೧. ಅಭೇದ್ಯದ ನಡೆ

ಉಳಿ, ಬಾಚಿ,ಕೊಡತಿ,ಕೆಲಸ ಮಾಡುವ ಅಡಿಗಟ್ಟೆ ಇವು ಬಡಿಗ ವೃತ್ತಿಯಲ್ಲಿ ಕಾಳಿಯ ಪ್ರತೀಕ. ವೃತ್ತಿನಿರತ ಪಾಂಚಾಳರ ಅಧಿದೇವತೆಯಾಗಿ ಕಾಳಿ ಪೂಜೆಗೊಳ್ಳುತ್ತಾಳೆ. ವಿಶ್ವಕರ್ಮ ಸಂತ ಪರಂಪರೆಯ ಮುರನಾಳ ಮಳಿಸ್ವಾಮಿ ಮಠಗಳು ಕಾಳಿಯನ್ನೇ ತಮ್ಮ ಶಕ್ತಿಯ ಸಂಕೇತವನ್ನಾಗಿ ಸ್ವೀಕರಿಸಿವೆ.ಅಲ್ಲದೆ ಗುರುಪರಂಪರೆಯವರೂ ಕೂಡ ಗಾಯತ್ರಿ, ಸರಸ್ವತಿ ಇವರ ಜೊತೆಗೆ ಕಾಳಿಯನ್ನು ಆರಾಧಿಸುತ್ತಾರೆ. ನವಲಗುಂದ ನಾಗಲಿಂಗ, ತಿಂಥಿಣಿ ಮೌನೇಶ್ವರರಂತಹ ಸಾಧು ಸಂತರೂ ಕೂಡ ಕಾಳಿಯನ್ನು ತಾಯಿಯಾಗಿ ಶಕ್ತಿಯಾಗಿ ಆರಾಧಿಸುತ್ತಾರೆ.

ಕಾಪಾಲಿಕ ಕಾಳಾಮುಖರೂ ಸೇರಿದಂತೆ ಎಡಪಂಥೀಯ ಶೈವ ತಾಂತ್ರಿಕ ಪಂಥಗಳು ಸ್ತ್ರೀಶಕ್ತಿಯನ್ನು ತನ್ನ ಆರಾಧನೆಯ ಕೇದ್ರದಲ್ಲಿರಿಸಿಕೊಂಡಿದ್ದು ಚರಿತ್ರೆಯಿಂದ ತಿಳಿದು ಬರುತ್ತದೆ. ಉತ್ತರಾಪಥದ ಶೈವ ತಾಂತ್ರಿಕತೆಯ ಒಡಲೊಳಗಿಂದ ಹುಟ್ಟಿದ ವೀರಶೈವ ಚಳುವಳಿಯಲ್ಲಿ ಬಂದ ಬಸವಯ್ಯ ಸಹಜವಾಗಿಯೇ ಸ್ತ್ರೀ ಪ್ರಾಧಾನ್ಯತೆ ಹೊಂದಿದ ತನ್ನ ಮೂಲಕಸುಬನ್ನು ಅದರ ಅಧೀದೇವತೆಯನ್ನು ತನ್ನ ವಚನಾಂಕಿತವಾಗಿಟ್ಟುಕೊಂಡಿದ್ದು ಮಹತ್ವದ ಅಂಶ. ಇದಕ್ಕೆ ಕಾರಣ ಪರಂಪರೆಯಲ್ಲಿ ದೊರೆತ ವೃತ್ತಿಗೌರವ ಮತ್ತು ಆತ್ಮೋದ್ಧಾರದಂತಹ ಪರಿಕಲ್ಪನೆಗಳು ಬಹುಮುಖ್ಯ ಕೊಡುಗೆಗಳು.

