ಬಾಚಿಕಾಯಕದ ಬಸವಯ್ಯನ ಕುರಿತಾದ ಈ ಅಧ್ಯಯನವು ವೃತ್ತಿನಿರತ ಶರಣನೊಬ್ಬನ ತತ್ಪಾದರ್ಶದ ಅಧ್ಯಯನವಾಗಿದೆ. ವೃತ್ತಿಗಳು ಮೂಲೆಗುಂಪಾಗುತ್ತಿರುವ ಈ ಹೊತ್ತಿನಲ್ಲಿ ಇಂಥ ಸಂಸ್ಕೃತಿ ಸಂಬಂಧಿಯಾದ ಅಧ್ಯಯನದ ಮೂಲಕ ಹೊಸ ರೀತಿಯ ಚರ್ಚೆಯೊಂದನ್ನು ಬೆಳೆಸಲು ಹಾತೊರೆಯಲಾಗಿದೆ. ಬಾಚಿಕಾಯಕದ ಬಸವಯ್ಯನಂತಹ ಬಡಿಗ ಕಾಯಕದ ವಚನಕಾರನೊಬ್ಬನ ಕುರಿತು ಇದೊಂದು ವಿನೂತನ ಅಧ್ಯಯನ ಎಂಬುದು ನನ್ನ ನಂಬಿಕೆ. ಶರಣ ಚಳುವಳಿ ಮತ್ತು ಶರಣ ಸಾಹಿತ್ಯ ಅಧ್ಯಯನದಲ್ಲಿ ಪ್ರಮುಖವಾಗಿ ಕಂಡುಬರುವ ಸೈದ್ಧಾಂತಿಕ ಮತ್ತು ಬೌದ್ಧಿಕ ಪ್ರಧಾನವಾದ ಅಧ್ಯಯನದ ದಾರಿಗಿಂತ ಭಿನ್ನವಾಗಿ ವೃತ್ತಿಸಹಜ ಪ್ರಾಯೋಗಿಕತೆ ನೆಲೆಯಿಂದ ಈ ಅಧ್ಯಯನವನ್ನು ಕಟ್ಟಿಕೊಳ್ಳಲಾಗಿದೆ. ಬಡಿಗ ವೃತ್ತಿ ಅದರಲ್ಲೂ ವಿಶೇಷವಾಗಿ ಪಾಂಚಾಳ (ವಿಶ್ವಕರ್ಮ) ಕುಲದ ಕುರಿತಾಗಿ ನಡೆದ ಅಧ್ಯಯನಗಳು ಬಹಳ ಕಮ್ಮಿ. ಅಂಥದರಲ್ಲಿ ಈ ಅಧ್ಯಯನವು ಶರಣ ಚಳುವಳಿಯಲ್ಲಿ ಗುರುತಿಸಿಕೊಂಡ ಬಾಚಿಕಾಯಕದ ಬಸವಯ್ಯನನ್ನು ಬರೀ ಒಂದು ಆದರ್ಶ ಅಥವಾ ಭಾವುಕ ನೆಲೆಯಲ್ಲಿ ವೈಭವೀಕರಣಕ್ಕೆ ಒಳಪಡಿಸದೆ ವೃತ್ತಿ ಮತ್ತು ಕುಲ ಸಂಬಂಧಿಯಾದ ವಿಶ್ಲೇಷಣೆಗೆ ಒಳಪಡಿಸಲಾಗಿದೆ.

