ಆಡಳಿತೀಯ ವಿಭಾಗಗಳು

ಸಾಮ್ರಾಜ್ಯವನ್ನು ಹಲವು ಆಡಳಿತೀಯ ವಿಭಾಗಗಳನ್ನಾಗಿ ಒಡೆಯಲಾಗಿತ್ತು. ಹೊಸದಾಗಿ ಗೆದ್ದುಕೊಂಡ ರಾಜ್ಯಭಾಗಗಳನ್ನು, ಅವುಗಳ ಪ್ರದೇಶವನ್ನು ಹಾಗೆಯೇ ನಿರ್ದಿಷ್ಟವಾಗಿ ಉಳಿಸಿಕೊಂಡು ಸೇರಿಸಿಕೊಳ್ಳಲಾಗುತ್ತಿತ್ತು. ಪ್ರಾಂತೀಯ ವಿಭಾಗಗಳಿಗೆ ಕೊಡುತ್ತಿದ್ದ ಹೆಸರುಗಳು ಪ್ರದೇಶದಿಂದ ಪ್ರದೇಶಕ್ಕೆ ಬೇರೆ ಬೇರೆಯಾಗುತ್ತಿದ್ದುವು ಎನ್ನುವುದು ಲಾಟ ಮತ್ತು ಮಹಾರಾಷ್ಟ್ರ ಪ್ರದೇಶಗಳಲ್ಲಿ ಕಂಡುಬರುವ ಶಾಸನಗಳಿಂದ ತಿಳಿದುಬರುತ್ತದೆ. ಶಾಸನಗಳಲ್ಲಿ ಉಲ್ಲೇಖಿತ ವಾಗಿರುವಂತೆ ಚಾಲುಕ್ಯ ಸಾಮ್ರಾಜ್ಯದಲ್ಲಿ ಹಲವು ಪ್ರಾದೇಶಿಕ ವಿಭಾಗಗಳಿದ್ದವು. ಅವುಗಳಿಗೆ ಸಂಬಂಧಿಸಿದಂತೆ ಉಪಯೋಗಿಸಿರುವ ಹೆಸರುಗಳಲ್ಲಿ ಏಕರೂಪತೆಯಿಲ್ಲ. ಮಂಗಳರಾಜನ ನೆರೂರು ಫಲಕಗಳಲ್ಲಿ ರಾಷ್ಟ್ರ ಎನ್ನುವುದು ಚಾಲುಕ್ಯರಾಜ ಮಂಗಳೇಶನ ಸಾಮ್ರಾಜ್ಯವನ್ನು ಸೂಚಿಸುತ್ತದೆ. ಇಮ್ಮಡಿ ಪುಲಕೇಶಿಯ ಐಹೊಳೆ ಪ್ರಶಸ್ತಿಯು, ಅವನು ೯೯,೦೦೦ ಗ್ರಾಮ ಗಳಿದ್ದ, ಎರಡು ಸಾಗರಗಳು ಸುತ್ತುವರಿದ ಮೂರು ಮಹಾರಾಷ್ಟ್ರಗಳ ಪ್ರಭುವಾಗಿದ್ದನು ಎಂದು ಹೇಳುತ್ತದೆ.

ನಿಜವಾಗಿ ಚಾಲುಕ್ಯ ಸಾಮ್ರಾಜ್ಯದಲ್ಲಿ ಮೂರು ದೊಡ್ಡ ವಿಭಾಗಗಳಿದ್ದವು. ಅವರ ಶಾಸನಗಳು ಇತರ ಕೆಲವು ಸಣ್ಣ ಪ್ರಾದೇಶಿಕ ವ್ಯಾಪ್ತಿಯ ರಾಷ್ಟ್ರಗಳನ್ನೂ ಹೇಳುತ್ತವೆ. ಇಮ್ಮಡಿ ಪುಲಕೇಶಿಯ ಕಿಪುರಂ ಫಲಕಗಳು ಕರ್ಮರಾಷ್ಟ್ರದಲ್ಲಿದ್ದ ಇರುಬಲಿ ಎಂಬ ಹಳ್ಳಿಯಲ್ಲಿ ಒಂದು ನೆಲವನ್ನು ದಾನ ಮಾಡಿದುದನ್ನು ಹೇಳುತ್ತವೆ. ನಂದಗಾಂವ್ ಮತ್ತು ಅಂಜನೇರಿಗಳು ಗೋಪರಾಷ್ಟ್ರಕ್ಕೆ ಸೇರುತ್ತವೆ.

ಶಾಸನಗಳಲ್ಲಿ ಉಲ್ಲೇಖವಾಗುವ ಇತರ ಆಡಳಿತೀಯ ಘಟಕಗಳು ದೇಶ, ನಾಡು, ಮಂಡಲ, ವಿಷಯ, ಭೋಗೆ, ಅಹರ ಮತ್ತು ಗ್ರಾಮ. ಜೈನ್ಮಲಗ್ರಾಮ ಮತ್ತು ಕರೆಕಲ್ಲಿಕಂಬ ಗಳೆಂಬ ಎರಡು ಹಳ್ಳಿಗಳು ಕ್ರಮವಾಗಿ ಚಲ್ಲಕಿ ದೇಶ (ಚಲ್ಲುಂಕಿ ದೇಶ) ಮತ್ತು ಖೇತಹರ ದೇಶಗಳಲ್ಲಿ ಇದ್ದಂತೆ ವರ್ಣಿಸಲಾಗಿದೆ. ಮಿರಾಶಿಯವರ ಪ್ರಕಾರ, ದೇಶ ಎನ್ನುವುದು ಪ್ರಾಂತಕ್ಕೆ ಸಂವಾದಿಯಾಗಿತ್ತು. ಆದರೆ ಇಮ್ಮಡಿ ಪುಲಕೇಶಿಯ ತುಮ್ಮೆಯನೂರು ಫಲಕಗಳು ಅದನ್ನು ವಿಷಯದೊಂದಿಗೆ ಸಮೀಕರಿಸುತ್ತವೆ. ಸಾಮಂತ ಭೋಗಕ್ತಿಯ ಅಂಜನೇರಿ ಫಲಕಗಳು ಉಲ್ಲೇಖಿಸುವ ಪುರಿ-ಕೊಂಕಣ ೧೪,೦೦೦ ಪ್ರದೇಶವನ್ನು ವಿಷಯವೆಂದು ವರ್ಣಿಸಿದೆ. ಆದರೆ ಅದು ಒಂದು ಪ್ರಾಂತ(ದೇಶ)ವನ್ನು ಹೇಳುತ್ತದೆ. ಏಕೆಂದರೆ ಗೋಪರಾಷ್ಟ್ರವನ್ನು ಪುರಿ-ಕೊಂಕಣದ ವಿಷಯಗಳಲ್ಲಿ ಒಂದು, ೧೪,೦೦೦ ಹಳ್ಳಿಗಳನ್ನುಳ್ಳದ್ದು ಎಂದು ಹೇಳಲಾಗಿದೆ. ಆದ್ದರಿಂದ ವಿಷಯ ಎಂಬ ಪದವನ್ನು ದೇಶ ಎಂಬುದಕ್ಕೆ ಸಮಾನಾರ್ಥಕ ಪದವಾಗಿ ಬಳಸಲಾಗುತ್ತಿದ್ದಿತು ಎಂಬುದು ತಿಳಿಯುತ್ತದೆ.

ನಾಡು ಇನ್ನೊಂದು ಪ್ರಾದೇಶಿಕ ವಿಭಾಗವಾಗಿತ್ತು. ಚಂದನ ಶಿಲಾಶಾಸನವು, ಬಾಣರಾಜನು ಗಂಗ-ರೇನಾಡಿನಲ್ಲಿ ಆಳುತ್ತಿದ್ದಾಗ, ವಿಜಯಾದಿತ್ಯ ಕತ್ತಿರಾಜನು ಮಾಡಿದ ಒಂದು ಭೂಮಿದಾನವನ್ನು ದಾಖಲಿಸುತ್ತದೆ. ವಿನಯಾದಿತ್ಯ ಸತ್ಯಾಶ್ರಯನ ವೀರರೆಡ್ಡಿಪಲ್ಲಿ ಶಾಸನವು, ಬಾಣರಾಜನು ವನನೂರುನಾಡನ್ನು ಆಳುತ್ತಿದ್ದಾಗ ಮಾಡಿದ ಒಂದು ಭೂಮಿದಾನವನ್ನು ಹೇಳುತ್ತದೆ. ತಮಿಳು ದೇಶದ ದಕ್ಷಿಣ ಭಾಗಗಳು ನಾಡುಗಳಾಗಿ ಒಡೆಯಲ್ಪಟ್ಟಿದ್ದುವು ಎಂದು ಮಹಾಲಿಂಗಂ ಅಭಿಪ್ರಾಯಪಡುತ್ತಾರೆ. ಬಹುಶಃ ಮೂಲತಃ ಅವು ಸ್ವತಂತ್ರ ರಾಜಕೀಯ ಘಟಕಗಳಾಗಿದ್ದವು. ಅವಕ್ಕಿಂತ ಮೇಲಾದ ಶಕ್ತಿಯು ಗೆದ್ದುಕೊಂಡಾಗ ಅಧೀನ ಆಡಳಿತೀಯ ಘಟಕಗಳಾಗಿ ಉಳಿದುಕೊಂಡು ತಮ್ಮ ಮೂಲನಾಮಗಳನ್ನು ಹಾಗೆಯೇ ಉಳಿಸಿಕೊಳ್ಳಲು ಬಿಡಲ್ಪಟ್ಟಿದವು ಎಂದು ಕಾಣುತ್ತದೆ. ಮೇಲೆ ಉಲ್ಲೇಖಿಸಿದ ಎರಡೂ ಶಾಸನಗಳು ಅನಂತಪುರ ಜಿಲ್ಲೆಯಲ್ಲಿ ಕಂಡುಬಂದಿವೆ. ಅದು ಪಲ್ಲವರನ್ನೂ ಅವರ ಮಿತ್ರರನ್ನೂ ಸೋಲಿಸಿದ ಮೇಲೆ ಚಾಲುಕ್ಯರು ವಶಪಡಿಸಿಕೊಂಡ ಪ್ರದೇಶದ ಭಾಗವಾಗಿದ್ದಿತು.

