೧. ಬಡಿಗ ಮತ್ತು ಬ್ರಹ್ಮಜ್ಞಾನ

ಭೌತವಾದದ ಒಂದು ಕ್ರಾಂತಿ ತತ್ವವೆಂದರೆ ಸಕಲರಿಗೂ ಲೇಸ ಬಯಸುವುದು. ವಾಸ್ತವ ಪ್ರಜ್ಞೆ,ಪ್ರತ್ಯಕ್ಷ ಸ್ವೀಕರಣೆ, ಇಹದ ಬದುಕಿಗೆ ಮಹತ್ವ, ಪ್ರಗತಿಪರತೆ ಮುಂತಾದ ಜೀವಪರ ಕ್ರಿಯೆಗಳು ಅದರ ಪ್ರಣಾಳಿಕೆಗಳು. ಇಂಥ ಗುಣಾತ್ಮಕ ಅಂಶಗಳನ್ನೊಳಗೊಂಡ ವಚನ ಚಳುವಳಿ ಮುಖ್ಯವಾಗಿ ಕಸುಬುದಾರ ವರ್ಗಗಳನ್ನು ಆಕರ್ಷಿಸಿತು. ಜಾತಿಜನ್ಯವಾದ ಸಂಗತಿಗಳನ್ನು ನಿರಾಕರಿಸಿ ವೃತ್ತಿಗೌರವ ಮತ್ತು ಆತ್ಮಾಭಿಮಾನವನ್ನು ಎತ್ತಿ ಹಿಡಿಯಿತು. ಅದುವರೆಗೂ ಅಸ್ಪೃಷ್ಯವಾಗಿದ್ದ ಅವಮಾನಕ್ಕೊಳಗಾದ ಸಂಗತಿಗಳು ಆತ್ಮಗೌರವದ ಸಂಕೇತಗಳಾಗಿ ರೂಪಗೊಂಡವು. ಪಾರಂಪರಿಕವಾಗಿದ್ದ ಪವಿತ್ರ ಮಾದರಿಯ ಕಳೆ ಕಿತ್ತು ಜನ ಸಂಸ್ಕೃತಿಯ ಆಶಯ ವೈವಿಧ್ಯತೆಯನ್ನು ಆಧ್ಯಾತ್ಮದೊಡನೆ ಕಸಿಗೊಳಿಸಿತು. ಕ್ರಿಯೆ ಮತ್ತು ಅರಿವುಅವರ ಸಾಧನೆಗಳ ಮೆಟ್ಟಿಲಾದವು.

ಇಂಥ ಪರಿಸರದಲ್ಲಿ ರೂಪಗೊಂಡ ಬಾಚಿಕಾಯಕದ ಬಸವಯ್ಯ ಪಾರಂಪರಿಕ ಕಸುಬೊಂದರ ಆತ್ಮಾಭಿಮಾನದ ಸಂಕೇತವಾಗಿದ್ದಾನೆ. ಬಸವಯ್ಯನಲ್ಲಿ ವೃತ್ತಿ ಎನ್ನುವುದು ಅದರ ವಾಚಿಕಾರ್ಥಕ್ಕೆ ಸೀಮಿತವಾಗಿಲ್ಲ. ಅದೊಂದು ಆತ್ಮಜ್ಞಾನದ ಸಾಧನವಾಗಿ, ಅರಿವಿನವಿಸ್ತಾರವಾಗಿ, ದಾರ್ಶನಿಕ ವಿಚಾರವಾಗಿ ಬೆಳೆಯುತ್ತದೆ. ಬುದ್ಧಿಭಾವಗಳ ಸಾತತ್ಯವನ್ನು ಅದು ಕಟ್ಟಿಕೊಡುತ್ತದೆ. ಇಂದು ಆಧುನಿಕತೆಯಿಂದಾಗಿ ಬುದ್ಧಿ ಭಾವ ದೇಹ ಆತ್ಮಗಳಲ್ಲಿ ಛಿದ್ರತೆಯುಂಟಾಗಿ ಮನುಷ್ಯನ ಅಸ್ತಿತ್ವವೇ ಇಲ್ಲವಾಗುತ್ತಿದೆ. ನಮ್ಮಲ್ಲಿನ ಬುದ್ಧಿವಂತರೆಲ್ಲ ಇಂದು ಮೆಡಿಸಿನ್, ಇಂಜಿನಿಯರಿಂಗ್, ಕಂಪ್ಯೂಟರ್‌ಸೈನ್ಸ್‌ಗಳಂತಹ ಆಧುನಿಕ ವೃತ್ತಿಕ್ಷೇತ್ರಗಳತ್ತ ಮುಗಿಬೀಳುತ್ತಿದ್ದಾರೆ. ಇಂಥ ವರ್ಗಕ್ಕೆ ತನ್ನ ಮೂಲವೃತ್ತಿ ಮತ್ತು ಭಾಷೆಯ ಬಳಕೆಯ ಯಾವ ತುರ್ತುಗಳೂ ಕಾಣಿಸುವುದಿಲ್ಲ. ಇಂಗ್ಲೀಶ್ ಕಲಿಕೆಯೇ ಅವರಿಗೆ ಲಾಭದಾಯಕವಾಗಿ ಕಾಣಿಸುತ್ತದೆ. ಕನ್ನಡದಂತಹ ಸಂವೇದನೆಗಳು ಅವರಿಗೆ ಯಾವ ರೀತಿಯಿಂದಲೂ ಜೀವನೋಪಾಯದ ಮತ್ತು ಗಳಿಕೆಯ ಮಾಧ್ಯಮಗಳಾಗಿ ಕಾಣಲಾರವು.

ಬಾಚಿಕಾಯಕದ ಬಸವಯ್ಯನಂಥ ವಚನಕಾರರು ಸಮಕಾಲೀನ ಅಥವಾ ಆಪ್ತರೆನಿಸುವ ಬಗೆಗಳೇ ಇದಕ್ಕಿಂಥ ಭಿನ್ನವಾದಂಥವು. ವೃತ್ತಿಗೌರವದೊಟ್ಟಿಗೆ ಆತ್ಮಗೌರವವನ್ನು ಭಾಷೆಯೊಂದಿಗೆ ಸಂಸ್ಕೃತಿಗಳನ್ನು ಜಾಗತಿಕ ಮಟ್ಟಕ್ಕೆ ಬೆಳೆಸಿದರೂ ಬಸವಯ್ಯನ ಪರಿಸರವೂ ಏಕೀಕೃತ ಮತ್ತು ಪ್ರಭುತ್ವ ನಿರ್ಮಿತ ಪ್ರತಿಷ್ಠಿತ ಸಾಮಾಜಿಕ ಸಂದರ್ಭವೇ ಆಗಿತ್ತು. ಸ್ಥಳೀಯ ಅಸಮಾನತೆಯ ನೆಲೆಗಳನ್ನು ಪ್ರತಿಭಟಿಸುವುದರೊಂದಿಗೆ ಸಮಾನತೆಯ ನೆಲೆಯ ಸಾಂಸ್ಕೃತಿಕ ಅಸ್ತಿತ್ವವನ್ನು ಹುಟ್ಟುಹಾಕುವುದಾಗಿತ್ತು. ಹಾಗೆ ತನ್ನೆಲ್ಲ ಸಾಂಸ್ಕೃತಿಕ ಐಡೆಂಟಿಟಿಗಳೊಂದಿಗೆ ಸಾಮೂಹಿಕಾಂದೋಲನಕ್ಕೆ ನುಗ್ಗಿ ಸಾರ್ವತ್ರಿಕ ಸಮಾನತೆಯನ್ನು ಗಳಿಸುವುದಾಗಿತ್ತು. ಈ ತಾತ್ವಿಕತೆಯನ್ನು ಬಸವಯ್ಯನ ‘ಮನೆ’ ಎನ್ನುವ ಘನವನ್ನು ಮಹಾಘನದೊಂದಿಗೆ ವಿಸ್ತರಿಸುವ ನೆಲೆಗಳಲ್ಲಿ ಗುರುತಿಸಬಹುದು. ಬಸವಯ್ಯನ ಒಟ್ಟು ತಾತ್ವಿಕತೆಯೇ ವಿಶ್ವವಾಚಿಕೆಯತ್ತ ಚಲಿಸುವಂಥದ್ದು ಮತ್ತು ಪ್ರತ್ಯೇಕ ಪ್ರವೃತ್ತಿಯನ್ನು ಉಳಿಸಿಕೊಳ್ಳುವ ಹಂಬಲದ್ದು.ಇಂತಹ ಸ್ವಂತಿಕೆಯ ಹಂಬಲವುಳ್ಳ ಸಮುದಾಯಗಳ ಹೋರಾಟದಲ್ಲಿ ಸಂಪ್ರದಾಯವಾದಿಗಳು ಪ್ರವೇಶಿಸಿದಾಗ ಆ ಹೋರಾಟ ಹೆಚ್ಚುಕಾಲ ತನ್ನ ಸತ್ವವನ್ನು ಉಳಿಸಿಕೊಳ್ಳಲಾರದು ವಚನ ಚಳುವಳಿಯಲ್ಲಿ ಇದಕ್ಕೆ ಉತ್ತರ ಸಿಗುತ್ತದೆ.

ಬಸವಯ್ಯನ ವಚನದಲ್ಲಿ ವಿಸ್ತೃತಗೊಂಡಿರುವ ಪ್ರಮುಖ ಆಶಯ ಸೃಷ್ಟಿ ಮತ್ತು ಅದರ ವಿಕಾಸಶೀಲ ಪರಿಕಲ್ಪನೆ. ಭಾರತೀಯ ದಾರ್ಶನಿಕ ಕೃತಿಗಳಲ್ಲಿ ಸೃಷ್ಟಿಕರ್ತೃ ಮಯನ ವಿವರಗಳು ಸಿಗುತ್ತವೆ. ಅಲ್ಲೆಲ್ಲ ಆತ ಮನೆ, ಆಲಯ, ವಿಮಾನ, ಇಂಥ ವಸ್ತುಸಂಗತಿಗಳ ನಿರ್ಮಾತೃವಾಗಿ ಕಾಣುತ್ತಾನೆ. ಮಯ ನಿರ್ಮಾತೃ ಪರಂಪರೆಯ ಅಧಿದೇವತೆ. ಅಂದರೆ ಮಯನಲ್ಲಿ ಬಡಿಗ ನಿಹಿತವಾಗಿದ್ದಾನೆ. ಕಟ್ಟುವಿಕೆ ಮತ್ತು ಅದರ ರಚನಾತ್ಮಕವಾದ ವಿಕಸನಶೀಲ ಪ್ರವೃತ್ತಿಯನ್ನು ಈ ಮಯನಲ್ಲಿ ಕಾಣುತ್ತೇವೆ.