ವೃತ್ತಿಕಾರನೊಬ್ಬನಿಗೆ ಯಾವುದು ಶೂನ್ಯವಲ್ಲ. ಎಲ್ಲವೂ ವಾಸ್ತವ ಪ್ರಜ್ಞೆ ಮತ್ತು ವಾಸ್ತವವೇ ಆತನ ಖದುರು. ಇಂಥ ತಾತ್ವಿಕತೆಯನ್ನು ಕಸುಬುದಾರ ವಚನಕಾರರಲ್ಲಿ ಕಾಣುತ್ತೇವೆ. ಆದರೆ ಬಹಳಷ್ಟು ಅಧ್ಯಯನಗಳು ಇಂಥ ವಾಸ್ತವದ ಸಂವೇದನೆಗಳನ್ನು ಅವಾಸ್ತವದ ಮತ್ತು ಅಗೋಚರದ ನೆಲೆಯಲ್ಲಿ ಪರಿಭಾವಿಸಿದಂಥವು. ಕಸುಬುದಾರ ಮತ್ತು ಕಸುಬುದಾರರಲ್ಲದ ವಚನಕಾರರ ಅಭಿವ್ಯಕ್ತಿ ಮತ್ತು ನಡವಳಿಕೆಗಳನ್ನು ಒಂದೇ ಚೌಕಟ್ಟಿನಲ್ಲಿಟ್ಟು ನೋಡುವ ಕ್ರಮವನ್ನು ಒಡೆದು ಅವರವರ ಸಾಮಾಜಿಕ ನೆಲೆಯಿಂದ ಗುರುತಿಸುವುದು ಅರ್ಥಪೂರ್ಣ ಕೆಲಸ ಎಂಬುದು ನನ್ನ ನಂಬಿಕೆ. ಹೀಗಾಗಿ ಬಾಚಿಕಾಯಕದ ಬಸವಯ್ಯನನ್ನು ಕುರಿತು ಮಾಡಿದ ಅಧ್ಯಯನ ಪಾರಮಾರ್ಥಿಕ ಎನ್ನುವ ಪಾರಂಪರಿಕ ನೆಲೆಯಿಂದ ತುಸು ಭಿನ್ನವಾಗಿಯೇ ತನ್ನನ್ನು ಗ್ರಹಿಕೆಗೆ ಒಡ್ಡಿಕೊಳ್ಳುತ್ತ ಹೋಗುತ್ತದೆ.

ಬಾಚಿಕಾಯಕದ ಬಸವಯ್ಯನಿಗೆ ಶರೀರವಾಗಲೀ, ಮನೆಯಾಗಲಿ ಅದೊಂದು ವಾಸ್ತವ. ಅದನ್ನೇ ರೂಪವೆಂದು ಪರಿಗಣಿಸಲಾಗಿದೆ. ಈ ರೂಪದಿಂದ ನಿರೂಪವನ್ನು ಕಟ್ಟಿ ಅದನ್ನು ಸ್ವರೂಪೀಕರಿಸಿಕೊಳ್ಳಲಾಗುತ್ತದೆ. ತನ್ನ ತಾನಳಿದ,ಎರಡು ಒಂದಾಗಿ ಅಳಿದ ತಾತ್ವಿಕತೆ ಬಸವಯ್ಯನದಲ್ಲ. ತನ್ನ ತಾನರಿತು ಎರಡು ಒಂದಾಗಿ ಬೆಳೆದ ವಿಕಾಸಶೀಲ ತಾತ್ವಿಕತೆ ಆತನದು. ದೇಹ ಅಥವಾ ಮನೆ ಬರೀ ಕ್ರಿಯೆರಹಿತವಾದ ವಿಕಸನವನ್ನು ಮರೆತ ಜಡವಸ್ತುಗಳಲ್ಲ. ಅವು ನಿರಂತರ ಚಲನಶೀಲತೆಯನ್ನು ಹೊಂದಿರುವಂಥವು. ಆವರ್ತನಶೀಲ ಗುಣವುಳ್ಳವು. ಮನುಷ್ಯ ದೇಹ ಲಿಂಗದೊಳಗೊಂದಾದ ಬಳಿಕ ಇನ್ನೇನು ಎಲ್ಲವು ಮುಗಿಯಿತು, ಮುಕ್ತಿಯೇ ಬದುಕಿನ ಕೊನೆ, ಅಂಗದ ಅಳಿವೇ ಲಿಂಗಾಂಗ ಸಾಮರಸ್ಯ ಎನ್ನುವ ಧೋರಣೆಗಳಿಗಿಂತ ಭಿನ್ನವಾಗಿ ಬಸವಯ್ಯನ ತಾತ್ವಿಕತೆ ನನಗೆ ಕಾಣುತ್ತದೆ. ವೃತ್ತಿನಿರತ ವ್ಯಕ್ತಿಯೊಬ್ಬನಿಗೆ ಕೊನೆ ಎಂಬುದಿಲ್ಲ. ಸದಾ ಹೊಸದನ್ನು ಹುಡುಕುವಂಥವನು ಕಟ್ಟುವಂಥವನು. ಒಂದರ ಕಟ್ಟುವಿಕೆ ಮತ್ತೊಂದರ ಹೊಸತನಕ್ಕೆ ಕಾರಣವಾಗುತ್ತದೆ. ಬಸವಯ್ಯ ಮೇಲಿಂದ ಮೇಲೆ ಬಳಸುವ ಶರೀರ ಮತ್ತು ಮನೆಯ ರೂಪಕಗಳು ಒಮ್ಮೆಗೆ ಬೆಳೆದು ಮುಗಿದು ಹೋಗುವಅನಿಶ್ಚಿತ ರೂಪಕಗಳಲ್ಲ. ಇಂಥ ಸಾಧಕ ಮೋಕ್ಷಸಾಧನೆ ಅಥವಾ ಕೈವಲ್ಯ ಪಥಕ್ಕೆ ಏರುವುದು ಎಂದರೆ ಅದೊಂದು ತಿಳಿವಳಿಕೆಯ ವಿಸ್ತಾರದ ಹಂತ. ಆ ಹಂತದಿಂದ ಮುಂದಿನ ಭವಿಷ್ಯವನ್ನು ಬದುಕನ್ನು ನಿಂತು ನೋಡುವ ಕ್ರಿಯೆ ಆರಂಭವಾಗುತ್ತದೆ. ಅದೊಂದು ನಿಲುಗಡೆ ಅಲ್ಲ ಅದೊಂದು ಸೋಪಾನ. ಕಂಡಷ್ಟೆ ಸತ್ಯವಲ್ಲ ಸತ್ಯ ಇನ್ನೂ ಮುಂದೆ ಇದೆ ಎನ್ನುವ ಹಂಬಲ ಬೆಳೆಯುವ ಒಂದು ನೆಲೆ. ಪ್ರಯೋಗಶೀಲ ಮನಸ್ಸಿಗೆ ಒಂದು ಆಕೃತಿಯ ಸಂಪೂರ್ಣತೆಯೇ ಮುಕ್ತಾಯವಲ್ಲ. ಅದೊಂದು ಆರಂಭ. ಹೀಗಾಗಿ ಬಾಚಿಕಾಯಕದ ಬಸವಯ್ಯನಂತಹ ಸೃಷ್ಟಿಶೀಲ ವಚನಕಾರ ನನಗೆ ಮುಖ್ಯವಾಗುವುದು ಈ ಕಾರಣಗಳಿಗಾಗಿ.

ಬರೀ ಆಲಯ ನಿರ್ಮಾಣ ಆಥವಾ ಶರೀರ ಸಂಸ್ಕಾರವೇ ಆತನ ಕೆಲಸವಲ್ಲ. ಅದರ ಸಶಕ್ತ ನೆಲೆಗಳನ್ನು ಗುರುತಿಸಿ ಕ್ರಿಯಾತ್ಮಕ ಗೊಳಿಸುವುದು. ಅದರ ಕೈಗೆ ಬಾಚಿ, ಉಳಿ, ಕೊಡತಿಯಂಥ ಹರಿತ ಆಯುಧಗಳನ್ನು ನೀಡಿ ಪುನರ್ ನಿರ್ಮಾಣ ಕ್ರಿಯೆಗೆ ಹಚ್ಚುವುದು. ಇಲ್ಲಿ ದೇಹದ ಜಡತ್ವವನ್ನೇ ಆರಾಧಿಸದೆ ಅದರ ಕ್ರಿಯಾಶೀಲ ನೆಲೆಗಳನ್ನು ಗುರುತಿಸುತ್ತಾನೆ. ಈ ಕ್ರಿಯೆ ಸ್ಥಗಿತ ಅಥವಾ ಕೊನೆ ಎನ್ನುವ ಪರಿಕಲ್ಪನೆಗಳಿಂದ ಮುಕ್ತವಾಗಿ ಸಾಗುವಂಥದು. ಸೃಷ್ಟಿ ಮತ್ತು ವಿಕಸನ ಬಸವಯ್ಯನ ತಾತ್ವಿಕ ದರ್ಶನದ ಪ್ರಮುಖ ಅಂಶ.

