ಮಾಸಿಕಗಳು

ಕುಶಲ ಎಂಬ ಮಾಸಿಕ ಡಾ. ವ್ಹಿ. ಟಿ. ಹಿರೇಮಠ ಅವರ ಒಡೆತನದಲ್ಲಿದ್ದು ಪೂರ್ಣವಾಗಿ ಆರೋಗ್ಯಕ್ಕೆ ಮೀಸಲಾಗಿ ಆಯುರ್ವೇದ ವೈದ್ಯಕೀಯ ಪದ್ಧತಿಯನ್ನು ಜನಪ್ರುಯಗೊಳಿಸಿದೆ. ಈ ಪತ್ರಿಕೆ ಈಗ ಸ್ಥಗಿತಗೊಂಡಿದೆ. ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘ ಸಮಾಚಾರ ಎಂಬ ಮಾಸಿಕವನ್ನು ಪ್ರಕಟಿಸುತ್ತಿದ್ದು ಇದು ಆರ್. ಎನ್. ಐ. ಅನುಮೋದನೆ ಪಡೆದು ಸಂಘದ ಶೈಕ್ಷಣಿಕ ಚಟುವಟಿಕೆಗಳನ್ನು ಪ್ರಸಾರ ಮಾಡುತ್ತಿದೆ.

ಮಹಾಲಿಂಗಪೂರದಿಂದ ಪ್ರಾ. ಬಿ. ಎಂ. ಪಾಟೀಲ ಪ್ರಕಟಿಸುತ್ತಿರುವ ಶರಣ ಚೇತನ ಅತ್ಯಂತ ಶ್ರೇಷ್ಠವಾದ ಮಾಸಿಕವಾಗಿದೆ. ಫ. ಗು. ಹಳಕಟ್ಟಿ ಅವರ ವಚನ ಕ್ರಾಂತಿಯನ್ನು ಇದು ಅಕ್ಷರ ರೂಪದಲ್ಲಿ ಮನೆ ಮನೆಗೆ ತಲುಪಿಸುತ್ತಿದೆ. ಅಷ್ಟೇ ಅಲ್ಲ ಈ ಪ್ರತಿಷ್ಠಾನದ ಮೂಲಕ ರಾಜ್ಯಮಟ್ಟದ ವಚನ ಸಾಹಿತ್ಯ ಸಮ್ಮೇಳನ ನಡೆಸಿ ಶ್ರೇಷ್ಠ ಸಾಧಕರಿಗೆ ಪ್ರಶಸ್ತಿ ನೀಡುತ್ತಿದೆ. ಪತ್ರಿಕೆಯೊಂದು ಮಾಡುತ್ತಿರುವ ಕೆಲಸ ಅಮೋಘವಾದದ್ದು.

ಕಾಲು ಶತಮಾನ ಪೂರೈಸಿದ ದಿನಪತ್ರಿಕೆಗಳು

ಸಮೃದ್ಧವಾಗಿರುವ ವಾರಪತ್ರಿಕೆಗಳ ಮಧ್ಯೆ ದಿನಪತ್ರಿಕೆಗಳಾಗಿ ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಪತ್ರಿಕೋದ್ಯಮಕ್ಕೆ ಗೌರವದ ಸೇವೆ ಸಲ್ಲಿಸುತ್ತಿರುವದು ಜಿಲ್ಲೆಯ ಗೌರವ. ೧೯೭೭ ರಲ್ಲಿ ಬಾಗಲಕೋಟೆಯಿಂದ ಆರಂಭವಾದ ನಾಗರಿಕ ದಿನಪತ್ರಿಕೆ ಈ ಜಿಲ್ಲೆಯ ಪತ್ರಿಕೋದ್ಯಮದ ವಿಶ್ವವಿದ್ಯಾಲಯ ಎಂದೇ ಹೇಳಬಹುದು. ಅದು ಆರಂಭಿಸಿದ ಜನಪರ ಚಿಂತೆನೆ ಅನೇಕ ಪತ್ರಕರ್ತರನ್ನು, ಪತ್ರಿಕೆಗಳನ್ನು ಹುಟ್ಟುಹಾಕಲು ಕಾರಣವಾಯಿತು.

ಆಲಮಟ್ಟಿ ಜಲಾಶಯ ನಿರ್ಮಾಣದ ವಿಳಂಬ, ಬಾಗಲಕೋಟೆ ಪುನರ್‌ವಸತಿ, ಬಾಗಲಕೋಟೆ ಜಿಲ್ಲಾ ರಚನೆ ಈ ಎಲ್ಲಾ ಸಂಗತಿಗಳು ನಾಗರಿಕ ದಿನಪತ್ರಿಕೆಯಿಂದ ಹುಟ್ಟಿಕೊಂಡ ವಿಚಾರಧಾರೆಗಳು ಇದರ ಪರಿಣಾಮ ಜನರನ್ನು ಹೊರಾಟದತ್ತ ಬಡಿದೆಬ್ಬಿಸಿತು. ಇದರ ಪರಿಣಾಮವೇ ಬಾಗಲಕೋಟೆ ಜಿಲ್ಲೆ ರಚನೆಯಾಯಿತು. ಬಾಗಲಕೋಟೆ ಪುನರ್ವಸತಿಯ ಮೂರು ದಶಕಗಳ ವಿಳಂಬಕ್ಕೆ ಟೀಕೆ ವ್ಯಕ್ತಪಡಿಸಿ ನವನಗರ ನಿರ್ಮಾಣದ ಮುನ್ನುಡಿ ಬರೆಯಿತು ಎಂಬುದನ್ನು ೧೯೮೩ ರವರೆಗಿನ ಸಾರ್ವಜನಿಕ ಕ್ಷೇತ್ರದಲ್ಲಿರುವ ಪ್ರತಿಯೊಬ್ಬರಿಗೂ ಮನದಟ್ಟಾಗಿರುವ ಸಂಗತಿ. ನಾಗರಿಕ ಪತ್ರಿಕೆ ೧೯೭೮ ಡಿಸೆಂಬರ್ ೨೫ ರಂದು ಪ್ರಥಮ ವಾರ್ಷಿಕೋತ್ಸವವನ್ನು ಆಚರಿಸಿದಾಗ ಅದು ನಗರ ಹಬ್ಬವಾಗಿ ವಿಜೃಂಭಿಸಿತು ಎಂಬುದು ಅಭಿಮಾನದ ಸಂಗತಿ.

ಗದುಗಿನ ಬದರೀನಾಥ ಹೊಬಾಳಿ ಅವರು ಬಾಗಲಕೋಟೆಯ ವಿದ್ಯಾರಣ್ಯ ಮುದ್ರಣಾಲಯದಲ್ಲಿ ಪತ್ರಿಕೆಯ ಮದ್ರಣವನ್ನು ಆರಂಭಿಸಿ ಚಂದ್ರಿಕಾ ಮುದ್ರಣಾಲಯಕ್ಕೆ ಸ್ಥಳಾಂತರಿಸಿದರು. ಶತಮಾನದಷ್ಟು ಹಳೆಯದಾದ ಈ ಮುದ್ರಣಾಲಯದ ಮಾಲೀಕರಾದ ದಿ. ಬಾಬುರಾವ ಕೆರೂರ ಅವರು ತಮ್ಮ ಕಷ್ಟಗಳನ್ನು ಬದಿಗೊತ್ತಿ ಪತ್ರಿಕೆಯ ನಿರಂತರ ಪ್ರಸಾರಕ್ಕೆ ಶ್ರಮ ವಹಿಸಿದರು. ಹೊಂಬಾಳಿರವರೊಂದಿಗೆ ಬಾಗಲಕೋಟೆಗೆ ಆಗಮಿಸಿದ ಟಿ. ಎಸ್. ಪಾಟೀಲರು ಪತ್ರಿಕೆಯ ಸ್ಥಾನಿಕ ಸಂಪಾದಕರಾಗಿ ಅದನ್ನು ಮನೆ ಮನೆಗೆ ಅನಾವರಣಗೊಳಿಸಿದರು. ಪಾಟೀಲರದು ನಿರ್ಭಿತಿ ಪತ್ರಿಕೋದ್ಯಮ, ವ್ಯವಸ್ಥೆಯನ್ನು ಜನತೆಯ ಅಭಿವೃದ್ದಿಗೆ ಮುಖ ಮಾಡಿಸಬೇಕೆಂಬ ಅವರ ಕಾಳಜಿ ಮಹೋನ್ನತವಾದದ್ದು. ಇಲ್ಲಿನ ಉದ್ಯಮಿಗಳನ್ನು, ಉದ್ಯಮವನ್ನು ಪರಿಚಯಿಸುತ್ತಲೇ ಬಾಗಲಕೋಟೆ ಭಾಗಕ್ಕೆ ಆಗಬೇಕಾಗಿರುವ ಅಭಿವೃದ್ದಿಯ ಬಗ್ಗೆ ಬೆಳಕು ಚೆಲ್ಲಿದರು. ಇದರ ಪರಿಣಾಮವಾಗಿ ಮುಳುಗಡೆಯ ಚಿಂತನೆ ಆರಂಭವಾಯಿತು.

