ಸಪ್ತಮಾತೃಕೆಯರು : ಏಳು ಸ್ತ್ರೀದೇವತೆಯರ ಶಿಲ್ಪಗಳನ್ನು ಒಂದೇ ಶಿಲ್ಪಪಟ್ಟಿಕೆಯಲ್ಲಿ ಇಲ್ಲವೆ ಬಿಡಿ ಶಿಲ್ಪಗಳಾಗಿ ಕಂಡರಿಸಲಾಗಿರುತ್ತದೆ. ಈ ದೇವತೆಗಳೆಂದರೆ ಕ್ರಮವಾಗಿ ಬ್ರಾಹ್ಮಿ, ಮಾಹೇಶ್ವರಿ, ಕೌಮಾರಿ, ವೈಷ್ಣವಿ, ವಾರಾಹಿ, ಇಂದ್ರಾಣಿ ಮತ್ತು ಚಾಮುಂಡಾ.

[1]

ಐತಿಹಾಸಿಕವಾಗಿ ಈ ಸ್ತ್ರೀದೇವತೆಗಳ ಪ್ರಾಚೀನತೆಯನ್ನು ಗುಪ್ತರ ಕಾಲದಲ್ಲಿ ಸ್ಪಷ್ಟವಾಗಿ ಗುರುತಿಸಬಹುದು.[2] ಕದಂಬರು ‘ಸ್ವಾಮಿ ಮಹಾಸೇನ ಮಾತೃಗಣಾನುಧ್ಯಾತಾಭಿಷಿಕ್ತಾನಾಂ’ ಎಂದು ಮಾತೃಕೆಯರನ್ನು ಸ್ಮರಿಸಿದ್ದಾರೆ.[3] ಸಾಂಸ್ಕೃತಿಕವಾಗಿ ಕದಂಬರನ್ನೇ ಅನುಸರಿಸಿದ ಚಲುಕ್ಯರು ಅನೇಕ ಶಾಸನಗಳಲ್ಲಿ ತಾವು ಸಪ್ತಮಾತೃಕೆಯರಿಂದ ಪೋಷಿಸಲ್ಪಟ್ಟವರು ಎಂದು ಹೇಳಿಕೊಂಡಿದ್ದಾರೆ.[4]

ಚಲುಕ್ಯರ ಕಾಲದ ಅತ್ಯಂತ ಮನಮೋಹಕ ಸಪ್ತಮಾತೃಕೆಯರು ಐಹೊಳೆಯ ರಾವಣಫಡಿಯಲ್ಲಿ ಕಾಣಸಿಗುತ್ತಾರೆ. ಅದರೊಳಗಿನ ನಟರಾಜನ ಉಪಗುಹೆಯಲ್ಲಿ ಶಿವನ ಎಡಬಲಗಳಲ್ಲಿ ಅವರು ಚಿತ್ರಿತರಾಗಿದ್ದಾರೆ. ನಟರಾಜನ ಬಲಗಡೆಯ ಗೋಡೆಯಲ್ಲಿ ಕ್ರಮವಾಗಿ ವಾರಾಹಿ, ಇಂದ್ರಾಣಿ, ಚಾಮುಂಡಾ ನಿಂತಿದ್ದಾರೆ. ಸಪ್ತಮಾತೃಕೆಯರ ಹತ್ತಿರ ವಿನಾಯಕ ಮತ್ತು ವೀರೇಶ್ವರರು ಇರಬೇಕೆಂಬ ನಿರ್ದೇಶನವಿದೆ.[5] ಆದರೆ ಪ್ರಸ್ತುತ ಶಿಲ್ಪದಲ್ಲಿ ಗಣೇಶ, ಕುಮಾರರಿದ್ದಾರೆ. ಕಾಲಕ್ರಮೇಣ ಸಪ್ತಮಾತೃಕೆಯ ಶಿಲ್ಪದಲ್ಲಿ ವೀಣಾಧರ ವೀರಭದ್ರನು ಸೇರಿಕೊಂಡನೆಂದು ಗ್ರಹಿಸಲಾಗಿದೆ.[6] ಐಹೊಳೆಯ ಪುರಾತತ್ವ ವಸ್ತುಸಂಗ್ರಹಾಲಯದಲ್ಲಿ ಚಲುಕ್ಯರ ಕಾಲದ ಅನೇಕ ಸಪ್ತಮಾತೃಕಾ ಶಿಲ್ಪಪಟ್ಟಿಕೆಗಳನ್ನು ಕಾಣಬಹುದು. ಭದ್ರನಾಯಕನ ಜಾಲಿಹಾಳದ ಹುಲಿಗೆಮ್ಮನ ಕೊಳ್ಳದ ಗುಹೆಯಲ್ಲಿ ಚಲುಕ್ಯರ ಕಾಲದ ಸಪ್ತಮಾತೃಕಾ ಶಿಲ್ಪಗಳು ಬಿಡಿಬಿಡಿಯಾಗಿ ಚಿತ್ರಿತರಾಗಿದ್ದಾರೆ. ಸಿದ್ಧನಕೊಳ್ಳದಲ್ಲಿಯ ಸಪ್ತಮಾತೃಕೆಯರೊಂದಿಗೆ ಶಿವನಾಗಲೀ, ಗಣೇಶನಾಗಲಿ ಕಾಣಸಿಗುವುದಿಲ್ಲ. ಐಹೊಳೆಯಲ್ಲಿ ಈ ಶಿಲ್ಪಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುವ ಸಂಗತಿಯು ವಿಚಾರಣೀಯವಾಗಿದೆ. ಅಯ್ಯಾವೊಳೆ ಐನೂರ್ವರು ದುರ್ಗ ಭಗವತಿಯ ಭಕ್ತರಾಗಿದ್ದುದು ಶಾಸನದಿಂದ ಸ್ಪಷ್ಟವಿದೆ.[7] ಇದರಿಂದ ಜನಪದರಲ್ಲಿ ಹೆಚ್ಚು ಜನರು ದೇವಿ ಉಪಾಸಕರಾಗಿರಬೇಕೆಂದು ತರ್ಕಿಸಬಹುದು.

ಬಾದಾಮಿಯಲ್ಲಿ ದೊರೆತ ಸಪ್ತಮಾತೃಕೆಯರ ಶಿಲ್ಪಗಳು ವಿರಳ. ಎಂಟನೆಯ ಶತಮಾನದ್ದೆಂದು ತಿಳಿಯಲಾದ ಮಾತೃಕೆಯರ ಶಿಲ್ಪವೊಂದು ಬಾದಾಮಿಯು ಪುರಾತತ್ವ ವಸ್ತುಸಂಗ್ರಹಾಲಯದಲ್ಲಿದೆ.[8] ಇದರಲ್ಲಿ ಇಬ್ಬರು ಮಾತೆಯರು ಮಾತ್ರ ಕೆತ್ತನೆಗೊಂಡಿದ್ದಾರೆ. ಹಾಗೆಂದ ಮಾತ್ರಕ್ಕೆ ಇದು ತುಂಡಾದ ಭಾಗವಲ್ಲ. ಇಬ್ಬರು ದೇವತೆಗಳನ್ನು ಒಳಗೊಂಡ ಪೂರ್ಣ ಶಿಲ್ಪವದು. ಅವರ ವಾಹನಗಳು ಚಿತ್ರಿತವಾಗಿಲ್ಲ. ಪರಿಸರವನ್ನು ಹಿಡಿದ ದೇವಿ ಬ್ರಾಹ್ಮಿ ಎಂದೂ, ಚಕ್ರಧಾರಿಯಾಗಿರುವವಳು ವೈಷ್ಣವಿ ಎಂದೂ ಗುರುತಿಸಬಹುದು. ಈ ಶಿಲ್ಪದಿಂದ ಏಳೂ ಮಾತೆಯರು ಒಂದೇ ಶಿಲ್ಪಪಟ್ಟಿಕೆಯಲ್ಲಿ ಇರಬೇಕೆಂಬ ನಿಯಮ ಕಡ್ಡಾಯವಾಗಿರಲಿಲ್ಲವೆಂದು ತಿಳಿಯಬಹುದು.

ಮಹಾಕೂಟದ ಅಡಕೇಶ್ವರ ಗುಡಿಯಲ್ಲಿ ಇರುವ ಸಪ್ತಮಾತೃಕಾ ಶಿಲ್ಪವು ರಾಷ್ಟ್ರಕೂಟ ಕಾಲದ್ದಿರಬಹುದು. ಏಕಶಿಲೆಯಲ್ಲಿ ಏಳೂ ತಾಯಂದಿರು ಕುಳಿತಿರುವಂತೆ ಕೆತ್ತನೆ ಮಾಡಲಾಗಿದೆ. ಬಾದಾಮಿ ಪರಿಸರದಲ್ಲಿರುವ ಕಟಗೇರಿಯ ಈಶ್ವರಗುಡಿ. ನೀಲಗುಂದದ ರಾಮಲಿಂಗೇಶ್ವರ ಗುಡಿಗಳಲ್ಲಿ ಸಪ್ತಮಾತೃಕೆಯರ ಶಿಲ್ಪಗಳಿವೆ. ಕೆಂದೂರಿನ ಕಾಡಿನಲ್ಲಿ ಎರಡು ತುಂಡಾಗಿ ಬಿದ್ದಿದ್ದ ಸಪ್ತಮಾತೃಕೆಯರ ಶಿಲ್ಪಪಟ್ಟಿಕೆ ಇತ್ತೀಚೆಗೆ ಈ ಪ್ರಬಂಧಕಾರನ ಕಣ್ಣಿಗೆ ಬಿದ್ದಿತು.[9] ಈ ಶಿಲ್ಪದಲ್ಲಿ ಬ್ರಾಹ್ಮಿಯ ಬಲಕ್ಕೆ ವೀರೇಶ್ವರ ಹಾಗೂ ಚಾಮುಂಡಿಯ ಎಡಕ್ಕೆ ಗಣೇಶ ಇರುತ್ತದೆ. ಏಕೆಂದರೆ ಬ್ರಾಹ್ಮಿಯ ಬಲಭಾಗದಲ್ಲಿ ವಿನಾಯಕನ ಮೂರ್ತಿಯನ್ನು ಮತ್ತು ಚಾಮುಂಡಿಯ ಎಡಭಾಗದಲ್ಲಿ ವೀರೇಶ್ವರನನ್ನು ಇರಿಸಬೇಕೆಂಬ ನಿರ್ದೇಶನವಿದೆ.[10] ವಿಜಯನಗರ ಅರಸರ ಕಾಲದ ಸಪ್ತಮಾತೃಕೆಯ ಶಿಲ್ಪಗಳು ಬಾದಾಮಿಯಲ್ಲಿ ಕಂಡುಬರುವುದಿಲ್ಲ.

