ಮೂಡಿಬಹ ನೇಸರಿನ ಜೊತೆಗೊಂದು ಹೊಸ ಚಿಂತೆ
ದಿನ ದಿನವು ಮೂಡಿಬಂದು,
ಸೂರ್ಯನಸ್ತಮಿಸಿದರು ಮುಳುಗದೆಯೆ ನ-
ನ್ನೆದೆಯಲ್ಲಿ ಬೇರೂರಿ ನಿಂದು
ಇರುಳ ಚಿಕ್ಕೆಗಳಲ್ಲಿ ಚಾಚಿ ಸಾಸಿರ ಕುಡಿಯ
ಹಗಲಿರುಳು ಹಬ್ಬುತಿರಲು.
ಬಾಳ ಬೀದಿಯ ನಡುವೆ ಬಿದ್ದೊಂದು ಕಲ್ಲಿನೊಲು
ದಿನದ ಭಾರದ ರೋಣುಗಲ್ಲಿನಡಿಗೆ
ಸಿಕ್ಕು ಈ ಜೀವವೇ ತಳಮಳಿಸಿ ನಡುಗೆ,

ನೂರು ನೋವಿನ ಕೀಟ ತಲೆಯ ಗೂಡಿನ ಸುತ್ತ
ಮೊರೆ ಮೊರೆದು ಕೊರೆ ಕೊರೆದು ಹಾರುತಿರಲು,
ಸಂಶಯದ ಜೇಡ ಜಾಲದಿ ಮನಸು
ಹುಳದಂತೆ ಮಿಡುಕುತಿರಲು-

ಬಾಳ ಕಣಜದ ಕಾಳು ಇಲಿಗಳಿಗೆ ಪಾಲಾಗಿ
ಬರಿಜೊಳ್ಳು ಒಳಗೊಳಗೆ ಕೊಳೆಯುತಿರಲು,
ಅತೃಪ್ತಿ ದಾರಿದ್ರ್ಯ ಸಂಕಟದ ಸಾಗರದಿ
ಒಡೆದ ಬದುಕಿನ ಹಡಗು ಜೀಕುತಿರಲು,
ಯಾವ ಬಿರುಗಾಳಿಯೋ ದೂರದಿಂದಬ್ಬರಿಸಿ
ಬೀಸಿ ಬರಲು-

ಯಾವುದೀ ಶುಭದಭಯವಾಣಿ ಇಂದು
ನುಡಿಯುತಿದೆ ನನ್ನ ಮನೆ ಬಾಗಿಲಿಗೆ ಬಂದು !
“ತಲ್ಲಣಿಸದಿರು ಕಂಡ್ಯ ತಾಳು ಮನವೇ
ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ”.

ಏನು ನುಡಿ, ಎಂಥ ನುಡಿ !
ಅಲ್ಪತೆಗೆ ಸಿಡಿಲ ಬಡಿ !
ಯಾರು ನುಡಿಯುವರಿಂತು ? ಹರಿದಾಸರು !
ಗಂಭೀರ ಮುಖಮುದ್ರೆ ; ಗಾನದಾನಂದದಲಿ
ಯಾವ ಹಿರಿದನೊ ಕಂಡು ಅದನು ಕುಡಿಯುವ ತೆರದಿ
ಅರೆಮುಗಿದ ಕಣ್ಣಿನೆವೆ ; ಹೆಗಲಲಿದೆ ತಂಬೂರಿ
ತುಳುಕುತಿದೆ ಹಾಡು :
“ತಲ್ಲಣಿಸದಿರು ಕಂಡ್ಯ ತಾಳು ಮನವೇ
ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ”.

ಭಿಕ್ಷಕ್ಕೆ ಬಂದವರ ಮುಂದೆ ಭಿಕ್ಷುಕನಾದೆ
ನನ್ನೆದೆಯ ಜೋಳಿಗೆಯ ನಾನೆ ತೆರೆದು,
ಮುಂದೆ ನಡೆದರು ಅವರು ಹಾಡ ಸುರಿದು !