ಆಧುನಿಕ ಪೂರ್ವ ಕರ್ನಾಟಕದ ಸಾಂಸ್ಕೃತಿಕ ವಿದ್ಯಮಾನಗಳನ್ನು ತಿಳಿದುಕೊಳ್ಳುವಲ್ಲಿ ಹಸ್ತಪ್ರತಿಗಳು ಬಹುಮುಖ್ಯ ಆಕರಗಳಾಗಿವೆ. ಹಸ್ತಪ್ರತಿ ಅಧ್ಯಯನ ತನ್ನ ತೆಕ್ಕೆಗೆ ಕಾಲದಿಂದ ಕಾಲಕ್ಕೆ ಹೊಸ ತಿಳಿವಳಿಕೆಯನ್ನು ಜೋಡಿಸಿಕೊಳ್ಳುತ್ತ ಬಂದಿದೆ. ಹೀಗಾಗಿ ಮೋಗ್ಲಿಂಗ್,ರೈಸ್, ಕಿಟೆಲ್‌ರಂತಹ ಪಂಡಿತರು ಆರೂಢಿದ ಈ ವಿದ್ವತ್ ಕ್ಷೇತ್ರದಲ್ಲಿ ಮುಂದಿನ ಪಂಡಿತರಿಂದ ಕಾಲದಿಂದ ಕಾಲಕ್ಕೆ ಹೊಸಬೆಳೆಯನ್ನು ತೆಗೆಯುತ್ತ ಬರಲಾಯಿತು. ಅಂದರೆ ಹಸ್ತಪ್ರತಿ ಶಾಸ್ತ್ರ ಪಳಿಯುಳಿಕೆ ಶಾಸ್ತ್ರವಾಗದೆ ಬದಲಾಗುತ್ತಿರುವ ಕಾಲಮಾನದಲ್ಲಿ ಎದುರಾಗುತ್ತಿರುವ ಆಹ್ವಾನಕ್ಕೆ ತಕ್ಕಂತೆ ತನ್ನ ಗತಿಯನ್ನು ಬದಲಾಯಿಸಿಕೊಳ್ಳುತ್ತ ಬಂದಿರುವುದು ಗಮನಿಸತಕ್ಕ ಅಂಶವಾಗಿದೆ.

ಈ ನಿಟ್ಟಿನಲ್ಲಿ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿಶಾಸ್ತ್ರ ವಿಭಾಗವು ಕಳೆದ ದಶಕಗಳಿಂದ ವಿಶಿಷ್ಟ ಸಾಧನೆಗಳನ್ನು ಮಾಡಿದೆ. ವಿಭಾಗದ ಅಧ್ಯಯನ ಯೋಜನೆಗಳು ಎರಡು ಮಾದರಿಯವು.ಒಂದು ಹಸ್ತಪ್ರತಿ, ಗ್ರಂಥಸಂಪಾದನೆ ಶಾಸ್ತ್ರಕ್ಕೆ ಪೂರಕವಾಗುವ, ಹಸ್ತಪ್ರತಿಗಳ ಆಕರ, ಸ್ವರೂಪವನ್ನು ಕುರಿತವು. ಇನ್ನು ಕೆಲವು ಗ್ರಂಥಸಂಪಾದನೆಯನ್ನು ಕುರಿತಂತೆ ಸೈದ್ಧಾಂತಿಕ ಚರ್ಚೆಯನ್ನು ಬೆಳೆಸಿದವುಗಳು. ವಿಭಾಗವು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕ್ಷೇತ್ರಕಾರ‍್ಯಕೈಕೊಂಡು ತಾಳೆಗರಿ, ಕೋರಿಕಾಗದ, ಕಡತ ಹಾಗೂ ಆಧುನಿಕ ಕಾಗದ ರೂಪದ ನಾಲ್ಕುಸಾವಿರ ಹಸ್ತಪ್ರತಿಗಳನ್ನು ಸಂಗ್ರಹಿಸಿದೆ;ಸಂಗ್ರಹಿಸಿದ ಹಸ್ತಪ್ರತಿಗಳನ್ನು ಶುದ್ಧೀಕರಿಸಿ ವಿವರಣಾತ್ಮಕ ಸೂಚಿ ಸಿದ್ದಪಡಿಸುವುದು. ಈಗಾಗಲೇ (೧೬೦೦ ಕಟ್ಟುಗಳ)ನಾಲ್ಕು ವಿವರಣಾತ್ಮಕ ಸೂಚಿ ಸಂಪುಟಗಳು ಪ್ರಕಟವಾಗಿವೆ. ಹಲವು ಅಪ್ರಕಟಿತ ಕೃತಿಗಳು ಪ್ರಕಟವಾಗಿವೆ.ಇದು ವಿಭಾಗದ ಮಹತ್ವದ ಸಾಧನೆ. ಈ ಸಂದರ್ಭದಲ್ಲಿ ವಿಭಾಗದ ಅಧ್ಯಾಪಕರ ನಿರಂತರ ಶ್ರಮ ಮತ್ತು ಶ್ರದ್ಧೆಯನ್ನು ನೆನೆದಷ್ಟುಸಾಲದು.

