೧. ಶೈವ ತಾಂತ್ರಿಕ ಪಂಥಗಳ ಹಿನ್ನೆಲೆ

ದೇಹದ ಬಗ್ಗೆ ದಾರ್ಶನಿಕ ಮಾರ್ಗಗಳಲ್ಲಿ ಹಲವಾರು ರೀತಿಯ ಚರ್ಚೆಗಳು ನಡೆದಿವೆ. ಶರೀರ ಸಂದೇಹಿ ಅಥವಾ ವ್ಯಾಮೋಹಿ ನೆಲೆಗಳಲ್ಲಿ ಈ ಚರ್ಚೆ ವಿಸ್ತೃತಗೊಂಡಿದೆ. ಈ ಶರೀರದ ಮೀಮಾಂಸೆ ಸಮಾಜ ಮೀಮಾಂಸೆ ಆದಂತೆ ಸೌಂದರ್ಯ ಮೀಮಾಂಸೆಯೂ ಹೌದು. ಬಾಚಿಕಾಯಕದ ಬಸವಯ್ಯನಲ್ಲಿ ಶೈವ ತಾಂತ್ರಿಕ ಪರಿಭಾಷೆಗಳು ಹೇರಳವಾಗಿ ಬಳಕೆಯಾಗುತ್ತವೆ. ದೇಹವನ್ನು ಮನೆ, ರಥ, ಕುಂಡಲಿನಿ ಚಕ್ರ, ಕಮಲ, ಪದ್ಮಗಳಿಗೆ ಹೋಲಿಸಿ, ದೇಹಚಕ್ರಗಳ ವಿಷಯ ಸುಖಗಳಲ್ಲಿ ವ್ಯಕ್ತಿಯು ಬಳಸಿ ಬ್ರಹ್ಮಚಾರಿಯಂತಿರಬೇಕೆನ್ನುವ ತಾತ್ವಿಕತೆಯನ್ನು ಕಟ್ಟಿಕೊಡುತ್ತಾನೆ. ಮೇಲಿಂದ ಮೇಲೆ ಬರುವ ಕಮಲದ ಹೂವಿನ ಬಳಕೆ,ದಳಗಳ ವಿಕಾಸ, ಸೃಷ್ಟಿ ಮತ್ತು ಅದರ ವಿಕಸನಶೀಲ ಪ್ರವೃತ್ತಿಗಳು ಉನ್ನತ ದಾರ್ಶನಿಕ ಪ್ರತಿಮೆಗಳಾಗಿ ಬೆಳೆಯುತ್ತವೆ. ಅಭಿನವಗುಪ್ತನಂಥ ಶೈವ ತಂತ್ರ ಪಿತಾಮಹನಲ್ಲಿ ಕಾಣುವ ಈ ಪರಿಕಲ್ಪನೆಗಳು ಶರೀರವು ನಿಜ ಮತ್ತು ನಿಗೂಢಗಳ ಅಡಗುತಾಣ ಎನ್ನುವ ಜೀವನಾದರ್ಶಗಳಿಂದ ಬಂದಂಥವು.

ಈ ತಾತ್ವಿಕತೆ ಬೆಳೆಯುವುದೇ ಜಗತ್ತು ಸತ್ಯ ಎನ್ನುವ ಪರಿಕಲ್ಪನೆಯೊಂದಿಗೆ. ಭೌತವಾದಿಗಳು, ಸಾಂಖ್ಯರು, ತಾಂತ್ರಿಕರು, ಇದೇ ತತ್ವದ ಪ್ರತಿಪಾದಕರು. ಈ ಜಗತ್ ಸತ್ಯವೇ ಅವ್ಯಕ್ತವಾದುದಕ್ಕೆಲ್ಲಾ ಮೂಲ. ಈ ಪ್ರಕೃತಿ ನಿತ್ಯ ಮತ್ತು ಪರಿವರ್ತನಶೀಲವಾದುದು. ಪ್ರತ್ಯಕ್ಷ ಪ್ರಮಾಣದಿಂದ ಮಾತ್ರ ಏನನ್ನಾದರೂ ಉಮಟು ಮಾಡಲು ಸಾದ್ಯ. ಇಲ್ಲದಿರುವುದರಿಂದ (ನಿರೂಪ) ಏನೂ ಹುಟ್ಟಲು ಸಾಧ್ಯವಿಲ್ಲ. ಭಾವ ಸ್ಥಿರವಾದರೆ ಅದಕ್ಕೆ ಕಾರಣವಾಗುವ ಭೌತಿಕವೂ ಸ್ಥಿರ. ಭೌತಿಕ ವಸ್ತುಗಳು ಭೌತಿಕ ಪದಾರ್ಥಗಳಿಂದಲೇ ಸೃಜಿಸುತ್ತವೆ. ಬಸವಯ್ಯನು ಬಾಚಿ ಮತ್ತು ಕಟ್ಟಿಗೆಗಳಂಥ ‘ಘನ’ವಸ್ತುಗಳಿಂದ ಮೂರ್ತ ಅರಿವಿನ ಆವರಣವನ್ನು ಸೃಷ್ಟಿಸಿದಂತೆ. ವ್ಯವಸಾಯ ಮತ್ತು ಮಾತೃಪ್ರಧಾನ ಸಂಸ್ಕೃತಿಗಳ ಮೂಲವಾದ ತಂತ್ರವಾದದಲ್ಲಿ ಪ್ರಕೃತಿಯೇ ಪ್ರಧಾನ. ಪುರುಷನಿಗೆ ಅಲ್ಲಿ ಎರಡನೆಯ ಸ್ಥಾನ. ಸ್ತ್ರೀ ಪುರುಷರ ಸಂಯೋಗದಿಂದ ಮಾತ್ರ ಸೃಷ್ಟಿ ಕ್ರಿಯೆ ಸಾಧ್ಯ ಎನ್ನುವ ತತ್ವ ಇಲ್ಲಿ ಪ್ರಮುಖ.

೨. ಶಿವ-ಶಿವೆಯರ ಸಂಬಂಧ

ಸೃಷ್ಟಿ-ಸೃಷ್ಟಿಕರ್ತನ ಸ್ವರೂಪ, ಜೀವ ಶಿವರ ಸಂಬಂಧ ಕುರಿತು ಹಲವಾರು ವಚನಕಾರರು ಮಾತನಾಡಿದ್ದಾರೆ. ಶಿವಶರಣರಲ್ಲೂ ಈ ಶಿವ-ಶಕ್ತಿಯರ ಸಂಬಂಧವೇ ಸೃಷ್ಟಿಗೆ ಮೂಲವಾಗಿ ಕಾಣುತ್ತದೆ. ನಾಥ ಪಂಥಗಳಂಥ ಪ್ರಮುಖ ಶೈವತಾಂತ್ರಿಕ ಪಂಥಗಳಲ್ಲೂ ಇದು ಎದ್ದುಕಾಣುತ್ತದೆ. ಈ ಪಂಥದವರು ದ್ವೈತಾದ್ವೈತದ ವಿಲಕ್ಷಣವಾದಿಗಳೆಂದು ತಮ್ಮನ್ನು ಗುರುತಿಸಿಕೊಳ್ಳುತ್ತಾರೆ. ಅದೊಂದು ಸಮತತ್ವ. ಶಿವಶಕ್ತಿಯರ ಅವಿನಾಭಾವ ಸಂಬಂಧದಲ್ಲಿ ಶಕ್ತಿ ಜಗತ್ಕರ್ತೃವೆ ಎಂಬುದು ವಿಶೇಷವಾಗಿ ನಾಥ ಪಂಥದ ನಂಬಿಕೆ. ಇಂಥ ಅವಿಚ್ಛಿನ್ನತೆಯನ್ನು ಕುರಿತು ಕಾಡಸಿದ್ದೇಶ್ವರನ ವಚನವೊಂದು ಹೀಗೆ ಹೇಳುತ್ತದೆ. ‘ಆದಿ ಅನಾದಿಯಿಂದತ್ತತ್ತವಾದ ನಿರಾಕಾರ ಪರವಸ್ತು ತನ್ನ ಸ್ವರೂಪವ ತಾನರಿಯದೆ ಅನಂತ ಕಲ್ಪಾಂತರವಿರ್ದು ತನ್ನ ಸ್ವಲೀಲೆಯಿಂದ ತಾನೇ ಜಗತ್ಸೃಷ್ಟಿ ನಿಮಿತ್ತವಾಗಿ ನೆನಹು ದೋರಲು ನೆನಹೇ ನಿರ್ಧಾರವಾಗಿ ಚಿತ್ತೆನಿಸಿತ್ತು. ಆ ಚಿತ್ತಿನಿಂದ ಚಿನ್ನಾದ ಚಿದ್ಬಿಂದು ಚಿತ್ಕಳೆಗಳೊಗೆದವು, ಎನ್ನುವಲ್ಲಿ ಶಕ್ತಿ ಮತ್ತು ಅವಳ ಸೃಷ್ಟಿ ಕ್ರಿಯೆಯ ವಿವರಗಳನ್ನು ಕಾಣಬಹುದು.

ತಂತ್ರಶಾಸ್ತ್ರ ಹಾಗೂ ಕಾವ್ಯಮಾರ್ಗಗಳೊಂದಿಗೆ ಸಂವಾದ ನಡೆಸುವ ಎಲ್ಲ ಅನುಭಾವಿ ಕವಿಗಳೂ ತಾಂತ್ರಿಕ ನಿಗೂಢತೆಯ ಪ್ರತಿಮೆಗಳನ್ನು ಲೌಕಿಕದ ವಾಸ್ತವಕ್ಕೆ ಸಾಧಾರಣೀಕರಿಸುತ್ತಾರೆ. ಭಕ್ತಿ ಕಾವ್ಯದ ಮುಖ್ಯನೆಲೆಯಲ್ಲಿಯೇ ತಳಮಳ. ಬೇಧ ಸ್ಥಿತಿಯ ಅರ್ಹತೆಯಲ್ಲೆ ಭಕ್ತಿಕಾವ್ಯದ ಹುಟ್ಟು ಕಂಡುಬರುತ್ತದೆ. ತನಗಿಂತ ಭಿನ್ನವಾದ ವಿಶಿಷ್ಟವಾದ ಇನ್ನೊಂದು ವಾಸ್ತವದ ಕಡೆಗೆ ಹೋಗಿ ಅದರೊಳಗೇ ಲೀನವಾಗುವ ಪರಿಯಲ್ಲೇ ಭಕ್ತಿಕಾವ್ಯದ ಗುಣಾತ್ಮಕತೆ ಇರುವುದು. ಬಸವಯ್ಯನಲ್ಲಿ ಈ ಗುಣ ಪ್ರಧಾನವಾಗಿ ಕಂಡುಬರುತ್ತದೆ. ದೇಹ, ರಥ, ಮನೆಯ ಕಲ್ಪನೆಗಳ ಮೂಲಕ ಮಹಾಮನೆ ಮಹಾಘನಗಳಲ್ಲಿ ಲೀನವಾಗುವ ಅಂದರೆ ವಿಶ್ವಾತ್ಮಕವಾಗುವ ಹಂಬಲವನ್ನು ಕಾಣುತ್ತೇವೆ. ‘ನೆನಹು ನೆಲೆಗೊಂಡಾತ’ ‘ಮೂಲದ ಕೀಲ ಸಂಹರಿಸಿದ ನಿಂದ ನಿಸ್ಸೀಮ ಶರಣರೇ ಬಲ್ಲರು’ ‘ಅನುವಾಗಿ ನಿಂದು ನೋಡುವ ಸುಳುಹು ಬೆಳಗು ತಾನೆ’ ಬಸವಯ್ಯನ ವಚನದ ಈ ತುಣುಕುಗಳು ದೇಹದ ಇರುವಿಕೆಯ ಮೂಲಕವೇ ದಿವ್ಯಜ್ಞಾನವನ್ನು ಪಡೆಯಬೇಕೆನ್ನುವ ಭೌತವಾದಿ ತತ್ವಗಳನ್ನೇ ಪ್ರತಿಪಾದಿಸುತ್ತವೆ ಎನಿಸುತ್ತದೆ.

೩.ವಿಶ್ವಕರ್ಮ ದಾರ್ಶನಿಕತೆ

ಬಾಚಿಕಾಯಕದ ಬಸವಯ್ಯನ ಸಮಕಾಲೀನನೂ ಮತ್ತು ವಿಶ್ವಕರ್ಮ ಕುಲದವನೂ ಅಕ್ಕಸಾಲಿಗ ವೃತ್ತಿಯವನೂ ಆದ ಹಾವಿನಹಾಳ ಕಲ್ಲಯ್ಯನಲ್ಲೂ ಶಕ್ತಿಯ ಸ್ವರುಪವನ್ನೇ ಪ್ರಧಾನವಾಗಿ ಕಾಣುತ್ತೇವೆ.

ಬಯಲು ಮೊಳಗಿ ಮಳೆ ಸೃಜಿಸಿ ಆ
ಬಯಲು ಮಳೆಯನೊಡಗೂಡಿ
ದೃಷ್ಟವಾಗಿಪ್ಪ ವಾಲಿಗಲ್ಲಾಗಿ ತೋರಿದಂತೆ
ನಿಮ್ಮ ನೆನೆಹೇ ನಿಮಗೆ ಶಕ್ತಿಯಾಯಿತ್ತಲ್ಲಾ
ಆ ನಿಮ್ಮಿಬ್ಬರ ಸಮರತಿಯೇ ನಿಮಗೆ ಅಖಂಡವೆಂಬ
ನಾಮ ಸೂಚನೆಯಾಯಿತ್ತಲ್ಲಾ
ಮಹಾಲಿಂಗ ಕಲ್ಲೇಶ್ವರಾ ನಿಮ್ಮ ಆದಿಗೆ
ಇದೇ ಪ್ರಥಮವಾಯಿತ್ತಲ್ಲಾ[1]

