ಜೈನ ಧರ್ಮ

ಜೈನ ಧರ್ಮವು ಕರ್ನಾಟಕಕ್ಕೆ ಕ್ರಿಸ್ತಪೂರ್ವ ಕಾಲದಲ್ಲಿಯೇ ಪ್ರವೇಶಿಸಿತು. ದಕ್ಷಿಣ ಕರ್ನಾಟಕದಲ್ಲಿ ಶ್ರವಣ ಬೆಳಗೊಳದ ಬೆಟ್ಟ ಉತ್ತರ ಕರ್ನಾಟಕದ ಭಾಗದಲ್ಲಿ ಕೊಪ್ಪಳ ಮತ್ತು ಬಾದಾಮಿಯ ಗುಡ್ಡಗಳ ಗವಿಗಳು, ದಿಗಂಬರರು ವಾಸ ಮಾಡಲು ತಕ್ಕ ಪರಿಸರವನ್ನು ಒದಗಿಸಿರಬೇಕು. ಪ್ರಾಚೀನ ಕರ್ನಾಟಕದಲ್ಲಿ ಅಲ್ಲಲ್ಲಿ ಶ್ವೇತಾಂಬರರೂ ಇದ್ದದ್ದು ತಿಳಿದುಬರುತ್ತದೆ. ಕ್ರಿ.ಶ. ೧ನೆಯ ಶತಮಾನದಲ್ಲಿ ಮಾನ್ಯಖೇಡದ ಪರಿಸರದಲ್ಲಿ ಶ್ವೇತಾಂಬರರಿದ್ದರು.

[1] ಇವರು ಅಲ್ಪಸಂಖ್ಯಾತರಾಗಿದ್ದು ಕಾಲಾನುಕ್ರಮದಲ್ಲಿ ಮರೆಯಾದರೆಂದು ತೋರುತ್ತದೆ. ಸುಮಾರು ಕ್ರಿ.ಶ. ಪೂ. ೨-೩ನೆಯ ಶತಮಾನಗಳಲ್ಲಿ ಶ್ವೇತಾಂಬರ, ದಿಗಂಬರಗಳೆಂಬ ಎರಡು ಕವಲುಗಳು ಕಾಣಿಸಿಕೊಂಡವೆಂದು ತಿಳಿಯಲಾಗಿದೆ.[2]

ಬಾದಾಮಿ ಐಹೊಳೆ, ಹಳ್ಳೂರು (ಜಿ.ಬಾಗಲಕೋಟೆ) ಇವು ಚಾಲುಕ್ಯರ ಕಾಲದ ಮಹತ್ವದ ಜೈನ ಕೇಂದ್ರಗಳಾಗಿದ್ದವು. ಬಾದಾಮಿಯ ಗುಹಾಲಯಗಳಲ್ಲಿ ಜಿನಾಲಯವೂ ಒಂದು. ಇದು ಪ್ರಾಯಶಃ ಆರನೆಯ ಶತಮಾನದ್ದು. ಅದರ ಗರ್ಭಗೃಹದಲ್ಲಿ ಮಹಾವೀರ ಮತ್ತು ಮೊಗಸಾಲೆಯ ಗೋಡೆಗಳ ಮೇಲೆ ಪಾರ್ಶ್ವನಾಥ ತೀರ್ಥಂಕರರ ಮತ್ತು ಬಾಹುಬಲಿಯ ಬೃಹತ್ ವಿಗ್ರಹಗಳಿವೆ. ಇಲ್ಲಿಯ ಬಾಹುಬಲಿ ಶಿಲ್ಪವು ಭಾರತದಲ್ಲಿಯೇ ಅತ್ಯಂತ ಪ್ರಾಚೀನವಾದುದೆಂದು ತಿಳಿಯಲಾಗಿದೆ.[3] ಕರ್ನಾಟಕದಲ್ಲಿ ಆರನೆಯ ಶತಮಾನದ ವೆಳೆಗೆ ಬಾಹುಬಲಿ ಮೂರ್ತಿಯನ್ನು ಕೊರೆಯಿಸುವುದು ಮತ್ತು ಪೂಜಿಸುವುದು ರೂಢಿಯಲ್ಲಿ ಇದ್ದಿತೆಂದು ಗೊತ್ತಾಗುತ್ತದೆ. ಐಹೊಳೆಯ ‘ಮೀನಬಸ್ತಿ’ ಚಲುಕ್ಯರ ಇನ್ನೊಂದು ಜಿನಾಲಯ.

ಸದ್ಯಕ್ಕೆ ಅತ್ಯಂತ ಪ್ರಾಚೀನ ರಾಚನಿಕ ಜಿನಾಲಯವೆಂದರೆ ಐಹೊಳೆಯ ಮೇಗುತಿ (=ಮೇಗುಡಿ= ಮೇಲ್ಗುಡಿ). ಈ ಜಿನಗೃಹವನ್ನು ಇಮ್ಮಡಿ ಪೊಲೆಕೇಶಿಯ ಆಶ್ರಯದಲ್ಲಿದ್ದ ರವಿಕೀರ್ತಿ ಕವಿಯು ಕ್ರಿ.ಶ. ೬೩೪-೬೩೫ ರಲ್ಲಿ ಕಟ್ಟಿಸಿದನು.[4] ಹಳ್ಳೂರಿನ ಮೇಗುಡಿಯೂ ಕೂಡ ಚಲುಕ್ಯರ ಕಾಲದ ಮಹತ್ವದ ಜಿನೇಂದ್ರ ಭವನವಾಗಿದೆ.[5] ರಾಜರು, ರಾಜ ಪರಿವಾರದವರು, ಸಾಮಂತರು ಮತ್ತು ಸಾಮಾನ್ಯರು ಜಿನಾಲಯಗಳ ನಿರ್ಮಾಣ, ನಿರ್ವಹಣೆಗಾಗಿ ದಾನಗಳನ್ನು ನೀಡಿದರು. ಅಣ್ಣಿಗೇರಿ, ಲಕ್ಷ್ಮೇಶ್ವರ ಮತ್ತು ಆಡೂರಗಳಲ್ಲಿ ಜೈನ ವಿಶ್ರಾಮಧಾಮಗಳು ನಿರ್ಮಿತಗೊಂಡವು. ಚಲುಕ್ಯ ಪ್ರಭುಗಳು ಮತ್ತು ಪ್ರಜೆಗಳು ಪರಧರ್ಮವನ್ನು ಗೌರವಿಸುವ ಔದಾರ್ಯವನ್ನು ತೋರಿದ್ದಾರೆ.

ಮಂಗಲೇಶನ ಹೂಲಿ ತಾಮ್ರಶಾಸನದಲ್ಲಿ[6] ಹೇಳಲಾದ ಪರಲೂರ ಸಂಘಕ್ಕೆ ಹಳ್ಳೂರು (ಜಿ.ಬಾಗಲಕೋಟ) ಮುಖ್ಯ ಸ್ಥಾನವೆನಿಸಿತ್ತು. ಪ್ರಸಕ್ತ ಶಾಸನವು ಶಾಂತಿನಾಥ ಜಿನನ ಸ್ತುತಿಯೊಂದಿಗೆ ಪ್ರಾರಂಭವಾಗುತ್ತದೆ. ಮಂಗಲೇಶನ ಆದೇಶದ ಮೇರೆಗೆ ಸೇಂದ್ರಕ ವಂಶದ ರವಿಶಕ್ತಿಯು ಕಿರುವಟ್ಟಕೆರೆಯ ಶಾಂತಿನಾಥ ಜಿನಾಲಯಕ್ಕೆ ಐವತ್ತು ನಿವರ್ತನಗಳ ಭೂದಾನ ಮಾಡಿದನು. ಈ ಶಾಸನದಲ್ಲಿ ಶ್ರೀನಂದಿ ಮತ್ತು ಆತನ ಶಿಷ್ಯನಾದ ಅಭಯನಂದಿ ಎಂಬ ಜೈನ ಮುನಿಗಳ ಹೆಸರುಗಳಿದ್ದು ಅವರು ಪರಲೂರ (ಹಳ್ಳೂರ) ಸಂಘದವರಾಗಿದ್ದರೆಂದು ತಿಳಿದುಬರುತ್ತದೆ.[7] ಪರಮ ಭಾಗವತನೆನಿಸಿದ ಮಂಗಲೇಶನು ಪರಧರ್ಮ ಪೋಷಕನಾಗಿದ್ದನೆಂಬುದಕ್ಕೆ ಇದು ನಿದರ್ಶನವಾಗಿದೆ.

