ಶೈವಧರ್ಮ

ಶೈವಧರ್ಮವು ವೇದಕಾಲಕ್ಕಿಂತಲೂ ಹಿಂದಿನದು. ಸಿಂಧೂ ಸಂಸ್ಕೃತಿಯಲ್ಲಿ ಪಶುಪತಿ ಶಿವನ ಮುದ್ರೆಗಳು ಇದ್ದದ್ದು ಕಂಡುಬಂದಿವೆ. ಕರ್ನಾಟಕದಲ್ಲಿ ಕ್ರಿಸ್ತಶಕದ ಪ್ರಾರಂಭದಿಂದಲೂ ಶೈವಧರ್ಮವು ಪ್ರಚಲಿತದಲ್ಲಿದೆ. ಈವರೆಗೆ ತಿಳಿದಿರುವಂತೆ ಕರ್ನಾಟಕದಲ್ಲಿಯ ಅತಿ ಪ್ರಾಚೀನ ಶೈವ ದೇವಾಲಯದ ಉಲ್ಲೇಖವು ಬಾದಾಮಿಗೆ ಸಮೀಪದಲ್ಲಿರುವ ವಾಸನದಲ್ಲಿ ದೊರೆತ ಕ್ರಿ.ಶ.೨-೩ನೇ ಶತಮಾನ ಶಾಸನದಿಂದ ತಿಳಿದುಬರುತ್ತದೆ.

[1] ಬೌದ್ಧ ಮತಾವಲಂಬಿಗಳಾಗಿದ್ದ ಶಾತವಾಹನರು ಮಹಾದೇವ (ಪ್ರಣವೇಶ್ವರ) ದೇವಾಲಯಕ್ಕೆ ಪೂಜೆ ಸಲ್ಲಿಸಿದರು.[2] ಕದಂಬರ ಕಾಲದಲ್ಲಿ ಶೈವಧರ್ಮವು ಪ್ರಮುಖವಾಗಿತ್ತು. ಅದರ ಮೂಲಪುರುಷನಾದ ತ್ರಿಲೋಚನ ಕದಂಬನು ತ್ರಿಪುರ ಸಂಹಾರದ ನಂತರ ದಣಿದಿದ್ದ ಶಿವನ ಹಣೆಯಿಂದ ಕದಂಬ ಮರದ ಬುಡದಲ್ಲಿ ಬಿದ್ದ ಬೆವರಿನಿಂದ ಹುಟ್ಟಿದನಂತೆ.[3]

ಚಲುಕ್ಯರ ಆಳ್ವಿಕೆಯಲ್ಲಿ ಶೈವಧರ್ಮವು ಉನ್ನತ ಸ್ಥಿತಿಯಲ್ಲಿದ್ದಿತು. ಪ್ರಾರಂಭದ ಹಂತದಲ್ಲಿ ವೈಷ್ಣವ, ಶೈವ ಧರ್ಮಗಳು ಸಮ ಸಮನಾಗಿ ಪೋಷಿಸಲ್ಪಟ್ಟಂತೆ ಕಂಡುಬರುತ್ತದೆ. ಬಾದಾಮಿಯ ಶೈವಗುಹೆಯು ಪ್ರಾಯಶಃ ಮೊದಲನೆಯ ಪೊಲೆಕೇಶಿಯಿಂದ ಕೊರೆಯಿಸಲ್ಪಟ್ಟಿರಬಹುದು.[4] ಗರ್ಭಗುಡಿಯಲ್ಲಿ ಏಕಶಿಲಾ ನಿರ್ಮಿತ ಶಿವಲಿಂಗವಿದೆ. ನಟರಾಜ, ಅರ್ಧನಾರೀಶ್ವರ, ಮಹಿಷಮರ್ದಿನಿ, ಗಣಪತಿ, ಕಾರ್ತಿಕೇಯರ ಶಿಲ್ಪಗಳು ಈ ಗುಹೆಯ ಪ್ರಧಾನ ಶಿಲ್ಪಗಳು, ಐಹೊಳೆಯ ರಾವಣಫಡಿ ಗುಹಾಲಯವು ಪ್ರಾಯಶಃ ಒಂದನೆಯ ಪೊಲೆಕೇಶಿಯ ಕಾಲದ್ದು.[5] ಇದರ ಗರ್ಭಗೃಹದಲ್ಲಿಯೂ ಒಂದೇ ಕಲ್ಲಿನಲ್ಲಿ ನಿರ್ಮಿತವಾದ ಶಿವಲಿಂಗವಿದೆ. ಪ್ರತ್ಯೇಕ ಚಿಕ್ಕ ಕೋಣೆಯಲ್ಲಿ ನಟರಾಜ ಪಾರ್ವತಿ, ಗಣೇಶರಿದ್ದಾರೆ. ಗೋಡೆಗಳ ಮೇಲೆ ಗಂಗಾಧರ, ಅರ್ಧನಾರೀಶ್ವರ ಮೊದಲಾದ ಬೃಹದಾಕಾರದ ಶಿಲ್ಪಗಳಿವೆ. ಮಹಾಕೂಟದ ಪುಷ್ಕರಣಿಯಲ್ಲಿ ಸರ್ವತೋಭದ್ರ ಮಂಟಪವೊಂದಿದೆ. ಇಲ್ಲಿಯ ಸ್ತಂಭ ಶಾಸನದಲ್ಲಿ ಇದನ್ನು ದೇವದ್ರೋಣಿಯೆಂದು ಕರೆಯಲಾಗಿದೆ.[6] ಇದರ ಮಧ್ಯದಲ್ಲಿ ಚತುರ್ಮುಖ ಲಿಂಗವಿದೆ. ಕೆ.ವಿ.ರಮೇಶ ಅವರ ಅಭಿಮತದಂತೆ ಪ್ರಾಯಶಃ ಈ ಪುಷ್ಕರಿಣಿ ಮತ್ತು ಮಂಟಪಗಳು ಒಂದನೆಯ ಪೊಲೆಕೇಶಿಯ ವಾಸ್ತು ಕಾಣಿಕೆಗಳಾಗಿವೆ.[7] ಮಂಗಲೇಶನು ಕಲತ್ಸೂರಿ ಅರಸರಿಂದ ವಶಪಡಿಸಿಕೊಂಡ ಯುದ್ಧ ಸಂಪತ್ತನ್ನು ಮತ್ತು ಶ್ರಿಯಂಬಾಟಕ(ಸಿರಿಬಡಗಿ), ವ್ರೀಹಿ ಮುಖಗ್ರಾಮ(ನೆಲುವಿಗಿ), ಕಿಸುವೊಳಲ್(ಪಟ್ಟದಕಲ್ಲ), ಕೆಂದೂರ ಮಾನ್ಯ(ಕೆಂದೂರು),[8] ನಂದಿಗ್ರಾಮ(ನಂದಿಕೇಶ್ವರ), ಆರ್ಯಪುರ (ಐಹೊಳೆ) ಮೊದಲಾದ ಹತ್ತು ಊರುಗಳನ್ನು ಮಕುಟೇಶ್ವರನಾಥ ದೇವಾಲಯಕ್ಕೆ ತನ್ನ ಮಲತಾಯಿಯ ಅನುಮತಿಯ ಮೇರೆಗೆ ದತ್ತಿಯಾಗಿ ನೀಡಿದ್ದಾನೆ.[9] ಪರಮ ಭಾಗವತನೆಂದು ಹೊಗಳಲ್ಪಟ್ಟ ಮಂಗಲೇಶನ ಈ ಶಿವ ಭಕ್ತಿ ವಿಶಿಷ್ಟವಾದುದಾಗಿದೆ.

