ಮಾದಾರ ಚನ್ನಯ್ಯನ ಒಂದು ವಚನದಿಂದ ಈ ಚರ್ಚೆಯನ್ನು ಆರಂಭಿಸಬಹುದೆನಿಸುತ್ತದೆ.

ಸಾಂಖ್ಯಶ್ವಪಚ ಅಗಸ್ತ್ಯ ಕಬ್ಬಿಲ ದೂರ್ವಾಸ
ಮಚ್ಚಿಗ ದಧೀಚಿ ಕೀಲಿಗ, ಕಶ್ಯಪ ಕಮ್ಮಾರ
ರೋಮಜ ಕಂಚುಗಾರ ಕೌಂಡಿಲ್ಯ ನಾವಿಂದ
ಎಂಬುದನರಿದು ಮತ್ತೇ ಕುಲವುಂಟೆಂದು
ಛಲಕ್ಕೆ ಹೋರಲೇತಕ್ಕೆ
ಇಂತಿ ಸಪ್ತಋಷಿಯರುಗಳೆಲ್ಲ ಸತ್ಯದಿಂದ
ಮುಕ್ತರಾದುದನರಿಯದೆ ಅಸತ್ಯದಲ್ಲಿ ನಡೆದು
ವಿಪ್ರರು ನಾವು ಘನವೆಂದು ಹೋರುವ
ಹೊತ್ತು ಹೋಕರ ಮಾತೇಕೆ ಕೈಯುಳಿ ಕತ್ತಿ
ಅಡೆಗುಂಟಕ್ಕಡಿಯಾಡಬೇಡ
ಅರಿನಿಜಾತ್ಮ ರಾಮಾನಾಮನಾ[1]

ಹಾವಿನಹಾಳ ಕಲ್ಲಯ್ಯನ ಒಂದು ವಚನಕೂಡ ಇಲ್ಲಿ ಗಮನಾರ್ಹ

ಬ್ರಾಹ್ಮಣ ಮೊದಲಾಗಿ ಸ್ವಪಚ ಕಡೆಯಾಗಿ
ಎಲ್ಲರಿಗೂ ಜನನವೊಂದೆ
ಆಹಾರ, ನಿದ್ರೆ, ಭಯ, ಮೈಥುನವೊಂದೇ
ಪುಣ್ಯಪಾಪವೊಂದೆ ಸ್ವರ್ಗ ನರಕವೊಂದೆ
ಬೇಕೆಂಬ ಭಂಗಿತರು ನೀವು ಕೇಳಿರೆ
ಅರಿವೆ ಸತ್ಕುಲ ಮರಿವೆ ದುಃಕುಲ
ಅರಿವುವಿಡಿದು ಮನಪಕ್ಷ
………………………………….
………………………………
ಇದು ಕಾರಣ ಮಹಾಲಿಂಗ ಕಲ್ಲೇಶ್ವರಾ
ನಿಮ್ಮ ಶರಣರು ಅಜಾತ ಚರಿತ್ರರಾಗಿ
ಆವ ಜಾತಿಯನೂ ಹೊದ್ದರು[2]

ಮಾದಾರ ಚೆನ್ನಯ್ಯ ಮತ್ತು ಹಾವಿನಹಾಳ ಕಲ್ಲಯ್ಯನ ಈ ಎರಡೂ ವಚನಗಳು ಪರಂಪರೆಯ ಜಡತೆ ಮತ್ತು ಶ್ರೇಷ್ಠತೆಯ ಪರಿಕಲ್ಪನೆಗಳ ಕುರಿತು ಕಟುವಾಗಿ ಮಾತನಾಡುತ್ತವೆ. ರೂಢಿಮೂಲವಾದ ಮಾತೊಂದಿದೆ. ಋಷಿಮೂಲ, ನದಿಮೂಲವನ್ನು ಅರಿಯಬಾರದು ಎಂಬುದು. ವ್ಯವಸ್ಥೆಯೊಂದು ಮೂಲಕುಲದ ಪ್ರತಿಭೆಗಳನ್ನು ಸಾಂಸ್ಕೃತೀಕರಣದ ಮೂಲಕ ತನ್ನ ಅನುಕೂಲಕ್ಕೆ ತಕ್ಕಂತೆ ಬಗ್ಗಿಸಿಕೊಂಡ ಹುನ್ನಾರ ಕುರಿತು ಮೇಲಿನ ವಚನಗಳು ಸ್ಪಷ್ಟವಾಗಿ ಮಾತನಾಡುತ್ತವೆ. ಸ್ವಾರ್ಥಪರ ಹಾಗೂ ಶೋಷಣೆ ಮೂಲದ ಜ್ಞಾನ ಪರಂಪರೆಗೆ ಎದುರಾಗಿ ತನ್ನೊಳಗಿನ ಪ್ರತಿಭೆಯನ್ನು ಎತ್ತಿತೋರಿಸುವ ಕಸುಬುಗಾರ ವರ್ಗದ ಶರಣರ ಈ ದಿಟ್ಟತೆ ಗಮನಾರ್ಹ.

