ಬಾಚಿ ಕಾಯಕದ ಬಸವಯ್ಯನನ್ನು ಎಲ್ಲ ಶರಣರಂತೆ ವೀರಶೈವ ದಾರ್ಶನಿಕತೆಯ ಪರಿಭಾಷೆಗಳ ಹಿನ್ನೆಲೆಯಲ್ಲಿ ಗ್ರಹಿಸಿದಾಗ ಆತನ ತಾತ್ವಿಕ ಜಿಜ್ಞಾಸೆಗಳು ಕುಲಮೂಲವೃತ್ತಿಯ ಸೂಕ್ಷ್ಮಸಂವೇದನೆಗಳು ಚರ್ಚೆಗೆಬಾರದೆ ಉಳಿದುಬಿಡುತ್ತವೆ.ಸಾಮಾನ್ಯವಾಗಿ ಇಡೀ ವಚನ ಚಳುವಳಿ ಮತ್ತು ಅದರ ಅಭಿವ್ಯಕ್ತಿ ಕ್ರಮಗಳನ್ನು ಸಾಂಸ್ಥೀಕರಣಗೊಂಡ ವೀರಶೈವದ ಏಕೀಕೃತ ಪಾತಳಿಯಲ್ಲಿ ಹೆಚ್ಚಾಗಿ ಗ್ರಹಿಸುತ್ತಾ ಬರಲಾಗಿದೆ. ಹೀಗಾದಾಗ ವಿಶಾಲ, ಅಮೂರ್ತ ತತ್ವಗಳು ವ್ಯಕ್ತಿವಿಶಿಷ್ಟವಾದ ವರ್ತನೆಗಳು ಸಂವೇದನೆಯ ಸೆಳಕುಗಳು ನಮ್ಮ ಅಧ್ಯಯನಗಳಿಗೆ ದಕ್ಕದೇ ಹೋಗಿಬಿಡುತ್ತವೆ. ದಾರ್ಶನಿಕ ಖಾಚಿತ್ಯತೆ ಸಾಧನೆಯ ಸೋಪಾನಗಳು ಮಾತ್ರ ಮುನ್ನೆಲೆಗೆ ಬಂದು ಆ ಸಿದ್ಧ ಚೌಕಟ್ಟಿನಲ್ಲಿಯೇ ಎಲ್ಲ ವ್ಯಕ್ತಿತ್ವಗಳನ್ನು ಅಳೆದು ಸುರಿಯುವ ಹಿಂದಿನ ಅಪಾಯಗಳು ಆಘಾತಕಾರಿಯಾದಂಥವು. ಹೀಗಾದಾಗ ಬಸವಯ್ಯ ಮತ್ತು ಅವನಂತಹ ಕಸುಬುದಾರ ವಚನಕಾರರ ವ್ಯಕ್ತಿ ಮತ್ತು ಅಭಿವ್ಯಕ್ತಿ ಕ್ರಮಗಳಲ್ಲಿ ಹುಟ್ಟುವ ಸಂದಿಗ್ಧತೆ, ತಂತ್ರದ ಬಳಕೆ, ಸಾಂಕೇತಿಕವಾಗದ ವಾಸ್ತವ, ವೃತ್ತಿ ನೆಲೆಯ ಮೂರ್ತಪ್ರಮೇಯಗಳು, ಕಟ್ಟಿಕೊಡುವ ತಾತ್ವಿಕ ರೋಮಾಂಚನಗಳು ಮರೆಯಾಗುತ್ತವೆ. ಬಸವಯ್ಯನ ಲೌಕಿಕ ಜಗತ್ತು ಆಮೂಲಕ ಆತನ ವಚನಗಳಲ್ಲಿ ಕಂಡುಬರುವ ವೃತ್ತಿ ಪ್ರಧಾನ ತತ್ವ ಹಾಗೂ ರೂಪಕಗಳು ಕಡೆಗಣಿಸಲ್ಪಡುತ್ತವೆ. ಕಟ್ಟುವ ಮತ್ತು ಹುಟ್ಟುವ ಕ್ರಿಯೆಯಲ್ಲಿ ತತ್ವವೂ ಬದಲಾಗುತ್ತ ಹೋಗುವ ಪರಿಯನ್ನು ಸೂಕ್ಷ್ಮವಾಗಿ ದಾಖಲಿಸದೇ ಹೋದಾಗ ಆ ದಾರ್ಶನಿಕ ತತ್ವದ ಚರಿತ್ರೆಯೂ ಬರಡಾಗುತ್ತದೆ. ತತ್ವಜ್ಞಾನದ ತೀರಾ ನಿಷ್ಠುರ ಅನ್ವಯದಲ್ಲಿ ಮಾತ್ರ ಉಳಿದೆಲ್ಲ ವಚನಕಾರರಲ್ಲಿ ಒಂದು ರೀತಿಯ ಸಾಮ್ಯತೆ ಕಂಡುಬರತ್ತದೆ. ಉಳಿದಂತೆ ಅವರ ವೈಯಕ್ತಿಕ ನೆಲೆಯನ್ನು ತಾತ್ವಿಕ ಭಿನ್ನತೆಯನ್ನು ಉಳಿಸಿಕೊಂಡೇ ಬದುಕುತ್ತಾರೆ ಎನ್ನುವುದು ಗಮನಾರ್ಹ ಸಂಗತಿ.

ಪ್ರತಿಯೊಬ್ಬ ವಚನಕಾರರ ಬದುಕಿನ ಪಾತಳಿ ಮತ್ತು ಗ್ರಹಿಕೆಯ ನೆಲೆಗಳು ಭಿನ್ನವಾದಂಥವು. ಎಲ್ಲರೂ ಬದುಕಿನ ಸಂಕೀರ್ಣ ಸ್ವರೂಪವನ್ನು ತಮ್ಮ ತಮ್ಮ ವೈಯಕ್ತಿಕ ನೆಲೆಯಲ್ಲೇ ಶೋಧಿಸಲು ಹಾತೊರೆದವರು. ಬಸವಣ್ಣನ ವಚನಗಳು ಬದುಕಿನ ಭಿನ್ನ ನೆಲೆಗಳನ್ನು ಶೋಧಿಸುತ್ತ ಭಕ್ತನ ಒಂದು ವಿನ್ಯಾಸವನ್ನು ಪ್ರಕಟಿಸಿದರೆ ಅಲ್ಲಮನಲ್ಲಿ ‘ಅನುಭವ’ ಪ್ರಧಾನವಾದ ಇನ್ನೊಂದು ವಿನ್ಯಾಸ ಪ್ರಕಟಗೊಳ್ಳುತ್ತದೆ. ಬಸವಯ್ಯನಂಥ ಕಸುಬುದಾರ ವಚನಕಾರರಲ್ಲಿ ಇದು ಇನ್ನೊಂದು ರೀತಿಯಲ್ಲಿ ಕಾಣಿಸಿಕೊಳ್ಳುತ್ತದೆ. ಈ ರೀತಿಯ ಭಿನ್ನ ನೆಲೆಯ ಶೋಧವೇ ವಚನಕಾರರನ್ನು ಕುತೂಹಲವಾಗಿ ನೋಡಲು ಹಚ್ಚುತ್ತದೆ.

ಪರಂಪರೆಯೊಳಗಿದ್ದರೂ ಬಾಚಿಕಾಯಕದ ಬಸವಯ್ಯ ಸಂಪೂರ್ಣ ಭಿನ್ನ ರೀತಿಯಿಂದಲೇ ತನ್ನ ವಿಚಾರಗಳನ್ನು ತತ್ವೀಕರಿಸುತ್ತಾನೆ. ಕಥಾನಾತ್ಮಕವಾಗಿ ರೂಪಕಾತ್ಮಕವಾಗಿ ವೃತ್ತಿ ಸಹಜ ಲಯಗಳನ್ನು ತತ್ವೀಕರಣಕ್ಕೆ ಒಳಡಿಸುವ ರೀತಿ ದಾರ್ಶನಿಕ ಪರಿಕಲ್ಪನೆಗಳನ್ನೆಲ್ಲ ಚಾರಿತ್ರಿಕ ವಿಕಾಸದ ಪ್ರಕ್ರಿಯೆಯಲ್ಲಿಟ್ಟು ದೇಹ ಮನಸ್ಸು ಮನೆ ಪರಿವಾರ ಇತ್ಯಾದಿ ನೋಡುವ ರೀತಿ ವಿಶಿಷ್ಟವಾದದ್ದು. ಸನಾತನ ಸಾಮಾಜಿಕ ಮೌಲ್ಯಗಳ ದೃಷ್ಟಿಕೋನಗಳನ್ನು ಮುಕ್ತವಾಗಿ ವಿಮರ್ಶಿಸುವ ರೀತಿ ಅಧಿಕಾರ ಅಥವಾ ವ್ಯವಸ್ಥೆಯೊಂದಿಗಿನ ಆತನ ಅವಜ್ಞತೆಯ ಪ್ರಜ್ಞೆ ಒಂದು ಹೊಸ ತಾತ್ವಿಕ ಭಿತ್ತಿಯನ್ನು ವಿನ್ಯಾಸಗೊಳಿಸುತ್ತದೆ.

