ಧರ್ುವು ಸಂಸ್ಕೃತಿಯ ಜೀವಾಳ. ಒಂದು ನಾಡಿನ ಜನತೆಯ ಜೀವನ ರೀತಿಯನ್ನು ರೂಪಿಸುವಲ್ಲಿ ಧರ್ಮದ ಪಾತ್ರ ಬಲು ದೊಡ್ಡದು. ಬುಡಕಟ್ಟು ಜನಾಂಗದ ಧಾರ್ಮಿಕ ಜೀವನದ ಹಿನ್ನೆಲೆಯಲ್ಲಿ ನೆಲೆಗೊಂಡ ಆಚರಣೆಯಲ್ಲಿ, ಸಂಪ್ರದಾಯಗಳು ಕ್ರಮೇಣ ಧರ್ಮದ ಶಿಷ್ಟರೂಪ ಪಡೆಯುತ್ತವೆಂಬುದು ಸಮಾಜಶಾಸ್ತ್ರಜ್ಞರ ನಿಲುವು. ಭಾರತದ ಇತರ ಭಾಗಗಳಂತೆ ಕರ್ನಾಟಕವೂ ತನ್ನ ಹಲವಾರು ಬುಡಕಟ್ಟು ಜನಾಂಗಗಳ ಆಚರಣೆ, ಪರಂಪರೆಗಳನ್ನು ಉಳಿಸಿಕೊಂಡು ಬಂದಿದೆ. ಜನಪದರ ನಾಗಾರಾಧನೆಯು ಶೈವ, ವೈಷ್ಣವ, ಬೌದ್ಧ, ಜೈನ ಮೊದಲಾದ ಮತಪಂಥಗಳ ಜನರಲ್ಲಿ ಧಾರ್ಮಿಕ ಜೀವನದಲ್ಲಿ ಇಂದಿಗೂ ಉಳಿದುಕೊಂಡಿದೆ. ಕ್ರಿಸ್ತಶಕ ಪೂರ್ವ ಮತ್ತು ಆರಂಭದ ಕಾಲದಲ್ಲಿ  ವೈದಿಕ ಧರ್ಮ ಹಾಗೂ ಅದರ ಭಾಗವಾಗಿದ್ದ ಯಜ್ಞ ಯಾಗಾದಿಗಳು ಪ್ರಚಲಿತವಾಗಿದ್ದವು. ವೈದಿಕ ಸಂಸ್ಕೃತಿಯ ಚಾತುರ್ವರ್ಣಗಳು ಕ್ರಮೇಣ ಜಾತಿಗಳ ಪಟ್ಟಿಗೆ ಸೇರಿದವು. ಶೋಷಣೆ ಹೆಚ್ಚಿತು. ಪ್ರಾಯಶಃ ಈ ಹಿನ್ನೆಲೆಯಲ್ಲಿ ಬೌದ್ಧ, ಜೈನ ಧರ್ಮಗಳು ಹೆಚ್ಚಿನ ಪ್ರಕಾರ ಪಡೆದವು. ಆದರೆ ಈ ಧರ್ಮಗಳ ನಡುವೆ ಸಾಮಾನ್ಯವಾಗಿ ಸಾಂಸ್ಕೃತಿಕ ಹಿರಿಮೆ ಎನಿಸಿದೆ. ಬಾದಾಮಿ ಪರಿಸರದಲ್ಲಿ ಪ್ರವಹಿಸಿದ ಮತ ಧರ್ಮಗಳ ತೊರೆಗಳನ್ನು ಅವಲೋಕಿಸೋಣ.

ನಾಗಾರಾಧನೆ

ಜನಪದ ಧರ್ಮವೆನಿಸಿದ ನಾಗಾರಾಧನೆ ವೇದಗಳಿಗಿಂತ ಪ್ರಾಚೀನ. ವೇದಕಾಲದಲ್ಲಿ ನಾಗಪ್ರತೀಕವುಳ್ಳ ಜನರಿದ್ದರು.

[1] ವೇದಗಳಲ್ಲಿ ನಾಗರನ್ನು ‘ಯಾತುಧಾನ’ರೆಂದು ಕರೆಯಲಾಗಿದೆ.[2] ಋಗ್ವೇದದಲ್ಲಿ ನಾಗ ದೇವನೆನಿಸಿದ್ದಾನೆ.[3] ಸಿಂಧೂ ಸಂಸ್ಕೃತಿಯ ನಾಗ ಮುದ್ರಿಕೆಗಳು ನಾಗರಪೂಜೆಯ ಸಂಪ್ರದಾಯವನ್ನು ಸೂಚಿಸುತ್ತವೆ. ಪುರಾಣಿಕರ ಕಲ್ಪನೆಯ ಮೇರೆಗೆ ಭೂಮಿಯನ್ನು ಎತ್ತಿ ಹಿಡಿದವನು ಆದಿಶೇಷ. ನಾಗ ಶಿವನಿಗೆ ಆಭರಣವಾದರೆ ವಿಷ್ಣುವಿಗೆ ಶಯನ. ಗಣೇಶನಿಗೆ ನಾಗವೇ ಉದರಬಂಧ, ತಪೋನಿರತ ಬುದ್ಧ, ಜಿನರಿಗೆ ನಾಗ ರಕ್ಷಕ. ಆದ್ದರಿಂದ ನಾಗ ಎಲ್ಲ ಮತಾವಲಂಬಿಗಳಿಗೆ ಪೂಜಾರ್ಹನಾಗಿದ್ದಾನೆ.

ಶಾತವಾಹನರ ಸಮಕಾಲೀನ ಚುಟು ರಾಜವಂಶದ ವಿಣ್ಹುಕಡ ಚುಟುಕುಲಾನಂದ ಶಾತಕರ್ಣಿಯ ಮಗಳಾದ ಶಿವಸ್ಕಂದ ನಾಗಶ್ರೀಯು ಒಂದು ತಟಾಕ ಮತ್ತು ಒಂದು ವಿಹಾರ ಕಟ್ಟಿಸಿ ನಾಗಪ್ರತಿಮೆಯನ್ನು ಮಾಡಿದ್ದುದು ಸುಪ್ರಸಿದ್ಧ ಸಂಗತಿ.

ಬಾದಾಮಿಯ ಶೈವ ಗುಹೆಯ ಮೊಗಸಾಲೆಯ ಛತ್ತು. ಜಂಬುಲಿಂಗ ಮತ್ತು ನಾಗನಾಥ ಗುಡಿಗಳ ಮುಖಮಂಟಪದ ಛತ್ತುಗಳಲ್ಲಿ ನಾಗ ಶಿಲ್ಪಗಳು ಕೆತ್ತನೆಗೊಂಡಿವೆ. ಜಿನಾಲಯದಲ್ಲಿ ಪಾರ್ಶ್ವನಾಥನ ಸೇವೆಯಲ್ಲಿರುವ ಐದು ಹೆಡೆಯುಳ್ಳ ನಾಗ ಚಿತ್ರಿತನಾಗಿದ್ದಾನೆ. ವೈಷ್ಣವ ಗುಹಾಲಯಗಳಲ್ಲಿರುವ ಭೂವರಾಹ ಶಿಲ್ಪಗಳಲ್ಲಿ ನಾಗ ದಂಪತಿಗಳು ಮೂಡಿ ಬಂದಿದ್ದಾರೆ. ಗುಹೆ ೩ರಲ್ಲಿ ಆದಿಶೇಷನು ಪರಾವಾಸುದೇವನ ಆಸನವಾಗಿದ್ದಾನೆ. ಪಕ್ಕದ ಬೋದಿಗೆಯೊಂದರಲ್ಲಿ ನಾಗ ನಾಗಿಯರಿದ್ದಾರೆ. ಚಲುಕ್ಯರ ದೇವಾಲಯಗಳ ಗರ್ಭಗುಡಿಗಳ ಬಾಗಿಲುವಾಡದಲ್ಲಿ ನಾಗಾಲಂಕಾರವು ಸಾಮಾನ್ಯ ಶಿಲ್ಪ ಲಕ್ಷಣವಾಗಿದೆ. ಚಾಲುಕ್ಯೇತರ ಕಾಲದ ಶಿಲ್ಪಗಳಲ್ಲಿಯೂ ನಾಗಗಳ ಕೆತ್ತನೆ ಮುಂದುವರಿದಿದೆ. ಆಗಸ್ತ್ಯ ತೀರ್ಥದ ಪೂರ್ವದ ದಂಡೆಯ ಮೇಲಿನ ಅನಂತಶಯನ ಶಿಲ್ಪವು ಪ್ರಾಯಶಃ ರಾಷ್ಟ್ರಕೂಟರ ಕಾಲದ್ದು. ವಿಜಯನಗರ ಕಾಲದ ಅನಂತಶಾಯಿಯನ್ನು ಅರಳಿತೀರ್ಥದಲ್ಲಿ ಕಾಣುತ್ತೇವೆ. ಹೀಗೆ ಉದ್ದಕ್ಕೂ ಶಿಲ್ಪಗಳಲ್ಲಿ ನಾಗಗಳ ಕೆತ್ತನೆಯನ್ನು ಗುರುತಿಸಬಹುದು. ನಾಗಾರಾಧನೆಯು ಜನಪದರಲ್ಲಿ ಪ್ರಚಲಿತವಿದ್ದುದನ್ನು ಈ ಶಿಲ್ಪಗಳು ಸೂಚಿಸುತ್ತವೆ.

ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ನಾಗಾರಾಧನೆ ಪ್ರಸ್ತಾಪಗೊಂಡಿದೆ. ವಡ್ಡಾರಾಧನೆಯಲ್ಲಿ ರಾಜ ಪುರೋಹಿತ ಸೋಮಶರ್ಮ ಮತ್ತು ಆತನ ಪತ್ನಿ ತ್ರಿವೇದಿ ಉದ್ಯಾನದ ನಾಗಪ್ರತಿಮೆಗಳನ್ನು ಪೂಜಿಸಿ ಮಗಳನ್ನು ಪಡೆದುದನ್ನು ವರ್ಣಿಸಲಾಗಿದೆ. ಹೀಗೆ ಹರಕೆ ಹೊತ್ತು ಪಡೆದ ಮಗಳಿಗೆ ನಾಗಶ್ರೀ ಎಂದು ಹೆಸರಿಟ್ಟ ಸಂಗತಿ ಗಮನಾರ್ಹವಾದುದು.[4] ವಚನ ಸಾಹಿತ್ಯದಲ್ಲಿ ನಾಗಪೂಜೆಯ ವಿಡಂಬನೆ ಇದೆ. ಕಲ್ಲನಾಗರಕ್ಕೆ ಹಾಲೆರೆದು ನಿಜ ನಾಗರವನ್ನು ಕೊಲ್ಲುವ ಜನಪದರ ರೀತಿಯನ್ನು ಬಸವಣ್ಣನವರು ಖಂಡಿಸಿದ್ದಾರೆ.[5]

. ಭೌದ್ಧ ಧರ್ಮ

ಭೌದ್ಧ ಧರ್ಮವು ಕರ್ನಾಟಕದಲ್ಲಿ ಮೌರ್ಯ ದೊರೆ ಅಶೋಕನ ಕಾಲದಲ್ಲಿ ಕಾಣಿಸಿ ಕೊಂಡಿತಾದರೂ ವೈಯಕ್ತಿಕವಾಗಿ ಚಲುಕ್ಯರು ಬೌದ್ಧ ಧರ್ಮದೊಂದಿಗೆ ಧಾರ್ಮಿಕ ಸಂಬಂಧ ವನ್ನಿಟ್ಟುಕೊಂಡದ್ದು ಯಾವ ಶಾಸನದಲ್ಲಿಯೂ ವ್ಯಕ್ತವಾಗಿಲ್ಲದಿರುವುದು ಗಮನಾರ್ಹ ಸಂಗತಿ. ಚಲುಕ್ಯರು ವೈದಿಕ ಧರ್ಮದ ಅನುಯಾಯಿಗಳಾಗಿದ್ದರು. ಅವರ ಪರಧರ್ಮಸಹಿಷ್ಣುತೆಯ ಪಲವಾಗಿ ಬೌದ್ಧಧರ್ಮವು ನಿರಾತಂಕವಾಗಿ ಬದುಕಿ ಉಳಿಯಿತು. ಸುಮಾರು ಕ್ರಿ.ಶ. ೬೪೦ರ ವೇಳೆಗೆ ಚಾಲುಕ್ಯ ಸಾಮ್ರಾಜ್ಯವನ್ನು ಸಂದರ್ಶಿಸಿದ ಹ್ಯೂಯೆನ್‌ತ್ಸಾಂಗನು ಈ ನಾಡಿನಲ್ಲಿ ನೂರು ಸಂಘಾರಾಮಗಳು ಮತ್ತು ಐದು ಸಾವಿರ ಭಿಕ್ಷುಗಳು ಇದ್ದ ಬಗ್ಗೆ ವರದಿ ಮಾಡಿದ್ದಾನೆ.[6] ಅಷ್ಟು ಮಾತ್ರವಲ್ಲ ಹೀನಯಾನ[7] ಮತ್ತು  ಮಹಾಯಾನ ಶಾಖೆಗಳೆರಡೂ ಇಲ್ಲಿ ಇದ್ದುದನ್ನು ದಾಖಲಿಸಿದ್ದಾನೆ. ಏಳನೆಯ ಶತಮಾನದಲ್ಲಿ ಬೌದ್ಧಧರ್ಮಕ್ಕಿಂತ ಜೈನಧರ್ಮವು ಹೆಚ್ಚು ಪ್ರಭಾವಿಯಾಗಿದ್ದ ಸಂಗತಿ ಆತನ ಬರವಣಿಗೆಯಲ್ಲಿ ವ್ಯಕ್ತವಾಗಿದೆ. ಆದರೆ ಕನ್ನಡದಲ್ಲಿ ಬೌದ್ಧಧರ್ಮಕ್ಕೆ ಸಂಬಂಧಿಸಿದಂತೆ ಪ್ರಾಚೀನ ಸಾಹಿತ್ಯಿಕ ಕೃತಿಗಳು ಲಭ್ಯವಿಲ್ಲ.

ಬಾದಾಮಿ ಐಹೊಳೆಗಳಲ್ಲಿ ಚಲುಕ್ಯರ ಕಾಲದ ಬೌದ್ಧ ಸ್ಮಾರಕಗಳು ಬೆರಳೆಣಿಕೆಯಲ್ಲಿವೆ. ಇಮ್ಮಡಿ ಪೊಲೆಕೇಶಿಯು ತನ್ನ ಸಾಮ್ರಾಜ್ಯದ ಉತ್ತರ ಅಂಚಿನಲ್ಲಿ ಬೌದ್ಧ ವಿಹಾರವೊಂದನ್ನು ಕಟ್ಟಿಸಿದನೆಂದು ಇತ್ಸಿಂಗ್ ಹೇಳುತ್ತಾನೆ.[8] ಚಲುಕ್ಯರು ಹೀಗೆ ಅವರ ಶಾಸನಗಳಲ್ಲಿ ಉಲ್ಲೇಖಿಸುವ ಸಂದರ್ಭ ಬಂದ ಹಾಗೆ ಕಾಣುವುದಿಲ್ಲ. ಆಲಂಪುರದ ಬಾಲಬ್ರಹ್ಮೇಶ್ವರ ಗುಡಿಯ ಕಂಬದ ಪ್ರಶಸ್ತಿಶಾಸನದಲ್ಲಿ ಮಾತ್ರ ರಕ್ಷಿಸಿದನೆಂದು ಹೊಗಳಲಾಗಿದೆ.[9] ಆ ಅರಸನು ಸರ್ವಧರ್ಮ ರಕ್ಷಕ ಎಂದು ಹೇಳುವುದು ಶಾಸನದ ಉದ್ದೇಶ. ಇದರಿಂದ ಬೌದ್ಧಧರ್ಮವು ‘ಹತ್ತರಗೂಡ ಹನ್ನೊಂದಾಗಿ’ ಇದ್ದಿರುವಂತೆ ತೋರುತ್ತದೆ. ಈಗ ಕಂಡುಬರುವ ಸ್ಮಾರಕಗಳು ಕಡಿಮೆ ಸಂಖ್ಯೆಯಲ್ಲಿದ್ದು ಅವು ಆಸಕ್ತ ಬೌದ್ಧ ಅನುಯಾಯಿಗಳಿಂದ ನಿರ್ಮಿತವಾದವುಗಳೆಂದು ತಿಳಿಯಬಹುದು.

