ಭಾಗವತ ಪಂಥ ಭಕ್ತಿಮಾರ್ಗವನ್ನೇ ಪ್ರಧಾನವಾಗಿರಿಸಿಕೊಂಡು ಬೆಳೆದ ಧರ್ಮ. ಕ್ರಿಸ್ತಪೂರ್ವಯುಗದ ಕೊನೆಯ ಮತ್ತು ಕ್ರಿಸ್ತಾನಂತರದ ಮೊದಲ ಕೆಲವು ಶತಮಾನಗಳಲ್ಲಿ ಈ ಪಂಥದ ಅನುಯಾಯಿಗಳು ವೃಷ್ಣಿಕುಲದ ಪಂಚವೀರರನ್ನು ದೇವಾಲಯಗಳಲ್ಲಿ ಮೂರ್ತಿರೂಪದಿಂದ ಅರಾಧಿಸುತ್ತಿದ್ದರೆಂಬ ವಿಷಯ ಶಾಸನ ಮತ್ತು ಮೂರ್ತಿಶಿಲ್ಪಗಳಿಂದ ತಿಳಿಯುತ್ತದೆ. ಸಂಕರ್ಷಣ, ವಾಸುದೇವ, ಪ್ರದ್ಯುಮ್ನಸಾಂಬ, ಅನಿರುದ್ಧ ಇವರೇ ಆ ಪಂಚವೀರರು. ಋಗ್ವೇದದ ವಿಷ್ಣುವೂ ಶತಪಥ ಬ್ರಾಹ್ಮಣದ ನಾರಾಯಣನೂ ಕ್ರಿ.ಪೂ.೨ನೇ ಶತಮಾನದಲ್ಲಾಗಲೇ ಭಾಗವತರ ಮುಖ್ಯ ದೈವವೆನಿಸಿದ್ದ ವಾಸುದೇವ(ಕೃಷ್ಣ)ನೊಂದಿಗೆ ಸಮೀಕರಿಸಲ್ಪಟ್ಟಿದ್ದರು. ಕ್ರಿಸ್ತಾನಂತರದ ಮೊದಲ ಕೆಲವು ಶತಮಾನಗಳಲ್ಲಿ ವೃಷ್ಟಿನೀರರ ಆರಾಧನೆ ಮುಂದುವರಿಯಿತಾದರೂ ಪಾಂಚರಾತ್ರ ಪುರಾಣ-ಆಗಮಕಾರರ ಕೃತಿಯಿಂದಾಗಿ ದೈವದ ಪರವ್ಯೆಹ, ವಿಭವ(ಅವತಾರ), ಅರ್ಚಾ ಹಾಗೂ ಅಂತರ್ಯಾಮಿ ರೂಪುಗಳ ಕಲ್ಪನೆಯೂ ಅಧ್ಯಾತ್ಮ, ತತ್ವ ಮತ್ತು ಧಾರ್ಮಿಕ ವಿಧಿಗಳ ಬುನಾದಿಯೂ ಭಾಗವತ-ಪಾಂಚರಾತ್ರ-ಏಕಾಂತ ಧರ್ಮಕ್ಕೆ ಲಭ್ಯವಾದವು. ಸುಮಾರು ಕ್ರಿ.ಶ.೮ನೇ ಶತಮಾನದವರೆಗೂ ಈ ಧರ್ಮ ಭಾಗವತಧರ್ಮವೆಂದೇ ಹೆಸರಾಗಿತ್ತು. ವೈದಿಕ ಧಾರ್ಮಿಕರಿಗೆ ಭಕ್ತಿಮಾರ್ಗದ ದೇವಾಯತನ ಪೂಜೆಯ ರುಚಿ ತೋರಿಸಿದ ಪಂಥಗಳಲ್ಲಿ ಭಾಗವತ ಪಂಥ ಮುಖ್ಯವಾದುದು, ವೈದಿಕ ಮತಾವಲಂಬಿಗಳಾಗಿದ್ದರೂ ವಿಷ್ಣುವೇ ಪರಮದೈವವೆಂದು ನಂಬಿದ್ದ ವೈಖಾನಸರು ಗೃಹಸ್ಥರೆನಿಸಿ ಗೃಹಪೂಜೆಗೆ ಪ್ರಾಧಾನ್ಯವಿತ್ತವರು. ಇವರು ಮೊದಲಿನಿಂದಲೂ ವೈಷ್ಣವಧರ್ಮದ ಪ್ರಭಾವೀ ಶಕ್ತಿಯಾಗಿದ್ದರು. ಕಾಲಾನುಕ್ರಮದಲ್ಲಿ ವೈಖಾನಸರು ಭಾಗವತ-ಪಾಂಚರಾತ್ರರ ಕಲ್ಪನೆ ವಿಧಿಗಳಿಂದ ಹೆಚ್ಚು ಹೆಚ್ಚು ಪ್ರಭಾವಿತರಾದರು. ವೈಷ್ಣವದೇವತಾಖ್ಯಾನದಲ್ಲಿ ವಿಷ್ಣುವೇ ಅತಿಪ್ರಾಚೀನನಾದುದರಿಂದಲೂ ವೈದಿಕವೈಷ್ಣವರು ಭಾಗವತರಿಂದ ಪ್ರಭಾವಿತರಾದರೂ ವಿಷ್ಣುವನ್ನೇ ಶ್ರೇಷ್ಠದೈವವೆಂದು ಬಲವಾಗಿ ನಂಬಿದ್ದರಿಂದಲೂ ಬರಬರುತ್ತ ‘ಭಾಗವತ’ ಎಂಬುದರ ಬದಲು ‘ವೈಷ್ಣವ’ ಪದದ ಬಳಕೆ ಹೆಚ್ಚುತ್ತ ಹೋಗಿ ವಿಷ್ಣು-ನಾರಾಯಣ-ವಾಸುದೇವರ ಆರಾಧಕರೆಲ್ಲ ‘ವೈಷ್ಣವರೆಂದೇ’ ಹೆಚ್ಚು ಹೆರಾದರು.