ಮತ್ತೊಂದು ಆಡಳಿತೀಯ ಘಟಕ ಮಂಡಲ. ಸತ್ಯಾಶ್ರಯ ಧ್ರುವರಾಜ ಇಂದ್ರವರ್ಮನ ಒಂದು ಶಾಸನದಲ್ಲಿ ಅವನನ್ನು ನಾಲ್ಕು ವಿಷಯ-ಮಂಡಲಗಳಿಗೆ ಅಧಿಪತಿ (ಗವರ್ನರ್) ಆಗಿದ್ದನೆಂದು ವರ್ಣಿಸಲಾಗಿದೆ. ವಿಷಯ ಮತ್ತು ಮಂಡಲ ಸಮಾನಾರ್ಥಗಳಾಗಿರಲಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ವಿನಯಾದಿತ್ಯನ ಹರಿಹರ ಫಲಕಗಳು, ವನವಾಸಿಮಂಡಲದಲ್ಲಿ ಎಡೆವೊಳಲು ಭೋಗದಲ್ಲಿ ಒಂದು ಗ್ರಾಮದ ಭೂಮಿಯನ್ನು ದಾನ ಮಾಡಿದ್ದನ್ನು ಹೇಳುತ್ತವೆ. ಇದರಿಂದ ಮಂಡಲವು ವಿಷಯಕ್ಕಿಂತ ಮೇಲಿನ ಆಡಳಿತೀಯ ಘಟಕವಾಗಿದ್ದಿತೆಂಬುದು ತಿಳಿಯುತ್ತದೆ.

ಚಾಲುಕ್ಯ ಶಾಸನಗಳಲ್ಲಿ ವಿಷಯ-ಆಡಳಿತೀಯ ವಿಭಾಗವನ್ನು ಕುರಿತ ಉಲ್ಲೇಖಗಳು ಪದೇ ಪದೇ ಬರುತ್ತವೆ. ಇದು ಇಂದಿನ ಜಿಲ್ಲೆಗೆ ಸಮ. ಇದರಲ್ಲಿ ಅನೇಕ ಹಳ್ಳಿಗಳು ಸೇರುತ್ತವೆ. ಇನ್ನೊಂದು ವಿಭಾಗ ಘಟಕವು ಭೋಗವೆಂಬ ಹೆಸರಿನದು. ವಿನಯಾದಿತ್ಯನ ಜೇಜೂರಿ ಫಲಕಗಳು ಗ್ರಾಮಕ್ಕೂ ವಿಷಯಕ್ಕೂ ನಡುವೆ ಭೋಗವನ್ನು ಹೇಳುತ್ತವೆ. ದಾನವಾದ ವೀರ ಎಂಬ ಗ್ರಾಮವು ಪಾಳಯತ್ಥನ ವಿಷಯದಲ್ಲಿದ್ದ ಇರುವ ವಿಭಾಗವನ್ನು ಭೋಗವು ಸೂಚಿಸುತ್ತದೆ. ಗುಜಾತ್ ಪ್ರದೇಶದಲ್ಲಿ ವಿಷಯವನ್ನು ಹಲವು ಅಹರಗಳನ್ನಾಗಿ ವಿಭಾಗಿಸ ಲಾಗಿತ್ತು. ದಖನ್ನಿನ ಭೋಗಗಳ ಹಾಗೆ ಶ್ರೀಯಾಶ್ರಯ ಶಿಲಾದಿತ್ಯನ ನವಸಾರಿ ಫಲಕಗಳಲ್ಲಿ ದಾನವಾದ ಗ್ರಾಮವು ಕನ್ಹದಲ ಅಹರದಲ್ಲಿದ್ದು, ಅದು ಬಾಹಿರಿಕ ವಿಷಯಕ್ಕೆ ಸೇರಿದ್ದಿತೆಂದು ಹೇಳಲಾಗಿದೆ.

ಗ್ರಾಮ ಅಥವಾ ಹಳ್ಳಿ, ಚಾಲುಕ್ಯ ಆಡಳಿತದ ಅತಿ ಕೆಳಗಿನ ಘಟಕ. ಅನೇಕ ಕುಟುಂಬಗಳು ವಾಸಿಸುತ್ತಿದ್ದ ಹಲವು ಮನೆಗಳ ಸಮೂಹವೇ ಹಳ್ಳಿ. ಸಾಮ್ರಾಜ್ಯದಲ್ಲಿ ಹಳ್ಳಿಗಳು ಬೇಕಾದಷ್ಟಿದ್ದುವು. ಚಾಲುಕ್ಯರಾಜ್ಯದಲ್ಲಿ ಅನೇಕ ಪಟ್ಟಣಗಳೂ ಇದ್ದುವು. ಅವನ್ನು ಪುರ ಹಾಗೂ ನಗರ ಎಂದು ಕರೆಯಲಾಗುತ್ತಿತ್ತು. ರಾಜಧಾನಿ, ಪ್ರಾಂತೀಯ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲದೆ, ಹಲವಾರು ವಾಣಿಜ್ಯ ನಗರಗಳಿದ್ದದ್ದು ಶಾಸನಗಳಿಂದ ತಿಳಿದುಬರುತ್ತದೆ. ವಾತಾಪಿ, ಬನವಾಸಿ, ಪಟ್ಟದ ಕಿಸುವೊಳಲು, ಪುಲಿಗೆರೆ ಮೊದಲಾದ ನಗರಗಳ ಬಗೆಗೆ ಶಾಸನಗಳಲ್ಲಿ ಧಾರಾಳವಾದ ಉಲ್ಲೇಖಗಳು ಬರುತ್ತವೆ.

ಪ್ರಾಂತೀಯ ಸರಕಾರ

ಚಾಲುಕ್ಯರ ಆಳ್ವಿಕೆಯಲ್ಲಿ ಪ್ರಾಂತೀಯ ಆಡಳಿತವನ್ನು ವೈಸರಾಯಿಗಳು, ಗವರ್ನರರು ಮತ್ತು ಸಾಮಂತರ ಮೂಲಕ ನಿರ್ವಹಿಸಲಾಗುತ್ತಿತ್ತು. ರಾಜಮನೆತನದ ಸದಸ್ಯರೇ ನೇರವಾಗಿ ಆಳುತ್ತಿದ್ದ ಪ್ರಾಂತಗಳಿದ್ದವು. ವಾಸ್ತವವಾಗಿ ಈ ರಾಜಪುರುಷರು ರಾಜನ ಅಧೀನ ಅಧಿಕಾರಿಗಳಂತೆ ಕಾರ್ಯ ನಿರ್ವಹಿಸುತ್ತಿದ್ದರು. ಲಾಟ, ನಾಸಿಕ ಮತ್ತು ವೆಂಗಿ ಪ್ರದೇಶಗಳು ಚಾಲುಕ್ಯ ಸಾಮ್ರಾಜ್ಯದ ಅಂತಹ ಪ್ರಾಂತಗಳಾಗಿದ್ದವು. ಆಂತರಿಕ ಸುವ್ಯವಸ್ಥೆಯನ್ನು ಪಾಲಿಸುವುದಕ್ಕೂ ಆ ಪ್ರದೇಶಗಳನ್ನು ವಿದೇಶೀಯ ಆಕ್ರಮಣಗಳಿಂದ ರಕ್ಷಿಸುವುದಕ್ಕೂ ವೈಸರಾಯಿಗಳು ಹೊಣೆಗಾರರಾಗಿದ್ದರು. ಇಮ್ಮಡಿ ಪುಲಕೇಶಿಯು ಹೊಸದಾಗಿ ಗೆದ್ದುಕೊಂಡ ವೆಂಗಿ ಪ್ರದೇಶವನ್ನು ರೂಢಿಸಲು, ಆಳಲು, ಯುವರಾಜ ವಿಷ್ಣುವರ್ಧನನ್ನು ವೈಸರಾಯಿ ಆಗಿ ನೇಮಿಸಿದನು. ಒಂದನೇ ವಿಕ್ರಮಾದಿತ್ಯನು ತನ್ನ ತಮ್ಮ ವಿಕ್ರಮಾದಿತ್ಯನ ಆಳಿಕೆಯಲ್ಲಿ ಗೋಪರಾಷ್ಟ್ರ ಮತ್ತು ಲಾಟಗಳ ವೈಸರಾಯಿ ಆಗಿ ಆಳುತ್ತಿದ್ದನು. ಒಂದನೇ ವಿಕ್ರಮಾದಿತ್ಯನ ಸೋದರಮಾವ ಬುದ್ಧಾವರಸರಾಜನು ಪುಣೆ ಪ್ರದೇಶವನ್ನು ವೈಸರಾಯಿ ಆಗಿ ಆಳುತ್ತಿದ್ದನೆಂದು ಸಂಜನ್ ತಾಮ್ರಫಲಕಗಳು ಹೇಳುತ್ತವೆ.