ಬಡಿಗೆ ಕಮ್ಮಾರರು ಪೊಡವಿಗಧಿಕರ್ತರು
ಬಡಿದು ಬತ್ತೀಸ ಆಯುಧವ ಮಾಡಿ
ಸರ್ವರಿಗೆ ಕೊಡುವರಯ್ಯಾ ಬಸವಣ್ಣ[1]

ತಿಂಥಿಣಿ ಮೌನೇಶ್ವರರ ಈ ವಚನ ವೃತ್ತಿ ಪ್ರಧಾನವಾದ ಉದ್ಯೋಗಗಳ ಲೋಕ ಪ್ರಾಧಾನ್ಯತೆಯನ್ನು ಅವರ ಸೃಜನಶೀಲ ಮನೋಭಾವವನ್ನು ಗ್ರಹಿಕೆಗೆ ತರುತ್ತದೆ. ವಿಶ್ವಕರ್ಮ ಪರಂಪರೆಯಲ್ಲಿ ಆಗಿಹೋದ ಮಹಾ ಬಂಡಾಯಗಾರ ಈ ಮೌನೇಶ್ವರ. ವೈದಿಕ ಪ್ರಣೀತ ಕರ್ಮಸಿದ್ದಾಂತಗಳನ್ನುವರ್ಣಾಶ್ರಮಗಳನ್ನು ಮತ್ತು ಇಂಥವುಗಳ ಗುಂಗಿನಲ್ಲಿ ಹಾಳಾಗುತ್ತಿದ್ದ, ಜಡಗೊಳ್ಳುತ್ತಿದ್ದ ವಿಶ್ವಕರ್ಮ ಧರ್ಮವನ್ನು ಅವರ ಅನುಯಾಯಿಗಳನ್ನು ಖಂಡಿಸಿ ಎಚ್ಚರಿಸಿದನು. ಸೃಷ್ಟಿ-ಸ್ಥಿತಿ-ಲಯ ಪರಿಕಲ್ಪನೆಯಲ್ಲಿ ‘ಹರನೇ ಕಮ್ಮಾರ ವಿಷ್ಣುವೇ ಬಡಿಗ ಬಸವಣ್ಣನೇ ಎತ್ತು’ ಎನ್ನುವ ಮೌನಯ್ಯ ಶ್ರಮ ಬದುಕಿನ ಕ್ರಿಯಾ ಪ್ರಪಂಚವನ್ನು ಉದಾತ್ತೀಕರಿಸದೇ ವಾಸ್ತವ ಪ್ರಜ್ಞೆಯಲ್ಲಿಯೇ ಪರಿಭಾವಿಸಿದು ಎದ್ದು ಕಾಣುತ್ತದೆ.

ಜ್ಞಾನವೆನ್ನುವುದು ಮನುಷ್ಯನಿಗೆ ಧ್ಯಾನಮೂಲವಾಗಿ ಬರಲಿಲ್ಲ ಕ್ರಿಯಾಮೂಲವಾಗಿ ಬಂದದ್ದು. ಇಂಥ ಕ್ರಿಯಾಮೂಲ ಜ್ಞಾನದ ‘ಬಡಿಗಿ’ ಯನ್ನು ಋಗ್ವೇದವು ‘ಜ್ಞಾನಿ’ ಎಂದು ಕರೆಯುತ್ತದೆ. ಉಪನಿಷತ್ತುಗಳ ಕಾಲಕ್ಕೆ ಈ ಕ್ರಿಯಾಮೂಲ ಜ್ಞಾನ ಬಿದ್ದುಹೋಗಿ ಬ್ರಹ್ಮಜ್ಞಾನಕ್ಕೆ ಮಹತ್ವ ಬರುತ್ತದೆ. ಅಂದರೆ ದೈಹಿಕ ಶ್ರಮ ಮತ್ತು ಅದರ ಅರಿವಿನ ಆಕರಗಳು ತುಚ್ಚವಾಗಿ, ಬ್ರಹ್ಮಜ್ಞಾನವು ಶ್ರೇಷ್ಟವಾಗಿ ಪರಿಣಮಿಸಿತು. ಇದನ್ನು ಬೇಕಾದರೆ ಜ್ಞಾನದ ಖಾಸಗೀಕರಣವೆಂದೂ ಗುರುತಿಸಬಹುದು. ಇಲ್ಲಿ ಕ್ರಿಯೆಗಿಂತ ಧ್ಯಾನ ಅದರಲ್ಲೂ ಬೌದ್ಧಿಕ ಕಸರತ್ತು ಮುಖ್ಯವಾಯಿತು. ದೇಹ ಮತ್ತು ಮನಸ್ಸುಗಳಲ್ಲಿನ ಛಿದ್ರತೆಯೇ ಸಿದ್ಧಾಂತಗಳಾಗಿ ರೂಪುಪಡೆದವು. ಸಾಂಖ್ಯರ ಒಂದು ವಿವರದಿಂದ ಈ ಪರಿಕಲ್ಪನೆಯನ್ನು ಇನ್ನಷ್ಟು ಸ್ಪಷ್ಟಪಡಿಸಿಕೊಳ್ಳಬಹುದೆನಿಸುತ್ತದೆ. “ಪ್ರಕೃತಿ ನೇಮದ ಪ್ರಕಾರ ಇಪ್ಪತ್ನಾಲ್ಕು ತಾಸಿನ ತಪಸ್ಸಿಗಿಂತ ಒಂದು ತಾಸಿನ ಕಾಯಕದಿಂದ ಏನನ್ನಾದರೂ ಸಾಧಿಸಬಹುದು. ಆದರೆ ಯೋಗಿ ಮಾಡುವ ಇಪತ್ನಾಲ್ಕು ತಾಸಿನ ಧ್ಯಾನದಿಂದ ಏನು ಸಾಧ್ಯವಿಲ್ಲ. ಆತ ಮಾಡುವುದು ಬರೀ ಶೂನ್ಯ ಸಂಪಾದನೆ…..” ಪ್ರೊ. ಹೆಕ್ಸಲಿಯವರು ಹೇಳುವಂತೆ ‘ಭಾರತೀಯ ಯೋಗಿ ತನ್ನ ಮಾಂಸದ ಮುದ್ದೆಯಾದ ಶರೀರವನ್ನು ಶಾಸ್ತ್ರೋಕ್ತವಾಗಿ ನಿಷ್ಕ್ರಿಯೆಗೆ ಇಳಿಸುವಷ್ಟು ಮತ್ತಾರೂ ಪ್ರಯತ್ನ ಮಾಡಿಲ್ಲ. ಇದರಿಂದಾಗಿ ಅವನ ಮೆದುಳಿಗೆ ಅತೀಸ್ವಲ್ಪ ಪ್ರಮಾಣದಲ್ಲಿ ಶುದ್ಧರಕ್ತ ಸಿಗುವುದರಿಂದ ಆ ಯೋಗಿಯು ಕೊನೆಗೆ ಮಂಕುತನದ ಸ್ಥಿತಿಗೆ ಹೋಗುತ್ತಾನೆ. ಯೋಗದಿಂದ ನಿಯಂತ್ರಿಸುವ ಶ್ವಾಸೋಚ್ಛಾಸದಿಂದಾಗಿ ನರಮಂಡಲಗಳ ಮೇಲೆ ಪರಿಣಾಮವಾಗುತ್ತದೆ. ಸಮಾಧಿ ಸ್ಥಿತಿಯಲ್ಲಿರುವ ಸಾಧಕನಿಗೆ ಪ್ರಾಣವಾಯು ಸೇವನೆ ಅತಿಕಡಿಮೆಯಾಗಿ ಶರೀರದಲ್ಲಿ ಅಂಗಾರಾಮ್ಲ ವಾಯು ಹೆಚ್ಚಾಗಿ ಮೆದುಳಿನ ಕ್ರಿಯೆ ಕುಂಠಿತವಾಗುತ್ತದೆ. ತತ್ಪರಿಣಾಮವಾಗಿ ಈ ಸ್ಥಿತಿಯಲ್ಲಿ ಪಂಚಜ್ಞಾನೇಂದ್ರಿಯಗಳು, ಪಂಚಕರ್ಮೆಂದ್ರಿಯಗಳು ನಿಷ್ಕೃಯೆಯಾಗಿ ಸಾಧಕನ ಉದ್ದೇಶಿತ ಅವಿರ್ಭಾವ ಮಾತ್ರ ಉಳಿಯುವುದು. ಇದಕ್ಕೆ ಈ ಜನಗಳು ಪರಮಾನಂದ , ಬ್ರಹ್ಮಾನಂದ, ಕೇವಲಾನಂದ, ಸಾಕ್ಷಾತ್ಕಾರ ಎನ್ನುವರು’.[2]

ಮೇಲಿನ ಒಟ್ಟು ವಿವರ ಕ್ರಿಯಾರಹಿತ ಬದುಕಿನ ನಿಸ್ತೇಜತೆಯನ್ನು ಅರ್ಥಹೀನತೆಯನ್ನು ಒತ್ತಿಹೇಳುತ್ತದೆ. ದೇಹದಂಡನೆಯ ಕ್ರಮಗಳನ್ನು ನಿರಾಕರಿಸಿ ಅದರ ಸೃಷ್ಟ್ಯಾತ್ಮಕತೆಯನ್ನು ಸ್ವೀಕರಿಸುವತ್ತ ಆಸಕ್ತಿವಹಿಸುತ್ತವೆ. ಹಾವಿನಹಾಳ ಕಲ್ಲಯ್ಯನ ವಚನವೊಂದು ಈ ಸಂಬಂಧವನ್ನು ತಾರ್ಕಿಕವಾಗಿ ಮಂಡಿಸುತ್ತದೆ.

ಕ್ರಿಯೆಯಿಲ್ಲದ ಜ್ಞಾನ ಪ್ರಯೋಜನವಿಲ್ಲಯ್ಯ
ಅದು ಹೇಗೆಂದೊಡೆ
ದೇಹವಿಲ್ಲದ ಪ್ರಾಣಕ್ಕೆ ಆಶ್ರಯವುಂಟೇ ಅಯ್ಯಾ
ಪ್ರಾಣವಿಲ್ಲದ ಕಾಯಕ್ಕೆ ಚೈತನ್ಯವುಂಟೇ ಅಯ್ಯಾ
ಅದು ಕ್ರಿಯೆಯಿಲ್ಲದ ಜ್ಞಾನಕ್ಕೆ ಆಶ್ರಯವಿಲ್ಲ
ಜ್ಞಾನವಿಲ್ಲದ ಕ್ರಿಯೆಗೆ ಆಶ್ರಯವಿಲ್ಲ[3]

ಕ್ರಿಯೆ ಮತ್ತು ಅರಿವಿನ ಈ ಸಾತತ್ಯ ಕಸುಬುದಾರ ಬದುಕಿನ ಮೂಲಗುಣ. ಇದು ದೇಹಸತ್ಯ ಪ್ರಕೃತಿ ನಿತ್ಯ ಎನ್ನುವ ಪ್ರಜ್ಞೆಯಿಂದ ಬಂದಿದ್ದು. ಕಾಯಕವೇ ಕೈಲಾಸವಾಗುವ ಪರಿ ಇದು.