ಬಾದಾಮಿಯಲ್ಲಿ ಒಂದು ಬೌದ್ಧ ಶಿಲ್ಪವು ಗುಹೆ ೨ ಮತ್ತು ೩ರ ನಡುವೆ ಇರುವ ನೈಸರ್ಗಿಕ ಗುಹೆಯಲ್ಲಿದೆ. ಇದನ್ನು ಬೋಧಿಸತ್ವ ಪದ್ಮಪಾಣಿಯದೆಂದು ಗುರುತಿಸಲಾಗಿದೆ. ಪಕ್ಕದ ಪುಟ್ಟ ಶಿಲ್ಪಗಳು ‘ಅಷ್ಟಭಯ’ಗಳ ದೃಶ್ಯವನ್ನು ಚಿತ್ರಿಸಿವೆ.[10] ಈ ಶಿಲ್ಪವೊಂದನ್ನು ಹೊರತು ಪಡಿಸಿ ಬಾದಾಮಿ ಈ ಶಿಲ್ಪವೊಂದನ್ನು ಹೊರತು ಪಡಿಸಿ ಬಾದಾಮಿ ಅಥವಾ ಪಟ್ಟದಕಲ್ಲಿನಲ್ಲಿ ಬೇರೆ ಬೌದ್ಧಶಿಲ್ಪಗಳು ಕಂಡುಬರಲಿಲ್ಲ. ಬೌದ್ಧ ಸಂಪ್ರದಾಯಕ್ಕೆ ಸಂಬಂಧಿಸಿದಂತೆ ಏಕಮಾತ್ರ ವಾಸ್ತುರಚನೆ ಐಹೊಳೆಯಲ್ಲಿದೆ. ಇಲ್ಲಿಯ ಬೌದ್ಧ ಗುಹೆಯು ಕರ್ನಾಟಕದ ಗುಹೆಗಳಲ್ಲಿಯೇ ಅತ್ಯಂತ ಪ್ರಾಚೀನವಾದುದು.[11] ಈ ಚೈತ್ಯ ವಿಹಾರವು ಭಾಗಶಃ ಕಟ್ಟಿಸಿ ನಿರ್ಮಿಸಲಾದ ಎರಡು ಅಂತಸ್ತುಗಳುಳ್ಳ ವಾಸ್ತುರಚನೆ. ಮೇಲಿನ ಮಹಡಿ ಒಂದು ಚೈತ್ಯ. ಗರ್ಭಗೃಹದ ಬಾಗಿಲ ಎದುರಿಗೆ ಮಧ್ಯ ಆಂಕಣದ ಮೇಲ್ಗಂಡಿನಲ್ಲಿ ವ್ಯಾಖ್ಯಾನ ಮುದ್ರೆಯ ಬುದ್ಧನ ಸುಂದರವಾದ ಉಬ್ಬುಚಿತ್ರವಿದೆ. ಹೆನ್ರಿ ಕಜಿನ್ಸ್ ಮೊದಲಾದ ವಿದ್ವಾಂಸರು ಇದು ಜಿನನ ಶಿಲ್ಪವೆಂದು ತಪ್ಪಾಗಿ ತಿಳಿದಿದ್ದರು. ಈ ಗುಹಾಲಯವು ಬೌದ್ಧವಿಹಾರವೆಂದು ಮೊದಲು ಗುರುತಿಸಿದವರು ಎಸ್. ಶೆಟ್ಟರ್ ಅವರು.[12] ಕೆಳಗಿನ ಅಂತಸ್ತಿನ ಬಾಗಿಲುವಾಡದ ಶಾಖೆಗಳಲ್ಲಿಯ ಉಬ್ಬುಚಿತ್ರಗಳಲ್ಲಿ ಬುದ್ಧನ ಜೀವನದ ಕೆಲವು ಘಟನೆ ಮತ್ತು ಜಾತಕ ಕತೆಗಳ ಸನ್ನಿವೇಶಗಳಿವೆ.[13] ಆದ್ದರಿಂದ ಇಲ್ಲಿ ಮಹಾಯಾನ ಶಾಖೆಯು ರೂಢಿಯಲ್ಲಿದ್ದಿತೆಂದು ತಿಳಿಯಬಹುದು. ಕರ್ನಾಟಕದ ಮಹತ್ವದ ಬೌದ್ಧ ಕೇಂದ್ರವಾಗಿದ್ದ ಸನ್ನತಿ(ಜಿ.ಗುಲ್ಬರ್ಗ) ಯಲ್ಲಿ ಬುದ್ಧನ ಶಿಲ್ಪವೂ ಇತ್ತೀಚೆಗೆ ಶೋಧವಾಗಿದೆ. ಅಲ್ಲಿ ಹೀನಯಾನ ಹಾಗೂ ಮಹಾಯಾನ ಪಂಥಗಳು ಪ್ರಚಲಿತವಾಗಿರಬೇಕೆಂದು ತೋರುತ್ತದೆ. ಕರ್ನಾಟಕದಲ್ಲಿ ಹೀನಯಾನ ಮತ್ತು ಮಹಾಯಾನ ಶಾಖೆಗಳೆರಡೂ ಇದ್ದವೆಂದು ಹ್ಯೂಯೆನ್‌ತ್ಸಾಂಗ್ ಹೇಳಿದುದನ್ನು ನೆನೆಯಬಹುದು.

ರಾಷ್ಟ್ರಕೂಟರ ಕಾಲದಲ್ಲಿ ಬೌದ್ಧಧರ್ಮವು ಇನ್ನೂ ಹೆಚ್ಚು ಕ್ಷೀಣಿಸಿತು. ಕ್ರಮೇಣ ಅದು ಇತರ ಧರ್ಮಗಳೊಡನೆ ಬೆರೆತು ಹೋಯಿತೆನ್ನಬಹುದು. ಬುದ್ಧನನ್ನು ವಿಷ್ಣುವಿನ ಅವತಾರವೆಂದು ಪರಿಗಣಿಸಲಾಯಿತು.

ವೈಷ್ಣವ ಧರ್ಮ

ಕನ್ನಡ ಭಾಷೆಯ ಅತ್ಯಂತ ಪ್ರಾಚೀನ ಹಲ್ಮಿಡಿ ಶಾಸನವು (ಕ್ರಿ.ಶ. ೪೫೦) ವಿಷ್ಣುವಿನ ಪ್ರಾರ್ಥನೆಯೊಂದಿಗೆ ಪ್ರಾರಂಭವಾಗುತ್ತದೆ.[14] ಮೃಗೇಶವರ್ಮನ ಬನವಾಸಿ ಶಾಸನದಲ್ಲಿ ವರಾಹನನ್ನು, ಇಮ್ಮಡಿ ಕೃಷ್ಣವರ್ಮನ ಬನಹಳ್ಳಿ ಶಾಸನದಲ್ಲಿ ನರಸಿಂಹನನ್ನು ಪ್ರಾರ್ಥಿಸುವ ಮಂಗಲ ಶ್ಲೋಕವಿದೆ.[15] ಚಲುಕ್ಯರ ಶಾಸನಗಳ ಮಂಗಲ ಶ್ಲೋಕದಲ್ಲಿ ವರಾಹ ಅವತಾರದ ವಿಷ್ಣುವಿನ ಸ್ತುತಿ ಇದೆ.[16] ವರಾಹ ಅವರ ಲಾಂಛನವಾಗಿತ್ತು. ಪರಮ ಭಾಗವತ, ಶ್ರೀ ಪ್ರಥಿವೀ ವಲ್ಲಭ, ಶ್ರೀ ವಲ್ಲಭ ಎಂಬ ಉಪಾಧಿಗಳು ಚಲುಕ್ಯರ ಪ್ರಾರಂಭದ ಅರಸರ ಶಾಸನಗಳಲ್ಲಿ ಉಪನಾಮಗಳಾಗಿಯೇ ಕಾಣಿಸಿಕೊಳ್ಳುತ್ತವೆ. ಆದ್ದರಿಂದ ಚಲುಕ್ಯ ವಂಶದ ಪ್ರಾರಂಭದ ಅರಸರು ವೈಷ್ಣವರಾಗಿದ್ದರೆಂಬುದು ನಿಸ್ಸಂಶಯ.

