ಸಾಂಸ್ಕೃತಿಕ ಸಂಕೀರ್ಣ ಬಾಗಲಕೋಟೆ

ಕೃಷ್ಣಾ  ಮೇಲ್ದಂಡೆ ಯೋಜನೆಯಿಂದ ನೂರಾರು ಹಳ್ಳಿಗಳು ಆಲಮಟ್ಟಿ ಆಣೆಕಟ್ಟಿನ ಹಿನ್ನೀರಿನಲ್ಲಿ ಕೃಷ್ಣಾರ್ಪಣವಾಗಿವೆ. ಹಳ್ಳಿಗಳು, ಹೊಲಗಳು, ಮನೆಗಳು, ಹೊಲಗದ್ದೆಗಳು, ಗುಡಿ, ಮಠ-ಮಸೀದಿಗಳು ಶಾಸನಗಳು ನೀರಿನಲ್ಲಿ ಮುಳುಗಿ ಹೋಗಿವೆ. ಇಡೀ ಒಂದು ಪ್ರದೇಶದ ಸಾಂಸ್ಕೃತಿಕ ಜೀವನವೇ ಜಲದ ಒಡಲಲ್ಲಿ ಲೀನವಾಗಿದೆ. ಆದರೆ ಕಳೆದು ಹೋದದ್ದೆಲ್ಲವನ್ನೂ ಕಣ್ಣು ಮಂದಿರಿಸದಂತೆ ಈ ಸಾಂಸ್ಕೃತಿಕ ಸಂಕೀರ್ಣ ರೂಪುಗೊಂಡು ನಿಂತಿದೆ. ಇದರೊಳಗೆ ಪ್ರವೇಶಿಸಿದರೆ ಕಳೆದುದೆಲ್ಲವೂ ಕಣ್ಮುಂದೆ ನಿಲ್ಲುತ್ತವೆ. ಹಬ್ಬ-ಹರಿದಿನಗಳು, ಆಚರಣೆಗಳು ಹಳ್ಳಿಯ ಜೀವನ, ಸೋಮಾರಿಗಳ ಕಟ್ಟೆ, ಕಮ್ಮಾರ, ಕುಂಬಾರ, ಅಕ್ಕಸಾಲಿಗ, ಗಾಣಿಗ, ಮೇದಾರ, ನೇಕಾರರು ಎಲ್ಲರೂ ಮೂರ್ತರೂಪದಲ್ಲಿ ಮೈದಳೆದು ಒಂದು ಪುಟ್ಟ ಹಳ್ಳಿಯನ್ನು ನೈಜವಾಗಿ ನೆನಪಿಸುತ್ತಾರೆ ಅಷ್ಟೇ ಅಲ್ಲ ನೀರಲ್ಲಿ ಮುಳುಗಿದ ಶಿಲಾ ಶಾಸನ, ತಾಮ್ರಪಟ, ಆಯುಧಗಳು, ಜೀವನೋಪಾಯದ ದಿನ ಬಳಕೆಯ ವಸ್ತುಗಳು, ದೇವರ ವಿಗ್ರಹಗಳೆಲ್ಲವೂ ಇಲ್ಲಿ ಸಂಗ್ರಹಗೊಂಡಿವೆ. ನೂರಾರು ಹಳ್ಳಿಗಳನ್ನು ತನ್ನೊಡಲಲ್ಲಿ ಇರಿಸಿಕೊಂಡ ಜಲವು ಎಲ್ಲೆಲ್ಲಿ ಹೇಗ್ಹೇಗೆ ಬಳಕೆಗೊಂಡಿದೆಯೆಂಬ ಸಮಗ್ರ ಮಾಹಿತಿಗಳು, ಭಾವ ಚಿತ್ರ ಸಹಿತ ಕಾಣಸಿಗುತ್ತವೆ. ಹಳ್ಳಿಗೌಡರ ಮನೆಯನ್ನು ಹೊಕ್ಕರಂತೂ ದನ, ಕರು, ಹಸು, ನಾಯಿ, ಕೋಳಿ, ಮಕ್ಕಳು, ಸೊಸೆಯಂದಿರು, ಅಡುಗೆಯವರು, ಬಾಣಂತಿಯರು, ಮೂರ್ತ ರೂಪದಲ್ಲಿ ಸಿಗುತ್ತಾರೆ. ಸುಮಾರು ೨ ತಾಸಿಗಿಂತಲೂ ಹೆಚ್ಚು ಸಮಯದಲ್ಲಿ ಸಾಂಸ್ಕೃತಿಕ ಪರಂಪರೆಯೊಂದನ್ನು ಕಂಡು ಆನಂದಿಸುವ ಪ್ರವಾಸಿಗರಿಗೆ ಊಟಕ್ಕೆ ಸ್ಥಳಾವಕಾಶ, ಕುಡಿಯುವ ನೀರಿನ ವ್ಯವಸ್ಥೆ ಹೊಂದಿರುವ ಉತ್ತಮ ಪ್ರವಾಸ ತಾಣವಿದು.

