ಕನ್ನಡ ಸಾಹಿತ್ಯ ಸಂದರ್ಭದಲ್ಲಿ ದಲಿತ ಸಂವೇದನೆ, ಮಹಿಳಾ ಸಂವೇದನೆ, ಮುಸ್ಲಿಂ ಸಂವೇದನೆ ಎನ್ನುವ ವಿವಿಧ ನಿರ್ಲಕ್ಷಿತ ಜನ ಬದುಕಿನ ವಿವರಗಳು ಬಹುಮುಖ್ಯ ಸ್ಥಾನ ಪಡೆದದ್ದು ಇತ್ತೀಚಿನ ದಶಕಗಳಲ್ಲೇ. ಇಂತಹ ವಿವರಗಳು ಆಯಾ ಜನ ಬದುಕಿನ ಸಾಂಸ್ಕೃತಿಕ ಮಹತ್ವತೆಯನ್ನರಿಯಲು ಸಹಾಯಕವಾಗುವಂಥವು ಇಂತಹ ಅಲಕ್ಷಿತ ಸೆಳಕುಗಳಿಂದಲೇ ಇಂದು ಚರಿತ್ರೆಯನ್ನು ಪುನರಾವಲೋಕನ ಮಾಡುವ,ಮುರಿದು ಕಟ್ಟಿಕೊಳ್ಳುವ ಕೆಲಸಗಳು ಮೊದಲಾಗುತ್ತಿರುವುದು ಅಷ್ಟೇ ಸತ್ಯ. ಬಡಿಗ, ಕಮ್ಮಾರ, ಲೋಹಕಾರ, ಶಿಲ್ಪಕಾರ, ಅಕ್ಕಸಾಲಿ ಹೀಗೆ ಐದು ವೃತ್ತಿಗಳನ್ನು ಮಾಡುವ ಮೂಲಕ ಪಾಂಚಾಳರೆಂದು ಗುರುತಿಸಿಕೊಳ್ಳುವ ಈ ಕಸುಬುದಾರ ವರ್ಗಗಳ ಬದುಕಿನ ವಿವರಗಳು ಕನ್ನಡ ಸಾಹಿತ್ಯದಲ್ಲಿ ಆಂಶಿಕವಾಗಿ ಕಾಣಿಸಿಕೊಳ್ಳುವುದನ್ನು ಗಮನಿಸಬೇಕು. ಎಲ್ಲೂ ಪ್ರಧಾನವಾಗಿ ಒಂದು ತಾತ್ವಿಕ ಚರ್ಚೆಯ ಮಟ್ಟದಲ್ಲಿಈ ಸಂವೇದನೆಗಳು ಬಳಕೆಯಾಗಿಲ್ಲ.

ಲೇಖಕನಾದವನಿಗೆ ತಾನು ಹುಟ್ಟಿ ಬೆಳೆದ ಸಮುದಾಯ, ಸಂಸ್ಕೃತಿ, ಪರಂಪರೆಗಳ ಬಗ್ಗೆ ಆತ್ಮೀಯವಾದ ಸಂಬಂಧ ಇರಬೇಕಾಗುತ್ತದೆ. ತನ್ನ ಸಂಸ್ಕೃತಿಯೊಂದಿಗೆ ಇಟ್ಟುಕೊಳ್ಳುವ ಸೃಜನಶೀಲ ಒಡನಾಟ ಆ ಸಂಸ್ಕೃತಿಯ ಅರ್ಥಪೂರ್ಣ ಹಾಗೂ ಜೀವಂತ ನೆಲೆಗಳ ಶೋಧನೆಗೆ ಹಾಗೂ ವಿಶ್ಲೇಷಣೆಗೆ ದಾರಿಯಾಗುತ್ತದೆ.ಹೊಸ ಅರ್ಥಗಳಿಗೆ ತಕ್ಕಂತೆ ಅವನ್ನು ಬಡಿದು ಬಗ್ಗಿಸುವ ಮೂಲಕ ತನ್ನ ಗತದ ಚಲನಶೀಲ ನೆಲೆಗಳನ್ನು ವರ್ತಮಾನದ ಹಂಗಿನೊಂದಿಗೆ ಜೀವಂತವಾಗಿ ಉಳಿಸಲು ಸಾಧ್ಯವಾಗುತ್ತದೆ.