ಬನಶಂಕರಿ

ಬಾದಾಮಿಯಿಂದ  ೩ ಕಿ.ಮೀ. ದೂರದಲ್ಲಿರುವ ಬನಶಂಕರಿಯು ರಾಜ್ಯದಲ್ಲಿರುವ ಅತ್ಯಂತ ಪ್ರಾಚೀನ ಪವಿತ್ರ ತೀರ್ಥಕ್ಷೇತ್ರಗಳಲ್ಲಿ ಒಂದೆಂದು ಪರಿಗಣಿಸಿದೆ. ಕ್ರಿ.ಶ. ೧೦೧೯ ರ ರಾಷ್ಟ್ರಕೂಟರ ಕಾಲದ ಶಾಸನದಲ್ಲಿ ಇದನ್ನು “ಬನದದೇವಿ” ಎಂದು ಬಣ್ಣಿಸಿದ್ದರಿಂದ ಈ ದೇವಾಲಯ ಇದಕ್ಕೂ ಮೊದಲೇ ಅಸ್ತಿತ್ವದಲ್ಲಿರುವ ಸಾಧ್ಯತೆಯಿದೆ. ಕ್ರಿ.ಶ. ೧೫೩೩ರ ವಿಜಯನಗರ ಅಚ್ಯುತರಾಯನ ಶಾಸನದಲ್ಲಿಯೂ ದೇವಿಯನ್ನು “ಬನದ ಮಹಾಮಾಯೆ” ಎಂದು ಕರೆಯಲಾಗಿದೆ. ಈ ದೇವಲಯದ ಪ್ರಕಾರದಲ್ಲಿ ಕಲ್ಲಿನ ಎರಡು ದೀಪಮಾಲೆ ಕಂಭಗಳಿವೆ. ಗರ್ಭಗೃಹದಲ್ಲಿ ಕಪ್ಪು ಶಿಲೆಯಲ್ಲಿ ಕೆತ್ತಲಾಗಿರುವ ಬನಶಂಕರಿಯ ವಿಗ್ರಹವು ಸಿಂಹಾರೂಢಿಯಾಗಿರುವ ಪಾರ್ವತಿಯ ವಿಗ್ರಹವಿದ್ದು ಆರು ಭುಜಗಳನ್ನು ಹೊಂದಿದೆ. ಈ ವಿಗ್ರಹವನ್ನು ಮರಾಠ ಸಿಂಧೆ ಮನೆತನದವರು ಸುಮಾರು ೧೭ನೇ ಶತಮಾನದಲ್ಲಿ ಪ್ರತಿಷ್ಠಾಪಿಸಿದರೆಂದು ವಿಗ್ರಹದ ಪಾದದಲ್ಲಿರುವ ಶಾಸನದಿಂದ ತಿಳಿದು ಬರುತ್ತದೆ.

ಬನಶಂಕರಿ ಮುಂದಿರುವ ಹೊಂಡಕ್ಕೆ ಹರಿಶ್ಚಂದ್ರ ತೀರ್ಥವೆಂದು ಸ್ಥಳೀಯವಾಗಿ ಕರೆಯುವರು. ಇದರ ಕಲ್ಲು ಕಟ್ಟಡವು ಚಾಲುಕ್ಯರ ವಾಸ್ತುಶಿಲ್ಪ ಪರಿಪೂರ್ಣತೆಗೆ ಉತ್ತಮ ಉದಾಹರಣೆಯಾಗಿದೆ. ಇದರ ಮೂರು ಕಡೆಗೆ ಕಲ್ಲಿನ ಮಂಡಪ ಆಕರ್ಷಣೀಯವಾಗಿದೆ ಬನಶಂಕರಿ ದೇವಾಲಯದ ಪಕ್ಕದಲ್ಲಿ ರಾಷ್ಟ್ರಕೂಟರ ಕಾಲದ ಪ್ರಾಚೀನ ದೇವಾಲಯವಿದ್ದು  ಸುತ್ತಲು ನೀರಿನಿಂದ  ಆವೃತವಾಗಿದೆ. ಬನಶಂಕತಿ ದೇವಾಲಯದ ಪೂರ್ವಕ್ಕೆ ಹರಿದ್ರಾ ತೀರ್ಥ, ಉತ್ತರಕ್ಕೆ ತೈಲತೀರ್ಥ ಮತ್ತು ದಕ್ಷಿಣಕ್ಕೆ ಸರಸ್ವತಿ ಹಳ್ಳವಿದೆ. ಸುತ್ತಲೂ ತೆಂಗು, ಬಾಳೆ ಮತ್ತು ಎಲೆ ತೋಟಗಳಿಂದ ನಿಸರ್ಗ ರಮಣೀಯವಾಗಿದೆ.