ಬಾಚಿಕಾಯಕದ ಬಸವಯ್ಯನ ವಚನಗಳನ್ನು ಓದುವಾಗ, ಬಾಚಿ,ಉಳಿ,ಕೊಡತಿ,ಕಂಬ,ಬೋದಿಗೆ ಮುಂತಾದ ಪರಿಕರಗಳು ನಮ್ಮ ಅನುಭವಕ್ಕೆ ಸೇರಿಕೊಳ್ಳುತ್ತವೆ. ಉಳಿ-ಬಾಚಿ ಬಸವಯ್ಯನಲ್ಲಿ ಒಳ-ಹೊರಗಣ ಶುದ್ಧೀಕರಣಕ್ಕೆ ಬಳಕೆಯಾಗುತ್ತದೆ. ‘ಹೊರಗೆ ಬಾಚಿಯಲಿ ಸವೆದ ಒಳಗೆ ಉಳಿಯಲಿ ಸವೆದೆ’ ಎನ್ನುವಲ್ಲಿ ಅವುಗಳ ಸಾಹಚರ್ಯವನರಿತ ಬಳಕೆ ಕಾಣುತ್ತದೆ. ಬಾಚಿಯ ಸ್ವಭಾವ ದಪ್ಪವಾದ ಹೊರಗಿನ ತಿಗುಡನ್ನು ಕೆತ್ತುವುದು. ಉಳಿಯ ಸ್ವಭಾವದ ಸ್ಥೂಲತೆಯನ್ನು ಸೂಕ್ಷ್ಮವಾಗಿ ಕತ್ತರಿಸಿ ಮೂರ್ತಿಗೊಳಿಸುವುದು. ಇವೆರಡರ ಸದ್ಬಳಕೆಯ ಕುಸುರಿ ಕೆಲಸವೇ ಅರಿವು. ಹೀಗೆ ಲೌಕಿಕಾರ್ಥಗಳನ್ನು ಮೀರಿದ ಅರ್ಥವಿಸ್ತಾರವನ್ನು ಇವು ಪಡೆದುಕೊಳ್ಳುತ್ತವೆ. ಇನ್ನೊಂದೆಡೆ ಕುಲದ ದೃಷ್ಟಿಯಿಂದ ಈ ಉಳಿ, ಬಾಚಿ, ಕೊಡತಿಗಳು ಕಾಳಿಯ ಪ್ರತೀಕ. ಕಾಳಿ ವಿಶ್ವಕರ್ಮರ ಕುಲದೇವತೆ. ಕರ್ತೃತ್ವವೇ ಅವಳ ಗುಣ. ಈ ಗುಣವೇ ಉದ್ಯೋಗಸ್ಥ ಪಾಂಚಾಳರ ಮೂಲಜೀವಾಳ. ಉಳಿ-ಬಾಚಿಯ ಗುಣ ಹರಿತತೆ. ಇದರ ಸನ್ನೆಯನರಿತು ಕೆತ್ತದಿದ್ದರೆ ಅದು ಅನಾಹುತಕ್ಕೆ ಮೂಲವಾಗುತ್ತದೆ. ಮನೆ ಮತ್ತು ಅದರ ವಿವಿಧ ಹಂತಗಳು ಒಂದು ಬಗೆಯಾದರೆ ಅದರ ಅಳತೆಗಳು ಇನ್ನೊಂದು ಬಗೆಯ ಸಾಹಿತ್ಯಿಕ ಮೀಮಾಂಸೆಯತ್ತ ಗಮನಹರಿಸುತ್ತವೆ. ಅಲ್ಲದೆ ಕೊರೆಯುವ, ಕೆತ್ತುವ, ಏಣುಮುರಿಯುವ, ತೂತು ಕಡಿಯುವ, ಕಳಾಸ ಮಾಡುವ ಈ ವೃತ್ತಿ ಸಂಬಂಧಿ ಕ್ರಿಯೆಗಳು ಕೃತಿ ಪ್ರಧಾನ ವೃತ್ತಿಯ ಪರಿಕಲ್ಪನೆಯೊಂದನ್ನು ಆಕೃತಿಗೊಳಿಸುತ್ತವೆ.

೨. ಪರಿಕರ ಮತ್ತು ಪರಿಮಾಣ

ವಚನಗಳಲ್ಲಿ ನಿರ್ವಚಿತಗೊಂಡಿರುವ ವೃತ್ತಿ ಸಹಜ ಕ್ರಿಯೆಗಳಲ್ಲಿ ಅಳತೆ, ಮಾಪನಗಳ ವಿವರವು ಒಂದು ಸಾಸ್ಕೃತಿಕ ಮೀಮಾಂಸೆಯನ್ನು ನೆಲೆಗೊಳಿಸುತ್ತದೆ. ಇಂದು ಪ್ರತಿಯೊಂದನ್ನು ಕಾಲದ ಪರಿಕಲ್ಪನೆಯಲ್ಲಿಯೇ ಗ್ರಹಿಸಲಾಗುತ್ತದೆ. ಈ ಕಾಲ ಅಥವಾ ಪರಿಮಾಣ ಎನ್ನುವುದೇ ಕೃತಕವಾದಂಥದ್ದು. ಇದೊಂದು ಸಿದ್ಧಾಂತವಲ್ಲ ಮನೋಧರ್ಮ. ಯುಗಪಲ್ಲಟದ ಪ್ರಕ್ರಿಯೆಯನ್ನೇ ಈ ಕಾಲಗರ್ಭದಲ್ಲಿ ನಾಟಕೀಕೃತಗೊಳಿಸಲಾಗಿದೆ. ಇದು ಪಾಶ್ಚಾತ್ಯರಿಂದ ಬಂದ ಬಳುವಳಿ.

ಭಾರತೀಯ ಪರಂಪರೆಯಲ್ಲಿ ಕಾಲದ ಹರವನ್ನು ಅಳೆಯಲು ಬಳಸುವ ಮಾನಗಳೇ ಬೇರೆ. ಈಗಿನ ಆಧುನಿಕ ಸಂದರ್ಭದ ಕ್ರೈಸ್ತ ಕ್ಯಾಲೆಂಡರಿಗಿಂತ ಭಿನ್ನವಾದ ಮಾನಕ ಪದ್ಧತಿ ಪರಂಪರೆಯಲ್ಲಿ ಬಳಕೆಯಾಗುತ್ತ ಬಂದಿದೆ. ಪ್ರತಿಯೊಂದನ್ನು ಕಾಲ ಮತ್ತು ಪರಿಮಾಣದ ಚೌಕಟ್ಟಿನಲ್ಲಿ ನೋಡುವ ಕೇಂದ್ರಿಕೃತ ಯೋಚನೆ ಕಾಲಾತೀತವಾಗಿ ಬದುಕುವ ಎಷ್ಟೋ ಸಂವೇದನೆಗಳನ್ನು ದೂರ ಉಳಿಸಿ ಬಿಡುತ್ತದೆ. ಯಾಕೆಂದರೆ ಈ ಚಾರಿತ್ರಿಕ ಮಾಪನ ಪದ್ಧತಿ ಬರವಣಿಗೆಯನ್ನು ಅಧಿಕೃತವಾಗಿ ಒಪ್ಪಿಕೊಳ್ಳುತ್ತದೆ. ಬರವಣಿಗೆಯಿಂದ ಹೊರಗಿದ್ದದ್ದು ಅಧಿಕೃತವೆನಿಸುವುದಿಲ್ಲ. ಮುದ್ರಿತ ಮಾಪನಗಳಿಗಿಂತ ಮನಸಿನ ಮಾಪನಗಳಿಗೆ ಹಿಂದಿನ ಕಾಲದಲ್ಲಿ ಮಹತ್ವವಿದ್ದ ಬಗ್ಗೆ ತಿಳಿದುಬರುತ್ತದೆ.

ತೀರದೂರ ಯಾಕೆ? ನನಗೆ ತಿಳಿದ ಹಾಗೆ ನನ್ನ ತಂದೆ ಎಷ್ಟೋ ವರ್ಷಗಳಿಂದ ಬಡಿಗಿತನ ಕೆಲಸ ಮಾಡಿಕೊಂಡು ಬಂದರೂ ಒಂದು ದಿನವೂ ಅವರು ಟೇಪ (ಅಳತೆಪಟ್ಟಿ) ಹಿಡಿದು ಅಳೆದು ಕೆಲಸ ಮಾಡಿದ ಉದಾಹರಣೆಗಳಿಲ್ಲ. ಏನಿದ್ದರೂ ಕಣ್ಣಂಚಿನಲ್ಲಿಯೇ ವಸ್ತುವಿನ ಆಯ-ವ್ಯಯಗಳನ್ನು ತೂಗಿ ಹೇಳುತ್ತಿದ್ದರು. ಗೇಣು, ಬೊಟ್ಟು, ಚೋಟು, ಮೊಳ, ಮಾರು ಇವರ ಪ್ರಮಾಣಗಳಾಗಿದ್ದವು. ಇಲ್ಲಿ ಬಹಳ ಮುಖ್ಯವೆನಿಸುವುದು ಬಾಹ್ಯಪರಿಕರಗಳನ್ನು ಅಳತೆಗೆ ಅವಲಂಬಿಸದೇ ದೇಹದ ಅವಯವಗಳನ್ನೇ ಸಕ್ರಿಯವಾಗಿ ಬಳಸಿಕೊಳ್ಳುವುದು. ಅಂತರಂಗದಿಂದಲೇ ಅಳತೆಗಳನ್ನು ನಿರೂಪಿಸುವುದು. ದೇಹ ಮತ್ತು ಮನಸ್ಸಿನ ಕ್ರಿಯಾಶೀಲತೆಯನ್ನು ಪ್ರಾಯೋಗಿಕವಾಗಿಸುವ ಮೂಲಕ ನನ್ನ ತಂದೆ ಪಡೆಯುತ್ತಿದ್ದ ಫಲ ಫರಂಗಿ ಶಿಕ್ಷಣದಿಂದ ಪ್ರೇರಿತನಾದ ನನಗೆ ಆಶ್ಚರ್ಯವಾಗುತ್ತಿತ್ತು.

ಬಸವಯ್ಯ ಮತ್ತು ಅವನಂತಹ ವೃತ್ತಿನಿರತ ವಚನಕಾರರಲ್ಲಿ ಇಂಥ ಮಾಪನ ಪದ್ಧತಿಗಳ ವಿವರಗಳನ್ನು ಕಾಣಬಹುದು. ಕಾಮಾಟದ ಭೀಮಣ್ಣನ ಒಂದು ವಚನದಲ್ಲಿನ ಅಳತೆಯ ವಿವರಗಳನ್ನು ನೋಡಬಹುದು.