ಬಸವಯ್ಯನಲ್ಲಿ ಬಳಕೆಯಾಗುವ ಸ್ತ್ರೀಪರವಾದ ಪ್ರತಿಮೆಗಳು ಬರೀ ಮಾಯೆ ಅಥವಾ ಕಾಯಶಕ್ತಿಯ ಉದ್ವಿಗ್ನ ಸ್ಥಿತಿಗಳಾಗಿ ಬರದೇ ಮಾತೃಸದ್ಭಾವದ ನೆಲೆಯಲ್ಲಿ ಅನಾವರಣಗೊಳ್ಳುತ್ತವೆ. ಮಾಯೆಯನ್ನು ಮಾತೆಯನ್ನಾಗಿ ನೋಡುವ ವಿಶ್ವಕರ್ಮ ತತ್ವದ ವಿಶೇಷತೆ ಇದು. ಪ್ರತಿವಚನದ ಕೊನೆಗೆ ‘ಬಸವ ಪ್ರಿಯ ವಿಶ್ವಕರ್ಮಟಕ್ಕೆ ಕಾಳಿಕಾ ವಿಮಲ ರಾಜೇಶ್ವರ ಲಿಂಗವು’ ಎನ್ನುವ ಅಂಕಿತವು ಈ ಕಾರಣಕ್ಕಾಗಿ ತುಂಬ ಧ್ವನಿಪೂರ್ಣವಾದದ್ದೆನಿಸುತ್ತದೆ. ಶಿವ ಶಕ್ತಿಯರ ಸಂಯೋಗ ಕೂಡಾ ಇಲ್ಲಿ ಅರ್ಥಪೂರ್ಣ ನೆಲೆಯಲ್ಲಿಯೇ ಆಗಿದೆ. ಕಾಳಿಯ ಜೊತೆ ರಾಜೇಶ್ವರ ಲಿಂಗವನ್ನು ಉತ್ತರಾರ್ಧವಾಗಿ ಸೇರಿಸುವ ಬಾಚಿಕಾಯಕದ ಬಸವಯ್ಯ ಅದ್ವಯವಾದಿ ತಾತ್ವಿಕತೆಯನ್ನು ಎತ್ತಿಹಿಡಿಯುತ್ತಾನೆ.

ಈ ಶಕ್ತಿ ತತ್ವದ ಪ್ರತಿಮೆಯನ್ನು ಇನ್ನೊಂದು ನಿಟ್ಟಿನಲ್ಲೂ ಹೀಗೆ ಗ್ರಹಿಸಬಹುದು. ತೀರ ಸರಳವೆನಿಸಿದರೂ ಈ ವಿವರ ಇಲ್ಲಿ ಮುಖ್ಯವಾಗುವಂಥದ್ದು. ಶಕ್ತಿಯ ಪ್ರತೀಕಗಳಾದ ಉಳಿ, ಬಾಚಿ, ಸ್ವಭಾವತಃ ತುಂಬಾ ಹರಿತವಾದ ಗುಣವನ್ನು ಹೊಂದಿದಂಥವು. ‘ಕೈತಪ್ಪಿ ಕೆತ್ತಲು ಕಾಲಿಗೆ ಮೂಲ’ ಎನ್ನುವ ಬಸವಯ್ಯಗಳ ಪುಣ್ಯಸ್ತ್ರೀ ಕಾಳವ್ವೆಯ ವಚನದ ಸಾಲು ಇಲ್ಲಿ ತುಂಬ ಮಹತ್ವದ್ದೆನಿಸುತ್ತದೆ. ಅಜಾಗ್ರತೆ ಅಥವಾ ಅತಿಯಾದ ಸಲುಗೆ ಯಾವುದೂ ಇಲ್ಲಿ ತರವಲ್ಲ. ಇಂಥ ಹದನವಾದ ಆಯುಧಗಳನ್ನು ಅವುಗಳ ಗುಣಲಕ್ಷಣಗಳನ್ನು ಕೆಲಸದ ತೀವ್ರತೆಯ ಹಿನ್ನೆಲೆಯಲ್ಲಿ ಬಳಸಿ ರಚನಾತ್ಮಕವಾದ ಕೆಲಸ ತೆಗೆಯುವ ಬಡಿಗ ವೃತ್ತಿ ಹೆಂಗಸರ ವೃತ್ತಿಯಲ್ಲ ಎನ್ನುವುದು ಇಲ್ಲಿ ಮುಖ್ಯ ವಿಷಯ. “ಆಶೆಯರಿತ ಬಾಚಿಯಲ್ಲಿ ಭವಪಾಶವಿಲ್ಲದ ಜಂಗಮಕೆತ್ತಿ ರೋಷವಿಲ್ಲದ ಉಳಿಯಲ್ಲಿ ನಿಜವಾಸವ ನೋಡಿ ಹುಗಿಲುದೆಗೆವುತ್ತ”. ಇಂಥ ಹರಿತ ಆಯುಧಗಳಿಂದ ಭಾಷೆಗೆ ಊಣವಿಲ್ಲದ ಸದ್ಭಕ್ತರ ಆಶ್ರಯಕ್ಕೆ ನಿಜವಾಸವ ಮಾಡುವ ಕಾಯಕ ಅದು ಬಾಚಿ ಬಸವಯ್ಯನ ನೇಮವಾಗಿದೆ.