ಸಾಂಪ್ರದಾಯಿಕವಾಗಿ ಸನಾತನ ಮೌಲ್ಯಗಳನ್ನಿಟ್ಟುಕೊಂಡೇ ಬದುಕಲು ಹಂಬಲಿಸುವ ವಿಶ್ವಕರ್ಮ ಕುಲದಲ್ಲಿ ಹುಟ್ಟಿದ ಬಸವಯ್ಯ ಜಡಪರಿಕಲ್ಪನೆಗಳಿಗೆ ವಿಮುಖನಾಗುವುದಲ್ಲದೆ ಅವುಗಳೊಡಲಲ್ಲಿ ಅಡಗಿರುವ ಜೀವ ವಿರೋಧಿ ನೆಲೆಗಳನ್ನು ಉಗ್ರವಾಗಿ ಖಂಡಿಸುತ್ತಾನೆ. ಹೀಗೆ ಅಕ್ಕಸಾಲಿಗನಾದ ಹಾವಿನಹಾಳ ಕಲ್ಲಯ್ಯ,ಕಿನ್ನರಿ ಬೊಮ್ಮಯ್ಯ, ಮನೆಕಾಯಕದ ಕಾಮಾಟದ ಭೀಮಣ್ಣ ಹಾಗೂ ನಂತರದಲ್ಲಿ ಬಂದ ತಿಂಥಿಣಿ ಮೋನಪ್ಪ ಪರಂಪರೆಯ ಜಡತ್ವದ ವಿರುದ್ಧ ಬಂಡಾಯ ಸಾರಿದ ಪ್ರಮುಖರು. ಹೀಗೆ ಏಕಕಾಲಕ್ಕೆ ಕುಲಮದದಿಂದ ದೂರ ಉಳಿಯುವ ಪ್ರಯತ್ನ ಒಂದೆಡೆಯಾದರೆ ಇನ್ನೊಂದೆಡೆ ಇತರ ಶರಣರೊಂದಿಗೆ ವೈಚಾರಿಕ ನಿಲುವಿನಲ್ಲೂ ಭಿನ್ನವಾಗಿ ಬದುಕಿದ್ದು ಇವರ ವಿಶೇಷವಾಗಿದೆ. ಬ್ರಾಹ್ಮಣೀಕರಣದ ನೆಲೆಯಲ್ಲಿ ಸಮಾಜವೊಂದು ತನ್ನ ಆಚಾರಾಧಿಕಾರ ಮತ್ತ ಸಾಮಾಜಿಕಾಧಿಕಾರಗಳ ಅಸ್ತಿತ್ವವನ್ನು ಪ್ರತಿಷ್ಠಾಪಿಸಿದ ರೀತಿಗೆ ತೀಕ್ಷ್ಣ ಪ್ರತಿಕ್ರಿಯೆಯಾಗಿ ಪರಂಪರೆಯ ಒಳಗಿನಿಂದಲೇ ಮೂಡಿಬಂದ ಈ ಕಸುಬುದಾರರು ವಿಶ್ವಕರ್ಮನ ಮೂಲ ತತ್ವವಾದ ಕ್ರಿಯಾತ್ಮಕತೆಯನ್ನು ಎತ್ತಿಹಿಡಿದರು.

೧. ಬಸವಯ್ಯನ ಪೂರ್ವಾಪರ

ಬಸವಯ್ಯನ ಪೂರ್ವಾಪರಗಳ ಕುರಿತು ಹೆಚ್ಚಿನ ಮಾಹಿತಿಗಳು ಸಿಗುವುದಿಲ್ಲ. ಎಲ್ಲ ಶಿವಶರಣರ ಕುರಿತು ಕಥೆ ಹೇಳುವ ಗ್ರಂಥಗಳಾದ ಭೈರವೇಶ್ವರ ಕಾವ್ಯದ ಕಥಾ ಮಣಿಸೂತ್ರ ರತ್ನಾಕರ, ಲಕ್ಕಣ್ಣ ದಂಡೇಶನ ಶಿವತತ್ವ ಚಿಂತಾಮಣಿ, ಭೀಮಕವಿಯ ಬಸವಪುರಾಣ, ಪಾಲ್ಕುರಿಕೆ ಸೋಮನಾಥನ ಬಸವಪುರಾಣ, ಶೂನ್ಯಸಂಪಾದನೆಗಳು ಮುಂತಾದ ಪ್ರಮುಖ ಕಾವ್ಯ ಕೃತಿಗಳಲ್ಲಿ ಬಾಚಿಕಾಯಕದ ಬಸವಯ್ಯನ ಪ್ರಸ್ತಾಪವೇ ಬರುವುದಿಲ್ಲ. ಆದರೆ ವಿರೂಪಾಕ್ಷ ಪಂಡಿತನ ಚೆನ್ನಬಸವ ಪುರಾಣದಲ್ಲಿ (ಪು. ೩೯೬) ಬಸವಯ್ಯನ ಉಲ್ಲೇಖ ಬರುತ್ತದೆ. ಹಾಗೆ ಅಮರಗಣಾಧೀಶ್ವರ ಚರಿತೆ ( ಸಂ. ಡಾ. ಫ. ಗು. ಹಳಕಟ್ಟಿ) ಅದೇ ರೀತಿ ಮಂಟೇಶ್ವಾಮಿ ಕಾವ್ಯದಲ್ಲೂ ಈತನ ಪ್ರಸ್ತಾಪ ಬರುತ್ತದೆ. ಧರೆಗೆ ದೊಡ್ಡೋರು ತಪೋಭೂಮಿಯನ್ನು ಅರಸುತ್ತಾ ಕಲ್ಯಾಣ ಪಟ್ಟಣದತ್ತ ಬಸವಣ್ಣ ನೀಲಮ್ಮರ ದೃಢಭಕ್ತಿ ಪರೀಕ್ಷೆಗೆ ಬರುತ್ತಿರುತ್ತಾರೆ. ಕಲ್ಯಾಣ ಪಟ್ಟಣದ ಕೊನೆಯ ಬಾಗಿಲ ಬಳಿ ಬಾಚಿಕಾಯಕದ ಬಸವಯ್ಯ ನಿಂತಿರತ್ತಾನೆ. ಧರೆಗೆ ದೊಡ್ಡೋರು ಬರುವುದನ್ನು ನೋಡಿ ದುಡುದುಡು ಓಡಿಬಂದು ಕಾಲಿಗೆರಗಿ ಶಿಶುಮಗನ ಮಾಡಿಕೊಳ್ಳಿ ಎಂದು ಬೇಡುತ್ತಾನೆ. ಧರೆಗೆ ದೊಡ್ಡವರು ಮುಂದಿನ ಜನ್ಮದಲ್ಲಿ ನಿನ್ನನ್ನು ಶಿಷ್ಯನನ್ನಾಗಿ ಪಡೆಯುತ್ತೇನೆಂದು ಹೇಳುತ್ತಾರೆ. ಮುಂದೆ ಸಿದ್ಧಪ್ಪಾಜಿಯ ತಂದೆಯಾಗಿ ಬಾಚಿಕಾಯಕದ ಬಸವಯ್ಯ ಹುಟ್ಟುತ್ತಾನೆ.

ಈ ವಿವರ ಬಾಚಿಕಾಯಕದ ಬಸವಯ್ಯನನ್ನು ೧೫ನೇ ಶತಮಾನದ ಹೊತ್ತಿಗೆ ಕರೆದೊಯ್ಯುತ್ತದೆ. ಆದರೆ ಬಾಚಿಕಾಯಕದ ಬಸವಯ್ಯನ ವಚನಗಳನ್ನು ಆತನ ಬಗ್ಗೆ ಈ ಸಂದರ್ಭದಲ್ಲಿ ಬಂದ ಮಾಹಿತಿಗಳನ್ನು ಗಮನಿಸಿದರೆ ಆತ ೧೨ನೇ ಶತಮಾನದಲ್ಲಿದ್ದ ಬಗ್ಗೆ ಹೆಚ್ಚಿನ ಪುರಾವೆಗಳು ದೊರಕುತ್ತವೆ. ಬಹುಶಃ ಇಬ್ಬರು ಬಸವಯ್ಯಗಳು ಇದ್ದಿರಬಹುದೇನೊ? ಎನ್ನುವ ಗುಮಾನಿ ಹುಟ್ಟುತ್ತದೆ.

