ಸುಮಾರು ೩೫೦ ವರ್ಷಗಳ ಹಿಂದಿನ ಮಾತು. ಆಗ ಪುಣೆ ಪಟ್ಟಣದ ಸುತ್ತ ಹನ್ನೆರಡು ಮಾವಳ ಪಾಳೆಯ ಪಟ್ಟುಗಳು ಇದ್ದವು.

ಈ ಪ್ರದೇಶದ ತುಂಬ ಸಹ್ಯಾದ್ರಿ ಪರ್ವತದ ಶಾಖೆಗಳು ಹಬ್ಬಿವೆ. ಎಲ್ಲಿ ನೋಡಿದರೂ ಬೆಟ್ಟಗುಡ್ಡಗಳೇ. ಅವುಗಳ ನಡುವೆ ಜುಳುಜುಳನೆ ಹರಿಯುವ ನದಿಗಳು; ದಟ್ಟವಾದ ಹಸಿರು ಕಾಡುಗಳು. ಆ ಅರಣ್ಯಗಳಲ್ಲಿ ಹುಲಿ, ಚಿರತೆ ಮುಂತಾದ ಭೀಕರ ಕಾಡುಮೃಗಗಳು. ಅವುಗಳ ಭೀಷಣ ಗರ್ಜನೆ ಕೇಳಿದವರ ಎದೆ ನಡುಗಿಸುತ್ತಿತ್ತು. ಅಲ್ಲಿ ವಾಸಿಸುವ ಜನರಿಗೆ ಮಾವಳಿಗಳೆಂದು ಹೆಸರು. ಅವರು ಸಹ ಹುಲಿ, ಚಿರತೆಗಳಂತೆಯೇ ಸಾಹಸಿಗಳು, ಪರಾಕ್ರಮಿಗಳು.

ಹನ್ನೆರಡು ಮಾವಳಗಳಲ್ಲೂ ಬೇರೆ ಬೇರೆ ಪಾಳೆಯಗಾರರು ಆಳುತ್ತಿದ್ದರು. ಇವರು ಶೂರರಾಗಿದ್ದರು ಎಂಬುದೇನೋ ನಿಜ. ಆದರೆ ಶುದ್ಧ ಸ್ವಾರ್ಥಿಗಳು. ತಮ್ಮ ಪ್ರಜೆಗಳಿಗೆ ಕಿರುಕುಳ ಕೊಡುತ್ತಿದ್ದರು. ಸದಾ ಪರಸ್ಪರ ಜಗಳವಾಡುತ್ತಿದ್ದರು. ಅದರಿಂದ ಬಿಜಾಪುರದ ಸುಲ್ತಾನನು ಅವರನ್ನೆಲ್ಲ ಸೋಲಿಸಿದ; ತನ್ನ ಅಡಿಯಾಳುಗಳನ್ನಾಗಿ ಮಾಡಿಕೊಂಡ.

ಹನ್ನೆರಡು ಮಾವಳಗಳ ಪೈಕಿ ಹಿರಡಸ್‌ಮಾವಳ ಎಂಬುದೂ ಒಂದು. ಅಲ್ಲಿನ ಪಾಳೆಯಗಾರರಿಗೆ ದರ್ಪ, ದುರಭಿಮಾನ ಹೆಚ್ಚು. ಬಾಂದಲ ದೇಶಮುಖರೆಂದು ಅವರಿಗೆ ಹೆಸರು. ಅವರಲ್ಲಿ ಕೃಷ್ಣಾಜಿ ಬಾಂದಲನು ಪ್ರಸಿದ್ಧ. ಭೋರ್ ತಾಲೂಕಿನ ರೋಹಿಡಾದುರ್ಗ ಅವನ ರಾಜಧಾನಿ ಆಗಿತ್ತು. ಉತ್ತರದಲ್ಲಿ ನೀರಾ ನದಿಯಿಂದ ದಕ್ಷಿಣದಲ್ಲಿ ಕೃಷ್ಣಾ ನದಿಯವರೆಗೆ, ಪಶ್ಚಿಮದಲ್ಲಿ ಸಹ್ಯಾದ್ರಿಯ ಬೆಟ್ಟಗಳಿಂದ ಹಿಡಿದು ಪೂರ್ವದಲ್ಲಿ ಶಿರವಳದವರೆಗಿನ ಪ್ರದೇಶ ಅವನ ಅಧೀನದಲ್ಲಿತ್ತು.

ಸ್ವಾಮಿನಿಷ್ಠ ಮನೆತನ

ಕೃಷ್ಣಾಜಿ ಬಾಂದಲನ ತಂದೆಯ ಕಾಲದಲ್ಲಿ ಪಿಲಾಜಿ ಪ್ರಭು ದೇಶಪಾಂಡೆ ಹಿರಡಸ್‌ಮಾವಳದ ದಿವಾನನಾಗಿದ್ದ. ಅನಂತರ ಅವನ ಮಗ ವೀರಾಗ್ರಣಿ ಕೃಷ್ಣಾಜಿಪ್ರಭು ದೇಶಪಾಂಡೆ ಅವನ ಜಾಗಕ್ಕೆ ಬಂದ. ತಂದೆ ಮಕ್ಕಳಿಬ್ಬರೂ ಒಳ್ಳೆಯ ಯೋಧರು; ಸ್ವಾಮಿನಿಷ್ಠರು.

ಆಗಿನ ಕಾಲದಲ್ಲಿ “ಸ್ವಾಮಿನಿಷ್ಠೆ” ಎಂಬುದರ ಅರ್ಥ ವಿಚಿತ್ರವಾಗಿತ್ತು. ಸ್ವಾಮಿನಿಷ್ಠೆ ಎಂದರೆ ತನ್ನ ಯಜಮಾನ ಹೇಳಿದಂತೆ ಮಾಡುವುದು. ರಾಜ ಎಷ್ಟೇ ಕೆಟ್ಟವನಾಗಿದ್ದರೂ ಸರಿಯೆ; ಅವನ ನಡತೆ ಸ್ವದೇಶಕ್ಕೆ, ಸ್ವಧರ್ಮಕ್ಕೆ ವಿರುದ್ಧವಾಗಿದ್ದರೂ ಸರಿಯೆ!

ಪರಮ ವೀರ ಬಾಜಿಪ್ರಭು ಹದಿನೇಳನೆ ಶತಮಾನದ ಎರಡನೆ ದಶಕದಲ್ಲಿ ಜನ್ಮ ತಾಳಿದ. ವೀರಾಗ್ರಣಿ ಕೃಷ್ಣಾಜಿಪ್ರಭುವೇ ಅವನ ತಂದೆ. ಅವನು ಹುಟ್ಟಿದ್ದು ಭೋರ‍್ಗೆ ಮೂರು ಮೈಲಿ ದೂರದಲ್ಲಿರುವ ಸಿಂಧ್‌ಗ್ರಾಮದಲ್ಲಿ.

“ಬಾಜಿ” ಎಂದರೆ ಪಂದ್ಯ ಅಥವಾ ಸ್ಪರ್ಧೆ ಎಂದೂ ಅರ್ಥವುಂಟು. “ಬಾಜಿಪ್ರಭು” ಎಂದರೆ ಎಂದೂ ಸೋಲದವನು; ನಿತ್ಯವಿಜಯಿ.

ಸಂಗಡಿಗರ ನಡುವೆ ನಾಯಕಪಟ್ಟ ಸದಾ ಬಾಜಿ ಪ್ರಭುವಿಗೆ ಮೀಸಲು. ದಂಡ-ಬೈಠಕ್‌ಸೂರ್ಯನಮಸ್ಕಾರ, ಮಲ್ಲಯುದ್ಧ ಇತ್ಯಾದಿಗಳಲ್ಲಿ ಅವನದೇ ಮೇಲುಗೈ. ಬಾಲಕ ಬಾಜಿ ತರುಣರ ಜೊತೆಗೂ ಪಂದ್ಯ ಕಟ್ಟುತ್ತಿದ್ದ; ಗೆದ್ದೇ ಗೆಲ್ಲುತ್ತಿದ್ದ. ಆಗಿನ ಕಾಲದಲ್ಲಿ ಖಡ್ಗ, ಭಾಲಾ, ದಾಂಡಪಟ್ಟಾ ಮುಂತಾದ ನಾನಾವಿಧದ ಶಸ್ತ್ರಗಳು ಬಳಕೆಯಲ್ಲಿದ್ದವು. ಅವುಗಳ ಪ್ರಯೋಗದಲ್ಲಿ ಬಾಜಿ ಪರಿಣತನಾದ. ಸುಂದರ, ಸದೃಢ ಯುವಕನಾಗಿ ಬೆಳೆದ.

ಕೃಷ್ಣಾಜಿ ದೇಶಪಾಂಡೆಗೆ ವಯಸ್ಸಾಯಿತು. ಆಗ ಬಾಜಿಪ್ರಭು ದೇಶಪಾಂಡೆ ಹಿರಡಸ್‌ಮಾವಳದ ಮಂತ್ರಿ ಪದವಿಗೇರಿದ. ಒಳ್ಳೆಯ ಸಲಹೆಗಾರ, ಉತ್ತಮ ಆಡಳಿತಗಾರ ಆದ. ಅತ್ಯುತ್ತಮ ಕಾರ್ಯಪಟು ಎಂದು ಹೆಸರು ಗಳಿಸಿದ. ರಾಜನಿಂದ ಹಿಡಿದು ಪ್ರಜೆಗಳವರೆಗೆ ಎಲ್ಲರ ಪ್ರೀತಿ ಗಳಿಸಿದ; ಗೌರವ ಸಂಪಾದಿಸಿದ. ಅವನಿಗೆ ರಾಜನ ಆಜ್ಞೆ ಎಂದರೆ ದೇವರ ಆಜ್ಞೆ ಇದ್ದಂತೆ. ಅದಕ್ಕಾಗಿ ಪ್ರಾಣ ಒಪ್ಪಿಸಲೂ ಅವನು ಸಿದ್ಧನಾಗಿದ್ದ.

ಸ್ವರಾಜ್ಯದ ಉದಯ

ಇದೇ ಸಮಯದಲ್ಲಿ, ಮಹಾರಾಷ್ಟ್ರದ ಇನ್ನೊಂದು ಮೂಲೆಯಲ್ಲಿ ಒಂದು ಮಹತ್ವದ ಘಟನೆ ನಡೆಯಿತು. ಶಿವನೇರಿದುರ್ಗದ ಮೇಲೆ ೧೬೩೦ರಲ್ಲಿ ಮತ್ತೊಬ್ಬ ಮಹಾಪುರುಷನ ಉದಯವಾಯಿತು. ವೀರಮಾತೆ ಬೀಜಾಬಾಯಿಯ ಮಗನಾಗಿ ಶಿವಾಜಿ ಜನಿಸಿದ. ಹುಟ್ಟು ಸಾಹಸಿ ಅವನು. ಪುಟ್ಟ ಬಾಲಕನಾಗಿದ್ದಾಗಲೇ ಸ್ವರಾಜ್ಯ ಕಟ್ಟುವ ಸಾಹಸಕ್ಕೆ ಕೈಯಿಟ್ಟ. ಸ್ವಾತಂತ್ರ್ಯಕ್ಕಾಗಿ ಹೋರಾಡುವ ಶಪಥ ತೊಟ್ಟ.

ಬಾಲಕ ಶಿವಾಜಿ ಪುಣೆಯ ಸುತ್ತಮುತ್ತ ಓಡಾಡಿದ. ಬೆಟ್ಟ ಕಾಡುಗಳಲ್ಲಿ ಸಂಚರಿಸಿದ. ಹಳ್ಳಿಗಾಡುಗಳಲ್ಲಿದ್ದ ಮಾವಳಿ ಬಾಲಕರೊಡನೆ ಸ್ನೇಹ ಬೆಳೆಸಿದ. ಅವರನ್ನು ಸಂಘಟಿಸಿ ಸೈನ್ಯ ಕಟ್ಟಿದ. ತನ್ನ ಹದಿನಾರನೆಯ ವಯಸ್ಸಿನಲ್ಲಿ ತೋರಣಗಡವನ್ನು ವಶಪಡಿಸಿಕೊಂಡ. ಅನಂತರ ಚಾಕಣದುರ್ಗ, ಪುರಂದರಗಡ, ರಾಯಗಡ-ಹೀಗೆ ಒಂದಾದ ಮೇಲೊಂದು ಕೋಟೆಗಳನ್ನು ಸ್ವರಾಜ್ಯಕ್ಕೆ ಸೇರಿಸಿಕೊಂಡ.

ಶಿವಾಜಿಯಲ್ಲಿ ಎಲ್ಲರಿಗೂ ಗೌರವ ಹೆಚ್ಚಿತು. “ಶಿವಾಜಿ” “ಶಿವಾಜಿ ಮಹಾರಾಜ”ರಾದರು.