ಹೀಗೆ ಬಸವಯ್ಯನ ವಚನಗಳಲ್ಲಿ ಮತ್ತೇ ಮತ್ತೇ ಪುನರಾವರ್ತನಗೊಳ್ಳುವ ವೃತ್ತಿಪರ ಆಯುಧಗಳು, ಆಲಯದ ಪರಿಕರಗಳು, ದ್ವಂಧ್ವ ವಿನ್ಯಾಸಗಳು ಬರೀ ಲೌಕಿಕ ರಚನೆಗಳಾಗದೆ ಒಂದು ವಿಕಾಸಶೀಲ ವಿನ್ಯಾಸವನ್ನು ಅನಾವರಣಗೊಳಿಸುವ ಮಾಧ್ಯಮಗಳಾಗಿವೆ. ಮೂರ್ತದಿಂದ ಅಮೂರ್ತವನ್ನು ರೂಪಿಸಿಕೊಳ್ಳುವ ಮೂರ್ತದಲ್ಲಿಯೇ ಎಲ್ಲವನ್ನು ಸಾಧಿಸಬೇಕೆನ್ನುವ ಸ್ವೀಕೃತ ಮನೋಭಾವ ಬಸವಯ್ಯನಲ್ಲಿ ಬಹುಮುಖ್ಯವಾಗಿದೆ.

ಬಹಳ ಮುಖ್ಯವಾಗಿ ಬಸವಯ್ಯನ ಬದುಕೇ ಒಂದು ಅದ್ವಯವಾದಿ ಅನುಭವವನ್ನು ನೀಡುತ್ತದೆ. ವೃತ್ತಿ ಮತ್ತು ಇಷ್ಟದೇವತೆಯೊಂದಿಗೆ ಒಂದು ಸಮನ್ವಯತೆ ಸಾಧಿತವಾದರೆ ಬಸವಯ್ಯ ಮತ್ತು ಕಾಲವ್ವೆ ಎನ್ನುವ ಹೆಸರು ಇನ್ನೊಂದು ಸಮನ್ವಯತೆಯನ್ನು ಅರಿವಿಗೆ ನಿಲುಕಿಸುತ್ತದೆ. ಪರಿಕಲ್ಪನಾತ್ಮಕವಾಗಿಯೂ ಈ ಎರಡೂ ನೆಲೆಗಳು ಬೇರೆಯೇ ಆದರೂ ಅಂತಿಮವಾಗಿ ಒಂದೇಯಾಗಿ ಪರಿಣಮಿಸುತ್ತವೆ. ಕುಲದೇವತೆಯ ಹೆಸರೂ ಕಾಳಮ್ಮ, ಹೆಂಡತಿಯ ಹೆಸರೂ ಕಾಳಮ್ಮ. ಕಾಳಮ್ಮ ರಾಜೇಶ್ವರ ಲಿಂಗ, ಬಸವಯ್ಯ ಕಾಳವ್ವೆ, ಇತ್ಯಾದಿಯಾಗಿ ಹೆಸರಿನಲ್ಲಿ ಭಿನ್ನ ಸಮನ್ವಯತೆಯಲ್ಲಿ ಅಭಿನ್ನವಾಗಿ ಕಾಣುವ ಈ ಸ್ವರೂಪಗಳು ಕುತೂಹಲಕಾರಿಯಾದಂಥವು. ಇವು ಬದುಕಿನ ಪ್ರವೃತ್ತಿ ಮಾರ್ಗವನ್ನು ಪ್ರತಿಪಾದಿಸುವಂಥ ಪರಿಕಲ್ಪನೆಗಳೂ ಅಹುದು ಇದ್ದ ಸ್ಥಿತಿಯಿಂದ ವಿಮುಖನಾಗದೆ, ಸಂಸಾರ ಹೇಯವೆಂದು ತಿಳಿಯದೆ ಹೆಣ್ಣನ್ನು ಕನಿಷ್ಟವೆಂದು ಭಾವಿಸುವ ನೆಲೆಯಿಂದ ತನ್ನ ದಾರ್ಶನಿಕ ಪ್ರಜ್ಞೆಯನ್ನು ವಿಸ್ತರಿಸಿಕೊಳ್ಳದೇ ದೈನ್ಯೀಕರಣ ಮೀರಿದ ಆತ್ಮಗೌರವದ ನೆಲೆಯಿಂದ ಅದನ್ನು ಸಾಧಿಸಿದ್ದು ಬಸವಯ್ಯನ ಹೆಚ್ಚುಗಾರಿಕೆ. ಬಸವಣ್ಣನವರಂತೆ ಎನ್ನ ಹೆಳವನ ಮಾಡಯ್ಯ, ಕುರುಡನ ಮಾಡಯ್ಯ, ಕಿವುಡನ ಮಾಡಯ್ಯ ಎನ್ನುವ ಆರ್ತತೆಯನ್ನು ತೋರದೆ ಆ ಸ್ಥಿತಿಯನ್ನು ಪರಮಶಕ್ತಿಯ ಸ್ಥಿತಿಯನ್ನಾಗಿ ಆತ್ಮಶಕ್ತಿ ಮತ್ತು ಆತ್ಮಗೌರವದ ಸ್ಥಿತಿಯನ್ನಾಗಿ ಮಾರ್ಪಡಿಸಿದ್ದು ಬಸವಯ್ಯನ ವಾಸ್ತವವಾದಿ ನೆಲೆಯ ಸೈದ್ಧಾಂತಿಕತೆಯನ್ನು ತೆರೆದು ತೋರಿಸುತ್ತದೆ. ಹೀಗಾಗಿ ವಚನ ಚಳುವಳಿ ಮತ್ತು ವೃತ್ತಿನಿರತ ವಚನಕಾರರ ಸಂದರ್ಭದ ಪ್ರಮುಖ ತೀರ್ಮಾಣಗಳಲ್ಲಿ ಎಲ್ಲರಿಗಿಂತಲೂ ಭಿನ್ನವಾಗಿ ಬಾಚಿಕಾಯಕದ ಬಸವಯ್ಯ ಕಾಣಿಸಿಕೊಳ್ಳುತ್ತಾನೆ.

