೧. ಪುಟಿದೇಳುವತವಕ

ಗೊರೂರು ರಾಮಸ್ವಾಮಿ ಅಯ್ಯಂಗಾರ ಅವರ ‘ಕಮ್ಮಾರ ವೀರಭದ್ರಾಚಾರಿ ಜೋಯಿಸನಾದುದು’ ಎನ್ನುವ ಸಣ್ಣ ಕಥೆಯ ಮೂಲಕ ಇಲ್ಲಿನ ಚರ್ಚೆಯನ್ನು ಹುರಿಗೊಳಿಸಬಹುದೆನಿಸುತ್ತದೆ. ಶ್ರಮಿಕ ವರ್ಗದ ಮೇಲು ಚಲನೆಯ ಪ್ರೇರಣೆ ಅದರ ಪ್ರಖರ ಪರಿಣಾಮಗಳು ಹಾಗೂ ವ್ಯಕ್ತಿಯ ಕ್ರಿಯಾಶೀಲತೆಯ ನಾಶದ ಹಿನ್ನೆಲೆಯಲ್ಲಿ ಈ ಕಥೆಯ ಕಮ್ಮಾರ ವೀರಭದ್ರಾಚಾರಿಯ ಪಾತ್ರ ಬಹಳ ಮುಖ್ಯವಾದುದು.

“ಅವನ ಉಳಿ, ಗರಗಸ, ಕೈ ಬಾಚಿ, ಹತ್ತರಿ ಒಂದೊಂದು ಆಯುಧವೂ ಒಂದೊಂದು ರಾಜ್ಯವನ್ನು ಕಟ್ಟಲು ಸಮರ್ಥವಾದವು. ಉಪೇಕ್ಷಿತವಾಗಿ ತುಮುರು ಹಿಡಿದು ಮೂಲೆಗೆ ಬಿದ್ದು ಕೊರಗುತ್ತಿದ್ದವು. ಆಚಾರಿ ಉಪಯೋಗಿಸುತ್ತಿದ್ದಾಗ ಯೌವನದ ಉತ್ಸಾಹದ ಹೊಳಪಿನಲ್ಲಿ ಜ್ವಲಿಸುತ್ತಿದ್ದ ಹತ್ಯಾರಗಳು ಅವನ ಔದಾಸಿನ್ಯಕ್ಕೆ ಪಾತ್ರವಾಗಿ ನಿರ್ಮೂಲ್ಯವಾಗಿ ಮುಪ್ಪಡಿಸಿದಂತೆ ತೋರುತ್ತಿದ್ದವು”.[1] ತನ್ನ ಅತ್ಯಮೂಲ್ಯವಾದ ಜೀವನ ಪ್ರೀತಿ, ಕುಶಲಗಾರಿಕೆ ಹಾಗೂ ಕ್ರಿಯಾಶೀಲತೆಗಳಿಂದ ಸುತ್ತಲ ಪರಿಸರದ ಮನೆಮಾತಾಗಿದ್ದ ಕಮ್ಮಾರ ವೀರಭದ್ರಾಚಾರಿ ದಕ್ಷ ಕೆಲಸಗಾರ. ಅಲ್ಲದೆ ಸಕಲಕಲಾನಿಪುಣನಾಗಿದ್ದ. ಬಡಗಿ ಕಮ್ಮಾರರ ಶಕ್ತಿ ಸಾಮರ್ಥ್ಯದ ಸ್ವರೂಪಗಳನ್ನು ಹೇಳುವ ಮೇಲಿನ ಕಥೆ ಒಂದು ರೀತಿಯಲ್ಲಿ ಪಾಂಚಾಳ ಸಮುದಾಯದ ಎಗ್ಗಿಲ್ಲದ ದುಡಿಮೆಯ ಗುಣವನ್ನು ಸಂಸ್ಕೃತೀಕರಣದ ರೀತಿಯನ್ನು ಎತ್ತಿ ತೋರಿಸುತ್ತದೆ.

ತುಂಬ ಸ್ವಾಭಿಮಾನಿ ಮತ್ತು ಸೃಷ್ಟ್ಯಾತ್ಮಕ ಮನೋಧರ್ಮದ ವೀರಭದ್ರಾಚಾರಿ ನಾಗಪ್ಪನೊಂದಿಗೆ ಹ್ಯಾಂವದಿಂದಾಗಿ ತನ್ನ ಬದುಕಿನ ದುರಂತದೆಡೆಗೆ ಕಾಲು ಹಾಕುತ್ತಾನೆ. ಈ ದುರಂತ ಬರೀ ಆಚಾರಿಯದಾಗದೆ ಆ ಇಡೀ ಊರಿನ ದುರಂತವಾಗಿ ಮಾರ್ಪಾಡುತ್ತದೆ.ದುಡಿಯದೇ ಗಳಿಸುವಂತಹ ಜೋಯಿಸತನದ ಬೆನ್ನು ಹತ್ತಿದ ವೀರಭದ್ರಾಚಾರಿ ನಿರುಪಯೋಗಿ ಮನುಷ್ಯನಾಗಿ ಉಳಿಯುತ್ತಾನೆ. “ಒಂದೊಂದು ರಾಜ್ಯ ಕಟ್ಟಲು ಸಮರ್ಥವಾದ” ವೃತ್ತಿ ಪರಿಕರಗಳಾದ ಉಳಿ, ಬಾಚಿ, ಹತ್ತರಿ, ಗರಗಸಗಳು ತುಕ್ಕು ಹಿಡಿದು ಕೆಲಸಕ್ಕೆ ಬಾರದವಾಗುತ್ತವೆನ್ನುವ ಕಥೆಗಾರರ ಮಾತು ಗಂಭೀರವಾದದ್ದು. ಇದು ಆ ವೃತ್ತಿಯ ಪರಿಣತಿ ಮತ್ತು ತಾಕತ್ತನ್ನು ಗ್ರಹಿಕೆಗೆ ತರುತ್ತದೆ. ದೈಹಿಕ ದುಡಿಮೆಗೆ ವಿಮುಖನಾಗಿ ಶುಷ್ಕಬೌದ್ಧಿಕ ವಿಕಾರತೆಗೆ ಅಂಟಿಕೊಳ್ಳುವ ಸೆಳೆತ,ವ್ಯಾಮೋಹ ಮೂಲವಾಗಿ ಬಂದದ್ದು. ಕಥೆಯ ಆರಂಭ ಬಹಳ ಸ್ಪಷ್ಟವಾಗಿ ದೇಹ ಮತ್ತು ಮನಸ್ಸುಗಳ ಅಭಿನ್ನ ಸ್ಥಿತಿಯ ನೆಲೆಗಳನ್ನು ಒತ್ತಿ ಹೇಳುತ್ತದೆ. ಆದರೆ ಕಮ್ಮಾರ ವೀರಭದ್ರಾಚಾರಿಯು ದೈಹಿಕ ಶ್ರಮದ ನೆಲೆಗಳನ್ನು ಕಳಚಿಕೊಂಡು ಬೌದ್ಧಿಕ ಪ್ರಧಾನ ಬದುಕನ್ನು ಆಯ್ಕೆ ಮಾಡಿಕೊಂಡು ಬದುಕುವ ಕ್ರಮ ಒಂದು ವ್ಯವಸ್ಥಿತ ಸಮುದಾಯ ಬದುಕನ್ನು ಹೇಗೆ ಅನಾವಸ್ಥೆ ಮಾಡುತ್ತದೆ ಎನ್ನುವುದರೊಂದಿಗೆ ವೈದಿಕ ವಿದ್ಯೆಗಳು ವೈದಿಕೇತರಿಗೆ ಸಲ್ಲುವುದಿಲ್ಲ ಎನ್ನುವ ಸಂದೇಶವನ್ನು ಸಾರುತ್ತದೆ.ಜೊತೆಗೆ ಅಂಥ ವಿದ್ಯೆಗಳ ವೈಫಲ್ಯತೆಯನ್ನೂ ಹೇಳುತ್ತದೆ.