ಇಮ್ಮಡಿ ಪೊಲೆಕೇಶಿಯ ಆಸ್ಥಾನ ಕವಿಯಾಗಿದ್ದ ಯಾಪನೀಯ ಸಂಪ್ರದಾಯದ ರವಿಕೀರ್ತಿಯು ಐಹೊಳೆಯ ಬೆಟ್ಟದ ಮೇಲೆ ಮೇಗುತಿ(ಮೇಗುಡಿ)ಯನ್ನು ನಿರ್ಮಿಸಿದನ್ನು ಈ ಹಿಂದೆ ಗಮನಿಸಿದ್ದೇವೆ. ಈ ಗುಡಿಯಲ್ಲಿಯ ಅಂಬಿಕಾ (ಕೂಷ್ಮಾಂಡಿನಿ) ಯಕ್ಷಿಯ ಪ್ರತಿಮೆಯನ್ನು ಆಧರಿಸಿ ಇದು ನೇಮಿನಾಥನ ಮಂದಿರವೆಂದು ಎಸ್.ವಿ.ಪಾಡಿಗಾರ ಅವರು ತರ್ಕಿಸಿದ್ದಾರೆ.[8] ಈ ಯಕ್ಷಿಣಿ ಶಿಲ್ಪದ ಹಿನ್ನೆಲೆಯಲ್ಲಿ ತಂತ್ರ, ಮಂತ್ರ, ವಿಧಾನಗಳು ಜೈನ ಧರ್ಮದಲ್ಲಿ ಸೇರ್ಪಡೆಗೊಂಡಿದ್ದವೆಂದು ತಿಳಿಯಬಹುದು.

ವಿನಿಯಾದಿತ್ಯನು ಲಕ್ಷ್ಮೇಶ್ವರದ ಶಂಖ ಜಿನಾಲಯದ ದಾನಶಾಲೆಯನ್ನು ನಡೆಸಲು ಮತ್ತು ಪೂಜಾವಿಧಿಗಳಿಗಾಗಿ ಮೂಲಸಂಘ ದೇವಗಣ ಶಾಖೆಯ ಧ್ರುವ ದೇವಾಚಾರ್ಯರ ವಿನಂತಿಯ ಮೇರೆಗೆ ಹಡಗಿಲೆ (ತಾ. ಶಿರಹಟ್ಟಿ) ಗ್ರಾಮವನ್ನು ದಾನ ಮಾಡಿದನು.[9] ಈತನ ಮಗಳಾದ ಕುಂಕುಮ ಮಹಾದೇವಿಯು ಪುಲಿಗೆರೆಯಲ್ಲಿ ಆನೆ ಸೆಜ್ಜೆಯ ಬಸದಿಯನ್ನು ನಿರ್ಮಿಸಿದಳು. ವಿಜಯಾದಿತ್ಯನ ಶಿಗ್ಗಾವ ತಾಮ್ರಶಾಸನದಲ್ಲಿ[10] ಅರಸನು ತನ್ನ ತಂಗಿ ಕಟ್ಟಿಸಿದ ಈ ಜಿನಾಲಯಕ್ಕೆ ಗುಡಿಕೆರೆ ಗ್ರಾಮದಾನ ಮಾಡಿದುದು ದಾಖಲೆಗೊಂಡಿದೆ. ಈ ಜಿನ ಭವನದಲ್ಲಿ ನಡೆಯಬೇಕಾದ ಪೂಜೆ, ದಾನಗಳಿಗಾಗಿಯೂ, ನವಕರ್ಮ ಹಾಗೂ ಜೀರ್ಣೋದ್ಧಾರಕ್ಕಾಗಿ ಈ ದಾನವನ್ನು ಕೊಡಲಾಯಿತೆಂದು ಶಾಸನವು ತಿಳಿಸುತ್ತದೆ. ಇದರಿಂದ ಲಕ್ಷ್ಮೇಶ್ವರ-ಗುಡಿಗೇರಿ ಪ್ರದೇಶವು ಚಲುಕ್ಯರ ಕಾಲದಲ್ಲಿ ಜೈನರ ಕೇಂದ್ರವಾಗಿತ್ತೆಂಬುದು ಸ್ಪಷ್ಟ. ಅಲ್ಲಿ ಮೂಲಸಂಘದ ಸೂರಸ್ತಗಣದವರು ವಾಸವಾಗಿದ್ದರು.

ಕ್ರಿ.ಶ. ೭೨೩ರಲ್ಲಿ ಬಿಕ್ಕಿರಾಣಕನು ಸೆಂಬೊಳಲ (=ಶ್ಯಾಬಾಳ, ತಾ.ಶಿರಹಟ್ಟಿ) ಗ್ರಾಮವನ್ನು ಶಂಖ ಜಿನಾಲಯದ ಆವರಣದಲ್ಲಿ ಜಿನಭಟ್ಟಾರಕ ಮಂದಿರದ ಪೂಜೆಗಾಗಿ ಮತ್ತು ದಾನಶಾಲೆಗಳಿಗಾಗಿ ದಾನ ಮಾಡಿದನು.[11] ಮೂಲ ಸಂಘದ ಜಯದೇವ ಪಂಡಿತಾಚಾರ್ಯನು ಈ ದಾನವನ್ನು ಸ್ವೀಕರಿಸಿದನು.

ವಿಜಯಾದಿತ್ಯನು ಶಂಖಜಿನೇಂದ್ರ ಮಂದಿರಕ್ಕೆ ಮೂಲಸಂಘದ ದೇವಗಣ ಶಾಖೆಯ ಉದಯದೇವ ಪಂಡಿತ ಅಂದರೆ ನಿರವದ್ಯ ಪಂಡಿತರೆಂಬ ಸ್ವಗುರುವಿನ ಆದೇಶದ ಮೇರೆಗೆ ಕದ್ದಮ ಗ್ರಾಮವನ್ನು ದಾನವಾಗಿ ನೀಡಿದನು.[12] ಈ ಸಮ್ರಾಟನು ಬಡವರಿಗೆ, ಅನಾಥರಿಗೆ, ಆಲಯ, ಸತ್ರಗಳನ್ನು ಸ್ಥಾಪಿಸಿದುದನ್ನು ಆಲಂಪುರ ಶಾಸನವು ಹೊಗಳಿದೆ.[13] ಆತನು ಜೈನ ಧರ್ಮೀಯರಿಗೆ ಆಸರೆ ನೀಡಿದುದು ಈ ಪ್ರಶಸ್ತಿ ಶಾಸನದ ವಸ್ತುವಾಗಿದೆ.

ಇಮ್ಮಡಿ ವಿಕ್ರಮಾದಿತ್ಯನು ಬಾಹುಬಲಿ ಶ್ರೇಷ್ಠಿಯ ವಿನಂತಿಯ ಮೇರೆಗೆ ಜಿನಾಲಯದ ಜೀರ್ಣೋದ್ಧಾರಕ್ಕಾಗಿ ಮತ್ತು ದಾನಶಾಲೆಯನ್ನು ನಡೆಸಲು ೫೦ ನಿವರ್ತನ ಭೂಮಿಯನ್ನು ದಾನ ಮಾಡಿದನು.[14] ಮೂಲಸಂಘದ ದೇವಗಣ ಶಾಖೆಯ ವಿಜಯದೇವ ಪಂಡಿತಾಚಾರ್ಯರಿಗೆ ಈ ದಾನವನ್ನು ಒಪ್ಪಿಸಲಾಯಿತು. ಹೀಗೆ ಚಲುಕ್ಯ ಅರಸುಮನೆತನದ ಇಮ್ಮಡಿ ಪೊಲೆಕೇಶಿ, ವಿನಯಾದಿತ್ಯ, ವಿಜಯಾದಿತ್ಯ ಮತ್ತು ಇಮ್ಮಡಿ ವಿಕ್ರಮಾದಿತ್ಯ ಎಂಬ ನಾಲ್ವರು ಅರಸರು ಜೈನ ಕೇಂದ್ರವಾದ ಲಕ್ಷ್ಮೇಶ್ವರದೊಂದಿಗೆ ಸುಮಾರು ನೂರು ವರ್ಷಗಳಷ್ಟು ಕಾಲ ಶ್ರದ್ಧೆಯನ್ನಿರಿಸಿಕೊಂಡ ಸಂಗತಿ ಕುತೂಹಲಕಾರಿಯಾಗಿದೆ.

ಚಲುಕ್ಯ ಅರಸರು ಮಾತ್ರವಲ್ಲ, ಅವರ ಸಾಮಂತರು, ಪ್ರಜೆಗಳು ಕೂಡ ಜೈನ ಧರ್ಮದ ಬಗ್ಗೆ ತಮ್ಮ ಶ್ರದ್ಧೆ ಗೌರವಗಳನ್ನು ವ್ಯಕ್ತಪಡಿಸಿದ್ದಾರೆ. ಕರಟಗೇರಿ(ತಾ.ಗದಗ)ಯಲ್ಲಿಯ ‘ಶಾಂತಿ ಭಗವತ್’ ಮಂದಿರಕ್ಕೆ ರವಿಕೀರ್ತಿ ಎಂಬ ಸೇಂದ್ರಕ ಅರಸನು ಭೂದಾನ ಮಾಡಿದನು.[15] ಲಕ್ಷ್ಮೇಶ್ವರದಲ್ಲಿಯ ನೇಮಿನಾಥನ ಪೂಜಾಕಾರ್ಯಗಳಿಗಾಗಿ ಇಮ್ಮಡಿ ಪೊಲೆಕೇಶಿಯ ಸಾಮಂತನಾಗಿದ್ದ ಸೇಂದ್ರಕ ದುರ್ಗ್ಗ ಶಕ್ತಿಯು ಐನೂರು ನಿವರ್ತನ ಭೂಮಿಯನ್ನು ದಾನ  ಮಾಡಿದನು. ಧರ್ಮ ಗಾಮುಂಡನು ಕಟ್ಟಿಸಿದ ಜಿನಾಲಯಕ್ಕೆ ಮತ್ತು ದಾನಶಾಲೆಗೆ ಮಾಂಡಲಿಕ ಅರಸನೊಬ್ಬನು ಇಪ್ಪತ್ತೈದು ನಿವರ್ತನ ಭೂಮಿಯನ್ನು ದಾನ ಮಾಡಿದನು. ಇಮ್ಮಡಿ ಕೀರ್ತಿವರ್ಮನ ಆಳ್ವಿಕೆಯಲ್ಲಿ ಜಾಬುಳಗೇರಿ ಗಾಮುಂಡನಾಗಿದ್ದ ಕಲಿಯಮ್ಮನು ಅಣ್ಣಿಗೇರಿಯಲ್ಲಿ ಒಂದು ಚೇದಿಯ(=ಚೈತ್ಯ)ವನ್ನು ನಿರ್ಮಿಸಿದನು.[16] ಹೀಗೆ ಪ್ರಭುವರ್ಗದವರಿಂದ ಪ್ರಜಾಸಮೂಹದಿಂದ ಜೈನಧರ್ಮವು ಚಲುಕ್ಯರ ಆಳ್ವಿಕೆಯಲ್ಲಿ ಪ್ರೋ

ರಾಷ್ಟ್ರಕೂಟರ ಕಾಲದಲ್ಲಿ ಕರ್ನಾಟಕದಲ್ಲಿ ಜೈನ ಧರ್ಮವು ಚೆನ್ನಾಗಿ ಪೋಷಿಸಲ್ಪಟ್ಟಿತು. ಆದರೆ ಈ ಅವಧಿಯಲ್ಲಿ ಬಾದಾಮಿಯು ರಾಜಕೀಯವಾಗಿ ನಿಶ್ಶಕ್ತವಾಯಿತು. ಈ ಕಾಲದ ಜೈನ ಧರ್ಮದ ಚಟುವಟಿಕೆಗಳು ಎದ್ದುಕಾಣದಿದ್ದರೂ ಈ ಪರಿಸರದಲ್ಲಿ ಜೈನ ಧರ್ಮದ ಪರಂಪರೆ ಎಂದಿನಂತೆ ಮುಂದುವರಿದಿತ್ತು ಎಂದು ತಿಳಿಯಲು ಪುರಾತತ್ವ ಆಧಾರಗಳಿವೆ. ಪಟ್ಟದಕಲ್ಲಿನ ಜೈನ ಮಂದಿರವು ೯ನೆಯ ಶತಮಾನದ ಆದಿಭಾಗದ್ದು, ಬಾದಾಮಿಯ ಹತ್ತಿರದಲ್ಲಿರುವ ಕೊಣ್ಣೂರಿನ ಪರಮೇಶ್ವರ ಗುಡಿಯು ಮೂಲತಃ ಜಿನಮಂದಿರ. ಈ ಕೊಳನೂರ ಬಸದಿಗೆ ಮೊದಲನೆಯ ಅಮೋಘವರ್ಷನು ಗ್ರಾಮದಾನವನ್ನು ಮಾಡಿದನು.[17] ಇದನ್ನು ಕಟ್ಟಿಸಿದವನು ಆತನ ಸಾಮಂತನಾಗಿದ್ದ ಬಂಕೆಯರಸನು, ನರೇಗಲ್ಲಿನ ನಾರಾಯಣ ಮಂದಿರವು ಮೂಲತಃ ಜಿನಾಲಯ. ಈ ಬಸದಿಯನ್ನು ಅಕಾಲವರ್ಷ ಕೃಷ್ಣರಾಜದೇವನ ಕಾಲದಲ್ಲಿ ಬೂತಯ್ಯ ಪೆರ್ಮಾಡಿಯ ಅರಸಿ ಪದ್ಮಬ್ಬರಸಿಯು ನಿರ್ಮಿಸಿದಳು.[18] ಗರ್ಭಗೃಹದಲ್ಲಿ ಒಂದು ಸಾಲಿನಲ್ಲಿ ೨೪ ತೀರ್ಥಂಕರರನ್ನು ಸ್ಥಾಪಿಸಿರುವುದು ಈ ಜಿನಾಲಯದ ವಿಶೇಷತೆ. ಈ ಪದ್ಧತಿ ಮೊದಲ ಬಾರಿಗೆ ಕಾಣಿಸಿಕೊಳ್ಳುವುದು ಈ ಜಿನಾಲಯದಲ್ಲಿಯೇ. [19]

