ಕರ್ನಾಟಕ ಇತಿಹಾಸದಲ್ಲಿ ಎರಡು ಶತಮಾನಗಳ ಕಾಲ ಬಾದಾಮಿ ಚಾಲುಕ್ಯರು ರಾಜ್ಯಭಾರ ಮಾಡಿದರು. ಕ್ರಿ.ಶ.ಸು. ೫೦೦ರಲ್ಲಿ ಜಯಸಿಂಹನಿಂದ ಪ್ರಾರಂಭವಾದ ಚಾಲುಕ್ಯ ಮನೆತನದ ಆಡಳಿತವು ಕ್ರಿ.ಶ. ೭೫೭ರಲ್ಲಿ ಎರಡನೆಯ ಕೀರ್ತಿವರ್ಮನ ಕಾಲದಲ್ಲಿ ಅಸ್ತಂಗತವಾಯಿತು. ಕ್ರಿ.ಶ. ೭೫೭ರ ರಾಷ್ಟ್ರಕೂಟ ದಂತಿದುರ್ಗನು ಚಾಲುಕ್ಯ ಅರಸ ಇಮ್ಮಡಿ ಕೀರ್ತಿವರ್ಮನನ್ನು ಯುದ್ಧದಲ್ಲಿ ಸೋಲಿಸುವುದರ ಮೂಲಕ ಪ್ರಾಚೀನ ಕರ್ನಾಟಕದ ರಾಜಕೀಯ ರಂಗನಾಟಕದಲ್ಲಿ  ಚಾಲುಕ್ಯರು ವಿರಮಿಸುವಂತೆ ಮಾಡಿದನು. ಸಾರ್ವಭೌಮರಾಗಿ ಮೆರೆದ ಬಾದಾಮಿ ಚಾಲುಕ್ಯರು ಕರ್ನಾಟಕದಲ್ಲಿ ಸ್ವತಂತ್ರವಾದ ವಿಶಾಲ ಸಾಮ್ರಾಜ್ಯವನ್ನು ಕಟ್ಟಿ ಬೆಳೆಸಿದರು. ಕರ್ನಾಟಕದ ಭೌಗೋಳಿಕ ಗಡಿಗಳನ್ನು ಹಿಗ್ಗಿಸಿದ ಕನ್ನಡ ಅರಸರಲ್ಲಿ ಮೊಟ್ಟ ಮೊದಲಿಗರಾಗಿದ್ದಾರೆ. ತಮ್ಮ ಆಡಳಿತಾವಧಿಯುದ್ದಕ್ಕೂ ಕಂಚಿ ಪಲ್ಲವರ ಜೊತೆಗೆ ಹಗೆತನ ಸಾಧಿಸಿದ ಬಾದಾಮಿ ಚಾಲುಕ್ಯರು, ಕನ್ನಡದ ಶ್ರೇಷ್ಠ ದೊರೆ ಇಮ್ಮಡಿ ಪುಲಕೇಶಿಯನ್ನು ಕಳೆದುಕೊಂಡು ಹದಿಮೂರು ವರ್ಷಗಳ ಪರಕೀಯ ಆಡಳಿತವನ್ನು ಕಂಡಿತು. ಆದರೆ ಸೋಲಿನ ಕಹಿ ಅನುಭವವನ್ನು ಇಮ್ಮಡಿ ವಿಕ್ರಮಾದಿತ್ಯನು ಪಲ್ಲವರನ್ನು ಸೋಲಿಸುವುದರ ಮೂಲಕ ಬಾದಾಮಿ ಚಾಲುಕ್ಯ ಸಾಮ್ರಾಜ್ಯವನ್ನು ಮರು ಕಟ್ಟಿದ ಕೀರ್ತಿಗೆ ಪಾತ್ರನಾದನು. ಕರ್ನಾಟಕ ಇತಿಹಾಸದಲ್ಲಿ ನಡೆದು ಹೋದ ಈ ಸೋಲು ಗೆಲುವುಗಳು ನಮ್ಮ ಸಾಂಸ್ಕೃತಿಕ ಕೊಡು ಕೊಳ್ಳುವಿಕೆಯ ಮೇಲೆ ಅಗಾಧವಾದ ಪರಿಣಾವುವನ್ನು ಬೀರಿದವು. ಮುಖ್ಯವಾಗಿ ಕಲಾ ಸಾಂಸ್ಕೃತಿಕ ಆಯಾಮಗಳು ಬದಲಾವಣೆ ಹೊಂದಿ ಆಚರಣೆಯಲ್ಲಿ ಬಂದವು.