 

ಶಿವಯೋಗ ಮಂದಿರ

ದೂರ:
ತಾಲ್ಲೂಕಿನಿಂದ: ೧೩ ಕಿ.ಮೀ.
ಜಿಲ್ಲೆಯಿಂದ: ೫೦ ಕಿ.ಮೀ.

ವಿದ್ಯಾರ್ಥಿಗಳಿಗೆ ಶಾಸ್ತ್ರಗ್ರಂಥಗಳ ಅಧ್ಯಯನ, ಕಟ್ಟುನಿಟ್ಟಾದ ಬ್ರಹ್ಮಚರ್ಯಪರಿಪಾಲನೆ, ಯೋಗಸಾಧನೆ, ನೃಷ್ಟಿಕಾಚರಣೆ ಇತ್ಯಾದಿಗಳನ್ನು ಕಲಿಸಲು ಪ್ರಶಾಂತ ಪರಿಸರದಲ್ಲಿ ಗುರುಕುಲ ಮಾದರಿಯ ತರಬೇತಿ ಕೇಂದ್ರ ಸ್ಥಾಪಿಸಲು ನಿರ್ಣಯವನ್ನು ೧೯೦೮ ನೇ ಡಿಸೆಂಬರ್ ತಿಂಗಳಲ್ಲಿ ಬಾಗಲಕೋಟೆಯಲ್ಲಿ ನಡೆದ ನಾಲ್ಕನೇ ವೀರಶೈವ ಸಭೆಯಲ್ಲಿ ನಿರ್ಣಯಿಸಲಾಯಿತು. ನಾಡಿನಲ್ಲೇ ಪ್ರಶಾಂತ ತಾಣದ ಪರಿಸರದಲ್ಲಿ ಅಲೌಕಿಕ ತಾಣವೊಂದನ್ನು ಹುಡುಕಿ ನಿರ್ಧರಿಸುವ ಕಾರ್ಯವನ್ನು ಇಲಕಲ್ಲಿನ ಶ್ರೀ ವಿಜಯ ಮಹಾಂತ ಶಿವಯೋಗಿಗಳಿಗೆ ವಹಿಸಲಾಯಿತು. ಹಾನಗಲ್ಲ ಶ್ರೀ ಕುಮಾರ ಸ್ವಾಮಿಗಳು, ಶ್ರೀ ಅರಟಾಳ ರುದ್ರಗೌಡರು, ಅಂದಿನ ಜಿಲ್ಲಾಧಿಕಾರಿಗಳಾಗಿದ್ದ ಶ್ರೀ ಕಿತ್ತೂರ ರೇವಣಸಿದ್ದಪ್ಪನವರು, ಶ್ರೀ ಜಿರ್ಲಿ ಮುರಿಗೆಪ್ಪನವರು ಹಾಗೂ ಇನ್ನಿತರ ಸದ್ಭಕ್ತರ ತಂಡದೊಂದಿಗೆ ತಾಣ ಅರಸುತ್ತ ಹೊರಟಾಗ ವಿಜಯ ಮಹಾಂತ ಶಿವಯೋಗಿಗಳ ಜೊತೆಗೆ ಸದಾಕಾಲ ಇರುತ್ತಿದ್ದ “ಮಹಾಂತಮ್ಮ” ಎಂಬ ಹೆಸರಿನ ಗೋಮಾತೆ ತೋರಿದ ನಿರ್ಜನ ಪ್ರದೇಶದಲ್ಲಿಯೇ ಶಿವಯೋಗ ಮಂದಿರವು ಮಲಪ್ರಭಾ ನದಿ ತಟದಲ್ಲಿ ಫೆಬ್ರುವರಿ ೨, ೧೯೦೯ ರಂದು ಸ್ಥಾಪನೆಗೊಂಡಿತು.