ನನಗಿಲ್ಲಿ ಕಾಲದ ವಿಚಾರಕ್ಕಿಂತ ಆತನ ತಾತ್ವಿಕತೆ ಪ್ರಮುಖವೆನಿಸುತ್ತದೆ. ಯಾಕೆಂದರೆ ಸಿದ್ಧ ಪುರುಷರೆಲ್ಲ ಚಿರಂಜೀವಿಗಳೆಂದೂ ಕಾಲದಾಟವನ್ನು ಖಂಡ ತುಂಡ ಮಾಡಿ ಇಂದಿಗೂ ಬ್ರಹ್ಮಾಂಡದಲ್ಲಿ ಬದುಕುವವರೆಂದೂ, ಸಂಚರಿಸುತ್ತಾರೆಂದು ನಂಬಿಕೆಯಿದೆ. ಕಾರಣ ಶರಣರಂತಹ ದಾರ್ಶನಿಕ ವ್ಯಕ್ತಿತ್ವಗಳು ಕಾಲದ ಹರಿದಾಟದಲ್ಲಿ ಒಂದೇ ಕಡೆ ನಿಲ್ಲುವಂಥವಲ್ಲ ಕಾಲಾತೀತವಾದ ಸಂಚಲನೆ ಆ ವ್ಯಕ್ತಿತ್ವಗಳಿಗಿರುತ್ತದೆ. ಇದಕ್ಕೆ ಪ್ರಭುದೇವ ಉತ್ತಮ ಉದಾಹರಣೆ. ಪ್ರಭುದೇವ ಮತ್ತು ಚನ್ನಬಸವಣ್ಣನಂತಹ ಶರಣರು ೧೨ನೇ ಶತಮಾನದಿಂದ ಹದಿನಾರು ಹದಿನೇಳನೇ ಶತಮಾನದವರೆಗೆ ಆಯಾಕಾಲದ ಸಾಹಿತ್ಯ ಅಭಿವ್ಯಕ್ತಿಗಳಲ್ಲಿ ಮರುಹುಟ್ಟುಪಡೆದದ್ದು ಗಮನಿಸಬೇಕಾದ ವಿಚಾರ. ಹೀಗಾಗಿ ಕಾಲಾತೀತವಾಗಿ ಪ್ರಸ್ತುತವಾಗುವ ರಚನಾತ್ಮಕ ವ್ಯಕ್ತಿತ್ವಗಳವು.

ಬಾಚಿಕಾಯಕದ ಬಸವಯ್ಯನ ಈ ತಾತ್ವಿಕ ದರ್ಶನವನ್ನು ಎರಡು ನೆಲೆಯಲ್ಲಿ ನೋಡುವುದು ಅತ್ಯವಶ್ಯ. ಒಂದು, ಆತನ ವೃತ್ತಿಪರವಾದ ರಚನಾತ್ಮಕ ನೆಲೆ (ವೈಯಕ್ತಿಕ ನೆಲೆ) ಎರಡು, ಅರಿವು ಪ್ರಧಾನವಾದ ದಾರ್ಶನಿಕ ನೆಲೆ (ಅನುಭಾವ ಅಥವಾ ಸಾರ್ವತ್ರಿಕ ನೆಲೆ) ವಿಶ್ವಕರ್ಮರ ಮೂಲ ತತ್ವವೆಂದರೆ ಸೃಷ್ಟ್ಯಾತ್ಮಕತೆ. ಈ ಗುಣ ಬಸವಯ್ಯನ ಹಾಗೂ ಸಮಕಾಲೀನ ವಚನಕಾರರಾದ ಹಾವಿನಹಾಳ ಕಲ್ಲಯ್ಯ (ಅಕ್ಕಸಾಲಿಗ) ಕಾಮಾಟದ ಭೀಮಣ್ಣ (ಬಡಿಗ) ಮುಂತಾದವರಲ್ಲೂ ಎದ್ದು ಕಾಣುತ್ತದೆ. ಇವರ ತಾತ್ವಿಕತೆಯ ತಳಹದಿಯೇ ಸೃಷ್ಟಿ ಮತ್ತು ಅದರ ವಿಕಾಸಶೀಲ ನೆಲೆ. ಅದು ಪ್ರಕೃತಿ-ಪುರುಷ,ದೇಹ-ಆತ್ಮ,ಕ್ರಿಯೆ-ಜ್ಞಾನ ಮೊದಲಾದ ಸಂಗತಿಗಳಲ್ಲಿ ವಿಸ್ತೃತಗೊಳ್ಳುತ್ತ ಹೋಗುತ್ತದೆ.

ಯಜುರಾರಣ್ಯಕದ ವಚನವೊಂದರಲ್ಲಿ ವಿಶ್ವಕರ್ಮ ಜಗದಾಧೀಶ್ವರನು ಸರ್ವಜಗತ್ತುಗಳ ಸೃಷ್ಟಿಕರ್ತನೂ ಎಂಬ ವಿವರ ಸಿಗುತ್ತದೆ. ವಿಶ್ವಕರ್ಮ ಎನ್ನುವ ಪದಸಮುಚ್ಛಯವೇ ನಿರಂತರ ಕ್ರೀಯಾಶೀಲತೆಯನ್ನು ಸೃಷ್ಟ್ಯಾತ್ಮಕ ಲಕ್ಷಣವನ್ನು ಧ್ವನಿಸುತ್ತದೆ. ವಿಶ್ವ>ಸಕಲ ಕರ್ಮ>ಕ್ರಿಯೆ ತನ್ನ ಜೀವನಕ್ಕಾಗಿ ಅನ್ಯರ ಹಿತಕ್ಕೆ ಧಕ್ಕೆ ಬರದಂತೆ ಲೋಕಕಲ್ಯಾಣಾರ್ಥವಾಗಿ ಮಾಡುವ ಕಾಯಕವೇ ಕರ್ಮ. ವಿಶ್ವಕರ್ಮೋಪನಿಷತ್ತು ಸಕಲ ತತ್ವವನ್ನೇ ಒತ್ತಿಹೇಳುತ್ತದೆ. ಆತ್ಮಜ್ಞಾನಕ್ಕಾಗಿ ಲೋಕದ ಬಗೆಗೆ ವಿರಕ್ತಿ ಬೆಳೆಸಿಕೊಂಡು ಕರ್ಮನಿರತನಾದರೆ ಅದು ವ್ಯರ್ಥ. ಕರ್ಮದಿಂದ ಉತ್ಪತ್ತಿ,ಉತ್ಪತ್ತಿಯಿಂದ ಅರ್ಥಸಂಗ್ರಹ, ಅರ್ಥಸಂಗ್ರಹದಿಂದ ಲೌಕಿಕ ಕ್ಷೇಮ, ಲೌಕಿಕ ಕ್ಷೇಮದಿಂದ ಸಂತೋಷ, ಸಂತೋಷದಿಂದ ಆತ್ಮ ಸಾಧನೆ,ಆತ್ಮಸಾಧನೆಯಿಂದ ಮನಶಾಂತಿ ಹೀಗೆ ಸಾಧನೆಗೆ ಬುನಾದಿ ಸತ್ಕರ್ಮ. ಕರ್ಮಜ್ಞಾನಗಳ ಸಂಗ್ರಹವೇ ಯಶಸ್ವೀ ಜೀವನ. ಹೀಗೆ ಕರ್ಮ ಜ್ಞಾನ ಸಮುಚ್ಛಾದಿತವಾದ ಧರ್ಮಸಿದ್ಧಾಂತವೇ ವಿಶ್ವಕರ್ಮ ಪಥ. ಈ ಪಥದ ಅಧಿದೇವತೆ ವಿಶ್ವಕರ್ಮ. ಈತನಿಗೆ ಸಾನಗ, ಸನಾತನ, ಅಹಭೂನ, ಪ್ರತ್ನಶ್ಯ ಮತ್ತು ಸುಪರ್ಣರೆಂಬ ಪಂಚರ್ಷಿಗಳು ಮಾನಸಪುತ್ರರು. ಇವರಿಂದ ಪಂಚಕರ್ಮಿಗಳಾದ ಮನು (ಕಮ್ಮಾರ), ಮಯ (ಬಡಿಗ), ತ್ವಷ್ಟ್ರ (ಕಂಚುಗಾರ), ಶಿಲ್ಪಿ(ಶಿಲ್ಪಿಕಾರ), ದೈವಜ್ಞ (ಅಕ್ಕಸಾಲಿಗ) ಎನ್ನುವ ಐದು ಜನ ಮಕ್ಕಳುಹುಟ್ಟಿದರು. ಇವರು ‘ತತ್ರಾಸಿ ಕರ್ಮಸೇವಾಯಾ ಮಸಿರ್ಲಿಪಿ ವಿಧೌಸ್ಮೃತೌ ಕೃಷಿರ್ಭೂಕರ್ಷಣೆ ಪ್ರೋಕ್ತಾ ಶಿಲ್ಪಂಸ್ಯಾತ್ಕರ ಕೌಶಲಂ ತಚ್ಛ ಚಿತ್ರಕಲಾ ಪತ್ರಛೇದ್ಯಾದಿ ಬಹುಧಾಸ್ಮೃತಂ’ ಎನ್ನುವ ಮಾತಿನಂತೆ ಅಸಿಕರ್ಮ, ಲಿಪಿಕರ್ಮ, ಕೃಷಿಕರ್ಮ, ಶಾಸ್ತ್ರ ಜೀವನ, ವಾಣಿಜ್ಯ ಕರ್ಮ, ಶಿಲ್ಪ ಕರ್ಮ. ಈ ಷಟ್ಕರ್ಮಗಳಿಗಾಗಿಯೇ ಪಂಚಕರ್ಮಿಗಳು ದುಡಿದ ಬಗ್ಗೆ ಉಲ್ಲೇಖಗಳು ಸಿಗುತ್ತವೆ. ತಮ್ಮ ಕರ್ಮಾನುಷ್ಠಾನದಿಂದ ಆತ್ಮಜ್ಞಾನವನ್ನು ಸಾಧಿಸಿ ಸಕಲರಿಗೆ ಬೇಕಾಗುವ ಗೃಹಾದಿ ಪರಿಕರಗಳನ್ನು ಮಾಡಿಕೊಡುವುದು ಇವರ ಕರ್ತವ್ಯ.

ಇಂದಿಗೂ ಆಯಗಾರ ವೃತ್ತಿ ಜಾರಿಯಲ್ಲಿರುವ ಊರುಗಳಲ್ಲಿ ಪ್ರಾಯೋಗಿಕವಾಗಿ ಇವರ ಸಾಮಾಜಿಕ ಅವಶ್ಯಕತೆಯನ್ನು ತಿಳಿಯಬಹುದಾಗಿದೆ. ಹುಟ್ಟಿನಿಂದ ಸಾವಿನವರೆಗೂ ಎಲ್ಲ ಸಂದರ್ಭದಲ್ಲೂ ಈ ಪಂಚಕರ್ಮಿಗಳ ಭಾಗಿತ್ವವನ್ನು ನೋಡಬಹುದು. ಇಂದು ಬ್ರಾಹ್ಮಣೀಕರಣದ ಹಪಾಹಪಿಯಲ್ಲಿ ಶ್ರೇಷ್ಠತೆಯ ಮೇಲಾಟದಲ್ಲಿ ವಿಶ್ವಕರ್ಮ ಪಥದ ಮೂಲ ಸಿದ್ಧಾಂತ ಬಿದ್ದು ಹೋಗಿದೆ. ಕಾಲ ಕಳೆದಂತೆ ಈ ಕರ್ಮಯೋಗವನ್ನು ಅಲ್ಲಗಳೆದು ಬದುಕನ್ನು ಬಂಧನಕಾರಿ ಎಂದು ಭ್ರಮಿಸಿ ಕೇವಲ ಪೂಜೆ, ಪ್ರಾರ್ಥನೆ, ಆಚಾರಾದಿಗಳು, ಜಿಜ್ಞಾಸೆ ಮೀಮಾಂಸೆಗಳೇ ಪ್ರಧಾನವಾದ ಸಾಧನ ಮಾರ್ಗಗಳಾದವು. ಸರ್ವಸಂಗ ಪರಿತ್ಯಾಗದಿಂದ ಮಾತ್ರ ಜೀವನದ ಪರಮಸುಖ ಸಾಧ್ಯ ಎನ್ನುವ ನಿಲುವುಗಳು ರೂಪಿತವಾದವು. ಕರ್ಮವನ್ನು ಅವಿದ್ಯೆ ಎಂದೂ ಕೇವಲ ಜ್ಞಾನವನ್ನು ವಿದ್ಯೆ ಎಂದೂ ಪರಿಗಣಿಸುವ ವಾತಾವರಣ ನಿರ್ಮಿತವಾಯಿತು. ಆದರೆ ಬಸವಯ್ಯನ ವಚನಗಳು ಬಹುಮುಖ್ಯವಾಗಿ ನಿವೃತ್ತಿಮಾರ್ಗಕ್ಕಿಂತ ಪ್ರವೃತ್ತಿ ಮಾರ್ಗವನ್ನು ಆತ್ಮಮಾರ್ಗಕ್ಕಿಂತ ಕರ್ಮಮಾರ್ಗವನ್ನು ರಚನಾತ್ಮಕವಾಗಿಸುವ ಪ್ರಮೇಯಗಳನ್ನು ಮಂಡಿಸುತ್ತವೆ.

ಈ ಮೊದಲು ಸೂಚಿಸಿದಂತೆ ವಿಶ್ವಕರ್ಮನ ಎರಡನೆಯ ಮಗ ‘ಮಯ’ನ ಸಂಪ್ರದಾಯಕ್ಕೆ ಸೇರಿದ ಬಸವಯ್ಯ ಬಡಿಗತನದ ಕಸುಬಿನವನು. ಬಾಚಿಕಾಯಕದ ಬಸವಯ್ಯನ ಒಟ್ಟು ವಚನಗಳನ್ನು ಗಮನಿಸಿದಾಗ ಅಲ್ಲಿ ಕಂಡುಬರುವ ರೂಪಕಗಳಲ್ಲಿ ಹೆಚ್ಚಿನವು ಮನೆ ಮತ್ತು ಅದರ ಪರಿಕರಗಳು ಹಾಗೂ ರಥ ಮತ್ತು ಅದರ ಇತರ ಸಾಮಗ್ರಿಗಳು. ಬಹಳ ಮುಖ್ಯವಾಗಿ ಮನೆ ಮತ್ತು ರಥಗಳು ಬಸವಯ್ಯನಲ್ಲಿ ದೇಹ-ಆತ್ಮ, ಕ್ರಿಯೆ ಮತ್ತು ಅರಿವಿನ ಸೂಚಕಗಳಾಗಿ ಮೈಪಡೆದುಕೊಳ್ಳುತ್ತವೆ. ಇವನ್ನು ಈ ಕೆಳಗಿನಂತೆ ಇನ್ನಷ್ಟು ವಿಸ್ತರಿಸಿ ಕೊಳ್ಳಬಹುದು.

೨. ರೂಪ ಮತ್ತು ನಿರೂಪದ ಪ್ರಶ್ನೆ

ಬಸವಯ್ಯನ ದಾರ್ಶನಿಕತೆಯಲ್ಲಿ ಎರಡು ಅಂಶಗಳು ಪ್ರಮುಖವಾಗಿ ಕಾಣುತ್ತವೆ. ಒಂದು, ಬಹಿರಂಗ ವಾಸ್ತವವನ್ನು ಕಡೆಗಣಿಸಿ ಅಂತರಂಗದ ವಾಸ್ತವದ ಮೇಲೆ ವಿಚಾರಗಳನ್ನು ಕೇಂದ್ರೀಕರಿಸುವುದು. ಎರಡು, ಅಂತರಂಗ ವಾಸ್ತವದ ಜತೆಗೆ ಬಹಿರಂಗ ವಾಸ್ತವವನ್ನು ಒಪ್ಪಿಕೊಳ್ಳುವುದು. ಮೊದಲನೆಯದ್ದು ತುಂಬ ಕೇಂದ್ರೀಕೃತ ನೆಲೆಯದ್ದಾದರೆ ಎರಡನೆಯದು ವಿಕಾಸಶೀಲ ಸಂವೇದನೆಯುಳ್ಳದ್ದು. ಬಾಚಿಕಾಯಕದ ಬಸವಯ್ಯನಲ್ಲಿ ಈ ಬಹಿರಂಗ ವಾಸ್ತವ ಮತ್ತು ಅದರ ಕಥನ ಕ್ರಮಕ್ಕೆ ತುಂಬ ಮಹತ್ವ ಇದೆ.

ಬಸವಯ್ಯನ ವಚನಗಳಲ್ಲಿನ ಪ್ರಮುಖ ರೂಪಕಗಳಾದ ಮನೆ ಮತ್ತು ರಥ, ದೇಹ-ಆತ್ಮದ ಪರಿಕಲ್ಪನೆಯನ್ನು ಹೊಂದಿ ಆಧ್ಯಾತ್ಮಿಕ ಸಾಧನೆಯ ಶಾಂತಿಯ ಪ್ರತೀಕಗಳಾಗಿ ವಿಸ್ತಾರಗೊಳ್ಳುತ್ತವೆ. ಬಸವಯ್ಯನಲ್ಲಿ ಈ ರೂಪಕದ ವಿಕಾಸ (ಮನೆಯ ವಿಕಾಸ) ಮಾನವಾಕೃತಿಯ ಭೌತಿಕ ದೇಹದ ಮೇಲೆಯೇ ನಡೆಯುವುದೊಂದು ವಿಶೇಷ. ಅದೇ ವಾಸ್ತು ಪುರುಷನ ಕಲ್ಪನೆ. ಈ ವಾಸ್ತುಪುರುಷನ ದೈಹಿಕ ಚಲನೆ ಗೃಹವಾಸ್ತುವಿನ ಮೂಲತತ್ವ. ಇಂಥ ದೈಹಿಕ ಚಲನೆಯನ್ನು ಅವಲಂಬಿಸಿ ಗೃಹನಿರ್ಮಾಣದ ಸಾಧ್ಯತೆಗಳನ್ನು ಸ್ಥಿರೀಕರಿಸಲಾಗುತ್ತದೆ. ಗುರುಪುರದ ಮಲ್ಲಯ್ಯನ ವಚನವೊಂದು ಇಲ್ಲಿ ಮುಖ್ಯವೆನಿಸುತ್ತದೆ.