ವಿಸ್ತಾರವಾದ ಸಾಮ್ರಾಜ್ಯಕ್ಕೆ ಬಾದಾಮಿಯನ್ನು ರಾಜಧಾನಿ ಪಟ್ಟಣವಾಗಿ ಆಯ್ಕೆ ಮಾಡಿಕೊಂಡ ಚಾಲುಕ್ಯರು ಅದನ್ನು ಬೆಳೆಸಿ ಅದರ ಮಹತ್ವವನ್ನು ಹೆಚ್ಚಿಸಿದರು. ಈ ಮೊದಲು ಟಾಲೊಮಿಯಿಂದ ರಚಿತವಾದ A Guide to Geography ಎಂಬ ಪುಸ್ತಕದಲ್ಲಿ ಬಾದಾಮಿಯ ಬಗೆಗೆ ಉಲ್ಲೇಖವಾಗಿದೆ. ಈ ಗ್ರಂಥದ ಕಾಲ ಕ್ರಿ.ಶ. ೧೫೦ ಎಂಬುದಾಗಿ ವಿದ್ವಾಂಸರ ಅಭಿಪ್ರಾಯವಿದೆ. ಪ್ರಾಚೀನ  ಪ್ರಸಿದ್ಧವಾದ ಬಾದಾಮಿ ಪಟ್ಟಣದಿಂದ ಆಳ್ವಿಕೆ ಮಾಡಿದ ಚಾಲುಕ್ಯರನ್ನು ಸಾಮಾನ್ಯವಾಗಿ ಬಾದಾಮಿ ಚಾಲುಕ್ಯರೆಂದು ಇತಿಹಾಸದಲ್ಲಿ ದಾಖಲಿಸಲಾಗಿದೆ. ಕೆಲವು ಆಂಗ್ಲ ವಿದ್ವಾಂಸರು Early Chalukys (ಅರ್ಲಿ ಚಾಲುಕ್ಯಾಸ್) ಎಂಬ ಹೆಸರಿನಿಂದಲೂ ಕರೆದಿದ್ದಾರೆ. ಅಲ್ಲದೇ ಪ್ರಾಚೀನ ಬಾದಾಮಿಯನ್ನು ಬೇರೆ ಬೇರೆ ಹೆಸರುಗಳಿಂದ ಪ್ರಾಚೀನ ಶಾಸನಗಳಲ್ಲೂ ಉಲ್ಲೇಖಿಸಲಾಗಿದೆ. ಸ್ಥಳೀಯ ಮೌಖಿಕ ಕಥನಗಳಲ್ಲಿ ಹಾಗೂ ಪುರಾಣಗಳಲ್ಲಿ ಬಾದಾಮಿಯ ಪ್ರಾಚೀನ ನಾಮ ವಿವೇಚನೆ ಕುರಿತು ಅನೇಕ ವಿದ್ವಾಂಸರು ಗಂಭೀರವಾಗಿ ಚರ್ಚಿಸಿದ್ದಾರೆ.

ಮಲಪ್ರಭಾ ನದಿಯ ಪರಿಸರದಲ್ಲಿ ಬರುವ ಬಾದಾಮಿಯ ಸುತ್ತಲಿನ ಪ್ರದೇಶಗಳು ಕಲಾದಗಿ ಶಿಲಾವರ್ಗಗಳಿಂದ ಕೂಡಿವೆ. ಕೆಂಪು ಬೆಣಚುಕಲ್ಲು ಹಾಗೂ ಮರಳು ಶಿಲೆಯಿಂದ ನಿರ್ಮಾಣವಾದ ನೈಸರ್ಗಿಕ ಶಿಲಾಬಂಡೆಗಳು ಹಾಗೂ ಗುಹೆಗಳು ಇಲ್ಲಿನ ಅತ್ಯದ್ಭುತವಾದ ವಾಸ್ತು ನಿರ್ಮಾಣಗಳಿಗೆ ಸಹಾಯಕವಾಗಿವೆ. ಪ್ರಾರಂಭದ ಚಾಲುಕ್ಯ ಅರಸರು ತಮ್ಮ ವಾಸ್ತು ನಿರ್ಮಾಣ ಪ್ರಯೋಗಗಳನ್ನು ಐಹೊಳೆಯಲ್ಲಿ ಪ್ರಾರಂಭಿಸಿ ಬಾದಾಮಿ, ಮಹಾಕೂಟ, ಪಟ್ಟದಕಲ್ಲು ಅಲ್ಲದೇ ಆಲಂಪುರಗಳಲ್ಲಿ ಸುಂದರವಾದ ಶಿಲಾಕಟ್ಟಡಗಳನ್ನು ನಿರ್ಮಿಸಿ ಇಂದಿಗೂ ಜನಮಾನಸದಲ್ಲಿ ಜೀವಂತವಾಗಿ ಉಳಿದುಕೊಂಡಿದ್ದಾರೆ.

