ಚಾತುವಣರ್ ವ್ಯವಸ್ಥೆ ಮುಂದುವರಿದಿತ್ತೇನೊ ನಿಜ. ಆದರೆ ವಾಸ್ತವವಾಗಿ ಇದು ಹೇಗೆ ಕಾರ್ಯಗತವಾಗಿತ್ತೆಂಬುದು ಲಭ್ಯವಿರುವ ಶಾಸನಗಳೆ ಮೊದಲಾದವುಗಳಿಂದ ಸ್ಪಷ್ಟವಾಗಿ ತಿಳಿಯುವುದಿಲ್ಲ. ವಿದ್ಯಾರ್ಜನೆ ಮತ್ತು ವಿದ್ಯಾದಾನದಲ್ಲಿ ವಿಶೇಷವಾಗಿ ನಿರತರಾಗಿದ್ದ ಬ್ರಾಹ್ಮಣ ವರ್ಗದವರು ಸಮಾಜದಲ್ಲಿ ಗೌರವ ಸ್ಥಾನದಲ್ಲಿದ್ದರು. ವೈದಿಕ ಶ್ರೌತ ಕರ್ಮಗಳಾದ ಪಂಚಮಹಾಯಜ್ಞಗಳು, ಹವನಗಳು, ಅಗ್ನಿಹೋತ್ರ, ವೈಶ್ವದೇವ, ಪಾರು ಮೊದಲಾದ ಕರ್ಮಗಳನ್ನು ನಡೆಸುತ್ತಿದ್ದರು. ಶಾಸನಗಳಲ್ಲಿ ಗೋವುಗಳಿಗೂ ಬ್ರಾಹ್ಮಣರಿಗೂ ಒಳ್ಳೆಯದಾಗಲಿ ಎಂಬ ವಿಶೇಷ ವಾಕ್ಯವು ಸಮಾಜದಲ್ಲಿ ಬ್ರಾಹ್ಮಣರ ಸ್ಥಾನ-ಮಾನಗಳನ್ನು ಸೂಚಿಸುತ್ತವೆ. ಇವರು ವೇದ, ಪುರಾಣ, ಇತಿಹಾಸ ಹಾಗೂ ಇತರ ಶಾಸ್ತ್ರಗಳಲ್ಲಿ ಸಾಮಾನ್ಯವಾಗಿ ಪರಿಣತಿಯನ್ನು ಪಡೆದವರಾಗಿರುತ್ತಿದ್ದರು. ಮತ್ತೆ ಕೆಲವರು ಒಂದು ಅಥವಾ ಹೆಚ್ಚಿನ ವೇದಗಳಲ್ಲಿ ವೇದಾಂಗಗಳಲ್ಲಿ ವಿಶೇಷ ಪರಿಣತಿಯನ್ನು ಪಡೆದವರಾಗಿರುತ್ತಿದ್ದರು. ಮತ್ತೆ ಕೆಲವರು ತರ್ಕ, ವ್ಯಾಕರಣ ಮೊದಲಾದ ಶಾಸ್ತ್ರಗಳಲ್ಲಿ ಘನ ವಿದ್ವಾಂಸರಿದ್ದರು. ಉದಾಹರಣೆಗೆ ಭೀಮಸ್ವಾಮಿ, ಜನಸ್ವಾಮಿ, ಪಾಂಡುರಂಗಸ್ವಾಮಿ ಮೊದಲಾದವರು ೪ ವೇದಗಳಲ್ಲಿ, ಹಾಗೆಯೇ ದಿವಾಕರ ಸ್ವಾಮಿ, ಭೂಜಸ್ವಾಮಿ, ರೇವಸ್ವಾಮಿ ಅಶೇತಿ ತರ್ಕದಲ್ಲಿಯೂ (೮೦ ತರ್ಕಗಳು?) ಆದಿತ್ಯ ಸ್ವಾಮಿ ಎಂಬುವರು ಸಹಸ್ರ ತರ್ಕದಲ್ಲಿಯೂ, ಗೋಸ್ವಾಮಿ ವರ್ಣತ್ರಯ ನಿವೃತ್ತಿ ಮೊದಲಾದ ಕ್ಷೇತ್ರಗಳಲ್ಲಿ ವಿಶೇಷ ಪಾಂಡಿತ್ಯವನ್ನು ಗಳಿಸಿದ್ದರು. ವರ್ಣತ್ರಯ ನಿವೃತ್ತಿ ಎಂದರೆ ಬಹುಶಃ ಮೊದಲನೆ ಮೂರು ವರ್ಣಗಳವರಿಗೆ ಸಾಮಾನ್ಯವಾಗಿ ಸೀಮಿತವಾದ ಅಧ್ಯಯನ ಮತ್ತು ವೃತ್ತಿಗಳಲ್ಲಿ ಪರಿಣತಿ ಎಂದು ಅರ್ಥವಿರುವಂತೆ ಕಾಣುತ್ತದೆ. ಒಂದನೇ ಕೀರ್ತಿವರ್ಮನ ಕಾಲದ ವ್ಯಾಘ್ರಸ್ವಾಮಿ ಎಂಬುವನು ವೇದಗಳು, ವೇದಾಂತಗಳು, ರಾಜನೀತಿ, ವ್ಯಾಕರಣ, ತರ್ಕ, ಕಾವ್ಯ, ನಾಟಕ, ಇತಿಹಾಸ, ಸಾಹಿತ್ಯ, ಪುರಾಣ ಹಾಗೂ ಸಂಗೀತ ಮೊದಲಾದ ಹಲವಾರು ಶಾಸ್ತ್ರಗಳಲ್ಲಿ ಪಾಂಡಿತ್ಯವನ್ನು ಪಡೆದು ಅತಿ ಶ್ರೇಷ್ಠ ವಿದ್ವಾಂಸನಾಗಿದ್ದನು. ಚಾಲುಕ್ಯ ಅರಸನಲ್ಲಿ ಉಚ್ಚ ಜವಾಬ್ದಾರಿ ಸ್ಥಾನವನ್ನು ಅಂದರೆ ಬಹುಶಃ ಪ್ರಧಾನಮಂತ್ರಿಯಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದನು. ಇವನನ್ನು ರಾಜ್ಯ ಸರ್ವಸ್ವ ಧುರಂಧರನೆಂದು ಹೊಗಳಲಾಗಿದೆ. ಪರಂಪರಾನುಗತವಾಗಿ ಬಂದ ವೇದಪುರಾಣಶಾಸ್ತ್ರಗಳನ್ನು ವಿದ್ಯಾರ್ಥಿಗಳಿಗೆ ಬೋಧನೆ ಮಾಡುವುದು ಬ್ರಾಹ್ಮಣರಿಗೆ ಸೇರಿತ್ತು. ಇವರ ಆಳವಾದ, ಘನವಾದ ವಿದ್ವತ್ತು ಆಳರಸರ ಮೇಲೆ ಹಾಗೂ ಅಧಿಕಾರಿಗಳ ಮೇಲೆ ಉತ್ತಮ ಪ್ರಭಾವವನ್ನು ಬೀರಿತ್ತು. ಅವರ ಪರಂಪರೆಯ ಧಾರ್ಮಿಕ ಕರ್ಮಗಳನ್ನು ನಡೆಸುವುದರಲ್ಲಿ ಬ್ರಾಹ್ಮಣರು ಮುಖ್ಯ ಪಾತ್ರವನ್ನು ವಹಿಸುತ್ತಿದ್ದರು ಹಾಗೂ ಸ್ಮೃತಿಗಳಲ್ಲಿ ಪ್ರತಿಪಾದಿಸಿದ ಘನ ಆಚಾರ ವಿಚಾರಗಳನ್ನು ರೂಪಿಸುವುದರಲ್ಲಿ ಇವರ ಗಣನೀಯ ಪಾತ್ರವಿತ್ತು.