ಶಿವಾಜಿ ಮಹಾರಾಜರು ಗುಣವಂತರು. ಆದ್ದರಿಂದ ಗುಣವಂತರಾದವರನ್ನು ಕಂಡರೆ ಅವರಿಗೆ ಹೆಚ್ಚು ಪ್ರೀತಿ. ಒಂದು ವೇಳೆ ಒಳ್ಳೆಯವರು ಶತ್ರುಗಳ ಕಡೆ ಇದ್ದರೂ, ಅವರನ್ನು ಮಿತ್ರರನ್ನಾಗಿ ಮಾಡಿಕೊಳ್ಳುತ್ತಿದ್ದರು. ಸದಾ ಉತ್ತಮ ವ್ಯಕ್ತಿಗಳಿಗಾಗಿ ಅವರ ಕಣ್ಣು ಹುಡುಕುತ್ತಿತ್ತು.

ರಾಜಾಪುರದ ಯುದ್ಧಕ್ಕೆ ಹೋದಾಗ ಬಾಳಾಜಿ ಆವಜಿ ಎಂಬ ಬುದ್ಧಿವಂತ ಸಿಕ್ಕಿದ. ಕೂಡಲೇ ಅವನನ್ನು ತಮ್ಮ ಕಡೆ ಸೇರಿಸಿಕೊಂಡರು. ಹೀಗೆಯೇ ಚಾಕಣದ ಯುದ್ಧದಲ್ಲಿ ಫಿರಂಗೋಜಿ ನರಸಾಳ, ಜಾವಳಿಯ ಯುದ್ಧದಲ್ಲಿ ಮುರಾರಬಾಜಿ ದೇಶಪಾಂಡೆ ಎಂಬ ಶೂರರು ಶತ್ರುಗಳ ಕಡೆ ಇದ್ದುದನ್ನು ಕಂಡರು. ಅವರೊಡನೆ ಸ್ನೇಹ ಬೆಳೆಸಿ, ಅವರನ್ನು ಸ್ವರಾಜ್ಯದ ಸೇವೆಯಲ್ಲಿ ತೊಡಗಿಸಿದರು.

ಹಿರಡಸ್‌ಮಾವಳದ ರಾಜನಾಗಿದ್ದ ಕೃಷ್ಣಾಜಿ ಬಾಂದಲನಿಗೆ ಇದನ್ನೆಲ್ಲ ಸಹಿಸಲು ಆಗಲಿಲ್ಲ. ಅವನು ಮೊದಲೇ ಬಿಜಾಪುರದ ಸುಲ್ತಾನನ ಅಡಿಯಾಳು; ಪಕ್ಕಾ ಚಾಡಿಕೋರ. ಸ್ವರಾಜ್ಯಕ್ಕೆ ತನ್ನ ಕೈಲಾದ ಸಹಾಯ ಮಾಡಬೇಕು ಅನ್ನುವ ಒಳ್ಳೆಯ ಬುದ್ಧಿ ಅವನಿಗೆ ಬರಲಿಲ್ಲ. ಮಹಾರಾಜರ ವಿರುದ್ಧ ಯುದ್ಧ ಮಾಡಬೇಕೆಂದು ಸಿದ್ಧತೆ ಮಾಡಿಕೊಳ್ಳತೊಡಗಿದ.

ಪ್ರಥಮ ಪರಿಚಯ

ಈ ವಿಷಯ ಮಹಾರಾಜರಿಗೆ ಗೊತ್ತಾಗದೇ ಇದ್ದೀತೆ? ಕೃಷ್ಣಾಜಿ ಬಾಂದಲನು ವೃದ್ಧನಾಗಿದ್ದರೂ ಪರಾಕ್ರಮಿ ಆಗಿದ್ದ. ಅವನ ಮಂತ್ರಿ ಬಾಜಿಪ್ರಭುವಂತೂ ಅಪ್ರತಿಮ ಶೂರನಾಗಿದ್ದ. ಆದ್ದರಿಂದ ಯುಕ್ತಿಯಿಂದ ಹಿರಡಸ್‌ಮಾವಳವನ್ನು ಗೆಲ್ಲಲು ಮಹಾರಾಜರು ಯೋಚಿಸಿದರು. ೧೬೫೫ರಲ್ಲಿ ಒಂದು ರಾತ್ರಿ ಸೈನ್ಯಸಮೇತ ಹೊರಟರು. ರೋಹಿಡಾ ಕಿಲ್ಲೆಗೆ ಮುತ್ತಿಗೆ ಹಾಕಿ ಒಳಕ್ಕೆ ನುಗ್ಗಿದರು. ಯುದ್ಧದಲ್ಲಿ ಕೃಷ್ಣಾಜಿ ಸತ್ತ. ಆದರೆ ಬಾಜಿಪ್ರಭು ದೇಶಪಾಂಡೆ ಮಾತ್ರ ಯಾರಿಗೂ ಜಗ್ಗಲಿಲ್ಲ. ಅವನು ಸಾಕ್ಷಾತ್‌ಕಾಲರುದ್ರನಂತೆ ಯುದ್ಧ ಮಾಡುತ್ತಿದ್ದ. ಅವನ ಪ್ರಚಂಡ ರಣಪಾಂಡಿತ್ಯವನ್ನು ಕಂಡು ಶಿವಾಜಿ ಮಹಾರಾಜರೂ ಅಚ್ಚರಿಗೊಂಡರು.

“ವ್ಹಾ, ಎಂತಹ ಪರಾಕ್ರಮಿ, ಎಂತಹ ತೇಜಸ್ವಿ!” ಎಂದು ಮನಸ್ಸಿನಲ್ಲೇ ಮೆಚ್ಚಿಕೊಂಡರು.

“ಈತನು ಸ್ವಾಭಿಮಾನಿ, ಸ್ವಾಮಿನಿಷ್ಠ. ಇವನನ್ನು ಹೀಗೆಯೇ ಬಿಟ್ಟರೆ ಕೊನೆಯ ಉಸಿರಿರುವವರೆಗೂ ಕಾದಾಡಿ ಮಡಿಯುತ್ತಾನೆಯೇ ಹೊರತು, ಎಂದಿಗು ಸೋತು ಶರಣಾಗುವ ಗಂಡಲ್ಲ. ಈ ನರರತ್ನವನ್ನು ರಕ್ಷಿಸಲೇಬೇಕು” ಎಂದು ಮಹಾರಾಜರು ನಿಶ್ಚಯಿಸಿದರು. ಬಾಜಿಪ್ರಭುವನ್ನು ಉಪಾಯವಾಗಿ ಜೀವಸಹಿತ ಸೆರೆಹಿಡಿಯುವಂತೆ ಆಜ್ಞೆ ಮಾಡಿದರು. ಅದರಂತೆ ಬಹುಸಂಖ್ಯೆಯ ಸೈನಿಕರು ಸುತ್ತುವರಿದು ಬಾಜಿಪ್ರಭುವನ್ನು ಬಂಧಿಸಿ, ಮಹಾರಾಜರ ಎದುರು ತಂದು ನಿಲ್ಲಿಸಿದರು.

ಬಾಜಿಪ್ರಭುವಿನ ರೋಮರೋಮವೂ ಕ್ರೋಧದಿಂದ ಉರಿಯುತ್ತಿತ್ತು. ಇನ್ನು ಶಿವಾಜಿ ತನಗೆ ಶಿಕ್ಷೆ ವಿಧಿಸುವನೆಂದು ಬಾಜಿಯ ಕೋಪಾವೇಶ ಇನ್ನಷ್ಟು ಏರಿತು. ಆದ್ದರಿಂದ ಶಿವಾಜಿ ಮಹಾರಾಜರನ್ನು ಕುರಿತು ಗರ್ಜಿಸಿ ನುಡಿದ;

“ಎಲವೋ ರಾಜ, ವಂಚನೆಯಿಂದ ನನ್ನನ್ನು ಸೆರೆಹಿಡಿದೆ. ಹೋರಾಡಿ ಗೆಲ್ಲಲಾರದೆ ಹೋದೆ. ಹೋಗಲಿ, ಈಗಲಾದರೂ ಶಸ್ತ್ರ ಹಿಡಿದು ನನ್ನೊಡನೆ ಯುದ್ಧಕ್ಕೆ ಬಾ. ಆಗ ನೀನು ಶೂರನೆಂದು ಒಪ್ಪುತ್ತೇನೆ.”

ಯುದ್ಧದ ನಡುವೆ ಶಿವಾಜಿ ಮಹಾರಾಜರ ಪರಾಕ್ರಮ ರೂಪವನ್ನು ಬಾಜಿಪ್ರಭು ನೋಡಿದ್ದ. ಅಂಥ ವ್ಯಕ್ತಿಯಿಂದ ತನಗೆ ಕ್ರೂರಶಿಕ್ಷೆ ನಿಶ್ಚಯವೆಂದು ನಂಬಿದ್ದ. ಆದರೆ ಈಗಿನ ದೃಶ್ಯ ಅವನನ್ನು ದಂಗುಮಾಡಿತು. ಎಳೆಯ ಬಾಲಕನಂತೆ ಮಹಾರಾಜರ ಮುಖ ಸೌಮ್ಯವಾಗಿತ್ತು. ಒರೆಯೊಳಗಿನ ಕತ್ತಿಯಂತೆ ಶೌರ್ಯ, ಗಾಂಭೀರ್ಯ ಅವರಲ್ಲಿ ತುಂಬಿತ್ತು. ಮಹಾರಾಜರಿಗೆ ಆಗ ಕೇವಲ ೨೫ ವರ್ಷ ವಯಸ್ಸು. ಬಾಜಿ ಅವರಿಗಿಂತ ಹದಿನೈದು ವರ್ಷ ದೊಡ್ಡವನು. ಮಹಾರಾಜರು ಬಾಜಿಗೆ ಗೌರವ ಸೂಚಿಸಲು ಪೀಠದಿಂದ ತಾವೇ ಮೇಲೆದ್ದರು.

“ನಿನ್ನ ಈ ಕಪಟ ವಿನಯ ನನ್ನನ್ನು ಸಾವಿರ ಚೇಳುಗಳಂತೆ ಕುಟುಕುತ್ತಿದೆ. ನಾನು ಜೀವನಪೂರ್ತಿ ನನ್ನ ಶೂರ ರಾಜರ ಸೇವೆ ಮಾಡಿದೆ. ಸ್ವಾಮಿಕಾರ್ಯಕ್ಕಾಗಿ ರಣರಂಗದಲ್ಲಿ ಹೋರಾಡುತ್ತಲೇ ಸತ್ತು ಸ್ವರ್ಗ ಸೇರಬೇಕೆಂದಿದ್ದೆ. ನೀನು ಅಂಥ ವೀರಮರಣ ದೊರೆಯದಂತೆ ನನ್ನನ್ನು ವಂಚಿಸಿದ್ದೀಯೆ. ಈಗಲೂ ಸೋಲು ಒಪ್ಪಿಕೊಳ್ಳಲಾರೆ. ಹೋರಾಡಲು ಸಿದ್ಧನಿರುವೆ” ಎಂದು ಬಾಜಿ ಪುನಃ ಹೂಂಕರಿಸಿದ.

ಬಾಜಿ-ಶಿವಾಜಿ

ಮಹಾರಾಜರು ನಸುನಗುತ್ತ ಹೇಳಿದರು : ಮಾನ್ಯವರ ಬಾಜಿಪ್ರಭು, ನಿಮ್ಮ ಈ ಗುಣವೇ ನನ್ನ ಮನಸ್ಸನ್ನು ಗೆದ್ದಿತು. ನೀವು ನಿಕ್ಕೂ ಸೋತಿಲ್ಲ, ನನ್ನ ಹೃದಯವನ್ನೇ ಗೆದ್ದಿರುವಿರಿ. ಆದರೆ ಸ್ವಲ್ಪ ಯೋಚಿಸಿ. ನಿಮ್ಮಂಥ ಶೂರವೀರ ಸೇನಾಧಿಪತಿಗಳಿದ್ದೂ, ನಿಮ್ಮ ದೇಶಮುಖರು ಬಿಜಾಪುರದ ಸುಲ್ತಾನರ ಗುಲಾಮರಾಗಬೇಕೆ? ನಿಮ್ಮ ರಾಜ್ಯವನ್ನು ಸುಲ್ತಾನನ ದಾಸ್ಯದಿಂದ ಬಿಡುಗಡೆ ಮಾಡುವುದಕ್ಕಾಗಿ ನಾನು ಬಂದೆ. ಈ ಹಿರಡಸ್‌ಮಾವಳದ ಒಂದು ಅಂಗುಲ ಭೂಮಿಯೂ ನನಗೆ ಬೇಕಾಗಿಲ್ಲ.”

ಆದರೆ ಬಾಜಿಗೆ ಇನ್ನೂ ಸಂದೇಹ. ಶಿವಾಜಿಯ ಮಾತು ಪ್ರಾಮಾಣಿಕವಾಗಿರದೆ ಧೂರ್ತ ನೀತಿ ಆಗಿದ್ದರೆ?

“ಮಹಾರಾಜ, ನಿನ್ನ ಮಾತು ನಿಜ ಅನ್ನುವುದಕ್ಕೆ ಪ್ರಮಾಣವೇನು?”

