ಅನೇಕ ಅಂಶಗಳಲ್ಲಿ ಬಾದಾಮಿ ಚಾಲುಕ್ಯರ ಆಳ್ವಿಕೆಯು ಕರ್ನಾಟಕದ ಆಡಳಿತ ಇತಿಹಾಸದಲ್ಲಿ ಒಂದು ರಚನಾಕಾಲವಾಗಿತ್ತು. ಬಾದಾಮಿ ಚಾಲುಕ್ಯರ ಕೈಕೆಳಗೆ ಕೆಲಸ ಮಾಡುತ್ತಿದ್ದ ಆಡಳಿತ ವ್ಯವಸ್ಥೆಯನ್ನು ತೃಪ್ತಿಕರವಾಗಿ ಪುನರ್‌ನಿರ್ಮಿಸಬೇಕಾದರೆ, ಆ ಕಾಲದ ತಾಮ್ರ ಫಲಕಗಳನ್ನೂ ಕೆಲವು ಶಿಲಾಶಾಸನಗಳನ್ನೂ ಬಹುತೇಕ ಅವಲಂಬಿಸಬೇಕಾಗುತ್ತದೆ. ಚಾಲುಕ್ಯ ಶಾಸನಗಳಿಂದ ದೊರಕುವ ಕೆಲವು ವಿವರಗಳನ್ನು ಕರ್ನಾಟಕದಲ್ಲಿ ಆಳುತ್ತಿದ್ದ ಕೆಲವು ಸಮಕಾಲೀನ ರಾಜವಂಶಗಳಿಂದ ಸಂಗ್ರಹಿಸಿದ ವಿವರಣೆಗಳೊಂದಿಗೆ ಓದಬೇಕು. ಅಲ್ಲದೆ ಚಾಲುಕ್ಯರ ರಾಜ್ಯಕ್ಕೆ ಉತ್ತರಾಧಿಕಾರಿಗಳಾದುದು ಮಾತ್ರವಲ್ಲದೆ, ಅವರ ಆಡಳಿತ ವ್ಯವಸ್ಥೆಯನ್ನು ಹಾಗೆಯೇ ಉಳಿಸಿಕೊಂಡು ಬಂದ ರಾಷ್ಟ್ರಕೂಟ ಶಾಸನಗಳು ಆ ಕಾಲದ ರಾಜಕೀಯ ವ್ಯವಸ್ಥೆಗಳನ್ನು ಕುರಿತು ಸ್ವಾಗತಾರ್ಹವಾದ ಬೆಳಕು ಚೆಲ್ಲುತ್ತದೆ.

ರಾಜ್ಯನೀತಿಯನ್ನು ಕುರಿತು ಸ್ಮೃತಿಗಳು ಮತ್ತಿತರ ಗ್ರಂಥಗಳಲ್ಲಿ ವಿಧಿಸಿರುವ ಅಂಶಗಳಿಂದ ಚಾಲುಕ್ಯರು ಪ್ರಭಾವಿತರಾಗಿದ್ದುದು ಖಚಿತ. ಹಾಗಾಗಿ ಶಾಸನ ಮತ್ತು ಸಾಹಿತ್ಯಕ ಮೂಲಗಳು ಬಾದಾಮಿ ಚಾಲುಕ್ಯರ ಆಡಳಿತ ವ್ಯವಸ್ಥೆಯ ಮೇಲೆ ಗಣನೀಯವಾಗಿ ಬೆಳಕು ಬೀರುತ್ತವೆ.

ಆಡಳಿತ ವ್ಯವಸ್ಥೆಯು ರಾಜನ ಸುತ್ತ ತಿರುಗುತ್ತಿತ್ತು. ಆಡಳಿತದ ಶಿಖರವಾಗಿ ರಾಜನು ಯಶಸ್ವೀ ರಾಜ್ಯಾಡಳಿತಕ್ಕೆ ಮುಖ್ಯ ಹೊಣೆಗಾರನಾಗಿದ್ದನು. ಬೇರೆ ಮಾತುಗಳಲ್ಲಿ ಹೇಳುವುದಾದರೆ ರಾಜ್ಯದ ಒಳತಿಗಾಗಲಿ, ಕೆಡುಕಿಗಾಗಲಿ ಅವನು ಜವಾಬ್ದಾರನಾಗಿದ್ದನು. ಬಾದಾಮಿ ಚಾಲುಕ್ಯರ ಆಡಳಿತ ವ್ಯವಸ್ಥೆಯನ್ನು ಮೂರು ಮೂರು ಭಾಗಗಳಲ್ಲಿ ಪರಿಶೀಲಿಸುವುದು ಅನುಕೂಲಕರವಾಗಿರುತ್ತದೆ. ಅವು ಕೇಂದ್ರ ಸರಕಾರ, ಪ್ರಾಂತೀಯ ಸರಕಾರ ಮತ್ತು ಸ್ಥಳೀಯ ಸರಕಾರ.

ಕೇಂದ್ರ ಸರಕಾರ: ರಾಜತ್ವ

ಪ್ರಾಚೀನ ಭಾರತದ ರಾಜಕೀಯ ಚಿಂತಕರ ಪ್ರಕಾರ ರಾಜ್ಯದಲ್ಲಿ ಏಳು ಅಂಗಗಳು (ಸಂಪ್ತಾಂಗ): ಸ್ವಾಮಿ(ರಾಜ), ಅಮಾತ್ಯ(ಮಂತ್ರಿ), ರಾಷ್ಟ್ರ(ರಾಜ್ಯ), ದುರ್ಗ, ಕೋಶ, ಬಲ (ಸೈನ್ಯ) ಮತ್ತು ಮಿತ್ರ. ರಾಜನು ಮಿಕ್ಕ ಆರೂ ಅಂಗಗಳಿಂದ ತನ್ನ ಶಕ್ತಿಯನ್ನು ಗಳಿಸಿಕೊಂಡು ತಾನು ಅವರಲ್ಲಿ ಅತ್ಯುನ್ನತ ಸ್ಥಾನದಲ್ಲಿ ಪರಮಾಧಿಕಾರವನ್ನು ಹೊಂದಿ ಇರುತ್ತಿದ್ದನು. ಬಾದಾಮಿ ಚಾಲುಕ್ಯರ ಕಾಲದ ರಾಜತ್ವವೂ ಇದಕ್ಕೆ ಅನುಗುಣವಾಗಿಯೇ ಇದ್ದಿತು.

ಚಾಲುಕ್ಯರಲ್ಲಿ ರಾಜತ್ವವು ಒಟ್ಟಾರೆ ಆನುವಂಶಿಕವಾಗಿತ್ತು. ಉತ್ತರಾಧಿಕಾರವನ್ನು ನಿಯಂತ್ರಿಸುತ್ತಿದ್ದುದು ಪ್ರಾಚೀನ ಚಿಂತಕರು ವಿಧಿಸಿದಂತೆ ಜ್ಯೇಷ್ಠತ್ವ ನಿಯಮ. ಹಿರಿಯ ಮಗನು ಶಾಸ್ತ್ರಗಳನ್ನು ಅಧ್ಯಯನ ಮಾಡಿ ಶಸ್ತ್ರಗಳಲ್ಲಿ ತರಬೇತಿ ಪಡೆದು ತನ್ನ ತಂದೆಯ ಸ್ಥಾನದಲ್ಲಿ ರಾಜನಾಗಿ ಪಟ್ಟಕ್ಕೆ ಬರುತ್ತಿದ್ದನು. ಆದರೆ ಬಾದಾಮಿ ಚಾಲುಕ್ಯರ ಇತಿಹಾಸದಲ್ಲಿ ಈ ರೀಢಿಯನ್ನು ಅತಿಕ್ರಮಿಸಿದ ಕೆಲವು ಸಂದರ್ಭಗಳು ಕಂಡುಬರುತ್ತವೆ. ಒಂದನೇ ಕೀರ್ತಿವರ್ಮನಿಗೆ ಪಟ್ಟಕ್ಕೆ ಬರಲು ನ್ಯಾಯವಾದ ಹಕ್ಕುದಾರರಾಗಿದ್ದ ಮಕ್ಕಳಿದ್ದರೂ ಅವನ ನಂತರ ಅವನ ತಮ್ಮ ಮಂಗಳೇಶನು ರಾಜನಾದನು. ಇಮ್ಮಡಿ ಪುಲಕೇಶಿಯು ಪ್ರಾಪ್ತ ವಯಸ್ಕನಾದಾಗ ಸಿಂಹಾಸನವನ್ನು ಅವನಿಗೆ ಕೊಡಲು ಬಯಸಲಿಲ್ಲ. ಬಹುಶಃ ತನ್ನ ಮಗನನ್ನು ಮುಂದಿನ ರಾಜನನ್ನಾಗಿ ಮಾಡಲು ಅವನು ಇಚ್ಚಿಸಿದ್ದನೆಂದು ಕಾಣುತ್ತದೆ. ಆದ್ದರಿಂದ ಪುಲಕೇಶಿಯು ಯುದ್ಧ ಮಾಡಿ ಅವನನ್ನು ಪದಚ್ಯುತಿಗೊಳಿಸಿ ತಾನು ಸಿಂಹಾಸನವನ್ನೇರ ಬೇಕಾಯಿತು. ಮತ್ತೆ ಇಮ್ಮಡಿ ಪುಲಕೇಶಿ ಮೃತನಾದಾಗಲೂ ವಾರಸುದಾರಿಕೆಗೆ ಸಂಬಂಧಿಸಿದಂತೆ ಸ್ವಲ್ಪ ಗೊಂದಲವುಂಟಾಯಿತು.