ಉಪೇಕ್ಷಿತ ನೆಲೆಗಳ ಅಧ್ಯಯನಕ್ಕೆ ಒತ್ತು ಬೀಳುತ್ತಿರುವ ಈ ಹೊತ್ತಲ್ಲಿ ಸಂಸ್ಕೃತಿಗಳೊಳಗಿನ ಈ ಹರಿದಾಟಗಳು ಬಹುಮುಖ್ಯವಾದ ಸಂಗತಿಗಳಾಗಿವೆ. ಬಾಚಿ ಕಾಯಕದ ಬಸವಯ್ಯ ಮತ್ತು ಅವನಂತಹ ವೃತ್ತಿನಿರತ ಶರಣರ ಅಧ್ಯಯನಗಳು ಇಂತಹ ಹರಿದಾಟಗಳಿಗೆ ಹೊಸ ಪರಿಪ್ರೇಕ್ಷೆಯೊಂದನ್ನು ಕಟ್ಟಿಕೊಡುತ್ತವೆ. ಕಥೆಯಲ್ಲಿನ ಕಮ್ಮಾರ ವೀರಭದ್ರಾಚಾರಿಯ ಪಾತ್ರ ಕೆಳಪಾತಳಿಯಿಂದ ಮೇಲು ಪಾತಳಿಯತ್ತ ಚಲಿಸುವ ಕ್ರಿಯೆಯಾಗಿ ಕಾಣಿಸುತ್ತದೆ.ಹೀನತೆಯಿಂದ ಉತ್ತಮಿಕೆಯತ್ತ ಹೋಗುವ ಮೂಲಕ ಹೀನ ಕುಲದ ಸಂಸ್ಕಾರಗಳನ್ನು ಕಳೆದುಕೊಳ್ಳುವ ಕ್ರಿಯೆ ಇದಾಗಿದೆ. ಪ್ರಕೃತಿಯ ಪದಾರ್ಥವನ್ನು ಮನುಷ್ಯ ವಿವೇಕದಿಂದ ತಿದ್ದುವ ಈ ಕೆಲಸ ಮನುಷ್ಯನನ್ನು ಆತ್ಮವಿಕಾಸದತ್ತ ಮೋಕ್ಷ ಸಾಧನೆಯತ್ತ ಹೊತ್ತೊಯ್ಯುತ್ತದೆನ್ನುವ ವೈದಿಕ ಪ್ರಣೀತ ಆಲೋಚನಾಕ್ರಮಗಳ ಪ್ರಭಾವ ಇಲ್ಲಿ ಕಂಡುಬರುತ್ತದೆ.

ಈ ಹಿನ್ನೆಲೆಯಲ್ಲಿ ಶರಣ ಚಳುವಳಿಯನ್ನು ಪರಿಭಾವಿಸುವಾಗ ಕೆಲವು ಪ್ರಶ್ನೆಗಳು ಎದುರಾಗುತ್ತವೆ. ಶರಣ ಚಳುವಳಿ ಆಧ್ಯಾತ್ಮಿಕ ಸಮಾನತೆಯನ್ನು ಸಾಧಿಸಿತು ಎಂದು ಹೇಳುವ ಮಾತುಗಳು ಬಹಳಷ್ಟು ಸಲ ಪಾರ್ಶ್ವಿಕವಾಗಿ ಕಾಣಿಸುತ್ತವೆ. ಊಳಿಗಮಾನ್ಯ ಪರಿಸರದಿಂದಲೇ ತಮ್ಮ ರೂಪಕಾತ್ಮಕತೆಯನ್ನು ಆಯ್ದುಕೊಳ್ಳುವ, ಕಾಯಕವನ್ನು ಆದರ್ಶೀಕರಿಸುವ ಹಂಬಲದಲ್ಲಿಯೇ ಈ ಶಂಕೆಗಳಿಗೆ ಗರಿಮೂಡುತ್ತವೆ. ಶ್ರಮವನ್ನು ದೇಹ-ಮೆದುಳು, ಆಳು-ಒಡೆಯನ ನೆಲೆಯಲ್ಲಿ ಪರಿಭಾವಿಸಿದ್ದು ಕೀಳೀಕರಣಗೊಂಡಿದ್ದ ದುಡಿಮೆಯನ್ನು ಕಾಯಕಗೊಳಿಸಿ ಪವಿತ್ರೀಕರಿಸಿದ ವಚನಕಾರರು ಆಳು ಒಡೆಯರ ಆರ್ಥಿಕ ಸಂಬಂಧಗಳನ್ನು ಕದಲಿಸುವ ಪ್ರಯತ್ನ ಮಾಡಿದರೆ? ಎನ್ನುವ ಪ್ರಶ್ನೆಯನ್ನು ಎತ್ತಿ ಚರ್ಚಿಸುವ ರಹಮತ್ ತರೀಕೆರೆ ಅವರು ‘ಭವಿ ಬಿಜ್ಜಳನ ಗದ್ದುಗೆಯ ಕೆಳಗೆ ಕುಳ್ಳಿರ್ದು ಓಲೈಸುವೆನೆಂದು, ಆಕ್ಷೇಪಿಸುವ ಸಂಗಾತಿಗಳಿಗೆ ಉತ್ತರ ಕೊಡುವಾಗ ಬಸವಣ್ಣ ಊಳಿಗವನ್ನು ಒಪ್ಪಿದುದನ್ನು (ಶಿವನ ವೇಳವಾಳಿ) ಗುರುತಿಸುತ್ತಾರೆ.[2] ವಚನಕಾರರಲ್ಲಿ ಆಳು ಒಡೆಯನ, ಆಳುವ-ಅಧೀನ ಸಂಬಂಧಗಳನ್ನು ಪತ್ತೇ ಹಚ್ಚುವ ಅವರ ತೀಕ್ಷ್ಣತೆ ಗಮನಿಸುವಂಥದ್ದು.

ದ್ರಾವಿಡ ಸಂಸ್ಕೃತಿಗಳಲ್ಲಿ ವೃತ್ತಿಗಳು ಅಸಮಾನತೆಯ ನೆಲೆಗಳಾಗದೆ, ಧಾರ್ಮಿಕ ಆಚರಣೆಗಳ ಬಹುಮುಖ್ಯ ಘಟಕಗಳಾದದ್ದು ಚರಿತ್ರೆಯಿಂದ ತಿಳಿಯುತ್ತದೆ.ದೈಹಿಕ ಕ್ರಿಯೆಯನ್ನು ಕೀಳೆಂದು ಕರೆಯುವುದಲ್ಲದೆ ವೃತ್ತಿ ವಿಭಜನೆಯಲ್ಲೂ ತಾರತಮ್ಯತೆಯನ್ನು ಉಳಿಸಿದ ಬಗೆ ಯಾವದು? ಯಾವಾಗ? ಎನ್ನುವ ಪ್ರಶ್ನೆಗಳು ಬಹುಮುಖ್ಯವೆನಿಸುತ್ತವೆ. ಹಳ್ಳಿ ಬದುಕಲ್ಲಿ ಕ್ಷೌರಿಕ, ಕಮ್ಮಾರ, ಬಡಿಗ, ಕುಂಬಾರ, ಸಮಗಾರ, ವೃತ್ತಿಗಳು,ಹುಟ್ಟು ಸಾವು, ಮದುವೆ ಮುಂಜಿ, ರೋಗ ರುಜಿನಗಳಂತಹ ಸಾಮೂಹಿಕ ಹಾಗೂ ವೈಯಕ್ತಿಕ ಸಂದರ್ಭಗಳಲ್ಲಿ ಅನಿವಾರ್ಯವಾಗಿ ಬೇಕಾಗುವಂಥವುಗಳು. ಮಾಡುವ ಕೆಲಸಗಳು ಅವುಗಳಿಂದ ಬರುವ ವರಮಾನದ ಮೂಲಗಳಿಂದಾಗಿ ವೃತ್ತಿಗಳಲ್ಲಿ ಶ್ರೇಣೀಕರಣ ಹಣಿಕಿ ಹಾಕಿತು. ‘ಬಡಿಗ’ ವೃತ್ತಿಯು ಋಗ್ವೇದದಲ್ಲಿ ಶ್ರೇಷ್ಠವೆಂದು ಪರಿಗಣಿತವಾಗಿತ್ತು. ಉಪನಿಷತ್ತುಗಳ ಕಾಲಕ್ಕೆ ಬರುವಾಗಲೇ ಅದು ಕೀಳಾಗಿ ಪರಿಗಣಿಸಿದ್ದು ತಿಳಿದುಬರುತ್ತದೆ. ‘ಬ್ರಹ್ಮಜ್ಞಾನ’ ಮೇಲಾಗಿ ನಿಲ್ಲುತ್ತದೆ. ಇದನ್ನು ಎಲ್ಲ ವೃತ್ತಿಗಳಿಗೂ ಅನ್ವಯಿಸಬಹುದು. ದೈಹಿಕ ಶ್ರಮ ಕೀಳಾಗಿ ಬೌದ್ಧಿಕ ವಿದ್ಯೆ ಮೇಲು ಎನ್ನುವ ಅಸಮಾನತೆಗಳು ಉಪನಿಷತ್ತುಗಳ ಕಾಲದಿಂದ ರೂಢಿಗೊಂಡವು. ದೈಹಿಕ ದುಡಿಮೆಯು ಕೆಳಮುಖ ಚಲನೆ ಪಡೆಯಿತು. ಇದಕ್ಕೆ ವ್ಯವಸ್ಥೆಯೂ ಸಹಕರಿಸಿತು. ವೃತ್ತಿ ಶ್ರೇಣೀಕರಣದ ವಿಚಾರದಲ್ಲಿ ಪಾಂಚಾಳರ ಉದಾಹರಣೆ ಉತ್ತಮವಾಗಿ ಕಾಣುತ್ತದೆ. ಐದು ವೃತ್ತಿಯ ಈ ವಿಶ್ವಕರ್ಮನ ಮಕ್ಕಳಲ್ಲಿ ಮನು (ಕಮ್ಮಾರಿಕೆ) ಮಯ (ಬಡಿಗತನ) ತ್ರ‍್ವಷ್ಟ್ರ (ಲೋಹಗಾರಿಕೆ) ದೈವಜ್ಞ (ಚಿನ್ನದ ಕೆಲಸ) ಶಿಲ್ಪಿ (ಶಿಲ್ಪದ ಕೆಲಸ) ಹೀಗೆ ವೃತ್ತಿ ಮಾಡಿಕೊಂಡಿದ್ದವರು. ಒಂದೇ ಕುಟುಂಬದ ಈ ಐದು ವೃತ್ತಿಗಳು ಇಂದಿಗೂ ಕೂಡ ಅವರವರ ಆರ್ಥಿಕ ಸ್ಥಿತಿಗಳಿಂದಾಗಿ ಶ್ರೇಣೀಕೃತಗೊಂಡೆ ಸಾಗುತ್ತಿವೆ. ಅಲ್ಲದೆ ‘ವಿಶ್ವಬ್ರಾಹ್ಮಣ’, ‘ವಿಶ್ವಕರ್ಮ’ ಎನ್ನುವ ಧಾರ್ಮಿಕ ವಿಶೇಷಣಗಳ ಮೂಲಕ ಸಾಮಾಜಿಕ ಮೇಲು ರಚನೆಯನ್ನೂ ಇವು ರೂಢಿಸಿಕೊಂಡವು. ಇದಕ್ಕೆ ಗೊರೂರು ಅವರ ಕಮ್ಮಾರ ವೀರಭದ್ರಾಚಾರಿಯ ಪಾತ್ರ ಒಳ್ಳೆ ಉದಾಹರಣೆ. ಇಷ್ಟಕ್ಕೆ ನಿಲ್ಲದೆ ಇಂದು ವೃತ್ತಿಸಹಜವಾದ ಬಡಿಗ, ಕಮ್ಮಾರ ಎನ್ನುವ ಮನೆತನದ (ವೃತ್ತಿಯ) ಹೆಸರುಗಳು ಕೀಳೆಂದೆನಿಸಿಬಿಟ್ಟಿವೆ. ಇಂಥ ಕೀಳುತನ ಮರೆಮಾಚಲು ಸಂಸ್ಕೃತ ಮತ್ತು ಇಂಗ್ಲಿಷ ಶಬ್ದಗಳಿಂದ ತಮ್ಮನ್ನು ಗುರುತಿಸಿಕೊಳ್ಳುತ್ತಾರೆ. ಉದಾಹರಣೆಗೆ ಕಾರ್ಪೆಂಟರ್, ಗೋಲ್ಡ್ ಸ್ಮಿತ್, ಬ್ಲಾಕ್ ಸ್ಮಿತ್, ಆಚಾರಿ ಇತ್ಯಾದಿ.ದೇಹಮೂಲವಾದ ವೃತ್ತಿಗಳು ಆತ್ಮವಾದಿಗಳಂತೆ ದೇಹದ ನಿರಾಕರಣೆಯನ್ನು ಬಯಸಲಾರವು. ಶ್ರಮಿಕ ವರ್ಗದ ವಚನಕಾರರಲ್ಲಿ ದೇಹದ ನಿರಾಕರಣೆ ಇರದೆ ಸ್ವೀಕರಣೆ ಪ್ರಧಾನವಾಗಿದೆ. ಅಲ್ಲದೆ ಸ್ಮೃತಿಗಳು ಕೀಳೆಂದು ಬಗೆದ ವೃತ್ತಿಗಳಿಗೆ ಆತ್ಮಾಭಿಮಾನ ತಂದು ಕೊಟ್ಟವರು ಇವರು. ಹೀಗಾದರೂ ವೃತ್ತಿ ಮತ್ತು ಜಾತಿಗಳಿಗಿದ್ದ ಕಳ್ಳು ಬಳ್ಳಿಯ ಸಂಬಂಧವನ್ನು ಕತ್ತರಿಸುವ ಕೆಲಸ ಇವರಿಂದಲೂ ಸಾಧ್ಯವಾಗಲಿಲ್ಲ ಎಂಬುದನ್ನು ಹಲವಾರು ವಚನಗಳಿಂದ ಕಂಡುಕೊಳ್ಳಬಹುದು.