ದಕ್ಷಿಣ ಭಾರತದಲ್ಲಿ ಕ್ರಿ.ಪೂ.೨ನೇ ಶತಮಾನದಿಂದ ಕ್ರಿ.ಶ.೪-೫ನೇ ಶತಮಾನಗಳವರೆಗೆ ಪಂಚವೀರರ ಆರಾಧನೆ ಪ್ರಚಲಿತವಿದ್ದುದು ಸಾತವಾಹನ ಕುಲದ ರಾಣಿ ನಾಗನಿಕೆಯ ನಾನೆಘಾಟ ಗವಿಯ ಶಾಸನ, ತಮಿಳರ ಸಂಗಮ್‌ಸಾಹಿತ್ಯ, ಆಂಧ್ರದ ಕೊಂಡಮೋಟವಿನಲ್ಲಿ ದೊರೆತ ನರಸಿಂಹ-ಪಂಚವೀರರ ಶಿಲ್ಪಪಟ್ಟಿಕೆ ಮತ್ತು ಉತ್ತರ ಕನ್ನಡ ಜಿಲ್ಲೆಯ ಕೊಂತಪಾಲ ಗ್ರಾಮದಲ್ಲಿ ದೊರೆತ ದ್ವಿಬಾಹು ಮಾನುಷವಾಸುದೇವನ ಶಿಲಾಪ್ರತಿಮೆ ಇವುಗಳಿಂದ ಗೊತ್ತಾಗುತ್ತದೆ. ಕದಂಬ ಅರಸರ ಕೆಲಶಾಸನಗಳು ವಿಷ್ಣುಸ್ತುತಿಯೊಂದಿಗೆ ಪ್ರಾರಂಭವಾಗುತ್ತವೆ.

[1]

ಬಾದಾಮಿಯಲ್ಲಿ ವೈಷ್ಣವಧರ್ಮದ ಕುರುಹುಗಳು ಮೊದಲು ದೊರೆಯಲಾರಂಭಿಸುವುದು ಚಾಲುಕ್ಯ ಅರಸರ ಕಾಲದಿಂದಲೇ. ಮೊದಲನೇ ಪೊಲೆಕೇಸಿ ಮತ್ತು ಮೊದಲನೇ ಕೀರ್ತಿವರ್ಮರ ವೈಯಕ್ತಿಕ ಧರ್ಮದ ಬಗ್ಗೆ ಸ್ಪಷ್ಟ ಆಧಾರಗಳಿಲ್ಲ. ಬಾದಾಮಿಯ ಗುಹಾಲಯಗಳಲ್ಲಿ ಮೊದಲನೆಯದು ಶೈವಗುಹೆ; ಇದು ಬಹುಶಃ ಮೊದಲನೇ ಪೊಲೆಕೇಸಿಯ ಕಾಲದಲ್ಲಿ ನಿರ್ಮಾಣವಾದುದು. ಮಹಾಕೂಟದ ಪುಷ್ಕರಣಿಯಲ್ಲಿರುವ ಚತುರ್ಮುಖ ಲಿಂಗವೂ ಬಹುಶಃ ಈತನಿಂದಲೇ ನಿರ್ಮಾಣಗೊಂಡುದು.[2] ಹೀಗಾಗಿ ಮೊದಲನೇ ಪೊಲೆಕೇಸಿ ಶೈವ ಮತಾವಲಂಬಿಯಾಗಿದ್ದ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಆದರೆ ಆತನ ಮಗನಾದ ಕೀರ್ತಿವರ್ಮನ ಕಾಲದಲ್ಲಿ ಇಲ್ಲಿಯ ಎರಡು ವೈಷ್ಣವ ಗುಹಾದೇಗುಲಗಳು ನಿರ್ಮಿತವಾದವು. ಇವನ ಸಹೋದರನಾದ ಮಂಗಲೀಶ್ವರನು ಮೂರನೇ ವೈಷ್ಣವಗುಹೆಯ ಶಾಸನದಲ್ಲಿ “ಪರಮಭಾಗವತ”ನೆಂದು ಉಲ್ಲಿಖಿತನಾಗಿದ್ದಾನೆ.[3] ಬಾದಾಮಿಯಲ್ಲೇ ದೊರೆತಿರುವ ಇನ್ನೊಂದು ಶಾಸನದಲ್ಲಿ ಚಾಲುಕ್ಯರನ್ನು ಪರಮಭಾಗವತರೆಂದು ಕರೆದಿದೆ.[4] ಲೋಹಣೇರ ಶಾಸನದಲ್ಲಿ ಇಮ್ಮಡಿ ಪೊಲೆಕೇಸಿಯನ್ನು ಪರಮಭಾಗವತನೆಂದು ಹೇಳಿದೆ.[5] ಇದಲ್ಲದೆ. ಚಲುಕ್ಯರ ರಾಜಮುದ್ರೆ ‘ಮರಾಹ’, ಭಗವನ್ನಾರಾಯಣನಿಂದಲೇ ಅವರಿಗೆ ನೀಡಲ್ಪಟ್ಟುದು. ಈ ವಿಷಯಗಳನ್ನು ಗಮನಿಸಿದರೆ ಚಲುಕ್ಯರು ಆರಂಭದಿಂದಲೂ ವೈಷ್ಣವ (ಭಾಗವತ) ಮತಾವಲಂಬಿಗಳಾಗಿದ್ದಿರುವ ಸಾಧ್ಯತೆ ಇಲ್ಲದಿಲ್ಲ.