ಪ್ರವೇಶದ ನಿಯಮದ ಪ್ರಕಾರ ೮ ವರ್ಷದ ಬಾಲಕರನ್ನು ಇಲ್ಲಿಗೆ ಸೇರಿಸಿಕೊಳ್ಳಲಾಗುವುದು. ದೀಪ ಪ್ರದೀಪ, ಪ್ರಥಮ, ಕಾವೇರಿ ಮತ್ತು ಸಾಹಿತ್ಯಗಳೆಂಬ ವಿವಿಧ ಹಂತಗಳಲ್ಲಿ ವಿದ್ಯಾರ್ಥಿಗಳಿಗೆ ಧಾರ್ಮಿಕ ಶಿಕ್ಷಣ ನೀಡಲಾಗುತ್ತಿದೆ. ಭಗವದ್ಗೀತೆ, ಉಪನಿಷತ್ತ, ವೇದಗಳು, ಶೈವ ಸಿದ್ಧಾಂತದ ಗ್ರಂಥಗಳನ್ನು ಬೋಧಿಸಲಾಗುವುದು. ಯೋಗಾಭ್ಯಾಸ, ಪೂಜಾವಿಧಿಗಳು, ನೈತಿಕ ಶಿಕ್ಷಣ, ಸಂಗೀತ (ವಚನ ಸಾಹಿತ್ಯ) ಕಾಲ ಜ್ಞಾನ ವಚನಗಳು, ಭಾವಗೀತೆ ಇತ್ಯಾದಿಗಳನ್ನು ಕಂಠಪಾಠ ಮಾಡಿಸಲಾಗುವುದು. ಇಲ್ಲಿ ಕಲಿತ ನೂರಾರು ವಿದ್ಯಾರ್ಥಿಗಳು ಇಂದು ನಾಡಿನ ಮಠಗಳಿಗೆ ಸ್ವಾಮಿಗಳಾಗಿರುವುದು ವಿಶೇಷ.

ಇಲ್ಲಿ ಕಲ್ಮಠ, ವಾಚನಾಲಯ, ಹಸ್ತ ಲಿಖಿತ ಗ್ರಂಥ ಭಂಡಾರ, ಮುದ್ರಣಾಲಯ, ಶಿವಯೋಗವನ್ನು ಬೋಧಿಸುವ ಪಾಠಶಾಲೆ, ಗೋಶಾಲೆ, ಹಾನಗಲ್ಲ ನಿರಂಜನ ಸ್ವಾಮಿಗಳ ಗದ್ದುಗೆ ಮೊದಲಾದವುಗಳಿವೆ. ಹಾಗೂ ಇದರ ಸಂಗ್ರಹದಲ್ಲಿ ಕೋರೆಕಾಗದದ ಸಾವಿರಾರು ಪ್ರತಿಗಳು, ಸಹಸ್ರಾರು ತಾಡೋಲೆ ಪ್ರತಿಗಳು, ಉಪನಿಷತ್ತುಗಳು, ವಾಚಸ್ಪತ್ಯ ಕೋಶಗಳು, ಆಂಗ್ಲ ಭಾಷೆ, ಸಂಸ್ಕೃತ, ಮರಾಠಿ, ಹಿಂದಿ, ತೆಲಗು ಭಾಷೆಗಳಲ್ಲಿ ಸಾವಿರಾರು ಗ್ರಂಥಗಳಿವೆ.