ರಾಜಕುಮಾರನ ಶಿಕ್ಷಣ

ರಾಜ್ಯನೀತಿಯನ್ನು ಕುರಿತು ಪ್ರಾಚೀನ ಶಾಸ್ತ್ರಕಾರರು ಮತ್ತು ಚಿಂತಕರ ಪ್ರಕಾರ ಚಾಲುಕ್ಯರಾಜರು ರಾಜಕುಮಾರನಿಗೆ ವಿವಿಧ ಶಾಸ್ತ್ರಗಳಲ್ಲಿ ಶಿಕ್ಷಣವನ್ನು ಕೊಡಿಸುತ್ತಿದ್ದರು ಮತ್ತು ಯುದ್ಧಕಲೆಯಲ್ಲಿ ತರಬೇತಿ ಕೊಡುತ್ತಿದ್ದರು. ರಾಜಕುಮಾರನು ಶಾಸ್ತ್ರಗಳು, ಪುರಾಣಗಳು, ಕಾವ್ಯಗಳು, ರಾಜ್ಯನೀತಿ, ಧರ್ಮಶಾಸ್ತ್ರ ಮೊದಲಾದವುಗಳ ಜ್ಞಾನವನ್ನು ಪಡೆಯುವುದರ ಜೊತೆಗೆ ಯುದ್ಧಕಲೆಯಲ್ಲೂ ತರಬೇತಿ ಪಡೆಯಬೇಕಾಗಿತ್ತೆಂದು ಶಾಸನಗಳು ಸ್ಪಷ್ಟವಾಗಿ ನಿರೂಪಿಸುತ್ತವೆ. ಚಾಲುಕ್ಯ ರಾಜಕುಮಾರರಿಗೆ ಹೀಗೆ ಕ್ರಮಶಿಕ್ಷಣವು ದೊರಕುತ್ತಿದ್ದಿತು. ಅವರು ಮನುಸ್ಮೃತಿ, ಪುರಾಣಗಳು, ರಾಮಾಯಣ, ಮಹಾಭಾರತ ಮತ್ತು ಇತಿಹಾಸಗಳಲ್ಲಿ ಪರಿಣತರಾಗಿದ್ದರೆಂದು ಅನೇಕ ವೇಳೆ ಚಾಲುಕ್ಯ ಶಾಸನಗಳು ವರ್ಣಿಸುತ್ತವೆ. ಮಂಗಳೇಶನು ರಾಜಕಾರಣದಲ್ಲಿ ಬಹಳ ತಜ್ಞನಾಗಿದ್ದನೆಂದು ಮಹಾಕೂಟ ಸ್ತಂಭಶಾಸನವು ಕೊಂಡಾಡುತ್ತದೆ. ಇಮ್ಮಡಿ ಪುಲಕೇಶಿಯು ಧರ್ಮಶಾಸ್ತ್ರಗಳಲ್ಲಿ ತಜ್ಞನಾಗಿದ್ದನೆಂದು ಕೊಪ್ಪೂರು ಫಲಕವು ಹೇಳುತ್ತದೆ. ಅಲ್ಲದೆ ಹೈದರಾಬಾದು ತಾಮ್ರಫಲಕ ಶಾಸನದಲ್ಲಿ ಅವನನ್ನು ನಯ-ವಿನಯಗಳಿಂದ ಕೂಡಿದವನು ಎಂದು ಬಣ್ಣಿಸಿದೆ. ವಿನಯಾದಿತ್ಯ, ವಿಜಯಾದಿತ್ಯ ಮತ್ತು ಇಮ್ಮಡಿ ವಿಕ್ರಮಾದಿತ್ಯ ಆಳಿಕೆಯ ಕಾಲದ ಶಾಸನಗಳು ಅವನಿಗೆ ಪ್ರಜ್ಞ್ಯತಾ ನ್ಯಾಯಸ್ಯ (ರಾಜ್ಯನೀತಿಯಲ್ಲಿ ತಜ್ಞತೆ) ಎಂಬಂತಹ ಬಿರುದುಗಳನ್ನು ಕೊಡುತ್ತವೆ. ಖಡ್ಗ ಮಾತ್ರ ಶತಯಸ್ಯ ಎನ್ನುವುದು ಆಯುಧಗಳನ್ನು ಪ್ರಯೋಗಿಸುವುದರಲ್ಲಿದ್ದ ನೈಪುಣ್ಯವನ್ನು ಸೂಚಿಸುತ್ತದೆ. ಅಲ್ಲದೆ ಇಮ್ಮಡಿ ಕೀರ್ತಿವರ್ಮನ ಶಾಸನಗಳು, ಅವನ ಬಾಲ್ಯದಲ್ಲೇ ಶಾಸ್ತ್ರಗಳು ಮತ್ತು ಶಸ್ತ್ರಗಳಲ್ಲಿ ಶಿಕ್ಷಣವನ್ನು ಪಡೆದನೆಂದು ಹೇಳುತ್ತವೆ.

ಹೀಗೆ ಶಸ್ತ್ರಶಾಸ್ತ್ರ ಕೋವಿದನಾದ ರಾಜಕುಮಾರನನ್ನು ಯುವರಾಜನನ್ನಾಗಿ ನೇಮಕ ಮಾಡಲಾಗುತ್ತಿತ್ತು. ಅದರಿಂದ ಅವನಿಗೆ ರಾಜ್ಯದ ದಿನನಿತ್ಯದ ಆಡಳಿತದಲ್ಲಿ ಕೂಡ ತರಬೇತಿ ದೊರಕುತ್ತಿದ್ದಿತು.

ಯುವರಾಜ

ಹೀಗೆ ಶಿಕ್ಷಣವನ್ನು ಪಡೆದ ರಾಜಕುಮಾರನನ್ನು ಯುವರಾಜನನ್ನಾಗಿ ನೇಮಿಸಲಾಗುತ್ತಿತ್ತು. ಅವನು ರಾಜನೊಂದಿಗೆ ರಾಜ್ಯದ ಆಡಳಿತ ವ್ಯವಹಾರಗಳಲ್ಲಿ ಭಾಗವಹಿಸುತ್ತಿದ್ದನು. ಒಂದನೇ ವಿಕ್ರಮಾದಿತ್ಯ ಮತ್ತು ಅವನ ವಂಶಜರ ಶಾಸನಗಳಿಂದ ಹೀಗೆ ರಾಜ್ಯದ ದೈನಂದಿನ ಆಡಳಿತದಲ್ಲಿ ಯುವರಾಜನನ್ನು ತೊಡಗಿಸಿಕೊಳ್ಳುತ್ತಿದ್ದುದು ತಿಳಿದುಬರುತ್ತದೆ. ಯುವರಾಜ ನೇಮಕದ ಸಂಪ್ರದಾಯವು ಗಟ್ಟಿಗೊಳ್ಳುತ್ತಿದ್ದುದನ್ನು ಅದು ಸೂಚಿಸುತ್ತದೆ. ಇಮ್ಮಡಿ ಪುಲಕೇಶಿಯು ಪಟ್ಟಕ್ಕೆ ಬರುವ ಮೊದಲು ಹಾಗೂ ಅವನ ಮರಣಾನಂತರ ಉತ್ತರಾಧಿಕಾರವನ್ನು ಕುರಿತು ಅಹಿತ ಬೆಳವಣಿಗೆಗಳಾದುದು, ಚಾಲುಕ್ಯರು ಈ ದಿಸೆಯಲ್ಲಿ ತುಂಬಾ ಆಲೋಚನೆ ಮಾಡುವಂತೆ ಪ್ರೇರಿಸಿರಬಹುದು. ದೇಶದ ಇತರ ಭಾಗಗಳಲ್ಲಿ ಪ್ರಚಲಿತವಾಗಿದ್ದಂತೆಯೇ ಅವರೂ ಯುವರಾಜನನ್ನು ನಾಮಕರಣ ಮಾಡುವ ಪದ್ಧತಿಯನ್ನು ಬೆಳೆಸಿದರು. ಆಳುತ್ತಿರುವ ರಾಜನಿಗೆ ತನ್ನ ಉತ್ತರಾಧಿಕಾರಿಯನ್ನು ಯುವರಾಜನನ್ನಾಗಿ ನೇಮಕ ಮಾಡುವುದು ಕರ್ತವ್ಯವಾಯಿತು. ಅದು ಯುವರಾಜನಿಗೆ ರಾಜ್ಯದ ಅನುದಿನದ ಆಡಳಿತದಲ್ಲಿ ಪ್ರಾಯೋಗಿಕ ಅನುಭವವನ್ನು ಪಡೆಯಲು ಅವಕಾಶವನ್ನು ಕೊಟ್ಟಿತು.

ರಾಜನ ಇಚ್ಚೆಯ ಪ್ರಕಾರ ಮತ್ತು ರಾಜ್ಯದ ಅಗತ್ಯಗಳಿಗೆ ತಕ್ಕಂತೆ ಯುವರಾಜನಿಗೆ ಹಲವು ಆಡಳಿತೀಯ ಅಧಿಕಾರಗಳನ್ನು ನೀಡಲಾಗುತ್ತಿತ್ತು. ಅವನಿಗೆ ದಾನಗಳನ್ನು ಕೊಡುವ ಅಧಿಕಾರವಿದ್ದಿತು. ಯುವರಾಜ ವಿಷ್ಣುವರ್ಧನನು ಐದು ಜನ ಬ್ರಾಹ್ಮಣರಿಗೆ ನೆಲವನ್ನು ದಾನ ಮಾಡಿದುದನ್ನು ಸತಾರಾ ಫಲಕಗಳು ಹೇಳುತ್ತವೆ. ಕೆಲವೊಮ್ಮೆ ಅವನು ರಾಜನ ಪ್ರತಿನಿಧಿ ಯಾಗಿ ವರ್ತಿಸುತ್ತಿದ್ದನು. ಲಕ್ಷ್ಮೇಶ್ವರದ ಮಹಾರಾಜರಿಗೂ ರಾಜ ವಿಜಯಾದಿತ್ಯನಿಗೂ ನಡುವೆ ಒಂದು ಒಪ್ಪಂದವಾದಾಗ, ಯುವರಾಜ ಇಮ್ಮಡಿ ವಿಕ್ರಮಾದಿತ್ಯನು ರಾಜನನ್ನು ಪ್ರತಿನಿಧಿಸಿ ಒಪ್ಪಂದವನ್ನು ಸ್ಥಿರಪಡಿಸಿದನು. ಸಾಮಾನ್ಯವಾಗಿ ಯುವರಾಜರು ಯುದ್ಧಗಳಲ್ಲಿ ರಾಜರೊಂದಿಗೆ ಹೋಗುತ್ತಿದ್ದರು. ಇದರಿಂದ ಅವರಿಗೆ ವಾಸ್ತವ ಯುದ್ಧರಂಗದಲ್ಲಿ ತರಬೇತಿ ದೊರಕಿದ ಹಾಗಾಗುತ್ತಿತ್ತು. ದಕ್ಷಿಣದ ರಾಜರ ಮೇಲೆ ಒಂದನೇ ವಿಕ್ರಮಾದಿತ್ಯನು ದಂಡೆತ್ತಿ ಹೋದಾಗ, ವಿನಯಾದಿತ್ಯನು ಮತ್ತು ವಿಜಯಾದಿತ್ಯರು ಅವನ ಜೊತೆಯಲ್ಲಿ ಹೋದರು. ಇಮ್ಮಡಿ ವಿಕ್ರಮಾದಿತ್ಯನು ಯುವರಾಜನಾಗಿದ್ದಾಗಲೇ ಪಲ್ಲವರ ಮೇಲೆ ಚಾಲುಕ್ಯ ಸೇನೆಯನ್ನು ತೆಗೆದುಕೊಂಡು ಹೋದನು. ಇಮ್ಮಡಿ ಕೀರ್ತಿವರ್ಮನು ಪಲ್ಲವರ ವಿರುದ್ಧವಾಗಿ ಚಾಲುಕ್ಯರ ಕೊನೆಯ ದಂಡಯಾತ್ರೆಯನ್ನು ನಿರ್ವಹಿಸಿದನು.