ಕ್ಷೇತ್ರ ವಿಶೇಷವೋ ಬೀಜ ವಿಶೇಷವೋ ಎನ್ನುವ ಮೂಲಕ ಹಾವಿನಹಾಳ ಕಲ್ಲಯ್ಯ ಒಂದು ಚರ್ಚೆಯನ್ನೇ ಬೆಳೆಸುತ್ತಾನೆ. ಬೀಜ ವಿಶೇಷವೆಂದರೆ ಕುಲದಲಧಿಕ ಸದ್ಬ್ರಾಹ್ಮಣನ ಸತಿ ಜಾರೆಯಾಗಿ ಶ್ವಪಚನ ರಮಿಸಲು ಅವರಿಗೆ ಹುಟ್ಟಿದ ಕೂಸಿಗೆ ಬ್ರಾಹ್ಮಣ ಕರ್ಮಗಳು ಯೋಗ್ಯವಾಗಿವೆ? ಕುಲದಲಧಿಕ ಬ್ರಾಹ್ಮಣ ಚಂಡಾಲ ಸತಿಯ ರಮಿಸಲು ಅವರಿಗೆ ಹುಟ್ಟಿದ ಸುತಗೆ ವಿಪ್ರಕರ್ಮಸಲ್ಲದೆ? ಎನ್ನುವ ಮೂಲಕ ಹುಟ್ಟಿನೊಂದಿಗೆ ಅಂಟಿಕೊಂಡು ಬರುವ ಜಾತಿಶ್ರೇಷ್ಠತೆಯನ್ನೇ ನಿರಶನಗೊಳಿಸುತ್ತಾನೆ. ಇದು ಒಂದು ರೀತಿ ಪರಂಪರೆಯ ಪಾವಿತ್ರ‍್ಯನಾಶದ ಕಲ್ಪನೆಯೇ ಆಗಿದೆ. ಇಡೀ ವೈದಿಕ ವ್ಯವಸ್ಥೆಯನ್ನೇ ಮುರಿದು ಕಟ್ಟಿದ ಈ ಸಾಮಾಜಿಕ ಚಳುವಳಿ ಕಸುಬುದಾರ ವರ್ಗಗಳ ಆತ್ಮಸ್ಥೈರ್ಯದ ಪ್ರತೀಕವಾಗಿದೆ. ತಮ್ಮ ವೃತ್ತಿ ಹಾಗೂ ಆಡುಭಾಷೆಯ ಮೂಲಕ ತಮ್ಮ ಆಧ್ಯಾತ್ಮಿಕಾವಿಷ್ಕಾರ ಪಡೆದುಕೊಂಡ ಈ ವರ್ಗಗಳು ಭಿನ್ನ ವೃತ್ತಿ ಭಿನ್ನ ಅಭಿರುಚಿಗಳನ್ನು ಹೊಂದಿದ್ದರೂ ಆಧ್ಯಾತ್ಮಿಕ ಸ್ಥರದಲ್ಲಿ ಐಕ್ಯತೆಯನ್ನು ಸಾಧಿಸಿದ್ದು ಗುರುತಿಸಬಹುದಾದ ಸಂಗತಿಯಾಗಿದೆ.

ಎರಡು ರೀತಿಯ ವರ್ತನೆಗಳನ್ನು ಶ್ರಮಿಕ ವರ್ಗದ ವಚನಕಾರರ ಅಭಿವ್ಯಕ್ತಿಯಲ್ಲಿ ಕಾಣಬಹುದು. ತನ್ನ ವೃತ್ತಿಧರ್ಮಕ್ಕೆ ವ್ಯತಿರಿಕ್ತವಾದ ವರ್ತನೆಯನ್ನು ಪ್ರಕಟಿಸುತ್ತಾ ತನ್ನ ಕಾಯಕವನ್ನೇ ಸಂಕೇತವಾಗಿಟ್ಟುಕೊಂಡು ಆಧ್ಯಾತ್ಮವನ್ನು ನಿರೂಪಿಸುವುದು ಮತ್ತು ತನ್ನ ವೃತ್ತಿಯನ್ನು ಆಧ್ಯಾತ್ಮಿಕ ಅರ್ಥವಲಯಕ್ಕೆ ಹೊರಳಿಸುವುದು ಇನ್ನೊಂದು ಬಗೆ. ಅಂಬಿಗರ ಚೌಡಯ್ಯನ ಪ್ರಕಾರ ಈ ತನುವೆಂಬುದು ಹರಿಗೋಲು ಈ ಜಗತ್ತು ತುಂಬಿದ ಸಾಗರ ಆ ಭವಸಾಗರ ದಾಟಲು ತನುವೆಂಬ ಹರಿಗೋಲು. ಅಂದರೆ ಶರೀರ ಒಂದು ಮಾಧ್ಯಮ. ಸದಾಚಾರ ಅರಿವು ಕ್ರಿಯೆಗಳಿಂದ ಈ ಶರೀರವನ್ನು ಭವಸಾಗರ ದಾಟಿಸಬಹುದು. ಈ ಕಸುಬುದಾರ ಶರಣರಲ್ಲಿ ಶರೀರವೇ ಎಲ್ಲದಕ್ಕೂ ವೇದಿಕೆ. ಹೀಗಾಗಿ ಶರೀರ ಮತ್ತು ಅದರ ವಿವಿಧ ಚಹರೆಗಳ ಮೀಮಾಂಸೆ ಇಲ್ಲಿ ಎದ್ದುಕಾಣುತ್ತದೆ.