ಬಾದಾಮಿ ಚಾಲುಕ್ಯರು ಉತ್ತರದ ದೇಶಗಳಿಂದ ಬಂದವರು ಎಂಬ ಅಭಿಪ್ರಾಯಗಳು ದಾಖಲಾಗಿದ್ದರೂ ಕನ್ನಡ ಸಂಸ್ಕೃತಿ ಪರಂಪರೆಯನ್ನು ಉತ್ಕೃಷ್ಟವಾಗಿ ಬೆಳೆಸಿ ಪೋಷಿಸಿದರು. ಪ್ರಾರಂಭದ ಅರಸರು ವೈಷ್ಣವಮತದ ಧಾರ್ಮಿಕ ಪರಿಸರಕ್ಕೆ ಹೆಚ್ಚಿನ ಇಂಬು ನೀಡಿದರೆ, ಇಮ್ಮಡಿ ವಿಕ್ರಮಾದಿತ್ಯನ ಕಾಲದಿಂದ ಬಾದಾಮಿ ಚಾಲುಕ್ಯ ಅರಸು ಶೈವ ಧರ್ಮ ಪಂಥಕ್ಕೆ ಹೆಚ್ಚಿನ ಮಹತ್ವ ನೀಡಿದರು. ಧರ್ಮಾಚರಣೆಯ ಮೇಲಾಟಗಳು ಕ್ಷಿಪ್ರವಾಗಿ ನಡೆದರೂ ಅನ್ಯ ಮತ ಪಂಥಗಳಾದ ತಮ್ಮ ಆಪ್ತವಾದ ಧರ್ಮವನ್ನು ಆಚರಿಸುವುದರ ಜೊತೆಗೆ ಬೌದ್ಧ ಹಾಗೂ ಜೈನ ಪರಂಪರೆಗಳಿಗೂ ಹೆಚ್ಚಿನ ಪೋಷಣೆ ಹಾಗೂ ಪ್ರೋನೀಡಿ ಸಹಕರಿಸಿದರು. ಇವುಗಳಿಗೆ ಸಾಕ್ಷಿಯಾಗಿ ನಿಂತಿರುವ ಬೌದ್ಧ ಹಾಗೂ ಜೈನ ಪಂಥಗಳಿಗೆ ಸಂಬಂಧಿಸಿದ ವಾಸ್ತು ರಚನೆಯನ್ನು ಬಾದಾಮಿ ಪರಿಸರದಲ್ಲಿ ಕಾಣುತ್ತೇವೆ.

ಬಾದಾಮಿ ಚಾಲುಕ್ಯರ ವಾಸ್ತು ಲಕ್ಷಣಗಳನ್ನು ಸ್ಥೂಲವಾಗಿ ಗಮನಿಸಿದಾಗ ನಮಗೆ ಕಣ್ಮನ ಸೆಳೆಯುವ ಸಂಗತಿಗಳೆಂದರೆ ಶಿಲಾಬಂಡೆಗಳಲ್ಲಿ ಕೊರೆದು ನಿರ್ಮಿಸಿರುವ ರಾಚನಿಕ ದೇವಾಲಯಗಳು ಚಾಲುಕ್ಯ ಆಡಳಿತ ಪೂರ್ವದಲ್ಲಿದ್ದ ಶಾತವಾಹನರ, ಗುಪ್ತರ ಹಾಗೂ ವಾಕಾಟಕರ ವಾಸ್ತುರಚನೆಯ ಪ್ರಭಾವವು ಬಾದಾಮಿ ಚಾಲುಕ್ಯ ಅರಸರ ಮೇಲೆ ಸಹಜವಾಗಿ ಆಗಿರಬಹುದು. ಉಲ್ಲೇಖಿಸಿದ ಅರಸರು ಪಶ್ಚಿಮ ಘಟ್ಟಗಳಲ್ಲಿ ನಿರ್ಮಿಸಿದ ಚೈತ್ಯ ಗುಹಾಲಯಗಳ ರಚನಾ ವಿಧಾನಗಳು ಬಾದಾಮಿಯ ಶಿಲ್ಪಕಾರರಿಗೆ ಮೂಲ ಪ್ರೇರಣೆ ಆಗಿರಬಹುದು. ಬಾದಾಮಿ ಚಾಲುಕ್ಯರ ಆಡಳಿತದ ಪ್ರಾರಂಭದ ಮೊದಲ ಶತಮಾನದ ಕಾಲಾವಧಿಯಲ್ಲಿ ಅಖಂಡವಾಗಿರುವ ಶಿಲಾ ಬಂಡೆಗಳನ್ನು ಕೊರೆದು ಅದ್ಭುತ ರಚನೆಗಳನ್ನು ನಿರ್ಮಿಸಿದರು. ಅಲ್ಲದೇ ಬಿಡಿಯಾಗಿರುವ ರಾಚನಿಕ ದೇವಾಲಯಗಳನ್ನು ಸಹ ಹೆಚ್ಚಿನ ಪ್ರಮಾಣದಲ್ಲಿ ನಿರ್ಮಿಸಿದರು. ಕರ್ನಾಟಕದ ಭೌಗೋಳಿಕ ಗಡಿಯನ್ನು ಮೀರಿ ಸಾಮ್ರಾಜ್ಯ ವಿಸ್ತರಿಸಿದ್ದ ಬಾದಾಮಿ ಚಾಲುಕ್ಯರು ಆಂಧ್ರ ದೇಶದಲ್ಲಿರುವ ಆಲಂಪುರ ಎಂಬಲ್ಲಿಯೂ ಹಲವು ಮಹತ್ವದ ದೇವಾಲಯಗಳನ್ನೂ ನಿರ್ಮಿಸಿದರು. ವಾಸ್ತುಶೈಲಿಯ ಅಧ್ಯಯನ ದೃಷ್ಟಿಯಿಂದ ಈ ರಚನೆಗಳು ಮಹತ್ವವಾದವುಗಳು.