ಪಟ್ಟಾಭಿಷೇಕ

ಬೇರೆ ಭಾಗಗಳಲ್ಲಿ ಪ್ರಚುರವಾಗಿದ್ದ ಸಂಪ್ರದಾಯ ಮತ್ತು ಆಚರಣೆಗಳಿಗೆ ಅನುಗುಣವಾಗಿ ಚಾಲುಕ್ಯ ಅರಸರ ಪಟ್ಟಾಭಿಷೇಕ ಸಮಾರಂಭವು ವೇದೋಕ್ತರೀತಿಯಲ್ಲಿ ನಡೆಯುತ್ತಿದ್ದಿತು. ರಾಜಕುಮಾರರು ಅಧೀನ ರಾಜರು ಮತ್ತು ಇತರ ಗಣ್ಯರು ಸಮಾರಂಭದಲ್ಲಿ ಭಾಗವಹಿಸು ತ್ತಿದ್ದರು. ವಂಶೀಯವಾದ ಶಾಸನಗಳಲ್ಲಿ ಪಟ್ಟಾಭಿಷೇಕದ ವರ್ಷದಿಂದ ಮೊದಲುಮಾಡಿ ಆಳಿಕೆಯ ವರ್ಷವನ್ನು ನಮೂದಿಸುತ್ತಿದ್ದರು. ಪ್ರಾಚೀನ ಕಾಲದ ಹಲವು ಇತರ ರಾಜವಂಶಗಳು ಇದೇ ಪದ್ಧತಿಯನ್ನೇ ಅನುಸರಿಸುತ್ತಿದ್ದವು. ಕ್ರಿ.ಶ.೫೭೮ರ (ಶ.೫೦೦) ಬಾದಾಮಿ ಶಾಸನವು ರಾಜನ ಸಿಂಹಾಸನಾರೋಹಣವನ್ನು ಉಲ್ಲೇಖಿಸುತ್ತದೆ. ಇಮ್ಮಡಿ ಪುಲಕೇಶಿಯ ಹೈದರಾಬಾದ್ ಫಲಕಗಳು ರಾಜನ ಪಟ್ಟಾಭಿಷೇಕದ ವರ್ಷದಿಂದ ಆಳಿಕೆಯ ವರ್ಷವನ್ನು ಲೆಕ್ಕ ಹಾಕಿ ನಮೂದಿಸುತ್ತವೆ. ಇಮ್ಮಡಿ ಕೀರ್ತಿವರ್ಮನ ಕೆಂದೂರು ಮತ್ತು ವಕ್ಕಲೇರಿ ಫಲಕಗಳು ಇದನ್ನು ಸ್ಥಿರೀಕರಿಸುತ್ತವೆ.

ರಾಜಪ್ರತಿನಿಧಿ (ರೀಜೆಂಟ್)

ಬಾದಾಮಿ ಚಾಲುಕ್ಯರ ಆಳ್ವಿಕೆಯ ಕಾಲದಲ್ಲಿ ರೀಜೆನ್ಸಿ ವ್ಯವಸ್ಥೆಯು ಪ್ರಚಲಿತವಾಗಿತ್ತು. ಸಿಂಹಾಸನಕ್ಕೆ ನ್ಯಾಯವಾದ ವಾರಸುದಾರನು ಇನ್ನೂ ಅಪ್ರಾಪ್ತವಯಸ್ಕನಾಗಿದ್ದು, ಆ ಸಮಯದಲ್ಲಿ ರೀಜೆಂಟರು ಆಳುತ್ತಿದ್ದುದಕ್ಕೆ ಚಾಲುಕ್ಯ ಇತಿಹಾಸದಲ್ಲಿ ಎರಡು ನಿದರ್ಶನಗಳಿವೆ. ಒಂದನೇ ಕೀರ್ತಿವರ್ಮನ ಅನಂತರ ಮಂಗಳೇಶನು ಹಾಗೆ ಸಾಮ್ರಾಜ್ಯವನ್ನು ಆಳಿದನು. ಇನ್ನೊಂದು ಸಂದರ್ಭ ಚಂದ್ರಾದಿತ್ಯನು ಅಪ್ರಾಪ್ತವಯಸ್ಕನಾಗಿದ್ದ ಮಗನನ್ನು ವಾರಸುದಾರ ನನ್ನಾಗಿ ಬಿಟ್ಟು ಸತ್ತುಹೋದಾಗಿನದು. ವಿಜಯಭಟ್ಟಾರಿಕೆಯ ಆಳ್ವಿಕೆಯ ವರ್ಷವನ್ನು ನಮೂದಿಸಿರುವ ನೆರೂರು ದಾನಶಾಸನವು, ಆಳಿಕೆಯು ಕೊನೆಯ ಪಕ್ಷ ಐದು ವರ್ಷಗಳ ಕಾಲ ತನ್ನ ಮಗನ ಪ್ರತಿನಿಧಿಯಾಗಿ ರಾಜ್ಯವಾಳುತ್ತಿದ್ದುದನ್ನು ಸೂಚಿಸುತ್ತದೆ.

ರಾಜನ ಗುಣಗಳು

ರಾಜನು ಆಡಳಿತ ವ್ಯವಸ್ಥೆಯ ನೆತ್ತಿಯಾಗಿದ್ದನು. ಹಾಗಾಗಿ, ರಾಜ್ಯದ ಬಲವೂ ತಾಳಿಕೆಯೂ ರಾಜನ ವ್ಯಕ್ತಿತ್ವವನ್ನು ಅವಲಂಬಿಸಿತು. ರಾಜನ ಮೂಲಭೂತವಾದ ಗುಣಗಳು ಕಾರ್ಯತತ್ಪರತೆ, ವಿದ್ವತ್ತು ಮತ್ತು ಧೈರ್ಯ, ಜೊತೆಗೆ ಯುದ್ಧದಲ್ಲೂ ರಾಜಕಾರಣದಲ್ಲೂ ಉನ್ನತ ಮಟ್ಟದ ಪರಿಣತಿ. ರಾಜರು ಹೊಂದಿ್ದ ಅತ್ಯುತ್ತಮ ಗುಣಗಳನ್ನು ಚಾಲುಕ್ಯ ಶಾಸನಗಳು ದಾಖಲಿಸುತ್ತವೆ. ಪುಣ್ಯಕಾರ್ಯ, ಹಿತವಾದ ನಡವಳಿಕೆ, ವಿದ್ಯೆ, ಹರಿತವಾದ ಬುದ್ದಿಶಕ್ತಿ, ಕಲೆ ಮತ್ತು ವಿಜ್ಞಾನಗಳಲ್ಲಿ ಪರಿಣತಿ, ಸ್ಮೃತಿಗಳು, ಪುರಾಣಗಳು, ಇತಿಹಾಸ ಮತ್ತು ಮಹಾಭಾರತಗಳ ತಿಳುವಳಿಕೆ, ಸತ್ಯವಂತಿಕೆ, ದಯಾಪರತೆ, ಔದಾರ್ಯ, ಧರ್ಮಶ್ರದ್ಧೆ, ನ್ಯಾಯ, ನೀತಿ, ಸಹಿಷ್ಣುತೆ ಮತ್ತು ಎಲ್ಲಕ್ಕಿಂತ ಮೇಲಾಗಿ ಸಮರ್ಥ ನಾಯಕತ್ವ ಹಾಗೂ ಭುಜಬಲ-ಇವು ರಾಜನಲ್ಲಿ ಇವೆಯೆಂದು ಶಾಸನಗಳು ವರ್ಣಿಸುತ್ತವೆ. ರಾಜರನ್ನು ಸೂರ್ಯ, ಇಂದ್ರ, ಬೃಹಸ್ಪತಿ, ರಾಮ, ವಾಸುದೇವ, ವಿಷ್ಣು, ಶಿಬಿ, ಯುಧಿಷ್ಠಿರ, ಅರ್ಜುನ ಮತ್ತು ಇತರ ಪೌರಾಣಿಕ ಹಾಗೂ ಇತಿಹಾಸ, ಕಾವ್ಯ ನಾಯಕರೊಂದಿಗೆ ಹೋಲಿಸಲಾಗಿದೆ.

ಅಗ್ನಿಷ್ಟೋಮ, ವಾಜಪೇಯ ಮತ್ತು ಅಶ್ವಮೇಧ ಯಾಗಗಳನ್ನು ಮಾಡಿದ ನಂತರ ಅವಭೃತ ಸ್ನಾನ ಮಾಡಿ ರಾಜರು ಪವಿತ್ರೀಕೃತರಾಗುತ್ತಿದ್ದರು ಎಂದು ಚಾಲುಕ್ಯ ಶಾಸನಗಳು ಹೇಳುತ್ತವೆ. ಒಂದನೇ ಪುಲಕೇಶಿಯು ವೃದ್ಧೋಪದೇಶಗ್ರಾಹಿ (ಹಿರಿಯರ ಸಲಹಾಮಂಡಲಿಯ ಮುಖ್ಯಸ್ಥರು)ಯಾಗಿದ್ದನೆಂದು ಮಹಾಕೂಟ ಸ್ತಂಭಶಾಸನವು ಹೇಳುತ್ತದೆ ಮತ್ತು ಅವನು ಬ್ರಹ್ಮಣ್ಯೇ (ಬ್ರಾಹ್ಮಣ ಸಂಪ್ರದಾಯಗಳನ್ನು ಪಾಲಿಸುವವನು) ಎನ್ನುತ್ತದೆ. ಎರಡನೇ ಪುಲಕೇಶಿಯು ಇತರರ ಸತ್ಕಾರ್ಯಗಳನ್ನು ನೆನಪಿನಲ್ಲಿಟ್ಟುಕೊಳ್ಳುತ್ತಿದ್ದನು, ದುಷ್ಕಾರ್ಯಗಳನ್ನು ಮರೆತುಬಿಡುತ್ತಿದ್ದನು ಎಂದು ಮರುತರ ಶಾಸನವು ವರ್ಣಿಸುತ್ತದೆ. ಅವನು ದೇವ, ದ್ವಿಜ, ಗುರು ಮತ್ತು ವೃದ್ಧರನ್ನು ಸೂಕ್ತವಾಗಿ ಗೌರವಿಸುತ್ತಿದ್ದನೆಂದು ಕೊಪ್ಪೂರು ಫಲಕಗಳು ವರ್ಣಿಸುತ್ತವೆ.

ತಮ್ಮ ಪ್ರಜೆಗಳನ್ನು ಅನ್ಯರ ಆಕ್ರಮಣಗಳಿಂದ ರಕ್ಷಿಸುವುದು, ಅವರ ಕಲ್ಯಾಣವನ್ನೇ ಸದಾ ಗಮನಿಸುತ್ತಿರುವುದು ತಮ್ಮ ಕರ್ತವ್ಯವೆಂದು ಚಾಲುಕ್ಯ ಅರಸರು ಭಾವಿಸಿದ್ದರು ಎಂಬುದು ಅವರ ರಾಜಕೀಯ ಇತಿಹಾಸದಿಂದ ವೇದ್ಯವಾಗುತ್ತದೆ. ಪ್ರತಿಭಾವಂತ ಪ್ರಜೆಗಳನ್ನು ಆಸ್ಥಾನದಲ್ಲಿ ನೇಮಿಸಿಕೊಂಡು ಅವುಗಳ ವಿಕಸನಕ್ಕೆ ಅವಕಾಶ ಮಾಡಿಕೊಡುತ್ತಿದ್ದರು. ರಾಜರು ಸೇನಾ ಮುಖ್ಯರಾಗಿಯೂ, ಸಮರ್ಥ ಆಡಳಿತಗಾರರಾಗಿಯೂ ಹೆಸರು ಪಡೆದಿದ್ದರು. ತಾವೇ ಸ್ವತಃ ಕಲಾಭಿಜ್ಞರಾಗಿದ್ದರು. ಅನೇಕ ವಿದ್ವಾಂಸರಿಗೂ ಕಲಾವಿದರಿಗೂ ಆಶ್ರಯ ನೀಡಿದ್ದರು. ಇಮ್ಮಡಿ ಪುಲಕೇಶಿಯ ಆಸ್ಥಾನ ಕವಿಯಾದ ರವಿಕೀರ್ತಿಯು ಐಹೊಳೆ ಶಾಸನದ ಪಾಠವನ್ನು ರಚಿಸಿದನು. ಅವನು ತನ್ನನ್ನು ಕಾಳಿದಾಸ, ಭಾರವಿಯವರೊಂದಿಗೆ ಹೋಲಿಸಿಕೊಂಡಿದ್ದಾನೆ. ಹಾಗೆಯೇ ಇಮ್ಮಡಿ ವಿಕ್ರಮಾದಿತ್ಯನೂ, ಅವನ ರಾಣಿ, ತಂಗಿ ಮೊದಲಾದ ಕುಟುಂಬದ ಇತರ ಸದಸ್ಯರೂ ಆ ಕಾಲದ ಅತ್ಯುತ್ತಮ ವಾಸ್ತುಶಿಲ್ಪಗಳನ್ನು ಪ್ರೋಪಟ್ಟದಕಲ್ಲಿನಲ್ಲಿ ದೊರಕುವ ಶಾಸನಗಳಿಂದ ತಿಳಿದುಬರುತ್ತದೆ.