ಮೂರುಕೋಲ ಬ್ರಹ್ಮಂಗೆ ಅಳೆದು ಕೊಟ್ಟೆ
ನಾಲ್ಕುಕೋಲ ವಿಷ್ಣುವಿಗೆ ಅಳೆದು ಕೊಟ್ಟೆ
ಐದುಕೋಲ ರುದ್ರಂಗೆ ಅಳೆದು ಕೊಟ್ಟೆ
ಆರುಕೋಲ ಈಶ್ವರಂಗೆ ಅಳೆದು ಕೊಟ್ಟೆ
ಒಂದುಕೋಲ ಸದಾಶಿವಂಗೆ ಅಳೆದು ಕೊಟ್ಟೆ
ಇಂತಿ ಐವರು ಕೋಲಿನ ಒಳಹೊರಗಿನಲ್ಲಿ
ಅಳಲುತ್ತಬಳಲುತ್ತಒಳಗಾದರು
ಇಂತಿ ಒಳಹೊರಗ ಶೋಧಿಸಿಕೊಂಡು
ಅಳಿವುಳಿವಿನ ವಿವರವನಱೆಯಬೇಕು
ಧಾರೇಶ್ವರ ಲಿಂಗವನಱೆವುದಕ್ಕೆ[4]

ಶಿಲ್ಪಶಾಸ್ತ್ರದಲ್ಲಿ ಶಿಲ್ಪಿಯ ಅಳತೆಗೋಲನ್ನು “ಕೋಲು” ಎನ್ನುತ್ತಾರೆ. ಹಳ್ಳಿಗಳಲ್ಲಿ ‘ಕಟಗಿ’ ಎನ್ನುತ್ತಾರೆ. ಟೈಲರುಗಳು ಬಟ್ಟೆಯನ್ನು ‘ಕಟಗಿ’ ಮಾಪನದಲ್ಲಿಯೇ ಅಳೆಯುತ್ತಾರೆ. ಈ ಅಳತೆಕೋಲು ಕ್ರಿಸ್ತ ಶಕೆಯ ಆರಂಭದ ಮೂರುಸಾವಿರ ವರ್ಷ ಮೊದಲೇ ಭಾರತೀಯ ಶಿಲ್ಪಿ ರೂಪಿಸಿಕೊಂಡ ಬಗ್ಗೆ ಶಿಲ್ಪಿಶಾಸ್ತ್ರ ಗ್ರಂಥಗಳಲ್ಲಿ ಉಲ್ಲೇಖಗಳಿವೆ. ‘ದಂಡ’ವನ್ನು ರೂಢಿಯಲ್ಲಿ ‘ಕೋಲು’ ಎಂದು ಕರೆಯುತ್ತಾರೆ. ‘ದಂಡ’ವೆಂದರೆ ನಾಲ್ಕುಹಸ್ತಗಳ ಒಟ್ಟು ಮೊತ್ತ. ಅಂದರೆ ೨೪ ಅಂಗುಳವೆಂದಿಟ್ಟುಕೊಳ್ಳಬಹುದು. ಕೋಲಿನ ಉದ್ದವು ೨೪ ಅಂಗುಳವಿರುತ್ತದೆ. ಇದು ನಾಲ್ಕು ಮುಖಗಳುಳ್ಳ ಚೌಕದಲ್ಲಿರುತ್ತದೆ. ಇದರಲ್ಲಿ ನಾಲ್ಕು ‘ಹಸ್ತ’ಗಳನ್ನು (ನಾಲ್ಕುಭಾಗ) ಗುರುತಿಸುತ್ತಾರೆ. ಇದರಲ್ಲಿ ಅಂಗುಳ, ಯವಗಳಿಂದ ಗುರುತು ಹಾಕಿರುತ್ತಾರೆ. ಅಂಗುಳವೆಂದರೆ ಬಲಹಸ್ತದ ಮಧ್ಯಮ ಪರ್ವದ (ಗೆಣ್ಣಿನ) ಉದ್ದ ಅಥವಾ ಅಗಲ ಎಂದರ್ಥ. ಅಂದರೆ ಇಂದಿನ ಆಂಗ್ಲಮಾಪನದ ಒಂದು ಇಂಚು, ಕಾಲು ಸೆಂಟಿ ಮೀಟರ್. ಇಂಚಿಗೆ ತೀರ ಹತ್ತಿರವಾಗಿರುತ್ತದೆ. ಇಂಗ್ಲೀಷಿನ ಅಂಗುಲದ ೧,೨,೩,೪,೫,೬ ಇತ್ಯಾದಿಗಳು. ನಾಜುಕಾದ ಕೆಲಸಕ್ಕೆ ಸೂಕ್ತವಾದುದಲ್ಲ ಎನ್ನುವ ಕಾರಣಕ್ಕಾಗಿ ಅಂತ್ಯವೇ ಕಾಣದ ೧,೩೩೩೩ನ್ನು ಶಿಲ್ಪಿಗಳು ಬಳಸುವುದು ಸಾಮಾನ್ಯ. ಇಂಥ ಅಂಗುಳವನ್ನು ಎರಡು ಭಾಗ ಮಾಡಿದರೆ ಒಂದು ಯವ (೧/೨) ಅಥವಾ ‘ಯವ’ವನ್ನು ಒಂದು ಬಾರ್ಲಿ ಕಾಳಿಗೂ ಹೋಲಿಸಬಹುದು. ಶ್ರೇಷ್ಠತೆಯ ಹಂಗಿಗಾಗಿ ಬಾರ್ಲಿಕಾಳಿಗೆ ಬದಲಾಗಿ ಶಾಲಿ (ಭತ್ತ)ಯನ್ನು ‘ಯವ’ ದ ಪ್ರಮಾಣಕ್ಕೆ ತಂದುಕೊಳ್ಳುತ್ತಾರೆ. ಶಾಲಿಗಳಲ್ಲು ‘ರಕ್ತಶಾಲಿ’ (ಕೆಂಪು ಭತ್ತ) ಶ್ರೇಷ್ಠವೆಂದು ಪರಿಗಣಿತವಾಗಿದೆ. ಇನ್ನುಳಿದಂತೆ ‘ಶ್ವೇತಶಾಲಿ’ (ಬಿಳಿಭತ್ತ) ‘ಮಹಾಶಾಲೀ’ (ದಪ್ಪ ಭತ್ತ) ‘ಹೇಮಶಾಲಿ’ (ಬಂಗಾರ ವರ್ಣದ ಸಣ್ಣ ಭತ್ತ) ‘ಸೌಗಂಧಿ ಶಾಲಿ’ (ಸುಗಂಧ ಭತ್ತ) ಈ ನಾಲ್ಕು ಸಾಧಾರಣ ಎಂದು ಪರಿಗಣಿತವಾಗಿದವೆ. ಇದನ್ನುಸ್ವಲ್ಪ ಸರಳೀಕರಿಸುವುದಾದರೆ ರಕ್ತಶಾಲಿಯನ್ನು ಪರಮಾನ್ನಕ್ಕೂ ಇನ್ನುಳಿದವುಗಳನ್ನು ಶೂದ್ರಾನ್ನಕ್ಕೂ ಹೋಲಿಸಿ ಅಳತೆಗಳಲ್ಲಿನ ಅಸಮಾನ ನೆಲೆಗಳನ್ನು ಪರಿಗ್ರಹಿಸಬಹುದಾಗಿದೆ. ಇಂಥ ಕೆಂಪು ಭತ್ತದ ಕಾಳುಗಳನ್ನು ಒಂದರ ಪಕ್ಕದಲ್ಲಿ ಒಂದೊಂದರಂತೆ ಎಂಟು ಕಾಳುಗಳನ್ನು ಜೋಡಿಸಿದಾಗ ಸಿಗುವ ಸಂಖ್ಯೆ ಒಂದು ಶ್ರೇಷ್ಟ ‘ಮಾನಾಂಗುಳ’ ಎನಿಸುತ್ತದೆ.

ದೇವಾಲಯ, ವಾಸದ ಮನೆ, ಅರಮನೆ, ಇತ್ಯಾದಿಗಳನ್ನು ಮಾನಾಂಗುಳವನ್ನು ಬಳಸಿ ನಿರ್ಮಿಸುವುದು ವಾಡಿಕೆ. ಯಜಮಾನನ ಕಾಮ್ಯಾರ್ಥ ಸಿದ್ಧಿಗಾಗಿ ನಡೆಸುವ ಮಂಡಲ, ಯಜ್ಞಕುಂಡಲ ಮುಂತಾದವನ್ನು ಮಾತ್ರಾಂಗುಳದಲ್ಲಿ ನಿರ್ಮಿಸುತ್ತಾರೆ. ಮಾತ್ರಾಂಗುಳವೆಂದರೆ ಬಲಹಸ್ತದ ಮಧ್ಯಬೆರಳಿನ ಮಧ್ಯದ ಕಂಡಿಕೆಯ ಉದ್ದ ಅಥವಾ ಅಗಲ ಯಾವುದಾದರೂ ಆಗಬಹುದು. ಇಂಥ ಅಂಗುಳದ ಅಳತೆಯನ್ನು ಬಾಚಿಕಾಯಕದ ಬಸವಯ್ಯನ ಒಂದು ವಚನ ತುಂಬ ಅರ್ಥಪೂರ್ಣವಾಗಿ ವಿವರಿಸುತ್ತದೆ.

ಮೂರಂಗುಲದಲ್ಲಿ ಅಳೆದು
ಐದಂಗುಲದಲ್ಲಿ ಪ್ರಮಾಣಿಸಿ
ಆರಂಗುಲದಲ್ಲಿ ವಟ್ಟಕ್ಕೆ ಶುದ್ಧವಾಯಿತು
ಎಂಟರಳತೆ, ಹದಿನಾರರ ಚದುರಸ
ಮೂವತ್ತೆರಡರ ಮಧ್ಯದಲ್ಲಿ ಹಸ್ತಕಂಬಿಯನಿಕ್ಕಿ
ಮೂರರಲ್ಲಿ ಭಾಗಿಸಲಾಗಿ, ಎರಡು ಒಳಗು ನಿಂದಿತ್ತು
ಒಂದು ಹೊರಗಾದ ಕೈಸಾಲೆಯಾಯಿತ್ತು.
ಈ ಕೆಲಸವೇ ಹೊರಗೆ ಬಾಚಿಯಲ್ಲಿ ಸವೆದೆ
ಒಳಗೆ ಉಳಿಯಲ್ಲಿ ಸವೆದೆ
ಇಂತೀ ತೆರನ ತಿಳಿದಡೆ
ಬಸವಣ್ಣ ಪ್ರಿಯ ವಿಶ್ವಕರ್ಮಟಕ್ಕೆ
ಕಾಳಿಕಾ ವಿಮಲ ರಾಜೇಶ್ವರ ಲಿಂಗವಲ್ಲದಿಲ್ಲಾ ಎಂದೆ[5]

ಮೇಲಿನ ವಚನದಲ್ಲಿ ಅಂಗುಳದ ಜೊತೆಗೆ ಹೆಚ್ಚಿನ ಅಳತೆಗಳಾದ ‘ಹಸ್ತ’, ಎಂಟರಳತೆ ಎನ್ನುವ ಮಾಪನ ಪರಿಭಾಷೆಗಳು ಕಾಣಿಸಿಕೊಂಡಿವೆ. ರೂಢಿಯಲ್ಲಿ ‘ಹಸ್ತ’ ಎನ್ನುವುದನ್ನು ‘ಮೊಳ’ ಎಂದು ಕರೆಯುತ್ತಾರೆ. ಇದರಲ್ಲಿ ೨೪ ಅಂಗುಳಗಳಿರುತ್ತವೆ. ‘ಮೊಳ’ ಪ್ರತಿನಿತ್ಯ ಉಪಯೋಗವಾಗುವ ಮಾಪನ. ಇಂಥ ನಾಲ್ಕು ಮೊಳಗಳ ಒಂದು ಅಳತೆಯನ್ನೇ ಕೋಲು ಅಥವಾ ದಂಡ ಎಂದು ಕರೆಯಲಾಗುತ್ತದೆ. ಇದನ್ನು ‘ಮಾರು’ ಎಂದು ಬೇಕಾದರೂ ಗುರುತಿಸಿಕೊಳ್ಳಬಹುದು. ಮೇಲಿನ ವಚನವು ಎಂಟು, ಹದಿನಾರು ಮತ್ತು ಮೂವತ್ತೆರಡರ ಗುಣಿತದಲ್ಲಿ ಮುಂದುವರಿಯುತ್ತದೆ. ಇದನ್ನು ವಾಸ್ತುಶಾಸ್ತ್ರದಲ್ಲಿ ಆಯ-ವ್ಯಯ ಎಂದು ಕರೆಯಲಾಗುತ್ತದೆ.