“ಇಂದಿನಿಂದ ಕೃಷ್ಣಾಜಿ ಬಾಂದಲನ ಮಗ ರಾಯಾಜೀ ನಾಯಕನೇ ಹಿರಡಸ್‌ಮಾವಳದ ಅಧಿಪತಿಯಾಗಿರುತ್ತಾನೆ. ಮತ್ತು ಬಾಜಿಪ್ರಭು, ಅಂದರೆ ನೀವು. ಇಲ್ಲಿನ ಸಂರಕ್ಷಕರಾಗಿ ಮುಂದುವರಿಯಬೇಕೆಂಬುದು ನಮ್ಮ ಇಚ್ಛೆ” ಎಂದು ಮಹಾರಾಜರು ಘೋಷಿಸಿದರು.

ಬಾಜಿಯ ಸೋಜಿಗಕ್ಕೆ ಮಿತಿಯೇ ಉಳಿಯಲಿಲ್ಲ. ಹಾಗಾದರೆ ಶಿವಾಜಿಯು ಇಷ್ಟು ಭೀಷಣ ಯುದ್ಧ ಮಾಡಿದ್ದಾದರೂ ಏಕೆ? ಬಾಜಿ ವಿಸ್ಮಿತನಾಗಿ ನೋಡುತ್ತಾ ನಿಂತ. ಮಹಾರಾಜರ ಮುಖದಲ್ಲಿ ವಿಲಕ್ಷಣ ಕಾಂತಿ ಇತ್ತು. ಅವರ ನೋಟದಲ್ಲಿ ಆತ್ಮೀಯತೆ ತುಂಬಿತ್ತು. ಅವರ ಕಣ್ಣರಪ್ಪೆಗಳ ನಡುವೆ ಅದ್ಭುತ ಕನಸೊಂದು ತೇಲುತ್ತಿತ್ತು. ಅವರು ಅದನ್ನು ನನಸು ಮಾಡಲು ಹೊರಟಿದ್ದರು. ಬಾಜಿಯ ಮೂಕವಿಸ್ಮಯ ಅವರಿಗೆ ಅರ್ಥವಾಯಿತು. ವಿವರಿಸಿ ಹೇಳಿದರು:

“ಮೊಗಲಶಾಹಿ, ಆದಿಲಶಾಹಿಗಳ ದಾಸ್ಯ ದಬ್ಬಾಳಿಕೆಗಳಿಗೆ ಮಾತೃಭೂಮಿ ಸಿಕ್ಕಿಬಿದ್ದಿದೆ. ಮಹಾಮಹಾ ಶೂರರು ಸಹ ಪರಕೀಯರ ಸೇವೆಯನ್ನೆ ಮಾಡುತ್ತಿದ್ದಾರೆ. ಸ್ವಾತಂತ್ರ್ಯವನ್ನು ಪಡೆಯುವುದ ಸುಲಭವಲ್ಲ. ಅದಕ್ಕೆ ನಿಮ್ಮಂಥ ಶೂರರ ಸಹಾಯಬೇಕು. ಆದರೆ ನೀವು ಕುರುಡು ರಾಜಭಕ್ತಿಯಲ್ಲಿ ಮುಳುಗಿ, ರಾಷ್ಟ್ರಭಕ್ತಿಗೆ ತಿಲಾಂಜಲಿ ಕೊಟ್ಟಿದ್ದೀರಿ. ಭಾಕರಿ ಕೊಟ್ಟವರ ಚಾಕರಿ ಮಾಡುತ್ತೀರಿ. ವ್ಯಕ್ತಿನಿಷ್ಠೆ ಇಟ್ಟುಕೊಂಡು ತತ್ವನಿಷ್ಠೆ ಬಿಟ್ಟಿದ್ದೀರಿ. ಇದು ತೀರ ಅವಮಾನದ ಸಂಗತಿ. ಪ್ರಭುವರ್ಯರೇ, ನೀವೇ ಆಲೋಚಿಸಿ ನೋಡಿ. ಈ ಸುಂದರ ಗಿರಿವನಕಂದರಗಳಲ್ಲಿ ವಾಸಿಸುವ ಮಾವಳಿಗಳು ಎಂಥ ಶೂರರು, ಎಂಥ ಸ್ವಾಭಿಮಾನಿಗಳು, ಎಂಥ ಪ್ರಾಮಾಣಕರು, ಎಷ್ಟೊಂದು ಕಷ್ಟ ಸಹಿಷ್ಣುಗಳು! ಆದರೆ ಇವರೆಲ್ಲರ ಶಕ್ತಿ ಪರಸ್ಪರ ಕಚ್ಚಾಟದಲ್ಲೇ ಕೊನೆಗೊಳ್ಳುತ್ತಿದೆ. ನಾವು ಮನಸ್ಸು ಮಾಡಿದರೆ ಇವರೆಲ್ಲರನ್ನೂ ಒಟ್ಟುಗೂಡಿಸಲಾರೆವೇ? ಸ್ವರಾಜ್ಯವನ್ನು ಕಟ್ಟಿ ಬೆಳೆಸಲಾರೆವೇ?

ಮಹಾರಾಜರ ಮಾತುಮಾತಿನಲ್ಲೂ ಭಾವನೆ ಮಿಡಿಯುತ್ತಿತ್ತು. ಅವರ ಹೃದಯವೇ ನುಡಿಯುತ್ತಿತ್ತು. ಶಿವಾಜಿ ಎಂದರೆ ಮಾತೃಭೂಮಿಯ ಮುಕ್ತಿಗಾಗಿಯೇ ಉಸಿರಾಡುವ ದಿವ್ಯಚೇತನ ಎಂದು ಬಾಜಿಪ್ರಭುವಿಗೆ ಮನವರಿಕೆಯಾಯಿತು. ಅವನ ಒಳಗಣ್ಣು ತೆರೆಯಿತು. ಕೃತಜ್ಞತೆಯಿಂದ ತಲೆ ಬಾಗಿತು.

ಸ್ವರಾಜ್ಯದ ಸೈನಿಕ

“ಮಹಾರಾಜರೇ, ನಿಮ್ಮ ಮಾತಿನಲ್ಲಿ ಬೆಂಕಿಯ ಕಾವು ಇದೆ. ಜೀವನ ಅರಳಿಸುವ ಮಂತ್ರ ಇದೆ. ಜನ್ಮ ಸಾರ್ಥಕಗೊಳಿಸುವ ದಿವ್ಯ ಪ್ರೇರಣೆ ಅಡಗಿದೆ. ಇಂದಿನಿಂದ ನಾನೂ ನಿಮ್ಮ ಸ್ವರಾಜ್ಯದ ಒಬ್ಬ ಸೈನಿಕನಾಗಿದ್ದೇನೆ. ನನ್ನನ್ನು ಸ್ವೀಕರಿಸಬೇಕು” ಎಂದು ವೀರಾಧಿವೀರ ಬಾಜಿ ವಿನೀತನಾಗಿ ನುಡಿದ. ಮಹಾರಾಜರು ಮುಂದೆ ಹೋಗಿ ಬಾಜಿಯನ್ನು ಆಲಿಂಗಿಸಿಕೊಂಡರು.

ಬಾಜಿಪ್ರಭು ಎಂಥ ಕಾರ್ಯಧುರಂದರ ಎನ್ನುವುದು ಮಹಾರಾಜರಿಗೆ ತಿಳಿದಿತ್ತು. ಅವನಲ್ಲಿ ಅಡಗಿದ್ದ ಅನೆಕ ಗುಣಗಳಿಗೆ ಅದುವರೆಗೆ ಅರಳುವ ಅವಕಾಶ ದೊರೆತಿರಲಿಲ್ಲ. ಸ್ವರಾಜ್ಯದ ಸೇವೆಗೆ ಆ ಗುಣಗಳನ್ನು ಪೂರ್ತಿ ಉಪಯೋಗಿಸಿಕೊಳ್ಳಲು ಶಿವಾಜಿ ನಿರ್ಧರಿಸಿದರು. ಅದಕ್ಕಾಗಿ ಕೊಂಕಣ ಪ್ರದೇಶದ ಮೇಲ್ವಿಚಾರಣೆಯ ಕೆಲಸವನ್ನು ಬಾಜಿಪ್ರಭುವಿಗೆ ವಹಿಸಿದರು. ಅವನು ದಕ್ಷತೆಯಿಂದ ಆ ಕಾರ್ಯ ನಿರ್ವಹಿಸತೊಡಗಿದ.

"ಮಾನ್ಯವರ ಬಾಜಿಪ್ರಭು, ನಿಮ್ಮ ಈ ಗುಣವೇ ನನ್ನ ಮನಸ್ಸನ್ನು ಗೆದ್ದಿತು."

೧೬೨೯ರ ವೇಳೆಗೆ ಸ್ವರಾಜ್ಯದ ವಿಸ್ತಾರ, ಸಾಮರ್ಥ್ಯ ಬೆಳೆಯಿತು. ಅದು ಬಿಜಾಪುರದ ದರಬಾರಿನ ಕಣ್ಣು ಚುಚ್ಚತೊಡಗಿತು. ಶಿವಾಜಿಯನ್ನೂ ಸ್ವರಾಜ್ಯವನ್ನೂ ತೊಡೆದು ಹಾಕಲು ಸುಲ್ತಾನನು ನಿಶ್ಚಯಿಸಿದ. ದೈತ್ಯಾಕಾರ ಅಫಲಜಖಾನನನ್ನು ದೊಡ್ಡ ಸೈನ್ಯಸಹಿತ ಯುದ್ಧಕ್ಕೆ ಕಳುಹಿಸಿದ. ಈ ಸಂಗತಿ ಮಹಾರಾಜರಿಗೆ ತಿಳಿಯಲು ತಡವಾಗಲಿಲ್ಲ. ಅವರು ಸಹ ತಮ್ಮ ಸೈನ್ಯವನ್ನೂ ಕೋಟೆಗಳನ್ನೂ ಸಜ್ಜುಗೊಳಿಸಲು ಆರಂಭಿಸಿದರು. ಆ ಸಮಯದಲ್ಲಿ ಬಾಜಿಪ್ರಭು ಅವರಿಗೆ ನೆರವಾಗಿ ನಿಂತ. ದಾಸ್ಯದ ವಿರುದ್ಧ ರಣಕಹಳೆ ಊದಿದ. ಅದೇ ರೀತಿ ಕಾನ್ಹೋಜಿ ಜೇಧೆ ಎಂಬ ಪರಾಕ್ರಮಿಯೂ ಸ್ವರಾಜ್ಯದ ಬೆಂಬಲಕ್ಕೆ ಬಂದ. ಅದನ್ನು ಕಂಡು ಸ್ವಾತಂತ್ರ್ಯಯೋಧರ ಉತ್ಸಾಹ ಉಕ್ಕಿ ಹರಿಯಿತು.

‘ಹನುಮಂತ ಅಂಗದ ರಘುನಾಥಾಲಾ
ಜೇಧೇ ಬಾಂದಲ ಶಿವಾಜೀಲಾ!’

ಎಂದು ಅವರು ಲಾವಣಿ ಕಟ್ಟಿ ಹಾಡಲಾರಂಭಿಸಿದರು.

ಶ್ರೀರಾಮಕಾರ್ಯಕ್ಕೆ ಹನುಮಂತ ಮತ್ತು ಅಂಗದ ನೆರವಾದಂತೆ, ಶಿವಾಜಿಯ ಕಾರ್ಯಕ್ಕೆ ಕಾನ್ಹೋಜಿ ಮತ್ತು ಬಾಜಿಪ್ರಭು ಬೆಂಬಲವಾದರು.

೧೬೫೯ ನವೆಂಬರ್ ೧೦ರಂದು ಪ್ರತಾಪಗಡದ ಬುಡದಲ್ಲಿ ಶಿವಾಜಿ-ಅಫಜಲಖಾನರ ಭೇಟಿ ನಡೆಯಿತು. ಆಗ ಕ್ರೂರಿಯಾದ ಖಾನನು ಮಹಾರಾಜರನ್ನು ಕಪಟದಿಂದ ಕೊಲ್ಲಲು ಯತ್ನಿಸಿದ. ಆದರೆ ಮಹಾರಾಜರು ತಮ್ಮ ಚೂರಿಯಿಂದ ಖಾನನ ಆನೆಯಂತಹ ಶರೀರವನ್ನು ಸೀಳಿ ಹಾಕಿದರು. ಜೇಧೆ, ಬಾಜಿಪ್ರಭು, ನೇತಾಜಿ ಮುಂತಾದ ಸೇನಾಧಿಪತಿಗಳು ಸುಲ್ತಾನನ ಸೈನ್ಯವನ್ನು ಪುಡಿಮಾಡಿದರು.

ಮುಂದಿನ ಕೆಲಸವನ್ನೆಲ್ಲ ಮಹಾರಾಜರು ಮೊದಲೇ ಯೋಚಿಸಿದ್ದರು. ಬಾಜಿಪ್ರಭುವಿನ ಸಂಗಡ ದಕ್ಷಿಣಕ್ಕೆ ಹೊರಟರು. ಹದಿನೆಂಟು ದಿನಗಳಲ್ಲಿ ವಾಯಿಯಿಂದ ಹಿಡಿದು ಕೊಲ್ಲಾಪುರದವರೆಗಿನ ಪ್ರದೇಶವನ್ನು ವಶಪಡಿಸಿಕೊಂಡರು. ಪನ್ನಾಳಗಡವನ್ನು ಗೆದ್ದು ಅದರ ಮೇಲೆ ಭಗವಾಧ್ವಜ ಹಾರಿಸಿದರು. ಮುಂದೆ ಮೀರಜ್‌ಗೆ ಹೋಗಿ ಮುತ್ತಿಗೆ ಹಾಕಿದರು.