ಬಹಳ ಮುಖ್ಯವಾಗಿ ನಾನು ಕೂಡ ಪಾಂಚಾಳ ಕುಲದಲ್ಲಿ ಹುಟ್ಟಿ ಈ ಐದು ವೃತ್ತಿಗಳ ಪರಿಚಯವುಳ್ಳವನು. ಅದರಲ್ಲೂ ಬಡಿಗ ಮತ್ತು ಕಂಬಾರ ವೃತ್ತಿಗಳು ನನ್ನ ವ್ಯಕ್ತಿತ್ವವನ್ನು ರೂಪಿಸಿದಂತವು. ಕಾರಣ ಬದುಕಿನಲ್ಲಿ ಪಡೆದ ತಿಳುವಳಿಕೆ ಮತ್ತು ಅನುಭವಗಳು ಓದಿನಲ್ಲಿ ಪಡೆಯುವ ಅನುಭವ ತಿಳುವಳಿಕೆಗಳನ್ನು ಅಡ್ಡಹಾದು ನಮ್ಮ ಸಂವೇದನೆಗಳನ್ನು ಹರಿತಗೊಳಿಸುತ್ತಿರುತ್ತವೆ. ಹೀಗಾಗಿ ಸಹಜವಾಗಿ ಈ ವೃತಿ ಸಂವೇದನೆಗಳನ್ನು ಸಾಹಿತ್ಯ ಮತ್ತು ಸಾಹಿತ್ಯೇತರ ವಿವರಗಳಲ್ಲಿ ಹುಡುಕುವ ಮತ್ತು ಕಟ್ಟಿಕೊಳ್ಳುವ ಹವಣಿಕೆವುಳ್ಳವನು ನಾನು. ಹನ್ನೆರಡನೇ ಶತಮಾನದಲ್ಲಿ ಬರುವ ಬಾಚಿಕಾಯಕದ ಬಸವಯ್ಯ ಎನ್ನುವ ಬಡಿಗ ವೃತ್ತಿಯ ಶರಣನೊಬ್ಬ ನನ್ನ ಈ ಸಂವೇದನಾ ಪ್ರಧಾನ ಅಧ್ಯಯನಕ್ಕೆ ಬಹುಮುಖ್ಯ ಪ್ರೇರಣೆಯಾಗಿದ್ದಾನೆ. ಇದೂ ಅಲ್ಲದೆ ಕಾಮಾಟದ ಭೀಮಣ್ಣ ಎನ್ನುವವನೂ ಕೂಡ ಇದೇ ವೃತ್ತಿಯನ್ನು ಆಶ್ರಯಿಸಿದ್ದವನು. ಇವರು ಬರೆದ ವಚನಗಳು ಸಂಗ್ರಹವಾಗಿದ್ದರೂ,ಅಧ್ಯಯನದ ಅಥವಾ ಒಂದು ಸಂವೇದನಾಶೀಲತೆಯ ವ್ಯಾಖ್ಯಾನಗಳಾಗಿ ಸಾಹಿತ್ಯದಲ್ಲಿ ಮೂಡಿಬರಲೇ ಇಲ್ಲ. ಬಹುಪ್ರಧಾನವಾಗಿ ತಮ್ಮ ವೃತ್ತಿ ಹಾಗೂ ವೃತ್ತಿ ಸಂಬಂಧಿ ಪರಿಕರಗಳಲ್ಲೇ ತಮ್ಮ ಅಭಿವ್ಯಕ್ತಿಯನ್ನು ಪೂರೈಸುವ ಇವರ ವಚನ ಪ್ರಪಂಚ ಬೆಡಗಿನದು. ಇಂಥವರ ಕುರಿತು ಸಾಹಿತ್ಯ ವಿಮರ್ಶಕರಾಗಲೀ, ಸಂಪಾದನಾಕಾರರಾಗಲಿ, ಇಂದು ವಿಶ್ವಕರ್ಮ ಸಾಹಿತ್ಯದ ವಾರಸುದಾರರಾಗಿ ಕಾಣಿಸಿಕೊಳ್ಳುವ ಶ್ರೇಷ್ಠ ವಿದ್ವಾಂಸರಾಗಲೀ ಗಂಭೀರವಾಗಿ ಚರ್ಚಿಸಲಿಲ್ಲ. ದುಂಡಾಗಿ ಗ್ರಹಿಸುವ ಗ್ರಹಿಕೆಗಳಲ್ಲೇ ಇವರು ಮುಚ್ಚಿಹೋಗಿ ಬಿಟ್ಟರು. ತಮ್ಮ ವಚನಗಳ ಮೂಲಕ ಪಾಂಚಾಳ ಕುಲದ ವಿವರಗಳನ್ನು ಸಾಹಿತ್ಯ ಲೋಕಕ್ಕೆ ನೀಡಿದ ಇವರು ನನ್ನನ್ನು ತೀವ್ರವಾಗಿ ಸೆಳೆದವರು.ಹೀಗಾಗಿ ಈ ಅಧ್ಯಯನವನ್ನು ಈ ಶರಣರ ಸಂವೇದನಾಶೀಲ ಸೆಳಕುಗಳ ಮೇಲೆ ಕಟ್ಟಿಕೊಳ್ಳಲು ಪ್ರಯತ್ನಿಸಿರುವೆ.

ವಿಶ್ವಕರ್ಮರು ಅಥವಾ ವಿಶ್ವಕರ್ಮ ಸಾಹಿತ್ಯವನ್ನು ಕುರಿತು ಎರಡು ರೀತಿಯ ಅಧ್ಯಯನ ಮಾದರಿಗಳು ಪ್ರಚಲಿತ ಇವೆ. ಒಂದು ವೈದಿಕ ಪ್ರಣೀತವಾದುದು,ಇನ್ನೊಂದು ವೈದಿಕೇತರ ವಿಚಾರಗಳಿಂದ ಕೂಡಿದುದು.ಶ್ರೀ ಜೀವಣ್ಣ ಮಸಳ್ಳಿ, ಡಾ.ಜಿ. ಜ್ಞಾನಾನಂದ,ಶ್ರೀ ದೀಕ್ಷಿತ್ ಮುಂತಾದ ಹಿರಿಯರು ವಿಶ್ವಕರ್ಮ ಸಂಸ್ಕೃತಿ ಬಗ್ಗೆ ಅಧ್ಯಯನ ಮಾಡಿ ಕೃತಿಗಳನ್ನು ಹೊರತಂದಿದ್ದಾರೆ.ಇವರ ಅಧ್ಯಯನದಲ್ಲಿ ಕಾಣುವ ಕೆಲ ವಿಶಿಷ್ಟ ವಿಚಾರಗಳೆಂದರೆ ವಿಶ್ವಕರ್ಮ ಕುಲವನ್ನು ದ್ರಾವಿಡ ಮೂಲದಿಂದ ಗುರುತಿಸುವುದು.ಸ್ವತಂತ್ರ ಹಾಗೂ ಸೃಷ್ಟಿಶೀಲ ಮನೋಭಾವದ ಮೂಲಕ ಕಾಣುವುದು. ಯಜ್ಞ(ಅಗ್ನಿ)ದ ಹರಿಕಾರರಾಗಿ, ಸಿಂಧೂ ಸಂಸ್ಕೃತಿಯ ಮೂಲಗಳಿಂದ ಆಧಾರ ಸಮೇತ ಗುರುತಿಸುವುದು. ಬಹಳ ಮುಖ್ಯವಾಗಿ ಬ್ರಾಹ್ಮಣಶಾಹಿ ವಿರೋಧಿ ನೆಲೆಯಲ್ಲಿ ವಿಶ್ವಬ್ರಾಹ್ಮಣರೆಂದೂ ವಿಶ್ವಕರ್ಮರೆಂದೂ ಕರೆದು ಪಾಂಚಾಳರ ಅಸ್ತಿತ್ವವನ್ನು ಗುರುತಿಸುತ್ತಾರೆ. ಆರ್ಯವೈದಿಕ ಕಕ್ಷೆಯಿಂದ ಹೊರಗಿಟ್ಟು ಸ್ಥಳೀಯವಾಗಿ ಪಾಂಚಾಳರ ಚರಿತ್ರೆಯನ್ನು ಕಟ್ಟಲು ಪ್ರಯತ್ನಿಸುತ್ತಾರೆ. ಜೊತೆಗೆ ಗೋ ಬ್ರಾಹ್ಮಣ ಮತ್ತು ವಿಶ್ವಬ್ರಾಹ್ಮಣವೆಂಬ ಎರಡು ವರ್ಗಗಳನ್ನು ಸಂಘರ್ಷದ ನೆಲೆಯಲ್ಲೇ ಪರಿಭಾವಿಸುವ ಇವರ ಅಧ್ಯಯನಗಳು ತಿರುಗಿ ದಾರಿತಪ್ಪಿ ಶ್ರೇಷ್ಠತೆಯ ಹೆಸರಿನಲ್ಲಿ ಮತ್ತೇ ವೈದಿಕ ಸನಾತನತೆಯನ್ನೇ ಪ್ರತಿಪಾದಿಸುತ್ತವೆ. ಪಾಂಚಾಳ ಕುಲವನ್ನು ಶಿಲ್ಪ ಮತ್ತು ಸ್ವರ್ಣಗಳೆಂಬ ಕಸುಬುದಾರಿಕೆಯನ್ನು ಶ್ರೇಷ್ಠತೆಯ ಸ್ಥಾನದಲ್ಲಿ ವೈಭವೀಕರಿಸುತ್ತಾರೆ. ಪರಂಪರೆಯನ್ನು ವೈಭವೀಕರಿಸುವ ಮತ್ತು ಪವಿತ್ರೀಕರಿಸುವ ಮಾದರಿಗಳಲ್ಲಿ ಈ ರೀತಿಯ ಅಧ್ಯಯನಗಳುಸಾಗುತ್ತವೆ.

ಸಿಂಧ್‌ಮಾದಿಗರ ಸಂಸ್ಕೃತಿ ಬಗ್ಗೆ ಬರೆದ ಕೋಟಿಗಾನಹಳ್ಳಿ ರಾಮಯ್ಯ ಹಾಗೂ ಬಸವಣ್ಣನ ಕುಲಮೂಲವನ್ನು ವಿಶ್ವಕರ್ಮೀಕರಿಸುವ ಹಾಗೂ ವಿಶ್ವಕರ್ಮರ ಮೂಲವನ್ನು ತಳಮಟ್ಟದಿಂದ ತಡಕಾಡುವ ಶ್ರೀ ರಾಜಶೇಖರ ಬಡಿಗೇರ ಅವರುಗಳು ಕೆಳವರ್ಗಗಳೆಂದೆನಿಸಿಕೊಳ್ಳುವ ಎಡಗೈ ಮತ್ತು ಬಲಗೈ ಪಂಥಗಳ ಬಗ್ಗೆ ಚರ್ಚಿಸುತ್ತ ಎಡಗೈ ಪಂಥಗಳಲ್ಲಿ ಪಾಂಚಾಳ ಕುಲವನ್ನು ಹುಡುಕುವ ಪ್ರಯತ್ನ ಮಾಡಿದ್ದಾರೆ. ದ್ರಾವಿಡ ಮೂಲದಿಂದ ವೈದಿಕದ ಕಡೆಗೆ ಚಲಿಸುವ ವಿದ್ವಾಂಸರ ವಿಚಾರಗಳಿಗೂ ಮೂಲ ದ್ರಾವಿಡದ ಎಡಗೈ ಬಣಗಳಲ್ಲಿ ವಿಶ್ವಕರ್ಮರ ಮೂಲವನ್ನು ಹುಡುಕುವ ವಿದ್ವಾಂಸರಿಗೂ ಸೂಕ್ಷ್ಮವಾದ ಒಮ್ಮತವೊಂದು ದ್ರಾವಿಡ ಮೂಲದಲ್ಲಿ ಏರ್ಪಡುತ್ತದೆ. ಈ ಎಲ್ಲ ವಾದಗಳ ವಿವರವಾದ ಮತ್ತು ವಿಚಾರಪೂರ್ಣ ಅಧ್ಯಯನ ಅವಶ್ಯವಾಗಿದೆ.