ಐಹೊಳೆ, ಬಾದಾಮಿ, ಮಹಾಕೂಟ ಹಾಗೂ ಪಟ್ಟದಕಲ್ಲಿನಲ್ಲಿ ನಿರ್ಮಾಣವಾಗಿರುವ ರಚನೆಗಳು ದೇವಾಲಯ ಅಧ್ಯಯನಕಾರರಿಗೆ ಕಲಾ ಸಂಸ್ಕೃತಿಯ ಸಾಕ್ಷಿಪ್ರಜ್ಞೆಗಳಾಗಿ ನಿಂತಿವೆ. ಅತ್ಯಂತ ಮಹತ್ವವಾದ ವಾಸ್ತುಶೈಲಿಯ ಎಲ್ಲ ಪ್ರಕಾರಗಳು ಇಲ್ಲಿನ ದೇವಾಲಯಗಳಲ್ಲಿ ವ್ಯಕ್ತವಾಗಿವೆ. ಅಲ್ಲದೆ ದಕ್ಷಿಣ ಭಾರತದಲ್ಲಿನ ಮೊಟ್ಟಮೊದಲ ತ್ರಿಕೂಟ ದೇವಾಲಯ ರಚನೆಯನ್ನೂ ಬಾದಾಮಿಯಲ್ಲಿ ಕಾಣುತ್ತೇವೆ. ಗುಹಾದೇವಾಲಯ ಹಾಗೂ  ದೇವಾಲಯ ಗಳನ್ನು ಅದ್ಭುತವಾಗಿ ನಿರ್ಮಿಸಿದ ಬಾದಾಮಿ ಚಾಲುಕ್ಯರು ಅವುಗಳ ಸೌಂದರ್ಯವನ್ನೂ ಹೆಚ್ಚಿಸುವ ಅನೇಕ ಬಿಡಿಶಿಲ್ಪಗಳನ್ನೂ ಮತ್ತು ಉಬ್ಬುಶಿಲ್ಪಗಳನ್ನು ಯಥೇಚ್ಛವಾಗಿ ಕಂಡಿರಿಸಿದ್ದಾರೆ. ದೇವಾಲಯಗಳ ಶಿಲ್ಪ ಅಧ್ಯಯನಕಾರರ ದೃಷ್ಟಿಯಲ್ಲಿ ಅಭಿಪ್ರಾಯಗಳಂತೆ ಬಾದಾಮಿಯ ಚಾಲುಕ್ಯರ ಕಾಲದಲ್ಲಿ ನಿರ್ಮಾಣವಾದ ಶಿಲ್ಪಗಳು ಪ್ರಮಾಣ, ಅಳತೆ ಹಾಗೂ ಸೌಂದರ್ಯ ದೃಷ್ಟಿಯಿಂದ ಉಳಿದೆಲ್ಲ ರಾಜರ ಕಾಲದಲ್ಲಿ ನಿರ್ಮಾಣವಾಗಿರುವ ಶಿಲ್ಪಿಗಳಿಗಿಂತ ಉತ್ಕೃಷ್ಟವಾದವುಗಳೆಂದು ಅಭಿಪ್ರಾಯಪಡಲಾಗಿದೆ. ಚಿತ್ರಕಲಾ ಸೌಂದರ್ಯದ ಬಗೆಗೆ ವಿಶೇಷ ಆಸಕ್ತಿ ಹೊಂದಿದ ಇವರು ಗುಹಾದೇವಾಲಯಗಳ ಛಾವಣಿಗಳಲ್ಲಿ ಸುಂದರವಾದ ಬಣ್ಣದ ಚಿತ್ರಗಳನ್ನೂ ಚಿತ್ರಿಸುವ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ. ಒಟ್ಟಿನಲ್ಲಿ ಬಾದಾಮಿ ಚಾಲುಕ್ಯರು ವಾಸ್ತು ನಿರ್ಮಾಣಗಳ ಕೇಂದ್ರೀಕರಣವನ್ನು ವಿಕೇಂದ್ರೀಕರಣಗೊಳಿಸಿ ಬೇರೆ ಬೇರೆ ಸ್ಥಳಗಳಲ್ಲಿ ದೇವಾಲಯಗಳನ್ನು ನಿರ್ಮಿಸಿ ಕಲಾ ಇತಿಹಾಸಕ್ಕೆ ಮಹತ್ವ ಕೊಡುಗೆಯನ್ನು ನೀಡಿದ್ದಾರೆ.