ಪಂಜರದಲ್ಲಿ ಸಿಂಹ

ಪದೇ ಪದೇ ಒದಗಿದ ಸೋಲುಗಳಿಂದ ಬಿಜಾಪುರದ ಸುಲ್ತಾನನ ರೊಚ್ಚು ಕೆರಳಿತು. ಶಿವಾಜಿಯ ಕಾಟವನ್ನು ಪೂರ್ತಿ ಅಳಿಸಿಹಾಕಲು ಅವನೊಂದು ದೊಡ್ಡ ಯೋಜನೆ ತಯಾರಿಸಿದ. ಸಿದ್ದಿಜೌಹರ್ ಎಂಬ ಪ್ರಚಂಡ ಸರದಾರನಿಗೆ ಹೇಳಿಕಳುಹಿಸಿದ. ಅವನಿಗೆ ಸಾವಿರಾರು ಕಾಲಾಳುಗಳು ಮತ್ತು ರಾವುತರ ದೊಡ್ಡ ಸೈನ್ಯಕೊಟ್ಟು ಯುದ್ದಕ್ಕೆ ಕಳುಹಿಸಿದ. ಸಿದ್ಧಿ ಜೌಹರ್ ಶೂರನೂ ಹಟವಾದಿಯೂ ಆಗಿದ್ದ. ಯುದ್ಧದಲ್ಲಿ ಚೆನ್ನಾಗಿ ನುರಿತ ಸೇನಾಧಿಪತಿ ಆಗಿದ್ದ.

ಶಿವಾಜಿ ಮಹಾರಾಜರು ಮತ್ತು ಬಾಜಿಪ್ರಭು ಚಿಂತಿಸಬೇಕಾಗಿ ಬಂತು. ಅವರ ಬಳಿ ಆಗ ಕೇವಲ ಆರೇಳು ಸಾವಿರ ಸೈನಿಕರು ಮಾತ್ರ ಇದ್ದರು. ಮೈದಾನದಲ್ಲಿ ಸಿದ್ದಿ ಜೌಹರನನ್ನು ಎದುರಿಸಿವುದು ಕಷ್ಟವಾಗಿತ್ತು. ಆದ್ದರಿಂದ ಮೀರಜ್‌ಬಿಟ್ಟು ಹಿಂದೆ ಸರಿದರು. ೧೬೬೦ ಮಾರ್ಚ್‌೨, ಶಾರ್ವರಿ ಸಂವತ್ಸರದ ಯುಗಾದಿಯಂದು ಪನ್ನಾಳಗಡಕ್ಕೆ ಹೋಗಿ ಸೇರಿದರು. ಪನ್ನಾಳಗಡ ಎಂದರೆ ರಕ್ಷಣೆಯ ದೃಷ್ಟಿಯಿಂದ ಎಲ್ಲ ಗಡಗಳ ರಾಜ. ಅದರ ಸುತ್ತಳತೆ ನಾಲ್ಕೂವರೆ ಮೈಲಿ. ಭದ್ರವಾದ ಪ್ರಾಕಾರ ಹಾಗೂ ಬುರುಜುಗಳಿದ್ದವು. ಆ ಗಡದ “ಅಂಬರಖಾನಾ” ಎಂಬ ಕಟ್ಟಡದಲ್ಲಿ ಸುಮಾರು ೨೫೦೦೦ ಖಂಡುಗದಷ್ಟು ಧಾನ್ಯಸಂಗ್ರಹ ಇತ್ತು. ಈ ಕಾರಣಗಳಿಂದಾಗಿ ಮಹಾರಾಜರು ಅದೇ ಗಡಕ್ಕೆ ಹೋಗಿ ನಿಂತರು.

ಯುದ್ಧಕ್ಕೆ ಮೊದಲೇ ಅವರು ತನಗೆ ಹೆದರಿರುವರೆಂದು ಸಿದ್ದಿ ಜೌಹರ್ ಭಾವಿಸಿದ. ಅವನಿಗೆ ಆನಂದವಾಯಿತು. ಗಡದ ಸುತ್ತಲೂ ಬಲವಾಗಿ ಮುತ್ತಿಗೆ ಹಾಕಿ ಕುಳಿತ. ಎಷ್ಟೇ ತಿಂಗಳುಗಳಾಗಲಿ, ವರ್ಷಗಳಾಗಲಿ, ಶಿವಾಜಿಯನ್ನು ಹಿಡಿಯದೆ ಬಿಡುವುದಿಲ್ಲವೆಂದು ಶಪಥ ಮಾಡಿದ.

ಮೂರು ತಿಂಗಳಾಯಿತು. ಮಳೆಗಾಲ ಬಂತು. ಆದರೂ ಜೌಹರನ ಮುತ್ತಿಗೆ ಸಡಿಲವಾಗಲಿಲ್ಲ. ಶಿವಾಜಿಯ ಶತ್ರುಗಳೆಲ್ಲ ಜೌಹರನ ಕಡೆ ಸೇರಿದರು. ಇನ್ನು ಶಿವಾಜಿಯ ಕತೆ ಮುಗಿಯಿತು ಎಂದು ಎಲ್ಲರೂ ನಂಬಿದರು.

ಪನ್ನಾಳಗಡವನ್ನು ಒಡೆದುಹಾಕಬಲ್ಲಂತಹ ತೋಪುಗಳು ಜೌಹರನ ಬಳಿ ಇರಲಿಲ್ಲ. ಇಂಗ್ಲಿಷರ ಬಳಿ ಇದ್ದವು. ಅವರು ಅವನ್ನು ತೆಗೆದುಕೊಂಡು ಜೌಹರನ ಸಹಾಯಕ್ಕೆ ಬಂದರು.

ಮಹಾರಾಜರು ಇಂಥ ಬಿಕ್ಕಟ್ಟಿನಲ್ಲಿ ಸಿಲುಕಿರುವಾಗಲೇ ಇನ್ನೂ ಭಯಂಕರ ಗಂಡಾಂತರವೊಂದು ತಲೆಹಾಕಿತು.

ಔರಂಗಜೇಬನ ಆಜ್ಞೆಯಂತೆ ಶಾಯಿಸ್ತೆಖಾನನೆಂಬ ಪ್ರಬಲ ಸೇನಾಧಿಪತಿ ಸ್ವರಾಜ್ಯದ ಮೇಲೆ ದಂಡೆತ್ತಿ ಬಂದ. ಅವನ ಸೈನ್ಯದಲ್ಲಿ ೭೭,೦೦೦ ರಾವುತರು, ೩೦,೦೦೦ ಕಾಲಾಳುಗಳು ಇದ್ದರು. ಊರೂರುಗಳಿಗೆ ಬೆಂಕಿ ಇಡುತ್ತಾ, ಕೊಲೆ ಸುಲಿಗೆ ಮಾಡುತ್ತಾ ಅವನು ಮುಂದುವರಿದ. ಕೊನೆಗೆ ೧೬೬೦ ಮೇ ೯ರಂದು ಪುಣೆ ಪಟ್ಟಣವನ್ನೂ ವಶಪಡಿಸಿಕೊಂಡ.

ಬಾಜಿಪ್ರಭುವಿನ ಭೀಮಬಾಹುಗಳು ದಣಿವಿಲ್ಲದೆ ಖಡ್ಗಗಳನ್ನು ಬೀಸುತ್ತಲೇ ಇದ್ದವು.

ಆಶಾಕಿರಣ

ಹೀಗೆ ಎತ್ತೆತ್ತಲೂ ವಿಪತ್ತು. ಸ್ವರಾಜ್ಯಕ್ಕೆ ಮತ್ತು ಸ್ವರಾಜ್ಯದ ಪ್ರಾಣವಾಗಿದ್ದ ಶಿವಾಜಿಗೆ ಘೋರ ಸಂಕಟದ ಸಮಯ. ಪನ್ನಾಳಗಡದಲ್ಲೂ ಆಹಾರ ಧಾನ್ಯಗಳ ಸಂಗ್ರಹ ಮುಗಿಯುತ್ತ ಬಂದಿತ್ತು. ಮುಂದೇನು ಗತಿ?

ಇನ್ನು ಸ್ವರಾಜ್ಯಕ್ಕೆ ಯಾರ ಆಸೆ? ಯಾರ ಆಸರೆ? ಮಹಾರಾಜರು ಯಾರ ಮೇಲೆ ಭರವಸೆ ಇರಿಸಬಹುದು?

ಪನ್ನಾಳಗಡದಲ್ಲಿ ಆಗ ಗಡದ ಅಧಿಪತಿ ತ್ಯ್ರಂಬಕ, ಭಾಸ್ಕರ, ಮುತ್ಸದ್ಧಿ ಗಂಗಾಧರ ಪಂತ ಇದ್ದರು. ಆರು ಸಾವಿರ ಸೈನಿಕರಿದ್ದರು. ಎಲ್ಲಕ್ಕಿಂತ ಮಿಗಿಲಾಗಿ, ಆಪ್ತ ಸಚಿವನೂ ಸಮರ್ಥ ಸೇನಾನಿಯೂ ಆಗಿ ಒಮ್ಮೆಗೆ ಕಾರ್ಯ ನಿರ್ವಹಿಸಬಲ್ಲಂಥ ಬಾಜಿಪ್ರಭು ದೇಶಪಾಂಡೆ ಇದ್ದ. ಅವನ ಜೊತೆಗೆ ಆರು ನೂರು ಬಾಂದಲ ಯೋಧರು, ಮಹಾರಾಜರ ರಕ್ಷಾದೇವತೆಯಂತೆ ಅವರನ್ನೇ ಅನುಸರಿಸುತ್ತಿದ್ದರು. ಬಾಜಿಯಲ್ಲಿ ನೆಲೆಸಿತ್ತು ಮಹಾರಾಜರ ಎಲ್ಲ ಆಸೆ, ಭರವಸೆ.

ಬಾಜಿಯ ಭೀಮಕಾಯ ದೃಢವಾಗಿತ್ತು. ಚೈತನ್ಯದಿಂದ ತುಂಬಿತ್ತು. ಎಡೆಬಿಡದೆ ಇಪ್ಪತ್ತುನಾಲ್ಕು ಘಂಟೆಗಳ ಕಾಲ ಹೋರಾಡುವ ಆತುಲ ಬಲ ಅವನ ತೋಳುಗಳಲ್ಲಿತ್ತು. ಅವನು ತೊಟ್ಟಿದ್ದ ಲೋಹದ ಕವಚದೊಳಗೆ ಗಂಡು ಹೃದಯವಿತ್ತು. ಆ ಹೃದಯದೊಳಗೆ ನಿಷ್ಠೆ ಮಿಡಿಯುತ್ತಿತ್ತು.

ಸಮ್ಮೋಹನಾಸ್ತ್ರ

ಶಿವಾಜಿ ಇಂದಲ್ಲ ನಾಳೆ ಶರಣಾಗತನಾಗುತ್ತಾನೆ ಎಂದು ಸಿದ್ದಿ ಜೌಹರ್ ಕಾದು ಕುಳಿತಿದ್ದ. ಅವನ ನಿರೀಕ್ಷೆ ನಿಜವಾಯಿತೋ ಎಂಬಂತೆ ೧೬೬೦ ಜುಲೈ ೧೨ರಂದು ಬೆಳಗ್ಗೆ ದುರ್ಗದ ಬಾಗಿಲು ತೆರೆಯಿತು. ರಾಯಭಾರಿ ಗಂಗಾಧರ ಪಂತರು ಕೆಳಗಿಳಿದು ಬಂದರು. ಜೌಹರನಿಗೆ ಮಹಾರಾಜರ ಪತ್ರವನ್ನು ಒಪ್ಪಿಸಿದರು. ಅವನು ಅದನ್ನು ಓದಿಕೊಂಡ.

“ಇಷ್ಟುದಿನ ಭಯ, ನಾಚಿಕೆಗಳಿಂದ ನಾನು ನಿಮ್ಮ ಭೇಟಿಗೆ ಬರಲಿಲ್ಲ. ತಾವು ನನ್ನ ಅಪರಾಧವನ್ನು ಕ್ಷಮಿಸಬೇಕು. ಪ್ರಾಣಕ್ಕೆ ಅಪಾಯ ಇಲ್ಲವೆಂದು ತಾವು ಮಾತು ಕೊಟ್ಟರೆ, ನಾಳೆ ನಾನೇ ಸ್ವತಃ ನಿಮ್ಮ ದರ್ಶನಕ್ಕೆ ಬರುತ್ತೇನೆ. ರಾಜ್ಯವನ್ನೂ ನನ್ನನ್ನೂ ಒಪ್ಪಿಸಿಕೊಳ್ಳುತ್ತೇನೆ. ತಾವು ದಯವಿಟ್ಟು ಅನುಮತಿ ನೀಡಬೇಕು, ಅಭಯ ನೀಡಬೇಕು.”