ಕದಂಬರಂತೆ ಚಲುಕ್ಯರೂ ವೈದಿಕ ಆಚರಣೆಗಳನ್ನು ರೂಢಿಸಿಕೊಂಡಿದ್ದರು. ಮೊದಲನೆಯ ಪೊಲೆಕೇಶಿಯು ಶ್ರೌತಸೂತ್ರಗಳ ಮೇರೆಗೆ ‘ಅಶ್ವಮೇಧಾದಿ’ ಯಜ್ಞಗಳನ್ನು ಆಚರಿಸಿದನು.[17] ಶಾಸನದಲ್ಲಿ ‘ಅಶ್ವಮೇಧಾದಿ’ ಎಂದು ಶಬ್ದ ಪ್ರಯೋಗವಾಗಿದ್ದು ಇದರಲ್ಲಿ ‘ಆದಿ’ ಎಂಬುದು  ಇನ್ನಿತರ ಯಜ್ಞಗಳನ್ನು ಕೂಡ ಅರಸನು ಮಾಡಿದ್ದನೆಂಬುದನ್ನು ಸೂಚಿಸುತ್ತದೆ. ಮಹಾಕೂಟ ಸ್ತಂಭ ಶಾಸನದಲ್ಲಿ ಮೊದಲನೆಯ ಪೊಲಕೇಶಿಯು ಅಗ್ನಿಷ್ಟೋಮ, ಅಗ್ನಿಚಯನ, ವಾಜಪೇಯ, ಬಹುಸುವರ್ಣ, ಪೌಂಡರಿಕ ಯಜ್ಞಗಳನ್ನು ಮಾಡಿದುದನ್ನು ಹೇಳಲಾಗಿದೆ.[18] ತನ್ನ ತಂದೆಯಂತೆ ಮೊದಲನೆಯ ಕೀರ್ತಿವರ್ಮನೂ ಕೂಡ ಬಹುಸುವರ್ಣ ಮತ್ತು ಅಗ್ನಿಷ್ಟೋಮ ಯಾಗಗಳನ್ನು ಮಾಡಿದುದನ್ನು ಅದೇ ಶಾಸನವು ತಿಳಿಸುತ್ತದೆ. ಮಂಗಲೀಶನು ‘ನಾರಾಯಣ ಬಲಿ’ಯನ್ನು ನೆರವೇರಿಸಿ ಆ ಸಂದರ್ಭದಲ್ಲಿ ಉಪಹಾರಾರ್ಥ ಹದಿನಾರು ಬ್ರಾಹ್ಮಣರ ಸತ್ರಕ್ಕಾಗಿ ಮತ್ತು ಪರಿವ್ರಾಜಕರ ಭೋಜನಕ್ಕಾಗಿ ಬಾದಾಮಿಯ ಪಕ್ಕದ ನಂದಿಕೇಶ್ವರ ಗ್ರಾಮವನ್ನು ದಾನ ಮಾಡಿದನು.[19] ಇಮ್ಮಡಿ ಪೊಲೆಕೇಶಿಯು ಬಲಿಚರು ವೈಶ್ವದೇವಾಗ್ನಿಹೋತ್ರ ಕ್ರಿಯಾ ಪಂಚ ಮಹಾಯಜ್ಞಗಳನ್ನು ನಿರ್ವಹಿಸಲೆಂದು ಬಂದು ಲೋಹನಗರದಲ್ಲಿ ವಾಸವಾಗಿದ್ದ ದಾಮ ದೀಕ್ಷಿತನೆಂಬ ಬ್ರಾಹ್ಮಣನಿಗೆ ಗೋವಿಯಾಣಕ ಎಂಬ ಗ್ರಾಮವನ್ನು ದಾನ ಮಾಡಿದನು.[20] ಈ ಅರಸನು ತನ್ನ ಮಾತಾಪಿತರಿಗೆ ಪುಣ್ಯಲಭಿಸಲೆಂದು ಪಂಚಮಹಾಯಜ್ಞಗಳನ್ನು[21] ನೆರೆವೇರಿಸಿದನು. ಮತ್ತು ಆ ನಿಮಿತ್ತ ಜ್ಯೇಷ್ಠಶರ್ಮ ಎಂಬ ಬ್ರಾಹ್ಮಣನಿಗೆ ಮಾಕರಪ್ಪಿ ಗ್ರಾಮವನ್ನು ದಾನವಾಗಿ ನೀಡಿದನು.[22] ಹೀಗೆ ಚಲುಕ್ಯ ವಂಶದ ಪ್ರಾರಂಭದ ಅರಸರು ವೈದಿಕ ಯಜ್ಞಾಚರಣೆಯನ್ನು ಆಚರಿಸಿದರು ಮತ್ತು ಯಜ್ಞಗಳ ಕರ್ಮಾನುಷ್ಠಾನ ಮಾಡಿದ ಬ್ರಾಹ್ಮಣರಿಗೆ ದಾನ ಮಾಡುವ ಔದಾರ್ಯ ತೋರಿದರು. ಆದರೆ ಕ್ರಮೇಣ ಯಜ್ಞ ಯಾಗಾದಿಗಳ ಅನುಷ್ಠಾನವು ಮರೆಯಾಗುತ್ತ ಬಂದಂತೆ ತೋರುತ್ತದೆ. ಸ್ಮೃತಿಗಳು ನಿರ್ದೇಶಿಸಿದ ವಿಧಾನಗಳಿಂದ ದೇವ ಮಂದಿರಗಳಲ್ಲಿ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜಿಸುವ ಪದ್ಧತಿ ಜನಪ್ರಿಯವಾಯಿತು. ಮೂರ್ತಿಪೂಜೆ ಹೆಚ್ಚಾದಂತೆ ಶ್ರೌತ ಕರ್ಮಗಳು ಗೌಣವಾದವು. ಪುರಾಣಗಳು, ಅಗಮ ಗ್ರಂಥಗಳು ಹೆಚ್ಚು ಜನಾದರಣೀಯವಾಗಿ ವಾಸ್ತು ಮತ್ತು ಶಿಲ್ಪಗಳ ಬಳಕೆ ಹೆಚ್ಚಿತು. ಪ್ರತಿಮೆಗಳ ಪ್ರತಿಷ್ಠಾಪನೆ ಮತ್ತು ದೇವಾಲಯಗಳ ನಿರ್ಮಾಣ ಕಾರ್ಯ ರಾಜಧಾನಿ ಪಟ್ಟು ಕಳೆದುಕೊಂಡ ಬಾದಾಮಿಯಲ್ಲಿ ರಾಷ್ಟ್ರಕೂಟ, ಕಲ್ಯಾಣ ಚಾಲುಕ್ಯ ಮತ್ತು ವಿಜಯನಗರ ಅರಸರ ಕಾಲದಲ್ಲಿ ಮಂದಗತಿಯಲ್ಲಿ ಮುಂದುವರಿಯಿತು.

ಬಾದಾಮಿಯಲ್ಲಿ ಚಲುಕ್ಯರು ನೆಲೆಗೊಳ್ಳುವ ಮುನ್ನವೆ ಈ ಭಾಗದಲ್ಲಿ ವೈಷ್ಣವ ಧರ್ಮ ಪ್ರಚಲಿತದಲ್ಲಿದ್ದಿತು. ಮಹಾಕೂಟದ ದ್ವಿಬಾಹು ನರಸಿಂಹನ ಶಿಲ್ಪವು ಆದಿ ಕದಂಬರದೆಂದು ಅ.ಸುಂದರ ಗುರುತಿಸಿದ್ದಾರೆ. ಇತ್ತೀಚೆಗೆ ಬಾದಾಮಿ ಸಮೀಪದ ನಿಲುಗಲ್ಲ ಗ್ರಾಮದಲ್ಲಿ ಸುಡಾವೆ ಮಣ್ಣಿನ ದ್ವಿಬಾಹು ನರಸಿಂಹನ ವಿಗ್ರಹವೊಂದು ಪತ್ತೆಯಾಗಿದೆ.[23]  ಇವೆರಡೂ ‘ಕೇವಲ’ ಭಂಗಿಯಲ್ಲಿದ್ದು ಪ್ರತಿಷ್ಠಾಪನೆಗಾಗಿ ಮಾಡಿದ ಅಡಿಗೂಟಗಳನ್ನು ಹೊಂದಿವೆ. ಆದ್ದರಿಂದ ಅವು ಅರ್ಚಾ ಮೂರ್ತಿಗಳೆನ್ನಬಹುದು.

ಚಲುಕ್ಯ ಮನೆತನದ ಮೊದಲಿನ ಅರಸರು (ಇಮ್ಮಡಿ ಪೊಲೆಕೇಶಿಯವರೆಗೆ) ವೈಷ್ಣವ ಮತಾವಲಂಬಿಗಳಾಗಿದ್ದರು. ಅವರು ಪರಮ ಭಾಗವತರಾಗಿದ್ದರು.[24] ಮಂಗಲೇಶನು ಪರಮ ಭಾಗವತನೆಂದು ವರ್ಣಿತನಾಗಿದ್ದಾನೆ.[25] ಲೋಹಣೇರ ಶಾಸನವು ಇಮ್ಮಡಿ ಪೊಲೆಕೇಶಿಯನ್ನು ಪರಮ ಭಾಗವತನೆಂದು ಬಣ್ಣಿಸಿದೆ.[26] ಸ್ವತಃ ನಾರಾಯಣನು ಇವರಿಗೆ ವರಾಹ ಲಾಂಛನವನ್ನು ಕೃಪೆ ಮಾಡಿದನೆಂದು ಹೇಳಲಾಗಿದೆ.[27]