ಪ್ರಾಂತ್ಯಗಳಲ್ಲಿ ಸಾಮಂತರು ಮತ್ತು ರಾಜಸಾಮಂತರು ಆಳುತ್ತಿದ್ದುದನ್ನೂ ಚಾಲುಕ್ಯ ಶಾಸನಗಳು ಹೇಳುತ್ತವೆ. ಸಾಮಂತರು ಅಧೀನರಾಜರು, ರಾಜಸಾಮಂತರು ಚಕ್ರವರ್ತಿಯಿಂದ ನೇಮಿತರಾದ ಪ್ರಾಂತೀಯ ಗವರ್ನರರು. ಸತ್ಯಾಶ್ರಯ ಧ್ರುವರಾಜ ಇಂದ್ರವರ್ಮನು ಬಪ್ಪುರ ಕುಟುಂಬಕ್ಕೆ ಸೇರಿದ್ದು, ಅವನನ್ನು ಮಂಗಳೇಶನು ನಾಲ್ಕು ವಿಷಯ-ಮಂಡಲಗಳ ಗವರ್ನರ್ ಆಗಿ ನೇಮಿಸಿದ್ದನು. ಹರಿಶ್ಚಂದ್ರ ಕುಟುಂಬದ ಸ್ವಾಮಿಚಂದ್ರನು, ಒಂದನೇ ವಿಕ್ರಮಾದಿತ್ಯನ ಕಾಲದಲ್ಲಿ ಇಡೀ ಪುರಿ-ಕೊಂಕಣ ಪ್ರದೇಶಕ್ಕೆ ಗವರ್ನರ್ ಆಗಿ ಆಡಳಿತ ನಡೆಸುತ್ತಿದ್ದನು.

ಉತ್ತಮ ಆಡಳಿತ ಸಾಮರ್ಥ್ಯ ಮತ್ತು ಅಚಲವಾದ ನಿಷ್ಠೆ ಇರುವಂಥವರನ್ನು ಮಾತ್ರವೇ ಗವರ್ನರರನ್ನಾಗಿ ನೇಮಿಸಲಾಗುತ್ತಿತ್ತು. ತಮ್ಮ ಹೊಣೆಯಲ್ಲಿರುವ ಪ್ರಾಂತ್ಯಗಳನ್ನು ಆಳುತ್ತಾ ಅವರು ರಾಜನಿಗೆ ಜವಾಬ್ದಾರರಾಗಿದ್ದರು. ಬಹುಶಃ ವಿಷಯಪತಿ, ಭೋಗಿಕ ಮೊದಲಾದ ಅಧೀನ ಅಧಿಕಾರಿಗಳನ್ನು ನೇಮಿಸುವ ಅಧಿಕಾರವು ಅವರಿಗಿದ್ದಿತು. ಸಾಮಾನ್ಯವಾಗಿ ಗವರ್ನರನ ಹುದ್ದೆಯೂ ಆನುವಂಶಿಕವಾಗಿತ್ತು. ಭೋಗಶಕ್ತಿಯು ತನ್ನ ಅಂಜನೇರಿ ಫಲಕಗಳಲ್ಲಿ, ಒಂದನೇ ವಿಕ್ರಮಾದಿತ್ಯನ ಆಳ್ವಿಕೆಯಲ್ಲಿ ತನ್ನ ತಾತನು ಪುರಿ-ಕೊಂಕಣದ ಗವರ್ನರ್ ಆಗಿದ್ದನೆಂದೂ, ತಂದೆ ಸಿಂಹರಾಜನು ವಿನಯಾದಿತ್ಯನ ಆಳ್ವಿಕೆಯಲ್ಲಿ ಅದೇ ಹುದ್ದೆಯಲ್ಲಿದ್ದನೆಂದೂ ಹೇಳಿದ್ದಾನೆ. ವಿಜಯಾದಿತ್ಯನು ರಾಜ್ಯಭಾರ ಮಾಡುತ್ತಿದ್ದಾಗ ಭೋಗಶಕ್ತಿಯು ಪುರಿ-ಕೊಂಕಣದ ಆಡಳಿತವನ್ನು ನಿರ್ವಹಿಸುತ್ತಿದ್ದನು.

ಚಾಲುಕ್ಯರ ಕೈಕೆಳಗೆ ವಿವಿಧ ವಂಶಗಳಿಗೆ ಸೇರಿದ ಹಲವು ದೊಡ್ಡ, ಸಣ್ಣ ಸಾಮಂತರಿದ್ದರು. ಅವರು ಪ್ರಾಚೀನ ಸಂಪ್ರದಾಯಗಳು ಮತ್ತು ವಿಧಿಗಳಿಗೆ ಅನುಗುಣವಾಗಿ ತಮ್ಮ ತಮ್ಮ ರಾಜ್ಯಗಳನ್ನು ಆಳಲು ಅವಕಾಶ ಕೊಡಲಾಗಿತ್ತು. ಅವರು ಚಾಲುಕ್ಯರ ಪರಮಾಧಿಕಾರವನ್ನು ಒಪ್ಪಿಕೊಂಡು ಕಾಲಕಾಲಕ್ಕೆ ಕಪ್ಪಕಾಣಿಕೆಯನ್ನು ಕೊಡುತ್ತಿದ್ದರು. ಚಕ್ರವರ್ತಿಯು ಯಾವುದೇ ಸೇವಾಚರಣೆಯನ್ನು ಕೈಗೊಂಡಾಗ ಈ ಸಾಮಂತರು ತಮ್ಮ ಸೈನ್ಯದೊಂದಿಗೆ ಅವನನ್ನು ಹಿಂಬಾಲಿಸುತ್ತಿದ್ದರು. ಚಕ್ರವರ್ತಿಯ ಆಸ್ಥಾನದಲ್ಲಿ ಅವರಿಗೆ ಉತ್ತಮವಾದ ಸ್ಥಾನಗೌರವ ವಿದ್ದಿತು. ಆಳುಪರು, ಸಿಂಹರು, ಸೇಂದ್ರಕರು, ಬಾಣರು, ಗಂಗರು, ತೆಲುಗು-ಚೋಳರು, ನಳರು ಮತ್ತಿತರು ಮರ್ಯಾದಿತರಾದ ಸಾಮಂತರಾಗಿದ್ದರು.

ಸ್ಥಳೀಯ ಆಡಳಿತ

ಚಾಲುಕ್ಯ ಸಾಮ್ರಾಜ್ಯದ ಅತಿ ಸಣ್ಣ ಘಟಕವೆಂದರೆ ಗ್ರಾಮ ಅಥವಾ ಹಳ್ಳಿ, ಕ್ರಮವಾಗಿ ಅಗ್ರಹಾರ, ಊರು, ಮಹಾಜನರು ಮತ್ತು ನಗರ. ಪ್ರಾಚೀನ ಸಂಸ್ಥೆಗಳನ್ನು ಬೆಳೆಸುತ್ತಾ ಚಾಲುಕ್ಯರು ಕಾಲದ ಅಗತ್ಯಕ್ಕನುಗುಣವಾಗಿ ಆಡಳಿತ ವ್ಯವಸ್ಥೆಯನ್ನು ವಿಸ್ತರಿಸಿದರು. ಗ್ರಾಮ ಗಳಲ್ಲೂ ಪಟ್ಟಣಗಳಲ್ಲೂ ಮುಖ್ಯವಾದ ಪಾತ್ರವನ್ನು ನಿರ್ವಹಿಸಿದ ಹಲವು ಗಿಲ್ಡುಗಳು ಇದ್ದುದನ್ನು ಶಾಸನಗಳು ಹೇಳುತ್ತವೆ.