ಪ್ರದೇಶಗಳನ್ನು ಗೆದ್ದು ತಮ್ಮ ರಾಜ್ಯನ್ನು ವಿಸ್ತರಿಸುವುದರಲ್ಲಿ ಅವರಿಗೆ ಬಹಳ ಆಸಕ್ತಿಯಿತ್ತು. ವಿಜಯಾದಿತ್ಯ ಮತ್ತು ವಂಶಜರ ತಾಮ್ರಫಲಕಗಳು, ವಿಜಯಾದಿತ್ಯನು ಇಡೀ ದೇಶವನ್ನೇ ಗೆದ್ದು ತನ್ನ ತಂದೆ ಮತ್ತು ತಾತಂದಿರಿಗೆ ಸರಿಸಮವಾಗಲು ಬಯಸಿದನು ಎಂದು ಹೇಳುತ್ತವೆ.

ಬಿರುದುಗಳು

ಚಾಲುಕ್ಯ ಅರಸರು ತಮ್ಮ ವೈಯಕ್ತಿಕ ಸಾಧನೆಗಳನ್ನೂ ಬೆಳೆಯುತ್ತಿದ್ದ ರಾಜಕೀಯ ಶಕ್ತಿಯನ್ನೂ ಸೂಚಿಸುವಂತಹ ಹಲವು ಬಿರುದುಗಳನ್ನು ಧರಿಸಿದರು. ಜಯಸಿಂಹ, ರಣರಾಗ ಮತ್ತು ಒಂದನೆ ಪುಲಕೇಶಿ ಮೊದಲಾದ ರಾಜರು ಮಹತ್ವದ ಬಿರುದುಗಳನ್ನು  ಧರಿಸತೊಡಗಿದರು. ಹರ್ಷನ ಮೇಲೆ ವಿಜಯವನ್ನು ಸಾಧಿಸಿ ಇಮ್ಮಡಿ ಪುಲಕೇಶಿಯು ಪರಮೇಶ್ವರ ಎಂಬ ಬಿರುದನ್ನು ಧರಿಸಿದನು. ಒಂದನೇ ವಿಕ್ರಮಾದಿತ್ಯನಿಂದ ಮುಂದಕ್ಕೆ ಪರಮಾಧಿಕಾರ ಸೂಚಕವಾದ ಮಹಾರಾಜಾಧಿರಾಜ ಮತ್ತು ಭಟ್ಟಾರಕಗಳೂ ಅವಕ್ಕೆ ಸೇರಿ ಸತ್ಯಾಶ್ರಯ – ಶ್ರೀಪೃಥ್ವೀವಲ್ಲಭ – ಮಹಾರಾಜಾಧಿರಾಜ – ಪರಮೇಶ್ವರ – ಭಟ್ಟಾರಕ ಎಂಬ ಬಿರುದುಗಳ ಸಾಲು ರೂಪುಗೊಂಡಿತು.

ತಾವು ಮಾಡಿದ ಮಹತ್ವದ ಕಾರ್ಯಗಳನ್ನೂ, ಯುದ್ಧ ಸಾಹಸಗಳನ್ನೂ ಸೂಚಿಸುವ ಕೆಲವು ಅರ್ಥಪೂರ್ಣವಾದ ಬಿರುದುಗಳನ್ನು ಚಾಲುಕ್ಯ ರಾಜರು ಧರಿಸಿದರು. ಒಂದನೇ ಪುಲಕೇಶಿಗೆ ಅವನ ಯುದ್ಧಪರಾಕ್ರಮವನ್ನು ಸೂಚಿಸುವ ರಣವಿಕ್ರಮ ಎಂಬ ಬಿರುದಿತ್ತು. ಹಾಗೆಯೇ ಒಂದನೇ ಕೀರ್ತಿವರ್ಮನು ರಣ ಪರಾಕ್ರಮ ಎಂಬ ಬಿರುದನ್ನು ಇಟ್ಟುಕೊಂಡಿದ್ದನು. ಮಂಗಳೇಶನಿಗೆ ರಣವಿಕ್ರಾಂತ ಮತ್ತು ಉರುರಣವಿಕ್ರಾಂತ ಎಂಬ ಬಿರುದುಗಳಿದ್ದವು. ರಣರಂಗದಲ್ಲಿ ಅವನ ಚಾತುರ್ಯವನ್ನೂ ಪರಾಕ್ರಮವನ್ನೂ ಅವು ತೋರಿಸುತ್ತಿದ್ದವು. ಒಂದನೇ ವಿಕ್ರಮಾದಿತ್ಯನು ರಣರಸಿಕ, ಅನಿವಾರಿತ, ರಾಜಮಲ್ಲ ಎಂಬಂತಹ ಬಿರುದುಗಳನ್ನು ಧರಿಸಿದನು. ಪಲ್ಲವರನ್ನು ಸೋಲಿಸಿದ ಮೇಲೆ ಈ ಕೊನೆಯ ಬಿರುದನ್ನು ಅವರು ಧರಿಸತೊಡಗಿದರು. ವಿನಯಾದಿತ್ಯನಿಗೆ ರಾಜಾಶ್ರಯ ಮತ್ತು ಯುದ್ಧಮಲ್ಲ ಎಂಬ ಬಿರುದುಗಳಿದ್ದವು.

ಜೊತೆಗೆ ಅವರು ಧಾರ್ಮಿಕ ಸ್ವರೂಪದ ಬಿರುದುಗಳನ್ನು ಪಡೆದಿದ್ದರು. ಪರಮಭಾಗವತ, ಪರಮೇಶ್ವರ, ಧರ್ಮಮಹಾರಾಜ ಮೊದಲಾದವು ಇಂಥವು. ಚಕ್ರವರ್ತಿ ಸೂಚಕಗಳಾದ ಮಹಾರಾಜಾದಿರಾಜ, ಪರಮ ಭಟ್ಟಾರಕ ಮತ್ತು ಪರಮೇಶ್ವರ ಎಂಬ ಬಿರುದುಗಳ ಜೊತೆಗೆ ವಿಜಯಾದಿತ್ಯನು ತನ್ನನ್ನು ಸಮಸ್ತಭುವನಾಶ್ರಯ ಎಂದು ಕರೆದುಕೊಂಡನು. ತುಸು ಉತ್ಪ್ರೇಕ್ಷೆಯಿದ್ದರೂ ಇದರಲ್ಲಿ ಅವನ ಸ್ಥಾನಮಾನವು ಏರಿದುದಕ್ಕೆ ಸೂಚನೆಯಿದೆ. ಬಾಗಲಕೋಟೆಯ ತಾಮ್ರಫಲಕ ಶಾಸನವು ಅವನನ್ನು ಚಕ್ರವರ್ತಿ ಎಂದು ವರ್ಣಿಸಿದೆ. ಈ ಬಿರುದುಗಳು ರಾಜ ಬೆಳೆಯುತ್ತಿದ್ದ ಸ್ಥಾನ ಗೌರವಗಳನ್ನು ಸ್ಪಷ್ಟವಾಗಿ ಸೂಚಿಸುತ್ತವೆ.

ರಾಜನ ಅಧಿಕಾರಗಳು ಮತ್ತು ಕಾರ್ಯಗಳು

ಚಾಲುಕ್ಯ ರಾಜರು ಕೆಲವು ಮೂಲಭೂತ ಕಾರ್ಯಗಳಾದ ಪ್ರಜಾರಕ್ಷಣ, ಪ್ರಜಾಪಾಲನ, ಪ್ರಜಾರಂಜನಗಳನ್ನು ನೆರವೇರಿಸುತ್ತಿದ್ದರು ಮತ್ತು ಪ್ರಾಚೀನ ಚಿಂತಕರು ವಿಧಿಸಿದಂತೆ ವರ್ಣಾಶ್ರಮ ಧವರ್ುವನ್ನು ಎತ್ತಿ ಹಿಡಿದರು. ಜ್ಞಾನಿಗಳಾಗಿದ್ದ ಈ ರಾಜರಿಗೆ ತಮ್ಮ ಕರ್ತವ್ಯಗಳು ಮತ್ತು ಹೊಣೆಗಾರಿಕೆಗಳ ಉದಾತ್ತ ಕಲ್ಪನೆಯಿದ್ದಿತು. ಪ್ರಜೆಗಳನ್ನು ಆಂತರಿಕ ಅವ್ಯವಸ್ಥೆಯಿಂದಲೂ ಬಾಹ್ಯವಾದ ವೈರಿಗಳ ಆಕ್ರಮಣದಿಂದಲೂ ರಕ್ಷಿಸುವುದು ರಾಜನ ಮೂಲಭೂತವಾದ ಕರ್ತವ್ಯವಾಗಿತ್ತು. ಆದ್ದರಿಂದ ಅವರು ಪ್ರಬಲವಾದ ಪೋಲೀಸ್ ದಳವನ್ನೂ ಅಗಾಧವಾದ ಸೈನ್ಯಬಲವನ್ನೂ ಕಾಪಾಡುತ್ತಿದ್ದರು. ದಂಡಪಾಸಿಕರು, ಚೌರಾಧಿಕರಣರು ಮೊದಲಾದ ಪೋಲೀಸ್ ಅಧಿಕಾರಿಗಳ ಹಾಗೂ ಚೌಟರು ಮತ್ತು ಭಟರು ಮೊದಲಾದ ಪೋಲೀಸ್ ಪಡೆಗಳ ಉಲ್ಲೇಖಗಳು ಶಾಸನಗಳಲ್ಲಿ ಕಂಡುಬರುತ್ತವೆ. ಇವರು ರಾಜ್ಯಾದ್ಯಂತ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುತ್ತಿದ್ದರು. ಚಿಪ್ಲಂ ಫಲಕಗಳಲ್ಲಿ ಇಮ್ಮಡಿ ಪುಲಕೇಶಿಯನ್ನು ಸಜ್ಜನ ರಕ್ಷಕ, ದುರ್ಜನ ಶಿಕ್ಷಕ ಎಂದು ವರ್ಣಿಸಿದೆ.