ವೈಷ್ಣವ ಧರ್ಮದ ಪೋಷಕರಾಗಿ ಚಲುಕ್ಯರು ಅನೇಕ ಸ್ಮಾರಕಗಳನ್ನು ಬಾದಾಮಿಯಲ್ಲಿ ನಿರ್ಮಿಸಿದರು. ಅವುಗಳಲ್ಲಿ ಮಂಗಲೇಶನು ಕೊರೆಯಿಸಿದ ‘ಮಹಾವಿಷ್ಣುಗೃಹ’ವು ಸುಪ್ರಸಿದ್ಧವಾದುದು. ಇದರ ಕಾಲ ಶಕವರ್ಷ ೫೦೦, ಇದರ ಹತ್ತಿರವಿರುವ ಚಿಕ್ಕದಾದ ಇನ್ನೊಂದು ವೈಷ್ಣವ ಗುಹಾಲಯವು[28] ಇದಕ್ಕಿಂತ ಮೊದಲು ರಚಿತವಾದುದೆಂದು ಶೈಲಿಯನ್ನಾಧರಿಸಿ ಹೇಳಬಹುದು. ಹೀಗೆ ಬಾದಾಮಿಯ ನಾಲ್ಕು ಗುಹಾಲಯಗಳಲ್ಲಿ ಎರಡು ವೈಷ್ಣವ ಮತಕ್ಕೆ ಸಂಬಂಧಿಸಿದವುಗಳು. ಇದರಿಂದ ಮೊದಲ ಹಂತದ ಚಲುಕ್ಯರು ವೈಷ್ಣವ ಧರ್ಮವನ್ನು ವಿಶೇಷವಾಗಿ ಪೋಷಿಸಿದರೆಂದು ತಿಳಿಯಬಹುದು.

ವೈಷ್ಣವ ಗುಹಾಲಯಗಳ ಜೊತೆಗೆ ವೈಷ್ಣವ ರಾಚನಿಕ ಮಂದಿರಗಳನ್ನು ಕೂಡ ಅವರು ನಿರ್ಮಿಸಿದರು. ಬಾದಾಮಿಯ ಉತ್ತರ ಗುಡ್ಡದ ತುತ್ತ ತುದಿಯ ಮೇಗಣ ಶಿವಾಲಯವು ಮೂಲತಃ ವೈಷ್ಣವ ದೇವಾಲಯವಾಗಿದೆ. ಗುಡಿಯ ಹೊರಗೋಡೆಯ ಮೇಲೆ ಗೋವರ‌್ಧನ ಗಿರಿಧಾರಿ, ಕಾಳಿಂಗ ಮರ್ದನ, ನರಸಿಂಹ ಶಿಲ್ಪಗಳು ಪ್ರಧಾನವಾದವುಗಳು. ಜೊತೆಗೆ ಅಧಿಷ್ಠಾನದ ಗಳ ಭಾಗದಲ್ಲಿ ಶ್ರೀಕೃಷ್ಣ ಚರಿತದ ಸನ್ನಿವೇಶಗಳನ್ನು ಕಂಡರಿಸಲಾಗಿದೆ. ಹೀಗೆ ರಾಚನಿಕ ಮಂದಿರಗಳ ಅಧಿಷ್ಠಾನದಲ್ಲಿ ಮತ್ತು ಗುಹಾದೇವಾಲಯಗಳ ತೊಲೆಗಳ ಮೇಲೆ ಕೆತ್ತಲಾದ ಕೃಷ್ಣ ಲೀಲೆಯ ದೃಶ್ಯಗಳು ಹರಿವಂಶ, ವಿಷ್ಣು ಪುರಾಣಗಳ ಪರಂಪರೆಯಲ್ಲಿರುವುದನ್ನು ಶ್ರೀನಿವಾಸ ಪಾಡಿಗಾರ ಅವರು ಗುರುತಿಸಿದ್ದಾರೆ.[29] ಗಜೇಂದ್ರ ಮೋಕ್ಷ ಮೊದಲಾದ ಕೆಲವು ಕಥಾ ಪ್ರಸಂಗಗಳು ಬಾದಾಮಿಯಲ್ಲಿ ಕಾಣಸಿಗದೆ ಪಟ್ಟದಕಲ್ಲಿನಲ್ಲಿ ಕಾಣಿಸಿಕೊಂಡಿದ್ದು ಭಾಗವತ ಪರಂಪರೆಯು ನಂತರ ರೂಢಿಗತವಾಗಿರಬೇಕೆಂಬ ಅವರ ಅಭಿಪ್ರಾಯವನ್ನು ಒಪ್ಪಬಹುದಾಗಿದೆ.

ಮಹಾಕೂಟವು ಶೈವ ಕೇಂದ್ರ. ಆ ಕ್ಷೇತ್ರದ ಕೇಂದ್ರ ಬಿಂದು ವಿಷ್ಣು ಪುಷ್ಕರಣಿ![30] ಈ ಹೊಂಡದ ಪಶ್ಚಿಮಕ್ಕೆ ಅದರ ಅಕ್ಷಗರ್ಭ ಸೂತ್ರಕ್ಕಿಂತ ಮಹಾಲಿಂಗ ಗುಡಿಯ ಹೊರಗೋಡೆಯ ಮೇಲೆ ವರಾಹ ಉಗ್ರ ನರಸಿಂಹರ ಮಧ್ಯಮಗಾತ್ರದ ಶಿಲ್ಪಗಳಿವೆ.[31] ಶ್ರೀಮಹಾಕೂಟೇಶ್ವರ ಪುರಾಣವು ಸಿಂಹಾಸುರನನ್ನು ಸಂಹರಿಸಲು ಶಿವನು ವಿಷ್ಣು ರೂಪದಿಂದ ಬಂದು ಆತನನ್ನು ಮಹಾಕೂಟದಲ್ಲಿ ಸುದರ್ಶನ ಚಕ್ರದಿಂದ ಕೊಂದನೆಂದು ಬಣ್ಣಿಸುತ್ತದೆ.[32] ಈ ಉಪಕಥೆಯ ಬಣ್ಣನೆಯ ನಂತರ ಸ್ಥಳ ಪುರಾಣವು ಮಹಾಕೂಟ ಕ್ಷೆತ್ರವನ್ನು ನರಸಿಂಹ ಕ್ಷೇತ್ರವೆಂದು ಕರೆದಿದೆ.[33] ಪುರಾಣದ ಕಥೆಯನ್ನು ಬದಿಗಿರಿಸಿದರೂ, ಆದಿ ಕದಂಬರ ದ್ವಿಭುಜ ನರಸಿಂಹ ಶಿಲ್ಪದ ಹಿನ್ನೆಲೆಯಲ್ಲಿ ಗಮನಿಸಿದಾಗ ಮಹಾಕೂಟದಲ್ಲಿ ಚಲುಕ್ಯಪೂರ್ವ ಕಾಲದಲ್ಲಿ ನರಸಿಂಹ ಮಂದಿರವೊಂದು ಇದ್ದಿರಬೇಕೆಂದು ತರ್ಕಿಸಲು ಅವಕಾಶವಿದೆ. ಬಾಣಂತಿ ಗುಡಿಯ ಹತ್ತಿರವಿರುವ ಇಟ್ಟಿಗೆಯ ಕಟ್ಟಡಗಳ ಅವಶೇಷಗಳು ಇಂತಹ ಮಂದಿರದ್ದಾಗಿರಬಹುದೇ?

ಬಾದಾಮಿಯು ರಾಜಧಾನಿಯ ಪಟ್ಟವನ್ನು ಕಳೆದುಕೊಂಡ ನಂತರ ರಾಜಕೀಯ ಬಲವಿಲ್ಲದೆ ಸಾಂಸ್ಕೃತಿಕವಾಗಿ ಬಡವಾಯಿತು. ಆಳರಸರಾದ ರಾಷ್ಟ್ರಕೂಟರು ತಮ್ಮ ಸಾಂಸ್ಕೃತಿಕ ಚಟುವಟಿಕೆಗಳನ್ನು ಮುಖ್ಯವಾಗಿ ಎಲ್ಲೋರದಲ್ಲಿ ಕೇಂದ್ರೀಕರಿಸಿದರು. ಆದಾಗ್ಯೂ ಈ ಅವಧಿಯ ವೈಷ್ಣವ ಪರ ಶಿಲ್ಪಗಳನ್ನು ಬಾದಾಮಿ ಪರಿಸರದ ಒಂದೆರಡು ಕಡೆಗಳಲ್ಲಿ ಗುರುತಿಸಬಹುದು. ಅಗಸ್ತ್ಯತೀರ್ಥದ ಪೂರ್ವದ ದಂಡೆಯ ಮೇಲಿನ ಅನಂತಶಯನ ಗುಡಿಯು ಪ್ರಾಯಶಃ ರಾಷ್ಟ್ರಕೂಟರ ಕಾಲದ ನಿರ್ಮಾಣವೆಂದು ತೋರುತ್ತದೆ. ಈ ಅವಧಿಯ ಇನ್ನೊಂದು ಶಿಲ್ಪವೆಂದರೆ ಮಹಾಕೂಟದ ಅಡಕೇಶ್ವರ ದೇವಾಲಯದ ವಿಷ್ಣುವಿನದು. ಚಲುಕ್ಯರ ವಿಷ್ಣು ಶಿಲ್ಪಗಳಲ್ಲಿ ಕೈಯಲ್ಲಿ ಪದ್ಮವಿರದೆ ಹಣ್ಣು ಇರುವುದು ಸಾಮಾನ್ಯ. ಆದರೆ ಈ ಮೂರ್ತಿಯಲ್ಲಿಯ ವಿಷ್ಣು ಪದ್ಮಧಾರಿಯಾಗಿದ್ದಾನೆ. ಉತ್ತರದ ಶಿಲ್ಪ ಪ್ರಭಾವವಿದಾಗಿರಬಹುದು. ಈ ಮೂರ್ತಿಯೇ ಅಡಕೇಶ್ವರ ದೇವಾಲಯದ ಮೂಲ ವಿಗ್ರಹವಾಗಿರಬಹುದೆಂಬ ಊಹೆ ಅ.ಸುಂದರ ಅವರದು.[34] ಇದು ಸಂಭವನೀಯವಾದುದಾಗಿದೆ.