ಇಲ್ಲಿಯ ಗೋಶಾಲೆಯಲ್ಲಿ ನೂರಾರು ಗೋವುಗಳಿವೆ. ಅವುಗಳಿಂದ ದೊರೆಯುವ ಸಗಣಿಯಿಂದ ಉತ್ಕೃಷ್ಠ ಗುಣಮಟ್ಟದ ವಿಭೂತಿ ಗಟ್ಟಿಗಳನ್ನು ತಯಾರಿಸುವ ಕೇಂದ್ರ ಇಲ್ಲಿದೆ. ಇಲ್ಲಿಯ ವಿಭೂತಿಗಳು ನಾಡಿನಲ್ಲೆಲ್ಲ ಪ್ರಸಿದ್ಧಿ ಪಡೆದಿರುವುದು ವಿಶೇಷ.

 

ಮಹಾಕೂಟ

ದೂರ:
ತಾಲೂಕಿನಿಂದ : ೧೧ ಕಿ.ಮೀ.
ಜಿಲ್ಲೆಯಿಂದ : ೪೨ ಕಿ.ಮೀ.

ಬಾದಾಮಿ ಚಾಲುಕ್ಯರ ಮಂಗಳೇಶನ ಶಾಸನದಲ್ಲಿ “ಮಹಾಕೂಟೇಶ್ವರನಾಥ” ಎಂದು ಉಲ್ಲೇಖಿತವಾಗಿದ್ದು, ದುರ್ಗಮವಾದ ಅರಣ್ಯ ಮಧ್ಯದಲ್ಲಿ ಎತ್ತರವಾಗಿ ಸುತ್ತುವರಿದ ಬೆಟ್ಟಕ್ಕೆ ಹೊಂದಿಕೊಂಡಿದ್ದು, “ದಕ್ಷಿಣ ಕಾಶಿ” ಎಂದು ಕರೆಸಿಕೊಂಡ ಪುಣ್ಯ ಕ್ಷೇತ್ರವಾಗಿದೆ. ಇಲ್ಲಿರುವ ಮಹಾಕೂಟೇಶ್ವರ ದೇವಾಲಯವು ಬಾದಾಮಿ ಚಾಲುಕ್ಯರ ಶೈಲಿಯ ಸುಂದರ ಕಟ್ಟಡಗಳ ಸಂಕೀರ್ಣವಾಗಿದೆ. ಗರ್ಭಗೃಹದ ಬಾಗಿಲುವಾಡದ ಲಲಾಟದಲ್ಲಿ ಲಜ್ಜಾಗೌರಿಯನ್ನು ಹೋಲುವ ಅಸ್ಪಷ್ಟ ಉಬ್ಬು ಶಿಲ್ಪವಿರುವುದು ಗಮನೀಯ. ಲಜ್ಜಾಗೌರಿಯ ಮೂರ್ತಿಗಳು ಬಾದಾಮಿ ಚಾಲುಕ್ಯರ ಅನೇಕ ದೇವಾಲಯಗಳಿವೆ. ಇಲ್ಲಿರುವ ನಾಲ್ಕು ಕಂಭಗಳು ಚಾಲುಕ್ಯ ಶೈಲಿಯಲ್ಲಿದ್ದು, ಮಧ್ಯದಲ್ಲಿ ನಾಟ್ಯಮಂಟಪವಿದೆ. ದೇವಾಲಯದ ಕಂಭಗಳ ಮೇಲೆ ಶಾಸನಗಳಿವೆ. ಒಂದು ಶಾಸನದಲ್ಲಿ ಚಾಲುಕ್ಯರ ಅರಸನಾದ ವಿನಯಾದಿತ್ಯನ ಸೂಳೆ ವಿನಾಪೋಟಿಯೆಂಬುವಳು ದೇವರಿಗೆ ಒಂದು ರತ್ನಪೀಠ ಹಾಗೂ ಬೆಳ್ಳಿಯ ಛತ್ರ ಮಾಡಿಸಿಕೊಟ್ಟ ವಿವರವಿದೆ. ಈ ಗುಡಿಯ ಎದುರಿಗೆ ಪ್ರಾಕಾರದ ಹೊರಗೆ ಮಂಗಲೇಶಲು ನಿಲ್ಲಿಸಿದ್ದ ಧರ್ಮ ಜಯಸ್ತಂಭವು ಈಗ ವಿಜಾಪೂರದ ಪ್ರಾಚ್ಯವಸ್ತು ಸಂಗ್ರಹಾಲಯದಲ್ಲಿದೆ.