ಚಾಲುಕ್ಯ ರಾಜರು ಬಾಲಕರಾಗಿದ್ದಾಗಲೇ ಅವರಿಗೆ ಎಂತಹ ಯೋಜಿತ ಶಿಕ್ಷಣವನ್ನು ಕೊಡಲಾಗುತ್ತಿದ್ದಿತೆಂದರೆ, ಅವರಲ್ಲಿ ಆತ್ಮಸಂಯಮ, ವಿವೇಕ, ಧೈರ್ಯಗಳು ಬೆಳೆಯುತ್ತಿದ್ದವು. ದಾನ, ವಿದ್ವಜ್ಜನರ ಕಡೆಗೆ ನಿಷ್ಪಕ್ಷಪಾತ ಔದಾರ್ಯ ಮುಂತಾದ ಉದಾತ್ತ ಗುಣಗಳನ್ನು ಅವರು ಬೆಳೆಸಿಕೊಂಡಿರುತ್ತಿದ್ದರು. ತಮ್ಮ ಪ್ರಜೆಗಳ ಸುಖ-ಸಂತೋಷಗಳನ್ನು ಬೆಳೆಸಲು ಅವರು ಪ್ರಾಮಾಣಿಕವಾಗಿ ಶ್ರಮಿಸಿದರು. ರಾಜನು ಯಶಸ್ವಿಯಾಗಬೇಕಾದರೆ ಹಿರಿಯರ ಆದೇಶಗಳನ್ನು ಅವನು ಅನುಸರಿಸಬೇಕು, ಆಡಳಿತದ ಕಲೆಯನ್ನು ಅಧ್ಯಯನ ಮಾಡಬೇಕು, ಧರ್ಮವನ್ನು ಬೆಳೆಸಿ ಪ್ರಜೆಗಳಿಗೆ ಯಾವ ಕುಂದೂ ಬಾರದಂತೆ ರಕ್ಷಿಸಬೇಕು. ಒಂದನೇ ಕೀರ್ತಿವರ್ಮನ ಗೊಡಚಿ ಫಲಕಗಳು, ಅವನು ಪ್ರಜೆಗಳಿಗೆ ನ್ಯಾಯವನ್ನು ಸಲ್ಲಿಸಿ, ಅವರು ಸುಖವಾಗಿರುವಂತೆ ಮಾಡಿದನು ಎಂದು ಹೇಳುತ್ತವೆ.

ಹಲವು ಯಾಗಗಳನ್ನು ಆಚರಿಸಿದರೆಂದು ವರ್ಣಿತರಾಗಿರುವ ಚಾಲುಕ್ಯ ರಾಜರು ಆ ಸಂದರ್ಭಗಳಲ್ಲಿ ಚಿನ್ನ, ಧಾನ್ಯ, ಭೂಮಿ ಮೊದಲಾದ ರೂಪಗಳಲ್ಲಿ, ಪ್ರಜಾನುರಂಜನ ಪರಂಪರೆಗೆ ಅನುಗುಣವಾಗಿ ವಿದ್ವಾಂಸರಿಗೆ ದಾನ ಮಾಡುತ್ತಿದ್ದರು. ಬ್ರಾಹ್ಮಣರಿಗೆ, ಧರ್ಮಸಂಸ್ಥೆ ಗಳಿಗೆ, ವಿವಿಧ ಪಂಥ ಪಂಗಡಗಳಿಗೆ, ವ್ಯಕ್ತಿಗಳಿಗೆ ಭೂಮಿಯನ್ನು ದಾನ ಮಾಡಿದ ಹಲವು ಸಂದರ್ಭಗಳನ್ನು ಚಾಲುಕ್ಯ ಶಾಸನಗಳು ನಿರೂಪಿಸುತ್ತವೆ.

ರಾಜ್ಯನೀತಿಯ ಪ್ರಾಚೀನ ಕೃತಿಗಳು, ರಾಜನು ಈಗಾಗಲೇ ಸ್ಥಾಪಿತವಾಗಿರುವ ವ್ಯವಸ್ಥೆಯನ್ನು ಎತ್ತಿಹಿಡಿಯಬೇಕು ಎಂದು ಹೇಳುತ್ತವೆ. ಅದಕ್ಕಾಗಿ ರಾಜನು ಸಾಮಾಜಿಕ ವ್ಯವಸ್ಥೆಯ ಮೂಲಾಧಾರವಾದ ಧರ್ಮವನ್ನು ಎತ್ತಿ ಹಿಡಿಯಬೇಕು. ಯಾವುದೇ ಪಂಥದ ಬಗಗೆ ವೈಯಕ್ತಿಕವಾಗಿ ಅವನಿಗೆ ಒಲವಿದ್ದರೂ, ರಾಜನು ಯಾವಾಗಲೂ ಜಾತ್ಯತೀತವಾಗಿಯೇ ವರ್ತಿಸುತ್ತಿದ್ದನು. ವರ್ಣಾಶ್ರಮಧರ್ಮ ಪಾಲನೆಯಲ್ಲಿ ರಾಜರು ಅಪಾರ ಆಸಕ್ತಿ ವಹಿಸಿದ್ದರು. ಅಲ್ಟೆಂ ಫಲಕಗಳಲ್ಲಿ ಒಂದನೇ ಪುಲಕೇಶಿಯು ವರ್ಣಾಶ್ರಮವನ್ನೂ ಸ್ವಧರ್ಮವನ್ನೂ ಪಾಲಿಸುತ್ತಿದ್ದನೆಂದು ವರ್ಣಿಸಿೆ.

ರಾಜರಿಗೆ ಆ ಕಾಲದ ಸಾಮಾಜಿಕ ಮತ್ತು ಧಾರ್ಮಿಕ ಸಂಸ್ಥೆಗಳ ಮೇಲೆ ಹತೋಟಿಯಿರಲಿಲ್ಲ ವೆಂಬುದು ನಿಜ. ಆದರೆ ಅಲ್ಲಿ ಆಗಾಗ ವ್ಯಾಜ್ಯಗಳು ಉದ್ಭವವಾದಾಗ ನಿರ್ಣಯಕ್ಕಾಗಿ ಅವುಗಳನ್ನು ರಾಜನೆದುರಿಗೆ ತರಲಾಗುತ್ತಿತ್ತು. ಅರಸರು ಧರ್ಮಮಹಾರಾಜರೆನಿಸಿದ್ದರು. ವರ್ಣಾಶ್ರಮಧರ್ಮ ಪ್ರತಿಪಾಲನವು ಅವರ ಮುಖ್ಯ ಕಾರ್ಯಗಳಲ್ಲೊಂದಾಗಿತ್ತು.

ಮಾಂಡಲಿಕರು, ಮಂತ್ರಿಗಳು ಮತ್ತಿತರ ಉನ್ನತ ಸಿವಿಲ್ ಮತ್ತು ಮಿಲಿಟರಿ ಅಧಿಕಾರಿ ಗಳನ್ನು ಅವನು ನೇಮಕ ಮಾಡುತ್ತಿದ್ದನು. ರಾಜಮನೆತನದ ಸದಸ್ಯರು ಪ್ರಾಂತಗಳ ಆಡಳಿತದಲ್ಲಿ ವೈಸರಾಯಿಗಳಾಗಿಯೂ, ಸೇನಾಧಿಕಾರಿಗಳಾಗಿಯೂ ರಾಜನಿಗೆ ಸಹಾಯ ಮಾಡುತ್ತಿದ್ದರು. ಈ ಅಧಿಕಾರಿಗಳನ್ನು ಒಂದು ಪ್ರಾಂತದಿಂದ ಇನ್ನೊಂದಕ್ಕೆ ಅಗತ್ಯವಾದಾಗಲೆಲ್ಲ ವರ್ಗ ಮಾಡಲಾಗುತ್ತಿತ್ತು. ಒಂದನೇ ವಿಕ್ರಮಾದಿತ್ಯನು ಗುಜರಾತ್ ಮತ್ತು ನಾಸಿಕ್ ಪ್ರದೇಶಗಳನ್ನು ಆಳಲು ತನ್ನ ಸಹೋದರ ಜಯಸಿಂಹನನ್ನು ನೇಮಿಸಿದನು. ಇಮ್ಮಡಿ ಪುಲಕೇಶಿ ತಮ್ಮನನ್ನು ಮೊದಲು ಬೆಳ್ವೊಲದ ಗವರ್ನರ್ ಆಗಿ ನೇಮಿಸಿದ್ದು, ಆಮೇಲೆ ನೂತನವಾಗಿ ಜಯಿಸಿದ ವೆಂಗಿ ರಾಜ್ಯದ ಗವರ್ನರನ್ನಾಗಿ ವರ್ಗ ಮಾಡಿದನು. ಒಂದನೇ ವಿಕ್ರಮಾದಿತ್ಯನ ಚಿಕ್ಕಪ್ಪ ಬುದ್ಧವರಸ ರಾಜನು ಅಮರಾಂತ ವಿಷಯದ ಸುತ್ತಮುತ್ತಣ ಪ್ರದೇಶಗಳನ್ನು ಆಳುತ್ತಿದ್ದನು. ಅಧೀನರಾಜನಾಗಿದ್ದ ಬಾಣರಾಜನನ್ನು ಗಂಗರೆನಾಡು, ಸುದುಮಾರ ಮತ್ತು ಗಣನೂರು ಪ್ರಾಂತಗಳ ಆಡಳಿತಕ್ಕೆ ನೇಮಿಸಲಾಗಿತ್ತು.

ಶಾಂತಿಕಾಲದಲ್ಲಿ ರಾಜನು ಹೆಚ್ಚಿನ ಸಮಯವನ್ನು ಆಸ್ಥಾನದಲ್ಲಿ ಕಳೆಯುತ್ತಿದ್ದನು. ಪ್ರಜೆಗಳನ್ನು ಭೇಟಿ ಮಾಡುವುದು, ಸಾಮಾನ್ಯ ಆಡಳಿತಕ್ಕೆ ಗಮನ ಕೊಡುವುದು ಆಗ ಅವನ ಮುಖ್ಯ ಕಾರ್ಯವಾಗುತ್ತಿತ್ತು. ಆಡಳಿತ ಪ್ರತಿಯೊಂದು ವಿಭಾಗದಲ್ಲೂ ಅವನು ತನ್ನ ಅಧಿಕಾರವನ್ನು ಚಲಾಯಿಸುತ್ತಿದ್ದನು. ಅವನ ಅಧೀನರು ಹಾಕಿಸುವ ಶಾಸನಗಳಲ್ಲಿ ರಾಜನೆಂದು ಅವನ ಹೆಸರು ದಾಖಲಾಗುತ್ತಿದ್ದಿತು; ಅವನ ಪ್ರಭುತ್ವವನ್ನು ಒಪ್ಪಿಕೊಂಡದ್ದಕ್ಕೆ ಅದು ಸಾಕ್ಷಿಯಾಗಿತ್ತು. ಸತ್ಯಾಶ್ರಯ ಧ್ರುವರಾಜ ಇಂದ್ರವರ್ಮನು ತನ್ನ ಪ್ರಭುವಿನ ಪೂರ್ವಾನುಮತಿಯನ್ನು ಪಡೆದು ಕರೆಲ್ಲಿಕಾ ಎಂಬ ಗ್ರಾಮವನ್ನು ದಾನ ಮಾಡಿದನು ಎಂದು ಒಂದು ಶಾಸನವು ಹೇಳುತ್ತದೆ. ಭೂಮಿಯ ಯಾವುದೇ ಪರಭಾರೆಗೆ ರಾಜ್ಯಸಮ್ಮತಿ ಅಗತ್ಯವಾಗಿತ್ತು.