ಬಾಚಿಕಾಯಕದ ಬಸವಯ್ಯನ ಒಟ್ಟು ತಾತ್ವಿಕತೆಯನ್ನು ವಿಶ್ವಕರ್ಮ ದಾರ್ಶನಿಕ ಪರಂಪರೆಯೊಳಗಡೆಯಿಂದ ಕಟ್ಟಿಕೊಳ್ಳಲಾಗಿದೆ. ವಿಶ್ವಕರ್ಮ ದಾರ್ಶನಿಕತೆಯ ಪ್ರಮುಖ ಲಕ್ಷಣವೇ ಚಲನಶೀಲತೆ. ಸೃಷ್ಟಿ ಮತ್ತು ವಿಕಾಸ ಅದರ ಪ್ರಮುಖ ತತ್ವ. ಇಹದ ವಾಸ್ತವ ಪ್ರಜ್ಞೆ ಮತ್ತು ಪರಿಕರಗಳು ಅದರ ಸಾಧನೆಯ ಅಂಗಳ. ಶಿಲ್ಪಕಾರ, ಬಡಿಗ, ಕಮ್ಮಾರ, ಅಕ್ಕಸಾಲಿಗ, ಕಂಚುಗಾರ ಈ ಉದ್ಯೋಗಗಳೇ ರೂಪದಿಂದ ನಿರೂಪ ನಂತರ ಸ್ವರೂಪವನ್ನು ಕಾಣುವಂಥವು. ಕಲ್ಲಿನ ಮೂರ್ತಿಯಾದರೂ ಕಟ್ಟಿಗೆಯ ಆಲಯವಾದರೂ ಕಬ್ಬಿಣದ ಆಯುಧವಾದರೂ ಅದು ಎಂದೂ ಸ್ವರೂಪವನ್ನು ನಿರಾಕರಿಸುವುದಿಲ್ಲ.ಮೂರ್ತಿ ಕೆತ್ತಿದ ಮೇಲೆ ಅದು ಕಾಣದ ದೇವರಾದರೂ ಮನುಷ್ಯ ಪ್ರಜ್ಞೆಯಲ್ಲಿ ಆ ಶಿಲೆಯೇ ದೈವೀ ಸ್ವರೂಪವನ್ನು ಪಡೆದಿರುವುದು ಗಮನಾರ್ಹ. ಜನಪದ ದೈವಗಳಾಗಿ ಕಾಣುವ ದುಂಡುಗಲ್ಲುಗಳು ಇದಕ್ಕೆ ಒಳ್ಳೆಯ ಉದಾಹರಣೆ ನಿರೂಪವನ್ನು ಸ್ವರೂಪದ ಮೂಲಕ ಕಂಡುಕೊಳ್ಳುವ ಗುಣ ಇಲ್ಲಿ ಕಾಣುತ್ತದೆ. ಸ್ವರೂಪ ಬರೀ ಸ್ಥಗಿತ ಪ್ರತಿಮೆಯಲ್ಲ. ಅದೊಂದು ಗತಿಶೀಲ ಗುಣವನ್ನು ಪಡೆದ ಜೀವಂತ ನಿದರ್ಶನ.