ಟಿ. ಎಸ್. ಪಾಟೀಲ ಹಾಗೂ ಅವರೊಂದಿಗೆ ಪ್ರಜಾವಾಣಿ ವರದಿಗಾರರಾಗಿದ್ದ ಬಿ. ಜಿ. ಕೆರೂರ ಅವರು ಬಾಗಲಕೋಟೆ ಮುಳುಗಡೆಗೆ ವಿರೋಧ ವ್ಯಕ್ತಪಡಿಸಿ ಉಳಿಯಬೇಕಾದ ನಗರವನ್ನು ಉಳಿಸಬಹುದಾದ ಸಾಧ್ಯತೆಗಳ ಕುರಿತು ಜನರ ಗಮನ ಸೆಳೆದರು. ಅಂದಿನ ಶಾಸಕರು ಇದಕ್ಕೆ ಧ್ವನಿಯಾದರು. ಆದರೆ ಸರಕಾರ ಇದರ ಬಗ್ಗೆ ಒಲವು ತೋರಿದರೂ ಸಹ ತಜ್ಞರ ಅಭಿಪ್ರಾಯಗಳು ಜನತೆಗೆ ಒಪ್ಪಿಗೆ ಆಗಿಲ್ಲವಾದ್ದರಿಂದ ಮುಳುಗಡೆಗೆ ಜನ ಸಮ್ಮತಿಸಬೇಕಾಯಿತು.

೧೯೬೨ರ ಸಮಸ್ಯೆಗೆ ಪರಿಹಾರ ಸಿಕ್ಕಿದ್ದು ೧೯೮೩ರಲ್ಲಿ. ಆದರೆ, ಅದು ಈ ವರೆಗೂ ಇತ್ಯರ್ಥವಾಗಲಿಲ್ಲ ಎಂಬುದು ಬೇರೆ ಮಾತು ಜನರನ್ನು ವೈಚಾರಿಕ ಮಂಥನಕ್ಕೆ ಅಳವಡಿಸಿದ ಕೀರ್ತಿ ನಾಗರಿಕ ಪತ್ರಿಕೆಗೆ ಸಲ್ಲುತ್ತದೆ. ಈ ಪತ್ರಿಕೆಯನ್ನು ಅಭಿವೃದ್ದಿಪಡಿಸಿದ ಟಿ. ಎಸ್. ಪಾಟೀಲರು ೧೯೮೩ರಲ್ಲಿ ನಾಡನುಡಿ ಎಂಬ ದಿನಪತ್ರಿಕೆಯನ್ನು ಆರಂಭಿಸಿದರು. ಬಾಬುರಾವ ಕೆರೂರ ಅವರು ನಾಗರಿಕ ದಿನಪತ್ರಿಕೆಯನ್ನು ಮುಂದುವರೆಸಿಕೊಂಡು ಬಂದರು. ಲೇಖಕರು (ರಾಮ ಮನಗೊಳಿ) ಸ್ಥಾನಿಕ ಸಂಪಾದಕರಾಗಿ ೧೯೯೧ರವರೆಗೆ ಮುನ್ನೆಡೆಸಿಕೊಂಡು ಬಂದರು. ಬಾಬುರಾವ ಕೆರೂರ ಅವರು ೨೦೦೫ ರಲ್ಲಿ ನಿಧನ ಹೊಂದಿದ ನಂತರ ಅವರ ಪುತ್ರ ಶಶಿಕುಮಾರ ಕೆರೂರ ಅವರು ಸ್ಥಾನಿಕ ಸಂಪಾದಕರಾಗಿದ್ದಾರೆ. ಬದರೀನಾಥ ಹೊಂಬಾಳಿ ಅವರ ನಿಧನದ ಕಾರಣ ಅವರ ಪುತ್ರ ಅಜೀತ ಹೊಂಬಾಳಿ ಸಂಪಾದಕರಾಗಿದ್ದಾರೆ. ಬಸರೀನಾಥ ಹೊಂಬಾಳಿ ಅವರ ನಿಧನದ ಕಾರಣ ಅವರ ಪುತ್ರ ಅಜೀತ ಹೊಂಬಾಳಿ ಸಂಪಾದಕರಾಗಿದ್ದು ಗದಗ ಹಾಗೂ ಕೊಪ್ಪಳದಲ್ಲಿಯೂ ಸಹ ಈ ಪತ್ರಿಕೆ ಪ್ರಕಟವಾಗುತ್ತಿದೆ. ಬಾಗಲಕೋಟೆ ನಾಗರಿಕಕ್ಕೆ ಈಗ ೩೩ ವರ್ಷಗಳ ಸಂಭ್ರಮ. ಜಿಲ್ಲೆಯೊಂದರಲ್ಲಿ ಪತ್ರಿಕೆಯೊಂದರ ಸಾಧನೆ ಈ ಉತ್ತರ ಕರ್ನಾಟಕದಲ್ಲಿ ಮಹೋನ್ನತವಾದದ್ದು.

ನಾಡನುಡಿ

೨೭ ವರ್ಷಗಳನ್ನು ಪೂರ್ತಿಗೊಳಿಸಿರುವ ನಾಡನುಡಿ ದಿನಪತ್ರಿಕೆ ಬಾಗಲಕೋಟೆಯ ಪತ್ರಿಕೋದ್ಯಮದ ವೈಭವನ್ನು ಶ್ರೀಮಂತಗೊಳಿಸಿದೆ. ನಾಗರಿಕ ಪತ್ರಿಕೆಯನ್ನು ತೊರೆದು ಬಂದ ಟಿ . ಎಸ್. ಪಾಟೀಲರು ನಾಡನುಡಿ ಪತ್ರಿಕೆಯನ್ನು ಆರಂಭಿಸಿದ್ದು, ಸ್ವತಂತ್ರ ಮುದ್ರಣದ ಮೊದಲ ಪತ್ರಿಕೆ ಎನ್ನಬಹುದು. ಇದರ ಅನೇಕ ಅಂಕಣಗಳು ಜನಪ್ರಿಯವಾಗಿದ್ದು, ದಿ. ಬಿ. ಜಿ. ಕೆರೂರ ಅವರ ಅಂತರ್ಮಥನ, ಬೀಳಗಿಯ ವೀರೇಂದ್ರ ಶೀಲವಂತ, ಇಲಕಲ್ಲದ ಬಿ. ಬಾಬು, ಮಹಾಂತೇಶ ಗೊರಜನಾಳ, ಅಬ್ಬಾಸಅಲಿ ಮೇಲಿನಮನಿ, ಪ್ರಲ್ಹಾದ ಹುದ್ದಾರ, ಮುಧೋಳದ ಎಲ್ . ಬಿ. ಹಳ್ಳದ ಅವರ ಲೇಖನಗಳ ಮೂಲಕ ಜನಪ್ರಿಯವಾಗಿತ್ತು. ೧೯೯೧ ರಲ್ಲಿ ಟಿ. ಎಸ್. ಪಾಟೀಲರ ನಿಧನದ ನಂತರ ಈ ಕೃತಿಯ ಲೇಖಕ (ರಾಮ ಮನಗೊಳಿ) ಅವರು ನಾಡುನುಡಿ ಮುನ್ನೆಡೆಸಿಕೊಂಡು ಬಂದಿದ್ದು ಈಗಲೂ ಪತ್ರಿಕೆ ಅತ್ಯಂತ ಜನಪ್ರಿಯವಾಗಿದೆ. ಈ ಪತ್ರಿಕೆಯ ಸಂಪಾದಕರಿಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ ದೊರೆತಿರುವುದು ಇದರ ಜನಪ್ರಿಯತೆಗೆ ಸಾಕ್ಷಿ. ಮುಂಚೂಣಿಯಲ್ಲಿದ್ದುದು ಈ ಪತ್ರಿಕೆಯ ಗೌರವ.