ಗ್ರಾಮಾಡಳಿತ

ಊರು ಎಂದು ಕರೆಯುತ್ತಿದ್ದ ಗ್ರಾಮಸಭೆಗಳ ಮೂಲಕ ಹಳ್ಳಿಯ ಆಡಳಿತವನ್ನು ನಿರ್ವಹಿಸಲಾಗುತ್ತಿತ್ತು. ಅದಕ್ಕೆ ಮಹಾಜನರು ಮತ್ತು ಗಾಮುಂಡ ಎಂದೂ ಹೆಸರುಗಳಿದ್ದುವು. ಕರ್ನಾಟಕಲ್ಲಿ ಗ್ರಾಮಸಭೆಯ ಅತಿ ಪ್ರಾಚೀನ ಉಲ್ಲೇಖ ದೊರಕುವುದು ೬ನೇ ಶತಮಾನದ ಗಂಗ ಶಾಸನಗಳಲ್ಲಿ. ಪ್ರತಿಯೊಂದು ಗ್ರಾಮದ ಗಡಿಗಳನ್ನು ಸ್ಪಷ್ಟವಾಗಿ ಗುರುತಿಸಲಾಗಿತ್ತು. ಉರ್ ಅಥವಾ ಮಹಾಜನರು ಹಳ್ಳಿಯ ಸಾಮಾಜಿಕ ಮತ್ತು ಆರ್ಥಿಕ ವ್ಯವಹಾರಗಳನ್ನು ನಿರ್ವಹಿಸುತ್ತಿದ್ದುದನ್ನು ಬನ್ನಿಕೊಪ್ಪ ಶಾಸನವು ಸ್ಪಷ್ಟಪಡಿಸುತ್ತದೆ. ಬನ್ನಿಯೂರನ್ನು ಮಹಾಜನರು ಆಳುತ್ತಿದ್ದರು ಎಂದು ಅದು ವರ್ಣಿಸುತ್ತದೆ. ಹಳ್ಳಿಯ ಒಂದು ತುಂಡು ನೆಲವನ್ನು ದೇವಾಲಯಕ್ಕೆ ವರ್ಗಾಯಿಸಬೇಕಾದರೆ ಅದಕ್ಕೆ ಪೂರ್ವಭಾವಿಯಾಗಿ ಗ್ರಾಮದ ಮಹಾಜನರ ಅನುಮತಿಯನ್ನು ಪಡೆಯಬೇಕಾಗಿತ್ತು ಎಂದು ಒಂದು ಚಾಲುಕ್ಯ ಶಾಸನವು ಹೇಳುತ್ತದೆ (ಮಹಾಜನ ಪ್ರಜೆ ಸಮ್ಮತದೆ ಕೊಟ್ಟುದು). ಇಮ್ಮಡಿ ವಿಕ್ರಮಾದಿತ್ಯನ ಆಡೂರು ಮತ್ತು ಲಕ್ಷ್ಮೇಶ್ವರ ಶಾಸನಗಳು ಗ್ರಾಮದ ಅಧಿಕಾರಿಯಾದ ಗಾಮುಂಡರನ್ನು ಉಲ್ಲೇಖಿಸುತ್ತವೆ. ಉರ್ ಅಥವಾ ಮಹಾಜನರ ಸದಸ್ಯರು ಹಳ್ಳಿಯ ಗಣ್ಯ ಗೃಹಸ್ಥರಾಗಿರುತ್ತಿದ್ದರು. ಆಡೂರು ಶಾಸನವು ಕರಣರು ಅಥವಾ ಹಳ್ಳಿಯ ಲೆಕ್ಕಿಗರನ್ನು ಉಲ್ಲೇಖಿಸುತ್ತದೆ. ಬಹುಶಃ ಈ ಕರಣರು ಹಳ್ಳಿಯ ಗೃಹಸ್ಥರ ಮೇಲೆ ಹಾಕಿದ ತೆರಿಗೆ ವಸೂಲಿ ಮೊದಲಾದ ಲೆಕ್ಕಗಳನ್ನು ಬರೆದಿಡು ತ್ತಿದ್ದರೆಂದು ತೋರುತ್ತದೆ.

ಅಗ್ರಹಾರ

ಬ್ರಾಹ್ಮಣರಿಗೆ ಜೀವನಾವಶ್ಯಕತೆಯಾಗಿ ವಹಿಸಿಕೊಟ್ಟ ಹಳ್ಳಿಯೇ ಅಗ್ರಹಾರ. ಇದರಲ್ಲಿ ಪಾಲುಗೊಂಡವರನ್ನು ಮಹಾಜನರು ಎಂದು ಕರೆಯುತ್ತಿದ್ದರು. ಇವರು ಒಂದು ಸಭೆಯಾಗಿ ಹಳ್ಳಿಯ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದರು. ಅಗ್ರಹಾರವು ಒಬ್ಬ ವ್ಯಕ್ತಿಗೆ ರಾಜನು ಕೊಡುವ ಒಂದು ಕೊಡುಗೆಯಾಗಿತ್ತು. ಆ ವ್ಯಕ್ತಿಯು ತನ್ನ ಜೊತೆಯ ಇತರ ಸದಸ್ಯರನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದನು. ಅವರೆಲ್ಲರೂ ಅಗ್ರಹಾರದ ಗೃಹಸ್ಥರೂ, ಮಹಾಜನರೂ ಆಗುತ್ತಿದ್ದರು. ವಿದ್ವತ್ತು, ವಿವೇಕಗಳಿಗಾಗಿ ಅವರನ್ನು ಆಯ್ಕೆ ಮಾಡಲಾಗುತ್ತಿತ್ತು. ಅವರ ಕಾರ್ಯಗಳು ಮುಖ್ಯವಾಗಿ ಧಾರ್ಮಿಕವೂ ಬೌದ್ದಿಕವೂ ಆಗಿದ್ದುವು. ಮಹಾಜನರ ಅತಿ ಪ್ರಾಚೀನ ಉಲ್ಲೇಖ ದೊರಕುವುದು ಗಂಗ ದುರ್ವಿನೀತನ (ಕ್ರಿ.ಶ.೬ನೇ ಶತಮಾನ) ಒಂದು ಶಾಸನದಲ್ಲಿ. ಅದರಲ್ಲಿ ಮಣಿಯತೆಗುರೆ, ಅಸಿಂಬಲ, ನಂದಿಯಾಲ ಮತ್ತು ಇತರ ಸ್ಥಳಗಳ ಮಹಾಜನರು ಒಂದು ದಾನಕ್ಕೆ ಸಾಕ್ಷಿಗಳಾಗಿ ಕಾಣಿಸಿಕೊಳ್ಳುತ್ತಾರೆ. ಚಾಲುಕ್ಯ ವಿಜಯಾದಿತ್ಯ ಸತ್ಯಾಶ್ರಯನ ಕಾಲದ ಚಿಪ್ಪರಗಿಯ ಶಾಸನವು(ಕ್ರಿ.ಶ.೬೯೬-೭೩೩), ಬಂಟರಸನೆನ್ನುವವನು ಧರ್ಮ ಭಟಾರರಿಗೆ, ಮಹಾಜನ ಪ್ರಜೆಗಳ ಅನುಮತಿಯಂತೆ ನೆಲವನ್ನು ದಾನ ಮಾಡಿದುದನ್ನು ಹೇಳುತ್ತದೆ.

ನಗರ ಆಡಳಿತ

ಮುನಿಸಿಪಲ್ ಆಡಳಿತದ ಅತ್ಯಂತ ಪ್ರಾಚೀನ ಉದಾಹರಣೆಗಳಲ್ಲಿ ಒಂದನ್ನು ಕ್ರಿ.ಶ.೬ನೇ ಶತಮಾನದ ಉದ್ಯಾನವರದಲ್ಲಿ ನೋಡಬಹುದು. ಸಂಭುಕಳ್ಳಿಯಲ್ಲಿ ದೊರೆತ ಈ ಶಾಸನದಲ್ಲಿ ಉದ್ಯಾನವರವನ್ನೊಂದು ನಗರ ಎಂದೂ ಅದರ ಆಡಳಿತಗಾರರನ್ನು ಒಕ್ಕಲು ಎಂದೂ (ನಗರದೆಳ್ಪತ್ತೊಕ್ಕಲು) ಕರೆದಿದೆ. ಇಂಥದೇ ಇನ್ನೊಂದು ಉದಾಹರಣೆ ಪುರಿಗೆರೆ (ಧಾರವಾಡ ಜಿಲ್ಲೆಯ ಇಂದಿನ ಲಕ್ಷ್ಮೇಶ್ವರ). ಅಲ್ಲಿಯೂ ನಗರ ಸಭೆಯಲ್ಲಿ ಮಹಾಜನರು, ನಗರ ಮತ್ತು ೧೮ ಪ್ರಕೃತಿಗಳು (ಸಮುದಾಯಗಳು) ಇದ್ದರು. ಕ್ರಿ.ಶ.೭೨೫ರಲ್ಲಿ ಅದಕ್ಕೆ ಯುವರಾಜ ವಿಕ್ರಮಾದಿತ್ಯನಿಂದ ಮನ್ನಣೆ ದೊರಕಿತು. ಈ ಅಧಿಕೃತ ಮನ್ನಣೆಗೆ ಆಚಾರ ವ್ಯವಸ್ಥೆ ಎಂದು ಹೆಸರು. ಇದು ಒಂದು ರೀತಿಯಲ್ಲಿ ನಡವಳಿಕೆಯ ಕೈಪಿಡಿ. ಪೌರಾಡಳಿತದ ವಿವಿಧ ಅಂಗಗಳಿಗೆ ವಿಧಿಸಲಾದ ಪಾತ್ರವನ್ನು ಅದು ಹೀಗೆ ನಿರೂಪಿಸಿತ್ತು.

ಎ. ರಾಜಪುರುಷರು ಇವುಗಳನ್ನು ರಕ್ಷಿಸಬೇಕು:

೧. ಯಾರೂ ವಾಸವಾಗಿಲ್ಲದ ಮನೆಗಳು

೨. ರಾಜನು ಕೊಟ್ಟಿರುವ ದಾನಗಳು

೩. ರಾಜನ ಆದೇಶ

೪. ಸಜ್ಜನರ (?) ಅಧಿಕೃತ ಸಾಕ್ಷ್ಯ

೫. ಮರ್ಯಾದೆ

೬. ತಾಮ್ರಫಲಕ ಶಾಸನಗಳು

೭. ಆಸ್ತಿಯ ನಿರಂತರ ಅನುಭೋಗ ಮತ್ತು

೮. ಐದು ಧರ್ಮಗಳು.