ಶೈಲಿಯ ದೃಷ್ಟಿಯಿಂದ ಹೇಳುವುದಾದರೆ, ಬಾದಾಮಿಯ ಎರಡನೇ ವೈಷ್ಣವ ಗುಹಾಲಯವು ಮೂರನೆಯದಕ್ಕಿಂತ ಮುಂಚೆ ನಿರ್ಮಿತವಾದದ್ದು. ಮೂರನೇ ಗುಹಾಲಯದ ಕಾಲ ಕ್ರಿ.ಶ.೫೭೮ ಶಾಸನದಿಂದ ತಿಳಿದು ಬರುವಂತೆ ಕೀರ್ತಿವರ್ಮನ ೧೨ನೇ ರಾಜ್ಯಾಡಳಿತ ವರ್ಷದಲ್ಲಿ ಆತನ ಸಹೋದರನಾದ ಮಂಗಲೀಶ್ವರನಿಂದ ಕೊರೆಯಿಸಲ್ಪಟ್ಟುದು.[6] ಇದರ ಗರ್ಭಗೃಹದಲ್ಲಿ ಚಕ್ರಧಾರಿ ಮಹಾವಿಷ್ಣುವಿನ ಪ್ರತಿಷ್ಠೆ ಮಾಡಲಾಗಿತ್ತೆಂದು ಶಾಸನ ಹೇಳುತ್ತದೆ. ದೇವರ ದಿನನಿತ್ಯದ ನೈವೇದ್ಯಾದಿಗಳಿಗೆ ನಾರಾಯಣ ಬಲಿ ಎಂದು ಕರೆಯಲಾಗಿದೆ. ಅದಕ್ಕಾಗಿ ‘ಲಂಜೀಶ್ವರ’ ಎಂಬ ಗ್ರಾಮವನ್ನು ದತ್ತಿಯಾಗಿ ಬಿಡಲಾಗಿತ್ತು. ಈ ದತ್ತಿಯಿಂದ ಬಂದ ಉಳಿದ ಆದಾಯದಲ್ಲಿ ಸತ್ತ್ರದ ೧೬ ಜನ ಬ್ರಾಹ್ಮಣರಿಗೆ ಪ್ರತಿದಿನ ಆಹಾರದಾನವಾಗಬೇಕೆಂದೂ, ಇನ್ನೂ ಉಳಿದರೆ ಪರಿವ್ರಾಜಕರಿಗೆ (ಸನ್ಯಾಸಿಗಳಿಗೆ) ಆಹಾರದಾನವಾಗಬೇಕೆಂದೂ ಶಾಸನ ವಿಧಿಸಿದೆ. ಈ ಗುಹಾದೇಗುಲದ ಪರಿಸರವನ್ನು ಅವಲೋಕಿಸಿದರೆ ಒಂದು ವಿಷಯ ಕುತೂಹಲ ಕೆರಳಿಸುತ್ತದೆ. ಎದುರಿಗೆ ಸಾಕಷ್ಟು ವಿಶಾಲವಾದ ಆವರಣವಿದ್ದು ಮುಂಭಾಗದಲ್ಲಿ ದೊಡ್ಡ ಬಂಡೆಗಲ್ಲು ಗೋಡೆಯಂತೆ ನಿಂತಿದೆ. ಆವರಣದ ಇಕ್ಕೆಲಗಳಲ್ಲಿ ನಿರ್ಮಿಸಲ್ಪಟ್ಟ ಕಲ್ಲಿನಗೋಡೆಯೂ ಒಳಕ್ಕೆ ಬರಲು ಪಶ್ಚಿಮ ದಿಕ್ಕಿನಿಂದ ದ್ವಾರವೂ ಇವೆ. ಹೀಗಾಗಿ ಪ್ರಾಕಾರದೊಳಗಿನ ಪ್ರದೇಶಕ್ಕೆ ಏಕಾಂತ ದೊರೆತಿದ್ದು ಇದರಲ್ಲಿ ಮೂಲತಃ ಸತ್ತ್ರದ ಅಡಿಗೆ ಮನೆಯೂ ಸನ್ಯಾಸಿಗಳಿಗೆ ಉಳಿದುಕೊಳ್ಳಲು ಸ್ಥಳವೂ ಇದ್ದಿರಬಹುದು. ಇನ್ನೊಂದು ಶಾಸನ ತಿಳಿಸುವಂತೆ ಮಂಗಲೀಶ್ವರನ ರಾಜ್ಯಾಡಳಿತ ಅವಧಿಯಲ್ಲಿ ಈ ಗುಹಾಲಯದ ದೇವರಿಗೆ ಹೂಗಳನ್ನು ಪೂರೈಸುತ್ತಿದ್ದ ಮಾಲಕಾರನಿಗೆ ಲಂಜಿಕೇಸರ (ಲಂಜೀಶ್ವರ) ಗ್ರಾಮದ ಆಡಾಯದಲ್ಲಿ ಅರ್ಧವೀಸವನ್ನು ಬಿಡಲಾಯಿತು.[7]

ಬಾದಾಮಿಯ ಉತ್ತರಕೋಟೆ ಇರುವ ಗುಡ್ಡದ ನೆತ್ತಿಯಲ್ಲಿ ಮೇಲಣ ಶಿವಾಲಯವೆಂದು ಕರೆಯಲ್ಪಡುವ ದೇಗುಲವಿದೆ. ಇದು ಮೂಲತಃ ವೈಷ್ಣವ ದೇವಾಲಯವೆಂಬುದು ಸ್ಪಷ್ಟ. ಇದರ ಗರ್ಭಗೃಹದಲ್ಲಿ ಪ್ರತಿಷ್ಠೆಯಾಗಿದ್ದ ದೇವತೆ ವಾಸುದೇವ ಕೃಷ್ಣನಾಗಿದ್ದಿರಬೇಕು. ಯಾಕೆಂದರೆ ಈ ದೇವಾಲಯದ ಗೋಡೆಯಲ್ಲಿನ ಮುಖ್ಯ ಶಿಲ್ಪಗಳು ಕೃಷ್ಣನ ಲೀಲೆಗಳಿಗಾಗಿ (ಗೋವರ್ಧನಧಾರಿ ಕೃಷ್ಣ, ಕಾಳಿಂಗಮರ್ದನ ಕೃಷ್ಣ) ಮುಡುಪಾಗಿವೆ. ಈ ದೇವಾಲಯ ಕೂಡ ಬಹುಶಃ ಮಂಗಲೀಶ್ವರನ ಕಾಲದಲ್ಲಿ ನಿರ್ಮಿತವಾಗಿರಬೇಕು. ಇದೇ ಕೋಟೆಯಲ್ಲಿರುವ ಇನ್ನೊಂದು ದೇವಾಲಯ ‘ಕೆಳಗಣ ಶಿವಾಲಯ’ವೆಂದು ಕರೆಯಲ್ಪಟ್ಟಿದೆ. ಇದು ಸಹ ವೈಷ್ಣವ ದೇವಾಲಯವಾಗಿದ್ದಿತೆಂದು ಸೂಚಿಸಲಾಗಿದೆ.

ಮಂಗಲೀಶ್ವರನ ನಂತರ ಪಟ್ಟಕ್ಕೇರಿದ ಇಮ್ಮಡಿ ಪೊಲೆಕೇಸಿಯು ಭಾಗವತನಾಗಿದ್ದರೂ ವೈಷ್ಣವ ಧರ್ಮದ ಏಳ್ಗೆಗೆ ಆತನಿತ್ತ ಕೊಡುಗೆ ಏನೆಂದು ಹೇಳುವುದಕ್ಕೆ ಆಧಾರಗಳಿಲ್ಲ. ಆತನ ಮಗ ಆದಿತ್ಯವರ್ಮ ಹಾಗೂ ಮೊಮ್ಮಗ, ಅಭಿನವಾದಿತ್ಯ ಇವರು ಕೂಡ ವೈಷ್ಣವ ಮತಾವಲಂಬಿಗಳಾಗಿ ಮುಂದುವರಿದರೆಂದು ಮಾತ್ರ ಹೇಳಬಹುದು. ಆದರೆ ಇಮ್ಮಡಿ ಪೊಲೆಕೇಸಿಯ ಇನ್ನೊಬ್ಬ ಮಗನಾದ ಮೊದಲನೇ ವಿಕ್ರಮಾದಿತ್ಯನು ಶೈವಧರ್ಮಕ್ಕೆ ಮತಾಂತರ ಹೊಂದಿದನೆಂಬುದಕ್ಕೆ ಶಾಸನಾಧಾರವಿದೆ.[8] ತದನಂತರ ಆಳಿದ ಚಲುಕ್ಯ ದೊರೆಗಳು ಶೈವದೇಗುಲಗಳನ್ನೆತ್ತಿಸಿ ಶೈವ ಧರ್ಮವನ್ನು ಹೆಚ್ಚಾಗಿ ಪೊಷಿಸಿದ್ದು ಕಂಡುಬರುತ್ತದೆ. ಅಂದರೆ ಉಳಿದ ಧರ್ಮಗಗಳನ್ನು ಉಪೇಕ್ಷಿಸಿ ಕೈಬಿಟ್ಟರೆಂದು ಅರ್ಥವಲ್ಲ. ಅವರು ಪರಧರ್ಮ ಸಹಿಷ್ಣುಗಳಾಗಿದ್ದರು. ವಿಜಯಾದಿತ್ಯನ ಕಾಲದಲ್ಲಿ ಬಾದಾಮಿಯಲ್ಲಿ ನಿರ್ಮಿತವಾದ ಬ್ರಹ್ಮ-ವಿಷ್ಣು-ಮಹೇಶ್ವರ ತ್ರಿಕೂಟ ದೇವಾಲಯವು[9] ಅವರು ಎಲ್ಲ ದೇವತೆಗಳಲ್ಲೂ ಸಮಾನತೆಯನ್ನು ಕಂಡದ್ದಕ್ಕೆ ನಿದರ್ಶನವಾಗಿದೆ.