ಲಜ್ಜಾಗೌರಿ : ಲಜ್ಜಾಗೌರಿ ವೈಶಿಷ್ಟ್ಯಪೂರ್ಣ ಜನಪದರ ದೇವತೆ. ಇವಳು ಸಂತಾನ ನೀಡುವ ದೇವತೆ ಎನಿಸಿದ್ದಾಳೆ. ಇಂದಿಗೂ ಬಾದಾಮಿಯ ಪರಿಸರದಲ್ಲಿ ಪುತ್ರಾಕಾಂಕ್ಷಿ ಮಹಿಳೆಯರು ಈ ದೇವಿಯನ್ನು ಪೂಜಿಸುವ ಸಂಪ್ರದಾಯವಿದೆ. ಬೆತ್ತಲೆಯಿರುವ ರೂಪದ ಈ ದೇವಿಯನ್ನು ಪೂಜಿಸುವ ಹಿನ್ನೆಲೆ ಮಾತ್ರ ಇನ್ನೂ ಅಸ್ಪಷ್ಟವಾಗಿದೆ. ಚಲುಕ್ಯರ ಮಹತ್ವದ ಸ್ಥಳಗಳಲ್ಲಿ ಲಜ್ಜಾಗೌರಿಯ ಶಿಲ್ಪಗಳು ದೊರೆತಿವೆ. ಕ್ರಿ.ಶ.೩ನೆಯ ಶತಮಾನದಷ್ಟು ಹಿಂದೆಯೇ ಲಜ್ಜಾಗೌರಿ ಆರಾಧನೆಯು ಪ್ರಚಲಿತದಲ್ಲಿದ್ದುದು ನಾಗಾರ್ಜುನಕೊಂಡ, ಕೋಸಂಬಿ, ಟೇರ ಮೊದಲಾದ ಸ್ಥಳಗಳಲ್ಲಿ ೧-೨ನೆಯ ಶತಮಾನದ ಸುಡಾವೆ ಮಣ್ಣಿನ ಲಜ್ಜಾಗೌರಿ ಗೊಂಬೆಗಳು ದೊರೆತಿವೆ. ಬಾದಾಮಿ ಪರಿಸರದಲ್ಲಿ ಕಲ್ಲಿನ ದೊಡ್ಡ ಗಾತ್ರದ ಲಜ್ಜಾಗೌರಿ ವಿಗ್ರಹಗಳು ಕಂಡುಬಂದಿವೆ.

ಬೆತ್ತಲೆ ಸ್ತ್ರೀ ಶಿಲ್ಪವೊಂದನ್ನು ಜಾನ್ ಫ್ಲೀಟರು ಮೊದಲ ಬಾರಿ ಮಹಾಕೂಟದಲ್ಲಿ ಇದನ್ನು ಕಂಡಾಗ ಶಿರೋಭಾಗವಿಲ್ಲದ ಅಶ್ಲೀಲ ಶಿಲ್ಪವೆಂದು ಕರೆದರು.[11] ನಗ್ನ ಸ್ತ್ರೀ ಅಂಗಾತವಾಗಿ ಮಲಗಿ ತನ್ನ ಎರಡೂ ಕಾಲುಗಳನ್ನು ಮಡಚಿ ಯೋನಿಯು ಕಾಣಿಸುವಂತೆ ಮೇಲಕ್ಕೆಳೆದುಕೊಂಡು ತೊಡೆಗಳನ್ನು ಅಗಲಿಸಿದ ರೀತಿಯಲ್ಲಿ ಈ ಶಿಲ್ಪದ ರಚನೆ ಇರುತ್ತದೆ. ಸ್ತ್ರೀಯ ತಲೆಯ ಬದಲು ಅರಳಿದ ಕಮಲದ ಚಿತ್ರವಿರುತ್ತದೆ. ಹೀಗೆ ಕಮಲವನ್ನು ದೇಹಕ್ಕೆ ಜೋಡಿಸಿದುದರ ಔಚಿತ್ಯವನ್ನು ಅ.ಸುಂದರ,[12] ಎಂ.ಚಿದಾನಂದಮೂರ್ತಿ,[13] ಎಂ.ಎಂ.ಕಲಬುರ್ಗಿ[14] ಮೊದಲಾದವರು ಚರ್ಚಿಸಿರುವರಾದರೂ ಇದಂ ಇತ್ಥಂ ಎಂದು ತೀರ್ಮಾನಿಸಲಾಗಿಲ್ಲ. ಕಮಲವು ಪ್ರಸೂತಿ ಲಾಂಛನವಾಗಿರುವ ಸಂಗತಿ[15] ಇಲ್ಲಿ ಅರ್ಥಪೂರ್ಣ. ಸಾಮಾನ್ಯವಾಗಿ ಲಜ್ಜಾಗೌರಿಯ ಎರಡೂ ಕೈಗಳಲ್ಲಿ ಕಮಲಗಳಿರುತ್ತವೆ. ದೇವಿಯು ಪ್ರಕಟಸ್ತನಿಯಾಗಿದ್ದು ಆಭರಣಗಳಿಂದ ಅಲಂಕೃತಳಾಗಿರುತ್ತಾಳೆ. ಅವಳು ಹೀಗೆ ಮಲಗಿ ಕಾಲೆತ್ತಿರುವ ಭಂಗಿಯನ್ನು ಶಯನ ಶಿಲ್ಪವೆಂದು ಗುರುತಿಸಿದರು.[16] ಅವರು ಮೊದಲ ಬಾರಿ ಮಹಾಕೂಟದ ಲಜ್ಜಾಗೌರಿಯನ್ನು ಕಂಡಾಗ ಅದು ಅಂಗಾತವಾಗಿ ಮಲಗಿದ ಸ್ಥಿತಿಯಲ್ಲಿಯೇ ಇದ್ದಿತೆಂದು ಹೇಳಿದ್ದಾರೆ.[17] ಕೆಲವು ವಿದ್ವಾಂಸರು ಲಜ್ಜಾಗೌರಿಯದು ಕುಳಿತ ಭಂಗಿ ಎಂದು ಗುರುತಿಸಿದ್ದಾರೆ.[18] ಸಿದ್ಧನಕೊಳ್ಳದ ನೈಸರ್ಗಿಕ ಗುಹೆಯ ನೆಲದ ಬಂಡೆಯ ಮೇಲೆ ಕೆತ್ತನೆಗೊಂಡ ಶಿಲ್ಪವು ಲಜ್ಜಾಗೌರಿ ಶಿಲ್ಪದ ಭಂಗಿಯನ್ನು ಗುರುತಿಸಲು ನೆರವಾಗುತ್ತದೆ. ಆಲಂಪುರದ ಬಾಲಬ್ರಹ್ಮ ಗುಡಿಯ ಲಜ್ಜಾಗೌರಿಯು ಅಂಗಾತ ಮಲಗಿದಂತೆ ಇದ್ದುದನ್ನು ಮತ್ತು ಅದರು ಅಭಿಷೇಕ ಜಲಕ್ಕಾಗಿ ಪ್ರಣಾಲವಿರುವ ಪೀಠವಿರುವುದನ್ನು ಸ್ಟೆಲಾ ಕ್ರಾಮರಿಶ್ ಎಂಬುವರು ತೋರಿಸಿಕೊಟ್ಟಿದ್ದಾರೆ.[19] ಇದರಿಂದ ಲಜ್ಜಾಗೌರಿಯು ಮಲಗಿದ ಸ್ತ್ರೀಯ ಶಿಲ್ಪವಾಗಿರುತ್ತದೆಂದು ಸ್ಪಷ್ಟವಾಗುತ್ತದೆ.

ಭದ್ರನಾಯಕನ ಜಾಲಿಹಾಳದ ಹುಲಿಗೆಮ್ಮನ ಕೊಳ್ಳದ ಎರಡು ಶಿಲ್ಪಗಳು, ಸಿದ್ಧನಕೊಳ್ಳದ ಶಿಲ್ಪ, ಹಾಗೂ ಬಾದಾಮಿ ಮತ್ತು ಐಹೊಳೆ ಪುರಾತತ್ವ ವಸ್ತುಸಂಗ್ರಹಾಲಯಗಳ ವಿಗ್ರಹಗಳು ಬಾದಾಮಿಯ ಪರಿಸರದಲ್ಲಿ ಕಂಡುಬರುವ ಉಳಿದ ಲಜ್ಜಾಗೌರಿ ಪ್ರತಿಮೆಗಳು. ಇವುಗಳಲ್ಲದೆ ಬೀಳಗಿ (ಜಿ.ಬಾಗಲಕೋಟ) ಮಜತಿ (ತಾ.ಹುಕ್ಕೇರಿ, ಜಿ.ಬೆಳಗಾವಿ) ಮತ್ತು ಆಂಧ್ರಪ್ರದೇಶದ ಆಲಂಪುರದಲ್ಲಿ[20] ಈ ವಿಶಿಷ್ಟ ಶಿಲ್ಪಗಳು ಕಂಡುಬಂದಿದೆ. ಇದರಿಂದ ಲಜ್ಜಾಗೌರಿಯನ್ನು ಆರಾಧಿಸುವ ಸಂಪ್ರದಾಯವು ಸಾಕಷ್ಟು ವ್ಯಾಪಕವಾಗಿ ಹರಡಿತ್ತೆಂಬುದು ತಿಳಿದುಬಂದಿದೆ.

ಈ ಶಿಲ್ಪದ ಇನ್ನೊಂದು ವೈಶಿಷ್ಟ್ಯವೆಂದರೆ ಸಾಮಾನ್ಯವಾಗಿ ಇದು ಕೊಳ್ಳದ ಪ್ರದೇಶದಲ್ಲಿ ಕಂಡುಬಂದಿರುವುದು. ಹುಲಿಗೆಮ್ಮನ ಕೊಳ್ಳ, ಸಿದ್ಧನಕೊಳ್ಳ, ನಾಗನಾಥನ ಕೊಳ್ಳ, ಮಹಾಕೂಟದ ಕೊಳ್ಳಗಳನ್ನು ಗಮನಿಸಬಹುದು. ಏಕಾಂತ ಪ್ರದೇಶವಾಗಿರುವ ಈ ಕೊಳ್ಳದ ನೆಲೆಯೇ ಪ್ರಕೃತಿ ದೇವಿಯ ಬೃಹದಾಕಾರದ ಯೋನಿಯಂತೆ ಕಂಡುಬಂದರೆ ಆಶ್ಚರ್ಯವೇನಿಲ್ಲ. ರಹಸ್ಯ ತಾಣವದು. ಲಜ್ಜಾಗೌರಿಗೆ ಸಾರ್ವಜನಿಕ ಪೂಜೆಗಳು ಸಲ್ಲುವುದಿಲ್ಲ. ಪೂಜಾ ವಿಧಾನವು ರಹಸ್ಯವಾದುದು. ಈ ಸಂತಾನ ನೀಡುವ ದೇವಿ ಶಿಲ್ಪದ ಯೋನಿಗೆ ಬೆಣ್ಣೆ ಸವರಿ ಅದನ್ನು ನೆಕ್ಕಿ ಪ್ರಸಾದವೆಂದು ುತ್ರಾಕಾಂಕ್ಷಿ ಸ್ತ್ರೀ ಸ್ವೀಕರಿಸುತ್ತಾಳೆ. ಸಿದ್ಧನಕೊಳ್ಳದ ಪರಿಸರದಲ್ಲಿ ಈಗಲೂ ಈ ಬಗೆಯ ಆಚರಣೆ ರೂಢಿಯಲ್ಲಿದೆ.