ತನುವೆಂಬ ಮೊರದಲ್ಲಿ ಮಾಯಾಗುಣವೆಂಬ ಮಾರಿಯ ಹಿಡಿದು ಊರಾಡುವ ಡಕ್ಕೆಯ ಬೊಮ್ಮಣ್ಣನು, ಪರಂಪರೆಯು ಕ್ಷುದ್ರವೆಂದು ಭಾವಿಸಿದ ಕಾಯಕದವನು. ‘ಮರೆದವರ ಮನದಲ್ಲೆಲ್ಲವೂ ಮಾರಿ….’ ‘ಮನವೆಂಬ ಮಾರಿಯ ಭವಗೆಡಿಸಿ ನಾ ತಂದೆ ಜ್ಞಾನಶಕ್ತಿಯ’ ಲೋಕವನ್ನು ಕಾಡುವ ದುಷ್ಟಶಕ್ತಿಯನ್ನಾಗಿ, ಕಾಲಸೂಚನೆಯಾಗಿ, ಅಹಂಕಾರದ ಸಂಕೇತವಾಗಿ ಮಾರಿಯನ್ನು ಈ ವಚನಕಾರ ನಿರೂಪಿಸುತ್ತಾನೆ. ಹೀಗೆ ಇಹ-ಪರದ ಸಾಧನೆಗೆ ತನ್ನ ವೃತ್ತಿಯನ್ನೇ ಮೂಲವಾಗಿಸಿಕೊಂಡಿದ್ದು ಅದರಲ್ಲಿಯೇ ತತ್ವಜ್ಞಾನವನ್ನು ಹೇಳಿದ್ದು ಬೆರಗು ಮೂಡಿಸುವಂಥದ್ದು. ‘ತನುವ ತೋಂಟವ ಮಾಡಿ ಮನವ ಗುದ್ದಲಿ ಮಾಡಿ ಅಗೆದು ಕಳೆದೆನಯ್ಯಾ ಭ್ರಾಂತಿಯೆಂಬ ಬೇರ’ ಎನ್ನುವ ಒಕ್ಕಲಿಗರ ಮುದ್ದಣ. ‘ಆಶೆಯರಿತ ಬಾಚಿಯಲಿ ಭವಪಾಶವಿಲ್ಲದ ಜಂಗಮಕೆತ್ತಿ, ರೋಷವಿಲ್ಲದ ಉಳಿಯಲಿ ನಿಜವಾಸವ ನೋಡಿ ಹುಗಿಲುದೆಗೆವುತ್ತ’ ಎನ್ನುವ ಬಾಚಿಕಾಯಕದ ಬಸವಯ್ಯನಲ್ಲಿ ಅವರವರ ವೃತ್ತಿ ಸಹಜ ಪರಿಕರಗಳೇ ದೇಹಕ್ಕಂಟಿದ ಜಿಡ್ಡುತನವ ಕಳೆಯುವ ದೇಹವನ್ನು ಕ್ರಿಯಾಶೀಲವಾಗಿಸುವ ನೆಲೆಗಳಾಗಿ ರೂಪಗೊಳ್ಳುತ್ತವೆ. ‘ಹಸುವಿನ ಹಾಗ, ಎತ್ತಿಗೆ ಹಣವಡ್ಡ ಕುರುವಿಗೆ ಮೂರು ಹಣ, ಎಮ್ಮೆ ಕೋಣ ಕುಲವ ನಾ ಕಾಯಲಿಲ್ಲ’ (ತುರುಗಾಹಿ ರಾಮಣ್ಣ) ‘ಅಟ್ಟಿಯ ಚುಚ್ಚುವ ಉಳಿಯ ಮೊನೆಯಲ್ಲಿ ಪ್ರತ್ಯಕ್ಷವಾದ ಪರಮೇಶ್ವರನ ಇತ್ತಲೇಕೆ ಬಂದೆ’ (ಮಾದರ ಚನ್ನಯ್ಯ) ‘ಮುದ್ದಿನ ಸುರೆಯ ತೊಗಲ ತಿತ್ತಿಯಲಿ ತುಂಬಿ ಒಪ್ಪದಲಿ ನಿಲಿಸಲಿಕೆ’ (ಹೆಂಡದ ಮಾರಯ್ಯ) ‘ಹಿಡಿಯಿಲ್ಲದ ಶಾಸ್ತ್ರ ಕೀಲಿಲ್ಲದ ಕತ್ತರಿ ಉಭಯನೊಡಗೊಡದ ಚಿಮ್ಮುಟ ಹಲ್ಲಿಲ್ಲದ ಹಣೀಗೆ’ (ಅಮ್ಮಿದೇವ) ‘ಬತ್ತಲೆಯಿದ್ದವರೆಲ್ಲ ಕತ್ತೆಯ ಮಕ್ಕಳು ತಲೆ ಬೋಳಾದವರೆಲ್ಲ ಮುಂಡೆಯ ಮಕ್ಕಳು’ (ಕಾಮವ್ವೆ) ಎನ್ನುವ ಮೇಲಿನ ಎಲ್ಲ ವಚನಕಾರರ ವಚನದ ಸಾಲುಗಳು ವ್ಯವಸ್ಥೆಯ ವಿಡಂಬಡನೆಯೊಂದಿಗೆ ತಮ್ಮವೃತ್ತಿ ಧರ್ಮದ ಬದ್ಧತೆಯನ್ನು ಸಾಕಾರಗೊಳಿಸುತ್ತವೆ.