ಇಮ್ಮಡಿ ಪೊಲೆಕೇಶಿಯ ಸೋದರಮಾವನಾದ ಸೇಂದ್ರಕ ಶ್ರೀವಲ್ಲಭ ಸೇನಾನಂದ ರಾಜನು ಪರಮ ಮಾಹೇಶ್ವರನಾಗಿದ್ದನು.[10] ಸ್ವತಃ ಇಮ್ಮಡಿ ಪೊಲೆಕೇಶಿಯು ಸಂಗಮೇಶ್ವರ ದೇವರ ಸನ್ನಿಧಿಯಲ್ಲಿ ಇಂದುಪುರ ಘಟಿಕಾದ ಮಾವುಗಣ ಸ್ವಾಮಿಗೆ ಚಲುಕ್ಯ ವಿಷಯದಲ್ಲಿ ‘ಪನ್ನಾಸ’ ಭೂಮಿಯನ್ನು ದಾನ ಮಾಡಿದನು.[11] ಆಂಧ್ರಪ್ರದೇಶದ ಕಡಮರ ಕಾಲವದಲ್ಲಿ ನಿರ್ಮಿತವಾದ ಶಿವನಂದೀಶ್ವರ ದೇವಾಲಯವು ಪ್ರಾಯಶಃ ಈ ಅರಸನದೇ.[12] ಹೀಗೆ ಪ್ರಾರಂಭದ ಚಲುಕ್ಯ ಅರಸರು ವ್ಯಕ್ತಿಗತವಾಗಿ ವೈಷ್ಣವರಾಗಿದ್ದರೂ ಶೈವ ಧರ್ಮವನ್ನು ಪ್ರೋರೀತಿ ಪ್ರಶಂಸನೀಯವಾದುದು. ಒಂದನೆಯ ವಿಕ್ರಮಾದಿತ್ಯನು ತನ್ನ ಆಳ್ವಿಕೆಯ ೫ನೆಯ ವರ್ಷದಲ್ಲಿ ಶಿವಮಂಡಲ ದೀಕ್ಷೆಯನ್ನು ಸುದರ್ಶನಾಚಾರ್ಯನಿಂದ ಪಡೆದದ್ದು.[13] ಒಂದು ಮಹತ್ವದ ಧಾರ್ಮಿಕ ತಿರುವು. ಅರಸನು ಈ ಸಂದರ್ಭದಲ್ಲಿ ಗುರುದಕ್ಷಿಣೆಯಾಗಿ ಇಪರುಂಕಲ ಎಂಬ ಗ್ರಾಮವನ್ನು ನೀಡಿದನು. ಶೀಲಾದಿತ್ಯನ ನವಸಾರಿ ತಾಮ್ರಶಾಸನವು ವಿಕ್ರಮಾದಿತ್ಯನನ್ನು ಮಹೇಶ್ವರನೆಂದು ವರ್ಣಿಸಿದೆ.[14] ಈ ಅರಸನು ಶ್ರೀ ನಾಗವರ್ಧನನ ಪಾದಾನುಧ್ಯಾತನೆಂದು ಈ ನವಸಾರಿ ಶಾಸನವು ಬಣ್ಣಿಸಿದೆ.[15] ಶ್ರೀ ಮೇಘಾಚಾರ್ಯ ಎಂಬಾತನು ಈತನ ಸ್ವಕೀಯ ಗುರುವಾಗಿದ್ದನು.[16] ಕಡಮರ ಕಾಲವದಲ್ಲಿಯ ಶಿವನಂದೀಶ್ವರ ದೇವಾಲಯದ ಮುಂದಿರುವ ಶಿಲಾಶಾಸನವು ವಿಕ್ರಮಾದಿತ್ಯನು ಅನೇಕ ಬ್ರಾಹ್ಮಣರಿಗೆ ಭೂದಾನ ನೀಡಿದ ಸಂಗತಿಯು ತಿಳಿಸುತ್ತದೆ.

ವಿನಯಾದಿತ್ಯನ ಮಗನಾದ ಲೋಕಾದಿತ್ಯ ಏಳಾ ಅರಸನು ತನ್ನ ತಾಯಿಯ ಗೌರವಾರ್ಥವಾಗಿ ಆಲಂಪುರದಲ್ಲಿಯ ಸ್ವರ್ಗ ಬ್ರಹ್ಮ ದೇವಾಲಯವನ್ನು ಕಟ್ಟಿಸಿದನು. ಲೋಕಾದಿತ್ಯನ ಅರಸಿ ಮಹಾದೇವಿಯು ಈ ದೇವಾಲಯಕ್ಕೆ ಕಲ್‌ಕೊಲ, ಕುರಿಂಬಳ ಮತ್ತು ಕಲಲೆ ಗ್ರಾಮಗಳನ್ನು ದತ್ತಿಯಾಗಿ ಬಿಟ್ಟುಕೊಟ್ಟಳು.[17] ಅರ್ಧನಾರೀಶ್ವರ, ಕಾರ್ತಿಕೇಯ, ಗಣೇಶ, ಮಹಿಷಾಸುರಮರ್ದಿನಿ, ನಟರಾಜ, ತ್ರಿಪುರಾಂತಕ, ಲಿಂಗೋದ್ಭವ ಮೂರ್ತಿ ಮೊದಲಾದವುಗಳು ಈ ದೇವಾಲಯವನ್ನು ಶ್ರೀಮಂತಗೊಳಿಸಿವೆ. ಮಹಾನಂದಿಯ ಮಹಾನಂದೀಶ್ವರ ದೇವಾಲಯವು ಕೂಡ ವಿನಯಾದಿತ್ಯನ ಕಾಲದಲ್ಲಿ ನಿರ್ಮಿತವಾದುದು.[18]

ವಿಜಯಾದಿತ್ಯನ ಕಾಲದಲ್ಲಿ ಶೈವಧರ್ಮಕ್ಕೆ ಇನ್ನೂ ಹೆಚ್ಚಿನ ರಾಜ ಪೋಷಣೆ ದೊರೆಯಿತು. ಈತನ ತಾಯಿ ವಿನಯವತಿಯು ಜಂಬುಲಿಂಗ ದೇವಾಲಯವನ್ನು ಕಟ್ಟಿಸಿದುದು ಸರ್ವವಿದಿತ, ಬ್ರಹ್ಮ, ವಿಷ್ಣು, ಮಹೇಶ್ವರರ ಈ ದೇವಾಲಯದ ಪ್ರಧಾನ ಗರ್ಭಗೃಹದಲ್ಲಿ ಶಿವಲಿಂಗವಿದೆ. ವಿಜಯಾದಿತ್ಯನು. ಪಟ್ಟದಕಲ್ಲಿನಲ್ಲಿ ವಿಜಯೇಶ್ವರ (ಸಂಗಮೇಶ್ವರ) ದೇವಾಲಯವನ್ನು ನಿರ್ಮಿಸಿದನು.[19]  ಇದರ ಉತ್ತರಕ್ಕಿರುವ ಗಳಗನಾಥ ಗುಡಿ ಕೂಡ ವಿಜಯಾದಿತ್ಯನ ಕಾಲದಲ್ಲಿ ನಿರ್ಮಿತವಾಗಿರಬಹುದು.[20]  ವಿಜಯಾದಿತ್ಯನ ಪ್ರಾಣವಲ್ಲಭೆಯಾಗಿದ್ದ ವಿನಾಪೊಟಿಯು ಮಕುಟೇಶ್ವರನಾಥನಿಗೆ ಹಿರಣ್ಯಗರ್ಭದಾನವನ್ನು ಮಾಡಿ ಬೆಳ್ಳಿಯ ಕೊಡೆ, ಮಂಗಲವೆಂಬ (ಮಂಗಳೂರು)[21] ಗ್ರಾಮದಲ್ಲಿ ೮೦೦ ಮತ್ತರ ಭೂಮಿಯನ್ನು ದಾನವಾಗಿ ನೀಡಿರುವ ಸಂಗತಿಯು ಆಕೆಯ ಶಿವಭಕ್ತಿಯ ಕುರುಹು ಆಗಿದೆ.[22]

ಇಮ್ಮಡಿ ವಿಕ್ರಮಾದಿತ್ಯನ ಅರಸಿಯರಾದ ಲೋಕಮಹಾದೇವಿ ಮತ್ತು ತ್ರೈಲೋಕ್ಯ ಮಹಾದೇವಿಯರು ಕ್ರಮವಾಗಿ ಲೋಕೇಶ್ವರ (ವಿರೂಪಾಕ್ಷ) ಹಾಗೂ ತ್ರೈಲೋಕೇಶ್ವರ (ಮಲ್ಲಿಕಾರ್ಜುನ) ದೇವಾಲಯಗಳನ್ನು ಕಟ್ಟಿಸಿದರು.[23] ಇವೆರಡೂ ಮಂದಿರಗಳು ಚಲುಕ್ಯ ವಾಸ್ತುಕಲೆಯ ಔನ್ನತ್ಯವನ್ನು ಪ್ರದರ್ಶಿಸುತ್ತವೆ. ಇಮ್ಮಡಿ ವಿಕ್ರಮಾದಿತ್ಯನ ಶಿವಭಕ್ತಿ ಪ್ರಶಂಸನೀಯವಾದುದು. ಕಂಚಿ ಪಟ್ಟಣವನ್ನು ವಶಪಡಿಸಿಕೊಂಡ ನಂತರ ಅಲ್ಲಿಯ ರಾಜಸಿಂಹೇಶ್ವರ ದೇವಾಲಯಕ್ಕೆ ಸಂಪತ್ತನ್ನು ಬಿಟ್ಟುಕೊಟ್ಟನು.[24]