 

ಜಿಲ್ಲಾ ಆಡಳಿತ ಭವನ, ನವನಗರ, ಬಾಗಲಕೋಟ

 ಉತ್ತರ ಕರ್ನಾಟಕ ಅದರಲ್ಲೂ ಬಾಗಲಕೋಟ ಜಿಲ್ಲೆ, ಬಾಗಲಕೋಟ ತಾಲೂಕು ಪ್ರವಾಸಿ ಪ್ರೇಕ್ಷಕರನ್ನು ಕೈಬೀಸಿ ಕರೆಯುವಲ್ಲಿ ಪ್ರಮುಖ ಆಕರ್ಷಣೆ ಹಾಗೂ ಆಶೋತ್ತರ ತಾಲೂಕಾಗಿದೆ.

೧೫-೦೮-೧೯೯೭ ರಂದು ಬಾಗಲಕೋಟ ಕರ್ನಾಟಕ ರಾಜ್ಯದ ನೂತನ ಜಿಲ್ಲೆಯಾಗಿ ಅಸ್ತಿತ್ವ ಪಡೆದಿರುವುದು. ಜಿಲ್ಲೆಯ ಆಡಳಿತ ವ್ಯವಸ್ಥೆಯನ್ನು ಒಂದೇ ಸೂರಿನಡಿ ಕೂಡಿಸಿ ಜನಪರ ಹಿತ ಕಾಪಾಡಲು ಜಿಲ್ಲಾ ಆಡಳಿತವು ನವನಗರದ ಮುಖ್ಯ ದ್ವಾರದ ಪಕ್ಕ ಬೃಹದಾಕಾರ ೩ ಮಹಡಿವುಳ್ಳ ಸುಂದರ ಆಕರ್ಷಕವಾದ ಕಟ್ಟಡ ಜಿಲ್ಲಾ ಕೇಂದ್ರಕ್ಕೆ ಕಳಸವಿಟ್ಟಂತೆ ನಿರ್ಮಾಣವಾಗಿದೆ.

ಈ ಕಟ್ಟಡದಲ್ಲಿಯೇ ಜಿಲ್ಲಾ ಪಂಚಾಯತ ಕಾರ್ಯಾಲಯ ಮತ್ತು ಇದರಡಿಯಲ್ಲಿ ಬರುವ ೨೭ ಇಲಾಖೆಗಳ ಜಿಲ್ಲಾ ಹಂತದ ಕಚೇರಿಗಳನ್ನು ಒಳಗೊಂಡಿದೆ. ಜಿಲ್ಲಾಧಿಕಾರಿಗಳ ಕಾರ್ಯಾಲಯ ಮತ್ತು ಇದರ ವ್ಯಾಪ್ತಿಗೆ ಬರುವ ಜಿಲ್ಲಾ ಹಂತದ ಕಚೇರಿಗಳನ್ನು ಒಳಗೊಂಡಿದೆ. ಅದಲ್ಲದೇ ಜಿಲ್ಲಾ ಖಜಾನೆ, ಮಾನ್ಯ ಲೋಕಸಭಾ ಸದಸ್ಯರ ಕಾರ್ಯಾಲಯ ಒಳಗೊಂಡಿದೆ. ಕಾರ್ಯಾಲಯಕ್ಕೆ ಬಂದವರು ಜಿಲ್ಲಾ ಹಂತದ ಇತರ ಕಾರ್ಯಾಲಯದ ಕೆಲಸಗಳನ್ನು ಸುಲಭವಾಗಿ ಪಡೆದುಕೊಳ್ಳಲು ಅನುಕೂಲವಾಗಿದ್ದು, ಇದೊಂದು ಮಕ್ಕಳಿಗೆ ಪ್ರವಾಸಿ ತಾಣವಾಗಿದೆ. ಮುಂಭಾಗದಲ್ಲಿ  ವಿಶಾಲ ಉದ್ಯಾನವನವಿದೆ.