ಚಲುಕ್ಯರ ಕಾಲದ ವೈಷ್ಣವ ಧರ್ಮದ ಸ್ವರೂಪ ಲಕ್ಷಣಗಳ ಬಗ್ಗೆ ಹೆಚ್ಚಿನ ವಿಷಯಗಳು ದೊರೆಯುವುದಿಲ್ಲ. ದೇವಾಲಯ ಪೂಜೆ ಪ್ರಭಾವಶಾಲಿಯಾಗತೊಡಗಿತ್ತೆಂಬುದಕ್ಕೆ ಮೇಲೆ ನೀಡಿದ ಆಧಾರಗಳು ಸಾಕು. ಮೂರ್ತಿಲಕ್ಷಣಗಳ ಅಧ್ಯಯನದಿಂದ ಕೆಲವಿಷಯಗಳು ಬೆಳಕಿಗೆ ಬರುತ್ತವೆ. ಬಾದಾಮಿಯ ಕೆಲವು ವೈಷ್ಣವ ಶಿಲ್ಪಗಳು ವೈಖಾನಸಾಗಮದಲ್ಲಿ ಹೇಳಿರುವ ಮೂರ್ತಿಲಕ್ಷಣಗಳಿಗೆ ಸಾಕಷ್ಟು ಬದ್ಧವಾಗಿವೆ. ಅಂದರೆ ವೈಖಾನಸರ ಪೂಜಾಪದ್ಧತಿ-ಪರಂಪರೆಗಳು ಈ ಕಾಲದಲ್ಲಿ ಪ್ರಮುಖವಾಗಿದ್ದಿರುವ ಸಾಧ್ಯತೆಯಿದೆ. ಕೃಷ್ಣಲೀಲೆಯ ಉಬ್ಬುಶಿಲ್ಪಗಳು ಹರಿವಂಶ, ವಿಷ್ಣುಪುರಾಣ ಇವುಗಳ ಪರಂಪರೆಯನ್ನು ಪ್ರತಿನಿಧಿಸುವಂತೆ ತೋರುತ್ತದೆ. ಭಾಗವತ ಪುರಾಣ ಪರಂಪರೆಯ ಕೆಲವು ಕೃಷ್ಣಲೀಲೆಯ ದೃಶ್ಯಗಳು, (ಉದಾ ಬಕವಧೆ, ಗೋಪೀ ವಸ್ತ್ರೀಪಹರಣ ಇತ್ಯಾದಿ) ಹಾಗೂ ಗಜೇಂದ್ರಮೋಕ್ಷದಂಥ ಕಥಾವಸ್ತುಗಳು ಬಾದಾಮಿಯ ಶಿಲ್ಪಗಳಲ್ಲಿ ಕಾಣಬರುವುದಿಲ್ಲ. ಆದುದರಿಂದ ಚಲುಕ್ಯರ ಪ್ರಥಮಾರ್ಧ ಕಾಲದಲ್ಲಿ ಭಾಗವತಪುರಾಣ ನಿದರ್ಶಿಸುವ ಪರಂಪರೆ ಇನ್ನೂ ಸ್ಪಷ್ಟವಾಗಿ ಬೇರೂರಿರಲಿಲ್ಲ ಎಂದು ಹೇಳಬಹುದು. ಆದರೆ ಪಟ್ಟದ ಕಲ್ಲಿನ ಶಿಲ್ಪಗಳಲ್ಲಿ ಈ ಪರಂಪರೆಯ ಕಥಾವಸ್ತುಗಳು ಸಾಕಷ್ಟು ಪ್ರಮಾಣದಲ್ಲಿ ದೊರೆಯುತ್ತವೆ. ಅಂದರೆ, ಚಲುಕ್ಯರ ಆಡಳಿತದ ಉತ್ತರಾರ್ಧ ಅವಧಿಯಲ್ಲಿ ಭಾಗವತಪುರಾಣದ ಪರಂಪರೆ ಜನಪ್ರಿಯವಾಯಿತೆಂದು ಹೇಳಬೇಕಾಗುತ್ತದೆ. ವಿಷ್ಣುವಿನ ದಶಾವತಾರದ ಕಲ್ಪನೆ ಇನ್ನೂ ಸ್ಪಷ್ಟವಾಗಿರಲಿಲ್ಲವೆಂದು ಅನಿಸುತ್ತದೆ. ನಮಗೆ ಕಾಣಸಿಗುವ ಶಿಲ್ಪಗಳು ಕೂರ್ಮ, ವರಾಹ, ನರಸಿಂಹ, ವಾಮನ ತ್ರಿವಿಕ್ರಮ ದಾಶರಥಿರಾಮ, ಬಲರಾಮ ಮತ್ತು ಕೃಷ್ಣ ಇವರವು. ಚತುರ್ಧುಜವಿಷ್ಣು ಮತ್ತು ಅಷ್ಟಭುಜ ವಿಷ್ಣು ಇವರ ಶಿಲ್ಪಗಳೂ ಇವೆ. ಆದರೆ ಯಾವ ಶಿಲ್ಪದಲ್ಲು ವಿಷ್ಣುವಿನ ಕೈಯಲ್ಲಿ ಪದ್ಮವು ಕಂಡುಬಂದಿಲ್ಲ. ಅದರ ಬದಲು ಬಹುಬೀಜ ಫಲದಂತೆ ಕಾಣುವ ಒಂದು ವಸ್ತು ಹೆಚ್ಚಿನ ಶಿಲ್ಪಗಳಲ್ಲಿ ಕಾಣಸಿಗುತ್ತದೆ. ಶಂಖ, ಚಕ್ರ, ಗದೆ ಮತ್ತು ಪದ್ಮ ಇವು ಚತುರ್ವಿಂಶತಿ ವಿಷ್ಣು ಮೂರ್ತಿಗಳನ್ನು ಪ್ರತಿನಿಧಿಸುವ ಶಿಲ್ಪಗಳಲ್ಲಿ ಅವಶ್ಯ ಇರಬೇಕಾದ ಸಂಕೇತಗಳು. ಚಲುಕ್ಯರ ಕಾಲದಲ್ಲಿ ಈ ಕಲ್ಪನೆ ಇನ್ನೂ ಜನಪ್ರಿಯವಾಗಿರಲಿಲ್ಲವೆಂಬುದು ಇದರಿಂದ ಸ್ಪಷ್ಟವಾಗುತ್ತದೆ. ಆದರೆ ಸರ್ಪಾಸನದ ಮೇಲೆ ಕುಳಿತಿರುವ ಪರವಾಸುದೇವ (ಅನಂತ-ವಾಸುದೇವ), ವರಾಹ, ನರಸಿಂಹ ಹಾಗೂ ತ್ರಿವಿಕ್ರಮ ಶಿಲ್ಪಗಳು ಮೂರನೇ ವೈಷ್ಣವ ಗುಹಾಲಯದಲ್ಲಿ ಪ್ರಮುಖ ಮತ್ತು ಮಹತ್ವದ ಶಿಲ್ಪಗಳಾಗಿ ಕಂಡುಬರುವುದಕ್ಕೆ ಪಾಂಚರಾತ್ರರ ಚತುರ್‌ವ್ಯೆಹ ಕಲ್ಪನೆ ಪ್ರತಿಬಿಂಬಿತವಾಗಿರುವುದು ಕಾರಣವಾಗಿರುವ ಸಾಧ್ಯತೆ ಇದೆ.