ಇಮ್ಮಡಿ ಕೀರ್ತಿವರ್ಮನ ಕಾಲದಲ್ಲಿ ಉತ್ತರದ ಗಂಗಾ ಪ್ರದೇಶದ ಮೃಗಥಣಿಕಾಹಾರದಿಂದ ಬಂದ ಜ್ಞಾನ ಶಿವಾಚಾರ್ಯನು ಪಟ್ಟದಕಲ್ಲಿನ ವಿಜಯೇಶ್ವರ, ಲೋಕೇಶ್ವರ ತ್ರೈಲೋಕೇಶ್ವರ ಗುಡಿಗಳ ನಡುವೆ ತ್ರಿಶೂಲ ಮುದ್ರಾಂಕಿತ ಶಿಲಾಸ್ತಂಭವನ್ನು ನಿಲ್ಲಿಸಿದನು. ಈತನು ತನ್ನ ತಂದೆ-ತಾಯಿಗಳಿಗೆ ಮತ್ತು ತನಗೆ ಪುಣ್ಯಲಭಿಸಲೆಂದು ವಿಜಯೇಶ್ವರ ಗುಡಿಯ ಪೂಜಾ ಕಾರ್ಯಗಳಿಗಾಗಿ ಅರಹುಣಸೆ ಗ್ರಾಮದ ಭೂಮಿಯನ್ನು ದಾನ ಮಾಡಿದನು.[25]

ಶೈವಧರ್ಮದಲ್ಲಿ ಪಾಶುಪತ, ಲಕುಲೀಶ (ಲಾಕುಳ), ಕಾಳಾಮುಖ, ಕಾಪಾಲಿಕ ಮೊದಲಾದ ಪಂಥಗಳಿದ್ದವು. ಈ ಎಲ್ಲ ಪಂಥದ ಭಕ್ತರು ಶಿವನನ್ನೇ ಪರಮದೈವವೆಂದು ಪೂಜಿಸಿದರು. ಗುರುಪರಂಪರೆ ಮತ್ತು ಧಾರ್ಮಿಕ ಪದ್ಧತಿಗಳನ್ನು ಅನುಸರಿಸಿ ಈ ಪಂಥಗಳು ಕಾಣಸಿಕೊಂಡಿವೆ ಎಂದು ಹೇಳಬಹುದು. ಇವುಗಳಲ್ಲಿ ವ್ಯತ್ಯಾಸಗಳನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ.

ಪಾಶುಪತ ಪಂಥದ ಸಿದ್ಧಾಂತದ ಮೇರೆಗೆ ಪ್ರತಿಯೊಬ್ಬ ಜೀವಿಯೂ ಪಶು. ಪಶುಗಳ ಒಡೆಯನೇ ಪಶುಪತಿ. ಪಾಶ ವಿಮೋಚನೆಗಾಗಿ ಪಶುಪತಿಗೆ ಶರಣಾಗಬೇಕು ಮತ್ತು ಪಾಶುಪತ ವ್ರತವನ್ನು[26] ಪಾಲಿಸಬೇಕು. ಈ ಪಂಥದ ಅನುಯಾಯಿಗಳು ಮಹೇಶ್ವರರೆನಿಸಿದರು.[27] ಹ್ಯೂಯೆನ್‌ತ್ಸಾಂಗನು ಹನ್ನೆರಡು ಬಾರಿ ಪಾಶುಪತರನ್ನು ತನ್ನ ಪ್ರವಾಸ ಕಥನದಲ್ಲಿ ಪ್ರಸ್ತಾಪಿಸಿದ್ದಾನೆ. ಪಾಶುಪತರು ಪೂಜಿಸುತ್ತಿದ್ದ ಮಹೇಶ್ವರ ಗುಡಿಗಳ ಬಗ್ಗೆ ಉಲ್ಲೇಖಿಸಿದ್ದಾನೆ.[28] ಒಂದನೆಯ ವಿಕ್ರಮಾದಿತ್ಯನನ್ನು ಶೀಲಾದಿತ್ಯನ ನವಸಾರಿ ತಾಮ್ರಶಾಸನವು ಮಹೇಶ್ವರನೆಂದು ಕರೆದಿದೆ.[29] ಶಿವನಿಂದ ಅರ್ಜುನನು ಪಾಶುಪತಾಸ್ತ್ರವನ್ನು ಪಡೆದ ಕತೆ ಪಟ್ಟದಕಲ್ಲಿನ ವಿರೂಪಾಕ್ಷ ಗುಡಿ ಸಭಾಮಂಟಪ ಕಂಬವೊಂದರ ಮೇಲೆ ಚಿತ್ರಿತವಾಗಿದೆ. ಇದು ಪಾಶುಪತ ಪಂಥದ ಪ್ರಭಾವವನ್ನು ಸೂಚಿಸುತ್ತದೆ.

ಪಾಶುಪತ ವ್ರತಾಚರಣೆಯಿಂದಾಗಿ ಶೈವರಲ್ಲಿ ಎರಡು ಗುಂಪುಗಳು ಕಾಣಿಸಿಕೊಂಡವು. ಕೂರ್ಮ ಪುರಾಣವು ಶ್ರೌತ ಪಾಶುಪತರು ಮತ್ತು ಅಶ್ರೌತ ಪಾಶುಪತರು ಎಂದು ವರ್ಗೀಕರಿಸುತ್ತದೆ.[30] ಬ್ರಾಹ್ಮಣರು ಶ್ರೌತ ಪಾಶುಪತವನ್ನು ಅನುಸರಿಸಿದಂತೆ ತೋರುತ್ತದೆ. ಬ್ರಾಹ್ಮಣೇತರ ಶಿವಭಕ್ತರು ಅಶ್ರೌತ ಪಾಶುಪತರೆನಿಸಿರಬೇಕು. ನಂತರ ಲಕುಲೀಶ ಪಾಶುಪತ ಪಂಥವು ಕಾಣಿಸಿಕೊಂಡಾಗ ಇವರು ಅದನ್ನು ಸ್ವೀಕರಿಸಿದಂತೆ ತೋರುತ್ತದೆ.[31] ಈ ಲಕುಲೀಶ ಸಂಪ್ರದಾಯದವರು ಲಾಕುಳರೆನಿಸಿದರು.