ಕರ್ನಾಟಕ ಸಂಸ್ಕೃತಿಗೆ ಮಹತ್ವದ ಕೊಡುಗೆಗಳನ್ನು ನೀಡಿದ ಬಾದಾಮಿ ಚಾಲುಕ್ಯರ ಕುರಿತಂತೆ ಈಗಾಗಲೇ ಮಹತ್ವದ ಅಧ್ಯಯನಗಳನ್ನು ಅನೇಕ ವಿದ್ವಾಂಸರು ಕೈಗೊಂಡಿದ್ದಾರೆ. ಶಾಸನಗಳನ್ನು ಆಧರಿಸಿ ಜಾನ್ ಫ್ಲೀಟ್ ರಚಿಸಿದ ‘Dynastics of the Kanarese Districts’ ಎಂಬ ಕೃತಿಯಲ್ಲಿ ಬಾದಾಮಿ ಚಾಲುಕ್ಯರ ಕುರಿತಂತೆ ಪ್ರಸ್ತಾಪಿಸಿರುವ ವಿವರವು ತಿಳಿದು ಬರುತ್ತದೆ. ಹಾಗೆಯೆ ರಾಜಕೀಯ, ಸಾಮಾಜಿಕ ಹಾಗೂ ಧಾರ್ಮಿಕ ವಿಷಯಗಳ ಕುರಿತಂತೆ ವಿದ್ವಾಂಸರಾದ ಪಿ.ಬಿ. ದೇಸಾಯಿ, ಶ್ರೀನಿವಾಸ ರಿತ್ತಿ ಹಾಗೂ ಬಿ.ಆರ್.ಗೋಪಾಲ ಅವರು ಮೌಲ್ಯಯುತವಾದ ಪುಸ್ತಕವನ್ನು ರಚಿಸಿದ್ದಾರೆ. ವಿದ್ವಾಂಸರಾದ ಕೆ.ವಿ.ರಮೇಶ ಅವರು ‘ಚಾಲುಕ್ಯಾಸ್ ಆಫ್ ವಾತಾಪಿ’ ಎಂಬ ಗ್ರಂಥವನ್ನು ರಚಿಸಿ ಕರ್ನಾಟಕ ಚರಿತ್ರೆ ಅಧ್ಯಯನಕ್ಕೆ ಹೊಸ ಇಂಬು ನೀಡಿದರು. ಇತಿಹಾಸದ ವಿವಿಧ ಕ್ಷೇತ್ರಗಳಲ್ಲಿ ಪರಿಣತರಾದ ವಿದ್ವಾಂಸರಿಂದ ರಚಿಸಲ್ಪಟ್ಟ ಬಾದಾಮಿ ಚಾಲುಕ್ಯರನ್ನು ಕುರಿತು ಲೇಖನಗಳನ್ನು ಶ್ರೀಯುತ ಎಂ.ಎಸ್. ನಾಗರಾಜರಾವ್ ಅವರು ‘ಚಾಲುಕ್ಯಾಸ್ ಆಫ್ ಬಾದಾಮಿ’ ಎಂಬ ಇಂಗ್ಲಿಶ್ ಗ್ರಂಥವನ್ನು ಸಂಪಾದಿಸಿ ಕೊಟ್ಟಿದ್ದಾರೆ.

ಬಾದಾಮಿ ಚಾಲುಕ್ಯರ ರಾಜಕೀಯ ಚರಿತ್ರೆಯ ಅಧ್ಯಯನಗಳ ಜೊತೆಗೆ ಸಾಂಸ್ಕೃತಿಕ ಮಹತ್ವವನ್ನು ಕುರಿತು ಬರೆದಿರುವ ಅನೇಕ ಗ್ರಂಥಗಳು ಇತ್ತೀಚಿಗೆ ಬಂದಿವೆ. ಚಾಲುಕ್ಯ ವಾಸ್ತು ಶಿಲ್ಪ ವಿಚಾರಗಳನ್ನು ಮೊದಲು ಅಧ್ಯಯನ ಮಾಡಿದ ಜೇಮ್ಸ್ ಬರ್ಜೆಸ್‌ರಿಂದ ಹಿಡಿದು ಈ ಹೊತ್ತಿನ ವಿದ್ವಾಂಸರವರೆಗೂ ಬಾದಾಮಿ ಚಾಲುಕ್ಯರ ವಾಸ್ತುಶಿಲ್ಪ ಕುರಿತಂತೆ ಮಹತ್ವದ ಅಧ್ಯಯನಗಳನ್ನೂ ಕೈಗೊಂಡಿದ್ದಾರೆ. ಇಲ್ಲಿ ಉಲ್ಲೇಖಿಸಲೇಬೇಕಾದ ಹೆಸರಾಂತ ಗ್ರಂಥವೆಂದರೆ ‘ದಿ ಚಾಲುಕ್ಯನ್ ಆರ್ಕಿಟೆಕ್ಚರ್ ಆಫ್ ದಿ ಕೆನರಿಸ್ ಡಿಸ್ಟ್ರಿಕ್ಟ್ಸ್.’ ಹೆನ್ರಿ ಕಜಿನ್ಸ್ ಅವರಿಂದ ೧೯೨೬ರಲ್ಲಿ ರಚನೆಯಾದ ಈ ಗ್ರಂಥದಲ್ಲಿ ಮೊಟ್ಟಮೊದಲಿಗೆ ಬಾದಾಮಿ ಚಾಲುಕ್ಯರ ದೇವಾಲಯಗಳ ಬಗೆಗೆ ಸಮಗ್ರವಾದ ಮಾಹಿತಿ ನೀಡುವ ಪ್ರಯತ್ನದಲ್ಲಿ ಯಶಸ್ವಿಯಾದರು. ಅದು ದೇವಾಲಯಗಳಿಗೆ ಸಂಬಂಧಿಸಿದ ಭಾಗಗಳು ಅರ್ಥವಾಗುವಂತೆ ವಿವರಿಸಿದರು.  