ವಿಭಾಗವು ತನ್ನ ಅಧ್ಯಯನ ಚಟುವಟಿಕೆಗಳಲ್ಲಿ ಹೊಸರೀತಿಯ ಸಾಧ್ಯತೆಗಳನ್ನು, ನೂತನ ಉಪಕ್ರಮಗಳನ್ನು ರೂಪಿಸಿಕೊಳ್ಳುತ್ತಿದೆ.ತಜ್ಞವಲಯದಲ್ಲಿ ಈ ಕ್ಷೇತ್ರದ ಎಲ್ಲೆಯನ್ನು ವಿಸ್ತರಿಸಲಿಕ್ಕೆ,ನಾಡಿನ ಸಂವೇದನಶೀಲ ಬರಹಗಾರರ ವಿದ್ವತ್‌ನ್ನು ಬಳಸಿಕೊಂಡು ಪ್ರತಿವರ್ಷ ‘ಅಖಿಲ ಕರ್ನಾಟಕ ಹಸ್ತಪ್ರತಿ ಸಮ್ಮೇಳನ’ ಏರ್ಪಡಿಸಲಾಗದೆ.ಅಲ್ಲಿ ಮಂಡಿತವಾದ ಚಿಂತನೆ,ಸಂವಾದಗಳು ‘ಹಸ್ತಪ್ರತಿ ವ್ಯಾಸಂಗ ಮಾಲೆ’ಯಲ್ಲಿ ಪ್ರಕಟವಾಗುತ್ತವೆ. ಹಸ್ತಪ್ರತಿ, ಗ್ರಂಥಸಂಪಾದನೆ, ಪ್ರಾಚೀನ ಸಾಹಿತ್ಯಕ್ಕೆ ಸಂಬಂಧ ಪಟ್ಟಂತೆ ‘ಹಸ್ತಪ್ರತಿ ಅಧ್ಯಯನ’ ಎಂಬ ಅರ್ಧ ವಾರ್ಷಿಕ ಸಂಪತ್ರಿಕೆಯು ಪ್ರಕಟವಾಗುತ್ತಿದೆ. ಈ ಮೂಲಕ ಗ್ರಂಥಸಂಪಾದನೆಯ ಸಿದ್ಧ ಮಾದರಿಗಳನ್ನು ಮರುಪರಿಶೀಲಿಸಿ ಕನ್ನಡದ್ದೇ ಆದ ಅಧ್ಯಯನದ ಮಾದರಿಗಳನ್ನು, ಮಾರ್ಗದರ್ಶಕ ಸೂತ್ರಗಳನ್ನು ರೂಪಿಸಿಕೊಳ್ಳಲು ವಿಭಾಗ ಯತ್ನಿಸುತ್ತಿದೆ.