ಲಕುಲೀಶನ ವಿಗ್ರಹಗಳು ಬಾದಾಮಿ ಹಾಗೂ ಅದರ ಪರಿಸರದಲ್ಲಿ ದೊರೆತಿವೆ. ಲಕುಲೀಶನದು ನಗ್ನ ಶಿಲ್ಪ. ಈತನಿಗೆ ಎರಡು ಕೈಗಳು. ಇದರಿಂದ ಬುದ್ಧ, ಮಹಾವೀರರಂತೆ ಇವನು ಕೂಡ ಐತಿಹಾಸಿಕ ವ್ಯಕ್ತಿ ಎಂಬುದು ಸ್ಪಷ್ಟ. ಸಾಮಾನ್ಯವಾಗಿ ಈತನ ಎಡಗೈಯಲ್ಲಿ ದಂಡವಿರುತ್ತದೆ.[32] ಕೈಯಲ್ಲಿ ಲಕುಲ (=ಲಗುಡ) ಇರುವುದರಿಂದ ಈ ಹೆಸರು ಪ್ರಾಪ್ತವಾಗಿದೆ. ಎರಡನೆಯ ಗುಹಾಲಯದ ಆರನೆಯ ಕಂಬದ ಮೇಲೆ ಪಶ್ಚಿಮ ಬದಿಯಲ್ಲಿ ಲಕುಲೀಶನ ಶಿಲ್ಪವಿದೆ. ಲಕುಲೀಶನು ತನ್ನ ನಾಲ್ವರು ಶಿಷ್ಯರೊಡನೆ ಕುಳಿತಿರುವುದು ಈ ಶಿಲ್ಪದ ಇನ್ನೊಂದು ವಿಶೇಷತೆ. ಬಾದಾಮಿ ಪರಿಸರದಲ್ಲಿ ಇಂತಹ ಶಿಲ್ಪ ಇನ್ನೊಂದಿಲ್ಲ. ಭೂತನಾಥ ಗುಡಿಯ ಉತ್ತರಕ್ಕೆ ಪ್ರತ್ಯೇಕವಾಗಿ ದಕ್ಷಿಣಕ್ಕೆ ಮುಖ ಮಾಡಿಕೊಂಡು ನಿಂತಿರುವ ಗುಡಿಯು ಲಕುಲೀಶನದೆಂದು ನಂಬಲಾಗಿದೆ.[33] ಗರ್ಭಗುಡಿಯಲ್ಲಿಯ ನಗ್ನಶಿಲ್ಪದ ಎಡಗೈ ತುಂಡಾಗಿ ಹೋಗಿದೆ. ಲಗುಡ ಹಿಡಿದಿರುವಂತೆ ಸೂಚನೆಗಳಿಲ್ಲ. ಬಲಗೈಯಲ್ಲಿ ಹಿಡಿದ ವಸ್ತು ಮಾದಲ ಹಣ್ಣಿನಂತಾಗಲಿ, ತೆಂಗಿನಕಾಯಿಯಂತಾಗಲಿ ಕಾಣುವುದಿಲ್ಲ. ಹೊರಗೆ ಚಾಚಿಕೊಂಡ ದೊಡ್ಡ ಕಣ್ಣುಗುಡ್ಡೆಗಳು, ಕೋರೆಹಲ್ಲುಗಳಿಂದಾಗಿ ಮುಖವು ಭೀಕರವಾಗಿದೆ. ಈ ಕಾರಣಗಳಿಂದಾಗಿ ಅದು ಲಕುಲೀಶನ ಶಿಲ್ಪವೆಂದು ಒಪ್ಪುವುದು ಕಷ್ಟ. ಮಹಾಕೂಟದ (ಸಂಗಮೇಶ್ವರ) ದೇವಾಲಯದ ಹೊರಗೋಡೆಯ ಮೇಲೆ ಲಕುಲೀಶನು ಊರ್ಧ್ವರೇತೇಶ್ವರನಾಗಿ ನಿಂತಿದ್ದಾನೆ. ಇಂತಹ ಮರು ಶಿಲ್ಪಗಳನ್ನು ಮಹಾಕೂಟ ಕ್ಷೇತ್ರದಲ್ಲಿ ಕಾಣಬಹುದು. ಸಿದ್ಧನಕೊಳ್ಳದ ಚಲುಕ್ಯ ದೇವಾಲಯದ ಸುಕನಾಸಿಯ ಮೇಲೆ ಲಗುಡ. ನಾಗ ಹಿಡಿದ ಲಕುಲೀಶನು ನಿಂತಿದ್ದು ಅದು ಲಕುಲೀಶನ ಗುಡಿ ಎಂದು ತಿಳಿಯಬರುತ್ತದೆ. ಪಟ್ಟದಕಲ್ಲಿನ ವಿರೂಪಾಕ್ಷ ಮತ್ತು ಮಲ್ಲಿಕಾರ್ಜುನ ಗುಡಿಗಳ ಗೋಡೆಗಳ ಮೇಲೆ ನಿಂತಿರುವ ಲಕುಲೀಶನಿದ್ದಾನೆ. ಎಲ್ಲೋರಾದ ಕೈಲಾಸ ದೇವಾಲಯದಲ್ಲಿ ಕೂಡ ಲಕುಲೀಶನ ವಿಗ್ರಹಗಳಿರುವುದು ಗಮನಾರ್ಹ ಸಂಗತಿ. ಇದರಿಂದ ಲಾಕುಳ ಪಂಥವು ವ್ಯಾಪಕವಾಗಿತ್ತೆಂದು, ಜನಪ್ರಿಯವಾಗಿತ್ತೆಂದು ಕಾಣುತ್ತದೆ.

ಒಂದನೆಯ ವಿಕ್ರಮಾದಿತ್ಯನ ಶಿವಮಂಡಲ ದೀಕ್ಷೆಯನ್ನು ದಾಖಲಿಸಿದ ಅಮುದಲಪಾಡ ಶಾಸನದಲ್ಲಿ[34] ಕಂಡುಬರುವ ಬ್ರಾಹ್ಮಣರ ಹೆಸರುಗಳು ಲಕ್ಷ್ಯಿಸುವಂತಿವೆ. ರುದ್ರ ಶಿವಾಚಾರ್ಯ, ಗಾಯತ್ರೀ ಶಿವ, ಶಿವಸ್ವಾಮಿ, ಪರಮಶಿವ ಎಂಬೀ ಹೆಸರುಗಳಲ್ಲಿ ‘ಶಿವ’ ಪದವಿರುವುದು ಅವರು  ಶೈವ ಸಿದ್ಧಾಂತದ ಆಚಾರ್ಯರೆಂಬುದು ಸ್ಪಷ್ಟ. ಶೈವ ಸಿದ್ಧಾಂತದ ಪ್ರಕಾರ ಮೋಕ್ಷವನ್ನು ಜ್ಞಾನ ಮಾರ್ಗದಿಂದ ಪಡೆಯಲಾಗುವುದಿಲ್ಲ.[35] ಶಿವನ ಅನುಗ್ರಹವು ದೀಕ್ಷೆಯಿಂದ ಲಭಿಸುತ್ತದೆಯಾದ್ದರಿಂದ ಮೊದಲನೆಯ ವಿಕ್ರಮಾದಿತ್ಯನು ಶಿವಮಂಡಲ ದೀಕ್ಷೆಯನ್ನು ಪಡೆದನೆಂದು ತಿಳಿಯಬಹುದು. ಇಮ್ಮಡಿ ಕೀರ್ತಿವರ್ಮನ ಕಾಲದಲ್ಲಿ ಉತ್ತರದ ಗಂಗಾ ಪ್ರದೇಶದ ಮೃಗಥಣಿಕಾಹಾರದಿಂದ ಬಂದ ಜ್ಞಾನ ಶಿವಾಚಾರ್ಯನು ಪಟ್ಟದಕಲ್ಲಿನ ವಿಜಯೇಶ್ವರ ದೇವಾಲಯದಲ್ಲಿ ನೆಲೆಸಿದ್ದನು.[36] ಶಿವಾಚಾರ್ಯರು ಉತ್ತರದಿಂದ ಬಂದವರೆಂದು ತಿಳಿಯಲು ಇದು ಅನುವು ಮಾಡಿಕೊಡುತ್ತದೆ.

ಶೈವ ಶಾಖೆಗಳಲ್ಲಿ ಕಾಳಾಮುಖರ ಶಾಖೆಯೂ ಒಂದು. ಶಿಕ್ಷಣ ಪ್ರಸಾರದಲ್ಲಿ ಇವರ ಪಾತ್ರ ಗಣನೀಯವಾದುದು. ಕಾಳಾಮುಖರ ಅತ್ಯಂತ ಪ್ರಾಚೀನ ಪ್ರಸ್ತಾಪವು ರಾಷ್ಟ್ರಕೂಟ ದೊರೆ ಮೂರನೆಯ ಗೋವಿಂದನ ನಂದಿ ತಾಮ್ರಶಾಸನದಲ್ಲಿ ಕಾಣಿಸಿಕೊಳ್ಳುತ್ತದೆ.[37] ನಂದಿ ದೇವಾಲಯದ ಈಶ್ವರದಾಸನೆಂಬ ಕಾಳಾಮುಖನಿಗೆ ರಾಜನು ಗ್ರಾಮದಾನ ಮಾಡಿದುದು ಈ ಶಾಸನದ ಪಠ್ಯವಾಗಿದೆ. ಮಹಾಕೂಟ ಗುಡಿ ಗುಂಪಿನ ಪ್ರವೇಶ ದ್ವಾರವು ಪ್ರಾಕಾರದ ಹೊರಗೆ ಆಗ್ನೇಯ ಮೂಲೆಯಲ್ಲಿದ್ದು ಅದರ ದಕ್ಷಿಣ ಗೋಡೆಯ ಮೇಲಿನ ಬೃಹದಾಕಾರದ ವಿಗ್ರಹಗಳು ಭಯಾನಕವಾಗಿವೆ. ಇವನ್ನು ರಕ್ಕಸ ಸಹೋದರರಾದ ವಾತಾಪಿ, ಇಲ್ವಲನ ಮೂರ್ತಿಗಳೆಂದು ಹೇಳುವುದುಂಟು. ಆದರೆ ಅವುಗಳಲ್ಲಿ ಒಂದು ಸ್ತ್ರೀ ವಿಗ್ರಹವೆಂಬುದು ಸ್ತನಗಳಿಂದ ಸ್ಪಷ್ಟವಿದೆ. ಇವು ಕಾಳಾಮುಖ ಭಕ್ತರ ವಿಗ್ರಹಗಳಿರಬಹುದೆಂಬ ಊಹೆ ಆರ್.ಎಸ್.ಪಂಚಮುಖಿ ಅವರದು.[38] ಇದು ಸತ್ಯವಾದಲ್ಲಿ ಕರ್ನಾಟಕದಲ್ಲಿ ಕಾಳಾಮುಖರ ಇತಿಹಾಸವು ಆರನೆಯ ಶತಮಾನದಷ್ಟು ಹಿಂದಕ್ಕೆ ಹೋಗುತ್ತದೆ. ಆದರೆ ಇವು ಅಸ್ಥಿಪಂಜರದಂತಿರುವುದರಿಂದ ಪ್ರೇತಗಳಿರಬಹುದು.