ಶಾಸ್ತ್ರಬದ್ಧ ಪದಗಳ ನಿರಾಕರಣೆಯ ಜೊತೆಗೆ ಅದ್ಭುತ ವಿನ್ಯಾಸದ ಮೂಲಕ ಪುಸ್ತಕ ಪ್ರಕಟಿಸಿದರು. ಪ್ರಮಾಣಬದ್ಧವಾದ ಅಳತೆಯ ತಲನಕ್ಷೆ ಹಾಗೂ ಛಾಯಾಚಿತ್ರಗಳನ್ನು ಗ್ರಂಥದಲ್ಲಿ ನೀಡುವುದರ ಜತೆಗೆ ದೇವಾಲಯಗಳ ಅಧ್ಯಯನಕ್ಕೆ ಹೊಸ ಹಾದಿಯನ್ನು ಸೃಷ್ಟಿಸಿದರು. ಅಲ್ಲದೆ ಎಲ್ಲರೂ ಒಪ್ಪುವಂತಹ ಮಾರ್ಗದರ್ಶಿ ಗ್ರಂಥವಾಗಿ ಬಾದಾಮಿ ಚಾಲುಕ್ಯರ ವಾಸ್ತುಶಿಲ್ಪ ಅಧ್ಯಯನದಲ್ಲಿ ಪರಿಗಣಿತವಾಗಿದೆ. ಇದೇ ಮಾದರಿಯ ಹಲವಾರು ಅಧ್ಯಯನಗಳು ಈವರೆಗೂ ಮುಂದುವರೆದು ಬರುತ್ತಿವೆ. ಪ್ರೊ.ಎಸ್.ಶೆಟ್ಟರ್, ಪ್ರೊ.ಎಸ್. ರಾಜಶೇಖರ, ಪ್ರೊ.ಕೆ.ವಿ. ಸೌಂದರರಾಜನ್, ಪ್ರೊ. ಅ. ಸುಂದರ ಹಾಗೂ ಪ್ರೊ. ಶ್ರೀನಿವಾಸ ಪಾಡಿಗಾರ ಮತ್ತು ವಿದೇಶಿ ವಿದ್ವಾಂಸರಾದ ಜಾರ್ಜ್ ಮಿಶೆಲ್, ಗ್ಯಾರಿ ಟಾರ್ ಮತ್ತು ಕರೊಲ್ ರ್ಯಾಡ್‌ಕ್ಲಿಫ್ ಅವರು ಬಾದಾಮಿ ಚಾಲುಕ್ಯ ವಾಸ್ತುಶಿಲ್ಪ ಕುರಿತಂತೆ ವಿಶೇಷ ಅಧ್ಯಯನಗಳನ್ನು ಕೈಗೊಂಡು ಕರ್ನಾಟಕದ ವಾಸ್ತುಶಿಲ್ಪಕ್ಕಿರುವ ಮಹತ್ವವನ್ನು ವಿಸ್ತರಿಸಿದ್ದಾರೆ. ಅಲ್ಲದೆ ಎಲ್ಲರೂ ಒಪ್ಪುವಂತಹ ಮಾರ್ಗದರ್ಶಿ ಗ್ರಂಥವಾಗಿ ಬಾದಾಮಿ ಚಾಲುಕ್ಯರ ವಾಸ್ತುಶಿಲ್ಪ ಅಧ್ಯಯನದಲ್ಲಿ ಪರಿಗಣಿತವಾಗಿದೆ. ಬಾದಾಮಿ ಗುಹಾಲಯಗಳ ವರ್ಣಚಿತ್ರಗಳನ್ನು ಕುರಿತಂತೆ ಶಿವರಾಮ ಕಾರಂತ, ಅ. ಸುಂದರ, ಶ್ರೀಮತಿ ಸ್ಟೆಲಾ ಕ್ರ್ಯಾಮರಿಶ್ ಮತ್ತು ಸಿ. ಶಿವರಾಮಮೂರ್ತಿ ಅವರು ವಿಸ್ತೃತವಾದ ಅಧ್ಯಯನ ಕೈಗೊಂಡಿದ್ದಾರೆ. ಕನ್ನಡ ವಿಶ್ವವಿದ್ಯಾಲಯವು ಪ್ರಕಟಿಸಿರುವ ಕರ್ನಾಟಕ ಚರಿತ್ರೆ ಸಂಪುಟ ೧ ಎಂಬ ಹೆಸರಿನ ಹೆಬ್ಬೊತ್ತಿಗೆಯಲ್ಲಿ ಬಾದಾಮಿ ಚಾಲುಕ್ಯರ ಇತಿಹಾಸ ಹಾಗೂ ಕಲೆಗಳ ಕುರಿತು ಆಗಿರುವ ಅಧ್ಯಯನಗಳ ಬಗೆಗಿನ ಹೊಸ ಸಾಧ್ಯತೆಗಳ ಕುರಿತು ಹಲವಾರು ವಿದ್ವಾಂಸರು ಸೂಕ್ಷ್ಮವಾಗಿ ತಮ್ಮ ಲೇಖನಗಳಲ್ಲಿ  ಚರ್ಚಿಸಿದ್ದಾರೆ. ಬಾದಾಮಿಯ ಕುರಿತಂತೆ ನಮ್ಮ ವಿಶ್ವವಿದ್ಯಾಲಯವು ಡಾ. ಶೀಲಾಕಾಂತ ಪತ್ತಾರ ಅವರು ರಚಿಸಿದ ‘ಬಾದಾಮಿ ಸಾಂಸ್ಕೃತಿಕ ಅಧ್ಯಯನ’ ಎಂಬ ಪುಸ್ತಕವನ್ನು ಪ್ರಕಟಿಸಿದೆ. ಇದು ವಿಷಯ ನಿರೂಪಣೆಯ ದೃಷ್ಟಿಯಿಂದ ಮಹತ್ವ ಪಡೆದ ಕೃತಿಯಾಗಿದೆ.