ವಿಭಾಗವು ಅಕಾಡೆಮಿಕ್ ಯೋಜನೆಗಳ ಜೊತೆಗೆ ಹಸ್ತಪ್ರತಿಗಳ ಸ್ವರೂಪ, ಸಂರಕ್ಷಣೆ, ಮಹತ್ವ ಕುರಿತು ಆಸಕ್ತರಿಗೆ, ವಿದ್ಯಾರ್ಥಿಗಳಿಗೆ ಹಸ್ತಪ್ರತಿಗಳ ಬಗ್ಗೆ ಆಸಕ್ತಿ, ಅಭಿರುಚಿ ಕುದಿರಿಸಲು ಹಲವು ಜನಮುಖಿ ಕಾರ‍್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅಂತಹುಗಳಲ್ಲಿ ‘ಹಸ್ತಪ್ರತಿ ತರಬೇತಿ ಮತ್ತು ಜಾಗೃತಿ ಶಿಬಿರ’, ಹಸ್ತಪ್ರತಿಗಳೂ ಸೇರಿದಂತೆ ಪಾರಂಪರಿಕ ಸಾಂಸ್ಕೃತಿಕ ಆಕರಗಳ ಮಹತ್ವವನ್ನು ಬಿತ್ತರಿಸಲು ‘ಐತಿಹಾಸಿಕ ಪರಂಪರೆ ಉಳಿಸಿ ಸಪ್ತಾಹ’ ಎಂಬ ಉಪನ್ಯಾಸ ಕಾರ‍್ಯಕ್ರಮಗಳನ್ನು ಹಾಕಿಕೊಂಡಿದೆ. ಕನ್ನಡ ಅಧ್ಯಾಪಕರಿಗೆ ಹಳಗನ್ನಡ ಸಾಹಿತ್ಯ ಕುರಿತು ಆಸಕ್ತಿ ಬೆಳೆಸಿಕೊಳ್ಳಲು ‘ಹಳಗನ್ನಡ ಅಧ್ಯಯನ ಶಿಬಿರ’ ರೂಪಿಸಿಕೊಂಡಿದೆ. ಈ ಮೂಲಕ ನಮ್ಮೆದುರು ನುಗ್ಗಿ ಬರುತ್ತಿರುವ ಜಾಗತೀಕರಣಕ್ಕೆ ಪ್ರತಿರೋಧವಾಗಿ ನಮ್ಮ ದೇಸಿ ಜ್ಞಾನಪರಂಪರೆಯನ್ನು ಮರುಶೋಧಿಸಿ ಆ ಮೂಲಕ ಕುಸಿಯುತ್ತಿರುವ ದೇಸಿ ಸಂಸ್ಕೃತಿಯ ಬೇರುಗಳನ್ನು ಬಲಗೊಳಿಸಿಕೊಳ್ಳಬೇಕಾಗಿದೆ. ವಿಭಾಗ ಈ ನಿಟ್ಟಿನಲ್ಲಿ ಗಂಭೀರ ಚಿಂತನೆ ನಡೆಸಿದೆ.

ಹಸ್ತಪ್ರತಿಗಳ ಸಂರಕ್ಷಣೆಗೆ ವಿಭಾಗವು ಕನ್ನಡ ಹಸ್ತಪ್ರತಿಗಳನ್ನು ಗಣಕೀಕರಣಕ್ಕೆ (ಡಿಜಿಟಲೈಸೇಶನ್) ಅಳವಡಿಸಿ ‘ಸಿಡಿ’ ಗಳಲ್ಲಿ ಸ್ಥಿರೀಕರಿಸುವ ವಿಧಾನವನ್ನು ಬಳಕೆಗೆ ತಂದಿದೆ.ಇದರ ಫಲವಾಗಿ ಅಕ್ಷರದ ಸ್ಫುಟತ್ವ ಹೆಚ್ಚುತ್ತದೆ. ಆ ಮೂಲಕ ಓದಿಗೆ ಹೆಚ್ಚು ಅನುಕೂಲವಾಗುತ್ತದೆ. ಸಂಪಾದಕನ ಕಣ್ತಪ್ಪು, ಕೈತಪ್ಪುಗಳ ಫಲವಾಗಿ ನುಸಳಬಹುದಾದ ‘ಸ್ಖಾಲಿತ್ಯ’ಗಳ ಪ್ರಮಾಣ ತಗ್ಗಬಹುದು. ಅಲ್ಲದೆ ಒಂದು ಕೃತಿಗೆ ಸಂಬಂಧಿಸಿದ ಎಲ್ಲ ಹಸ್ತಪ್ರತಿಗಳ ಮಾಹಿತಿ ಒಂದೆಡೆ ಲಭ್ಯವಾಗುವಂತೆ ‘ಹಸ್ತಪ್ರತಿಸೂಚಿಗಳ ಸೂಚಿ ಯೋಜನೆ’ಯನ್ನು ವಿಭಾಗ ಸಿದ್ಧಪಡಿಸುತ್ತಿದೆ. ವಿಭಾಗವು ಈ ಎಲ್ಲ ರಚನಾತ್ಮಕ ಯೋಜನೆಗಳನ್ನು ಅನುಷ್ಠಾನಗೊಳಿಸುವುದರ ಮೂಲಕ ವಿಶ್ವವಿದ್ಯಾಲಯ ಧನಸಹಾಯ ಆಯೋಗ, ರಾಷ್ಟ್ರೀಯ ಹಸ್ತಪ್ರತಿ ಮಿಶನ್ ಮೊದಲಾದ ಸಂಸ್ಥೆಗಳ ಮನ್ನಣೆಗೆ, ವಿದ್ವಜ್ಜನರ ಪ್ರೀತಿಗೆ ಪಾತ್ರವಾಗಿದೆ.ಹೀಗೆ ವಿಭಾಗವು ವೈಚಾರಿಕ ನೆಲೆಯಲ್ಲಿ ತನ್ನದೇ ಆದ ವಿಧಾನವನ್ನು ರೂಪಿಸಿಕೊಂಡು ಮುನ್ನಡೆದಿದೆ. ವಿಭಾಗದ ಅಧ್ಯಯನ ಯೋಜನೆಗಳು ‘ಹಸ್ತಪ್ರತಿಶಾಸ್ತ್ರ ವಿಭಾಗ ಮಾಲೆ’ಯ ಮೂಲಕ ಪ್ರಕಟವಾಗುತ್ತಿವೆ. ಈ ಮಾಲೆಯ ಮೂವತ್ತೆರಡನೆಯ ಪುಸ್ತಕವಾಗಿ ಡಾ.ವೀರೇಶಬಡಿಗೇರ ಅವರ ‘ಬಾಚಿಕಾಯಕದ ಬಸವಯ್ಯ :ವೃತ್ತಿ ಮತ್ತು ತತ್ತ್ವಮೀಮಾಂಸೆ’ ಕೃತಿಯು ಪ್ರಕಟಗೊಳ್ಳುತ್ತಿದೆ.