ಕಾಪಾಲಿಕ ಎಂಬುದು ಇನ್ನೊಂದು ಪ್ರಕಾರದ ಶೈವ ಪಂಥ. ಮೈತ್ರಿ ಉಪನಿಷತ್ತಿನಲ್ಲಿ ಕಾಪಾಲಿಕರನ್ನು ಕಳ್ಳರೆಂದು ಕರೆಯಲಾಗಿದೆ.[39] ಕಾಪಾಲಿಕರದು ವಾಮಾಚಾರ ಪದ್ಧತಿ. ಶಿವನನ್ನು ಆರಾಧಿಸಿ ಕೈಲಾಸ ಸೇರಿ ಅಲ್ಲಿ ಚೆಲುವೆಯರೊಂದಿಗೆ ಆನಂದಿಸುವುದು ಇವರ ಗುರಿ.[40] ಹ್ಯೂಯೆನ್‌ತ್ಸಾಂಗನು ತನ್ನ ಪ್ರವಾಸ ಕಥನದಲ್ಲಿ ಕಾಪಾಲಿಕರ ಬಗ್ಗೆ ವರದಿ ಮಾಡಿದ್ದಾನೆ. ಇವರು ಕಲ್ಲಾಸರೆಯಲ್ಲಿ ವಾಸವಾಗುತ್ತಿದ್ದರೆಂದೂ ಸ್ಮಶಾನದಲ್ಲಿ ಗೋರಿಗಳ ಸುತ್ತ ಅಲೆಯುತ್ತಿದ್ದರೆಂದೂ ದಾಖಲಿಸಿದ್ದಾನೆ.[41] ಪಲ್ಲವ ದೊರೆ ಮಹೇಂದ್ರವರ್ಮನು ತನ್ನ ಕೃತಿ ಮತ್ತ ವಿಲಾಸ ಪ್ರಹಸನದಲ್ಲಿ ಕಾಪಾಲಿಕನು ಪವಿತ್ರನಾದ ಶಿವಮಂತ್ರವನ್ನು ಜಪಿಸಿ ವೇಶ್ಯೆಯೊಂದಿಗೆ ಸುರಾಪಾನಕ್ಕೆ ಹೋಗುವುದನ್ನು ವಿಡಂಬನಾತ್ಮಕವಾಗಿ ಚಿತ್ರಿಸಿದ್ದಾನೆ. ಬಾಣನ ಹರ್ಷಚರಿತದಲ್ಲಿ ಕಾಪಾಲಿಕ ಭೈರವಾಚಾರ್ಯನ ಬಣ್ಣನೆಯಿದೆ.[42]

ಮೇಲೆ ಪ್ರಸ್ತಾಪಿಸಿಲಾದ ಮಹಾಕೂಟದ ಭೂತಾಕಾರದ ದ್ವಾರಪಾಲಕರ ವಿಗ್ರಹಗಳು ಕಾಪಾಲಿಕರ ಶೈವ ಪ್ರಭಾವವನ್ನು ಸೂಚಿಸುತ್ತವೆ. ಎಂಬ ಅಭಿಪ್ರಾಯವೂ ಇದೆ. ಈ ದ್ವಾರಪಾಲಕರಲ್ಲಿ ಒಂದು ಸ್ತ್ರೀ ಪ್ರತಿಮೆಯಾಗಿರುವುದನ್ನು ಹಿಂದೆ ಗಮನಿಸಿದೆವು. ಕಥಾಸರಿತ್ಸಾಗರದಲ್ಲಿ ಕಾಪಾಲಿನಿಯರ ಕತೆಗಳಿವೆ.[43] ಪ್ರಸ್ತುತ ವಿಗ್ರಹಗಳು ಕಾಪಾಲಿಕ. ಕಾಪಾಲಿನಿಯರವು ಎಂದು ತರ್ಕಿಸಲೂ ಅವಕಾಶವಿದೆ.

ಚಲುಕ್ಯರ ನಂತರ ರಾಜಕೀಯ ಮಹತ್ವವನ್ನು ಕಳೆದುಕೊಂಡ ಬಾದಾಮಿಯು ರಾಜರ ಪ್ರೋಧಾರ್ಮಿಕ ಹಿನ್ನಡೆಯನ್ನು ಅನುಭವಿಸಿತು. ಎಲ್ಲೋರಾದ ಕಲ್ಬೆಟ್ಟದಂತೆ ಬಾದಾಮಿಯ ಬಂಡೆಗಲ್ಲು ರಾಷ್ಟ್ರಕೂಟರನ್ನು ಆಕರ್ಷಿಸಲಿಲ್ಲ. ಆದರೆ ಪ್ರಜಾ ಸಮುದಾಯದಲ್ಲಿ ಎಂದಿನಂತೆ ಶಿವಾರಾಧನೆ ಸಾಗಿದ್ದಿತು. ಭೂತನಾಥ ಗುಡಿಯ ಪರಿಸರದಲ್ಲಿ ಮೂರು ಪುಟ್ಟ ರಾಚನಿಕ ಮಂದಿರಗಳು ಈ ಅವಧಿಯಲ್ಲಿ ತಲೆ ಎತ್ತಿದವು. ೯ನೆಯ ಶತಮಾನದ ಶಾಸನವೊಂದು ಶ್ರೀಪೈಂಗರ ಶ್ರೀಧರನು ಭೂತನಾಥ ದೇವರಿಗೆ ಎಂಟು ಮತ್ತರ ಭೂಮಿಯನ್ನು ದಾನ ಮಾಡಿದುದನ್ನು ತಿಳಿಸುತ್ತದೆ.[44] ಬನಶಂಕರಿ ದೇವಾಲಯದ ಪ್ರಾಕಾರದಲ್ಲಿರುವ ಕೇದಾರೇಶ್ವರ ದೇವಾಲಯವು ರಾಷ್ಟ್ರಕೂಟರ ವಾಸ್ತು ಮಾದರಿಯಲ್ಲಿದೆ. ಈ ಗುಡಿಯ ಅರೆಗಂಬದ ಮೇಲೆ ಶಾಸನದಲ್ಲಿ ರಾಷ್ಟ್ರಕೂಟ ಮನೆತನದ ಮಹಾಮಂಡಳೇಶ್ವರ ಭೀಮದೇವನ ಸೇವಕ ಸೇನಬೋವ ನಾಗವರ್ಮನ ಉಲ್ಲೇಖವಿದೆ.[45] ಕ್ರಿ.ಶ.೯೩೪ರ ಶಾಸನವೊಂದು ಬಪ್ಪುವರಸನೆಂಬ ಸಾಮಂತನು ಮಹಾಕೂಟಕ್ಕೆ ನಂದಿಕೇಶ್ವರ ಮತ್ತು ನೆಲ್ಲುಗೆ (ನೆಲುವಿಗಿ) ಗ್ರಾಮಗಳನ್ನು ನೀಡಿದುದನ್ನು ತಿಳಿಸುತ್ತದೆ.[46] ಬಾದಾಮಿಯ ಪುರಾತತ್ವ ವಸ್ತು ಸಂಗ್ರಹಾಲಯದ ಪ್ರಾಕಾರದೊಳಗಿನ ಪಶ್ಚಿಮ ಬಂಡೆಯ ಪಶ್ಚಿಮ ಬದಿಯಲ್ಲಿ ಪುಟ್ಟ ಕೋಣೆಯೊಂದು ಕೊರೆಯಲ್ಪಟ್ಟಿದೆ. ಈ ಗುಹಾ ನಿರ್ಮಾಣವು ಅಪೂರ್ಣವಾಗಿದ್ದು ಅದರ ಎಡ ಬಲಗಳಲ್ಲಿ ಕ್ರಮವಾಗಿ ಮಹಿಷಮರ್ದಿನಿ ಮತ್ತು ಗಣೇಶನ ವಿಗ್ರಹಗಳಿವೆ. ಈ ಶಿಲ್ಪಗಳು ಬಾಹ್ಯಗೋಡೆಯಲ್ಲಿ ಕಾಣಿಸಿಕೊಳ್ಳುವುದು ರಾಷ್ಟ್ರಕೂಟರ ಶಿಲ್ಪವಿಶೇಷವೆನಿಸಿದೆ.[47] ಇದರಿಂದ ಈ ಪುಟ್ಟ ಗುಹಾಲಯವು ರಾಷ್ಟ್ರಕೂಟರ ಶಿವಾಲಯವೆನ್ನಬಹುದು. ಅಗಸ್ತ್ಯ ತೀರ್ಥದ ಪೂರ್ವದ ದಂಡೆಯ ಮೇಲೆ ಪ್ರಧಾನ ಭೂತನಾಥ ಗುಡಿಯ ಉತ್ತರಕ್ಕೆ ಇರುವ ಚಿಕ್ಕ ರಾಚನಿಕ ಮಂದಿರಗಳು ರಾಷ್ಟ್ರಕೂಟರ ಕಾಲದ ಶಿವಾಲಯಗಳು. ಶಿವ ದೇವಾಲಯಗಳಲ್ಲಿ ರಂಗಸೇವೆ ಸಲ್ಲುತ್ತಿತ್ತು. ರಾಷ್ಟ್ರಕೂಟ ಕಲಿಬಲ್ಲಹನು ರಾಜ್ಯವಾಳುತ್ತಿದ್ದಾಗ ಬದಿಪೊಡ್ಡೆಯೆಂಬವಳು ದಾನಿಯಾಗಿದ್ದಳು. ಇವರು ಪಟ್ಟದಕಲ್ಲಿನ ಲೋಕ ಮಹಾದೇವಿಯರ ಸೂಳೆ ಗೋಯಿನ್ದ ಪೊಡ್ಡಿಯ ಮಗಳು. ತಾಯಿ ಮತ್ತು ಮಗಳು ಲೋಕೇಶ್ವರ (ವಿರೂಪಾಕ್ಷ) ದೇವಾಲಯದ ರಂಗಸೇವೆ ಮಾಡುತ್ತಿದ್ದರೆಂದು ತಿಳಿಯ ಬಹುದು.[48] ಬಾದಾಮಿಯ ಪಂಚಲಿಂಗಫಡಿಯ ಶಾಸನವು ಮಾದಿದೇವನೆಂಬಾತನು ಸೋಮೇಶ್ವರ ದೇವರ ಭಕ್ತನಾಗಿದ್ದನೆಂದು ಸ್ತುತಿಸಿದೆ.[49] ಶ್ರೀ ಕರಿಯ ಸೋಡಿಯಮ್ಮನ ಭೂತೇಶ್ವರನ ಭಕ್ತನಾಗಿದ್ದನು.[50]