ಇಡೀ ವಚನವೂ ಒಂದು ಮೂರ್ತಾಕೃತಿಯನ್ನು ಕಟ್ಟಿಕೊಡುತ್ತದೆ.ರೂಪದೊಂದಿಗೆ ಸೇರುವ ನಿರೂಪ ಸ್ವರೂಪೀಕರಣಗೊಳ್ಳುವ ಪ್ರಕ್ರಿಯೆಯನ್ನು ವಚನದಲ್ಲಿ ಕಾಣುತ್ತೇವೆ. ಸಣ್ಣ ಸಣ್ಣ ನೀರಿನ ಹನಿಗಳು ಸೇರಿ ಅಲಿಕಲ್ಲಾಗುವಂತೆ ಶಿವನ ನೆನಹೇ ಶಕ್ತಿರೂಪವನ್ನು ಧರಿಸಿ ಅದೇ ಸೃಷ್ಟಿರಚನೆಯಲ್ಲಿ ಮುಂದಾಯಿತು. ‘ಬೀಜ ವೃಕ್ಷದಂತೆ ನೀನಿಪ್ಪೆಯಯ್ಯ ನಿರಾಕಾರವೇ ಮೂರ್ತಿಯಾಗಿ, ಮೂರ್ತಿಯೇ ಸಾಕಾರವಾಗಿ ಎನ್ನುವ ಸಿದ್ಧರಾಮನ ಮಾತಿನಂತೆ ನಿರಾಕಾರ ಸಾಕಾರಗಳ ಈ ಸಲ್ಲೀಲೆಯನ್ನು ಶಿವ ಅನಾದಿ ಕಾಲದಿಂದಲೂ ನಡೆಸಿಕೊಂಡು ಬಂದಿದ್ದಾನೆ. ಲೀಲೆಯಾದೊಡನೆ ಉಮಾಪತಿ ಲೀಲೆ ತಪ್ಪಿದೊಡನೆ ಸ್ವಯಂಭೂ ಎನ್ನುವ ಮಾತಿನಂತೆ ಶಿವ ಮತ್ತು ಸೃಷ್ಟಿಯರ ಸಂಬಂಧವನ್ನು ಕಾಣಬಹುದು. ಇಂಥ ನಿರಂಜನ ಬ್ರಹ್ಮದಿಂದ ಓಂಕಾರ ಚಿನ್ನಾದ ಚಿದ್ಬಿಂದು ಚಿತ್ಕಳೆಗಳು ಹುಟ್ಟಿ ಸೃಷ್ಟಿ ವಿಸ್ತಾರವಾಗುತ್ತವೆ. ಶಿವ ಸಮಷ್ಟಿ ವಸ್ತುಗಳ ವಿಸ್ತಾರಕನಾದರೂ ಕೊನೆಗೆ ಅವೆಲ್ಲ ಶಿವಮಯವಾಗೇ ಉಳಿಯುತ್ತವೆ. ಶರಣರ ಸೃಷ್ಟಿಯಲ್ಲಿ ಶಿವನಲ್ಲದೇ ಬೇರೇನೂ ಕಾಣಲಾರದು. ಹೀಗಾಗಿ ಎಲ್ಲ ಜೀವರುಗಳೂ ಕೂಡ ಶಿವನ ಅಂಶದಿಂದ ಹುಟ್ಟಿದವರು. ಇದನ್ನೇ ‘ಅಂಗ’ ಎಂದು ಗುರುತಿಸಬಹುದು. ಅಂಗವು ಅವಿದ್ಯೆಯ ಪ್ರಭಾವದಿಂದ ತನ್ನ ಸ್ವರೂಪವನ್ನು ಮರೆತು ಜೀವರುಗಳಾಗಿ ಪರಿಣಮಿಸುತ್ತದೆ. ಈ ಅಂಗ ದೀಕ್ಷೆ ಪಡೆದು ತನ್ನ ಸಾಧನೆಯಿಂದ ಅಪೂರ್ನತ್ವವನ್ನು ಕಳಕೊಂಡು ಲಿಂಗಾಂಗ ಪಡೆಯುತ್ತದೆ. ಇದೇ ಲಿಂಗಾಂಗ ಸಾಮರಸ್ಯ.

‘ಚಿನ್ನದಿಂದಲಾದ ಹಲವು ಬಂಗಾರವಳಿದು ಕರಗಿದರೆ ಮುನ್ನಿನ ಚಿನ್ನವೇ ಆದಂತೆ’ ‘ಉದಕದಿಂದಾದ ವಾರಿದಿಕಲ್ಲು ಕರಗಿ ಮುನ್ನಿನ ಉದಕವೇ ಆದಂತೆ’ ಎನ್ನವ ಮಾತಿನಲ್ಲಿ ರುಪಭೇದವಿದೆಯೇ ಹೊರತು ಸ್ವರೂಪ ಭೇದವಿಲ್ಲ.

ಕರ್ಪೂರದ ಕಳ್ಳನ ಹುಲ್ಲಿನಲ್ಲಿ ಕಟ್ಟಿಸಲು
ಅಗ್ನಿಯೆಂಬ ಹಿತವು ಬಂದು ಬಿಡಿಸಲು
ಪಾಶಬೆಂದು ಕಳ್ಳ ತನ್ನಲ್ಲಿಯೇ ಅಡಗಿದನು
ಬಯಲ ಶರಣಂಗೆ ಬಯಲಪಾಶ ಬಂದು ಕಟ್ಟಿರಲು
ಬಯಲ ಲಿಂಗ ಬಂದು ಬಿಡಿಸಲು
ಬಯಲು ಬಯಲೇಕವಾಯಿತ್ತು
ಮಹಾಲಿಂಗ ಕಲ್ಲೇಶ್ವರನೆಂಬ ಸಂಪತ್ತು
ಸದಾ ಶೂನ್ಯವಾಯಿತ್ತು[2]

ಹಾವಿನಹಾಳ ಕಲ್ಲಯ್ಯನ ಈ ವಚನ ಹುಲ್ಲಿನಲ್ಲಿ ಬಂದಿತವಾದ ಕರ್ಪೂರದ ಪುತ್ಥಳಿಗಳನ್ನು ಅರಿವೆಂಬ ಅಗ್ನಿ ಸ್ಪರ್ಷಿಸಿದ ತಕ್ಷಣ ಮಲತ್ರಯಗಳೆಂಬ ಹುಲ್ಲ ಬಂಧನ ಸುಟ್ಟು ಹೋಗುತ್ತದೆ. ಆಗ ಸಾಧಕ ಕರ್ಪೂರದ ರೂಪದಿಂದ ನಿರೂಪಗೊಂಡು ಶರಣ ಸ್ವರೂಪವನ್ನು ಹೊಂದುತ್ತಾನೆ. ಕರ್ಮ (ರೂಪ) ಭಕ್ತಿ (ನಿರೂಪ) ಜ್ಞಾನ (ಸ್ವರೂಪ) ಇವುಗಳ ಸಮನ್ವಯದ ಮಾರ್ಗವೇ ನಿಜಾನಂದ ಸ್ಥಿತಿ.

ನಿಜಾನಂದ ನಿರ್ಭಿನ್ನವೆಂಬುವ ನಿತ್ಯನಾತನ ಪಿಂಡದೊಳಗೆ
ನಿಶ್ಚಿಂತಾಮೃತವೆಂಬ ದಿವ್ಯಾಮೃತ ಕುಂಭವುಂಟು
ನಾಭಿ ಸ್ಥಾನದೊಳಗೆ ಇದ್ದಂಥಾ ಮಹಾಕುಂಬದೊಳಗೆ
ಮಹಾನುಭಾವವೆಂಬುದೊಂದು ಸುವರ್ಣ ಮಂಟಪವುಂಟು
ಆ ಸುವರ್ಣ ಮಂಟಪದೊಳಗೆ ರತ್ನಸಿಂಹಾಸನವೆಂಬ ಮಹಾಪೀಠಿಕೆಯುಂಟು
ಆ ಪೀಠಿಕೆಯ ಮೇಲೆ ಸಾಸಿರ ಅನಂತಕೋಟಿ ಪ್ರಭೆಯೊಳಗಣ
ಕಳಾ ಸ್ವರೂಪವಪ್ಪುದೊಂದು ಪ್ರಾಣಲಿಂಗ
ಆ ರತ್ನ ಪೀಠಿಕೆಯ ಮೇಲೆ ಪ್ರಕಾಶಿಸುತ್ತಿರ್ಪ ಲಿಂಗ
ಆ ಲಿಂಗವೇ ತನ್ನ ಸ್ವಯಾನಂದದಿಂದ
ಊರ್ಧ್ವವೆಂಬ ಚಕ್ರಸ್ಥಾನದೊಳಗೆ ನಿಂದು ನೋಡುತ್ತಿರಲು
ಒಂದು ಕಮಲ ವಿಕಸಿತವಾಯಿತು
ಅ ಕಮಲದೊಳಗೊಂದು ದಿವ್ಯಜ್ಞಾನವೆಂಬುದೊಂದು ಲಿಂಗ
ತನ್ನಲ್ಲಿ ತೊಲಗಿ ಬೆಳಗಿ ಪ್ರಕಾಶಿಸಿತ್ತು
ನೋಡುತಿರಲು ತಾನೆ ಪರಂಜ್ಯೋತಿ ದಿವ್ಯವಸ್ತು ಎಂದೆ ಕಾಣಾ
ಬಸವಪ್ರಿಯ ವಿಶ್ವಕರ್ಮಟಕ್ಕೆ ಕಾಲಿಕಾ ವಿಮಲ ರಾಜೇಶ್ವರಲಿಂಗದರಿಕೆಯಾಗಿ[3]

ಬಾಚಿಕಾಯಕದ ಬಸವಯ್ಯ ಇಂಥಲ್ಲಿಯೇ ಉಳಿದ ವಚನಕಾರರಿಗಿಂತ ತಾತ್ವಿಕವಾಗಿ ಭಿನ್ನವಾಗಿ ನಿಲ್ಲುತ್ತಾನೆ. ಶಿವ ಶಿವೆಯರ ಸಂಬಂಧ ಕುರಿತು ಎಲ್ಲ ವಚನಕಾರರು ಮಾತನಾಡಿದರು ಬಸವಯ್ಯನ ಶರೀರ ಮೀಮಾಂಸೆಯ ತತ್ವವೇ ಬೇರೆ ಸ್ವರೂಪದ್ದು. ಈತನಲ್ಲಿ ಶರೀರ ಸ್ವರೂಪವು ಹೋರಾಟ ಮೂಲವಾದದ್ದು. ಸೃಷ್ಟ್ಯಾತ್ಮಕ ಅಭಿಧಾನವುಳ್ಳದ್ದು. ದೇಹ ಪೀಠದ ಮೇಲೆ ಊರ್ಧ್ವಚಕ್ರಸ್ಥಾನದ ಮೂಲಕ ಒಂದು ಕಮಲ ವಿಕಸಿತವಾಗುವ ಪರಿಯೇ ವಿಕಸನಶೀಲ ಮಾದರಿಯೊಂದನ್ನು ತತ್ವೀಕರಿಸುತ್ತದೆ.ಇದನ್ನೇ ದೇಹವೇ ದೇಗುಲಾಗುವ, ಇಮಾರತಿಯಾಗುವ,ಪ್ರತಿಮೆಗಳಲ್ಲಿ ಗುರುತಿಸಬಹುದು. ‘ಚಕ್ರಸ್ಥಾನ’ ಎನ್ನುವ ಪರಿಕಲ್ಪನೆಯೇ ಅದರ ಚಲನಶೀಲ ವೃತ್ತಿಯನ್ನು ಹೇಳುತ್ತದೆ.

ಅನುರಕ್ತ ಪರಂಪರೆಯ ಮುಖ್ಯ ಸ್ಥಾಯಿಯೇ ಶರೀರದ ಮುಖ್ಯಗುಣಗಳ ಶಕ್ತಿ ವಿಸ್ತರಣೆ. ದೇಹ ಯಾವುದನ್ನು ಉತ್ಕಟವಾಗಿ ಅನುಭವಿಸುತ್ತದೋ ಅದನ್ನೇ ಮತ್ತಷ್ಟು ಉತ್ತೇಜಿಸಿ ಆಧ್ಯಾತ್ಮಿಕಮಾರ್ಗವನ್ನಾಗಿ ಪರಿವರ್ತಿಸುವುದು. ಇದನ್ನು ಬೇಕಾದರೆ ಸುರತ ಸುಖದ ಅಥವಾ ವೀರ‍್ಯಸ್ಫೋಟದ ಸ್ಥಿತಿಯೆಂದು ಗುರುತಿಸಬಹುದು. ಶೈವತಾಂತ್ರಿಕತೆಯಲ್ಲಿ ಈ ಕ್ಷಣ ಬಹುಮುಖ್ಯವಾದುದು. ಇದೇ ಪರಮಾನಂದ ಪರತತ್ವದ ಸಾಕ್ಷಾತ್ಕಾರದ ಮೆಟ್ಟಿಲು. ಕಾಶ್ಮೀರಿ ಶೈವದಲ್ಲಿ ಕಾಮವೇ ವಿಶಾಲಾರ್ಥದಲ್ಲಿ ಅಂತಿಮ ಜ್ಞಾನ. ಮಿಲನದ ಸಮಸ್ಥಿತಿಯೇ ಅದ್ವಯಾನುಭವ.

ವ್ಯವಸ್ಥೆಯಲ್ಲಿ ಯಾವುದು ಭೀತಿಗೆ ಮೂಲವೋ ಬಂಧನಕ್ಕೆ ಮಾರ್ಗವೋ ಬಸವಯ್ಯನಲ್ಲಿ ಅದು ಬೆರಗಿನ ಮೂಲವಾಗಿ ಬಿಡುಗಡೆಯ ಆಶಯವಾಗಿ ವಿಕಾಸವಾಗುತ್ತದೆ. ಸಾಂಪ್ರದಾಯಿಕ ಸ್ಮೃತಿಗಳಿಗೆ ವ್ಯರ್ಜವಾದದ್ದು,ಅವಗಣನೆಗೆ ಒಳಗಾದದ್ದು ಬಸವಯ್ಯನಲ್ಲಿ ಅರಿವಿನ ಮೂಲವಾಗಿ ಕಾಣಿಸಿಕೊಳ್ಳುತ್ತದೆ. ಅಂಚಿಗೆ ತಳ್ಳಲ್ಪಟ್ಟ ವಿದ್ಯಮಾನಗಳನ್ನು ಸಾರ್ವತ್ರಿಕ ರೂಪಗಳಾಗಿ ಆಧ್ಯಾತ್ಮಿಕ ಎತ್ತರಕ್ಕೆ ಪರಿವರ್ತಿಸುವುದು ಬಸವಯ್ಯನಲ್ಲಿ ಮುಖ್ಯವಾಗಿ ಕಾಣುತ್ತದೆ. ಈ ರೂಪಕಾತ್ಮಕತೆ ಬಸವಣ್ಣನಲ್ಲಿ ಸಾಮಾಜಿಕ ವಿವರಗಳಿಂದ ಸಂಕಲಿತವಾದರೆ ಅಕ್ಕಮಹಾದೇವಿಯಲ್ಲಿ ನಿಸರ್ಗದಿಂದ ರೂಪಗೊಳ್ಳುತ್ತದೆ. ಪ್ರಭುವಿನಲ್ಲಿ ಈ ಎರಡೂಸ್ಥಿತಿಗಳಿಂದ ಭಿನ್ನವಾದ ಅಸಾಮಾನ್ಯ ಸಂಬಂಧಗಳಿಂದ ರೂಪಗೊಳ್ಳುತ್ತದೆ. ಬಾಚಿಕಾಯಕದ ಬಸವಯ್ಯನಲ್ಲಿ ವೃತ್ತಿಮೂಲ ಸಿದ್ಧಾಂತದಿಂದ ಈ ಗುಣ ಸಂಕಲಿತಗೊಳ್ಳುತ್ತದೆ. ತಾಂತ್ರಿಕ ದಾರ್ಶನಿಕನೊಬ್ಬನಿಗೆ ಪ್ರತಿ ಬಿಡಿ ಅಕ್ಷರ ಅಥವಾ ವಸ್ತು ಪರಿಕರಗಳು ಒಂದು ವಿರಾಟ್ ವ್ಯವಸ್ಥೆಯ ನಿರ್ಮಾಣಕ್ಕೆ ಕಾರಣವಾದರೆ ಬಸವಯ್ಯನಲ್ಲಿ ಪ್ರತಿಯೊಂದು ವಸ್ತುರೂಪಗಳು ಮತ್ತು ಅದರ ಉತ್ಪಾದನಾ ನೆಲೆಗಳು ದೇಹಮೀಮಾಂಸೆಯ ಮತ್ತು ಅದ್ವಯದ ಐಕ್ಯತೆಯ ವಿಶ್ಲೇಷಣಾ ನೆಲೆಗಳಾಗಿ ಬಳಕೆಯಾಗುತ್ತವೆ.