ಸಮಾಜವೀರ

ಸಮಾಜವೀರ ಇಂದು ದಿನಪತ್ರಿಕೆಯಾಗಿದ್ದು ಕಾಲು ಶತಮಾನವನ್ನು ಪೂರೈಸಿದೆ. ವಿಶೇಷ ಎಂದರೆ ಆರಂಭದಲ್ಲಿ ವಾರಪತ್ರಿಕೆಯಾಗಿದ್ದ ಸಮಾಜವೀರ ದಿನಪತ್ರಿಕೆಯಾಗಿದೆ. ಅಲ್ಲಸಂಖ್ಯಾತ ಸಮುದಾಯದ ಉರ್ದು ಭಾಷಿಕ ಎನ್. ಎಚ್. ಶಾಲಗಾರ ಅವರು ಈ ಪತ್ರಿಕೆಯ ಯಶ್ವಸ್ವಿ ಸಂಪಾದಕರು. ಯು. ಎಚ್. ಸಾರವಾಡ ಅವರ ನೆರವಿನೊಂದಿಗೆ ಪತ್ರಿಕೆ ಆಕರ್ಷವಾಗಿ ಬರುತ್ತಿದ್ದು, ಕ್ರೀಡೆ, ಸಮಾಜ, ಸಾಹಿತ್ಯದ ಪ್ರತ್ಯೇಕ ಅಂಕಣಗಳ ಮೂಲಕ ಓದುಗರನ್ನು ತಲುಪಿದೆ. ಮಾಧ್ಯಮ ಅಕಾಡೆಮಿಯ ಪ್ರಶಸ್ತಿ ಪಡೆದಿರುವ ಶಾಲಗಾರ ಅವರು ಪತ್ರಕರ್ತರ ಸಂಘಟನೆಯಲ್ಲಿ ಕೂಡ ಮುಂಚೂಣಿಯಲ್ಲಿದ್ದು ಜಿಲ್ಲಾ ಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯ ಅಧ್ಯಕ್ಷರಾಗಿ ಕಾರ‍್ಯ ನರ್ವಹಿಸುತ್ತಿದ್ದಾರೆ. ಉರ್ದುವಿಗಿಂತಲೂ ಕನ್ನಡದ ಬಗ್ಗೆ ಅವರಿಗಿರುವ ಕಳಕಳಿ ಈ ಪತ್ರಿಕೆಯ ಶ್ರೇಯಸ್ಸಿನ ಬುನಾದಿಯಾಗಿದೆ.

ಹುಚ್ಚ

ಹುಚ್ಚ ಪತ್ರಿಕೆಯ ಆಕರ್ಷಣೆ ಬೀಳಗಿಯಿಂದ ಪ್ರಕಟವಾಗುವ ಈ ಪತ್ರಿಕೆಗೆ ದಲಿತ ವ್ಯಕ್ತಿ ಸಂಪಾದಕರಾಗಿರುವದು ವಿಶೇಷ. ಒಳ್ಳೆಯ ವಿಚಾರಗಳನ್ನು ಹೇಳಿದಾಗ ಅವನೊಬ್ಬ ಹುಚ್ಚ ಎಂದು ಕರೆಯುವ ಸಮಾಜದ ಮುಂದೆ ನನ್ನ ಲೇಖನಿ ಖಡ್ಗವಾಗಿ ಝಳಪಿಸುತ್ತಿದೆ. ನಿಂದನೆಗಳು ಏನೇ ಬರಲಿ ಸತ್ಯವೇ ನಮ್ಮ ಗುರಿಯಾಗಿರಲಿ ಎಂಬ ಛಲ ಹೊತ್ತಿರುವ ಶಂಕರ ಚಲವಾದಿ ಅವರ ಈ ಪತ್ರಿಕೆ ಕೆ. ಎಂ. ಕಣವಿ ಅವರು ಬೆನ್ನೆಲಬು. ಸತ್ಯ ಸೊರಗದಿರಲಿ – ಸುಳ್ಳು ಸೊಕ್ಕದಿರಲಿ ಎಂಬ ಮಾತು ಈ ಪತ್ರಿಕೆಯ ಮುಖಪುಟದ ಮೇಲೆ ರಾರಾಜಿಸಿ ಆಕರ್ಷಿಸಿದೆ. ಶಂಕರ ಚಲವಾದಿ ಅವರ ಪುತ್ರ ಸದಾಶಿವ ಚಲವಾದಿ ಅವರು ಪತ್ರಿಕೆಯನ್ನು ಪ್ರಕಟಿಸುವಲ್ಲಿ ಶ್ರಮಪಡುತ್ತಿದ್ದಾರೆ. ೧೯೭೮ರಲ್ಲಿ ಹುಚ್ಚ ವಾರ ಪತ್ರಿಕೆಯಾಗಿ ಆರಂಭಗೊಂಡ ಕಾಲಕ್ರಮೇಣ ದಿನಪತ್ರಿಕೆಯಾಗಿ ಪರಿವರ್ತನೆಯಾಯಿತು.

ಸತ್ಯಾಶ್ರಯ

ವೆಂಕಟೇಶ ಕುಲಕರ್ಣಿ, ಬಾಬುರೆಡ್ಡಿ ತುಂಗಳ, ಎಂ. ಸಿ. ಗೊಂದಿ ಅವರ ಸಂಗಾತಿಯಾಗಿ ಬಿಜಾಪುರದಲ್ಲಿ ದೇಶಾಭಿಮಾನಿ ಪತ್ರಿಕೆಯನ್ನು ಮುದ್ರಿಸುತ್ತಿದ್ದ ಶರಣಬಸವರಾಜ ಜಿಗಜಿನ್ನಿ ಅವರು ಹೋರಾಟದ ಮೂಸೆಯಲ್ಲಿ ಮೂಡಿಬಂದವರು. ಬಾಗಲಕೋಟೆಯಲ್ಲಿ ಕೆಲಕಾಲ ಈ ಪತ್ರಿಕೆಯನ್ನು ಮುಂದುವರೆಸಿಕೊಂಡು ೧೯೭೮ ರಲ್ಲಿ ಸತ್ಯಾಶ್ರಯ ವಾರಪತ್ರಿಕೆಯನ್ನು ಆರಂಭಿಸಿದರು. ನಂತರ ಇದನ್ನೇ ದಿನಪತ್ರಿಕೆಯನ್ನಾಗಿ ೧೯೯೧ರಲ್ಲಿ ಪರಿವರ್ತಿಸಿದರು. ಕಾಂಗ್ರೆಸ್ ನಿಷ್ಠೆಯ ಜಿಗಜಿನ್ನಿ ಅವರು ಪತ್ರಕರ್ತರ ಸಂಘಟನೆಯನ್ನು ಪ್ರಮುಖ ಪಾತ್ರ ವಹಿಸಿದ್ದಾರೆ. ೨೦೦೨ರಲ್ಲಿ ಅವರು ನಿಧನ ಹೊಂದಿದ ನಂತರ ಅವರ ಪುತ್ರ ಆನಂದ ಜಿಗಜಿನ್ನಿ ಅವರು ಪತ್ರಿಕೆಯನ್ನು ಮುಂದುವರೆಸಿಕೊಂಡು ಬಂದಿದ್ದಾರೆ.