ಬ್ರಾಹ್ಮಣತ್ವವನ್ನು ಹೊರಗೆ ವಿರೋಧಿಸುವ ವಚನಕಾರರು (ವಿಶೇಷವಾಗಿ ಮೇಲು ವರ್ಗದ ವಚನಕಾರರು) ಅದರ ಸಾಮಾಜಿಕ ಶ್ರೇಷ್ಟತೆಯ ಮಾದರಿಯೊಂದನ್ನು ಒಳಗೊಳಗೆ ಒಪ್ಪಿದ ಸಂದಂರ್ಭಗಳನ್ನು ಇಂಥಲ್ಲಿ ಕಾಣುತ್ತೇವೆ.‘ವರ್ಣನಾಂ ಬ್ರಾಹ್ಮಣೋಗುರು’ ಎನ್ನುವ ಸಿದ್ಧಾಂತವನ್ನು ತೀವ್ರವಾಗಿ ಭಂಜನಗೊಳಿಸುವ ವಚನಕಾರರಿಗೆ ವೈದಿಕ ಕರ್ಮ ಸಿದ್ಧಾಂತವನ್ನು ಮರೆತು ಇರಲಾಗಲಿಲ್ಲ ಎನಿಸುತ್ತದೆ. ಚನ್ನಬಸವಣ್ಣ ಈ ಬಗೆಯ ತಾರತಮ್ಯಗಳನ್ನು ದೀಕ್ಷೆಕೊಡುವಾಗ ವಿಧಿಸುತ್ತಾನೆ.[3] ದೇಹದ ಸ್ಥಿತಿಯೊಳಗೆ ಮೇಲು ಕೀಳಿನ ಪ್ರಶ್ನೆಯನ್ನು ತುರುಕಲಾಗಿದೆ. ಬೌದ್ಧಿಕ ಚಿಂತನೆಗಳಿಗೆ ಮಸ್ತಕ ಶ್ರೇಷ್ಟವಾದರೆ ಶರಣರಿಗೆ ಎದೆ ಶ್ರೇಷ್ಟವಾಗಿ ಕಾಣುತ್ತದೆ. ಅದು ಪರಮಾತ್ಮನಿರುವ ಜಾಗ. ಇಷ್ಟಲಿಂಗಕ್ಕೆ ಮೀಸಲಾಗಿರುವ ಜಾಗ. ಕೆಳಜಾತಿಯೊಂದಿಗೆ ಗುರುತಿಸಿಕೊಳ್ಳುವ ವಚನಕಾರರು ಹೊಕ್ಕುಳಕೆಳಗಿನ ದೇಹವನ್ನು ಹೇಯವಾಗಿ ಕಾಣುತ್ತಾರೆ.ಕೆಳವರ್ಗದ ವಚನಕಾರರಲ್ಲಿ ಲಿಂಗವು ಉಂಗುಷ್ಠದಲ್ಲಿ, ಉಳಿ ಮೊನೆಯಲ್ಲಿ ಮೂಡುವುದು ಇಲ್ಲಿ ಗಮನಾರ್ಹ ಸಂಗತಿ.

ವಚನಕಾರರಲ್ಲಿ ಪ್ರಕಟವಾಗುವ ಕೀಳಿಂಗಲ್ಲದೆ ಹಯನು ಕರೆಯದು, ‘ಮೇರುಗುಣ ವನರಸುವುದೇ ಕಾಗೆಯಲ್ಲಿ’ ‘ಕತ್ತೆ ಬೂದಿಯಲಿ ಹೊರಳಾಡಿದರೆ ಶಿವಭಕ್ತನಾಗಬಹುದೆ’ ‘ಕಾಗೆ ಕೋಗಿಲಾಗಬಹುದೆ’ ’ಪರುಷ ಗುಣವನರಸುವುದೇ ಕಬ್ಬಿಣದಲಿ’ ‘ಅಂದಣವನೇರಿದ ಸೊನಗ‘ ‘ಎಮ್ಮಸೊನಗಂಗೆ ತಳಿಗೆಯೆ ನಿಕ್ಕಬೇಡ’ ‘ಸಂಸಾರವೆಂಬ ಹೆಣಬಿದ್ದರೆ ತಿನಬಂದ ನಾಯಜಗಳವ ನೋಡಿ ಹೆಣ ಎದ್ದು ನಗುತಿರೆ’ ಎನ್ನುವ ಮಾತುಗಳನ್ನು ಅರ್ಥೈಸಿಕೊಳ್ಳುವ ಬಗೆ ಯಾವವು?ಪರಂಪರೆಯಿಂದಲೂ ಜನಮಾನಸದಲ್ಲಿ ಬಳಕೆಯಾಗುವ ಗಾದೆಮಾತುಗಳಂತೆ ಕಾಣುವ ಈ ಸಂಗತಿಗಳನ್ನು ಕೆಳವರ್ಗಗಳೇ ತನಗರಿವಿಲ್ಲದೆ ಬೈಗುಳಗಳ ರೂಪದಲ್ಲಿ ಬಳಸುವುದನ್ನು ಕಾಣುತ್ತೇವೆ. ಉದಾಹರಣೆಗೆ ‘ಉದ್ಯೋಗವಿಲ್ಲದ ಬಡಿಗ್ಯಾ ಮಗನ ಮುಕಳಿ ಕೆತ್ತಿದಾ’ ಎನ್ನುವ ಮಾತನ್ನು ನನ್ನ ಅಜ್ಜಿ ಬಳಸಿ ನಮ್ಮನ್ನು ಬೈಯುತ್ತಿದ್ದ ಪ್ರಸಂಗಗಳು. ಹಾಗೆ ‘ಗಾಣಿಗ್ಯಾನ ಕೂಡ ಕೂಡಿ ಒಣಾರೊಟ್ಟಿ ತಿನಬ್ಯಾಡಾ’ ‘ಹಜಾಮತಿ’ ‘ನೇವು ಜಾಡನ ಹೆಂಡತಿ ಬೆತ್ತಲೆ’ ‘ಅಕ್ಕಸಾಲಿ ಅಕ್ಕನ ಬಂಗಾರವನ್ನು ಬಿಡಲಾರ’. ಈ ಸಂಗತಿಗಳು ಗಂಭೀರವಾದಂತವು. ಮೇಲುನೋಟಕ್ಕೆ ಹಾಸ್ಯದ ತೆಳುವಾದ ವಿಷಯಗಳಾಗಿ ಕಂಡರೂ ಅವುಗಳ ಅಂತರ‍್ಯದಲ್ಲಿ ಶ್ರೇಣೀಕರಣದ ಸತ್ಯಗಳು ಅಡಗಿರುವುದನ್ನು ನಿರಾಕರಿಸಲಿಕ್ಕಾಗದು.