ರಾಷ್ಟ್ರಕೂಟರ ಕಾಲಕ್ಕನ್ವಯಿಸುವ ವೈಷ್ಣವ ಶಾಸನಗಳಾಗಲಿ, ಶಿಲ್ಪ-ದೇವಾಲಯಗಳಾಗಲಿ ಬಾದಾಮಿಯಲ್ಲಿ ಈವರೆಗೆ ದೊರೆತಿಲ್ಲ. ಬೇರೆಡೆ ಕಂಡುಬಂದಿರುವ ನಿದರ್ಶನಪರ ಆಧಾರದ ಮೇಲೆ ಕೆಲವು ವಿಷಯಗಳನ್ನು ತರ್ಕಿಸಬಹುದು. ಭಾಗವತ ಪುರಾಣ ಪರಂಪರೆ ಈ ಕಾಲದಲ್ಲಿ ಇನ್ನೂ ಹೆಚ್ಚಾಗಿ ಹಬ್ಬಿತು. ಕೆಲವು ಸ್ಥಾನಿಕ ವಿಷ್ಣು ಶಿಲ್ಪಗಳಲ್ಲಿ ಕೈಯಲ್ಲಿ ಪದ್ಮವೂ ಕಂಡುಬರುತ್ತದೆ. ಇದರಿಂದ ಪಾಂಚರಾತ್ರರ ಚತುರ್ವಿಂಶತಿ (ಇಪ್ಪತ್ತುನಾಲ್ಕು) ವ್ಯೆಹಾಂತರಗಳ ಕಲ್ಪನೆ (ಕೇಶವ, ನಾರಾಯಣ, ಇತ್ಯಾದಿ) ವೈಷ್ಣವರ ವಿಚಾರಗಳಲ್ಲಿ ಕ್ರಮೇಣ ಬೇರೂರಿತೆಂದು ಹೇಳಬಹುದು. ಲಕ್ಷ್ಮೀನಾರಾಯಣ ಪ್ರತಿಮೆಯೂ ಜನಪ್ರಿಯವಾಯಿತು. ಈ ಅವಧಿಯಲ್ಲಿ ಬೆಳೆದ ಇನ್ನೊಂದು ಕಲ್ಪನೆಯೆಂದರೆ ವಿಷ್ಣು ಯೋಗಾಸನದಲ್ಲಿ ಕುಳಿತಿರುವ ಮೂರ್ತಿಯದು. ದಶಾವತಾರಗಳು ಸಹ ಈ ಅವಧಿಯಲ್ಲಿ ಜನಪ್ರಿಯವಾದವು.

