‘ಬಾಡಿಗೆಗಿದೆ’ – ಎಂಬ ಬೋರ್ಡು
ಎದೆಯೊಳು ನೇತಾಡಿದೆ.
ತನ್ನ ಹಣೆಯ ಬರೆಹವನ್ನು
ತಾನೆ ತೆರೆದು ಹೊತ್ತವನೊಲು
ಈ ಮನೆಯೋ ತೋರಿದೆ !

ಬಹಳ ದಿನಗಳಾಯ್ತೊ ಏನೊ
ಇದ್ದವರೂ ಬಿಟ್ಟು ;
ಗೋಡೆಯ ಮೈ ಕೆತ್ತಿಹೋಗಿ
ತೂತಾಗಿದೆ ಕಂಡವರೂ
ಮೆಯ್ಗೆ ಕಲ್ಲನಿಟ್ಟು.

ಯಜಮಾನನಿಗೇನು ಚಿಂತೆ ?
ಹಣವು ಬಂದರಾಯಿತು.
ಇದ್ದವರಿಗು ಏನು ಚಿಂತೆ ?
ಸುಣ್ಣ ಬಣ್ಣಗಳನು ಕಂಡು
ಏಸೊ ವರುಷವಾಯಿತು !

ಮಳೆ ಗಾಳಿಗೆ ಬಿಸಿಲುಗಳಿಗೆ
ಹೋಗಿ ಬರಲು ತೆರವು !
ನೆಳಲು ಬೆಳಕಿನಾಟದಲ್ಲಿ
ಗಾಳಿ ಸಿಳ್ಳ್ಳುಹಾಕುತಿರಲು
ಬರಿ ಶೂನ್ಯದ ಇರವು !
ಹೊಸತಿಲಲ್ಲಿ ನೋಡು ಇತ್ತ
ರಂಗೋಲಿಯ ಗುರುತಿದೆ.
ಯಾವ ತಾಯ ಕೃಪೆಯಿಂದಲೊ
ದಿನಬೆಳಗೂ ಬಾಗಿಲ ತೆರೆ-
ದಂಥ ನೆನಪು ಉಳಿದಿದೆ !

ಯಾವ ಹಬ್ಬದಲ್ಲೊ ಏನೊ
ಕಟ್ಟಿದ್ದರು ತೋರಣ.
ಮಾವಿನೆಲೆಗಳುದುರಿಹೋಗಿ
ಬರಿಯ ಹುರಿಯು ಜೋಲುತಿಹುದು
ನೇಣಿನಂತೆ ಓರಣ !

ಛಾವಣಿಯೀ ಭಾರ ಹೊತ್ತು
ಕಂಬಗಳಿಗು ಆಸರ !
ಇಲಿ ಹಲ್ಲಿಗು ಜಿರಲೆಗಳಿಗು
ಬರಿಯ ಶೂನ್ಯದಿರವಿನಲ್ಲಿ
ಕಾಲ ಕಳೆದು ಬೇಸರ !

ಒಳಗ ಮೊಳಗುತಿದ್ದಿತೊಮ್ಮೆ
ದೇವಾರ್ಚನೆ ಮಂತ್ರವು.
ಊದುಬತ್ತಿ ನವುರು ಗಂಧ
ಹೆಣ್ಣಕೊರಳ ಮೆಲುಪಿನಿಂದ
ಸಂಜೆ ಮನೆಯ ದೀಪವು !

ಮುದ್ದುಮಕ್ಕಳಳುವು ನಗುವು
ಒಮ್ಮೆ ಇದ್ದಿತಿದರೊಳು.
ಸಂಸಾರದ ನೂರು ಮುಖದ
ವಿವಿಧಭಾವ ತರಂಗದಲಿ
ಜೀವವಿದ್ದಿತಿದರೊಳು.

ನಿಸ್ತರಂಗವೆಂಥ ಬದುಕೊ,
ಸತರಂಗವೆ ಜೀವನ.
ಯಾವ ಗಾಳಿ ಬೀಸಿ ಮನೆಯ
ಸ್ತಬ್ಧ ಸರಸಿಯಂಥ ಬದುಕು
ಪಡೆಯಬಹುದೊ ಚೇತನ !