ರಾಜ್ಯಭಾರದ ಕರ್ತವ್ಯವನ್ನು ನೇರವೇರಿಸುವವರು ಕ್ಷತ್ರಿಯರು. ಸಮಾಜದಲ್ಲಿ ಸಾಮಾಜಿಕ ವ್ಯವಸ್ಥೆಯನ್ನು ರಕ್ಷಿಸುವುದು ಮತ್ತು ಮುಂದುವರೆಸಿಕೊಂಡು ಹೋಗುವುದು ಇವರ ಜವಾಬ್ದಾರಿ. ಒಂದನೇ ಕೀರ್ತಿವರ್ಮನಿಗೆ ವರ್ಣಾಶ್ರಮ ನ್ಯಾಯದಂತೆ ತನ್ನ ಪ್ರಜೆಗಳನ್ನು ರಕ್ಷಿಸುವುದರಲ್ಲಿ ಹೆಮ್ಮೆ ಇದ್ದಿತು. ಒಂದನೇ ಪುಲಕೇಶಿಯು ಪುರಾಣಗಳಲ್ಲಿ ನಿರ್ದೇಶಿತವಾದ ೧೬ ಮಹಾದಾನಗಳಲ್ಲಿ ಒಂದಾದ ಹಿರಣ್ಯಗರ್ಭ ದಾನವನ್ನು, ಶೌತಯಜ್ಞಗಳಲ್ಲಿ ಒಂದಾದ ಅಶ್ವಮೇಧವನ್ನು ಮಾಡಿದನು. ಈ ಧಾರ್ಮಿಕ ಕರ್ಮಗಳಿಂದ ತಮ್ಮ ಪ್ರಭುತ್ವವನ್ನು ಶಾಸ್ತ್ರರೀತಿಯಂತೆ ನಿಯಮಬದ್ಧವಾಗಿ ಮಾಡುವ ಪ್ರಯತ್ನವು ಇದಾಗಿತ್ತು. ಯುದ್ಧಗಳಲ್ಲಿ ಜಯಶೀಲರಾಗಿ ತಮ್ಮ ರಾಜಕೀಯ ಪ್ರಭುತ್ವ ಮತ್ತು ಪ್ರಭಾವವನ್ನು ವಿಸ್ತರಿಸಿಕೊಂಡು ಸಂಗ್ರಹವಾದ ಸಂಪತ್ತನ್ನು ದೇವಾಲಯಗಳಿಗೆ ಇತರ ಸಾರ್ವಜನಿಕ ಕಾರ್ಯಗಳಿಗೆ ವಿನಿಯೋಗಿಸುತ್ತಿದ್ದರು. ಕೃಷಿ ಅಭಿವೃದ್ದಿಗೋಸ್ಕರ ದೊಡ್ಡ ದೊಡ್ಡ ಕೆರೆಗಳನ್ನು ದುರ್ಬಲರಿಗೆ, ಅಲಕ್ಷಿತರಿಗೆ, ಬಡವರಿಗೆ ಅನ್ನಛತ್ರಗಳನ್ನು ವೈದ್ಯಶಾಲೆಗಳನ್ನು ನಿರ್ಮಿಸುತ್ತಿದ್ದರು. ಯೋಗ್ಯ ಬ್ರಾಹ್ಮಣರಿಗೆ ಗ್ರಾಮಗಳನ್ನು ಭೂಮಿದಾನ ಮಾಡುತ್ತಿದ್ದರು ಮತ್ತು ದೇವಾಲಯವನ್ನು ನಿರ್ಮಿಸುವುದು ಮೊದಲಾದ ಕಾರ್ಯಗಳನ್ನು ತಮ್ಮ ಪುಣ್ಯಾರ್ಜನೆಗೋಸ್ಕರ ಮಾಡುತ್ತಿದ್ದರು. ವಿದ್ವತ್ ಜನರು ಅದೃಷ್ಟಹೀನ ಹಾಗೂ ಕೆಳವರ್ಗದ ಜನವರ್ಗದ ಬಗ್ಗೆ ವಿಶಾಲ ಮನೋಭಾವವನ್ನು ತಳೆದಿದ್ದರು. ದಾನ ಕೊಟ್ಟು ಕ್ಷೇತ್ರದಲ್ಲಿಯ ಸಮಗಾರರನ್ನು ಮತ್ತು ಚಂಡಾಲರನ್ನು ದಾನ ತೆಗೆದುಕೊಂಡವರಿಂದ ಹೊರತುಪಡಿಸುತ್ತಿದ್ದರು ಮತ್ತು ಸಮಗಾರರ ವೃತ್ತಿಗೆ ತೆರಿಗೆ ವಿನಾಯಿತಿಯಿದ್ದಿತು.

ಅರಸರು ಉತ್ತಮ ರೀತಿಯ ಶಿಕ್ಷಣ ಪಡೆಯುತ್ತಿದ್ದರು. ಒಂದನೇ ಪುಲಕೇಶಿಯು ಮಾನವ ಧರ್ಮಶಾಸ್ತ್ರ, ಪುರಾಣ, ರಾಮಾಯಣ, ಮಹಾಭಾರತ, ಇತಿಹಾಸ, ನೀತಿಶಾಸ್ತ್ರ ಮೊದಲಾದವುಗಳನ್ನು ಚೆನ್ನಾಗಿ ತಿಳಿದುಕೊಂಡಿದ್ದನು. ಪುರಾಣ ಪ್ರಸಿದ್ಧರಾದ ಶಿಬಿ, ಪ್ರಥುರಾಮ, ಮಾಂಧಾತ್ಯ ಮೊದಲಾದ ಪುರಾಣ ಪ್ರಸಿದ್ಧ ಚಕ್ರವರ್ತಿಗಳು ಇವರಿಗೆ ಆದರ್ಶಪ್ರಾಯರು. ಇದರ ಮಿತ್ರರಾಜರು ಮಹಾಮಂಡಲೇಶ್ವರರು ಸಮಯ ಬಂದಾಗ ಹಲವಾರು ವಿಘ್ನಗಳಿದ್ದಾಗ್ಯೂ ತಮ್ಮ ಅರಸರುಗಳಿಗೆ ಸಹಾಯ ಮಾಡುತ್ತಿದ್ದರು. ಅಳೂಕ(ಪ) ಮಹಾರಾಜನು ತೊಂದರೆಗಳನ್ನು ಎದುರಿಸುತ್ತಾ ಚಾಳುಕ್ಯ ಮಂಗಳೇಶ್ವರನ ಪರವಾಗಿ ಕೊಲ್ಲೂರಿಗೆ ಹೋಗಿ ಆಡಳಿತದ ಜವಾಬ್ದಾರಿಯನ್ನು ಹೊತ್ತನು.