ಮಾದಾರ ಚನ್ನಯ್ಯನಂತೂ ಶಿವನಿಗೇ ತಿಳುವಳಿಕೆ ಹೇಳುವ ಮಟ್ಟಿಗೆ ಬೆಳೆದಿದ್ದಾನೆ. ನಿತ್ಯ, ಮುಕ್ತಿ, ಕೈಲಾಸ, ಇಷ್ಟಲಿಂಗ ಎಂದು ಬಡಿದಾಡುವವರ ಬಿಟ್ಟು ‘ಎಕ್ಕಡ ಹೊಲೆಯುವ ನನ್ನ ಮುಂದೇಕೆ ಬಂದೆ’ ಎನ್ನುವ ವ್ಯಂಗ್ಯ ಆತನ ಅಚಲ ಕಾಯಕ ನಿಷ್ಠೆಯನ್ನು ತೋರಿಸುತ್ತದೆ. ಕಾಯಕದ ಮುಂದೆ ಇಷ್ಟಲಿಂಗವೂ ಗೌಣ. ಎಲ್ಲ ಕಾಯಕ ನಿರತ ವಚನಕಾರರೂ ಶಿವನನ್ನು ತಮ್ಮ ತಮ್ಮ ಕೇರಿಗೆ ಬರಮಾಡಿಕೊಳ್ಳುವ ವೃತ್ತಿಸಹಜ ಆಯುಧದ ಮಟ್ಟಿಗೆ ಸರಳೀಕರಿಸುವ ನೆಲೆಯೇ ಈ ಕಸುಬುದಾರ ಭಕ್ತರನ್ನು ವಿಶೇಷವಾಗಿ ಅಧ್ಯಯನ ಮಾಡಲು ಪ್ರೇರೇಪಿಸುತ್ತದೆ. ಪರಂಪರೆಗೆ ಯಾವುದು ಪವಿತ್ರವೋ ಅದು ಇಲ್ಲಿ ಅಪವಿತ್ರ ಅಸಂಬದ್ಧ. ಪರಂಪರೆಗೆ ಯಾವುದು ಉಪೇಕ್ಷಿತವೋ ಇಲ್ಲಿ ಅದೇ ಪ್ರಧಾನ. ಅದೇ ಆತ್ಮೋದ್ಧಾರದ ಸಾಧನ. ಶ್ರಮ ಮತ್ತು ಅನುಭಾವ ಶರಣರಿಗೆ ಬೇರೆ ಬೇರೆ ಅಲ್ಲ. ‘ತನ್ನ ತಾನರಿತಲ್ಲಿ ತನ್ನರಿವೇ ತನಗೆ ಗುರು’. ಪರಂಪರೆಗೆ ಅನಿವಾರ್ಯವಾಗಿದ್ದ ಗುರು ಎನ್ನುವ ಮತ್ತೊಂದು ಭೌತಿಕ ಅಸ್ತಿತ್ವವನ್ನೆ ನಿರಾಕರಿಸುವುದು ಇಲ್ಲಿ ಪ್ರಧಾನ. ಆ ಗುರು ತನ್ನರಿವು ತನ್ನಲ್ಲಿ ಅಂತರ್ಗತವಾದ ಆತ್ಮಶಕ್ತಿ. ಈ ಅರಿವಿನ ಪ್ರಯತ್ನ ಪ್ರತಿಯೊಬ್ಬ ವಚನಕಾರನಲ್ಲೂ ಭಿನ್ನವಾಗಿರುವಂಥದ್ದು. ಆದರೆ ಅದರ ಗುರಿ ಮಾತ್ರ ಅಭಿನ್ನ. ಬಾಚಿಕಾಯಕದ ಬಸವಯ್ಯ, ಹಾವಿನಹಾಳ ಕಲ್ಲಯ್ಯ, ಹುಂಜಿನ ಕಾಳಗದ ದಾಸಯ್ಯ, ಮಾದಾರ ಚನ್ನಯ್ಯರ ಆದಿಯಾಗಿ ಎಲ್ಲ ಶ್ರಮಿಕ ನೆಲೆಯ ವಚನಕಾರರಲ್ಲಿ ಮುಖ್ಯವಾಗಿ ಕಾಣುವುದು ವೈದಿಕ ಜಾತಿವ್ಯವಸ್ಥೆಗೆ ಮೂಲವಾದ ಕರ್ಮಸಿದ್ಧಾಂತ ಹಾಗೂ ವರ್ಣಾಶ್ರಮಗಳ ವಿರೋಧ. ಇಂಥ ಅಸಮಾನತೆ ನೆಲೆಯ ಅಧಿಕೃತ ದಾಖಲೆಗಳಾದ ಶಾಸ್ತ್ರಾದಿಗಳನ್ನು ಶಾಸ್ತ್ರ ಕರ್ತೃಗಳನ್ನು ಶುದ್ಧಾಂಗ ತರ್ಕ ಬದ್ಧವಾಗಿ ಪ್ರಶ್ನಿಸುವ ಛಾತಿಯನ್ನು ಇವರಲ್ಲಿ ಕಾಣುತ್ತೇವೆ.