ಬಾಚಿರುವ ಹಸ್ತದಲ್ಲಿನ ಮೊಣಕೈ ಗಂಟಿನಿಂದ ಹಸ್ತದ ಮಧ್ಯ ಬೆರಳಿನ ತುದಿಯ ಮಧ್ಯದ ದೂರವನ್ನು ಆರತ್ನಿಹಸ್ತವೆಂದು ಕರೆಯುತ್ತಾರೆ. ಇದೇ ಮೊಳ. ಬಾಚಿರುವ ಹಸ್ತದ ನಾಲ್ಕು ಬೆರಳುಗಳನ್ನು ಮಡಚಿಕೊಂಡು (ಮುಷ್ಟಿಮಾಡಿ) ಅಳತೆ ಪಡೆದರೆ ಅದಕ್ಕೆ ರತ್ನಿಹಸ್ತವೆಂತಲೂ ಕರೆಯುತ್ತಾರೆ. ಇದನ್ನು ಆಡುಭಾಷೆಯಲ್ಲಿ ‘ಗುದಮೊಳ’ ಎಂದು ಕರೆಯುತ್ತಾರೆ. ಎಂಟರಳತೆ ಹದಿನಾರರ ಚದುರಸ ಮೂವತ್ತೆರಡರ ಮಧ್ಯದಲ್ಲಿ ಹಸ್ತಕಂಬಿಯನಿಕ್ಕಿ ಎನ್ನುವಲ್ಲಿ ೪X೮X೧೨X೧೬X೨೦X೨೪X೨೮X೩೨ ಹೀಗೆ ಆಯವನ್ನು ಚದುರಸದಲ್ಲಿ ಅಳೆಯುವ ಪದ್ಧತಿಯನ್ನು ಕಾಣುತ್ತೇವೆ. ಅಳತೆ ಮೊಳ(ಹಸ್ತ)ದಿಂದ ಆರಂಭವಾಗಿ ಮಾರುಗಳ ಮೂಲಕ ವಿಸ್ತಾರವಾಗುತ್ತದೆ. ಅಂದರೆ ನಾಲ್ಕು ಮೊಳ ಸೇರಿ ಒಂದು ದಂಡ (ಕೋಲು) ಎಂಟು ದಂಡ(ಮಾರು)ಗಳು ಸೇರಿ ಒಂದು ರಜ್ಜು (ಹಗ್ಗ). ಒಂದು ರಜ್ಜಿನಲ್ಲಿ ಮೂವತ್ತೆರಡು ಹಸ್ತಗಳಿರುತ್ತವೆ. ಯಾನ,ವಾಹನ, ಶಯನಗಳಿಗೆ ಬಳಕೆಯಾಗುವ ಮಂಚ,ಕುರ್ಚಿ, ಮೇಜುಗಳನ್ನು ಹಸ್ತಮಾನದಲ್ಲಿಯೂ ಗ್ರಾಮ, ನಿವೇಶನ ಮುಂತಾದವುಗಳನ್ನು ದಂಡಮಾನದಲ್ಲಿಯೂ ಅಳೆಯಬೇಕೆಂದು ಶಿಲ್ಪಶಾಸ್ತ್ರದಲ್ಲಿ ಹೇಳಲಾಗಿದೆ.

ಬಹಳ ಸ್ಪಷ್ಟವಾಗಿ ಇಲ್ಲಿ ಕಾಣುವುದೇನೆಂದರೆ ಶ್ರೇಣೀಕರಣದ ಆಶಯಗಳು. ವೈದಿಕ ಪ್ರಣೀತ ಶಿಲ್ಪಶಾಸ್ತ್ರ ಗ್ರಂಥಗಳು ಸಹಜವಾದ ಅಳತೆಗಳನ್ನು ಸಂಸ್ಕೃತೀಕರಣಗೊಳಿಸಿ ಅವುಗಳಲ್ಲಿ ತರತಮತೆಯನ್ನು ಹುಟ್ಟುಹಾಕಿರುವುದು ಎದ್ದುಕಾಣುವ ಅಂಶ.

ಪ್ರಾದೇಶಕ ತಾಲ ಗೋಕರ್ಣ ವಿತಸ್ತುಸ್ಯು ಸ್ಯುರ್ಯಥಾಕ್ರಮ್
ತರ್ಜನ್ಯಾದಿ ಕನಿಷ್ಠಾಂತ ಮಂಗುಷ್ಟಾಶ್ರಾತ್ ಪ್ರಸರಿತಾಃ[6]

ಹೆಬ್ಬೆರಳು ಮತ್ತು ತೋರುಬೆರಳು ಮುಂತಾದ ನಾಲ್ಕು ಬೆರಳುಗಳನ್ನುವಿರುದ್ಧ ದಿಕ್ಕುಗಳಲ್ಲಿ ಪರಸ್ಪರ ಬಿಗಿಯಾಗಿ ಚಾಚಿದಾಗ ಹೆಬ್ಬೆರಳಿನ ಕೊನೆಯಿಂದ ತೋರುಬೆರಳಿನ ಕೊನೆಯ ಮಧ್ಯ ಇರುವ ದೂರವನ್ನು ಪ್ರದೇಶ (ಚೋಟು) ಎಂದು ಕರೆಯುತ್ತಾರೆ. ಹೆಬ್ಬೆರಳಿನ ಕೊನೆಯಿಂದ ಮಧ್ಯ ಬೆರಳಿನ ಕೊನೆಯ ಮಧ್ಯ ಇರುವ ದೂರವನ್ನು ‘ತಾಳ’ ಎಂದು ಕರೆಯುತ್ತಾರೆ. ಉಂಗುರ ಬೆರಳಿನ (ಅನಾಮಿಕ) ಕೊನೆಯಿಂದ ಹೆಬ್ಬೆರಳಿನ ಕೊನೆಯ ತನಕ ಇರುವ ದೂರವನ್ನು ‘ವಿತಸ್ತಿ’ ಎಂದು ಕರೆಯುತ್ತಾರೆ. ಹೆಬ್ಬೆರಳು ಮತ್ತು ಕೊನೆಯ ಕಿರುಬೆರಳಿನ ಮಧ್ಯ ಇರುವ ದೂರವನ್ನು ಗೋಕರ್ಣ (ಗೇಣು) ಎಂದು ಕರೆಯುತ್ತಾರೆ.

ಡಾ. ಜಿ. ಜ್ಞಾನಾನಂದ ಅವರು ನೀಡುವ ಮೇಲಿನ ವಿವರವು ಬಹಳ ಸ್ಪಷ್ಟವಾಗಿ ದೇಸೀ ಅಳತೆಗಳನ್ನು ಸಂಸ್ಕೃತೀಕರಣಗೊಳಿಸಿದ ಶಾಸ್ತ್ರೀಕರಿಸಿದ ನಿಲುವುಗಳನ್ನು ಕಟ್ಟಿಕೊಡುತ್ತವೆ. ‘ಮೊಳ’ ಮತ್ತು ‘ಮಾರು’ ಗಳಿಗೆ ಮೂಲವಾದ ಬೊಟ್ಟು, ಚೋಟು, ಗೇಣು,ಇವು ವಿತಸ್ತಿ,ಪ್ರಾದೇಶ, ಗೋಕರ್ಣ ಎಂದು ಕರೆಸಿಕೊಂಡಿವೆ. ನಾಲ್ಕು ಬೊಟ್ಟು ಅಥವಾ ಚಾಪ (ಹಸ್ತ) ಇವನ್ನು ಇಂಗ್ಲಿಷಿನ ೪” (ನಾಲ್ಕು ಇಂಚು)ಗೆ ಪರಿಗಣಿಸಬಹುದು. ಹಾಗೆ ಚೋಟು (೮”) ಗೇಣು (೯”) ಮೊಳ (೧೬”) ಮಾರು (೩೨”) ಗಳನ್ನು ಅರ್ಥಮಾಡಿಕೊಳ್ಳಬಹುದಾಗಿದೆ. ಆಯಾದಿ ಅಂಶಗಳನ್ನು ಹೀಗೆ ಉದ್ದ ಮತ್ತು ಅಗಲಗಳನ್ನು ಪ್ರಧಾನವಾಗಿ ಕಾಣುತ್ತವೆ.

ಆಯಾದಿ ಗಣಿತದಲ್ಲಿ ಸ್ವೀಕೃತವಾಗುವ ಮಾನವು ಯಾವಾಗಲೂ ವ್ಯಯಕ್ಕಿಂತಲೂ ಜಾಸ್ತಿಯಿರಬೇಕು. ಇದರಿಂದಾಗಿ ಅದನ್ನು ‘ಲಾಭ’ ಎಂದು ಕರೆಯುತ್ತಾರೆ. ಲಾಭವನ್ನು ಸಾಮಾನ್ಯವಾಗಿ ಜನಪದ ಸಂಪ್ರದಾಯದಲ್ಲಿ ‘ಅಂಕಿ’ ಗಳಲ್ಲಿ ಅಳೆಯುವುದಿಲ್ಲ. ವಸ್ತು ಅಥವಾ ಕಾಳು ಕಡಿಗಳನ್ನು ಅಳೆಯುವಾಗ ಮೊದಲನೇ ಸೇರನ್ನು (ಎಣಿಕೆ) ‘ಲಾಭ’ ಎಂದೇ ಕರೆದು ನಂತರ ಎರಡರಿಂದ ಎಣಿಸಲು ಆರಂಭಿಸುತ್ತಾರೆ. ನಿರ್ಮಾಣಕ್ಕೆ ಪರಿಶೀಲಿಸುವ ಮಾನವನ್ನು ವಚನದಲ್ಲಿ ಹೇಳಿದಂತೆ ಎಂಟರಳತೆ ಅಂದರೆ ಎಂಟರಿಂದ ಗುಣಿಸಿ ೧೨ರಿಂದ ಭಾಗಿಸಿದಾಗ ಬರುವ ಶೇಷವನ್ನು “ಆಯ” (ಲಾಭ) ಎಂದು ಪರಿಗಣಿಸುತ್ತಾರೆ. ಈ ಆಯ ಕಡಿಮೆ ಬಂದರೆ ಅಂಥ ನಿವೇಶನ ಅಶುಭ ಎನ್ನುವುದು ವಾಸ್ತುಶಾಸ್ತ್ರದ ನಿಯಮ. ‘ಆಯ’ವನ್ನು ‘ಯೋನಿ’ ಎಂದೂ ಗುರುತಿಸುತ್ತಾರೆ. ಸೂಚಿತ ಮಾನವನ್ನು ಒಂಭತ್ತರಿಂದ ಗುಣಿಸಿ ಎಂಟರಿಂದ ಭಾಗಿಸಿದರೆ ಬರುವ ಶೇಷವು ‘ಯೋನಿ’. ಇದರಲ್ಲಿ ಧ್ವಜ (ಪೂರ್ವ ದಿಕ್ಕು), ಧೂಮ (ಆಗ್ನೇಯ), ಸಿಂಹ (ದಕ್ಷಿಣ), ಸಾರಮೇಯ (ನಾಯಿ), ನೈಋತ್ಯ ವೃಷಭ(ಪಶ್ಚಿಮ), ಖರ (ವಾಯುವ್ಯ), ಗಜ(ಹಸ್ತಿ,ನಾಗ), ಉತ್ತರಕಾಯ(ವಾಯಸ), ಈಶಾನ್ಯ,ಎಂದು ಎಂಟು ಬಗೆಗಳನ್ನು ಆಯಾದಿಗಣಿತದಲ್ಲಿ ಸೂಚಿಸುತ್ತಾರೆ.