ಚೀನಾ ಯಾತ್ರಿಕ್ ಹ್ಯೂಯೆನ್‌ತ್ಸಾಂಗನು ಈ ಪ್ರದೇಶದ ಜಯನ ಯುದ್ಧೋತ್ಸಾಹವನ್ನು ವರ್ಣಿಸುತ್ತಾ “ಇವರೇನಾದರೂ ತಮ್ಮ ಸೇಡನ್ನು ತೀರಿಸಿಕೊಳ್ಳುವದಿದ್ದರೆ ತಮ್ಮ ಶತ್ರುವಿಗೆ ಮೊದಲು ಎಚ್ಚರಿಕೆಯನ್ನು ಕೊಡುತ್ತಿದ್ದರು. ಅನಂತರ ಇಬ್ಬರೂ ಭಲ್ಲೆಗಳಿಂದ ಸುಸಜ್ಜಿತರಾಗಿ ಒಬ್ಬರನ್ನೊಬ್ಬರು ಎದುರಿಸುತ್ತಿದ್ದರು. ಒಂದು ವೇಳೆ ಒಬ್ಬನು ಓಡಿಹೋದಲ್ಲಿ ಅವನನ್ನು ಬೆನ್ನಟ್ಟಿ ಹೋಗುತ್ತಿದ್ದರು, ಆದರೆ ಕೊಲ್ಲುತ್ತಿರಲಿಲ್ಲ. ಒಂದು ವೇಳೆ ಸೇನಾಧಿಪತಿಯು ಯುದ್ಧದಲ್ಲಿ ಸೋತರೆ ಅವನನ್ನು ಶಿಕ್ಷಿಸುತ್ತಿರಲಿಲ್ಲ, ಬದಲಾಗಿ ಅವನಿಗೆ ಸ್ತ್ರೀಯ ಉಡಿಗೆ ತೊಡುಗೆಗಳನ್ನು ಕೊಡುತ್ತಿದ್ದರು. ಅದರಿಂದ ಅವನು ತಾನಾಗಿಯೇ ಮರಣವನ್ನಪ್ಪುತ್ತಿದ್ದನು. ಪ್ರತಿಸಲವೂ ಯುದ್ಧಕ್ಕೆ ಹೋಗುವ ಅವರು ಮದ್ಯಪಾನ ಮಾಡಿ ಉನ್ಮತ್ತರಾಗುತ್ತಿದ್ದರು. ತರುವಾಯ ಈಟಿಗಳನ್ನು ಹಿಡಿದು ಹತ್ತು ಸಾವಿರ ಸೈನಿಕರನ್ನಾದರೂ ಎದುರಿಸಿ ಯುದ್ಧಕ್ಕೆ ಆಹ್ವಾನಿಸುತ್ತಿದ್ದರು” ಎಂದು ಹೇಳಿದ್ದಾನೆ. ಇವೆಲ್ಲವನ್ನೂ ಹ್ಯೂಯೆನ್‌ತ್ಸಾಂಗನು ಬಹುಶಃ ಕ್ಷತ್ರಿಯರ ಬಗ್ಗೆ ಹೇಳಿದ ಮಾತುಗಳಿರಬಹುದು.

ವೈಶ್ಯರು ಕೃಷಿ, ವ್ಯಾಪಾರ ಮತ್ತು ವಾಣಿಜ್ಯ ಕ್ಷೇತ್ರಗಳಲ್ಲಿ ನಿಸ್ಸೀಮರಾಗಿದ್ದರು. ಅದೇ ಹ್ಯೂಯೆನ್‌ತ್ಸಾಂಗ್ ಮಹಾರಾಷ್ಟ್ರ(ಅಂದರೆ  ಇಮ್ಮಡಿ ಪುಲಕೇಶಿಯ ರಾಜ್ಯ)ದ ಭೂಮಿಯು ಫಲವತ್ತಾಗಿಯೂ ಸಂಪದ್ಭರಿತವಾಗಿಯೂ ಇದ್ದು ತಪ್ಪದೆ ಆಳರಸರ ವ್ಯವಹಾರಕ್ಕೊಳಪಟ್ಟಿದೆ. ಇದು ಉತ್ತಮ ಬೆಳೆಯನ್ನು ಕೊಡುತ್ತದೆ ಎಂದು ಹೇಳಿದ್ದಾನೆ. ಕೆರೆ ಕಟ್ಟೆಗಳನ್ನು ಕಟ್ಟಿಸಿ ಬೇಸಾಯಕ್ಕೆ ಉತ್ತೇಜನವನ್ನು ಕೊಡುತ್ತಿದ್ದರು. ಚಾಲುಕ್ಯ ಅರಸು ವಿಜಯಾದಿತ್ಯನು ತನ್ನ ರಾಜ್ಯದ ಎಲ್ಲೆಡೆಗಳಲ್ಲಿ ಕೆರೆಗಳ ನಿರ್ಮಾಣ ಕಾರ್ಯವನ್ನು ಕೈಕೊಂಡನು. ಅವುಗಳಲ್ಲಿ ಕೆಲವನ್ನು ವಣ್ಣೆ, ತಟಾಕ, ಕುಪೇರ ತಟಾಕ, ಕೆಂಗಲ-ತಟಾಕಗಳನ್ನು ಇಲ್ಲಿ ಹೆಸರಿಸಬಹುದು. ಬೆಳೆಗಳಲ್ಲಿ ಜೋಳ, ಭತ್ತವಂತೂ ಸರಿಯೇ. ಸಜ್ಜೆ ರಾಗಿ ಮೊದಲಾದವುಗಳನ್ನೂ ಬೆಳೆಯುತ್ತಿದ್ದಿರಬೇಕು. ವ್ಯಾಪಾರಸ್ಥರು ತಮ್ಮ ತಮ್ಮ ವಾಣಿಜ್ಯ ಸಂಘ, ಸಂಸ್ಥೆಗಳನ್ನು ಮಾಡಿಕೊಂಡಿದ್ದರು. ತರುವಾಯ ಕಾಲದಲ್ಲಿ ‘ಐಯ್ಯವೊಳೆ ಐನೂರ್ವರು’ ಎಂಬ ದಕ್ಷಿಣ ಭಾರತಗಳ ಪ್ರತಿಷ್ಠಿತ ಸಂಸ್ಥೆಯು ಐಹೊಳೆಯಲ್ಲಿತ್ತು. ಎಂಟುನಕರಗಳ ಒಂದು ಸಂಘವೂ ಇದ್ದಿತು. ಬಾದಾಮಿಯಂಥ ಮಹಾನಗರಗಳಲ್ಲಿ ಎಣ್ಣೆ, ಅರಿಶಿನ, ಸಕ್ಕರೆ ಮೊದಲಾದ ದಿನವಸ್ತುಗಳ ಮಾರಾಟದ ಖಾಯಂ ಅಂಗಡಿಗಳಿದ್ದವು. ಇಂಥ ವ್ಯಾಪಾರಸ್ಥರು ಬಹುಮಟ್ಟಿಗೆ ಜೈನರು ಅಥವಾ ಈ ಮತದಲ್ಲಿ ಒಲವು ಇರುವವರಾಗಿದ್ದರು. ಇಮ್ಮಡಿ ವಿಕ್ರಮಾದಿತ್ಯನ ಕಾಲದಲ್ಲಿ ಲಕ್ಷ್ಮೇಶ್ವರದ ಬಾಹುಬಲಿ ಶ್ರೇಷ್ಠಿಯು ಸ್ಥಳೀಯ ಧವಳ ಜಿನಾಲಯಕ್ಕೆ ಭೂಮಿ ದಾನ ಮಾಡಲು ಚಕ್ರವರ್ತಿಯನ್ನು ಬಿನ್ನಹಿಸಿಕೊಂಡನು. ದಾನಕೊಟ್ಟ ಪ್ರದೇಶದ ಸಮಗಾರ ವೃತ್ತಿಗೆ ಮತ್ತು ಸರಕುಗಳಿಗೆ ತೆರಿಗೆ ವಿನಾಯಿತಿ, ಉಚ್ಚವರ್ಗದ ವಿದ್ವಜ್ಜನರಿಗೆ ದುರ್ಬಲ ಹಾಗೂ ಬಡವರ ಬಗ್ಗೆ ಇದ್ದ ಸಹಾನುಭೂತಿ ಮೊದಲಾದ ಕೆಲವೆ ಕಸುಬುಗಳ ಬಗ್ಗೆ ಏನೂ ತಿಳಿದಿರುವುದಿಲ್ಲವೆಂದು ಹೇಳಬಹುದು. ಆದರೂ ಇವರು ಕೃಷಿ ಕೈಗಾರಿಕೆಗೆ ಉದ್ಯೋಗಗಳಲ್ಲಿ ತಮ್ಮದೆ ಪಾತ್ರವನ್ನು ವಹಿಸುತ್ತಿದ್ದರು ಹಾಗೂ ಉಚ್ಚವರ್ಗದವರ ಸೇವಾಕಾರ್ಯವನ್ನು ಮಾಡುತ್ತಿದ್ದರೆಂದು ಕಾಣುತ್ತದೆ.