ವಿದ್ಯಮಾನ

ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕ ವಿಶ್ಲೇಷಣೆಯ ವಿದ್ಯಮಾನ ದಿನಪತ್ರಿಕೆಗೆ ಕೆ. ಎಂ. ಕಳ್ಳಿಗುಡ್ಡ ಅವರು ಸಂಪಾದಕರಾಗಿದ್ದು ಪತ್ರಿಕೆಯು ರಾಜಕೀಯ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ದಿಯ ಮಾನದಂಡವನ್ನಿಟ್ಟುಕೊಂಡು ಜಿಲ್ಲೆಯ ಸಮಗ್ರ ಅಭಿವೃದ್ದಿಗೆ ಶ್ರಮಿಸುತ್ತಿದೆ. ಅಲ್ಲದೇ ವಾರದ ಅಂಕಣ, ಕಥೆ, ಜನತೆಯ ಸಮಸ್ಯೆಗಳಿಗೆ ಸ್ಪಂದನೆ ಹೀಗೆ ಹತ್ತು ಹಲವಾರು ವಿಷಯಗಳ ಕುರಿತು ಓದುಗರಿಗೆ ತನ್ನ ಸೇವೆ ಸಲ್ಲಿಸುತ್ತಿದೆ. ಕಳ್ಳಿಗುಡ್ಡ ಅವರ ಕುಟುಂಬ ಮುದ್ರಣ ಉದ್ಯಮದಲ್ಲಿ ಸುಮಾರು ೭೫ ವರ್ಷಗಳಿಂದ ತೊಡಗಿಸಿಕೊಂಡಿದ್ದು ಪತ್ರಿಕೆ ಆರಂಭಿಸಿರುವದು ಅವರಿಗೆ ಕಷ್ಟದ ಕೆಲಸವಾಗಿಲ್ಲ. ಆರಂಭದಿಂದಲೇ ಸಿಂಗಲ್ ಕ್ರೌನ್ ಆಕಾರದಲ್ಲಿ ಪತ್ರಿಕೆ ಪ್ರಕಟವಾಗುತ್ತಿರುವುದು ಇದರ ಹೆಗ್ಗಳಿಕೆ. ಮೊಳೆಯಚ್ಚು ಮುದ್ರಣ ಆರಂಭಿಸಿದ ಪತ್ರಿಕೆ ಬದಲಾದ ಬೆಳವಣಿಗೆಯಲ್ಲಿ ಆಫಸೆಟ್‌ ಮುದ್ರಣಕ್ಕೂ ಒಗ್ಗಿಕೊಂಡಿದೆ. ಸಮಾಜ ಹಾಗೂ ಸಮುದಾಯದ ದೃಷ್ಟಿಯಿಂದ ಪತ್ರಿಕೆ ಹೆಚ್ಚು ಜನಪ್ರಿಯವಾಗಿದೆ.

ಶ್ರಾವಣ

ಶ್ರಾವಣ ದಿನಪತ್ರಿಕೆ ಕೂಡ ಮುದ್ರಣ ಉದ್ಯಮದ ಜಿಗಜಿನ್ನಿ ಕುಟುಂಬದ ಪಡಿಯಚ್ಚು. ಸಹೋದರ ಶರಣಬಸವರಾಜ ಜಿಗಜಿನ್ನಿ ಅವರ ಮಾರ್ಗದರ್ಶನದಲ್ಲಿಯೇ ಸಿ. ಎಸ್. ಜಿಗಜಿನ್ನಿ ಅವರು ಈ ಪತ್ರಿಕೆಯನ್ನು ಪ್ರಕಟಿಸುತ್ತ ಬಂದಿದ್ದು ಅವರೇ ಸಂಪಾದಕರಾಗಿದ್ದಾರೆ. ಜಿಲ್ಲೆಯ ಸಮಗ್ರ ಅಭಿವೃದ್ದಿ ಹಾಗೂ ಜನತೆಯ ಸಮಸ್ಯೆಗಳಿಗೆ ಸ್ಪಂದಿಸಿ ಲೇಖನಗಳನ್ನು ಬಿತ್ತರಿಸುವ ಮೂಲಕ ತನ್ನ ಸೇವೆಯನ್ನು ಸಲ್ಲಿಸುತ್ತಿದೆ.

ಸುದಿನ

ಸುದಿನ ದಿನಪತ್ರಿಕೆ ಸುಭಾಸ ಹೊದ್ಲೂರ ಅವರ ಒಡೆತನಕ್ಕೆ ಸೇರಿದ್ದು. ದಲಿತ ಸಮುದಾಯದ ಈ ಯುವಕನ ಸಾಹಸ ಮೆಚ್ಚಲೇಬೇಕು. ಸತ್ಯಾಶ್ರಯ, ಸಮಾಜವೀರ ಪತ್ರಿಕೆಯ ವರದಿಗಾರರಾಗಿ ವಿದ್ಯಮಾನದ ಮುಖ್ಯಸ್ಥರಾಗಿಯೂ ಕೆಲಸ ಮಾಡಿರುವ ಅವರು ಸ್ವತಂತ್ರ ಪತ್ರಿಕೆಯನ್ನು ಆರಂಭಿಸುವ ಮೂಲಕ ಸ್ವಾವಲಂಬಿ ಬದುಕಿಗೆ ಪ್ರೇರಕ ಶಕ್ತಿಯಾಗಿದ್ದಾರೆ. ಇಡೀ ಪತ್ರಿಕೆಯನ್ನು ಅವರೇ ಸಿದ್ಧಪಡಿಸುತ್ತಿರುವದು ಇನ್ನೊಂದು ವಿಶೇಷ. ಅಕ್ಷರಜೋಡಣೆ, ವರದಿಗಾರಿಕೆ ಎಲ್ಲವನ್ನು ಅವರೇ ನಿಭಾಯಿಸುವ ಸಾಮರ್ಥ್ಯ ಹೊಂದಿದ್ದು, ಮಾರುಕಟ್ಟೆ, ಜಾಹೀರಾತು ಕೂಡ ಪ್ರಭಾವಿಯಾಗಿ ಬೆಳೆದು ನಿಂತಿದ್ದಾರೆ.

ಸವಿನುಡಿ

ಸುದಿನ ದಿನಪತ್ರಿಕೆಯ ಸುಭಾಸ ಹೊದ್ಲೂರ ಅವರ ಜೊತೆಗಾರರಾಗಿ ಕೆಲಸ ಮಾಡಿದ ಉಮೇಶ ಪೂಜಾರ ಅವರು ಪರಿಶಿಷ್ಟ ಪಂಗಡದವರು. ಅವರು ಬಾಗಲಕೋಟೆಯ ಕೇಬಲ್ ನೆಟವರ್ಕ್‌ನ ಉದ್ಯಮದಲ್ಲಿ ಯಶಸ್ಸು ಸಾಧಿಸಿ ಸವಿನುಡಿ ದಿನಪತ್ರಿಕೆಯನ್ನು ಆರಂಭಿಸುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ. ಯುವ ಬರಹಗಾರರಿಗೆ ಉತ್ತೇಜನ ನೀಡಿ ಪ್ರೇರಕಶಕ್ತಿಯಾಗಿದ್ದು ಸ್ವತಂತ್ರ ಮುದ್ರಣಾಲಯ ಹೊಂದಿದ್ದಾರೆ. ಬೆಂಗಳೂರಿನಲ್ಲಿಯೂ ಕೂಡ ಸಂಜೆ ಕರ್ನಾಟಕ ದಿನಪತ್ರಿಕೆ ಆರಂಭಿಸಿರುವುದು ಇವರ ಸಾಹಸದ ಮೈಲಿಗಲ್ಲು. ಬಾಗಲಕೋಟೆಯಲ್ಲಿ ಸಣ್ಣ ಪತ್ರಿಕೆಗಳಿಗೆ ಕಲರ್ ಮುದ್ರಣ ಅವಕಾಶ ಮಾಡಿಕೊಡುವ ಹೆಬ್ಬಯಕೆಯನ್ನು ಅವರು ಹೊಂದಿದ್ದಾರೆ.