ಎನ್ನ ಪಾದವೇ ಪದಶಿಲೆಯಾಗಿ
ಎನ್ನ ಕಾಲೇ ಕಡಹದ ನಾಗವೇದಿಯಾಗಿ
ಎನ್ನ ಆಸ್ತಿಯೇ ಸುತ್ತಲ ಜಂಟಿಯಾಗಿ
ಎನ್ನ ಅದರವೇ ಬಳ್ಳಿಹ ಬಾಗಿಲಾಗಿ
ಎನ್ನ ಗುರುಕರುಣವೇ ಲಿಂಗವಾಗಿ
ಎನ್ನಂಗವೇ ರಂಗಮಧ್ಯವಾಗಿ
ಹೃದಯ ಕಮಲವೇ ಪೂಜೆಯಾಗಿ
ಎನ್ನ ಕಿವಿಗಳೇ ಕೀರ್ತಿ ಮುಖವಾಗಿ
ಎನ್ನ ನೆನೆವ ನಾಲಿಗೆಯೇ ಗಂಟೆಯಾಗಿ
ಎನ್ನ ಶಿರವೇ ಸುವರ್ಣ ಕಳಶವಾಗಿ
ಎನ್ನ ನಯನವೇ ಕುಂದದ ಜ್ಯೋತಿಯಾಗಿ
ಎನ್ನ ಚರ್ಮವೇ ನಿರ್ಮಲ ಹೊದಿಕೆಯಾಗಿ
ಎನ್ನ ನೆನಹೇ ನಿನಗೆ ಉಪಹಾರವಾಗಿ
ಗುರುಪುರದ ಮಲ್ಲಯ್ಯ ನಿಂದನಾಗಿ[1]

ಪ್ರಸ್ತುತ ವಚನವು ಮನುಷ್ಯ ದೇಹದ ಮೂಲಕ ಒಂದು ಆಲಯದ ಕಲ್ಪನೆಯನ್ನು ಚಿತ್ರಿಸಿಕೊಡುವುದಾಗಿದೆ. ಗಮನಾರ್ಹ ಅಂಶವೆಂದರೆ ದೇಹದ ಭೌತಿಕ ಮತ್ತು ಅದರ ಸಂರಚನಾ ವಿಧಾನದ ಸಂಗತಿಯನ್ನು ಎತ್ತಿಹಿಡಿದಿರುವುದು. ದೇಹದ ನಿರ್ಗುಣ ಮತ್ತು ನಿರಾಕರಣೆಯ ಬದಲು ಅದರ ಸುಗುಣ ಸ್ವಭಾವಕ್ಕೆ ಒತ್ತುಬಿದ್ದಿರುವುದು ಇಲ್ಲಿ ಎದ್ದು ಕಾಣುತ್ತದೆ.

ಇಂಥ ರೂಪ ಮತ್ತು ನಿರೂಪದ ಎರಡೂ ಮಾದರಿಗಳನ್ನು ಬಸವ ಮತ್ತು ಅಲ್ಲಮನಲ್ಲೂ ವಿಭಿನ್ನವಾಗಿಯೇ ಕಾಣಬಹುದು. ಬಸವಣ್ಣನಲ್ಲಿ ‘ಬಯಲ ರೂಪ ಮಾಡಬಲ್ಲಾತನೇ ಶರಣ’ ಎನ್ನುವ ತಾತ್ವಿಕತೆ ಇದ್ದರೆ, ಬಯಲನ್ನು ಬರೀ ಬಯಲನ್ನಾಗಿ ನೋಡುವ ಸೈದ್ಧಾಂತಿಕತೆ ಅಲ್ಲಮನಲ್ಲಿದೆ. ಒಂದು ವ್ಯಕ್ತಿತ್ವಕ್ಕೆ ಮತ್ತು ಕ್ರಿಯಾಶೀಲತೆಗೆ ಬೆಲೆ ನೀಡಿದರೆ ಇನ್ನೊಂದು ಇದಕ್ಕಿಂತ ಭಿನ್ನ ಪಾತಳಿಯಲ್ಲಿ ಅನುಭವಕ್ಕೆ ಬರುತ್ತದೆ. ಹಾಗೆ ಬಾಚಿಕಾಯಕದ ಬಸವಯ್ಯನಲ್ಲಿ ವ್ಯಕ್ತಿ ಹಾಗೂ ವ್ಯಕ್ತಿತ್ವವನ್ನು ಅಗತ್ಯಗನುಗುಣವಾಗಿ ವಿವರಿಸಿಕೊಳ್ಳುವ, ವಿಸ್ತರಿಸಿಕೊಳ್ಳುವ, ಬದಲವಣೆಗೆ ಹೊಂದಿಕೊಳ್ಳುವ ಆಲಯವಾಗಿ ಈ ರೂಪ ಅರ್ಥಪಡೆದುಕೊಳ್ಳುತ್ತದೆ. ಕಸುಬುದಾರನಾದ ಬಸವಯ್ಯ ಸಾಮಾಜಿಕಾರ್ಥದಲ್ಲಿ ರೂಪಕ್ಕೆ ಬೆಲೆಕೊಟ್ಟರೆ, ತತ್ವಜ್ಞಾನದ ನೆಲೆಯಲ್ಲಿ ದಾರ್ಶನಿಕತೆಯನ್ನು ನೋಡುವ ಅಲ್ಲಮ ನಿರೂಪಕ್ಕೆ ಅಂದರೆ ಶೂನ್ಯಕ್ಕೆ ಒತ್ತುನೀಡುತ್ತಾನೆ. ಅದೇ ರೀತಿ ಸಿದ್ಧರಾಮನಂಥವರು ಕರ್ಮಮಾರ್ಗಕ್ಕೆ (ವಾಸ್ತವ) ಒತ್ತುನೀಡುತ್ತಾರೆ.

ಬಾಚಿಕಾಯಕದ ಬಸವಯ್ಯನಲ್ಲಿ ಮೂರ್ತದಿಂದ ಅಮೂರ್ತದತ್ತ ಸಾಗುವ ಕ್ರಿಯೆ ಪ್ರಧಾನವಾದದ್ದು. ಆದರೂ ಅಮೂರ್ತವೂ ಮೂರ್ತದಲ್ಲೇ ಸಾರ್ಥಕತೆಯನ್ನು ಪಡೆದುಕೊಳ್ಳುವ ಗುಣ ವಿಶೇಷವಾದದ್ದು. ಅಲ್ಲಮನು ಪರಂಪರೆಯೊಂದು ನಂಬಿಕೊಂಡು ಬಂದಿರುವ ‘ಚರಿತ್ರೆ’, ‘ಪುರಾಣ’. ‘ಸಮಾಜ’, ‘ಊರು’, ‘ಮನುಷ್ಯ’ ಇಂಥರೂಪಸಾಮ್ಯವನ್ನು ಮುರಿದು ಹೊಸತೊಂದು ನೆಲೆಯನ್ನು ಪರಿಶೋಧಿಸುವತ್ತ ಆಸಕ್ತನಾದರೆ ಬಸವಯ್ಯ ವಾಸ್ತವದ ಜಡತೆಯಲ್ಲೇ ಚಲನಶೀಲತೆಯನ್ನು ಅರಸುತ್ತಾನೆ. ಆಲಯ ಅಂಥ ಕಡೆಗಳಲ್ಲಿ ಪ್ರಮುಖ ರುಪಕವಾದರೆ ರಥ ಅಥವಾ ಚಕ್ರದ ಪ್ರತಿಮೆಗಳು ಆ ಜಡತೆಯ ವಿಕಸನ ಕ್ರಮದ ಪರಿಕರಗಳಾಗುತ್ತವೆ.

ಘಟಸ್ಥಾವರದೊಳಗನೊಡೆದು ಕಿಚ್ಚಿನ ಹೊರೆಯಂ ಕಂಡೆ
ಕಾಣಿಸಿ ಮಿಕ್ಕಾದ ಹೊರಗಣ ಹೊರೆಯ ತಿಗುಡಂ ಕೆತ್ತಿ
ಕಂಬವ ಶುದ್ಧೈಸಿ ನೆಲವಟ್ಟಕ್ಕೆ ಚದುರಸವನಿಂಬುಗೊಳಿಸಿ
ಮೇಲಣ ವಟ್ಟಕ್ಕೆ ಎಂಟು ಧಾರೆಯ ಏಣಂ ಮುರಿದು
ಕಡಿಗೆ ವಟ್ಟ ವರ್ತುಳಾಕಾರದಿಂ ಶುದ್ಧವ ಮಾಡಿ
ಏಕೋತ್ತರ ಶತಸ್ಥಲವನೇಕೀಕರಿಸಿ
ಒಂದು ದ್ವಾರದ ಬೋದಿಗೆಯಲ್ಲಿ ಕಂಬವ ಶುದ್ಧೈಸಿ
ಕಂಬ ಎರವಿಲ್ಲದೆನಿಂದ ಮತ್ತೇ ಚದುರಸಭೇದ
ಅಷ್ಟದಿಕ್ಕಿನ ಬಟ್ಟೆ ಕೆಟ್ಟು ನವರಸ ಬಾಗಿಲು ಮುಚ್ಚಿ
ತ್ರಿಕೋಣೆಯನುಲುಹುಗೆಟ್ಟು ಮುಂದಣ ಬಾಗಿಲು ಮುಚ್ಚಿ
ಹಿಂದಣ ಬಾಗಿಲು ಕೆಟ್ಟು ನಿಜವೊಂದೇ ಬಾಗಿಲಾಯಿತ್ತು
ಈ ಕೆಲಸವ ಆ ಕಂಬದ ನಡುವೆ ನಿಂದು ನೋಡಲಾಗಿ
ಮಂಗಳ ಮಯವಾಗಿ, ಇದು ಯೋಗಸ್ಥಲವಲ್ಲ
ಇದು ಘನಲಿಂಗ ಯೋಗಸ್ಥಲ ಇಂತೀ ಭೇದವ ತಿಳಿದಡೆ
ಬಸವಣ್ಣ ಪ್ರಿಯ ವಿಶ್ವಕರ್ಮಟಕ್ಕೆ
ಕಾಳಿಕಾ ವಿಮಲ ರಾಜೇಶ್ವರ ಲಿಂಗವಲ್ಲದಿಲ್ಲಾ ಎಂದೆ.[2]

ಇಡೀ ವಚನ ವಾಸ್ತುಪುರುಷನ ತಾತ್ವಿಕತೆಯಲ್ಲೇ ವಿಕಸಿತಗೊಂಡಿದೆ. ದೈಹಿಕ ಸಂರಚನೆಯೇ ವಾಸ್ತುವಿನ ಮೂಲ ಎನ್ನುವ ಅಂಶ ಹೀಗೆ ಮತ್ತೆ ಮತ್ತೆ ಬಸವಯ್ಯನಲ್ಲಿ ಕಂಡುಬರುತ್ತದೆ.