ಹ್ಯೂಯೆನ್‌ತ್ಸಾಂಗನು ಇಮ್ಮಡಿ ಪುಲಿಕೇಶಿಯ ಕಾಲದ ಮೊ-ಹೊ-ಲ-ಚ(ಮಹಾರಾಷ್ಟ್ರ)ದ ಜನರನ್ನು “ಇವರು ಸರಳ ಮನೋಭಾವದವರು, ಪ್ರಾಮಾಣಿಕರು, ಎತ್ತರ ದೃಢಕಾಯದವರು, ಮುಚ್ಚು ಮರೆಯಿಲ್ಲದೆ ಸ್ಪಷ್ಟವಾದ ನಡತೆಯುಳ್ಳವರು, ತಮಗೆ ಸಹಾಯ ಮಾಡಿದವರನ್ನು ಕೃತಜ್ಞತೆಯಿಂದ ನೆನೆಯುವವರು. ಆದರೆ ತಮಗೆ ಆಗದವರಲ್ಲಿ ನಿರ್ದಯಿಗಳು. ಅವರನ್ನು ಅಪಮಾನಿಸಿದರೆ ತಮ್ಮ ಪ್ರಾಣಾಪಾಯವನ್ನು ಲೆಕ್ಕಿಸದೆ ಪ್ರತೀಕಾರವನ್ನು ತೀರಿಸಿಕೊಳ್ಳುವವರು. ಕಷ್ಟದಲ್ಲಿರುವವರು ಸಹಾಯವನ್ನು ಕೇಳಿದಾಗ ಕೂಡಲೆ ತಮ್ಮ ಸ್ಥಿತಿಗತಿಗಳನ್ನು ನೋಡದೆ ಸಹಾಯ ಮಾಡಲು ಮುಂದಾಗುವವರು” ಎಂದು ಪ್ರಶಂಸಿಸಿದ್ದಾನೆ. ಬಾದಾಮಿಯಲ್ಲಿಯ ಕಪ್ಪೆ ಅರಭಟ್ಟನ ಕನ್ನಡ ತ್ರಿಪದಿ ಶಾಸನವನ್ನು ಪರಿಗಣಿಸಿದರೆ ಹ್ಯೂಯೆನ್‌ತ್ಸಾಂಗನ ಹೇಳಿಕೆಯಲ್ಲಿ ಸತ್ಯಾಂಶವಿದೆಯೆಂದು ಹೇಳಬಹುದು.

ಪರಂಪರೆಯ ಹದಿನಾರು ಸಂಸ್ಕಾರಗಳಲ್ಲಿ ಶ್ರದ್ಧೆಯಿತ್ತು ಮತ್ತು ಅವುಗಳನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿತ್ತು. ಅನ್ನಪ್ರಾಶನ, ಪೂಸವಣ, ಚೌಲಿ, ಉಪನಯನ, ಸಮಾವರ್ತನ, ಮದುವೆ ಇವೆ ಮೊದಲಾದ ಆಚರಣೆಯಲ್ಲಿದ್ದ ಸಂಸ್ಕಾರಗಳು. ಎಂಟು ಪ್ರಕಾರಗಳ ಪ್ರಾಚೀನ ವಿವಾಹ ಕ್ರಮಗಳಲ್ಲಿ ಬಾರದ ‘ಪ್ರಜಾಪತ್ಯ’ ಎಂಬ ವಿನೂತನ ವಿವಾಹ ಪದ್ಧತಿಯಿದ್ದುದು ಗಮನಾರ್ಹ. ಚಾಲುಕ್ಯ ವಿನಯಾದಿತ್ಯನ ಕಾಲದಲ್ಲಿ ಕೌಂಡಿನ್ಯ ಗೋತ್ರದ ದೇಶವರ್ಮನು ಮತ್ತು ಮಾನವ್ಯ ಗೋತ್ರದ ಒಬ್ಬ ಬ್ರಾಹ್ಮಣನು ಪ್ರಜಾಪತ್ಯದ ಸಲುವಾಗಿ ಭೂಮಿದಾನವನ್ನು ಪಡೆದರೆಂದರೆ, ತಂದೆಯಾದವನು ತನ್ನ ಮಗಳನ್ನು ಯೋಗ್ಯವರನಿಗೆ ಕೊಟ್ಟು ಇಬ್ಬರು ಒಟ್ಟಿಗೆ ವಂಶಾಭಿವೃದ್ದಿಗೋಸ್ಕರವೆ ಲೌಕಿಕ ಹಾಗೂ ಧಾರ್ಮಿಕ ಕರ್ತವ್ಯಗಳನ್ನು ನೆರವೇರಿಸಬೇಕೆಂಬ ತಿಳುವಳಿಕೆಯ ಪ್ರಜಾಪತ್ಯ ಪದ್ಧತಿಯಲ್ಲಿ ಅಡಗಿದೆಯೆಂದು ಅಭಿಪ್ರಾಯ. ಪ್ರಜಾಪತ್ಯವು ಗಂಡು ಸಂತಾನವಿಲ್ಲದಿದ್ದಾಗ ತನ್ನ ಮಗಳು ಗಂಡು ಸಂತಾನವನ್ನು ಪಡೆಯಲು ಮಾಡಬೇಕಾದ ಒಂದು ವಿಧವಾದ ಯಜ್ಞವೆಂದು ಅರ್ಥೈಸಲಾಗಿದೆ.