ಇಂದಿಗೂ ಪಾಂಚಾಳರ ಬದುಕಿನ ಕ್ರಮದಲ್ಲೂ ಈ ದ್ವಂಧ್ವವನ್ನು ಕಾಣುತ್ತೇವೆ. ಉತ್ತರ ಕರ್ನಾಟಕದ ಬಹುಭಾಗದಲ್ಲಿ ಪಾಂಚಾಳರೆಂದು ಗುರುತಿಸಿಕೊಂಡರೆ ದಕ್ಷಿನ ಭಾರತದಲ್ಲಿ ವಿಶ್ವಬ್ರಾಹ್ಮಣರು,ಆಚಾರಿಗಳು ಎಂದು ಕರೆಸಿಕೊಳ್ಳುತ್ತಾರೆ.ಇತ್ತೀಚೆಗೆ ಈ ಬಿಸಿ ಉತ್ತರ ಕರ್ನಾಟಕಕ್ಕೂ ಹಬ್ಬಿದ್ದಿದೆ. ವೃತ್ತಿನಿರತ ಬದುಕನ್ನು ಒಪ್ಪಿಕೊಂಡು ಬಾಳುತ್ತಿರುವ ಕಸುಬುದಾರರಲ್ಲಿ ಮೇಲು ಕೀಳಿನ ಯಾವ ಜಂಜಾಟವಿಲ್ಲ. ವೃತ್ತಿಯಿಂದ ಬೇರ‍್ಪಟ್ಟ ಅಕ್ಷರಸ್ಥರಲ್ಲಿ,ವಿದ್ವಾಸರಲ್ಲಿ ಮಾತ್ರ ವಿಶ್ವಬ್ರಾಹ್ಮಣ, ವಿಶ್ವಕರ್ಮ ಎನ್ನುವ ಮೇಲ್ಮುಖ ಚಲನೆಯ ಒತ್ತಾಸೆಯನ್ನು ಕಾಣುತ್ತೇವೆ. ವಿದ್ವಾಂಸರು ಮಂಡಿಸುವ ವಿಚಾರಗಳೊಂದಿಗೆ ಜನಬದುಕಿನ ರೀತಿ ನೀತಿಗಳು ಬಹುಮುಖ್ಯವಾದಂಥವು. ಮದುವೆ, ಮುಂಜಿವೆ, ಸಾವಿನ ಸಂದರ್ಭಗಳಲ್ಲಿ ಒತ್ತಾಯವಾಗಿ ತುರುಕುವ ಸಂಸ್ಕೃತದ ಜೀವನ ಕ್ರಮಗಳು ಶ್ರಮ ಬದುಕಿನಲ್ಲಿ ತುಂಬಾ ನೀರಸವಾಗಿ ಕಾಣಿಸುತ್ತವೆ.ಬಡಿಗ, ಕಮ್ಮಾರಿಕೆ, ವೃತ್ತಿಗಳು ಎಂದೂ ಸಮುದಾಯ ಬಿಟ್ಟು ಬದುಕುವಂಥವುಗಳಲ್ಲ. ತಿಂಥಿಣಿ ಮೌನಪ್ಪ ಹೇಳುವಂತೆ ‘ಬಡಿಗ,ಕಮ್ಮಾರರು ಸೃಷ್ಟಿ ಗಧಿಕರ್ತರು ಬಡಿದು ಬತ್ತೀಸ ಆಯುಧವ ಮಾಡಿಕೊಡುವರು’ ಎನ್ನುವ ಮಾತು ಈ ಜನ ಬದುಕಿನ ಕ್ರೀಯಾಶೀಲತೆಯನ್ನೂ ಸಮಾಜಕ್ಕೆ ಅವರ ಅನಿವಾರ್ಯತೆಯನ್ನೂ ಹೇಳುವಂತದ್ದು. ಈ ಮಾತನ್ನು ಒಮ್ಮುಖವಾಗಿ ಪರಿಭಾವಿಸಿದಾಗ ಬಡಿಗ ಕಮ್ಮಾರರನ್ನು ವೈಭವೀ ಕೃತ ನೆಲೆಯಲ್ಲಿ ಕಾಣುವ ಅಪಾಯಗಳು ಜಾಸ್ತಿಯಾಗುತ್ತವೆ. ಬಡಿಗ ಕಮ್ಮಾರರದು ಇಮ್ಮುಖ ಬದುಕು. ಸಮುದಾಯ ಸಂಸ್ಕೃತಿ ಏಕಮುಖವಾದ ಚಲನೆಯನ್ನು ಹೊಂದದೆ ಯಾವಾಗಲೂ ಇಮ್ಮುಖವಾದ ಚಲನೆಯನ್ನು ಹೊಂದಿರುತ್ತದೆ.