ಮೇಲಿನ ವಚನಗಳು ಮತ್ತು ಗಾದೆ ಮಾತುಗಳಲ್ಲಿ ಬಳಕೆಯಾಗುವ ಪ್ರಾಣಿ, ಪಕ್ಷಿ, ಲೋಹ ಉದ್ಯೋಗದ ರೂಪಕಗಳು ದುಡಿವ ವರ್ಗದ ಜೀವನದ ಬಹುಮುಖ್ಯ ಆಧಾರಗಳು. ಅವರಿಗೆ ಅವು ಪವಿತ್ರವಾದಂಥವು. ಎಷ್ಟೋ ಬುಡಕಟ್ಟುಗಳು ತಮ್ಮ ಕುಲದ ಚಿಹ್ನೆಗಳನ್ನಾಗಿ ಇಂಥ ಪ್ರಾಣಿ ಪಕ್ಷಿಗಳನ್ನು ಸ್ವೀಕರಿಸಿದ್ದುಂಟು. ಮೈಲಾರದಂತಹ ಸಾಂಸ್ಕೃತಿಕ ನಾಯಕನಿಗೆ ‘ನಾಯಿ’ ಬಹುಮುಖ್ಯ ಪ್ರಾಣಿ, ವಿಜಯನಗರ ಸಾಮ್ರಾಜ್ಯದ ಚಿಹ್ನೆ ‘ವರಾಹ’ ಎಂಬುದು ಉಲ್ಲೇಖನೀಯ. ಆದರೆ ವಚನಗಳಲ್ಲಿ ಮತ್ತು ಮುಂದೆ ಬಂದ ದಾಸರಲ್ಲಿ (ನಿಂದಕರಿರಬೇಕು ಹಂದಿಯ ತೆರದಲಿ……) ಇವು ಕೇಡಿನ ಸಂಕೇತಗಳಾಗಿ ಪ್ರಮಾಣೀಕರಣಗೊಳ್ಳುತ್ತವೆ. ವೈದಿಕ ಸಂಸ್ಕೃತಿಗಳ ಪ್ರಮಾಣೀಕರಣವನ್ನು ಒಳಗೊಳಗೆ ಒಪ್ಪಿಕೊಂಡಂತೆ ಕಾಣುವ ಇಂಥ ಚಿತ್ರಣಗಳು ಮೇಲುವರ್ಗದ ವಚನಕಾರರನ್ನು ಅನುಮಾನದಿಂದ ನೋಡಲು ಪ್ರೇರೇಪಿಸುತ್ತವೆ. ದುಡಿವ ದೇಹ ಮತ್ತು ಬೆವರನ್ನು ಕೀಳೆಂದು ಭಾವಿಸುವ ಆತ್ಮವಾದಿಗಳಿಗೆ ಶ್ರಮ ಬದುಕಿನ ಪ್ರಾಣಿ, ಪಕ್ಷಿ, ಆಹಾರ ಪದಾರ್ಥಗಳು, ಕೆಲಸದ ಪರಿಕರಗಳು ಮೈಲಿಗೆಯಾಗಿ ಕಾಣುತ್ತವೆ. ಅನಿಷ್ಠತೆಯ ಚಿಹ್ನೆಗಳಾಗಿ ತೋರುತ್ತವೆ.

ಶ್ರಮಿಕ ವರ್ಗದ ವಚನಕಾರರಲ್ಲಿ ಮೇಲಿನ ಸಂಗತಿಗಳು ನಿಷೇಧಾತ್ಮಕ ಪ್ರವೃತ್ತಿಯಿಂದ ಸಕಾರಾತ್ಮತೆಯತ್ತ ಸಾಗುವ ಹವಣಿಕೆಯನ್ನು ಹೊಂದಿವೆ. ‘ಕಾಗೆ’ ‘ಕಬ್ಬಿಣ’ ಎನ್ನುವ ಕೆಳ ಸಂಸ್ಕೃತಿಗಳು ಶಿವಭಕ್ತಿ ಎನ್ನುವ ಪರುಷದ ಮೂಲಕ ಅಪರಂಜಿಯಾಗುವ, ಉನ್ನತೀಕರಣಗೊಳ್ಳುವ ನೆಲೆಗಳು ಕಾಣುತ್ತವೆ. ಮೊದಲೇ ಹೇಳಿದಂತೆ ಪ್ರಕೃತಿಯ ಪದಾರ್ಥಗಳನ್ನು ಮನುಷ್ಯ ವಿವೇಕದಿಂದ ಸಂಸ್ಕರಿಸುವ, ಶಿವಭಕ್ತಿ ಎನ್ನುವ ಪರಿಕಲ್ಪನೆಯಿಂದ ಮಾತ್ರ ಉನ್ನತೀಕರಣಗೊಳ್ಳುವ ನೆಲೆಗಳು ಭಕ್ತಿ ಪರಿಸರದಿಂದ ಹೊರಗಿದ್ದ ಸಂಗತಿಗಳನ್ನು ಉಪೇಕ್ಷೆಯಿಂದ ನೋಡುತ್ತವೆ. ‘ಕೀಳು’ ಎಂಬುದು ‘ಮೇಲು’ ಎಂಬುದರ ಸಂಸರ್ಗದಿಂದ ತನ್ನ ಕೀಳುತನವನ್ನು ನೀಗಿಕೊಳ್ಳುವ ನೆಲೆಗಳು ಇಲ್ಲಿ ಎದ್ದುಕಾಣುತ್ತವೆ.ಆದರೆ ಮೇಲುತನದ ರಾಜ್ಯಭಾರಕ್ಕೆ ಕೀಳೆನಿಸುವ ಬದುಕೆ ವೇದಿಕೆ ಎಂಬುದನ್ನು ಮರೆಯಲಾಗದು. ‘ಚಿನ್ನ ವಿಶೇಷ ಮಣ್ಣು ಅಧಮವೆಂದಡೆ ಅದು ನಿಂದು ಕರಗುವುದಕ್ಕೆ ಮಣ್ಣಿನ ಕೋವೆಯೇ ಮನೆಯಾಯಿತ್ತು’ ಎನ್ನುವ ಮೆರಿಮಿಂಡಯ್ಯನ ವಚನ ತುಂಬಾ ಮಹತ್ವದ್ದು.ಇದು ಮೇಲು ಸಂಸ್ಕೃತಿಯ ಶ್ರೇಷ್ಟತೆಯ ಕುಹಕಕ್ಕೆ ಕೊಟ್ಟ ಎದಿರೇಟು. ಮಣ್ಣಿನಿಂದ ಹುಟ್ಟಿದ ಚಿನ್ನ ಮಣ್ಣಿನ ಮೂಲಕವೇ ತನ್ನ ಅಸ್ತಿತ್ವವನ್ನು ಗುರುತಿಸಿಕೊಂಡು ತಿರುಗಿ ಮಣ್ಣನ್ನೇ ಕೀಳೀಕರಿಸುವುದನ್ನು ಮೆರಿಮಿಂಡಯ್ಯ ಪ್ರಶ್ನಿಸುತ್ತಾನೆ.