ಸಿದ್ದಿ ಜೌಹರನು ಆನಂದದಿಂದ ಅನುಮತಿ ನೀಡಿದ. ಪಂತರು ಅದನ್ನು ತೆಗೆದುಕೊಂಡು ಮೇಲೆ ಹೊರಟರು. ಸುಲ್ತಾನನ ಸೈನ್ಯಕ್ಕೆ ಆನಂದವೇ ಆನಂದ. ನಾಲ್ಕು ತಿಂಗಳಿಂದ ಬಿಸಿಲಲ್ಲಿ ಬೆಂದು, ಮಳೆಯಲ್ಲಿ ನೆನೆದು ಸಾಕು ಸಾಕಾಗಿಹೋಗಿತ್ತು. ಕಡೆಗೂ ದೊಡ್ಡ ಕಂಟಕ ಕಳೆಯಿತು. ಎಂದುಕೊಂಡು ಉಬ್ಬಿ ಮೈಮರೆತರು. ಜೌಹರನು ಬಹಳ ಎಚ್ಚರಿಕೆಯ ಆಸಾಮಿ. ಇದರಲ್ಲಿ ಏನಾದರೂ ಮೋಸ ಇದೆಯೆ ಎಂದು ಸಂದೇಹಪಟ್ಟ. ಆದರೆ, ಎಲ್ಲ ದೃಷ್ಟಿಗಳಿಂದ ಆಲೋಚಿಸಿದಾಗ, ಶಿವಾಜಿಗೆ ಬೇರೆ ಮಾರ್ಗವೇ ಇಲ್ಲವೆಂಬುದು ದೃಢವಾಯಿತು. ಅದಕ್ಕಾಗಿ ಜೌಹರ್ ತಿಂಗಳುಗಟ್ಟಲೆ ಎಷ್ಟೊಂದು ಕಷ್ಟಪಟ್ಟಿದ್ದ! ಅದೆಲ್ಲ ಸಾರ್ಥಕ ಆಯಿತೆಂದು ಹೆಮ್ಮೆಪಟ್ಟ. ಮನಸ್ಸಿಗೆ ಹಾಯ್‌ಎನಿಸಿತು. ಅವನಿಗೆ ಅರಿವಿಲ್ಲದಂತೆಯೇ ಪಹರೆಯ ಬಿಗಿ ಸಡಿಲವಾಯಿತು. ಶಿವಾಜಿ ಮಹಾರಾಜರ ಸಮ್ಮೋಹನಾಸ್ತ್ರ ಚೆನ್ನಾಗಿ ಕೆಲಸ ಮಾಡಿತು!

ಅತ್ತ ಹುಲಿ, ಇತ್ತ ದರಿ

೧೬೬೦ ಜುಲೈ ೧೨ ಹುಣ್ಣಿಮೆಯ ದಿನ. ಆದರೂ ರಾತ್ರಿ ಗಾಢಾಂಧಕಾರ. ಆಕಾಶದ ತುಂಬ ಕಪ್ಪು ಮೋಡಗಳು. ಮಳೆಗಾಳಿಗಳ ಅಬ್ಬರ. ಗುಡುಗು ಸಿಡಿಲಿನ ಆರ್ಭಟ. ಬಾಜಿಪ್ರಭು ದೇಶಪಾಂಡೆ ತನ್ನ ಆರುನೂರು ಬಾಂದಲ ವೀರರನ್ನು ಆರಿಸಿ ತೆಗೆದ. ಸ್ವತಃ ಬಾಜಿಪ್ರಭುವೇ ಕಟ್ಟಿಬೆಳೆಸಿದ ಪ್ರಚಂಡ ಪಟುಭಟರ ಪಡೆ ಅದು. ಬಾಜಿಯ ಬೆರಳ ಸನ್ನೆಗೆ ಪ್ರಾಣ ಒಪ್ಪಿಸಲು ಸಿದ್ಧರಿದ್ದರು ಅವರು.

ಎರಡು ಪಲ್ಲಕ್ಕಿಗಳು ಬಂದವು. ತ್ರ್ಯಂಬಕ ಭಾಸ್ಕರ ಮತ್ತು ಗಂಗಾಧರ ಪಂತರೊಡನೆ ಮಹಾರಾಜರು ಬಂದರು. ಪಂತರ ಹೆಗಲ ಮೇಲೆ ಕೈಯಿಟ್ಟು, “ನೀವಿಬ್ಬರೂ ಈ ಅಂಜಿಕ್ಯ ಪನ್ನಾಳವನ್ನು ಅಂಜಿಕ್ಯವಾಗಿಯೇ ಉಳಿಸಿರಿ. ಇನ್ನು ನಾವು ಹೊರಡುತ್ತೇವೆ” ಎಂದರು.

ಮಹಾರಾಜರು ಒಂದು ಪಲ್ಲಕ್ಕಿ ಹತ್ತಿದರು. ಇನ್ನೊಂದು ಖಾಲಿಯಾಗಿಯೇ ಇತ್ತು. ಬೋಯಿಗಳು ಪಲ್ಲಕ್ಕಿಗಳನ್ನು ಹೊತ್ತರು. ರಹಸ್ಯ ಮಾರ್ಗ ಅರಿತಿದ್ದ ಶಿವಾಜಿಯ ಗೂಢಚಾರರು ಮುಂದೆ ಹೊರಟರು. ಅವರ ಹಿಂದೆಯೇ ವೀರಶ್ರೇಷ್ಠ ಬಾಜಿಪ್ರಭು ದೇಶಪಾಂಡೆ ಮತ್ತು ಅವನ ಆರುನೂರ ಭಟರು ನಿಶ್ಯಬ್ದವಾಗಿ ಸಾಗಿದರು.

ರಾಜಮಾರ್ಗ ಮುಗಿದು ಇಕ್ಕಟ್ಟಾದ ಕಾಡುದಾರಿ ಬಂತು. ಮಳೆ ಸುರಿಯುತ್ತಲೇ ಇತ್ತು. ಸಿಡಿಲು ಗರ್ಜಿಸುತ್ತಿತ್ತು. ಸಣ್ಣ ಸದ್ದಾದರೂ ಎಲ್ಲರ ಉಸಿರಾಟ ನಿಲ್ಲುತ್ತಿತ್ತು. ಪ್ರತಿಯೊಬ್ಬರೂ ಬೆಕ್ಕಿನ ಹೆಜ್ಜೆ ಹಾಕುತ್ತಾ, ಅಡಿಗಡಿಗೂ ತಡವರಿಸುತ್ತಾ ಹೊರಟಿದ್ದರು. ಸಿದ್ದಿಜೌಹರನ ಗುಪ್ತಚಾರರ, ಪಹರೇಕಾರರ ಜಾಲವನ್ನು ದಾಟಿಕೊಂಡು ಅವರು ಮುಂದುವರಿಯಬೇಕಾಗಿತ್ತು. ಎಲ್ಲಿಗೆ? ದುರ್ಗಮವಾದ ಕಾಡುಗಳು, ಪರ್ವತಗಳು, ಪ್ರಪಾತಗಳ ಆಚೆ ಇದ್ದ ಒಂದು ಜಾಗಕ್ಕೆ! ಮೂವತ್ತು ಮೈಲುಗಳಾಚೆ ಇದ್ದ ವಿಶಾಲಗಡಕ್ಕೆ.

ಹೋಗಲಿ ಆ ವಿಶಾಲಗಡವಾದರೂ ಸುರಕ್ಷಿತವಾಗಿತ್ತೇ? ಅಲ್ಲಿ ಮಹಾರಾಜರ ಸ್ವಾಗತಕ್ಕೆ ಸ್ನೇಹಿತರಿದ್ದರೆ? ಸಿದ್ದಿ ಜೌಹರನು ಆ ಗಡಕ್ಕೆ ಒಂದು ತಿಂಗಳ ಮೊದಲೇ ಸೈನ್ಯ ಕಳುಹಿಸಿದ್ದ. ಪಾಲಣದ ರಾಜ ಯಶವಂತರಾವ್‌ದಳವಿ ಮತ್ತು ಶೃಂಗಾರಪುರದ ರಾಜ ಸೂರ್ಯರಾವ್‌ಸುರ್ವೆ ಎಂಬ ಬಿಜಾಪುರದ ಸರದಾರರು ರಾಹುಕೇತುಗಳಂತೆ ವಿಶಾಲಗಡವನ್ನು ಸುತ್ತುಗಟ್ಟಿ ಕುಳಿತಿದ್ದರು. ಅದರಿಂದ ಆ ಗಡದ ಮೇಲಿದ್ದ ಮಹಾರಾಜರ ಸೈನ್ಯದ ಕೈಕಟ್ಟಿಹಾಕಿದಂತಾಗಿತ್ತು. ಶಿವಾಜಿ ಮಹಾರಾಜರು ಆ ಕಗ್ಗತ್ತಲಲ್ಲಿ ಪನ್ನಾಳದ ಮುತ್ತಿಗೆ ತಪ್ಪಿಸಿಕೊಂಡು, ಮೂವತ್ತು ಮೈಲಿ ಬೆಟ್ಟ-ಕಾಡು-ಕಣಿವೆಗಳನ್ನು ದಾಟಿಕೊಂಡು, ವಿಶಾಲಗಡದಲ್ಲಿ ಶತ್ರುಗಳ ಮುತ್ತಿಗೆಯನ್ನು ಭೇದಿಸಿಕೊಂಡು, ಮೇಲೆ ಹೋಗಿ ಸೇರಬೇಕಾಗಿತ್ತು.

ಹೆಜ್ಜೆ ಹೆಜ್ಜೆಗೂ ಯಮನ ದವಡೆಯಲ್ಲಿ ನುಗ್ಗಿ ಬರುವ ಸಾಹಸ! ಕೇವಲ ಶಿವಾಜಿಯಂಥವರು ಮಾತ್ರ ಇಂಥ ಸಾಹಸದ ಯೋಜನೆಗೆ ಕೈಹಾಕಬಲ್ಲರು. ಕೇವಲ ಬಾಜಿಪ್ರಭುವಿನಂಥ ಗಂಡುಗಲಿಗಳು ಮಾತ್ರ ಅದನ್ನು ಕೈಗೂಡಿಸಬಲ್ಲರು!

ಸಿದ್ದಿಯ ನಿದ್ದೆಗೆ ಸುದ್ದಿಯ ಗುದ್ದು

ಬೆಟ್ಟ ಇಳದದ್ದಾಯಿತು. ಮೊದಲ ಇಳಿಜಾರು ಕಳೆಯಿತು. ಆದರೆ ಅಪಾಯ ಕಳೆಯಲಿಲ್ಲ. ಇನ್ನಷ್ಟು ಹೆಚ್ಚಿತು. ಆರುನೂರು ಸಶಸ್ತ್ರ ಸೈನಿಕರು ಯಾರಿಗೂ ಪತ್ತೆಹತ್ತದಂತೆ ಸಾಗುವುದೆಂದರೆ ಸುಮ್ಮನಾಯಿತೆ? ಸದ್ಯಕ್ಕೆ ಪ್ರಕೃತಿಮಾತೆ ಕಗ್ಗತ್ತಲನ್ನು ಹರಡಿ, ಅವರಿಗೆ ಸಹಾಯ ಮಾಡುತ್ತಿದ್ದಳು. ದಾರಿಯಲ್ಲಿ ಅಡ್ಡಲಾದ ಕೆಲವು ಶತ್ರುವಿನ ಪಹರೆಕಾರರು ಯಾರ ಮುಖ ನೋಡಿ ಎದ್ದಿದ್ದರೋ ಏನೋ! ಚುರುಕು ಮಾವಳಿಗಳು ಗಪ್ಪನೆ ಹಾಕಿ, ಬಾಯಿಗೆ ಬಟ್ಟೆ ತುರುಕಿ, ಅವರನ್ನು ಯಮಲೋಕಕ್ಕೆ ಅಟ್ಟುತ್ತಿದ್ದರು. ಹೆಣವನ್ನು ಹಳ್ಳಕ್ಕೆ ಒಗೆಯುತ್ತಿದ್ದರು. ಹೀಗೆ ಮಹಾರಾಜರು ಮತ್ತು ಅವರ ಪಡೆ ಮುತ್ತಿಗೆಯ ಕ್ಷೇತ್ರ ದಾಟಿದರು. ಅನಂತರ ವಿಶಾಲಗಡದ ಕಡೆಗೆ ಧಾವಿಸಿತೊಡಗಿದರು.

