೧. ಉನ್ನತ ವರ್ಗಗಳು ಮತ್ತು ಶರಣ ಚಳುವಳಿ

ಅನೇಕ ಉತ್ಪಾದಕ ಹಾಗೂ ಹಂಚಿಕೆಯ ಪ್ರಕ್ರಿಯೆಗಳನ್ನೊಳಗೊಂಡ ವಿವಿಧ ಸಾಮಾಜಿಕ ವಿಭಾಗಗಳ ಒಗ್ಗೂಡುವಿಕೆಯಿಂದ ಹುಟ್ಟಿದ ಶರಣ ಚಳುವಳಿ ಊಳಿಗಮಾನ್ಯ ಮಧ್ಯವರ್ತಿಗಳ ಶೋಷಣೆಯಿಂದ ತಮ್ಮ ತಮ್ಮ ಹಿತಾಸಕ್ತಿಯನ್ನು ರಕ್ಷಿಸಿಕೊಳ್ಳುದಕ್ಕಾಗಿ ವರ್ತಕ ಹಾಗೂ ಇತರ ಉತ್ಪಾದಕ ವರ್ಗಗಳನ್ನು ಒಟ್ಟಾಗಿಸಿದಂತೆ ಕಾಣುತ್ತದೆ. ವೀರಶೈವ ಧರ್ಮ ಸಕಲ ಜಾತಿಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡರೂ ಪ್ರತಿಯೊಂದು ಜಾತಿ ತನ್ನ ಮೂಲ ವಾಸನೆಯನ್ನು ಉಳಿಸಿಕೊಂಡೇ ಬದುಕಿದ್ದು ವಚನಗಳ ಅಧ್ಯಯನದಿಂದ ಖಚಿತವಾಗುತ್ತದೆ. ಹಲವು ಕವಲುಗಳಾಗಿ ಒಡೆದು ಹೋಗಿದ್ದ ಸಮಾಜವನ್ನು ಒಂದು ಗೂಡಿಸಲು ವಚನ ಚಳುವಳಿ ತಂದ ನಿಯಮಗಳೆಂದರೆ ಲಿಂಗದೀಕ್ಷೆ ಮತ್ತು ಇಷ್ಟಲಿಂಗಧಾರಣೆ. ಇದರಿಂದ ‘ಭವಿ’ ಮತ್ತು ‘ಭಕ್ತ’ ಎನ್ನುವ ಎರಡು ವರ್ಗಗಳು ಸೃಷ್ಟಿಯಾದವು. ಕಾರಣ ಕಸುಬುದಾರ ವರ್ಗಗಳ ಸಾಮಾಜಿಕ ಅಸಮಾನತೆ ತೊಲಗಿ ಸಮಾನತೆಯ ಪಾತಳಿ ಪ್ರಾಪ್ತವಾಯಿತು. ಇಂಥ ಕಸುಬುದಾರ ಕುಟುಂಬಗಳು ಊರಿನ ಅವಶ್ಯಕತೆಗಳ ಪ್ರಾಥಮಿಕ ಉತ್ಪಾದಕ ವರ್ಗಗಳಾಗಿದ್ದವು.ಚರಿತ್ರೆಯಲ್ಲಿ ಕಾಣಿಸುವಂತೆ ಊಳಿಗಮಾನ್ಯ ಮಧ್ಯವರ್ತಿಗಳು ಪ್ರಾಥಮಿಕ ಉತ್ಪಾದಕರನ್ನು ಯಾವುದೇ ಉದ್ಯಮ ಅಥವಾ ವ್ಯಾಪಾರದಲ್ಲಿ ತೊಡಗಿಕೊಳ್ಳದಂತೆ ಶೋಷಣೆಗೊಳಪಡಿಸಿದ್ದರು. ಯಾವ ವ್ಯವಸಾಯ, ಕೈಗಾರಿಕೆ ಹಾಗೂ ಕಾರ್ಮಿಕರನ್ನು ಹಳೆಯ ವೈದಿಕ ವ್ಯವಸ್ಥೆಯು ತುಚ್ಛವಾಗಿ ಕಂಡಿತೋ ಅಂಥವರಿಗೆ ವೀರಶೈವ ಚಳುವಳಿ ಉದ್ಧಾರದ ಹಾದಿಯಾಗಿ ಕಂಡಿತು.

ಹತ್ತನೆಯ ಶತಮಾನದ ನಂತರ ಅವಶ್ಯಕ ವಸ್ತುಗಳ ಉತ್ಪಾದನಾ ಹೆಚ್ಚಳ ರಫ್ತನ್ನು ಹೆಚ್ಚಿಸಿದ್ದಲ್ಲದೆ ಆಂತರಿಕ ಮಾರುಕಟ್ಟೆಯ ಬೆಳವಣಿಗೆಯನ್ನು ಪ್ರೋತ್ಸಾಹಿಸಿತು. ಇದರಿಂದ ವಿವಿಧ ಹಂತದಲ್ಲಿ ಎಲ್ಲ ತರಹದ ಉತ್ಪಾದಕರ ಹಾಗೂ ಮಾಲೀಕರ ಭಾಗವಹಿಸುವಿಕೆಯೂ ಹೆಚ್ಚಾಯಿತು. ಅಲ್ಲದೇ ಹೆಚ್ಚಿನ ಪ್ರಮಾಣದಲ್ಲಿ ನಿರ್ಮಿತವಾದ ಭೂ ಹಿಡುವಳಿಗಳು ಬಳಕೆದಾರ ಹೊಸವರ್ಗಗಳ ಹುಟ್ಟಿಗೂ ಕಾರಣವಾದವು. ಅದೂವರೆಗೂ ಸಣ್ಣ ಪುಟ್ಟ ಗೃಹಕೃತ್ಯದ ಸಂಪ್ರದಾಯದ ಆಚರಣೆಗಳಿಂದ ದೊರೆಯುತ್ತಿದ್ದ ಅಲ್ಪ ಆದಾಯದ ಮೇಲೆ ಅವಲಂಬಿತವಾಗಿದ್ದ ಪುರೋಹಿತವರ್ಗಕ್ಕೆ ಇದರಿಂದ ಸಾಕಸ್ಟು ಪ್ರಮಾಣದಲ್ಲಿ ಭೂಮಿ,ದಾನ, ದತ್ತಿ ಮತ್ತು ಅಧಿಕಾರದ ಸವಲತ್ತುಗಳು ಸಿಕ್ಕವು. ಹೀಗೆ ಉಗಮಗೊಂಡ ಭೂ ಮಾಲಿಕ ಕುಟುಂಬಗಳು ಉನ್ನತ ಮಟ್ಟದ ಜೀವನಶೈಲಿ ಅವಶ್ಯಕ ಮತ್ತು ಭೋಗವಸ್ತುಗಳಬೇಡಿಕೆಯನ್ನು ಹೆಚ್ಚಿಸಿತು. ಇದು ಶೋಷಣಾ ಮಾರ್ಗವನ್ನು ಮತ್ತಷ್ಟು ಬಲಪಡಿಸಿತು. ಇದು ದೇವಸ್ಥಾನ, ಮಠ, ಅಗ್ರಹಾರಗಳಂಥ ಸಂಸ್ಥೆಗಳು ಸಾಕಷ್ಟು ಪ್ರಮಾಣದಲ್ಲಿ ಸಂಪನ್ಮೂಲ ಕ್ರೋಢಿಕರಿಸಲು ಪ್ರೇರಣೆ ನೀಡಿತು. ಸಂಪ್ರದಾಯಗಳಲ್ಲಾದ ಬದಲಾವಣೆ ಮತ್ತು ಬದಲಾದ ಅಭಿರುಚಿಗಳಿಂದಾಗಿ ಬಳಕೆ ಪ್ರಮಾಣವೂ ಹೆಚ್ಚಿತು. ಹೀಗಾಗಿ ೧೦ ರಿಂದ ೧೩ನೇ ಶತಮಾನದಲ್ಲಿ ವಾಯುವ್ಯ ಕರ್ನಾಟಕದಲ್ಲಿ ಆದ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಗಳೂ ಬಹಳ ಪ್ರಮುಖವಾದಂಥವು. ಹೀಗೆ ಹೊಸ ಪಟ್ಟಣ, ನಗರ, ಮತ್ತು ಆರ್ಥಿಕತೆಯ ಪುನಾರಚನೆಯ ಪ್ರಕ್ರಿಯೆಗಳು ವೀರಶೈವರಲ್ಲಿ ಪ್ರತಿಷ್ಠಿತ ಶ್ರೀಮಂತ ವರ್ಗಗಳನ್ನು ಸೃಷ್ಟಿಸಿದವು. ಈಗಿನ ವೀರಶೈವ ಧರ್ಮದಲ್ಲಿರುವಂತೆ ಆಗಲೂ ಸಹ ಪುರೋಹಿತ, ವ್ಯಾಪಾರಿ ಹಾಗೂ ಇತರ ಉನ್ನತ ವರ್ಗಗಳು ಆ ಧರ್ಮದ ಪ್ರಮುಖ ಬೆಂಬಲಿಗರಾಗಿದ್ದ ಬಗ್ಗೆ ತಿಳಿದುಬರುತ್ತದೆ. ಧರ್ಮದ ನೇತೃತ್ವವಹಿಸಿಕೊಂಡವರು ಉಚ್ಚವರ್ಗದ ಬ್ರಾಹ್ಮಣರಾಗಿದ್ದರು. ಇಲ್ಲವೇ ವ್ಯಾಪಾರಸ್ಥ ಕುಟುಂಬದಿಂದ ಅಥವಾ ಪರಂಪರಾಗತ ಅಧಿಕಾರಿ ವರ್ಗಗಳ ಮೂಲದಿಂದ ಬಂದವರಾಗಿದ್ದರು. ಕೆಲವು ನಾಯಕರು ನಗರದಲ್ಲಿದ್ದುಕೊಂಡು ಧರ್ಮಕಾರ್ಯ ಕೈಗೊಂಡರೆ ಇನ್ನೂ ಕೆಲವರು ಸರ್ಕಾರದ ಪ್ರಮುಖ ಸ್ಥಾನಮಾನಗಳನ್ನು ಅಲಂಕರಿಸಿದ್ದರು. ಈ ಚಳುವಳಿಯನ್ನು ಸಂಘಟಿಸಿದ ಬಸವನೇ ಪ್ರಾಂತಾಧಿಕಾರಿ ಕುಟುಂಬದವನು. ಪ್ರಮುಖ ವಚನಕರರಲ್ಲಿ ಒಬ್ಬಳಾದ ಅಕ್ಕಮಹಾದೇವಿ ಕೋಟ್ಯಾಧೀಶನ ಮಗಳು.ಸಿದ್ಧರಾಮ ಪುರಾಣದಲ್ಲಿ ವರ್ಣಿಸಲ್ಪಟ್ಟ ಸಿದ್ಧರಾಮ ಸೊಲ್ಲಾಪುರ ಪಟ್ಟಣಕ್ಕೆ ಸೇರಿದವನು. ಹಂಪಿಯ ನಿವಾಸಿಗಳಾದ ಹರಿಹರ ರಾಘವಾಂಕರು ಲೆಕ್ಕಿಗರ ವಂಶದಿಂದ ಬಂದವರು. ಕೆರೆಯ ಪದ್ಮರಸ ಒಂದನೇ ಹೊಯ್ಸಳ ನರಸಿಂಹನ ಆಸ್ಥಾನದಲ್ಲಿದ್ದವನು. ಬಸವ ಪುರಾಣದ ಭೀಮಕವಿ (೧೩೬೫) ಸ್ಮಾರ್ಥಪಂಡಿತ. ವೀರಶೈವ ಧರ್ಮದ ಪುನರುತ್ಥಾರಕರಾದ ಲಕ್ಕಣ್ಣ ಹಾಗೂ ಜಕ್ಕಣಾರ್ಯರು ಪ್ರೌಢದೇವರಾಯನ ಆಸ್ಥಾನದಲ್ಲಿದ್ದವರು. ಈ ಹಿನ್ನೆಲೆಯಲ್ಲಿ ಇಡೀ ವಚನ ಚಳುವಳಿ ಹಾಗೂ ನಂತರದ ಬೆಳವಣಿಗೆಗಳು ನಗರಕೇಂದ್ರಿತ ಮತ್ತು ಸುಶಿಕ್ಷಿತ ವ್ಯಕ್ತಿಗಳ ಭಾಗವಹಿಸುವಿಕೆಯಿಂದ ಕೂಡಿದ್ದು ಎದ್ದುಕಾಣುತ್ತದೆ. ಅಲ್ಲದೆ ವ್ಯಾಪಾರಿಗಳ ಪಾತ್ರ ವೀರಶೈವ ಧರ್ಮ ರೂಪಿಕೆಯಲ್ಲಿಹಿರಿದಾಗಿ ಕಾಣುತ್ತದೆ.ವಚನ ಚಳುವಳಿ ಹುಟ್ಟಿ ವಿಸ್ತರಿಸಿದ ಪ್ರಮುಖ ನಗರಗಳಾದ ಕಲ್ಯಾಣ,ಸೊಲ್ಲಾಪುರ, ಪುಲಿಗೆರೆ, ಆಳಂದ, ಧಾರವಾಡ, ಬೆಳಗಾಂವಿ, ಬಸವ ಕಲ್ಯಾಣ, ಮನಗೂಳಿ ಇವು ಪ್ರಮುಖ ಧಾರ್ಮಿಕ ಹಾಗೂ ವ್ಯಾಪಾರಿ ಕೇಂದ್ರಗಳಾಗಿದ್ದವು. ಬಸವಪುರಾಣ ಹಾಗೂ ಚನ್ನಬಸವಪುರಾಣಗಳು ಮತ್ತು ಅವುಗಳ ಜನಪ್ರಿಯತೆ, ಪ್ರತೀಕರಣ ವೀರಶೈವ ಧರ್ಮಕ್ಕಿದ್ದ ದೊಡ್ಡ ದೊಡ್ಡ ವ್ಯಾಪಾರಿ ಹಾಗೂ ವ್ಯಾಪಾರಿ ಸಂಸ್ಥೆಗಳ ಪ್ರೋತ್ಸಾಹವನ್ನು ಎತ್ತಿತೋರಿಸುತ್ತವೆ.