 

ಸಿಮೆಂಟ್‌ ಫ್ಯಾಕ್ಟರಿ, ಬಾಗಲಕೋಟ

ಬಾಗಲಕೋಟ ತಾಲ್ಲೂಕಿನ ಬೃಹತ್ ಉದ್ದಿಮೆ ಸಿಮೆಂಟ್‌ ಕಾರ್ಖಾನೆ, ಕನೋರಿಯಾ ಇಂಡಸ್ಟ್ರೀಸ್ ಲಿಮಿಟೆಡ್ ಎಂದು ಕರೆಯಲ್ಪಡುವ ಸಿಮೆಂಟ್ ಕಾರ್ಖಾನೆಯು ೧೯೫೬ ರಲ್ಲಿ ಸ್ಥಾಪನೆಯಾಗಿದೆ. ಕರ್ನಾಟಕದಲ್ಲಿಯೇ ಬಹು ಯಶಸ್ವಿ ಉದ್ದಿಮೆಯಾಗಿ ಕಾರ್ಯ ಮಾಡುತ್ತಲಿದೆ. ಈ ಕಾರ್ಖಾನೆಯು ಪ್ರತಿ ದಿನ ೧೦೦೦ ಮೆಟ್ರಿಕ್ ಟನ್ ಸಿಮೆಂಟ್‌ನ್ನು ಉತ್ಪಾದಿಸುತ್ತಿದ್ದು ೬೦೦ ಜನರಿಗೆ ಉದ್ಯೋಗವನ್ನು ಒದಗಿಸಿದೆ. ಇದು ತಯಾರಿಸಿದ ಬಾಗಲಕೋಟ ಸಿಮೆಂಟ್ ಬಾಗಲಕೋಟೆಯ ಹೆಸರನ್ನು ದೇಶದ ಎಲ್ಲೆಡೆ ಪರಿಚಯಿಸಿದೆ ಇದೊಂದು ಪ್ರವಾಸಿ ತಾಣವಾಗಿ ರೂಪಗೊಂಡಿದೆ.

ಜಿಲ್ಲೆಯಲ್ಲಿ ದೊರೆಯುವ ಅತ್ಯುತ್ತಮ ದರ್ಜೆಯ ಸುಣ್ಣದ ಕಲ್ಲು ಸಿಮೆಂಟ್ ಉದ್ಯಮ ಕೈಗಾರಿಕೆಗೆ ಪ್ರಮುಖ ಕಾರಣವಾಗಿದೆ. ದೇಶದ ತುಂಬಾ ಬಾಗಲಕೋಟೆಯನ್ನು ಪರಿಚಯಿಸಿದ ಸಿಮೆಂಟ್ ಫ್ಯಾಕ್ಟರಿ ಇದಾಗಿದೆ. ೧೯೫೬ ರಲ್ಲಿ ಬಾಗಲಕೋಟ ಉದ್ಯೋಗ ಲಿಮಿಟೆಡ್ ಎಂಬ ಹೆಸರಿನಿಂದ ಆರಂಭವಾದ ಈ ಕಾರ್ಖಾನೆ ೧೯೭೨ ರಲ್ಲಿ ಕನೋರಿಯಾ ಇಂಡಸ್ಟ್ರೀಸ್ ಲಿಮಿಟೆಡ್ ಅವರಿಗೆ ಹಸ್ತಾಂತರವಾಗಿದೆ. ಕನೋರಿಯಾ ಇಂಡಸ್ಟ್ರೀಸ್‌ನ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಕಾರ್ಖಾನೆಯು ೧೯೫೬-೫೭ ರಲ್ಲಿ ೮೯.೦೭೩ ಟನ್ ಸಿಮೆಂಟ್ ಉತ್ಪಾದಿಸಿದೆ. ಪ್ರತಿ ವರ್ಷ ಪ್ರಗತಿಯತ್ತ ಸಾಗುತ್ತಿರುವ ಈ ಕಾರ್ಖಾನೆಯು ೧೯೯೬-೯೭ ರಲ್ಲಿಯೇ ೪೫ ಕೋಟಿರೂಪಾಯಿ ಮೊತ್ತದ ಸಿಮೆಂಟ್ ಉತ್ಪಾದಿಸಿದೆ. ಇಂದು ಮಹಾರಾಷ್ಟ್ರ, ಗೋವಾ, ಕೇರಳ ಹಾಗೂ ತಮಿಳುನಾಡು ಮೊದಲಾದ ರಾಜ್ಯಗಳಿಗೂ ತನ್ನ ಮಾರಾಟ ಜಾಲ ವಿಸ್ತರಿಸಿಕೊಂಡ ದೇಶವ್ಯಾಪ್ತಿ ಚಿರಪರಿಚಿತವಾಗಿದೆ.