ಅಷ್ಟರಲ್ಲಿ ಸಿದ್ದಿಜೌಹರನ ಗೂಢಚಾರರಿಂದ ಕೆಲವರಿಗೆ ಸಂಶಯ ಬಂತು. ಮಿಂಚಿನ ಬೆಳಕಿನಲ್ಲಿ ಅವರಿಗೆ ಅಸ್ಪಷ್ಟ ದೃಶ್ಯವೊಂದು ಕಾಣಿಸಿತು. ದೂರದಲ್ಲಿ ಯಾರೋ ಪಲ್ಲಕ್ಕಿ ಹೊತ್ತುಕೊಂಡು ಓಡಿಹೋಗುತ್ತಿದ್ದರು. ಅವರು ಯಾರು, ಎಲ್ಲಿಂದ ಬಂದರು ಎಂಬುದೊಂದು ಅರ್ಥವಾಗಲಿಲ್ಲ. ಆ ದಿಕ್ಕಿನಲ್ಲಿದ್ದ ಕಾವಲುಗಾರರನ್ನು ವಿಚಾರಿಸಲು ಹೋದರೆ, ಅವರೂ ನಾಪತ್ತೆ! ಅವರ ಹೆಣವಾದರೂ ಇರಬೇಕಲ್ಲ? ಅದು ಸಹ ಮಂಗಮಾಯ!

“ಮೋಸ, ದಗಾ! ಹೋದ, ಹೋದ, ಶಿವಾಜಿ ತಪ್ಪಿಸಿಕೊಂಡು ಹೋದ” ಎಂದು ಆ ಗೂಢಚಾರರು ಹುಯಿಲೆಬ್ಬಿಸಿದರು. ಮಹಾಸೇನಾಧಿಪತಿ ಜೌಹರನಿಗೆ ಸುದ್ದಿ ತಿಳಿಸಲು ಒಂದೇ ಉರಿಸಿನಲ್ಲಿ ಓಡಿದರು.

ಹೀಗೆಲ್ಲ ಆದೀತೆಂದು ಶಿವಾಜಿಗೂ ಬಾಜಿಪ್ರಭುವಿಗೂ ಮೊದಲೇ ಗೊತ್ತಿತ್ತು. ಅದಕ್ಕೂ ಅವರ ಬಳಿ ತಕ್ಕ ಉಪಾಯವಿತ್ತು. ಜೊತೆಗೆ ತಂದಿದ್ದ ಖಾಲಿ ಪಲ್ಲಕ್ಕಿಯಲ್ಲಿ ಒಬ್ಬ ಗಡ್ಡದ ಮನುಷ್ಯ ಹತ್ತಿ ಕುಳಿತ. ಅವನ ವೇಷವೆಲ್ಲ ಶಿವಾಜಿಯಂತೆಯೇ. ಅವನ ಹೆಸರು ಸಹ ಶಿವಾಜಿ ಎಂದೇ. ಈ “ನಕಲಿ ಮಹಾರಾಜ” ರನ್ನು ಹೊತ್ತು ಎಂಟು ಹತ್ತು ಮಾವಳಿಗಳು ವಿಶಾಲಗಡದ ಮಾಮೂಲು ದಾರಿಯಲ್ಲಿ ಮುಂದುವರಿದರು. ಉಳಿದವರು ಮಸಯಿಪಾಠರ ಎಂಬ ಭೀಕರ ಕಣಿವೆಯ ದಾರಿ ಹಿಡಿದರು.

ಮರುದಿನ ಶಿವಾಜಿಯ ಶರಣಾಗತಿಯ ಸುಂದರ ಕನಸು ಕಾಣುತ್ತಿದ್ದ ಸಿದ್ದಿ ಜೌಹರ್ ಗೊರಕೆ ಹೊಡೆಯುತ್ತಿದ್ದ. ಆಗ ಗೂಢಚಾರರು ಇದ್ದಕ್ಕಿದ್ದಂತೆ ಅವನ ನಿದ್ದೆ ಕೆಡಿಸಿದರು. ಕೆಟ್ಟ ಸುದ್ದಿಯ ಗುದ್ದು ಕೊಟ್ಟರು: “ಮೋಸ, ದಗಾ! ಶಿವಾಜಿ ತಪ್ಪಿಸಿಕೊಂಡ, ವಿಶಾಲಗಡದ ಕಡೆ ಓಡಿಹೋಗುತ್ತಿದ್ದಾನೆ.”

ಸಿದ್ದಿ ಜೌಹರ್ ಬೆಚ್ಚಿಬಿದ್ದ. ಅವನಿಗೆ ಹೃದಯವನ್ನೇ ಇರಿದಂತಾಯಿತು. “ಕಾವಲುಗಾರರು ಹೇಗೆ ಬಿಟ್ಟರು? ಅವರಿಗೆ ಜಾನ್‌ನಿಕಾಲ್ ಮಾಡುತ್ತೇನೆ” ಎಂದು ಗರ್ಜಿಸಿದ. ಶಿವಾಜಿಯ ಕಡೆಯವರೇ ಈ ಕೆಲಸ ಮಾಡಿದ್ದರೆಂದು, ಪಾಪ ಅವನಿಗೆ ಇನ್ನೂ ಗೊತ್ತಿರಲಿಲ್ಲ!

ಮಸೂದನ ಮಹಾ ಸಾಧನೆ!

ಕೂಡಲೆ ತನ್ನ ಅಳಿಯ ಸಿದ್ದಿ ಮಸೂದನನ್ನು ಕರೆಸಿದ. ಶಿವಾಜಿಯನ್ನು ಹಿಡಿದು ತರಲು ಕಳುಹಿಸಿದ. ಎರಡು ಸಾವಿರ ಸರದಾರರು ಮತ್ತು ಒಂದು ಸಾವಿರ ಕಾಲಾಳುಗಳೊಡನೆ ಮಸೂದನು ಹೊರಟ. ಅವನೂ ಶೂರ ಸರದಾರ. ಕತ್ತಲು, ಮಳೆ, ಕೆಸರುಗಳಲ್ಲಿ ಏಳುತ್ತಾ, ಬೀಳುತ್ತಾ ಧಾವಿಸಿದ. ವಿಶಾಲಗಡದ ದಾರಿ ಸಿಕ್ಕಿತು. ಸ್ವಲ್ಪ ಹೊತ್ತಿನಲ್ಲೆ ಮಿಂಚಿನ ಬೆಳಕಿನಲ್ಲಿ ಕಡೆಗೂ ಪಲ್ಲಕ್ಕಿ ಕಂಡಿತು. ಅದನ್ನು ಹೊತ್ತು ಮಾವಳಿಗಳು ಓಡಿಹೋಗುತ್ತಿದ್ದರು. ಪಠಾಣ ಸವಾರರು ತಮ್ಮ ಕುದುರೆಗಳನ್ನು ದೌಡಾಯಿಸಿ ಪಲ್ಲಕ್ಕಿಯನ್ನು ಸುತ್ತುಗಟ್ಟಿದರು.

“ಖಬರದಾರ್ ನಿಲ್ಲಿ!”
ಮಾವಳಿಗಳು ಮೂಕರಾಗಿ ನಿಂತುಬಿಟ್ಟರು.
“ಒಳಗೆ ಯಾರು?” ಮಸೂದ ಜಬರಿಸಿ ಕೇಳಿದ.
“ಶಿ-ವಾ-ಜಿ….”

ಮಸೂದನಿಗೆ ಮೂರು ಅಕ್ಷರ ಕೇಳಿಯೇ ಸಮಾಧಾನವಾಗಿಹೋಯಿತು. ಜಗತ್ತಿನಲ್ಲಿ ಅದುವರೆಗೆ ಯಾರೂ ಸಾಧಿಸದಿದ್ದುದನ್ನು ತಾನು ಸಾಧಿಸಿದೆ ಎಂದು ಉಬ್ಬಿಹೋದ. ತಕ್ಷಣವೇ ಸಿದ್ದ ಜೌಹರನಿಗೂ ಸುದ್ದಿ ಮುಟ್ಟಿತು-ತನ್ನ ವೀರ ಅಳಿಯನು ಶಿವಾಜಿಯನ್ನು ಸೆರೆಹಿಡಿದು ತರುತ್ತಿದ್ದಾನೆಂದು. “ಶಹಬಾಸ್‌, ಇದ್ದರೆ ಇಂಥ ಅಳಿಯ ಇರಬೇಕು” ಅಂದುಕೊಂಡ. ಹೋದ ಜೀವ ಬಂದಂತೆ ಆಗಿ ಹಿರಿಹಿರಿ ಹಿಗ್ಗಿದ. ಸಕಲ ಸೈನ್ಯಕ್ಕೂ ಆನಂದದ ಸುಗ್ಗಿಯೇ ಸುಗ್ಗಿ.

ಪಲ್ಲಕ್ಕಿ ಬಂದಿತು. ಒಳಗಿನಿಂದ ನಕಲಿ ಮಹಾರಾಜರು ಠೀವಿಯಿಂದ ಹೊರಗೆ ಬಂದರು. ಗಂಭೀರವಾಗಿ ನಿಂತರು. ಆದರೆ ಶಿವಾಜಿ ಇದ್ದಹಾಗೆ ಕಾಣಿಸಲಿಲ್ಲ.

“ನಿನ್ನ ಹೆಸರೇನು? ಜೌಹರ್ ಗರ್ಜಿಸಿದ.
“ಶಿವಾಜಿ!”
“ಯಾವ ಊರು?”
“ಪನ್ನಾಳಗಡ”
“ಏನು ಕೆಲಸ ಮಾಡುತ್ತಿ?”
“ಕ್ಷೌರಿಕ!”

“ಅರೆ ಅಲ್ಲಾ! ನಾಮ್ಕೆವಾಸ್ತೆ ಸಿವಾಜಿ!” ಎಂದು ಸರದಾರರೆಲ್ಲರೂ ಒಮ್ಮೆಗೇ ಚೀರಿದರು. ಅವರಿಗೆ “ಸಮಯದ ಕ್ಷೌರ” ಆಗಿತ್ತು. ಸಿದ್ದಿಜೌಹರ್ ರೋಷದಿಂದ ಅಳಿಯನ ಕಡೆ ನೋಡಿದ. ಆ ಅಳಿಯ ಮುಖ ಹರಳೆಣ್ಣೆ ಕುಡಿದಂತೆ ಆಗಿತ್ತು. ತುಟಿಪಿಟಿಕೆನ್ನದೆ ತನ್ನ ಸೈನ್ಯದ ಸಹಿತ ಪುನಃ ವಿಶಾಲಗಡದ ಕಡೆಗೆ ಕುದುರೆ ದೌಡಾಯಿಸಿದ.

ಗಜಾಪುರದ ಖಿಂಡಿ

ಅತ್ತ, ನಿಜ ಶಿವಾಜಿಯೊಡನೆ ಬಾಜಿಪ್ರಭುವಿನ ಪಡೆ ಬೇಗಬೇಗ ನಡೆದು ಆಂಬರ್ಡೆ ಎಂಬ ಹಳ್ಳಿಗಾಡು ತಲುಪಿದರು. ಒಂದೊಂದು ಕ್ಷಣವೂ ಅವರಿಗೆ ಅಮೂಲ್ಯವಾಗಿತ್ತು. ಸಿದ್ದಿ ಮಸೂದನ ರಾವುತರು ಭರದಿಂದ ಬೆನ್ನಟ್ಟುತ್ತಿದ್ದರು. ಆ ಆರು ನೂರು ಮಾವಳಿ ವ್ಯಾಘ್ರಗಳು ಮಳೆ, ಗಾಳಿಗಳಿಗೂ, ಗುಡುಗು ಸಿಡಿಲುಗಳಿಗೂ ಬೆದರಲಿಲ್ಲ. ಕೆಸರು, ಕಗ್ಗತ್ತಲುಗಳನ್ನೂ, ಕಲ್ಲು ಮುಳ್ಳುಗಳನ್ನೂ ಲೆಕ್ಕಿಸಲಿಲ್ಲ. ಅವರ ಮುಂದಿದ್ದುದು ಒಂದೇ ಗುರಿ; ವಿಶಾಲಗಡ, ಬಾಜಿಪ್ರಭುವು ಮಹಾರಾಜರನ್ನು ವಿಶಾಲಗಡ ತಲುಪಿಸುವ ದೃಢ ನಿಶ್ಚಯ ಮಾಡಿದ್ದ. ಎಂದೂ ಸೋಲರಿಯದ ಬಾಜಿಯ “ಬಾಜಿ” ಅದಾಗಿತ್ತು.

ರಾತ್ರಿ ಕಳೆದು ಬೆಳಕು ಕಾಣಿಸತೊಡಗಿತು. ವಿಶಾಲಗಡಕ್ಕೆ ಕೆಲವೇ ಮೈಲಿ ಮಾತ್ರ ಉಳಿಯಿತು. ಪಾಂಡರ್ಯಪಾಣಿ ಎಂಬ ಜಾಗ ತಲುಪುವ ಹೊತ್ತಿಗೆ ಪೂರ್ತಿ ಬೆಳಕಾಯಿತು. ಎದುರಿಗೊಂದು ಪರ್ವತದ ಸಾಲು ತಟ್ಟನೆ ಕಣ್ಣಿಗೆ ಬಿತ್ತು. ವಿಶಾಲಗಡವನ್ನು ಮರೆಮಾಡಿ ಬೃಹದಾಕರವಾಗಿ ಅದು ಹರಡಿತ್ತು. ಅದರ ನಡುವೆ ದಟ್ಟವಾದ ಕಾಡಿನ ಮರೆಯಲ್ಲಿ ಪುಟ್ಟದೊಂದು ಕಣಿವೆ ಅಡಗಿತ್ತು. ಅದರ ಅಗಲ ಬಹಳ ಕಿರಿದು; ಉದ್ದ ಒಂದು ಸಾವಿರ ಗಜಗಳಷ್ಟು ಗಜಾಪುರದ ಖಿಂಡಿ ಎಂದು ಅದಕ್ಕೆ ಹೆಸರು.