ವಿಶಿಷ್ಟ ಸೇವೆ ಸಲ್ಲಿಸಿದುದಕ್ಕಾಗಿ ಸಾಮಂತರಿಗೆ ಬಿರುದುಗಳನ್ನೂ ಮನ್ನಣೆಗಳನ್ನೂ ರಾಜನು ನೀಡುತ್ತಿದ್ದನು. ದುಸ್ಸಾಧ್ಯರೆನಿಸಿದ್ದ ಇಯಾಚಿಕರನ್ನು ಸೋಲಿಸಿ ಹಿಮ್ಮೆಟ್ಟಿಸಿದ ಪರಾಕ್ರಮವನ್ನು ಮೆಚ್ಚಿ, ಪುಲಕೇಶಿರಾಜನಿಗೆ ಇಮ್ಮಡಿ ವಿಕ್ರಮಾದಿತ್ಯನು ಚಳುಕಿಕುಲಾಧಾರ, ಪೃಥ್ವೀವಲ್ಲಭ, ಅನಿವಾರಿತ್ರಿ ಮತ್ತು ದಕ್ಷಿಣಾಪಥಸಾಧಾರ ಎಂಬ ಬಿರುದುಗಳನ್ನು ನೀಡಿದನು.

ರಾಜನು ಆಗಾಗ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳುತ್ತಿದ್ದನು. ಅಂತಹ ಸಂದರ್ಭಗಳಲ್ಲಿ ಸಹಜವಾಗಿಯೇ ಅವನ ಸಿವಿಲ್ ಮತ್ತು ಮಿಲಿಟರಿ ಅಧಿಕಾರಿಗಳು ಜೊತೆಯಲ್ಲಿರುತ್ತಿದ್ದರು. ತನ್ನ ಪ್ರಜೆಗಳ ನಿಜವಾದ ಪರಿಸ್ಥಿತಿಗಳನ್ನು ಅರಿತು, ಅವರ ಸಂಕಷ್ಟಗಳನ್ನು ಸ್ಥಳದಲ್ಲೇ ಪರಿಹರಿಸಲು ಅದರಿಂದ ಸಾಧ್ಯವಾಗುತ್ತಿತ್ತು. ಅಲ್ಲದೆ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ನೇಮಿಸಿರುವ ಅಧಿಕಾರಿಗಳು ಹೇಗೆ ಕೆಲಸ ಮಾಡುತಿದ್ದಾರೆ ಎಂದು ಮೌಲ್ಯಮಾಪನ ಮಾಡಲು ಕೂಡ ಅವಕಾಶವಾಗುತ್ತಿತ್ತು. ಭೂಮಿದಾನವನ್ನು ಉಲ್ಲೇಖಿಸುವ ಹಲವು ತಾಮ್ರ ಫಲಕ ಶಾಸನಗಳು ಹಾಗೆ ರಾಜನು ಕೈಗೊಳ್ಳುತ್ತಿದ್ದ ಪ್ರವಾಸಗಳನ್ನು ಸೂಚಿಸುತ್ತವೆ.

ರಾಜನು ತನ್ನ ಸೇನೆಯ ಸರ್ವೋನ್ನತ ದಂಡನಾಯಕನೂ ಆಗಿದ್ದನು. ತಾನೇ ಯುದ್ಧರಂಗಕ್ಕೆ ಹೋಗಿ, ಅಲ್ಲಿ ಸೈನ್ಯಕ್ಕೆ ಸಮರ್ಥವಾದ ನಾಯಕತ್ವವನ್ನು ಒದಗಿಸುತ್ತಿದ್ದನೆಂಬುದನ್ನು ಅಸಂಖ್ಯಾತ ಶಾಸನಗಳು ಹೇಳುತ್ತವೆ. ಪಲ್ಲವ ನರಸಿಂಹನ ಮೇಲೆ ಯುದ್ಧ ಮಾಡುವಾಗ ಇಮ್ಮಡಿ ಪುಲಕೇಶಿಯು ಪರಾಜಿತನಾದುದಲ್ಲದೆ, ಹತನಾದ ಸಂದರ್ಭ ಇದಕ್ಕೆ ನಿದರ್ಶನ. ಒಂದನೇ ವಿಕ್ರಮಾದಿತ್ಯನು ತಾನೇ ಸೇನೆಯನ್ನು ನಡೆಸಿಕೊಂಡು ಹೋಗಿ ಕಾಂಚಿಯ ಮೇಲೆ ದಾಳಿ ಮಾಡಿದನು. ಇಮ್ಮಡಿ ವಿಕ್ರಮಾದಿತ್ಯನು ಕಾಂಚಿಯ ಮೇಲೆ ಮೂರು ಸಾರಿ ಯುದ್ಧಕ್ಕೆ ನಡೆದ ಚಾಲುಕ್ಯ ಸೇನೆಗಳಿಗೆ ನಾಯಕನಾಗಿದ್ದನು. ಚಾಲುಕ್ಯ ರಾಜರು ಧೈರ್ಯಶಾಲಿಗಳು, ಪರಾಕ್ರಮಿಗಳು, ಸಾಹಸಕಾರ್ಯಗಳನ್ನು ಮಾಡಲು ಸದಾ ಕಾತರರಾಗಿದ್ದರು ಎಂದು ಶಾಸನಗಳು ಮುಕ್ತವಾಗಿ ಕೊಂಡಾಡುತ್ತವೆ. ಕೆಲವರನ್ನು ಪೌರಾಣಿಕ ವ್ಯಕ್ತಿಗಳಾದ ಪರಶುರಾಮ ಮತ್ತು ಪಾರ್ಥರಿಗೆ ಹೋಲಿಸಲಾಗಿದೆ. ರಾಜನಿಗೆ ಯುದ್ಧದಲ್ಲೂ ಶಾಂತಿಯಲ್ಲೂ ಮಂತ್ರಿಯು ಸಹಾಯ ಮಾಡುತ್ತಿದ್ದನು. ಅವನಿಗೆ ಸಂಧಿವಿಗ್ರಹಿ ಎಂದೂ ಮಹಾಬಲಾಧಿಕಾರಿ ಮತ್ತು ಬಲಾಧಿಕಾರಿ ಎಂದೂ ಹೆಸರುಗಳಿದ್ದವು.

ತನ್ನ ಕ್ಷೇತ್ರದಲ್ಲಿ ಚಾಲುಕ್ಯ ರಾಜನು ಸರ್ವೋನ್ನತ ನ್ಯಾಯಮೂರ್ತಿಯಾಗಿದ್ದನು. ಮಂಗಳೇಶನನ್ನು ಒಂದು ಶಾಸನವು ನ್ಯಾಯಾನುವರ್ತಿ ಎಂದು ಬಣ್ಣಿಸುತ್ತದೆ. ಒಂದನೇ ಕೀರ್ತಿವರ್ಮನ ಗೊಡಚಿ ಫಲಕಗಳಲ್ಲಿ, ಅವನು ಪ್ರಜೆಗಳಿಗೆ ನ್ಯಾಯವನ್ನು ವಿತರಿಸುವುದರಲ್ಲಿ ಸಂತೋಷಪಡುತ್ತಿದ್ದನು ಎಂದು ಹೇಳಿದೆ. ನ್ಯಾಯಶಾಸ್ತ್ರದಲ್ಲಿ ಪರಿಣತನಾಗಿದ್ದನೆಂದು ಶಾಸನಗಳು ಇಮ್ಮಡಿ ಪುಲಕೇಶಿಯನ್ನು ಪ್ರಶಂಸಿಸುತ್ತವೆ. ಅವರು ಸ್ಮೃತಿ, ಶ್ರುತಿಗಳಲ್ಲಿಯೂ ಇತರ ಪ್ರಾಚೀನ ಶಾಸ್ತ್ರಗ್ರಂಥಗಳಲ್ಲಿಯೂ ಕೋವಿದರಾಗಿದ್ದರು.

ಪ್ರಾಂತ, ಜಿಲ್ಲೆ ಮತ್ತು ಗ್ರಾಮ ಹಂತಗಳಲ್ಲಿ ರಾಜನು ನೇಮಿಸಿದ ಅಧಿಕಾರಿಗಳು ನ್ಯಾಯವನ್ನು ವಿತರಿಸುತ್ತಿದ್ದರು. ಕೊನೆಯ ಮೇಲ್ಮನವಿಯನ್ನು ರಾಜನಿಗೆ ಸಲ್ಲಿಸಬಹುದಾಗಿತ್ತು. ನ್ಯಾಯಾಡಳಿತದಲ್ಲಿ ಸ್ಮೃತಿಗಳಲ್ಲೂ ಶಾಸ್ತ್ರಗಳಲ್ಲೂ ಇರುವ ಆದೇಶಗಳನ್ನು ಪಾಲಿಸಲಾಗುತ್ತಿತ್ತು.

ರಾಣಿ : ಆಡಳಿತದಲ್ಲಿ ಅವಳ ಪಾತ್ರ

ರಾಜ್ಯದ ಆಡಳಿತದಲ್ಲಿ ಮುಖ್ಯವಾದ ಪಾತ್ರವನ್ನು ವಹಿಸಿದ ರಾಣಿಯರನ್ನು, ರಾಜನ ಪತ್ನಿಯರನ್ನು ಶಾಸನಗಳು ಉಲ್ಲೇಖಿಸುತ್ತವೆ. ಉದಾಹರಣೆಗೆ, ಚಂದ್ರಾದಿತ್ಯನ ರಾಣಿ ವಿಜಯಮಹಾದೇವಿಯು ತನ್ನ ಪತಿಯು ತೀರಿಕೊಂಡ ಮೇಲೆ, ಬಹುಶಃ ಅಪ್ರಾಪ್ತ ವಯಸ್ಕನಾಗಿದ್ದ ಮಗನ ಪರವಾಗಿ ರಿಜೆಂಟ್ ಆಗಿ ಆಡಳಿತ ನಡೆಸಿದಳು. ಅವಳಿಗೆ ಭಟ್ಟಾರಿಕಾ ಮತ್ತು ಮಹಾದೇವಿ ಎಂಬ ಬಿರುದುಗಳಿದ್ದವು. ಅವಳಿಗಿದ್ದ ಸಾಮ್ರಾಜ್ಞಿ  ಸ್ಥಾನವನ್ನು ಅವು ಸೂಚಿಸುತ್ತಿದ್ದವು. ಅನೇಕ ವೇಳೆ ರಾಜನು ಅಧಿಕೃತವಾಗಿ ಪ್ರವಾಸ ಹೊರಟಾಗ ರಾಣಿಯೂ ಅವನ ಜೊತೆಯಲ್ಲಿ ಇರುತ್ತಿದ್ದಳು. ಕೊನೆಯ ಚಾಲುಕ್ಯ ಚಕ್ರವರ್ತಿ ಇಮ್ಮಡಿ ಕೀರ್ತಿವರ್ಮನು ರಕ್ತಪುರದ ಸೇನಾ ಶಿಬಿರದಲ್ಲಿದ್ದಾಗಲೇ ರಾಣಿಯ ಕೋರಿಕೆಯಂತೆ ಒಂದು ದಾನವನ್ನು ನೀಡಿದ ವಿಷಯ ಶಾಸನದಲ್ಲಿ ಉಲ್ಲೇಖವಾಗಿದೆ. ವರ್ಷದ ನಮೂದಿಲ್ಲದ ಕುರ್ತುಕೋಟೆ ಶಾಸನವು ಕುರುತಕುಂಟೆಯನ್ನು ಲೋಕತಿ ನಿಮ್ಮಡಿಯು ಆಳುತ್ತಿದ್ದಳೆಂದು ಹೇಳುತ್ತದೆ. ಇದು ವಿಜಯಾ ದಿತ್ಯನ ಸೊಸೆ, ಹೈಹಯ ರಾಜಕುಮಾರಿ ಲೋಕಮಹಾದೇವಿಯೇ ಎಂದು ನೀಲಕಂಠಶಾಸ್ತ್ರಿ ಯವರು ಹೇಳುತ್ತಾರೆ.