ಹೀಗೆ ಮೇಲು ಶ್ರೀಮಂತ ವರ್ಗಗಳಿಂದ ಕೂಡಿದ ವೀರಶೈವ ಧರ್ಮದಲ್ಲಿ ಸ್ಮಾರ್ಥ ಬ್ರಾಹ್ಮಣರ ಪ್ರಭಾವ ಎದ್ದು ಕಾಣುತ್ತದೆ. ವೀರಶೈವ ಚಳುವಳಿಯಲ್ಲಿ ಸೇರಿದ ಇವರು ತಮ್ಮ ಶ್ರೇಷ್ಠತೆಯನ್ನು ಪ್ರತಿಪಾದಿಸುವುದಲ್ಲದೆ ಇತರ ಬ್ರಾಹ್ಮಣೇತರ ಸದಸ್ಯರ ಜೊತೆಗೆ ತಮ್ಮ ಉನ್ನತ ಸ್ಥಾನಮಾನಗಳನ್ನು ಹಂಚಿಕೊಳ್ಳಲು ಹಿಂಜರಿದರು. ತಮ್ಮ ಕರ್ಮಸಿದ್ಧಾಂತಗಳ ಕನವರಿಕೆಯನ್ನೇ ಮೇಲಾಗಿಸಿದರು. ಬಹುತೇಕ ವೀರಶೈವ ಕೃತಿಗಳು ಬ್ರಾಹ್ಮಣ ಪ್ರತಿಪಾದಿತ ಜಾತಿ ಶ್ರೇಣಿಗೆ ವಿಧೇಯತೆಯನ್ನು ತೋರುತ್ತವೆ. ಕರ್ನಾಟಕದಲ್ಲಿ ಈ ರೀತಿಯಾಗಿ ವರ್ಣಾಶ್ರಮ ಪ್ರಕಾರ ಪುನಾರಚನೆಗೊಂಡ ಶೈವ ಸಮುದಾಯವನ್ನು ದೈವೀ ಪ್ರೇರಿತವಾದುದೆಂದು ಭೀಮಕವಿ ಒತ್ತಿ ಹೇಳುತ್ತಾನೆ.

ಹೀಗೆ ಸಾಂಸ್ಥೀಕರಣಗೊಂಡ ಮತ್ತು ಅಸಮಾನ ನೆಲೆಗಳನ್ನೇ ಪೋಷಿಸುತ್ತಿದ್ದ ವ್ಯವಸ್ಥೆಯ ವಿರುದ್ಧ ಶರಣ ಚಳುವಳಿ ಸಂಘಟಿತಗೊಂಡಿತು.ಮೇಲ್ವರ್ಗದ ವಚನಕಾರರ ಅಧೋಮುಖ ಚಲನೆ ಕೆಳವರ್ಗದ ವಚನಕಾರರ ಊರ್ಧ್ವಮುಖ ಚಲನೆ. ಈ ಎರಡೂ ಚಲನೆಗಳ ಒಂದು ಸಮಾನ ಪಾತಳಿಯ ಸಂಯೋಗ ಬೃಹತ್ ಕ್ರಾಂತಿಗೆ ನಾಂದಿಯಾಯಿತು. ಕಸುಬುದಾರ ವರ್ಗಗಳಿಗೆ ದೊರೆತ ಈ ಆಂತರಿಕ ಸ್ಪೂರ್ತಿ ಹುಟ್ಟಿನ ಜಾತಿ ಶ್ರೇಷ್ಠತೆಯನ್ನು ನಿರಾಕರಿಸಿ ವೃತ್ತಿ ಸಾಧನೆಗೆ, ಆತ್ಮಾಭಿಮಾನಕ್ಕೆ ಮಾನವೀಯತೆಗೆ ಮಹತ್ವ ಕೊಟ್ಟಿತು. ಮೇಲ್ವರ್ಗದ ವಚನಕಾರರಿಗಿಂತ ಭಿನ್ನ ನೆಲೆ, ಚಿಂತನೆ ಮತ್ತು ಸಾಧನೆಗಳನ್ನು ಹೊಂದಿದ್ದ ಕಸುಬುದಾರ ವರ್ಗಗಳು ಇಡೀ ಚಳುವಳಿಗೆ ಪ್ರೇರಕ ಶಕ್ತಿಯಾಗಿದ್ದವು. ಪುಸ್ತಕದಲ್ಲಿ ಉಲ್ಲೇಖಗೊಂಡಂತೆ ಬಡಿಗ ಮತ್ತು ಅಕ್ಕಸಾಲಿ ವರ್ಗಗಳನ್ನು ಗಾಣಿಗರು ಹಾಗೂ ಹೆಂಡಮಾರುವವರನ್ನು ಅಂತ್ಯಜರ ಪಟ್ಟಿಯಲ್ಲಿ ಹೆಸರಿಸಲಾಗಿದೆ.ಇಂಥ ಕೆಳ ಮತ್ತು ಶ್ರಮಿಕ ವರ್ಗಗಳು ವ್ಯವಸ್ಥೆಯ ವಿಷಮತೆಗೆ ತೀವ್ರವಾಗಿ ಒಳಗಾಗುತ್ತವೆ. ಹಾಗೆ ಇವರೆ ಆ ವ್ಯವಸ್ಥೆಯ ಪ್ರತಿಭಟನಾಕಾರರೂ ಆಗುತ್ತಾರೆ. ಆದರೆ ಇಂಥ ಆಂದೋಲನದ ಮುಂದಾಳತ್ವವನ್ನುಮೇಲು ಸುಶಿಕ್ಷಿತ ವರ್ಗದ ಜನ ವಹಿಸಿಕೊಂಡುದುದರ ಪರಿಣಾಮವಾಗಿ ಕೇಳಜಾತಿಗಳಿಗೆ ವ್ಯತಿರಿಕ್ತವಾದಂಥ ಸಂಗತಿಗಳು ಶರಣ ಚಳುವಳಿಯಲ್ಲಿ ನುಸುಳಿದ್ದು ಸ್ಪಷ್ಟವಾಗಿದೆ. ಯಾಕೆಂದರೆ ಬಸವಪುರಾಣ ಮತ್ತು ಚನ್ನಬಸವ ಪುರಾಣಗಳಲ್ಲಿ ಸಿಗುವ ಉಲ್ಲೇಖಗಳು ವೀರಶೈವ ಧರ್ಮಕ್ಕಿದ್ದ ಶ್ರೀಮಂತ ವರ್ಗಗಳ ಬೆಂಬಲವನ್ನು ಸ್ಪಷ್ಟಪಡಿಸುತ್ತವೆ.

ವೀರಶೈವ ಧರ್ಮದ ಪ್ರಬಲ ಒತ್ತಾಸೆಯನ್ನು ವಚನಾಂದೋಲನದ ನಂತರ ಕಾಲದಲ್ಲಿ ಕಾಣುತ್ತೇವೆ. ಬಹುವಿಧ ವಿನ್ಯಾಸಗಳಿಂದ ಆಕೃತಿಗೊಂಡ ವಚನಾಂದೋಲನವನ್ನು ಒಂದು ನಿರ್ದಿಷ್ಟ ಧಾರ್ಮಿಕ ಹಾಗೂ ವ್ಯಕ್ತಿಗತ ನೆಲೆಯಲ್ಲಿ ಏಕಾಕೃತಿಗೊಳಿಸಲಾಯಿತು. ಹಾಗೆ ಮಾಡುವ ಮೂಲಕ ವರ್ತಮಾನದ ಬಿಕ್ಕಟ್ಟುಗಳಿಗೆ ಎದೆಯೊಡ್ಡಲು, ತನ್ನ ಚಾರಿತ್ರಿಕ ವೈಭವವನ್ನು ಸಮರ್ಥಿಸಿಕೊಳ್ಳಲು ಚರಿತ್ರೆಯ ಪುನಾರಚನೆಯ ಒಂದು ಭಾಗವಾಗಿ ವಚನಗಳನ್ನು ಪರಿಗಣಿಸಲಾಯಿತು. ಅಲ್ಲದೆ ವಚನಗಳ ಸಂಗ್ರಹ ಮತ್ತು ಅಧ್ಯಯನದ ಕಾಲ ಮತ್ತು ಸ್ಥಳಗಳು ವೀರಶೈವ ಪಾರಮ್ಯಕ್ಕೆ ಹೆಚ್ಚಿನ ಪ್ರಾಧಾನ್ಯತೆ ಸಿಕ್ಕ ಸಮಯವಾಗಿತ್ತು. ಇದರ ತೀವ್ರತೆ ಶ್ರಮಿಕವರ್ಗದ ವಚನಕಾರರು ಮತ್ತು ಅವರ ವಚನಗಳನ್ನು ಹಿನ್ನೆಲೆಗೆ ಸರಿಸಿತು.

ಹೀಗೆ ಮುಂಚೂಣಿಯಲ್ಲಿದ್ದ ಒಬ್ಬಿಬ್ಬರು ವಚನಕಾರರನ್ನು ಮುಂದಿಟ್ಟುಕೊಂಡು ಇಡೀ ವಚನಾಂದೋಲನ ಮತ್ತು ಅದರ ಫಲಿತಗಳನ್ನು ಗ್ರಹಿಸುವ ಕ್ರಮವು ಹಲವು ಮಹತ್ವದ ಸಂಗತಿಗಳನ್ನು ಕೈಬಿಟ್ಟು ಪ್ರಸಿದ್ಧವಾದ ಮತ್ತು ಪ್ರಚಲಿತವಾದ ಒಂದು ಸಿದ್ಧಸಂವೇದನೆಯನ್ನು ನಮ್ಮೆದುರಿಗೆ ನಿಲ್ಲಿಸುತ್ತದೆ. ಈ ರೀತಿ ಇಡೀ ವಚನಾಂದೋಲನವನ್ನು ಸಾಮಾನ್ನೀಕರಿಸುವ ಪ್ರವೃತ್ತಿ ಸರಿಯಾದುದಲ್ಲ.

ಕಸುಬುದಾರ ವರ್ಗಗಳಿಂದ ಭುಗಿಲೆದ್ದ ವಚನ ಚಳುವಳಿ ಮೆಲು ಕೀಳಿನ ತಾರತಮ್ಯತೆಯನ್ನು ಮೀರಿ ನಿಂತರೂ ಆಂತರ್ಯದ ಕೆಲ ಭಿನ್ನತೆಗಳು, ವೈರುಧ್ಯಗಳು ಅದರ ತೀವ್ರತೆಗೆ ಕಡಿವಾಣ ಹಾಕುತ್ತ ಬಂದವು. ಶ್ರಮಜೀವಿಗಳ ಆತ್ಮಗೌರವವನ್ನು ಹೆಚ್ಚಿಸಿ ಅವರ ಹಕ್ಕು ಬಾಧ್ಯತೆಗಳಿಗೆ ಒತ್ತಾಯಿಸಿತು. ಹನ್ನೊಂದನೆ ಶತಮಾನದ ಮಧ್ಯಭಾಗದ ಕರ್ನಾಟಕದ ಚರಿತ್ರೆಯನ್ನು ಅವಲೋಕಿಸಿದಾಗ ಅದರಲ್ಲೂ ವಿಶೇಷವಾಗಿ ಈ ಚಳುವಳಿಗಾರರು ಹುಟ್ಟಿ ಬೆಳೆದ ಪರಿಸರವನ್ನು ಗಮನಿಸಿದಾಗ ಚಳುವಳಿಯ ಸ್ವರೂಪ ಮತ್ತು ಅರ್ಥ ಮನದಟ್ಟಾಗುತ್ತದೆ. ಕಸುಬುದಾರರ ಮೇಲೆ ಹಾಕಲಾಗುತ್ತಿದ್ದ ತೆರಿಗೆಗಳನ್ನು ಗಮನಿಸಿದರೆ ಶ್ರಮಿಕ ವರ್ಗಗಳೇ ಈ ಚಳುವಳಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಧುಮುಕಿದ್ದರ ಅರ್ಥ ಸ್ಪಷ್ಟವಾಗುತ್ತದೆ. ಈ ಕಾಲದ ಶಾಸನಗಳನ್ನು ಗಮನಿಸಿದಾಗ ಬಡಿಗ, ಅಕ್ಕಸಾಲೆ, ನಾಯಿಂದ, ಅಂಬಿಗ, ಅಗಸ, ಕಮ್ಮಾರ, ಸೂಳೆ ಎಲ್ಲರೂ ತೆರಿಗೆ ಕಟ್ಟಬೇಕಿತ್ತು ಎಂಬುದು ತಿಳಿದುಬರುತ್ತದೆ. ಗಾಣದೆರೆ, ನೂಲುದೆರೆ, ಮಗ್ಗದೆರೆ, ಬಣ್ಣದೆರೆ, ಕುಲುಮೆದೆರೆಗಳಲ್ಲದೆ ಎತ್ತು, ಎಮ್ಮೆ, ಹಸು, ಕತ್ತೆ, ಆಡು, ಗಾಡಿ, ಕೊನೆಗೆ ತಿಪ್ಪೆಯ ಸುಂಕ ಕೂಡ ಪಾವತಿಯಾಗಬೇಕಿತ್ತು.