ಮಾವಳಿಗಳ ಪಡೆ ಸರಸರನೆ ಬೆಟ್ಟದ ಬದಿಯನ್ನು ಏರಿತು; ಕಣಿವೆಯ ಬಾಯಿ ಸೇರಿತು. ದೂರದಲ್ಲಿ ಮಸೂದನ ಸವಾರರು ಬಾಜಿಗೆ ಕಂಡರು. ಅವರ ಕುದುರೆಗಳ ಹೇಶಾರವೂ ಕೇಳಿಸಿತು.

ಅನುಯಾಯಿಯ “ಆಜ್ಞೆ”

ಕ್ಷಣಾರ್ಧದಲ್ಲಿ ಬಾಜಿಪ್ರಭು ಆ ಖಿಂಡಿಯನ್ನೊಮ್ಮೆ ಕಣ್ಣಿಂದ ಅಳೆದ. ಆ ಜಾಗ ಅವನ ಮನಸ್ಸಿಗೆ ಹಿಡಿಸಿತು. ಅಲ್ಲಿಯೆ ನಿಲ್ಲಲು ತನ್ನ ಪಡೆಗೆ ಆಜ್ಞಾಪಿಸಿದ. ಶಿವಾಜಿ ಮಹಾರಾಜರು ಪಲ್ಲಕ್ಕಿಯ ಒಳಗಿಂದಲೇ ಕೇಳಿದರು:

“ಬಾಜಿಪ್ರಭು, ಏನು ನಿಂತಿರಲ್ಲ?”

ಅನುಯಾಯಿಯೇ ನಾಯಕಿಗೆ ಆಜ್ಞಾಪಿಸುವಂಥ ಸಂದರ್ಭ ಬಂದಿದೆಯೆಂದು ಬಾಜಿ ಅರಿತ. ಸಮಯ ಬಂದರೆ ಶಿವಾಜಿ ಮಹಾರಾಜರಿಗೂ ತಿಳಿಯಹೇಳುವ ಘನತೆ ಅವನಿಗಿತ್ತು. ಅದರಿಂದಲೇ ಗಂಗಾಧರ ಪಂತರು ಮಹಾರಾಜರನ್ನು ನಿಶ್ಚಿಂತೆಯಿಂದ ಬೀಳ್ಕೊಟ್ಟರು.

ಮಹಾಪ್ರಭು, ಅರ್ಧ ಪಡೆಯೊಡನೆ ನಾನು ಇಲ್ಲಿಯೇ ನಿಲ್ಲುತ್ತೇನೆ. ಉಳದ ಅರ್ಧ ಪಡೆಯೊಡನೆ ನೀವು ವಿಶಾಲಗಡಕ್ಕೆ ಧಾವಿಸಿ.”

“ಬಾಜಿಪ್ರಭು!”

ಶಿವಪ್ರಭು, ದಯವಿಟ್ಟು ಮುಂದೆ ಹೊರಡಿ, ಉಳಿದ ಕಾರ್ಯನನಗೆ ಬಿಡಿ.”

ಆಗಲಿ ಬಾಜಿ, ಈಗ ನಾವು ನಿನ್ನ ಆಜ್ಞಾಪಾಲಕರು. ವಿಶಾಲಗಡ ಸೇರಿದೊಡನೆ ಮೂರು ಬಾರಿ ತೋಪು ಹಾರಿಸಿ ಸೂಚನೆ ಕೊಡುತ್ತೇವೆ.”

“ಅದುವರೆಗೆ ಈ ಬಾಜಿ ಇಲ್ಲಿಂದ ಕದಲುವುದಿಲ್ಲ.”

“ಬಾಜಿಪ್ರಭು, ತೋಪಿನ ಸದ್ದು ಕೇಳಿದೊಡನೆ ನೀವು ವಾಪಾಸಾಗಬೇಕು. ಮುಂದೆ ಇನ್ನೂ ಬಹಳ ಕೆಲಸಗಳಿವೆ, ಮರೆಯಬೇಡಿ.”

“ನೀವು ಒಬ್ಬರು ಪಾರಾದರೆ ಅನೇಕ ಬಾಜಿಗಳನ್ನು ಗಳಿಸಬಲ್ಲಿರಿ, ಬೆಳೆಸಬಲ್ಲಿರಿ, ಇನ್ನು ಹೊರಡಿ, ಹೊರಡಿ.”

ಮಹಾರಾಜರು ಹೊರಟುಬಿಟ್ಟರು.

ಶತ್ರುವಿಗೆ ಸ್ವಾಗತ!

ಬಾಜಿ ತನ್ನೊಡನೆ ಉಳಿದ ಮುನ್ನೂರು ಮಾವಳಿಗಳ ಕಡೆ ಕಣ್ಣಾಡಿಸಿದ. ಅವರು ಎವೆಯಿಕ್ಕದೆ ಅವನ ಆಜ್ಞಾಪಾಲನೆಗೆ ಕಾದಿದ್ದರು. ತಮ್ಮ ಆ ಅದ್ಭುತ ಸೇನಾನಿಗಾಗಿ ಏನು ಮಾಡಲೂ ತಯಾರಿದ್ದರು.

ಬಾಜಿಯ ತನ್ನ ಎಡಬಲಗಳಲ್ಲಿ ಐವತ್ತು ಯೋಧರನ್ನು ನಿಲ್ಲಿಸಿಕೊಂಡ. ಉಳಿದವರಿಗೆ ಸೂಚನೆ ಕೊಟ್ಟ. ಅವರು ಮರಗಿಡಗಳ ನಡುವೆ ಹರಡಿಕೊಂಡು ಅಲ್ಲಲ್ಲೆ ಅಡಗಿಕೊಳ್ಳಬೇಕು. ಕವಣೆ ಕಲ್ಲುಗಳನ್ನೂ ಬಿಲ್ಲುಬಾಣಗಳನ್ನೂ ಸಿದ್ಧವಾಗಿಟ್ಟುಕೊಳ್ಳಬೇಕು. ಏಟಿನ ಅಳತೆಯೊಳಗೆ ಶತ್ರುಗಳ ಬರುತ್ತಲೇ ಪ್ರಯೋಗಿಸಲು ಆರಂಭಿಸಬೇಕು. ಇನ್ನು ಕೆಲವರು ಮೇಲಕ್ಕೆ ಏರುವ ವೈರಿಗಳ ಮೇಲೆ ಬಂಡೆಗಲ್ಲುಗಲ್ಲುಗಳನ್ನು ಉರುಳಿಸಬೇಕು. ಅದರಿಂದಲೂ ಪಾರಾಗಿ ಕಣಿವೆಯ ಬಾಗಿಲಿಗೆ ಬಂದವರನ್ನು ಸ್ವಾಗತಿಸಲು ಬಾಜಿ ಮತ್ತು ಅವನ ಐವತ್ತು ಭಟರು ಭಾಲೆ, ಕತ್ತಿ ಹಿರಿದು ನಿಂತರು.

ಮಸೂದನ ಸವಾರರು ಕಣಿವೆಯ ಬಾಯಿಯಲ್ಲಿ ಕೇವಲ ಐವತ್ತು ಜನರನ್ನು ಕಂಡರು.ಉತ್ಸಾಹದಿಂದ ಮುಂದುವರಿದರು. ಕೂಡಲೇ ಸೊಯ್ಯನೆ ಕವಣೆಕಲ್ಲುಗಳ ಮಳೆ ಆರಂಭವಾಯಿತು. ಹಿಂದೆಯೇ ಬಾಣಗಳು ಬಂದು ನಾಟತೊಡಗಿದವು. ಶತ್ರುಗಳ ಪ್ರಾಣಗಳನ್ನು ಹೀರತೊಡಗಿದವು. ಮಸೂದನ ಸೈನಿಕರ ಗುಂಡಿಗೆಯು ಅದುರಿತು. ಬೆಟ್ಟದ ಬುಡ ಹತ್ತಿ ಖಿಂಡಿಯ ಬಾಯಿಗೆ ಹೋಗಲು ಧೈರ್ಯವಾಗದೆ ನಿಂತುಬಿಟ್ಟರು.

ಆದರೆ ಹಿಂದಿನಿಂದ ಸಿದ್ದಿಮಸೂದ ಅವರಿಗೆ ಹುರುಪುಕೊಟ್ಟ. ವಾಪಸ್ಸು ಬಂದವರನ್ನು ತಾನೇ ಕತ್ತರಿಸಿಹಾಕುವುದಾಗಿ ಶಪಥ ತೊಟ್ಟ. ವಿಧಿಯಿಲ್ಲದೆ ಸುಲ್ತಾನಿ ಸೈನಿಕರು ಮುಂದುವರಿದರು. ಎಲ್ಲರೂ ಹೋಗಲು ಜಾಗವಿಲ್ಲ. ಆದ್ದರಿಂದ ಏಳುತ್ತಾ ಬೀಳುತ್ತಾ, ಒಂದಾದನಂತರ ಒಂದು ತುಕಡಿಗಳು ಉರುಳುವ ಬಂಡೆಗಳಿಗೆ ಸಿಲುಕಿ ಸಾಯುತ್ತಾ ಮೇಲೇರತೊಡಗಿದವು.

ಕಣಿವೆಯೊಳಗೆ ಕಾಲಿಟ್ಟ ಕೂಡಲೇ ಕಾಲಭೈರವನ ದರ್ಶನ! ಸಾಕ್ಷಾತ್ ಪ್ರಳಯರುದ್ರನಂತೆ ಬಾಜಿಪ್ರಭು ಎರಡು ಕೈಗಳಲ್ಲೂ ಖಡ್ಗ ಹಿಡಿದು ನಿಂತಿದ್ದ. ಜೊತೆಗೆ ಕೋಟೆಯ ಗೋಡೆಯಂತೆ ನಿಂತ ಐವತ್ತು ಕಟ್ಟಾಳುಗಳು. ಬಂದಬಂದವರನ್ನು ಭಲ್ಲೆಯಿಂದ ಇರಿದು ಉರುಳಿಸುತ್ತಿದ್ದರು. ಖಡ್ಗಗಳಿಂದ ಕೊಚ್ಚಿ ಕಡೆಹತ್ತಿದ್ದರು.

“ಬನ್ನಿ, ಮೇಲೆ ಬನ್ನಿ, ಮಾವಳಿ ಖಡ್ಗದ ರುಚಿ ನೋಡಿ” ಎಂದು ಕತ್ತಿ ಬೀಸಿ ಕರೆಯುತ್ತಿದ್ದರು. ಬಾಜಿಪ್ರಭುವಂತೂ ಎಲ್ಲ ಶತ್ರುಗಳನ್ನೂ ತಾನೊಬ್ಬನೇ ಆಹುತಿ ತೆಗೆದುಕೊಳ್ಳುವನೋ ಎಂಬಂತೆ ರೋಷಭೀಷಣನಾಗಿ ನಿಂತಿದ್ದ.

ಮಸೂದನ ಪಡೆಗಳು ಒಂದಾದನಂತರ ಒಂದು ಬಂದವು; ಮಣ್ಣುಗೂಡಿ ಹೋದವು. ಇನ್ನೂ ಹೊಸ ಹೊಸ ಪಡೆಗಳು ಬರುತ್ತಲೇ ಇದ್ದವು. ಆದರೆ ಬಾಜಿಯ ಐವತ್ತು ಜನರ ವ್ಯೂಹ ಅಭೇದ್ಯವಾಗಿತ್ತು. ಅವರ ಪೈಕಿ ಎಷ್ಟು ಜನ ಸತ್ತರೆ ಅಷ್ಟು ಜನ ಹಿಂದಿನಿಂದ ಬಂದು ತೆರವಾದ ಜಾಗದಲ್ಲಿ ನಿಲ್ಲುತ್ತಿದ್ದರು.

ಯಾರಿಗೆ ದಣಿವು?

ಬಿಸಿಲಿನ ತಾಪ ಏರುತ್ತಿದ್ದಂತೆ ಬಾಜಿಪ್ರಭುವಿನ ಪ್ರತಾಪವೂ ಏರುತ್ತಾ ಹೋಯಿತು. ಶತ್ರುಗಳಿಗೆ ಗಜಾಪುರದ ಖಿಂಡಿಯೇ ಬೃಹದಾಕಾರದ ತೋಫಿನಂತೆ ಕಂಡಿತು. ಬಾಜಿಪ್ರಭು ದೇಶಪಾಂಡೆ ಅದರ ಬಾಯಿನಿಂದ ಗುಂಡಿನಂತೆ ಸಿಡಿದು ಶತ್ರುಸೈನ್ಯದ ಮೇಲೆ ಬೀಳುತ್ತಿದ್ದ. ವೈರಿಪಡೆಯನ್ನು ಯಮಸದನಕ್ಕೆ ಅಟ್ಟುತ್ತಿದ್ದ. ಅವನ ಮೈಗೆಲ್ಲ ಶತ್ರುಗಳ ರಕ್ತದಿಂದ ಅಭಿಷೇಕವಾಗಿತ್ತು. ಅವನ ಎರಡು ಖಡ್ಗಗಳಿಂದಲೂ ರಕ್ತಪ್ರವಾಹ ಹರಿಯುತ್ತಿತ್ತು. ಅವನ ಭೀಮಬಾಹುಗಳು ದಣಿವಿಲ್ಲದೆ ಖಡ್ಗಗಳನ್ನು ಬೀಸುತ್ತಲೇ ಇದ್ದರು.