ಭೂತನಾಥ ದೇವಾಲಯವು ಚಲುಕ್ಯರ ಕಾಲದ ಶೈವ ದೇವಾಲಯ.[51] ಇದರ ಗರ್ಭಗೃಹದಲ್ಲಿಯ ಶಿವಲಿಂಗವು ಅಸ್ತವ್ಯಸ್ತಗೊಂಡಿದೆ. ಗರ್ಭಗೃಹ, ಸಭಾಮಂಟಪದ ಎಡಬಲಗಳಲ್ಲಿಯ ಬೃಹದಾಕಾರದ ದ್ವಾರಪಾಲಕರ ಶಿಲ್ಪಗಳನ್ನು ಉದ್ದೇಶಪೂರ್ವಕವಾಗಿ ಒಡೆದು ಹಾಕಿ ಅರೆಗಂಬದ ಮೇಲ್ಮೈಗೆ ಸಮಗೊಳಿಸಲಾಗಿದೆ. ಇದನ್ನು ಗಮನಿಸಿದ ಕಜಿನ್ಸರು ಅದು ಮೂಲತಃ ವೈಷ್ಣವ ದೇವಾಲಯವಾಗಿತ್ತೆಂದೂ ನಂತರ ಜೈನರಿಂದ ತುಸು ಮಾರ್ಪಾಟುಗೊಂಡು ಕೊನೆಗೆ ಶೈವರಿಂದ ಶಿವಾಲಯವಾಯಿತೆಂದು ತರ್ಕಿಸಿದ್ದಾರೆ.[52] ಆದರೆ ಚಲುಕ್ಯರ ಈ ಶಿವಾಲಯವು ಪ್ರಾಯಶಃ ರಾಷ್ಟ್ರಕೂಟರ ಕಾಲದಲ್ಲಿ ಭೂತನಾಥ ದೇವಾಲಯವಾಗಿ ಪರಿವರ್ತನೆಗೊಂಡಂತೆ ತೋರುತ್ತದೆ. ಈ ಗುಡಿಯ ಉತ್ತರ ಗೋಡೆಯ ಮೇಲಿನ ಸುಮಾರು ೯ನೆಯ ಶತಮಾನದ ಶಾಸನವು ಭೂತೇಶ್ವರ ಭಟಾರನಿಗೆ ಭೂದಾನ ಮಾಡಿದ ಸಂಗತಿಯನ್ನು ದಾಖಲಿಸಿದೆ.[53] ಆದ್ದರಿಂದ ಆ ದೇವಾಲಯವು ಶಾಸನದಲ್ಲಿ ಪ್ರಸ್ತಾಪಿಸಿದಂತೆ ಭೂತೇಶ್ವರನದೇ ಇರಬೇಕು. ಈ ಮಂದಿರವು ಮೊದಲು ವೈಷ್ಣವ ದೇವಾಲಯವಾಗಿರಲು ಸಾಧ್ಯವಿಲ್ಲ. ಏಕೆಂದರೆ ದ್ವಾರಪಾಲಕರನ್ನು ಕತ್ತರಿಸಿ ಹಾಕಲಾಗಿದ್ದರೂ ಅವರು ಹಿಡಿದಿದ್ದ ತ್ರಿಶೂಲ, ಸರ್ಪಗಳು ನಿಚ್ಚಳವಾಗಿ ಉಳಿದುಕೊಂಡಿವೆ. ಆದ್ದರಿಂದ ಮೂಲತಃ ಅದು ಶಿವಾಲಯ. ನಂತರ ಅದು ಭೂತನಾಥನ ಗುಡಿಯಾಗಿರುವಂತೆ ತೋರುತ್ತದೆ. ಅಂದರೆ ಪರಿವರ್ತನೆಯಾದುದು ಶೈವ ಧರ್ಮದ ಒಂದು ಶಾಖೆಯಿಂದ ಇನ್ನೊಂದು ಶಾಖೆಗೆ ಎಂದು ತಿಳಿಯಬಹುದು. ಕಜಿನ್ಸರು ಕುಲೀಶನೆಂದು ಗುರುತಿಸಿದ ಶಿಲ್ಪವೇ ಈ ಭೂತನಾಥನಾಗಿರುವ ಸಾಧ್ಯತೆ ಇದೆ. ಆ ಶಿಲ್ಪದ ಕೋರೆ ಹಲ್ಲುಗಳು, ಹೊರ ಚಾಚಿದ ದೊಡ್ಡದಾದ ಕಣ್ಣುಗುಡ್ಡೆಗಳು, ಹಿಂದೆ ಇಳಿಬಿಟ್ಟ ಜಡೆ, ಬಲಗೈಯಲ್ಲಿ ಇರುವ ಚಿಕ್ಕ ಕತ್ತಿ[54] ಇವು ಇದು ಭೂತನಾಥನ ಶಿಲ್ಪವೆಂದು ಸೂಚಿಸುತ್ತವೆ. ಭೂತನಾಥನ ಪೂಜೆಯಲ್ಲಿ ಕತ್ತಿ, ದೀಪಗಳಿಗೆ ವಿಶಿಷ್ಟ ಸ್ಥಾನವಿದೆ ಎಂಬುದಿಲ್ಲಿ ಗಮನಾರ್ಹ.[55] ಭೂತನಾಥ ಗುಡಿಯ ಸಭಾಮಂಟಪದ ಕಂಬವೊಂದರ ಶಾಸನದಲ್ಲಿ ಕರಿಯ ಸೋಡಿಯಮ್ಮನ ದೀವಿಗೆ ಪ್ರಸ್ತಾಪವಿದೆ.[56] ಈ ಮೇಲೆ ಹೇಳಲಾದ ಭೂತನಾಥನು ಈ ಗುಡಿಯಲ್ಲಿ ಪೂಜೆಗೊಂಡಿದ್ದರಿಂದ ಇದು ಭೂತನಾಥ ದೇವಾಲಯ ವಾಯಿತು. ಅದರ ಮುಂದಿರುವ ಜಲಾಶಯವು ಭೂತನಾಥ ಕೆರೆಯೆಂದೇ ಈಗಲೂ ಕರೆಯಲ್ಪಡುತ್ತದೆ.