ಲಜ್ಜಾಗೌರಿ ಶಿಲ್ಪದ ಹಿನ್ನೆಲೆಯಾಗಿ ಜನಪದರಲ್ಲಿ ಎರಡು ಕತೆಗಳು ಪ್ರಚಲಿತದಲ್ಲಿವೆ. ಒಂದು: ಶಿವ ಪಾರ್ವತಿಯರು ನಗ್ನ ಜಲ ಕ್ರೀಡೆಯಲ್ಲಿ ನಿರತರಾಗಿರುವಾಗ ಗಣನೊಬ್ಬನು ದರ್ಶನಕ್ಕೆ ಬರುತ್ತಾನೆ. ಶಿವನು ಓಡಿ ಹೋಗಿ ದೇವಾಲಯದ ಲಿಂಗದಲ್ಲಿ ಲೀನನಾಗುತ್ತಾನೆ. ಪಾರ್ವತಿಯು ಲಜ್ಜಿತಳಾಗಿ ನೀರಿನಲ್ಲಿ ಅಡಗಿಕೊಳ್ಳುತ್ತಾಳೆ. ಹೀಗೆ ನಾಚಿಕೊಂಡ ಪಾರ್ವತಿಯು ಲಜ್ಜಾಗೌರಿ ಎಂದೆನಿಸಿದಳು.[21]

ಎರಡು: ಒಮ್ಮೆ ಶಿವನು ಪಾರ್ವತಿಗೆ ತನ್ನ ಕಂಬಳಿಯನ್ನು ಕೊಟ್ಟು ಲೋಕ ಸಂಚಾರಕ್ಕೆ ಹೋಗುತ್ತಾನೆ ಮತ್ತು ಅವನು ಇಲಿಯ ರೂಪ ತಳೆದು ಕಂಬಳಿಯನ್ನು ತುಂಡರಿಸುತ್ತಾನೆ. ನಂತರ ಸಿಂಪಿಗನ ರೂಪದಲ್ಲಿ ಪಾರ್ವತಿಯ ಎದುರು ಕಾಣಿಸಿಕೊಳ್ಳುತ್ತಾನೆ. ಪಾರ್ವತಿಯು ಕಂಬಳಿಯನ್ನು ಹೊಲಿದು ಕೊಡಲು ಕೇಳುತ್ತಾಳೆ. ಮೊದಲಿನಂತೆ ಅದನ್ನು ಹೊಲಿದರೆ ಬೇಡಿದುದನ್ನು ಕೊಡುವುದಾಗಿ ಭಾಷೆ ಕೊಡುತ್ತಾಳೆ. ಸಿಂಪಿಗ ರೂಪದ ಶಿವನು ಅದನ್ನು ಹೊಲಿದು ಕೊಟ್ಟು ಪಾರ್ವತಿಗೆ ರತಿ ಸುಖ ನೀಡಲು ಕೇಳುತ್ತಾನೆ. ಪಾರ್ವತಿಯು ಕೊಟ್ಟ ಮಾತಿಗೆ ತಪ್ಪಲಾಗದೆ ಒಪ್ಪುತ್ತಾಳೆ. ಸಂಭೋಗನಿರತ ಸಿಂಪಿಗನು ತನ್ನ ನಿಜರೂಪವನ್ನು ತೋರುತ್ತಾನೆ. ಆಗ ಪಾರ್ವತಿಯು ನಾಚಿಕೊಂಡದ್ದರಿಂದ ಲಜ್ಜಾಗೌರಿ ಎನಿಸುತ್ತಾಳೆ.[22] ಹೀಗೆ ಲಜ್ಜಾಗೌರಿಗೆ ಸಂಬಂಧಿಸಿದ ಜನಪದ ಕತೆಗಳಲ್ಲಿ ಮತ್ತು ಶಿಲ್ಪ ವಿಶೇಷತೆಯಲ್ಲಿ ಸಂಭೋಗವು ವಸ್ತುವಾಗಿರುವುದು ಸ್ಪಷ್ಟವಿದೆ. ಈ ಶಿಲ್ಪಗಳಿರುವ ಕೊಳ್ಳದ ಪ್ರದೇಶಗಳು ತಾಂತ್ರಿಕ ಉದ್ದೇಶಕ್ಕೆ ಪೂರಕವಾದುವುಗಳಾಗಿವೆ. ನಾಗನಾಥ ಗುಡಿಯ ಮುಖಮಂಟಪದ ಕಂಬಗಳ ಮೇಲೆ ಕೆತ್ತನೆಗೊಂಡ ರತಿಕ್ರೀಡಾಸಕ್ತ ದಂಪತಿಗಳ ಜೋಡಿಗಳು ಈ ಬಗೆಯ ಚಟುವಟಿಕೆಗೆ ಪ್ರೇರಣೆ ನೀಡುವಂತಿವೆ. ಅಷ್ಟೇಕೆ? ಆ ಗುಡಿಯೇ ‘ನಾಗ’ನಾಥನ ಗುಡಿ! ನಾಗ ಲಿಂಗಸಂಬಂಧಿ ಎಂಬುದು ಸರ್ವವಿದಿತ. ಮಹಾಕೂಟ ಕೂಡ ಲಜ್ಜಾಗೌರಿಯ ತಾಣವಾಗಿದೆ. ಕೊಳ್ಳವೆಲ್ಲ ಲಿಂಗಮಯವಾಗಿದೆ. ನೂರಾರು ಲಿಂಗಗಳು ಅಲ್ಲಿವೆ. ಅಲ್ಲಿಯ ಊರ್ಧರೇತೇಶ್ವರ ಶಿಲ್ಪಗಳು, ಅರ್ಧನಾರೀಶ್ವರ ಶಿಲ್ಪಗಳು, ಮಹಾಕೂಟ ನಂದಿಮಂಟಪದ ಮೈಥುನ ಶಿಲ್ಪಗಳು ಸೃಷ್ಟಿಕಾರ್ಯದ ಸಂಕೇತವೆನಿಸುತ್ತವೆ.

ಮಕ್ಕಳಿಗೆ ಸಂಬಂಧಿಸಿದಂತೆ ಬೌದ್ಧ ಸಂಪ್ರದಾಯದಲ್ಲಿ ಹಾರಿತೀ ಎಂಬ ಜನಪದ ದೇವತೆ ಪೂಜಿತಳಾಗಿದ್ದಾಳೆ. ಬುಡಕಟ್ಟಿನ ಜನಾಂಗ ಮತ್ತು ಜನಪದರಲ್ಲಿ ಈ ದೇವಿಯು ಮಕ್ಕಳನ್ನು ರೋಗರುಜಿನಗಳಿಂದ ಪೀಡಿಸುವ ನರಭಕ್ಷಕಿ. ಮೊದಲು ಭಯದಿಂದ ಪೂಜೆಗೊಳ್ಳಲ್ಪಟ್ಟ ಇವಳು ಕ್ರಮೇಣ ಬೌದ್ಧ ಮತೀಯರ ಧಾರ್ಮಿಕ ಜೀವನದಲ್ಲಿ ಸ್ಥಾನ ಪಡೆದಿರಬಹುದು. ಬೌದ್ಧ ಧರ್ಮದ ಹಾರಿತೀ ದೇವಿಯು ತೋರ ಮೊಲೆಯ ತಾಯಿ, ಮಕ್ಕಳೊಂದಿಗಳು.[23] ಬುಡಕಟ್ಟು ಜನಾಂಗದವರಲ್ಲಿ ಮಕ್ಕಳನ್ನು ಪೀಡಿಸುವ ಈ ದೇವಿಯು ಬೌದ್ಧ ಸಂಪ್ರದಾಯದಲ್ಲಿ ಸೇರಿಕೊಂಡು ಉಪಕಾರಿ ದೇವತೆಯಾಗಿ ಮಾರ್ಪಾಡಾದಂತೆ ತೋರುತ್ತದೆ. ನಂತರ ಇವಳು ಅರಸ-ಅರಸಿಯರಿಂದಲೂ ಪೂಜಿಸಲ್ಪಟ್ಟಿರಬಹುದೆಂಬ ಊಹೆ ಎಸ್. ಶೆಟ್ಟರ್ ಅವರದು.[24] ಇದು ಸಂಭವನೀಯವಾಗಿರಲೂಬಹುದು.

ನಾಗಾರ್ಜುನಕೊಂಡದಿಂದ ಆಳಿದ ಇಕ್ಷ್ವಾಕು ಅರಸ-ಅರಸಿಯರು ಬೌದ್ಧ ಧರ್ಮವನ್ನು ಪ್ರೋನಾಗಾರ್ಜುನಕೊಂಡದ ಉತ್ಖನನದಲ್ಲಿ ದೊರೆತ ಮೂರನೆಯ ಶತಮಾನದ ಭಗ್ನ ‘ಲಜ್ಜಾಗೌರಿ’ ಶಿಲಾಮೂರ್ತಿಯ ಕೆಳಗೆ ಒಂದು ಸಾಲಿನ ಶಾಸನವಿದೆ. ಅದರಲ್ಲಿ ಮಕ್ಕಳು ಮತ್ತು ಮಾಂಗಲ್ಯವಿರುವ ರಾಣಿಯ ಪ್ರಸ್ತಾಪವಿದೆ.[25] ಇಕ್ಷ್ವಾಕು ಅರಸಿಯರು ಬೌದ್ಧ ಮತವನ್ನು ಪಾಲಿಸುತ್ತಿದ್ದರಿಂದ ಈ ‘ಲಜ್ಜಾಗೌರಿ’ಯು ಮೂಲತಃ ‘ಹಾರಿತೀ’ ಆಗಿರಬಹುದೇ? ಹಾಗಾದಲ್ಲಿ ಸನ್ನತಿಯಲ್ಲಿ ದೊರೆತ ಈ ಬಗೆಯ ಶಿಲ್ಪಗಳು ಶೈವಧರ್ಮದ್ದಾಗಿರದೆ ಬೌದ್ಧ ಸಂಪ್ರದಾಯದ್ದಾಗಿರಬಹುದು.

ಬುಡಕಟ್ಟು ಜನಾಂಗದ ಮಕ್ಕಳನ್ನು ರೋಗಗಳಿಂದ ಪೀಡಿಸುವ ನರಭಕ್ಷಕಿ ಹಾರಿತೀ ದೇವಿಯು ಬೌದ್ಧ ಸಂಪ್ರದಾಯದಲ್ಲಿ ವಿಲೀನಗೊಂಡು ಕ್ರಮೇಣ ಉಪಕಾರಿ ದೇವತೆ ಎನಿಸಿ ನಂತರ ಮಕ್ಕಳನ್ನು ಅನುಗ್ರಹಿಸುವ ದೇವತೆಯಾಗಿ ಬೆಳೆದಿರಬಹುದೆಂದು ಊಹಿಸಲು ಅವಕಾಶವಿದೆ. ಹಾಗಿದ್ದಲ್ಲಿ ಇವಳ ಅನುಗ್ರಹದಿಂದ ಹುಟ್ಟಿದವರು ಹಾರಿತೀ ಪುತ್ರರೆನಿಸಿಕೊಂಡಿರಬಹುದೇ? ಬೌದ್ಧ ಸಂಪ್ರದಾಯದ ಹಾರಿತೀ ಶಾಕ್ತಪಂಥದಲ್ಲಿ ಪಾರ್ವತಿಯ ರೂಪವೆಂದು ಸ್ವೀಕೃತವಾಗಿರಬಹುದೇ? ಜನಪದರು ನಾಮ ಸಾಮ್ಯದ ಹಿನ್ನೆಲೆಯಲ್ಲಿ ಹಾರಿತೀಯನ್ನು ಪಾರ್ವತಿಯೊಂದಿಗೆ ಸಮೀಕರಿಸಿ ಈ ಮೇಲಿನ ಕತೆಗಳು ಹುಟ್ಟಿಕೊಂಡವೆಂದು ಊಹಿಸಬಹುದು. ಈ ಮೇಲೆ ಪ್ರಸ್ತಾಪಿಸಲಾದ ಶಾಸನವು ಪ್ರಾಯಶಃ ಲಜ್ಜಾಗೌರಿಯ ಉಪಾಸನೆಯಿಂದ ಅರಸಿಯು ಸುಮಂಗಲೆಯಾಗಿರುವುದನ್ನು, ಮಕ್ಕಳು ಪಡೆದುದನ್ನು ಸೂಚಿಸುತ್ತದೆ. ಈ ಲಜ್ಜಾಗೌರಿಯ ಅನುಗ್ರಹದಿಂದ ಜನಿಸಿದವರು ಹಾರಿತೀ ಪುತ್ರರೆನಿಸಿದರೇ? ಇಕ್ಷ್ವಾಕುಗಳಂತೆ ಚುಟುಗಳು, ಕದಂಬರು, ಚಲುಕ್ಯರು ತಮ್ಮನ್ನು ಹಾರಿತೀ ಪುತ್ರರೆಂದು ಹೇಳಿಕೊಂಡಿದ್ದಾರೆ. ಚಲುಕ್ಯರ ಮಹತ್ವದ ಸ್ಥಳಗಳಲ್ಲಿ ಲಜ್ಜಾಗೌರಿ ಶಿಲ್ಪಗಳು ಕಂಡುಬಂದಿರುವುದು ಈ ದಿಸೆಯಲ್ಲಿ ವಿಚಾರ ಮಾಡಲು ನೆರವಾಗುತ್ತದೆ. ಈ ಊಹೆಯನ್ನು ಪುಷ್ಟೀಕರಿಸಲು ಇನ್ನೂ ಹೆಚ್ಚಿನ ಪುರಾವೆಗಳ ಅವಶ್ಯಕತೆ ಇದೆ. ಇನ್ನೂ ಹೆಚ್ಚಿನ ಸಂಶೋಧನೆಗೆ ಇಲ್ಲಿ ಅವಕಾಶವಿದೆ ಎಂದು ಹೇಳಬಹುದು.