ಸಾಮಾನ್ಯವಾಗಿ ಶಬ್ದ ಅರ್ಥಗಳನ್ನು ಶಿವ ಶಕ್ತಿಯರ ಸಂಬಂಧದಲ್ಲಿ ವಿಶ್ಲೇಷಿಸಿಕೊಳ್ಳಲಾಗುತ್ತದೆ. ಇದು ಪರಂಪರೆಯೊಂದರ ಬಳುವಳಿಯೂ ಹೌದು. ಕಾಳಿ ಅಂದರೆ ಪರಾಶಕ್ತಿಯ ಆರಾಧಕನಾದ ಬಸವಯ್ಯ ಬಿಡಿ ಪದಗಳಿಗೂ ತಾರ್ಕಿಕ ಅರ್ಥವನ್ನು ಕಲ್ಪಿಸಿಕೊಡುತ್ತಾನೆ. ಉಳಿ, ಬಾಚಿ, ಕೊಡತಿ, ಮನೆ, ರಥ, ಏಣು, ಇವು ಲೋಕದ ಸಾಮಾನ್ಯತೆಗೆ ಬಿಡಿ ಪದಗಳು ಮತ್ತು ವಸ್ತುಪರಿಕರಗಳ ಸಮುಚ್ಛಯ ಮಾತ್ರ. ಆದರೆ ಇವೆಲ್ಲವೂಗಳಿಗೂ ತಾರ್ಕಿಕವಾದಂಥ ಅಂತಃಸಂಬಂಧ ಸಾಧ್ಯವಾಗುವುದು ಕಸುಬುದಾರ ಕಲಾವಿದನಲ್ಲಿ. ಆತನಿಗೆ ಇವು ಪರಿಕರಗಳಾಗದೆ ಅರಿವಿನ ಸ್ಫುರಣೆಗಳಾಗಿ ಸಾಧನೆಯ ಮಾಧ್ಯಮಗಳಾಗಿ ನೆಲೆಗೊಳ್ಳುತ್ತವೆ. ಬಸವಯ್ಯನಲ್ಲೂ ಈ ಪದಗಳಿಗೆ ಲೌಕಿಕಾರ್ಥವೂ ಇದ್ದಂತೆ ವಿಶೇಷಾರ್ಥವೂ ಇದೆ ಎನ್ನುವುದು ಸಾಧಿತವಾಗುತ್ತದೆ. ಬಸವಯ್ಯನಿಗೆ ಈ ಪರಿಕರಗಳು ಶಕ್ತಿಯ ಪ್ರತೀಕ (ಕಾಳಿಯ ಸಮನ್ವಯೀಕರಣ). ಕಾಳಿ ಆತನ ಕುಲದೇವತೆಯಾದಂತೆ ಕರ್ತೃತ್ವ ಶಕ್ತಿಯುಳ್ಳವಳೂ ಹೌದು. ಆತನ ಸೃಷ್ಟಿ ಪ್ರಜ್ಞೆಯ ಮತಿಯೂ ಕಾಳಿಯೇ. ಕುಂಡಲಿನೀ ಚಕ್ರದ ಅಧಿದೇವತೆಯಾದ ಕಾಳಿ ಬಸವಯ್ಯನ ಕುಲದೇವತೆ. ತಾಂತ್ರಿಕ ದರ್ಶನಗಳ ಪ್ರಕಾರ ಈ ಶಕ್ತಿಯಾ ಕಾಳಿಯು ಪ್ರಪಂಚದ ಎಲ್ಲ ವಿದ್ಯಮಾನಗಳನ್ನೂ ಕೇಳಿಸಿಕೊಳ್ಳುವ ಶಕ್ತಿಯನ್ನು ಪಡೆದುಕೊಂಡವಳು. ಈ ಕೇಳಿಸಿಕೊಳ್ಳುವ ಶಕ್ತಿಯೇ ಆಕೆಗೆ ಸೃಷ್ಟಿಶಕ್ತಿಯ ತಾಕತ್ತನ್ನು ನೀಡಿದೆ. ಲೌಕಿಕತೆಯನ್ನು ಮೀರಿದ ಸಂಕಲನಾಮ ಸಂಧಾನದಲ್ಲಿ ಈ ಪರಾಶಕ್ತಿ ಇಂಥ ಬಿಡಿಪದಗಳಿಗೆ ಕ್ರಿಯಾತ್ಮಕ ಗುಣವನ್ನು ಸಾಧ್ಯವಾಗಿಸುತ್ತಾಳೆ. ಮರ್ತ್ಯದ ಮಿತಿ ಈ ಬಗೆಯ ಸ್ವಾತಂತ್ರ‍್ಯ ಹೀನತೆಯಲ್ಲಿದ್ದರೆ ಪರಾಶಕ್ತಿಯ ಪ್ರತಿಭಾವಿಲಾಸ ಅದನ್ನು ದಾಟುವುದರಲ್ಲಿದೆ. ಹೀಗಾಗಿ ಈ ಪರಾಶಕ್ತಿಯ ಹಲವು ಚಲನಶೀಲ ಪ್ರವೃತ್ತಿಗಳು ಬಸವಯ್ಯನಲ್ಲಿ ಒಂದು ತಾರ್ಕಿಕವಾದ ಮೂರ್ತಸ್ವರೂಪವನ್ನು ಪಡೆದುಕೊಳ್ಳುತ್ತವೆ.

ರಥದ ರೂಪಕದ ಮೂಲಕ ದೇಹ ಮೀಮಾಂಸೆಯ ಪರಿಕಲ್ಪನೆಯನ್ನು ಬೆಳೆಸುವ ಬಸವಯ್ಯನ ಒಂದು ಮಹತ್ವದ ವಚನವನ್ನು ಇಲ್ಲಿ ನಿದರ್ಶನವನ್ನಾಗಿಸಬಹುದೆನಿಸುತ್ತದೆ.

ಅಪ್ಪು ಬಲಿದು ಪೃಥ್ವಿಯ ಮೇಲೆ
ಶತಕೋಟಿ ಸಹಸ್ರಕೋಟಿ ಬಯಲಿಂದತ್ತ ಭರಿತವಪ್ಪುದೊಂದು ರಥ
ಆ ರಥಕ್ಕೆ ಬ್ರಹ್ಮ, ವಿಷ್ಣು, ಸೂರ್ಯ, ಚಂದ್ರ
ವೇದಶಾಸ್ತ್ರ ಪುರಾಣ ಸಕಲಾಗಮ ಪ್ರಮಾಣಗೂಡಿದ ಷಟ್ಕಲೆ
ಮೇರುಮಂದಿರವೆಂಬ ಅಚ್ಚುಗಂಬವ ನೆಟ್ಟಿದೆ
ಆ ರಥದ ಸುತ್ತಲು ದೇವಾದಿ ದೇವರ್ಕಳೆಲ್ಲರ ತಂದು ಸಾರಥಿಯನಿಕ್ಕಿ
ಆ ರಥದ ನಡುಮಧ್ಯಸ್ಥಾನದಲ್ಲಿ ಅಷ್ಟದಳ ಕಮಲವಾಯಾಗಿ
ಅನಂತ ಸಹಸ್ರಕೋಟಿ ಕಮಲ ಪದ್ಮಾಸನವ ರಚಿಸಿದೆ
ಈ ಪದ್ಮಾಸನದ ಮೇಲೆ ಶಂಭು ಸದಾಶಿವನೆಂಬ
ಮಹಾದೇವನ ತಂದು ನೆಲೆಗೊಳಿಸಿದೆ
ಆ ರಥದ ಪೂರ್ವಬಾಗಿಲಲ್ಲಿ ಆದಿಶಕ್ತಿಯ ನಿಲಿಸಿದೆ
ಉತ್ತರ ಬಾಗಿಲಲ್ಲಿ ಓಂ ಪ್ರಮಾಣಸ್ವರೂಪಿಣಿಯೆಂಬ ಶಕ್ತಿಯ ನಿಲಿಸಿದೆ
ಆ ಪಶ್ಚಿಮ ಬಾಗಿಲಿನಲ್ಲಿ ಕ್ರಿಯಾಶಕ್ತಿಯ ನಿಲಿಸಿದೆ
ದಕ್ಷಿಣ ಬಾಗಿಲಲ್ಲಿ ಚಿಚ್ಛಕ್ತಿಯ ನಿಲಿಸಿದೆ
ಭೈರವ ವಿಘ್ನೇಶ್ವರ ಷಣ್ಮುಖ ವೀರಭದ್ರರೆಂಬ ನಾಲ್ಕು ಧ್ವಜಪಟಗಳನ್ನೆತ್ತಿ
ಆ ರಥದ ಅಷ್ಟದಿಕ್ಕುಗಳಲ್ಲಿ ನಾನಾ ಚಿತ್ರ ವಿಚಿತ್ರ ವೈಭವಂಗಳೆಂಬ ಕೆಲಸವ
ತುಂಬಿ
ಅದರ ಗಾಲಿಯ ಕೀಲುಗಳಲ್ಲಿ
ಈರೇಳು ಭುವನವೆಂಬ ಹದಿನಾಲ್ಕು ಲೋಕಂಗಳ ಧರಿಸಿ ಆಡುತ್ತಿರ್ಪವು
ಅನಾದಿಶೂನ್ಯವೆಂಬ ಮಹಾರಥದೊಳಗಿಪ್ಪ
ನಮ್ಮ ಬಸವಣ್ಣ ಪ್ರಿಯ ವಿಶ್ವಕರ್ಮಟಕ್ಕೆ ಕಾಳಿಕಾವಿಮಲ
ರಾಜೇಶ್ವರ ಲಿಂಗವು ನಿರಾಳ ನಿಶ್ಚಿಂತ ನಿರ್ಲೇಪನು[4]

ವಚನದ ಬಹುಭಾಗವು ತಾಂತ್ರಿಕ ದರ್ಶನಗಳ ಪರಿಕಲ್ಪನೆಗಳನ್ನು ಮೈಗೂಡಿಸಿಕೊಂಡಿದೆ. ಅಲ್ಲದೆ ವಿಶ್ವಕರ್ಮ ದಾರ್ಶನಿಕತೆಯ ಮೇಲೆಯೇ ನಿರ್ಮಾಣಗೊಂಡಿದೆ. ಬಹುಮುಖ್ಯವಾಗಿ ರಥ ಮತ್ತು ಅದರ ವಿಭಾಗಗಳೊಂದಿಗೆ ದೇಹ ಮೀಮಾಂಸೆಯ ಮತ್ತು ಅದರ ವಿಕಸನಶೀಲ ಪ್ರವೃತ್ತಿಯನ್ನು ವಿಶ್ಲೇಷಿಸುತ್ತದೆ. ಅಲ್ಲದೆ ಅದರ ಗಾಲಿಯ ಕೀಲುಗಳಲ್ಲಿ ಈರೇಳು ಭುವನವೆಂಬ ಹದಿನಾಲ್ಕು ಲೋಕಂಗಳ ಧರಿಸಿ ಆಡುತಿರ್ಪವು ಎನ್ನುವ ಮಾತು ವಿಶ್ವಾತ್ಮಕ ಗುಣವನ್ನು ಪ್ರತೀಕಿಸುತ್ತದೆ. ಲೋಕಾತೀತವಾದ ಅಂದರೆ ಲೋಕಗಳ ಮಧ್ಯ ಭೇದವನ್ನು ಕಾಣದ ಅಭೇದ ಪ್ರವೃತ್ತಿಯನ್ನೂ ಕಾಲಾತೀತ ಪರಿಕಲ್ಪನೆಯನ್ನೂ ಕಾಣುತ್ತೇವೆ. ಅಖಂಡತೆ ಮತ್ತು ಅದ್ವಯವಾದದ ತಾರ್ಕಿಕತೆಯನ್ನು ವಚನ ಪೋಷಿಸುತ್ತದೆ.

ವಚನದಲ್ಲಿ ಕಾಣುವ ಬ್ರಹ್ಮ (ತ್ವಷ್ಟೃ) ವಿಷ್ಣು (ಮಯ) ಸೂರ್ಯ (ವಿಶ್ವಜ್ಞ) ಇವರೆಲ್ಲ ವಿಶ್ವಕರ್ಮನಲ್ಲಿ ನಿಹಿತರಾದವರು. ಪಂಚಶಕ್ತಿಗಳ (ಮನು-ಶಿವ, ಶಿಲ್ಪಿ-ಇಂದ್ರ) ಸಾಕಾರ ಮೂರ್ತಿಯೇ ವಿಶ್ವಕರ್ಮ. ಈತ ಸೃಷ್ಟಿ ಮತ್ತು ಅದರ ವಿಕಸನ ಹಾಗೂ ಪಾಲನೆಗೆ ಅಧಿಕಾರಸ್ಥ ಎಂಬುದು ವಿಶ್ವಕರ್ಮ ಧರ್ಮದ ಸಿದ್ಧಾಂತ. ಈತ ದೇವಾದಿ ದೇವತೆಗಳ ಸಹಾಯದಿಂದ ಈ ಸೃಷ್ಟಿಯನ್ನು ಸಲಹುತ್ತಾನೆ. ಈತನಲ್ಲಿ ನಿಹಿತರಾದ ಪಂಚಬ್ರಹ್ಮರಿಗೆ ಆದಿಶಕ್ತಿ,ಪರಾಶಕ್ತಿ,ಇಚ್ಛಾಶಕ್ತಿ,ಜ್ಞಾನಶಕ್ತಿ,ಕ್ರಿಯಾಶಕ್ತಿ ಎಂಬ ಪಂಚಶಕ್ತಿಗಳಿರುತ್ತವೆ. ಈ ಪಂಚಶಕ್ತಿಗಳೂ ಮೇಲೆ ಉಲ್ಲೇಖಿತವಾದ ಬಾಚಿಕಾಯಕದ ಬಸವಯ್ಯನ ವಚನದಲ್ಲಿನ ದೇಹಮೀಮಾಂಸೆಯ ಒಂದೊಂದು ಅಂಗದ ಕ್ರಿಯಾರೂಪಗಳಾಗಿ, ಕಾವಲು ದೇವತೆಗಳಾಗಿ ನಿಯುಕ್ತರಾಗಿದ್ದಾರೆ. ಈ ಕಾವಲು ನಿಲಿಸುವ ಕ್ರಮವೇ ಜಾಗೃತಾವಸ್ಥೆಯ, ಕ್ರಿಯಾತ್ಮಕ ಪ್ರವೃತ್ತಿಯ ಪ್ರತೀಕವಾಗಿದೆ. ಕಸುಬುದಾರನಲ್ಲಿ ಸುಪ್ತಕ್ಕಿಂತ ಜಾಗೃತಾವಸ್ಥೆಯೇ ಬಹು ಮುಖ್ಯ. ‘ರಥದ ನಡುಮಧ್ಯಸ್ಥಾನದಲ್ಲಿ ಅಷ್ಟದಳ ಕಮಲ’, ‘ಕಮಲ ಪದ್ಮಾಸನ’, ‘ಚಕ್ರಸ್ಥಾನ’, ‘ಮಹಾಹೃತ್ಕಮಲದೊಳಗೆ ಉನ್ಮನೀಯ ಸ್ಥಾನ’, ‘ಕಮಲಪೀಠದ ಮೇಲೆ ಶಂಭು ಸದಾಶಿವನಾದ ಮಹಾದೇವನ ನೆಲೆಗೊಳಿಸುವಿಕೆ’ ಇಂಥ ತಾಂತ್ರಿಕ ಪರಿಭಾಷೆ ಮತ್ತು ಪರಿಕಲ್ಪನೆಗಳು ಬಸವಯ್ಯನನ್ನು ವಿಶಿಷ್ಟವಾಗಿ ಅಭ್ಯಾಸ ಮಾಡಲು ಪ್ರಚೋಧಿಸುತ್ತವೆ.