ಬಹಳಷ್ಟು ದೇವಾಲಯ, ಬಸದಿ ನಿರ್ಮಾಣ ನೋಡಿದರೆ ಜನರು ತುಂಬಾ ಧರ್ಮಶ್ರದ್ಧೆಯುಳ್ಳವರಾಗಿದ್ದರೆಂದು ಕಾಣುತ್ತದೆ. ಧಾರ್ಮಿಕ ವೈಷಮ್ಯ ಸಾಮಾನ್ಯವಾಗಿ ಇರಲಿಲ್ಲವೆಂದೇ ಹೇಳಬಹುದು. ಬಾದಾಮಿಯಲ್ಲಿ ಒಂದರ ಪಕ್ಕದಲ್ಲೊಂದರಂತೆ ಶೈವ, ವೈಷ್ಣವ, ಬೌದ್ಧ, ಜೈನ ಗುಹಾದೇವಾಲಯಗಳಿರುವುದು ಆಗಿನ ಧಾರ್ಮಿಕ ಸಾಮರಸ್ಯವನ್ನು ಎತ್ತಿ ತೋರಿಸುತ್ತದೆ. ಶೈವ, ವೈಷ್ಣವ, ಸೌರ, ಶಾಕ್ತ, ಗಾಣಪತ್ಯ, ನಾಗ ಹೀಗೆ ವಿವಿಧ ಪಂಥದವರೂ ಇದ್ದರು. ಇವಲ್ಲದೆ ಶಿಷ್ಟ ಸಂಪ್ರದಾಯಕ್ಕೆ ಒಳಪಡದ ಜನಸಾಮಾನ್ಯರ ಆರಾಧ್ಯ ದೈವಗಳಿದ್ದವು.

ಮಹಾಭಾರತ, ರಾಮಾಯಣ, ಪುರಾಣ, ಪಂಚತಂತ್ರ ಮೊದಲಾದ ಕಥೆಗಳು ಜನಪ್ರಿಯವಾಗಿದ್ದವು. ಬಾದಾಮಿಯ ಗುಹಾದೇವಾಲಯಗಳಲ್ಲಿ ಕೃಷ್ಣಚರಿತ, ಪಾರಿಜಾತಾಪಹರಣ, ಸಮುದ್ರಮಥನ, ಶಿವ-ಪಾರ್ವತಿ ಕಲ್ಯಾಣ, ಮಹಿಷಾಸುರವಧೆ ಮೊದಲಾದ ಕಥಾನಕಗಳನ್ನು ಚಿತ್ರಿಸಲಾಗಿದೆ. ಎಲ್ಲಿಯ ಮೇಲಿನ ಮತ್ತು ಕೆಳಗಿನ ಶಿವಾಲಯಗಳೆಂದು ಕರೆಯಲಾದ ದೇವಸ್ಥಾನಗಳಲ್ಲಿ ಕೃಷ್ಣಚರಿತೆ ಮತ್ತು ರಾಮಾಯಣದ ಕೆಲವು ದೃಶ್ಯಗಳನ್ನು ರೂಪಿಸಲಾಗಿದೆ. ಪಟ್ಟದಕಲ್ಲಿನ ವಿರೂಪಾಕ್ಷ, ಮಲ್ಲಿಕಾರ್ಜುನ ದೇವಾಲಯಗಳಲ್ಲಿ ಮಹಾಕಾವ್ಯಗಳಲ್ಲದೆ ಹರಿವಂಶ, ಪಂಚತಂತ್ರ ಮೊದಲಾದ ಕಾವ್ಯಗಳು ಕೆಲವು ಮುಖ್ಯ ಕಥೆಗಳನ್ನು ಬಹಳ ಸುಂದರವಾಗಿ ಕಂಬಗಳ ಮೇಲೆ ಬಿಡಿಸಲಾಗಿದೆ. ಇದೇ ದೇವಾಲಯಗಳಲ್ಲಿ ಜೈನ ಯಶೋಧರ ಮತ್ತು ಅಮೃತಮತಿ ಕಥೆಯಲ್ಲಿಯ ಕೆಲವು ದೃಶ್ಯಗಳನ್ನು ತೋರಿಸಿರುವುದು ಕುತೂಹಲಕಾರಿ ವಿಷಯ.

ಶ್ರವಣ ಮತ್ತು ದೃಶ್ಯಕಲೆಗಳಾದ ಸಂಗೀತ, ನೃತ್ಯ, ನಾಟಕ, ವರ್ಣಚಿತ್ರ ಮೊದಲಾದವುಗಳು ಜನರ ಮನರಂಜನೆಯ ಮುಖ್ಯ ಸಾಧನಗಳಾಗಿದ್ದವು. ಬಾದಾಮಿಯ ಮಂಗಳೇಶನು ನಿರ್ಮಿಸಿದ ಮೂರನೇ ವೈಷ್ಣವ ಗುಹಾಲಯದಲ್ಲಿ ಶ್ರೇಷ್ಠಮಟ್ಟದ ಶಿಷ್ಟ ಸಂಪ್ರದಾಯದ ವರ್ಣಚಿತ್ರಗಳಿವೆ. ಇದರಲ್ಲಿ ಮೃದಂಗ, ವೀಣಾ, ಕೊಳಲು, ತಾಳ ಮೊದಲಾದವುಗಳನ್ನು ನುಡಿಸುವವರೊಡನೆ ಸ್ತ್ರೀಪುರುಷರು ನೃತ್ಯವಾಡುತ್ತಿರುವ ಒಂದು ವರ್ಣಚಿತ್ರವಿದೆ. ಆ ಕಾಲದಲ್ಲಿ ಕಾವ್ಯ ಕಲೆಯ ರಾಜನಾದ ಶಿವನ ಶಿಲ್ಪವು ಅತ್ಯಂತ ಜನಪ್ರಿಯವಾಗಿತ್ತು. ಪಟ್ಟದಕಲ್ಲಿನಲ್ಲಿ ಭರತನಾಟ್ಯಶಾಸ್ತ್ರ ಅದರಲ್ಲೂ ವಿಶೇಷವಾಗಿ ‘ಅಗ್ರಸ್ಥಳಸಂಚಾರ’ ಮೊದಲಾದ ಲಾಕ್ಷಣಿಕ ವಿಷಯಗಳನ್ನು ಕರತಲಾಮಲಕ ಮಾಡಿಕೊಂಡ ನಟಸೇವ್ಯ ಅಚಲನೆಂಬುವನು ಅದ್ವಿತೀಯನಾಗಿದ್ದನು. ಸಂಗೀತ ಹಾಗೂ ಹಾಡುಗಾರಿಕೆಗಳಲ್ಲಿ ಪ್ರವೀಣರಾದ ಗಂಧರ್ವರಿಗೆ ವಿಶೇಷ ಹಕ್ಕು ಬಾಧ್ಯತೆಗಳನ್ನು ಚಾಲುಕ್ಯ ವಿಜಯಾದಿತ್ಯನು ಕೊಟ್ಟಿದ್ದನು. ಇವುಗಳನ್ನು ಮುಂದೆ ಇಮ್ಮಡಿ ವಿಕ್ರಮಾದಿತ್ಯನು ಪುನರುಜ್ಜೀವನಗೊಳಿಸಿದನು. ವಾಸ್ತುಮೂರ್ತಿ ಶಿಲ್ಪಿಗಳು ವಿಶೇಷವಾಗಿ ಉತ್ತೇಜನವನ್ನು