ಈಗಾಗಲೇ ಸಂಕ್ಷಿಪ್ತವಾಗಿ ವಿವರಿಸಿರುವಂತೆ ಕರ್ನಾಟಕ ಇತಿಹಾಸಕ್ಕೆ ನೀಡಿರುವ ಮಹತ್ವದ ಕೊಡುಗೆಗಳನ್ನು ಪರಿಗಣಿಸಿ ಅನೇಕ ಸಂಶೋಧನಾ ಲೇಖನಗಳು ಬಾದಾಮಿ ಚಾಲುಕ್ಯರ ಬಗೆಗೆ ಪ್ರಕಟಗೊಂಡಿವೆ. ಅಲ್ಲಲ್ಲಿ ಹರಡಿಕೊಂಡಿರುವ ಲೇಖನಗಳನ್ನು ವಿಷಯದ ಸಮಗ್ರತೆಯ ಹಿನ್ನೆಲೆಯಲ್ಲಿ ಸಾಧ್ಯವಾದ ಮಟ್ಟಿಗೆ ಹಲವು ಲೇಖನಗಳನ್ನು ಸಂಪಾದನೆಯ ಮೂಲಕ ಕಟ್ಟಿಕೊಡುವ ಕೆಲಸ ಕೈಗೊಂಡಿದ್ದೇವೆ. ಇಂಥ ಕಾರ್ಯಗಳಲ್ಲಿ ಕೆಲವು ಮಹತ್ವದ ಲೇಖನಗಳು ನಮ್ಮ ಕಣ್‌ತಪ್ಪಿನಿಂದ ನಮಗೆ ಸಿಗದೇ ಹೋಗಿರಬಹುದು. ಆದ್ದರಿಂದ ನಮ್ಮ ಪ್ರಯತ್ನವನ್ನು ಸಹೃದಯರು ಸ್ವೀಕರಿಸಬೇಕೆಂದು ವಿನಂತಿಸುತ್ತೇವೆ. ಬಾದಾಮಿ ಚಾಲುಕ್ಯರ ಇತಿಹಾಸದ ಸಮಗ್ರತೆಯ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ಇತಿಹಾಸ ರಚನೆಗೆ ಅವಶ್ಯವಾಗಿರುವ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಮಹತ್ವದ ಲೇಖನಗಳನ್ನು ಆದ್ಯತೆಯ ಮೂಲಕ ಆಯ್ಕೆ ಮಾಡಿದ್ದೇವೆ. ಅಲ್ಲದೆ ಮೂಲ ಲೇಖನಗಳಿಗೆ ಸಂಬಂಧಿಸಿ ಕೆಲವು ಕಡೆ ಅವುಗಳ ಅರ್ಥ ಹಾಗೂ ಮಹತ್ವ ಕೆಡದಂತೆ ಅವಶ್ಯವಿದ್ದಲ್ಲಿ ಕೆಲವು ಸಣ್ಣಪುಟ್ಟ ತಿದ್ದುಪಡಿಗಳನ್ನು ಮಾಡಿಕೊಂಡಿದ್ದೇವೆ. ಆದ್ದರಿಂದ ಮೂಲಲೇಖಕರು ಹಾಗೂ ಓದುಗರು ಇಂಥ ಸಂಗತಿಗಳನ್ನು ಮನ್ನಿಸಬೇಕೆಂದು ವಿನಂತಿಸುತ್ತೇವೆ. ಇಲ್ಲಿ ಪ್ರಕಟವಾಗಿರುವ ಎಲ್ಲ ಲೇಖನಗಳು ಆಯಾ ಲೇಖಕರ ಪರಿಶುದ್ಧ ಪರಿಶ್ರಮದಿಂದ ರಚನೆಗೊಂಡಂಥವು. ಹೀಗಾಗಿ, ಈ ಕಾರ್ಯದ ಮೊದಲ ಗೌರವ ಮೂಲಲೇಖಕರಿಗೆ ಸಲ್ಲ ತಕ್ಕದ್ದು ಎಂದು ವಿನಮ್ರವಾಗಿ ನಿವೇದಿಸಿಕೊಳ್ಳುತ್ತೇವೆ.