ಕಂಚೀಪುರಾಣದಲ್ಲಿ ಚೋಳರಾಜನಿಗೂ ಮತ್ತು ಪಾಂಚಾಳರಿಗೂ ಕಮ್ಮಾರರು ಕಬ್ಬಿಣ ದೆರೆ ಕೊಡುವ ವಿಷಯದಲ್ಲಿ ದೊಡ ವಾಗ್ವಾದವೇ ನಡೆಯುತ್ತದೆ. ಬಿಜ್ಜಳರಾಜನವರೆಗೂ ಈ ತಗಾದೆಹೋಗುತ್ತದೆ. ಬಗೆಹರಿಯಲಾರದೆ ವಿಶ್ವಕರ್ಮರು ಆರಾಧ್ಯದೈವವಾದ ಕಾಳಿಯ ಮೂಲಕ ರಾಜನನ್ನು ಮರ್ಧಿಸಿ ಸುಂಕದಿಂದ ವಿಮುಕ್ತಿಗೊಳ್ಳುತ್ತಾರೆ. ಈ ವಿವರಣೆ ಪ್ರಭುತ್ವಕ್ಕೂ ಮತ್ತು ಕಸುಬುದಾರ ವರ್ಗಗಳಿಗೂ ಸುಂಕದ ವಿಷಯದಲ್ಲಿ ನಡೆದ ಘರ್ಷಣೆಯನ್ನು ದಾಖಲಿಸುತ್ತದೆ. ಅಲ್ಲದೆ ವಚನ ಕಾಲದ ನಂತರ ಬಂದ ಮಂಟೇಸ್ವಾಮಿ ಮತ್ತುಸಿದ್ದಪ್ಪಾಜಿ ನಡುವಿನ ಕಬ್ಬಿನ ಸಂಬಂಧಿ (ಹುಲಗೂರ ಪಾಂಚಾಳರು) ಸಂಘರ್ಷಗಳು ಕೂಡ ಆಯಾ ವೃತ್ತಿಸಮುದಾಯಗಳು ತನ್ನ ವೃತ್ತಿಬಾಧ್ಯತೆಯ ಕುರುಹಾದ ಕಬ್ಬಿಣವನ್ನು ದಾನವಾಗಿ ನೀಡಲು ನಿರಾಕರಿಸುವ ಪ್ರಸಂಗಗಳ ದೃಷ್ಟಿಯಿಂದ ಚರ್ಚಾರ್ಹವಾದುವು.

ದುಡಿದುಣ್ಣದ ಒಂದು ವರ್ಗ ದುಡಿದುಣ್ಣುವ ವರ್ಗದಲ್ಲಿನ ಪಾಲನ್ನು ಕಸಿದುಕೊಳ್ಳುವ ಈ ಕ್ರಮ ಅಮಾನವೀಯ ಹಾಗೂ ಅಸಮಾನ ಸ್ವಭಾವವುಳ್ಳದ್ದು. ಬಹುಶಃ ಶರಣರ ಅಸಂಗ್ರಹ ತತ್ವಕ್ಕೆ ಕಾಯಕ ದಾಸೋಹಕ್ಕೆ ಇಂಥ ಘಟನೆಗಳೇ ಪ್ರೇರಕವಾಗಿರಬಹುದು.

ಇದೂ ಅಲ್ಲದೆ ತೆರಿಗೆ ವಸೂಲಿ ಹಿನ್ನೆಲೆಯಲ್ಲಿ ಕೃಷಿ ಕೈಗಾರಿಕೆ ಮತ್ತು ಕಸಬುಗಳನ್ನು ಹಾಗೂ ಕಸುಬುದಾರರನ್ನು ಧಾರ್ಮಿಕ ಸಂಸ್ಥೆಗಳಿಗೆ ವರ್ಗಾಯಿಸುವ ಪದ್ಧತಿ ರೂಢಿಯಲ್ಲಿತ್ತು. ಅವು ವ್ಯವಸಾಯಕ್ಕೆ ಹಾಗೂ ಗ್ರಾಮ ಕೈಗಾರಿಕೆಗಳಿಗೆ ಬೇಕಾದ ಮಾನವ ಸಂಪನ್ಮೂಲಗಳನ್ನು ಹತೋಟಿಯಲ್ಲಿಟ್ಟುಕೊಂಡಿದ್ದವು. ಇದರಿಂದ ಕಸಬುದಾರರ ಸ್ವಾತಂತ್ರ‍್ಯ ಕುಗ್ಗಿ ವ್ಯಾಪಾರ ವೃದ್ಧಿಸುವ ಅವಕಾಶ ಕಳೆದುಹೋಗಿತ್ತು. ಹೀಗೆ ನಿಸ್ಸಹಾಯಕ ಜನಸಮುದಾಯವನ್ನು ಶಿಕ್ಷಣ ಹಾಗೂ ಉದ್ಯೋಗದಿಂದ ವಂಚಿಸಿ ಕೆಲಸದಾಳುಗಳನ್ನಾಗಿ ಇಟ್ಟುಕೊಳ್ಳುತ್ತಿದ್ದ ಬಗ್ಗೆ ಧಾರವಾಡ ಜಿಲ್ಲೆಯ ಅಸೂಂಡಿ ಅಕ್ಕೆಶ್ವರ ದೇವಸ್ಥಾನದಲ್ಲಿನ ಶಾಸನವೊಂದು ಮಾಹಿತಿ ನೀಡುತ್ತದೆ. ಒಂದು ಸಾವಿರ ಮಂದಿ ಕೆಲಸಗಾರರು ಈ ದೇವಸ್ಥಾನದಲ್ಲಿ ಕೂಲಿಕಾರರಾಗಿದ್ದರು. ಇಂದಿನ ಪ್ರಜಾತಾಂತ್ರಿಕವ್ಯವಸ್ಥೆಯಲ್ಲಿ ಹಂಗರಹಳ್ಳಿಯಂಥ ಘಟನೆಗಳಲ್ಲಿ ಈ ಅಮಾನವೀಯ ನೆಲೆಗಳನ್ನು ಕಾಣಬಹುದಾಗಿದೆ. ಹೀಗೆ ವ್ಯವಸಾಯಗಾರರನ್ನು ಕಾರ್ಮಿಕರನ್ನು ಅಧೀನಕ್ಕೊಳಪಡಿಸಿಕೊಂಡ ಧಾರ್ಮಿಕ ಸಂಸ್ಥೆಗಳು, ಇಂಥವನ್ನು ಪ್ರೋತ್ಸಾಹಿಸಿದ ಸಂಪ್ರದಾಯ ಬ್ರಾಹ್ಮಣತ್ವವು ಬಹಳಷ್ಟು ಜನ ವರ್ತಕರ ಉತ್ಪಾದಕರ ಮತ್ತು ಕಸುಬುದಾರರ ಅತೃಪ್ತಿಗೆ ಮೂಲವಾಯಿತು.

ತೆರಿಗೆ ಭಾರದಿಂದ, ಕಂಗಾಲಾದ ಈ ವೃತ್ತಿ ಜೀವಿಗಳು ಊರು ಬಿಟ್ಟು ಗುಳೇಹೋದ ಪ್ರಸಂಗಗಳು ಚಾರಿತ್ರಿಕ ದಾಖಲೆಗಳಿಂದ ತಿಳಿಯುತ್ತವೆ. ಶರಣ ಚಳುವಳಿ ಬರೀ ಆಂಶಿಕ ಅಗತ್ಯವಾಗಿರದೇ ಆ ಕಾಲದ ಸಾಮಾಜಿಕ,ಆರ್ಥಿಕ, ರಾಜಕೀಯ ಅಗತ್ಯತೆಗಳ ಅನಿವಾರ‍್ಯತೆಯಾಗಿ ಮೂಡಿಬಂದದ್ದು ಸ್ಪಷ್ಟವಾಗುತ್ತದೆ. ಜಡವ್ಯವಸ್ಥೆಯ ವಿರೋಧಿಸಿ ಸರ್ವಸಮಾನತೆಯ ನೆಲೆಯಲ್ಲಿ ಇದು ಫಲರೂಪಿಯಾಯಿತು. ಮಾರ್ಕ್ಸ್‌ರವರ ಒಂದು ವಿಶ್ಲೇಷಣೆ ಈ ಸಂದರ್ಭಕ್ಕೆ ಪೂರಕವೆನಿಸುತ್ತದೆ. ಅದೆಂದರೆ ಔದ್ಯಮಿಕ ಕೇಂದ್ರಗಳ ಬೆಳವಣಿಗೆ ಕೈಗಾರಿಕೆಗಳಲ್ಲಿ ಜಾತಿಭೇದವಿಲ್ಲದೆ ದುಡಿಯುವ ಕ್ರಮದ ವಿಸ್ತರಣೆ ಇತ್ಯಾದಿಗಳು ಜಾತ್ಯಾಧಾರಿತ ವೃತ್ತಿಗಳ ಕ್ರಮವನ್ನು ಕ್ರಮೇಣವಾಗಿ ತೊಲಗಿಸುತ್ತವೆ. ಕಾರ್ಮಿಕ ವರ್ಗವಾಗಿ ಶ್ರಮಜೀವಿಗಳು ರೂಪಗೊಳ್ಳುತ್ತಾರೆ. ಅಸ್ಪೃಶ್ಯತೆ ಮೊದಲಾದವುಗಳು ಅಳಿಯುತ್ತಾ ಹೋಗುತ್ತವೆ. ಇದು ಇತಿಹಾಸದ ದಿಶೆ. ಆದರೆ ಇವುಗಳ ಪ್ರತಿಭಟನೆ ಎದುರಿಸದೆ ನಡೆಯುವುದಿಲ್ಲ. ಕಾರ್ಮಿಕ ವರ್ಗವಾಗಿ ರೂಪತಳೆಯುವಾಗ ಜಾತಿ ಭೇದವನ್ನೆದುರಿಸಿ ಹೋರಾಟ ನಡೆಸುತ್ತದೆ ಎನ್ನುವ ಮಾತು ಜಾತಿಯಿಲ್ಲದ ಸಮಾನ ವೃತ್ತಿಪರತೆಯನ್ನು ಹೇಳುವಂಥದ್ದಾಗಿದೆ. ಕಾಯಕದ ತಾತ್ವಿಕ ನೆಲೆಗೆ ಸಂಬಂಧಿಸಿ ಎಲ್ಲ ವಚನಕಾರರ ನಿಲುವು ಸಮಾನವಾದದು. ಇಲ್ಲಿ ಕಾಯಕದ ಮೂಲದ ಜಾತಿಗಳನ್ನು ನಿರಾಕರಿಸಿದಂತೆ ಕಂಡರೂ ಕಾಯಕ ಬದಲಾವಣೆಗೆ ಮನಸ್ಸು ಕೊಟ್ಟಿಲ್ಲ. ಈ ಕಾಯಕ ಬದಲಾಗಿದ್ದರೆ ವರ್ಗ ಸಂಘರ್ಷದ ಅರ್ಥ ನಿಜವಾದ ಕ್ರಾಂತಿಕಾರಿ ಎನಿಸುತ್ತಿತ್ತು. ಕಾಯಕ ಜೀವಿಗೆ ಜಾತಿ ಪ್ರಶ್ನೆಯಿಲ್ಲ ಎನ್ನುವುದು ವಚನ ಚಳುವಳಿಯ ಆತ್ಯಂತಿಕ ಸತ್ಯವಾಗಿತ್ತು.