ಸರಸ್ಥತಿ ಗುಡಿಯು ಮಹಾಕೂಟೇಶ್ವರನ ಎದುರಿಗೆ ಪ್ರಕಾರದ ಗೋಡೆಗೆ ಹೊಂದಿಕೊಂಡಿರುವ ಗುಡಿಯಲ್ಲಿರುವ ಸರಸ್ವತಿ ಮೂರ್ತಿಯು ಸುಂದರವಾಗಿದೆ. ಗುಡಿಯ ಎದುರಿಗೆ ಲಜ್ಜಾಗೌರಿಯ ಭಗ್ನ ಮೂರ್ತಿಯು ಬಿದ್ದಿದೆ. ಮೊದಲು ಇದು ಗುಡಿಯ ಒಳಗೇ ಇತ್ತೆಂದು ತಿಳಿದು ಬರುವುದು. ಇಲ್ಲಿರುವ ಪುಷ್ಕರಣಿಯ ಹೆಸರು ವಿಷ್ಣು ಪುಷ್ಕರಣಿ. ಈ ಪುಷ್ಕರಣಿಯಲ್ಲಿ ಒಂದು ಕಲ್ಲಿನ ಮಂಟಪದಲ್ಲಿ ಚತುರ್ಮುಖ ಲಿಂಗವಿದೆ. ವಿಷ್ಣು ಪುಷ್ಕರಣಿಯ ಮೂಲೆಯಲ್ಲಿನ ಕೋಣೆಯಲ್ಲಿ ಶಂಕರಲಿಂಗವಿದೆ. ಶಂಕರನನ್ನು ನೋಡಲು, ಪೂಜಿಸಲು ನೀರೊಳಗೆ ಮುಳಗಿಯೇ ಹೋಗಬೇಕಾಗಿರುವುದು ವಿಶೇಷ.

 