ಬಾದಾಮಿ ಜಿನಾಲಯದ ನಡುಸಾಲೆಯ ಗೋಡೆಗಳ ಮೇಲಿರುವ ಮಹಾವೀರನ ಎರಡು ವಿಗ್ರಹಗಳು, ಪಾರ್ಶ್ವನಾಥ ಮತ್ತು ಉಳಿದ ಜಿನ ಹಾಗೂ ಯಕ್ಷ-ಯಕ್ಷಿಣಿಯ ಶಿಲ್ಪಗಳು ನಂತರದ ಕಾಲದಲ್ಲಿ ಅಂದರೆ ಕಲ್ಯಾಣ ಚಾಲುಕ್ಯರ ಅವಧಿಯಲ್ಲಿ ಕೊರೆಯಲಾದವುಗಳೆಂದು ತೋರುತ್ತವೆ. ಇದೇ ಜೈನ ಗುಹಾಲಯದ ೧೧-೧೨ನೆಯ ಶತಮಾನಕ್ಕೆ ಸೇರಿದ ಕನ್ನಡ ಶಾಸನವೊಂದು ಈ ಹಿನ್ನೆಲೆಯಲ್ಲಿ ಮಹತ್ವದ್ದೆನಿಸುತ್ತದೆ. ಜಕ್ಕಾವೆ ಅಥವಾ ಜಕ್ಕೆಯಕ್ಕ ಎಂಬವಳನ್ನು ಪ್ರಶಂಸಿಸುವ ಶಾಸನವಿದು. ಅವಳು ಮುಕ್ತಿ ಪದವಿಯನ್ನು ಪಡೆದಳೆಂದು ಅದು ಶ್ಲಾಘಿಸುತ್ತದೆ. ಆದುದರಿಂದ ಜಕ್ಕಾವೆಯು ದಿಗಂಬರ ಪಂಥದವಳಾಗಿರಲಾರಳು. ಏಕೆಂದರೆ ದಿಗಂಬರ ಪಂಥದ ಸಿದ್ಧಾಂತದ ಮೇರೆಗೆ ಸ್ತ್ರೀಗೆ ಮುಕ್ತಿ ಲಭಿಸದು. ಪ್ರಾಯಶಃ ಅವಳು ಯಾಪನೀಯ ಪಂಥದವಳಾಗಿರಬಹುದು. ಸಮಾಧಿ ಮರಣವು ಜೈನರಿಗೆ ಆದರ್ಶ ಮರಣವೆನಿಸುತ್ತದೆ. ಜಕ್ಕಾವೆಯು ಸಲ್ಲೇಖನ ವ್ರತ ಮಾಡಿ ಮರಣ ಹೊಂದಿದವೆಂಬುದು ಶಾಸನದ ಭಾಗವಾಗಿದೆ. ಈ ಶಾಸನವು ಒಗಟಿನ ರೂಪದಲ್ಲಿ ಇದ್ದುದನ್ನು ಎಸ್.ವಿ.ಪಾಡಿಗಾರ ಅವರು ಗುರುತಿಸಿ ಅದರಲ್ಲಿಯ ಕೆಲವು ಅಂಕಿಗಳು ಜೈನ ಧರ್ಮದ ಶ್ರಾವಕರು ಮೋಕ್ಷ ಪಡೆಯಲು ಪಾಲಿಸಬೇಕಾದ ವಿಷಯಗಳನ್ನು ಸೂಚಿಸುತ್ತವೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.[20] ಶಾಸನದಲ್ಲಿ ಪ್ರಸ್ತಾಪಿಸಲಾದ ಮೂವತ್ತೈದು ಅಕ್ಷರಗಳು ಜೈನರ ಪವಿತ್ರ ಪಂಚಪರಮೇಷ್ಠಿ ಮಹಾಮಂತ್ರವನ್ನು[21] ಸಂಕೇತಿಸುತ್ತವೆ ಎಂದು ಸರಿಯಾಗಿ ಗುರುತಿಸಿದ್ದಾರೆ. ಪ್ರಸಕ್ತ ಶಾಸನದಲ್ಲಿ ಜಕ್ಕಾವೆಯನ್ನು ಅತ್ತಿಮಬ್ಬೆಗೆ[22] ಹೋಲಿಸಿದ್ದುದು ಕುತೂಹಲಕಾರಿಯಾಗಿದೆ. ನಮ್ಮ ನಾಡಿನ ಜೈನ ಪರಂಪರೆಯಲ್ಲಿ ಅತ್ತಿಮಬ್ಬೆಯದು ಅಮರ ಹೆಸರು. ಬಾದಾಮಿಯ ಜಕ್ಕಾವೆಯು ಈಕೆಯ ಆದರ್ಶವನ್ನು ಅನುಸರಿಸಿದ್ದುದನ್ನು ಈ ಶಾಸನವು ಸೂಚಿಸುತ್ತದೆ. ಇಲ್ಲಿಯ ನಾಲ್ಕನೆಯ ಗುಹಾ ದೇವಾಲಯದ ನಡುಸಾಲೆಯ ಗೋಡೆಯ ಮೇಲೆ ಹಲವಾರು ಶಿಲ್ಪಗಳನ್ನು ಪ್ರಾಯಶಃ ಜಕ್ಕಾವೆಯು ಕೊರೆಯಿಸಿರಬಹುದು. ಅತ್ತಿಮಬ್ಬೆಯ ಈ ಪರಂಪರೆ ಇಲ್ಲಿ ಮುಂದುವರಿದುದು ಕಂಡುಬರುತ್ತದೆ. ಬಾದಾಮಿಯ ಅರಳಿತೀರ್ಥದ ಭೌಗೋಳಿಕ ಪರಿಸರವು ಜೈನ ಮುನಿಗಳಿಗೆ ಸೂಕ್ತ ತಾಣ. ಅಲ್ಲಿ ವರ್ಧಮಾನ ದೇವರು ಎಂಬ ಮುನಿವಾಸವಾಗಿರಬೇಕು. ಅಲ್ಲಿಯ ಕಲ್ಲಾಸರೆಯಲ್ಲಿರುವ ಕ್ರಿ.ಶ. ೧೦೮೨ರ ಶಾಸನವೊಂದು ‘ವರ್ಧಮಾನ ದೇವರು ಮುಕ್ತರಾದರು’ ಎಂದು ತಿಳಿಸುತ್ತದೆ.[23] ಪ್ರಾಯಶಃ ಆ ಮುನಿಯು ಈ ಕಲ್ಲಾಸರೆಯಲ್ಲಿಯೇ ದೇಹತ್ಯಾಗ ಮಾಡಿರಬಹುದು.