ಕಲ್ಯಾಣದ ಚಾಲುಕ್ಯರ ಕಾಲದಲ್ಲಿ ಬಾದಾಮಿಯಲ್ಲಿ ವೈಷ್ಣವಧರ್ಮ ಸಾಕಷ್ಟು ಪ್ರಭಾವಿಯಾಗಿತ್ತೆಂಬುದಕ್ಕೆ ಆ ಕಾಲದ ಎರಡು ವಿಷ್ಣು ದೇವಾಲಯಗಳು ಸಾಕ್ಷಿಯಾಗಿವೆ. ಭೂತನಾಥ ಹೊಂಡ ಅಗಸ್ತ್ಯ ತೀರ್ಥದ ಪಶ್ಚಿಮ ದಡದಲ್ಲಿ ಪೂರ್ವಕ್ಕೆ ಮುಖಮಾಡಿ ನಿಂತಿರುವ ಎಲ್ಲಮ್ಮ ದೇವಾಲಯ ಮೂಲದಲ್ಲಿ ವಿಷ್ಣುದೇವಾಲಯವಾಗಿತ್ತು. ಇದರ ಎದುರಿಗಿದ್ದ ಒಂದು ಶಾಸನದಲ್ಲಿ ಯೋಗೇಶ್ವರ ವಿಷ್ಣುಮೂರ್ತಿಗಿತ್ತ ದತ್ತಿಯ ಉಲ್ಲೇಖವಿದೆ.[10] ಈ ಶಾಸನ ಯೋಗಮೂರ್ತಿ ವಾಸುದೇವನ ಪ್ರಾರ್ಥನೆಯೊಂದಿಗೆ ಆರಂಭವಾಗುತ್ತದೆ. ಯೋಗಿಜನ ಹೃದಯಾನಂದನೆಂದು ಬಣ್ಣಿಸಲ್ಪಟ್ಟಿರುವ ಪರಮಾನಂದ ದೇವಯತಿಯು ಈ ದೇವಾಲಯವನ್ನೆತ್ತಿಸಿದನು. ಇಮ್ಮಡಿ ಜಗದೇಕಮಲ್ಲನ ಕಾಲದಲ್ಲಿ ಕ್ರಿ.ಶ.೧೧೩೯ ಕಾಳಿದಾಸ ದಂಡಾಧಿಪನ ಕೈಕೆಳಗಿನ ಅಧಿಕಾರಗಳಾದ ಮಹಾದೇವ ದಂಡನಾಯಕ ಹಾಗೂ ಪಾಲದೇವ ದಂಡ ನಾಯಕ ಇವರು ಹೆಗ್ಗಡೆ ರಾಮದೇವರಸನ ಬಿನ್ನಹದ ಪ್ರಕಾರ ಬಾದಾಮಿಯ ಸಿದ್ಧಾಯದೊಳಗೆ ಪ್ರತಿವರುಷವೂ ೧೦ ಬಂಗಾರದ ಗದ್ಯಾಣಗಳನ್ನು ಯೋಗೇಶ್ವರ ದೇವರಿಗೆ ಬಿಟ್ಟರೆಂದು ಶಾಸನ ತಿಳಿಸಿದೆ. ಈ ದೇವಾಲಯದಲ್ಲಿ ಈಗ ಎಲ್ಲಮ್ಮನೆಂದು ಕರೆಯಲಾಗುವ ದೇವತೆಯ ಶಿಲ್ಪವಿದೆ. ಆದರೆ ಮೂಲತಃ ಯೋಗಾಸನದಲ್ಲಿ ಕುಳಿತ ಶಂಖ-ಚಕ್ರಧಾರಿ ವಿಷ್ಣು ಪ್ರತಿಮೆ ಗರ್ಭಗೃಹದಲ್ಲಿದ್ದಿರಬೇಕು. ದೇವಾಲಯದ ಶುಕನಾಸದ ಮುಖಪಟ್ಟಿಕೆಯಲ್ಲಿರು ಯೋಗೇಶ್ವರ ವಿಷ್ಣುವಿನ ಶಿಲ್ಪ ಈ ಅಭಿಪ್ರಾಯವನ್ನು ಸಮರ್ಥಿಸುತ್ತದೆ. ಹೇಮಾದ್ರಿಯು ತನ್ನ ಚತುರ್ವರ್ಗ ಚಿಂತಾಮಣಿ ಎಂಬ ಗ್ರಂಥದಲ್ಲಿ ಯೋಗೇಶ್ವರ ವಿಷ್ಣುವಿನ ಪ್ರತಿಮಾಲಕ್ಷಣವನ್ನು ಹೇಳಿರುವುದನ್ನು ಇಲ್ಲಿ ಗಮನಿಸಬಹುದು.[11]

ಭೂತನಾಥ ಹೊಂಡದ ಉತ್ತರ ದಡದಲ್ಲಿ ದಕ್ಷಿಣಕ್ಕೆ ಮುಖಮಾಡಿ ನಿಂತಿರುವ ಮುಖ್ಯದೇವಾಲಯದ ಸುಕನಾಸದ ಮುಖಪಟ್ಟಿಕೆಯಲ್ಲಿಯೂ ಯೋಗೇಶ್ವರ ವಿಷ್ಣುವಿನ ಶಿಲ್ಪವಿದೆ. ಆದ್ದರಿಂದ ಮೂಲತಃ ಈ ದೇವಾಲಯವು ಕೂಡ ಯೋಗೇಶ್ವರ ವಿಷ್ಣುವಿನದಾಗಿರಬೇಕೆಂದು ಗೊತ್ತಾಗುತ್ತದೆ. ಈಗ ಇದರ ಗರ್ಭಗೃಹದಲ್ಲಿ ಶಿವಲಿಂಗವಿದೆ, ಈ ದೇವಾಲಯದ ಕಾಲ ಸುಮಾರು ೧೨ನೇ ಶತಮಾನ.

ದತ್ತಾತ್ರೇಯ ದೇಗುಲದಲ್ಲಿರುವ ದತ್ತಾತ್ರೇಯನ ಮೂರ್ತಿ ಕೂಡ ಕಲ್ಯಾಣದ ಚಾಲುಕ್ಯರ ಕಾಲದ ಉತ್ತಮ ಶಿಲ್ಪ. ಬ್ರಹ್ಮ-ವಿಷ್ಣು-ಮಹೇಶ್ವರರ ಗುಣಲಕ್ಷಣಗಳನ್ನೊಳಗೊಂದಿದ್ದರೂ ದತ್ತಾತ್ರೇಯನನ್ನು ವಿಷ್ಣುವಿನ ಒಂದು ಅವತಾರವೆಂದೇ ಪರಿಗಣಿಸಲಾಗಿದೆ. ಇದು ಕೂಡ ಯೋಗಾಸನ ಮೂರ್ತಿಯಾಗಿದೆ. ೧೦-೧೩ನೇ ಶತಮಾನಗಳ ಅವಧಿಯಲ್ಲಿ ಬಾದಾಮಿಯ ವೈಷ್ಣವರಲ್ಲಿ ಯೋಗಿವಿಷ್ಣುವಿನ ಕಲ್ಪನೆಗೆ ಮಹತ್ವವಿತ್ತೆಂದು ಈ ಮೂರು ನಿದರ್ಶನಗಳಿಂದ ಸ್ಪಷ್ಟವಾಗುತ್ತದೆ.

ಪೂರ್ವ ಭೂತನಾಥಗುಡಿಗಳ ಗುಂಪಿಗೆ ದಕ್ಷಿಣಕ್ಕಿರುವ ಒಂದು ದೊಡ್ಡ ಬಂಡೆಯ ದಕ್ಷಿಣ ಗೋಡೆಯಲ್ಲಿ ಪದ್ಮನಾಭ ಅನಂತಶುನನ ಮೂರ್ತಿಯನ್ನು ಸುಂದರವಾಗಿ ಕಟೆದು ಅದಕ್ಕೊಂದು ಚಿಕ್ಕ ಗುಡಿಯನ್ನು ನಿರ್ಮಿಸಲಾಗಿದೆ. ಶೈಲಿಯ ದೃಷ್ಟಿಯಿಂದ ಇದು ಸುಮಾರು ೧೦-೧೧ನೇ ಶತಮಾನದ್ದಿರಬೇಕು. ಭೂದೇವಿ, ಶ್ರೀದೇವಿ, ಗರುಡ ದಶಾವತಾರ ಸಮೇತ ವಿಷ್ಣುವಿನ ಶಯನ ಮೂರ್ತಿಯಿದು, ಹೇಮಾದ್ರಿಯ ಚತುರ್ವರ್ಗ ಚಿಂತಾಮಣಿಯಲ್ಲಿ ಇಂಥ ವಿಗ್ರಹವನ್ನು ‘ಜಲಶಯನ’ನೆಂದು ಕರೆದ್ದಿದ್ದಾನೆ.[12]