ಮತ್ತು ಗೌರವ ಸ್ಥಾನವನ್ನು ಪಡೆದಿದ್ದರು. ಈ ಮಾಲೆಗಿತ್ತಿ ಶಿವಾಲಯ ಎಂದು ಕರೆಯಲಾದ ಮೂಲತಃ ಸೂರ್ಯ ದೇವಾಲಯದ ಕಪ್ಪು ಆರ್ಯಮಿಂಚಿ ಉಪಾಧ್ಯಾಯ, ಐಹೊಳೆಯ ಬೌದ್ಧ ಚೈತ್ಯಾಲಯದ ಶಿಲ್ಪಿ ಬಿಂಜಡಿ ಓವಜ, ಈಗ ಹುಚ್ಚಪ್ಪಯ್ಯ ಗುಡಿ ಎಂದು ಕರೆಯಲಾದ ಔತ್ತರೇಯ ಮಾದರಿಯ ಅಪರೂಪ ದೇವಾಲಯದ ಶಿಲ್ಪಗಳಾದ ಸರ್ವಸಿದ್ದಿ ಆಚಾರ್ಯ ಮತ್ತು ಅನಿವಾರಿತಾಚಾರಿ ಗುಂಡ ಎಂಬ ಕೆಲವೇ ಸುಪ್ರಸಿದ್ದ ಮಹಾನ್‌ಶಿಲ್ಪಿಗಳನ್ನು ಇಲ್ಲಿ ಉದಾಹರಿಸಬಹುದು. ಕೊನೆಯ ಎರಡು ಶಿಲ್ಪಿಗಳಿಗೆ ಚಾಲುಕ್ಯ ಇಮ್ಮಡಿ ವಿಕ್ರಮಾದಿತ್ಯನು ‘ಚಾರಿ’ ಎಂಬ ಬಿರುದನ್ನು ಕೊಟ್ಟನು. ‘ಪೆಜೆರಿಪು’ ಎಂಬ ಮರ್ಯಾದೆಯನ್ನು ಮಾಡಿದರು. ಅಂತಹ ಸುಸಂದರ್ಭಗಳಲ್ಲಿ ಕುಶಲಕರ್ಮಿಗಳ ಕುಟುಂಬಗಳಿಗೆ ತೆರಿಗೆ ವಿನಾಯಿತಿಯನ್ನು ಕೊಡಲಾಗುತ್ತಿತ್ತು. ಸರ್ವಸಿದ್ದಿ ಆಚಾರಿಯು ದೇವಾಲಯ ಮೂರ್ತಿ ಶಿಲ್ಪಕಲೆಯಲ್ಲಿ ನಿಷ್ಣಾತನಲ್ಲದೆ ವಿವಿ ಆಸನಗಳನ್ನು, ಮಂಚಗಳನ್ನು ಮಾಡುವುದರಲ್ಲಿ ಹೆಸರುವಾಸಿ ಯಾಗಿದ್ದನು. ಬಹುಶಃ ಇವನು ಶಿಲ್ಪಿಯೂ ಅಲ್ಲದೆ ಬಡಗಿಯೂ ಆಗಿದ್ದನು.

ಹವಾಮಾನಕ್ಕೆ ತಕ್ಕಂತೆ ಜನರು ಉಡುಪುಗಳನ್ನು ಧರಿಸುತ್ತಿದ್ದರು. ಶಿಲ್ಪಗಳಲ್ಲಿ ತೋರಿಸಿದಂತೆ ಸಾಮಾನ್ಯವಾಗಿ ಸ್ತ್ರೀಪುರುಷರು ಹೆಚ್ಚಾಗಿ ಹೊಲೆಯುವ ಬಟ್ಟೆಗಳನ್ನೇ ಧರಿಸುತ್ತಿದ್ದರು. ಧೋತ್ರವಲ್ಲದೆ ಸೊಂಟಕ್ಕೆ ಪ್ರತ್ಯೇಕವಾಗಿ ಈಗ ಕಮರಿಬಂದವೆಂದು ಹೇಳಲಾದ ವಸ್ತ್ರವನ್ನು ಕಟ್ಟಿಕೊಳ್ಳಲಾಗುತ್ತಿತ್ತು. ಪುರುಷರು ಸಾಮಾನ್ಯವಾಗಿ ಎದೆಯನ್ನು ಮುಚ್ಚಿಕೊಳ್ಳುವಂಥ ವಸ್ತ್ರಗಳನ್ನು ಧರಿಸಿಕೊಳ್ಳುತ್ತಿರಲಿಲ್ಲ. ಸ್ತ್ರೀಯರು ಭುಜಗಳ ಮೇಲೆ ಹಾದು ಹೋಗುವ ಹಾಗೆ ವಸ್ತ್ರವನ್ನು ತೊಡುತ್ತಿದ್ದರು. ಅಪರೂಪವಾಗಿ ಸ್ತನಪಟ್ಟಿಯನ್ನು ಧರಿಸುತ್ತಿದ್ದುದು ಕೆಲವು ಸ್ತ್ರೀ ವಿಗ್ರಹಗಳಲ್ಲಿ ಕಾಣುತ್ತದೆ. ಸ್ವಲ್ಪ ದೊಗಲೆ ಪೈಜಾಮದಂಥ ಹೊಲಿದ ವಸ್ತುವನ್ನು ಸಾಮಾನ್ಯವಾಗಿ ದ್ವಾರಪಾಲಕರು ಅಥವಾ ಪ್ರತಿಹಾರಿಗಳು ತೊಡುತ್ತಿದ್ದರು. ಐಹೊಳೆಯ ರಾವಳಫಡಿಯ ಶೈವ ಗುಹಾಲಯದ ಮುಂಬದಿಯ ಪಾರ್ಶ್ವಗಳಲ್ಲಿರುವ ದ್ವಾರಪಾಲಕರು ಇಂಥ ವಸ್ತ್ರಗಳನ್ನು ಧರಿಸಿದಂತೆ ತೋರಿಸಲಾಗಿದೆ.  ಇವರನ್ನು ಯವನ ದ್ವಾರಪಾಲಕರೆಂದು ಸಾಮಾನ್ಯವಾಗಿ ಗುರುತಿಸಲಾಗಿದೆ. ವಿವಿಧ ಪ್ರಕಾರಗಳ ಹೂಬಳ್ಳಿಗಳು, ರೇಖಾಚಿತ್ರಗಳಿಂದ ಅಲಂಕೃತವಾದ ವಸ್ತುಗಳಿರುತ್ತಿದ್ದವು. ಸ್ತ್ರೀಪುರುಷರಿಬ್ಬರೂ ನಾನಾ ಪ್ರಕಾರದ ಆಭರಣಗಳನ್ನು ಕಿವಿ, ಕಂಠ, ಎದೆ, ತೋಳು, ಮಣಿಗಂಟು, ಸೊಂಟ, ಕಾಲ್ಮಣಿಗಂಟುಗಳಿಗೆ ಧರಿಸುತ್ತಿದ್ದರು. ಕೇಶವಿನ್ಯಾಸವು ಆಶ್ಚಯಕರ್ರ ರೀತಿಯಲ್ಲಿ ವೈವಿಧ್ಯಮಯವಾಗಿತ್ತು. ಇವೆಲ್ಲವನ್ನು ದೇವಾಲಯದ ಮೂರ್ತಿಶಿಲ್ಪಗಳಲ್ಲಿ ನೋಡಬಹುದು.