ಅಕ್ಕಾದೇವಿಯು ಕಿಸುಕಾಡನ್ನು ಆಳುತ್ತಿದ್ದಾಗ ವಿಕ್ರಮಪುರದ (ಅರಸಿ ಬೀದಿಯ) ಗುಣದ ಬೆಡಂಗಿ ಜಿನಾಲಯಕ್ಕೆ ಮೂಲ ಸಂಘ, ವರಸೇನ ಗಣ ಹೊಗರಿಗಚ್ಛದ ನಾಗಸೇನ ಪಂಡಿತರಿಗೆ ಭೂದಾನ ಮಾಡಿದುದು ಸೂಳಿಗುಡಿಯ ಶಾಸನದಿಂದ ತಿಳಿದು ಬರುತ್ತದೆ.[24] ಅದೇ ಗುಡಿಯ ಇನ್ನೊಂದು ಶಾಸನವು[25] ಗುಣದ ಬೆಡಂಗಿ ಜಿನಾಲಯದ ಮುನಿಗಳ ಸತ್ರಕ್ಕೆ ಸುಂಕಗಳನ್ನು ದಾನ ಮಾಡಿದುದನ್ನು ದಾಖಲಿಸಿದೆ. ಮತ್ತೊಂದು ಶಾಸನವು[26] ಕಿಸುಕಾಡು ೭೦ನ್ನು ಆಳುತ್ತಿದ್ದ ಸಾಮಂತ  ವೀರ ಚಾವುಂಡರಸ ಮತ್ತು ರಾಣಿ ದೇಮಲದೇವಿಯರನ್ನು ಉಲ್ಲೇಖಿಸಿ ರಾಣಿಯ ವಿನಂತಿಯ ಮೇರೆಗೆ, ಮೂಲ ಸಂಘ ದೇಸೀಯ ಗಣ, ಪುಸ್ತಕ ಗಚ್ಚ, ಕುಂದಕುಂದಾನ್ವಯದ ನಯಕೀರ್ತಿ ಸಿದ್ಧಾಂತದೇವನ ಶಿಷ್ಯನಾಗಿದ್ದ ನೇಮಿಚಂದ್ರ ಪಂಡಿತದೇವನಿಗೆ ನಾಯಕನೊಬ್ಬನು ದಾನ ಮಾಡಿದುದನ್ನು ತಿಳಿಸಿದೆ. ಆರನೆಯ ವಿಕ್ರಮಾದಿತ್ಯನ ಆಳ್ವಿಕೆಯಲ್ಲಿ ಕೇಶವಶೆಟ್ಟಿಯು ಐಹೊಳೆಯಲ್ಲಿ ತನ್ನ ತಾಯಿಗಾಗಿ ಪಟ್ಟಶಾಲೆಯನ್ನು, ತನಗೆ ಮತ್ತು ತನ್ನ ಮಡದಿಗೆ ಸಾವಿಯಕ್ಕನಿಗಾಗಿ ಬಸದಿಗಳನ್ನು ನಿರ್ಮಿಸಿ ಅಲ್ಲಿ ಲೋಕಪಾಲರನ್ನು ಪ್ರತಿಷ್ಠಾಪಿಸಿ ಭೂಮಿ ಮತ್ತು ಗೃಹಗಳನ್ನು ದಾನ ಮಾಡಿದನೆಂಬುದನ್ನು ಚರಂತಿ ದೇವಾಲಯದ ಗೋಡೆ ಶಾಸನವು ತಿಳಿಸುತ್ತದೆ.[27] ಮೇಗುತಿ ಗುಡಿ ಆವರಣ ಗೋಡೆಯ ಇನ್ನೊಂದು ಶಾಸನದಲ್ಲಿ[28] ಮೂಲ ಸಂಘದ ಜೈನ ಸನ್ಯಾಸಿಗಳ ಮತ್ತು ಸೆಟ್ಟಿಯೊಬ್ಬನ ಉಲ್ಲೇಖವಿದೆ. ಅಲ್ಲಿಯ ಮತ್ತೊಂದು ಶಾಸನವು[29] ಮೂಲಸಂಘ, ದೇಶಿಗಣ, ಪೊಸ್ತಕ ಗಚ್ಚದ ಸಿದ್ಧಾಂತ ಚಕ್ರವರ್ತಿ ಮತ್ತು ಗುಂಡ ಪೇರೂರಿನ ಸಾತಿಸೆಟ್ಟರನ್ನು ಪ್ರಸ್ತಾಪಿಸುತ್ತದೆ. ಈ ಊರಿನ ರಾಮಲಿಂಗ ದೇವಾಲಯವು ಕಲ್ಯಾಣ ಚಾಲುಕ್ಯರ ನಿರ್ಮಿತಿ. ಇದರ ದಕ್ಷಿಣ ಗರ್ಭ ಗುಡಿಯಲ್ಲಿ ಕಪ್ಪು ಶಿಲೆಯಲ್ಲಿ ನಿರ್ಮಿಸಲಾದ ದೇವಿ ಶಿಲ್ಪವಿದೆ. ಇಂದು ಇದು ಪಾರ್ವತಿಯ ಶಿಲ್ಪವೆಂದು ಪೂಜೆಗೊಳ್ಳುತ್ತಲಿದೆ. ಆದರೆ ಅದು ಜೈನ ಯಕ್ಷಿಯಾದ ಪದ್ಮಾವತಿಯ ಶಿಲ್ಪವೆಂದು ಆ. ಸುಂದರ ಅವರು ತೋರಿಸಿಕೊಟ್ಟಿದ್ದಾರೆ.[30] ಹೀಗೆ ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಬಾದಾಮಿ ಮತ್ತು ಅದರ ಪರಿಸರವು ಜೈನ ಧರ್ಮವು ಪ್ರಭಾವಕ್ಕೆ ಒಳಗಾಗಿತ್ತೆಂಬುದು ತಿಳಿದುಬರುತ್ತದೆ. ವಿಜಯನಗರ ಅರಸರ ಅವಧಿಯಲ್ಲಿ ಈ ಭೂಭಾಗದಲ್ಲಿ ಅದರ ಪ್ರಭಾವವು ಕುಗ್ಗಿತೆಂದು ಪುರಾತತ್ವ ಆಧಾರಗಳ ಅಭಾವವನ್ನು ಆಧರಿಸಿ ಹೇಳಬಹುದು.

ಶಾಕ್ತ ಮತ

ಮೊಹೆಂಜೋದಾರೋವಿನಲ್ಲಿ ದೊರೆತ ದೇವಮಾತೆಯ ವಿಗ್ರಹಗಳಿಂದ ಅಂದಿನ ಸಂಸ್ಕೃತಿಯಲ್ಲಿ ದೇವಮಾತೆಯ ಆರಾಧನೆ ಬಳಕೆಯಲ್ಲಿದ್ದುದು ತಿಳಿದುಬರುತ್ತದೆ. ಇಂದಿಗೂ ಪ್ರತಿ ಹಳ್ಳಿಯಲ್ಲಿಯೂ ಗ್ರಾಮದೇವತೆಯ ಪೂಜೆ ನಡೆಯುತ್ತದೆ. ಈ ಗ್ರಾಮದೇವತೆಗಳ ಹೆಸರುಗಳು, ಪೂಜಾವಿಧಾನಗಳು  ಭಿನ್ನವಾಗಿರಬಹುದಾದರೂ ಪ್ರಕೃತಿಯೇ ಸಕಲ ಸೃಷ್ಟಿಗೆ ಕಾರಣಗಳೆಂಬ ಮೂಲ ಕಲ್ಪನೆ ಇದೆ.

ಮಾರ್ಕಂಡೇಯಪುರಾಣದ ಒಂದು ಭಾಗವಾದ ‘ದೇವಿಮಹಾತ್ಮ್ಯ’ದಲ್ಲಿ ಶಾಕ್ತಮತದ ವಿಶೇಷತೆಗಳನ್ನು ತಿಳಿಸಲಾಗಿದೆ. ಶಾಕ್ತಮತವು ಹಿಂದೂಧರ್ಮದ ಒಂದು ಅಂಗ. ಶಾಕ್ತರಿಗೆ ಶಕ್ತಿ ದೇವತೆಯು ಕುಂಡಲಿನಿ ಶಕ್ತಿಯ ಸಂಕೇತವೆನಿಸಿದ್ದಾಳೆ. ಶೈವ, ವೈಷ್ಣವ ಆಗಮಗಳಂತೆ ಶಾಕ್ತಾಗಮವೂ ಜ್ಞಾನ, ಕ್ರಿಯಾ, ಯೋಗ ಮತ್ತು ಚರ್ಯಾ ಎಂಬ ನಾಲ್ಕು ಪಾದಗಳನ್ನೊಳಗೊಂಡಿದ್ದು[31] ಅದರಲ್ಲಿ ವಿಶೇಷವಾಗಿ ತಂತ್ರ, ಮಂತ್ರಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ.[32] ಶಕ್ತಿದೇವತೆಯನ್ನು ಭಕ್ತರು ಅನೇಕ ಹೆಸರುಗಳಿಂದ ಗುರುತಿಸಿದ್ದಾರೆ. ಅವಳನ್ನು ಮಹಿಷಾಸುರಮರ್ದಿನಿಯ ರೂಪದಲ್ಲಿ ಪೂಜಿಸುವುದೇ ಹೆಚ್ಚು. ಚಲುಕ್ಯರ ಅತಿ ಪ್ರಾಚೀನ ಗುಡಿಗಳಲ್ಲಿ ಒಂದಾದ ಐಹೊಳೆಯ ಗೌಡರ ಗುಡಿಯು ದುರ್ಗಾ ಭಗವತಿ ಮಂದಿರ.[33]