ಬಸವಯ್ಯನ ಇಡೀ ವಚನ ಹಠಯೋಗದ ತಳಹದಿಯ ಮೇಲೆ ನಿಂತಿದೆ ಎಂಬುದು ಬಹುಮುಖ್ಯ ವಿಚಾರ. ನಾಥ ಪಂಥದಂತಹ ಪ್ರಮುಖ ಪಂಥಗಳು ಈ ತಳಹದಿಯನ್ನೇ ಅವಲಂಬಿಸಿರುವಂಥವು ಹಾಗೂ ಉಗ್ರವಾದ ಇಂದ್ರಿಯ ನಿಗ್ರಹದ ಮೂಲಕ ಭೌತಿಕ ವಿಜಯವನ್ನು ಸಂಪಾದಿಸಿದವರು. ನಾಥಸಿದ್ಧರಂಥ ಯೋಗಿಗಳು ರಸವಿದ್ಯೆಯಲ್ಲಿ ಪ್ರವೀಣರು. ‘ಚಿನ್ನ’ ತಯಾರಿಸುವ ಕಲೆಯಲ್ಲಿ ಸಿದ್ಧಹಸ್ತರು. ಅಷ್ಟೇ ಅಲ್ಲ ಯಂತ್ರ-ಮಂತ್ರ ಹಾಗೂ ರಹಸ್ಯ ವಿದ್ಯೆಯಲ್ಲಿ ಇವರ ಸಾಧನೆ ಬಲು ದೊಡ್ಡದು. ಸಕಲ ವಿದ್ಯಾ ಕುಶಲರೂ ಹಾಗೂ ಯಂತ್ರವಿದ್ಯಾ ಸಾಧಕರೆಂದು ಕರೆಸಿಕೊಳ್ಳುವ ವಿಶ್ವಕರ್ಮರೂ ಅಗ್ನಿ, ಜಲ, ವಾಯು, ಆಕಾಶ ಸಂಬಂಧಿಯಾದ ಹಲವಾರು ಯಂತ್ರಗಳನ್ನು ಶೋಧಿಸಿ ಸಾಧಿಸಿಕೊಂಡವರು. ಅಲ್ಲದೇ ‘ಕದಳೀಗರ್ಭವಿದ್ಯಾ’ ‘ಪರ್ಣಲಘುವಿದ್ಯಾ’ ಎನ್ನುವ ಕಲ್ಲು ಕಬ್ಬಿಣ ಮತ್ತು ಕಟ್ಟಿಗೆಯಂತಹ ಘನವಸ್ತುಗಳನ್ನು ಮೃದುಮಾಡುವ, ಕರಗಿಸುವ ಮತ್ತು ತಕ್ಕ ಅಳತೆಗೆ ಸೀಳುವ, ಭಾರವಾದ ವಸ್ತುಗಳನ್ನು ಹಗುರವಾಗಿ ಎತ್ತುವ (ಪರ್ಣಲಘವಿದ್ಯಾ) ವಿಶೇಷ ವಿದ್ಯೆಗಳನ್ನು ಸಿದ್ಧಪಡಿಸಿಕೊಂಡಂಥವರು. ಅಂದರೆ ಔಪಯೋಗಿಕ ಘನವಸ್ತುಗಳನ್ನು ಅದರ ಗುಣಸ್ವಭಾವದನ್ವಯ ಬಳಕೆಗೆ ಅಣಿಗೊಳಿಸುತ್ತಿದ್ದರು. ಅದರಲ್ಲಡಗಿದ ಸೃಷ್ಟ್ಯಾತ್ಮಕತೆಯನ್ನು ಲೋಕೋಪಕಾರಕ್ಕಾಗಿ ಹರಿಯಬಿಡುತ್ತಿದ್ದರು. ಹಾವಿನಹಾಳ ಕಲ್ಲಯ್ಯನಂಥವರು ಇಂಥ ತಾತ್ರಿಕ ವಿದ್ಯೆಗಳಲ್ಲಿ ಪರಿಣಿತರಾಗಿದ್ದದು ಕಾಣುತ್ತದೆ.[5]ಇಂದಿಗೂ ಹಲವು ವಿಶ್ವಕರ್ಮ ಮಠಗಳು ಮತ್ತು ಮಂದಿ ಇಂಥ ತಾಂತ್ರಿಕ (ಮೋಡಿ ಆಟ, ಯಂತ್ರ ಮಂತ್ರ) ವಿದ್ಯೆಗಳನ್ನು ಪೋಷಿಸುತ್ತಿರುವುದು ಇದಕ್ಕೆ ಸಾಕ್ಷಿ.[6]ಗ್ರಂಥಜ್ಞಾನ,ಶಾಸ್ತ್ರಜ್ಞಾನಗಳಿಗೆ ನಾಥ ಪಂಥದಂಥ ಶೈವ ತಾಂತ್ರಿಕರಲ್ಲಿ ಪ್ರಾಮುಖ್ಯತೆ ಕಡಿಮೆ. ಹಠಯೋಗಕ್ಕೆ ಅಲ್ಲಿ ಪ್ರಮುಖಸ್ಥಾನ. ವಿಶ್ವಕರ್ಮದಲ್ಲೂ ಕೂಡ ಕ್ರಿಯಾಜ್ಞಾನಕ್ಕೆ ಪ್ರಮುಖ ಸ್ಥಾನ. ಕೌಲ,ತಾಂತ್ರಿಕ,ಕಾಪಾಲಿಕ ಮತದ ಬಹಳಷ್ಟು ಚಹರೆಗಳು ವಿಶ್ವಕರ್ಮದಲ್ಲಿ ಮತ್ತು ಬಸವಯ್ಯನ ವಚನದಲ್ಲಿ ಎದ್ದುಕಾಣುತ್ತವೆ. ವಿಶ್ವಕರ್ಮ ಮಠಗಳಲ್ಲಿ ಮಳಿಸ್ವಾಮಿ ಮಠಗಳು ಇಂಥ ತಾಂತ್ರಿಕ ಚಹರೆಗಳಿಗೆ ಬಹಳ ಹತ್ತಿರವಾದಂಥವು. ಇವರು ಅಗ್ನಿ ಮತ್ತು ಜಲವನ್ನು ವಶಪಡಿಸಿಕೊಂಡವರು. ಇವು ‘ವಾಕ್‌ಸಿದ್ಧಿ’ ಮಠಗಳು. ಇನ್ನೂ ಕೆಲವು ಮಂತ್ರ ಸಿದ್ಧಿ ಮಠಗಳೂ ಆಧ್ಯಾತ್ಮಸಿದ್ಧಿ ಮಠಗಳೂ ಇರುವುದು ಕಂಡುಬರುತ್ತವೆ. ಶರೀರವನ್ನು ಶುದ್ಧೀಕರಿಸುವ ಮತ್ತು ಪರಿವರ್ತನೆಗೆ ಒಳಪಡಿಸುವ ತಂತ್ರವನ್ನು ಪಂಚಾಳರು ಬಲ್ಲವರಾಗಿದ್ದರು ಎಂಬುದು ಚರಿತ್ರೆಯಿಂದ ತಿಳಿದುಬರುತ್ತದೆ.

೪.ಮಾಯೆ ಮತ್ತು ತಾಯಿ

ಬಹಳಷ್ಟು ಅನುಭಾವಿಗಳು ಈ ಶರೀರವನ್ನು ಮಾಯೆ, ಮಿಥ್ಯ ಎಂದು ಕರೆದದ್ದಿದೆ. ಅದರೆ ಬಾಚಿಕಾಯಕದ ಬಸವಯ್ಯ ಈ ಮಾಯೆಯನ್ನು ತಾಯಿಯಾಗಿ, ಸೃಷ್ಟಿ ಕ್ರಿಯೆಯ ಮೂಲವಾಗಿ ತನ್ನ ವಚನಗಳಲ್ಲಿ ವಿಸ್ತರಿಸಿಕೊಳ್ಳುತ್ತಾನೆ. ಕಾರಣ ಮೇಲೆ ವಿವರಿಸಿದಂತೆ ‘ಕಾಳಿ’ ಆತನ ಕುಲದೇವತೆಯಾಗಿರುವುದು. ವಿಶ್ವಕರ್ಮಧರ್ಮವೂ ಪ್ರಮುಖವಾಗಿ ಶಕ್ತಿಯ ಆರಾಧನಾ ಪಂಥ. ಈ ವಿಶ್ವಕ್ಕೆ ನಾಭಿರೂಪವಾದ ಯಜ್ಞಕ್ಕೆ ವಿಶ್ವಕರ್ಮ ರೂಪವಾದ ಪ್ರಜಾಪತಿಯೇ ಆಶ್ರಯ.[7]ಈತ ಸ್ವಯಂ ಪ್ರಕಾಶ. ಜೀವಣ್ಣ ಮಸಳಿಯವರಂಥ ವಿಶ್ವಕರ್ಮ ಸಂಶೋಧಕರು ವಿಶ್ವಕರ್ಮರ ಮೂಲವನ್ನು ಅಗ್ನಿಯಲ್ಲಿ ಗುರುತಿಸುತ್ತಾರೆ. ಇದು ವಿಶ್ವಕರ್ಮ ಧರ್ಮದಲ್ಲಿ ಸೃಷ್ಟಿಯಸಂಕೇತ (ಕುಲುಮೆ)ವಾಗಿ ದಿವ್ಯದ ಬೆಳಕಾಗಿ ಕಾಣುತ್ತದೆ. ಅಗ್ನಿ ಮತ್ತು ಜಲವನ್ನು ಏಕೀಕರಿಸಿ ಶಕ್ತಿಯ ವಿಶಿಷ್ಟತೆ ಮತ್ತು ಸರ್ವಶಕ್ತಿಯ ಪ್ರತೀಕವಾಗಿ ಸ್ವೀಕರಿಸುತ್ತಾರೆ. ಜಲ ಸಂಸ್ಕೃತಿಗೆ ಸಂಬಂಧಿಸಿದಂತೆ ಮಳೀಸ್ವಾಮಿಮಠ ವಿಶ್ವಕರ್ಮರಲ್ಲಿವೆ ಎಂಬುದು ಇಲ್ಲಿ ಗಮನಾರ್ಹ. ಬಾಚಿಕಾಯಕದ ಬಸವಯ್ಯ ಹೇಳುವಂತೆ

ಮಾತೆಯ ಆತ್ಮದಲಿ ರೇತ ರಕ್ತವು ಕೂಡಿ
ಕೆನ್ನೀರ ಮುತ್ತಿನಂತಾಯಿತ್ತಯ್ಯ
ಆ ಕೆನ್ನೀರ ಮುತ್ತು ವಿದ್ರುಮದಾಕಾರವಾಯಿತ್ತಯ್ಯ
ಆ ವಿದ್ರುಮದಾಕಾರ ಒಂದು ಹಿಡಿಯಾಯಿತ್ತಯ್ಯಾ
ಆ ಹಿಡಿಯಾದುದಕ್ಕೆ ಆಕಾರ ಅಂದವಾಗಿ ಓಂಕಾರ ಸ್ವರೂಪವಾಯಿತ್ತಯ್ಯ
ಆ ಓಂಕಾರ ಸ್ವರೂಪವಾದ ಪಿಂಡಕ್ಕೆ ನವಮಾಸ ತುಂಬಿ
ತೆರಪಾದ ಬಾಗಿಲಲ್ಲಿ ಬಂದ ಆತ್ಮನ ಅಂಗವೆ ಅನುವಾಗಿ ಆಯತವಾಯಿತ್ತಯ್ಯಾ
ಆ ಆಯತವಾದ ಅತ್ಮನು ತನ್ನ ಅಂಗದೊಳಗೆ ಹೊರಗೆ ನೋಡುತ್ತಿರಲು
ಅಂಗವೇ ಪಾಣಿವಟ್ಟವಾಯಿತು ಲಿಂಗವೇ ಶಿರಸ್ಸು ಆಯಿತು
ಆ ಶಿರಸ್ಸಿನೊಳಗೆ ಎರಡು ಜ್ಯೋತಿಯುಂಟು
ಆ ಎರಡು ಜ್ಯೋತಿಯ ನಡುಮಧ್ಯ ಸ್ಥಾನದಲ್ಲಿ
ಒಂದು ಅಮೃತದ ಕಮಲವುಂಟು
ಆ ಕಮಲದೊಳಗಣ ಅಮೃತವನುಣ ಬಲ್ಲಡೆ
ಆತನೆ ಪಿಂಡಾಂಡ ಜ್ಞಾನಿಯೆಂದಾತ
ನಮ್ಮ ಬಸವಪ್ರಿಯ ವಿಶ್ವಕರ್ಮಟಕ್ಕೆ
ಕಾಳಿಕಾ ವಿಮಲ ರಾಜೇಶ್ವರ ಲಿಂಗವೆಂಬೆ[8]

ಅದ್ವಯವಾದಿ ನೆಲೆಯಲ್ಲಿ ಮತ್ತೇ ಮತ್ತೇ ಸೃಷ್ಟಿಯ ಗತಿಶೀಲತೆಯನ್ನು ಗುರುತಿಸುವ ನೆಲೆಗಳನ್ನು ಬಸವಯ್ಯನಲ್ಲಿ ಕಾಣುತ್ತೇವೆ. ಆತನ ಕಟ್ಟುವ ಮತ್ತು ವಿಸ್ತೃತಶೀಲ ಮನೋಭೂಮಿಕೆಯನ್ನು ಇವು ವಿಭಿನ್ನ ನೆಲೆಗಳಲ್ಲಿ ಗಟ್ಟಿಗೊಳಿಸುತ್ತಾ ಹೋಗುತ್ತವೆ. ವಚನದಲ್ಲಿ ಸೂಚಿತವಾದ ‘ಕೆನ್ನೀರ ಮುತ್ತು’ ಪ್ರತಿಮೆಯು ಪಿಂಡಾಂಡದ ಅಗಾಧತೆಯನ್ನು ವಾಸ್ತವದ ನೆಲೆಗಟ್ಟಿನ ಮೇಲೆ ಬೆಳೆಸುತ್ತ ಹೋಗುತ್ತದೆ. ವಚನ ವಿಕಸನಶೀಲ ಪ್ರಕ್ರಿಯೆಗೆ ಹೆಚ್ಚಿನ ಒತ್ತು ನೀಡುತ್ತದೆ.

ಅಥರ್ವಣ ವೇದವು ಕೆಂಪು ಬಣ್ಣದ ಸೂರ‍್ಯಪ್ರತಿಭೆಯನ್ನು ವಿಶ್ವೋತ್ಪತ್ತಿಯ ಶಕ್ತಿಯೆಂದು ಉನ್ನತೀಕರಿಸುತ್ತದೆ. ಸೂರ್ಯ, ಅಗ್ಮಿ, ನಾಭಿರೂಪ ಮುಂತಾದ ಪರಿಭಾಷೆಗಳನ್ನು ವಿಶ್ವಕರ್ಮವು ಸೃಷ್ಟಿ,ಜ್ಞಾನ, ಬೆಳಕುಗಳ ಹಿನ್ನೆಲೆಯಲ್ಲಿ ಪರಿಭಾವಿಸುತ್ತದೆ. ಸೂರ‍್ಯನಲ್ಲಿ ಬೆಳಕಾಗಿ ತುಂಬಿರುವುದು ಅಗ್ನಿ. “ಪೃಥ್ವಿಯ ಪ್ರತೀಕವಾಗಿರುವ ಕಮಲವು ಸೂರ್ಯನ ವಿಶೇಷ ಅನುರಾಗದ ವಿಷಯವಾಗಿರುವುದು ಸ್ವಾಭಾವಿಕವೆ. ಕಾರಣ ಸೂರ್ಯನು ದ್ಯುಲೋಕದ (ಆಕಾಶ-ನಿಸರ್ಗ) ಪ್ರತಿನಿಧಿಯಾಗಿದ್ದಾನೆ. ಅದಕ್ಕಿಂತಲೂ ಹೆಚ್ಚಾಗಿ ಆತ ಸಾಕ್ಷಾತ್ ಪುರುಷ. ಈ ಪರಮ ಪುರುಷನ ಪ್ರೇಯಸಿಯಾಗಿರುವಕಮಲರೂಪಿಯಾದ ಪೃಥ್ವಿ ಅವನ ದರ್ಶನದಿಂದ ಶತದಳವಾಗಿ ಅರಳುತ್ತಾಳೆ. ಕೊನೆಗೆ ಈ ದ್ಯಾವಾ ಪೃಥ್ವಿಯರ ಮಧುರಮಿಲನದಿಂದ ವಿಶ್ವದ ಗರ್ಭವು ರೂಪಗೊಳ್ಳುತ್ತದೆ.[9]ವಿಶ್ವಕರ್ಮ ತತ್ವದ ಪ್ರಕಾರ ವಿಕಸನಕ್ಕೆ ದಾರಿಯಾದ ಅಗ್ನಿಯ ಜನ್ಮಸ್ಥಾನ ಕಮಲವೆಂದು ಋಗ್ವೇದ ಹೇಳುತ್ತದೆ.ತ್ವಮಾಗ್ನೇಪುಷ್ಕರಾವ್ ಆದೃರ್ಥರ್ವಾಂಗಿರಮಂಧತ್ ಮೂರ್ಥ್ನೋವಿಶ್ವಸ್ಯವಾಘತಃ (ಋ. ೬-೧೬-೧೩) ವಿಶ್ವಕರ್ಮರ ಮೂಲಪುರುಷನಾದ ಪ್ರಜಾಪತಿ ವಿಶ್ವದ ಅಧಿಕಾರಣವಾಗಿರುವ ಜಲದೊಳಗಿಂದ, ಕಮಲದೊಳಗಿಂದ ಮಂಥನಮಾಡಿ ಪೃಥ್ವಿಯನ್ನು ಹೊರತೆಗೆಯುತ್ತಾನೆ. ಜಲ ಕಮಲದ ಏಕತ್ವವನ್ನು ಇಲ್ಲಿ ತತ್ವೀಕರಿಸಲಾಗಿದೆ. ಸೃಷ್ಟ್ಯಾತ್ಮಕವಾದ ಈ ಅದ್ವೈತ ಪರಿಕಲ್ಪನೆಯನ್ನು ಜೀವಣ್ಣ ಮಸಳಿಯವರ ಒಂದು ಉಲ್ಲೇಖದಿಂದ ವಿವರಿಸಿಕೊಳ್ಳಬಹುದೆನಿಸುತ್ತದೆ.

ವೈಶ್ಯಕರ್ಮಣ ಸಿದ್ಧಾಂತವು ಶುದ್ಧ ಅದ್ವೈತವನ್ನು ಪ್ರತಿಪಾದಿಸುತ್ತದೆ. ವಿಶ್ವಕರ್ಮನು ಸಂಕಲ್ಪ ಮಾತ್ರದಿಂದ ಜಗತ್ತನ್ನು ಸೃಜಿಸಿದನು. ಅಂದರೆ ಶಕ್ತಿಃ ಕೃಃ ಪ್ರಕೃತಿಯನ್ನು ತನ್ನಿಂದ ಹೊರಗೆ ಬಿಟ್ಟನು. ಈ ಎರಡಾದ ಶಕ್ತಿಗಳಿಗೆ ವಿಶ್ವಕರ್ಮ ಗಾಯತ್ರಿ ಎಂದೂ ಹೇಳುತ್ತಾರೆ. ಎರಡೂ ತದ್ರೂಪಗಳಾಗಿವೆ. ಏಕೆಂದರೆ ಒಂದೇ ಎರಡಾಗಿವೆ ತಾನೆ? ಆರ‍್ಯರು ಭಾರತಕ್ಕೆ ಆಗಮಿಸುವುದಕ್ಕಿಂತ ಪೂರ್ವದಲ್ಲಿಯೇ ಪಂಜಾಬದಲ್ಲಿನೆಲೆಸಿದ್ದ ಪಂಚಾಣ್ಡು ಜನಾಂಗವು ವಿಶ್ವಕರ್ಮ ಗಾಯತ್ರಿ, ಶಿವ (ವಿಶ್ವಕರ್ಮಾಂತರ್ಗತವಾದ) ಶಕ್ತಿಗಳ ಸಂಕಲ್ಪನೆ ಆಗಲೇ ಆದದ್ದು. ಆಂಡಿಭೂತವು ಶಕ್ತಿಗೆ ಇನ್ನೊಂದು ಹೆಸರಾಯಿತು. ಅಣ್ಣು+ಆಂಡಿ (ಭೂತ) ಅಣ್ಣಾಂಡಿ=ಅಣ್ಣಾಂದ>ಅಣ್ಣಂದ>ಅನಂತ……ಅನಂತ ಪದವು ಮೊಟ್ಟಮೊದಲು ಹುಟ್ಟಿದ್ದು ಪಂಚಾಣ್ಣು >ಪಂಚಾಂಡ>ಪಂಚಾಳ.ವೈಶ್ವಕರ್ಮಣರಿಂದಲೇ ಎಂಬುದನ್ನು ಗಮನಿಸಲೇಬೇಕು. ಅನಂತ-ನಾಗ ಅದಕ್ಕಾಗಿ ವಿಷ್ಣುವನ್ನು ಅನಂತಶಯನ ಮತ್ತು ಶಿವನನ್ನು ನಾಗಾಭರಣ ಎಂದು ಕರೆದರು. ‘ನಾಗ’ ವ್ಯಕ್ತಿಗತವಾದ ಪದವು ‘ನಾಗಿ’ ಅದು ಸಾಧಕನ ಬೆನ್ನಮಣಿಯ ಬುಡದಲ್ಲಿ ಇರುವುದು. ಅಂದರೆ ಮೂಲಾಧಾರೆ ಚಕ್ರದ ಹತ್ತಿರಇರುವುದು. ಕುಂಡಲಿನೀ ಎಂದರ್ಥ. ಅವಳೇ ‘ನಾಗಿ’. ಅವಳು ಸುಪ್ತವಾಗಿರುವಂಥವಳು. ಅವಳ ಜಾಗೃತಿಗಾಗಿ ಸಾಧಕ ಕಠೋರ ಸಾಧನೆಯನ್ನು ಮಾಡಬೇಕಾಗುತ್ತದೆ. ‘ಅದಕ್ಕೆ ಕುಂಡಲಿನೀ ಶಕ್ತಿ’ ಎಂದು ಕರೆಯುವರು. ಅದು ಸಹಸ್ರ ದಳಗಳಲ್ಲಿ ಪ್ರವೇಶಿಸಿದರೆ ಮಹಾಜ್ಞಾನವಾಗುವುದು.[10]

ಮೇಲಿನ ವಿವರ ಬಸವಯ್ಯನನ್ನು ಅಧ್ಯಯನಿಸುವ ಸಂದರ್ಭದಲ್ಲಿ ತುಂಬಾ ಮುಖ್ಯವೆನಿಸುತ್ತದೆ. ವಿಶ್ವಕರ್ಮ ಕುಲದಿಂದ ಬಂದ ಬಸವಯ್ಯ, ಹಾವಿನಹಾಳ ಕಲ್ಲಯ್ಯರಲ್ಲಿ ಕುಲಸಹಜವಾದ ತತ್ವಗಳಾದ ಶಕ್ತಿ, ಕ್ರಿಯೆ, ಯಂತ್ರ, ಮಂತ್ರದ ತಾಂತ್ರಿಕ ಪರಿಭಾಷೆಗಳು ಹೇರಳವಾಗಿ ಸೀಗುತ್ತವೆ. ಅರಿವಿನ ಮಾರ್ಗಕ್ಕೆ ಈ ಕುಂಡಲಿನೀ ಶಕ್ತಿಯ ಜಾಗೃತಿ ಅನಿವಾರ‍್ಯ. ಅಂದರೆ ಸರಳವಾಗಿ ಹೇಳುವುದಾದರೆ ಇಡೀ ಶರೀರ ಯಾವಾಗಲೂ ಜಾಗೃತವಾಗಿರಬೇಕು. ಕ್ರಿಯಾಶೀಲವಾಗಿರಬೇಕು ಎನ್ನುವುದು ಅರ್ಥ. ಬಾಚಿಕಾಯಕದ ಬಸವಯ್ಯನ ಪುಣ್ಯಸ್ತ್ರೀ ಕಾಳವ್ವೆ ಹೇಳುವಂತೆ.

ಕೈತಪ್ಪಿ ಕೆತ್ತಲು ಕಾಲಿಂಗೆ ಮೂಲ
ಮಾತು ತಪ್ಪಿ ನಡೆಯಲು ಬಾಯಿಗೆ ಮೂಲ
ವ್ರತಹೀನನ ನೆರೆಯಲು ನರಕಕ್ಕೆ ಮೂಲ
ಕರ್ಮಹರ ಕಾಳೇಶ್ವರಾ[11]

ಇಲ್ಲಿ ಶರೀರದ ಅಜಾಗರೂಕತೆಯಿಂದಾಗುವ ಅನಾಹುತಗಳನ್ನು ಕಾಣಬಹುದಾಗಿದೆ. ಅಂದರೆ ಕ್ರಿಯೆ-ಅರಿವು(ಶಿವ-ಶಕ್ತಿ) ಇವುಗಳ ಮಾಹಿತಿಯನ್ನು ಹೇಳುತ್ತದೆ. ವಿಶ್ವಕರ್ಮದಲ್ಲಿ ಅಗ್ನಿ-ಜಲದ ಸಾತತ್ಯ ಇರುವಂತೆ ಕ್ರಿಯೆ ಅರಿವುಗಳು ಸಾತತ್ಯವಾಗಿರಬೇಕೆನ್ನುವುದು ಬಸವಯ್ಯನ ವಚನಗಳ ಆಶಯವಾಗಿದೆ. ಶಕ್ತಿ ಪ್ರಧಾನವಾದರೂ ಶಿವನ ಭಾವನೆಗಳೂ ಅದರಲ್ಲಿ ನಿಹಿತಗೊಂಡಿವೆ.

ಕಾಯವೇ ಕಾಳಮ್ಮ ಜೀವವೇ ಪರಬ್ರಹ್ಮ
ದೇವಿ ದೇವನು ಒಡಗೂಡಿ ನಾನಾ
ಜೀವ ಜಂತುಗಳಾದವು[12]

ಬಾಚಿಕಾಯಕದ ಬಸವಯ್ಯನ ನಂತರ ಬಂದ ತಿಂಥಿಣಿ ಮೌನೇಶ್ವರರ ಈ ವಚನ (೧೬೦೦) ಸೃಷ್ಟಿಕ್ರಿಯೆಯ ನಿರಂತರತೆಯನ್ನು ಶಿವ-ಶಕ್ತಿಯರ ಅದ್ವೈತ ಸಂಬಂಧದ ಮೂಲಕ ಗ್ರಹಿಕೆಗೆ ತರುತ್ತದೆ. ‘ವಿಶ’ (ಪುರುಷ) ‘ಕರ್ಮ’ (ಕ್ರಿಯೆ-ಶಕ್ತಿ) ವಿಶಿಷ್ಟವಾದ ಈ ಶಕ್ತಿಗಳಿಂದ ವಿಸ್ತೃತಗೊಳ್ಳುವ ಕ್ರಿಯೆ ಕಾಶ್ಮೀರಿ ವೈಶ್ವಕರ್ಮಣ ಸಿದ್ಧಾಂತವೆಂದು ವಿದ್ವಾಂಸರು ಗುರುತಿಸುತ್ತಾರೆ. ಲಕುಲೀಶಪಂಡಿತ, ಕಾಳಾಮುಖರು, ನಾಗಬ್ರಾಹ್ಮಣರೆಂದು (ವಿಶ್ವಕರ್ಮರು) ಜೀವಣ್ಣ ಮಸಳಿಯವರು ಗುರುತಿಸುತ್ತಾರೆ.[13]೧೦,೧೨ನೇಯಶತಮಾನದವರೆಗೂ ಈ ಕಾಳಾಮುಖರಂಥ ತಾಂತ್ರಿಕ ಪಂಥಗಳ ಭರಾಟೆಯನ್ನು ಕಾಣುತ್ತೇವೆ.

‘ಒಳಗೆ ಶೋಧಿಸಿ, ಹೊರಗಳವಡಿಸಿ ಭಾವದಿಂ ಗುಡಿ ತೋರಣವ ಕಟ್ಟುವೆನಯ್ಯಾ, ಎನ್ನುವ ಹಾವಿನಹಾಳ ಕಲ್ಲಯ್ಯನ ಮಾತುಗಳಾಗಲೀ’, ’ಹೊರಗೆ ಬಾಚಿಯಲಿ ಸವೆದು ಒಳಗೆ ಉಳಿಯಲಿ ನವೆದು ಬೆಳಗು ಬೆಳಗ ಕೂಡಿದಂತೆ ಆಕಾಶ ಮಹಾದಾಕಾಶ ಕೂಡಿದಂತೆ’ ಎನ್ನುವ ಬಾಚಿಕಾಯಕದ ಬಸವಯ್ಯಗಳ ಶರೀರ ಮೀಮಾಂಸಾ ಸಂಗತಿಗಳು ಅದ್ವೈಯವಾದಿ ಸಿದ್ಧಾಂತವನ್ನೇ ಬಲಗೊಳಿಸುತ್ತವೆ. ರೂಪ-ನಿರೂಪ-ಸ್ವರೂಪ ಸಾತತ್ಯವನ್ನೇ ಗಟ್ಟಿಗೊಳಿಸುತ್ತವೆ.