ಈ ಅಧ್ಯಯನದಲ್ಲಿ ಕಸುಬುದಾರ ವರ್ಗಗಳೂ ಕಂಢುಕೊಂಡ ಹಾಗೂ ಕಟ್ಟಿಕೊಂಡ ಪಾರಮಾರ್ಥಿಕ ನೆಲೆಗಳನ್ನು ಗ್ರಹಿಸಲು ಪ್ರಯತ್ನಿಸಲಾಗಿದೆ. ವೀರಶೈವ ದರ್ಶನವನ್ನು ಮೀರಿ ಇಲ್ಲಿನ ತಾತ್ವಿಕತೆ ಬೆಳೆಯುತ್ತದೆನ್ನುವುದು ವಿಶೇಷ. ಬಾಚಿಕಾಯಕದ ಬಸವಯ್ಯನನ್ನು ಆತನ ವೃತ್ತಿ ಮತ್ತು ಜಾತಿ ನೆಲೆಯಲ್ಲಿ ಗ್ರಹಿಸುವ ಇಲ್ಲಿನ ವಿಚಾರಗಳು ಕೆಲವರಿಗೆ ಸೀಮಿತವಾಗಿ ಕಾಣಬಹುದು. ಆದರೆ ಹಾಗೆ ಗ್ರಹಿಸುವಲ್ಲಿಯೇ ಆತ ಪ್ರತಿನಿಧಿಸುವ ವೃತ್ತಿ ಮತ್ತು ಜನಾಂಗದ ಸಾಂಸ್ಕೃತಿಕ ಸಂಕಥನವೊಂದನ್ನು ಕಟ್ಟಿಕೊಳ್ಳಲು ಸಾಧ್ಯವಾಗಿರುವುದು ಇಲ್ಲಿನ ಪ್ರಮುಖ ಅಂಶ. ಬಸವಯ್ಯನ ವಚನಗಳೇ ಅಂಥ ಅನನ್ಯ ಮಾದರಿಯೊಂದನ್ನು ಕಟ್ಟಿಕೊಟ್ಟು ಅಧ್ಯಯನಕ್ಕೆ ಪ್ರೇರೇಪಿಸುತ್ತವೆ.

ಬಾಚಿಕಾಯಕದ ಬಸವಯ್ಯನೊಂದಿಗೆ ಅದೇ ಜನವರ್ಗದ ಹಾವಿನಹಾಳ ಕಲ್ಲಯ್ಯ ಕಾಮಾಟದ ಭೀಮಣ್ಣ, ತಿಂಥಿಣಿ ಮೌನೇಶ್ವರ ಇವರನ್ನು ಇಟ್ಟು ನೋಡಲಾಗಿದೆ. ಹಾಗೆ ಉಳಿದ ಕಸುಬುದಾರ ವರ್ಗಗಳ ಮೂಲಕವು ಪರಿಭಾವಿಸಲಾಗಿದೆ. ಆ ಮೂಲಕ ಪಾಂಚಾಳ ವೃತ್ತಿ ಮೂಲವಾದ ಸಂವೇದನೆಗಳನ್ನು ಗುರುತಿಸಿಕೊಳ್ಳಲಾಗಿದೆ. ಕಮ್ಮಾರ ವೀರಭದ್ರಾಚಾರಿಯ ಕಥೆಯೊಂದಿಗೆ ಆರಂಭವಾಗುವ ಈ ಬರಹವು ಕಾಲದ ಹಂಗನ್ನು ಮೀರಿ ಹಲವು ಸಾಂಸ್ಕೃತಿಕ ಅನುಸಂಧಾನಗಳೊಂದಿಗೆ ವಾಗ್ವಾದಗಳಿಗೆ ತಲೆಗೊಡುತ್ತದೆ. ಬಡಿಗ ಕಮ್ಮಾರರು ಊರಿಗೆ ಅನಿವಾರ್ಯವಾದ ಸಂದರ್ಭಗಳನ್ನು ಬಸವಯ್ಯ ಹಾಗೂ ಮೌನಯ್ಯನಿಂದ ಹಿಡಿದು ವೀರಭದ್ರಾಚಾರಿಯವರೆಗೂ ಗುರುತಿಸಿಕೊಳ್ಳಲಾಗಿದೆ. ದೇಹ ಮತ್ತು ಕ್ರಿಯೆಗೆ ಮೈಗೊಡುವ ಸಮುದಾಯವು ಸಾಂಸ್ಕೃತೀಕರಣದ ಸೆಳೆತಕ್ಕೆ ಬಿದ್ದು ದೇಹ ಬುದ್ಧಿಗಳಲ್ಲಿ ವಿಘಟನೆಗೊಳ್ಳುವ ನಿಷ್ಕ್ರಿಯಗೊಳ್ಳುವ ಸಂಗತಿಗಳನ್ನು ವೀರಭದ್ರಾಚಾರಿಯ ಮೂಲಕ ಕಂಡುಕೊಳ್ಳಲಾಗಿದೆ. ಒಟ್ಟಿನಲ್ಲಿ ಪಾಂಚಾಳ ಜನವರ್ಗ ಚರಿತ್ರೆಯ ವಿವಿಧ ಕಾಲಘಟ್ಟದಲ್ಲಿ ಪಡೆದುಕೊಂಡ ಸ್ಥಾನಮಾನಗಳನ್ನು ಸ್ಥಿತ್ಯಂತರಗೊಂಡ ಸಂಗತಿಗಳನ್ನು ಸೂಕ್ಷ್ಮವಾಗಿ ಗ್ರಹಿಸುವ ಪ್ರಯತ್ನ ಮಾಡಲಾಗಿದೆ. ಒಟ್ಟಿನಲ್ಲಿ ಬಾಚಿಕಾಯಕದ ಬಸವಯ್ಯ ಬಹುದೊಡ್ಡ ತಾತ್ವಿಕ ಮೀಮಾಂಸಕ, ಸೃಷ್ಟಿಶೀಲ ಅದ್ವಯವಾದಿ ದಾರ್ಶನಿಕ ಎಂಬುದು ಮಹತ್ವದ ಅಂಶ.