ಅಲ್ಲಿ ಕ್ರಿಯೆ ಮತ್ತು ಅರಿವುಗಳು ಏಕೀಭವಿಸಿ ದೈಹಿಕ ಶ್ರಮವನ್ನು ಬೌದ್ಧಿಕ ಆಲೋಚನೆಯನ್ನು ಗೌರವಿಸುತ್ತವೆ. ಗ್ರಾಮ ಸಮಾಜದಲ್ಲಿ ಬಹಳಷ್ಟು ಸಲ ಈ ಬಡಿಗ ಕಮ್ಮಾರರೇ ಹೆಚ್ಚಿನ ತಿಳುವಳಿಕೆವುಳ್ಳವರಾಗಿದ್ದು ಗ್ರಾಮದ ಆಗು ಹೋಗುಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುತ್ತಾರೆ. ಈ ಅಧ್ಯಯನದ ಆರಂಭದಲ್ಲಿ ಪ್ರಸ್ತಾಪಿತವಾಗಿರುವ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಕಮ್ಮಾರ ವೀರಭದ್ರಾಚಾರಿ ಕಥೆ ಇದಕ್ಕೆ ಒಳ್ಳೆ ಉದಾಹರಣೆ. ಶ್ರಮ ಮತ್ತು ಅರಿವಿನ ಗಾಢ ಪ್ರಜ್ಞೆಯಿರುವವರೆಗೆ ಊರಿನ ಜೀವಾಳವಾಗಿದ್ದ ವೀರಭದ್ರಾಚಾರಿ, ದೇಹ ಮತ್ತು ಬುದ್ಧಿಯ ವಿಘಟನೆಯಿಂದ ಊರನ್ನೇ ನಿಷ್ಕ್ರಿಯೆಗೊಳಿಸುತ್ತಾನೆ. ಬಡಿಗ ಕಮ್ಮಾರಿಕೆಗಳು ಬುದ್ಧಿಯ ವಿಘಟನೆಯನ್ನು ಬಯಸುವಂತವಲ್ಲ. ಸಂಘಟನೆಯನ್ನು ಸಾಧಿಸುವಂಥವುಗಳು. ಸಮಾಜದ ಬಹುಮುಖ್ಯ ಭಾಗವಾಗಿ ಬದುಕಿದ ಸಮುದಾಯವೊಂದು ಸಂಸ್ಕೃತೀಕರಣದ ಯಾವುದೋ ಹಂತದಲ್ಲಿ ಮೇಲ್ಮುಖ ಚಲನೆಗೊಂಡ ಸ್ಥಿತಿ ಈ ಎಲ್ಲ ವಿವರಗಳಿಂದ ವಿಧಿತವಾಗುತ್ತದೆ. ಹೀಗೆ ಮೂಲದಿಂದ ಸ್ಥಿತ್ಯಂತರಗೊಂಡಿದ್ದ ಬುದ್ಧಿಪ್ರಧಾನ ಮತ್ತೆ ಆರ್ಥಿಕ ಸಬಲತೆ ಪಡೆದ ಜನವರ್ಗವು ಶ್ರೇಷ್ಟವಾಗಿ ದೈಹಿಕ ದುಡಿಮೆ ಪ್ರಧಾನವಾದ ಹಾಗೂ ಆರ್ಥಿಕ ಸ್ಥಿತಿಯಿಂದ ಹಿಂದುಳಿದ ಜನವರ್ಗ ಕೀಳಾಗಿ ಒಂದೇ ಕುಲದಲ್ಲಿ ಮೇಲು ಕೀಳಿನ ಅಸಮಾನತೆ ಮೈ ಪಡೆಯಿತು. ಇಂದಿಗೂ ಇಂಥ ಒಳಸುಳಿಗಳು ಪ್ರಬಲವಾಗಿ ತನ್ನ ಶ್ರೇಣೀಕರಣವನ್ನು ಕಾಪಾಡಿಕೊಂಡು ಬರುತ್ತಿರುವುದು ಅಷ್ಟೇ ಸತ್ಯವಾದದ್ದು.

ಕೀಳೀಕರಣ ನೆಲೆಗಿಳಿದ ಬಡಿಗ ಕಮ್ಮಾರ ವೃತ್ತಿಗಳು ಹನ್ನೆರಡನೇ ಶತಮಾನದಲ್ಲಿ ಮತ್ತೆ ಗೌರವಾರ್ಹವಾದ, ಸ್ವಾಭಿಮಾನಪೂರ್ಣಸ್ಥಾನ ಪಡೆದು ತಾತ್ವಿಕ ಮಟ್ಟದಲ್ಲಿ ಚರ್ಚಿತವಾದದ್ದು ಸಣ್ಣದೇನಲ್ಲ.ಪ್ರತಿಯೊಂದನ್ನು ಶ್ರೇಷ್ಟತೆಯ ಮತ್ತು ವ್ಯಾಪಾರದ ಮೂಸೆಯಲ್ಲಿ ನೋಡುವ ಹಿತಾಸಕ್ತಿಗಳಿಗೆ ಇದೇನು ದೊಡ್ಡ ವಿಷಯವಲ್ಲ. ಇಂಥವರ ಏಕಮುಖ ಚಿಂತನೆಗಳಿಂದ ಕೃಷಿ ಬದುಕಿನ ಬಹುಮುಖ್ಯ ಭಾಗವಾಗಿದ್ದ ಬಡಿಗ ಕಮ್ಮಾರ ವೃತ್ತಿಗಳು ಮತ್ತು ಆ ಸಂಸ್ಕೃತಿಕ ಸಂವೇದನೆಗಳು ಮೂಲೆಗುಂಪಾಗಿದ್ದವು. ಅಲಕ್ಷಿತ ಕ್ಷೇತ್ರಗಳಿಗೆ ಹೆಚ್ಚಿನ ಒತ್ತು ಬೀಳುತ್ತಿರುವ ಈ ಹೊತ್ತಿನಲ್ಲಿ ವಿಶೇಷವಾಗಿ ಬಡಿಗ ವೃತ್ತಿ ಪ್ರಧಾನವಾದ ಬಾಚಿಕಾಯಕದ ಬಸವಯ್ಯನನ್ನು ಬಡಿಗ ವೃತ್ತಿಯೊಳಗಿಂದಲೇ ಹುಟ್ಟಿ ಬಂದ ನಾನು ಅಧ್ಯಯನಕ್ಕೆ ಆಯ್ಕೆ ಮಾಡಿಕೊಂಡಿದ್ದೇನೆ. ಈ ಅಧ್ಯಯನ ಬಸವಯ್ಯನನ್ನು ಒಬ್ಬ ಶಿವಶರಣನನ್ನಾಗಿ ಮಾತ್ರ ನೋಡದೆ ವೃತ್ತಿ ಪ್ರಧಾನ ವ್ಯಕ್ತಿಯನ್ನಾಗಿ, ಅಭಿವ್ಯಕ್ತಿ ಪ್ರಧಾನ ಬೆಡಗಿನ ವಚನಕಾರರನ್ನಾಗಿ ಬಡಿಗ ವೃತ್ತಿಯ ಸಾಂಸ್ಕೃತಿಕ ಚಹರೆಗಳ ವಿನ್ಯಾಸದಲ್ಲಿ ವ್ಯಾಖ್ಯಾನಿಸಲು ಪ್ರಯತ್ನಿಸಿದ್ದೇನೆ.