ಮಹಾಕೂಟ ಕ್ಷೇತ್ರದಲ್ಲಿಯ ಮೇಲಿರುವ ಮಹಿಷಾಸುರ ಮರ್ದಿನಿ ಬಿಡಿ ಶಿಲ್ಪ,[34] ಬಾಚನಗುಡ್ಡದಲ್ಲಿ ನದಿ ದಂಡೆಯ ಮೇಲಿರುವ, ಇಂದು ಬಹುಪಾಲು ನಶಿಸಿರುವ ದುರ್ಗಾ ಮೂರ್ತಿ, ಭದ್ರನಾಯಕನ ಜಾಲಿಹಾಳದ ಹುಲಿಗೆವ್ವನ ಕೊಳ್ಳದ ದುರ್ಗಾ ವಿಗ್ರಹ, ಐಹೊಳೆಯ ದುರ್ಗಗುಡಿಯ ದುರ್ಗಾಶಿಲ್ಪ, ಹುಚ್ಚಪ್ಪಯ್ಯ ಗುಡಿ ಮತ್ತು ರಾವಣಫಡಿಯ ಮಹಿಷಾಸುರ ಮರ್ದಿನಿಯರ ವಿಗ್ರಹಗಳು, ಪಟ್ಟದಕಲ್ಲಿನ ವಿರೂಪಾಕ್ಷ ಗುಡಿಯ ಒಳ ದೇವಕೋಷ್ಠದಲ್ಲಿರುವ ದುರ್ಗೆಯ ಉತ್ಕೃಷ್ಟ ಶಿಲ್ಪ ಇವೇ ಮೊದಲಾದವುಗಳು, ಬಾದಾಮಿಯ ಪರಿಸರದಲ್ಲಿ ತಾಂತ್ರಿಕ ಶಾಕ್ತಧರ್ಮವು ಪ್ರಭಾವಶಾಲಿಯಾಗಿತ್ತೆಂಬುದಕ್ಕೆ ಸಾಕ್ಷಿಗಳಾಗಿವೆ.

ಮಹಿಷಾಸುರ ಮರ್ದಿನಿ: ಬಾದಾಮಿಯ ಶೈವಗುಹೆಯ ಉಪಗುಹೆಯು ಮಹಿಷಾಸುರಮರ್ದಿನಿಗೆ ಅರ್ಪಿತವಾಗಿದೆ. ತಟ್ಟುಕೋಟೆಯಿಂದ ಮಹಾಕೂಟಕ್ಕೆ ಹೋಗುವ ಮಾರ್ಗದಲ್ಲಿ ಶಿಬಾರದ ಬಳಿ ಇರುವ ಪುಟ್ಟ ದೇವಾಲಯವೂ ದುರ್ಗೆಯದು. ಇದರಿಂದ ಚಾಲುಕ್ಯರ ಕಾಲದಲ್ಲಿ ದೇವಿಯ ಆರಾಧಕರು ಸಾಕಷ್ಟು ಸಂಖ್ಯೆಯಲ್ಲಿ ಇದ್ದರೆಂದು ತಿಳಿಯಬಹುದು. ಭೂತನಾಥ ಗುಡಿ ಸಂಕೀರ್ಣದಲ್ಲಿಯ ರಾಷ್ಟ್ರಕೂಟರ ಕಾಲದ ಪುಟ್ಟ ರಾಚನಿಕ ದೇವಾಯಗಳ ಬಾಗಿಲುವಾಡದಲ್ಲಿ ಮಹಿಷಾಸುರಮರ್ದಿನಿ ಶಿಲ್ಪಗಳಿವೆ. ಇದರಿಂದ ರಾಷ್ಟ್ರಕೂಟರ ಕಾಲದಲ್ಲಿ ದುರ್ಗಾ ಪೂಜೆ ಮುಂದುವರಿಯಿತೆಂದು ಸೂಚಿತವಾಗುತ್ತದೆ.

ಬನಶಂಕರಿ : ಬನಶಂಕರಿಯು ಸುಪ್ರಸಿದ್ಧ ಶಾಕ್ತ ಕ್ಷೇತ್ರ. ಶಾಸನಗಳಲ್ಲಿ ಅವಳು ಬನದ ದೇವಿ ಎಂದು ಕರೆಯಲ್ಪಟ್ಟಿದ್ದಾಳೆ. ಬನಶಂಕರಿ ಕ್ಷೇತ್ರವು ಈಗ ಚೊಳಚಗುಡ್ಡ ಗ್ರಾಮದ ಸೀಮೆಯಲ್ಲಿದೆ. ಈಗ ಪೂಜೆಗೊಳ್ಳುತ್ತಿರುವ ಬನಶಂಕರಿ ದೇವಾಲಯದ ಉತ್ತರ ಬದಿಯಲ್ಲಿ ಅರ್ಧ ಹೂತು ಹೋಗಿರುವ ದೇವಾಲಯವಿದೆ. ಇದೇ ಪ್ರಾಚೀನ ದೇವಿಮಂದಿರವೆಂದು ಹೇಳಲಾಗುತ್ತದೆ. ಅದರ ಶಿಖರ ವಿನ್ಯಾಸ, ಕಂಬ ಮತ್ತು ಗೋಡೆಗಳ ವಾಸ್ತುಶೈಲಿಯು ಅದು ರಾಷ್ಟ್ರಕೂಟರ ಕಾಲದ್ದೆಂದು ಸೂಚಿಸುತ್ತದೆ. ಈಗ ಗುಡಿಯಲ್ಲಿ ಯಾವ ವಿಗ್ರಹವೂ ಇಲ್ಲ. ಬಾದಾಮಿಯ ಪುರಾತತ್ವ ವಸ್ತುಸಂ್ರಹಾಲಯದ ಪ್ರಾಕಾರದಲ್ಲಿರುವ ಉಸುಕುಕಲ್ಲಿನ ಕಾಳಿ ವಿಗ್ರಹವು ಬನಶಂಕರಿಯ ಹೊಂಡ(ಹರಿದ್ರಾ ತೀರ್ಥ)ದಲ್ಲಿ ದೊರೆತಿದೆ. ಶಾಸನಗಳಲ್ಲಿ ಪ್ರಸ್ತಾಪಿಸಲಾದ ಬನ ದೇವಿಯು ಇವಳೇ ಆಗಿರುವ ಸಂಭಾವ್ಯವಿದೆ. ಕಾರಣಾಂತರದಿಂದ ಭಗ್ನಗೊಂಡ ದೇವಿ ವಿಗ್ರಹವನ್ನು ಪೂಜಾರ್ಹವಲ್ಲವೆಂದು ಮುಂದಿರುವ ಪುಷ್ಕರಿಣಿಯಲ್ಲಿ ವಿಸರ್ಜಿಸಿರಬಹುದಾಗಿದೆ. ಇದು ಯಾವಾಗ ಸಂಭವಿಸಿತೆಂಬುದು ತಿಳಿಯದು.