ಬಾದಾಮಿ ಚಾಲುಕ್ಯರ ಕುರಿತಂತೆ ಮಹತ್ವದ ಆಕರ ಗ್ರಂಥವಾಗಿ ರೂಪಿತವಾಗುವ ಆಶಯದೊಂದಿಗೆ ಇಂಥ ಕಾರ್ಯವನ್ನು ಶ್ರದ್ಧೆಯಿಂದ ಮಾಡಿದ್ದೇವೆ. ಈ ಸಂಪುಟಕ್ಕೆ ಬಳಸಿಕೊಂಡ ಲೇಖನಗಳ ಲೇಖಕರಿಗೆ ಹಾಗೂ ಪ್ರಕಟಿಸಿರುವ ಸಂಸ್ಥೆಗಳಿಗೆ ನಾವು ಕೃತಜ್ಞ ರಾಗಿದ್ದೇವೆ. ನಮ್ಮ ಕಾರ್ಯವನ್ನು ಪ್ರೋತಮ್ಮಲ್ಲಿದ್ದ ಛಾಯಾಚಿತ್ರಗಳನ್ನು ಬಳಸಿ ಕೊಳ್ಳಲು ಅನುಮತಿ ನೀಡಿದ ವಿದ್ವಾಂಸರಾದ ಡಾ.ಎಸ್.ರಾಜಶೇಖರ ಅವರಿಗೆ ಹಾಗೂ ನಮ್ಮ ಈ ಕಾರ್ಯದಲ್ಲಿ ಸಹಕರಿಸಿದ ಡಾ.ಶೀಲಾಕಾಂತ ಪತ್ತಾರ ಅವರಿಗೆ ಆಭಾರಿಯಾಗಿದ್ದೇವೆ.

ನಮ್ಮ ಈ ಕಾರ್ಯ ಯೋಜನೆಯನ್ನು ಪೂರೈಸಲು ಪ್ರೋಸಹಕರಿಸಿದ ಮಾನ್ಯ ಕುಲಪತಿಗಳಾದ ಡಾ. ಎ. ಮುರಿಗೆಪ್ಪ ಅವರಿಗೆ ಹೃತ್ಪೂರ್ವಕ ಕೃತಜ್ಞತೆಯನ್ನು ಅರ್ಪಿಸುತ್ತೇವೆ. ಈ ಸಂಪುಟದ ಪ್ರಧಾನ ಸಂಪಾದಕರಾಗಿ ನಮ್ಮ ಕಾರ್ಯಗಳಿಗೆ ಮಾರ್ಗದರ್ಶಕ ಸಲಹೆ ಸೂಚನೆಗಳನ್ನಿತ್ತು ಪ್ರಕಟಗೊಳ್ಳುವಂತೆ ಮಾಡಿದ್ದಾರೆ. ಆಡಳಿತಾತ್ಮಕ ಅನುಮೋದನೆ ನೀಡಿದ ಕುಲಸಚಿವರಾದ ಶ್ರೀ ಎಸ್.ಎಸ್. ಪೂಜಾರ ಅವರಿಗೆ ನಾವು ಕೃತಜ್ಞರಾಗಿದ್ದೇವೆ. ಸಂಪುಟದ ಪ್ರಕಟಣಾ ಜವಾಬ್ದಾರಿಯನ್ನು ಹೊತ್ತು ನಮ್ಮನ್ನು ಪ್ರೋಪ್ರಸಾರಾಂಗದ ನಿರ್ದೇಶಕರಾದ ಡಾ. ಎ. ಮೋಹನ ಕುಂಟಾರ್ ಅವರಿಗೆ ನಮ್ಮ ಧನ್ಯವಾದಗಳನ್ನು ಸಲ್ಲಿಸುತ್ತೇವೆ.

ಸಂಪುಟವು ಸುಂದರವಾಗಿ ಪ್ರಕಟಗೊಳ್ಳಲು ಕಾಳಜಿಯಿಂದ ಪರಿಶ್ರಮಪೂರ್ವಕವಾಗಿ ಮುದ್ರಣಕ್ಕೆ ಸಿದ್ಧಪಡಿಸಿಕೊಟ್ಟ ಪ್ರಸಾರಾಂಗದ ಸಹಾಯಕ ನಿರ್ದೇಶಕರಾದ ಶ್ರೀ ಬಿ. ಸುಜ್ಞಾನಮೂರ್ತಿ ಅವರನ್ನು ಸ್ಮರಿಸುತ್ತೇವೆ. ಅಂದವಾಗಿ ಮುಖಪುಟ ವಿನ್ಯಾಸವನ್ನು ಮಾಡಿದ ಕೆ.ಕೆ.ಮಕಾಳಿ ಹಾಗೂ ಅಕ್ಷರ ಸಂಯೋಜನೆ ಮಾಡಿದ ಯಾಜಿ ಗ್ರಾಫಿಕ್ಸ್‌ನ ಶ್ರೀಮತಿ ಸವಿತಾ ಯಾಜಿ, ಗಣೇಶ್ ಯಾಜಿ ಹಾಗೂ ಕೆ. ವೀರೇಶ್ ಅವರನ್ನು ಈ ಸಂದರ್ಭದಲ್ಲಿ ವಿಶೇಷವಾಗಿ  ಸ್ಮರಿಸಿಕೊಳ್ಳುತ್ತೇವೆ. ಸಂಪುಟವನ್ನು ಮುದ್ರಿಸಿಕೊಟ್ಟ ಯಶವಂತ್ ಪ್ರಿಂಟರ್ಸ್‌ನ ಸಿಬ್ಬಂದಿಗೆ ನಮ್ಮ ಕೃತಜ್ಞತೆಗಳು.

ಸಂಪಾದಕರು