ತಾರ್ಕಿಕವಾದ ಕಟ್ಟುವಿಕೆಯನ್ನು ಮೇಲಿನ ವಚನದಲ್ಲಿ ಕಾಣಬಹುದಾಗಿದೆ. ಅಲ್ಲಮ ನಂತವರಲ್ಲಿ ಇಂಥ ಕಟ್ಟುವ ಆಸೆಯನ್ನು ಕಾಣಲಾಗುವುದಿಲ್ಲ. ತಾನೇ ತಾನಾಗಿ ಇರುವ ಬಗೆ ಆತನದು. ರೂಪ ಮತ್ತು ನಿರೂಪದ (ಇರುವ ಮತ್ತು ಇಲ್ಲದಿರುವ) ವ್ಯತ್ಯಾಸ ಅವನಲ್ಲಿ ಇಲ್ಲ. ದೇಹದ ಲೌಕಿಕತೆಯನ್ನು ಮೀರಲು ಬೇಕಾಗುವ ತಪಸ್ಸು,ನೇಮ ಶೀಲಗಳಂತಹ ಅಂಗೀಕೃತ ಪರಿಕಲ್ಪನೆಗಳನ್ನು ಧಿಕ್ಕರಿಸುತ್ತಾನೆ.

ಬಾಚಿಕಾಯಕದ ಬಸವಯ್ಯನಲ್ಲಿ ರೂಪವನ್ನು ಧಿಕ್ಕರಿಸದೆ ಸಂಸ್ಕರಿಸಿ ಬಳಕೆಗೆ ಸಾಧ್ಯಗೊಳಿಸುವ ಸೃಷ್ಟ್ಯಾತ್ಮಕತೆಯನ್ನು ಕಾಣುತ್ತೇವೆ. ವೃತ್ತಿ ಸಹಜ ಪರಿಕರಗಳು ಮತ್ತು ಪರಿಭಾಷೆಗಳಾದ ಉಳಿ, ಬಾಚಿ, ಕೊಡತಿ, ಏಣು, ಕಂಬ, ಚೌಷಪ್ಪಿ, ಬೋದಿಗೆ, ಮಡಿಗೆ ಇವೆಲ್ಲ ಆತನ ರೂಪಕಾಕೃತಿಯ ಸರಂಜಾಮುಗಳು. ಕಸುಬುದಾರ ಕವಿ ಅಥವಾ ದಾರ್ಶನಿಕನೊಬ್ಬ ಅಲೌಕಿಕವಾದ ಅಯೋಮಯತೆಯನ್ನು ನಂಬಿ ಏನನ್ನೂ ಸೃಷ್ಟಿಸಲಾರ. ಮತ್ತು ಅಂಥ ಅತಿಮಾನುಷವಾದ ಬದುಕನ್ನು ಆತ ಪ್ರೀತಿಸಲಾರ. ಆತನ ದಾರ್ಶನಿಕ ವೇದಿಕೆ ಎಂದರೆ ಪ್ರಕೃತಿ. ಸಾಧನಾ ಪರಿಕರಗಳೆಂದರೆ ವೃತ್ತಿ ಮತ್ತು ಪರಿಕರಗಳು. ಮೌನೇಶ್ವರರ ವಚನವೊಂದರಲ್ಲಿ ಇದರ ಸ್ಪಷ್ಟತೆಯನ್ನು ಕಾಣಬಹುದು. ‘ಏಳೇಳು ಲೋಕದ ದೇವತೆಗಳುಉಳಿಯಿಂದಲಾದಾರು’ ‘ನಾನಾ ದೇವರು ಚಾಣಿನ ಮಕ್ಕಳು’ ಅಲ್ಲದೆ ‘ಹಲವು ಮೂರುತಿ ಮಾಡಿದ ಉಳಿಯೊಂದೆ ಕೊಡತೊಂದೆ ಶಿಲೆಯಲ್ಲವೊಂದೆ ಶಿಲ್ಪಿಯೊಂದೆ ನೋಡಿದ ಮೇಲೆ’ ಎನ್ನುವಲ್ಲಿ ವೃತ್ತಿಕಾರನೊಬ್ಬನ ವೃತ್ತಿಬದ್ಧತೆ ಮತ್ತು ಲೋಕೋಪಕಾರದ ಮಹತ್ವ ಅರಿವಾಗುತ್ತದೆ. ಬಸವಯ್ಯನಲ್ಲಿ ಪ್ರಕೃತಿ ಸತ್ಯ. ಈ ಸತ್ಯದ ಅನ್ವೇಷಣೆಗೆ ಉಳಿ, ಬಾಚಿ, ಕೊಡತಿ, ಎನ್ನುವ ಪರಿಕರಗಳು ಅವಶ್ಯ. ಅಂದರೆ ಅರಿವಿನ ದಾರಿ ಇಂಥ ನಿದರ್ಶನಗಳಲ್ಲಿ ಪ್ರಮುಖವಾದ ಅಂಶ. ಮನೆಯು ಹೊಂದಿರುವ ವಿವಿಧ ವಿನ್ಯಾಸ ಒಪ್ಪುವ ಸಾಮಗ್ರಿ ಶೂನ್ಯದ ಸೃಷ್ಟಿಗಳಲ್ಲ. ಈ ಸಾಮಗ್ರಿಗಳನ್ನು ವಿನ್ಯಾಸಗೊಳಿಸಿ ಒಂದು ಏಕಸೂತ್ರಕ್ಕೆ ಹೊಂದಿಸಿದ ರೀತಿ ಇಲ್ಲಿ ಗಮನಾರ್ಹ. ದಾರ್ಶನಿಕ ಪರಿಭಾಷೆಯಲ್ಲಿ ಗುರುತಿಸುವುದಾದರೆ ದೇಹ ಮತ್ತು ಮನಸ್ಸಿನ ವಿಕಾರಗಳನ್ನು ನಿಯಂತ್ರಿಸಿಅಖಂಡ ಪರಿಪೂರ್ಣತೆಯನ್ನು ಕಾಣಬಹುದು. ನಿರ್ಭೇದ ಸ್ಥಿತಿ ತಲುಪುವುದು. ‘ನೆಲವ ಬಿಟ್ಟು ಆಕಾಶದಲ್ಲಿ ನಿಂದು ಮುಗಿಲೊಳಗೆ ಮಿಂಚಿದಲ್ಲದೆ ಅರಿವು ಆಗದು’ ಎನ್ನುವ ಅಲ್ಲಮನ ಮಾತಿನಂತೆ ಇಂಥ ತರ್ಕ ವಿಚಾರವನ್ನು ಮೀರಿದ್ದು ಅರಿವು. ‘ಮೇಲಣ ವಟ್ಟಕ್ಕೆ ಎಂಟು ಧಾರೆಯ ಏಣಂ ಮುರಿದು ಗಡಿಗೆ ವಟ್ಟವ ವರ್ತುಳಾಕಾರದಿಂ ಶುದ್ಧವ ಮಾಡಿ’ ಎನ್ನುವ ಮಾತಿಗೆ ಷಟಸ್ಥಲ ಪರಿಕಲ್ಪನೇಯಲ್ಲಿ ಚತುರ್ವಿಧ ಭಕ್ತಿಸಂಪಣ್ಣನಾದ ಶರಣರು ಅಷ್ಟವಿದ ಭಕ್ತಿಯಲ್ಲಿ ನಿರ್ಧಾರವಾಗಿ ಕಾರಣವೆಂಬ ದೇಹದಲ್ಲಿ ಭಾವಲಿಂಗ ಸಂಬಂಧವ ಮಾಡಿದನೆಂದು ಅರ್ಥವಿದೆ. ವೃತ್ತಿ ಪರಿಭಾಷೆಯಲ್ಲಿ ಈ ವಚನಕ್ಕೆ ಇದಕ್ಕಿಂತ ಭಿನ್ನವಾದ ಅರ್ಥದ ನೆಲೆಗಳು ಗ್ರಾಸವಾಗುತ್ತವೆ. ‘ಏಣು’ ಎನ್ನುವ ಪದ ವಿಶೇಷವಾದದ್ದು. ಕಟ್ಟಿಗೆ ಯಾವ ಆಕಾರದಲ್ಲಿದ್ದರೂ ಅದಕ್ಕೊಂದು ಏಣು (ಅಂಚು) ಇರುತ್ತದೆ. ವಚನದ ಹಿಂದಿನ ಸಾಲುಗಳನ್ನು ಪರಿಭಾವಿಸಿದರೆ ಇದರ ಅರ್ಥ ಸ್ಪಷ್ಟವಾಗುತ್ತದೆ. ‘ನೆಲವಟ್ಟಕ್ಕೆ ಚತುರಸವ ನಿಂಬುಗೊಳಿಸಿ’ ಎನ್ನುವಲ್ಲಿ ಚೌಕಾಕಾರವಾದ ವಸ್ತುವಿಗೆ ಹರಿತವಾದ ‘ಏಣು’ ಗಳಿರುತ್ತವೆ. ಇದು ಯಥಾವತ್ತಾಗಿ ಮನೆಯ ಕಂಬ ಅಥವಾ ತೊಲೆ ಬೋದಿಗೆಗಳಲ್ಲಿ ಉಳಿದರೆ ವಾಸಸ್ಥರಿಗೆ ಅಪಾಯ ತಪ್ಪಿದ್ದಲ್ಲ. ಈ ಅಪಾಯಕ್ಕೆ ಅಂಜಿ ಇಡೀ ಇಮಾರತಿಯನ್ನೇ ತೊರೆದು ಹೋಗಬೇಕಾದ್ದಿಲ್ಲ. ಅದನ್ನು ಹಾಳು ಮಾಡಬೇಕಾದ ಪ್ರವೃತ್ತಿಯೂ ಸಾಧು ಅಲ್ಲ. ಈ ಹರಿತತೆಯ ಪ್ರಖರತೆಯನ್ನು ನಿಯಂತ್ರಿಸಿ ಅಂದರೆ ಏಣು ಮುರಿದು (ಸವರಿ) ಇಮಾರತಿಗೆ ಒಪ್ಪವಾಗಿಸುವುದು ಇಲ್ಲಿನ ಪ್ರಮುಖ ಸಂಗತಿ. ಅಂದರೆ ದೇಹ ಗುಣಗಳನ್ನು ದೇಹದ ಸಹಜತೆಗೆ ವ್ಯತಿರಿಕ್ತವಾಗಿ ತಿದ್ದದೆ ದೇಹಕ್ಕೆ ಲಕ್ಷಣವಾಗುವ ಹಾಗೆ ದುಡಿಸಿಕೊಳ್ಳಬೇಕೆನ್ನುವ ಅರ್ಥದಲ್ಲೂ ಮೇಲಿನ ಸಂಗತಿಯನ್ನು ಗ್ರಹಿಸಬಹುದಾಗಿದೆ.