ಬಸವಯ್ಯನ ವಚನಗಳಲ್ಲಿ ಸಿಗುವ ಗಜ (ಯಾರ್ಡ್), ಯೋನಿ (೬”) ಕನ್ನ, ಪಾದ ಎನ್ನುವ ಅಳತೆಗಳು ಇಮಾರತಿ ನಿರ್ಮಾಣದ ಪ್ರಮುಖ ಪರಿಮಾಣಗಳಾಗಿವೆ. ಇಂಗ್ಲಿಷ್‌ ಶಿಲ್ಪಿಯು ‘ಗಜ’ವನ್ನು ಮೂರುಭಾಗ ಮಾಡಿ ಅದನ್ನು ಅಡಿ (೧೨”) ಎಂದು ಕರೆದ. ಹಿಂದೂ ಶಿಲ್ಪಿಯೂ ತನ್ನ ಕೋಲನ್ನು ಮೂರು ಭಾಗ ಮಾಡಿ ಪ್ರತಿ ಭಾಗವನ್ನು ‘ಯೋನಿ’ ಎಂದು ಕರೆದ. ಹೀಗೆ ಹಿಂದೂಗಳಲ್ಲಿ ‘ಕೈ’ ಯಿಂದ ಆರಂಭವಾದ ಅಳತೆ ವಸಾಹತುಶಾಹಿ ಆಳ್ವಿಕೆಯಲ್ಲಿ ಅಡಿಯಿಂದ ಮುಕ್ತಾಯಗೊಂಡದ್ದು ಕಾಣುತ್ತದೆ.

ಬಸವಯ್ಯನ ವಚನದ ಒಟ್ಟು ಪರಿಕರ ಮತ್ತು ಪರಿಮಾಣಗಳು ಕ್ರಿಯಾಶೀಲಗೊಳ್ಳುವುದು ದೇಹಮೂಲ ಮತ್ತು ವೃತ್ತಿಪ್ರಧಾನವಾದ ನೆಲೆಗಳಿಂದಲೇ ಎನ್ನುವುದು ಸ್ಪಷ್ಟ. ಯಾಕೆಂದರೆ ವಚನಕಾರರಲ್ಲಿ ಮಾತು ಅಥವಾ ಬರಹ ಎನ್ನುವುದು ಬದುಕಿನ ರಂಗುರಂಗಿನ ಹೊದಿಕೆಯಾಗಿದೆ ಅದು ಬದುಕಿನ ಅವಿಭಾಜ್ಯ ಅಂಗವಾಗಿ ಅವಿಚ್ಛಿನ್ನತೆಯನ್ನು ಪಡೆದುಕೊಂಡಿದೆ. ಬರಹಗಾರನೊಬ್ಬನ ಖಾಸಗಿಯಾದ ಮತ್ತು ಸಾಮಾಜಿಕವಾದ ಚಹರೆಗಳು ಅವನ ಕ್ರಿಯೆಗಳಲ್ಲೂ ಜೀವಂತವಾಗಿ ಮೂಡಿದರೆ ಆಗ ಅಂಥ ಕೃತಿಗೆ ಹೆಚ್ಚಿನ ಮಹತ್ವ ಬರುತ್ತದೆ. ಆತ ತನ್ನ ಕುಲ, ಜಾತಿ, ವೃತ್ತಿ, ಪ್ರವೃತ್ತಿಗಳಿಂದ ಅತಿಯಾದ ನಿರಸನಹೊಂದಲು ಸಾಧ್ಯವಿಲ್ಲ. ಬದುಕಿನ ಸೆಳಕುಗಳು ಆತನ ಬರವಣಿಗೆಯಲ್ಲಿ ವಿನ್ಯಾಸಗೊಳ್ಳುತ್ತವೆ.

ಪ್ರೊ. ಎಚ್. ಎಸ್. ರಾಘವೇಂದ್ರರಾವ್ ಅವರ ಒಂದು ಮಾತು ಇಲ್ಲಿ ಬಹಳ ಉಪಯುಕ್ತವೆನಿಸುತ್ತದೆ. ಸಾಮಾಜಿಕ ಪ್ರಜ್ಞೆಯ ಸ್ವರೂಪವು ಅನಿವಾರ್ಯವಾಗಿಯೇ ಬರೆಯುತ್ತಿರುವ ಕವಿಯ ವರ್ಗ ವರ್ಣ ಹಾಗೂ ಜೀವನ ವಿಧಾನಗಳಿಂದ ಸೀಮಿತವಾಗಿರುತ್ತದೆ. ಅದರೊಂದಿಗೆ ತನ್ನ ಸಮುದಾಯದ ಹಾಗೂ ಕಲಾ ಮಾಧ್ಯಮದ ಐತಿಹಾಸಿಕವಾದ ಬೆಳವಣಿಗೆಯ ಯಾವ ಖಚಿತವಾದ ಹಂತದಲ್ಲಿ ಅವನು ಬರೆಯುತ್ತಿರುವನೆಂಬ ಅಂಶವು ಸ್ವಲ್ಪಮಟ್ಟಿಗಾದರೂ ಅವನ ಬರವಣಿಗೆಯ ಸ್ವರೂಪವನ್ನು ತೀರ್ಮಾನಿಸುತ್ತದೆ. ಅಲ್ಲೊಮ್ಮೆ ಇಲ್ಲೊಮ್ಮೆ ಕವಿಯ ವೈಯಕ್ತಿಕ ಪ್ರತಿಭೆಯು ಮೇಲೆ ಹೇಳಿದ ಸೀಮಿತತೆಗಳನ್ನು ದಾಟಬಹುದು. ಆದರೆ ಆ ದಾಟುವಿಕೆಯ ಸ್ವರೂಪ ಕೂಡ ಮತ್ತೇ ಆ ವರ್ಗ ವರ್ಣಗಳನ್ನೇ ಅವಲಂಬಿಸಿರುತ್ತದೆ.[7]ಬಸವಯ್ಯನಲ್ಲೂ ವೃತ್ತಿಸಹಜವಾದ ಇಂಥ ಬದ್ಧತೆಯನ್ನು ಕಾಣಬಹುದಾಗಿದೆ. ಅಪವರ್ಗೀಕೃತ ನೆಲೆಯ ಮಾಪನಗಳಾದ ಗೇಣು, ಚೋಟು, ಮೊಳ ಮಾರು, ದಾರ, ಕಂಬ, ಹಗ್ಗ ಇತ್ಯಾದಿಗಳು ದುಡಿವ ಸಂಸ್ಕೃತಿಯ ಸಂಕೇತಗಳಾಗಿ ಸೈದ್ಧಾಂತಿಕವಾಗಿಯೇ ಬಸವಯ್ಯನ ವಚನದಲ್ಲಿ ಘನತೆ ಪಡೆದಿವೆ. ಸಣ್ಣ ಅಳತೆಗಳಿಂದ ಹಿಡಿದು ದೊಡ್ಡ ಅಳತೆಯವರೆಗಿನ ಮಾಪನ ಸಂಗತಿಗಳನ್ನು ಬಸವಯ್ಯನಲ್ಲಿ ಕಾಣುತ್ತೇವೆ. ಈ ಎಲ್ಲ ಅಳತೆಗಳೂ ದೇಹಪ್ರಧಾನವಾದ ಕ್ರಿಯೆ ಮತ್ತು ಅರಿವಿನಿಂದ ಹುಟ್ಟಿದವು ಎನ್ನುವುದು ಇಲ್ಲಿ ವಿಶೇಷ. ದೇಹ ಮೀರಿದ ಅಳತೆಗಳನ್ನು ‘ಹಗ್ಗ’ ದಿಂದ ಗುರುತಿಸುವುದು ಇಲ್ಲಿನ ಬಹುಮುಖ್ಯ ವಿಚಾರ. ಬಡಿಗನ ಮಟ್ಟಲಗಿ, ನೂಲುದಾರ ಇವೆಲ್ಲವೂ ಮನೆ ಮತ್ತು ಕೆಲಸದ ವಿಕಾಸದ ವಿವಿಧ ಹಂತಗಳಲ್ಲಿ ಪೂಜೆಗೊಳ್ಳುವುದನ್ನು ಕಾಣಬಹುದು. ‘ದಾರ’ದ ಅಧಿದೇವತೆಯನ್ನು ‘ವಾಸುಕಿ’ ಎಂದೂ ಉಳಿದೆಲ್ಲ ಅಳತೆಗಳ ಅಧಿದೇವತೆಯನ್ನು ಬ್ರಹ್ಮನೆಂದು ಗುರುತಿಸಿದ್ದು ಇದಕ್ಕೆ ಕಾರಣ.

ಬಾಚಿಕಾಯಕದ ಬಸವಯ್ಯನಲ್ಲಿ ಕಾಣುವ ಎಂಟರಳತೆ, ಹದಿನಾರರ ಚದುರಸ ಈ ಮಾನದಂಡಗಳು ಎಂಟೆತ್ತಿನ ಗ್ವಾದಾಲಿ(ಎಂಟಂಕಣ) ಹದಿನಾರೆತ್ತಿನ ಗ್ವಾದಾಲಿ (ಹದಿನಾರು ಅಂಕಣ) ಎನ್ನುವ ಪರಿಕಲ್ಪನೆಗಳ ಅನುಕೂಲತೆ ಮತ್ತು ಅವಶ್ಯಕತೆಗಳನ್ನು ಆಧರಿಸಿ ಹುಟ್ಟಿದಂಥವು. ಇಂದಿಗೂ ಕೃಷಿ ಬದುಕಲ್ಲಿ ಇಂಥ ಅಳತೆಗಳು ಪ್ರಚಲಿತ ಇವೆ. ಹೀಗೆ ಸಂಸ್ಕೃತಿನಿಷ್ಟ ವಿಚಾರಧಾರೆಯೊಂದನ್ನು ಕಟ್ಟಿಕೊಡುವ ಬಸವಯ್ಯನ ಒಟ್ಟು ತಾತ್ವಿಕತೆ ಸೃಷ್ಟಿ ಮತ್ತು ವಿಕಸನಶೀಲ ಮಾದರಿಯದ್ದು. ವೃತ್ತಿ ಸಹಜ ಪರಿಕರ ಮತ್ತು ಪರಿಭಾಷೆಗಳನ್ನು ಆತ್ಮೋನ್ನತಿಯ ಮಾರ್ಗಗಳನ್ನಾಗಿ ಬಳಸಿಕೊಳ್ಳುವ ಮೂಲಕ ಉಳಿದ ಕಸುಬುದಾರ ವಚನಕಾರರಿಗಿಂತ ಭಿನ್ನವಾಗಿ ಉಳಿಯುತ್ತಾನೆ. ಹೀಗಾಗಿ ಪಾರಂಪರಿಕ ಅಧ್ಯಯನ ಕ್ರಮದ ಹೊರೆತಾದ ಹೊಸರೀತಿಯ ಅಧ್ಯಯನ ಮಾದರಿಯೊಂದನ್ನು ಬಸವಯ್ಯನ ದಾರ್ಶನಿಕ ಬದುಕು ಅಪೇಕ್ಷೆ ಪಡುತ್ತದೆ. ಈ ಅಪೇಕ್ಷೆ ಬಸವಯ್ಯನ ವೃತ್ತಿ ಮತ್ತು ಅಭಿವ್ಯಕ್ತಿಗಳನ್ನು ಬಹುಮುಖಿ ಪ್ರಜ್ಞಾಸ್ಥರದಲ್ಲಿ ವಿಶ್ಲೇಷಿಸಲು ಒತ್ತಾಯಿಸುತ್ತವೆ.