ಪಟ್ಟದ ಕಲ್ಲು

ದೂರ:
ತಾಲೂಕಿನಿಂದ : ೨೨ ಕಿ.ಮೀ.
ಜಿಲ್ಲೆಯಿಂದ :೪೦ ಕಿ.ಮೀ

ಮಲಪ್ರಭಾ ನದಿಯ ದಂಡೆಯಲ್ಲಿರುವ ಪಟ್ಟದಕಲ್ಲು ಬಾದಾಮಿ ಚಾಲುಕ್ಯರ ಕಾಲಕ್ಕೂ ಮೊದಲೇ ಪ್ರಗತಿ ಹೊಂದಿದ ನಗರವಾಗಿತ್ತೆಂದು ಶಾಸನಗಳಿಂದ ತಿಳಿದು ಬರುತ್ತದೆ. ವಿಶ್ವವಿಖ್ಯಾತ ಭೂಗೋಳ ಶಾಸ್ತ್ರಜ್ಞ ಟಾಲೆಮಿಯು (ಕ್ರಿ.ಶ. ೧೫೦) ಈ ಊರನ್ನು “ಪೆಟ್ರಗಲ್” ಎಂದು ದಾಖಲಿಸಿರುವನು. ಕವಿರಾಜಮಾರ್ಗ ಕೃತಿಯಲ್ಲಿ ಹೆಸರಿಸಿರುವ ತಿರುಳ್ಗನ್ನಡ ಪಟ್ಟಣಗಳ ಹೆಸರುಗಳಲ್ಲಿ “ಪಟ್ಟದಕಲ್ಲು” ಕೂಡ ಒಂದಾಗಿದೆ. ಕ್ರಿ.ಶ. ೧೧೬೨ರ ಶಾಸನದಲ್ಲಿ ಇದನ್ನು ಕಿಸುವೊಳಲ್ ಅಂದರೆ ಕೆಂಪು ಪಟ್ಟಣ ಅಥವಾಸ ರಕ್ತಪುರ ಎಂದು ಉಲ್ಲೇಖಿಸಲಾಗಿದೆ. ಈ ಪ್ರದೇಶವು ಕೆಂಪು ಮಣ್ಣಿನಿಂದ ಕೂಡಿರುವುದರಿಂದ ಈ ಹೆಸರು ಬಂದಿರುವ ಸಾಧ್ಯತೆ ಇದೆ. ಸಂಗಮೇಶ್ವರ (ವಿಜಯೇಶ್ವರ) ದೇವಾಲಯದಲ್ಲಿರುವ ಶಾಸನದಲ್ಲಿ ಕಿಸುವೊಳಲ್‌ನ್ನು ದಕ್ಷಿಣ ಭಾರತದ ಕಾಶಿ ಎಂದು ಕರೆಯಲಾಗಿದೆ.

 

ವಿರೂಪಾಕ್ಷ ದೇವಾಲಯ

ಈ ದೇವಾಲಯವು ಪೂರ್ವಾಭಿಮುಖವಾಗಿದೆ. ಇದನ್ನು “ಲೋಕೇಶ್ವರ ದೇವಾಲಯ” ಎಂದೂ ಕರೆಯಲಾಗಿದೆ. ಎರಡನೇ ವಿಕ್ರಮಾದಿತ್ಯನ ರಾಣಿ ಲೋಕಮಹಾದೇವಿಯು ಈ ದೇವಾಲಯದ ಶಿವಲಿಂಗವನ್ನು ಪ್ರತಿಷ್ಠಾಪಿಸಿದ ಕಾರಣದಿಂದಲೂ ಈ ಹೆಸರು ಬಂದಿದೆ. ಈ ದೇವಾಲಯದ ಮಾದರಿಯನ್ನೇ ಅನುಸರಿಸಿ ೧ನೇ ಕೃಷ್ಣನು ಎಲ್ಲೋರಾದ ಕೈಲಾಸ ದೇವಾಲಯ ನಿರ್ಮಿಸಿರಬಹುದೆಂದು ವಿದ್ವಾಂಸರ ಅಭಿಪ್ರಾಯ.