ಬಹುಮುಖ್ಯವಾಗಿ ಬಸವಯ್ಯ ಇಲ್ಲಿ ಸ್ಥಳೀಯತೆಯ ಪ್ರತಿಪಾದಕನಾಗಿ ಕಾಣುತ್ತಾನೆ. ಅಂದರೆ ವೃತ್ತಿ ಸಹಜ ಪರಿಭಾಷೆ ಮತ್ತು ಅನನ್ಯತೆಯ ಮೂಲಕ ಒಂದು ಪರ‍್ಯಾಯ ಚಿಂತನಾಕ್ರಮವನ್ನು ಕಟ್ಟಿಕೊಡುತ್ತಾನೆ. ದೇಹ-ಆತ್ಮಗಳ, ಅರಿವು ಕ್ರಿಯೆಗಳ ಬಗೆಗಿನ ಸಾಂಪ್ರದಾಯಿಕ ನಿಲುವುಗಳನ್ನು ಮೀರಿ ಯೋಚಿಸುತ್ತಾನೆ. ಕನ್ನಡ ಭಾಷೆ ಸಂಸ್ಕೃತಿಗಳ ಮೂಲಕ ವೈದಿಕ ಮತ್ತು ಶೈವ ತಾತ್ವಿಕತೆಗಳಿಗೆ ಮುಖಾಮುಖಿಯಾಗುತ್ತಾನೆ. ಈ ಕಾರಣಗಳಿಗಾಗಿಯೇ ಬಸವಯ್ಯ ಸ್ಥಳೀಯತೆಯ ಪ್ರತಿಪಾದಕನಾಗಿ ಕಾಣುತ್ತಾನೆ. ಇಂದು ಇಂತಹ ಸ್ಥಳೀಯತೆಯು ನಾಶವಾಗುತ್ತಿದೆ. ಬಹುಕೇಂದ್ರಿತ ಪ್ರಜ್ಞೆಯನ್ನು ಹಾಳುಗೆಡವಿ ಏಕಾಕೃತೀಯವಾದ ಪ್ರಜ್ಞೆಯನ್ನು ಅನಿವಾರ್ಯ ಹಾಗೂ ಅಪೇಕ್ಷಣೀಯ ಎನ್ನುವಂಥ ಹಂತಕ್ಕೆ ನಿಯುಕ್ತಗೊಳಿಸಲಾಗುತ್ತಿದೆ. ಇಂಥ ಸಂದರ್ಭದಲ್ಲಿ ಕನ್ನಡದ ಪ್ರತಿಭೆ ಈ ರೀತಿಯ ಮಿಥ್ಯೆವನ್ನು ಒಡೆದು ಮತ್ತೇ ತನ್ನ ಬಹುಮುಖಿ ನೆಲೆಯ ಸಂವೇದನೆಗಳ ಮೂಲಕ ಮರುಹುಟ್ಟು ಪಡೆಯಬೇಕಾಗುತ್ತದೆ. ಬಾಚಿಕಾಯಕದ ಬಸವಯ್ಯನಂಥ ಅದ್ವೈಯವಾದಿಗಳ ತತ್ವಗಳ ಮೂಲಕ ಅಂತಹ ಸಾಧ್ಯತೆಗಳನ್ನು ಹುಡುಕಿ ಸಶಕ್ತಗೊಳಿಸಿಕೊಳ್ಳಬೇಕಾದ ಜರೂರು ನಮ್ಮ ಮುಂದಿದೆ. ಅಂಥ ಹಲವು ಕಿಟಕಿಗಳಿಗೆ ಮೇಲಿನ ವಿವರಣೆ ದಾರಿಯೂ ಆಗಿದೆ.

೫.ಹೃದಯ ಕಮಲದ ರೂಪಕ

ವಚನದ ಇನ್ನೂ ಕೆಲವು ರೂಪಕಗಳನ್ನು ವಿವರವಾಗಿ ನೋಡಬಹುದೆನಿಸುತ್ತದೆ. ಹೃದಯ ಕಮಲದ ರೂಪಕ ಪಂಚಾಳ ವಚನಕಾರರಾದ ಬಾಚಿಕಾಯಕದ ಬಸವಯ್ಯನಲ್ಲಿ ಹಾವಿನಹಾಳ ಕಲ್ಲಯ್ಯನಲ್ಲಿ ಕಾಮಾಟದ ಭೀಮಯ್ಯನಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತದೆ. ಕಾಶ್ಮೀರಿ ಶೈವ ತಾಂತ್ರಿಕ ಪರಂಪರೆಯಲ್ಲಿ ಈ ಹೃದಯ ಕಮಲ ಮುಖ್ಯ ತಾತ್ವಿಕ ರೂಪಕವಾಗಿ ಕಂಡುಬರುವುದು ಗಮನಾರ್ಹ.

ಅಭಿನವಗುಪ್ತನ ಪ್ರಕಾರ ಹೃದಯ ಎನ್ನುವುದು ‘ಯೋನಿರೂಪ’. ಅದು ಭೈರವನ ಕೇಂದ್ರಸ್ಥಾನ (ಪೀಠ-ಲಿಂಗ) ಗಂಡು ಮತ್ತು ಹೆಣ್ಣಿನ ಮರ್ಮಾಂಗಗಳನ್ನು ಹೃದಯ ಕಮಲವೆಂದೇ ಧ್ಯಾನಿಸಬೇಕೆಂದು ಹೇಳುತ್ತಾನೆ. ಕಾರಣ ಇವೆರಡಕ್ಕೂ ಸಂಕೋಚ ಮತ್ತು ವಿಕಾಸದಗುಣಗಳಿವೆ ಎನ್ನುವ ಮೂಲಕ ಅದನ್ನೊಂದು ಬಹುಮುಖ್ಯ ಪ್ರಮೇಯವನ್ನಾಗಿಸುತ್ತಾನೆ. ಬಸವಯ್ಯನ ವಚನಗಳ ಸ್ಥಾಯಿತ್ವವೇ ಈ ಸಂಕೋಚನ ಮತ್ತು ವಿಕಸನ ಕ್ರಮಗಳು. ರಥದ ನಡುಮಧ್ಯಸ್ಥಾನದಲ್ಲಿ ಅಷ್ಟದಳ ಕಮಲ ಎನ್ನುವುದು ಯೋನಿಯನ್ನೇ ಪ್ರತೀಕಿಸುತ್ತದೆ. ‘ನಾಭಿಕಮಲ’ ‘ಕಮಲನಾಭಿ’ ಎನ್ನುವ ವಿಶೇಷಣಗಳೂ ಇದನ್ನೇ ಹೇಳುತ್ತವೆ ಎಂದೆನಿಸುತ್ತದೆ.

ಸ್ತ್ರೀ ಸೂಕ್ತದ ಪ್ರಕಾರ ಮಳೆ ಅಥವಾ ಜಲಕಾರಣದಿಂದಲೇ ಒದ್ದೆಗೊಂಡು ಬೀಜಧಾರಣೆ ಸಾಮರ್ಥ್ಯ ಪಡೆಯುವುದು ಭೂಗುಣದ ವಿಶೇಷ ಅಂಶ. ಇಲ್ಲಿ ಭೂಮಿ ಮತ್ತು ಕಮಲವನ್ನು ಸಾದೃಶ್ಯ ಲಕ್ಷ್ಮಿಯೊಂದಿಗೆ ನಿಕಟ ಸಂಬಂಧ ಹೊಂದಿದ ಪದ್ಮ (ಪದ್ಮಜಲಕ್ಷ್ಮಿ, ಪದ್ಮನಾಭ) ಸಮೃದ್ಧಿಯ ಪ್ರತೀಕ ವಾಯು ಪುರಾಣ ಪೃಥ್ವಿಯನ್ನು ಸರ್ವಧಾರಣಿ ಸರ್ವಶಕ್ತಿ ಸರ್ವಪ್ರತಿಷ್ಠಾ ಎಂದು ವರ್ಣಿಸುವುದಲ್ಲದೇ ಅವಳು ಉತ್ಪತ್ತಿಸ್ಥಾನವಾಗಿದ್ದಾಳೆ (ಯೋನಿ) ಎಂದು ವರ್ಣಿಸುತ್ತದೆ. ‘ಚರಾಚರಸ್ಯ ಲೋಕಸ್ಯ ಯೋಗಿಃ’ ಪೃಥ್ವಿಯನ್ನು ಸಕಲಮಾತೆಯಂತಲೂ ಕಮಲರೂಪ(ಪುಷ್ಪದಾಕಾರ) ದಲ್ಲಿ ಒಪ್ಪಿಕೊಂಡಿರುವುದರಿಂದ ಕಮಲವು ‘ಚರಾಚರಗಳಯೋನಿ’ (ವಿಶ್ವದ ಉತ್ಪತ್ತಿ) ಸ್ಥಾನ ಎಂದು ಗುರುತಿಸಲಾಗುತ್ತದೆ.[14]

ಕಮಲಪದ್ಮಾಸನದ ಮೇಲೆ ಶಂಭು ಸದಾಶಿವನ ನೆಲೆಗೊಳಿಸುವ ಪರಿ ಶಿವ-ಶಕ್ತಿಯರ (ಯೋನಿ-ಶಿಶ್ನ) ಸಂಯೋಗದ ಕ್ರಮವನ್ನೇ ತೋರಿಸುತ್ತದೆ. ಈ ಸಂಯೋಗದ ಫಲ ಸಂಕೋಚನಗೊಂಡ ಕಮಲದ ವಿಕಸನ. ವಿಕಸನದ ತುರ್ಯಾವಸ್ಥೆಯೇ ಅರಿವಿನ ಸಾಧನ ಆಧ್ಯಾತ್ಮಿಕ ತತ್ವಶಾಸ್ತ್ರದಲ್ಲಿ ಪ್ರಮುಖ ಪರಿಕಲ್ಪನೆಯಾದ ‘ಸುಷುಮ್ನಾ’ ದಲ್ಲಿರುವ ‘ಮೂಲಾಧಾರ ಚಕ್ರ’ ದಲ್ಲಿ (ಊರ್ಧ್ವವೆಂಬ ಚಕ್ರಸ್ಥಾನದೊಳಗೆ) ಕಡೆಯ ರಚನೆಯಾಗಿ ಮುಖ, ಮುದ್ರಾ ಅಥವಾ ‘ಹೃತಾ-ಕರ್ಣಿಕಾ’ ಇರುತ್ತದೆ. ಇವೆಲ್ಲ ಸೇರಿ ಹೃತಿ-ಪದ್ಮವಾಗುತ್ತದೆ. ಅಷ್ಟದಳಕಮಲವೆಂಬ ಕಲ್ಪನೆಯೂ ಇಲ್ಲಿ ವಿಶಿಷ್ಟಾರ್ಥವನ್ನು ಪಡೆದುಕೊಳ್ಳುತ್ತದೆ. ಈ ಅಷ್ಟದಳ ಕಮಲಗಳೇ ಆರು ಚಕ್ರಗಳು. ಯೋಗಶಾಸ್ತ್ರದ ಪ್ರಕಾರ ಶರೀರ ವಿವಿಧ ಭಾಗಗಳಲ್ಲಿ ಇವು ಕಂಡುಬರುತ್ತದವೆ. ೧.ಮೂಲಾಧಾರ ಚಕ್ರವು ಬೆನ್ನು ಹುರಿಯ ತಳಭಾಗದಲ್ಲೂ ೨. ಸ್ವಾದಿಷ್ಠಾನ ಚಕ್ರವು ಜನನೇಂದ್ರಿಯ ಮಟ್ಟದಲ್ಲೂ ೩. ಮಣಿಪೂರ ಚಕ್ರವು ನಾಭಿ ಪ್ರದೇಶದಲ್ಲಿಯೂ ೪. ಅನಾಹತ ಚಕ್ರವೂ ಹೃದಯಭಾಗದಲ್ಲೂ ೫. ವಿಶುದ್ಧ ಚಕ್ರವು ಕಂಠಪ್ರದೇಶದಲ್ಲೂ ೬. ಆಜ್ಞಾ ಚಕ್ರವು ಭ್ರೂಮಧ್ಯ (ಹಣೆ) ಪ್ರದೇಶದಲ್ಲೂ ಇರುತ್ತವೆ. ‘ಕುಂಡಲಿನಿ’ ಎಂಬ ಶಕ್ತಿಯು ಸರ್ಪಾಕಾರದಲ್ಲಿ ಸುರುಳಿಯಾಕಾರದಲ್ಲಿ ಈ ಷಟ್‌ಚಕ್ರಗಳ ಮೂಲಾಧಾರದಲ್ಲಿರುತ್ತದೆ. ಷಟ್‌ಚಕ್ರಗಳ ಮೂಲಕ ಕುಂಡಲಿನೀ ಶಕ್ತಿಯನ್ನು ಜಾಗೃತಗೊಳಿಸಿ ಹಠಯೋಗದಲ್ಲಿ ಸಿದ್ಧಿಪಡೆಯುತ್ತಾರೆ. ಮೇಲೆ ತಿಳಿಸಿದ ಅಷ್ಟದಳಗಳ ವ್ಯವಹಾರದಂತೆ ಮನಸ್ಸಿನ ಚಂಚಲತೆ ಹರಿದಾಡುತ್ತಿರುತ್ತದೆ. ಅಂದರೆ ವಿವಿಧ ಸಂಚಾರಿ ಭಾವಗಳು ಉತ್ಪತ್ತಿಯಾಗುತ್ತವೆ. ಇಂಥ ಸಂಚಾರಿ ಭಾವಗಳಿಗೆ ಸಾಧನಗಳಾದ ನಯನ,ಮನ,ಪ್ರಾಣಗಳ ಸಂಯಮಕ್ಕಾಗಿ ಸಾಧಿಸಿಕೊಳ್ಳುವ ಬಾಹ್ಯಕ್ರಿಯೆಗಳನ್ನು ‘ಮುದ್ರೆ’ಗಳೆಂದೂ ಕರೆಯುತ್ತಾರೆ. ಬಸವಯ್ಯನಲ್ಲಿ ಈ ರೀತಿಯ ಸಂಗತಿಗಳೆ ಶರೀರ ಸಮೃದ್ಧಿಯ ದಾರ್ಶನಿಕ ತತ್ವಗಳಾಗಿ ರೂಪಗೊಳ್ಳುವ ವಿಸ್ಮಯ ಅದ್ಭತವಾದದ್ದು.