ಅಸಂಗ್ರಹವನ್ನು ಸಹಿಸದ ದಿನದ ಕಾಯಕದಲ್ಲಿಯೇ ದಾಸೋಹ ಪ್ರಸಾದಗಳನ್ನು ರೂಢಿಸಿಕೊಂಡ ಶರಣರ ಬದಕು ಸುಂಕ ವಿರೋಧಿ ನೆಲೆಯದ್ದಾಗಿತ್ತು. ಅತಿಸಂಗ್ರಹ ತಾನೇ ತೆರಿಗೆಗೆ ದಾರಿ, ಇದೇ ಇರದಿದ್ದರೆ ತೆರಿಗೆಯ ಕಿರಿಕಿರಿ ಇರಲಾರದು. ಶರಣರ ಈ ತತ್ವ ಪ್ರಭುತ್ವ ಮತ್ತು ಅದರ ನೆರಳುಗಳಾದ ಶ್ರೀಮಂತಿಕೆ, ಆಡಂಬರತೆ ವ್ಯಕ್ತಿಪ್ರತಿಷ್ಠೆ ಅಸಮಾನತೆಗಳ ವಿರೋಧಿ ನೆಲೆಯಾಗಿ ರೂಪಪಡೆಯಿತು. ಶ್ರಮದ ಗೌರವ ತಗ್ಗಿ ಉಪಭೋಗಕ್ಕೆ ಸಿಗುವ ರಾಜ ಮರ್ಯಾದೆಯನ್ನು ನಿರ್ಭಿಡೆಯಿಂದ ವಿರೋಧಿಸಿದರು. ಜಾತಿ ನಿರಸನ ಪ್ರಕ್ರಿಯೆಗೆ ಚಾಲನೆ ನೀಡಿದರು. ದೇವಸಹಿತ ಭಕ್ತ ಮನೆಗೆ ಬಂದೆಡೆ ಕಾಯಕವಾವುದೆಂದು ಬೆಸಗೊಂಡೆನಾದಡೆ ನಿಮ್ಮಾಣೆ ನಿಮ್ಮ ಪುರಾತಣರಾಣೆ ತಲೆದಂಡ ಎನ್ನುವ ಬಸವಣ್ಣನವರ ವಚನ ಕುಲಕಸುಬುಗಳ ಮೂಲವಾಸನೆಯ ಮುಂದುವರಿಕೆಯನ್ನು ವ್ಯಂಜಿಸುತ್ತದೆ. ಭಕ್ತರಲ್ಲಿ ಕುಲವನರಸುವುದಕ್ಕೆ ಅವನ ಕಾಯಕವಾವುದೆಂದು ಕೇಳುವ ರೂಢಿಯಿತ್ತು. ‘ಉತ್ತಮ ಕುಲದಲ್ಲಿ ಹುಟ್ಟಿದವನೆಂಬ ಕಷ್ಟದ ಹೊರೆಯ ಹೊರೆಸಿದರಯ್ಯ ಚನ್ನಯ್ಯನ ಮನೆಯ ದಾಸಿಯ ಮಗನು’ ಎನ್ನುವಲ್ಲಿ ಬಸವಣ್ಣ ತನ್ನ ಹುಟ್ಟನ್ನೇ ಸಾಮಾಜಿಕ ನೀತಿಯ ಅಪವಿತ್ರತೆಯ ಪಲ್ಲಟದಲ್ಲಿ ಪವೀತ್ರೀಕರಿಸಿಕೊಳ್ಳುತ್ತಾನೆ. ಇಂಥ ಮಾತುಗಳನ್ನು ಆದರ್ಶೀಕೃತ ನೆಲೆಯಲ್ಲಾಗಲೀ ಅನುಕಂಪದ ಧಾಟಿಯಲ್ಲಾಗಲೀ ಗ್ರಹಿಸದೆ ವಾಸ್ತವ ಸ್ಥಿತಿಯ ಅರಿವಿನಲ್ಲಿ ಪರಾಂಬರಿಸಬೇಕಾಗುತ್ತದೆ. ಹಿಂದೆ ವಿವರಿಸಿದಂತೆ ವ್ಯವಸ್ಥೆಯ ಜೀವವಿರೋಧಿ ನೆಲೆಗಳ ವಿರುದ್ಧ ಕಸುಬುದಾರ ಸಮುದಾಯಗಳು ಸಾರಿದ ಬಂಡಾಯ, ಇಡೀ ವ್ಯವಸ್ಥೆಯ ಜಂಗಾಬಲವನ್ನೇ ಉಡುಗಿಸಿದ್ದು ಅರಿವಿಗೆ ಬರುತ್ತದೆ. ಕರ ಭಾರದಿಂದ ನರಳಿದ ಜನ ಕರ ವಿಮುಕ್ತಿಗಾಗಿ ಕೈಜೋಡಿಸಿದ್ದು ಪ್ರಭುತ್ವ ಮತ್ತು ಅದರ ಪರಿವಾರವನ್ನು ಕಂಗೆಡಿಸಿದಂತೆ ಕಾಣುತ್ತದೆ. ಕಸಬುದಾರರು ಕೊಡುವ ಆದಾಯವೇ ಪ್ರಭುತ್ವದ ಕವಳದ ಪ್ರಮುಖ ಆಧಾರವಾಗಿತ್ತು. ಇಂಥ ಬಂಡಾಯವನ್ನು ತಡೆಯಲು ಬಸವಣ್ಣನಂತಹ ಸಮನ್ವಯಕಾರರ ಅಗತ್ಯತೆ ಪ್ರಭುತ್ವಕ್ಕಿತ್ತು. ಯಾಕೆಂದರೆ ಬಸವಣ್ಣ ತನ್ನ ಮೂಲಜಾತಿಯನ್ನು ತೊರೆದರೂ ಬಹಳಷ್ಟು ವರ್ಷ ಬಿಜ್ಜಳನ ಪ್ರಧಾನಿಯಾಗಿದ್ದನೆಂಬುದು ಹಾಗೂ ಪ್ರಧಾನಿಯಾಗಿಯೇ ಶರಣ ಚಳುವಳಿಯ ನೇತೃತ್ವವಹಿಸಿದ್ದನೆಂದು ಹೇಳುವ ವಿವರಗಳು ಸಾಕ್ಷಿಯಾಗುತ್ತವೆ. ಕೆಳಜಾತಿಯ ಪ್ರಖರ ನೈತಿಕತೆಯ ಎದುರು ಮೇಲ್ಜಾತಿಯ ಅಪರಾಧಿ ಪ್ರಜ್ಞೆ, ಆತ್ಮವಿಮರ್ಶೆ ನೆಲೆಯಲ್ಲಿ ತನ್ನನ್ನು ತಾನು ಕೆಳಸ್ತರದ ಜನರ ಸಹಜ ಪ್ರವೃತ್ತಿಗಳೊಡನೆ ಗುರುತಿಸಿಕೊಂಡ ಬಸವಣ್ಣನ ಪ್ರಗತಿಪರ ನಿಲುವು ಕೆಲವೊಂದು ಪ್ರಶ್ನೆಗಳನ್ನು ಮುಂದೊಡ್ಡುತ್ತದೆ. ಅಲ್ಲಮ ನಂತಹ ಅದ್ಭುತ ಕವಿ ಮತ್ತು ಬಂಡಾಯ ಪ್ರಜ್ಞೆಯ ಎದುರು ಬಸವಣ್ಣ ಕೊಂಚ ಮಂಕಾಗಿ ಕಾಣುತ್ತಾನೆ. ಯಾಕೆಂದರೆ ಶರಣ ಚಳುವಳಿಯ ನಾಯಕನನ್ನಾಗಿ ಬಸವನನ್ನು ಬಿಂಬಿಸಿದ ಪರಿಕಲ್ಪನೆಗಳು ತಾತ್ವಿಕವಾಗಿ ಮತೀಯವಾದ ಏಕಮುಖ ಗ್ರಹಿಕೆಗಳಾಗಿ ಕಾಣಿಸುತ್ತವೆ. ಕೆಲವೊಂದು ಸಂದರ್ಭಗಳಲ್ಲಿ ಬಸವಣ್ಣ ತನ್ನ ಮೂಲ ಸಂವೇದನೆಗಳಿಂದ ಹೊರಬರಲು ಒದ್ದಾಡಿದಂಥ ಪ್ರಸಂಗಗಳು ಇಂಥ ಮಹತ್ವದ ಮಾತುಗಳಿಗೆ ಪೋಷಣೆಯನ್ನು ಒದಗಿಸುತ್ತವೆ. ಹರಿಹರನ ಪ್ರಕಾರ ಬಸವಣ್ಣನವರ ದರ್ಶನ ಮಾಡಲೆಂದು ಕಲ್ಯಾಣಕ್ಕೆ ಬಂದ ಕಿನ್ನರಿ ಬ್ರಹ್ಮಯ್ಯ ಮಹಾಮನೆಯಲ್ಲಿ ಈರುಳ್ಳಿ ಸುಲಿಯುತ್ತಿದರೆ ಬಸವಣ್ಣನವರು “ತಂದರಾರೀ ಅಭೋಜ್ಯವಸ್ತು” ಎಂದು ಸಿಡಿಮಿಡಿಗೊಂಡ ಸಂಗತಿಗಳು ಇದಕ್ಕೆ ನಿದರ್ಶನಗಳಾಗಬಹುದು. ಇದರಿಂದ ಕುಪಿತನಾದ ಬೊಮ್ಮಯ್ಯ ಮಹಾಮನೆಯಿಂದ ಹೊರನಡೆದಾಗ ಈರುಳ್ಳಿಯದೇ ಛತ್ರಚಾಮರ ಮಾಡಿ ಕರೆದು ಸಂತೈಸಿದ ಪರಿ ಬಸವಣ್ಣನ ಸೂಪ್ತಸಂವೇದನೆಗಳನ್ನು ಅರಿವಿಗೆ ತರುತ್ತದೆ.

ಇಲ್ಲಿ ಕುತೂಹಲವಾಗಿ ಕಾಣುವ ಸಂಗತಿ ಎಂದರೆ ನಮ್ಮ ಹಲವಾರು ವಿಮರ್ಶೆಗಳು ಕಾವ್ಯಗಳು ತಾತ್ವಿಕ ಗ್ರಂಥಗಳು ಸೂಚಿಸಿದ ಬಸವಣ್ಣನಂತಹ ಮೇರು ಸದೃಶ್ಯ ವ್ಯಕ್ತಿತ್ವವನ್ನು ಕಿನ್ನರಿ ಬ್ರಹ್ಮಯ್ಯನಂತಹ ಸಾಮಾನ್ಯ ಶರಣ ಪ್ರಶ್ನಿಸುವ ಸಂಗತಿ. ಕಿನ್ನರಯ್ಯನ ಈ ಆತ್ಮಾಭಿಮಾನ ಶ್ರಮಿಕ ವರ್ಗಗಳ ಪ್ರತೀಕವಾಗಿದೆ. ಇದರಿಂದ ಕೆಳವರ್ಗದಿಂದ ಬಂದ ಶ್ರಮಿಕ ವರ್ಗಗಳ ವಾಸ್ತವ ಪ್ರಪಂಚಕ್ಕೂ ಮೇಲ್ವರ್ಗದಿಂದ ಬಂದ ಬಸವಣ್ಣನಂತಹ ಶರಣರ ಪ್ರಪಂಚಕ್ಕೂ ಎಲ್ಲೋ ಒಂದು ಕಡೆ ತಾತ್ವಿಕ ವ್ಯತ್ಯಾಸ ಇದ್ದದ್ದು ಸ್ಪಷ್ಟವಾಗುತ್ತದೆ. ಈರುಳ್ಳಿಯದೇ ಛತ್ರಚಾಮರ ಎನ್ನುವ ಕಲ್ಪನೆ ಪ್ರಭು ಸನ್ನಿಹಿತವಾದ ರೂಪಕ. ಪ್ರಧಾನಿಯಾದ ಬಸವಣ್ಣ ಕಿನ್ನರಯ್ಯನನ್ನು ರಮಿಸುವ ರೀತಿ ಶ್ರಮಿಕ ವರ್ಗಗಳ ಸಂಘಟನೆಯ ಶಕ್ತಿಯನ್ನು ಗ್ರಹಿಕೆಗೆ ತರುತ್ತದೆ. ಯಾಕೆಂದರೆ ವಚನ ಚಳುವಳಿ ಜಾತಿನಿರಸನವನ್ನು ಹಾಗೂ ಸಮಾನತೆಯನ್ನು ಪ್ರಧಾನವಾಗಿಸಿಕೊಂಡರೂ ಅಂತಿಮವಾಗಿ ವ್ಯವಸ್ಥೆಯ ಎಲ್ಲ ರಾಡಿಯನ್ನು ಅದು ಗರ್ಭೀಕರಿಸಿಕೊಂಡಿತ್ತು ಎನ್ನುವುದು ಇಲ್ಲಿ ಸ್ಪಷ್ಟವಾಗುತ್ತದೆ. ತನ್ನ ಆಂತರಿಕ ದ್ವಂದ್ವಗಳಿಂದಾಗಿ ವಚನ ಚಳುವಳಿ ನಿಗದಿತ ಗುರಿ ಮುಟ್ಟುವಲ್ಲಿ ವಿಫಲವಾಗಿದ್ದು ಅಷ್ಟೆ ಸ್ಪಷ್ಟವಾಗಿದೆ.