ಕೋಟೆಯ ಕರ್ನಾಟಕ

ಕೋಟೆಯ ಕರ್ನಾಟಕ ದಿನಪತ್ರಿಕೆಯ ಸಂಪಾದಕರಾಗಿ ಶ್ರೀಮತಿ ಪರಿಮಳಾ ಆರ್. ಮನಗೂಳಿ ಅವರು ಕಾರ್ಯನಿರ್ವಹಿಸುವ ಮೂಲಕ ಪತ್ರಿಕೋದ್ಯಮದಲ್ಲಿ ಒಬ್ಬ ಮಹಿಳೆಯು ಸೇವೆ ಸಲ್ಲಿಸಿ ಪತ್ರಿಕೆಯ ಮೂಲಕ ಜನತೆಗೆ ನ್ಯಾಯ ಒದಗಿಸಲು ಶ್ರಮಿಸುತ್ತಿದ್ದಾರೆ. ಲೇಖಕರ ಪತ್ನಿಯಗಿರುವ ಇವರು ಜಿಲ್ಲೆಯ ಪತ್ರಿಕೋದ್ಯಮದಲ್ಲಿ ದಿನಪತ್ರಿಕೆಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿರುವುದು ಒಬ್ಬ ಮಹಿಳೆ ಎಂಬ ಹೆಗ್ಗಳಿಕೆಗೆ ಶ್ರೀಮತಿ ಪರಿಮಳಾ ಮನಗೂಳಿ ಅವರು ಕಾರಣರಾಗಿದ್ದಾರೆ. ಈ ಪತ್ರಿಕೆ ಕೊಪ್ಪಳ ಆವೃತ್ತಿಯನ್ನೂ ಕೂಡ ಆರಂಭಿಸಿದ್ದು ವಿಶೇಷ.

ಸ್ಟೇಟ್ ಎಕ್ಸ್ ಪ್ರೆಸ್

ಸ್ಟೇಟ್ ಎಕ್ಸ್‌ಪ್ರೆಸ್ ಪತ್ರಿಕೆಯ ಸಂಪಾದಕರಾಗಿ ಎಸ್. ವ್ಹಿ. ಮುದಕವಿ ಅವರು ಸೇವೆ ಸಲ್ಲಿಸುತ್ತಿದ್ದು, ಅಲ್ಪಸಂಖ್ಯಾತ ಜನಾಂಗಕ್ಕೆ ಸೇರಿದ ಇವರು ಉರ್ದು ಭಾಷಿಕರಾಗಿದ್ದರೂ ಸಹ ಕನ್ನಡ ಮಾಧ್ಯಮದಲ್ಲಿ ಪತ್ರಿಕೆ ಆರಂಭಿಸಿ ಜಿಲ್ಲೆಯ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿರುವ ಪತ್ರಿಕೆ ಜಿಲ್ಲಾ ಪತ್ರಿಕೋದ್ಯಮಕ್ಕೆ ತನ್ನದೇ ಆದ ಸೇವೆ ಸಲ್ಲಿಸುತ್ತಿದೆ.

ಪ್ರಕಾಶ ಬಾಳಕ್ಕನವರ ಅವರ ಸಂಪಾದಕತ್ವದ ಅಮರ ಭಾರತಿ, ನಾಗರಾಜ ಹೊನ್ನುಟಗಿ ಅವರ ಸಂಪಾದಕತ್ವದ ಅರುಣಭೇರಿ, ತುಳಸಿದಾಸ ಲೋಖಂಡೆ ಅವರ ಸಂಪಾದಕತ್ವದ ಪಂಚತಂತ್ರ ಅಳಗವಾಡಿ ಅವರ ಸಂಪಾದಕತ್ವದಲ್ಲಿ ಜೇಷ್ಠ ಪತ್ರಿಕೆ ಪ್ರಕಟವಾಗುತ್ತಿದ್ದು ಇನ್ನೂ ಮಾಧ್ಯಮ ಪಟ್ಟಿಯಲ್ಲಿ ಸೇರ್ಪಡೆಯಾಗಿಲ್ಲ.

ಸೂಪರ ಟೈಮ್ಸ್

ಸೂಪರ ಟೈಮ್ಸ್ ಪತ್ರಿಕೆ ಬಾಗಲಕೋಟೆ ಜಿಲ್ಲೆಯ ಇಲಕಲ್ಲ ಪಟ್ಟಣದಿಂದ ಮುದ್ರಣವಾಗುತ್ತಿದ್ದು, ಅಬ್ದುಲ್ ಜಬ್ಬರ ಕಲಬುರ್ಗಿ ಅವರು ಮುಖ್ಯ ಸಂಪಾದಕರಾಗಿ ಹಾಗೂ ಮಹೆಬೂಬ ಸರಕಾವಸ ಅವರು ಸಂಪಾದಕರಾಗಿದ್ದಾರೆ. ಇಲಕಲ್ಲ ಪಟ್ಟಣದಿಂದ ಮುದ್ರಣವಾಗುತ್ತಿರುವ ಈ ಪತ್ರಿಕೆ ಸ್ಥಳೀಯ ಸಮಸ್ಯೆಗಳು ಸೇರಿದಂತೆ ಜಿಲ್ಲೆಯ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಪತ್ರಿಕೋದ್ಯಮಕ್ಕೆ ಸೇವೆ ಸಲ್ಲಿಸುತ್ತಿದೆ.

ಬಾಗಲಕೋಟೆ ಜಿಲ್ಲಾ ಪತ್ರಿಕೋದ್ಯಮ ಜಾತಿ, ಕೀಳು, ಮೇಲೆಂಬ ಎಲ್ಲವನ್ನು ಬದಿಗೊಟ್ಟು ಶ್ರೀಸಾಮಾನ್ಯನ ಸಮಸ್ಯೆಗೆ ಸ್ಪಂದಿಸುವ ಮೂಲಕ ಸಮಾಜದ ಸರ್ವತೋಮುಖ ಅಭಿವೃದ್ದಿ ಹಾಗೂ ಜಿಲ್ಲೆಯ ಜ್ವಲಂತ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದ್ದು, ರಾಜ್ಯ ಪತ್ರಿಕೆಗಳಲ್ಲಿ ಜಿಲ್ಲೆಯ ಸಮಗ್ರ ದೃಷ್ಟಿಕೋನಕ್ಕಾಗಿ ಜಿಲ್ಲೆಯ ಪತ್ರಿಕೆಗಳನ್ನು ಅವಲಂಬಿಸಿರುವುದು ಜಿಲ್ಲಾ ಪತ್ರಿಕೋದ್ಯಮದ ಘನತೆಗೆ ಹಿಡಿದ ಕನ್ನಡಿಯಾಗಿದೆ.