ಈ ದೇವಾಲಯವನ್ನು ಕ್ರಿ.ಶ. ೭೪೦ ರಲ್ಲಿ ದ್ರಾವಿಡ ಕಲಾ ಶೈಲಿಯಲ್ಲಿ ರೂಪಿಸಲಾಗಿದೆ. ಪ್ರವೇಶ ಮಂಟಪದ ಕಂಬಗಳಲ್ಲಿ ಪೌರಾಣಿಕ ಕಥೆಗಳು ದೃಶ್ಯಾವಳಿ, ರಾಮಾಯಣದ ದೃಶ್ಯಗಳ ಶಿಲ್ಪಗಳಿವೆ. ನವನಗರದಲ್ಲಿ ಎತ್ತರವಾದ ಬೃಹದಾಕಾರದ ೧೮ ಕಂಬಗಳಿದ್ದು, ಇವುಗಳ ಮೇಲೆ ಹೂ ಬಳ್ಳಿಗಳು, ರಾಮಾಯಣ, ಮಹಾಭಾರತ, ಭಾಗವತ, ಪಂಚತಂತ್ರ ಕಥೆಗಳನ್ನು ಪ್ರತಿನಿಧಿಸುವ ಸುಂದರ ಉಬ್ಬು ಶಿಲ್ಪಗಳಿವೆ. ಮೊದಲ ಸ್ಥಂಬದಲ್ಲಿ ಅಹಲ್ಯೆ, ಇಂದ್ರ, ತಿಲೋತ್ತಮೆ, ಆನೆಯ ಶಿಲ್ಪಗಳಿವೆ. ೩ನೇ ಕಂಬದಲ್ಲಿ ಶರಪಂಜರದ ಮೇಲೆ ಮಲಗಿದ ಭೀಷ್ಮ, ಕೌರವರ ಗೋಗ್ರಹಣದ ಉಬ್ಬು ಶಿಲ್ಪಗಳಿಗೆ. ೪ನೇ ಕಂಬದಲ್ಲಿ ಸಮುದ್ರ ಮಥನವಿದೆ. ಗರ್ಭಗೃಹದಲ್ಲಿರುವ ಬಾಣಲಿಂಗವು ಇಂದಿಗೂ ಪೂಜಿಸಲ್ಪಡುತ್ತಿರುವುದು ವಿಶೇಷ. ಪಟ್ಟದಕಲ್ಲಿನ ಎಲ್ಲ ದೇವಾಲಯಗಳಿಗಿಂತಲೂ ಕಲಾಪರಿಪೂರ್ಣತೆ ಸಾಧಿಸಿದ ದೇವಾಲಯ ಇದಾಗಿದೆ.

ಈ ದೇವಾಲಯದ ಕಟ್ಟಡದ ಎದುರಿಗೆ ಪ್ರತ್ಯೇಕ ಮಂಟಪದಲ್ಲಿ ನಂದಿಯನ್ನು ಇತಿಸಲಾಗಿದೆ. ಮಂಟಪದ ಹೊರಗೋಡೆಗಳ ಮೇಲೆ ಗಂಧರ್ವ ದಂಪತಿಗಳು, ಕಮಲದ ಹೂ ಹಿಡಿದಿರುವ ಸ್ತ್ರೀ, ಮೊದಲಾದ ಆಕಷ್ಟಕ ಶಿಲ್ಪಗಳಿವೆ. ಮಂಟಪದ ಮಧ್ಯದಲ್ಲಿ ಕುಳೀತಿರುವ ನಂದಿಯು ೮ ಅಡಿ ಎತ್ತರವಿದ್ದು, ೨೫ ಅಡಿ ಉದ್ದ ಮತ್ತು ೨೫ ಅಡಿ ಅಗಲವಿದೆ. ಏಕಶಿಲಾ ನಂದಿ ಕೃತಿಯಾಗಿರುವ ಇದು ಆಕರ್ಷಕ ಹಾಗೂ ವಿಶಿಷ್ಠವಾಗಿದೆ.

 