ಬಸವಯ್ಯನ ವಚನಾಂಕಿತ ಮತ್ತು ಆ ಮೂಲಕ ಅನಾವರಣಗೊಳ್ಳುವ ಸ್ತ್ರೀಪುರುಷ ಸಂಬಂಧಗಳು ಅನಂತ ಮತ್ತು ಅನನ್ಯತೆಯ ಸ್ವರೂಪವುಳ್ಳವು. ಸೃಷ್ಟ್ಯಾತ್ಮಕ ಹಂಬಲವುಳ್ಳಂಥವು. ಸಂಕುಚೀಕರಣದಿಂದ ವಿಸ್ತಾರದತ್ತ ಕ್ರಿಯಾತ್ಮಕವಾಗುವಂಥವು. ತನ್ನ ಅಂತಃ ಪ್ರಜ್ಞೆ, ಪ್ರತ್ಯಕ್ಷ ಮತ್ತು ಪ್ರತ್ಯೇಕತೆಯಿಂದ ಆರಂಭವಾಗುವ ಬಸವಯ್ಯನ ದಾರ್ಶನಿಕ ನೆಲೆ ಅವೆಲ್ಲವನ್ನೂಮೀರಿದ ವಿಶ್ವಾತ್ಮಕ ನೆಲೆಯಲ್ಲಿ ಸಾರ್ಥಕತೆಯನ್ನು ಪಡೆದುಕೊಳ್ಳುತ್ತದೆ. ನಿಜಕ್ಕೂ ಮತ್ತು ವಾಸ್ತವಕ್ಕೂ ಬಸವಯ್ಯನಲ್ಲಿ ವ್ಯತ್ಯಾಸವಿಲ್ಲ. ಪರಸ್ಪರ ಸಂಪರ್ಕದಿಂದ ಉಂಡಾಗುವ ರಸದ ಪರಿಯಂತೆ ಈ ಸಂಕೇತ ಮತ್ತು ವಾಸ್ತವಗಳು ಒಂದರೊಳಗೊಂದು ಇಂಬಿಲ್ಲದಂತೆ ಬೆರೆತು ಹೋದಾಗ ರಸಸ್ಥಿತಿ, ದಿವ್ಯತೆಯ ಸ್ಥಿತಿ ಪ್ರಾಪ್ತವಾಗುತ್ತದೆ. ಮಾತೆ (ಕಾಳಿ) ಮಗ, ಸತಿ (ಕಾಳವ್ವೆ) ಪತಿ (ಬಸವಯ್ಯ) ಈ ದೈಹಿಕ ಸಂಬಂಧಗಳಲ್ಲಿ ಬಳಕೆಯಾಗುವ ವಚನಾಂಕಿತವೂ ದೇಹದ ಅನುಭಾವವನ್ನು ದೈವದ ಅನುಭಾವದ ಜೊತೆಗೆ ಕಾಣದಷ್ಟು ಕರಗಿಸುವ ಅದ್ವಯತೆಯನ್ನು ದಕ್ಕಿಸಿಕೊಡುತ್ತದೆ. ಇಲ್ಲಿ ದೈವದ ವಿಶ್ವ ನಿಯಂತ್ರಕ ಪಾರಮ್ಯವನ್ನು ಮುರಿದು ಅದನ್ನು ಮನುಷ್ಯನ ಖಾಸಗಿ ವಾಸ್ತವವನ್ನಾಗಿ ನೋಡುವ ಪರಿ ವಿಶಿಷ್ಟವೆನಿಸುತ್ತದೆ. ಅನ್ಯೋಕ್ತಿ ವಿಧಾನದಲ್ಲಿ ಬಳಕೆಯಾಗುವ ಮಾನುಷ ಪ್ರೇಮದ ಎಲ್ಲ ವ್ಯವಹಾರಗಳನ್ನು ಬಸವಯ್ಯನಲ್ಲಿ ಕಾಣುತ್ತೇವೆ. ಕಾರಣ ಭಕ್ತಿಕಾವ್ಯದ ಮುಖ್ಯ ನೆಲೆಯೇ ಶೃಂಗಾರ. ಶೃಂಗಾರ ದೈಹಿಕ ಉನ್ಮತ್ತತೆಯನ್ನು ಪ್ರತಿಮಿಸಿದರೆ ಭಕ್ತಿ ಮನಸ್ಸಿನ ಉನ್ಮತ್ತತೆಯನ್ನು ಆರಾಧಿಸುತ್ತದೆ. ಇವೆರಡರ ಸಮ್ಮಿಲನವೇ ದಿವ್ಯಾನುಭವ.