ಜಿಲ್ಲಾ ಮಟ್ಟದ ಪತ್ರಿಕೆಗಳಿಗಾಗಿ ಜಾಹೀರಾತುದಾರರು ಕಡಿಮೆ ಇರಬಹುದು, ಓದುಗರ ಸಂಖ್ಯೆ ವಿರಳ ಇರಬಹುದು, ಆದರೆ ಅವುಗಳ ಕಾರ್ಯವ್ಯಾಪ್ತಿ ಸೀಮಾತೀತವಾಗಿದೆ. ಸ್ಥಳೀಯ ಸಮಸ್ಯೆಗಳಿಗೆ ಈ ಪತ್ರಿಕೆಗಳೇ ಇವುಗಳಿಗೆ ಪರಿಹಾರವಾಗಿವೆ. ಇವುಗಳಿಂದಲೇ ಅವುಗಳಿಗೆ ಮುಕ್ತಿ ಸಿಕ್ಕಿವೆ ಎನ್ನುವುದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಘಟನೆಗಳು ಸಂಭವಿಸಿದಾಗ ಸ್ಥಳೀಯ ಪತ್ರಿಕೆಗಳ ವರದಿಯನ್ನು ಎಫ್.ಐ.ಆರ್. ಎಂದೇ (ಪ್ರಥಮ ತನಿಖಾ ವರದಿ) ಪರಿಗಣಿಸಬಹುದು ಅಷ್ಟರಮಟ್ಟಿಗೆ ಅವುಗಳಲ್ಲಿ ಪಾರದರ್ಶಕವಿದೆ. ಗಣ್ಯರನ್ನು ಓಲೈಸುವುದನ್ನಾಗಲಿ, ಜಾಹೀರಾತಿಗಾಗಿ ಅವಲಂಬಿಸುವುದಾಗಲಿ ಇಲ್ಲ, ಬದಲಾಗಿ ಅವುಗಳನ್ನೆಲ್ಲ ಮೀರಿ ಈ ಪತ್ರಿಕೆಗಳು ಜಿಲ್ಲೆಯ ಸಮಗ್ರ ಅಭಿವೃದ್ದಿಗೆ ಕೆಲಸ ಮಾಡಿವೆ.

ದೊಡ್ಡ ಪತ್ರಿಕೆಗಳು

ಬಾಗಲಕೋಟೆ ಜಿಲ್ಲೆಯಲ್ಲಿ ರಾಜ್ಯ, ರಾಷ್ಟ್ರಮಟ್ಟದ ಪ್ರಸಾರ ಹೊಂದಿರುವ ಪತ್ರಿಕೆಗಳು ಪ್ರಭುತ್ವ ಸಾಧಿಸಿವೆ. ಆದರೆ ಸ್ಥಳೀಯ ಪತ್ರಿಕೆಗಳೊಂದಿಗೆ ಇವುಗಳ ಒಡನಾಟ ಅತ್ಯಂತ ಸುಮಧುರವಾಗಿದ್ದು ಮಾದ್ಯಮದ ಸಮರ ಈ ಜಿಲ್ಲೆಯಲ್ಲಿ ಇರದಿರುವುದು ಆರೋಗ್ಯಕರ ಬೆಳವಣಿಗೆ ಮಾತ್ರವಲ್ಲ ಇದು ರಾಜ್ಯಕ್ಕೆ ಮಾದರಿಯಾಗಿದೆ.

ಸ್ವಾತಂತ್ರ್ಯ ಕಾಲದಲ್ಲಿ ಈ ಜಿಲ್ಲೆಯಲ್ಲಿ ಸಂಯುಕ್ತ ಕರ್ನಾಟಕಕ್ಕೆ ಜೋರಾಪೂರ ಗುರುರಾಯರು ವರದಿಗಾರರಾಗಿದ್ದು ೧೯೭೯ರವರೆಗೂ ಅವರು ಕೆಲಸ ಮಾಡಿದ್ದಾರೆ. ಬಾಗಲಕೋಟೆ ನಗರದಲ್ಲಿ ಪತ್ರಕರ್ತರ ಸಂಘಟನೆಗೆ ಬುನಾದಿ ಹಾಕಿದ್ದಾರೆ.

ಇವರ ಅವಧಿಯಲ್ಲಿಯೇ ಕೆ. ಡಿ. ಹುದ್ದಾರ, ನಂತರ ಟಿ. ಎಸ್. ಪಾಟೀಲ, ಗೋವಿಂದರಾವ ಪರ್ವತೀಕರ, ಎಸ್. ವ್ಹಿ. ವಂದಾಲ ಅವರು ಮಾಧ್ಯಮ ಕ್ಷೇತ್ರವನ್ನು ಪ್ರವೇಶಿಸಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖವಾಣಿ ವಿಕ್ರಮ ವಾರಪತ್ರಿಕೆಗೆ ವರದಿಗಾರರಾಗಿರುವ ರಂಗನಾಥ ಶಿಂಧೆ ಅವರು ಇಂದಿಗೂ ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದು ವಿವಿಧ ಪತ್ರಿಕೆಗಳಿಗೆ ಲೇಖನ ಬರೆಯುತ್ತಿದ್ದಾರೆ. ಸಂಯುಕ್ತ ಕರ್ನಾಟಕ ಪತ್ರಿಕೆ ಹುಬ್ಬಳ್ಳಿಯಲ್ಲಿ ಮುದ್ರಣ ಆರಂಭಿಸಲು ಬಾಗಲಕೋಟೆ ಕೊಡುಗೆ ಅಪಾರವಾದದ್ದು. ಬೀಳಗಿ ತಾಲೂಕಿನ ಅನಗವಾಡಿಯ ಹ. ರಾ. ಪುರೋಹಿತರು ಪತ್ರಿಕೆಯ ಸಂಪಾದಕರಾಗಿದ್ದರು. ಇದೇ ಪತ್ರಿಕೆಯ ಎನ್. ವ್ಹಿ. ಜೋಶಿ, ಪ್ರಹ್ಲಾದ ಕುಳಲಿ (ಮೂಧೋಳ), ಅವರು ಸಹ ಸಂಪಾದಕರಾಗಿದ್ದರು. ಹುನಗುಂದದ ದಿ. ಗುರುರಾಜ ಜೋಶಿ ಅವರು ಸ್ಥಾನಿಕ ಸಂಪಾದಕರಾಗಿ ಕೆಲಸ ಮಾಡುವ ಮೂಲಕ ಪತ್ರಿಕೋದ್ಯಮವನ್ನು ಶ್ರೀಮಂತಗೊಳಿಸಿದ್ದಾರೆ. ಪತ್ರಿಕೆಯ ಲೋಕ ಶಿಕ್ಷಣ ಟ್ರಸ್ಟ್‌ನ ಕಾರ್ಯದರ್ಶಿಗಳಾಗಿ ಜಿಲ್ಲೆಯ ಎಂ. ಎಚ್. ಕೌಲಗಿ ಅವರು ಸೇವೆ ಸಲ್ಲಿಸಿದ್ದಾರೆ.

ಪ್ರಜಾವಾಣಿ ಪತ್ರಿಕೆಯಲ್ಲಿ ಸೇವೆ ಸಲ್ಲಿಸಿದ್ದ ದಿ. ಐ. ಕೆ. ಜಾಹಾಗೀರದಾರ ಅವರು ಸಹ ಇದೇ ಜಿಲ್ಲೆಯ ಕೆರೂರಿನವರು ಎಂಬುದು ಇನ್ನೊಂದು ವಿಶೇಷ. ವಿಜಯ ಕರ್ನಾಟಕ ಪತ್ರಿಕೆ ಆರಂಭಿಸಿದ ಸಾಹಸಿ ವಿಜಯ ಸಂಕೇಶ್ವರ ಅವರು ಬಾಗಲಕೋಟೆಯ ಅಳಿಯ. ಇವರ ಪತ್ನಿ ಶ್ರೀಮತಿ ಲಲಿತಾ ಸಂಕೇಶ್ವರ ಅವರು ಇಲ್ಲಿನ ಹಿರಿಯರಾದ ದಿ. ನಿಂಗಪ್ಪಣ್ಣ ಬ್ಯಾಳಿ ಅವರ ಪುತ್ರಿ. ಹೀಗಾಗಿ ವಿಜಯ ಕರ್ನಾಟಕ ಬೆಂಗಳೂರು, ಹುಬ್ಬಳ್ಳಿ ಮುದ್ರಣ ಆರಂಭಿಸಿದಾಗ ಬಾಗಲಕೋಟೆ ಆವೃತ್ತಿ ಕೂಡ ಆರಂಭ ಕಂಡಿತು. ಇದು ದೊಡ್ಡ ಪತ್ರಿಕೆಯೊಂದು ಜಿಲ್ಲೆಯ ಮೇಲೆ ಪ್ರಭುತ್ವ ಸಾಧಿಸಿದ ವಿಶೇಷ ಹೆಗ್ಗಳಿಕೆ.