ಕಲ್ಯಾಣ ಚಾಲುಕ್ಯ ದೊರೆ ಒಂದನೆಯ ಜಗದೇಕಮಲ್ಲನ ಆಳ್ವಿಕೆಯಲ್ಲಿ ರಾಷ್ಟ್ರಕೂಟ ಮನೆತನದ ಭೀಮದೇವನೆಂಬ ಮಾಂಡಲಿಕನ ಸೇವಕನಾದ ನಾಗವರ್ಮಯ್ಯನ ಸ್ಮರಣಾರ್ಥವಿರುವ ಶಿಲಾಶಾಸನದಲ್ಲಿ ಬನದೇವಿಯ ದಾಸಿ ದುವ್ರೋಪ್ರಸ್ತಾಪವಿದೆ.[35] ಕಲ್ಯಾಣ ಚಾಲುಕ್ಯರ ಕಾಲದ ಇನ್ನೊಂದು ಶಾಸನವು ಕೇತಿಮಯ್ಯನೆಂಬಾತನು ಬನದ ದೇವಿಯ ಗುಡಿಯ ಎದುರು ಕೀರ್ತಿಸ್ತಂಭವನ್ನು ನಿಲ್ಲಿಸಿದುದನ್ನು ದಾಖಲಿಸಿದೆ.[36] ವಿಜಯನಗರ ಅಚ್ಯುತರಾಯನ ಕಾಲದಲ್ಲಿ ಚಿಕ್ಕ ಚಿನ್ನಪ್ಪನಾಯಕನೆಂಬಾತನು ಬನದ ಮಹಾಮಾಯೆಯ ದೇವಾಲಯವನ್ನು ಜೀರ್ಣೋದ್ಧಾರ ಮಾಡಿದುದನ್ನು ಮತ್ತೊಂದು ಶಾಸನವು ತಿಳಿಸುತ್ತದೆ.[37] ಸದಾಶಿವರಾಯನ ಕಾಲದಲ್ಲಿ ಕೃಷ್ಣಪ್ಪನಾಯಕ ಎಂಬಾತನು ಬನದ ಮಹಾಮಾಯೆಯ ದೇವಾಲಯಕ್ಕೆ ದಾಣಕ ಸಿರವೂರ(ಡಾಣಕಶಿರೂರ)ವನ್ನು ದಾನವಾಗಿ ನೀಡಿದನು.[38]

ಈ ದೇವಾಲಯವು ವಿಜಯನಗರ ಅರಸರ ಕಾಲದಲ್ಲಿ ಜೀರ್ಣೋದ್ಧಾರವಾದ ಸಂಗತಿಯು ಗಮನಾರ್ಹ. ಮೇಲೆ ಪ್ರಸ್ತಾಪಿಸಲಾದ ಅರ್ಧ ಹೂತಿರುವ ರಾಷ್ಟ್ರಕೂಟ ವಾಸ್ತುಶೈಲಿಯ ಗುಡಿಯ ಶಿಖರದಲ್ಲಿ ಗಚ್ಚುಗಾರೆಯ ಅವಶೇಷಗಳು ಕಂಡುಬರುತ್ತವೆ. ಇದರಿಂದ ಕೃಷ್ಣಪ್ಪ ನಾಯಕನು ಜೀರ್ಣೋದ್ಧಾರ ಮಾಡಿದ ಗುಡಿ ಇದೇ ಆಗಿರಬಹುದೆಂದು ತೋರುತ್ತದೆ. ಹಾಗಿದ್ದಲ್ಲಿ ಹೂತಿರುವ ಗುಡಿಯೇ ಬನದ ಮಹಾಮಾಯೆಯ ಗುಡಿಯಾಗಿರಬೇಕು. ಬಾದಾಮಿಯ ಪುರಾತತ್ವ ವಸ್ತುಸಂಗ್ರಹಾಲಯದ ಕಾಳಿ ವಿಗ್ರಹವು ಮೂಲತಃ ಈ ದೇವಾಲಯದಲ್ಲಿ ಸ್ಥಾಪಿತವಾಗಿತ್ತೆಂದು ತಿಳಿಯಲು ಅವಕಾಶವಿದೆ. ಶಾಸನದಲ್ಲಿ ಕಾಣಿಸಿಕೊಂಡ ಬನದ ದೇವಿಯ ದಾಸಿ ದುವ್ರೋ[39] ಈ ದೇವಿಯ ಅರ್ಚಕನಾಗಿರಬಹುದು. ಚೊಳಚಗುಡ್ಡದ ಕಲ್ಮೇಶ್ವರ ಗುಡಿಯ ಎದುರಿನ ಸುಮಾರು ೧೪ನೆಯ ಶತಮಾನದ ಶಾಸನವು[40] ಬನದೇವಿಯ ಓಜರು ದಾನ ನೀಡಿದದನ್ನು ತಿಳಿಸುತ್ತದೆ. ಬನದೇವಿಯ ಓಜರೆಂದರೆ ಅವಳನ್ನು ಅರ್ಚಿಸುವ ಓಜರೆಂದು ಅರ್ಥ. ಓಜರು ದೇವಿಯ ಉಪಾಸಕರೆಂಬುದು ಸ್ಪಷ್ಟವಿದೆ. ಪ್ರಸ್ತುತ ಕಾಳಿ ವಿಗ್ರಹವು ಕೋರೆಹಲ್ಲು, ರುಂಡಮಾಲೆಗಳಿಂದ ಒಡಗೂಡಿ ರುದ್ರರೂಪದಲ್ಲಿದ್ದಾಳೆ. ದೇವಿಯು ಉಗ್ರರೂಪವನ್ನು ಬಿಟ್ಟು ಸೌಮ್ಯರೂಪವನ್ನು ಧರಿಸಿದುದನ್ನು ಸ್ಥಳ ಪುರಾಣವು ಬಣ್ಣಿಸಿದೆ.[41] ದೇವಿಯ ಅನುಗ್ರಹಕ್ಕೆ ಪಾತ್ರನಾದ ತ್ರಿದಂಡಿ ಮುನಿಯು ಸ್ತುತಿಸಿದ ಬಳಿಕ ದೇವಿಯು ಸೌಮ್ಯರೂಪ ತಾಳಿದಳೆಂದು ಹೇಳಲಾಗಿದೆ. ಪ್ರಾಯಶಃ ಉಗ್ರರೂಪದ ಕಾಳಿ ವಿಗ್ರಹವನ್ನು ಪುಷ್ಕರಿಣಿಯಲ್ಲಿ ವಿಸರ್ಜನೆ ಮಾಡಿದ ಬಳಿಕ ಈಗಿನ ಸೌಮ್ಯರೂಪದ ದೇವಿ ವಿಗ್ರಹವು ಪ್ರತಿಷ್ಠಾಪನೆಗೊಂಡಿರುವ ಸೂಚನೆ ಇದಾಗಿರಬಹುದು. ಈಗ ಪೂಜೆಗೊಳ್ಳುತ್ತಿರುವ ಬನಶಂಕರಿ ಮೂರ್ತಿಯು ಶಾಲಿವಾಹನ ಶಕೆ ೬೦೩ರದ್ದು ಎಂದು ಅರ್ಚಕರು ಹೇಳುತ್ತಾರೆ. ಮೂರ್ತಿಯ ಪ್ರತಿಮಾ ಲಕ್ಷಣಗಳು ಈ ಪ್ರಾಚೀನತೆಯನ್ನು ಸಮ್ಮತಿಸುತ್ತಿಲ್ಲ. ದೇವಿ ವಿಗ್ರಹ ಪೀಠದ ಮೇಲೆ ಇದೆ ಎಂದು ಹೇಳಲಾಗುವ ಶಾಸನವನ್ನು ಶಾಸನತಜ್ಞರಿಗೆ ಓದಲು ಅರ್ಚಕರು ಅನುವು ಮಾಡಿಕೊಟ್ಟರೆ ಹೆಚ್ಚಿನ ವಿವರಗಳು ದೊರೆಯಬಹುದು.

ಈಗಿನ ಬನಶಂಕರಿ ದೇವಾಲಯವನ್ನು ಸಾತಾರೆಯ ಪರಶುರಾಮ ನಾಯಕ ಅಗಳೆ ಎಂಬಾತನು ಸುಮಾರು ಕ್ರಿ.ಶ. ೧೭೫೦ರ ವೇಳೆಗೆ ಸ್ಥಾಪಿಸಿದನೆಂದು ಹೇಳಲಾಗಿದೆ.[42] ದೇವಿ ಮೂರ್ತಿಯ ಪ್ರತಿಮಾ ಲಕ್ಷಣಗಳು ಕೂಡ ಮರಾಠಾ ಅವಧಿಯದ್ದಾಗಿವೆಯಾದ್ದರಿಂದ ಗೆಝಟಿಯರ್‌ದಲ್ಲಿ ಸೂಚಿಸಲಾದ ಕಾಲವು ಸತ್ಯಕ್ಕೆ ಸಮೀಪವಾಗಿರಬಹುದು.[1]     MAR, ೧೯೨೩, pp. ೧೦-೧೧.