೨. ಕಥನ ಮಾದರಿ : ಚರಿತ್ರೆಯ ನಿರಾಕರಣೆ

ನಿರ್ವಯಲು ಸಾಮಿಪ್ಯ ಸಾಯುಜ್ಯವೆಂಬ ಒಡ್ಡುಗಲ್ಲ ಮೇಲೆ
ಸಕಲ ಸಾಮ್ರಾಜ್ಯವೆಂಬ ಶಿವಪುರ ಉಂಟು
ಆ ಪುರಕೆ ವಜ್ರಮುತ್ತು ರತ್ನದಿಂದ ತೆತ್ತಿಸಿದ ಕೊತ್ತಳ[1]
…………………………………………..

ಮತ್ತೊಂದು ವಚನ

ಕುಂಬಿನಿ ಚಕ್ರದ ಮೇಲೆ ಪಿಂಡಬ್ರಹ್ಮಾಂಡವೆಂಬುದೊಂದು ಅಂಗ
ಆ ಅಂಗಾಲಯದೊಳಗೆ ಏಕಸಹಸ್ರವೆಂಬುದೊಂದು ದೇವಾಲಯ
ಆ ದೇವಾಲಯಕ್ಕೆ ವೆಜ್ಜವಿಲ್ಲದ ಬಾಗಿಲು…………………[2]

ಹೀಗೆ ಜಾನಪದ ಕಥೆಗಳಂತೆ (ಅಜ್ಜಿ ಕಥೆಗಳು) ಬಸವಯ್ಯನ ವಚನಗಳು ಕಥಾ ನಿರೂಪಣೆಗೆ ಮುಂದಾಗುತ್ತವೆ. ಈ ಕಥನ ಮಾದರಿ ದೇಸೀ ಅದ್ವಯವಾದಿಗಳಲ್ಲಿ ಸಹಜವಾಗಿ ಎದ್ದುಕಾಣುವಂಥದ್ದು. ವಚನ ಚಳುವಳಿಯಲ್ಲಿ ಭಾಗಿಯಾದ ಹೆಚ್ಚಿನ ಶರಣರು ಇಂತಹ ಸಾಂಸ್ಕೃತಿಕ ನೆಲೆಗಟ್ಟಿನಿಂದಲೇ ಬಂದವರು. ಅಲ್ಲದೆ ಬಹುಮಟ್ಟಿಗೆ ತಮ್ಮ ಅನುಭಾವಿಕ ನೆಲೆಗೆ ಸ್ಥಳೀಯ ಸಾಂಸ್ಕೃತಿಕ ಹಿನ್ನೆಲೆ ಮತ್ತು ದಿನ ಬದುಕಿನ ಭಾವನೆಗಳನ್ನೇ ಪರಿಕರಗಳನ್ನಾಗಿಸಿಕೊಂಡವರು. ಹೀಗಾಗಿ ಸ್ಥಳೀಯ ಸಾಂಸ್ಕೃತಿಕ ಪರಿಸರ ಸಹಜವಾಗಿ ವಚನಕಾರರ ಕಾವ್ಯತತ್ವ ನಿರ್ಮಾಣ ರೂಪಕವಾಗಿ ಬರುತ್ತದೆ. ಪಾರಂಪರಿಕವಾದಂತಹ ದಾರ್ಶನಿಕ ಸೂಕ್ಷ್ಮಗಳ ಪೃಥಕ್ಕರಣೆ ಮಾಡದೆ ಇಲ್ಲದ ತಾರ್ಕಿಕ ಗೋಜಿಗೆ ಹೋಗದೆ ನಾಟಕೀಯ ಘಟನೆ, ಪೌರಾಣಿಕ ಕಲ್ಪನೆಗಳನ್ನು ಬೆಸೆದು ಹೊಸದೊಂದು ಮಾರ್ಗವನ್ನು ಕಟ್ಟಲಾಗುತ್ತದೆ. ಇಂಥ ಪರಂಪರೆಯ ಸಾತತ್ಯತೆಯನ್ನು ಮುರಿದು ಕಟ್ಟುವ ದಿಟ್ಟಕ್ರಮವನ್ನು ಬಸವಯ್ಯನಲ್ಲಿ ಕಾಣುತ್ತೇವೆ.