ಈ ಬಿಡಿ ಅವಶೇಷಗಳು ಚಲುಕ್ಯರ ಪತನದ ನಂತರ ವೈಷ್ಣವ ಧರ್ಮವು ಮುಂದುವರಿಯಿತೆಂಬುದನ್ನು ಸಾಬೀತು ಪಡಿಸುತ್ತವೆ. ಮುಂದೆ ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಅದಕ್ಕೆ ಹೆಚ್ಚಿನ ಪ್ರಜಾಪೋಷಣೆ ದೊರೆತಂತೆ ತೋರುತ್ತದೆ. ಪರಮಾನಂದ ದೇವರು ಎಂಬಾತನು ಅಗಸ್ತ್ಯತೀರ್ಥದ ಪಶ್ಚಿಮ ದಂಡೆಯ ಮೇಲೆ ವಿಷ್ಣು ದೇವಾಲಯವನ್ನು ಕಟ್ಟಿಸಿದ್ದಾನೆ. ಇದನ್ನೀಗ ಎಲ್ಲಮ್ಮ ದೇವಾಲಯ ಎಂದು ಕರೆಯಲಾಗುತ್ತದೆ. ಈ ಗುಡಿಯ ಮುಂದಿದ್ದ ಶಾಸನ ಕಲ್ಲಿನ ಮೇಲೆ ಕೆತ್ತಲಾದ ಯೋಗಮುದ್ರೆಯಲ್ಲಿರುವ ವಿಷ್ಣುವಿನ ಚಿಕ್ಕ ಮೂರ್ತಿಯನ್ನು ಜಿನಶಿಲ್ಪವೆಂದು ತಪ್ಪಾಗಿ ಭಾವಿಸಲಾಗಿದೆ[35] ಮತ್ತು ಈ ಗುಡಿಯನ್ನು ಜಿನಾಲಯವೆಂದು ತಪ್ಪಾಗಿ ಗುರುತಿಸಲಾಗಿದೆ. ಆದರೆ ಲಕ್ಷ್ಯಗೊಟ್ಟು ನೋಡಿದಾಗ ಆ ಮೂರ್ತಿ ಆಭರಣಗಳಿಂದ ಅಲಂಕೃತವಾಗಿರುವುದು ಕಂಡುಬರುತ್ತದೆ. ಆದ್ದರಿಂದ ಅದು ಜಿನಬಿಂಬವಾಗಿರಲಾರದು. ಶಿಖರದ ಮುಂದಿನ ಸುಕನಾಸಿ ಪಟ್ಟಿಕೆಯಲ್ಲಿ ಯೋಗೇಶ್ವರ ವಿಷ್ಣುವಿನ ಮೂರ್ತಿ ಇದೆ. ಕಲ್ಯಾಣ ಚಾಲುಕ್ಯರ ಕಾಲದ ಇನ್ನೊಂದು ವಿಷ್ಣು ದೇವಾಲಯವು ಅಗಸ್ತ್ಯ ತೀರ್ಥದ ಉತ್ತರ ದಂಡೆಯ ಮೇಲಿರುವ ಗುಡಿಗುಚ್ಛದಲ್ಲಿಯ ಪ್ರಧಾನ ಗುಡಿ. ಇದರ ಸುಕನಾಸದ ಮುಖಪಟ್ಟಿಕೆಯಲ್ಲಿ ಶಂಖ, ಚಕ್ರ ಹಿಡಿದು ಕುಳಿತಿರುವ ವಿಷ್ಣುವಿನ ಶಿಲ್ಪವಿದೆ. ಗರ್ಭಗುಡಿಯಲ್ಲಿಯ ಪೀಠದ ಮೇಲೆ ಗರುಡನಿದ್ದಾನೆ. ಈ ಗುಡಿಯು ಕೂಡ ಯೋಗೇಶ್ವರ ದೇವಾಲಯ. ವಾಸ್ತುಶೈಲಿಯನ್ನಾಧರಿಸಿ ಇದು ಕಲ್ಯಾಣ ಚಾಲುಕ್ಯರ ಅವಧಿಯದೆಂದು ನಿರಾಯಾಸವಾಗಿ ಹೇಳಬಹುದು.

ವಿಜಯನಗರ ಅರಸರ ಕಾಲದಲ್ಲಿ ಬಾದಾಮಿಯು ವಿಶೇಷವಾಗಿ ವೈಷ್ಣವ ಮತದ ಪ್ರಭಾವಕ್ಕೆ ಒಳಗಾಗಿತ್ತೆಂದು ತೋರುತ್ತದೆ. ಅಚ್ಯುತರಾಯನ ಕಾಲದಲ್ಲಿ ಬಾದಾಮಿಯಲ್ಲಿಯ ಖಿಲವಾದ ದೇವಸ್ಥಾನಗಳನ್ನು ಜೀರ್ಣೋದ್ಧಾರ ಮಾಡಲಾಯಿತು.[36] ಹೀಗೆ ಜೀರ್ಣೋದ್ಧಾರಗೊಂಡ ದೇವಾಲಯಗಳಲ್ಲಿ ಜಂಬುಲಿಂಗ ಗುಡಿಯೂ ಒಂದಾಗಿರಬೇಕು. ಈ ತ್ರಿಕೂಟಾಲಯವು ಮೂಲತಃ ಚಲುಕ್ಯರ ನಿರ್ಮಾಣ. ಇದರ ವಿಷ್ಣು ಗರ್ಭಗೃಹದ ಮೇಲೆ ಇಟ್ಟಿಗೆ ಗಾರೆಗಳಿಂದ ಶಿಖರವನ್ನು ನಂತರ ಕಟ್ಟಲಾಗಿದೆ. ಆ ಕಾಲದಲ್ಲಿ ವೈಷ್ಣವ ಮತಕ್ಕಿದ್ದ ಹೆಚ್ಚಿನ ಒಲವು ಇಲ್ಲಿ ವ್ಯಕ್ತಗೊಂಡಿದೆ.