‘ಅನಂತ ವೇದಶಾಸ್ತ್ರ ಆಗಮ ಪುರಾಣ ತರ್ಕ ತಂತ್ರಗಳನ್ನು ಆತ್ಮಮಾಡುವುದಲ್ಲದೇ ಆತ್ಮನ ಅವು ಮಾಡುವುದಿಲ್ಲ’ (ಉರಿಲಿಂಗ ದೇವ), ‘ಸ್ಮೃತಿಗಳು ಸಮುದ್ರ ಪಾಲಾಗಲಿ ಶ್ರುತಿಗಳು ವೈಕುಂಟ ಸೇರಲಿ ಪುರಾಣಗಳು ಅಗ್ನಿಯ ಸೇರಲಿ’ (ಸಿದ್ಧರಾಮ), ಈ ಶಾಸ್ತ್ರ ನಿರಾಕರಣೆಯ ಈ ಪರಿಯು, ಮಾನವತ್ವದ ಸರ್ವಾಂಗೀಣ ಅಭಿವೃದ್ಧಿಗಾಗಿ ಈ ಧರ್ಮ ಶಾಸ್ತ್ರಗಳೇ ಹೊರತು ಧರ್ಮದ ಸಲುವಾಗಿ ಇವುಗಳಲ್ಲ ಎನ್ನುವ ಆಶಯವನ್ನು ಹುರಿಗೊಳಿಸುತ್ತವೆ. ಹಾವಿನಹಾಳ ಕಲ್ಲಯ್ಯನಂತೂ ಇನ್ನೂ ಮುಂದುವರಿದು ‘ಶಿವನ ಭಕ್ತರ ಮನೆಯ ಶುನಕ ಮುಟ್ಟುವು ನಿಮ್ಮ, ಭವಹರನ ಭಕ್ತರು ಸೋಕಲಹುದೆ ನಿಮ್ಮ’ ಎನ್ನುವ ಮೂಲಕ ಬ್ರಾಹ್ಮಣರು ಬ್ರಾಹ್ಮಣರೆಂಬ ಕಾರಣಕ್ಕಾಗಿ ಹೊಂದಿರುವ ಕುಲಮದವನ್ನು ಉಗ್ರವಾಗಿ ಟೀಕಿಸುತ್ತಾನೆ. ಒಂದು ರೀತಿ ಈ ಎಲ್ಲ ಸಂಗತಿಗಳು ಅಸ್ಪೃಶ್ಯ ಎನಿಸಿಕೊಂಡ ನೆಲೆಗಳ ಮೂಲಕ ಸ್ಪೃಶ್ಯ ಎನಿಸಿಕೊಂಡ ನೆಲೆಗಳನ್ನು ಅಸ್ಪೃಶ್ಯ ವಾಗಿ ಕಾಣುವಂತ ಗುಣವನ್ನು ಹೊಂದಿವೆ. ಹಾವಿನಹಾಳ ಕಲ್ಲಯ್ಯನ ಮಗಳು ಕಲ್ಲವ್ವೆಯು ಶಿವಪೂಜೆಗೆಂದು ಹೊತ್ತೊಯ್ಯುತ್ತಿದ್ದ ನೀರಿನ ಕೊಡವನ್ನು, ಬ್ರಾಹ್ಮಣನಾದ ಸೋಮಯಾಜಿ ಮುಟ್ಟಿದ ಕಾರಣಕ್ಕಾಗಿ ಮೈಲಿಗೆಯಾಯಿತೆಂದು ತುಂಬಿದ ಕೊಡವನ್ನು ಆತನ ಕಾಲಮೇಲೆ ಎತ್ತಿ ಹಾಕಿ ಪ್ರತಿಭಟಿಸುತ್ತಾಳೆ. ಹರಿಹರನ ಹಾವಿನಹಾಳ ಕಲ್ಲಯ್ಯನ ರಗಳೆಯಲ್ಲಿ ಈ ವಿಚಾರ ತುಂಬ ಸ್ವಾರಸ್ಯಕರವಾಗಿ ಬಂದಿದೆ.