ಇಂತಹ ಅಧ್ಯಯನದ ತುರ್ತೊಂದನ್ನು ಹಿರಿಯರಾದ ಡಾ. ಎಂ. ಎಂ. ಕಲಬುರ್ಗಿ, ಡಾ.ಕೆ. ವಿ. ನಾರಾಯಣ ಅವರೊಂದಿಗೆ ಹಂಚಿಕೊಂಡಾಗ ಪ್ರೀತಿಯಿಂದ ಪ್ರೋತ್ಸಾಹಿಸಿ, ಮಾರ್ಗದರ್ಶಿ ವಿಚಾರಗಳನ್ನು ಸೂಚಿಸಿದರು.ಅವರಿಗೆ ನನ್ನ ಅನಂತ ನಮಸ್ಕಾರಗಳು. ಮಾಡಿದ ಈ ಯೋಜನೆಯನ್ನು ಪರಿಶೀಲಿಸಿ ಉಪಯುಕ್ತ ಸಲಹೆಗಳನ್ನು ನೀಡಿ ಇನ್ನಷ್ಟು ಗುಣಾತ್ಮಕವಾಗಿ ಹೊರಬರಲು ಕಾರಣರಾದ ಡಾ. ಬಸವರಾಜ ಕಲ್ಗುಡಿಯವರನ್ನು ಮನಸಾರೆ ನೆನೆಯುತ್ತೇನೆ. ಹಾಗೇ ಇಂಥ ಒಂದು ಅಧ್ಯಯನವನ್ನು ಪ್ರಕಟಿಸುವ ಮೂಲಕ ಅಲಕ್ಷಿತ ಕ್ಷೇತ್ರದ ಅನುಭವವೊಂದನ್ನು ಬೆಳಕಿಗೆ ತಂದಿರುವ ಮಾನ್ಯಕುಲಪತಿಗಳಾದ ಡಾ.ಬಿ. ಎ. ವಿವೇಕ ರೈ ಅವರಿಗೂ ನನ್ನ ನಮಸ್ಕಾರಗಳು.ಪ್ರಕಟಣೆ ಹಂತದಲ್ಲಿ ಸಹಕರಿಸಿದ ಪ್ರಸಾರಾಂಗದ ನಿರ್ದೇಶಕರಾದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಹಾಗೂ ಅವರ ಸಿಬ್ಬಂದಿಗೂ ಅನಂತ ವಂದನೆಗಳು.ಪುಸ್ತಕದ ಕರುಡು ಸಿದ್ಧಪಡಿಸುವಲ್ಲಿ ಶ್ರೀಮತಿ ಡಿ. ಶಕುಂತಲಾ, ತಿದ್ದಿ ಹೇಳಿದ ಗೆಳೆಯ ಡಾ.ಕಲವೀರ ಮನ್ವಾಚಾರ್ಯ ಅವರಿಗೂ ಅಕ್ಷರ ಜೋಡಿಸಿದ ಶ್ರೀ ಜೆ. ಶಿವಕುಮಾರ ಅವರಿಗೆ ವಂದನೆಗಳು.