ಈ ಸಂಗತಿಯನ್ನು ಕಮ್ಮಾರ ಮತ್ತು ಅಕ್ಕಸಾಲಿಯರ ಬದುಕಿನ ವಿವರಗಳಿಂದ ಮತ್ತಷ್ಟು ವಿಸ್ತರಿಸಿಕೊಳ್ಳಬಹುದೆನಿಸುತ್ತದೆ.ವೃತ್ತಿ ಶ್ರೇಣೀಕರಣದ ಹಂಬಲಕ್ಕೆ ಇದು ಒಳ್ಳೆ ನಿದರ್ಶನ. ಮನುಕುಲದ ಚರಿತ್ರೆಯೊಂದಿಗೆ ಬೆಸೆದು ಕೊಂಡಿರುವ ಕಬ್ಬಿಣವು ಮನುಷ್ಯ ನಾಗರಿಕತೆಯ ಅವಿಷ್ಕಾರ ಮತ್ತು ವಿಸ್ತಾರದ ಬಹುಮುಖ್ಯ ಲೋಹ. ಸಾಮ್ರಾಜ್ಯಶಾಹಿ ಚಟುವಟಿಕೆಗಳಲ್ಲಿ ಚಿನ್ನ ಮತ್ತು ಬೆಳ್ಳಿಗಿಂತ ಲೋಹ ಹಿರಿಯ ಸ್ಥಾನ ಪಡೆದಿತ್ತು. ಇಂಥ ಲೋಹವನ್ನು ಅದಿರಿನ ರೂಪದಲ್ಲಿ ಹೊರತೆಗೆದು ಕಾಸಿ ಸೋಸಿ ಬಡಿದು ಬಗ್ಗಿಸಿ ಆಯುಧ ಮಾಡಿಕೊಡುವವರು ಕಂಬಾರರು. ಮುದ್ದೆಗಂಬಾರರೆಂದು ಕರೆದುಕೊಳ್ಳುವ ಸಮುದಾಯದ ಕುರುಹುಗಳು ಬಳ್ಳಾರಿ ಜಿಲ್ಲೆಯ ಕುಡತಿನಿ, ಚಿಲಕನಹಟ್ಟಿ, ಗೊಲ್ಲರಹಳ್ಳಿ ಪರಿಸರದಲ್ಲೂ ಮೈಸೂರು ಜಿಲ್ಲೆಯ ಹುಲಗೂರುಗಳಲ್ಲೂ ಸಿಗುತ್ತವೆ. ಇವರ ಮೂಲವೃತ್ತಿಯೇ ಕಬ್ಬಿನ ತಯಾರಿಕೆ ಮತ್ತು ಆಯುಧ ರಚನೆ. ವೃತ್ತಿ ಪಂಚಾಳದವರದಾದರೂ ಅದರಲ್ಲೂ ಅಕ್ಕಸಾಲಿಗರಿಂದ ಕೀಳೆನಿಸಿಕೊಂಡ ವೃತ್ತಿ ಬದುಕು ಇವರದು. ಅಕ್ಕಸಾಲಿಗರಷ್ಟೇ ಅಲ್ಲ ಇಡೀ ಕೃಷಿ ಬದುಕೆ ಕಬ್ಬಿಣದ ಆಯುಧಗಳ ಮೊನೆಯ ಮೇಲೆ ನಿಂತಿರುವುದು ಸಣ್ಣ ವಿಷಯವಲ್ಲ. ಶ್ರೇಷ್ಠತೆಯ ಹಾಗೂ ಶ್ರೀಮಂತಿಕೆಯ ಸಂಕೇತವಾಗಿರುವ ಚಿನ್ನ ಬೆಳ್ಳಿಗಳು ಆಭರಣಗಳಾಗಿ ರೂಪಗೊಳ್ಳಬೇಕಾದರೆ ಅದು ಟಂಕದ ಸಹಾಯದಿಂದ ಎನ್ನುವ ಮಾತು ಇಲ್ಲಿ ಅರ್ಥಪೂರ್ಣವೆನಿಸುತ್ತದೆ. ಬಿಳಿಹಾಳೆ ಉಪಯುಕ್ತ ದಾಖಲೆಯಾಗಬೇಕಾದರೆ ‘ಕರಿಮಸಿ’ ಯ ಸಹಾಯ ಹೇಗೆ ಅಗತ್ಯವೋ ಹಾಗೆ ಚಿನ್ನಕ್ಕೆ ತಾಮ್ರದ ಸ್ಪರ್ಷ ಅತ್ಯಗತ್ಯ. ಅಮೂರ್ತದ ಶೋಭೆಗೆ ಮೂರ್ತದ ಸ್ಪರ್ಷ ಎಷ್ಟು ಅಗತ್ಯ ಎನ್ನುವುದನ್ನು ಇಲ್ಲಿ ಕಾಣಬಹುದು. ವಾಸ್ತವ ಹೀಗಿರುವಾಗ ಚರಿತ್ರೆಯ ಯಾವ ಹಂತದಲ್ಲಿ ಇದು ತಿರುಮುರು ಆಯಿತು ಎನ್ನುವುದು ಜಿಜ್ಞಾಸೆ. ಮೂಗು ಮಾಡಿದವನ ಮರೆತು ನತ್ತು ಮಾಡಿದವನ ನೆನೆವ ಬಗೆಯಿದು. ಚಿನ್ನದೊಂದಿಗೆ ಚಿನ್ನವಾಗಿ ಸೇರಿಕೊಳ್ಳುವ ತಾಮ್ರದ ಅಸ್ತಿತ್ವ ಸಂಸ್ಕೃತೀಕರಣದ ತರ್ಕದಲ್ಲಿ ಅಡಗಿದೆ. ಹೊರಗಿದ್ದಾಗ ಕೀಳಾಗಿ ನೋಡುವ ಒಳಸೇರಿದಾಗ ಉನ್ನತೀಕರಣಗೊಳ್ಳುವ ಈ ಪರಿ ಸಾಮಾಜಿಕ ಆಲೋಚನೆಯ ಶ್ರೇಣೀಕರಣವನ್ನು ಮಾರ್ಮಿಕವಾಗಿ ಚಿತ್ರಿಸುತ್ತದೆ. ಅಗತ್ಯ ಬಿದ್ದಾಗ ಕೀಳನ್ನು ಒಪ್ಪಿಕೊಳ್ಳುವ ಅಪ್ಪಿಕೊಳ್ಳುವುದರ ಹಿಂದಿನ ತುಡಿತ ಬಹುಮುಖ್ಯವಾಗಿ ಸಾಂಪ್ರದಾಯಿಕ ಮನಸ್ಸುಗಳ ಅವಕಾಶವಾದಿತನವನ್ನು ಅವುಗಳ ಸಾಂಸ್ಕೃತಿಕ ರಾಜಕಾರಣವನ್ನು ಎತ್ತಿ ತೋರಿಸುತ್ತದೆ.