ಸರಸ್ವತಿ

ಚಲುಕ್ಯರ ಕಾಲದಲ್ಲಿ ಸರಸ್ವತಿ ರೂಪದಲ್ಲಿ ದೇವಿಯನ್ನು ಪೂಜಿಸಿದುದು ಕಂಡುಬರುವುದಿಲ್ಲ. ಕಲ್ಯಾಣ ಚಾಲುಕ್ಯರಲ್ಲಿ ಸರಸ್ವತಿಯು ವ್ಯಾಪಕವಾಗಿ ಪೂಜೆಗೊಂಡ ಸಂಗತಿ ಸರ್ವವಿದಿತ. ಬಾದಾಮಿ ಪರಿಸರದಲ್ಲಿಯೂ ಸರಸ್ವತಿ ಆರಾಧನೆ ನಡೆಯುತ್ತಿತ್ತೆಂಬುದಕ್ಕೆ ಮಹಾಕೂಟದಲ್ಲಿರುವ ದೊಡ್ಡ ಗಾತ್ರದ ಸುಂದರ ಸರಸ್ವತಿ ವಿಗ್ರಹವೇ ಸಾಕ್ಷಿ. ವಿಜಯನಗರ ಅರಸರ ಕಾಲದ ಸರಸ್ವತಿ ಶಿಲ್ಪವೊಂದು ಅರಳಿತೀರ್ಥದ ಶಿಲ್ಪಸಮೂಹದಲ್ಲಿದೆ.[26]

ಲಕ್ಷ್ಮಿ

ಲಕ್ಷ್ಮಿಯು ಸಂಪತ್ತಿನ ಅಧಿದೇವತೆಯಾಗಿ ವೇದಕಾಲದಿಂದಲೂ ಪೂಜಿತಳಾಗಿದ್ದಾಳೆ. ಸನ್ನತಿಯ ಯಕ್ಷ ಮೂರ್ತಿಯ ರತ್ನ ಖಚಿತಹಾರದ ಪದಕದಲ್ಲಿ ಗಜಲಕ್ಷ್ಮಿ ಮೂರ್ತಿಯಿದೆ. ಇದರ ಕಾಲ ಸುಮಾರು ೨ನೆಯ ಶತಮಾನ. ಕರ್ನಾಟಕದಲ್ಲಿ ಇದೇ ಅತ್ಯಂತ ಪ್ರಾಚೀನ ಗಜಲಕ್ಷ್ಮಿ ಶಿಲ್ಪ. ಚಲುಕ್ಯರ ಕಾಲದಲ್ಲಿ ಲಕ್ಷ್ಮಿಯು ಸ್ವತಂತ್ರ ಗರ್ಭಗುಡಿಯಲ್ಲಿ ಇರುವಂತೆ ಕಂಡುಬರದಿದ್ದರೂ ಬಾಗಿಲುವಾಡದ ಲಲಾಟಬಿಂಬಗಳಲ್ಲಿ ಕೆತ್ತನೆಗೊಂಡಿದ್ದಾಳೆ. ಜಂಬುಲಿಂಗ ದೇವಾಲಯ, ಪಟ್ಟದಕಲ್ಲಿನ ಪಾಪನಾಥ ಗುಡಿಗಳ ಬಾಗಿಲು ಚೌಕಟ್ಟಿನಲ್ಲಿ, ಬಾದಾಮಿಯ ಶೈವ ಗುಹಾಲಯದ ೧೪ನೆ ಕಂಬ ಮತ್ತು ಎರಡನೆಯ ಗುಹೆಯ ೧೪ನೆ ಕಂಬದ ಮೇಲೆ ಗಜಲಕ್ಷ್ಮಿ ಶಿಲ್ಪಗಳಿವೆ. ಭೂತನಾಥ ಗುಡಿಗುಚ್ಚದಲ್ಲಿ ರಾಷ್ಟ್ರಕೂಟರ ಕಾಲದ ಗುಡಿಗಳ  ಬಾಗಿಲುವಾಡದ ಲಲಾಟಬಿಂಬಗಳಲ್ಲಿ ಗಜಲಕ್ಷ್ಮಿ ಶಿಲ್ಪಗಳಿವೆ.

ವಿರೂಪಾಕ್ಷ ದೇವಾಲಯ, ಅಗಸ್ತ್ಯತೀರ್ಥ, ದಕ್ಷಿಣ ದಂಡೆಯ ಮೇಲಿನ ದೇವಾಲಯಗಳು ಕಲ್ಯಾಣ ಚಾಲುಕ್ಯರ ಕಾಲದವು. ಇವುಗಳ ಬಾಗಿಲುವಾಡದ ಲಲಾಟಬಿಂಬಗಳಲ್ಲಿಯೂ ಗಜಲಕ್ಷ್ಮಿ ಶಿಲ್ಪಗಳಿವೆ. ಅರಳಿತೀರ್ಥದಲ್ಲಿ ಸುಮಾರು ೧೬ನೆಯ ಶತಮಾನದ ಮಹಾಲಕ್ಷ್ಮಿ  ಮೂರ್ತಿಯೊಂದಿದೆ. ಸಭಾಮಂಟಪದಲ್ಲಿ ನಿಂತಿರುವ ಮಹಾಲಕ್ಷ್ಮಿಯು ಶ್ರೀಫಲ, ಗದಾ, ಖೇಟಕಗಳನ್ನು ಕೈಯಲ್ಲಿ ಹಿಡಿದಿದ್ದಾಳೆ. ಕೊಲ್ಲಾಪುರದ ಮಹಾಲಕ್ಷ್ಮಿಯು ರವಿದೇವ ತ್ರಿದಂಡಿಯ ಭಕ್ತಿಗೆ ಪ್ರಸನ್ನಳಾಗಿ ಇಲ್ಲಿ ಬಂದು ವಾಸಿಸಿದಳೆಂದು ಶಾಸನವೊಂದು[27] ತಿಳಿಸುತ್ತದೆ. ಕೊಲ್ಲಾಪುರದ ಮಹಾಲಕ್ಷ್ಮಿಯು ಶಾಕ್ತಲಕ್ಷ್ಮಿ. ಒಟ್ಟಿನಲ್ಲಿ ಮೊದಮೊದಲು ಈ ಪ್ರದೇಶದಲ್ಲಿ ದುರ್ಗಾಭಗವತಿ, ಬನದ ದೇವಿಯಂತಹ ಸ್ತ್ರೀದೇವತೆಗಳ ಪೂಜೆ ನಡೆಯುತ್ತಿತ್ತು. ನಂತರ ಸಪ್ತಮಾತೃಕೆ ಮತ್ತಿತರ ದೇವಿಯಾಗಿ ಮುಂದುವರಿದು ಶೈವಧರ್ವದ ಭಾಗವಾಗಿರುವ ಶಾಕ್ತಪಂಥವೊಂದು ಬೆಳೆದು ಇಂದಿಗೂ ದೇವಿ ಉಪಾಸನೆಯು ನಿರಂತರವಾಗಿ ಸಾಗುತ್ತಿದೆ ಎಂದು ತೀರ್ಮಾನಿಸಬಹುದು.

ಗಾಣಪತ್ಯ ಮತ

ಗಣಪತಿಯ ಉಲ್ಲೇಖವನ್ನು ಋಗ್ವೇದದಲ್ಲಿ ಕಾಣಬಹುದು.[28] ಬೋಧಾಯನ ಗೃಹ್ಯಸೂತ್ರ, ಗೋಭಿಲ ಸ್ಮೃತಿ ಮತ್ತು ಹಾಲನ ಗಾಥಾ ಸಪ್ತಶತಿಯಲ್ಲಿ ಗಣಪತಿಯ ಅಗ್ರಪೂಜೆಯ ಕುರಿತಾಗಿ ನಿರ್ದೇಶನವಿದೆ.[29] ಗಣೇಶ ಪುರಾಣ, ಮುದ್ಗಲ ಪುರಾಣ ಮೊದಲಾದವು ಗಣಪತಿಯೇ ಸರ್ವೋತ್ತಮ ದೈವತವೆಂದು ಪ್ರತಿಪಾದಿಸುತ್ತವೆ. ವರದ ತಾಪನೀಯ ಅಥವಾ ಗಣಪತಿ ತಾಪನೀಯವೆಂಬ ಉಪನಿಷತ್ತು ಗಣೇಶನನ್ನು ಪರಬ್ರಹ್ಮನಿಗೆ ಹೋಲಿಸಿ ಗಾಣಪತ್ಯ ಮತವನ್ನು ಬೋಧಿಸುವುದು.[30] ಗಣೇಶ ಅಥರ್ವಶೀರ್ಷ ಉಪನಿಷತ್ತು ಗಾಣಪತ್ಯರ ಪ್ರಮಾಣ ಗ್ರಂಥ.[31] ಗಣಪತಿಯ ಪೂಜೆಯು ಉಳಿದ ದೇವತೆಗಳ ಪೂಜೆಯನ್ನು ಒಳಗೊಂಡಿದೆ ಎಂಬುದು ಗಾಣಪತ್ಯರ  ಭಾವನೆ. ಈ ಗಣೇಶನ ನಾಭಿಯು ಬ್ರಹ್ಮ, ಮುಖವು ವಿಷ್ಣು, ಕಣ್ಣುಗಳು ರುದ್ರ, ವಾಮ ಭಾಗ ಶಕ್ತಿ, ಬಲಭಾಗ ಸೂರ್ಯ ಮತ್ತು ಆತ್ಮವು ಆನಂದ ಎಂಬುದು ಅವರ ನಂಬುಗೆ.[32] ಶ್ರೀ ಗಣೇಶಾಯ ನಮಃ ಎಂಬುದು ಗಾಣಪತ್ಯರ ಮಂತ್ರ. ತಂತ್ರಗಳಲ್ಲಿ ಗಣಪತಿಯು ಮೂಲಾಧಾರ ಚಕ್ರಕ್ಕೆ ದೇವತೆ.