ಶ್ರೀರಾಮಾನುಜರ ಶ್ರೀವೈಷ್ಣವ ಪಂಥ ಹಾಗೂ ಶ್ರೀಮಧ್ವರ ದ್ವೈತ ಪಂಥ ಇವುಗಳ ಪ್ರಭಾವ ವಿಜಯನಗರದ ಅರಸರ ಕಾಲದಲ್ಲಿ ಕರ್ನಾಟಕದ ವಿವಿಧ ಭಾಗಗಳಿಗೆ ಪಸರಿಸಿದ್ದು ತಿಳಿದ ಸಂಗತಿ. ಬಾದಾಮಿಗೂ ಇವು ಹರಡದಿರಲಿಲ್ಲ. ಕ್ರಿ.ಶ. ೧೫೫೩ರಲ್ಲಿ ಹಾರಿಲರಡ ವೆಂಕಟಯ್ಯನೆಂಬ ವ್ಯಕ್ತಿ ೧೨ ಆಳ್ವಾರರ ಪ್ರತಿಮೆಗಳನ್ನು ವಿಷ್ಣು ಸನ್ನಿಧಿಯಲ್ಲಿ ಪ್ರತಿಷ್ಠೆ ಮಾಡಿದನೆಂದು ಮೂರನೇ ಗುಹಾಲಯದಲ್ಲಿರುವ ಒಂದು ಶಾಸನ ತಿಳಿಸುತ್ತದೆ.[13] ಉತ್ತರ ಕೋಟೆಯ ತಟ್ಟುಕೋಟೆ ಮಾರುತಿ ಸುಮಾರು ೧೬ನೇ ಶತಮಾನದ ಶಿಲ್ಪ. ಬಹುಶಃ ಇದು ಮಾಧ್ವರಿಂದ ನಿರ್ಮಿತವಾದದ್ದು. ಈಗಲೂ ಬಾದಾಮಿಯ ಮಾದ್ವರು ಅದಕ್ಕೆ ಪಡೆದುಕೊಳ್ಳುತ್ತಾರೆ. ವಸ್ತು ಸಂಗ್ರಹಾಲಯಕ್ಕೆ ಹೋಗುವ ಹಾದಿಯಲ್ಲಿರುವ ಮುಸ್ಲಿಂ ದರ್ಗಾ ಮೂಲತಃ ವಿಜಯನಗರ ಕಾಲದ ಹಿಂದೂ ದೇವಾಲಯ. ಇತ್ತೀಚಿನವರೆಗೆ ಇದನ್ನು ವೆಂಕಟೇಶ್ವರ ದೇವಾಲಯವೆಂದು ಕರೆಯುತ್ತಿದ್ದರು.[14] ಅದೇ ಹಾದಿಯಲ್ಲಿರುವ ರಾಮದೇವ ಮಂದಿರವೂ ವಿಜಯನಗರ ಶೈಲಿಯಲ್ಲಿದೆ, ಮುಂದೆ ಜೀರ್ಣೋದ್ಧಾರವಾಗಿರಬೇಕು. ಇದರಲ್ಲಿರುವ ಶ್ರೀರಾಮ ವಿಗ್ರಹ ಸುಮಾರು ೧೮ನೇ ಶತಮಾನದ್ದು. ಈಗಲೂ ಇದರ ಪೂಜೆ ಮಾಧ್ವ ಸಂಪ್ರದಾಯದ ವೈಷ್ಣವರಿಂದ ನಡೆಯುತ್ತಿದೆ.

ಬೆಟ್ಟದ ರಂಗನಾಥನದೆಂದು ಕರೆಯಲ್ಪಡುವ ಗುಡಿ ಊರಿನಿಂದ ಸ್ವಲ್ಪ ದೂರದಲ್ಲಿ ಬೆಟ್ಟದ ಮೇಲಿದೆ. ಇದು ಕೂಡ ವಿಜಯನಗರ ಶೈಲಿಯಲ್ಲಿದೆ. ಗರ್ಭಗೃಹದಲ್ಲಿ ಮೂಲತಃ ರಂಗನಾಥನ (ಯೋಗಶಾಯಿ ವಿಷ್ಣು) ವಿಗ್ರಹವಿದ್ದಿರಬೇಕು. ಈಗ ಏನೂ ಇಲ್ಲ. ಆದರೂ ಇದಕ್ಕೆ ಭಕ್ತರು ನಡೆದುಕೊಳ್ಳುತ್ತಾರೆ.

ವೈಷ್ಣವರಲ್ಲಿ ವಿಠ್ಠಲನ ಭಕ್ತರಿಗೇನೂ ಕೊರತೆಯಿಲ್ಲ. ಮೂರನೇ ಗುಹೆಯಲ್ಲಿರುವ ಸುಮಾರು ೧೬-೧೭ನೇ ಶತಮಾನದ ಒಂದು ಶಾಸನದಲ್ಲಿ ರಂಗಯ್ಯನೆಂಬ ವ್ಯಕ್ತಿ ವಿಠ್ಠಲನ ಸಂನಿಧಿಯಲ್ಲಿ ರುಕ್ಮಿಣಿ ಮತ್ತು ಸತ್ಯಭಾಮೆಯ ವಿಗ್ರಹಗಳನ್ನು ಪ್ರತಿಷ್ಠಾಪಿಸಿದನೆಂದು ಹೇಳಿದೆ.[15] ಅಂದರೆ, ಗರ್ಭಗೃಹದಲ್ಲಿದ್ದ ಮೂಲವಿಗ್ರಹವನ್ನು ವಿಠ್ಠಲನೆಂದು ಕರೆದಿದೆ. ಈ ವಿಗ್ರಹ ಮಂಗಲೀಶ್ವರನಿಂದ ಕ್ರಿ.ಶ.೫೭೮ರಲ್ಲಿ ಪ್ರತಿಷ್ಠೆಯಾದ ಮಹಾವಿಷ್ಣುವಿನ ವಿಗ್ರಹವೇ ಇರಬೇಕು. ಚಲುಕ್ಯರ ಕಾಲದ ಚತುರ್ಭುಜ ಸಮಸ್ಥಾನಕ ವಿಷ್ಣುಮೂರ್ತಿ ಶಿಲ್ಪಗಳಲ್ಲಿ ಮೇಲಣ ಕೈಗಳು ಚಕ್ರಶಂಖಗಳನ್ನು ಧರಿಸಿ, ಕೆಳಗಿನ ಕೈಗಳು ಟೊಂಕದ ಹತ್ತಿರ ಇರಿಸಿದಂತೆ ತೋರಿಸಲಾಗಿರುತ್ತದೆ. ಇದನ್ನು ಜನರು ವಿಠ್ಠಲಮೂರ್ತಿಯೆಂದು ತಪ್ಪಾಗಿ ಭಾವಿಸಿರುವ ಸಾಧ್ಯತೆ ಇದೆ. ಗರ್ಭಗೃಹದಲ್ಲಿರುವ ಮೂಲ ಪೀಠದ ಇಕ್ಕೆಲಗಳಲ್ಲಿ ಮತ್ತೆರಡು ಪೀಠಗಳನ್ನು ನಂತರ ಜೋಡಿಸಿರುವುದು ಕಾಣುತ್ತದೆ. ಇವು ರುಕ್ಮಿಣೀ ಸತ್ಯಭಾಮೆಯರ ಪ್ರತಿಮೆಗಳ ಪ್ರತಿಷ್ಠಾಪನೆಗಾಗಿ ಸೇರಿಸಲ್ಪಟ್ಟಿರಬೇಕು. ಈಗ ಯಾವ ವಿಗ್ರಹಗಳೂ ಗರ್ಭಗೃಹದಲ್ಲಿಲ್ಲ.