ಶಿಕ್ಷಣದ ಪ್ರಸಾರದಲ್ಲಿ ಮತ್ತು ದಾನಧರ್ಮಗಳನ್ನು ಪ್ರೋಚಾಲುಕ್ಯ ರಾಣಿಯರು ತುಂಬ ಆಸಕ್ತಿ ವಹಿಸಿದ್ದರು. ವಿನಯಾದಿತ್ಯನ ಪುಣೆ ದಾನಶಾಸನದಲ್ಲಿ ಹೇಳಿರುವ ದಾನವನ್ನು ಅವನು ಮಾಡಿದ್ದು ಮುಖ್ಯ ರಾಣಿಯಾದ ವಿನಯವತಿಯ ಪ್ರೇರಣೆಯಿಂದ, ಕನ್ಯಾಧರ್ಮಾರ್ಥವಾಗಿ ಆ ಭೂಮಿಯನ್ನು ಅವನು ದಾನ ಮಾಡಿದನು. ವಿಜಯಾದಿತ್ಯನ ಕಾಲದ ಬಾದಾಮಿ ಸ್ತಂಭಶಾಸನದಲ್ಲಿ ಅದೇ ರಾಣಿಯನ್ನು ರಾಜಮಾತಾ ಎಂದು ವರ್ಣಿಸಿದೆ. ತನ್ನ ಮಗ, ಆಳುತ್ತಿದ್ದ ಚಕ್ರವರ್ತಿಯ ಸಮ್ಮತಿಯಂತೆ ಬಾದಾಮಿಯಲ್ಲಿ ಅವಳು ಹಿಂದೂ ತ್ರಿಮೂರ್ತಿಗಳನ್ನು ಸ್ಥಾಪಿಸಿದರು. ಒಂದನೇ ವಿಕ್ರಮಾದಿತ್ಯನ ಗದ್ವಾಲ್ ಫಲಕಗಳನ್ನು ಹಾಕಿಸಿದ್ದು ಚಾಲುಕ್ಯ ರಾಜಕುಮಾರಿ ಗಂಗಾಮಹಾದೇವಿಯ ಕೋರಿಕೆಯಂತೆ, ವಿಜಯಾದಿತ್ಯನು ತನ್ನ ಸಹೋದರಿ ಕುಂಕುಮದೇವಿಯ ಕೋರಿಕೆಯಂತೆ ಒಂದು ದಾನ ಮಾಡಿದನ್ನು ಬಾಗಲಕೋಟೆ ತಾಮ್ರಫಲಕ ಶಾಸನವು ದಾಖಲಿಸುತ್ತದೆ. ಅವರು ಪುಲಿಗೆರೆಯಲ್ಲಿ ಒಂದು ಜೈನಮಠವನ್ನು ಕಟ್ಟಿಸಿದರೆಂದು ವಿಜಯಾದಿತ್ಯನ ಶಿಗ್ಗಾಂವ್ ಫಲಕಗಳಿಂದ ತಿಳಿಯುತ್ತದೆ.

ಪಟ್ಟದಕಲ್ಲಿನಲ್ಲಿನ ದೇವಾಲಯಗಳಲ್ಲಿರುವ ಶಾಸನಗಳು ಇಮ್ಮಡಿ ವಿಕ್ರಮಾದಿತ್ಯನ ಇಬ್ಬರು ರಾಣಿಯರಾದ ಲೋಕಮಹಾದೇವಿ ಮತ್ತು ತ್ರೈಲೋಕ್ಯಮಹಾದೇವಿಯರನ್ನು ಉಲ್ಲೇಖಿಸುತ್ತವೆ. ರಾಜನು ಕಾಂಚಿಯ ಮೇಲೆ ಮೂರು ಸಾರಿ ವಿಜಯ ಸಾಧಿಸಿದುದರ ನೆನಪಿಗಾಗಿ ಲೋಕಮಹಾದೇವಿಯು ಕಟ್ಟಿಸಿದ ಶಾಸನದ ವಾಸ್ತುಶಿಲ್ಪಿಯನ್ನು ಅವನ ಸೂತ್ರಧಾರಿ ಜಾತಿಗೆ ಸೇರಿಸಿಕೊಂಡುದನ್ನು ಶಾಸನವು ಹೇಳುತ್ತದೆ. ಚಾಲುಕ್ಯವಿಜಯವನ್ನು ದೇಶಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿತ್ತು. ಅದರಲ್ಲಿ ದೇವಾಲಯ ನಿರ್ಮಾಣವೂ ಒಂದು ಚಟುವಟಿಕೆಯಾಗಿತ್ತು ಎಂದು ಹೇಳಿದೆ. ಅಲ್ಲದೆ, ಅವಳು ತನ್ನ ಮಾವ ವಿಜಯಾದಿತ್ಯನು ಗಾಯಕರಿಗೆ ನೀಡಿದ್ದ ಉಡುಗೊರೆಯನ್ನು ಅವಳು ಸ್ಥಿರೀಕರಿಸಿದಳು ಎಂದು ಇನ್ನೊಂದು ಶಾಸನವು ಹೇಳುತ್ತದೆ. ರಾಣಿ ಲೋಕಮಹಾದೇವಿಯು ಲೋಕೇಶ್ವರ ದೇವಾಲಯವನ್ನು, ತ್ರೈಲೋಕ್ಯಮಹಾದೇವಿಯು ತ್ರೈಲೋಕೇಶ್ವರ ದೇವಾಲಯವನ್ನು ಕಟ್ಟಿಸಿದ ವಿಷಯವನ್ನು ಪಟ್ಟದಕಲ್ಲಿನ ಇನ್ನೊಂದು ಶಾಸನವು ವರ್ಣಿಸುತ್ತದೆ.

ರಾಜಮನೆತನದ ಇತರ ಸದಸ್ಯರು

ರಾಜವಂಶಕ್ಕೆ ಸೇರಿದ ಇತರ ಸದಸ್ಯರಲ್ಲಿ ಹಲವರು ಆಡಳಿತದಲ್ಲೂ ಸಾಂಸ್ಕೃತಿಕ ಚಟುವಟಿಕೆಗಳ ಪ್ರಸಾರದಲ್ಲೂ ರಾಜನಿಗೆ ಸಹಾಯ ಮಾಡುತ್ತಿದ್ದರು. ರಾಜರು ಕುಟುಂಬ ದಲ್ಲಿದ್ದ ಸಮರ್ಥರೂ, ನಿಷ್ಠರೂ ಆದ ಸದಸ್ಯರ ಸೇವೆಯನ್ನು ರಾಜ್ಯದ ಸೂಕ್ತ ಆಡಳಿತೀಯ ಹುದ್ದೆಗಳಿಗೆ ಅವರನ್ನು ನೇಮಿಸುವುದರ ಮೂಲಕ ಪಡೆದುಕೊಳ್ಳುತ್ತಿದ್ದನು. ಕೆಲವರು ಪ್ರಾಂತಗಳ ಗವರ್ನರಾಗಿದ್ದರು, ಸೇನೆಯಲ್ಲಿ ದಳಪತಿಗಳಾಗಿದ್ದರು. ಹೀಗೆ ವಿಷ್ಣುವರ್ಧನ ಮತ್ತು ಜಯಸಿಂಹರು ಪಶ್ಚಿಮದಖನ್ನಿನ ಪ್ರಾಂತ್ಯಗಳಲ್ಲಿ ಗವರ್ನರಾಗಿ ಆಡಳಿತ ನಿರ್ವಹಿಸುತ್ತಿದ್ದರು. ಬಹುಶಃ ಮಂಗಳೇಶ ಮತ್ತು ಒಂದನೇ ವಿಕ್ರಮಾದಿತ್ಯರು ಕ್ರಮವಾಗಿ ಒಂದನೇ ಕೀರ್ತಿವರ್ಮ ಮತ್ತು ವಿಜಯಭಟ್ಟಾರಿಕಾ, ಇವರ ಆಳ್ವಿಕೆಯಲ್ಲಿ ಸೇನಾ ದಂಡನಾಯಕರಾಗಿ ಸೇವೆ ಸಲ್ಲಿಸುತ್ತಿದ್ದಿರಬಹುದು. ಹೀಗೆ ಕುಟುಂಬದ ಇತರ ಸದಸ್ಯರು ಭಾಗವಹಿಸುವುದು ರಾಜವಂಶಕ್ಕೆ ಬಲವನ್ನೂ ಆಳಿಕೆಗೆ ಸ್ಥಿರತೆಯನ್ನೂ ಕೊಡುತ್ತಿದ್ದಿತು.

ಮಂತ್ರಿ ಪರಿಷತ್ತು

ರಾಜನು ಮಂತ್ರಿಮಂಡಳದ ನೆರವಿನಿಂದ ರಾಜ್ಯವನ್ನಾಳಬೇಕು ಎಂದು ಸ್ಮೃತಿಗಳು ಹೇಳುತ್ತವೆ. ಇದುವರೆಗೆ ಗಮನಿಸಿದ ಚಾಲುಕ್ಯ ಶಾಸನಗಳು ಹಾಗೆ ಮಂತ್ರಿ ಪರಿಷತ್ತು ಇದ್ದುದರ ಬಗೆಗೆ ಬೆಳಕು ಚೆಲ್ಲುವುವಾದರೂ ಅವು ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕೆಲವು ಮಂತ್ರಿಗಳನ್ನು ವ್ಯಕ್ತಿಗತವಾಗಿ ಉಲ್ಲೇಖಿಸುತ್ತವೆ. ಚಾಲುಕ್ಯರು, ರಾಷ್ಟ್ರಕೂಟರು ಮತ್ತು ಯಾದವರ ಕಾಲದಲ್ಲಿ ದಖನ್ನಿನಲ್ಲಿ ಮಂತ್ರಿ ಪರಿಷತ್ತುಗಳಿದ್ದವೆಂಬುದಕ್ಕೆ ಸಾಕಷ್ಟು ಆಧಾರಗಳಿವೆಯೆಂದು ಮಹಾಲಿಂಗಂ ಅಭಿಪ್ರಾಯಪಡುತ್ತಾರೆ. ಪೂರ್ವಚಾಲುಕ್ಯರ ಶಾಸನಗಳು ಇತರ ಸಚಿವರ ಜೊತೆಗೆ ಮಂತ್ರಿಯನ್ನೂ ಪ್ರಧಾನರನ್ನೂ ಉಲ್ಲೇಖಿಸುತ್ತವೆ. ಬಾದಾಮಿ ಚಾಲುಕ್ಯರ ಶಾಸನಗಳನ್ನು ಸಂಧಿವಿಗ್ರಹಿಕ ಎಂಬ ಮಂತ್ರಿಯು ರಚಿಸುತ್ತಿದ್ದನು. ಅವನು ಯುದ್ಧ ಮತ್ತು ಸಂಧಿಗಳ ಮಂತ್ರಿ.