ಬೆಳಗಾವಿಯಿಂದ ಪ್ರಕಟವಾಗುತ್ತಿದ್ದ ಕನ್ನಡಮ್ಮಕ್ಕೆ ಶ್ರೀಶೈಲ ಅಂಗಡಿ, ಗದುಗಿನ ನವೋದಯ ದಿನಪತ್ರಿಕೆಗೆ ಹಿರಿಯ ನಿವೃತ್ತ ಶಿಕ್ಷಕ ನ. ನಾ. ನರಗುಂದ ಸುದೀರ್ಘ ಅವಧಿಯಿಂದ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಜಾವಾಣಿ, ಕನ್ನಡಪ್ರಭ, ಉದಯವಾಣಿ ಪತ್ರಿಕೆಗಳು ಸಹ ಜಿಲ್ಲೆಯಲ್ಲಿ ಅತ್ಯಧಿಕ ಪ್ರಸಾರ ಹೊಂದಿದ್ದು ಆರಂಭದಲ್ಲಿ ದಿ. ಬಿ. ಜಿ. ಕೆರೂರ, ಐ ಎಸ್. ಜಂಬಗಿ ಅವರು ವರದಿಗಾರರಾಗಿ ಸೇವೆ ಸಲ್ಲಿಸಿ ಬಾಗಲಕೋಟೆಗೆ ಜಿಲ್ಲಾ ಸ್ಥಾನಮಾನ ದೊರಕಿದ ನಂತರ ಸ್ಟಾಫ್ ರೀಪೋಟರ್‌ಗಳ ನೇಮಕದ ಪದ್ಧತಿ ಆರಂಭವಾಗಿದೆ. ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಕೂಡ ಬಾಗಲಕೊಟೆ ಜಿಲ್ಲೆ ಹಿಂದೆ ಬಿದ್ದಿಲ್ಲ. ಎಲ್ಲ ಕನ್ನಡ ವಾಹಿನಿಗಳು ಇಲ್ಲಿ ತಮ್ಮ ಪ್ರಾತಿನಿಧ್ಯವನ್ನು ಪಡೆದಿವೆ.

ಬಾಗಲಕೋಟೆ ಜಿಲ್ಲೆಯ ಪತ್ರಿಕೋದ್ಯಮದ ವಿಶೇಷ ಎಂದರೆ ಯುವಪೀಳಿಗೆ ಹೆಚ್ಚು ಪ್ರಭಾವಶಾಲಿಯಾಗಿ ಬೆಳೆದು ನಿಂತಿದೆ. ಸಣ್ಣ ಪತ್ರಿಕೆಗಳು, ಜಿಲ್ಲಾ ಮಟ್ಟದ ಪತ್ರಿಕೆಗಳು, ರಾಜ್ಯ ಮಟ್ಟದ ಪತ್ರಿಕೆಗಳ ವರದಿಗಾರರಾಗಿ ಯುವಕರಾಗಿದ್ದಾರೆ. ಅದಕ್ಕಿಂತಲೂ ಹೆಚ್ಚಾಗಿ ಕ್ರಿಯಾಶೀಲರಾಗಿದ್ದಾರೆ, ಎಂದಿಗೂ ಪ್ರತಿಷ್ಠೆಯನ್ನು ಮುಂದಿಟ್ಟು ಕೊಂಡಿಲ್ಲ ಬದಲಾಗಿ ರಚನಾತ್ಮಕ, ಆರೋಗ್ಯಕರ ಪೈಪೋಟಿ ಸಾಧಿಸಿ ಜಿಲ್ಲೆಯ ಸಮಸ್ಯೆಗಳಿಗೆ ಬೆಳಕು ಚೆಲ್ಲಿದ್ದಾರೆ.

ಸಂಘಟನೆ

ಬಾಗಲಕೋಟೆ ಜಿಲ್ಲೆಯಲ್ಲಿ ಪತ್ರಕರ್ತರ ಸಂಘಟನೆಗೆ ಸುಮಾರು ೯೦ ವರ್ಷಗಳ ಇತಿಹಾಸವಿದೆ. ೧೯೨೮ ಜುಲೈ, ೩೧ ರಂದು ಬಾಗಲಕೋಟೆಯಲ್ಲಿ ಅಖಿಲ ಕರ್ನಾಟಕ ವೃತ್ತ ಪತ್ರಿಕಾ ಕರ್ತರ ಪ್ರಥಮಅಧಿವೇಶನ ನಡೆದಿರುವುದು ಈ ಜಿಲ್ಲೆಯ ಪತ್ರಿಕೋದ್ಯಮದ ವೈಭವಕ್ಕೆ ಸಾಕ್ಷಿಯಾಗಿದೆ. ಎರಡು ದಿನಗಳ ಕಾಲ ನಡೆದ ಅಧಿವೇಶನದಲ್ಲಿ ಅಂದಿನ ಮೈಸೂರು ಪ್ರಾಂತದ ಕ್ಷೇತ್ರದ ದಿಗ್ಗಜರು ಭಾಗವಹಿಸಿ ಬೆಳಕು ಚೆಲ್ಲಿದ್ದಾರೆ. ಡಿ. ವ್ಹಿ. ಗುಂಡಪ್ಪ ನವರು ಸಮ್ಮೇಳನದ ಅಧ್ಯಕ್ಷರಾಗಿ ಮಾಡಿದ ಭಾಷಣ ವೃತ್ತ ಪತ್ರಿಕೆಯ ಇತಿಹಾಸವನ್ನು ತೆರೆದಿಟ್ಟಿದೆ. ಅವರ ಇಡೀ ಭಾಷಣವನ್ನು ಕರ್ನಾಟಕದ ಪತ್ರಿಕಾ ಅಕಾಡೆಮಿ ೧೯೮೮ ರಲ್ಲಿ ವೃತ್ತ ಪತ್ರಿಕೆ ಎಂಬ ಪುಸ್ತಕದ ರೂಪದಲ್ಲಿ ಪ್ರಕಟಿಸಿದ್ದು ವೃತ್ತ ಪತ್ರಿಕೆಯ ಚರಿತ್ರೆ, ಅದರ ಕರ್ತವ್ಯ, ಅದರ ಸ್ವಾತಂತ್ರ್ಯ ಮೆಲುಕು ಹಾಕುವ ಶ್ರೇಷ್ಠ ಕೃತಿಯಾಗಿದೆ. ಇದನ್ನು ಕನ್ನಡ ಪತ್ರಿಕೋದ್ಯಮದ ಭಗವದ್ಗೀತೆ ಎಂದು ಕರೆಯುವಷ್ಟರ ಮಟ್ಟಿಗೆ ಅದು ಸಮೃದ್ಧವಾಗಿದೆ.