ಬಿ. ಮಹಾಜನರ ಅಥವಾ ಪೌರ ಸ್ವಯಮಾಡಳಿತದ ನಗರ ಮರ್ಯಾದೆಯಲ್ಲಿ ತೆರಿಗೆ ಮತ್ತು ದಂಡಗಳನ್ನು ವಿಧಿಸುವ ಅಧಿಕಾರದ ಮೂಲಕ ಆಡಳಿತದ ಹಕ್ಕು ಚಲಾಯಿಸುವುದು ಸೇರಿತ್ತು. ಅವುಗಳನ್ನು ಕಾರ್ತೀಕಮಾಸದಲ್ಲಿ ಗಿಲ್ಡ್‌ಗೆ ಪಾವತಿ ಮಾಡಿಬಿಡಬೇಕಾಗಿತ್ತು.

ಸಿ. ಆಚಾರವ್ಯವಸ್ಥೆಯ ಮೂರನೇ ಭಾಗವು ನಗರದ ಪಂಡಿಗಳು, ಸೆಟ್ಟಿಗಳು ಮೊದಲಾದವರ ಹಾಗೂ ಇತರ ವಣಿಕ ಸಂಘಗಳ ಆಡಳಿತ ನಿರ್ವಹಣೆಯನ್ನು ಒಳಗೊಂಡಿತ್ತು.

ಡಿ. ನಗರದಲ್ಲಿ ೩೦೦ ಕುಟುಂಬಗಳು ಅಥವಾ ಒಕ್ಕಲು ಇದ್ದಂತೆ ತೋರುತ್ತದೆ.

ಐಹೊಳೆಯ ಐನೂರ್ವರ ಸುಪ್ರಸಿದ್ದ ಗಿಲ್ಡಿಗೂ ಪುಲಿಗೆರೆಯಂಥದೇ ರಾಜ್ಯಾಂಗವಿದ್ದಿತು. ಇಮ್ಮಡಿ ವಿಕ್ರಮಾದಿತ್ಯನ ಆಡಳಿತ ಕಾಲಕ್ಕೆ ಸೇರಿದ ಒಂದು ಶಾಸನವು ಅಲ್ಲಿಯ ಮಹಾಜನರು ಮತ್ತು ನಗರಗಳನ್ನು ಉಲ್ಲೇಖಿಸುತ್ತದೆ. ವರ್ಷದ ನಮೂದಿಲ್ಲದ ಅದೇ ಸ್ಥಳದ ಇನ್ನೊಂದು ಶಾಸನವು ಐನೂರುಜನ ಮಹಾಜನರು (ಇಲ್ಲಿ ಚತುರ್ವೇದಿಗಳೆಂದು ವರ್ಣಿಸಿದೆ), ಎಂಟು ನಗರರು, ಮತ್ತು ನೂರಾ ಇಪ್ಪತ್ತು ಊರುಗಳು ಒಟ್ಟಾಗಿ ದುರ್ಗಾಭಗವತಿಗೆ ಕಾಣಿಕೆಯನ್ನು ಅರ್ಪಿಸಿದುದನ್ನು ದಾಖಲಿಸಿದೆ. ಈ ಎರಡು ಶಾಸನಗಳಿಂದ ಮಹಾಜನರು, ನಗರರು ಮತ್ತು ಊರು ಐಹೊಳೆಯ ಆಡಳಿತವನ್ನು ನಿರ್ವಹಿಸುತ್ತಿದ್ದರು ಎಂಬುದು ವೇದ್ಯವಾಗುತ್ತದೆ.

ಹದಿನೆಂಟು ಪ್ರಕೃತಿಗಳನ್ನು ಕುರಿತು ಒಂದೆರಡು ಮಾತು. ಲಕ್ಷ್ಮೇಶ್ವರ ಶಾಸನವು ಮಹಾಜನರು ಮತ್ತು ನಗರದ ಜೊತೆಗೆ ಹದಿನೆಂಟು ಪ್ರಕೃತಿಗಳನ್ನೂ ಹೇಳುತ್ತದೆ. ಜನತೆಯನ್ನು ಹದಿನೆಂಟು ವರ್ಗಗಳನ್ನಾಗಿ ವಿಭಾಗಿಸಿದ್ದು ತಿಳಿದದ್ದೇ. ಶಾಸನಗಳಲ್ಲಿ ಅಷ್ಟಾದಶ ಜಾತಿಗಳು ಮತ್ತು ಹದಿನೆಂಟು ಸಮಯಗಳನ್ನು ಉಲ್ಲೇಖಿಸಲಾಗುತ್ತದೆ. ಬರ್ನೆಟ್ ಈ ಪ್ರಕೃತಿ ಎಂಬ ಪದವನ್ನು ಜನರ ವರ್ಗಕ್ಕೆ ಸಂವಾದಿಯೆಂದು ಹೇಳಿದನು. ಅಂದರೆ ಒಂದು ಘಟಕದ ಸಮಸ್ತ ಜನತೆ ಈ ಹದಿನೆಂಟು ಜಾತಿಯ ಜನರಿಂದ ಕೂಡಿತ್ತು ಎಂದಾಯಿತು.

ಆಡಳಿತದ ಅಧಿಕಾರಿಗಳು

ಚಾಲುಕ್ಯ ಸಾಮ್ರಾಜ್ಯವು ಬಹಳ ವಿಸ್ತಾರವಾಗಿತ್ತು. ಮೇಲಿನಿಂದ ಕೆಳಗಿನವರೆಗೆ ವಿವಿಧ ಹಂತಗಳಲ್ಲಿ ಕೆಲಸ ಮಾಡುತ್ತಿದ್ದ ಅನೇಕ ಅಧಿಕಾರಿಗಳ ನೆರವಿನಿಂದ ಮಾತ್ರವೇ ಅದರ ಆಡಳಿತವು ಸಾಧ್ಯವಾಗುತ್ತಿತ್ತು. ರಾಜನ ಕಡೆಯ ಅಧಿಕಾರಿಗಳಿಗೆ ರಾಜಪುರುಷರು ಎಂದು ಹೆಸರು. ಕೆಲವರು ದಾನಗಳ ಮಾಹಿತಿ ಕೊಡುತ್ತಿದ್ದವರು, ಕೆಲವರು ರಾಜಾಜ್ಞೆಗಳ ಕರಡು ಸಿದ್ಧಪಡಿಸುವವರು, ಬರೆಯುವವರು ಅಥವಾ ಸಂದೇಶವಾಹಕರು. ವಿಷ್ಣುವರ್ಧನನ ಸತಾರ ದಾನಶಾಸನವನ್ನು ವಿಷಯಪತಿಗಳಿಗೆ, ಸಾಮಂತ, ಗ್ರಾಮಭೋಗಿಕ ಮತ್ತು ಮಹತ್ತರರನ್ನು ಸಂಬೋಧಿಸಿ ರಚಿಸಲಾಗಿದೆ. ಮಾನರ್ ಫಲಕಗಳಲ್ಲಿ ವಿಷಯಪತಿ, ಭೋಗಿಕರು, ರಾಷ್ಟ್ರ, ಗ್ರಾಮಕೂಟ, ದೇಸಿವ್ವಕರು ಮತ್ತು ಮಹತ್ತರರು ಉದ್ದೇಶಿತರಾಗಿದ್ದಾರೆ. ಅದನ್ನು ಬರೆದವನು ದಿವಿರಪತಿ ಸ್ಥಾನದಲ್ಲಿದ್ದ ಭಟ್ಟರುದ್ರನಾಗ. ಅವನು ಅಕ್ಷಪಟಲಾಧಿಕಾರಣಾಧಿಕೃತ ಮತ್ತು ಮಹಾಸಂಧಿವಿಗ್ರಹಾಧ್ಯಕ್ಷ ಪದವಿಗಳನ್ನು ಹೊತ್ತಿದ್ದನು. ಸತ್ಯಾಶ್ರಯ ಶಿಲಾದಿತ್ಯನ ನವಸಾರಿ ಫಲಕಗಳು ಅಧಿಕಾರಿಗಳ ಸಮೂಹಕ್ಕೆ ವಾಸವಕಾಯುಕ್ತ ಮತ್ತು ವಿನಿಯುಕ್ತ ಎಂಬ ಎರಡನ್ನು ಕೂಡಿಸುತ್ತವೆ. ಇತರ ಕೆಲವು ಶಾಸನಗಳಲ್ಲಿ ಬಲಾಧಿಕೃತ, ಮಹಾಬಲಾಧಿಕೃತ, ದೂತಕ, ಗಾಮುಂಡ, ಲೇಖಕ ಮತ್ತು ಕರಣರನ್ನು ಉಲ್ಲೇಖಿಸುತ್ತವೆ. ನವಸಾರಿ ಶಾಸನದಲ್ಲಿ ಭೋಗಪತಿ ಎಂಬ ಅಧಿಕಾರಿಯು ಕಾಣಿಸಿಕೊಳ್ಳುತ್ತಾೆ. ಸತ್ಯಾಶ್ರಯ ಧ್ರುವರಾಜ ಇಂದ್ರವರ್ಮನ ಗೋವಾ ಶಾಸನ ಅವನನ್ನು ನಾಲ್ಕು ವಿಷಯ ಮಂಡಲಗಳ ಅಧಿಪತಿ ಎಂದು ಕರೆಯುವುದರ ಜೊತೆಗೆ ಶಾಸನದ ಕರಡು ಸಿದ್ಧಪಡಿಸಿದ ದುರ್ಗಪತಿ ಎಂಬ ಅಧಿಕಾರಿಯನ್ನು ಉಲ್ಲೇಖಿಸುತ್ತದೆ. ಯುವರಾಜ ಇಮ್ಮಡಿ ವಿಕ್ರಮಾದಿತ್ಯನ ಲಕ್ಷ್ಮೇಶ್ವರ ಶಾಸನವು ದೇಶಾಧಿಪತಿ ಎಂಬ ಅಧಿಕಾರಿ ಯನ್ನು ಉಲ್ಲೇಖಿಸುತ್ತದೆ. ಶಾಸನಗಳಿಂದ ಸಂಗ್ರಹಿಸಿದಂತೆ ಈ ಕೆಲವು ಅಧಿಕಾರಿಗಳ ವಿವರಗಳು ಹೀಗಿವೆ:

ದಿವಿರಪತಿ

ವಿನಯಾದಿತ್ಯ ಮಂಗಳರಸನ ಮಾನರ್ ಫಲಕಗಳು ದಿವಿರಪತಿ ಎಂಬ ಅಧಿಕಾರಿಯನ್ನು ಹೆಸರಿಸುತ್ತವೆ. ದಾನದ ಪಠ್ಯವನ್ನು ರಚಿಸಿದ ಭಟ್ಟರುದ್ರನಾಗನು ದಿವಿರಪತಿ, ಅಕ್ಷಪಟಲಾಧಿಕರಣಾಧಿಕೃತ ಹಾಗೂ ಮಹಾಸಂಧಿವಿಗ್ರಹಾಧ್ಯಕ್ಷ ಎಂಬ ಹುದ್ದೆಗಳನ್ನು ಪಡೆದಿದ್ದನು. ಅವನನ್ನು ನಿತ್ಯವಂದ್ಯ ಪರಮೇಶ್ವರ ಎಂದೂ ರ್ಣಿಸಲಾಗಿದೆ. ದಿವಿರಪತಿಯು ದಾಖಲೆಗಳನ್ನು ಇಡುವವರ ಮುಖ್ಯಸ್ಥ. ದಿವಿರಪತಿಯು ಸಚಿವಾಲಯದ ಮುಖ್ಯಸ್ಥನಾಗಿದ್ದನು ಎಂದು ಕೃಷ್ಣದೇವ ಸೂಚಿಸಿದರು.

ಅಕ್ಷಪಟಲಾಧಿಕರಣಾಧಿಕೃತ

ಪ್ರಾಚೀನ ಭಾರತದಲ್ಲಿ ಈ ಅಧಿಕಾರಿಯು ಪ್ರಸಿದ್ಧನಾಗಿದ್ದನು. ಮಿರಾಶಿಯವರ ಪ್ರಕಾರ ಮಹಾಕ್ಷಪಟಲಿಕನು ದಾಖಲೆಗಳ ವಿಭಾಗದ ಮುಖ್ಯಸ್ಥನಾಗಿದ್ದನು.

ದೇಶಾಧಿಪತಿ

ಇಮ್ಮಡಿ ವಿಕ್ರಮಾದಿತ್ಯನ ಲಕ್ಷ್ಮೇಶ್ವರ ಶಾಸನದಲ್ಲಿ ಈ ಅಧಿಕಾರಿಯನ್ನು ಉಲ್ಲೇಖಿಸಿದೆ. ಹೆಸರೇ ಸೂಚಿಸುವಂತೆ ಇವನು ರಾಜ್ಯದ ದೇಶ ಘಟಕದ ಮುಖ್ಯಸ್ಥನಾಗಿದ್ದನು. ಕಾಲಕಾಲಕ್ಕೆ ತೆರಿಗೆಯನ್ನು ದೇಶಾಧಿಪತಿಗೆ ಸಲ್ಲಿಸತಕ್ಕದ್ದು ಎಂದು ಶಾಸನವು ಹೇಳುತ್ತದೆ. ಇನ್ನೊಂದು ಶಾಸನದಲ್ಲಿ ಸತ್ಯಾಶ್ರಯ ಧ್ರುವರಾಜ ಇಂದ್ರವರ್ಮನು ನಾಲ್ಕು ವಿಷಯ ಮಂಡಲಗಳ ಅಧಿಪತಿಯಾಗಿದ್ದನೆಂದು ಹೇಳಿದೆ. ಅವನು ತನಗೆ ಸೇರಿದ ಪ್ರದೇಶದ ಕಾನೂನು-ಸುವ್ಯವಸ್ಥೆಯ ಹೊಣೆಗಾರಿಕೆ ಹೊತ್ತಿದ್ದುದಲ್ಲದೆ ಅಲ್ಲಿ ತೆರಿಗೆ ಸಂಗ್ರಹಿಸುವ ಜವಾಬ್ದಾರಿಯೂ ಅವನಿಗಿತ್ತು.

ವಿಷಯಪತಿ

ಸತಾರಾ, ಮಾನರ್ ಮತ್ತು ನವಸಾರಿ ಹಾಗೂ ಇತರ ಕೆಲವು ಚಾಲುಕ್ಯ ಶಾಸನಗಳಲ್ಲಿ ಈ ಅಧಿಕಾರಿಯನ್ನು ಉಲ್ಲೇಖಿಸಲಾಗಿದೆ. ರಾಜನು ಮಾಡುವ ದಾನಗಳನ್ನು ಯಾರಿಗೆ ಉದ್ದೇಶಿಸಿ ಹೇಳುತ್ತಿದ್ದರೋ ಆ ಅಧಿಕಾರಿಗಳ ಪಟ್ಟಿಯಲ್ಲಿ ವಿಷಯಪತಿಯನ್ನು ಸೇರಿಸಿದೆ. ಅವನು ವಿಷಯ ಎಂಬ ಆಡಳಿತೀಯ ಘಟಕದ ಮುಖ್ಯಸ್ಥ. ಶಾಸನಗಳಲ್ಲಿ ಭೋಗಿಕ, ಪರಭೋಗಿಕ, ರಾಷ್ಟ್ರಗ್ರಾಮಕೂಟ ಪಾಲನೆ ಹಾಗೂ ತೆರಿಗೆಗಳ ವಸೂಲಾತಿ ಇವನ ಹೊಣೆಯಾಗಿತ್ತು. ಬಹುಶಃ ಇವನು ಇಂದಿನ ಜಿಲ್ಲಾ ಅಧಿಕಾರಿಗೆ ಸಮನಾಗಿದ್ದನೆಂದು ತೋರುತ್ತದೆ.

ಭೋಗಿಕ

ಇಮ್ಮಡಿ ಪುಲಕೇಶಿಯ ಲೋಹನಾರ್ ಫಲಕಗಳು, ಧಾರಾಶ್ರಯ ಜಯಸಿಂಹನ ನಾಸಿಕ ಫಲಕಗಳು, ವಿನಯಾದಿತ್ಯ ಮಂಗಳರಸನ ಮಾನರ್ ಫಲಕಗಳು ಈ ಅಧಿಕಾರಿಯನ್ನು ಉಲ್ಲೇಖಿಸುತ್ತವೆ. ಇವನನ್ನು ಭೋಗಪತಿ ಎಂದೂ ಕರೆಯಲಾಗಿದೆ. ಭೋಗಿಕ ಅಥವಾ ಭೋಗಪತಿ ಎಂಬ ಹೆಸರೇ ಅವನು ಭೋಗ ಎಂಬ ಪ್ರಾದೇಶಿಕ ಕಟಕದ ಮುಖ್ಯಸ್ಥನೆಂಬುದನ್ನು ಸೂಚಿಸುತ್ತದೆ. ಇದು ಇಂದಿನ ತಾಲೂಕಿಗೆ ಸಮ. ಕೆಲವು ಶಾಸನಗಳು ಭೋಗ ಎಂಬ ಒಂದು ತೆರಿಗೆಯನ್ನು ಉಲ್ಲೇಖಿಸುತ್ತವೆ. ಬಹುಶಃ ಈ ಅಧಿಕಾರಿಯು ತನ್ನ ಭೋಗದ ಸುವ್ಯವಸ್ಥೆಯನ್ನು ನೋಡಿಕೊಳ್ಳುತ್ತಿದ್ದುದಲ್ಲದೆ ಅಲ್ಲಿಯ ಭೋಗವೆಂಬ ತೆರಿಗೆಯನ್ನು ಸಂಗ್ರಹಿಸುತ್ತಿದ್ದನು ಎಂದು ತೋರುತ್ತದೆ.

ರಾಷ್ಟ್ರಕೂಟ

ಈ ಅಧಿಕಾರಿಯು ರಾಷ್ಟ್ರದ ಅಥವಾ ವಿಷಯದ ಒಂದು ಪ್ರಾಂತದ ಮುಖ್ಯಸ್ಥನಾಗಿದ್ದನು ಎಂದು ಫ್ಲೀಟ್ ಸೂಚಿಸಿದರು. ಚಾಲುಕ್ಯ ಶಾಸನಗಳಲ್ಲಿ ಈ ಹೆಸರು ಗ್ರಾಮಕೂಟರೊಂದಿಗೆ ಅಂದರೆ, ಹಳ್ಳಿಯ ಅಧಿಕಾರಿಗಳೊಂದಿಗೆ ಕಂಡುಬರುತ್ತದೆ. ಇವನು ಅಂತಹ ಉನ್ನತ ಮಟ್ಟದ ಅಧಿಕಾರಿಯಾಗಿದ್ದಂತೆ ತೋರುವುದಿಲ್ಲ.