ಪರಿಷತ್ತಿನಲ್ಲಿ ಎಷ್ಟು ಜನ ಸಚಿವರಿರುತ್ತಿದ್ದರು. ಎನ್ನುವುದು ತಿಳಿಯುವುದಿಲ್ಲ. ಸ್ಮೃತಿಗಳು ಸಚಿವರ ಪ್ರಾಮುಖ್ಯತೆಯನ್ನು ಒತ್ತಿ ಹೇಳಿ, ಅವರನ್ನು ಮೂರು, ಐದು, ಏಳು ಹೀಗೆ ಬೆಸಸಂಖ್ಯೆಯಲ್ಲಿ ನೇಮಿಸಬೇಕು ಎಂದು ಹೇಳುತ್ತವೆ. ಈ ವಿಷಯವಾಗಿ ಹಲವು ಅಭಿಪ್ರಾಯ ಗಳಿದ್ದರೂ, ರಾಜ್ಯದ ವಿಸ್ತೀರ್ಣಕ್ಕೆ ಅನುಗುಣವಾಗಿ ಮಂತ್ರಿ ಪರಿಷತ್ತಿನ ಗಾತ್ರವಿರುತ್ತಿತ್ತು ಎಂದು ಹೇಳಬಹುದು. ಕಂದಾಯ, ರಾಜ್ಯದ ವೆಚ್ಚ, ಅರಮನೆ ಮತ್ತು ಸೈನ್ಯ ಇವುಗಳ ಹೊಣೆಗಾರಿಕೆಯನ್ನು ಮಂತ್ರಿಗಳಿಗೆ ವಹಿಸಲಾಗುತ್ತಿತ್ತು.

ಮಂತ್ರಿಗಳನ್ನು ರಾಜನು ನೇಮಕ ಮಾಡುತ್ತಿದ್ದನು. ಹುದ್ದೆಯು ಅನುವಂಶೀಯವಾಗಿತ್ತು. ಉತ್ತರಾಧಿಕಾರಿಯು ಈ ಉನ್ನತ ಹುದ್ದೆಗೆ ಅರ್ಹನಾಗಿರುತ್ತಿದ್ದರೆ ಮಾತ್ರ ಅದು ಬಹಳ ಉನ್ನತವೂ ಜವಾಬ್ದಾರಿಯುತವೂ ಆದ ಸ್ಥಾನವಾಗಿದ್ದುದರಿಂದ ಉತ್ತಮ ಅರ್ಹತೆಯುಳ್ಳ, ಸಚ್ಚಾರಿತ್ರ್ಯಕ್ಕೆ ಹೆಸರಾದ, ಸತ್ಯವಂತರೂ ಉದಾರಿಗಳೂ ಆದ, ಕಾರ್ಯಶ್ರದ್ಧೆ, ವಿದ್ವತ್ತು, ಪರಾಕ್ರಮ, ರಾಜ್ಯದ ಸಮಸ್ಯೆಗಳ ಬಗೆಗೆ ಸೂಕ್ಷ್ಮವಾದ ಒಳನೋಟ, ಉನ್ನತಮಟ್ಟದ ಚರ್ಚೆಗಳನ್ನು, ವಿಚಾರಗಳನ್ನು ಗೋಪ್ಯವಾಗಿಟ್ಟುಕೊಳ್ಳುವ ಸಮರ್ಥ ವ್ಯಕ್ತಿಗಳನ್ನು ಆರಿಸಿ ನೇಮಿಸಲಾಗುತ್ತಿತ್ತು.

ಚಾಲುಕ್ಯ ಸರಕಾರದ ಅತಿಮುಖ್ಯ ಸದಸ್ಯನಾದ ಸಂಧಿವಿಗ್ರಹಿಕನನ್ನು ಶಾಸನಗಳು ಪದೇ ಪದೇ ಉಲ್ಲೇಖಿಸುತ್ತವೆ. ಕಟ್ಟಿ ಅರಸನ ಗೊಡಚಿ ಫಲಕಗಳು ಒಂದನೇ ಕೀರ್ತಿವರ್ಮನ ಒಬ್ಬ ಸಚಿವನು ಸರಕಾರದ ಹೊರೆಯನ್ನೂ ರಾಜಸರ್ವಸ್ವವನ್ನೂ ಹೊತ್ತಿದ್ದನು ಎಂದು ವರ್ಣಿಸುತ್ತವೆ. ಚಾಲುಕ್ಯರ ಆಡಳಿತದಲ್ಲಿ ಮಂತ್ರಿಗಳಿಗಿದ್ದ ಸ್ಥಾನಮಾನ ಎಂಥದು ಎಂಬುದನ್ನೂ ಈ ವರ್ಣನೆಯು ಸ್ಪಷ್ಟವಾಗಿ ಸೂಚಿಸುತ್ತದೆ. ಮಂತ್ರಿಯ ಅತಿಮುಖ್ಯ ಕರ್ತವ್ಯ ಸಾಮ್ರಾಜ್ಯದ ವ್ಯವಹಾರಗಳನ್ನು ಕುರಿತು ರಾಜನಿಗೆ ಸಲಹೆ ಕೊಡುವುದು. ಮಂತ್ರಿಗಳಿಗೆ ಗಣನೀಯವಾದ ಅಧಿಕಾರವಿದ್ದಿತು. ತುರ್ತು ಪರಿಸ್ಥಿತಿಯಲ್ಲಿ ಅವರು ರಾಜಕುಮಾರರ ನಡುವಣಿಂದ ತಮಗೆ ಸೂಕ್ತರೆನಿಸಿದವರನ್ನು ಸಿಂಹಾಸನದ ಮೇಲಿರಿಸಿ ತಾವು ಆಡಳಿತವನ್ನು ನಿರ್ವಹಿಸುತ್ತಿದ್ದರು. ಇಮ್ಮಡಿ ಪುಲಕೇಶಿ ಮರಣಾನಂತರ ನಡೆದ ಘಟನೆಗಳಿಂದ ಇದನ್ನು ತಿಳಿಯಬಹುದು.

ಮಂತ್ರಿಯೊಬ್ಬನು ಹಲವು ಹುದ್ದೆಗಳನ್ನೂ ನಿರ್ವಹಿಸುತ್ತಿದ್ದುದುಂಟು. ಮಾನರ್ ಫಲಕಗಳು ಹೇಳುವಂತೆ, ಮಂತ್ರಿಯಾದ ಭಟ್ಟಿರುದ್ರನಾಗನು ಅಕ್ಷಪಟಲಾಧಿಕರಣಾಧಿಪತಿ (ದಾಖಲೆಗಳ ಇಲಾಖೆ), ದಿವಿರಪತಿ (ಕಚೇರಿಯ ಮುಖ್ಯಸ್ಥ) ಹಾಗೂ ಸಂಧಿವಿಗ್ರಹಿಕ (ಸಂಧಿ ಮತ್ತು ಯುದ್ಧದ ಇಲಾಖೆ) ಮೂರೂ ಆಗಿದ್ದನು.

ಮಂತ್ರಿಯ ಹುದ್ದೆಯು ಸಾಮಾನ್ಯವಾಗಿ ಆನುವಂಶಿಕವಾಗಿತ್ತು. ಒಂದನೇ ವಿಕ್ರಮಾದಿತ್ಯನ ಕಾಲದಲ್ಲಿ ಜಯಸೇನನು ಮಹಾಸಂಧಿವಿಗ್ರಹಿಕನಾಗಿದ್ದನು. ಅವನು ವಿನಯಾದಿತ್ಯ ಮತ್ತು ವಿಜಯಾದಿತ್ಯರ ಆಳ್ವಿಕೆಯಲ್ಲಿ ಸಂಧಿವಿಗ್ರಹಿಕನಾಗಿ ಸೇವೆ ಸಲ್ಲಿಸಿದ ಶ್ರೀರಾಮ ಪುಣ್ಯವಲ್ಲಭನ ಮಾವ. ವಿಜಯಾದಿತ್ಯನ ಆಳಿಕೆಯ ಕೊನೆಯ ಭಾಗದಲ್ಲಿ ನಿರವದ್ಯ ಪುಣ್ಯವಲ್ಲಭನು ಸಂಧಿವಿಗ್ರಹಿಕನಾದನು. ಅಲ್ಲದೆ, ಇಮ್ಮಡಿ ವಿಕ್ರಮಾದಿತ್ಯನ ಆಳಿಕೆಯಲ್ಲಿ ಸಂಧಿವಿಗ್ರಹಿಕನಾದ ಅನಿವಾರಿಕನು ಅದೇ ಪುಣ್ಯವಲ್ಲಭ ಕುಟುಂಬಕ್ಕೆ ಸೇರಿದವನು. ಮತ್ತೆ ಕೊನೆಯ ಚಾಲುಕ್ಯ ಚಕ್ರವರ್ತಿಯ ಆಳಿಕೆಯಲ್ಲಿ ಸಂಧಿವಿಗ್ರಹಿಕನಾಗಿ ಸೇವೆ ಸಲ್ಲಿಸಿದ ಧನಂಜಯನೂ ಪುಣ್ಯವಲ್ಲಭ ವಂಶದವನೇ. ಉದಾತ್ತರೂ ರಾಜ್ಯಕ್ಕೆ ನಿಷ್ಠೆಯುಳ್ಳವರೂ ಆದ ಕೆಲವು ಕುಟುಂಬಗಳು ಇದ್ದು, ಅವರ ಸೇವೆಯನ್ನು ಆಯಾಕಾಲದ ಅರಸರು ಗುರುತಿಸಿ, ಗೌರವಿಸಿ ಪುರಸ್ಕರಿಸುತ್ತಿದ್ದರು.

ಮಂತ್ರಿಗಳು ಸದಾಕಾಲವೂ ರಾಜನ ಸೇವೆಯಲ್ಲಿರುತ್ತಿದ್ದರು. ರಾಜ್ಯದಲ್ಲಿ ತೆರಿಗೆಗಳನ್ನು ನಗದು ಮತ್ತು ವಸ್ತು ರೂಪಗಳೆರಡರಲ್ಲೂ ಸಂಗ್ರಹಿಸುತ್ತಿದ್ದುದರಿಂದ, ಅವರ ವೇತನ ಮೊದಲಾದ ಪ್ರತಿಫಲಗಳನ್ನು ನಗದಾಗಿ ಮತ್ತು ವಸ್ತುರೂಪದಲ್ಲಿ ಮಾಡಲಾಗುತ್ತಿತ್ತು. ಭೂಮಿಯನ್ನೂ, ಬೆಲೆಯುಳ್ಳ ಅನೇಕ ವಸ್ತುಗಳನ್ನೂ ಅವರಿಗೆ ಕೊಡುತ್ತಿದ್ದುದಲ್ಲದೆ, ವಿಶಿಷ್ಟತೆಯನ್ನೂ ಸೂಚಿಸುವ ಬಿರುದುಗಳನ್ನು ನೀಡಿ ಪುರಸ್ಕರಿಸುತ್ತಿದ್ದರು.