ಕರ್ಮ ಮತ್ತು ಕಸುಬಿನ ಆಧಾರದ ಮೇಲೆ ವರ್ಣವನ್ನು ನಿರ್ಣಯಿಸುವ ಅನೈಸರ್ಗಿಕ ಪದ್ಧತಿಯನ್ನು ಕೊಡವಿ ಸಮಾನತೆಗೆ ಮೂಲವಾದ ಕಾಯಕ ಸಿದ್ಧಾಂತವನ್ನು ಕಸುಬುದಾರ ವಚನಕಾರರು ಎತ್ತಿಹಿಡಿದರು. ವ್ರತನೇಮಗಳಿಗಿಂತ ಕಾಯಕನೇಮವನ್ನು ಪ್ರಮುಖವಾಗಿಸಿದರು.

ಹುಂಜ ಸೋತಡೆ ಹಿಡಿವೆ
ವ್ರತ ಹೋದವರ ನೋಡೆನು
ಚಂದ್ರ ಚೂಡೇಶ್ವರ ಲಿಂಗವೆ[3]

ಕಾಯಕ ತಪ್ಪಿದಡೆ ಸೈರಿಸಬಾರದು
ವ್ರತ ತಪ್ಪಿದರೆಂತು ಸೈರಿಸಬಹುದು
ಕರ್ಮಹರ ಕಾಳೇಶ್ವರಾ[4]

ಹುಂಜಿನ ಕಾಳಗದ ದಾಸಯ್ಯ ಮತ್ತು ಬಾಚಿಕಾಯಕದ ಬಸವಯ್ಯರ ಪುಣ್ಯಸ್ತ್ರೀ ಕಾಳವ್ವೆಯರ ಈ ವಚನಗಳು ಕಾಯಕದ ಅನನ್ಯತೆಯನ್ನು ಎತ್ತಿಹಿಡಿದು ಶುಷ್ಕ ವ್ರತನೇಮಗಳನ್ನು ಅಲ್ಲಗಳೆಯುತ್ತವೆ. ಶ್ರಮ ಮತ್ತು ಅರಿವಿನ ಹೊಂದಾಣಿಕೆಯನ್ನು ಎತ್ತಿಹೇಳುತ್ತವೆ. ಬಾಚಿಕಾಯಕದ ಬಸವಯ್ಯನಲ್ಲೂ ಈ ಶ್ರಮ ಮತ್ತು ಅರಿವಿನ ಅವಿಚ್ಛಿನ್ನತೆ ಎದ್ದುಕಾಣುತ್ತದೆ. ಅವೆರಡು ಛಿದ್ರಸ್ಥಿತಿಯ ಪರಿಕಲ್ಪನೆಗಳಲ್ಲ. ಈ ಛಿದ್ರ ಸ್ಥಿತಿಯ ಪರಿಕಲ್ಪನೆ ವೈದಿಕ ಮತ್ತು ವಸಾಹತುಶಾಹಿ ಮನಸ್ಸುಗಳದ್ದು. ಅಲ್ಲಿ ದೈಹಿಕ ಶ್ರಮಕ್ಕಿಂತ ಬೌದ್ಧಿಕ ಶ್ರಮಕ್ಕೇ ಆದ್ಯತೆ. ಎರಡರ ಸರಿಬೆರಕೆ ಮತ್ತು ಸದ್ಭಳಕೆ ಶರಣರಲ್ಲಿ ಗತಿಶೀಲ ಗುಣವನ್ನು ಪಡೆದುಕೊಳ್ಳುತ್ತದೆ. ಮನವೇಕಾರರ್ಥವಾಗಿ ತನುಗುಣ ನಾಸ್ತಿಯಾಗಿ ಬುದ್ಧಿಗೆ ಬುದ್ಧಿ ಔರಣವಾಗಿ, ಭಾವಕ್ಕೆ ಭಾವ ತಾರ್ಕಣೆಯಾಗಿ ಶೀಲಕ್ಕೆ ಶೀಲ ಸಮಾನವಾಗುವ ಒಂದೆರಡಳಿದು ಒಂದೇಯಾಗುವ ರೀತಿಯನ್ನು ಕಸುಬುದಾರ ಶರಣರಲ್ಲಿ ಕಾಣುತ್ತೇವೆ. ರೂಪ ನಿರೂಪ ಸ್ವರೂಪೀಕರಣದ ನೆಲೆಗಳು ಈ ಕಸುಬುದಾರ ವಚನಕಾರರಲ್ಲಿ ಪ್ರಧಾನವಾದಂಥವು.