ಪಂಚರತ್ನವೆಂಬ ಆಕಾರದ ಚಿತ್ಪಿಂಡದೊಳಗೆ
ಸವಿಯುವ ಸವಿಯ ಸವಿದು ನೋಡುತ್ತಿರಲು ಒಂದು ಸ್ಥಾನವುಂಟು
ಆ ಸ್ಥಾನದೊಳಗೆ ದಿವ್ಯರತ್ನದ ಕಂಭವುಂಟು
ಆ ಕಂಭದೊಳಗೊಂದು ಮಹಾರತ್ನದ ಕಮಲವುಂಟು
ಆ ಕಮಲದೊಳಗಣ ಅನಾದಿ ಅಮೃತದೊಳಗೆ ನೇಹವ ಶುದ್ಧ ಮಾಡಿ
ಆ ಕಮಲದ ನೆನೆಯ ಹತ್ತಿ ಇನಿದಾಗಿ ಉಂಡುಂಡು
ಅನುವಾಗಿ ನಿಂದು ನೋಡುವ ಸುಳುಹು ಬೆಳಗು ತಾನೆ ಕಾರಣಾ
ಬಸವ ಪ್ರಿಯ ವಿಶ್ವಕರ್ಮಟಕ್ಕೆ ಕಾಳಿಕಾ ವಿಮಲ
ರಾಜೇಶ್ವರ ಲಿಂಗವು ನಿರಾಳ ನಿಶ್ಚಿಂತನು[15]

‘ಕಮಲದ ನೆನೆಯ ಹತ್ತಿ ಇನಿದಾಗಿ ಉಂಡುಂಡು ಅನುವಾಗಿ ನಿಂದು ನೋಡುವ ಸುಳುಹು ಬೆಳಗುತಾನೆ,ಎನ್ನುವ ಸಾಲು ಇಡೀ ವಚನಕ್ಕೆ ಸಂಭೋಗ ಶೃಂಗಾರದ ಆಪ್ತತೆಯನ್ನು ತಂದುಕೊಡುತ್ತದೆ. ‘ಕುಂಭ’ ‘ಸವಿಯುವ ಸವಿ’ ‘ಪಿಂಡ’ ಈ ಪದಗಳು ಶರೀರ ಸಮೃದ್ಧತೆಗೆ ವ್ಯಾಪಕತೆಯನ್ನು ತಂದುಕೊಡುತ್ತವೆ. ಬಸವಯ್ಯ ಬಳಸುವ ‘ಅಂಗನೆಯರುರ ಸ್ಥಲದಲ್ಲಿ ಅಂಗೀಕರಿಸಿ ಅವರಧರಪಾನಂಗಳ ಮಾಡಿ ನಾ ಲಿಂಗಾಂಗಿಯೆಂದೆಡೆ’ ಎನ್ನುವ ಸಾಲು ಇಂದ್ರಿಯ ವಿಕಾರತೆಯನ್ನು ಹೇಳುತ್ತವೆ. ‘ಅದರಪಾನ’ ಎನ್ನುವುದು ತಂತ್ರಮಾರ್ಗದ ಶಕ್ತಿಸ್ವರೂಪಿ ಹೆಣ್ಣನ್ನು ತೋರಿಸುತ್ತದೆ. ಹೆಣ್ಣನ್ನು ‘ಮಹಾಮುದ್ರಾ’ ಎಂದೂ ‘ದೂತಿ’ ಎಂದೂ ತಂತ್ರಮಾರ್ಗದಲ್ಲಿ ಗುರುತಿಸಲಾಗುತ್ತದೆ. ‘ಅದರಪಾನ’ ಎನ್ನುವುದು ಉತ್ಕಟಾವಸ್ಥೆಯ ಪ್ರತೀಕ.

ಶರೀರ ಸುಖದ ಇಂಥ ಕಲ್ಪನೆಯನ್ನು ಅಪ್ರತಿಮ ಶೈವ ಅದ್ವೈತಿಯಾದ ಅಲ್ಲಮನಲ್ಲೂ ಸಕಾರಾತ್ಮಕ ನೆಲೆಯಲ್ಲಿ ಕಾಣಬಹುದು. ‘ಒಡಲಿಚ್ಛೆ ಸಲಿಸದೆ ನಿಮಿಷವಿರಬಾರದು’ ಎನ್ನುವ ಪ್ರಭು ನಿಷ್ಠುರವಾದ ದೇಹ ದಂಡನೆಯನ್ನು ಅಲ್ಲಗಳೆಯುತ್ತಾನೆ. ದೇಹಕ್ಕಿರುವ ವಿಶಿಷ್ಟ ಸೆಳವುಗಳನ್ನು ಆತ ಗೌರವಿಸುತ್ತಾನೆ. ಹಾವಿನಹಾಳ ಕಲ್ಲಯ್ಯನು ಕೂಡ ‘ತೃಪ್ತಿಯ ವೇದಿಸಿದ ಇಷ್ಟಲಿಂಗ ಇಷ್ಟಲಿಂಗವ ವೇದಿಸಿದ ಜ್ಞಾನ ಲಿಂಗಚೈತನ್ಯ ನೆಲೆಗೊಂಡಿಪ್ಪಲ್ಲಿ ಪ್ರಾಣಲಿಂಗಿ ಪ್ರಸನ್ನಲಿಂಗದ ಪರಮಸುಖಕೆ ರತಿಭೋಗದಲ್ಲಿ ಸತಿಯಾಗಿರಲು ಶರಣ ಕಾಯಜೀವಿ ಪುಣ್ಯ-ಪಾಪ ಇಹ-ಪರವೆಂಬ ಭ್ರಮೆಯಳಿದು’ ಎನ್ನುವ ಮೂಲಕ ಶರೀರ ಸೆಳೆತಗಳನ್ನು ನಿರಾಕರಿಸುವ ನೆಲೆಗಳನ್ನು ಮೀರಿನಿಲ್ಲುತ್ತಾನೆ.

ಶರೀರದ ಆಕರ್ಷಣೆ ವಿಕರ್ಷಣೆ ಅದರ ಮೇಲೆ ಅವಲಂಬಿತವಾದ ಸಾಧನೆ ಸಿದ್ಧಿಯ ವಚನಕಾರರ ನೆಲೆಗಳು ಒಮ್ಮೊಮ್ಮೆ ವಿಚಿತ್ರವಾಗಿ ಕಾಣಿಸುತ್ತವೆ. ಬಹುಪಾಲು ವಿರಕ್ತರಿಗೆ ಶರೀರವೆಂದರೆ ಭೀತಿಮೂಲವಾದದ್ದು.ಶರೀರದ ನಿರಾಕರಣೆಯೇ ಅವರ ಸೈದ್ಧಾಂತಿಕ ನಿಲುವಾದ್ದರಿಂದ ಶರೀರದ ಅಸ್ತಿತ್ವೀಯ ನೆಲೆಯ ಜೊತೆ ಅವರು ಮುಖಾಮುಖಿಯಾಗುವುದಿಲ್ಲ. ಶರೀರ ಎನ್ನುವುದು ಅವರ ಮಟ್ಟಿಗೆ ಸಂಕಟಮೂಲವಾದದ್ದು. ‘ಅಮೇಧ್ಯದ ಮಡಕೆ ಮೂತ್ರದ ಕುಡಿಕೆ ಎಲುಬಿನ ತಡಿಕೆ ಕೀವದ ಹಡಿಕೆ, ಸುಡಲೀ ದೇಹವ’ ಎನ್ನುವ ಅಕ್ಕಮಹಾದೇವಿ, ಏಕೆ ಹುಟ್ಟಿಸಿದಿ ಇಹಲೋಕ ದುಃಖಿಯ ಪರಲೋಕ ದೂರನ ಏಕೆ ಹುಟ್ಟಿಸಿದಿ ಎನ್ನುವ ಬಸವಣ್ಣನವರ ವಚನದ ಸಾಲುಗಳುಮೇಲಿನ ಮಾತನ್ನು ಸಮರ್ಥಿಸುತ್ತವೆ. ಒಂದು ವೇಳೆ ಶರೀರ ಬರೀ ನೋವು ಸಂಕಟಗಳ ಕೂಪವಾಗಿದ್ದರೆ ಗಂಡು-ಹೆಣ್ಣಿನ ಉತ್ಕಟ ವ್ಯಾಮೋಹವೂ ಇರುತ್ತಿರಲಿಲ್ಲ. ಶರೀರ ನಿಜವಾಗಿಯೂ ಸುಖದ ಪರಾಕಾಷ್ಟ ಸ್ಥಿತಿಗೆ ಮನುಷ್ಯನನ್ನು ಒಯ್ಯುತ್ತದೆ ಎನ್ನುವ ಆಧ್ಯಾತ್ಮವಾದಿಯ ಉಡಾಫೆತನವನ್ನು ಅಲ್ಲಮ ಧಿಕ್ಕರಿಸುತ್ತಾನೆ. ಅಲ್ಲಮನಂಥವರಲ್ಲಿ ಶರೀರ ನಿರಾಕರಣೆಗಿಂತ ಅದರ ವಿಸ್ಮಯ ಸ್ಥಿತಿಗೆ ಹೆಚ್ಚು ಬೆಲೆಯಿದೆ. ಆತನ ಪ್ರಕಾರ ಶರೀರ ಹುಲಿ-ಹುಲ್ಲೆಗಳ ಸಂಗಮ. ಚಲನಶೀಲತೆ ಮತ್ತು ಸ್ಫೋಟಕಗಳ ಅಗರ.

ಅಕ್ಕಮಹಾದೇವಿ ವಚನಗಳಲ್ಲಿ ಪ್ರಜ್ಞೆಯ ಮಟ್ಟದಲ್ಲಿ ಮಾತ್ರ ಈ ಲೋಕದ ನಿರಾಕರಣೆ ಇದೆ. ತನಗರಿಯದಂತೆ ತನ್ನ ಜೀವನ ಪ್ರೀತಿಯನ್ನು ತನ್ನ ವಚನದಲ್ಲಿ ಪ್ರಕಟಿಸಿದ್ದಾಳೆ ಎನಿಸುತ್ತದೆ. ಅನುಭಾವ ಕಾವ್ಯಗಳಲ್ಲಿ ಇಂತ ದ್ವಂದ್ವ ಸಹಜವೂ ಅಹುದು. ಪರಲೋಕದೊಂದಿಗೆ ತನ್ನನ್ನು ಎಷ್ಟೇ ಗುರುತಿಸಿಕೊಂಡವರು (ಮನುಜ ಲೋಕವ ತಿರಸ್ಕರಿಸಿ) ಅವಳ ಜೀವನ ಪ್ರೀತಿ ಇಹಲೋಕದೊಂದಿಗೆ ನಿಕಟತೆಯನ್ನು ಸಾಧಿಸುತ್ತದೆ. ಈ ಲೋಕದ ಗಂಡನನ್ನು ತಿರಸ್ಕರಿಸಿದರೂ ಆ ಲೋಕದ ಗಂಡನನ್ನು ಈ ಲೋಕದ ಪರೀಧಿಯೊಳಗೆ ಹುಡುಕಿ ಹೊರಟವಳು. ಮಲ್ಲಿಕಾರ್ಜುನ ಎಷ್ಟೇ ನಿರಾಕಾರನಾದರೂ ಚಿಕ್ಕ ಚಿಕ್ಕ ಜಡೆಯ ಸುಲಿಪಲ್ಲ ಗೊರವನಾಗಿ ಮೂರ್ತನಾಗುತ್ತಾನೆ. ಲೋಕದ ಗಂಡರ ಸಿಟ್ಟು ಸೆಡವು ಅವನಲ್ಲಿ ಇದೆ. ಅಕ್ಕ ಅತ್ಮ ಸಂಗಾತಕ್ಕಾಗಿ ಮಲ್ಲಿಕಾರ್ಜುನನನ್ನು ಬಯಸಿದರೂ ಅದು ರೂಪಕಗೊಳ್ಳುವುದು ಲೌಕಿಕದ ಅನುಭವದೊಂದಿಗೆ. ‘ಅಪ್ಪಿದರೆ ಅಸ್ಥಿಗಳು ನುಗ್ಗುನುರಿಯಾಗಬೇಕು ಬೆಚ್ಚರೆ ಬೆಸುಗೆಯರಿಯದಂತಿರಬೇಕು’ ಎನ್ನುವ ವಚನದ ಸಾಲುಗಳು ಅನುಭಾವದ ಅಲೌಕಿಕ ಅನುಭವವನ್ನು ಲೌಕಿಕ ಸಂಭೋಗದ ತುರಿಯಾವಸ್ಥೆಯ ರೂಪಕದೊಂದಿಗೆ ಹೇಳುತ್ತಿರುವುದು ಗಮನಾರ್ಹ. ಮಲ್ಲಿಕಾರ್ಜುನನನ್ನು ಶಬ್ದ, ಸ್ಪರ್ಷ, ರೂಪ ರಸಗಳಿಂದ ಹಿಡಿಯಬಲ್ಲೆ ನೆನ್ನುವ ಅಕ್ಕ ಆತನಿಗಾಗಿ ಹುಡುಕಿ ಬಳಲಿ,ಬೆಂಡಾಗಿ ಆತ ಸಿಕ್ಕ ಮೇಲೆ ಅವನ ಕೈಗಳನ್ನು ಕುಂಬ ಕುಚಗಳಮೇಲೆ ಒತ್ತಿಕೊಳ್ಳುವ ಹಂಬಲಗಳನ್ನು, ಮೂಳೆ ಪುಡಿಯಾಗುವಂತೆ ಅಪ್ಪಿಕೊಳ್ಳಬೇಕೆನ್ನುವ ಸಂಗತಿಗಳನ್ನು ಗ್ರಹಿಸುವ ನೆಲೆಗಳಾವುವು? ಪಂಚೇಂದ್ರಿಯಗಳ ಉನ್ಮತ್ತತೆಗೆ ಪರವಶವಾದಾಗ ಮಾತ್ರ ರಾಸಲೀಲೆಗೆ ಅನುವಾಗುವಂಥ ಮಾನಸಿಕ ಸ್ಥಿತಿ ಸಾಧ್ಯವಾಗುತ್ತದೆ.. ಇಂದ್ರಿಯಗಳ ತೀವ್ರತೆ ಮನಸಿನ ತೀವ್ರತೆಯೂ ಹೌದು. ಈ ತೀವ್ರತೆ ಒಂದಾಗುವಿಕೆಯಿಂದ ಸಮಚಿತ್ತಕ್ಕೆ ಬರುತ್ತದೆಇದೇ ಸಂಭೋಗದ ಸಮಾದಿ ಸ್ಥಿತಿ. ಸಂಭೋಗ ಎನ್ನುವುದು ಸಾವಿನ ಪೂರ್ವಸ್ಥಿತಿಯೂ ಆದಂತೆ ಸೃಷ್ಟಿಯ ಪ್ರತೀಕವು ಆಗಿದೆ. ಶಬ್ದದಾಚೆಗಿನ ನಿಶ್ಯಬ್ದದ ಬಗೆಗಿನ ಈ ಎಲ್ಲ ಪರಿಕಲ್ಪನೆಗಳು ಲೌಕಿಕ ಜಗತ್ತಿನವೇ ಎನ್ನುವುದು ಗಮನಾರ್ಹ. ಶರೀರಕ್ಕಿರುವ ಇಂಥ ಸ್ಪೋಟಕತೆಯನ್ನು ಮತ್ತು ಅದರ ಸಂಚಾರಿತನವನ್ನು ಅದರ ಸಮೃದ್ಧ ಲೌಕಿಕತೆಯನ್ನು ಆಧ್ಯಾತ್ಮಿಕ ಲಾಲಿತ್ಯದೊಂದಿಗೆ ಸೃಜನಶೀಲಗೊಳಿಸುವ ಬಾಚಿಕಾಯಕದ ಬಸವಯ್ಯನಂತವರ ಈ ಕ್ರಮ ಚಿಂತನಾರ್ಹವಾದದ್ದು. ಕಾಮದಂಥ ತೀರ ಪರಿಚಿತ ವಿಷಯವನ್ನು ಅಲೌಕಿಕತೆಯ ಗಾಢತೆಯಲ್ಲಿ ಕಾಣಿಸುವ ಬಸವಯ್ಯನ ರೀತಿ ಆಧುನಿಕರನ್ನು ಓದುವಂತೆ ಮಾಡುತ್ತದೆ.