ಬೌದ್ಧರಲ್ಲಿಯೂ, ಜೈನರಲ್ಲಿಯೂ, ಶಾಕ್ತರಲ್ಲಿಯೂ ಗಣೇಶ ಪೂಜೆ ರೂಢಿಯಲ್ಲಿದೆ. ಬೌದ್ಧಧರ್ಮದಲ್ಲಿ ಬೆರೆತುಕೊಂಡ ಗಾಣಪತ್ಯವು ಬೌದ್ಧಧರ್ಮದ ಜೊತೆಗೆ ಭಾರತದಾಚೆಯೂ ಪಸರಿಸಿತು. ಗೋಕರ್ಣದ ದ್ವಿಬಾಹು ಗಣೇಶ ಶಿಲ್ಪ (ಸುಮಾರು ೩ನೆಯ ಶತಮಾನ)ಅತ್ಯಂತ ಪ್ರಾಚೀನವಾದುದು. ಚಲುಕ್ಯರ ಕಾಲದಲ್ಲಿ ಗಣಪತಿಯ ಆರಾಧನೆಯು ರೂಢಿಯಲ್ಲಿದ್ದಿತು. ಚಲುಕ್ಯರ ಆಡಳಿತದ ಮೊದಲ ಹಂತದಲ್ಲಿ ಈ ದೇವನ ಪ್ರಭಾವವು ಎದ್ದು ಕಾಣುತ್ತದೆ. ಬಾದಾಮಿಯ ಶೈವ ಗುಹಾಲಯದ ಉಪಗುಹೆಯ ಪೂರ್ವದ ಗೋಡೆಯಲ್ಲಿ ಬೃಹದಾಕಾರದ ಗಣೇಶ ವಿಗ್ರಹವನ್ನು ಕಂಡರಿಸಲಾಗಿದೆ. ಆಸೀನನಾಗಿರುವ ದ್ವಿಬಾಹು ಗಣಪತಿ ಈತ. ಈ ಗಜಮುಖನ ತಲೆಯ ಮೇಲೆ ಕಿರೀಟವಿಲ್ಲ. ಕಿರೀಟದ ಬದಲು ಅಲ್ಲೊಂದು ಕಮಲ ಪುಷ್ಪ ಕೆತ್ತನೆಗೊಂಡುದು ಒಂದು ವಿಶೇಷ ಸಂಗತಿ. ಸುಮಾರು ಇಷ್ಟೇ ಗಾತ್ರದ ಎರಡು ಕೈಗಳುಳ್ಳ ಆಸೀನ ಗಣೇಶ ಶಿಲ್ಪವೊಂದು ಮಹಾಕೂಟೇಶ್ವರ ಗುಡಿಯ ನಂದಿಮಂಟಪದ ಮುಂದಿದೆ. ಎರಡನೆಯ ಗುಹಾಲಯದ ಆರನೆಯ ಕಂಬದ ಮೇಲೆ ಇನ್ನೊಬ್ಬ ದ್ವಿಬಾಹು ಗಣಪತಿ ಆಸೀನನಾಗಿದ್ದಾನೆ. ಶೈವ ಗುಹಾಲಯದ ಸುಪ್ರಸಿದ್ಧ ನಟರಾಜನ ಪಕ್ಕದಲ್ಲಿ ಎರಡು ಕೈಗಳುಳ್ಳ ಸ್ಥಾನಕ ಗಣಪತಿ ಇದ್ದಾನೆ. ರಾವಣಫಡಿಯ ಗಣೇಶನೂ ಇದೇ ರೀತಿಯಲ್ಲಿ ಶಿವನ ಪಕ್ಕದಲ್ಲಿ ಕೆತ್ತನೆಗೊಂಡಿದ್ದಾನೆ. ಸುಪ್ರಸಿದ್ಧ ‘ಮಹಾವಿಷ್ಣುಗೃಹ’ದ ಮೊಗಸಾಲೆಯ ಛತ್ತಿನಲ್ಲಿ ಪೂರ್ವದಿಂದ ಮೂರನೆಯ ಅಂಕಣದಲ್ಲಿ ಶಿವಪಾರ್ವತಿಯರ ಪಕ್ಕದಲ್ಲಿ ಕುಣಿಯುತ್ತಿರುವ ದ್ವಿಬಾಹು ಗಣಪತಿಯ ಉಬ್ಬುಶಿಲ್ಪವಿದೆ. ಅಲ್ಲದೆ ಭೂತನಾಥ ಕೆರೆಯ ದಂಡೆಯ ಮೇಲೆ ಮತ್ತು ಉತ್ತರ ಕೋಟೆಯ ಬಂಡೆಗಲ್ಲುಗಳ ಮೇಲೆ ಬಿಡಿ ಗಣೇಶ ಶಿಲ್ಪಗಳು ವಿಪುಲವಾಗಿರುವುದರಿಂದ ಇಲ್ಲಿ ಗಾಣಪತ್ಯಮತವು ಸಾಕಷ್ಟು ಪ್ರಭಾವಶಾಲಿಯಾಗಿತ್ತೆಂದು ತಿಳಿಯಬಹುದು.

ಕೆಳಗಣ ಶಿವಾಲಯವು ಗಣಪತಿ ದೇವಾಲಯವಾಗಿರಬೇಕೆಂಬ ತರ್ಕ ಅ.ಸುಂದರ ಅವರದು.[33] ಇಮ್ಮಡಿ ಪೊಲೆಕೇಶಿಯನ್ನು ಸೋಲಿಸಿ ಪಲ್ಲವ ನರಸಿಂಹವರ್ಮನು ವಿಜಯದ ಕುರುಹು ಎಂದು ವಾತಾಪಿ ಗಣಪತಿ ಮೂರ್ತಿಯನ್ನು ತಮಿಳುನಾಡಿಗೆ ಒಯ್ದನೆಂದು ಹೇಳಲಾಗುತ್ತದೆ. ಈ ಕುರಿತಾಗಿ ಎರಡು ಕತೆಗಳು ಕೇಳಿಬರುತ್ತವೆ.

ಒಂದು : ಪಲ್ಲವ ನರಸಿಂಹವರ್ಮನ ಸೇನಾಪತಿಯಾದ ಶಿರುತ್ತೊಂಡ (ಪರಂಜ್ಯೋತಿ) ವಿಜಯದ ದ್ಯೋತಕವೆಂದು ವಾತಾಪಿಯಿಂದ ಗಣಪತಿ ಮೂರ್ತಿಯನ್ನು ತನ್ನ ಊರಾದ ತಿರುಚ್ಚೆಂಗಾಟ್ಟಾಂಗುಡಿ(ಜಿ.ತಂಜಾವೂರ)ಗೆ  ಒಯ್ದು ಅಲ್ಲಿ ಪ್ರತಿಷ್ಠಾಪಿಸಿದನಂತೆ.[34] ೧೨ನೆಯ ಶತಮಾನದ ಚೋಳ ಅರಸ ಇಮ್ಮಡಿ ಕುಲೋತ್ತುಂಗನ ಆಸ್ಥಾನ ಕವಿ ಶೆಕ್ಕಿಲರ ತನ್ನ ಪೆರಿಯ ಪುರಾಣದಲ್ಲಿ ಈ ಕತೆಯನ್ನು ಉಲ್ಲೇಖಿಸುತ್ತಾನೆ. ಎರಡು: ಇಮ್ಮಡಿ ಪೊಲೆಕೇಶಿಯನ್ನು ಸೋಲಿಸಿ ಪಲ್ಲವ ನರಸಿಂಹವರ್ಮನು ಹಿಂತಿರುಗಿ ಹೋಗುವಾಗ ವಾತಾಪಿಯಿಂದ ಗಣೇಶ ವಿಗ್ರಹವನ್ನು ತೆಗೆದುಕೊಂಡು ಹೋದನಂತೆ. ತಿರುಚಿನಾಪಳ್ಳಿ ಹತ್ತಿರದ ಗುಡ್ಡದ ಗಣೇಶ ದೇವಾಲಯದ ವಿಗ್ರಹವೇ ಈ ವಾತಾಪಿ ಗಣಪತಿ ಎಂದು ಪ್ರತೀತಿಯಿದೆ.[35] ಈ ಗಣೇಶನ ದರ್ಶನ ಪಡೆದ ಮುತ್ತುಸ್ವಾಮಿ ದೀಕ್ಷಿತರು (೧೭೭೬-೧೮೩೫) ‘ವಾತಾಪಿ ಗಣಪತಿಂ ಭಜೇ’ ಎಂಬ ಕೃತಿಯನ್ನು ರಚಿಸಿ ಹಂಸಧ್ವನಿ ರಾಗದಲ್ಲಿ ಹಾಡಿದರೆಂದು ಹೇಳಲಾಗುತ್ತದೆ.

ಈ ಎರಡೂ ಕತೆಗಳು ಐತಿಹಾಸಿಕ ವ್ಯಕ್ತಿ ಹಾಗೂ ಘಟನೆಯನ್ನು ಬಳಸಿಕೊಂಡು ಹೆಣೆಯಲಾದ ದಂತಕತೆಗಳೆಂಬುದು ಮೇಲುನೋಟಕ್ಕೇ ಗೋಚರಿಸುತ್ತದೆ. ಪ್ರಾಯಶಃ ಈ ಕತೆಗಳು ಆಗ ಕರ್ನಾಟಕದ ಜನಪದರಲ್ಲಿ ಹೆಚ್ಚು ಜನಪ್ರಿಯವಾಗಿದ್ದು ಗಣಪತಿ ಆರಾಧನೆಯ ಸಂಪ್ರದಾಯವು ತಮಿಳುನಾಡಿನಲ್ಲಿ  ಕಾಲಿರಿಸಿತು ಎಂದು ಸೂಚಿಸುತ್ತವೆ. ಈ ನಾಡಿನಿಂದ ಬಂದ ದೇವನನ್ನು ವಾತಾಪಿ ಗಣಪತಿ ಎಂದು ಗುರುತಿಸಿರಬಹುದೆಂದು ಭಾವಿಸಬಹುದು.

ಚಲುಕ್ಯೋತ್ತರ ಕಾಲದಲ್ಲಿ ಗಣಪತಿ ಉಪಾಸನೆ ಬಾದಾಮಿ ಪ್ರದೇಶದಲ್ಲಿ ಮುಂದುವರಿಯಿತೆಂಬುದಕ್ಕೆ ಸೂಚನೆಗಳಿವೆ. ಈ ಕಾಲದ ಪುಟ್ಟ ಗುಹಾಲಯವೊಂದು ಉತ್ತರ ಗುಡ್ಡದ ಬಂಡೆಯಲ್ಲಿ ಪುರಾತತ್ವ ವಸ್ತುಸಂಗ್ರಹಾಲಯ ಪ್ರಾಕಾರದಲ್ಲಿದೆ. ಈ ಪುಟ್ಟ ಗುಹೆಯ ಹೊರಬದಿಗೆ ಚತುರ್ಭುಜ ಸ್ಥಾನಕ ಗಣಪತಿಯು ಕಿರೀಟಧಾರಿಯಾಗಿದ್ದಾನೆ. ಹಾಗೆಯೇ ಭೂತನಾಥ ಕೆರೆಯ ಪೂರ್ವದ ದಂಡೆಯ ಮೇಲಿರುವ ರಾಷ್ಟ್ರಕೂಟರ ಕಾಲದ ಎರಡು ಚಿಕ್ಕ ರಾಚನಿಕ ಮಂದಿರಗಳ ಬಾಗಿಲ ಬಳಿ ಕಿರೀಟಧಾರಿಯಾಗಿರುವ ಮತ್ತು ಪರಶು, ಅಂಕುಶಗಳನ್ನು ಹಿಡಿದಿರುವ ಗಣೇಶನಿದ್ದಾನೆ. ಈತನು ಆಸೀನ ಗಣಪತಿ. ಈ ಕಾಲದ ದ್ವಿಬಾಹು ಗಜಾನನ ಶಿಲ್ಪವೊಂದು ಬಾದಾಮಿಯ ಪುರಾತತ್ವ ವಸ್ತುಸಂಗ್ರಹಾಲಯದಲ್ಲಿದೆ.[36] ಈ ಗಣಪತಿಗೆ ನಾಗವು ಉದರಬಂಧವಾಗಿದೆ. ಕಲ್ಯಾಣ ಚಾಲುಕ್ಯರ ಕಾಲದ ಅನೇಕ ಗಣೇಶ ಶಿಲ್ಪಗಳು ಬಾದಾಮಿಯ ಪರಿಸರದಲ್ಲಿ ದೊರೆತಿವೆ. ಇಲ್ಲಿಯ ಪುರಾತತ್ವ ವಸ್ತು ಸಂಗ್ರಹಾಲಯದಲ್ಲಿಯ ಬಹಳಷ್ಟು ಗಣೇಶ ವಿಗ್ರಹಗಳು ಈ ಕಾಲದವು.