ಮಲ್ಲಿಕಾರ್ಜುನ ದೇವಾಲಯ

ಪಟ್ಟದಕಲ್ಲಿನ ಇನ್ನೊಂದು ಪ್ರಮುಖ ದೇವಾಲಯ ಇದಾಗಿದೆ. ಶಾಸನಗಳಲ್ಲಿ ಉಲ್ಲೇಖಿತವಾಗಿರುವ ತ್ರೈಲೋಕೇಶ್ವರ ದೇವಾಲಯ ಇದಾಗಿದೆ. ಇದನ್ನು ಲೋಕವಾದೇವಿಯ ತಂಗಿಯಾದ ತ್ರೈಲೋಕ ಮಹಾದೇವಿಯು ಕ್ರಿ.ಶ. ೭೪೦ ರಲ್ಲಿ ನಿರ್ಮಿಸಿದಳೆಂದು ತಿಳಿದು ಬರುತ್ತದೆ. ವಿರೂಪಾಕ್ಷ ದೇವಾಲಯದಲ್ಲಿರುವ ರಾಮಾಯಣ, ಮಹಾಭಾರತ, ಕಥನ ದೃಷ್ಯಗಳೇ ಇಲ್ಲಿಯೂ ಪುನರಾವರ್ತನೆಗೊಂಡಿವೆ. ಪೂರ್ವಾಭಿಮುಖವಾಗಿರುವ ಈ ದೇವಾಲಯಕ್ಕೆ ಉತ್ತರ, ದಕ್ಷಿಣಕ್ಕೂ ದ್ವಾರಗಳಿವೆ. ಮುಖ್ಯ ಮಂಟಪದ ಸ್ತಂಭದಲ್ಲಿ ಹಿರಣ್ಯಕಶಿಪುವನ್ನು ಸಂಹಾರ ಮಾಡುತ್ತಿರುವ ನರಸಿಂಹನ ಶಿಲ್ಪ ಪರಿಣಾಮಕಾರಿಯಾಗಿದೆ. ನವರಂಗದಲ್ಲಿರುವ ೧೮ ಕಂಭಗಳ ಮೇಲೆ ರಾಮಾಯಣ ಮಹಾಭಾರತ ಹಾಗೂ ಅಂದಿನ ಸಾಮಾಜಿಕ ಸ್ಥಿತಿ ಚಿತ್ರಿಸುವ ಶಿಲ್ಪಗಳಿವೆ. ವಿಧ ವಿಧವಾದ ಆಭರಣಗಳನ್ನು ಹಾಕಿಕೊಂಡಿರುವ ವೈವಿಧ್ಯಮಯ ಕೇಶಾಲಂಕಾರದಿಂದ ಅಲಂಕೃತವಾಗಿರುವ ಅನೇಕ ದಂಪತಿಗಳ ಶಿಲ್ಪಗಳು ಇಲ್ಲಿವೆ. ಇದು ವಿನ್ಯಾಸ ವಾಸ್ತು ಮತ್ತು ಶಿಲ್ಪಗಳಲ್ಲಿ ವಿರೂಪಾಕ್ಷ ದೇವಾಲಯವನ್ನು ಹೋಲುತ್ತದೆಯಾದರೂ ಗಾತ್ರದಲ್ಲಿ ಸಣ್ಣದು.

 

ಸಂಗಮೇಶ್ವರ ದೇವಾಲಯ

ಪಟ್ಟದಕಲ್ಲಿನಲ್ಲಿರುವ ದೇವಾಲಯಗಳಲ್ಲಿ ಬಹುಶಃ ಅತ್ಯಂತ ಪ್ರಾಚೀನವಾದದ್ದು, ದ್ರಾವಿಡ ಶೈಲಿಯಲ್ಲಿದೆ. ಇದರ ಹೊರಗೋಡೆಗಳಲ್ಲಿ ಉಗ್ರ ನರಸಿಂಹ, ನಟರಾಜ ಶಿಲ್ಪಗಳನ್ನು ಹೊಂದಿದ ಜಾಲಂದ್ರವಿದೆ. ನವರಂಗದಲ್ಲಿ ನಾಲ್ಕು ಸಾಲುಗಳ ೨೦ ಕಂಭಗಳಿವೆ. ಕ್ರಿ.ಶ. ೧೧೬೨ ರ ಶಾಸನವೊಂದರ ಪ್ರಕಾರ ಈ ದೇವಾಲಯವನ್ನು ಚಾಲುಕ್ಯ ರಾಜ ವಿಜಯಾದಿತ್ಯನು ವಿಜಯೇಶ್ವರ ಎಂಬ ಹೆಸರಿನಲ್ಲಿ ನಿರ್ಮಿಸಿದನು.

ಪಟ್ಟದಕಲ್ಲಿನಲ್ಲಿ ಗಳಗನಾಥ, ಕಾಶಿ ವಿಶ್ವೇಶ್ವರ, ಚಂದ್ರಶೇಖರ, ಜಂಬುಲಿಂಗ, ಕಾಡಸಿದ್ದೇಶ್ವರ ಮೊದಲಾದ ಹಲವಾರು ಗುಡಿಗಳಿವೆ.