ಸಾಮಾನ್ಯ ಸ್ತ್ರೀಯರ ಸ್ಥಾನ-ಮಾನಗಳ ಬಗ್ಗೆ ಅಷ್ಟಾಗಿ ಗೊತ್ತಾಗುವುದಿಲ್ಲ. ರಾಜಮನೆತನದ ಸ್ತ್ರೀಯರು ಮಾತ್ರ ವಿದ್ಯಾವಂತರಷ್ಟೇ ಅಲ್ಲ. ಪಾಂಡಿತ್ಯಪೂರ್ಣರೂ ಆಗಿರುತ್ತಿದ್ದರು. ಇಮ್ಮಡಿ ಪುಲಕೇಶಿಯ ಸೊಸೆ (ಇವನ ಮಗ ಚಂದ್ರಾದಿತ್ಯನ ಹೆಂಡತಿ) ವಿಜ್ಜಿಕಾ ಒಬ್ಬ ಮಹಾನ್ ಕವಯಿತ್ರಿ. ವಿಜಯಾಂಕ ಹಾಗೂ ವಿಜಯಭಟ್ಟಾರಿಕಾ ಎಂದೇ ಹೆಸರುವಾಸಿಯಾಗಿದ್ದ ಇವಳು ತನ್ನನ್ನು ‘ಕರ್ನಾಟ ರಾಜಪ್ರಿಯಾ’ ಎಂದು ಹೆಮ್ಮೆಯಿಂದ ವರ್ಣಿಸಿಕೊಂಡಿದ್ದಾಳೆ. ಇವಳಿಂದ ರಚಿತವಾಯಿತೆನ್ನಲಾದ ಒಂದು ಪದ್ಯದಲ್ಲಿ ಸಂಸ್ಕೃತ ಸಾಹಿತ್ಯ ಮಹಾಕವಿಯಾದ ದಂಡಿನ್ ವಿದ್ಯಾಭಿಮಾನಿ ದೇವತೆಯಾದ ನೈದಿಲೆ ಪುಷ್ಪದಂತೆ ಕಪ್ಪಾಗಿರುವ (ಬಹುಶಃ ಸರಸ್ವತಿ ಸಮಾನಳಾದ ವಿಜ್ಜಿಕೆಯ ಬಣ್ಣ) ಸರಸ್ವತಿಯನ್ನು ಅಜ್ಞಾನವಶಾತ್ ಶುಭ್ರ ಬಿಳಿವರ್ಣದವಳೆಂದು ವರ್ಣಿಸಿರುವುದು ವೃಥಾಶ್ರಮವೆಂದು ಆರೋಪಿಸಿದ್ದಾಳೆ. ೧೧ನೇ ಶತಮಾನದ ಕವಿ ರಾಜಶೇಖರನು ತನ್ನ ಕಾವ್ಯಮೀಮಾಂಸೆಯಲ್ಲಿ ಮಹಾಕವಿ ಕಾಳಿದಾಸನ ನಂತರ ವೈದರ್ಭಿ ಶೈಲಿಯನ್ನು ಅಷ್ಟೇ ಸಮರ್ಥವಾಗಿ ಬಳಸಿದವಳೆಂದರೆ ಕವಿಯಿತ್ರಿ ವಿಜಯಾಯೆಂದು ಪ್ರಶಂಸಿದಾ್ದನೆ.

ರಾಜಮನೆತನದ ಸ್ತ್ರೀಯರು ಧಾರ್ಮಿಕ ಮತಗಳಿಗೆ ಪ್ರೋಕೊಡುತ್ತಿದ್ದರು. ಒಂದೊಂದು ವೇಳೆ ಆಡಳಿತದಲ್ಲಿಯೂ ಸಕ್ರಿಯವಾಗಿ ಭಾಗವಹಿಸುತ್ತಿದ್ದರು. ಒಂದನೇ ವಿಕ್ರಮಾದಿತ್ಯನ ಮಹಾರಾಣಿ ಗಂಗಮಹಾದೇವಿಯು ಮತ್ತು ವಿಜಯಾದಿತ್ಯನ ತಂಗಿ ಹಾಗೂ ಆಳೂಪ ಚಿತ್ರವಾಹನ ಹೆಂಡತಿ ಕುಂಕುಮ ಮಹಾದೇವಿಯು ಬ್ರಾಹ್ಮಣರಿಗೆ ದಾನಗಳನ್ನು ಕೊಡಲು ತಮ್ಮ ತಮ್ಮ ಗಂಡಂದಿರಿಗೆ ಮನವೊಲಿಸುತ್ತಿದ್ದರು. ಸ್ವತಃ ಕುಂಕುಮ ಮಹಾದೇವಿಯೇ ಲಕ್ಷ್ಮೇಶ್ವರ ದೇವಾಲಯಗಳ ನಿರ್ಮಾಣಕ್ಕೆ ಕಾರಣರಾದರು. ವಿಜಯಾದಿತ್ಯನ ಕಾಲದಲ್ಲಿ ಲೋಕಟೆನಿಮ್ಮಡಿ ಬಹುಮಟ್ಟಿಗೆ ಲೋಕಮಹಾದೇವಿಯು ಕುರಿವ್ವಕುಂಟಿ (ಕುರ್ತಕೋಟಿ, ಗದಗ ಹತ್ತಿರ) ಭಾಗವನ್ನು ಆಳುತ್ತಿದ್ದಳು. ಬಹುಶಃ ವಿಜಯಭಟ್ಟಾರಿಕೆಯು ಆಡಳಿತದಲ್ಲಿ ಭಾಗವಹಿಸಿದ್ದಳೆಂದು ಕಾಣುತ್ತದೆ.