ಈ ರೀತಿಯ ಕಥನಕ್ರಮ ಅಬ್ರಾಹ್ಮಣ ಪರಂಪರೆಗಳಲ್ಲಿ ಮಾತ್ರ ಸಶಕ್ತವಾಗಿ ಕಂಡು ಬರುತ್ತದೆ. ಯಾಕೆಂದರೆ ಸುತ್ತಲಿನ ಭೌಗೋಳಿಕ ಸಾಂಸ್ಕೃತಿಕ ಹಾಗೂ ಕೌಟುಂಬಿಕ ಪರಿಸರವೇ ಇಲ್ಲಿನ ತತ್ವನಿರ್ಮಾಣದ ಆಕರ ಸಾಮಗ್ರಿಗಳು. ಶತಕೋಟಿ ಸಹಸ್ರಕೋಟಿ ಬಯಲಿಂದತ್ತ ಭರಿತವಪ್ಪುದೊಂದು ರಥ, ಆರಥಕ್ಕೆ ಬ್ರಹ್ಮ, ವಿಷ್ಣು, ಸೂರ್ಯ, ಚಂದ್ರ, ವೇದಶಾಸ್ತ್ರ, ಪುರಾಣ, ಸಕಲಾಗಮ ಪ್ರಮಾಣಗೂಡಿದ ಷಟ್ಕಲೆ ಎನ್ನುವ ಬಸವಯ್ಯನ ವಚನಗಳು ಭೂತ ಮತ್ತು ವರ್ತಮಾನವನ್ನು ಒಂದೆಡೆ ತರುವ ಪ್ರಯತ್ನ ಮಾಡುತ್ತವೆ. ಚರಿತ್ರೆಯ ಕಾಲ ಕಲ್ಪನೆಯನ್ನು ಮೀರಿ ಕಾಲಾತೀತವಾಗುವ ಮಹೋನ್ನತ ಆಶಯಗಳನ್ನು ಬಸವಯ್ಯನಲ್ಲಿ ಕಾಣಬಹುದು. ಇದನ್ನು ಬೇಕಾದರೆ ಚರಿತ್ರೆಯ ನಿರಾಕರಣೆ ಎಂದು ಕರೆಯಬಹುದು. ಶಿಷ್ಟಕಾವ್ಯಗಳಲ್ಲಿದ್ದಂಥ ಕಾವ್ಯ ಚೌಕಟ್ಟು, ಬಂಧ ಅಷ್ಟಾದಶ ವರ್ಣನೆಗಳು, ಪೂರ್ವಸೂರಿಗಳ ಸ್ಮರಣೆ ಮುಂತಾದ ಸಿದ್ಧ ಚೌಕಟ್ಟನ್ನು ಮುರಿದು ಭಾಷಿಕವಾಗಿ, ಸಾಹಿತ್ತಿಕವಾಗಿ, ಸಾಂಸ್ಕೃತಿಕವಾಗಿ ಹೊಸ ವಿಶ್ಲೇಷಣಾ ಮಾದರಿಯೊಂದನ್ನು ಕಟ್ಟಿಕೊಡುತ್ತಾನೆ. ವೈದಿಕ ದರ್ಶನ ಮತ್ತು ಬದುಕಿನ ಕ್ರಮಗಳು ಜ್ಞಾನದ ಶುಷ್ಕ ಆಕರಗಳಾಗಿ ಬಸವಯ್ಯನಿಗೆ ಕಾಣುತ್ತವೆ. ಹಾಗಾಗಿ ‘ಆರು ದರುಶನವೆಲ್ಲ ಎನ್ನಬಾಚಿಯ ಕಲೆ’ ‘ಸಕಲವೇದಶಾಸ್ತ್ರ, ಪುರಾಣ, ಆಗಮಂಗಳು ಭಕ್ತನ ಬಾಗಿಲ ನೀರಿಂಗೆ ಸರಿಯಲ್ಲ’ ಎಂದು ಹೇಳುತ್ತಾನೆ. ಬಸವಯ್ಯ ಇಲ್ಲಿ ಎರಡಯ ರೀತಿಯ ಸಂವಾದವನ್ನು ಹುಟ್ಟುಹಾಕುತ್ತಾನೆ. ಒಂದು ಪರಂಪರೆಯ ಶುಷ್ಕತನಗಳೊಂದಿಗಿನ ಸಂವಾದ, ಎರಡು ಶರೀರ ಮೀಮಾಂಸೆಯ ಹಿನ್ನೆಲೆಯಲ್ಲಿ ರೂಪ ನಿರೂಪದೊಂದಿಗಿನ ಸಂವಾದ, ದಿನದ ಬದುಕಿನ ವಿದ್ಯಮಾನಗಳೇ ಬಸವಯ್ಯನ ಸಂವಾದದ ಪರಿಕರಗಳು. ಸಂವಾದರೂಪದ ಇಂಥ ಕಥಾ ನಿರೂಪಣೆಯೇ ದೇಸಿ ಅದ್ವಯವಾದಿಗಳ ಮಹತ್ವದ ಸಂಗತಿಗಳು. ಈ ರೀತಿಯ ಸಂವಾದಗಳು ಏಕಮುಖಿಯಾದ ಕಥಾ ನಿರೂಪಣೆಯನ್ನು ನಿರಾಕರಿಸಿ ಬಹುಮುಖಿ ಮತ್ತು ಅನುಭವಜನ್ಯ ಸಂಕಥನ ಮಾದರಿಗಳನ್ನು ದಕ್ಕಿಸಿಕೊಡುತ್ತವೆ. ಈ ಪರಿಯ ಸಂವಾದ ಬೆಳೆಯುವುದೇ ತನ್ನಿಂದ, ತಾನು ಎನ್ನುವ ಪ್ರಜ್ಞೆಯೊಳಗಿಂದ ಎನ್ನುವುದು ಮುಖ್ಯವಿಚಾರ. ರೂಪ ನಿರೂಪ ಸ್ವರೂಪೀಕರಣ ಮಾದರಿಯೊಂದನ್ನು ಇದು ಕಟ್ಟಿಕೊಳ್ಳುತ್ತದೆ.