ವಚನ ಸಾಹಿತ್ಯದ ಮೇಲೆ ನಡೆದ ಬಹಳಷ್ಟು ಅಧ್ಯಯನಗಳು ಇಪ್ಪತ್ತನೇ ಶತಮಾನದ ಬಹುಮುಖ್ಯ ಸೈದ್ಧಾಂತಿಕ ಮಾದರಿಯಾದ ಏಕೀಕೃತ ಭಾರತೀಯತೆಯ ಮೂಸೆಯಲ್ಲಿ ಮೂಡಿಬಂದಂಥವು. ಹೀಗಾಗಿ ಎಲ್ಲ ಭಿನ್ನ ಸ್ವರಗಳನ್ನು ಪ್ರತ್ಯೇಕ ಅಸ್ತಿತ್ವವನ್ನು ಒಂದು ವಿಶಾಲ ಏಕೀಕೃತ ಚೌಕಟ್ಟಿನೊಳಗೆ ಅಡಗಿಸುವ ಪ್ರಯತ್ನ ಎದ್ದುಕಾಣುತ್ತದೆ. ಈ ಏಕೀಕರಣದ ಸೈದ್ಧಾಂತಿಕತೆ ಎಲ್ಲಾ ಮಹತ್ವದ ಚಿಂತಕರನ್ನು ಕಾಡಿದೆ. ಈ ಒತ್ತಡ ವಚನಸಾಹಿತ್ಯ ಅಷ್ಟೇ ಏಕೆ ಇಡೀ ಭಾರತೀಯ ದರ್ಶನಗಳೆಲ್ಲವನ್ನು ಒಂದು ವಿರಾಟ್ ಐಕ್ಯತೆಯೊಳಗೇ ಸಂಯೋಜಿಸಿದೆ. ಇದು ಸಾಂಸ್ಕೃತಿಕ ಮತ್ತು ದಾರ್ಶನಿಕ ಐಕ್ಯತೆಗಳೆರಡನ್ನೂ ಒಂದೇ ಎಂದು ಪರಿಭಾವಿಸುವ ಮಟ್ಟಿಗೆ ಮುಂದುವರಿಯಿತು. ಇವನ್ನೆಲ್ಲ ಮೀರಿ ಬಸವಯ್ಯನನ್ನು ಕಟ್ಟಿಕೊಳ್ಳುವ, ಆತನೊಂದಿಗೆ ಸಾಂಸ್ಕೃತಿಕ ಮುಖಾಮುಖಿ ಮಾಡುವ ಕೆಲಸವನ್ನು ತಕ್ಕಮಟ್ಟಿಗೆ ಇಲ್ಲಿ ಮಾಡಲಾಗಿದೆ. ಇದರಿಂದ ಬಸವಯ್ಯನನ್ನು ಒಂದು ಹೊಸ ತಾತ್ವಿಕ ಭಿತ್ತಿಯಲ್ಲಿಟ್ಟು ವಿಶ್ಲೇಷಿಸಿಕೊಳ್ಳಲು ಸಹಕಾರಿಯಾಗಿದೆ.