ಹ್ಯೂಯೆನ್‌ತ್ಸಾಂಗನು ಈ ಪ್ರದೇಶದ ಜನರು ವಿದ್ಯಾಪ್ರಿಯರು ಎಂದು ಹೇಳಿದ್ದಾನೆ. ಆದರೆ ಆಗಿನ ಕಾಲದ ವಿದ್ಯಾಭ್ಯಾಸ ಕ್ರಮದ ಬಗ್ಗೆ ಅಷ್ಟಾಗಿ ತಿಳಿದುಬಂದಿಲ್ಲ. ವೇದ ಪುರಾಣ ಮೊದಲಾದ ಪರಂಪರಾನುಗತ ಬೋಧನೆ ಬ್ರಾಹ್ಮಣರೆ ಮಾಡುತ್ತಿದ್ದರು. ನಾಲ್ಕು ವೇದಗಳು, ಆರು ವೇದಾಂಗಗಳು, ಪುರಾಣಮೀಮಾಂಸೆ, ನ್ಯಾಯ ಮತ್ತು ಧರ್ಮಶಾಸ್ತ್ರಗಳಿಂದ ಕೂಡಿದ ಹದಿನಾಲ್ಕು ವಿದ್ಯೆಗಳಲ್ಲಿ ಬಾದಾಮಿಯ ದ್ವಿಜರು ನಿಪುಣರಾಗಿದ್ದರು. ಈ ಹದಿನಾಲ್ಕು ಮಹಾವಿದ್ಯೆಗಳಲ್ಲಿ ತತ್ವಶಾಸ್ತ್ರ, ಮೂರು ವೇದಗಳು, ವಾರ್ತಾ (ಅರ್ಥಶಾಸ್ತ್ರ) ಮತ್ತು ದಂಡನೀತಿ ಇವು ಚರ್ತುವಿದ್ಯೆಗಳಾಗಿರುತ್ತಿದ್ದವು. ಶಾಲೆಗಳಲ್ಲಿ ತರ್ಕವನ್ನು ಬೋಧಿಸಲಾಗುತ್ತಿತ್ತು. ಒಂದನೇ ಪುಲಕೇಶಿಯ ವಿದ್ಯಾಭ್ಯಾಸವನ್ನು ನೋಡಿದರೆ ಪಠ್ಯಕ್ರಮದಲ್ಲಿ ಸ್ಮೃತಿ, ಪುರಾಣ, ರಾಮಾಯಣ, ಮಹಾಭಾರತ, ಇತಿಹಾಸ, ನೀತಿ ಮೊದಲಾದವುಗಳು ಪಠ್ಯ ವಿಷಯಗಳಾಗಿದ್ದವು. ಸಂಸ್ಕೃತದ ಜೊತೆಗೆ ಪ್ರಾದೇಶಿಕ ಭಾಷೆ ಕನ್ನಡವನ್ನೂ ಕಲಿಸಲಾಗುತ್ತಿತ್ತು. ಕಪ್ಪೆ ಅರಭಟ್ಟನ ತ್ರಿಪದಿಶಾಸನವು ಹಾಗೂ ಇತರ ಕೆಲವು ಕನ್ನಡ ಶಾಸನಗಳು ಆಗಿನ ಕನ್ನಡ ಭಾಷೆಯ ವೈಶಿಷ್ಟ್ಯವನ್ನು ತಿಳಿಸುತ್ತವೆ. ತ್ರಿಪದಿ, ಅರ್ಧಛಂದಸ್ಸಿನಲ್ಲಿ ಕಪ್ಪೆ ಅರಭಟ್ಟನ ಶಾಸನವಿದೆ. ಕನ್ನಡವು ಜನಸಾಮಾನ್ಯರ ಸಹದ ಭಾಷೆಯಾದ್ದರಿಂದ ಅದನ್ನು ಪ್ರಾಕೃತ ಭಾಷೆಯೆಂದು ವರ್ಗೀಕರಿಸಲಾಗಿದೆ. ಸಮಕಾಲೀನ ಸಂಸ್ಕೃತ ಕೃತಿಗಳು ದೊರಕಿದಿದ್ದರೂ ಕಾಳಿದಾಸ, ಭಾರವಿ, ದಂಡಿನ್ ಮೊದಲಾದವರು ಜನಪ್ರಿಯರಾಗಿದ್ದರು. ಮಹಾಕೂಟ ಸ್ತಂಭಶಾಸನದಲ್ಲಿಯ ಒಂದು ಶ್ಲೋಕವು ಮಹಾಕವಿ ಕಾಳಿದಾಸನ ರಘುವಂಶದ ಮೊದಲನೇ ಸರ್ಗದ ಆರನೇ ಶ್ಲೋಕದಂತಿದೆ. ಇಮ್ಮಡಿ ಪುಲಕೇಶಿಯ ಆಸ್ಥಾನ ಕವಿಯಾಗಿದ್ದ ರವಿಕೀರ್ತಿಯು ಭಾರವಿ ಮತ್ತು ಕಾಳಿದಾಸರಿಂದ ತುಂಬಾ ಪ್ರಭಾವಿತನಾಗಿದ್ದನು. ತಾನು ರಚಿಸಿದ ಶ್ರೇಷ್ಠ ಐಹೊಳೆ ಪ್ರಶಸ್ತಿಯಲ್ಲಿ ತಾನು ಆ ಮಹಾಕವಿಗಳಿಗಿಂತ ಕಡಿಮೆ ಏನಿಲ್ಲ ಎಂದು ತನ್ನ ಉತ್ತಮ ರಚನೆಯಿಂದ ತೋರಿಸಿಕೊಂಡಿದ್ದಾನೆ. ವಿಜಯಭಟ್ಟಾರಿಕೆಯ ಪಾಂಡಿತ್ಯದ ಬಗ್ಗೆ ಮೇಲೆ ಹೇಳಿದೆಯಷ್ಟೇ. ಇವಳು ಹಲವಾರು ಸೂಕ್ತಿಗಳನ್ನು ಮತ್ತು ಕೌಮುದಿ ಮಹೋತ್ಸವ ಎಂಬ ನಾಟಕವನ್ನು ರಚಿಸಿದಳೆಂದು ಅನಂತರ ಕಾಲದ ಲಾಕ್ಷಣಿಕರಾದ ರಾಜಶೇಖರ, ಕ್ಷೇಮೇಂದ್ರ ಮೊದಲಾದವರು ಹೇಳಿದ್ದಾರೆ. ಶಿಲ್ಪಿಗಳು ಸಂಸ್ಕೃತ ಭಾಷೆಯನ್ನು ಕಲಿತಿದ್ದರು. ಈ ವಿದ್ಯೆಗೆ ಸಂಬಂಧಿಸಿದ ಗ್ರಂಥಗಳು, ಆ ಭಾಷೆಯಲ್ಲಿವೆ. ನಟಸೇವ್ಯ ಅಪಲನ ಪ್ರಶಂಸೆಯುಳ್ಳ ಸಂಸ್ಕೃತ ಪದ್ಯವು ಅರ್ಧಛಂದಸ್ಸಿನಲ್ಲಿದೆ ಮತ್ತು ಭರತ ನಾಟ್ಯಶಾಸ್ತ್ರವು ಜನಪ್ರಿಯವಾಗಿತ್ತು ಹಾಗೂ ಪಂಚತಂತ್ರ ಮೊದಲಾದ ನೀತಿಕತೆಗಳನ್ನು ಶಾಲೆಗಳಲ್ಲಿ ಬೋಧಿಸಲಾಗುತ್ತಿತ್ತು.

ಆದರೆ ಬಡಿಗರು, ಕಮ್ಮಾರರು, ಚಮ್ಮಾರರು ಮೊದಲಾದ ಕಸುಬುದಾರರು ವಂಶಪಾರಂಪರ್ಯವಾಗಿ ಬಂದ ಕುಶಲವಿದ್ಯೆಯನ್ನೂ ತರಬೇತಿಯನ್ನೂ ತಮ್ಮ ಹಿರಿಯರಿಂದ ಕಲಿತಿದ್ದರು.