ಬಾಜಿಯ ಮೈತುಂಬ ಗಾಯಗಳಾಗಿದ್ದವು. ಅದನ್ನು ನೋಡಿದ ಸಂಗಡಿಗರು ಹೇಳಿದರು:

“ನಿಮ್ಮ ಗಾಯಕ್ಕೆ ಪಟ್ಟಿ ಕಟ್ಟುತ್ತೇವೆ, ಹಿಂದೆ ಸರಿಯಿರಿ.”

“ಗಾಯವೇ? ನಿಜವಾದ ಗಾಯ ಆಗಿರುವುದು ಮಾತೃಭೂಮಿಗೆ. ಆಕೆಗೆ ನಮ್ಮ ಜೀವನದ ಬಟ್ಟೆಯಿಂದ ಪಟ್ಟಿ ಕಟ್ಟೋಣ. ಈಗ ನೀವು ಪಕ್ಕಕ್ಕೆ ಸರಿಯಿರಿ” ಎಂದು ಹೇಳಿ ಬಾಜಿ ಖಡ್ಗ ಚಲಾಯಿಸತೊಡಗಿದ.

ಬರಬರುತ್ತ ಹೋರಾಟ ಭೀಷಣವಾಯಿತು. ಬಾಜಿಯ ಪರಾಕ್ರಮದ ಕಾವು ಏರಿದಂತೆ, ವೈರಿಗಳ ಹೆಣದ ರಾಶಿಯೂ ಏರತೊಡಗಿತು. ಬಾಜಿಯ ಸಂಗಡಿಗರು ಕೂಗಿ ಹೇಳಿದರು: “ಇವರನ್ನು ನಾವು ವಿಚಾರಿಸಿಕೊಳ್ಳುತ್ತೇವೆ. ನೀವು ಸ್ವಲ್ಪ ದಣಿವು ಆರಿಸಿಕೊಂಡು ಬನ್ನಿ.”

ತೋಫಿನ ಸದ್ದು

ಮಧ್ಯಾಹ್ನವಾಯಿತು. ನಿಕರ ಕಾಳಗ ನಿಲ್ಲಲಿಲ್ಲ. ಬಾಜಿಯ ಪರಾಕ್ರಮಕ್ಕೆ ಸಾಕ್ಷಿಯಾಗಿದ್ದ ಸೂರ್ಯನಾರಾಯಣ ಪಶ್ಚಿಮಕ್ಕೆ, ವಿಶಾಲಗಡದ ಕಡೆಗೆ ಜಾರತೊಡಗಿದ.

"ಮಹಾರಾಜರು "ಇನ್ನು ಬಹಳ ಕೆಲಸವಿದೆ" ಎಂದಿದ್ದರು."

ಶಿವಾಜಿ ಮಹಾರಾಜರು ಇಳಿಯುತ್ತಿದ್ದ ಸೂರ್ಯನನ್ನು ಕಂಡರು. ಪ್ರಯಾಣವನ್ನು ಚುರುಕು ಮಾಡಿದರು. ವಿಶಾಲಗಡದ ಬುಡದಲ್ಲಿ ಮುತ್ತಿಗೆ ಹಾಕಿದ್ದ ವಿಜಾಪುರದ ಸೈನ್ಯದ ಮೇಲೆ ಹಠಾತ್ತನೆ ದಾಳಿ ಮಾಡಿದರು. ಹೆಜ್ಜೆಹೆಜ್ಜೆಯಾಗಿ ಶತ್ರುವ್ಯೂಹವನ್ನು ಸೀಳಿಕೊಂಡು ವಿಶಾಲಗಡದ ಮೇಲೆ ಹತ್ತಿದರು. ಹೆಬ್ಬಾಗಿಲಿಗೆ ಕಾಲಿಡುತ್ತಿದ್ದಂತೆಯೇ ಪೂರ್ವದ ಬುರುಜಿನ ಕಡೆಗೆ ಧಾವಿಸಿದರು. ಅಲ್ಲಿ ಮದ್ದು ತುಂಬಿದ ತೋಪು ಕಾಯುತ್ತಿತ್ತು.

ಇತ್ತ ಬಾಜಿಯ ಭೀಮಕಾಯವೂ ಶತ್ರುಗಳ ಆಘಾತದಿಂದ ಜರ್ಜರಿತವಾಗಿತ್ತು. ಕಳೆದ ಇರುಳಿನಿಂದಲೂ ಅನ್ನನೀರುಗಳಿಲ್ಲದೆ ಸತತ ಓಡಾಟ-ಹೋರಾಟಗಳೇ ಸಾಗಿದ್ದವು. ಶರೀರದಿಂದ ಧಾರಾಕಾರವಾಗಿ ರಕ್ತ ಸೋರಿಹೋಗುತ್ತಿತ್ತು. ಆದರೂ ಅವನ ಶೌರ್ಯ ಕುಂದಲಿಲ್ಲ; ಅವನ ತೇಜಸ್ಸು ಕುಂದಲಿಲ್ಲ, ಕೊನೆಯ ತೊಟ್ಟು ರಕ್ತ ಇರುವವರೆಗೆ, ಕಟ್ಟಕಡೆಯ ಉಸಿರು ಇರುವವರೆಗೆ ಅವನನ್ನು ಯಾರು ತಾನೆ ತಡೆಯಬಲ್ಲರು?

ಸೂರ್ಯಾಸ್ತದ ಸಮಯ ಆಯಿತು. ಪಶ್ಚಿಮದ ಗಾಳಿಯೊಡನೆ ಗಗನಭೇದಿ ಸದ್ದು ಕೇಳಿಬಂತು.

“ಧನ್‌, ಧನ್‌, ಧನ್‌!

ಒಂದು, ಎರಡು, ಮೂರು!

ಖಿಂಡಿ ಪಾವನವಾಯಿತು

ಬಾಜಿಪ್ರಭುವಿನ ಕಿವಿಗಳು ಅದನ್ನು ಕೇಳಿದವು. ಧನ್ಯತೆಯ ಆನಂದಾಶ್ರುಗಳು ಕಣ್ಣುಗಳಲ್ಲಿ ಚಿಮ್ಮಿದವು. ಜೋಡಿ ಖಡ್ಗಗಳನ್ನು ಹಿಡಿದು ಯುದ್ಧ ಮಾಡುತ್ತಿದ್ದಂತೆಯೇ ಆ ವೀರಾಧಿವೀರನ ಶರೀರ ನೆಲಕ್ಕೆ ಒರಗಿತು.

ಶತ್ರುಗಳು ಅವನನ್ನು ಮುಟ್ಟಲು ಬಾಜಿಯ ಭಟರು ಬಿಟ್ಟುಕೊಡಲಿಲ್ಲ. ತಮ್ಮ ನೆಚ್ಚಿನ ಒಡೆಯನನ್ನು ಸಾಗಿಸಿಕೊಂಡು ಕಾಡಿನಲ್ಲಿ ಮರೆಯಾಗಿ ಹೋದರು. ಕೊನೆಯ ಬಾರಿ ಕಣ್ಣು ಮುಚ್ಚುವ ಮುನ್ನ ಬಾಜಿಯ ಬಾಯಿಂದ ಹೊರಟ ಮಾತುಗಳನ್ನು ಅವರು ಕೇಳಿದರು:

“ಸ್ವಾಮಿ ಕಾರ್ಯಕ್ಕೆ ದೇಹ ಸಂದಿತು. ಬಯಸಿದಂತೆ ವೀರಮರಣ ಬಂದಿತು. ಜೀವನ ಧನ್ಯವಾಯಿತು, ಪಾವನವಾಯಿತು. ಆದರೂ…. ವಾಪಸು ಬರಲು ಮಹಾರಾಜರು ಹೇಳಿದ್ದರು. ಇನ್ನೂ ಬಹಳ ಕೆಲಸವಿದೆ ಅಂದಿದ್ದರು. ಇದೋ ಹೊರಟಿದ್ದೇನೆ… ಅವರ ಬಳಿಗೇ ಈಗ ಹೊರಟಿದ್ದೇನೆ.”

ಪುರುಷಪುಂಗವ ಬಾಜಿಪ್ರಭುವಿನ ಪ್ರಾಣಪಕ್ಷಿ ಪಯಣಿಸಿತು. ಎಲ್ಲಿಗೆ? ಇನ್ನೆಲ್ಲಿಗೆ-ಮಹಾರಾಜರ ಸನ್ನಿಧಿಗೆ!

ತೋಫಿನ ಗರ್ಜನೆ ಕೇಳಿದೊಡನೆ ಅಳಿದುಳಿದ ಮಾವಳಿಗಳೆಲ್ಲ ಕಾಡಿನ ಆಳದಲ್ಲಿ ಅಡಗಿಹೋದರು. ಅವರ ಕರ್ತವ್ಯ ಅಲ್ಲಿಗೆ ಪೂರ್ತಿಯಾಗಿತ್ತು. ಗಜಾಪುರದ ಖಿಂಡಿಯು ಬಾಜಿಪ್ರಭುವಿನ ಶೌರ್ಯದ ಸುಗಂಧದಿಂದ ತುಂಬಿತ್ತು. ಅವನ “ಹರಹರ ಮಹದೇವ್‌” ಘೋಷಣೆಯಿಂದ ಪ್ರತಿಧ್ವನಿಸುತ್ತಿತ್ತು. ಅವನ ಪವಿತ್ರ ನೆತ್ತರಿನಲ್ಲಿ ನೆನೆದು ಪಾವನವಾಗಿತ್ತು. ಅಂದಿನಿಂದ ಅದಕ್ಕೆ “ಪಾವನಖಿಂಡಿ” ಎಂದೇ ಹೆಸರಾಯಿತು.

ಶಿವಾಜಿ ಮಹಾರಾಜರು ಕಾತರದಿಂದ ಕಾದು ಕುಳಿತಿದ್ದರು. ಬಾಜಿಯನ್ನು ಎದುರುಗೊಳ್ಳಲು, ಅವನಿಗೆ ಸನ್ಮಾನ ನೀಡಲು. ಆದರೆ ಬಾಜಿ ಬರಲಿಲ್ಲ, ಅವನ ಸಾವಿನ ಸುದ್ದಿ ಬಂದಿತು! ಆಗ ಅವರ ಹೃದಯದ ವೇದನೆ ಯಾರು ಬಲ್ಲರು? ದುಃಖವನ್ನು ಪ್ರದರ್ಶಿಸಿ ತೋರಿಸುವಂಥ ವ್ಯಕ್ತಿಯಲ್ಲ ಅವರು. ಐದು ವರ್ಷಗಳ ಕಾಲ ಬಾಜಿಯ ಪರಿಶುದ್ಧ ಸ್ನೇಹ-ಪ್ರೇಮ-ನಿಷ್ಠೆಗಳನ್ನು ನೆನೆದು ಅವರು ಗದ್ಗದಿತರಾದರು.

ಬಾಜಿಪ್ರಭುವಿನ ಹಿರಿಯ ಮಗ ಬಾವಾಜಿಬಾಜಿಯೂ ತಂದೆಯಂತೆಯೇ ಮಹಾಶೂರ. ಮಹಾರಾಜರು ಅವನನ್ನು ಕರೆಸಿ ತಂದೆಯ ಜಾಗದಲ್ಲಿ ಸರದಾರನನ್ನಾಗಿ ನೇಮಿಸಿದರು. ಅವನಿಗೆ ಏಳು ಜನ ತಮ್ಮಂದಿರು. ಅವರೆಲ್ಲರನ್ನು ಕರೆಸಿ ಪಲ್ಲಕ್ಕಿ ನೀಡಿ ಸನ್ಮಾನ ಮಾಡಿದರು. ಮಾವಳಿ ಜನರ ಮೇಲ್ವಿಚಾರಕರನ್ನಾಗಿ ನೇಮಿಸಿ ಬಹುಮಾನ ನೀಡಿದರು. ಎಲ್ಲಕ್ಕಿಂತ ಮಿಗಿಲಾಗಿ ಬಾಂದಲ ವೀರರ ಸಾಹಸದ ಗುರುತಾಗಿ, ಬಾಂದಲ ದೇಶಮುಖರಿಗೆ ದರಬಾರಿನಲ್ಲಿ ಅಗ್ರ ತಾಂಬೂಲದ ಮರ್ಯಾದೆ ಘೋಷಿಸಿದರು.

ಬಾಜಿಪ್ರಭು ದೇಶಪಾಂಡೆಯ ನೆನಪು ಅಜರಾಮರವಾಯಿತು. ಗಜಾಪುರದ ಖಿಂಡಿ ಪರಮಪಾವನವಾಯಿತು.