ಹೀಗೆ ಮೂಡಿಬಂದ ಸಂಘಟನೆ ಕಾಲಕ್ರಮೇಣ ಬೆಳೆಯುತ್ತ ಬಿಜಾಪೂರ ಜಿಲ್ಲೆಯ ರಚನೆಯ ನಂತರ ಅದರಲ್ಲಿ ಕೆಲಸ ಮಾಡುತ್ತ ಬಂದು ೧೯೮೦ರಲ್ಲಿ ಬಾಗಲಕೋಟೆ ಪ್ರೆಸ್ ಕ್ಲಬ್ ಸ್ಥಾಪನೆಯಾಯಿತು. ಈ ಕಾಲಕ್ಕೆ ಸ್ವತಂತ್ರ ಕಟ್ಟಡವನ್ನು ಹೊಂದಿದ್ದು, ೧೯೯೬ರಲ್ಲಿ ಬಾಗಲಕೋಟೆ ಪ್ರೆಸ್ ಕ್ಲಬ್ ಆಶ್ರಯದಲ್ಲಿ ಬೆಳಗಾವಿ ವಿಭಾಗ ಮಟ್ಟದ ಪತ್ರಕರ್ತರ ತರಬೇತಿ ನಡೆದದ್ದು ಸುವರ್ಣ ಅಕ್ಷರಗಳಿಂದ ಬರೆದಿಡುವ ಸಂಭ್ರಮದ ಸಂದರ್ಭವಾಗಿದೆ. ಎಂಟು ದಿನಗಳ ಕಾರ್ಯಾಗಾರದಲ್ಲಿ ನಾಡಿನ ಶ್ರೇಷ್ಠ ಪತ್ರಕರ್ತರು ಭಾಗವಹಿಸಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾರ್ಗದರ್ಶನ ಮಾಡಿದ್ದಾರೆ.

೧೯೯೭ರಲ್ಲಿ ಬಾಗಲಕೋಟೆ ಜಿಲ್ಲೆಯ ರಚನೆ ನಂತರ ಬಾಗಲಕೋಟೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಸ್ತಿತ್ವಕ್ಕೆ ಬಂದು ಪಿ. ಜಯರಾವ್, ಎನ್. ಎಚ್. ಶಾಲಗಾರ, ಆಯ್. ಎಸ್. ಜಂಬಗಿ, ಈಶ್ವರ ಶೆಟ್ಟರ ಮತ್ತಿತ್ತರರು ನಾಯಕತ್ವವಹಿಸಿದ್ದರು. ಇಂದಿಗೂ ಚುನಾವಣೆ ಇಲ್ಲದೇ ಅವಿರೋಧ ಆಯ್ಕೆ ನಡೆದಿದೆ. ಶರಣಬಸವರಾಜ ಜಿಗಜಿನ್ನಿ, ಮುದಕವಿ, ಸದಾಶಿವ ಚಲವಾದಿ, ಸುಭಾಸ ಹೊದ್ಲೂರ ಅವರುಗಳು ವಿವಿಧ ಸಂದರ್ಭದಲ್ಲಿ ಪ್ರಾತಿನಿಧ್ಯ ಪಡೆದಿದ್ದು, ೨೦೦೨ರಲ್ಲಿ ಬಾಗಲಕೋಟೆ – ಗದಗ – ಬಿಜಾಪೂರ – ಕೊಪ್ಪಳ ಜಿಲ್ಲೆಗಳ ಪತ್ರಕರ್ತರಿಗಾಗಿ ತರಬೇತಿ ಶಿಬಿರವನ್ನು ಮೂರು ದಿನಗಳ ಕಾಲ ನಡೆಸಿದ ಹೆಗ್ಗಳಿಕೆ ಈ ಸಂಘಟನೆಗಿದೆ. ಇದಿಷ್ಟೇ ಮಾತ್ರವಲ್ಲ ೨೦೦೪ರಲ್ಲಿ ಜಿಲ್ಲಾ ಪತ್ರಕರ್ತರ ಸಂಘ ಏರ್ಪಡಿಸಿದ್ದ ರಾಜ್ಯಮಟ್ಟದ ಪತ್ರಕರ್ತರ ೨೭ ನೇ ಸಮ್ಮೇಳನ ಕರ್ನಾಟಕದ ಇತಿಹಾಸದಲ್ಲಿ ಶ್ರೇಷ್ಠವಾದದ್ದು.

ಸುಮಾರು ೧೧೦೦ ಪ್ರತಿನಿಧಿಗಳು ಮೂರು ದಿನಗಳ ಕಾಲ ನಡೆದ ಅಧಿವೇಶನದಲ್ಲಿ ಭಾಗವಹಿಸಿದ್ದು ವ್ಯವಸ್ಥೆ ದೃಷ್ಟಿಯಿಂದ ಅತ್ಯಂತ ಅಚ್ಚುಕಟ್ಟಾದ ಸೌಕರ್ಯ ಒದಗಿಸಲಾಗಿತ್ತು. ಇದನ್ನು ಇಂದಿಗೂ ನಡೆಯುವ ವಾರ್ಷಿಕ ಸಮ್ಮೇಳನದಲ್ಲಿ ಮೆಲುಕು ಹಾಕಲಾಗುತ್ತಿದೆ. ಅತಿಥಿ ಸತ್ಕಾರಕ್ಕೆ ಬಾಗಲಕೋಟೆ ಎಂದಿಗೂ ಮುಂಚೂಣಿಯಲ್ಲಿ ಎಂಬುದಕ್ಕೆ ಈ ಸಮ್ಮೇಳನ ಕೂಡ ಸಾಕ್ಷಿಯಾಗಿದೆ.

ಈಗ ೧೨ ಇನಪತ್ರಿಕೆಗಳು ಮಾಧ್ಯಮ ಪಟ್ಟಿಯಲ್ಲಿ ಸೇರ್ಪಡೆಯಾಗಿ ಪ್ರಕಟವಾಗುತ್ತಿದ್ದು, ರಾಜ್ಯಮಟ್ಟದ ಎಲ್ಲ ದಿನಪತ್ರಿಕೆಗಳು, ಇಂಗ್ಲಿಷ್ ದಿನಪತ್ರಿಕೆಗಳು, ನಿಯತಕಾಲಿಕೆಗಳು ಓದುಗರನ್ನು ತಲುಪಿವೆ. ಜಿಲ್ಲೆಯಲ್ಲಿ ಎಲ್ಲ ಪತ್ರಿಕೆಗಳ ಒಟ್ಟು ಪ್ರಸಾರ ಸಂಖ್ಯೆ ಒಂದು ಲಕ್ಷಕ್ಕೆ ಹತ್ತಿರವಾಗಿದ್ದು ಇದು ಸಾಕ್ಷರತೆಯ ಪ್ರಸಾರಕ್ಕೆ ಮಾಧ್ಯಮವಾಗಿ ಕೆಲಸ ಮಾಡುತ್ತಿದೆ. ರಚನಾತ್ಮಕ ಕಾರ್ಯದ ಮೂಲಕ ಜಿಲ್ಲೆಯ ಅಭಿವೃದ್ದಿಗೆ ಒತ್ತು ನೀಡಿ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿ ಪ್ರಜಾಪ್ರಭುತ್ವದ ಬುನಾದಿ ಅಬಿವೃದ್ದಿಪಡಿಸುವ ಹೊಣೆಗಾರಿಕೆಯನ್ನು ನಿಭಾಯಿಸುತ್ತಿರುವ ಮಾಧ್ಯಮದ ಸಂಗಾತಿಗಳು ಸಮಾಜದ ಕೃತಜ್ಞತೆಗೆ ಭಾಜನರಾಗಿದ್ದಾರೆ. ಇಂತಹ ಆರೋಗ್ಯಕರ ವಾತಾವರಣ ಸೃಷ್ಟಿಸಿಕೊಂಡು ಓದುವ ಪ್ರವೃತ್ತಿಯ ಮೂಲಕ ಪತ್ರಿಕೋದ್ಯಮವನ್ನು ಶ್ರೀಮಂತಗೊಳಿಸಿರುವ ಜಿಲ್ಲೆಯ ಶ್ರೀಸಾಮಾನ್ಯ ಸಂಘ ಸಂಸ್ಥೆಗಳ, ರಾಜಕೀಯ ಪಕ್ಷಗಳ ಆಡಳಿತ ವ್ಯವಸ್ಥೆ ಸಹಕಾರ ಕೂಡ ಸ್ಮರಣೀಯ.