ಈ ರೀತಿ ತೆರಿಗೆ, ವರ್ಗ, ವರ್ಣ ಜಾತಿವಿಷಮತೆಗಳಂಥ ಪ್ರಭುತ್ವ ಮತ್ತು ಪುರೋಹಿತಶಾಹಿ ಪ್ರಲೋಭನೆಗಳಿಂದ ಕಂಗಾಲಾದ ಜನರಲ್ಲಿ ಒಗ್ಗಟ್ಟಿನ ಮನೋಭಾವ ಬಂದು ಸಾಂಪ್ರದಾಯಿಕ ಕೊಳಕಿನ ವಿರುದ್ಧ ಬಂಡಾಯ ಸಾರುವ ಸಾಮರ್ಥ್ಯ ಮೂಡಿತಾದರೂ ಭಕ್ತ ಭವಿ ಎಂಬ ಭೇದ ಕಲ್ಪನೆಯಿಂದ ಜನರನ್ನು ಒಡೆಯಲಾಯಿತು. ಈ ಭೇದದೊಳಗೆ ಸಮಾನತೆಯ ಪ್ರಗತಿಪರ ಆಶಯಗಳು ಇರಬಹುದಾದರೂ ಆರ್ಥಿಕ ಸ್ವಾಲಂಬನೆಯಂಥವರ್ಗ ಸಂಘರ್ಷದ ಹಲವು ಒಳಸೂಕ್ಷ್ಮಗಳನ್ನು ತನ್ನ ತೆಕ್ಕೆಯಲ್ಲಿ ತಬ್ಬಿಕೊಂಡು ಬೆಳೆಯಿತು. ಇಂತಹ ಹಲವು ವಿಷಮತೆಗಳನ್ನು ತನ್ನ ಕಾಯಕ ದಾಸೋಹದ ಮೂಲಕ ತೊಲಗಿಸಿ ಸಮಾನತೆಯ ತತ್ವವನ್ನು ಬಿತ್ತುವ ಪರಿ ನಿಜಕ್ಕೂ ಸವಾಲಿನದು.ಎಲ್ಲವನ್ನು ಸ್ವಾರ್ಥಕ್ಕಾಗಿಯೇ ವ್ಯಾಪಾರದ ಸರಕಾಗಿಯೇ ನಿರ್ವಚಿಸುವ, ಪ್ರಕೃತಿ ವಿಮುಖವಾಗಿ ಬೆಳೆಯುತ್ತಿರುವ ಯಂತ್ರ ನಾಗರಿಕತೆಗೆ ಶರಣರ ಕಾಯಕ ತತ್ವ ಮಾದರಿಯಾಗಬೇಕಿದೆ. ತನ್ನ ಉಪಭೋಗಕ್ಕಾಗಿ ಅಭಿವೃದ್ಧಿಯ ಹೆಸರಿನಲ್ಲಿ ತನಗಿಂತ ದುರ್ಬಲವಾದ ಸಂಸ್ಕೃತಿ, ಸಮುದಾಯಗಳನ್ನು ಉಪೇಕ್ಷಿಸುವ, ತನ್ನ ಪ್ರಯೋಗ ಪ್ರಯೋಜನಕ್ಕಾಗಿ ಬಳಸುವ, ನಾಶಪಡಿಸುವ ಮನುಕುಲ ವಿರೋಧಿ ನೆಲೆಗಳು ಇಂದು ಜಾಸ್ತಿಯಾಗುತ್ತಿವೆ. ಇಂಥ ಸಂದರ್ಭದಲ್ಲಿ ಶ್ರಮಿಕ ವರ್ಗದ ಶರಣರ ಜೀವನ ಕ್ರಮಗಳ ಚಿಂತನೆ ಆಗಬೇಕಿದೆ. ಆ ಅರಿವಿನಲ್ಲಿ ಕಸುಬುದಾರ ವರ್ಗದಿಂದ ಬಂದ ಬಾಚಿಕಾಯಕದ ಬಸವಯ್ಯನಂಥವರನ್ನು ಇಲ್ಲಿ ನಿರ್ವಚನೆಗೊಳಪಡಿಸಲಾಗಿದೆ.

೨. ವೃತ್ತಿಗೌರವ ಮತ್ತು ಸ್ವಾಭಿಮಾನಿ ಬದುಕು

ಕಾಯಕಕ್ಕೆ ಒಂದು ಆಧ್ಯಾತ್ಮಿಕ ಆಯಾಮವನ್ನು ವಚನಕಾರರು ನೀಡಿದರು. ಜಾತಿಗಳಿಗೆ ಕಾರಣವಾದ ವೃತ್ತಿಗಳೆಲ್ಲವೂ ಸಮಾನ ಎಂದು ಸಾರಿದರು. ಬಾಚಿಕಾಯಕದ ಬಸವಯ್ಯ, ಮಡಿವಾಳ ಮಾಚಿದೇವ, ಮಾದರ ಚನ್ನಯ್ಯ, ಢಕ್ಕೆಯ ಬೊಮ್ಮಣ್ಣ, ಬಹುರೂಪಿಚೌಡಯ್ಯ, ಹೆಂಡದ ಮಾರಯ್ಯ, ಗಾಣದ ಕಣ್ಣಪ್ಪ, ಸೂಳೆ ಸಂಕವ್ವೆ ಹೀಗೆ ಜಾತಿಯ ಹೆಸರಿನಿಂದ ಗುರುತಿಸುವ ವಚನಕಾರರನ್ನು ಜಾತ್ಯತೀತರೆನ್ನುವುದು ಹೇಗೆ ಎನ್ನುವ ಪ್ರಶ್ನೆ ಏಳುತ್ತದೆ. ಇಲ್ಲಿ ಗಮನಾರ್ಹವಾದ ಅಂಶವೆಂದರೆ ಯಂತ್ರ ನಾಗರಿಕತೆ ಜಾತಿ ಸ್ಥರಗಳನ್ನು ಹೋಗಲಾಡಿಸುತ್ತಿದೆ. ಆದರೆ ಅದಕ್ಕಿಂತ ಅಪಾಯಕಾರಿಯಾದ ವರ್ಗವ್ಯವಸ್ಥೆಯನ್ನು ಹುಟ್ಟುಹಾಕುತ್ತದೆನ್ನುವುದನ್ನು ಮರೆಯಬಾರದು. ಇಂದು ನಮ್ಮ ಹೆಸರುಗಳ ಮುಂದೆ ನಮ್ಮ ವೃತ್ತಿ ಕುಲ ಕಸುಬುಗಳ ಹೆಸರುಗಳನ್ನು ಇಟ್ಟುಕೊಳ್ಳಲು ಹಿಂಜರಿಯುತ್ತಿದ್ದೇವೆ. ಆದರೆ ಶರಣರು ಆ ಕಾಲದಲ್ಲಿ ಮಾಡಿದ ಈ ಆಂದೋಲನ ಅವರ ವೃತ್ತಿನಿಷ್ಠೆಯನ್ನು ಸೂಚಿಸುತ್ತದೆ. ಮೇಲುವರ್ಗದ ಅಥವಾ ಬಂಡವಾಳಶಾಹಿಗಳ ಸಖ್ಯ ದೊರೆತರೆ ಸಾಕು ನಮ್ಮ ಪೂರ್ವಪರಂಪರೆಯನ್ನು ಮರೆತು ವರ್ತಿಸುವ ಇಂದಿನ ಸಂದರ್ಭದಲ್ಲಿ ಶರಣರ ಈ ತರ್ಕ ಮಾರ್ಗದರ್ಶಿಯಾದುದು. ಮೇಲ್ವರ್ಗದ ವಚನಕಾರರ ಸಖ್ಯ ಬಂದರೂ ಸಾಂಸ್ಕೃತೀಕರಣಕ್ಕೊಳಗಾದ ಕೆಳವರ್ಗದ ಶ್ರಮಿಕ ಜೀವಿಗಳ ಈ ಅಸ್ತಿತ್ವ ಆತ್ಮಸ್ಥೈರ್ಯದ ನೆಲೆಯದ್ದು. “ಕಾಶಿ ಕಮ್ಮಾರನಾದ ಬೀಸಿ ಮಡಿವಾಳನಾದ ಹಸನಿಕ್ಕಿ ಸಾಲಿಗನಾದ” ಎನ್ನುವ ಬಸವಣ್ಣನವರ ಮಾತು ಶರಣರು ಸಮಾಜವನ್ನು ಗ್ರಹಿಸಿದ ವೈಜ್ಞಾನಿಕ ರೀತಿಗೆ ಸಾಕ್ಷಿಯಾಗಿದೆ.

ಆವಜಾತಿ ಗೋತ್ರದಲ್ಲಿ ಬಂದರೂ ತಮ್ಮ ತಮ್ಮ ಕಾಯಕಕ್ಕೆ ಭಕ್ತಿಗೆ ಸೂತಕವಿಲ್ಲದಿರಬೇಕು ಎನ್ನುವ ಕನ್ನಡಿ ಕಾಯಕದ ಅಮ್ಮಿಗದೇವನ ಮಾತು ಕಾಯಕದಿಂದ ಕೀಳನ್ನು ಎನಿಸಬಾರದೆಂದು ಅರ್ಥವಾಗುತ್ತದೆ. “ಸೆಟ್ಟಿಯೆಂಬೆನೆ ಸಿರಿಯಾಳನ, ಮಡಿವಾಳನೆಂಬೆನೆ ಮಾಚಯ್ಯನ, ಮಾದಾರನೆಂಬೆನೆ ಚೆನ್ನಯ್ಯನ,ಆನು ಹಾರುವನೆಂದರೆ ಕೂಡಲ ಸಂಗಯ್ಯ ನಗುವನಯ್ಯ” ಎನ್ನುವ ಬಸವಣ್ಣನ ಮಾತುಗಳಲ್ಲಿ ಜಾತಿ ಹಾಗೂ ಸ್ವಾರ್ಥ ಮೂಲದ ಅಹಂಕಾರದ ಮೀರುವಿಕೆಯನ್ನು ಕಾಣುತ್ತೇವೆ.

ಜಾತ್ಯಾತೀತವಾದ ಉದ್ಯೋಗದ ಹಕ್ಕನ್ನು ಶರಣರು ಪ್ರತಿಪಾದಿಸಿದರು. ಕಸುಬುದಾರ ವಚನಕಾರರು ತಮ್ಮ ಕುಲಕಸುಬನ್ನು “ಸ್ವಕಾಯಕ” ಎಂದು ಅಭಿಮಾನದಿಂದ ಕರೆದುಕೊಂಡರು. ಕಾಯಕದಲ್ಲೇ ಕೈಲಾಸ ಕಂಡ ಶರಣರ ಈ ಆತ್ಮಾಭಿಮಾನ ಪ್ರವೃತ್ತಿಯೇ ಕಲ್ಯಾಣ ಕ್ರಾಂತಿಗೆ ದಿಟ್ಟತನವನ್ನೂ ಕಾರ್ಯಕ್ಷಮತೆಯನ್ನು ತಂದಿದ್ದು. ಇಂಥ ಸ್ವಾನುಭವವೇ ಜನ ಸಂಸ್ಕೃತಿಗಳ ಭಿನ್ನ ಬೆಡಗನ್ನು ಆಶಯ ವೈವಿಧ್ಯವನ್ನು ಆಧ್ಯಾತ್ಮದೊಡನೆ ಕಸಿಗೊಳಿಸಿ ಅದರ ಬಹುಆಯಾಮಗಳನ್ನು ಜೀವಂತವಾಗುಳಿಸಲು ಕಾರಣವಾಯಿತು.

ಸಾಂಸ್ಕೃತೀಕರಣ ಪ್ರಕ್ರಿಯೆಯಲ್ಲಿ ತನ್ನ ಅಸ್ತಿತ್ವವನ್ನೇ ಉಳಿಸಿಕೊಳ್ಳುವುದು ದುರ್ಬಲ. ಇಂದಿನ ಜಾಗತೀಕರಣ, ಉದಾರೀಕರಣದಂತಹ ಪ್ರಕ್ರಿಯೆಗಳು ತಂದು ಹಾಕುತ್ತಿರುವ ಪ್ರತಿಷ್ಠಿತ ಹಾಗೂ ಏಕಮುಖಿ ಜೀವನ ಕ್ರಮಗಳು ನಮ್ಮ ಅಸ್ತಿತ್ವವನ್ನೇ ಇಲ್ಲವಾಗಿಸುತ್ತಿವೆ. ಅಸ್ತಿತ್ವವೇ ಇಲ್ಲವಾದಾಗ ಅಭಿವ್ಯಕ್ತಿಗೆಲ್ಲಿ ಜಾಗ. ಅಂತಾದ್ದರಲ್ಲಿ ಈ ಕಸುಬುದಾರ ಶರಣರು ಕಸುಬನ್ನೇ ಚಳುವಳಿಯ ಮಟ್ಟಕ್ಕೆ ತಂದರು. ಮೇಲ್ಮುಖ ಚಲನೆಯಲ್ಲೂ ಅಸ್ತಿತ್ವದ ಉಳಿಕೆಯೊಂದಿಗೆ ತನ್ನ ಪರಿಸರ ಹಾಗೂ ಅಭಿವ್ಯಕ್ತಿ ಕ್ರಮಗಳನ್ನು ಮೂಲಸಂಸ್ಕೃತಿಯೊಂದಿಗೆ ಕಾಪಾಡಿಕೊಂಡು ಬಂದಿದ್ದು ಕುತೂಹಲಕರವಾದದ್ದು.