ಹರಿದಾಸ ಸಾಹಿತ್ಯಕ್ಕೆ ಮಹತ್ತರ ಕೊಡುಗೆಯನ್ನಿತ್ತ ಶ್ರೀ ಪ್ರಸನ್ನ ವೆಂಕಟದಾಸರು ನಿರ್ಯಾಣರಾದದ್ದು ಬಾದಾಮಿಯಲ್ಲಿಯೇ. ಬಾಗಲಕೋಟೆಯ ಕ್ರಿ.ಸ.೧೬೯೦ರಲ್ಲಿ ಜನಿಸಿದ ಶ್ರೀ ವೆಂಕಟದಾಸರ ಮೂಲ ಊರು ಕಾಖಂಡಕಿ. ಅತ್ತಿಗೆಯ ಕಾಟ ತಾಳತಾಲದೆ ಇವರು ತಿರುಪತಿಗೆ ಓಡಿಹೋಗಿ ಶ್ರೀನಿವಾಸನಿಗೆ ಶರಣಾದದರು. ಶ್ರೀನಿವಾಸನು ಇವರಿಗೆ ಪ್ರಸನ್ನನಾಗಿ “ಪ್ರಸನ್ನ ವೆಂಕಟದಾಸ” ಎಂಬ ಬಿರುದನ್ನು ಇತ್ತನೆಂದು ಪ್ರತೀತಿ. ಇದೇ ಕಾವ್ಯನಾಮದಿಂದ ಅವರು ಹಲವಾರು ಪದ್ಯಗಳನ್ನೂ ಭಕ್ತಿ ಸಾಹಿತ್ಯಕ ಕೃತಿಗಳನ್ನೂ ರಚಿಸಿದರು. ಭರತಖಂಡದ ಹಲವಾರು ಪ್ರಸಿದ್ಧ ಕ್ಷೇತ್ರಗಳಿಗೆ ಭೇಟಿಯಿತ್ತರು. ತಮ್ಮ ಕೊನೆಯ ದಿನಗಳನ್ನು ಇವರು ಬಾದಾಮಿಯಲ್ಲಿ ಕಳೆದರೆಂದು ಪ್ರತೀತಿ. ಭೂತನಾಥ ಹೊಂಡದ ದಡದಲ್ಲಿರುವ ಅಶ್ವತ್ಥ ಕಟ್ಟೆಯು ಇಂದಿಗೂ ಇವರ ಹೆಸರನ್ನು ಹೊತ್ತು ಸ್ಮಾರಕವಾಗಿ ಉಳಿದಿದೆ.


[1]     ವಿವರಗಳಿಗೆ ನೋಡಿ, Padigar S.V., the Cult of Vishnu in Karnataka, ಅಪ್ರಕಟಿತ ಪಿಎಚ್.ಡಿ, ಉದ್ಗ್ರಂಥ, ಕರ್ನಾಟಕ ವಿಶ್ವವಿದ್ಯಾಲಯ, (ಧಾರವಾಡ, ೧೯೮೪)

[2]     Ramesh K.V.( ದೆಹಲಿ, ೧೯೮೪). Chalukyas of Vatapi, ಪು. ೪೬ ೪೭,

[3]     Indian Antiquary (IA.),ಸಂಪುಟ ೩, ಪು. ೩೦೪-೩೦೬; Karnatak Inscriptions (KI.), ಸಂಪುಟ ೫, ನಂ.೧.

[4]     KI. ಸಂಪುಟ ೧, ನಂ, ೧.

[5]     Epigraphia Indica, (EI.), ಸಂಪುಟ ೩೭, ಪು. ೩೭-೪೧,

[6]     IA.ಸಂಪುಟ೩, ಪು.೩೦೪ ೩೦೬; KI. ಸಂಪುಟ ೫, ನಂ.೧.

[7]     IA. ಸಂಪುಟ ೧೦, ಪು.೬೦.

[8]     EI., ಸಂಪುಟ ೩೨, ಪು. ೧೭೫-೮೪.

[9]     IA. ಸಂಪುಟ ೧೦, ಪು.೬೦; KI. ಸಂಪುಟ ೧, ನಂ.೨.

[10]    IA. ಸಂಪುಟ ೬, ಪು. ೧೩೯-೧೪೨, ಈ ಶಾಸನ ಗು ಬಾದಾಮಿಯ ಪುರಾತತ್ವ ವಸ್ತು ಸಂಗ್ರಹಾಲುದಲ್ಲಿದೆ.

[11]    H. Krishna Sastri, (ದೆಹಲಿ:೧೯೭೪) South Indian Images of Gods and Goddesses, ಪು. ೫೫.

[12]    ಅದೇ, ಪು. ೫೨.

[13]     ಅಪ್ರಕಟಿತ.

[14]    ಇಲ್ಲಿದ್ದ ವಿಜಯನಗರದ ಸದಾಶಿವರಾಯನ ಕಾಲದ (ಕ್ರಿ.ಶ.೧೫೪೭)ಒಂದು ಶಾಸನವನ್ನು ಫ್ಲೀಟ್ IA. ಸಂಪುಟ ೧೦, ಪು. ೬೪-೬೫ ಪ್ರಕಟಿಸಿದ್ದಾರೆ. ಈ ದೇವಾಲಯವನ್ನು ದಾದಾಸಾಹೆಬ್ ಹಜಾಮ್ ಎಂಬಾತನು ಮನೆಯಾಗಿ ಬಳಸುತ್ತಿದ್ದಾನೆಂದೂ ಅವರು ಹೇಳಿದ್ದಾರೆ.

[15]    ಅಪ್ರಕಟಿತ.