[2]     ಚಿದಾನಂದ ಮೂರ್ತಿ ಎಂ., ೧೯೭೯, ಪೂರ‌್ವೋಕ್ತ. ಪು. ೭೧.

[3]     ಕರ್ನಾಟಕ ಚರಿತ್ರೆ, ಸಂಪುಟ ೧, ೧೯೯೭, ಹಂಪಿ, ಪು. ೪೭೬

[4]     IA, VII, p. ೨೩೭.

[5]     ಇದು ಅಮೋಘವರ್ಷನ ಕಾಲದ್ದೆಂಬ ಅಭಿಮತ ಎಸ್.ರಾಜಶೇಖರ ಅವರದು. ನೋಡಿ:ದಕ್ಷಿಣ ಭಾರತದ ವಾಸ್ತುಶಿಲ್ಪಕ್ಕೆ ಬಾದಾಮಿ ಚಾಲುಕ್ಯರ ಕೊಡುಗೆ (೧೯೯೬). ಮೈಸೂರು, ಪು. ೧೪.

[6]     JKU Social Science V, pp. ೧೭೫-೧೮೧

[7]     M.S. Nagaraja Rao (Ed.), ೧೯೭೮, Progress of Archaeology in Karnataka (೧೯೫೬-೧೯೭೨), Mysore, p. ೩೮.

[8]     ಕರ್ನಾಟಕ ಚರಿತ್ರೆ ಸಂಪುಟ ೧, ೧೯೯೭, ಹಂಪಿ, ಪುಟ ೪೭೪.

[9]     SII, XX, ೪.

[10]    EI, XXXII, p. ೩೧೭.

[11]    SII, XX, ೫. ಈ ಶಾಸನದಲ್ಲಿಯ ‘ಬಿಕ್ಕಿ’ಎಂಬುದು ಇಮ್ಮಡಿ ವಿಕ್ರಮಾದಿತ್ಯನ ಹೆಸರಿನ ಸಂಕ್ಷಿಪ್ತ ರೂಪವೆಂಬುದು ಕೆ.ವಿ.ರಮೇಶ್ ಅವರ ಅಭಿಪ್ರಾಯ. ನೋಡಿ: Chalukyas of Vatapi, p. ೧೪೬.

[12] SII, XX, ೬.

[13]    ಆಲಂಪುರದ ಬಾಲಬ್ರಹ್ಮೇಶ್ವರ ದೇವಾಲಯದ ಕಂಬಶಾಸನ ಉಲ್ಲೇಖ.

[14]    SII, XX, ೭; IA, VII pp. ೧೦೬-೧೦೭

[15]    ಕರ್ನಾಟಕ ಚರಿತ್ರೆ, ಸಂಪುಟ ೧, ೧೯೯೭, ಪೂರ್ವೋಕ್ತ, ಪು. ೨೩೪

[16]    SII, XUI, p. ೨೫-೩೮.

[17]    EI, VI, p. ೨೫-೩೮.

[18]    SII, XI (i), ೩೮.

[19]    Sundara A., ೧೯೭೭, ‘Some Jaina Temples in North Karnataka, their Distinctive Features’, Jainism and Karnataka Culutre, T.G. Kalaghatgi (Ed.), Dharwad, p. ೧೯೦

[20]    ಪಾಡಿಗಾರ ಶ್ರೀನಿವಾಸ, ೧೯೮೮, ‘ಬಾದಾಮಿಯ ಅತ್ತಿಮಬ್ಬೆ ಜಕ್ಕಾವೆಯ ಶಾಸನ’ಕರ್ನಾಟಕ ಭಾರತಿ, ಸಂಪುಟ ­‑೨೦. ಸಂಚಿಕೆ ೩, ಪು. ೮೯.

[21]    ಣಮೋ ಅರಿಹಂತಾಣಂ, ಣಮೋ ಸಿದ್ಧಾಣಂಣಮೋ ಅಯರಿಯಾಣಂ.
ಣಮೋ ಉವಚ್ಝಾಯಾಣಂ, ಣಮೋ ಲೋಯೇ ಸವ್ವಸಾಹೂಣಂ

[22]    ಅತ್ತಿಮಬ್ಬೆಯು ಕ್ರಿ.ಶ. ೯೫೦‑೧೦೧೮ರ ಅವಧಿಯಲ್ಲಿ ಜೀವಿಸಿದ್ದಳೆಂದು ಹಂಪನಾ ಊಹಿಸಿದ್ದಾರೆ.

[23]    IA, X, ೯೨.

[24]    SII, XI (i), ೮೦ and EI XVII, p. ೨೧.

[25]    SII, XI (i), ೧೭೯.

[26]    SII, XV, ೪೭.

[27]    SII, XI (ii) ೧೬೯.

[28]    ಕಲಬುರ್ಗಿ ಎಂ.ಎಂ. (ಸಂ.)೧೯೭೬, ವಿಜಾಪುರ ಜಿಲ್ಲೆಯ ಶಾಸನಸೂಚಿ, ಶಾಸನ ಸಂಖ್ಯೆ ೯೬ ಧಾರವಾಡ, ಪು. ೪೬.

[29]    ಅದೇ, ಶಾಸನ ಸಂಖ್ಯೆ ೯೭

[30]    ಸುಂದರ ಅ, ೧೯೭೭, ‘ಕೆಲವು ಈಚಿನ ಗಮನಾರ್ಹ ಪುರಾತತ್ವ ಶೋಧಗಳು’. ಕರ್ನಾಟಕ ಭಾರತಿ ಸಂಪುಟ ೯, ಸಂಚಿಕೆ ೪, ಪು. ೯೩.

[31]    ಚಿದಾನಂದಮೂರ್ತಿ ಎಂ., ೧೯೭೯, ಪೂರ‌್ವೋಕ್ತ, ಪು. ೧೨೮.

[32]    ನಂದಿಮಠ ಎಸ್.ಸಿ. ೧೯೮೩, ಕರ್ನಾಟಕದ ಧರ್ಮಗಳು, ಬೆಂಗಳೂರು, ಪು. ೧೫೧.

[33]    SII, XV, ೪೬೩.

[34]    ಈ ಶಿಲ್ಪವು ಮೂಲತಃ ಈಗ ಕಾಲಕಾಲೇಶ್ವರ ಗುಡಿ ಎಂದು ಕರೆಯಲಾಗುವ ದೇವಾಲಯದ ಗರ್ಭಗೃಹದಲ್ಲಿ ಇದ್ದಿರಬೇಕೆಂದು ಕೆರೋಲತರ್ಕಿಸಿದ್ದಾರೆ. ನೋಡಿ: Op.Cit.p. ೨೧೩

[35]    BKI, I, Part I, no. ೫೭.

[36]    SII, XI (i), ೬೦.

[37]    IA, V. p. ೧೯.

[38]    IA, X, p. ೬೬

[39]    BKI, V. I, part i no. ೫೭.

[40]    SII, XV, ೬೫೫.

[41]    ಪೂಜಾರ ಮಲ್ಹಾರಭಟ್ಟ ಬನಂಭಟ್ಟ, ೧೯೭೨, ಶ್ರೀ ಶಾಕಾಂಭರೀ ಚೊಳಚಗುಡ್ಡ, ಪು. ೩೩

[42]    ವೆಂಕಟ ರಂಗೋಕಟ್ಟಿ (ಅನು.)೧೮೯೩:ಗ್ಯಾಝಟೀಯರು, ಮುಂಬಯಿ, ಪು. ೫೫೬.