ಕಸುಬುದಾರ ಶರಣರ ಒಟ್ಟು ಅಭಿವ್ಯಕ್ತಿಯ ನೆಲೆಗಳನ್ನು ಗಮನಿಸಿದಾಗ ಸ್ಪಷ್ಟವಾಗುವುದು ತನ್ನ ತನವನ್ನು ಬಿಟ್ಟುಕೊಡದ ಛಲ. ಬೇರೆ ಯಾವುದೇ ಮೂಲಕ್ಕೆ ನೆಗೆದು ಬದುಕದೇ ತನ್ನ ಮೂಲ ಸಂರಚನೆಯನ್ನೇ ಸಾಧನೆಯ ಹಂತಕ್ಕೆ ಏರಿಸಿದ್ದು, ದಿನದ ಕಾಯಕ ಕರ್ಮಗಳನ್ನೇ ಸಾಧನೆಯ ಪರಿಕರಗಳನ್ನಾಗಿ ಬಳಸಿಕೊಂಡಿದ್ದು, ಕನ್ನಡ ಭಾಷೆಯ ಬಹುಳತೆಯ ಬಳಕೆಯ ಸಾಧ್ಯವಾಗಿದ್ದು ಗಮನಾರ್ಹ ಅಂಶಗಳು. ‘ಅಟ್ಟೆಯ ದುರ್ಗುಣಕ್ಕೆ ಕೆಟ್ಟು ಮೆಟ್ಟಡಿಯವರೆಗೆ ಮೆಟ್ಟಿಸ ಬಂದೆ ಅಟ್ಟೆಯ ಚುಚ್ಚುವ ಉಳಿಯ ಮೊನೆಯಲ್ಲಿ ಪ್ರತ್ಯಕ್ಷವಾದ ಪರಮೇಶ್ವರ ಕಂಡು ಇತ್ತಲೇಕಯ್ಯ (ಬಂದೆ) ಕಾಯಕದ ಲೆತ್ತಿಯ ಹೊತ್ತಾಡುವನತ್ತ’ ಎನ್ನುವ ಮಾದಾರ ಚೆನ್ನಯ್ಯನ ಮಾತು ತುಂಬ ಅರ್ಥಪೂರ್ಣವೆನಿಸುತ್ತದೆ. “ಆರು ದರ್ಶನವೆಲ್ಲ ಎನ್ನ ಬಾಚಿಯ ಕಲೆ, ಮಿಕ್ಕಾದ ಮೀರಿದ ಅವಧೂತರುಗಳೆಲ್ಲ ಎನ್ನ ಉಳಿಯೊಳಗಣ ಒಡಪು ಇಂತಿವ ಮೀರಿ ವೇಧಿಸಿ ಭೇದಿಸಿಹೆನೆಂಬರೆಲ್ಲ ಎನ್ನ ಕೊಡತಿಯಡಿಯಲ್ಲಿ ಬಡೆಯಿಸಿ ಕೊಂಬ ಬಡಿಹೋರಿಗಳು….” ಬಾಚಿಕಾಯಕದ ಬಸವಣ್ಣನ ಮಾತುಗಳು ವಾಸ್ತವದ ಸಂವೇದನೆಗಳೊಂದಿಗೆ ಪಾರಮಾರ್ಥವನ್ನು ಗಳಿಸಿದ್ದು ಕಾಣುತ್ತದೆ. ನೇಮ ನಿತ್ಯ ವ್ರತ ಪೂಜೆಗಳನ್ನೆಲ್ಲ ಹಿಂದಿಟ್ಟು ಶ್ರದ್ಧೆ ಮತ್ತು ಶ್ರಮಗಳ ಸಹಾಯದಿಂದಲೇ ಸಾಯುಜ್ಯ ಪಡೆದವರು. ಅಂಬಿಗರ ಚೌಡಯ್ಯ ಹೇಳುವಂತೆ ‘ಹಸಿಯ ತೊಪ್ಪಲವ ತಂದು ದೇವರ ಮಸ್ತಕದ ಮೇಲೊಟ್ಟುವ ಆ ತೊಪ್ಪಲನೆ ತಂದು ಬಿಸಿ ಮಾಡಿ ಪಶುಪತಿ ಎಂಬ ಜಂಗಮಕ್ಕೆ ನೀಡಿದೊಡೆ ಆ ಜಂಗಮದ ಬಸಿರು ತುಂಬಿತ್ತು’ ಎನ್ನುವ ಮಾತು ಹುಸಿ ಪೂಜೆಯ ಮತ್ತು ಪ್ರಕೃತಿ ಫಲಗಳ ವಿನಾಶದ ಸಂಗತಿಯನ್ನು ಹೇಳುತ್ತದೆ. ಆದರೆ ಶ್ರಮ ಸಂಸ್ಕೃತಿ ಕಸದಲ್ಲಿಯೇ ರಸವನ್ನು ಕಾಣುವಂಥದ್ದು. ಹಸಿಯ ತೊಪ್ಪಲನ್ನು (ಬಿಲ್ವಪತ್ರಿ) ಅರೆದು ಕುಡಿದು ಹಸಿವನ್ನು ಹಿಂಗಿಸಿಕೊಳ್ಳುವ ಇಲ್ಲಿನ ಪರಿ ಜೀವಪರ ನೆಲೆಯದ್ದು. ಬಿಲ್ವಪತ್ರಿಗಳಂತಹ ಹಸಿ ತೊಪ್ಪಲುಗಳ ಸಾಂದರ್ಭಿಕ ಬಳಕೆಯ ಸಾಂಕೇತಿಕತೆಯನ್ನು ಇಲ್ಲಿ ಕಾಣಬಹುದು. ಹುಸಿ ಆಧ್ಯಾತ್ಮಕ್ಕಿಂತ ಇಲ್ಲಿ ಅನ್ನ ಮುಖ್ಯ.

ಮೇಲುವರ್ಗದ ಬಹಳಷ್ಟು ವಚನಕಾರರು ತಮ್ಮ ವಚನಗಳ ಕೊನೆಯಲ್ಲಿ ಇಷ್ಟದೈವವನ್ನು ತಮ್ಮ ಅಂಕಿತವನ್ನಾಗಿಸಿದರೆ ಬಹಳಷ್ಟು ಕಸುಬುದಾರ ವಚನಕಾರರು ತಮ್ಮ ಹೆಸರು ಮತ್ತು ಅಂಕಿತಗಳನ್ನು ವೃತ್ತಿಸೂಚಕ ಪದಗಳನ್ನೇ ಅಂಕಿತವಾಗಿಟ್ಟುಕೊಂಡರು. ತುರುಗಾಹಿ ರಾಮನಾಥ, ಅಂಬಿಗರ ಚೌಡಯ್ಯ, ಬಾಚಿಕಾಯಕದ ಬಸವಯ್ಯ, ಕದಿರೆಯ ರೆಮ್ಮವ್ವೆ, ಮಾದಿಗರ ಹರಳಯ್ಯ, ಕಿನ್ನರಿ ಬ್ರಹ್ಮಯ್ಯ, ಮಾದಾರ ಚೆನ್ನಯ್ಯ, ಡೋಹರ ಕಕ್ಕಯ್ಯ, ನುಲಿಯ ಚಂದಯ್ಯ ಇತ್ಯಾದಿ ಶ್ರಮ ಮತ್ತು ಸ್ವಾಭಿಮಾನದ ಸಂಕೇತಗಳಾಗಿ ಕಾಣುವ ಈ ಹೆಸರುಗಳು ಸ್ವಸಂಸ್ಕೃತಿಯ ಅನನ್ಯತೆಯ ಚಿತ್ರಣವನ್ನು ಕಟ್ಟಿಕೊಡುತ್ತವೆ. ಬದುಕಿನ ಬದ್ಧತೆಯನ್ನು ಒತ್ತಿಹೇಳುತ್ತವೆ. ಜಾಗತೀಕರಣದ ಪ್ರಕ್ರಿಯೆಗಳು ವಿವಿಧ ರಚನಾತ್ಮಕ ಕಾರ್ಯಗಳ ಸೆರಗಿನಲ್ಲಿ ಇಂಥ ಪ್ರಕೃತಿ ಮುಖಿ ಬದುಕಿನ ಬಹುಮುಖತೆಗಳನ್ನು ಇಂದು ವಿಮುಖಗೊಳಿಸುತ್ತಿವೆ. ಜಾಗತೀಕರಣ ಶಕ್ತಿಗೆ ಸಾಮಾಜಿಕ ರಾಜಕೀಯ ಸಾಂಸ್ಕೃತಿಕ ಸಂಬಂಧಗಳ ಅನನ್ಯತೆ ಬೇಕಿಲ್ಲ. ಇಂಥ ವಿಚ್ಛೇದಕ ಪ್ರವೃತ್ತಿಗಳು ಇಂದು ಜನಸಾಮಾನ್ಯರ ಉತ್ಪಾದನೆ ಹಾಗೂ ಮನಸ್ಸುಗಳನ್ನು ಒಡೆದು ಹಾಕುತ್ತಿವೆ. ಹೀಗಾಗಿ ಇಂಥ ವಿಷಮಕರ ಸ್ಥಿತಿಯಲ್ಲಿ ಕಸುಬುದಾರ ಶರಣರ ವೃತ್ತಿ ಬದ್ಧತೆ ಮತ್ತು ಸಾಮುದಾಯಿಕ ಪ್ರವೃತ್ತಿಗಳ ಅಧ್ಯಯನ ಜರೂರು ಎನಿಸಿದೆ.

ಪ್ರತಿಯೊಂದು ರಂಗ ಯಾಂತ್ರೀಕರಣವನ್ನೇ ಪ್ರಧಾನವಾಗಿ ಅವಲಂಬಿಸಿರುವುದರಿಂದ ಸ್ಥಳೀಯ ಸ್ವಾವಲಂಬಿ ಬದುಕು ಇಲ್ಲವಾಗುತ್ತಿದೆ. ಸ್ಥಳೀಯ ಉತ್ಪಾದನೆಯ ಮುಖ್ಯಗುಣ ಮಾನವಮುಖಿ ಸಂಬಂಧಗಳನ್ನು ಗಟ್ಟಿಗೊಳಿಸುವುದು. ಆ ಮೂಲಕ ವ್ಯಕ್ತಿಯ ಬೆಳವಣಿಗೆಗೆ ಆತನ ಸಾಂಸ್ಕೃತಿಕ ಲೋಕದ ವಿಸ್ತಾರಕ್ಕೆ ಹಾಗೂ ಆರ್ಥಿಕ ಬದ್ಧತೆಗೆ ಹಂಬಲಿಸುವಂಥವುಗಳಾಗಿರುತ್ತವೆ. ಕೃತಿ ಮತ್ತು ಕೈಗೂ ಇಲ್ಲಿ ಅವಿನಾಭಾವ ಸಂಬಂಧವಿರುತ್ತದೆ. ಶರಣರಲ್ಲಿ ಇದನ್ನು ದಟ್ಟವಾಗಿ ಕಾಣಬಹುದು.

೩.ಕ್ರಿಯೆ-ಅರಿವು

ಇಂದು ಶ್ರಮದ ಸ್ವರೂಪ ಬದಲಾಗಿದೆ. ಬುದ್ಧಿ ಮತ್ತು ಭಾವನೆ, ಶ್ರಮ ಮತ್ತು ಕ್ರಿಯೆಗೆ ಪರಸ್ಪರ ಸಂಬಂಧವಿಲ್ಲದಂತಾಗಿದೆ. ಕ್ರಿಯೆ ಮರೆದಲ್ಲಿ ಅರಿವು ಹೀನವಾಗಿಪ್ಪುದು ಎನ್ನುವ ಮಾತಾಗಲೀ ಕೈತಪ್ಪಿ ಕೆತ್ತಲು ಕಾಲಿಂಗೆ ಮೂಲ, ಮಾತು ತಪ್ಪಿ ನುಡಿಯಲು ಬಾಯಿಗೆ ಮೂಲ, ಅಥವಾ ಕಾಯಕ ತಪ್ಪಿದಡೆ ಸೈರಿಸಬಾರದು, ವ್ರತ ತಪ್ಪಲೆಂತೂ ಸೈರಿಸಬಾರದು ಎನ್ನುವ ಪುಣ್ಯಸ್ತ್ರೀ ಕಾಳವ್ವೆಗಳ ವಚನದ ಸಾಲುಗಳು ಕ್ರಿಯೆ ಮತ್ತು ಅರಿವು ಅಂದರೆ ಶ್ರಮ ಮತ್ತು ಜ್ಞಾನ ಇವುಗಳು ಹೊಂದಾಣಿಕೆಯ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತಿವೆ. ಅರಿವಿನ ಮಾರಿ ತಂದೆಯ ವಚನವು ಇಲ್ಲಿ ‘ಉಪಯುಕ್ತ’ ವೆನಿಸುತ್ತದೆ.

ಹಾಲು ಬತ್ತದ ಹಸುವಿಂಗೆ ಕರುವ ಬಿಟ್ಟೆಡೆ
ಒದೆವುದಲ್ಲದೆ ಉಣಲೀಸುವುದೆ
ಅರಿವು ನಷ್ಟವಾದವ ಕ್ರಿಯೆ ಬಲ್ಲನೆ
ಕ್ರಿಯೆ ಎಂಬುದು ಹಸು ಅರಿವೆಂಬುದು ಹಾಲು
ಬಯಕೆ ಎಂಬುದು ಕರು[1][2]

ಶ್ರಮ ಜೀವನಾಧಾರವಾದ ಶಕ್ತಿಯಾದರೆ ಅರಿವು ಜೀವ ಪೋಷಕ ಫಲ. ಇವೆರಡರ ಸಾತತ್ಯವೇ ಬಯಕೆ ಎಂಬ ಕರು. ಶ್ರಮ, ಬುದ್ಧಿ, ಹಾಗೂ ಬಯಕೆಗಳ ಅರ್ಥಪೂರ್ಣ ಸಂಬಂಧಗಳ ಮೇಲೆ ಈ ವಚನ ಬೆಳಕು ಚೆಲ್ಲುತ್ತದೆ. ಹುಟ್ಟಿನಿಂದ ಶ್ರೇಷ್ಠರೆನಿಸಿಕೊಳ್ಳುವುದರ ಹಿಂದಿನ ಮೇಲು ಕೀಳಿನ ಭೇದಭಾವಕ್ಕೂ ಶ್ರಮ ಮರೆತು ಜ್ಞಾನ ಹೀನನಾಗುವ ನಿರ್ವೀರ್ಯನಾಗುವ ವಚನಕಾರರ ದೃಷ್ಠಿಗೂ ಎಂತಹ ವ್ಯತ್ಯಾಸ. ಶರೀರ ಭೇದಿಸಿ ಬುದ್ಧಿ ಮತ್ತು ಕ್ರಿಯೆಗಳನ್ನು ಎರಡಾಗಿಸಿ ವರ್ಗ ಭೇದದ ಬೀಜ ಬಿತ್ತಿ ಅಸಮಾನತೆಯನ್ನೇ ಪೋಷಿಸುವ ನೀತಿ ವೈದಿಕ ಮನಸಿನದು. ಶ್ರಮ ಮತ್ತು ಜ್ಞಾನವನ್ನು ಸಮನ್ವಯಗೊಳಿಸಿ ಅದನ್ನು ಶರೀರದ ಉತ್ಪಾದನೆಯಾಗಿ ಕಾಣುವ ಆಶಯ ವಚನಧರ್ಮದ್ದು.