ಗುಹೆ ೨ರ ಕಂಬ ೧೧ರ ಮೇಲೆ ಕ್ರಿ.ಶ. ೧೫೫೪ರ ಶಾಸನವೊಂದು ತೆಲುಗು ಭಾಷೆಯಲ್ಲಿದೆ. ಇದರಲ್ಲಿ ಹಾರಿಲರಡ ವೆಂಕಟಯ್ಯ ಎಂಬವನು ಹನ್ನೆರಡು ಆಳ್ವಾರರ ಪ್ರತಿಮೆಗಳನ್ನು ವಿಷ್ಣು ಸನ್ನಿಧಿಯಲ್ಲಿ ಮಾಡಿದುದು ಉಲ್ಲೇಖಿತವಾಗಿದೆ.[37] ಈಗ ಈ ಪ್ರತಿಮೆಗಳು ಅಲ್ಲಿಲ್ಲ. ಜೀರ್ಣೋದ್ಧಾರ ಮಾಡಿದ ಬಗ್ಗೆ ಹೇಳುವ ಈ ಮೇಲೆ ಪ್ರಸ್ತಾಪಿಸಲಾದ ಶಾಸನವು ಕ್ರಿ.ಶ. ೧೫೩೩ರದ್ದು. ಆದ್ದರಿಂದ ಸುಮಾರು ಎರಡು ದಶಕಗಳ ಕಾಲ ಬಾದಾಮಿಯಲ್ಲಿ ದೇವಾಲಯಗಳ ಜೀರ್ಣೋದ್ಧಾರ ಕಾರ್ಯ ವೈಷ್ಣವ ಮತ ಪರ ನಡೆಯಿತೆಂದು ಹೇಳಬಹುದು. ಕೆಳಗಣ ಶಿವಾಲಯದ ಸ್ತೂಪಿಯ ಹತ್ತಿರವಿರುವ ಗಚ್ಚುಗಾರೆಯಿಂದ ನಿರ್ಮಿಸಲಾದ ‘ನಿಧಿ’ಗಳು ಪ್ರಾಯಶಃ ಈ ಅವಧಿಯ ಸೇರ್ಪಡೆಗಳು. ಗುಹೆ ೩ರ ಕಂಬ ೧೨ರ ಶಾಸನವು ೧೬-೧೭ ಶತಮಾನದ್ದು. ಇದು ಚೆಂತಕುಪ್ಪ ರಂಗಯ್ಯ ಎಂಬಾತನು ವಿಠಲ(ವಿಷ್ಣು)ನ ಎಡಬಲಗಳಲ್ಲಿ ರುಕ್ಮಿಣಿ ಮತ್ತು ಸತ್ಯಭಾಮೆಯರ ವಿಗ್ರಹಗಳನ್ನು ಪ್ರತಿಷ್ಠಾಪಿಸಿದ್ದುದನ್ನು ತಿಳಿಸುತ್ತದೆ.[38] ಈಗ ಗರ್ಭಗೃಹದಲ್ಲಿ ಕೇವಲ ಮೂಲವಿಗ್ರಹದ ಪೀಠದ ಎಡಬಲಗಳಲ್ಲಿ ತಂದಿರಿಸಲಾದ ಎರಡು ಶಿಲಾಪೀಠಗಳಿವೆ. ಇವು ಚೆಂತಕುಪ್ಪೆ ರಂಗಯ್ಯನು ಪ್ರತಿಷ್ಠಾಪನೆ ಮಾಡಿದ ವಿಗ್ರಹಗಳ ಪೀಠಗಳು. ವಿಠಲನ ಭಕ್ತನಾದ ರಂಗಯ್ಯನು ಚಲುಕ್ಯರ ವಿಷ್ಣುಮೂರ್ತಿಯನ್ನು ವಿಠಲನ ಪ್ರತಿಮೆಯೆಂದು ಭಾವಿಸಿರಬಹುದು. ಏಕೆಂದರೆ ಚಲುಕ್ಯರ ಚತುರ್ಭುಜ ವಿಷ್ಣು ತನ್ನ ಕೆಳಗಿನ ಕೈಗಳನ್ನು ಟೊಂಕದ ಮೇಲೆ ಇರಿಸಿರುವಂತೆ ಚಿತ್ರಿತನಾಗಿರುತ್ತಾನೆ. ಆತನನ್ನು ವಿಠಲನೆಂದು ತಿಳಿದು ರಂಗಯ್ಯನ ಭಕ್ತಿಯಿಂದ ರುಕ್ಮಿಣಿ ಸತ್ಯಭಾಮೆಯರ ಶಿಲ್ಪಗಳನ್ನು ಗರ್ಭಗುಡಿಯಲ್ಲಿ ಸ್ಥಾಪಿಸಿ ತನಗೆ ಕಂಡ ಕೊರತೆಯನ್ನು ನೀಗಿಸಿದ್ದಾನೆ. ವಿಜಯನಗರ ಕಾಲದ ಗುಡಿಯೊಂದು ಉತ್ತರ ಕೋಟೆಯ ಬಂಡೆಗಲ್ಲಿಗೆ ಹೊಂದಿಕೊಂಡು ನಿರ್ಮಿತವಾಗಿದೆ. ಇದನ್ನು ಬತೇರಪ್ಪನ ಗುಡಿ ಎನ್ನುತ್ತಾರೆ. ಇದು ಮಾರುತಿ ಮಂದಿರ. ಮಾಧ್ವ ಮತದ ವೈಷ್ಣವರು ಇದಕ್ಕೆ ಈಗಲೂ ನಡೆದುಕೊಳ್ಳುತ್ತಾರೆ. ಮೊನ್ನೆ ಮೊನ್ನೆಯವರೆಗೂ ವೆಂಕಟರಮಣನ ಗುಡಿ ಎಂದು ಕರೆಯಲ್ಪಡು ತ್ತಿದ್ದ ವಿಜಯನಗರ ಕಾಲದ ಮುಂದಿರವೊಂದು ಈಗ ಮುಸ್ಲಿಮರ ದರ್ಗಾ ಆಗಿ ಪರಿವರ್ತಿತವಾಗಿದೆ. ಈ ಗುಡಿಯಲ್ಲಿದ್ದ ಸದಾಶಿವರಾಯನ ಶಾಸನವೊಂದನ್ನು ಫ್ಲೀಟರು ಪ್ರಕಟಿಸಿದ್ದಾರೆ.[39] ಈ ಗುಡಿಯಿಂದ ಪ್ರಾಚ್ಯ ವಸ್ತುಸಂಗ್ರಹಾಲಯಕ್ಕೆ ಹೋಗುವ ದಾರಿಯಲ್ಲಿ ಶ್ರೀರಾಮ ಮಂದಿರವಿದೆ. ಇದೂ ಕೂಡ ಮೂಲತಃ ವಿಜಯನಗರ ಕಾಲದ್ದಿರಬಹುದು. ಈಗಿನ ದೇವಾಲಯವು ಮಾರ್ಪಾಟುಗೊಂಡದ್ದಾಗಿದೆ.

ಶ್ರೀಮಧ್ವಾಚಾರ್ಯರು ದ್ವೈತ ಸಿದ್ಧಾಂತವನ್ನು ಉಪದೇಶಿಸಿದರು. ವಿಜಯನಗರ ಅರಸರ ಮೇಲೆ ಪ್ರಭಾವ ಬೀರಿದ ವ್ಯಾಸತೀರ್ಥರು, ವಾದಿರಾಜರು ಮಧ್ವಮತವನ್ನು ಹರಡಿದರು. ಬಾದಾಮಿಗಳೂ ಮಾಧ್ವ ಸಂಪ್ರದಾಯವು ಪಸರಿಸಿತು. ಮಧ್ವ ತತ್ವಾನುಯಾಯಿಗಳಾದ ದಾಸರು ಭಕ್ತಿಗೀತಗಳನ್ನು ರಚಿಸಿ ಹಾಡಿದರು. ಅಂಥವರಲ್ಲಿ ಪ್ರಸನ್ನ ವೆಂಕಟದಾಸರೂ ಒಬ್ಬರು. ಅವರು ಕುಳಿತುಕೊಳ್ಳುತ್ತಿದ್ದ ಅಶ್ವತ್ಥಕಟ್ಟೆಯು ಪ್ರಸನ್ನ ವೆಂಕಟದಾಸರ ಕಟ್ಟೆಯೆಂದು ಪ್ರಸಿದ್ಧ. ಪುರಾತತ್ವ ವಸ್ತುಸಂಗ್ರಹಾಲಯಕ್ಕೆ ಹೋಗುವ ದಾರಿಯಲ್ಲಿ ಅಗಸ್ತ್ಯತೀರ್ಥದ ಹತ್ತಿರ ಈ ಕಟ್ಟೆ ಇದೆ. ಹೀಗೆ ಬಾದಾಮಿಯಲ್ಲಿ ವೈಷ್ಣವು ಧರ್ಮವು ಚಲುಕ್ಯಪೂರ್ವ ಕಾಲದಿಂದ ಅನೂಚಾನವಾಗಿ ನಡೆದು ಬಂದಿದೆ.


[1]      ರಾಮಚಂದ್ರರಾವ್ ಎಸ್.ಕೆ., ೧೯೭೫, ಮೂರ್ತಿ ಶಿಲ್ಪ, ನೆಲೆ ‑ಹಿನ್ನೆಲೆ, ಬೆಂಗಳೂರು, ಪು.೨೧

[2]     ನಾರಾಯಣ ಪಿ.ವಿ. ೧೯೮೩, ವಚನ ಸಾಹಿತ್ಯ:ಒಂದು ಸಾಂಸ್ಕೃತಿಕ ಅಧ್ಯಯನ, ಗದಗ, ಪು. ೪೯೧.

[3]     ಕನ್ನಡ ವಿಶ್ವಕೋಶ ಸಂ. ೧೦. ೧೯೮೦, ಮೈಸೂರು ಪು. ೧೬೮

[4]     ನಾಗರಾಜಯ್ಯ ಹಂ.ಪ. ೧೯೯೩, ವಡ್ಡಾರಾಧನೆ, ಬೆಂಗಳೂರು, ಪು. ೧೦ (ನಾಗರ್ಗ್ಗೆಪರಸಿ ಪೆತ್ತಳಪ್ಪುದಂ ನಾಗಶ್ರೀಯೆಂಬ ಪೆಸರನಿಟ್ಟರ್)ಸುಕುಮಾರ ಸ್ವಾಮಿಯ ಕಥೆ.