೩.ಸಂಸ್ಕೃತಿ ಸಂಬಂಧಿ ಸಂಕಥನಗಳು

ಬಾಚಿಕಾಯಕದ ಬಸವಯ್ಯ ವೃತ್ತಿಸಂಬಂಧಿ ಹಾಗೂ ಶರೀರ ಸಂಬಂಧಿ ಮೀಮಾಂಸೆಗಳ ಮೂಲಕ ನಮ್ಮ ಅಧ್ಯಯನದ ಕುತೂಹಲಗಳನ್ನು ಕೆರಳಿಸಿದರೆ, ಸಂಸ್ಕೃತಿ ಸಂಬಂಧಿ ವಿವರಗಳ ಮೂಲಕ ಮತ್ತೊಂದು ರೀತಿಯಲ್ಲಿ ಅಂಥ ಕುತೂಹಲಗಳನ್ನು ಇಮ್ಮಡಿಗೊಳಿಸುತ್ತಾನೆ. ಸಂಸ್ಕೃತಿಯ ಸಹಜ ಸಾಹಚರ್ಯದಿಂದ ಆಕಾರ ಪಡೆಯುವ ವಚನಗಳು ಪಾರಮಾರ್ಥಿಕವನ್ನೂ ಮೀರಿದ ಸಾಂಸ್ಕೃತಿಕ ಜಗತ್ತೊಂದನ್ನು ಅನಾವರಣಗೊಳಿಸುತ್ತವೆ. ಬಾಚಿಕಾಯಕದ ಬಸವಯ್ಯನ ಪುಣ್ಯಸ್ತ್ರೀ ಕಾಳವ್ವೆಯ ಒಂದು ವಚನ ನನಗಿಲ್ಲಿ ಮುಖ್ಯವೆನಿಸುತ್ತದೆ. ’ಕೈತಪ್ಪಿ ಕೆತ್ತಲು ಕಾಲಿಂಗೆ ಮೂಲ ಮಾತು ತಪ್ಪಿ ನುಡಿಯಲು ಬಾಯಿಗೆ ಮೂಲ’ ಈ ವಚನವು ಕ್ರಿಯೆ ಮತ್ತು ಅರಿವಿನ ಮಧ್ಯದ ಗಾಢ ಸಂಬಂಧದ ನೆಲೆಗಳನ್ನು ಗ್ರಹಿಕೆಗೆ ತರುತ್ತದೆ. ವಚನದ ಸಾಮಾಜಿಕಾರ್ಥವು ಬಡಿಗ ವೃತ್ತಿಯ ರಚನಾತ್ಮಕ ಸ್ವರೂಪವನ್ನು ಬಿಚ್ಚಿತೋರುತ್ತದೆ. ಒಂದು ದೊಡ್ಡ ಕೊರಡನ್ನು ಕೆತ್ತಿ ಮೂರ್ತಿಗೊಳಿಸುವ ಸಂದರ್ಭದಲ್ಲಿ ಕೊರಡನ್ನು ಕಾಲುಗಳ ಮಧ್ಯ ಇಟ್ಟುಕೊಂಡು ಎದ್ದುನಿಂತು ಬಾಚಿಯಿಂದ ಎತ್ತಿ ಕೆತ್ತಬೇಕಾಗುತ್ತದೆ.ಎತ್ತಿದ ಬಾಚಿ ಅಳೆತ್ತರದಿಂದ ಕಟ್ಟಿಗೆ ಮೇಲೆ ಬಂದು ಬೀಳುತ್ತದೆ. ಕೊರಡು ಅಲ್ಲಾಡದಂತೆ ಮುಂದೊಬ್ಬ ಕುಳಿತು ಅದನ್ನು ಅಡಿಕಟ್ಟೆಗೆ ಒತ್ತಿ ಹಿಡಿದಿರುತ್ತಾನೆ. ಇಂಥ ಸಂದರ್ಭದಲ್ಲಿ ಹರಿತವಾದ ಬಾಚಿಯನ್ನು ಹಿಡಿದು ಕೊರಡು ಕೆತ್ತುವ ಬಡಿಗನ ಮನಸ್ಸು ಚಂಚಲವಾದರೆ ಮುಂದೆ ಕುಳಿತವನ ಕೈ ಅಥವಾ ತಲೆ ಕೊಚ್ಚಿಹೋಗುವ ಸಾಧ್ಯತೆ ಒಂದಾದರೆ ಸ್ವತಃ ಬಡಿಗನ ಕಾಲೇ ಕತ್ತರಿಸಿ ಹೋಗುವ ಅಪಾಯ ಇನ್ನೊಂದು ಸ್ವರೂಪದ್ದು. ಬಸವಯ್ಯನೆ ಹೇಳುವಂತೆ ‘ಹೊರಗಿನ ತಿಗುಡಂ ಬಾಚಿಯಿಂದ ಸವೆದೆ ಒಳಗಿನ ತಿಗುಡ ಉಳಿಯಿಂದ ಸವೆದೆ’ ಎನ್ನುವ ಮಾತಗಳು ಈ ಎರಡೂ ಆಯುಧಗಳ ಬಳಕೆಯ ರೀತಿಗಳನ್ನು ಅರಿವಿಗೆ ತರುತ್ತವೆ.

ಬಸವಯ್ಯನ ವಚನಗಳಲ್ಲಿ ದೊರೆಯುವ ಇನ್ನೂ ಕೆಲವು ಸಂಗತಿಗಳು ವಿಶೇಷಾರ್ಥವನ್ನು ಹೊಂದಿದಂಥವು. ‘ಎನ್ನ ಕೊಡತಿಯಲ್ಲಿ ಬಡೆಯಿಸಿಕೊಂಬುವ ಬಡಿ ಹೋರಿಗಳು’ ಎನ್ನುವಲ್ಲಿ ‘ಬಡಿಹೋರಿ’ ಎನ್ನುವ ರೂಪಕ ವ್ಯಾಪಕ ಅರ್ಥಾವರಣ ಉಳ್ಳಂಥದ್ದು. ‘ಬಡಿಹೋರಿ’ ಎಂದರೆ ಸಾಮಾಜಿಕಾರ್ಥದಲ್ಲಿ ತಾರುಣ್ಯ ತುಂಬಿದ, ಯೌವ್ವನದ ಮದವೇರಿದ ಗೂಳಿ(ಎತ್ತು). ವಿಶ್ವಕರ್ಮ ತಾತ್ವಿಕತೆಯಲ್ಲಿ ಅದಕ್ಕೊಂದು ಚಾರಿತ್ರಿಕ ಪರಿಕಲ್ಪನೆಯಿರುವುದು ಗಮನೀಯ. ಸಿಂಧೂಕೊಳ್ಳದಲ್ಲಿ ದೊರೆತ ತ್ರಿಶೀರ್ಷಮೂರ‍್ತಿ ಮುದ್ರಿಕೆಯನ್ನು ವಿಶ್ವರೂಪ ತ್ವಷ್ಟ್ರಾರನೆಂದು ಪರಿಗಣಿಸಲಾಗುತ್ತದೆ. ಈ ಸಂಸ್ಕೃತಿಯನ್ನು ವಿಶ್ವಕರ್ಮಮೂಲ ಸಂಸ್ಕೃತಿಯೆಂದು ಹೇಳಲಾಗುತ್ತದೆ. ಡಾ. ಬುದ್ಧ ಪ್ರಕಾಶ ಅವರು ಸಾಕಷ್ಟು ಆಧಾರಗಳ ಮೂಲಕ ಈ ಸಂಗತಿಯನ್ನು ಚರ್ಚಿಸಿ ಸಿದ್ಧಮಾಡಿದ್ದಾರೆ(ಆಚಾರಾಭಿನಂದನೆ, ಪು. ೧೧೮-೧೩೩). ಸಿಂಧೂ ಕಣಿವೆಯ ಈ ತ್ರಿಶೀರ್ಷಮೂರ‍್ತಿ ಮತ್ತು ವೃಷಭ ಚಿತ್ರಗಳನ್ನು ವಿಶ್ವರೂಪ ಮತ್ತು ವಿಶ್ವಸೃಷ್ಟಿಯ ಸಂಕೇತಗಳೆಂದು ಗುರುತಿಸಲಾಗುತ್ತದೆ. ಸೃಷ್ಟಿ ಮತ್ತು ಅದರ ವಿಕಾಸನ ಕ್ರಿಯೆಗಾಗಿ ತನ್ನ ಶಾಶ್ವತ ತೇಜಸ್ಸನ್ನು ದಾನ ಮಾಡಿ ಗರ್ಭಕ್ಕೆ ಕಾರಣೀಭೂತವಾಗುವ ಹೋರಿ (ವೃಷಭ) ತನ್ನ ತ್ರಿಮೂರ್ತಿ ರೂಪದಿಂದ ಸರ್ವವನ್ನು ನಿಯಂತ್ರಿಸುತ್ತದೆ. ಬಸವಯ್ಯನಲ್ಲಿ ಬಳಕೆಯಾಗುವ ‘ಬಡಿಹೋರಿ’ ಕೂಡ ಸೃಷ್ಟಿಶೀಲತೆಯ ಪ್ರತಿಮೆಯಾಗಿದೆ. ಬಡಿ ಹೋರಿ ಎನ್ನುವುದು ಉದ್ದೀಪನಗೊಂಡ ಲಿಂಗದ ಸಂಕೇತ. ಬಡಿ ಅಂದರೆ ಜನಭಾಷೆಯಲ್ಲಿ ಶಿಶ್ನ ಎಂದು ಅರ್ಥ. ಪ್ರೌಢತೆಯ ಸ್ಥಿತಿಯನ್ನು ಇದು ಹೇಳುತ್ತದೆ.