ಹೀಗೆ ಶ್ರಮ ಹಾಗೂ ಜ್ಞಾನವನ್ನು ಬೇರ್ಪಡಿಸಿ ಅದನ್ನು ಜಾತಿ ಸ್ಥರಗಳಿಗೆ ಬದ್ಧಗೊಳಿಸಿ ಬೆಳೆಸಿದ ವೈದಿಕ ಮನಸ್ಸಿನ ಪರಿ ಒಂದು ರೀತಿಯದಾದರೆ, ಇಂದಿನ ಯಾಂತ್ರಿಕ ಯುಗ ಈ ಸಂಬಂಧವನ್ನು ನೋಡಿದ ರೀತಿ ಇನ್ನೊಂದು ಬಗೆಯದು. ಇಲ್ಲಿ ಜಾತಿ ಸ್ಥರಗಳು ಗೌಣವಾದರೂ ಮಾನವನ ಅಸ್ಥಿತ್ವವೇ ಇಲ್ಲವಾಗಿದೆ. ಕ್ವಾಂಟಂ ಭೌತಶಾಸ್ತ್ರದ ಆರಂಭಿಕ ಹಂತದಲ್ಲಿ ವಸ್ತುವಿನ ಜೊತೆ ವ್ಯಕ್ತಿಯೂ ಪ್ರಾಮುಖ್ಯವಾಗಿತ್ತು. ಆದರೆ ವಿಜ್ಞಾನದ ಸರ್ವಾಧಿಕಾರ ಕೇಂದ್ರಿತ ಜೀವಚ್ಛೇದ ನೀತಿಯಿಂದಾಗಿ ಅಂತಿಮವಾಗಿ ಯಂತ್ರವೇ ಮೇಲುಗೈ ಸಾಧಿಸಿತು. ಇಂದಿನ ಕಂಪ್ಯೂಟರ್ ಜಾಲ ಕೂಡ ವ್ಯಕ್ತಿ ರಹಿತವಾದ ಪರಿಸರವನ್ನು ನಿರ್ಮಿಸುತ್ತಿದೆ. ಉತ್ಪಾದನೆ ಪ್ರಕ್ರಿಯೆಯಲ್ಲಿ ಮಾನವ ಸಂಪನ್ಮೂಲವನ್ನು ಸಿಮೀತಗೊಳಿಸಿ ಯಂತ್ರವನ್ನೇ ಪ್ರಧಾನವಾಗಿಸುವ ಈ ಕ್ರಿಯೆ ಜೀವ ವಿರೋಧಿ ನೆಲೆಯದ್ದು.

ಉದಾರವಾದ ದರ್ಶನದಲ್ಲಿ ದೇಹ ಎನ್ನುವುದು ಆತ್ಮದ ಮತ್ತು ಅನ್ಯದ ನಡುವಿನ ಗಡಿಯನ್ನು ಸಾರ್ವಜನಿಕ ಹಾಗೂ ಖಾಸಗೀ ಜಗತ್ತುಗಳ ನಡುವಿನ ಸೀಮೆಯನ್ನು ಖಚಿತಗೊಳಿಸುವ ಮಾಧ್ಯಮ. ಜೊತೆಗೆ ಯಂತ್ರವೂ ಕೂಡ ಮನುಷ್ಯ ದೇಹದ ಒಂದು ವಿಸ್ತರಣೆ ಎಂದೇ ಮಾನವತಾವಾದ ಭಾವಿಸುತ್ತದೆ. ದೇಹವೆನ್ನುವುದು ಒಟ್ಟು ತಾಂತ್ರಿಕ ಕಲ್ಪನಾ ವಿನ್ಯಾಸಕ್ಕೆ ಮೂಲ ಹಂದರ, ಕೈ ಕಾಲುಗಳ ಅದರ ಮಾಪಕ.

ಆದರೆ ವೈದಿಕ, ಆಧ್ಯಾತ್ಮಿಕ ಪರಿಧಿಯಲ್ಲಿ ದೇಹಕ್ಕೆ ಬೆಲೆಯಿಲ್ಲ. ಅದು ಜಡವಾದದ್ದು. ವಚನಕಾರರಲ್ಲಿ ಅದು ಸೃಷ್ಟಿಶೀಲವಾದುದು. ಜಡವಾದ ದೇಹವನ್ನು ಜಂಗಮವಾಗಿಸುವ ಪರಿಯನ್ನು ಬಸವಣ್ಣನವರ ಒಂದು ವಚನದಿಂದ ತಿಳಿಯಬಹುದು.

ಉಳ್ಳವರು ಶಿವಾಲಯ ಮಾಡುವರು
ನಾನೇನು ಮಾಡಲಿ ಬಡವನಯ್ಯ
ಎನ್ನ ಕಾಲೇ ಕಂಬ ದೇಹವೇ ದೇಗುಲ
ಶಿರ ಹೊನ್ನ ಕಳಶವಯ್ಯ
ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ
ಕೂಡಲ ಸಂಗಮದೇವಾ[3]

ಕಾಯವನ್ನು ಕಾಯಕವಾಗಿಸಿಕೊಳ್ಳುವ ಜಡವನ್ನು ಸೃಷ್ಟಿಶೀಲಗೊಳಿಸುವ ಇಲ್ಲಿನ ಪರಿ ಮೌಲಿಕವಾದದ್ದು. ಅಂಬಿಗರ ಚೌಡಯ್ಯನಂತಹ ಕಸುಬುದಾರ ಶರಣರಲ್ಲಿ ದೇಹ-ಆತ್ಮ ಕ್ರಿಯೆ- ಜ್ಞಾನಗಳ ವಿಭಿನ್ನ ನೆಲೆಗಳನ್ನು ಕಾಣಬಹುದಾಗಿದೆ.

ದೇಹಾರಗಳ ಮಾಡುವಣ್ಣಗಳಿರಾ
ಒಂದು ತುತ್ತು ಆಹಾರವನಿಕ್ಕಿರೆ
ದೇಹಾರಕ್ಕೆ ಆಹಾರವೇ ನಿಚ್ಚಣಿಗೆ
ದೇಹಾರವ ಮಾಡುತ್ತ ಆಹಾರವನ್ನಿಕ್ಕದಿರ್ದಡೆ
ಅ ಹರನಿಲ್ಲೆಂದನಂಬಿಗರ ಚೌಡಯ್ಯ[4]

ಇಲ್ಲೆ ಮೇಲುವರ್ಗದ ವಚನಕಾರರಿಗೂ ಹಾಗೂ ಶ್ರಮಿಕ ವರ್ಗದ ವಚನಕಾರರಿಗೂ ತಾತ್ವಿಕ ಭಿನ್ನತೆಯನ್ನು ಕಾಣಬಹುದು. ವಚನದ ಧ್ವನಿ ಪ್ರಧಾನವಾಗಿ ಹಸಿವಿನ ಕಡೆಗೆ ಹಸಿವಿನ ಹಿಂಗುವಿಕೆಗೆ ಬೇಕಾದ ಅನ್ನದ ಕಡೆಗೆ ಒತ್ತುಕೊಡುತ್ತದೆ. ಅಂದರೆ ಚಲನೆಗೆ ಅಥವಾ ಸೃಷ್ಟಿಕ್ರಿಯೆಗೆ ಮೂಲವಾಗುವ ವಸ್ತುವಿನ ಶೋಧಕ್ಕೆ ಗಮನ ಕೊಡುತ್ತದೆ. ಬಸವಣ್ಣನಲ್ಲಿ ಈ ಮೂಲದ ಶೋಧನೆ ಕಾಣುವುದಿಲ್ಲ. ಆತ ಒಂದು ಹೆಜ್ಜೆ ಮುಂದೆ ಹೋಗಿ ಆರಾಧನೆಯ ಹಂತವನ್ನು, ಕ್ರಿಯೆಯ ಸಾಧ್ಯತೆಯನ್ನು ಮಾತ್ರ ಹೇಳುತ್ತಾನೆ. ಬಸವನಲ್ಲಿ ಸ್ಥಾವರದ ಕ್ರಿಯಾತ್ಮಕತೆಯು ಮುಖ್ಯವಾದರೆ ಅಂಬಿಗರ ಚೌಡಯ್ಯನಲ್ಲಿ ಕ್ರಿಯಾಶೀಲತೆಗೆ ಬೇಕಾಗುವ ಶಕ್ತಿಗಳು ಪ್ರಧಾನವಾಗುತ್ತವೆ. ದೇಹ ಆತ್ಮಗಳ ಚೈತನ್ಯಕ್ಕೆ ಬೇಕಾಗುವ ಅನ್ನ ಆಹಾರಗಳ ಅವಿಚ್ಛಿನವಾದ ಈ ತರ್ಕ ಕಸುಬುದಾರ ವರ್ಗಗಳಿಗಿಂತ ಬೇರೆಯವರಿಗೆ ಹೊಳೆಯಲು ಸಾಧ್ಯವಿಲ್ಲ.

ಇಂದಿನ ವಿಜ್ಞಾನ ಮತ್ತು ತಂತ್ರಜ್ಞಾನದ ಅವಿಷ್ಕಾರಗಳು ಶ್ರಮ ಮತ್ತು ಮನುಷ್ಯನ ಪ್ರಜ್ಞೆಯ ಭಾಗಿತ್ವವನ್ನು ವಿಚ್ಛಿದ್ರಗೊಳಿಸಿವೆ. ವ್ಯಕ್ತಿಯನ್ನು ಯಂತ್ರ ಗರ್ಭದ ಖಾಯಂ ಭ್ರೂಣವನ್ನಾಗಿ ಪರಿವರ್ತಿಸುವ ಮೂಲಕ ಮನುಷ್ಯ ಪ್ರಜ್ಞೆಯನ್ನೇ ಮೊಟಕುಗೊಳಿಸುತ್ತಿವೆ. ಕಸುಬುದಾರ ಶರಣರಲ್ಲಿ ಮನುಷ್ಯ ಮತ್ತು ಆತನ ಪ್ರಜ್ಞಾಸ್ಥರದ ರಚನಾತ್ಮಕತೆಗೆ ಮೌಲಿಕವಾದ ಬೆಲೆಯಿದೆ. ಕ್ರಿಯೆ ಮತ್ತು ಅರಿವಿನ ಅಭಿನ್ನತೆಗೆ ಅಲ್ಲಿ ಮಹತ್ವದ ಸ್ಥಾನ ಸಿಕ್ಕಿದೆ. ಕ್ರಿಯೆ ಮೂಲವಾದ ದೇಹ ಅರಿವಿನ ಮೂಲವಾದ ಮನಸ್ಸು ಇವೆರಡಕ್ಕಿಂತ ಮುಖ್ಯವಾಗಿ ಕಾಯಕದ ಬಗೆಗಿನ ಅದಮ್ಯ ಆತ್ಮವಿಶ್ವಾಸದ ಹೊಂದಾಣಿಕೆ ಸಾಧಕನ ಜೀವನದ ಪ್ರಮುಖ ಮೆಟ್ಟಿಲುಗಳಾಗಿವೆ.