[5]     ಕಲಬುರ್ಗಿ ಎಂ.ಎಂ. ೧೯೯೩, ಬಸವಣ್ಣನವರ ವಚನ ಸಂಪುಟ ೧. ಬೆಂಗಳೂರು ವಚನ ಸಂ. ೧೯೪.

[6]     T. Watlers, ೧೯೦೪, on yuan chwang’s travels in India, London.

[7]     ಹೀನಯಾನಕ್ಕೆ ಮಹಾಸಂಘಿಕ ಅಥವಾ ಸ್ಥವಿರವಾದ ಎಂದೂ ಹೆಸರು (ನಂದಿಮಠ ಎಸ್.ಸಿ. ೧೯೮೩, ಕರ್ನಾಟಕ ಧರ್ಮಗಳು, ಬೆಂಗಳೂರು, ಪು.೨೦೪)

[8]     ನೋಡಿ: R.C. Hiremath, ೧೯೯೪, Buddhism in Karnataka, New Delhi P. ೬೦.

[9]     Ramesh K.V. ೧೯೮೪, Chalukyas of Vatapi, Delhi, p.೧೪೪.

[10]    Banerji R.D. ೧೯೨೮, Basreliefs of Badami, Calcutta, P. ೨೯.

[11]    ರಾಜಶೇಖರ ಎಸ್.೧೯೮೨, ‘ಚಾಲುಕ್ಯ ದೇವಾಲಯಗಳು’, ಚಾಲುಕ್ಯ ಶ್ರೀ ಬಾದಾಮಿ, ಪು.೭೪

[12]    Settar S. ೧೯೬೯: ‘A Buddhist Vihara at Aihole’, East and West Vol. XIX, ೧-೨, Rome.

[13]    ವಿವರಗಳಿಗೆ ನೋಡಿ ರಾಜಶೇಖರ ಎಸ್.೧೯೮೮:ಪೂರ್ವೋಕ್ತ. ಪು. ೩೮‑೩೯.

[14]    ಜಯತಿ ಶ್ರೀ ಪರಿಷ್ವರ್ಙ್ಗ ಮ್ಯಾನತಿ ರಚ್ಯುತಃ ದಾನವಾ ಕ್ಯೋರ್ಯುಗಾನ್ತಾಗ್ನಿ:ಶಿಷ್ಟಾನಾನು ಸುದರ್ಶನ.

[15]    EC, V, BI, ೧೨೧.

[16]    ಜಯತಿ ಆವಿಷ್ಕೃತಂ ವಿಷ್ಣೋಃ ವಾರಾಹಂ ಕ್ಷೋಭಿತಾರ್ಣವಂ |

ದಕ್ಷಿಣೋನ್ನತ ದಂಷ್ಟ್ರಾಗ್ರೇ ವಿಶ್ರಾಂತ ಭುವನಂ ವಪುಃ ||

[17]    KI, II, ೨.

[18]    IA, XIX, p. ೧೬.

[19]    KI, V, ೧.

[20]    EI, XXVII, p. ೩೭.

[21]    ಶತಪಥ ಬ್ರಾಹ್ಮಣದ ಮೇರೆಗೆ ಇವು ಭೂತಯಜ್ಞ, ನರ (ಅತಿಥಿ)ಯಜ್ಞ, ಪಿತೃಯಜ್ಞ, ದೇವಯಜ್ಞ, ಬ್ರಹ್ಮಯಜ್ಞ

[22]    IA, VI, ೭೩.

[23]    ಕುಲಕರ್ಣಿ, ಆರ್.ಎಚ್. ೧೯೯೬, ‘ಚಾಲುಕ್ಯಪೂರ್ವ ಕಾಲದ ಸುಡಾವೆ ಮಣ್ಣಿನ ದ್ವಿಬಾಹು ನರಸಿಂಹ ವಿಗ್ರಹ’, ಇತಿಹಾಸ ದರ್ಶನ, ಸಂ. ೧೧ ಬೆಂಗಳೂರು, ಪು. ೬೯‑೭೧.

[24]    ಬತ್ತೇರಪ್ಪನ ಗುಡಿ ಹತ್ತಿರವಿದ್ದ ಈ ಶಾಸನಕಲ್ಲು ಈಗ ಧಾರವಾಡದ ಕನ್ನಡ ಸಂಶೋಧನ ಸಂಸ್ಥೆಯ ವಸ್ತು ಸಂಗ್ರಹಾಲಯದಲ್ಲಿದೆ.

[25]    IA, X, ೫೭.

[26]    EI, XXVII pp. ೩೯ ‑೪೧.

[27]    IA, IV ೨೭, p. ೭೨‑ ೭೫ ‘ಭಗವಾನ ನಾರಾಯಣ ಪ್ರಸಾದ ಸಮಾಸಾದಿತ ವರಾಹ ಲಾಂಛನ.

[28]    ಇದನ್ನು ಶೈವ ಗುಹೆ ಎಂದು ಕೆ.ವಿ. ಸೌಂದರ ರಾಜನ್ ಅವರು ತಪ್ಪಾಗಿ ಗುರುತಿಸಿದ್ದಾರೆ. ನೋಡಿ Cave Temples of the Deccan ೧೯೮೧, New Delhi, p. ೪೭‑ ೫೩

[29]    ಪಾಡಿಗಾರ ಶ್ರೀನಿವಾಸ, ೧೯೮೯, ಬಾದಾಮಿ ಮತ್ತು ವೈಷ್ಣವ ಧರ್ಮ, ಕರ್ನಾಟಕ ಭಾರತಿ, ಸಂಪುಟ ೨೧, ಸಂಚಿಕೆ ೩‑೪, ಪು. ೧೧೦.

[30]    ಸದಾಶಿವ ಕವಿ, ೧೯೬೧, ಶ್ರೀ ಮಹಾಕೂಟೇಶ್ವರ ಪುರಾಣ, ಹೊಳೆ ಆಲೂರ, ಪು. ೩೧.

[31]    ಮುಖ್ಯವಾಗಿ ಇವನ್ನು ಆಧರಿಸಿ ರ‌್ಯಾಡ್‌ಕ್ಲಿಫ್ ಕೆರೊಲ ಎಂಬವರು ಈ ಗುಡಿಯನ್ನು ವಿಷ್ಣುಗುಡಿ ಎಂದೇ ಗುರುತಿಸಿದ್ದಾರೆ. ನೋಡಿ:ಆದರೆ ಸುಕನಾಸಿಯಲ್ಲಿ ನಟರಾಜನಿರುವುದರಿಂದ ಇದು ಶಿವಾಲಯ. ನಟರಾಜನ ಶಿಲ್ಪವು ನಂತರದ ಸೇರ್ಪಡೆ ಎಂದು ತೋರುವುದಿಲ್ಲ.

[32]    ಸದಾಶಿವ ಕವಿ, ಪೂರ್ವೋಕ್ತ, ಸಂಧಿ ೬, ಪದ್ಯಗಳು ೬೧‑೭೩.

[33]    ನಾರಸಿಂಹ ಕ್ಷೇತ್ರಮೀಗಳು
ತೋರುವುದು ಮಾಕೂಟದೊಳು ವಿ‑
ಸ್ತಾರದಿಂ ಮತ್ತಲ್ಲಿ ರಂಗಕ್ಷೇತ್ರಮೊಪ್ಪುವುದು||ಸಂಧಿ ೬;ಪದ ೭೫.

[34]    ಸುಂದರ ಅ., ೧೯೭೭, ‘ಕೆಲವು ಈಚಿನ ಗಮನಾರ್ಹ ಪುರಾತತ್ವ ಶೋಧಗಳು’ಕರ್ನಾಟಕ ಭಾರತಿ ಸಂಪುಟ ೯;ಸಂಚಿಕೆ ೪, ಧಾರವಾಡ ಪು. ೯೨.

[35]    IA, VI, pp. ೧೩೯ ‑೧೪೨.

[36]    IA, V p. ೧೯

[37]     Padigar Shrinivas, ೧೯೯೦, ‘Unpublished Inscriptions from Badami, Indian History and Epigraphy, Delhi p. ೩೬.೩೯. ) Ibid.

[39]    ವೆಂಕಟರಮಣನ ಈ ಗುಡಿಯು ದಾದಾಸಾಹೇಬ ಹಜಾಮನ ವಾಸಸ್ಥಾನವಾಗಿತ್ತೆಂದು  ಫ್ಲೀಟರು ಟಿಪ್ಪಣಿ ಮಾಡಿದ್ದಾರೆ. ನೋಡಿ IA, X pp. ೬೪ ‑೬೫.