ಗ್ರಾಮಕೂಟ

ರಾಜನ ದಾನಗಳನ್ನು ತಿಳಿಸಬೇಕಾದವರ ಪಟ್ಟಿಯಲ್ಲಿ ಈ ಅಧಿಕಾರಿಯೂ ಇದ್ದಾನೆ. ಪದವೇ ಸೂಚಿಸುವಂತೆ ಅವನು ಗ್ರಾಮದ ಆಡಳಿತದ ಹೊಣೆಯನ್ನು ಹೊತ್ತಿದ್ದವನು. ಗ್ರಾಮಕೂಟನು ಹಳ್ಳಿಯ ಮುಖ್ಯಸ್ಥನಾಗಿದ್ದನೆಂದು ಘೋಷಾಲ್ ಅಭಿಪ್ರಾಯ ಪಡುತ್ತಾರೆ. ಬಹುಶಃ ದೊಡ್ಡ ಹಳ್ಳಿಗಳಿಗೆ ಇವನು ಮುಖ್ಯಸ್ಥನಾಗಿರಬಹುದು.

ಇವನು ಅತ್ಯಂತ ಕೆಳಗಿನ ಆಡಳಿತೀಯ ಘಟಕದ ಆಡಳಿತವನ್ನು ನೋಡಿಕೊಳ್ಳುತ್ತಿದ್ದನು. ಇವನು ಹಳ್ಳಿಯ ಕಾನೂನು ಮತ್ತು ಸುವ್ಯವಸ್ಥೆಯ ಪಾಲನೆಗೆ ಹೊಣೆಗಾರನಾಗಿದ್ದನು. ಇವನು ಗ್ರಾಮಸಭೆಗೂ, ರಾಜನ ಕಡೆಯ ಅಧಿಕಾರಿಗಳಿಗೂ ನಡುವೆ ಕೊಂಡಿಯಾಗಿದ್ದನು. ರಾಜನ ಅಧಿಕಾರಿಯು ಗಾವುಂಡನನ್ನು ನೇಮಿಸುತ್ತಿದ್ದನು.

ಕರಣ

ಅಡೂರು ಶಾಸನದಲ್ಲಿ ಗಾವುಂಡರ ಜೊತೆಯಲ್ಲಿ ಕರಣರು ಸೇರಿಕೊಂಡು ಜಿನೇಂದ್ರ ದೇವಾಲಯಕ್ಕೆ ಭೂಮಿಯನ್ನು ದಾನ ಮಾಡುವ ಸಲುವಾಗಿ ಅನುಮತಿ ಕೊಡಬೇಕೆಂದು ಮಾಧವಪಟ್ಟಿಯರಸನನ್ನು ಕೋರಿದರು ಎಂದು ಹೇಳಿದೆ. ಕರಣನು ಹಳ್ಳಿಯ ಲೆಕ್ಕಪತ್ರಗಳನ್ನು ಬರೆಯುವವನು. ಶಾಸನಗಳಿಂದ ತಿಳಿದುಬರುವಂತೆ, ಕರಣರಿಗೆ ವಿಧಿಸಿದ್ದ ಮುಖ್ಯಕಾರ್ಯ ಸರಕಾರದ ಹಣಕಾಸನ್ನು ನೋಡಿಕೊಳ್ಳುವುದು. ಹೀಗೆ ಚಾಲುಕ್ಯರ ಆಳಿಕೆಯಲ್ಲಿ ಸ್ಥಳೀಯ ಘಟಕಗಳ ಆದಾಯ ವೆಚ್ಚವನ್ನು ನೋಡಿಕೊಳ್ಳುತ್ತಿದ್ದರು.

ಬಲಾಧಿಕೃತ

ಶ್ರಿಯಾಶ್ರಯ ಶಿಲಾದಿತ್ಯನ ಸೂರತ್ ಫಲಕಗಳು ಮತ್ತು ಪುಲಕೇಶಿ ರಾಜನ ನವಸಾರಿ ಫಲಕಗಳು ಬಲಾಧಿಕೃತ ಎಂಬ ಈ ಅಧಿಕಾರಿಯ್ನು ಉಲ್ಲೇಖಿಸುತ್ತವೆ. ಮಹಾಸಂಧಿವಿಗ್ರಹಿಕ ಬಪ್ಪಭಟ್ಟಿಯು ಮಹಾಬಲಾಧಿಕೃತ ಸ್ಥಾನವನ್ನೂ ಪಡೆದಿದ್ದವನು, ಶಾಸನವನ್ನೂ ಬರೆದನು ಎಂದು ನವಸಾರಿ ಫಲಕಗಳು ದಾಖಲಿಸುತ್ತವೆ. ಸೂರತ್ ಫಲಕಗಳಲ್ಲಿ ಅಮ್ಮಗೋಪ ಮತ್ತು ಚೆಲ್ಲ ಎಂಬ ಇಬ್ಬರು ಬಲಾಧಿಕೃತರ ಉಲ್ಲೇಖವಿದೆ. ಎರಡನೆಯವನನ್ನು ದೂತಕ ಎಂದೂ ವರ್ಣಿಸಲಾಗಿದೆ. ಈ ಅಧಿಕಾರಿಯನ್ನು ಹಲವಾರು ಶಾಸನಗಳಲ್ಲೂ ಸಾಹಿತ್ಯ ಕೃತಿಗಳಲ್ಲೂ ಉಲ್ಲೇಖಿಸಲಾಗಿದೆ. ಅವನೊಬ್ಬ ಸೈನ್ಯಾಧಿಕಾರಿಯಾಗಿದ್ದ. ಆಡಳಿತದ ಕೆಲವು ಪೌರ ಹೊಣೆಗಾರಿಕೆಗಳನ್ನೂ ಅವನಿಗೆ ವಹಿಸಲಾಗಿದ್ದಿತು ಎಂಬುದು ಶಾಸನಗಳಿಂದ ಸೂಚಿತವಾಗುತ್ತದೆ.

ದೂತಕ

ಶಾಸನಗಳಲ್ಲಿ ಈ ಅಧಿಕಾರಿಯ ಉಲ್ಲೇಖವಿದೆ. ಇವನು ಒಬ್ಬ ಸಂದೇಶವಾಹಕ ಅಥವಾ ರಾಯಭಾರಿ. ರಾಜನ ದಾನಗಳ ವಿಷಯವನ್ನು ಸಂಬಂಧಿಸಿದ ಎಲ್ಲರಿಗೂ ತಿಳಿಯಪಡಿಸುವುದು ಇವನ ಜವಾಬ್ದಾರಿಯಾಗಿತ್ತು. ಸಾಮಾನ್ಯವಾಗಿ ದೂತಕನ ಕರ್ತವ್ಯವನ್ನು ಬಲಾಧಿಕೃತನಿಗೆ ಅಥವಾ ಸಂಧಿವಿಗ್ರಹಕನಿಗೆ ಕೊಡಲಾಗುತ್ತಿತ್ತು. ಇದು ಅವನ ಹುದ್ದೆಯ ಪ್ರಾಮುಖ್ಯವನ್ನು ಸೂಚಿಸುತ್ತದೆ. ಅವನ ಕರ್ತವ್ಯ ವಾಸ್ತವವಾದ ದಾನದ ಸನ್ನದನ್ನು ಕೊಂಡೊಯ್ದು ಕೊಡುವುದಾಗಿರಲಿಲ್ಲ. ಅದಕ್ಕೆ ಬದಲು ರಾಜನ ಮಂಜೂರಾತಿಯನ್ನೂ ಆದೇಶವನ್ನೂ ಸ್ಥಳೀಯ ಅಧಿಕಾರಿಗಳಿಗೆ ಅವನು ಒಯ್ದು ತಲುಪಿಸುತ್ತಿದ್ದನು; ಸನ್ನದನ್ನು ಸಂಬಂಧಿತ ಗ್ರಾಹಕನಿಗೆ ಕೊಡುವುದು ಅವರ ಕೆಲಸವಾಗಿತ್ತು ಎಂದು ಫ್ಲೀಟ್ ಅಭಿಪ್ರಾಯ ಪಡುತ್ತಾರೆ.

ದುರ್ಗಪತಿ

ಇವನು ಒಂದು ದುರ್ಗದ ಅಥವಾ ಕೋಟೆಯ ಮುಖ್ಯಸ್ಥ. ಸತ್ಯಾಶ್ರಯ ಧ್ರುವರಾಜ ಇಂದ್ರವರ್ಮನ ಗೋವಾ ಶಾಸನವು ವಿಜಯರಾಜ ಎಂಬ ದುರ್ಗಪತಿಯನ್ನು ಉಲ್ಲೇಖಿಸುತ್ತದೆ. ಚಾಲುಕ್ಯ ಶಾಸನಗಳು ಹಲವು ಕೋಟೆಗಳ ವಿವರಗಳನ್ನು ಕೊಡುತ್ತವೆ. ರಾಜಧಾನಿ ಬಾದಾಮಿಗೆ ಕೋಟೆಯನ್ನು ನಿರ್ಮಿಸಿದುದನ್ನೂ ಹೇಳುತ್ತದೆ. ಇವು ಚಾಲುಕ್ಯ ಸೈನ್ಯದ ಭದ್ರ ನೆಲೆಗಳಾಗಿದ್ದವು. ದುರ್ಗಪತಿಯು ಕೋಟೆಯ ಆಡಳಿತಾಧಿಕಾರಿಯಾಗಿದ್ದನು.