ಪ್ರತಿಮೆಗಳ ಮೂಲಕ ವ್ಯಾವಹಾರಿಕ ಸತ್ಯವನ್ನು ಮೂರ್ತವಾಗಿ ಎದುರು ಬದುರಾಗುವ ಕ್ರಮ ಒಂದಾದರೆ, ಅಮೂರ್ತ ತತ್ವಗಳನ್ನು ಪ್ರತಿಮೆಯಾಗಿಸಿ ಜೀವ ತುಂಬಿಸಿ ಸಾರ್ಥಕಪಡಿಸುವ ಪರಿ ಮತ್ತೊಂದು. ಇದು ಬಾಚಿಕಾಯಕದ ಬಸವಯ್ಯನಲ್ಲಿ ವಿಶೇಷವಾಗಿ ಕಂಡುಬರುತ್ತದೆ. ‘ಐಘಟವೆಂಬ ಅಂಗದಲ್ಲಿ ಐದು ಕಂಬವ ಕಂಡೆ, ಆ ಕಂಬದನುವೇನೆಂಬುದು….’ ‘ನಿಜಾನಂದ ಎಂಬುವ ನಿತ್ಯನಾಥನ ಪಿಂಡದೊಳಗೆ ನಿಷ್ಠತಾಮೃತವೆಂಬ ದಿವ್ಯಾಮೃತ ಕುಂಭವುಂಟು’ ‘ಘೋರಾರಣ್ಯದ ಮಧ್ಯದಲ್ಲಿ ಮೇಲುಗಿರಿ ಪರ್ವತವೆಂಬ ಅಗ್ರದ ಕೊನೆಯ ಮೇಲೆ ಭಕ್ತಿ, ಜ್ಞಾನ, ವೈರಾಗ್ಯವೆಂಬ ಅಂಗಮಂಡಲದೊಳಗೆ’ ‘ಆರಾರಿಗೂ ಅಗೋಚರ ಅಸಾಧ್ಯವೆಂಬ ಅಷ್ಟಪುರಿಯೆಂಬ ಬಟ್ಟಬಯಲು ಪಟ್ಟಣದೊಳಗೆ’ ಮೇಲಿನ ಎಲ್ಲ ಸಾಲುಗಳು ಒಂದು ಕಥನ ಮಾದರಿಯನ್ನು ಬೆಳೆಸುವ ಪ್ರಯತ್ನ ಮಾಡುತ್ತವೆ.