ಮೆಟ್ಟು ಮಾಡುವವನಾದರಾಗಲೀ
ಕಟ್ಟಿಗೆ ತರುವವನಾದರಾಗಲೀ
ಮುಷ್ಟಿತುಂಬವೇ ಸಾಕು ಬಸವಣ್ಣ [5]

ಕಾಯಕವೇ ಕಮ್ಮಾರ ಕಾಯಕವೇ ಹೊಲೆಮಾದಿಗ
ವಾಯು ಅಗ್ನಿ ಪರಬ್ರಹ್ಮ ಇದರೊಳಗೆ
ಯಾವುದು ಕುಲವೆಂದು ಬೆದಕಲಿ ಬಸವಣ್ಣ [6]

ತಿಂಥಿಣಿ ಮೌನೇಶ್ವರನ ಈ ಎರಡೂ ವಚನಗಳು ಜಾತಿಜನ್ಯವಾದ ಕುಲಮದವನ್ನು ತಿರಸ್ಕರಿಸಿ ಕಾಯ ಮೂಲವಾದ ಆತ್ಮಜೀವಗಳೆರಡೂ ಒಂದಾದ ಜೀವಪರವಾದ ಅನುಭಾವಿಕ ಹಂತವನ್ನು ವಿನ್ಯಾಸಗೊಳಿಸುತ್ತವೆ. ಬಾಚಿಕಾಯಕದ ಬಸವಯ್ಯ ಮತ್ತು ತಿಂಥಿಣಿ ಮೌನೇಶ್ವರ ಕಾಲದಂತರದಲ್ಲಿ ಭಿನ್ನವಾದರೂ ಆಲೋಚನೆಯ ಹಂತದಲ್ಲಿ ಅಭಿನ್ನರು. ಹಾಗೆ ಕುಲದ ದಾರಿಯಲ್ಲಿ ಒಂದೇ ಮೂಲದವರು. ಹೀಗಾಗಿ ಬಹಳಷ್ಟು ತಾತ್ವಿಕ ಚರ್ಚೆಗಳು ಇಬ್ಬರಲ್ಲೂ ಒಂದೇ ರೀತಿಯಾಗಿ ಕಾಣುತ್ತವೆ. ವೃತ್ತಿ ಮತ್ತು ಶರೀರ ಸಂಬಂಧವಾದ ಮೀಮಾಂಸೆಗಳಲ್ಲಿ ಇವರು ಬಳಸುವ ಪರಿಕರ, ಬೆಳೆಸುವ ತಾತ್ವಿಕತೆ ವೃತ್ತಿಮೂಲ ನೆಲೆಯಿಂದಲೇ ಎನ್ನುವುದು ಸ್ಪಷ್ಟ.

ಕಸುಬುದಾರ ವರ್ಗದ ಬಹುತೇಕ ಶರಣರು ವರ್ಣವ್ಯವಸ್ಥೆಯ ಕರ್ಮಮೂಲವಾದ ಜಾತಿ ಶೋಷಣೆಗೆ ಸಿಕ್ಕು ಒದ್ದಾಡಿದವರು. ಹೀಗಾಗಿ ಇವರ ಒಟ್ಟು ತಾತ್ವಿಕ ದರ್ಶನವೇ ಪಾರಂಪರಿಕ ಸಾಮಾಜಿಕ ಬದುಕಿಗಿಂತ ಭಿನ್ನವಾದದ್ದಾಗಿದೆ. ಕಾಯ ಮೂಲವಾದ ಕಾಯಕವನ್ನು ರೂಢಿಮೂಲ ನೆಲೆಗಳಿಗಿಂತ ಭಿನ್ನವಾಗಿ ಕಟ್ಟಿಕೊಟ್ಟರು. ತನುಮನ ಬಳಲಿಸಿ ತಂದು ಗುರುಲಿಂಗ ಜಂಗಮಕೆ ಮೆಚ್ಚಿಸಿ ದಾಸೋಹ ಮಾಡುವೆ (ಸಿದ್ಧರಾಮ) ಎನ್ನುವಲ್ಲಿ ಅಂತಃಶುದ್ಧವಾದ ಪ್ರಾಮಾಣಿಕ ದುಡಿಮೆಗೆ ಒತ್ತುಕೊಟ್ಟರು. ಆತ್ಮದ ಉತ್ಕರ್ಷಕ್ಕೆ ತನುಪ್ರಧಾನ ಅನುಭವವನ್ನು ಮುಖ್ಯವಾಗಿಸಿಕೊಂಡರು. ‘ನೇಮದ ಕೂಲಿ ಅಂದಿನ ನಿತ್ಯಕಾಯಕದಲ್ಲಿ ಸಂದಿರಬೇಕು’ ‘ಅಂಗಕ್ಕೆ ತನುತ್ರಯವ ಜ್ಯೋತಿಯ ಮಾಡಿ ನಿಮ್ಮಶರಣರ ಕಾಯವೇ ಕೈಲಾಸ’ ಎನ್ನುವ ಬಾಚಿಕಾಯಕದ ಬಸವಯ್ಯನ ಮಾತುಗಳಲ್ಲಿ ಕಾಯದ ಪ್ರವೃತ್ತಿ ಮಾರ್ಗ ಕುರಿತ ಧನಾತ್ಮಕ ಸಂಗತಿಗಳು ಗೋಚರವಾಗುತ್ತವೆ.