ಅರಳಿತೀರ್ಥದ ಶಿಲ್ಪಸಮೂಹವು ವಿಜಯನಗರ ಅರಸರ ಕಾಲದಲ್ಲಿ ನಿರ್ಮಾಣ ವಾಗಿರುವುದನ್ನು ಶ್ರೀನಿವಾಸ ಪಾಡಿಗಾರ ಅವರು ವಿಶ್ಲೇಷಿಸಿದ್ದಾರೆ.[37] ಇದರಿಂದ ವಿಜಯನಗರ ಅರಸರ ಕಾಲದವರೆಗೂ ಗಣಪತಿ ಆರಾಧನೆ ಪ್ರಚಲಿತದಲ್ಲಿದ್ದುದು ವಿದಿತವಾಗುತ್ತದೆ. ಮರಾಠರ ಕಾಲದಲ್ಲಿಯೂ ಅದು ಮುಂದುವರಿಯಿತು. ಈಗಲೂ ಅಷ್ಟೆ.

ಸ್ಕಾಂದಮತ

ಸ್ಕಾಂದಮತದ ಪ್ರಧಾನ ದೇವತೆ ಸ್ಕಂದ. ಇವನು ಯುದ್ಧದೇವತೆ ಮತ್ತು ದೇವಸೇನಾಧಿಪತಿ. ಈ ಕಾರಣದಿಂದಲೇ ರಾಜರು ಈ ದೇವರನ್ನು ಆರಾಧಿಸಿದರು. ಸ್ಕಾಂದ ಪುರಾಣ, ಶಿವ ಮಹಾಪುರಾಣ ಮತ್ತು ಕಾಲಿದಾಸನ ಕುಮಾರ ಸಂಭವಗಳು ಈ ದೇವನ ಮಹಿಮಾ ವಿಶೇಷಗಳನ್ನು ಸಾರುತ್ತವೆ. ವಾಯು ಪುರಾಣದಲ್ಲಿ ಕಾರ್ತಿಕೇಯನ ಜನನದ ಕತೆ ಇದೆ.

ಕ್ರಿಸ್ತಾಬ್ದದ ಆರಂಭದಲ್ಲಿ ಸ್ಕಂದನ ಆರಾಧನೆಯು ಉತ್ತರ ಭಾರತದಲ್ಲೆಲ್ಲ ರೂಢಿಯಲ್ಲಿ ದ್ದಿತು. ಮೃಗೇಶವರ್ಮನ ಎರಡನೆಯ ವರ್ಷದ ತಾಮ್ರ ಶಾಸನದಲ್ಲಿ ‘ಸ್ವಾಮಿ ಮಹಾಸೇನ ಮಾತೃಗಣಾನುಧ್ಯಾತಾಭಿಷಿಕ್ತಸ್ಯ…’ ಎಂದಿದೆ.[38] ಇಮ್ಮಡಿ ಪೊಲೆಕೇಶಿಯು ಲೋಹನೇರ ತಾಮ್ರಶಾಸನದಲ್ಲಿ ಸ್ವಾಮಿ ಮಹಾಸೇನ’ನನ್ನು ಸ್ಮರಿಸಿದ್ದಾನೆ.[39] ಕದಂಬರೂ, ಚಾಲುಕ್ಯರೂ ಸ್ಕಂದಮತವನ್ನು ಪಾಲಿಸಿದರೆಂದು ತಿಳಿಯಬಹುದು. ಶಾಸನಗಳಲ್ಲಿ ಚಾಲುಕ್ಯರು ತಾವು ಕಾರ್ತಿಕೇಯನ ಅನುಗ್ರಹದಿಂದ ರಕ್ಷಿತರೆಂದು ಹೇಳಿಕೊಂಡಿದ್ದಾರೆ.[40] ಇಮ್ಮಡಿ ಪೊಲೆಕೇಶಿಯ ಕಾಲದ ಶಾಸನವೊಂದರಲ್ಲಿ ನವಿಲಪೊನ್ ಎಂಬ ನಾಣ್ಯದ ಪ್ರಸ್ತಾಪವಿದೆ.[41] ಕಾರ್ತಿಕೇಯನ ವಾಹನದ ಚಿತ್ರಣವಿರುವ ಈ ನಾಣ್ಯವು ಕಾರ್ತಿಕೇಯ ಆರಾಧನೆಯು ಪ್ರಚಲಿತವಿದ್ದುದನ್ನು ಸೂಚಿಸುತ್ತದೆ. ಬಾದಾಮಿ ಹಾಗೂ ಅದರ ಪರಿಸರದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಸ್ಕಂದನ ಶಿಲ್ಪಗಳು ಕಂಡುಬಂದಿವೆ. ಚಲುಕ್ಯರ ಕಾಲದ ಅತ್ಯಂತ ಪ್ರಾಚೀನ ಕುಮಾರಸ್ವಾಮಿಯ ಮೂರ್ತಿ ಎಂದರೆ ಪ್ರಾಯಶಃ ಬಾದಾಮಿಯ ಶೈವ ಗುಹಾಲಯದಲ್ಲಿರುವ ಕಾರ್ತಿಕೇಯನದು. ದ್ವಿಬಾಹು ಕುಮಾರನು ಶಿಖಿವಾಹನನಾಗಿದ್ದಾನೆ. ಕೈಯಲ್ಲಿ ಆಯುಧಗಳಿಲ್ಲ. ದೇವನು ಸಂಹಾರಮೂರ್ತಿಯಾಗಿರದೆ ಪ್ರಸನ್ನ ಮೂರ್ತಿಯಾಗಿದ್ದಾನೆ. ‘ಮಹಾವಿಷ್ಣು ಗೃಹ’ದ ಸಭಾಮಂಟಪದ ಛತ್ತಿನಲ್ಲಿ ಗರ್ಭಗೃಹದ ಮುಂದಿನ  ಅಂಕಣದಲ್ಲಿ ಇನ್ನೂ ದೊಡ್ಡ ಗಾತ್ರದ ಕಾರ್ತಿಕೇಯನ ಶಿಲ್ಪವಿದೆ. ಎರಡನೆಯ ಗುಹಾಲಯದ ಆರನೆಯ ಕಂಬದ ಪಶ್ಚಿಮ ಬದಿಯಲ್ಲಿ ಚತುರ್ಭುಜ ಸ್ಕಂದನ ಉಬ್ಬು ಶಿಲ್ಪವಿದೆ. ಆತ ಶಿಖಿವಾಹನನಾಗಿದ್ದಾನೆ. ಹಳೆಯ ಮಹಾಕೂಟದ ಚಾಪಾಕಾರ (ದುಂಡಾಯತ) ಶಿವಾಲಯದ ದ್ವಿಬಾಹು ಕುಮಾರಸ್ವಾಮಿಯು ಶೂಲಧಾರಿಯಾಗಿದ್ದು ಸ್ಥಾನಕ ಭಂಗಿಯಲ್ಲಿದ್ದಾನೆ. ಚಲುಕ್ಯರ ಕಾಲದ ಸರ್ವೋತ್ಕೃಷ್ಟವಾದ ಕಾರ್ತಿಕೇಯ ಶಿಲ್ಪವೆಂದರೆ ಐಹೊಳೆಯ ಹುಚ್ಚಿಮಲ್ಲಿ ಗುಡಿಯ ಮುಖಮಂಟಪದ ಛತ್ತಿನಲ್ಲಿರುವ ಕಲಾಕೃತಿ. ದ್ವಿಬಾಹು ಕಾರ್ತಿಕೇಯನು ಮಯೂರದ ಮೇಲೆ ಕುಳಿತುಕೊಂಡು ಬಲಗೈಯಲ್ಲಿ ಹಿಡಿದ ಶಕ್ತಿ ಆಯುಧವನ್ನು ತಾರಕಾಸುರನ ಮೇಲೆ ಪ್ರಯೋಗಿಸುವಂತೆ ಈ ಕಲಾಕೃತಿಯನ್ನು ನಿರ್ಮಿಸಲಾಗಿದೆ. ಇಂಥ ಯುದ್ಧನಿರತ ಕಾರ್ತಿಕೇಯನ ಶಿಲ್ಪಗಳು ಅಪರೂಪ. ಹೀಗೆ ಶಾಸನಗಳು, ನಾಣ್ಯಗಳು ಮತ್ತು ಶಿಲ್ಪಗಳು ಚಲುಕ್ಯರ ಕಾಲದಲ್ಲಿ ಕುಮಾರ ಆರಾಧನೆಯ ಮತವು ಪ್ರಭಾವಶಾಲಿಯಾಗಿದ್ದಿತೆಂಬುದನ್ನು ತಿಳಿಸುತ್ತದೆ.