ಈ ದೇಹ ಮತ್ತು ಆತ್ಮದ ಪರಿಕಲ್ಪನೆಗಳೆರಡೂ ಹಾಗೆ ನೋಡಿದರೆ ತೀರ ಖಾಸಗೀಯಾದ ಸಂಗತಿಗಳು. ಇಂದು ಪ್ರಭುತ್ವ ಮತ್ತು ವಿಜ್ಞಾನದ ಹಂಗಿನಲ್ಲಿ ಈ ಖಾಸಗಿತನ ದುರ್ಬಲಗೊಂಡಿದೆ. ಆಧುನಿಕ ವಿಜ್ಞಾನದ ಪರಿಭಾಷೆಯಲ್ಲಿ ದೇಹ-ಆತ್ಮ, ದೇವ-ಮನುಷ್ಯ ಇವೆಲ್ಲ ಪ್ರತಿಮಾ ಹೀನವಾದ ಒಂದು ಲೌಕಿಕ ಹುಡುಕಾಟಗಳಾಗಿವೆ.ಶರಣರ ಹೋರಾಟ ಇಂಥ ಖಾಸಗೀತನವನ್ನು, ಉಳಿಸಿಕೊಳ್ಳುವ ಮೂಲಕ ಸಾರ್ವತ್ರಿಕವಾಗಲು ಪ್ರಯತ್ನಿಸುವಂಥದ್ದು. ಕಸುಬುದಾರರ ಖಾಸಗೀತನ ಎನ್ನುವುದು ಸ್ವಾರ್ಥಮೂಲವಾದದ್ದಲ್ಲ. ಮತ್ತೇ ರಹಸ್ಯವಾದದ್ದೂ ಅಲ್ಲ. ಅದರಲ್ಲಿ ಆತ್ಮಚೈತನ್ಯದ ಸಾಮುದಾಯಿಕ ಪ್ರಜ್ಞೆಯ ಜೀವಪರ ಆಶಯಗಳಿವೆ. ಬದುಕಿನ ಬದ್ಧತೆಯ ಚಿತ್ರಣ ಆ ಖಾಸಗೀತನದಲ್ಲಿದೆ. ವ್ಯಕ್ತಿ ಪ್ರಜ್ಞೆಯಿಲ್ಲದ ಬದುಕು ಬದುಕಲ್ಲ. ಅದು ತೀರಾ ಖಾಸಗೀಯಾಗುವುದು ವಿಹಿತವಲ್ಲ.

ಜಾತಿ ಜನ್ಯವಾದ ಕರ್ಮಸಿದ್ಧಾಂತಗಳಿಗೆ ಬದಲಾಗಿ ಜಾತಿ ನಿರ್ಮೂಲನವಾದ ಕಾಯಕ ಸಿದ್ಧಾಂತವನ್ನು ಅಂದರೆ ಉದ್ಯೋಗದ ಹಕ್ಕನ್ನು ಶರಣರು ಪ್ರತಿಪಾದಿಸಿದರು. ‘ಸಪ್ತಧಾತು ಸಮಂ ಪಿಂಡಂ ಸಮಯೋನಿ ಸಮುದ್ಭವಂ’ ‘ಆತ್ಮಜೀವ ಸಮುತ್ಪನ್ನಂ ವರ್ಣನಾಂ ಕಿಂ ಪ್ರಯೋಜನಂ’ ಎನ್ನುವ ಮೂಲಕ ಶರಣರು ಹುಟ್ಟಿನ ಶ್ರೇಷ್ಠತೆಯನ್ನೇ ಸಾಮಾನ್ಯೀಕರಿಸಿದರು. ಆಯಾ ಸಮುದಾಯಗಳ ಮೂಲಪ್ರವೃತ್ತಿಯನ್ನು ಬಿಟ್ಟುಕೊಡದೆ ತಮ್ಮೆಲ್ಲ ಬಣ್ಣ ಬೆಡಗು, ಆಶಯ ವೈವಿಧ್ಯತೆಗಳಿಂದ ಆಧ್ಯಾತ್ಮದೊಡನೆ ಕಸಿಗೊಳಿಸಿದ್ದಲ್ಲದೆ ಶರಣ ಧರ್ಮದೊಳಗಿನ ಕ್ರಿಯಾಕಾಂಡವನ್ನು ಕಟುವಾಗಿ ವಿಮರ್ಶಿಸುವಷ್ಟು ಪ್ರಬಲವಾಗಿ ತಮ್ಮ ಇರುವನ್ನು ಸಾಬೀತು ಪಡಿಸಿದರು. ಅಷ್ಟೇ ಅಲ್ಲದೆ ಹೊಸದೊಂದು ದೇಶಿ ರೂಪವನ್ನು ಅಭಿವ್ಯಕ್ತಿ ಸ್ವರೂಪವನ್ನು ಪ್ರಚುರಪಡಿಸಿದರು.

‘ಹಸುವಿಗೆ ಹಾಗ, ಎತ್ತಿಗೆ ಹಣ, ಪಡ್ಡೆ ಕರುವಿಗೆ ಮೂರು ಹಣ, ಎಮ್ಮೆ ಕೋಣ ಕುಲವ ನಾ ಕಾಯಲಿಲ್ಲ’ ಎನ್ನುವ ‘ತುರಗಾಹಿ ರಾಮಣ್ಣ, ಮುದ್ದಿನ ಸುರೆಯ ತೊಗಲ ತಿತ್ತಿಯಲ್ಲಿ ತುಂಬಿ ಒಪ್ಪದಲ್ಲಿ ನುಸಲಿಕೆ’ ಎನ್ನುವ ಹೆಂಡದ ಮಾರಯ್ಯ, ’ಹಿಡಿಯಿಲ್ಲದ ಶಸ್ತ್ರ, ಕೀಲಿಲ್ಲದ ಕತ್ತರಿ ಉಭಯನೊಡಗೊಡದ ಚಿಮ್ಮುಟ, ಹಲಿಲ್ಲದ ಹಣಿಗೆ’ ಎನ್ನುವ ಅಮ್ಮಿಗಿದೇವ, ‘ಅರಿವೆಂಬ ಕದಿರು ಭಕ್ತಿಯೆಂಬ ಕೈಯಲ್ಲಿ ತಿರುವಲಾಗಿ ಸುತ್ತಿತು ನೂಲ ಕದಿರು ತುಂಬಿತ್ತು’ ಎನ್ನುವ ರೆಮ್ಮವ್ವೆ ‘ಬತ್ತಲ ಇದ್ದವರೆಲ್ಲ ಕತ್ತೆಯ ಮಕ್ಕಳು ತಲೆ ಬೋಳಾದವರೆಲ್ಲ ಮುಂಡೆಯ ಮಕ್ಕಳು’ ಎನ್ನುವ ಕಾಲಕಣ್ಣಿಯ ಕಾಮವ್ವ, ಮುಂತಾದ ವಚನಕಾರರ ಈ ಸಾಲುಗಳು ಸ್ವಾನುಭವವನ್ನು ಆಧ್ಯಾತ್ಮದ ಎತ್ತರಕ್ಕೇರಿಸಿದ ಸಂಗತಿಯನ್ನು ಎತ್ತಿತೋರಿಸುತ್ತವೆ. ವೃತ್ತಿ ಸಹಜವಾದ ಉಳಿ, ಬಾಚಿ, ತಿತ್ತಿ, ಅಟ್ಟಿ, ಸುರೆ, ಕತ್ತರಿ, ಹಣಿಗೆ, ನೂಲು, ಕದಿರು, ಬೆಕ್ಕು, ಇಲಿ, ಕತ್ತೆ, ನಾಯಿ, ಉಣ್ಣಿ, ಢಕ್ಕೆ, ಮೊರ, ಮುಂತಾದ ದಿನ ಬಳಕೆಯ ಪ್ರಾಣಿ, ಪಕ್ಷಿ, ವಸ್ತುಗಳು ಅನುಭಾವದ ರೂಪಕಗಳಾಗಿ ಅರ್ಥ ಪಡೆದುಕೊಂಡವು. ಇದುವರೆಗೂ ಸಾಹಿತ್ಯದಲ್ಲಿ ಅಸ್ಪೃಶ್ಯವಾಗಿದ್ದ ಈ ಪದಗಳು ಸಾಹಿತ್ಯಿಕ ಮೌಲ್ಯವನ್ನು ಸಂದರ್ಭದ ಅರ್ಥವಂತಿಕೆಯ ಆಸ್ಪೋಟಕ ಗುಣವನ್ನು, ಬೆಡಗಿನ ಬೆರಗನ್ನು ಮೈತುಂಬಿಕೊಂಡವು. ಸ್ಥಳೀಯ ಸಾಂಸ್ಕೃತಿಕ ಪರಿಸರವೇ ಅವರ ಕಾವ್ಯ ನಿರ್ಮಾಣದ ಪ್ರಮೇಯಗಳಾದವು.

ಇಂತಹ ಲಘು ವಿದ್ಯಮಾನಗಳನ್ನು ತಂದು ಘನವನ್ನು ವಿವರಿಸಲು ಹಂಬಲಿಸಿದ್ದು ಕಸುಬುದಾರ ಕವಿಗಳ ವಿಶೇಷತೆಯಾಗಿದೆ. ಪಾರಂಪರಿಕವಾಗಿ ಪ್ರಚಲಿತವಿದ್ದ ಮಾರ್ಗ ಕಾವ್ಯ ಪರಿಭಾಷೆಗಳ ಹಂಗನ್ನು ಹರಿದು ಜಾತಿ, ವರ್ಣಾಶ್ರಮ, ಪದ್ಧತಿಗಳಿಗೆ ಸಂಬಂಧಿಸಿದ ನಿಲುವುಗಳಿಗೆ ಎದುರಾಗಿ ಪರಂಪರೆಗೆ ಅಸ್ಪೃಶ್ಯವಾದ ನುಡಿಬೆಡಗನ್ನು ಬಳಸುವ ಮೂಲಕ ತಮ್ಮ ವೃತ್ತಿ ಮತ್ತು ಆತ್ಮಗೌರವವನ್ನು ಗಟ್ಟಿಯಾಗಿಸಿಕೊಂಡರು. ದೇಶೀಯವಾದಂತ ಸಾಹಿತ್ಯ ಮಾರ್ಗವನ್ನು ಹರಿಯಬಿಟ್ಟರು. ಪರಂಪರೆಗೆ ಎದುರಾಗಿ ಈಸುವುದೆಂದರೆ ಸಾಮಾನ್ಯವಾದುದಲ್ಲ. ಹಾಗೆ ಮಾಡಬೇಕಾದರೆ ತಕ್ಕ ಸಿದ್ಧತೆಗಳು, ಆತ್ಮಬಲಗಳು ಅನಿವಾರ್ಯವಾಗುತ್ತದೆ. ಕಸುಬುದಾರ ಶರಣರ ಸಂಘಟನೆ ಎಷ್ಟೊಂದು ಬಲವಾಗಿತ್ತು ಎನ್ನುವುದು ಪರಂಪರೆಯನ್ನು ಎದುರಿಸಿದ ಅವರ ದಿಟ್ಟತನದಲ್ಲಿ ಸ್ಪಷ್ಟವಾಗುತ್ತದೆ. ವೃತ್ತಿ ಮೂಲಕ ಆತ್ಮಗೌರವವನ್ನು ಆತ್ಮಗೌರವದ ಮೂಲಕ ಆಧ್ಯಾತ್ಮವನ್ನು ಸಾಧಿಸಿದ ಹಾಗೂ ಅದನ್ನು ಅನ್ವಯಗೊಳಿಸಿದ ರೀತಿ ಮೆಚ್ಚುವಂಥದ್ದು. ಕ್ರಿಯೆ ಮತ್ತು ಅರಿವಿನ ಅಂತಃ ಸಂಬಂಧ ಆತ್ಮಜ್ಞಾನಕ್ಕೆ ಆಧ್ಯಾತ್ಮಿಕ ಅನುಭೂತಿಗೆ ಸಾಧನವಾಯಿತು. ‘ಕ್ರಿಯೆ ಇಲ್ಲದ ಜ್ಞಾನ ಪ್ರಯೋಜನವಿಲ್ಲಯ್ಯ ಅದು ಹೆಂಗೆಂದೊಡೆ ದೇಹವಿಲ್ಲದ ಪ್ರಾಣಕ್ಕೆ ಆಶ್ರಯವುಂಟೇ ಅಯ್ಯ ಪ್ರಾಣವಿಲ್ಲದ ಕಾಯಕ್ಕೆ ಚೈತನ್ಯವುಂಟೇ ಅಯ್ಯ ಅದು ಕ್ರಿಯೆಯಿಲ್ಲದ ಜ್ಞಾನಕ್ಕೆ ಆಶ್ರಯವಿಲ್ಲ ಜ್ಞಾನವಿಲ್ಲದ ಕ್ರಿಯೆಗೆ ಆಶ್ರಯವಿಲ್ಲ’ ಕ್ರಿಯೆ ಮತ್ತು ಅರಿವಿನ ಆತ್ಯಂತಿಕ ಅನನ್ಯತೆಯನ್ನು ಈ ವಚನ ಸಾದರಪಡಿಸುತ್ತದೆ. ಶ್ರಮಿಕ ವರ್ಗಗಳ ಸಶಕ್ತತೆ ಇದುವುದೇ ಇಂಥಲ್ಲಿ. ಇಂಥ ಪ್ರೇರಣೆಗಳೇ ಅದೊಂದು ಚಳುವಳಿಯಾಗಿ ರೂಪಗೊಳ್ಳಲು ಕಾರಣಗಳಾದವೆಂಬುದನ್ನು ಗಮನಿಸಬಹುದು.


[1] ???? ಬಸವಣ್ಣನವರ ವಚನ ಸಂಪುಟ-೧,ಪು.,ವಚನ ೪೫೩, ೧೯೯೩

[2]ಸಂಕೀರ್ಣ ವಚನ ಸಂಪುಟ-೧, ಪು.೧೫೩, ವಚನ ೪೯೬, ೧೯೯೩

[3]ಬಸವಣ್ಣನವರ ವಚನ ಸಂಪುಟ-೧, ಪು. ೧೧, ವಚನ ೮೨೧, ೧೯೯೩

[4]ಸಂಕೀರ್ಣ ವಚನ ಸಂಪುಟ- ೧, ಪು. ೫೫, ವನ ೧೬೬, ೧೯೯೩