ನಂತರ ಕಲ್ಯಾಣ ಚಾಲುಕ್ಯರ ಪುನಃ ಗುಡಿಯು ಪರಿವರ್ತನೆಗೆ ಒಳಗಾಯಿತೆಂದು ಕಾಣುತ್ತದೆ. ಗರ್ಭಗುಡಿಯಲ್ಲಿ ಪುನಃ ಶಿವಲಿಂಗದ ಸ್ಥಾಪನೆ ಮಾಡಲಾಗಿದೆ. ಈ ಪ್ರಕ್ರಿಯೆಯಲ್ಲಿ ಶಿವಲಿಂಗದ ಜೋಡಣೆ ಸರಿಯಾಗಿಲ್ಲ. ಆದ್ದರಿಂದ ನಂತರ ಶಿವಾಲಯವಾಯಿತೆಂಬ ಊಹೆ ಕಜಿನ್ಸರದು! ಶಿವಲಿಂಗವು ಪುನಃ ಪ್ರತಿಷ್ಠಾಪನೆಯಾಗುತ್ತಿರುವ ಸಂದರ್ಭದಲ್ಲಿ ದೇವಾಲಯದ ಮುಂಭಾಗದ ಕಕ್ಷಾಸನಗಳ ವಿಶಾಲ ಮಂಟಪವು ರಚಿತವಾಗಿರಬಹುದು. ಕಂಬಗಳ ವಿನ್ಯಾಸ ಹಾಗೂ ವಾಸ್ತು ರಚನೆ ಕಲ್ಯಾಣ ಚಾಲುಕ್ಯರ ಮಾದರಿಯದ್ದಾಗಿವೆ.

ಭೂತನಾಥ ಗುಡಿಯ ಭೂತೇಶ್ವರ ಶಿಲ್ಪವನ್ನು ಪ್ರತ್ಯೇಕವಾಗಿರುವ ಇನ್ನೊಂದು ರಾಷ್ಟ್ರಕೂಟ ಶಿಖರ ವಿನ್ಯಾಸದ ಗುಡಿಯಲ್ಲಿ ತಂದಿರಿಸಿ ಆ ನಂತರ ಅದರ ಸುತ್ತ ಪ್ರದಕ್ಷಿಣಾಪಥ, ಸಭಾಮಂಟಪಗಳನ್ನು ಜೋಡಿಸಲಾಗಿದೆ. ಚದುರಿ ಬಿದ್ದ ಕಂಬ, ತೊಲೆಗಳನ್ನು ಸಂಗ್ರಹಿಸಿ ಈ ಗುಡಿಯನ್ನು ಕಟ್ಟಲಾಗಿದೆ. ಸಭಾಮಂಟಪದ ಮಧ್ಯದಲ್ಲಿರುವ ನಾಲ್ಕು ದುಂಡು ಕಂಬಗಳು ಮಾತ್ರ ಜೋಡೆಣೆಗಾಗಿ ನಿರ್ಮಿಸಿದವುಗಳೆಂದು ತೋರುತ್ತದೆ. ಕಜಿನ್ಸರನ್ನು ಅನುಸರಿಸಿ ಇದನ್ನು ಲಕುಲೀಶನ ಗುಡಿ ಎಂದೇ ಕರೆಯಲಾಗುತ್ತದೆ.

ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಬಾದಾಮಿಯಲ್ಲಿ ಶೈವ ಧರ್ಮವು ಪ್ರೋಪಡೆಯಿತೆಂಬುದು ಶಾಸನಗಳಿಂದ ವಿದಿತವಾಗುತ್ತದೆ. ಕ್ರಿ.ಶ. ೧೦೩೩ರಲ್ಲಿ ಪೆಗ್ಗಡೆ ಕಂಚಿಯ ಚಾವಯ್ಯನು ಭೂತನಾಥ ಗುಡಿಯ ದಕ್ಷಿಣಕ್ಕಿರುವ ಅಗಸ್ತ್ಯ ಪುಷ್ಪಗಿರಿ(ಪಂಚಲಿಂಗಫಡಿ)ಯ ಮೇಲೆ ಶ್ರೀ ಮಲ್ಲಿಕಾರ್ಜುನ ದೇವರನ್ನು ಸ್ಥಾಪಿಸಿದನು.[57] ಭುವನೈಕ್ಯಮಲ್ಲನು ರಾಜ್ಯಭಾರ ಮಾಡುತ್ತಿರುವಾಗ ಮಾಂಡಲೀಕ ನೊಳಂಬ ಪಲ್ಲವ ಪೆರ್ಮ್ಮಾನಡಿ ಸಿಂಗಣದೇವನು ಪಟ್ಟದಕಲ್ಲ ಮೂಲಸ್ಥಾನ ಮಹಾದೇವರ ಉಪಭೋಗಕ್ಕೆ ದಾನ ಮಾಡಿದನು.[58] ಚಾವುಂಡ ಅರಸನ ಪಿರಿಯರಸಿ ಮತ್ತು ಅವರ ಮಗನಾದ ಆಚಿದೇವನು ಪಟ್ಟದಕಲ್ಲನ್ನು ಆಳುತ್ತಿರುವಾಗ ಶ್ರೀ ವಿಜಯೇಶ್ವರ (ಸಂಗಮೇಶ್ವರ) ದೇವಾಲಯಕ್ಕೆ  ಆ ದೇವರ ಅಂಗಭೋಗ, ರಂಗಭೋಗಕ್ಕೆ ಮುನ್ನೂರು ಮತ್ತರ ಭೂಮಿಯನ್ನು ದಾನ ಮಾಡಿದನು.[59] ಪಂಚಲಿಂಗ ಫಡಿಯ ಶಾಸನವು ಮಾದಿದೇವನೆಂಬಾತನು ಸೋಮೇಶ್ವರ ದೇವರ ಭಕ್ತನಾಗಿದ್ದನೆಂದು ಹೇಳಿದೆ.[60] ಪುರಾತತ್ವ ವಸ್ತುಸಂಗ್ರಹಾಲಯದ ಹತ್ತಿರ ಭೂತನಾಥ ಕೆರೆಯ ಉತ್ತರ ದಂಡೆಯ ಮೇಲಿರುವ ಮಲ್ಲಿಕಾರ್ಜುನ ಗುಡಿಯು ಕಲ್ಯಾಣ ಚಾಲುಕ್ಯರ ಕಾಲದ ಬೃಹತ್ ಮಂದಿರ. ಸುತ್ತಮುತ್ತಲಿನ ಕಟಗೇರಿ, ನೀಲಗುಂದ ಗ್ರಾಮಗಳಲ್ಲಿ ಈ ಅವಧಿಯ ಶಿವಾಲಯಗಳಿದ್ದು ಬಾದಾಮಿಯ ಪರಿಸರದಲ್ಲಿ ಶೈವಧರ್ಮವು ವ್ಯಾಪಕವಾಗಿ ಪ್ರಚಾರದಲ್ಲಿತ್ತೆಂದು ತಿಳಿಯಬಹುದು. ವಿಜಯನಗರ ಅರಸರ ಕಾಲದಲ್ಲಿ ನಿರ್ಮಿತವಾದ ಶಿವ ದೇವಾಲಯಗಳು ಬಾದಾಮಿಯಲ್ಲಿ ಕಂಡುಬಂದಿಲ್ಲ. ಹಿಂದೆ ಗಮನಿಸಿದಂತೆ ಈ ಅವಧಿಯಲ್ಲಿ ವೈಷ್ಣವ ಧರ್ಮವು ಮೇಲುಗೈ ಹೊಂದಿತ್ತು.[1]     ಪಾಡಿಗಾರ ಶ್ರೀನಿವಾಸ, ೧೯೯೦, ಪ್ರಾಚೀನ ಇತಿಹಾಸ ಮತ್ತು ಸಂಸ್ಕೃತಿ’, ಹಚ್ಚೇವು ಕನ್ನಡದ ದೀಪ, (ಸಂ.)ಗುರುಲಿಂಗ ಕಾಪಸೆ, ಎಚ್.ವಿ.ನಾಗೇಶ, ಹಿ.ಆರ್.ಹಿರೇಮಠ, ಕ.ಸಾ.ಪ. ಬೆಂಗಳೂರು, ಪು. ೨೩

[2]     EC, VII, ೧೭೬.

[3]     EC, VII, ೨೩೬.

[4]     Radcliffe Carol, ೧೯೮೧, Early Chalukya Sculpture, New York, p. ೭೨ ಮತ್ತು ಪಾಡಿಗಾರ ಶ್ರೀನಿವಾಸ ಕರ್ನಾಟಕ ಚರಿತ್ರೆ ಸಂ. ೧, ೧೯೯೭ ಹಂಪಿ, ಪು. ೪೭೮.

[5]     ರ್ಯಾಡಕ್ಲಿಫ್ ಕೆರೋಲರ ಮೇರೆಗೆ ಇದರ ಕಾಲ ಕ್ರಿ.ಶ. ೫೪೫‑೫೫೫ ನೋಡಿ : Early Chalukya Sculpture, p. ೫೦.

[6]     IA, XIX, pp. ೭-೨೦, ಈ ಸ್ತಂಭ ಶಾಸನವು ಈಗ ಬಿಜಾಪುರ ಪುರಾತತ್ತ್ವ ವಸ್ತು ಸಂಗ್ರಹಾಲಯದಲ್ಲಿದೆ.