ತನ್ನದಲ್ಲದ ಸಂಸ್ಕೃತಿಯೊಂದನ್ನು ಅನಾಗರಿಕವೆಂದು ಭಾವಿಸುವ ಪ್ರವೃತ್ತಿಗಳ ಹಿಂದಿನ ಆಲೋಚನ ಕ್ರಮವು ಅಪಾಯಕಾರಿಯಾದುದು.ಮೊರದೈವಗಳೆಂಬ ನೂರು ಮಡಿಕೆಗಳನ್ನು ಕುಡಲಸಂಗಮನೆಂಬ ಒಂದೇ ದೈವದಿಂದ ಹೊಡೆದು ಹಾಕುವ ವಚನಕಾರರಲ್ಲೂ ಇದನ್ನು ಕಾಣುತ್ತೇವೆ. ಬಹಳ ಸ್ಪಷ್ಟವಾಗಿ ಇಲ್ಲಿ ದೈಹಿಕ ಮತ್ತು ಬೌದ್ಧಿಕ ಶ್ರಮಗಳ ಎರಡು ಹೋಳುಗಳನ್ನು ಕಾಣುತ್ತೇವೆ. ದುಡಿವ ವರ್ಗದ ವಚನಕಾರರಲ್ಲಿ ಈ ದುಡಿವ ದೇಹ ಮತ್ತು ತುಡಿವ ಮನಸ್ಸು ಒಡೆದ ಹೋಳುಗಳಲ್ಲ. ಮುಂದೆ ಬಂದ ತತ್ವಪದಕಾರರಲ್ಲೂ ದೇಹ ಮನಸ್ಸುಗಳ ಅಭಿನ್ನತೆಯನ್ನು ಕಾಣುತ್ತೇವೆ. ವೃತ್ತಿಯ ದೈವೀಕರಣ ಶ್ರಮದ ಭಕ್ತೀಕರಣವನ್ನು ಇಲ್ಲಿ ಕಾಣಬಹುದು. ವೃತ್ತಿಪ್ರಧಾನ ಶ್ರಮಿಕ ವರ್ಗಗಳಲ್ಲಿ ವೃತ್ತಿಪರ ಉಪಕರಣಗಳುಇಂದಿಗೂ ಪೂಜಾರ್ಹವಾಗಿರುವುದನ್ನು ಮನಗಾಣಬಹುದು. ಕೃಷಿಗೆ ಕೇಂದ್ರವಾದ ಭೂಮಿ ಭೂದೇವಿಯಾದಂತೆ ವೃತ್ತಿ ಸಂಬಂಧಿ ಉಪಕರಣಗಳು ದೇವತಾ ರೂಪವನ್ನು ಪಡೆದಿವೆ. ಬಡಿಗ ಬಲಸುವ ಉಳಿ, ಬಾಚಿ, ಕೊಡತಿ, ಗರಗಸ, ಕಮ್ಮಾರರು ಬಳಸುವ ತಿದಿ, ಒಲೆ, ಛಾಣ, ಅಡಿಗಲ್ಲು ಮುಂತಾದವು ಕಾಳಿಕಾದೇವಿಯ ಪ್ರತೀಕಗಳು. ಇಂಥ ವೃತ್ತಿ ಮತ್ತು ಅದರ ವಿಶಿಷ್ಟ ಪರಿಕರಗಳು ಹಾಗೂ ಪರಿಭಾಷೆಗಳು ವಚನಕಾರರಲ್ಲಿ ಅನುಭಾವದ ಅಭಿವ್ಯಕ್ತಿಯ ರೂಪಕಗಳಾಗಿ ಬಳಕೆಯಾಗುವ ಮೂಲಕ ವೃತ್ತಿಯನ್ನು ಅತ್ಯಂತ ಅಭಿಮಾನದಿಂದ ನೋಡುವ ಪರಿಸರ ನಿರ್ಮಾಣವಾಯಿತು. ಆದರೆ ವೃತ್ತಿ ಹಾಗೂ ಜಾತಿಗಳಿಗಿದ್ದ ಅನನ್ಯತೆಯನ್ನು ಆರ್ಥಿಕವಾದ ಹಾಗೂ ಸಾಮಾಜಿಕವಾದ ಸಂಬಂಧವನ್ನು ಕತ್ತರಿಸಲು ಶರಣರಿಂದಲೂ ಸಾಧ್ಯವಾಗಲಿಲ್ಲ ಎಂಬುದು ಅಷ್ಟೇ ಸತ್ಯವೆನಿಸುತ್ತದೆ. ಕಾಯಕವನ್ನು ಪೂಜ್ಯೀಕರಿಸುವ ವಚನಕಾರರ ಕ್ರಮ ಶ್ರಮದ ಮೌಲೀಕರಣವೊ? ಸೇವೆಯ ವೈಭವೀಕರಣವೊ? ಆಧುನಿಕ ಬರಹಗಾರರಾದ ಕುವೆಂಪು, ಕುಂವಿ, ಬರಗೂರು ಮುಂತಾದವರಲ್ಲಿ ಶ್ರಮದ ಮೌಲೀಕರಣ ಎದ್ದು ಕಾಣುತ್ತದೆ. ಆದರೆ ಅದರ ಪವಿತ್ರೀಕರಣ ಇಲ್ಲ. ಅಸಮಾನತೆಗಳ ಸಮಾನೀಕರಣದ ಹಂಬಂಲಗಳು ಇಲ್ಲಿ ಕಾಣುತ್ತವೆ. ಕೀಳೆನಿಸಿದ್ದ ವೃತ್ತಿ ಹಾಗೂ ಪರಿಭಾಷೆ ಪರಿಸರಗಳನ್ನು ಮೌಲಿಕ ವ್ಯಾಖ್ಯಾನಗಳಿಗೆ ಅಳವಡಿಸುತ್ತಾರೆ. ಸ್ವಾವಲಂಬನೆಯ ಹೆಸರಿನಲ್ಲಿ ಸ್ವಂತ ದುಡಿಮೆಯ ವೃತ್ತಿ ಪಾವಿತ್ರ‍್ಯತೆಯನ್ನು ನಿಷ್ಠೆಯಿಂದ ಮುಂದುವರೆಸಬೇಕೆನ್ನುವ ನಿಲುವುಗಳು ಬದುಕಿನ ಕ್ರೀಯಾಶೀಲ ನೆಲೆಗಳಾಗಿ ಕಂಡರೂ ವಂಶಪಾರಂಪರೆಯ ಹಿಂದಿನ ಆಲೋಚನೆಗಳೇ ಇಲ್ಲೂ ಪ್ರಧಾನವಾಗಿ ಕಾಣುತ್ತವೆ. ಆಧುನಿಕತೆಯ ಹೊಸ ಅವಿಷ್ಕಾರಗಳು ಎಷ್ಟೇ ಮಾರಕವೆಂದು ಅನಿಸಿದರು ಈ ವಂಶಪಾರಂಪರೆಯ ಅನಿವಾರ್ಯತೆಯನ್ನು ಸ್ವಲ್ಪಮಟ್ಟಿಗೆ ಒಡೆದು ಹಾಕಿದ್ದನ್ನು ಕಾಣುತ್ತೇವೆ. ಚಮ್ಮಾರರಲ್ಲದವರು ಚಪ್ಪಲಿ ಮಾಡುವ ಹಾಗೂ ಮಾರುವ, ಬಡಿಗ ಕಮ್ಮಾರರಲ್ಲದವರು (ಕ್ರಿಶ್ಚಿಯನ್, ಲಂಬಾಣಿ, ಮುಸ್ಲಿಂ, ಹರಿಜನ) ಕೂಡ ಈ ವೃತ್ತಿಗಳನ್ನು ಅವಲಂಬಿಸಿರುವುದನ್ನು ಇಂದು ಕಾಣುತ್ತೇವೆ.

೨.ಭಕ್ತಿಯ ಖಾಸಗೀಕರಣ ಮತ್ತು ಕೇಂದ್ರೀಕರಣ ಸಮಸ್ಯೆಗಳು

ವಚನ ಸಂಸ್ಕೃತಿಯನ್ನು ದುಂಡಾಗಿ ಗ್ರಹಿಸುವ ಕ್ರಮದಲ್ಲಿಯೇ ಅನೇಕ ಒಳಸೂಕ್ಷ್ಮಗಳು, ಆಂತರಿಕ ಸಂಘರ್ಷಗಳು ಮೂಸಿ ಹೋಗುವ ಅಪಾಯವಿದೆ. ‘ವಚನ ಸಂಸ್ಕೃತಿ‘ ‘ಕೆಳ ಸಂಸ್ಕೃತಿ’ ಅಥವಾ ‘ಶರಣ ಸಂಸ್ಕೃತಿ’ಎನ್ನುವ ಗ್ರಹಿಕೆಗಳೇ ತಮ್ಮೊಳಗಿನ ಅನೇಕ ವೈರುಧ್ಯಗಳನ್ನು ಮರೆಮಾಚಿ ಅಲಂಕಾರಿಕವಾದ ಏಕರೂಪಿ ಪರಿಕಲ್ಪನೆಯಾಗಿ ರೂಪಗೊಳ್ಳುತ್ತವೆ. ಹೀಗೆ ಸಂಸ್ಕೃತಿಯೊಂದನ್ನು ಆಧ್ಯಾತ್ಮಿಕ ಮೌಲ್ಯಗಳ ಪ್ರತಿರೂಪವೆಂದಾಗಲೀ,ಆದರ್ಶಿಕೃತ ಸ್ವರೂಪವೆಂದಾಗಲೀ ಭಾವಿಸುವ ಸಂಗತಿಯೇ ಏಕಮುಖ ಹಾಗೂ ಪ್ರತಿಷ್ಠಿತ ಸಂಸ್ಕೃತಿಯೊಂದರ ಒಪ್ಪಿತ ಮಾದರಿಯ ಗ್ರಹಿಕೆಯೇ ಆಗಿದೆ. ಒಂದು ವರ್ಗದ ಸನಾತನತೆಯ ನೆರಳಿನಲ್ಲಿ ಸಂಸ್ಕೃತಿಯೊಂದರ ಚಹರೆಗಳನ್ನು ಹುಡುಕುವುದು ಶ್ರಮಿಕ ವರ್ಗದ ಬಹುಬಾಳಿನ ವಿವರಗಳನ್ನು ಕಡೆಗಣಿಸಿದಂತಾಗುತ್ತದೆ.

ಅಪವರ್ಗೀಕರಣದ ಬಹುಮುಖ್ಯ ನೆಲೆಯಾಗಿ ಕಾಣುವ ೧೨ನೇ ಶತಮಾನವು ವ್ಯಕ್ತಿಗಳ ಒಕ್ಕೂಟದಲ್ಲಿ ಪರಿಪೂರ್ಣತೆಯನ್ನು ಕಾಣುವ ಸಮೂಹ ಪ್ರಜ್ಞೆಯ ಶೋಧಕ್ಕೆ ಕಾರಣವಾಯಿತು. ವ್ಯಕ್ತಿ ಮತ್ತು ಭಕ್ತಿಯ ಸಂಬಂಧವನ್ನು ತೀವ್ರಗೊಳಿಸಿತು. ಭಕ್ತಿಯನ್ನು ಸಾಂಸ್ಥಿಕಗೊಳಿಸದೆ ಇಷ್ಟಲಿಂಗದ ಮೂಲಕ ವ್ಯಕ್ತೀಕರಿಸಿದರು. ಸ್ಥಾವರ ವ್ಯವಸ್ಥೆಯನ್ನು ಚಲನಶೀಲಗೊಳಿಸಿದರು.ಪ್ರಭುತ್ವದ ಸ್ಥಿರತೆಗೆ ಮೂಲವಾಗಿದ್ದ ಭಕ್ತಿ ಹಾಗೂ ಕಾಯಕನಿಷ್ಠೆಯನ್ನು ಪ್ರಜಾ ಕಾಳಜಿಯನ್ನಾಗಿಸಿದರು. ಆದರೆ ಕಾಯಕವನ್ನು ಇಷ್ಟದೈವಕ್ಕೆ ಮೀಸಲುಗೊಳಿಸುವ ಇನ್ನೊಂದು ಕೇಂದ್ರೀಕೃತ ಕಲ್ಪನೆಯನ್ನು ಶರಣರಲ್ಲಿ ಕಾಣಬಹುದು.ಹೀಗೆ ಊಳಿಗಮಾನ್ಯ ನೆಲೆಯ ಸೆಳಕುಗಳನ್ನು ಶರಣರಲ್ಲೂ ಅಲ್ಲಲ್ಲಿ ಕಾಣಬಹುದು.