ಪ್ರತಿಯೊಂದನ್ನು ಮಾರುಕಟ್ಟೆಯ ಸರಕನ್ನಾಗಿ ಉಪಭೋಗದ ಸರಕನ್ನಾಗಿ ಸಾದರಪಡಿಸುತ್ತಿರುವ ಜಾಗತೀಕರಣದ ಫಲಿತಗಳು ಅನ್ನದ ಅಭಾವವನ್ನು ಪರಾವಲಂಬಿ ಬದುಕನ್ನು ಸೃಷ್ಟಿ ಮಾಡುತ್ತಿವೆ. ಉತ್ಪಾದನೆಗಿಂತ ಉಪಭೋಗಕ್ಕೆ ಆದ್ಯತೆ ನೀಡುತ್ತಿವೆ. ಪ್ರಾಕೃತಿಕ ಸಂಪನ್ಮೂಲಗಳು ನಾಶವಾಗಿ ಕೃರ್ತಿಮ ಸಂಪನ್ಮೂಲಗಳ ಮೇಲೆ ಬದುಕನ್ನು ಅವಲಂಬಿತವಾಗುವಂತೆ ಮಾಡುತ್ತಿವೆ. ನೆಲದ ಉತ್ಪಾದನೆಗಿಂತ ಬಹುರಾಷ್ಟ್ರೀಯ ಕಂಪನಿಗಳ ಬರಡು ಉತ್ಪಾದನೆಗಳಿಗೆ ಹೆಚ್ಚಿನ ಬೆಲೆ ಬರುತ್ತಿದೆ. ಇಂಥ ಸಂಕೀರ್ಣ ಸ್ಥಿತಿಯಲ್ಲಿ ಬದುಕುತ್ತಿರುವ ಮನುಷ್ಯನಿಗೆ ಶರಣರ ಕಾಯಕ ದಾಸೋಹದ ಪರಿಕಲ್ಪನೆಗಳು ಅದ್ಭುತ ಕೊಡುಗೆಗಳೂ ಆಶಾದಾಯಕ ಮಾದರಿಗಳೂ ಆಗಿವೆ. ಅನ್ನ ನೀರಿಗೆ ಹೆಸರಾದ ನಾಡಲ್ಲಿ ಅದನ್ನು ಸಾರ್ವತ್ರಿಕಗೊಳಿಸಿದ ದಾರ್ಶನಿಕರ ಕ್ಷೇತ್ರದಲ್ಲಿ ಅದೇ ಅನ್ನ-ನೀರು ಮಾರುಕಟ್ಟೆಯ ಸರಕಾಗಿ ಗಳಿಕೆಯ ಮಾಧ್ಯಮವಾಗಿ ಪ್ರಚಾರ ಪಡೆಯುತ್ತಿದೆ. ಇಂಥ ಹೊತ್ತಲ್ಲಿ ಕಸುಬುದಾರ ಶರಣರ ಈ ತತ್ವಗಳು ಬಹುಮುಖ್ಯವೆನಿಸುತ್ತವೆ.

[1]ಸಕಲ ಪುರಾತನರ ವಚನಗಳು, ಸಂ. ೩, ಪು-೩೪೭, ವಚನ-೬, ೧೯೭೮

[2]ಸಂಕೀರ್ಣ ವಚನ ಸಂಪುಟ ೪, ಪು-೩೯೨, ವಚನ-೧೧೫೮,೧೯೯೩

[3]ಸಂಕೀರ್ಣ ವಚನ ಸಂಪುಟ ೪, ಪು-೪೦೩, ವಚನ-೧೧೮೮, ೧೯೯೩

[4]ಸಕಲ ಪುರಾತನರ ವಚನಗಳು, ಸಂ. ೩, ಪು-೨೬೫, ವಚನ-೩, ೧೯೭೮

[5]ತಿಂಥಿಣಿ ಮೌನೇಶ್ವರರ ವಚನಗಳು, ಪು-೭೬, ವಚನ-೩೫, ೧೯೮೫

[6]ತಿಂಥಿಣಿ ಮೌನೇಶ್ವರರ ವಚನಗಳು, ಪು-೮೯, ವಚನ-೩೫, ೧೯೮೫