‘ಎಂಟು ಧಾರೆಯ ಏಣು’ ಎಂದರೆ ಮನೆಗೆ ನಿಲ್ಲಿಸುವ ಕಂಬಗಳನ್ನು ‘ಅಷ್ಟಫೈಲ್’, ‘ಚದುರಸ’, ‘ಷಟ್ ಕೋನ’ ಹೀಗೆ ವಿವಿಧ ವಿನ್ಯಾಸಗಳಲ್ಲಿ ರೂಪಿಸಿ ನಿಲ್ಲಿಸುವುದುಂಟು. ಅಷ್ಟ ವಿಧದ ಆಕೃತಿ ನಿರ್ಮಾಣಕ್ಕೆ ವಿಶೇಷ ಪರಿಣತಿ ಮತ್ತು ಅನುಭವ ಅಗತ್ಯವಾಗಿರಬೇಕು. ಇಂಥ ಆಲಯವೂ ಕೂಡ ತುಂಬಾ ಕುಸುರಿಯಿಂದ ಕೂಡಿರುತ್ತದೆ. ಹೀಗೆ ವಸ್ತುವಿನ ವಿಷಮ ಗುಣಗಳಿಗಾಗಿ ಅದನ್ನು ಧಿಕ್ಕರಿಸದೆ ಅದರ ಸುಳಿವು ಹಿಡಿದು ಪಳಗಿಸಿ ಸೃಷ್ಟಿಶೀಲವಾಗಿಸುವುದು ಕಸುಬುದಾರನ ಮುಖ್ಯ ಗುಣ. ಇವುಗಳ ಸದ್ಭಳಕೆಯೆ ಅರಿವು. ಈ ಅರಿವು ಅಮೂರ್ತವಾದದ್ದು. ಇದು ಬೇರೆಲ್ಲಿಯೂ ಇರದೆ ಮೂರ್ತದೊಳಗೆ ಅಡಗಿರುವಂಥದ್ದು ಬಡಿಗ ವೃತ್ತಿ ಪ್ರಧಾನವಾದ ಒಂದು ಸರಳ ನಿದರ್ಶನದಿಂದ ಈ ಸಂಗತಿಯನ್ನು ಸ್ಪಷ್ಟಪಡಿಸಿಕೊಳ್ಳಬಹುದು.

ಬಡಿಗನ ಮುಖ್ಯ ಗುಣವೇ ರೂಪದೊಳಗಣ ನಿರೂಪವನ್ನು ಹುಡುಕುವುದು. ಯಾವುದೇ ಘನಾಕೃತಿಯನ್ನು ಆತ ನೋಡುವುದು (ಕಲ್ಲು, ಕಟ್ಟಿಗೆ,ಇತ್ಯಾದಿ) ಈ ನಿರೂಪ ಪ್ರಜ್ಞೆಯಿಂದಲೇ. ಆಕೃತಿಯ ಹೆಸರು ಎತ್ತಿದರೆ ಆತನ ಪ್ರಜ್ಞೆಯೊಳಗಡೆ ಅವಶ್ಯಕ ಆಕೃತಿಯೊಂದು ರೂಪಧಾರಣೆ ಮಾಡುತ್ತದೆ ಎಂಬುದನ್ನು ಮರೆಯಬಾರದು. ರೈತನೊಬ್ಬ ತನಗೊಂದು ಮಡಿಕೆ (ನೇಗಿಲು) ಬೇಕೆಂದು ಬಡಿಗನ ಅಡಿಕಟ್ಟಿಗೆ ಬಂದಾಗ ಬಡಿಗನಾದವ ಸಿಕ್ಕ ಸಿಕ್ಕ ಕೊರಡುಗಳಲ್ಲಿ ಮಡಿಕೆಯನ್ನು ಹುಡುಕುವುದಿಲ್ಲ. ಮಡಿಕೆಯ ಲಕ್ಷಣವನ್ನು ಹೊಂದಿದ ಕೊರಡೊಂದನ್ನು ಆಯುತ್ತಾನೆ. ಈ ಆಯ್ಕೆ ಆತನ ಚಿತ್ತ ಭಿತ್ತಿಯಲ್ಲಿ ಮೂಡಿದ ಚಿತ್ರಣದಿಂದ ಸಾಧ್ಯವಾಗುವಂಥದ್ದು. ಅಳಿದು ಸುರುಯದೆ ಕಣ್ಣಲ್ಲೇ ಇದರ ಸ್ವರೂಪವನ್ನು ನಿರ್ಣಯಿಸಿ ಅದಕ್ಕೆ ಅಂಟಿದ ಹೆಚ್ಚಿನ ತಿಗೂಡನ್ನು ಬಾಚಿಯಿಂದ ಕೆತ್ತಿ ತೆಗೆಯುತ್ತಾನೆ. ಈ ರೂಪದ ಸ್ವರೂಪಿಕರಣ ಸರಳವಾದದ್ದಲ್ಲ. ವಚನದೊಳಗಡೆಯೇ ಬರುವಂತೆ ‘ಮಿಕ್ಕಾದ ಹೊರಗಣ ಹೊರೆಯ ತಿಗೂಡ ಕೆತ್ತಿ’ ಎನ್ನುವಲ್ಲಿ ಬಹಿರಂಗದ ಅವಘಡಗಳನ್ನು ದಾಟಿ ಅಂತರಂಗದ ಅರಿವಿಗೆ ಹಾತೊರೆಯುವ ಕ್ರಮವನ್ನು ಕಾಣುತ್ತೇವೆ. ಲೌಕಿಕದ ಇರುವಿಕೆಯೊಂದಿಗೆ ಅಲೌಕಿಕದ ವಾಸ್ತವವನ್ನು ಕಂಡುಕೊಳ್ಳುವುದು. ಮೂಲವಸ್ತುವಿನ ಇರುವ ಸ್ಥಿತಿ ಮತ್ತು ಅರಿಯುವ ಪ್ರಜ್ಞೆ ಎರಡೂ ಮುಖ್ಯ. ಇಲ್ಲಿಂದಲೇ ದೇಹ ಮತ್ತು ಅದರ ಆಚೇ ನಡೆಯುತ್ತಿರುವುದೇನು ಎನ್ನುವ ಹುಡುಕಾಟ ಪ್ರಾರಂಭವಾಗುತ್ತದೆ. ಇದು ನಾನು ಎನ್ನುವ ಪ್ರತ್ಯೇಕತೆ ಮತ್ತು ಅದರಿಂದ ಹುಟ್ಟುವ ತಲ್ಲಣಗಳಿಂದ ಆರಂಭವಾಗುತ್ತದೆ. ‘ಎನ್ನ ನಾನರಿಯದಂದು ಮುನ್ನ ನೀನೇನಾಗಿದ್ದೆ ಹೇಳಾ’ ಎನ್ನುವ ಅಲ್ಲಮನ ಮಾತು ಇಲ್ಲಿ ಮುಖ್ಯವೆನಿಸುತ್ತದೆ. ಮೂಲವಸ್ತುವಿನಿಂದ ಸ್ವಲ್ಪ ದೂರ ನಿಂತು ನಾನು, ನೀನು ನಮ್ಮಿಬ್ಬರಲ್ಲಿ ಸಂವಾದ ಸಾಧ್ಯ ಎನ್ನುವ ಬೆರಗುಗಮ್ಯವಾದ ನಡವಳಿಕೆಯನ್ನು ಬಸವಯ್ಯನಲ್ಲಿ ಕಾಣುತ್ತೇವೆ. ನೋಟ, ವ್ಯಕ್ತಿ ಇವೆರಡಕ್ಕೂ ತಳಹದಿಯಾಗಿ ನಾನು ಮತ್ತು ನೀನು ಎನ್ನುವ ಭೇದವನ್ನು ಎಲ್ಲ ವಚನಕಾರರಲ್ಲೂ ಕಾಣುತ್ತೇವೆ. ಹಾವಿನಹಾಳ ಕಲ್ಲಯ್ಯನ ಒಂದು ವಚನ ಇಲ್ಲಿ ಪ್ರಸ್ತುತವೆನಿಸುತ್ತದೆ.