ವಚನ ಚಳುವಳಿಯ ಬಹುಮುಖ್ಯ ಶಕ್ತಿಕೇಂದ್ರ ‘ಶಿವ’ಮತ್ತು‘ಶಿವಭಕ್ತಿ’. ವ್ಯಕ್ತಿಯ ಮೂಲಕ ಭಕ್ತಿಯ ಬೀಜವ ಬಿತ್ತಿ ಮುಕ್ತಿಯ ಬೆಳೆಯನ್ನು ತಗೆಯಬಯಿಸಿದ ಶರಣ ಚಳುವಳಿ ಭಕ್ತಿಯ ಖಾಸಗೀಕರಣ ಮತ್ತು ಕೇಂದ್ರೀಕರಣವನ್ನು ಗರ್ಭೀಕರಿಸಿಕೊಂಡು ಬೆಳೆಯಿತು. ಏಕದೇವೋಪಾಸನೆಯ ತತ್ವವೇ ಒಂದು ರೀತಿಯಲ್ಲಿ ಮತಾಂತರದ ಆಶಯವನ್ನು ಹೊಂದಿದ್ದು ಶರಣರ ಏಕದೇವೋಪಾಸನೆಗೆ ಶಿವನೇ ಕೇಂದ್ರ. ಈ ಕೇಂದ್ರಶಕ್ತಿಗೆ ಬದ್ಧರಾದವರು ಮಾತ್ರ ಭಕ್ತರು. ಶಿವಮನಸ್ಸು, ಶಿವವ್ಯಕ್ತಿತ್ವ, ಶಿವಮನುಷ್ಯ, ಮುಖ್ಯವಾದ ವಚನ ಚಳುವಳಿ ಫಲಿತವನ್ನು ಬರಗೂರವರು ‘ಶಿವಸಂಸ್ಕೃತಿ’ ಎಂದು ಕರೆಯುತ್ತಾರೆ.[4]ಕಸಬುದಾರ ವರ್ಗಗಳೇ ಪ್ರಧಾನವಾಗಿ ಈ ಚಳುವಳಿಗೆ ಸೇರಿಕೊಂಡಿದ್ದರೂ ಒಂದು ರೀತಿಯಲ್ಲಿ ಸಾಂಸ್ಕೃತೀಕರಣದ ಮೂಲಕವೇ ಈ ಚಳುವಳಿ ಅವರನ್ನು ಸ್ವೀಕರಿಸಿದಂತೆ ತೋರುತ್ತದೆ. ‘ಇಷ್ಟಲಿಂಗ’ ಎನ್ನುವ ಸರ್ವಸಮಾನವಾದ ಪರಿಕಲ್ಪನೆ ಈ ಸಂಸ್ಕೃತೀಕರಣದ ಬಹುಮುಖ್ಯ ಅಂಗ. ಇಲ್ಲಿನ ಜನಸಾಮಾನ್ಯರು ಕೇವಲ ಜನಸಾಮಾನ್ಯರಾಗಿ ಬರದೆ ಶಿವಸಾಮಾನ್ಯರಾಗಿ ಬರುತ್ತಾರೆ. ‘ಭಕ್ತ’ ನೆಂಬ ಅರ್ಹತೆ ಭವಿಗಳೆಂಬ ವರ್ಗವನ್ನು ಸೂಚಿಸಿತು. ಇಲ್ಲಿ ಭಕ್ತಿಯ ಖಾಸಗಿತನ ಒಪ್ಪುವಂತಹದ್ದಾದರೂ ಅದರ ಕೇಂದ್ರೀಕರಣ ಎನ್ನುವುದು ಅನಾರೋಗ್ಯಕರವಾದದ್ದು. ಈಕೇಂದ್ರೀಕರಣವು ಮೂಲಭೂತವಾದಿತನಕ್ಕೆ ಸರ್ವಾಧಿಕಾರಕ್ಕೆ ನೆಲೆಯೊದಗಿಸುವಂಥದ್ದು.ಶರಣರ ಮೌಲಿಕ ಚಿಂತನೆಗಳು ಇಂದು ಸ್ಥಾವರಗೊಂಡು ಮೂಲಭೂತವಾದೀ ಮನೋಧರ್ಮವನ್ನು ಪೋಷಿಸತ್ತಿರುವುದಕ್ಕೆ ವಚನಧರ್ಮದೊಳಗಿದ್ದ ಬಿರುಕುಗಳೇ ಕಾರಣವೆಂದು ಹೇಳಬಹುದು. ವಚನಚಳುವಳಿಯು ಸಾಂಸ್ಥೀಕರಣದ ಹಾಗೂ ಜಾತಿ ವ್ಯವಸ್ಥೆಯ ವಿರೋಧಿಯಾಗಿದ್ದರೂ ಸಕಲ ಶಕ್ತಿಕೇಂದ್ರಿತ ಶಿವಸಂಸ್ಕೃತಿಯು ಇಂದು ಅಪಾಯಕಾರಿ ಆಲಯ ಸಂಸ್ಕೃತಿಯಾಗಿ ಸಾಂಸ್ಥೀಕರಣಗೊಳ್ಳುತ್ತಿದೆ.

ಕನ್ನಡ ಸಾಹಿತ್ಯ ಸಂಸ್ಕೃತಿಗಳಿಗೆ ವಚನ ಚಳುವಳಿ ಬಹುಮುಖ್ಯ ಕೊಡುಗೆ ಕೊಟ್ಟಿರುವುದರಲ್ಲಿ ಎರಡು ಮಾತಿಲ್ಲ. ಆದರೆ ಅಷ್ಟಕ್ಕೆ ನಿಂತು ಬಿಟ್ಟರೆ ವಿವಿಧ ಸಂವೇದನೆಗಳಿಂದೊಡಗೂಡಿದ ಚಳುವಳಿಯ ಆಂತರಿಕ ಸಂಘರ್ಷಗಳು, ವೈರುಧ್ಯಗಳು ನಮಗೆ ಧಕ್ಕದೇ ಹೋಗುತ್ತವೆ. ಚಾರಿತ್ರಿಕ ಹಾಗೂ ಸಮಕಾಲೀನ ಪ್ರಜ್ಞೆಗಳು ಸಾವಯವಗೊಂಡ ಆಂತರಿಕ ಸ್ಥಿತಿ ಹಳೆಯ ಸಾಹಿತ್ಯದ ವಿಮರ್ಶೆಗೆ ಬಹುಮುಖ್ಯವಾದದು.ಲೇಖಕನಾದವ ತಾನು ಬೆಳೆದು ಬಂದ ಸಮುದಾಯ, ಸಂಸ್ಕೃತಿ ಪರಂಪರೆಗಳೊಂದಿಗೆ ತನ್ನನ್ನು ಗುರುತಿಸಿಕೊಳ್ಳುವುದು ಅನನ್ಯತೆಯನ್ನು ಸಾಧಿಸಿಕೊಳ್ಳುವುದು ಪರಂಪರೆಯ ಅರ್ಥಪೂರ್ಣ ನೆಲೆಗಳನ್ನು ಸಮಕಾಲೀನತೆಯೊಂದಿಗೆ ಹೊಸ ಅರ್ಥದಲ್ಲಿ ಮುಖಾಮುಖಿಯಾಗಿಸುವುದೇ ಆಗಿರುತ್ತದೆ. ಗತದ ನೆನಪುಗಳೊಂದಿಗೆ ಪದೇ ಪದೇ ಗುದ್ದಾಡುವ ಈ ಕ್ರಿಯೆ ಉದಾರವೂ ಆಗದ ಸನಾತನವೂ ಆಗದ ಸ್ವ-ವಿಮರ್ಶಾತ್ಮಕ ನೆಲೆಯದ್ದಾಗಿರಬೇಕಾಗುತ್ತದೆ. ಅಲಕ್ಷಿತ ಅಧ್ಯಯನ ಕ್ಷೇತ್ರಗಳತ್ತ ಒತ್ತು ಬೀಳುತ್ತಿರುವ ಈ ಹೊತ್ತಿನಲ್ಲಿ ಕೇವಲ ಭಾರತೀಯ ಪಾರಂಪರಿಕ ಮನೋಧರ್ಮವನ್ನಾಗಲೀ ವಸಾಹತುಶಾಹಿ ಅನುಭವವನ್ನಾಗಲೀ ಆಧರಿಸದೆ, ಬರೀ ಟೀಕಿಸದೆ ಇವುಗಳಿಗೆ ಹೊರತಾದ ಹೊಸದಾರಿಯ ಅವಶ್ಯಕತೆಯಿದೆ. ಯಾವೊಂದು ಧಾರ್ಮಿಕ ಪರಂಪರೆಯೊಂದರ ಗುಣಾತ್ಮಕ ಅಂಶಗಳು ಬೇರೆ.ಅವುಗಳಲ್ಲಿನ ಮೌಲ್ಯಾತ್ಮಕ ಅಂಶಗಳನ್ನು ಉದಾತ್ತೀಕೃತ ನೆಲೆಯಲ್ಲಿ ವೈಭವೀಕರಿಸುವುದು ವಿಹಿತವಾದುದಲ್ಲ. ಅದರ ಕೊರತೆಗಳನ್ನು ಆ ಮೂಲಕ ಅದರಲ್ಲಿ ಸಮ್ಮಿಳಿತಗೊಂಡ ವಿವಿಧ ಜನಸಂಸ್ಕೃತಿಗಳ ಸಂವೇದನೆಗಳನ್ನು ಅಧ್ಯಯಿನಿಸುವುದು ಅದಕ್ಕಿಂತಲೂ ಬಹುಮುಖ್ಯವಾದ ಸಂಗತಿ.