ಡಾ.ವೀರೇಶ ಬಡಿಗೇರ ಅವರು ಹಸ್ತಪ್ರತಿಶಾಸ್ತ್ರ ವಿಭಾಗದ ಪ್ರಾಧ್ಯಾಪಕರು. ಹಸ್ತಪ್ರತಿ ಅಧ್ಯಯನ ಚಿಂತನಶೀಲ ಬರಹಗಾರರು. ಶ್ರೀಯುತರು ಈವರೆಗೆ ಉಪೇಕ್ಷಿತವಾದ ಬಾಚಿಕಾಯಕದ ಬಸವಯ್ಯನ ಅಭಿವ್ಯಕ್ತಿಯಾದ ವಚನಗಳನ್ನು ವೈಚಾರಿಕ ನೆಲೆಯಲ್ಲಿ ವ್ಯಾಖ್ಯಾನಿಸಿದ್ದಾರೆ; ವಿಶ್ಲೇಷಿಸಿದ್ದಾರೆ. ಆತನ ಅನನ್ಯತೆಯನ್ನು ಗುರುತಿಸಿರುವುದು ಈ ಕೃತಿಯ ಹೊಸತನ. ವಚನಗಳು ಚಲನಶೀಲ ಪಠ್ಯಗಳಾಗಿರುವುದರಿಂದ ಹೊಸ ಶೋಧಗಳತ್ತ ಈ ಅಧ್ಯಯನ ತೋರ್ಬೆರಳೂ ಆಗುತ್ತದೆ. ಈ ಕೃತಿ ನಮಗಿರುವ ವಚನ ಸಾಹಿತ್ಯದ ಅಧ್ಯಯನದ ತಿಳಿವಳಿಕೆಯನ್ನು ವಿಸ್ತಾರಗೊಳಿಸುತ್ತದೆ. ಇಂತಹ ಅಪೂರ್ವ ಕೃತಿಯನ್ನು ರಚಿಸಿದ ಗೆಳೆಯರಾದ ಡಾ.ಬಡಿಗೇರ ಅವರಿಗೆ ಹಾರ್ದಿಕ ಅಭಿನಂದನೆಗಳು. ಇಂತಹ ಕೃತಿಯನ್ನು ಪ್ರಕಟಿಸಲು ಪ್ರೋತ್ಸಾಹ, ಮಾರ್ಗದರ್ಶನ ನೀಡಿದ ಮಾನ್ಯಕುಲಪತಿಗಳಾದ ಡಾ. ಬಿ. ಎ. ವಿವೇಕ ರೈ ಅವರಿಗೆ ಮಾನ್ಯ ಕುಲಸಚಿವರಾದ ಶ್ರೀ ವಿ. ಶಂಕರ ಅವರಿಗೆ, ಭಾಷಾನಿಕಾಯದ ದೀನರೂ ಪ್ರಸಾರಾಂಗದ ನಿರ್ದೇಶಕರೂ ಆದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಅವರಿಗೆ,ಅಧ್ಯಯನಾಂಗದ ನಿರ್ದೇಶಕರಾದ ಡಾ.ಟಿ.ಆರ್.ಚಂದ್ರಶೇಖರ್‌ಅವರಿಗೆ ವಿಭಾಗ ಋಣಿಯಾಗಿದೆ.

ಡಾ.ಎಸ್.ಎಸ್.ಅಂಗಡಿ
ಮುಖ್ಯಸ್ಥರು