ಜನಪದ ಕಥನ ಮಾದರಿಯೇ ಸೃಷ್ಟಿಶೀಲ ಮತ್ತ ವಿಕಾಸಶೀಲ ಪ್ರವೃತ್ತಿಯುಳ್ಳದ್ದು. ಬೇಕಾದ ಹಾಗೆ ಕಟ್ಟುವ ಮುರಿಯುವ, ಬೆಳೆಸುವ, ಸ್ವಾತಂತ್ರ‍್ಯವನ್ನು ಅಲ್ಲಿ ಕಾಣುತ್ತೇವೆ. ಅಲ್ಲಿ ನಿಯಮಕ್ಕಿಂತ ಸ್ವಚ್ಛಂದತೆಯೇ ಪ್ರಧಾನ. ಬಸವಯ್ಯನ ವಚನ ರಚನಾ ಮಾದರಿ ಕೂಡ ಈ ವಿಕಾಸಶೀಲ ಮಾದರಿಯನ್ನು ಅಳವಡಿಸಿಕೊಂಡಂಥದ್ದು. ಪ್ರತಿ ವಚನವು ಬಹಿರಂಗ ವಾಸ್ತವ ಮತ್ತು ಅದರ ಸವಿಸ್ತಾರ ನಿರೂಪಣೆಯೊಂದಿಗೆ ಅಂತರಂಗ ಕೇಂದ್ರಿತ ವಿಶ್ಲೇಷಣೆಯತ್ತ ಗಮನಹರಿಸುತ್ತದೆ.ಲೋಕ ಒಪ್ಪಿಕೊಂಡ ಪರಿಕಲ್ಪನೆಗಳ ಮೂಲಕ ತನ್ನ ವಚನಗಳನ್ನು ನಿರೂಪಿಸುವ ಬಸವಯ್ಯ ನಿರೂಪಕ ಮತ್ತು ವಸ್ತುನಿಷ್ಟ ವಿಶ್ಲೇಷಕನೂ ಆಗುತ್ತಾನೆ. ಈ ನಿರೂಪಕ ಬಸವಯ್ಯನಿಂದ ಪ್ರತ್ಯೇಕಗೊಂಡವನಲ್ಲ. ಆತನೊಳಗೇ ಇರುವಂಥವ. ರೂಪಕ್ಕೂ, ತತ್ವಕ್ಕೂ ನಿರ್ಮಿತವಾಗುವ ಇಲ್ಲಿನ ಅಧೇದ ಕಲ್ಪನೆ ಅನಿಕೇತನ ಗುಣವುಳ್ಳದ್ದು.

ಈ ರೀತಿ ಪಾರಂಪರಿಕ ಕಾವ್ಯಮಾರ್ಗದಲ್ಲಿ ಪೂಜ್ಯವೆನಿಸಿದ್ದ ಮಾದರಿಗಳನ್ನು ಮುರಿದು ಲೌಕಿಕದ ಕ್ಷುದ್ರವಸ್ತುಗಳನ್ನು ಅಲಕ್ಷಿತ ಪರಿಕರಗಳನ್ನು ಕಾವ್ಯದ ಆಕರಗಳನ್ನಾಗಿಸುವ ಪರಿಯನ್ನು ಲಘುವಿನ ಘನೀಕರಣವೆಂದು ಡಾ. ಡಿ. ಆರ್. ನಾಗರಾಜ ಗುರುತಿಸುತ್ತಾರೆ. ಇಂಥ ಪ್ರಕ್ರಿಯೆ ಹಾಗೂ ಪರಿಕಲ್ಪನೆಗಳ ಬಳಕೆಯಿಂದಾಗಿ ಬಸವಯ್ಯನ ವಚನಗಳು ಬಹು ಮುಖಿಯೂ ಹಾಗೂ ಸಂಕೀರ್ಣವೂ ಆಗಿ ಕಾಣಿಸುತ್ತವೆ. ಹಾಗೆ ದೇಸೀ ಲಯ ವಿನ್ಯಾಸಗಳ ವೃತ್ತಿಪರಿಭಾಷೆಗಳ ಹೆಚ್ಚುಗಾರಿಕೆಯಿಂದ ಆಸ್ವಾದಮಯವಾಗಿಯೂ ಬೆಳೆಯುತ್ತವೆ.

[1]ಸಂಕೀರ್ಣ ವಚನ ಸಂಪುಟ ೩, ಪು.೮೬, ವ. ೨೧೬

[2]ಸಂಕೀರ್ಣ ವಚನ ಸಂಪುಟ ೩, ಪು. ೮೨, ವ. ೨೧೦