ಈ ಹಿನ್ನೆಲೆಯಲ್ಲಿ ಶರಣ ಚಳುವಳಿಯನ್ನು ಗಮನಿಸಿದರೆ ಹೊಸ ಅರ್ಥಗಳಿಗೆ ಮುಖಾಮುಖಿಯಾಗಬೇಕಾಗುತ್ತದೆ. ಶರಣ ಚಳುವಳಿಯು ಏಕದೇವೋಪಾಸನೆ ಮತ್ತು ಶಿವಕೇಂದ್ರಿತ ತಾತ್ವಿಕತೆಯನ್ನೇನೋ ಸ್ವೀಕರಿಸಿತು. ಆದರೆ ಕಸುಬುದಾರ ವರ್ಗಗಳ ವಚನಕಾರರ ವಚನಗಳ ಅಧ್ಯಯನ ಈ ಏಕಾಕೃತಿಯನ್ನು ಅನುಮಾನಿಸುತ್ತದೆ. ಯಾಕೆಂದರೆ ಕಸುಬುದಾರ ವರ್ಗದ ಶರಣರ ಯಾವ ಆಶಯಗಳೂ ತಾತ್ವಿಕಮಟ್ಟದಲ್ಲಿ ಯಥಾವತ್ತಾದ ಅನುಸರಣೆಗಳಾಗಿರಲಿಲ್ಲ. ಅವು ಶಿವ ಸಂಸ್ಕೃತಿಯ ಮೂಸೆಯಲ್ಲಿ ಹಾಯ್ದು ಉನ್ನತೀಕರಣಗೊಂಡವು.ಹೀಗಾಗಿ ಭಕ್ತಿಯ ಈ ನಿಲುಕುವಿಕೆ ಆಯಾ ವ್ಯಕ್ತಿ ಅಥವಾ ಸಮುದಾಯದ ಸಂಸ್ಕೃತಿಗಳಿಗೆ ದಕ್ಕಿದ ಸ್ವಾತಂತ್ರ‍್ಯವೆನಿಸಲಿಲ್ಲ. ಭಕ್ತಿಯು ಬರುವ ವಿಧಾನದಲ್ಲಿ ಖಾಸಗೀಕರಣವೂ ಭಕ್ತಿಯ ಮೂಲ ಬದ್ಧತೆಯಲ್ಲಿ ಕೇಂದ್ರೀಕರಣವೂ ಮುತುವರ್ಜಿವಹಿಸಿತು. ಹೀಗಾಗಿ ಬರಗೂರು ರಾಮಚಂದ್ರಪ್ಪನವರು ಹೇಳುವಂತೆ ಆರ್ಥಿಕ ಖಾಸಗೀಕರಣ ಬಂಡವಾಳ ಶಕ್ತಿಯ ಕೇಂದ್ರೀಕರಣವಾದಂತೆ ಭಕ್ತಿಯ ಖಾಸಗೀಕರಣ ಶಿವಭಕ್ತಿಯ ಕೇಂದ್ರೀಕರಣವೂ ಆಗಬಲ್ಲದು.[5]ವೈದಿಕ ಮೂಲದ ಆಕೃತಿಗಳನ್ನು ವಚನಕಾರರು ತಿರಸ್ಕರಿಸಿ ಅವುಗಳ ಪಾವಿತ್ರ‍್ಯನಾಶ ಮಾಡಿದರೂ ಬದಲೀಯಾಗಿ ಕಟ್ಟಿಕೊಟ್ಟ ಪರ್ಯಾಯದಲ್ಲಿ ಸಮಾಜದ ಎಲ್ಲ ತಿರಸ್ಕೃತರೂ ಸಮಾನ ಸಮಾಜಿಕತೆಯನ್ನು ಪಡೆಯಲಿಲ್ಲ. ಕಾರಣ ಲಿಂಗದೀಕ್ಷೆಯ ಚೌಕಟ್ಟು ಹಾಗೂ ‘ಭವಿ’ ಮತ್ತು ‘ಭಕ್ತ’ ಕಲ್ಪನೆ. ಅದೊಂದು ನಿರ್ಬಂಧಿತ ಸಮಾನತೆ ಎನ್ನಬಹುದು. ‘ಭವಿ’ ಮತ್ತು ‘ಭಕ್ತ’ ಕಲ್ಪನೆ ಮತ್ತೇ ಜಾತಿ ಶ್ರೇಣೀಕರಣಕ್ಕೆ ಮೇಲು ಕೀಳಿನ ಅಸಮಾನತೆಗೆ ಅನುವು ಮಾಡಿಕೊಟ್ಟಿತು. ಭಕ್ತರಾಗದ ದಲಿತರ ಧಾರ್ಮಿಕ ನಂಬುಗೆ ಆಚರಣೆಗಳ ತುಚ್ಛೀಕರಣ ನಡೆಯಿತು. ಕೊಂಬಾಗ ಕೊಡುವಾಗ ಭೇದವೆಣಿಸಲಾಗುತ್ತಿತ್ತು. ‘ಕೊಲುವವನೇ ಮಾದಿಗ ಹೊಲಸು ತಿಂಬುವವನೇ ಹೊಲೆಯ’‘ಕುರಿ ಕೋಳಿ ಕಿರುಮೀನು ತಿಂಬವರಿಗೆಲ್ಲ ಕುಲಜ ಕುಲಜರೆಂದೆಂಬರು’ ‘ಶಿವಗೆ ಪಂಚಾಮೃತ ಕರೆವ ಪಶುಗಳ ತಿಂಬ ಮಾದಿಗ ಕೀಳುಜಾತಿಯಂಬರು’ ಎನ್ನುವ ಭಿನ್ನ ಧ್ವನಿಗಳು ಚರ್ಚಾರ್ಹವೆನಿಸುತ್ತವೆ. ಕಸುಬುದಾರ ವರ್ಗಗಳಲ್ಲಿ ಮಾಂಸಾಹಾರ ಭಕ್ಷ್ಯನೆಲೆಯಲ್ಲಿಯೇ ಮೇಲುಕೀಳಿನ ವಿಪರೀತತೆಯನ್ನು ಕಾಣಬಹುದಾಗಿದೆ. ಮಾಂಸಾಹಾರಿ ಹಾಗೂ ಸತ್ತ ಪ್ರಾಣಿಗಳನ್ನು ತಿನ್ನುವವರು ಕನಿಷ್ಠರಾದರೆ ಸಸ್ಯಾಹಾರ ಹಾಗೂ ಜೀವಂತ ಪ್ರಾಣಿಗಳನ್ನು ಕೊಂದು ತಿನ್ನುವವರು ಶ್ರೇಷ್ಠರಾಗಿ ಉಳಿಯುತ್ತಾರೆ. ಸೂಕ್ಷ್ಮವಾಗಿ ಶಿವಸಂಸ್ಕೃತಿಗೂ ಶಿವಸಂಸ್ಕೃತಿ ಅಲ್ಲದ ಸಂವೇದನೆಗಳಿಗೂ ನಡೆದ ಧರ್ಮಯುದ್ಧವೇ ಇದಾಗಿದೆ.

[1]ಎಂ. ಎಸ್. ದಿವಾಕರ,ಸಂ.,ಶತಮಾನದ ಸಣ್ಣ ಕಥೆಗಳು, ಪು.೮೭.

[2]ಡಾ. ರಹಮತ್ ತರೀಕೆರೆ, ಮರದೊಳಗನ ಕಿಚ್ಚು, ಪು.೫೯-೬೦.

[3]ಡಾ. ರಹಮತ್ ತರೀಕೆರೆ, ಮರದೊಳಗಣ ಕಿಚ್ಚು,ಪು.೯೭.

[4]ಕನ್ನಡ ಸಾಹಿತ್ಯ ಮತ್ತು ಪ್ರಭುತ್ವ, ಪು. ೨೮.

[5]ಕನ್ನಡ ಸಾಹಿತ್ಯ ಮತ್ತು ಪ್ರಭುತ್ವ,ಪು.೩೨.