾಜಿಕ ಕ್ರಾಂತಿ (ಸಂ. ಅಮರೇಶ ನಾಗೂರ), ಕಣ್ಣೀರಿನ ಶೋಧನೆ (ಸಂ ಕಲ್ಲಪ್ಪ ಕಡಬಲ್ಲವರ) ವಾರಪತ್ರಿಕೆಗಳಾಗಿ ಪ್ರಕಟವಾಗುತ್ತಿವೆ. ಕೆಲ ಪತ್ರಿಕೆಗಳು ಸಾಮಾಜಿಕ ಕಾಳಜಿಯನ್ನು ತೋರಿದ್ದಾರೆ, ಕೆಲ ಪತ್ರಿಕೆಗಳು ಕೇವಲ ಹೆಸರಿಗೆ ಮಾತ್ರ ಸೀಮಿತವಾಗಿದ್ದು ನಿಯಮಿತವಾಗಿ ಪ್ರಕಟವಾಗುತ್ತಿಲ್ಲ ಎಂಬ ಆತಂಕ ಎಲ್ಲರನ್ನು ಕಾಡುತ್ತಲೇ ಇದೆ.