ಚಲುಕ್ಯೋತ್ತರ ಕಾಲದಲ್ಲಿಯೂ ಸ್ಕಾಂದ ಮತವು ಈ ಭಾಗದಲ್ಲಿ ಪ್ರಚಲಿತವಿದ್ದ ಬಗ್ಗೆ ಸೂಚನೆಗಳಿವೆ. ಸಂಡೂರು ಕುಮಾರಸ್ವಾಮಿ ಕ್ಷೇತ್ರವಾಗಿದ್ದ ಸಂಗತಿ ರಾಷ್ಟ್ರಕೂಟ ಶಾಸನಗಳಿಂದ ತಿಳಿದುಬರುತ್ತದೆ.[42] ರಾಷ್ಟ್ರಕೂಟರ ಕಾಲದಲ್ಲಿ ಕರ್ನಾಟಕದಲ್ಲಿ ಕಾರ್ತಿಕೇಯನ ಆರಾಧನೆ ಹೆಚ್ಚಿತು. ಮೂರನೆಯ ಕೃಷ್ಣನ ಹಾಗೂ ಖೊಟ್ಟಿಗನ ಕಾಲದ ಕುಡತಿನಿ ಮತ್ತು ಕೊಳಗಲ್ಲಿನ ಶಾಸನಗಳು ಈ ಮಾತನ್ನು ಸಮರ್ಥಿಸುತ್ತವೆ. ಕಲ್ಯಾಣ ಚಾಲುಕ್ಯರ ಕಾಲದಲ್ಲಿಯೂ ಕುಮಾರಸ್ವಾಮಿಯ ಉಪಾಸನೆ ಈ ಪ್ರದೇಶದಲ್ಲಿ ರೂಢಿಯಲ್ಲಿ ಇದ್ದಿತೆಂದು ತಿಳಿಯಬಹುದು. ಬಾದಾಮಿ ಸಮೀಪದ ಕೋಳೂರಿನ (ತಾ.ಬೀಳಗಿ, ಜಿ.ಬಾಗಲಕೋಟ) ಕಾರ್ತಿಕೇಯನ ಗುಡಿಯು ಕಲ್ಯಾಣ ಚಾಲುಕ್ಯರ ಕಾಲದ್ದಾಗಿರಬಹುದು. ಈ ಅವಧಿಯಲ್ಲಿಯೂ ಸಂಡೂರು, ಕುಡತಿನಿಗಳು ಕಾರ್ತಿಕೇಯನ ಕ್ಷೇತ್ರಗಳೆಂದು ಪ್ರಸಿದ್ದಿ ಪಡೆದವು. ವಿಜಯನಗರ ಅರಸರ ಕಾಲದಲ್ಲಿಯೂ ಕಾರ್ತಿಕೇಯ ಉಪಾಸನೆ ಇದ್ದಿರಬಹುದಾಗಿದೆ. ಹಂಪಿಯ ಕೃಷ್ಣದೇವಾಲಯವೊಂದರ, ಉಪಗರ್ಭಗೃಹದಲ್ಲಿ, ನವಿಲ ಮೇಲೆ ಕುಳಿತ ಸುಬ್ರಹ್ಮಣ್ಯನ ಮೂರ್ತಿ[43] ಇರುವುದು ಗಮನಾರ್ಹ ಸಂಗತಿ.

ಸೌರಮತ

ಪ್ರಾಚೀನ ಭಾರತೀಯರು ನಿಸರ್ಗದಲ್ಲಿ ದೇವರನ್ನು ಅರಸಿದರು. ಭೂಮಿ, ನದಿ, ಗಾಳಿ ಮೊದಲಾದವುಗಳು ದೇವರ ಸ್ವರೂಪಗಳೆನಿಸಿದವು. ನಿಸರ್ಗದಲ್ಲಿ ಅವರಿಗೆ ಅತ್ಯಂತ ಮಹತ್ತರವೆಂದೆನಿಸಿದವನು ಸೂರ್ಯ. ಆದ್ದರಿಂದಲೇ ಅವನು ಭಾರತೀಯ ಧಾರ್ಮಿಕ ಜೀವನದ ಪ್ರಧಾನ ಅಂಗವಾಗಿದ್ದಾನೆ. ಪ್ರಾಚೀನ ಭಾರತದಲ್ಲಿ ಸೌರರು ಬಹುಸಂಖ್ಯೆಯಲ್ಲಿದ್ದರು. ಸೌರಪಂಥವು ಪ್ರಬಲವಾಗಿದ್ದಿತು. ಭಾರತದಲ್ಲಿ ಮಾತ್ರವಲ್ಲ ಸೂರ್ಯೋಪಾಸನೆಯು ಪ್ರಪಂಚದ ಬಹು ಭಾಗದಲ್ಲಿ ಪ್ರಚಲಿತವಾಗಿದ್ದಿತು.

ಋಗ್ವೇದದಲ್ಲಿ ಸೂರ್ಯನು ಪ್ರಮುಖ ದೇವತೆಯೆಂದು ಪರಿಗಣಿತನಾಗಿದ್ದಾನೆ. ರಾವಣನನ್ನು ಸಂಹರಿಸುವ ಮುನ್ನ ಶ್ರೀರಾಮಚಂದ್ರನು ಆದಿತ್ಯ ಹೃದಯವೆಂಬ ಸೂರ್ಯಸ್ತೋತ್ರವನ್ನು ಜಪಿಸಿದನಂತೆ. ಮಹಾಭಾರತದಲ್ಲಿಯೂ ಆದಿತ್ಯ ಸ್ತೋತ್ರಗಳಿವೆ.[44] ಜ್ಯೋತಿರ್ವಿಜ್ಞಾನಿಗಳಾಗಿದ್ದ ಆರ್ಯಭಟ್ಟ, ವರಾಹಮಿಹಿರರು ಸೂರ್ಯಸ್ತುತಿಯನ್ನು ಮಾಡಿರುವರು.[45] ಸೌರ ಪುರಾಣವು ಸೌರಮತ ಪರವಾಗಿದೆ.[46] ಸಾಂಬ ಪುರಾಣದಲ್ಲಿ ಸೌರಮತದ ಬಗ್ಗೆ ವಿವರಗಳಿವೆ.[47]

ಭಾರತದಲ್ಲಿ ಸೂರ್ಯದೇವನಿಗೆ ಅರ್ಪಿತವಾದ ದೇವಾಲಯಗಳು ಕಡಿಮೆ. ನೇರವಾಗಿ ಪ್ರತಿದಿನ ದರ್ಶನ ನೀಡುವ ಜ್ಯೋತಿ ಸ್ವರೂಪ ಸೂರ್ಯನನ್ನು ಮೂರ್ತಿಯ ರೂಪದಲ್ಲಿ ಪೂಜಿಸುವುದು ಅವಶ್ಯವೆನಿಸಲಿಲ್ಲವೆಂದು ತೋರುತ್ತದೆ. ಸೂರ್ಯೋಪಾಸನೆಯು ಚಲುಕ್ಯರ ಸಮಕಾಲೀನ ದೊರೆ ಉತ್ತರಾಪಥೇಶ್ವರನೆನಿಸಿದ ಹರ್ಷವರ್ಧನನ ತಂದೆ ಪ್ರಭಾಕರವರ್ಧನ, ಅಜ್ಜ ಆದಿತ್ಯವರ್ಧನ ಮೊದಲಾದವರು ಪರಮ ಸೂರ್ಯೋಪಾಸಕರಾಗಿದ್ದರು. ಇಮ್ಮಡಿ ಪೊಲೆಕೇಶಿಯು ಹರ್ಷವರ್ಧನನನ್ನು  ಸೋಲಿಸಿದ ಸಂಗತಿ ಪ್ರಸಿದ್ಧವಾಗಿದೆ. ಆ ನಂತರದ ಚಲುಕ್ಯ ಅರಸರ ಹೆಸರುಗಳಲ್ಲಿ ಆದಿತ್ಯ ಪದವು ಸೇರ್ಪಡೆಯಾಗಿರುವ ಸಂಗತಿ ಗಮನಾರ್ಹವಾದುದು. ಚಂದ್ರಾದಿತ್ಯ, ವಿಕ್ರಮಾದಿತ್ಯ, ವಿನಯಾದಿತ್ಯ, ವಿಜಯಾದಿತ್ಯರ ಹೆಸರುಗಳಲ್ಲಿ ಆದಿತ್ಯ ಪ್ರಭಾವ ಎದ್ದು ಕಾಣುತ್ತದೆ.

ಮಾಲೆಗಿತ್ತಿಯ ಶಿವಾಲಯ ಮತ್ತು ಐಹೊಳೆಯ ದುರ್ಗದೇವಾಲಯ ಚಲುಕ್ಯರ ಸೌರಮಂದಿರಗಳಾಗಿವೆ. ಐಹೊಳೆಯ ಅಂಬಿಗೇರ ಗುಡಿ, ಕೊಂತ ಗುಡಿ (೨), ಸೂರ್ಯಗುಡಿ, ಹುಚ್ಚಿಮಲ್ಲಿ ಗುಡಿ, ಲಾಡಖಾನ ಗುಡಿಗಳಲ್ಲಿ ಚಲುಕ್ಯರ ಕಾಲದ ಸೂರ್ಯವಿಗ್ರಹಗಳಿವೆ. ಪಟ್ಟದಕಲ್ಲಿನ ವಿರೂಪಾಕ್ಷ ದೇವಾಲಯ, ಸೂಳಿಭಾವಿಯ ಪ್ರತೋಳಿ, ಸಿದ್ಧನಕೊಳ್ಳದ ಗುಡಿಗಳಲ್ಲಿ ಆದಿತ್ಯ ಶಿಲ್ಪಗಳಿವೆ. ಇವು ಅಂದಿನ ಸೌರಮತದ ಪ್ರಭಾವವನ್ನು ಸೂಚಿಸುತ್ತವೆ.

ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಸೂರ್ಯೋಪಾಸನೆ ಮುಂದುವರಿಯಿತೆಂಬುದಕ್ಕೆ ಶಿಲ್ಪಾದಾರಗಳಿವೆ. ಐಹೊಳೆಯ ಸೂರ್ಯದೇವಾಲಯದ ಗರ್ಭಗೃಹದಲ್ಲಿರುವ ಸೂರ್ಯ ವಿಗ್ರಹವು ಕಲ್ಯಾಣ ಚಾಲುಕ್ಯರ ಸುಂದರ ಕಲಾಕೃತಿ. ಕಲ್ಯಾಣ ಚಾಲುಕ್ಯರ ಕಾಲದ ಇನ್ನೊಂದು ಸೂರ್ಯಶಿಲ್ಪವನ್ನು ಬಡಿಗೇರ ಗುಡಿಯ ಸುಕನಾಸಿಯಲ್ಲಿ ಕಾಣುತ್ತೇವೆ. ಏಳು ಕುದುರೆಗಳ ರಥದ ಮೇಲೆ ಸೂರ್ಯನು ಸಮಭಂಗದಲ್ಲಿ ನಿಂತಿದ್ದಾನೆ. ವಿಜಯನಗರ ಅರಸರ ಕಾಲದ ಸೂರ್ಯ ವಿಗ್ರಹಗಳನ್ನು ಬಾದಾಮಿಯ ಅರಳಿತೀರ್ಥದಲ್ಲಿ ಕಾಣಬಹುದು. ನಾಲ್ಕು ಸೂರ್ಯ ಶಿಲ್ಪಗಳು ಈ ಶಿಲ್ಪ ಸಮೂಹದ ವಿಶೇಷತೆ ಎನಿಸಿವೆ. ಈ ಸೂರ್ಯ ಶಿಲ್ಪಗಳಲ್ಲಿ ಕಂಡುಬರುವ ವೈವಿಧ್ಯವು ಆ ಕಾಲದಲ್ಲಿದ್ದ ಸೌರಮತದ ಜನಪ್ರಿಯತೆಯನ್ನು ತಿಳಿಸುತ್ತದೆ. ಹಿಂದೂ ಧರ್ಮದ ಉಪನಯನ ಮೊದಲಾದ ಸಂಸ್ಕಾರಗಳಲ್ಲಿ ಪ್ರಾಚೀನ ಕಾಲದಿಂದಲೂ ಸೂರ್ಯನಿಗೆ ಮಹತ್ತರ ಸ್ಥಾನವಿದೆ. ಈಗಲೂ ದ್ವಿಜರು ಬಲು ನಿಷ್ಠೆಯಿಂದ ಜಪಿಸುವ ಗಾಯತ್ರಿ ಮಂತ್ರವು ಸವಿತೃ ಸ್ವರೂಪಿ ಸೂರ್ಯಪರವಾದುದು. ಅವರು ಸಲ್ಲಿಸುವ ಸಂಧ್ಯಾವಂದನವು ಸೂರ್ಯನಿಗೆ ಸಂಬಂಧಿಸಿದುದಾಗಿದೆ.[1]     ಬ್ರಾಹ್ಮೀಮಾಹೇಶ್ವರಿ ಚೈವ ಕೌಮಾರೀ ವೈಷ್ಣವೀ ತಥಾ ಮಾಹೇಂದ್ರೀ ಚೈವ ವಾರಾಹೀ ಚಾಮುಂಡಾ ಸಪ್ತ ಮಾತರಃ |

[2]     ಮಾತೃಕೆಯರದೆಂದು ಹೇಳಲಾಗುವ ಮುದ್ರೆಯೊಂದು ಹರಪ್ಪದಲ್ಲಿ ದೊರೆತಿದೆ. ಆದರೆ ಮುದ್ರೆಯಲ್ಲಿ ಕಂಡುಬರುವ ಏಳು ಜನರು ಸಪ್ತಮಾತೃಕೆಯರೆಂದು ಹೇಳಲು ಆಧಾರಗಳಿಲ್ಲ.