[7]     Ramesh K.V. ೧೯೮೪ Op. Cit. p. ೬೮.

[8]     ಈಗಿರುವ ಕೆಂದೂರು ಹೊಸ ವಸಾಹತು. ಪ್ರಾಚೀನ ಕೆಂದೂರು ಕೆರೆಯ ಪೂರ್ವಕ್ಕೆ ಸುಮಾರು ೧ ಕಿ.ಮೀ. ಅಂತರದಲ್ಲಿ ಇದ್ದಿತೆಂದು ತಿಳಿದು ಬರುತ್ತದೆ.

[9]     IA, XIX, pp. ೭-೨೦.

[10]    EI, III, i.

[11]    ಪಂಚಮುಖಿ ಆರ್. ಎಸ್., ೧೯೬೭, ಕರ್ನಾಟಕದ ಇತಿಹಾಸ, ಭಾಗ ಒಂದು, ಧಾರವಾಡ. (ಭಾಗ ೧)ಪು. ೧೮೮.

[12]    Remesh K.V., ೧೯೮೪, Op., Cit. p. ೯೮,

[13]    EI, XXXII, ೨೧.

[14]    ಪಂಚಮುಖಿ ಆರ್.ಎಸ್., ೧೯೬೭, ಪೂರ್ವೋಕ್ತ. ಭಾಗ ೨, ಪು. ೬೪.

[15]    ಅದೇ.

[16]    EI, IX, ೧೨.

[17]    Ibid, p. ೧೩೫.

[18]    ಪಾಡಿಗಾರ ಶ್ರೀನಿವಾಸ, ೧೯೯೭, ‘ವಾಸ್ತುಶಿಲ್ಪ’ಕರ್ನಾಟಕ ಚರಿತ್ರೆ ಸಂಪುಟ ೧, (ಸಂ)ಹಂಪಿ, ಪು. ೪೮೦.

[19]    EI, III, p.೧.

[20]    ಶ್ರೀನಿವಾಸ ಪಾಡಿಗಾರ. ೧೯೯೭. ಪೂರ‌್ವೋಕ್ತ, ಪು. ೪೮೧.

[21]    ಇದು ಮಹಾಕೂಟದ ಸಮೀಪವಿದೆ.

[22]    IA, X, p. ೧೦೩.

[23]    EI, III, P.೧.

[24]    ಸ್ವಸ್ತಿ ವಿಕ್ರಮಾದಿತ್ಯ ಸತ್ಯಾಶ್ರಯ ಶ್ರೀ ಪೃಥುವೀವಲ್ಲಭ ಮಹಾರಾಜಾಧಿ ರಾಜ ಪರಮೇಶ್ವರ ಭಟಾರರ್ ಕ ಞ್ಚಯಾನ್ಕಡು ರಾಜ ಸಿಂಘೇಶ್ವರ ಧನಮಾನ್ಕಣ್ಡು ಮಗಳ್ದು ದೇವರ್ಗ್ಗೆ ಬಿಟ್ಟಾರ್

[25]    EI, III, p. ೧

[26] ‘ಸಂಕಲ್ಪ, ಯಜ್ಞೋಪವೀತ, ಅಗ್ನಿಯಾಧಾನ, ವಿರಾಜಹೋಮಕ್ಕಾಗಿ, ಮೂವತ್ತಾರು ತತ್ವಗಳ ಸ್ಮರಣೆ, ಹೋಮ, ಹವಿಷ್ಯಾನ್ನ ಭೋಜನ, ರುದ್ರಾಗ್ನಿ ಉಪಸಂಹಾರ ಮಾಡಿ, ಜಟಿಲ, ಮುಂಡ, ಶಿಖಿ, ಏಕಜಟಿ ಅಥವಾ ನಗ್ನವಾಗಿ ಇಲ್ಲವೆ ಕಾಷಾಯ ವಸ್ತ್ರ, ಚರ್ಮ ಚೀರವಸ್ತ್ರ, ವಲ್ಕಲ ಉಟ್ಟು;ದಂಡ, ಮೇಖಲಾಯುಕ್ತಮಾಗಿ;ವಿರಜಾಗ್ನಿ ಭಸ್ಮದಿಂದ ಅರ್ಥರ್ವಣವೇದದಲ್ಲಿ ಅಗ್ನಿ ಇತ್ಯಾದಿ ಆರು ಮಂತ್ರಗಳಿಂದ ಭಸ್ಮಧಾರಣ ಮಾಡಿ;ಶಿವಯೋಗಾಭ್ಯಾಸ ಮಾಡುವುದು ಇದರಂತೆ ಮೂರು ವೇಳೆ ಮಾಡುವುದು ಇದಕ್ಕೆ ಪಾಶುಪತ ವ್ರತವೆನ್ನುತ್ತಾರೆ’ (ಉದ್ಧೃತ: ಕಪಟರಾಳ ಕೃಷ್ಣರಾಯರ ಕರ್ನಾಟಕ ಲಾಕುಳ ಶೈವರ ಇತಿಹಾಸ, ಪುಟ ೭೪)

[27]    ಚಿದಾನಂದ ಮೂರ್ತಿ ಎಂ. ೧೯೭೯, ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ, ಮೈಸೂರು, ಪು. ೧೨೯.

[28]    ಅದೇ.

[29]    ಪಂಚಮುಖಿ ಆರ್.ಎಸ್., ೧೯೭೬, ಪೂರ‌್ವೋಕ್ತ ಭಾಗ ‑೨, ಧಾರವಾಡ, ಪು.೬೪.

[30]    Karamarkar A.P., ೧೯೫೦, The Religions of India, Lonaval, p. ೨೩೨.

[31]    Ibid.

[32]    ಚಿದಾನಂದಮೂರ್ತಿ ಎಂ., ೧೯೭೯, ಪೂರ‌್ವೋಕ್ತ. ಪು. ೧೩೦.

[33]    Cousens, Henry, ೧೯೨೬, The Chalukyan Architecture of the Kanarese Districts, Calcutta, p. ೫೬.

[34]    EI, XXXII, ೨೧.

[35]    ಶ್ರೀನಿವಾಸ ಪಾಡಿಗಾರ. ೧೯೯೭, ಸಾಮಾಜಿಕ ವ್ಯವಸ್ಥೆ ಕರ್ನಾಟಕ ಚರಿತ್ರೆ, ಸಂ.೧, ಹಂಪಿ, ಪು. ೪೮೦.

[36]    EI, III p.೧.

[37]    Karamarkar A.P. ೧೯೫೦, Op. Cit, p. ೨೪೩.

[38]    Annual Report on Kannada Research in Bombay Province, (೧೯೩೯-೪೦)

[39]    Karamarkar A.P., ೧೯೫೦, Op. Cit, p. ೨೩೯

[40]    ಚಿದಾನಂದಮೂರ್ತಿ ಎಂ. ೧೯೭೯, ಪೂರ‌್ವೋಕ್ತ, ಪು. ೧೫೪.

[41]    Minakshi C., ೧೯೭೭, Administration and Social Life under the Pallavas, Madras, p. ೨೧೬

[42]    Ibid.

[43]    Karamarkar A.P., ೧೯೫೦, Op. Cit, P. ೨೪೦.

[44]    IA, X, ೮೫.

[45]    SII, XI (i), ೫೭.

[46]    IA, X, ೯೬.

[47]    Soundara Rajan K.V., ೧೯೬೯, Early Temples of the Deccan, New Delhi, p. ೨೪೨.

[48]    ಅಣ್ಣಿಗೇರಿ ಎ.ಎಂ., ಪೂರ‌್ವೋಕ್ತ, ಪು. ೮೪.

[49]    SII, XV, ೫೧೯.

[50]    SII, XV, ೫೨೦.

[51]    Soundara Rajan K.V., ೧೯೬೯, Early Temple Architecture in Karnataka and its amifications, Dharwad p. ೫೪.

[52]    Cousens Henry, ೧೯೨೯, Op. Cit, p. ೫೬.

[53]    IA, X, ೮೫.

[54]    Radcliffe Carol, ೧೯೮೧, Op. Cit, p. ೩೮೨

[55]    ಕನ್ನಡ ವಿಶ್ವಕೋಶ ಸಂಪುಟ ೧೨, ೧೯೮೬, ಮೈಸೂರು ಪು. ೮೯೩.

[56]    SII, XV, ೫೨೦.

[57]    SII, XV, ೫೨೯.

[58]    SII, XI (i), ೧೧೦.

[59]    JBBRAS, XI, p. ೨೫೯.

[60]    SII, XV, ೫೧೯.