ಯಾಕೆಂದರೆ ಆಧುನಿಕತೆ ಶರೀರದ ಭೌತಿಕ ಪ್ರಜ್ಞೆಗೆ ಬದ್ಧವಾದುದು. ಪ್ರತಿಯೊಂದು ಕ್ರಿಯೆಯು ಶಾರೀರಿಕ ಅನುಭವದ ಚೌಕಟ್ಟಿನೊಳಗೆ ನಡೆಯುವಂಥದ್ದು. ಆಧುನಿಕ ಸಂದರ್ಭದಲ್ಲಿ ದೇಹವು ತಾನು ಅನುಭವಿಸುವ ನೋವಿಗೊಂದು ಮೂಲಭಿತ್ತಿ. ಅದು ನೋವಿನ ಮಾಪನ ಕೂಡ. ಯಾಂತ್ರೀಕೃತವಾದ ಮನುಷ್ಯ ತನ್ನ ಅನಿಯಮಿತ ವ್ಯಕ್ತಿತ್ವದಿಂದಾಗಿ ಕಳೆದುಕೊಂಡಿದ್ದನ್ನು ಈ ಹೊಸ ದೇಹದ ಪರಿಕಲ್ಪನೆಯಿಂದ ಮರಳಿ ಗಳಿಸಲು ಹಾತೊರೆಯುತ್ತಾನೆ. ಹೀಗೆ ಪುನರಾವಿಷ್ಕೃತಗೊಂಡ ದೇಹವು ಪ್ರಕೃತಿ ಮತ್ತು ಸಂಸ್ಕೃತಿ ನಡುವೆ ವಾಹಕವಾಗಿ ಸ್ಫೂರ್ತಿಯ ಮೂಲಸೆಲೆಯಾಗಿ ಅಂತರಂಗ ಬಹಿರಂಗಗಳ ನಡುವಿನ ವ್ಯಾಪಾರಗಳ ಮಾಧ್ಯಮವೂ ಆಗಿ ಕಾರ್ಯನಿರ್ವಹಿಸುತ್ತದೆ. ಹಾಗೆ ತಾನು ಪ್ರತಿನಿಧಿಸುವ ಸತ್ಯದ ಪ್ರತೀಕವೂ ಆಗುತ್ತದೆ. ಉದಾಹರಣೆಗೆ ಒಬ್ಬ ಚಳುವಳಿಗಾರ ಉಪವಾಸ ಸತ್ಯಾಗ್ರಹ ಕುಳಿತಾಗ ಆತನ/ಆಕೆಯ ದೇಹವು ಪ್ರತಿಭಟನೆಯ ನೋವುಗಳನ್ನು ತಾಳಿಕೊಳ್ಳುತ್ತದೆ. ಆ ಮೂಲಕ ತಾನು ಪ್ರತಿನಿಧಿಸುವ ಸತ್ಯವನ್ನು ತನ್ನೊಳಗೆ ಅಂತರ್ಗತಗೊಳಿಸಿಕೊಳ್ಳುತ್ತದೆ. ಅಂಥಾ ಒಂದು ತ್ಯಾಗದಿಂದ ಮಾತ್ರವೇ ಜೀವಚ್ಛೇದದಿಂದ ಛಿದ್ರಗೊಂಡ ದೇಹವು ಮರಳಿ ಏಕತ್ವವನ್ನು ರೂಢಿಸಿಕೊಳ್ಳಲು ಸಾಧ್ಯ. ಇಂಥ ಪುನರ್ನಿರ್ಮಿತದೇಹವು ಬಯಕೆಗಳನ್ನು ನಿಯಂತ್ರಿಸಿಕೊಳ್ಳಬೇಕೆಂದೂ ಬಳಕೆ ಸಂಸ್ಕೃತಿಗಿಂತ ಬೇರೆಯಾಗಿ ಮನುಷ್ಯನ ಪ್ರಾಥಮಿಕ ಅಗತ್ಯಗಳಿಗನುಸಾರವಾಗಿ ಸಂಪನ್ಮೂಲದ ಕ್ರೋಢಿಕರಣ ಮಾಡಬೇಕೆಂದು ಹೇಳುವ ಮೂಲಕ ಪ್ರಾಕೃತಿಕವಾದದ್ದನ್ನು ಕಾಪಾಡುವ ಪ್ರಯತ್ನ ಮಾಡುತ್ತದೆ. ಪುನರ್‌ನಿರ್ಮಿತ ಈ ದೇಹ ದರ್ಶನಗಳ ಸಾಂಸ್ಕೃತಿಕ ಸ್ವರೂಪದಲ್ಲಿ ಕರುಣೆ ಕೌಟುಂಬಿಕತೆ, ಸಮುದಾಯ ಪ್ರಜ್ಞೆಗೆ ಮಹತ್ವದ ಸ್ಥಾನವಿದೆ. ದೇಹದ ಅಸ್ತಿತ್ವದ ಈ ನೆಲೆ ಸತತ ಹೋರಾಟ ಸ್ವರೂಪದ್ದು.

ಇಂದು ದೇಹ ಆತ್ಮಗಳೆರಡು ತೀರ ಖಾಸಗಿಯಾದ ಹಾಗೂ ಛಿದ್ರಗೊಂಡ ನೆಲೆಯ ಎರಡು ಸಂಗತಿಗಳಾಗಿ ಉಳಿದಿವೆ. ಹೀಗಿರುವಾಗ ಅದರ ಪುನರ್‌ನಿರ್ಮಿತ ಪ್ರಜ್ಞೆ ಇಂದು ಅತಿ ಅವಶ್ಯ. ಈ ಪುನರ್‌ನಿರ್ಮಿತ ಸಾಧ್ಯತೆ ಮತ್ತು ಅದರ ವಿಕಸನಶೀಲ ಪ್ರವೃತ್ತಿ ಬಗ್ಗೆ ಬಸವಯ್ಯನಲ್ಲಿ ಸಾಕಷ್ಟು ನಿದರ್ಶನಗಳು ದೊರಕುತ್ತವೆ. ಬಸವಯ್ಯನ ಈ ರೂಪಕ ಪ್ರಜ್ಞೆ ವಿಭಿನ್ನ ದಾರ್ಶನಿಕ ನೆಲೆಗಳನ್ನು ಜಾಗೃತಗೊಳಿಸುತ್ತದೆ. ಜೀವನದ ವಿವಿಧಾನುಭವಗಳು ಪ್ರತಿಮೆಗಳಾಗಿ ಸಂರಚನೆಗೊಳ್ಳುವುದು ಭಾರತೀಯ ಕಾವ್ಯ ಮೀಮಾಂಸೆಯಲ್ಲಿ ಹೊಸದೇನಲ್ಲ. ಇನ್ನೊಂದು ಕಡೆ ತತ್ವಗಳೇ ಸ್ವತಂತ್ರ ಜಗತ್ತಾಗಿ ರೂಪುಪಡೆಯುವ ಸ್ಥಿತಿಯಲ್ಲಿ ಅವು ಒಳಗೆ ಸ್ನೇಹ ಜಗಳಾಟದೊಂದಿಗೆ ಬದುಕುತ್ತಿರುತ್ತವೆ. ಒಂದು ರೂಪಕ ಪರಂಪರೆ ಎಂದರೆ ಅದೊಂದು ದಾರ್ಶನಿಕ ಪರಂಪರೆ ಎಂದೇ ಅರ್ಥ. ಹೀಗೆ ರೂಪಗೊಳ್ಳುವ ಪ್ರತಿಮೆಗಳು ಸ್ವತಂತ್ರ ಮತ್ತು ಶಕ್ತಿದಾಯಕವಾದವುಗಳು. ಅವು ಒಬ್ಬ ಕವಿಯನ್ನು ರೂಪಿಸುವುದಲ್ಲದೆ ಜಾತಿ ಪದ್ಧತಿಯಂಥ ಸಂಪ್ರದಾಯಗಳೂ ಆಗಬಲ್ಲವು. ಸ್ಥೂಲರೂಪದಲ್ಲಿ ಎಲ್ಲಾ ಅನುಭಾವಿಗಳು ಮೇಲುನೋಟಕ್ಕೆ ಒಂದೇಯಾಗಿ ಕಂಡರೂ ದಾರ್ಶನಿಕನ ಸೂಕ್ಷ್ಮಭಾವ ಸ್ಥಿತಿಯ ಮೇಲೆ ಅದು ಭಿನ್ನವಾಗುತ್ತದೆ. ಇದನ್ನೇ ಬೇಕಾದರೆ ಪರಂಪರೆ ಮತ್ತ ಪ್ರಯೋಗ ಎಂದು ಗುರುತಿಸಬಹುದು. ಪರಂಪರೆ ಅಚಲ, ಪ್ರಯೋಗ ಪರಿವರ್ತನಶೀಲವಾದುದು. ಬಾಚಿಕಾಯಕದ ಬಸವಯ್ಯನ ಮಹತ್ವತೆಯಿರುವುದು ಪರಂಪರೆಯ ಸ್ಥುಲ ಮತ್ತು ಸುಕ್ಷ್ಮ ರೂಪಗಳಲ್ಲಿ ಭಿನ್ನವಾಗುಳಿಯುವುದರಲ್ಲಿ. ಪರಂಪರೆಯ ಒಳಗಿದ್ದು ಬಸವಯ್ಯ ತನ್ನ ಕೃತಿ ನಿಮಾಣ ಸ್ವಾತಂತ್ರ‍್ಯವನ್ನು ಬಿಟ್ಟುಕೊಡುವುದಿಲ್ಲ. ಈ ನಿರ್ಮಾಣ ಪ್ರವೃತ್ತಿಯಲ್ಲಿ ಆತ ಹಿಂದೆ ಹೇಳಿದಂತೆ ಸಂಕೋಚ ಮತ್ತು ವಿಕಸನ ಮಾದರಿಗಳನ್ನು ದುಡಿಸಿಕೊಳ್ಳುತ್ತಾನೆ. ಸಂಕೋಚ ಗುಣವನ್ನು ತನುವಿನ ವಿಚಾರದಲ್ಲೂ ವಿಕಾಸ ಪ್ರವೃತ್ತಿಯನ್ನು ತನುಮನದ ತನ್ಮಯತೆಯ ಸಮಾಧಿ ಸ್ಥಿತಿಯಲ್ಲಿ ಬಳಸುತ್ತಾನೆ. ವ್ಯಕ್ತಿ ವ್ಯಕ್ತಿತ್ವ ತತ್ವಗಳಾಗುವುದು ತತ್ವಗಳು ವ್ಯಕ್ತಿ ವ್ಯಕ್ತಿತ್ವವಾಗಿ ಪರಿವರ್ತಿತವಾಗುವುದು ಒಂದು ಸೂತ್ರೀಕೃತ ಜೀವನದ ಸಂಗಾತವನ್ನು ಸೂಚಿಸುತ್ತವೆ. ಅ ಮೂಲಕ ಬಸವಯ್ಯ ಸಮಕಾಲೀನವಾಗುವ ಸಾಧ್ಯತೆಗಳತ್ತ ಚಲಿಸುತ್ತಾನೆ. ಕಾಲಾತೀತ ಕಲ್ಪನೆಯನ್ನು ತಳೆಯುವ ಮೂಲಕ ಬಸವಯ್ಯ ದಾರ್ಶನಿಕತೆ ಮತ್ತು ಅಭಿವ್ಯಕ್ತಿ ಎರಡನ್ನು ಅಭಿನ್ನವಾಗಿಸುತ್ತಾನೆ.

[1]ಸಂಕೀರ್ಣ ವಚನ ಸಂಪುಟ-೪, ಪು. ೩೯೧, ವಚನ ೧೧೫೪;೧೯೯೩

[2]ಸಂಕೀರ್ಣ ವಚನ ಸಂಪುಟ-೪, ಪು. ೩೭೮, ವಚನ ೧೧೨೨;೧೯೯೩

[3]ಸಂಕೀರ್ಣ ವಚನ ಸಂಪುಟ-೪, ಪು. ೭೯, ವಚನ ೨೦೩;೧೯೯೩

[4]ಸಂಕೀರ್ಣ ವಚನ ಸಂಪುಟ-೪, ಪು. ೮೦, ವಚನ ೨೦೩; ೧೯೯೩

[5]ವಿವರಕ್ಕೆ ನೋಡಿ. ಹಾವಿನಹಾಲ ಕಲ್ಲಯ್ಯನ ರಗಳೆ, ಪು. ೩೬೫, ೧೯೯೫, ಹರಿಹರನ ರಗಳೆಗಳು, ಸಂ. ಡಾ. ಎಂ. ಎಮ. ಕಲಬುರ್ಗಿ

[6]ಇಂದಿಗೂ ಕೂಡ ಮೋಡಿಕಾರರು ಮೊಡಿಯಾಟ ಆಡುವ ಮೊದಲು ಪಾಂಚಾಲರಲ್ಲಿಗೆ ಬಂದು ‘ನಾವು ನಿಮ್ಮ ಮಕ್ಕಳು ಕಾಪಾಡಬೇಕೆಂದು’ ಭಿನ್ನವಿಸಿ ತಮ್ಮ ಮೋಡಿ ಆಟದ ಪ್ರದರ್ಶನಕ್ಕೆ ಅನುಮತಿ ಪಡೆಯುವ ವಾಡಿಕೆಯಿದೆ.

[7]ತೈತ್ತರೀಯ ಬ್ರಾಹ್ಮಣ, ೩:೨೧:೯

[8]ಸಂಕೀರ್ಣ ವಚನ ಸಂಪುಟ ೪, ಪುಟ. ೮೩, ವಚನ ೨೧೯, ೧೯೯೩

[9]ಲಜ್ಜಾಗೌರಿ, ಪು. ೧೨೦, ೨೦೦೩, ಡಾ. ವಿಠಲರಾವ್ ಗಾಯಕ್ವಾಡ್

[10]ನಾಗವಂಶ : ಅವಧೇಶ್ವರಿ, ಪು.೩೧, ೧೯೯೭, ಶ್ರೀ ಜೀವಣ್ಣ ಮಸಳಿ

[11]ಸಂಕೀರ್ಣ ವಚನ ಸಂಪುಟ-೪, ಪು. ೯೧, ವಚನ ೨೨೪; ೧೯೯೩

[12]ತಿಂಥಿಣಿ ಮೌನೇಶ್ವರರ ವಚನಗಳು, ಪು. ೯೦, ೧೯೮೫

[13]ನಾಗವಂಶ : ಅವಧೇಶ್ವರಿ, ಪು. ೨೨, ೧೯೯೮

[14]ಲಜ್ಜಾಗೌರಿ, ಪು. ೧೨೦, ೨೦೦೩

[15]ಸಂಕೀರ್ಣ ವಚನ ಸಂಪುಟ-೪, ಪು. ೮೭, ವಚನ ೨೧೯: ೧೯೯೩