[3]     ಮೃಗೇಶವರ್ಮನ ದೇವಗಿರಿ ಹೊಸನಗರ ತಾಮ್ರಶಾಸನಗಳು, ಶಿವ ಮಾಂಧಾತೃವರ್ಮನ ಕೂಡಗೆರೆ ತಾಮ್ರಶಾಸನ, ರವಿವರ್ಮನ ನೀಲಂಬೂರ, ಶಿರಸಿ ಮತ್ತು ಹಲಸಿ ತಾಮ್ರ ಶಾಸನಗಳು, ಹರಿವರ್ಮನ ಹಲಸಿ ಮತ್ತು ಸಂಗೊಳ್ಳಿ ತಾಮ್ರ ಶಾಸನಗಳು, ಎರಡನೆಯ ಕೃಷ್ಣವರ್ಮನ ಬನಹಳ್ಳಿ ತಾಮ್ರ ಶಾಸನ ಮುಂತಾದವು.

[4]     ಇಮ್ಮಡಿ ಪೊಲೆಕೇಶಿಯ ಕೊಚ್ರೆ, ಹೈದರಾಬಾದ, ಕೊಪ್ಪರಂ ತಾಮ್ರ ಶಾಸನಗಳು, ಒಂದನೆಯ ವಿಕ್ರಮಾದಿತ್ಯನ ಸವಣೂರು, ಹೊನ್ನೂರು, ಆಮದಲಪಾಡ ತಾಮ್ರ ಶಾಸನಗಳು, ವಿನಯಾದಿತ್ಯನ ಹರಿಹರ, ಜೆಜೂರಿ, ಪೂನಾ ತಾಮ್ರ ಶಾಸನಗಳು, ವಿಜಯಾದಿತ್ಯನ ಮಾಯಲೂರು, ಏಲಾಪೂರ ತಾಮ್ರ ಶಾಸನಗಳು, ಇಮ್ಮಡಿ ಕೀರ್ತಿವರ್ಮನ ವಕ್ಕಲೇರಿ ಕೆಂದೂರು ತಾಮ್ರ ಶಾಸನಗಳು ಮುಂತಾದವುಗಳು.

[5]     ಶ್ರೀ ಮತ್ಸ್ಯ ಪುರಾಣ (ಭಾಗ ೨)ಕನ್ನಡಕ್ಕೆ ಪಂಢರೀನಾಥಾಚಾರ್ಯ ಗಲಗಲಿ. ಹುಬ್ಬಳ್ಳಿ ಪು. ೯೭೬

[6]     ಸುಂದರ ಅ., ೧೯೭೭, ‘ಕೆಲವು ಈಚಿನ ಗಮನಾರ್ಹ ಪುರಾತತ್ವ ಶೋಧನೆಗಳು’, ಕರ್ನಾಟಕ ಭಾರತಿ ಸಂಪುಟ ೯, ಸಂಚಿಕೆ ೪ ಧಾರವಾಡ, ಪು. ೮೭

[7]     SII, XV, ೪೬೩.

[8]     ಬಾದಾಮಿ ಪುರಾತತ್ತ್ವ ವಸ್ತು ಸಂಗ್ರಹಾಲಯ, ಶಿಲ್ಪ ಸಂಖ್ಯೆ ೩೪

[9]     ಅದನ್ನೀಗ ಬಾದಾಮಿಯ ಪುರಾತತ್ತ್ವ ವಸ್ತು ಸಂಗ್ರಹಾಲಯದಲ್ಲಿ ಜೋಡಿಸಿ ಇಡಲಾಗಿದೆ.

[10]    ರಾಮಚಂದ್ರರಾವ್ ಎಸ್.ಕೆ. ೧೯೭೫, ಪೂರ‌್ವೋಕ್ತ, ಪು. ೧೭೩.

[11]    IA, X, ೯೪ pp. ೧೦೨-೧೦೪.

[12]    ಸುಂದರ ಅ., ೧೯೮೦, ‘ಉತ್ತರ ಕರ್ನಾಟಕದಲ್ಲಿಯ ಕೆಲವು ಪ್ರಾಚೀನ ತಾಂತ್ರಿಕ ಮೂರ್ತಿಗಳು’, ಅಧ್ಯಯನ, ಬೆಂಗಳೂರು, ಪು. ೩೭೭ ‑೩೯೬

[13]    ಚಿದಾನಂದಮೂರ್ತಿ ಎಂ., ೧೯೯೩, ‘ಬಾದುಬ್ಬೆ‑ಬಾದುಮಯ್ಯ ಬನಶಂಕರಿ ಪೆಟ್ಟಿಗೆ ಲಜ್ಜಾಗೌರಿ’, ‘ಹೊಸತು ಹೊಸತು’ಹಂಪಿ, ಪು. ೪೦೧.

[14]    ಕಲಬುರ್ಗಿ ಎಂ.ಎಂ., ೧೯೮೮, ಮಾರ್ಗ, ಸಂಪುಟ ೨, ಪು. ೩೭೪ ‑೩೮೨.

[15]    ರಾಮಚಂದ್ರರಾವ್ ಎಸ್.ಕೆ.,  ೧೯೭೫, ಪೂರ‌್ವೋಕ್ತ, ಪು. ೧೮೩.

[16]    Compebell James Mc. Nabb, ೧೮೮೪, Gazetteer of the Bombay Presidency Vol. XXIII, Bijapur, Bombay, p. ೬೬೬.

[17]    Ibid.

[18]    Dhavalikar M.K., ೧೯೯೬, ‘The goddess of Mahakuta’ Art and Architecture in Karnataka (Eds.) D.V.Devaraj, C.S. Patil, Mysore p. ೫ ಮತ್ತು ಕಲಬುರ್ಗಿ ಎಂ.ಎಂ., ೧೯೮೮, ಪೂರ‌್ವೋಕ್ತ, ಸಂ. ೨, ಪು. ೩೭೪.

[19]    Adalbert J. Gail and Gert J.R.Mevissen (Editors), ೧೯೯೩, South Asian Archaeology ೧೯೯೧, Netherlands, p. ೪೫೯.

[20] ಆಲಂಪುರದಲ್ಲಿ ಈ ಶಿಲ್ಪವನ್ನು ಎಲ್ಲಮ್ಮ ಅಥವಾ ರೇಣುಕಾ ಎಂಬ ಹೆಸರಿನಲ್ಲಿ ಪೂಜಿಸುತ್ತಾರೆ.

[21]    ಕಲಬುರ್ಗಿ ಎಂ.ಎಂ., ೧೯೮೮, ಪೂರ‌್ವೋಕ್ತ, ಪು.೩೭೫

[22]    ಅದೇ.

[23]    Shettar  S., ೧೯೭೯, ‘Roots Relations and Relevance: The Chalukyan Backdrop’, Marg, Bombay, p. ೨೦.

[24]    Ibid.

[25]    ಸಿಧ(ಂ)ಮಹಾದೇವೀಯ ಅವಿಧವಾಯ ಜಿ(ೀ)ವ ಪುತಾಯ ಮಹಾರಾಜ ಸಿರಿ (ಏಹವಲ ಶಾಂತಮೂಲ)ಪತಿ(ಯಾ)ಖಂಡುವುಲಾಯ ಕಾರಿತೇತಿ:ಉದ್ಧೃತ:ಅಧ್ಯಯನ (ಶಂ.ಬಾ.ಜೋಶಿ ಅಭಿನಂದನ ಗ್ರಂಥ)ಪು. ೩೮೭.

[26]    Padigar Shrinivas, ೧೯೭೬, ‘Sculptures in Aralitirtha’ QJMS, LXVII, p. ೨೫.

[27]    IA, X, ೯೨.

[28]    ಋಗ್ವೇದ ೨, ೨೩, ೧

[29]    ಕನ್ನಡ ವಿಶ್ವಕೋಶ, ಸಂಪುಟ ೬, ಪು. ೩೨.

[30]    ನಂದಿಮಠ ಎಸ್.ಸಿ. ೧೯೮೩, ಪೂರ‌್ವೋಕ್ತ. ಪು. ೧೫೩

[31]    Bhama Nagaratnam, ೧೯೯೯, ‘Ganapatyam’ Glory of Ganesha, Central Chinmaya Mission Trust Bombay, p. ೧೪೧

[32]    Ibid.

[33]    ಸುಂದರ ಅ., ೧೯೭೭, ‘ಬಾದಾಮಿಯ ಕೆಳಗಣ ಶಿವಾಲಯವು ಮೂಲತಃ ಗಣೇಶ ದೇವಾಲಯವೇ?’ಮಾನವಿಕ ಭಾರತಿ. ಸಂ. ೬. ಧಾರವಾಡ, ಪು. ೧೭೯

[34]    Balasubrahamanyam S.R., ೧೯೬೨, ‘Two Early Chalukya Scuptures from Mahakuta’ Lalit Kala No. ೧೧, New Delhi, p. ೫೨

[35]    ಸುಂದರ ಅ., ೧೯೭೭, ಪೂರ‌್ವೋಕ್ತ.

[36]    ಬಾದಾಮಿ ಪುರಾತತ್ತ್ವ ವಸ್ತು ಸಂಗ್ರಹಾಲಯದ ಶಿಲ್ಪ ಸಂಖ್ಯೆ ೭೩

[37]    Padigar Shrinivas, ೧೯೭೬, ‘Sculptures in Aralitirtha Badami’ QJMS, LXVII no. ೧-೪, Bangalore, pp. ೨೫-೩೦

[38]    ಗೋಪಾಲ ಬಾ.ರಾ. ೧೯೮೩, ಪೂರ‌್ವೋಕ್ತ. ಪು. ೧೫.

[39]    EI, XXXVII, p. ೩೯

[40] ಕಾರ್ತೀಕೇಯಾನುಗ್ರಹ ಪರಿರಕ್ಷಣ ಪ್ರಾಪ್ತ ಕಲ್ಯಾಣ ಪರಂಪರಾಣಾಂ (ಉದಾ:ಇಮ್ಮಡಿ ಪೊಲೆಕೇಶಿಯ ಹೈದರಾಬಾದ ಶಾಸನ IA, IV, no. ೨೭)

[41]    EI, XXX, p. ೧೩-೧೭.

[42]    ಉದಾ :SII, XI pt, i

[43]    Saletore R.N. ೧೯೮೨ Vijayanagar Art, Delhi, p. ೧೩೩.

[44]    ಶ್ರೀಕಂಠಶಾಸ್ತ್ರಿ ಎಸ್. , ೧೯೬೯, ಭಾರತೀಯ ಸಂಸ್ಕೃತಿ, ಮೈಸೂರು, ಪು. ೧೭೬.

[45]    ಅದೇ.

[46]    ಅದೇ.

[47]    ನಂದಿಮಠ ಎಸ್.ಸಿ. ಪೂರ‌್ವೋಕ್ತ, ಪು. ೧೫೬.