ಚಟರು ಮತ್ತು ಭಟರು ದಾನ ಮಾಡಿರುವ ಭೂಮಿಗೆ ಚಟರು ಮತ್ತು ಭಟರು ಭೇಟಿ ನೀಡಬಾರದು ಎಂದು ಶಾಸನಗಳು ಹೇಳುತ್ತವೆ. ಭಟ ಒಬ್ಬ ಯೋಧ, ಚಟ ಬಹುಶಃ ಪೊಲೀಸ್ ಅಧಿಕಾರಿಯಿರಬಹುದು. ಈ ಪದಗಳು ಸೈನ್ಯಗಳನ್ನು ಸೂಚಿಸುತ್ತವೆ ಎಂದು ಕೆಲವು ವಿದ್ವಾಂಸರೂ ಕ್ರಮವಾಗಿ ದಾಖಲಾದ ಮತ್ತು ಕ್ರಮವಿಲ್ಲದ ಯೋಧರು ಎಂದು ಇತರ ಕೆಲವರೂ ಅಭಿಪ್ರಾಯ ಪಡುತ್ತಾರೆ. ಅವರು ಪೊಲೀಸ್ ದಳದ ಸಾಮಾನ್ಯ ಸದಸ್ಯರು. ಸಮಾಜದಲ್ಲಿರುವ ರೂಢಿಯ ಅಪರಾಧಿಗಳ ಮೇಲೆ ಕಣ್ಣಿಟ್ಟು ಕಾಯುವುದು ಅವರ ಕರ್ತವ್ಯಗಳಲ್ಲಿ ಸೇರಿತ್ತು.

ನ್ಯಾಯಾಡಳಿತ

ದೇಶದ ಬೇರೆ ಕಡೆಗಳಲ್ಲಿನಂತೆಯೇ ಚಾಲುಕ್ಯ ಚಕ್ರವರ್ತಿಯು ಸರ್ವೋನ್ನತ ನ್ಯಾಯ ಪೀಠವಾಗಿದ್ದನು. ಅವನು ಸ್ಮೃತಿಗಳಲ್ಲೂ ಧರ್ಮಶಾಸ್ತ್ರದಲ್ಲೂ ಪರಿಣತನಾಗಿದ್ದನು. ನ್ಯಾಯವನ್ನು ವಿತರಿಸುವುದರಲ್ಲಿ ಅವನಿಗೆ ಆಡಳಿತೀಯ ಅಧಿಕಾರಿಗಳು ಸಹಾಯ ಮಾಡುತ್ತಿದ್ದರು. ಸಿವಿಲ್ ವಿಚಾರಗಳಲ್ಲಿ ಸರ್ವೋನ್ನತ ಮೇಲ್ಮನವಿಯನ್ನು ಅವನು ತೀರ್ಮಾನಿಸುತ್ತಿದ್ದನು. ಕೇಂದ್ರದಲ್ಲಿ ನ್ಯಾಯಾಲಯವಿದ್ದುದರ ಜೊತೆಗೆ ಭೋಗ, ವಿಷಯ, ದೇಶ ಮೊದಲಾದ ಹಲವು ಆಡಳಿತೀಯ ಘಟಕಗಳಲ್ಲಿ ನ್ಯಾಯಾಲಯಗಳಿದ್ದವು. ಈ ವಿಭಾಗಗಳ ಆಡಳಿತ ಮುಖ್ಯಸ್ಥರೇ ಅಲ್ಲಲ್ಲಿನ ನ್ಯಾಯಾಧಿಕಾರಿಗಳೂ ಆಗಿರುತ್ತಿದ್ದರು.

ಚಾಲುಕ್ಯರ ಸಾಮಂತನೊಬ್ಬನ ಒಂದು ಶಾಸನವು ಕೆಲವು ಅಪರಾಧಗಳನ್ನು ಉಲ್ಲೇಖಿಸಿ ಅವುಗಳಿಗೆ ಶಿಕ್ಷೆಯನ್ನು ವಿಧಿಸುತ್ತದೆ. ವ್ಯಾಜ್ಯಗಳನ್ನು ಪರಿಹರಿಸುವಲ್ಲಿ ಹಳ್ಳಿಯ ಮತ್ತು ನಗರಗಳ ಹಿರಿಯರ ಸಹಾಯವನ್ನು ನ್ಯಾಯಾಧಿಕಾರಿಗಳು ಪಡೆಯುತ್ತಿದ್ದರು. ಚಾಲುಕ್ಯ ಶಾಸನಗಳು ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ಕೆಲವು ಅಪರಾಧಿಗಳಿಗೆ ಜುಲ್ಮಾನೆಯನ್ನು ವಿಧಿಸುತ್ತವೆ.

ಈ ವಿಚಾರಣೆಗಳು ಮತ್ತು ದಂಡನೆಗಳ ಉದ್ದೇಶ, ಅವು ಮರುಕಳಿಸದಂತೆ ತಡೆಯುವುದು ಮತ್ತು ಮುಯ್ಯಿಗೆ ಮುಯ್ಯಿ ರೂಪದ ಶಿಕ್ಷೆ ವಿಧಿಸಿ ಇತರರಲ್ಲಿ ಅಪರಾಧ ಪ್ರವೃತ್ತಿ ಬೆಳೆಯದಂತೆ ಮಾಡುವುದು. ಇಮ್ಮಡಿ ವಿಕ್ರಮಾದಿತ್ಯನ ಲಕ್ಷ್ಮೇಶ್ವರ ಶಾಸನದಲ್ಲಿ ಕಳವು ಮತ್ತು ಇತರ ಹತ್ತು ಅಪರಾಧಗಳಿಗೆ ದಂಡನೆ ವಿಧಿಸುವುದನ್ನು ಉಲ್ಲೇಖಿಸಲಾಗಿದೆ. ಸಾಮಂತ ಭೋಗಶಕ್ತಿಯ ಅಂಜನೇರಿ ಫಲಕಗಳು, ಅವಿವಾಹಿತೆಯಾದ ಹೆಂಗಸಿನ ಮೇಲೆ ಹಲ್ಲೆ ಮಾಡಿದ ಅಪರಾಧಕ್ಕಾಗಿ ೧೦೮ ರೂಪಕಗಳನ್ನು ಜುಲ್ಮಾನೆಯಾಗಿ ವಿಧಿಸುತ್ತದೆ. ವ್ಯಭಿಚಾರಕ್ಕೆ ೮೦ ರೂಪಕಗಳು. ತೀವ್ರವಾಗಿ ಗಾಯಗೊಳಿಸಿದ್ದಕ್ಕೆ ೧೬ ರೂಪಕಗಳು. ತಲೆಗೆ ಸಣ್ಣಗಾಯ ಮಾಡಿದ್ದಕ್ಕೆ ೪ ರೂಕಗಳು ಜುಲ್ಮಾನೆಯನ್ನು ವಿಧಿಸಿದೆ. ನ್ಯಾಯ ವಿತರಣೆಯಲ್ಲಿ ಮೇಲಿನವನು-ಕೆಳಗಿನವನು ಎಂಬ ಭೇದವಿರಲಿಲ್ಲವೆನ್ನುವುದು ಗಮನಾರ್ಹ ವಿಷಯ. ಒಬ್ಬ ಕೂಲಿಕಾರ ಹೆಂಗಸಿನೊಂದಿಗೆ ಅಕ್ರಮ ಸಂಬಂಧ ನಡೆಸಿದ ಒಬ್ಬ ಶ್ರೀಮಂತ ವರ್ತಕನಿಗೆ ೧೦೮ ರೂಪಕಗಳ ಜುಲ್ಮಾನೆ ವಿಧಿಸಲಾಯಿತು.

ಅಲ್ಲದೆ ಅಪರಾಧಿಗಳನ್ನು ಬಹಿಷ್ಕರಿಸಿ ದೇಶದಿಂದ ಹೊರಗಟ್ಟುವುದು ಮತ್ತು ಅವರ ಆಸ್ತಿಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದು ಈ ಶಿಕ್ಷೆಗಳನ್ನೂ ವಿಧಿಸಲಾಗುತ್ತಿತ್ತೆಂದು ಶಾಸನಗಳು ಸೂಚಿಸುತ್ತವೆ. ಬಾದಾಮಿಯ ಒಂದು ಶಾಸನವು ಒಪ್ಪಂದದ ಉಲ್ಲಂಘನೆಗೆ ದಂಡವನ್ನು ಹೇಳುತ್ತದೆ. ವಾತಾಪಿಯ ಮಹಾಚತುರ್ವಿದ್ಯಾ ಸಮುದಾಯವು ಆ ಸ್ಥಳದ ಚರ್ಮಗಾರರ ಗಳಿಕೆಯನ್ನು ನಿಡಿಯಮಾರನೆಂಬ ಒಬ್ಬನಿಗೆ ಸಲ್ಲಬೇಕೆಂದು ನಿಗದಿಪಡಿಸಿತು. ಈ ಆದೇಶವನ್ನು ಉಲ್ಲಂಘಿಸಿದರೆ ದಂಡ ವಿಧಿಸುವುದಾಗಿ ಬೆದರಿಕೆ ಹಾಕಲಾಯಿತು.

ಹೀಗೆ ಚಾಲುಕ್ಯರ ಕಾಲದಲ್ಲಿ ರಾಜನೂ, ಅವನ ಅಧಿಕಾರಿಗಳೂ, ಇತರ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ರಾಜ್ಯಾದ್ಯಂತ ನ್ಯಾಯವಿತರಣೆ ಮಾಡುತ್ತಿದ್ದರು.