ಬಯಲು ಮೊಳಗಿ,ಮಳೆ ಸೃಜಿಸಿ, ಆ ಬಯಲು ಆ ಮಳೆಯನೊಡಗೂಡಿ
ದೃಷ್ಟವಪ್ಪ ವಾರಿಕಲ್ಲಾಗಿ ತೋರಿದಂತೆ
ನಿನ್ನ ನೆನಹೆ ನಿನಗೆ ಶಕ್ತಿಯಾಯಿತ್ತಲ್ಲಾ
ಆ ನಮ್ಮಿಬ್ಬರ ಸಮರತಿಯೆ
ನಿಮಗೆ ಅಖಂಡವೆಂಬ ನಾಮ ಸೂಚನೆಯಾಯಿತ್ತಲ್ಲಾ
ಮಹಾಲಿಂಗ ಕಲ್ಲೇಶ್ವರಾ
ನಿಮ್ಮ ಆದಿಗೆ ಇದೇ ಪ್ರತಮವಾಯಿತ್ತಲ್ಲಾ[3]

ನಾನು ಎನ್ನುವುದು ನಿರ್ದಿಷ್ಟ ದೇಹ, ನಿರ್ದಿಷ್ಟ ಮನಸ್ಸುಗಳನ್ನು ಒಳಗೊಂಡಿದ್ದು. ಇತರವೆಂದರೆ ನೀನು, ಅವರು, ಸಮಾಜ ನನ್ನಿಂದ ಭಿನ್ನವಾಗಿರುವ ಎಲ್ಲವನ್ನು ಒಳಗೊಂಡಿದ್ದು. ನಾನು ಎನ್ನುವ ಅಂತರಂಗದಲ್ಲಿ ಒಂದು ನೀತಿ ಇರುತ್ತದೆ. ನೀನು ಎಂಬ ಬಹಿರಂಗದಲ್ಲಿ ಒಂದು ವ್ಯವಸ್ಥೆಯಿರುತ್ತದೆ. ಇಲ್ಲಿ ಯಾವುದು ಯಾವುದಕ್ಕೆ ಪ್ರೇರಣೆ ನೀಡುತ್ತದೆನ್ನುವುದು ಬೇರೆ ಮಾತು. ಬಾಚಿಕಾಯಕದ ಬಸವಯ್ಯನಲ್ಲಿ ಅಂತರಂಗದ ವೈಶಿಷ್ಟ ಮತ್ತು ಬಹಿರಂಗದ ವಾಸ್ತವ ಎರಡನ್ನೂ ಒಪ್ಪಿತ ನೆಲೆಯಲ್ಲಿ ಕಾಣುತ್ತೇವೆ. ಒಮ್ಮೊಮ್ಮೆ ಎರಡಕ್ಕೂ ಕುಸ್ತಿ ಕಣದಲ್ಲಿ ಪರಸ್ಪರ ಸೆಡ್ಡು ಹೊಡೆದು ಮಸೆದಾಡುವ ಕುಸ್ತಿಗಡಿಗಳಂತೆ ಘರ್ಷಣೆ ನಡೆದರೂ ಕ್ರಿಯೆ ಮತ್ತು ಜ್ಞಾನದ (ಅಂತರಂಗ-ಬಹಿರಂಗ, ರೂಪ-ನಿರೂಪ) ಆತ್ಮಸಂಗವೇ ಎದ್ದು ಕಾಣುತ್ತದೆ.

ಆಚಾರ ಮತ್ತು ಅರಿವಿನ ಪ್ರಶ್ನೆಯಾಗಿಯೂ ಇದನ್ನು ಗುರುತಿಸಬಹುದು. ವಚನದಲ್ಲಿ ಕಾಣುವುದು ವಿಚಾರಕ್ಕೆ ಮೂಲವಾದ ಆಚಾರ ಮತ್ತು ಅರಿವಿನ ಸಮಸ್ಯೆ. ‘ಆಚಾರವನೆ ಕಂಡರು ವಿಚಾರವನೆ ಕಾಣರು’,‘ರೂಪನೆ ಕಂಡರು ನಿರೂಪಣೆ ಕಾಣರು’,‘ತನುವನು ಕಂಡರು ಅಣುವನೆ ಕಾಣರು’ ಎನ್ನುವ ಅಲ್ಲಮನ ಮಾತಿನಂತೆ ಆಚಾರಕ್ಕೆ ವಿಚಾರದ ಬಲವಿಲ್ಲದಿದ್ದರೆ ಅದೊಂದು ಜಡ ಸಂಗತಿ ಮಾತ್ರ ಆಗುವುದು. ಆಚಾರ ವಿಚಾರಗಳ ದ್ವಂದ್ವತೆಯನ್ನು ಮೀರಿದ್ದು ಅರಿವು. ಆಚಾರವೇ ಸ್ವರ್ಗ ಅನಾಚಾರವೇ ನರಕ ಎನ್ನುವ ಬಸವಣ್ಣನ ಮಾತಿನಲ್ಲಿ ವಿಚಾರದ ಮೂರ್ತಿರೂಪವಾದ ಆಚಾರದ ಪ್ರಾಮುಖ್ಯತೆಯನ್ನು ಕಾಣುತ್ತೇವೆ. ಒಂದು ಧಾರ್ಮಿಕ ವ್ಯವಸ್ಥೆಯೊಳಗೆ ಆಚಾರಕ್ಕೆ ಒಂದು ಒಪ್ಪಿತ ನೆಲೆ ಇರುತ್ತದೆ. ಅಂತಹ ಆಚಾರವನ್ನು ಅನುಸರಿಸುವುದರಿಂದಲೂ ವಿಚಾರದ ಬೆಳವಣಿಗೆ ಹಾಗೂ ಅರಿವು ಸಾಧ್ಯ ಎನ್ನುವ ನಿಲುವು ಕಾಣುತ್ತದೆ. ಅವ್ಯಕ್ತವು ಅರಿವಿಗೆ ಬರುವುದು ವ್ಯಕ್ತದ ಮುಖಾಂತರವೇ. ಅದೇ ರೂಪ ಸ್ವರೂಪದ ಸ್ಥಿತಿ. ಬಾಚಿಕಾಯಕದ ಬಸವಯ್ಯನಲ್ಲಿ ಇದೇ ತಾತ್ವಿಕತೆ ಪ್ರಧಾನವಾಗಿ ಕಾಣುತ್ತದೆ. ‘ಕಂಡುದ ಹಿಡಿಯಲೊಲ್ಲದೆ ಕಾನದುದನರಸಿ ಹಿಡಿದಿಹೆನೆಂದರೆ ಸಿಕ್ಕಿದೆಂಬ ಬಳಲಿಕೆ ನೋಡಾ’ ಎನ್ನುವಲ್ಲಿ ಸಾದೃಶ್ಯದಿಂದ ಅಸಾದೃಶ್ಯದ ಕಡೆಗೆ ಸಾಗಿ ಮತ್ತೇ ಸಾದೃಶ್ಯವನ್ನೇ ಕೂಡುವ ನಿಲುವು ಎದ್ದುಕಾಣುತ್ತದೆ. ಇದನ್ನು ಬೇಕಾದರೆ ರೂಪ-ನಿರೂಪ-ಸ್ವರೂಪವೆಂದು ಗ್ರಹಿಸಬಹುದೆನಿಸುತ್ತದೆ. ಹೀಗೆ ವೈಯಕ್ತಿಕ ನೆಲೆಯಲ್ಲಿ ಅನುಭಾವದ ಸಾಧನೆ ಮತ್ತು ಅದು ಲೋಕ ವ್ಯವಹಾರದಲ್ಲಿ ಲೌಕಿಕ ತರ್ಕದ ಎದುರಿನಲ್ಲಿ ಸಮರ್ಥನೆಗೊಳ್ಳಬೇಕಾದ ಕಷ್ಟವನ್ನು ಕಾಣುತ್ತವೆ.

[1]ಸಂಕೀರ್ಣ ವಚನ ಸಂಪುಟ-೨, ಪು. ೧೩೧,ವಚನ ೩೮೪,೧೯೯೩

[2]ಸಂಕೀರ್ಣ ವಚನ ಸಂಪುಟ-೩, ಪು. ೮೫ ವಚನ ೨೧೧, ೧೯೯೩

[3]ಸಂಕೀರ್ಣ ವಚನ ಸಂಪುಟ-೪, ಪು. ೩೬೪, ವಚನ ೧೧೫೮, ೧೯೯೩