ಇಂಥ ಯೌವನಾವಸ್ಥೆಯಿಂದ ತುಂಬಿ ತುಳುಕಾಡುವ ಹೋರಿಗಳನ್ನು ಪಳಗಿಸಿ ಕೃಷಿ ಚಟುವಟಿಕೆಗೆ ಸಾಲುಗಾಣಿಸುವ ಮನುಷ್ಯನ ಪರಿ ಅದ್ಭುತವಾದದ್ದು. ಹದಕ್ಕೆ ಬಂದ ಹಾಲಲ್ಲಿ ಹೋರಿಗಳನ್ನು ದಸರಾ, ದೀಪಾವಳಿಗಳಂಥ ಶುದ್ಧ ಪಾಡ್ಯ ತಿಥಿಗಳಲ್ಲಿ ನಿರ್ಭೀಜೀಕರಣಕ್ಕೆ ಈಡುಮಾಡಲಾಗುತ್ತದೆ. ಹೋರಿಯನ್ನು ನೆಲದ ಮೇಲೆ ಅಂಗಾತ ಕೆಡವಿ ಅದರ ನಿಗುರಿದ ತರಡುಗಳನ್ನು ಎರಡು ಬಿದಿರು ಕೋಲಿನ ಸಂದಿಯಲ್ಲಿ ಸಿಕ್ಕಿಸಿ ಬಿರಿಹಾಕಿ ಹಿಚುಕುತ್ತಾ ಹೋಗುತ್ತಾರೆ. ಹೋರಿಯ ವೃಷಣವು ಮೃದುವಾಗಿದ್ದರೆ ಬಿದಿರಿನ ಬಿರಿಗೆ ಸಿಕ್ಕು ನೀರಾಗುತ್ತದೆ. ಬಿರುಸಾಗಿದ್ದರೆ ಅದು ಕೋಲಿನ ಮೇಲೆ ಬಂದು ಗಟ್ಟಿಯಾಗಿ ಕುಳಿತುಕೊಳ್ಳುತ್ತದೆ. ಆಗ ತಜ್ಞನೆನಸಿಕೊಂಡವ ಕೈಯಿಂದ ಕೋಲಿನ ಸಂದಿಯಲ್ಲಿ ವೃಷಣವನ್ನು ಹಿಚುಕಿ ಒತ್ತುತ್ತಾನೆ. ಮಣಿಯದಿದ್ದರೆ ಕೊಡತಿಯಿಂದ ಬಡಿಯುತ್ತಾನೆ. ಬಡಿದು ನೀರು ನೀರು ಮಾಡುತ್ತಾನೆ. ಇದನ್ನು ಬಸವಯ್ಯನ ‘ಎನ್ನ ಕೊಡತಿಯಿಂದ ಬಡೆಯಿಸಿ ಕೊಂಬ ಬಡಿಹೋರಿಗಳು’ ಎನ್ನುವ ಮಾತಿನಲ್ಲಿ ಕಾಣುತ್ತೇವೆ.

ಹೀಗೆ ನಿರ್ಭೀಜೀಕರಣಗೊಳಿಸಿದ ನಿರ್ವೀರ್ಯಗೊಳಿಸಿದ ಗೂಳಿಯನ್ನು ಒಕ್ಕುಲುತನಕ್ಕೆ ಬಳಸಿಕೊಳ್ಳಲಾಗುತ್ತದೆ. ಈ ನಿರ್ಬೀಜೀಕರಣದ ಅರ್ಥ ವ್ಯಕ್ತಿಗತವಾದ ತಾರುಣ್ಯದ ತುರ್ತುಗಳನ್ನು ನಿಯಂತ್ರಿಸಿ ಸಮೂಹದತ್ತವಾದ ಸೃಜನಾತ್ಮಕ ಕ್ರಿಯೆಗೆ ಬಳಸಿಕೊಳ್ಳುವುದು. ನಿರ್ವೀರ‍್ಯಗೊಂಡ ಹೋರಿಯನ್ನು ಕೃಷಿಭೂಮಿಗೆ ಬಳಸಿ ಬೆಳೆ ತೆಗೆಯುವುದು. ಸಾಮಾನ್ಯವಾಗಿ ಜನಪದ ಬದುಕಲ್ಲಿ ನಿರರ್ಥಕವೆಂಬುದು ಯಾವುದೂ ಇಲ್ಲ. ಅನುಪಯೋಗಿ ಎನಿಸುವ ವಸ್ತುಗಳನ್ನು ಉಪಯುಕ್ತತೆಯತ್ತ ಹೊರಳಿಸುವುದು ಕೃಷಿ ಬದುಕಿನ ವಿಶೇಷ. ಹಾಗೆ ಕೃಷಿಗೂ ಮತ್ತು ಬಡಿಗತನ ವೃತ್ತಿಗೂ ಅಭೇದವಾದ ಆತ್ಮಸಂಗಾತವಿರುವುದು ಗಮನಾರ್ಹ. ಹೀಗಾಗಿ ಬಾಚಿಕಾಯಕದ ಬಸವಯ್ಯನ ಈ ರೂಪಕ ಸಹಜವಾಗೇ ಸಾಂಸ್ಕೃತಿಕ ಸನ್ನಿವೇಶವೊಂದರ ಮಹತ್ವದ ಮಾಹಿತಿಯನ್ನು ದಕ್ಕಿಸಿಕೊಡುತ್ತದೆ. ಇಡೀ ವಚನದ ಆಶಯ ಕೂಡ ಕಾಮದ ನಿಯಂತ್ರಣ ಮತ್ತು ಅದರ ಸದ್ಭಳಕೆ. ಕೊಡತಿಯ ಗುಣ ಬಡಿಯುವುದು. ಈ ಬಡಿತ ಒಳಾವರಣದ ರೂಪೀಕರಣಕ್ಕೆ ಮೀಸಲಾದುದು. ಉಳಿಗೆ ಕೊಡತಿಯ ಸಹಾಯ ಬೇಕು. ಬಾಚಿ ಹೊರಾವರಣದ ತಿಗುಡ ತೆಗೆದರೆ ಉಳಿ ಕೊಡತಿಗಳು ಒಳಾವರಣದ ವಿಕಾರಗಳನ್ನು ಶುದ್ಧೈಸುತ್ತವೆ.

ಹೀಗೆ ವಸ್ತು ಮತ್ತು ಪ್ರಾಣಿರೂಪಕಗಳ ಮೂಲಕ ಮನೋವಿಕಾರದ ನಿಯಂತ್ರಣ ಮತ್ತು ಅದರ ಸೃಜನಶೀಲ ನೆಲೆಗಳನ್ನು ಕುರಿತು ಬಸವಯ್ಯ ಪ್ರತಿಪಾದಿಸುತ್ತಾನೆ. ಸಾಮಾನ್ಯವಾಗಿ ನಮ್ಮ ಶರೀರದೊಳಗೆ ಪಶು, ಮೃಗ ಸಂಬಂಧಿ ವರ್ತನೆಗಳು ಸ್ಥಾಯಿಯಾಗಿರುತ್ತವೆ. ಪ್ರಕೃತಿ ಸಹಜ ಸ್ಥಿತಿ ದೇಹದೊಳಗೆ ಅಂತರ್ಗತವಾಗಿರುತ್ತದೆಂದು ಯೋಗಾಶಾಸ್ತ್ರವು ಹೇಳುತ್ತದೆ. ಗಲಭಾಸನ, ಮಯೂರಾಸನ, ಬಕಾಸನ,ವ್ಯಾಘ್ರಾಸನ, ಕುಕ್ಕಟಾಸನಗಳು ಈ ಎಲ್ಲ ಸ್ಥಿತಿಗಳನ್ನು ಎಚ್ಚರಿಸಿ ನಿಯಂತ್ರಿಸುತ್ತವೆ. ಯಾಕೆಂದರೆ ವಚನಕಾರರಲ್ಲಿ ಬರುವ ಇಲಿ, ಬೆಕ್ಕು, ಹುಲಿ, ಹುಲ್ಲೆ, ಕೋತಿ,ಹಾವು,ಹೋರಿ ಇಂಥ ಎಲ್ಲ ಸ್ವಭಾವಗಳು ಮಾನವನ ದೇಹದಲ್ಲಿ ಅಂತರ್ಗತಗೊಂಡಿವೆ. ಈ ಬಗೆಯ ರೂಪಪ್ರಜ್ಞೆ ಜಾಗ್ರತವಾದಾಗ ಕಾಮ ವಿಕಾರವಾಗುತ್ತದೆ. ಇಲ್ಲಿ ಕಾಮವು ಅಂತರಂಗದಲ್ಲಿ ಸದಾ ಕ್ರಿಯಾಶೀಲವಾಗಿರುವುದು ಮನದಟ್ಟಾಗುತ್ತದೆ. ಚಂಚಲ ಸ್ವಭಾವದ ಮನಸ್ಸು ಹರಿದಂತೆ ಶರೀರವೆಂಬ ಕಾಡಲ್ಲಿ ಅಡಗಿರುವ ವ್ಯಾಘ್ರ ಅದರ ಬೆಂಬತ್ತಿ ಓಡುತ್ತದೆ. ‘ಕರಿಘನ ಅಂಕುಶ ಕಿರಿದೆನ್ನಬಹುದೆ, ಕರಿ ಅಂಜುವುದು ಅಂಕುಶಕ್ಕೆ’ ಬಸವಣ್ಣನವರ ಈ ಮಾತುಗಳು ಅಂಕುಶ ಚಿಕ್ಕದಾದರೂ ಅದು ಘನವಾದ ಆನೆಯನ್ನು ನಿಯಂತ್ರಿಸುವಂತೆ ಪಶುಪ್ರಾಯವನ್ನು ಕಿರಿದಾದ ಕೊಡತಿಯಿಂದ ನಿಯಂತ್ರಿಸಬಹುದು. ಶರೀರದ ಈ ಅಖಂಡ ಸ್ಥಿತಿಗಳ ಭಾವ ತೀವ್ರತೆಯನ್ನು ಮೀರಿಯೂ ಮೀರದಂತೆ ನಿಯಂತ್ರಿಸಬೇಕು. ಮಿತಿ ಮೀರುವಿಕೆಯಲ್ಲಿಯೇ ಸಾಧನೆಯ ಹಾದಿಗಳು ಅಡಗಿರುವುದು ಎನ್ನುವ ಸತ್ಯವನ್ನು ಒತ್ತಿಹೇಳುತ್ತದೆ. ಇಂಥ ಹಲವು ಸಂಸ್ಕೃತಿ ನಿಷ್ಟವಾದ ಸಂಕಥನಗಳನ್ನು ಬಸವಯ್ಯನ ವಚನಗಳು ಕಟ್ಟಿಕೊಡುವುದು ವಿಶೇಷ.


[1]ತಿಂಥಿಣಿ ಮೌನೇಶ್ವರ ವಚನಗಳು, ಪು.೪೪,ವಚನ ೩೩, ೧೯೮೫

[2]ಚಾತುರ್ವರ್ಣ ಧರ್ಮದರ್ಶನ, ಪು.೪, ೧೯೯೭

[3]ಸಂಕೀರ್ಣ ವಚನ ಸಂಪುಟ-೪,ಪು.೨೭೦, ವಚನ ೧೦೯೨,೧೯೯೩

[4]ಸಕಲ ಪುರಾತನರ ಬೆಡಗಿನ ವಚನ,ಪು. ೫೪೧, ವಚನ ೪೦೭, ೧೯೯೮

[5]ಸಂಕೀರ್ಣ ವಚನ ಸಂಪುಟ, ೦೩ ಪು. ೯೦, ವಚನ ೨೨೫,೧೯೯೩

[6]ಉಧೃತಃ ಜಿ. ಜ್ಞಾನಾನಂದ, ಶಿಲ್ಪಾದರ್ಶನ-೧, ಪು. ೧೫೯, ೨೦೦೧

[7]ಎಚ್. ಎಸ್. ರಾಘವೇಂದ್ರರಾವ್, ಮಾರ್ಗಸಾಹಿತ್ಯದಲ್ಲಿ ಸಾಮಾಜಿಕ ನಿಲುವುಗಳು, ಪು. ೩-೪,೧೯೮೯